ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯುವ ಜನರೇ ನೀವು ಆತ್ಮಿಕ ಪ್ರಗತಿಯನ್ನು ಮಾಡುತ್ತಿದ್ದೀರೊ?

ಯುವ ಜನರೇ ನೀವು ಆತ್ಮಿಕ ಪ್ರಗತಿಯನ್ನು ಮಾಡುತ್ತಿದ್ದೀರೊ?

ಯುವ ಜನರೇ ನೀವು ಆತ್ಮಿಕ ಪ್ರಗತಿಯನ್ನು ಮಾಡುತ್ತಿದ್ದೀರೊ?

ಹೀಡಿಯೋ ತನ್ನ ಪ್ರೌಢಶಾಲಾ ದಿನಗಳನ್ನು ನೆನಪುಮಾಡಿಕೊಳ್ಳುತ್ತಾ ಹೀಗೆ ಹೇಳುತ್ತಾನೆ: “ನಾನು ಆಗ ಕ್ರೈಸ್ತ ಕೂಟಗಳಿಗೆ ಹಾಜರಾಗುತ್ತಿದ್ದೇನಾದರೂ, ದೇವರನ್ನು ಸೇವಿಸಬೇಕೆಂಬ ಬಲವಾದ ಬಯಕೆಯು ನನ್ನಲ್ಲಿರಲಿಲ್ಲ. ನನ್ನ ಸಹಪಾಠಿಗಳು ನನ್ನನ್ನು ತುಂಬ ಮೆಚ್ಚುತ್ತಿರುವುದಾಗಿ ಮತ್ತು ಒಬ್ಬ ಪ್ರಿಯತಮೆಯೊಂದಿಗೆ ಬಿಂಕದಿಂದ ನಡೆಯುತ್ತಿರುವುದನ್ನು ನಾನು ಸ್ವತಃ ಕಲ್ಪಿಸಿಕೊಳ್ಳುತ್ತಿದೆ. ನನಗೆ ನಿರ್ದಿಷ್ಟ ಗುರಿಗಳಿರಲಿಲ್ಲ. ಮತ್ತು ಯಾವುದೇ ರೀತಿಯಲ್ಲಿ ಆತ್ಮಿಕ ಪ್ರಗತಿಯನ್ನು ಮಾಡಲು ನಾನು ಇಚ್ಛಿಸಲಿಲ್ಲ.” ಹೀಡಿಯೋವಿನಂತೆ ಅನೇಕ ಯುವ ಜನರು, ಯಾವುದೇ ಪ್ರಯೋಜನಕಾರಿ ಗುರಿಗಳನ್ನು ತಲಪಲು ಅಥವಾ ಪ್ರಗತಿಯನ್ನು ಮಾಡಲು ಅಪೇಕ್ಷೆಯಿಲ್ಲದೆ, ಸುಮ್ಮನೆ ಗೊತ್ತುಗುರಿಯಿಲ್ಲದೆ ದಿನಂಪ್ರತಿಯ ಆಗುಹೋಗುಗಳಲ್ಲಿ ಮುಳುಗಿರುತ್ತಾರೆ.

ನೀವು ಒಬ್ಬ ಯುವ ವ್ಯಕ್ತಿಯಾಗಿರುವಲ್ಲಿ, ಕ್ರೀಡೆಗಳಲ್ಲಿ ಅಥವಾ ಒಂದು ಹವ್ಯಾಸದಲ್ಲಿ ಒಳಗೊಂಡಿರುವಾಗ ನೀವು ಬಹಳ ಉತ್ಸಾಹದಿಂದಿರಬಹುದು. ಆದರೆ, ಆತ್ಮಿಕ ಚಟುವಟಿಕೆಗಳ ವಿಷಯಕ್ಕೆ ಬರುವಾಗ ನಿಮಗೆ ಹಾಗನಿಸಲಿಕ್ಕಿಲ್ಲ. ಆತ್ಮಿಕ ಗುರಿಗಳ ವಿಷಯದಲ್ಲೂ ನೀವು ಉತ್ಸಾಹಭರಿತರಾಗಿರಲು ಸಾಧ್ಯವೊ? ಕೀರ್ತನೆಗಾರನ ಈ ⁠ಮಾತುಗಳನ್ನು ಗಮನಿಸಿರಿ: “ಯೆಹೋವನ ಕಟ್ಟಳೆ ನಂಬಿಕೆಗೆ ಯೋಗ್ಯವಾದದ್ದು; ಬುದ್ಧಿಹೀನರಿಗೆ ವಿವೇಕಪ್ರದವಾಗಿದೆ. . . . ಯೆಹೋವನ ಆಜ್ಞೆ ಪವಿತ್ರವಾದದ್ದು; ಕಣ್ಣುಗಳನ್ನು ಕಳೆಗೊಳಿಸುತ್ತದೆ.” (ಕೀರ್ತನೆ 19:7, 8) ದೇವರ ವಾಕ್ಯವು “ಬುದ್ಧಿಹೀನ”ನ ‘ಕಣ್ಣುಗಳನ್ನು ಕಳೆಗೊಳಿಸುವುದು’ ಅಂದರೆ ವಿವೇಕದಿಂದ ಕ್ರಿಯೆಗೈಯುವಂತೆ ನಡೆಸಸಾಧ್ಯವಿದೆ. ಹೌದು, ಆತ್ಮಿಕ ವಿಷಯಗಳಿಂದ ನೀವು ಹರ್ಷಿತರಾಗಬಲ್ಲಿರಿ. ಆದರೆ ಆ ರೀತಿಯ ಭಾವನೆಯನ್ನು ನೀವು ಅನುಭವಿಸಬೇಕಾದರೆ ಏನು ಅವಶ್ಯಕ? ನೀವು ಎಲ್ಲಿಂದ ಆರಂಭಿಸಬೇಕು?

ದೇವರನ್ನು ಸೇವಿಸಲು ಪ್ರಚೋದಿಸಲ್ಪಡಿರಿ

ಮೊದಲಾಗಿ ನೀವು ಪ್ರಚೋದಿಸಲ್ಪಡಬೇಕು. ಯೆಹೂದದ ಯುವ ಅರಸನಾದ ಯೋಷೀಯನ ಕುರಿತು ಪರಿಗಣಿಸಿರಿ. ಯೆಹೋವನ ಧರ್ಮೋಪದೇಶದ ಗ್ರಂಥವು ಆಲಯದಲ್ಲಿ ಸಿಕ್ಕಿದಾಗ, ಯೋಷೀಯನು ಅದನ್ನು ಓದಿಸಿದನು ಮತ್ತು ಅವನು ಏನನ್ನು ಕೇಳಿಸಿಕೊಂಡನೊ ಅದರಿಂದ ಬಹಳ ಪ್ರಭಾವಿತನಾದನು. ಫಲಿತಾಂಶವಾಗಿ, “ಯೋಷೀಯನು ಇಸ್ರಾಯೇಲ್ಯರಿಗೆ ಸೇರಿದ ಎಲ್ಲಾ ಪ್ರಾಂತಗಳೊಳಗಿನ ಅಸಹ್ಯಮೂರ್ತಿಗಳನ್ನೆಲ್ಲಾ ತೆಗೆದುಹಾಕಿಸಿ”ದನು. (2 ಪೂರ್ವಕಾಲವೃತ್ತಾಂತ 34:14-21, 33) ಶುದ್ಧ ಆರಾಧನೆಯನ್ನು ಬೆಂಬಲಿಸುವುದರಲ್ಲಿ ಹೆಚ್ಚಿನದ್ದನ್ನು ಮಾಡುವಂತೆ ದೇವರ ವಾಕ್ಯದ ಓದುವಿಕೆಯು ಯೋಷೀಯನನ್ನು ಪ್ರೇರೇಪಿಸಿತು.

ಬೈಬಲನ್ನು ಕ್ರಮವಾಗಿ ಓದಿ, ಓದಿದ ವಿಷಯದ ಕುರಿತು ಮನನ ಮಾಡಿದರೆ, ನೀವು ಸಹ ಯೆಹೋವನನ್ನು ಸೇವಿಸುವ ಬಯಕೆಯನ್ನು ಬೆಳೆಸಸಾಧ್ಯವಿದೆ. ಈ ವಿಷಯವೇ ಹೀಡಿಯೋವನ್ನೂ ಪ್ರಚೋದಿಸಿತು. ಯೆಹೋವನ ಸಾಕ್ಷಿಗಳಲ್ಲಿ ಪೂರ್ಣ ಸಮಯದ ಶುಶ್ರೂಷಕರಾಗಿದ್ದ ಒಬ್ಬ ವೃದ್ಧ ಪಯನೀಯರ್‌ ಸಹೋದರರೊಂದಿಗೆ ಅವನು ನಿಕಟವಾಗಿ ಸಹವಾಸಿಸಲು ತೊಡಗಿದನು. ಆ ಪಯನೀಯರ್‌ ಸಹೋದರರು ಬೈಬಲಿನ ಶ್ರದ್ಧಾಪೂರ್ವಕ ವಿದ್ಯಾರ್ಥಿಯಾಗಿದ್ದರು, ಮತ್ತು ಅದರ ಬೋಧನೆಗಳನ್ನು ತನ್ನ ಜೀವಿತದಲ್ಲಿ ಅನ್ವಯಿಸಿಕೊಳ್ಳುವ ಗುರಿಯುಳ್ಳವರಾಗಿದ್ದರು. ಈ ಪಯನೀಯರ್‌ ಸಹೋದರರ ಮಾದರಿಯಿಂದ ಬಹಳ ಉತ್ತೇಜಿತನಾಗಿ, ಹೀಡಿಯೋ ಸಹ ಅದನ್ನೇ ಮಾಡಲಾರಂಭಿಸಿದನು. ದೇವರನ್ನು ಮತ್ತು ಇತರ ಜನರನ್ನು ಸೇವಿಸುವ ಗಾಢವಾದ ಬಯಕೆಯನ್ನು ಅವನು ಬೆಳೆಸಿಕೊಂಡನು. ಅವನ ಆತ್ಮಿಕ ಪ್ರಗತಿಯು, ಅವನಿಗೊಂದು ಉದ್ದೇಶಭರಿತ ಜೀವಿತವನ್ನು ಫಲಿಸಿತು.

ಪ್ರತಿದಿನ ಬೈಬಲನ್ನು ಓದುವುದು ಯುವ ಜನರಿಗೆ ಪ್ರಚೋದನೆ ಕೊಡುವಂಥದ್ದಾಗಿರಸಾಧ್ಯವಿದೆ. ಟಕಹೀರೋ ಎಂಬುವವನು ವಿವರಿಸುವುದು: “ನಾನು ಮಲಗಲು ಹಾಸಿಗೆಗೆ ಹೋದ ಮೇಲೆ, ಆ ದಿನದ ನನ್ನ ಬೈಬಲ್‌ ಓದುವಿಕೆಯನ್ನು ನಾನಿನ್ನೂ ಓದಲಿಲ್ಲವೆಂದು ನೆನಪಾದಾಗ, ನಾನು ಎದ್ದು ಅದನ್ನು ಓದುತ್ತಿದ್ದೆ. ಇದರ ಫಲಿತಾಂಶವಾಗಿ ನಾನು ಯೆಹೋವನ ಮಾರ್ಗದರ್ಶನವನ್ನು ಅನುಭವಿಸಿದೆ. ಪ್ರತಿದಿನದ ಬೈಬಲ್‌ ಓದುವಿಕೆಯು ನನ್ನ ಆತ್ಮಿಕ ಪ್ರಗತಿಗೆ ಬಹಳಷ್ಟು ಸಹಾಯಮಾಡಿತು. ಯೆಹೋವನ ಸೇವೆಯಲ್ಲಿ ಹೆಚ್ಚನ್ನು ಮಾಡಬೇಕೆಂಬ ದೃಢನಿಶ್ಚಯವುಳ್ಳವನಾಗಿ, ನಾನು ಪ್ರೌಢಶಾಲೆಯಿಂದ ಪದವಿ ಪ್ರಾಪ್ತಿಹೊಂದಿದ ಸ್ವಲ್ಪದರಲ್ಲಿಯೇ ರೆಗ್ಯುಲರ್‌ ಪಯನೀಯರ್‌ ಕೆಲಸವನ್ನು ಆರಂಭಿಸಿದೆ. ಮತ್ತು ನಾನು ಈ ಸೇವೆಯಲ್ಲಿ ಬಹಳವಾಗಿ ಆನಂದಿಸುತ್ತಿದ್ದೇನೆ.”

ಯೆಹೋವನನ್ನು ಸ್ತುತಿಸಬೇಕೆಂಬ ನಿಮ್ಮ ಪ್ರಚೋದನೆಯನ್ನು ಬೈಬಲನ್ನು ಓದುವುದಲ್ಲದೆ ಇನ್ನಾವುದು ಬಲಪಡಿಸಸಾಧ್ಯವಿದೆ? ಟೋಮೋಹೀರೋ ತನ್ನ ತಾಯಿಯಿಂದ ಬೈಬಲ್‌ ಸತ್ಯವನ್ನು ಕಲಿತುಕೊಂಡನು. ಅವನು ಹೇಳುವುದು: “ನನ್ನ 19ನೆಯ ವರುಷ ಪ್ರಾಯದಲ್ಲಿ, ಜೀವಿತಕ್ಕೆ ಒಂದು ಉದ್ದೇಶವಿದೆ (ಇಂಗ್ಲಿಷ್‌) ಎಂಬ ಪುಸ್ತಕವನ್ನು ನಾನು ಸಂಪೂರ್ಣವಾಗಿ ಅಧ್ಯಯನ ಮಾಡಿದ ನಂತರವೇ ಯೆಹೋವನ ಪ್ರೀತಿ ಮತ್ತು ಯೇಸುವಿನ ಪ್ರಾಯಶ್ಚಿತ್ತ ಯಜ್ಞದಿಂದ ನಾನು ಆಳವಾಗಿ ಪ್ರಭಾವಿತನಾದೆ. ದೇವರ ಪ್ರೀತಿಯ ಕಡೆಗಿನ ಆ ಗಣ್ಯತೆಯು, ಯೆಹೋವನ ಸೇವೆಯಲ್ಲಿ ಇನ್ನೂ ಹೆಚ್ಚನ್ನು ಮಾಡುವಂತೆ ನನ್ನನ್ನು ಪ್ರಚೋದಿಸಿತು.” (2 ಕೊರಿಂಥ 5:14, 15) ಟೋಮೋಹೀರೋವಿನಂತೆ, ಶ್ರದ್ಧಾಪೂರ್ವಕವಾಗಿ ವೈಯಕ್ತಿಕ ಬೈಬಲ್‌ ಅಧ್ಯಯನವನ್ನು ಬೆನ್ನಟ್ಟುವ ಮೂಲಕ ಅನೇಕ ಯುವ ಜನರು ಆತ್ಮಿಕ ಪ್ರಗತಿಯನ್ನು ಮಾಡುವಂತೆ ಉತ್ತೇಜನವನ್ನು ಪಡೆದುಕೊಳ್ಳುತ್ತಾರೆ.

ಈ ರೀತಿಯ ಪ್ರಯತ್ನದ ನಂತರವೂ ಯೆಹೋವನನ್ನು ಸೇವಿಸುವ ಹೃದಯಾಳದ ಬಯಕೆಯ ಕೊರತೆಯು ನಿಮ್ಮಲ್ಲಿರುವುದಾದರೆ ಆಗೇನು? ನೀವು ಸಹಾಯವನ್ನು ಬೇಡಿಕೊಳ್ಳಬಹುದಾದ ಯಾರಾದರು ಇದ್ದಾರೊ? ಅಪೊಸ್ತಲ ಪೌಲನು ಬರೆದುದು: “ದೇವರೇ . . . ನಿಮ್ಮಲ್ಲಿ ಇಚ್ಛೆಯನ್ನೂ ಕ್ರಿಯೆಯನ್ನೂ ಉಂಟುಮಾಡುವವನಾಗಿದ್ದಾನೆ.” (ಫಿಲಿಪ್ಪಿ 2:​13, NW) ಸಹಾಯಕ್ಕಾಗಿ ಯೆಹೋವನಲ್ಲಿ ನೀವು ಪ್ರಾರ್ಥಿಸುವುದಾದರೆ, ಆತನು ತನ್ನ ಪವಿತ್ರಾತ್ಮವನ್ನು ನಿಮ್ಮ ಮೇಲೆ ಉದಾರವಾಗಿ ಸುರಿಸುತ್ತಾನೆ ಮತ್ತು ಅದು ನಿಮ್ಮಲ್ಲಿ “ಕ್ರಿಯೆ”ಯನ್ನು ಮಾತ್ರವಲ್ಲ “ಇಚ್ಛೆಯನ್ನೂ” ಉಂಟುಮಾಡುತ್ತದೆ. ಇದರರ್ಥವು, ದೇವರ ಪವಿತ್ರಾತ್ಮವು, ಯೆಹೋವನ ಸೇವೆಯಲ್ಲಿ ಅತ್ಯುತ್ತಮವಾದದ್ದನ್ನು ಮಾಡುವ ನಿಮ್ಮ ಬಯಕೆಯನ್ನು ಹೆಚ್ಚಿಸುವುದು ಮತ್ತು ಆತ್ಮಿಕವಾಗಿ ಬೆಳೆಯುವಂತೆ ಸಹಾಯಮಾಡುವುದು. ಹೀಗಿರುವುದರಿಂದ, ಯೆಹೋವನ ಶಕ್ತಿಯಲ್ಲಿ ಭರವಸೆಯಿಟ್ಟು, ನಿಮ್ಮ ಹೃದಯವನ್ನು ಬಲಪಡಿಸಿಕೊಳ್ಳಿರಿ!

ನಿಮ್ಮ ಸ್ವಂತ ಗುರಿಗಳನ್ನಿಡಿರಿ

ಯೆಹೋವನನ್ನು ಹೆಚ್ಚು ಪೂರ್ಣವಾಗಿ ಸೇವಿಸಲು ನೀವು ದೃಢನಿಶ್ಚಯವನ್ನು ಮಾಡಿದ ನಂತರ ಆತ್ಮಿಕ ಪ್ರಗತಿಯನ್ನು ಮಾಡಲು, ನೀವು ವೈಯಕ್ತಿಕ ಗುರಿಗಳನ್ನು ಇಡಬೇಕು. ಮಾನಾ ಎಂಬ ಒಬ್ಬ ಕ್ರೈಸ್ತ ಯುವತಿಯು ಹೇಳುವುದು: “ಗುರಿಗಳನ್ನಿಡುವುದು ನನಗೆ ಒಂದು ದೊಡ್ಡ ಸಹಾಯವಾಗಿತ್ತು. ಹಿಂದಕ್ಕೆ ಬೀಳುವ ಬದಲು ನಾನು ಧೈರ್ಯದಿಂದ ಮುನ್ನಡೆಯಲು ಸಾಧ್ಯವಾಯಿತು. ನನ್ನ ಗುರಿಗಳನ್ನು ಮನಸ್ಸಿನಲ್ಲಿಟ್ಟವಳಾಗಿ, ಯೆಹೋವನಲ್ಲಿ ಮಾರ್ಗದರ್ಶನಕ್ಕಾಗಿ ಯಥಾರ್ಥವಾಗಿ ಪ್ರಾರ್ಥಿಸಿದೆ ಮತ್ತು ಈ ಕಾರಣ ನಾನು ಅಪಕರ್ಷಿಸಲ್ಪಡದೆ ಪ್ರಗತಿಮಾಡಲು ಶಕ್ತಳಾದೆ.”

ನಿಮ್ಮ ಗುರಿಗಳು ವಾಸ್ತವಿಕ ಹಾಗೂ ಸಾಧಿಸಬಹುದಾದ ಗುರಿಗಳಾಗಿರಬೇಕು. ಬೈಬಲಿನ ಒಂದು ಅಧ್ಯಾಯವನ್ನು ಪ್ರತಿದಿನ ಓದುವುದು ಒಂದು ಸಮಂಜಸವಾದ ಗುರಿಯಾಗಿರಸಾಧ್ಯವಿದೆ. ನೀವು ಒಂದು ಸಂಶೋಧನಾ ಕಾರ್ಯಯೋಜನೆಯನ್ನೂ ಆರಂಭಿಸಬಲ್ಲಿರಿ. ಉದಾಹರಣೆಗೆ, ವಾಚ್‌ ಟವರ್‌ ಪಬ್ಲಿಕೇಷನ್ಸ್‌ ಇಂಡೆಕ್ಸ್‌ ಅನ್ನು ಉಪಯೋಗಿಸುತ್ತಾ “ಯೆಹೋವ” (“Jehovah”) ಎಂಬ ಶೀರ್ಷಿಕೆಯ ಕೆಳಗೆ “ಹೆಸರಿನ ಅನುಕ್ರಮದಲ್ಲಿ ಗುಣಗಳು” (“Qualities by Name”) ಎಂಬ ಉಪಶೀರ್ಷಿಕೆಯ ಕೆಳಗಿರುವ ಯೆಹೋವನ ಗುಣಗಳನ್ನು ನೀವು ಅಧ್ಯಯನಮಾಡಬಹುದು. ಅಲ್ಲಿ ನೀವು ಪರಿಗಣಿಸಸಾಧ್ಯವಿರುವ 40 ಶೀರ್ಷಿಕೆಗಳಿವೆ ಮತ್ತು ಇಂಥ ಸಂಶೋಧನೆಯು ನಿಮ್ಮನ್ನು ಯೆಹೋವನ ಸಮೀಪಕ್ಕೆ ಸೆಳೆದು, ಆತನಿಗಾಗಿ ಇನ್ನೂ ಹೆಚ್ಚನ್ನು ಮಾಡುವಂತೆ ನಿಮ್ಮನ್ನು ಹುರಿದುಂಬಿಸುತ್ತದೆ ಎಂಬುದರಲ್ಲಿ ಯಾವ ಸಂಶಯವೂ ಇಲ್ಲ. ಸಾಧಿಸಬಹುದಾದ ಇನ್ನಿತರ ಗುರಿಗಳಲ್ಲಿ, ಸಭಿಕರ ಭಾಗವಹಿಸುವಿಕೆಯನ್ನು ಕೇಳಿಕೊಳ್ಳುವ ಪ್ರತಿಯೊಂದು ಕ್ರೈಸ್ತ ಕೂಟದಲ್ಲಿ ಕಡಿಮೆಪಕ್ಷ ಒಂದು ಉತ್ತರವನ್ನಾದರೂ ಕೊಡುವುದು, ಪ್ರತಿಯೊಂದು ಕೂಟದಲ್ಲಿ ಕಡಿಮೆಪಕ್ಷ ಸಭೆಯ ಒಬ್ಬ ಸದಸ್ಯನ ಹೆಚ್ಚು ಉತ್ತಮ ಪರಿಚಯಮಾಡಿಕೊಳ್ಳುವುದು, ಪ್ರತಿದಿನ ತಪ್ಪದೆ ಯೆಹೋವನಿಗೆ ಪ್ರಾರ್ಥಿಸುವುದು ಮತ್ತು ಆತನ ಕುರಿತು ಇತರರೊಂದಿಗೆ ಮಾತಾಡುವುದು ಸೇರಿಕೊಂಡಿದೆ.

ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ನೀವು ಇನ್ನೂ ದಾಖಲಾಗಿಲ್ಲವಾದರೆ, ಇದನ್ನು ಮಾಡುವುದು ಒಂದು ಉತ್ತಮವಾದ ಗುರಿಯಾಗಿರಸಾಧ್ಯವಿದೆ. ಸಾರ್ವಜನಿಕ ಶುಶ್ರೂಷೆಯಲ್ಲಿ ನೀವು ಭಾಗವಹಿಸುತ್ತಿದ್ದೀರೊ? ಇಲ್ಲವಾದಲ್ಲಿ, ಒಬ್ಬ ಅಸ್ನಾತ ಪ್ರಚಾರಕರಾಗುವಂತೆ ಪ್ರಯತ್ನಮಾಡಿರಿ. ಯೆಹೋವನೊಂದಿಗಿನ ನಿಮ್ಮ ಸಂಬಂಧದ ಕುರಿತು ಗಂಭೀರವಾಗಿ ಆಲೋಚಿಸಿ, ನಿಮ್ಮನ್ನು ಆತನಿಗೆ ಸಮರ್ಪಿಸಿಕೊಳ್ಳುವುದು ಮುಂದಿನ ಹೆಜ್ಜೆಯಾಗಿದೆ. ಪೂರ್ಣ ಸಮಯದ ಶುಶ್ರೂಷೆಯ ಗುರಿಯನ್ನಿಟ್ಟು ಅದನ್ನು ತಲಪುವ ಮೂಲಕ ಅನೇಕ ಯುವ ಜನರು ತಮ್ಮ ಸಮರ್ಪಣೆಗೆ ಹೊಂದಿಕೆಯಲ್ಲಿ ಜೀವಿಸಲು ಪ್ರಯತ್ನಿಸುತ್ತಾರೆ.

ನಿಮ್ಮ ಜೀವಿತದಲ್ಲಿ ಗುರಿಗಳನ್ನು ಇಟ್ಟುಕೊಳ್ಳುವುದು ಉತ್ತಮವಾಗಿದ್ದರೂ, ಸ್ಪರ್ಧಾತ್ಮಕ ಮನೋಭಾವವನ್ನು ಬೆಳೆಸಿಕೊಳ್ಳದಂತೆ ಎಚ್ಚರವಾಗಿರಿ. ನೀವು ಇತರರೊಂದಿಗೆ ನಿಮ್ಮನ್ನು ಹೋಲಿಸಿ ನೋಡದಿದ್ದಲ್ಲಿ, ನೀವು ಮಾಡುವ ಕೆಲಸದಲ್ಲಿ ಹೆಚ್ಚಿನ ಆನಂದವನ್ನು ಕಂಡುಕೊಳ್ಳುವಿರಿ.​—ಗಲಾತ್ಯ 5:​26; 6:​4.

‘ನಾನು ಅನನುಭವಿ ಮತ್ತು ಸಮಂಜಸವಾದ ಗುರಿಗಳನ್ನಿಡಲು ನನ್ನಿಂದ ಸಾಧ್ಯವಿಲ್ಲ’ ಎಂದು ನಿಮಗನಿಸಬಹುದು. ಹಾಗಿರುವಲ್ಲಿ ಬೈಬಲಿನ ಈ ಬುದ್ಧಿವಾದವನ್ನು ಅನುಸರಿಸಿರಿ: “ಕಿವಿಗೊಟ್ಟು ಜ್ಞಾನಿಗಳ ಮಾತುಗಳನ್ನು ಕೇಳು.” (ಜ್ಞಾನೋಕ್ತಿ 22:17) ನಿಮ್ಮ ಹೆತ್ತವರ ಅಥವಾ ಇತರ ಪ್ರೌಢ ಕ್ರೈಸ್ತರ ಸಹಾಯವನ್ನು ಪಡೆದುಕೊಳ್ಳಿರಿ. ಆದರೆ ಖಂಡಿತವಾಗಿಯೂ ಹೆತ್ತವರು ಮತ್ತು ಇತರರು ಈ ವಿಷಯದಲ್ಲಿ ನ್ಯಾಯಸಮ್ಮತರೂ ಉತ್ತೇಜನ ಕೂಡುವವರೂ ಆಗಿರಬೇಕು. ಇತರರು ತಮಗಾಗಿ ಇಟ್ಟಿರುವ ಗುರಿಯನ್ನು ತಲಪುವಂತೆ ಪ್ರಯತ್ನಿಸಲು ಒತ್ತಾಯಿಸಲ್ಪಡುವುದು, ಯುವ ಜನರ ಆನಂದವನ್ನು ಕಸಿದುಕೊಳ್ಳಸಾಧ್ಯವಿದೆ. ಮಾತ್ರವಲ್ಲದೆ, ಗುರಿಗಳನ್ನಿಡುವ ಉದ್ದೇಶವನ್ನೇ ಸೋಲಿಸಲೂಬಹುದು. ಒಬ್ಬ ಹುಡುಗಿಯ ವಿಷಯದಲ್ಲಿ ಇದೇ ಸಂಭವಿಸಿತು. ಅವಳಂದದ್ದು: “ದೇವಪ್ರಭುತ್ವಾತ್ಮಕ ಶುಶ್ರೂಷಾ ಶಾಲೆಯಲ್ಲಿ ಭಾಗವಹಿಸುವುದು, ಕ್ಷೇತ್ರ ಸೇವೆಯಲ್ಲಿ ಭಾಗವಹಿಸುವುದು, ದೀಕ್ಷಾಸ್ನಾನ ಹೊಂದುವುದು, ಒಬ್ಬ ಪಯನೀಯರಳಾಗುವುದು, ಹೀಗೆ ನನ್ನ ಹೆತ್ತವರು ನನಗಾಗಿ ಒಂದರ ನಂತರ ಇನ್ನೊಂದು ಗುರಿಯನ್ನಿಟ್ಟರು. ಅವುಗಳಲ್ಲಿ ಪ್ರತಿಯೊಂದನ್ನೂ ತಲಪಲು ನಾನು ಬಹಳ ಶ್ರದ್ಧಾಪೂರ್ವಕ ಪ್ರಯತ್ನವನ್ನು ಮಾಡಿದೆ. ಒಂದು ಗುರಿಯನ್ನು ನಾನು ಸಾಧಿಸಿದಾಗ ನನ್ನ ಹೆತ್ತವರು ನನ್ನನ್ನು ಪ್ರಶಂಶಿಸಲಿಲ್ಲ ಬದಲಾಗಿ, ನನ್ನ ಮುಂದೆ ಇನ್ನೊಂದು ಗುರಿಯನ್ನು ಇಟ್ಟರು. ಫಲಿತಾಂಶವಾಗಿ, ಗುರಿಗಳನ್ನು ತಲಪಲು ನನ್ನನ್ನು ಒತ್ತಾಯಿಸಲಾಗುತ್ತಿದೆಯೆಂಬ ಅನಿಸಿಕೆಯಾಗುತ್ತಿತ್ತು. ನಾನು ಬಳಲಿಹೋದೆ ಮತ್ತು ಯಾವುದೇ ಸಾಧನೆಯ ಪರಿಜ್ಞಾನವನ್ನು ಸಹ ನಾನು ಅನುಭವಿಸಲಿಲ್ಲ.” ತಪ್ಪಾದದ್ದಾದರೂ ಎಲ್ಲಿ? ಎಲ್ಲಾ ಗುರಿಗಳು ಸಮಂಜಸವಾಗಿದ್ದವು, ಆದರೆ ಅವು ಅವಳ ಸ್ವಂತ ಗುರಿಗಳಾಗಿರಲಿಲ್ಲ. ಯಶಸ್ಸನ್ನು ಪಡೆಯಬೇಕಾದರೆ, ನೀವೇ ಸ್ವತಃ ಗುರಿಯನ್ನು ಇಡಲು ಪ್ರಥಮ ಹೆಜ್ಜೆಯನ್ನು ತೆಗೆದುಕೊಳ್ಳುವಂತೆ ನೀವು ಪ್ರಚೋದಿಸಲ್ಪಡಬೇಕು!

ಯೇಸು ಕ್ರಿಸ್ತನ ಕುರಿತು ಆಲೋಚಿಸಿರಿ. ಅವನು ಭೂಮಿಗೆ ಬಂದಾಗ, ಅವನ ತಂದೆಯಾದ ಯೆಹೋವನು ಅವನಿಂದ ಏನನ್ನು ನಿರೀಕ್ಷಿಸುತ್ತಾನೆಂದು ಅವನಿಗೆ ತಿಳಿದಿತ್ತು. ಯೆಹೋವನ ಚಿತ್ತವನ್ನು ಮಾಡುವುದು, ಯೇಸುವಿಗೆ ಕೇವಲ ಒಂದು ಗುರಿಯಾಗಿರಲಿಲ್ಲ, ಬದಲಾಗಿ ನೆರವೇರಿಸಬೇಕಾದ ಒಂದು ನೇಮಕವಾಗಿತ್ತು. ಯೇಸು ತನ್ನ ನೇಮಕವನ್ನು ಹೇಗೆ ವೀಕ್ಷಿಸಿದನು? ಅವನಂದದ್ದು: “ನನ್ನನ್ನು ಕಳುಹಿಸಿದಾತನ ಚಿತ್ತದಂತೆ ಮಾಡಿ ಆತನ ಕೆಲಸವನ್ನು ಪೂರೈಸುವದೇ ನನ್ನ ಆಹಾರವು.” (ಯೋಹಾನ 4:34) ಯೆಹೋವನ ಚಿತ್ತವನ್ನು ಮಾಡುವುದರಲ್ಲಿ ಯೇಸು ಆನಂದವನ್ನು ಕಂಡುಕೊಂಡನು ಮತ್ತು ಅವನು ತನ್ನ ತಂದೆಯ ನಿರೀಕ್ಷೆಗಳ ಮೇರೆಗೆ ಜೀವಿಸಿದನು. ಅದು ಯೇಸುವಿಗೆ ಆಹಾರದಂತಿತ್ತು. ಅವನಿಂದ ಕೇಳಿಕೊಳ್ಳಲ್ಪಟ್ಟ ಕೆಲಸವನ್ನು ಪೂರೈಸುವುದರಲ್ಲಿ ಅವನು ಸಂತೋಷವನ್ನೂ ಸಂತೃಪ್ತಿಯನ್ನೂ ಕಂಡುಕೊಂಡನು. (ಇಬ್ರಿಯ 10:5-10) ನೀವು ಯೋಗ್ಯ ರೀತಿಯಲ್ಲಿ ಪ್ರಚೋದಿಸಲ್ಪಡುವಲ್ಲಿ, ನೀವೇನು ಮಾಡಬೇಕೆಂದು ಹೆತ್ತವರು ನಿಮ್ಮನ್ನು ಪ್ರೋತ್ಸಾಹಿಸುತ್ತಾರೊ, ಅದನ್ನು ಮಾಡುವುದರಲ್ಲಿ ನೀವೂ ಸಂತೋಷಿಸಸಾಧ್ಯವಿದೆ.

ಒಳ್ಳೆಯದನ್ನು ಮಾಡುವುದರಲ್ಲಿ ಬೇಸರಗೊಳ್ಳಬೇಡಿರಿ

ಒಮ್ಮೆ ನಿಮ್ಮ ಮನಸ್ಸಿನಲ್ಲಿ ಒಂದು ಗುರಿಯನ್ನು ಇಟ್ಟುಕೊಂಡ ಬಳಿಕ ಅದನ್ನು ಸಾಧಿಸಲು ಕಠಿನ ಪ್ರಯತ್ನವನ್ನು ಮಾಡಿರಿ. ಗಲಾತ್ಯ 6:9 ಹೇಳುವುದು: “ಒಳ್ಳೇದನ್ನು ಮಾಡುವದರಲ್ಲಿ ಬೇಸರಗೊಳ್ಳದೆ ಇರೋಣ. ಯಾಕಂದರೆ ಮನಗುಂದದಿದ್ದರೆ ತಕ್ಕ ಸಮಯದಲ್ಲಿ ಬೆಳೆಯನ್ನು ಕೊಯ್ಯುವೆವು.” ಕೇವಲ ನಿಮ್ಮ ಸ್ವಂತ ಬಲ ಅಥವಾ ಸಾಮರ್ಥ್ಯದ ಮೇಲೆ ಆತುಕೊಳ್ಳಬೇಡಿರಿ. ಖಂಡಿತವಾಗಿಯೂ ನೀವು ಅಡ್ಡಿತಡೆಗಳನ್ನು ಎದುರಿಸಬೇಕಾಗಿಬರುತ್ತದೆ ಮತ್ತು ಕೆಲವು ಸಂದರ್ಭಗಳಲ್ಲಿ ತಾತ್ಕಾಲಿಕವಾಗಿ ಸೋಲನ್ನೂ ಅನುಭವಿಸಬಹುದು. ಆದರೆ, “ನಿನ್ನ ಎಲ್ಲಾ ನಡವಳಿಯಲ್ಲಿ [ದೇವರ] ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು” ಎಂಬುದಾಗಿ ಬೈಬಲ್‌ ನಮಗೆ ಆಶ್ವಾಸನೆ ನೀಡುತ್ತದೆ. (ಜ್ಞಾನೋಕ್ತಿ 3:6) ನೀವು ನಿಮ್ಮ ಆತ್ಮಿಕ ಗುರಿಗಳನ್ನು ತಲಪಲು ಶ್ರಮಿಸುವಾಗ, ಯೆಹೋವನು ನಿಮ್ಮನ್ನು ಪೋಷಿಸುವನು.

ಹೌದು, ಯೆಹೋವನನ್ನು ಸೇವಿಸುವ ಬಯಕೆಯನ್ನು ಬೆಳೆಸಿಕೊಳ್ಳುವ ಮತ್ತು ಆತ್ಮಿಕ ಗುರಿಗಳನ್ನು ತಲಪಲು ಪ್ರಯತ್ನಿಸುವ ಮೂಲಕ ‘ನಿಮ್ಮ ಅಭಿವೃದ್ಧಿಯು ಎಲ್ಲರಿಗೂ ಪ್ರಸಿದ್ಧವಾಗುವಂತೆ’ ನೀವು ಮಾಡಬಲ್ಲಿರಿ. (1 ತಿಮೊಥೆಯ 4:15) ಆಗ, ನೀವು ದೇವರ ಸೇವೆಯಲ್ಲಿ ಒಂದು ಉದ್ದೇಶಭರಿತವಾದ ಜೀವಿತದಲ್ಲಿ ಆನಂದಿಸುವಿರಿ.

[ಪುಟ 9ರಲ್ಲಿರುವ ಚಿತ್ರ]

ಬೈಬಲನ್ನು ಓದುವುದು ಮತ್ತು ಓದಿದ ವಿಷಯದ ಕುರಿತು ಮನನ ಮಾಡುವುದು, ಯೆಹೋವನನ್ನು ಸೇವಿಸುವಂತೆ ನಿಮ್ಮನ್ನು ಪ್ರಚೋದಿಸುತ್ತದೆ

[ಪುಟ 10ರಲ್ಲಿರುವ ಚಿತ್ರ]

ಯೇಸು ಅವನ ತಂದೆಯ ನಿರೀಕ್ಷೆಗಳಿಗೆ ಹೊಂದಿಕೆಯಲ್ಲಿ ಜೀವಿಸಿದನು