ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪ್ರಭು ಭೋಜನ ನಿಮಗೆ ಮಹತ್ವಾರ್ಥವುಳ್ಳದ್ದಾಗಿದೆ

ಪ್ರಭು ಭೋಜನ ನಿಮಗೆ ಮಹತ್ವಾರ್ಥವುಳ್ಳದ್ದಾಗಿದೆ

ಪ್ರಭು ಭೋಜನ ನಿಮಗೆ ಮಹತ್ವಾರ್ಥವುಳ್ಳದ್ದಾಗಿದೆ

ಪ್ರಭು ಭೋಜನವು ನಿಮಗೆ ಅರ್ಥಗರ್ಭಿತವಾದದ್ದೂ ನಿತ್ಯಾರ್ಥವುಳ್ಳದ್ದೂ ಆಗಿದೆಯೋ? ಇದನ್ನು ಕಂಡುಕೊಳ್ಳಲಿಕ್ಕಾಗಿ, ಈ ವಿಶೇಷ ಘಟನೆಗೆ ಸ್ವತಃ ಯೇಸು ಕ್ರಿಸ್ತನೇ ಯಾವ ಅರ್ಥವನ್ನು ನೀಡಿದನು ಎಂಬುದನ್ನು ನಾವು ಮೊದಲಾಗಿ ನಿರ್ಧರಿಸೋಣ.

ಸಾ.ಶ. 33ರ ನೈಸಾನ್‌ 14ರ ಸಾಯಂಕಾಲದಂದು, ವಾರ್ಷಿಕ ಪಸ್ಕಹಬ್ಬವನ್ನು ಆಚರಿಸಲಿಕ್ಕಾಗಿ, ಯೇಸು ತನ್ನ 12 ಮಂದಿ ಅಪೊಸ್ತಲರೊಂದಿಗೆ ಯೆರೂಸಲೇಮಿನ ಮೇಲಂತಸ್ತಿನ ಕೋಣೆಯಲ್ಲಿ ಕೂಡಿಬಂದನು. ಅವರ ಪಸ್ಕಹಬ್ಬದ ಊಟದ ಬಳಿಕ, ದ್ರೋಹಿಯಾದ ಯೂದನು ಯೇಸುವನ್ನು ಹಿಡಿದುಕೊಡಲಿಕ್ಕಾಗಿ ಆ ಕೋಣೆಯನ್ನು ಬಿಟ್ಟುಹೋದನು. (ಯೋಹಾನ 13:​21, 26-30) ಉಳಿದಿದ್ದ 11 ಮಂದಿ ಅಪೊಸ್ತಲರಿಗೆ, “ಕರ್ತನ ಸಂಧ್ಯಾ ಭೋಜನ”ವನ್ನು ಯೇಸು ಪರಿಚಯಿಸಿದನು. (1 ಕೊರಿಂಥ 11:​20, NW) ಇದನ್ನು ಜ್ಞಾಪಕಾಚರಣೆ ಎಂದು ಸಹ ಸಂಬೋಧಿಸಲಾಗುತ್ತದೆ, ಏಕೆಂದರೆ ಯೇಸು ತನ್ನ ಹಿಂಬಾಲಕರಿಗೆ ಆಜ್ಞಾಪಿಸಿದ್ದು: “ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡಿರಿ.” ಇದೊಂದೇ ಘಟನೆಯನ್ನು ಸ್ಮರಿಸಿಕೊಳ್ಳುವಂತೆ ಕ್ರೈಸ್ತರಿಗೆ ಆಜ್ಞಾಪಿಸಲಾಗಿದೆ.​—1 ಕೊರಿಂಥ 11:24.

ವೆಬ್‌ಸ್ಟರ್ಸ್‌ ಶಬ್ದಕೋಶಕ್ಕನುಸಾರ, ಒಂದು ಜ್ಞಾಪಕಾಚರಣೆಯು “ನೆನಪನ್ನು ಕಾಪಾಡಿಕೊಳ್ಳಲು” ಅಥವಾ “ನೆನಪನ್ನು ಸಜೀವವಾಗಿಡಲು” ಸಹಾಯಮಾಡುವಂಥ ಒಂದು ಆಚರಣೆಯಾಗಿದೆ. ಅನೇಕ ಸ್ಥಳಗಳಲ್ಲಿ, ಜನರು ಒಬ್ಬ ಪ್ರಮುಖ ವ್ಯಕ್ತಿಯನ್ನೊ ಪ್ರಮುಖ ಸಂಗತಿಯನ್ನೊ ಸ್ಮರಿಸಲಿಕ್ಕಾಗಿ ಒಂದು ಸ್ಮಾರಕವನ್ನು ಸ್ಥಾಪಿಸುತ್ತಾರೆ ಅಥವಾ ಅದಕ್ಕಾಗಿ ಒಂದು ವಿಶೇಷ ದಿನವನ್ನು ಬದಿಗಿರಿಸುತ್ತಾರೆ. ಈ ಸಂದರ್ಭದಲ್ಲಿ ಯೇಸು ಒಂದು ಸ್ಮರಣಾರ್ಹ ಭೋಜನವನ್ನು ಆರಂಭಿಸಿದನು. ಈ ಭೋಜನವು, ಆ ಬಹುಮುಖ್ಯ ದಿನದ ಅತ್ಯಂತ ಅರ್ಥಗರ್ಭಿತವಾದ ಘಟನೆಗಳ ನೆನಪನ್ನು ಅವನ ಶಿಷ್ಯರು ಜೋಪಾನವಾಗಿ ಕಾಪಾಡಿಕೊಳ್ಳುವಂತೆ ಅವರಿಗೆ ಸಹಾಯಮಾಡುತ್ತಾ, ಒಂದು ಜ್ಞಾಪಕ ಸಹಾಯಕವಾಗಿ ಕಾರ್ಯನಡಿಸಲಿಕ್ಕಿತ್ತು. ಆ ರಾತ್ರಿ ಯೇಸು ಏನು ಮಾಡಿದನೋ ಅದರ​—ಅದರಲ್ಲೂ ವಿಶೇಷವಾಗಿ ಅವನು ಉಪಯೋಗಿಸಿದಂಥ ಕುರುಹುಗಳ​—ಅಗಾಧ ಅರ್ಥವನ್ನು ಈ ಜ್ಞಾಪಕಾಚರಣೆಯ ಭೋಜನವು ಮುಂದಿನ ತಲೆಮಾರುಗಳಲ್ಲಿ ಅದನ್ನು ಆಚರಿಸುವವರಿಗೆ ಮರುಜ್ಞಾಪಿಸಲಿತ್ತು. ಯಾವ ಕುರುಹುಗಳನ್ನು ಅಥವಾ ಸಂಕೇತಗಳನ್ನು ಯೇಸು ಉಪಯೋಗಿಸಿದನು, ಮತ್ತು ಅವುಗಳ ಅರ್ಥವೇನಾಗಿತ್ತು? ಸಾ.ಶ. 33ರ ಆ ರಾತ್ರಿಯಂದು ಏನು ಸಂಭವಿಸಿತೋ ಅದರ ಕುರಿತಾದ ಬೈಬಲ್‌ ವೃತ್ತಾಂತವನ್ನು ನಾವೀಗ ಪರೀಕ್ಷಿಸೋಣ.

ಸಾಂಕೇತಿಕ ಅರ್ಥಗಳು

“ಅವನು ಒಂದು ರೊಟ್ಟಿಯನ್ನು ತೆಗೆದುಕೊಂಡು, ಸ್ತೋತ್ರಮಾಡಿ, ಮುರಿದು, ಅವರಿಗೆ ಕೊಟ್ಟು ಹೇಳಿದ್ದು: ‘ಇದು ನಿಮ್ಮ ಪರವಾಗಿ ಕೊಡಲಾಗುವಂಥ ನನ್ನ ದೇಹವನ್ನು ಸೂಚಿಸುತ್ತದೆ. ನನ್ನನ್ನು ನೆನಸಿಕೊಳ್ಳುವದಕ್ಕೋಸ್ಕರ ಹೀಗೆ ಮಾಡುತ್ತಾ ಇರಿ.’”​—ಲೂಕ 22:19, NW.

ಯೇಸು ರೊಟ್ಟಿಯನ್ನು ತೆಗೆದುಕೊಂಡು ‘ಇದು ನನ್ನ ದೇಹವನ್ನು ಸೂಚಿಸುತ್ತದೆ’ ಎಂದು ಹೇಳಿದಾಗ, ಹುಳಿಯಿಲ್ಲದ ಆ ರೊಟ್ಟಿಯು, “ಲೋಕದ ಜೀವಕ್ಕೋಸ್ಕರ” ಅವನು ಕೊಟ್ಟಂಥ ಅವನ ಸ್ವಂತ ಪಾಪರಹಿತ ಮಾಂಸಿಕ ದೇಹದ ಸಂಕೇತವಾಗಿದೆ ಎಂದು ಅವನು ಅರ್ಥೈಸುತ್ತಿದ್ದನು. (ಯೋಹಾನ 6:51) ‘ಇದು ನನ್ನ ದೇಹವಾಗಿದೆ [ಗ್ರೀಕ್‌, ಎಸ್ಟಿನ್‌] ಎಂದು ಕೆಲವು ಭಾಷಾಂತರಗಳು ತಿಳಿಸುತ್ತವಾದರೂ, ಥಾಯರ್‌ನ ಗ್ರೀಕ್‌-ಇಂಗ್ಲಿಷ್‌ ಲೆಕ್ಸಿಕನ್‌ ಆಫ್‌ ದ ನ್ಯೂ ಟೆಸ್ಟಮೆಂಟ್‌ ಹೇಳುವುದೇನೆಂದರೆ, ಈ ಕ್ರಿಯಾಪದವು ಅನೇಕವೇಳೆ “ನಿರ್ದೇಶಿಸು, ಸೂಚಿಸು, ವ್ಯಕ್ತಪಡಿಸು” ಎಂಬುದನ್ನು ಅರ್ಥೈಸುತ್ತದೆ. ಇದು ಪ್ರತಿನಿಧಿಸುವುದು ಅಥವಾ ಸಂಕೇತಿಸುವುದರಂಥ ಅರ್ಥವನ್ನು ಕೊಡುತ್ತದೆ.​—ಮತ್ತಾಯ 26:​26, NW ಪಾದಟಿಪ್ಪಣಿ.

ದ್ರಾಕ್ಷಾಮದ್ಯದ ಪಾತ್ರೆಯ ವಿಷಯದಲ್ಲಿಯೂ ಇದು ನಿಜವಾಗಿತ್ತು. ಯೇಸು ಹೇಳಿದ್ದು: “ಈ ಪಾತ್ರೆಯು ನಿಮಗೋಸ್ಕರ ಸುರಿಸಲ್ಪಡುವ ನನ್ನ ರಕ್ತದಿಂದ ಸ್ಥಾಪಿತವಾಗುವ ಹೊಸ ಒಡಂಬಡಿಕೆಯನ್ನು ಸೂಚಿಸುತ್ತದೆ.”​—ಲೂಕ 22:20.

ಮತ್ತಾಯನ ವೃತ್ತಾಂತದಲ್ಲಿ ಯೇಸು ಆ ಪಾತ್ರೆಯ ಕುರಿತು ಹೇಳಿದ್ದು: “ಇದು ನನ್ನ ರಕ್ತ [“ರಕ್ತವನ್ನು ಸೂಚಿಸುತ್ತದೆ,” NW], ಇದು ಒಡಂಬಡಿಕೆಯ ರಕ್ತ, ಇದು ಪಾಪಗಳ ಕ್ಷಮೆಗಾಗಿ ಬಹು ಜನರಿಗೋಸ್ಕರ ಸುರಿಸಲ್ಪಡುವ ರಕ್ತ.” (ಮತ್ತಾಯ 26:28) ಯೇಸು ಪಾತ್ರೆಯಲ್ಲಿದ್ದ ದ್ರಾಕ್ಷಾಮದ್ಯವನ್ನು, ತನ್ನ ಸ್ವಂತ ರಕ್ತವನ್ನು ಪ್ರತಿನಿಧಿಸಲಿಕ್ಕಾಗಿ ಅಥವಾ ಸಂಕೇತವಾಗಿ ಉಪಯೋಗಿಸುತ್ತಿದ್ದನು. ಅವನು ಸುರಿಸಿದ ರಕ್ತವು, ಸ್ವರ್ಗದಲ್ಲಿ ಅವನೊಂದಿಗೆ ರಾಜರೂ ಯಾಜಕರೂ ಆಗಿ ಆಳ್ವಿಕೆ ನಡಿಸಲಿದ್ದ ಆತ್ಮಾಭಿಷಿಕ್ತ ಶಿಷ್ಯರಿಗಾಗಿ “ಹೊಸದಾಗಿರುವ ಒಂದು ಒಡಂಬಡಿಕೆ”ಗೆ ಆಧಾರವಾಗಿರಲಿತ್ತು.​—ಯೆರೆಮೀಯ 31:​31-33; ಯೋಹಾನ 14:​2, 3; 2 ಕೊರಿಂಥ 5:5; ಪ್ರಕಟನೆ 1:​5, 6; 5:​9, 10; 20:​4, 6.

ಯೇಸುವಿನಿಂದ ಸುರಿಸಲ್ಪಟ್ಟ ರಕ್ತವು, “ಪಾಪಗಳ ಕ್ಷಮೆಗಾಗಿ” ಆಧಾರವಾಗಿರುವುದು ಮತ್ತು ಹೀಗೆ ಅದರಲ್ಲಿ ಪಾಲ್ಗೊಳ್ಳುವವರು ಕ್ರಿಸ್ತನೊಂದಿಗೆ ಜೊತೆ ಭಾದ್ಯಸ್ಥರೋಪಾದಿ ಸ್ವರ್ಗೀಯ ಜೀವಿತಕ್ಕೆ ಕರೆಯಲ್ಪಡಲು ಅದು ಮಾರ್ಗವನ್ನು ತೆರೆಯುತ್ತದೆಂಬುದಕ್ಕೂ ಪಾತ್ರೆಯಲ್ಲಿದ್ದ ದ್ರಾಕ್ಷಾಮದ್ಯವು ಮರುಜ್ಞಾಪಕವಾಗಿ ಕಾರ್ಯನಡಿಸುವುದು. ಈ ಸ್ವರ್ಗೀಯ ಕರೆಯಿರುವವರು, ಅಂದರೆ ಸೀಮಿತ ಸಂಖ್ಯೆಯ ಜನರು ಮಾತ್ರವೇ ಜ್ಞಾಪಕಾಚರಣೆಯ ರೊಟ್ಟಿ ಮತ್ತು ದ್ರಾಕ್ಷಾಮದ್ಯದಲ್ಲಿ ಪಾಲ್ಗೊಳ್ಳುವವರಾಗಿದ್ದಾರೆ ಎಂಬುದು ಗ್ರಾಹ್ಯ.​—ಲೂಕ 12:32; ಎಫೆಸ 1:​13, 14; ಇಬ್ರಿಯ 9:22; 1ಪೇತ್ರ  1:​3, 4.

ಆದರೆ, ಹೊಸ ಒಡಂಬಡಿಕೆಯ ಭಾಗವಾಗಿರದಂಥ ಯೇಸುವಿನ ಬೇರೆಲ್ಲ ಹಿಂಬಾಲಕರ ಕುರಿತಾಗಿ ಏನು? ಇವರು ಕರ್ತನ “ಬೇರೆ ಕುರಿಗಳು” ಆಗಿದ್ದು, ಕ್ರಿಸ್ತನೊಂದಿಗೆ ಸ್ವರ್ಗದಲ್ಲಿ ಆಳ್ವಿಕೆ ನಡೆಸುವುದನ್ನಲ್ಲ, ಬದಲಾಗಿ ಪರದೈಸವಾಗಲಿರುವ ಭೂಮಿಯಲ್ಲಿ ನಿತ್ಯಜೀವವನ್ನು ಆನಂದಿಸುವುದನ್ನು ಎದುರುನೋಡುತ್ತಿದ್ದಾರೆ. (ಯೋಹಾನ 10:16; ಲೂಕ 23:43; ಪ್ರಕಟನೆ 21:​3, 4) ‘ಹಗಲಿರುಳು [ದೇವರ] ಸೇವೆಮಾಡುತ್ತಾ ಇರುವ’ ನಂಬಿಗಸ್ತ ಕ್ರೈಸ್ತರ ಒಂದು “ಮಹಾ ಸಮೂಹ”ದೋಪಾದಿ ಅವರು ಪ್ರಭು ಭೋಜನದಲ್ಲಿ ಕೃತಜ್ಞತಾಭಾವವುಳ್ಳ ಪ್ರೇಕ್ಷಕರಾಗಿರಲು ಅತ್ಯಾನಂದಿಸುತ್ತಾರೆ. ಅವರ ನಡೆನುಡಿಗಳು ಕಾರ್ಯತಃ ಹೀಗೆ ಘೋಷಿಸುತ್ತವೆ: “ಸಿಂಹಾಸನಾಸೀನನಾಗಿರುವ ನಮ್ಮ ದೇವರಿಗೂ ಯಜ್ಞದ ಕುರಿಯಾದಾತನಿಗೂ ನಮಗೆ ರಕ್ಷಣೆಯುಂಟಾದದ್ದಕ್ಕಾಗಿ ಸ್ತೋತ್ರ.”​—ಪ್ರಕಟನೆ 7:​9, 10, 14, 15.

ಎಷ್ಟು ಬಾರಿ ಆಚರಿಸಬೇಕು?

“ನನ್ನನ್ನು ನೆನಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡುತ್ತಾ ಇರಿ.”​—ಲೂಕ 22:19, NW.

ಕ್ರಿಸ್ತನ ಮರಣದ ನೆನಪಿನಾರ್ಥವಾಗಿ ಜ್ಞಾಪಕಾಚರಣೆಯನ್ನು ಎಷ್ಟು ಬಾರಿ ಆಚರಿಸಬೇಕು? ಯೇಸು ಅದನ್ನು ನಿಖರವಾಗಿ ಹೇಳಲಿಲ್ಲ. ಆದರೂ, ನೈಸಾನ್‌ 14ರಂದು ಅಂದರೆ ಇಸ್ರಾಯೇಲ್ಯರು ವಾರ್ಷಿಕವಾಗಿ ಆಚರಿಸುತ್ತಿದ್ದಂಥ ಪಸ್ಕಹಬ್ಬದ ಸಾಯಂಕಾಲದಂದೇ ಅವನು ಕರ್ತನ ಸಂಧ್ಯಾ ಭೋಜನವನ್ನು ಆರಂಭಿಸಿದ್ದರಿಂದ, ಜ್ಞಾಪಕವನ್ನೂ ಅದೇ ರೀತಿಯಲ್ಲಿ ಆಚರಿಸಬೇಕೆಂಬುದನ್ನು ಯೇಸು ಉದ್ದೇಶಿಸಿದನೆಂದು ವ್ಯಕ್ತವಾಗುತ್ತದೆ. ಇಸ್ರಾಯೇಲ್ಯರು ಐಗುಪ್ತದ ದಾಸತ್ವದಿಂದ ತಮ್ಮ ಬಿಡುಗಡೆಯಾದದ್ದನ್ನು ವಾರ್ಷಿಕವಾಗಿ ಆಚರಿಸುತ್ತಿದ್ದರು, ಆದರೆ ಕ್ರೈಸ್ತರು ಪಾಪ ಮತ್ತು ಮರಣದ ದಾಸತ್ವದಿಂದ ತಮಗಾಗುವ ಬಿಡುಗಡೆಯನ್ನು ವಾರ್ಷಿಕವಾಗಿ ಆಚರಿಸುತ್ತಾರೆ.​—ವಿಮೋಚನಕಾಂಡ 12:​11, 17; ರೋಮಾಪುರ 5:​20, 21.

ಒಂದು ಮಹತ್ವಪೂರ್ಣ ಘಟನೆಯನ್ನು ಸ್ಮರಿಸುವ ವಾರ್ಷಿಕ ಆಚರಣೆಯ ವಿಚಾರವು ನಿಶ್ಚಯವಾಗಿಯೂ ಅಸಾಮಾನ್ಯವಾದದ್ದಾಗಿಲ್ಲ. ಉದಾಹರಣೆಗೆ, ಒಬ್ಬ ದಂಪತಿಯು ತಮ್ಮ ವಿವಾಹದ ವಾರ್ಷಿಕೋತ್ಸವವನ್ನು ಆಚರಿಸುವುದನ್ನು ಅಥವಾ ಒಂದು ರಾಷ್ಟ್ರವು ಅದರ ಇತಿಹಾಸದಲ್ಲೇ ಅತಿ ಪ್ರಾಮುಖ್ಯವಾದ ಘಟನೆಯೊಂದನ್ನು ಸ್ಮರಿಸಿಕೊಳ್ಳುವುದನ್ನು ಪರಿಗಣಿಸಿರಿ. ಸರ್ವಸಾಮಾನ್ಯವಾಗಿ ಆ ಘಟನೆಯ ವಾರ್ಷಿಕೋತ್ಸವದಂದು ವರ್ಷಕ್ಕೆ ಒಂದು ಸಲ ಮಾತ್ರ ಅದನ್ನು ಆಚರಿಸಲಾಗುತ್ತದೆ. ಆಸಕ್ತಿಕರವಾಗಿಯೇ, ಕ್ರಿಸ್ತನ ಬಳಿಕ ಸುಮಾರು ಶತಮಾನಗಳ ವರೆಗೆ ಕ್ರೈಸ್ತರೆಂದು ಹೇಳಿಕೊಳ್ಳುತ್ತಿದ್ದಂಥ ಅನೇಕರನ್ನು ಕ್ವಾರ್ಟೊಡೆಸೆಮನ್ಸ್‌ ಅಂದರೆ “ಹದಿನಾಲ್ಕರವರು” ಎಂದು ಕರೆಯಲಾಗುತ್ತಿತ್ತು. ಏಕೆಂದರೆ ಅವರು ನೈಸಾನ್‌ 14ರಂದು ವರ್ಷಕ್ಕೆ ಒಮ್ಮೆ ಮಾತ್ರ ಯೇಸುವಿನ ಮರಣದ ಸ್ಮಾರಕೋತ್ಸವವನ್ನು ಆಚರಿಸುತ್ತಿದ್ದರು.

ಸರಳವಾದರೂ ತುಂಬ ಅರ್ಥಗರ್ಭಿತವಾದ ಆಚರಣೆ

ಪ್ರಭು ಭೋಜನವನ್ನು ಆಚರಿಸುವುದು, ‘ಕರ್ತನ ಮರಣವನ್ನು ಪ್ರಸಿದ್ಧಿಪಡಿಸುತ್ತಾ’ ಇರಲು ಯೇಸುವಿನ ಶಿಷ್ಯರನ್ನು ಸಮರ್ಥರನ್ನಾಗಿ ಮಾಡುವುದು ಎಂದು ಅಪೊಸ್ತಲ ಪೌಲನು ವಿವರಿಸಿದನು. (1 ಕೊರಿಂಥ 11:26) ಆದುದರಿಂದ, ಈ ಸ್ಮಾರಕೋತ್ಸವವು, ದೇವರ ಉದ್ದೇಶವನ್ನು ಪೂರೈಸುವುದರಲ್ಲಿ ತನ್ನ ಮರಣದ ಮೂಲಕ ಯೇಸು ನಿರ್ವಹಿಸಿದ ನಿರ್ಣಾಯಕ ಪಾತ್ರದ ಮೇಲೆ ಗಮನವನ್ನು ಕೇಂದ್ರೀಕರಿಸಲಿತ್ತು.

ತನ್ನ ಮರಣದ ತನಕವೂ ನಂಬಿಗಸ್ತಿಕೆಯನ್ನು ಕಾಪಾಡಿಕೊಳ್ಳುವ ಮೂಲಕ ಯೇಸು ಕ್ರಿಸ್ತನು ಯೆಹೋವ ದೇವರನ್ನು ಒಬ್ಬ ವಿವೇಕಭರಿತ ಹಾಗೂ ಪ್ರೀತಿಯ ಸೃಷ್ಟಿಕರ್ತನು ಮತ್ತು ನೀತಿಭರಿತ ಪರಮಾಧಿಕಾರಿಯೂ ಆಗಿ ಸಮರ್ಥಿಸಿದನು. ಸೈತಾನನ ಪ್ರತಿಪಾದನೆಗಳಿಗೆ ವಿರುದ್ಧವಾಗಿ, ಆದಾಮನಿಗೆ ಅಸದೃಶವಾಗಿ, ವಿಪರೀತ ಒತ್ತಡಗಳ ಕೆಳಗೂ ಒಬ್ಬ ಮಾನವನು ದೇವರಿಗೆ ನಂಬಿಗಸ್ತನಾಗಿ ಉಳಿಯಸಾಧ್ಯವಿದೆ ಎಂಬುದನ್ನು ಯೇಸು ರುಜುಪಡಿಸಿದನು.​—ಯೋಬ 2:​4, 5.

ಪ್ರಭು ಭೋಜನವು, ಯೇಸುವಿನ ಸ್ವತ್ಯಾಗದ ಪ್ರೀತಿಯ ಗಣ್ಯತಾಪೂರ್ವಕ ನೆನಪನ್ನು ಸಹ ಕಾಪಾಡಿಕೊಂಡುಹೋಗಲು ಸಹಾಯಮಾಡುತ್ತದೆ. ತೀವ್ರವಾದ ಪರೀಕ್ಷೆಗಳ ಮಧ್ಯೆಯೂ ಯೇಸು ತನ್ನ ತಂದೆಗೆ ಸಂಪೂರ್ಣ ರೀತಿಯಲ್ಲಿ ವಿಧೇಯನಾಗಿ ಉಳಿದನು. ಹೀಗೆ ಆದಾಮನ ಪಾಪದ ಅಪಾರ ವೆಚ್ಚವನ್ನು ಆವರಿಸಲಿಕ್ಕಾಗಿ ತನ್ನ ಸ್ವಂತ ಪರಿಪೂರ್ಣ ಮಾನವ ಜೀವವನ್ನು ಅರ್ಪಿಸಲು ಶಕ್ತನಾಗಿದ್ದನು. ಯೇಸು ತಾನೇ ವಿವರಿಸಿದಂತೆ, ಅವನು “ಅನೇಕರನ್ನು ಬಿಡಿಸಿಕೊಳ್ಳುವದಕ್ಕಾಗಿ ತನ್ನ ಪ್ರಾಣವನ್ನು ಈಡು ಕೊಡು”ವುದಕ್ಕಾಗಿ ಬಂದನು. (ಮತ್ತಾಯ 20:28) ಇದರ ಪರಿಣಾಮವಾಗಿ, ಯೇಸುವಿನಲ್ಲಿ ನಂಬಿಕೆಯಿಡುವವರೆಲ್ಲರ ಪಾಪಗಳು ಕ್ಷಮಿಸಲ್ಪಡಸಾಧ್ಯವಿದೆ ಮತ್ತು ಮಾನವಕುಲಕ್ಕಾಗಿರುವ ಯೆಹೋವನ ಮೂಲ ಉದ್ದೇಶಕ್ಕೆ ಹೊಂದಿಕೆಯಲ್ಲಿ ಅವರು ನಿತ್ಯಜೀವವನ್ನು ಪಡೆದುಕೊಳ್ಳಸಾಧ್ಯವಿದೆ.​—ರೋಮಾಪುರ 5:​6, 8, 12, 18, 19; 6:23; 1 ತಿಮೊಥೆಯ 2:​5, 6. *

ಇದೆಲ್ಲವೂ ಮಾನವಕುಲದ ರಕ್ಷಣೆಗಾಗಿ ಏರ್ಪಾಡನ್ನು ಮಾಡುವುದರಲ್ಲಿ ಯೆಹೋವನು ತೋರಿಸಿದ ಅಪಾರ ಒಳ್ಳೇತನ ಹಾಗೂ ಅಪಾತ್ರ ದಯೆಯನ್ನು ಸಹ ಎತ್ತಿತೋರಿಸುತ್ತದೆ. ಬೈಬಲು ಹೇಳುವುದು: “ದೇವರು ತನ್ನ ಒಬ್ಬನೇ ಮಗನನ್ನು ನಾವು ಆತನ ಮೂಲಕ ಜೀವಿಸುವದಕ್ಕಾಗಿ ಲೋಕಕ್ಕೆ ಕಳುಹಿಸಿಕೊಟ್ಟದರಲ್ಲಿಯೇ ದೇವರ ಪ್ರೀತಿಯು ನಮ್ಮಲ್ಲಿ ಪ್ರತ್ಯಕ್ಷವಾಗಿದೆ. ನಾವು ದೇವರನ್ನು ಪ್ರೀತಿಸಿದ್ದರಲ್ಲಿಯಲ್ಲ, ಆತನು ನಮ್ಮನ್ನು ಪ್ರೀತಿಸಿ ನಮ್ಮ ಪಾಪನಿವಾರಣಾರ್ಥವಾಗಿ ತನ್ನ ಮಗನನ್ನು ಕಳುಹಿಸಿಕೊಟ್ಟದರಲ್ಲಿಯೇ ಪ್ರೀತಿಯ ನಿಜ ಗುಣವು ತೋರಿಬರುತ್ತದೆ.”​—1 ಯೋಹಾನ 4:​9, 10.

ಹೌದು, ಜ್ಞಾಪಕಾಚರಣೆಯು ಎಷ್ಟು ಅದ್ಭುತಕರವಾದ ಆಚರಣೆಯಾಗಿದೆ! ಈ ಆಚರಣೆಯು ಅನೇಕ ಭಿನ್ನ ಸನ್ನಿವೇಶಗಳ ಕೆಳಗೆ ಲೋಕವ್ಯಾಪಕವಾಗಿ ಸ್ಮರಿಸಲ್ಪಡಲು ಸಾಕಷ್ಟು ಸರಳವೂ ಪ್ರಾಯೋಗಿಕವೂ ಆಗಿರುವುದಾದರೂ, ಬಹಳ ದೀರ್ಘ ಸಮಯದ ವರೆಗೆ ಅರ್ಥಭರಿತವಾದ ಜ್ಞಾಪನವಾಗಿ ಉಳಿಯಲು ಸಾಕಾಗುವಷ್ಟು ಸಾಂಕೇತಿಕಾರ್ಥವುಳ್ಳದ್ದೂ ಆಗಿದೆ.

ಅದು ನಿಮಗೆ ಯಾವ ಅರ್ಥದಲ್ಲಿದೆ?

ನಮ್ಮ ಕರ್ತನಾದ ಯೇಸು ಕ್ರಿಸ್ತನ ಯಜ್ಞಾರ್ಪಿತ ಮರಣಕ್ಕಾಗಿ, ಅವನೂ ಅವನ ತಂದೆಯಾದ ಯೆಹೋವನೂ ಭಾರೀ ಬೆಲೆಯನ್ನು ತೆರಬೇಕಾಯಿತು. ಒಬ್ಬ ಪರಿಪೂರ್ಣ ಮನುಷ್ಯನಾಗಿದ್ದ ಯೇಸುವಿನ ಮುಂದೆ, ನಮ್ಮೆಲ್ಲರಂತೆ ಬಾಧ್ಯತೆಯಾಗಿ ಬಂದ ಮರಣವು ಇರಲಿಲ್ಲ. (ರೋಮಾಪುರ 5:12; ಇಬ್ರಿಯ 7:26) ಅವನು ಸದಾಕಾಲ ಬದುಕುತ್ತಾ ಮುಂದುವರಿಯಸಾಧ್ಯವಿತ್ತು. ಅಷ್ಟುಮಾತ್ರವಲ್ಲ, ಅವನ ಅನುಮತಿಯಿಲ್ಲದೆ ಒತ್ತಾಯದಿಂದ ಅವನ ಜೀವವನ್ನು ತೆಗೆಯಲೂ ಸಾಧ್ಯವಿರಲಿಲ್ಲ. ಅವನು ಹೇಳಿದ್ದು: “ನನ್ನ ಪ್ರಾಣವನ್ನು ಯಾರೂ ನನ್ನಿಂದ ತೆಗೆಯರು, ನನ್ನಷ್ಟಕ್ಕೆ ನಾನೇ ಅದನ್ನು ಕೊಡುತ್ತೇನೆ.”​—ಯೋಹಾನ 10:18.

ಆದರೂ, ಯೇಸು ತನ್ನ ಪರಿಪೂರ್ಣ ಮಾನವ ಜೀವವನ್ನು ಮನಃಪೂರ್ವಕವಾಗಿ ಒಂದು ಯಜ್ಞದೋಪಾದಿ ಅರ್ಪಿಸಿದನು. ಇದರಿಂದ ಅವನು ‘ತನ್ನ ಮರಣದಿಂದಲೇ ಮರಣಾಧಿಕಾರಿಯನ್ನು ಅಂದರೆ ಸೈತಾನನನ್ನು ಅಡಗಿಸಿಬಿಡಲು, ಮರಣಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸಲು’ ಶಕ್ತನಾದನು. (ಇಬ್ರಿಯ 2:​14, 15) ಕ್ರಿಸ್ತನು ಯಾವ ರೀತಿಯ ಮರಣಕ್ಕೆ ತನ್ನನ್ನು ಒಳಪಡಿಸಿಕೊಂಡನೋ ಅದರಿಂದಲೂ ಅವನ ಸ್ವತ್ಯಾಗದ ಪ್ರೀತಿಯು ಇನ್ನಷ್ಟು ವ್ಯಕ್ತವಾಗುತ್ತದೆ. ತಾನು ಹೇಗೆ ಕಷ್ಟವನ್ನನುಭವಿಸಿ ಮರಣಪಡುತ್ತೇನೆಂಬುದರ ಬಗ್ಗೆ ಅವನಿಗೆ ಚೆನ್ನಾಗಿ ತಿಳಿದಿತ್ತು.​—ಮತ್ತಾಯ 17:22; 20:​17-19.

ಜ್ಞಾಪಕಾಚರಣೆಯು, ನಮ್ಮ ಸ್ವರ್ಗೀಯ ತಂದೆಯಾಗಿರುವ ಯೆಹೋವನಿಂದ ತೋರಿಸಲ್ಪಟ್ಟ ಪ್ರೀತಿಯ ಅತ್ಯಂತ ದೊಡ್ಡ ಅಭಿವ್ಯಕ್ತಿಯನ್ನು ಸಹ ನಮಗೆ ನೆನಪುಹುಟ್ಟಿಸುತ್ತದೆ. “ಕರುಣಾಸಾಗರನೂ ದಯಾಳುವೂ” ಆಗಿರುವಂಥ ಆತನಿಗೆ, ಗೆತ್ಸೇಮನೆ ತೋಟದಲ್ಲಿ ಯೇಸುವಿನ ‘ಬಲವಾದ ಕೂಗನ್ನು’ ಕೇಳಿಸಿಕೊಳ್ಳುವುದು ಮತ್ತು ‘ಕಣ್ಣೀರು,’ ಹಿಂಸಾತ್ಮಕ ಪೀಡನೆ, ಕ್ರೂರ ಶೂಲಕ್ಕೇರಿಸುವಿಕೆ, ಹಾಗೂ ನಿಧಾನವಾದ ಯಾತನಾಮಯ ಮರಣವನ್ನು ನೋಡುವುದು ಎಷ್ಟು ಸಂಕಟಮಯವಾಗಿತ್ತು! (ಯಾಕೋಬ 5:​11, NW ಪಾದಟಿಪ್ಪಣಿ; ಇಬ್ರಿಯ 5:7; ಯೋಹಾನ 3:16; 1 ಯೋಹಾನ 4:​7, 8) ಇದು ಸಂಭವಿಸಿ ಶತಮಾನಗಳೇ ಕಳೆದಿರುವುದಾದರೂ, ಈಗಲೂ ಅದರ ಬಗ್ಗೆ ಯೋಚಿಸಿದರೂ ಸಾಕು, ಅನೇಕರಿಗೆ ಭಾವನಾತ್ಮಕ ವೇದನೆಯುಂಟಾಗುತ್ತದೆ.

ಯೆಹೋವ ದೇವರೂ ಯೇಸು ಕ್ರಿಸ್ತನೂ ಪಾಪಿಗಳಾದ ನಮಗೋಸ್ಕರ ಎಂಥ ಉಚ್ಚ ಬೆಲೆಯನ್ನು ತೆತ್ತರು ಎಂಬುದನ್ನು ತುಸು ಊಹಿಸಿಕೊಳ್ಳಲು ಪ್ರಯತ್ನಿಸಿರಿ! (ರೋಮಾಪುರ 3:23) ಪ್ರತಿ ದಿನ, ನಮ್ಮ ಪಾಪಪೂರ್ಣ ಸ್ವಭಾವ ಹಾಗೂ ನಮ್ಮ ಅಪರಿಪೂರ್ಣತೆಗಳ ವೇದನಾಮಯ ವಾಸ್ತವಿಕತೆಯನ್ನು ನಾವು ಎದುರಿಸುತ್ತೇವೆ. ಆದರೂ, ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿನ ನಂಬಿಕೆಯ ಆಧಾರದ ಮೇಲೆ ನಾವು ಕ್ಷಮಾಪಣೆಗಾಗಿ ದೇವರ ಬಳಿ ವಿನಂತಿಸಿಕೊಳ್ಳಸಾಧ್ಯವಿದೆ. (1 ಯೋಹಾನ 2:​1, 2) ಇದು, ನಾವು ದೇವರೊಂದಿಗೆ ವಾಕ್‌ ಸ್ವಾತಂತ್ರ್ಯವನ್ನು ಮತ್ತು ಒಂದು ಶುದ್ಧ ಮನಸ್ಸಾಕ್ಷಿಯನ್ನು ಪಡೆದುಕೊಳ್ಳಲು ಸಮರ್ಥರನ್ನಾಗಿ ಮಾಡುತ್ತದೆ. (ಇಬ್ರಿಯ 4:​14-16; 9:​13, 14, NW) ಅಷ್ಟುಮಾತ್ರವಲ್ಲ, ನಿತ್ಯತೆಗೂ ನಾವು ಪರದೈಸ ಭೂಮಿಯಲ್ಲಿ ಜೀವಿಸುವ ಪ್ರತೀಕ್ಷೆಯನ್ನು ಇಟ್ಟುಕೊಂಡಿರಸಾಧ್ಯವಿದೆ. (ಯೋಹಾನ 17:3; ಪ್ರಕಟನೆ 21:​3, 4) ಈ ಆಶೀರ್ವಾದಗಳು ಹಾಗೂ ಇನ್ನಿತರ ಆಶೀರ್ವಾದಗಳು, ಯೇಸುವಿನ ಸ್ವತ್ಯಾಗದ ಅತಿ ಶ್ರೇಷ್ಠ ಕೃತ್ಯದ ಫಲಿತಾಂಶಗಳಾಗಿವೆ.

ಪ್ರಭು ಭೋಜನಕ್ಕಾಗಿ ಗಣ್ಯತೆಯನ್ನು ತೋರಿಸುವುದು

ಪ್ರಭು ಭೋಜನವು “ದೇವರ ಅತಿಶಯವಾದ ಕೃಪೆಯ” ಅಪೂರ್ವ ವ್ಯಕ್ತಪಡಿಸುವಿಕೆಯಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ. ಮತ್ತು ಯೇಸುವಿನ ಸ್ವತ್ಯಾಗದ ಪ್ರೀತಿಯ ಮೂಲಕ ಸಾಧ್ಯಗೊಳಿಸಲ್ಪಟ್ಟಿರುವ ವಿಮೋಚನಾ ಯಜ್ಞಕ್ಕಾಗಿ ಯೆಹೋವ ದೇವರು ಮಾಡಿರುವ ಏರ್ಪಾಡು, ನಿಜವಾಗಿಯೂ ಆತನ ‘ವರ್ಣಿಸಲಶಕ್ಯವಾದ ವರ’ ಆಗಿದೆ. (2 ಕೊರಿಂಥ 9:​14, 15) ಯೇಸು ಕ್ರಿಸ್ತನ ಮೂಲಕ ತೋರಿಸಲ್ಪಟ್ಟ ದೇವರ ಒಳ್ಳೇತನದ ಈ ಅಭಿವ್ಯಕ್ತಿಗಳು, ಕೃತಜ್ಞತೆ ಮತ್ತು ಗಣ್ಯತೆಯ ಆಳವಾದ ಹಾಗೂ ನಿತ್ಯವಾದ ಪ್ರಜ್ಞೆಯನ್ನು ನಿಮ್ಮಲ್ಲಿ ಉಂಟುಮಾಡುವುದಿಲ್ಲವೋ?

ನಿಜವಾಗಿಯೂ ಉಂಟುಮಾಡುತ್ತವೆ ಎಂಬ ದೃಢಭರವಸೆ ನಮಗಿದೆ. ಆದುದರಿಂದಲೇ, ಯೇಸುವಿನ ಮರಣದ ಜ್ಞಾಪಕವನ್ನು ಆಚರಿಸುವುದರಲ್ಲಿ ಯೆಹೋವನ ಸಾಕ್ಷಿಗಳೊಂದಿಗೆ ಕೂಡಿಬರುವಂತೆ ನಾವು ನಿಮ್ಮನ್ನು ಹಾರ್ದಿಕವಾಗಿ ಆಮಂತ್ರಿಸುತ್ತೇವೆ. ಈ ವರ್ಷ ಜ್ಞಾಪಕಾಚರಣೆಯು ಏಪ್ರಿಲ್‌ 16ರ ಬುಧವಾರದಂದು ಸೂರ್ಯಾಸ್ತಮಾನದ ಬಳಿಕ ನಡೆಯಲಿರುವುದು. ನಿಮ್ಮ ಕ್ಷೇತ್ರದಲ್ಲಿರುವ ಯೆಹೋವನ ಸಾಕ್ಷಿಗಳು, ಈ ಅತ್ಯಂತ ಪ್ರಮುಖ ಘಟನೆಗಾಗಿರುವ ಸರಿಯಾದ ಸಮಯ ಹಾಗೂ ಸ್ಥಳದ ಕುರಿತು ನಿಮಗೆ ತಿಳಿಸಲು ಸಂತೋಷಿಸುವರು.

[ಪಾದಟಿಪ್ಪಣಿ]

^ ಪ್ಯಾರ. 19 ವಿಮೋಚನೆಯ ಕುರಿತಾದ ಇನ್ನೂ ಹೆಚ್ಚಿನ ಆದ್ಯಂತ ಚರ್ಚೆಗಾಗಿ, ದಯವಿಟ್ಟು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟ ನಿತ್ಯಜೀವಕ್ಕೆ ನಡೆಸುವ ಜ್ಞಾನ ಎಂಬ ಪುಸ್ತಕವನ್ನು ನೋಡಿರಿ.

[ಪುಟ 6ರಲ್ಲಿರುವ ಚೌಕ/ಚಿತ್ರಗಳು]

‘ಇದು ನನ್ನ ದೇಹ’ ಅಥವಾ ‘ಇದು ನನ್ನ ದೇಹವನ್ನು ಸೂಚಿಸುತ್ತದೆ’ ಯಾವುದು ಸರಿ?

‘ನಾನೇ ಬಾಗಲು ಆಗಿದ್ದೇನೆ’ ಮತ್ತು ‘ನಾನೇ ನಿಜವಾದ ದ್ರಾಕ್ಷೇಬಳ್ಳಿ ಆಗಿದ್ದೇನೆ’ ಎಂದು ಯೇಸು ಹೇಳಿದಾಗ, ಅವನು ಅಕ್ಷರಾರ್ಥವಾಗಿ ಒಂದು ಬಾಗಲು ಅಥವಾ ಅಕ್ಷರಾರ್ಥವಾದ ದ್ರಾಕ್ಷೇಬಳ್ಳಿಯಾಗಿದ್ದಾನೆಂದು ಯಾರೊಬ್ಬರೂ ನೆನಸಲಿಲ್ಲ. (ಯೋಹಾನ 10:7; 15:1) ತದ್ರೀತಿಯಲ್ಲಿ, ದ ನ್ಯೂ ಜೆರೂಸಲೆಮ್‌ ಬೈಬಲು “ಈ ಪಾತ್ರೆಯು ಹೊಸ ಒಡಂಬಡಿಕೆ ಆಗಿದೆ” ಎಂದು ಯೇಸು ಹೇಳಿರುವುದಾಗಿ ಉಲ್ಲೇಖಿಸುವಾಗ, ಆ ಪಾತ್ರೆಯೇ ಅಕ್ಷರಾರ್ಥಕವಾಗಿ ಹೊಸ ಒಡಂಬಡಿಕೆಯಾಗಿತ್ತು ಎಂಬ ತೀರ್ಮಾನಕ್ಕೆ ನಾವು ಬರುವುದಿಲ್ಲ. ಅದೇ ರೀತಿಯಲ್ಲಿ, ರೊಟ್ಟಿಯು ತನ್ನ ದೇಹ ‘ಆಗಿದೆ’ ಎಂದು ಅವನು ಹೇಳಿದಾಗ, ಆ ರೊಟ್ಟಿಯು ಅವನ ದೇಹವನ್ನು ಅರ್ಥೈಸಿತು ಅಥವಾ ಸಂಕೇತಿಸಿತು ಎಂಬುದು ಸುವ್ಯಕ್ತ. ಹೀಗೆ, ಚಾರ್ಲ್ಸ್‌ ಬಿ. ವಿಲಿಯಮ್ಸ್‌ ಭಾಷಾಂತರವು ಹೇಳುವುದು: “ಇದು ನನ್ನ ದೇಹವನ್ನು ಪ್ರತಿನಿಧಿಸುತ್ತದೆ.”​—ಲೂಕ 22:​19, 20.

[ಪುಟ 5ರಲ್ಲಿರುವ ಚಿತ್ರ]

ಹುಳಿಯಿಲ್ಲದ ರೊಟ್ಟಿ ಮತ್ತು ದ್ರಾಕ್ಷಾಮದ್ಯಗಳು ಯೇಸುವಿನ ಪಾಪರಹಿತ ದೇಹ ಹಾಗೂ ಅವನು ಸುರಿಸಿದ ರಕ್ತಕ್ಕೆ ಸೂಕ್ತವಾದ ಸಂಕೇತಗಳಾಗಿವೆ

[ಪುಟ 7ರಲ್ಲಿರುವ ಚಿತ್ರ]

ಜ್ಞಾಪಕಾಚರಣೆಯು ಯೆಹೋವ ದೇವರು ಮತ್ತು ಯೇಸು ಕ್ರಿಸ್ತನಿಂದ ತೋರಿಸಲ್ಪಟ್ಟ ಮಹಾನ್‌ ಪ್ರೀತಿಯ ಮರುಜ್ಞಾಪನವಾಗಿದೆ