ವಾಚಕರಿಂದ ಪ್ರಶ್ನೆಗಳು
ವಾಚಕರಿಂದ ಪ್ರಶ್ನೆಗಳು
ಕೀರ್ತನೆಗಳ ಪುಸ್ತಕದಲ್ಲಿ ಪ್ರತಿಯೊಂದು ಕೀರ್ತನೆಗೆ ಕೊಡಲ್ಪಟ್ಟಿರುವ ಸಂಖ್ಯೆಗಳು ಬೇರೆ ಬೇರೆ ಬೈಬಲ್ ಭಾಷಾಂತರಗಳಲ್ಲಿ ಏಕೆ ಭಿನ್ನ ಭಿನ್ನವಾಗಿವೆ?
ಅಧ್ಯಾಯ ಹಾಗೂ ವಚನಗಳ ವಿಭಾಗಗಳನ್ನು ಹೊಂದಿದ್ದ ಮೊದಲ ಪೂರ್ಣ ಬೈಬಲು, 1553ರಲ್ಲಿ ರಾಬರ್ ಏಟ್ಯನ್ನಿಂದ ಪ್ರಕಾಶಿಸಲ್ಪಟ್ಟ ಒಂದು ಫ್ರೆಂಚ್ ಭಾಷಾಂತರವಾಗಿತ್ತು. ಆದರೆ, ಇದಕ್ಕಿಂತಲೂ ದೀರ್ಘ ಸಮಯದ ಹಿಂದೆಯೇ ಕೀರ್ತನೆಗಳ ಪುಸ್ತಕವು ವಿಭಾಗಗಳನ್ನು ಹೊಂದಿತ್ತು ಎಂಬುದು ಸುವ್ಯಕ್ತ. ಏಕೆಂದರೆ ಅದು ಒಂದೊಂದು ಕೀರ್ತನೆಗಳ ಅಥವಾ ಗೀತೆಗಳ ಸಂಕಲನವಾಗಿದ್ದು, ಅನೇಕ ಜನರಿಂದ ರಚಿಸಲ್ಪಟ್ಟದ್ದಾಗಿತ್ತು.
ಸಾರ್ವಜನಿಕ ಆರಾಧನೆಯಲ್ಲಿನ ಉಪಯೋಗಕ್ಕಾಗಿ ಕೀರ್ತನೆಗಳನ್ನು ಸಂಕಲಿಸುವಂತೆ ಯೆಹೋವನು ಪ್ರಥಮವಾಗಿ ದಾವೀದನನ್ನು ನಿರ್ದೇಶಿಸಿದನು ಎಂಬುದು ಸುವ್ಯಕ್ತ. (1 ಪೂರ್ವಕಾಲವೃತ್ತಾಂತ 15:16-24) ಸಮಯಾನಂತರ, ಒಬ್ಬ ಯಾಜಕನೂ “ಕುಶಲ ನಕಲುಗಾರನೂ” ಆಗಿದ್ದ ಎಜ್ರನು ಇಡೀ ಕೀರ್ತನೆ ಪುಸ್ತಕವನ್ನು ಸಂಕಲಿಸಿ, ಅದನ್ನು ಸದ್ಯದ ರೂಪಕ್ಕೆ ತರಲು ಕಾರಣನಾಗಿದ್ದನು ಎಂದು ನಂಬಲಾಗುತ್ತದೆ. (ಎಜ್ರ 7:6, NW) ಕೀರ್ತನೆಗಳ ಪುಸ್ತಕವು ಸಂಕಲಿಸಲ್ಪಟ್ಟಾಗ ಅದು ಒಂದೊಂದು ಪ್ರತ್ಯೇಕ ಕೀರ್ತನೆಗಳನ್ನು ಒಳಗೂಡಿತ್ತೆಂಬುದು ತಿಳಿದುಬರುತ್ತದೆ.
ತನ್ನ ಪ್ರಥಮ ಮಿಷನೆರಿ ಪ್ರಯಾಣದಲ್ಲಿ ಅಪೊಸ್ತಲ ಪೌಲನು, ಅಂತಿಯೋಕ್ಯ (ಪಿಸಿದ್ಯ)ದ ಸಭಾಮಂದಿರದಲ್ಲಿ ನೀಡಿದ ಭಾಷಣದಲ್ಲಿ ಕೀರ್ತನೆಗಳ ಪುಸ್ತಕದಿಂದ ಉದ್ಧರಿಸುತ್ತಾ ಹೇಳಿದ್ದು: “ನನಗೆ ನೀನು ಮಗನು, ನಾನೇ ಈ ಹೊತ್ತು ನಿನ್ನನ್ನು ಪಡೆದಿದ್ದೇನೆ ಎಂದು ಎರಡನೆಯ ಕೀರ್ತನೆಯಲ್ಲಿ ಬರೆದಿರುವ ಮಾತು ನೆರವೇರಿತು.” (ಅ. ಕೃತ್ಯಗಳು 13:32, 33) ಇಂದಿನ ಬೈಬಲುಗಳಲ್ಲಿ, ಎರಡನೆಯ ಕೀರ್ತನೆಯ 7ನೇ ವಚನದಲ್ಲಿ ಆ ಮಾತುಗಳು ಈಗಲೂ ಕಂಡುಬರುತ್ತವೆ. ಆದರೂ, ಬೇರೆ ಬೇರೆ ಬೈಬಲ್ ಭಾಷಾಂತರಗಳಲ್ಲಿ ಬಹುತೇಕ ಕೀರ್ತನೆಗಳ ಸಂಖ್ಯೆಯಲ್ಲಿ ಭಿನ್ನತೆಗಳಿವೆ. ಇದಕ್ಕೆ ಕಾರಣವೇನೆಂದರೆ, ಕೆಲವು ಭಾಷಾಂತರಗಳು ಹೀಬ್ರು ಮ್ಯಾಸೊರೆಟಿಕ್ ಮೂಲಪಾಠದ ಮೇಲಾಧಾರಿತವಾಗಿವೆ ಮತ್ತು ಇತರ ಭಾಷಾಂತರಗಳು ಗ್ರೀಕ್ ಸೆಪ್ಟೂಅಜಂಟ್ ಮೇಲಾಧಾರಿತವಾಗಿವೆ. ಈ ಸೆಪ್ಟೂಅಜಂಟ್, ಹೀಬ್ರು ಮೂಲಪಾಠದ ಭಾಷಾಂತರವಾಗಿದ್ದು, ಇದು ಸಾ.ಶ.ಪೂ. ಎರಡನೆಯ ಶತಮಾನದಲ್ಲಿ ಪೂರ್ಣಗೊಳಿಸಲ್ಪಟ್ಟಿತ್ತು. ಉದಾಹರಣೆಗೆ, ಯಾವುದರಿಂದ ಅನೇಕ ಕ್ಯಾಥೊಲಿಕ್ ಬೈಬಲುಗಳು ಭಾಷಾಂತರಿಸಲ್ಪಟ್ಟವೋ ಆ ಲ್ಯಾಟಿನ್ ವಲ್ಗೆಟ್, ಸೆಪ್ಟೂಅಜಂಟ್ ಭಾಷಾಂತರದಲ್ಲಿ ಕಂಡುಬರುವ ಕೀರ್ತನೆಗಳ ಸಂಖ್ಯೆಯನ್ನು ಉಪಯೋಗಿಸುತ್ತದೆ. ಆದರೆ ನೂತನ ಲೋಕ ಭಾಷಾಂತರ (ಇಂಗ್ಲಿಷ್) ಹಾಗೂ ಇತರ ಬೈಬಲುಗಳು ಮ್ಯಾಸೊರೆಟಿಕ್ ಮೂಲಪಾಠದ ಕೀರ್ತನೆಗಳ ಸಂಖ್ಯೆಯನ್ನು ಉಪಯೋಗಿಸುತ್ತವೆ.
ಆ ನಿರ್ದಿಷ್ಟ ಭಿನ್ನತೆಗಳು ಎಲ್ಲೆಲ್ಲಿವೆ? ಹೀಬ್ರು ಮೂಲಪಾಠದಲ್ಲಿ ಒಟ್ಟು 150 ಕೀರ್ತನೆಗಳಿವೆ. ಆದರೆ ಸೆಪ್ಟೂಅಜಂಟ್ ಭಾಷಾಂತರವು, 9 ಮತ್ತು 10ನೆಯ ಕೀರ್ತನೆಗಳನ್ನು ಒಂದೇ ಕೀರ್ತನೆಯಾಗಿ ಜೊತೆಗೂಡಿಸಿದೆ ಮತ್ತು 114 ಮತ್ತು 115ನೆಯ ಕೀರ್ತನೆಗಳನ್ನೂ ಒಂದೇ ಕೀರ್ತನೆಯಾಗಿ ಮಾಡಿದೆ. ಇದಲ್ಲದೆ, ಅದು 116 ಮತ್ತು 147ನೆಯ ಕೀರ್ತನೆಗಳನ್ನು ಎರಡೆರಡು ಕೀರ್ತನೆಗಳಾಗಿ ವಿಭಾಗಿಸಿದೆ. ಒಟ್ಟು ಕೀರ್ತನೆಗಳ ಸಂಖ್ಯೆಯು ಅಷ್ಟೇ ಆಗಿರುವುದಾದರೂ, ಹೀಬ್ರು ಮೂಲಪಾಠಕ್ಕೆ ಹೋಲಿಸುವಾಗ ಸೆಪ್ಟೂಅಜಂಟ್ನಲ್ಲಿ 10ನೆಯ ಕೀರ್ತನೆಯಿಂದ 146ನೆಯ ಕೀರ್ತನೆಯ ವರೆಗಿನ ಸಂಖ್ಯಾರೂಪದಲ್ಲಿ ಒಂದು ಕಡಿಮೆಯಿದೆ. ಹೀಗಿರುವುದರಿಂದ, ಚಿರಪರಿಚಿತವಾಗಿರುವ 23ನೆಯ ಕೀರ್ತನೆಯು ಡುಯೇ ವರ್ಷನ್ನಲ್ಲಿ 22ನೆಯ ಕೀರ್ತನೆಯಾಗಿ ಕಂಡುಬರುತ್ತದೆ. ಈ ಡುಯೇ ವರ್ಷನ್ ಭಾಷಾಂತರವು ಲ್ಯಾಟಿನ್ ವಲ್ಗೆಟ್ನ ಸಂಖ್ಯಾರೂಪವನ್ನು ಅನುಸರಿಸುತ್ತದೆ ಮತ್ತು ಈ ಲ್ಯಾಟಿನ್ ಭಾಷಾಂತರವು ಸೆಪ್ಟೂಅಜಂಟ್ನ ಸಂಖ್ಯಾರೂಪವನ್ನು ನಕಲುಮಾಡುತ್ತದೆ.
ಅಂತಿಮವಾಗಿ, ಕೆಲವು ಕೀರ್ತನೆಗಳ ವಚನದ ಸಂಖ್ಯೆಗಳು ಸಹ ಬೇರೆ ಬೇರೆ ಭಾಷಾಂತರಗಳಲ್ಲಿ ಭಿನ್ನ ರೀತಿಯಲ್ಲಿರಬಹುದು. ಏಕೆ? ಏಕೆಂದರೆ, “ಪ್ರತಿಯೊಂದು ಕೀರ್ತನೆಯ ಮೇಲ್ಬರಹವನ್ನು ಮೊದಲನೆಯ ವಚನವಾಗಿ ಪರಿಗಣಿಸುವ ಯೆಹೂದಿ ಪದ್ಧತಿಯನ್ನು” ಕೆಲವು ಭಾಷಾಂತರಗಳು ಅನುಸರಿಸುತ್ತವೆ, ಆದರೆ ಇತರ ಭಾಷಾಂತರಗಳು ಹಾಗೆ ಮಾಡುವುದಿಲ್ಲ ಎಂದು ಮೆಕ್ಲಿಂಟಕ್ ಮತ್ತು ಸ್ಟ್ರಾಂಗ್ರವರ ಸೈಕ್ಲಪೀಡಿಯ ಹೇಳುತ್ತದೆ. ವಾಸ್ತವದಲ್ಲಿ, ಒಂದು ಕೀರ್ತನೆಯ ಶೀರ್ಷಿಕೆಯು ಅಥವಾ ಮೇಲ್ಬರಹವು ತುಂಬ ಉದ್ದವಾಗಿರುವಲ್ಲಿ, ಅನೇಕವೇಳೆ ಅದನ್ನು ಎರಡು ವಚನಗಳಾಗಿ ಲೆಕ್ಕಿಸಲಾಗುತ್ತದೆ ಮತ್ತು ಇದಕ್ಕನುಸಾರ ಕೀರ್ತನೆಯಲ್ಲಿರುವ ವಚನಗಳ ಸಂಖ್ಯೆಯು ಹೆಚ್ಚಾಗುತ್ತದೆ.