ಕಡೇ ರಾತ್ರಿ ಭೋಜನ ಅದೇನು?
ಕಡೇ ರಾತ್ರಿ ಭೋಜನ ಅದೇನು?
“ಕಡೇ ರಾತ್ರಿ ಭೋಜನ” ಎಂಬ ಅಭಿವ್ಯಕ್ತಿಯನ್ನು ನೀವು ಕೇಳಿ ಸಿಕೊಳ್ಳುವಾಗ, ಯಾವ ಚಿತ್ರಣವು ನಿಮ್ಮ ಮನಸ್ಸಿಗೆ ಬರುತ್ತದೆ? ಲಿಯೊನಾರ್ಡೊ ಡ ವಿಂಚಿ (1452-1519) ಎಂಬ ವರ್ಣಚಿತ್ರಕಾರನಿಂದ ರಚಿಸಲ್ಪಟ್ಟು, ಇಟಲಿಯ ಮಿಲನ್ನಲ್ಲಿರುವ ಮೆಚ್ಚುಗೆಪಾತ್ರ ಮಂಡೋದಕ ಚಿತ್ರವನ್ನು ಅನೇಕರು ಮನಸ್ಸಿಗೆ ತಂದುಕೊಳ್ಳುತ್ತಾರೆ. ವಾಸ್ತವಾಂಶವೇನೆಂದರೆ, ಶತಮಾನಗಳಾದ್ಯಂತ ಕಲಾಕಾರರಿಗೆ, ಲೇಖಕರಿಗೆ, ಮತ್ತು ಸಂಗೀತಗಾರರಿಗೆ ಕಡೇ ರಾತ್ರಿ ಭೋಜನವು ಒಂದು ಜನಪ್ರಿಯ ಮುಖ್ಯವಿಷಯವಾಗಿದೆ.
ಆದರೆ ಈ ಕಡೇ ರಾತ್ರಿ ಭೋಜನ ಅಂದರೇನು, ಮತ್ತು 21ನೆಯ ಶತಮಾನದಲ್ಲಿ ಜೀವಿಸುತ್ತಿರುವ ಜನರಿಗೆ ಅದು ಏನನ್ನು ಅರ್ಥೈಸುತ್ತದೆ? ತನ್ನ ಯಜ್ಞಾರ್ಪಿತ ಮರಣಕ್ಕೆ ಹಿಂದಿನ ಸಾಯಂಕಾಲದಂದು ಯೇಸು ಕ್ರಿಸ್ತನು ತನ್ನ ಅಪೊಸ್ತಲರೊಂದಿಗೆ ಮಾಡಿದ ಭೋಜನವೇ ಕಡೇ ರಾತ್ರಿ ಭೋಜನ, ಇಲ್ಲವೆ ಪ್ರಭು ಭೋಜನ ಆಗಿದೆ ಎಂದು ವಿಶ್ವಕೋಶಗಳು ಹಾಗೂ ಶಬ್ದಕೋಶಗಳು ತಿಳಿಯಪಡಿಸುತ್ತವೆ. ಯೇಸು ತನ್ನ ನಂಬಿಗಸ್ತ ಹಿಂಬಾಲಕರೊಂದಿಗೆ ಮಾಡಿದ ಕಡೇ ರಾತ್ರಿ ಭೋಜನವು ಇದಾಗಿತ್ತಾದ್ದರಿಂದ, ಸಾಂಪ್ರದಾಯಿಕವಾಗಿ ಇದು ಕಡೇ ಭೋಜನ ಎಂದು ಕರೆಯಲ್ಪಡುತ್ತದೆ. ಮತ್ತು ಇದು ಸ್ವತಃ ಕರ್ತನಾದ ಯೇಸು ಕ್ರಿಸ್ತನಿಂದಲೇ ಸ್ಥಾಪಿಸಲ್ಪಟ್ಟದ್ದರಿಂದ, ಪ್ರಭು ಭೋಜನ ಎಂಬ ಹೆಸರು ಸೂಕ್ತವಾದದ್ದಾಗಿದೆ.
ಶತಮಾನಗಳಾದ್ಯಂತ, ಅನೇಕರು ಯಾವುದನ್ನು ಯೋಗ್ಯವಾದ ಕಾರಣಗಳೆಂದು ಪರಿಗಣಿಸಿದ್ದರೋ ಅವುಗಳಿಗಾಗಿ ತಮ್ಮ ಜೀವಗಳನ್ನೇ ಅರ್ಪಿಸಿದ್ದಾರೆ. ಈ ಮರಣಗಳಲ್ಲಿ ಕೆಲವು, ನಿರ್ದಿಷ್ಟ ಜನರಿಗೆ ಮತ್ತು ನಿಗದಿತ ಕಾಲಾವಧಿಯ ವರೆಗೆ ಪ್ರಯೋಜನಗಳನ್ನು ತಂದವು. ಆದರೆ ಯೇಸು ಕ್ರಿಸ್ತನ ಮರಣವನ್ನು ಇದಕ್ಕೆ ಹೋಲಿಸುವಾಗ, ಈ ಸ್ವತ್ಯಾಗದ ಮರಣಗಳು ಎಷ್ಟೇ ಶ್ಲಾಘನೀಯವಾಗಿದ್ದರೂ, ಅವುಗಳಲ್ಲಿ ಯಾವುದೂ ಯೇಸು ಕ್ರಿಸ್ತನ ಮರಣದಷ್ಟು ಪ್ರಾಮುಖ್ಯವಾದದ್ದಾಗಿಲ್ಲ ಎಂಬುದಂತೂ ನಿಶ್ಚಿತ. ಅಷ್ಟುಮಾತ್ರವಲ್ಲ, ಮಾನವಕುಲದ ಕ್ಲೇಶಭರಿತ ಇತಿಹಾಸದಲ್ಲಿನ ಯಾವುದೇ ಮರಣವು, ಇಷ್ಟು ಸಾರ್ವತ್ರಿಕವಾದ ಪರಿಣಾಮವನ್ನು ಬೀರುವ ಸಾಧ್ಯತೆಯಿಲ್ಲ. ಏಕೆ?
ಈ ಪ್ರಶ್ನೆಯನ್ನು ಉತ್ತರಿಸಲಿಕ್ಕಾಗಿ ಮತ್ತು ಪ್ರಭು ಭೋಜನವು ನಿಮಗೆ ಯಾವ ಅರ್ಥದಲ್ಲಿದೆ ಎಂಬುದನ್ನು ನೀವು ತಿಳಿದುಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ, ಮುಂದಿನ ಲೇಖನವನ್ನು ಓದುವಂತೆ ನಿಮಗೆ ಕರೆಕೊಡುತ್ತೇವೆ.