ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸೌಮ್ಯಭಾವ—ಅತ್ಯಂತ ಪ್ರಾಮುಖ್ಯವಾದ ಒಂದು ಕ್ರೈಸ್ತ ಗುಣ

ಸೌಮ್ಯಭಾವ—ಅತ್ಯಂತ ಪ್ರಾಮುಖ್ಯವಾದ ಒಂದು ಕ್ರೈಸ್ತ ಗುಣ

ಸೌಮ್ಯಭಾವ​—ಅತ್ಯಂತ ಪ್ರಾಮುಖ್ಯವಾದ ಒಂದು ಕ್ರೈಸ್ತ ಗುಣ

“ಸೌಮ್ಯಭಾವವನ್ನು . . . ಧರಿಸಿಕೊಳ್ಳಿರಿ.”​—ಕೊಲೊಸ್ಸೆ 3:​12, NW.

1. ಯಾವುದು ಸೌಮ್ಯಭಾವವನ್ನು ಒಂದು ಗಮನಾರ್ಹ ಗುಣವಾಗಿ ಮಾಡುತ್ತದೆ?

ಹವಾಮಾನವು ಸೌಮ್ಯವಾಗಿರುವಾಗ, ಅದು ಹಿತಕರವಾದದ್ದೂ ಆಹ್ಲಾದಕರವಾದದ್ದೂ ಆಗಿರುತ್ತದೆ. ಒಬ್ಬ ವ್ಯಕ್ತಿಯು ಸೌಮ್ಯ ಸ್ವಭಾವದವನಾಗಿರುವಾಗ, ಅವನೊಂದಿಗಿರುವುದು ನಿಜವಾಗಿಯೂ ಹಿತಕರವಾಗಿರುತ್ತದೆ. ಆದರೂ, “ಮೃದು [“ಸೌಮ್ಯ,” NW] ವಚನವು ಎಲುಬನ್ನು ಮುರಿಯುವದು” ಎಂದು ಜ್ಞಾನಿ ಅರಸನಾದ ಸೊಲೊಮೋನನು ತಿಳಿಸಿದನು. (ಜ್ಞಾನೋಕ್ತಿ 25:15) ಸೌಮ್ಯಭಾವವು ಒಂದು ಗಮನಾರ್ಹ ಗುಣವಾಗಿದ್ದು, ಆಹ್ಲಾದತೆಯೊಂದಿಗೆ ಶಕ್ತಿಯನ್ನು ಜೊತೆಗೂಡಿಸುತ್ತದೆ.

2, 3. ಸೌಮ್ಯಭಾವ ಹಾಗೂ ಪವಿತ್ರಾತ್ಮದ ನಡುವೆ ಯಾವ ಸಂಬಂಧವಿದೆ, ಮತ್ತು ಈ ಲೇಖನದಲ್ಲಿ ನಾವು ಏನನ್ನು ಪರಿಗಣಿಸುವೆವು?

2 ಅಪೊಸ್ತಲ ಪೌಲನು ಸೌಮ್ಯಭಾವವನ್ನು, ಗಲಾತ್ಯ 5:​22, 23ರಲ್ಲಿ ಕಂಡುಬರುವ “ದೇವರಾತ್ಮನಿಂದ ಉಂಟಾಗುವ ಫಲ”ಗಳ ಪಟ್ಟಿಯಲ್ಲಿ ಒಳಗೂಡಿಸುತ್ತಾನೆ. ನೂತನ ಲೋಕ ಭಾಷಾಂತರ (ಇಂಗ್ಲಿಷ್‌)ದಲ್ಲಿರುವ 23ನೆಯ ವಚನದಲ್ಲಿ “ಸೌಮ್ಯಭಾವ” ಎಂದು ಭಾಷಾಂತರಿಸಲ್ಪಟ್ಟಿರುವ ಗ್ರೀಕ್‌ ಪದವು, ಕನ್ನಡ ಬೈಬಲಿನ ಭಾಷಾಂತರಗಳಲ್ಲಿ “ಸಾಧುತ್ವ” ಅಥವಾ “ಸೌಜನ್ಯ” ಎಂದು ಅನೇಕವೇಳೆ ತರ್ಜುಮೆಮಾಡಲ್ಪಡುತ್ತದೆ. ವಾಸ್ತವಾಂಶವೇನೆಂದರೆ, ಅಧಿಕಾಂಶ ಇತರ ಭಾಷೆಗಳಲ್ಲಿ ಈ ಗ್ರೀಕ್‌ ಪದಕ್ಕೆ ಸೂಕ್ತವಾದ ಸಮನಾರ್ಥಕ ಪದವನ್ನು ಕಂಡುಕೊಳ್ಳುವುದು ಕಷ್ಟಕರವಾಗಿದೆ. ಏಕೆಂದರೆ ಮೂಲ ಗ್ರೀಕ್‌ ಪದವು ಬಾಹ್ಯರೂಪದ ಸಾಧುತ್ವ ಅಥವಾ ಸೌಜನ್ಯವನ್ನು ವರ್ಣಿಸುವುದಿಲ್ಲ, ಬದಲಾಗಿ ಆಂತರಿಕ ಸೌಮ್ಯಭಾವ ಅಥವಾ ದಯಾಪರತೆಯನ್ನು ವರ್ಣಿಸುತ್ತದೆ; ಒಬ್ಬನ ನಡವಳಿಕೆಯ ರೀತಿಯನ್ನಲ್ಲ, ಬದಲಾಗಿ ಒಬ್ಬನ ಹೃದಮನದ ಸ್ಥಿತಿಯನ್ನು ವರ್ಣಿಸುತ್ತದೆ.

3 ಸೌಮ್ಯಭಾವದ ಅರ್ಥ ಹಾಗೂ ಮೌಲ್ಯವನ್ನು ನಾವು ಪೂರ್ಣವಾಗಿ ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಲಿಕ್ಕಾಗಿ, ನಾವು ನಾಲ್ಕು ಬೈಬಲ್‌ ಉದಾಹರಣೆಗಳನ್ನು ಪರಿಗಣಿಸೋಣ. (ರೋಮಾಪುರ 15:4) ನಾವು ಈ ಉದಾಹರಣೆಗಳನ್ನು ಪರಿಗಣಿಸುವಾಗ, ಈ ಗುಣವು ಏನಾಗಿದೆ ಎಂಬುದನ್ನು ಮಾತ್ರವಲ್ಲ ಅದನ್ನು ಹೇಗೆ ಬೆಳೆಸಿಕೊಳ್ಳಸಾಧ್ಯವಿದೆ ಹಾಗೂ ನಮ್ಮ ಸರ್ವ ವ್ಯವಹಾರಗಳಲ್ಲಿಯೂ ಅದನ್ನು ಹೇಗೆ ತೋರಿಸಸಾಧ್ಯವಿದೆ ಎಂಬುದನ್ನೂ ನಾವು ಕಲಿಯುತ್ತೇವೆ.

“ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದು”

4. ಯೆಹೋವನು ಸೌಮ್ಯಭಾವವನ್ನು ಅಮೂಲ್ಯವಾಗಿ ಪರಿಗಣಿಸುತ್ತಾನೆ ಎಂಬುದು ನಮಗೆ ಹೇಗೆ ಗೊತ್ತು?

4 ಸೌಮ್ಯಭಾವವು ದೇವರಾತ್ಮದಿಂದ ಉಂಟಾಗುವ ಫಲಗಳಲ್ಲೊಂದಾಗಿರುವುದರಿಂದ, ಅದು ದೇವರ ಅದ್ಭುತಕರ ವ್ಯಕ್ತಿತ್ವದೊಂದಿಗೆ ನಿಕಟವಾಗಿ ಸಂಬಂಧಿಸಿರುವುದು ತರ್ಕಬದ್ಧವಾಗಿದೆ. “ಸಾತ್ವಿಕವಾದ ಶಾಂತಮನಸ್ಸು [“ಮತ್ತು ಸೌಮ್ಯ ಮನೋಭಾವವು,” NW]” “ದೇವರ ದೃಷ್ಟಿಗೆ ಬಹು ಬೆಲೆಯುಳ್ಳ”ದ್ದಾಗಿದೆ ಎಂದು ಅಪೊಸ್ತಲ ಪೇತ್ರನು ಬರೆದನು. (1 ಪೇತ್ರ 3:4) ಹೌದು, ಸೌಮ್ಯಭಾವವು ಒಂದು ದೈವಿಕ ಗುಣವಾಗಿದೆ; ಯೆಹೋವನು ಅದನ್ನು ಅತ್ಯಮೂಲ್ಯವಾಗಿ ಪರಿಗಣಿಸುತ್ತಾನೆ. ದೇವರ ಎಲ್ಲಾ ಸೇವಕರು ಸೌಮ್ಯಭಾವವನ್ನು ಬೆಳೆಸಿಕೊಳ್ಳಲು ಈ ವಾಸ್ತವಾಂಶವೇ ಸಾಕಷ್ಟು ಬಲವಾದ ಕಾರಣವಾಗಿದೆ ಎಂಬುದಂತೂ ನಿಶ್ಚಯ. ಆದರೂ, ಇಡೀ ವಿಶ್ವದಲ್ಲೇ ಅತ್ಯಧಿಕ ಅಧಿಕಾರವನ್ನು ಹೊಂದಿರುವ ಸರ್ವಶಕ್ತನಾದ ದೇವರು ಸೌಮ್ಯಭಾವವನ್ನು ಹೇಗೆ ತೋರಿಸುತ್ತಾನೆ?

5. ಯೆಹೋವನ ಸೌಮ್ಯಭಾವದ ಕಾರಣ ನಮಗೆ ಯಾವ ಪ್ರತೀಕ್ಷೆಯಿದೆ?

5 ಪ್ರಥಮ ಮಾನವ ಜೋಡಿಯಾಗಿದ್ದ ಆದಾಮಹವ್ವರು, ಒಳ್ಳೇದರ ಕೆಟ್ಟದ್ದರ ಅರುಹನ್ನು ಹುಟ್ಟಿಸುವ ಮರದ ಹಣ್ಣನ್ನು ತಿನ್ನಬಾರದೆಂಬ ದೇವರ ಸ್ಪಷ್ಟವಾದ ಆಜ್ಞೆಗೆ ಅವಿಧೇಯರಾದಾಗ, ಉದ್ದೇಶಪೂರ್ವಕವಾಗಿಯೇ ಅವರು ಹಾಗೆ ಮಾಡಿದರು. (ಆದಿಕಾಂಡ 2:​16, 17) ಆ ಸ್ವಇಚ್ಛೆಯ ಅವಿಧೇಯತೆಯ ಕೃತ್ಯವು, ಅವರಿಗೂ ಅವರ ಭಾವೀ ಸಂತತಿಯವರಿಗೂ ಪಾಪ, ಮರಣ, ಹಾಗೂ ದೇವರಿಂದ ವಿಮುಖರಾಗುವುದರಲ್ಲಿ ಫಲಿಸಿತು. (ರೋಮಾಪುರ 5:12) ಆ ನ್ಯಾಯತೀರ್ಪನ್ನು ವಿಧಿಸಲು ಯೆಹೋವನಿಗೆ ಸಮಂಜಸವಾದ ಕಾರಣವಿತ್ತಾದರೂ, ಮಾನವಕುಲವು ಸುಧಾರಿಸಲಾಗದಷ್ಟು ಕೆಟ್ಟುಹೋಗಿದೆ ಮತ್ತು ಅದನ್ನು ವಿಮೋಚಿಸಲಸಾಧ್ಯ ಎಂದು ಭಾವಿಸಿ ಆತನು ಅವರನ್ನು ನಿರ್ದಯವಾಗಿ ತೊರೆದುಬಿಡಲಿಲ್ಲ. (ಕೀರ್ತನೆ 130:3) ಅದಕ್ಕೆ ಬದಲಾಗಿ, ಯೆಹೋವನು ತನ್ನ ದಯಾಪರತೆಯಿಂದ ಮತ್ತು ನಿರ್ಬಂಧಿಸುವವನು ಆಗಿರದೆ ಇರುವ ಸಿದ್ಧಮನಸ್ಸಿನಿಂದಾಗಿ​—ಇವು ಸೌಮ್ಯಭಾವದ ಅಭಿವ್ಯಕ್ತಿಗಳಾಗಿವೆ​—ಪಾಪಪೂರ್ಣ ಮಾನವಕುಲವು ತನ್ನನ್ನು ಸಮೀಪಿಸಲು ಹಾಗೂ ತನ್ನ ಅನುಗ್ರಹವನ್ನು ಪಡೆದುಕೊಳ್ಳಲು ಸಾಧ್ಯವಿರುವ ಮಾಧ್ಯಮವನ್ನು ಒದಗಿಸಿದನು. ಹೌದು, ತನ್ನ ಮಗನಾದ ಯೇಸು ಕ್ರಿಸ್ತನ ವಿಮೋಚನಾ ಯಜ್ಞದ ವರವನ್ನು ನೀಡುವ ಮೂಲಕ ಯೆಹೋವನು, ನಾವು ಯಾವುದೇ ಭಯಭೀತಿಯಿಲ್ಲದೆ ಆತನ ಉನ್ನತ ಸಿಂಹಾಸನದ ಸಮಕ್ಷಮಕ್ಕೆ ಬರುವುದನ್ನು ಸಾಧ್ಯಗೊಳಿಸುತ್ತಾನೆ.​—ರೋಮಾಪುರ 6:23; ಇಬ್ರಿಯ 4:​14-16; 1 ಯೋಹಾನ 4:​9, 10, 18.

6. ಕಾಯಿನನೊಂದಿಗಿನ ದೇವರ ವ್ಯವಹಾರಗಳಲ್ಲಿ ಸೌಮ್ಯಭಾವವು ಹೇಗೆ ಸುವ್ಯಕ್ತವಾಗಿತ್ತು?

6 ಯೇಸು ಭೂಮಿಗೆ ಬರುವ ಎಷ್ಟೋ ಸಮಯಕ್ಕೆ ಮುಂಚೆ, ಆದಾಮನ ಮಕ್ಕಳಾಗಿದ್ದ ಕಾಯಿನಹೇಬೆಲರು ದೇವರಿಗೆ ಕಾಣಿಕೆಗಳನ್ನು ಅರ್ಪಿಸಿದಾಗ ಯೆಹೋವನ ಸೌಮ್ಯಭಾವವು ತೋರ್ಪಡಿಸಲ್ಪಟ್ಟಿತು. ಅವರ ಹೃದಯದ ಸ್ಥಿತಿಯನ್ನು ಅರ್ಥಮಾಡಿಕೊಂಡ ಯೆಹೋವನು ಕಾಯಿನನ ಕಾಣಿಕೆಯನ್ನು ತಿರಸ್ಕರಿಸಿದನು, ಆದರೆ ಹೇಬೆಲನನ್ನೂ ಅವನ ಕಾಣಿಕೆಯನ್ನೂ ‘ಮೆಚ್ಚಿದನು.’ ನಂಬಿಗಸ್ತನಾಗಿದ್ದ ಹೇಬೆಲನ ಹಾಗೂ ಅವನ ಯಜ್ಞದ ಕುರಿತಾದ ದೇವರ ಸದ್ಭಾವನೆಯು, ಕಾಯಿನನು ಪ್ರತಿಕೂಲ ರೀತಿಯಲ್ಲಿ ವರ್ತಿಸುವಂತೆ ಮಾಡಿತು. “ಕಾಯಿನನು ಬಹು ಕೋಪಗೊಂಡನು; ಅವನ ಮುಖವು ಕಳೆಗುಂದಿತು” ಎಂದು ಬೈಬಲ್‌ ವೃತ್ತಾಂತವು ತಿಳಿಸುತ್ತದೆ. ಯೆಹೋವನು ಹೇಗೆ ಪ್ರತಿಕ್ರಿಯಿಸಿದನು? ಕಾಯಿನನ ಕೆಟ್ಟ ಮನೋಭಾವವನ್ನು ನೋಡಿ ಆತನು ಅಸಮಾಧಾನಗೊಂಡನೋ? ಇಲ್ಲ. ಅವನು ಏಕೆ ಅಷ್ಟು ಕೋಪಗೊಂಡಿದ್ದಾನೆಂದು ಆತನು ಸೌಮ್ಯಭಾವದಿಂದ ಕಾಯಿನನನ್ನು ಕೇಳಿದನು. ‘ತಲೆಯು ಎತ್ತಲ್ಪಡಲಿಕ್ಕಾಗಿ’ ಕಾಯಿನನು ಏನು ಮಾಡಸಾಧ್ಯವಿದೆ ಎಂಬುದನ್ನು ಸಹ ಯೆಹೋವನು ಅವನಿಗೆ ವಿವರಿಸಿದನು. (ಆದಿಕಾಂಡ 4:3-7) ನಿಜವಾಗಿಯೂ ಯೆಹೋವನು ಸೌಮ್ಯಭಾವದ ಸಾಕಾರರೂಪವೇ ಆಗಿದ್ದಾನೆ.​—ವಿಮೋಚನಕಾಂಡ 34:6.

ಸೌಮ್ಯಭಾವವು ಆಕರ್ಷಿಸುತ್ತದೆ ಮತ್ತು ಚೈತನ್ಯದಾಯಕವಾಗಿದೆ

7, 8. (ಎ) ನಾವು ಹೇಗೆ ಯೆಹೋವನ ಸೌಮ್ಯಭಾವವನ್ನು ತಿಳಿದುಕೊಳ್ಳಸಾಧ್ಯವಿದೆ? (ಬಿ) ಮತ್ತಾಯ 11:​27-29ರ ಮಾತುಗಳು ಯೆಹೋವನ ಮತ್ತು ಯೇಸುವಿನ ಕುರಿತು ಏನನ್ನು ಪ್ರಕಟಪಡಿಸುತ್ತವೆ?

7 ಯೆಹೋವನ ಸರಿಸಾಟಿಯಿಲ್ಲದ ಗುಣಗಳನ್ನು ಗಣ್ಯಮಾಡಲಿಕ್ಕಾಗಿರುವ ಅತ್ಯುತ್ತಮ ವಿಧಗಳಲ್ಲಿ ಒಂದು, ಯೇಸು ಕ್ರಿಸ್ತನ ಜೀವನ ಮತ್ತು ಶುಶ್ರೂಷೆಯ ಕುರಿತು ಅಧ್ಯಯನ ಮಾಡುವುದೇ ಆಗಿದೆ. (ಯೋಹಾನ 1:18; 14:​6-9) ತನ್ನ ಸಾರುವ ಕಾರ್ಯಾಚರಣೆಯ ಎರಡನೆಯ ವರ್ಷದಲ್ಲಿ ಯೇಸು ಗಲಿಲಾಯದಲ್ಲಿದ್ದಾಗ, ಖೊರಾಜಿನ್‌, ಬೆತ್ಸಾಯಿದ, ಕಪೆರ್ನೌಮ್‌ ಮತ್ತು ಸುತ್ತಮುತ್ತಲ ಕ್ಷೇತ್ರಗಳಲ್ಲಿ ಅನೇಕ ಅದ್ಭುತಕಾರ್ಯಗಳನ್ನು ನಡೆಸಿದ್ದನು. ಆದರೂ, ಅಧಿಕಾಂಶ ಜನರು ಮೊಂಡರೂ ತಾತ್ಸಾರ ಮನೋಭಾವದವರೂ ಆಗಿದ್ದರು ಮತ್ತು ಅವನಲ್ಲಿ ನಂಬಿಕೆಯಿಡಲು ನಿರಾಕರಿಸಿದರು. ಇದಕ್ಕೆ ಯೇಸು ಹೇಗೆ ಪ್ರತಿಕ್ರಿಯಿಸಿದನು? ಅವರ ಅಪನಂಬಿಗಸ್ತಿಕೆಯ ಪರಿಣಾಮಗಳ ಕುರಿತು ಅವನು ಅವರಿಗೆ ಖಚಿತವಾದ ರೀತಿಯಲ್ಲಿ ನೆನಪು ಹುಟ್ಟಿಸಿದನಾದರೂ, ಅವರ ನಡುವೆ ಇದ್ದ ಆಮ್‌ಹಾಆರಿಟ್ಸ್‌, ಅಂದರೆ ದೀನ, ಸಾಮಾನ್ಯ ಜನರ ಸಂಕಟಕರ ಆತ್ಮಿಕ ಪರಿಸ್ಥಿತಿಯನ್ನು ನೋಡಿ ಅವನು ತುಂಬ ಕನಿಕರಪಟ್ಟನು.​—ಮತ್ತಾಯ 9:​35, 36; 11:​20-24.

8 ತದನಂತರದ ಯೇಸುವಿನ ಕ್ರಿಯೆಗಳು, ಅವನು ‘ತಂದೆಯನ್ನು ಪೂರ್ಣವಾಗಿ ತಿಳಿದಿದ್ದನು’ ಮತ್ತು ಆತನನ್ನು ಅನುಕರಿಸಿದನು ಎಂಬುದನ್ನು ವ್ಯಕ್ತಪಡಿಸಿದವು. ಸಾಮಾನ್ಯ ಜನರಿಗೆ ಅವನು ಈ ಆದರಣೀಯ ಆಮಂತ್ರಣವನ್ನು ನೀಡಿದನು: “ಎಲೈ ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ; ನಾನು ನಿಮಗೆ ವಿಶ್ರಾಂತಿಕೊಡುವೆನು. ನಾನು ಸಾತ್ವಿಕನೂ [“ಸೌಮ್ಯ ಸ್ವಭಾವದವನೂ,” NW] ದೀನ ಮನಸ್ಸುಳ್ಳವನೂ ಆಗಿರುವದರಿಂದ ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಲ್ಲಿ ಕಲಿತುಕೊಳ್ಳಿರಿ; ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಸಿಕ್ಕುವದು.” ತುಳಿಯಲ್ಪಟ್ಟಿದ್ದ ಹಾಗೂ ದಬ್ಬಾಳಿಕೆಗೆ ಒಳಗಾಗಿದ್ದ ಆ ಜನರಿಗೆ ಈ ಮಾತುಗಳು ಎಷ್ಟು ಸಾಂತ್ವನ ಹಾಗೂ ಚೈತನ್ಯವನ್ನು ನೀಡಿದವು! ಯೇಸುವಿನ ಮಾತುಗಳು ಇಂದು ನಮಗೂ ಸಾಂತ್ವನದಾಯಕ ಮತ್ತು ಚೈತನ್ಯದಾಯಕವಾಗಿವೆ. ಒಂದುವೇಳೆ ನಾವು ಯಥಾರ್ಥ ಮನಸ್ಸಿನಿಂದ ಸೌಮ್ಯಭಾವವನ್ನು ಧರಿಸಿಕೊಳ್ಳುವಲ್ಲಿ, ‘ಮಗನು ತನ್ನ ತಂದೆಯನ್ನು ಯಾರಿಗೆ ಪ್ರಕಟಿಸುವುದಕ್ಕೆ ಮನಸ್ಸುಳ್ಳವನಾಗಿದ್ದಾನೋ’ ಅವರ ನಡುವೆ ನಾವೂ ಇರುವೆವು.​—ಮತ್ತಾಯ 11:​27-29.

9. ಯಾವ ಗುಣವನ್ನು ಸೌಮ್ಯ ಸ್ವಭಾವದೊಂದಿಗೆ ಜೊತೆಗೂಡಿಸಲಾಗಿದೆ, ಮತ್ತು ಈ ವಿಷಯದಲ್ಲಿ ಯೇಸು ಹೇಗೆ ಒಂದು ಅತ್ಯುತ್ತಮ ಉದಾಹರಣೆಯಾಗಿದ್ದಾನೆ?

9 ಸೌಮ್ಯಭಾವದೊಂದಿಗೆ ನಿಕಟ ಸಂಬಂಧವನ್ನು ಹೊಂದಿರುವ ಇನ್ನೊಂದು ಗುಣವು ನಮ್ರತೆ ಅಂದರೆ “ದೀನಮನಸ್ಸು” ಆಗಿದೆ. ಇನ್ನೊಂದು ಕಡೆಯಲ್ಲಿ, ಅಹಂಭಾವವು ಆತ್ಮಶ್ಲಾಘನೆಗೆ ನಡೆಸುತ್ತದೆ ಮತ್ತು ಅನೇಕವೇಳೆ ಇದು ಒಬ್ಬನು ಇತರರೊಂದಿಗೆ ನಿರ್ದಯವಾಗಿ ಹಾಗೂ ನಿಷ್ಕರುಣೆಯಿಂದ ನಡೆದುಕೊಳ್ಳುವಂತೆ ಮಾಡಬಹುದು. (ಜ್ಞಾನೋಕ್ತಿ 16:​18, 19) ತನ್ನ ಭೂಶುಶ್ರೂಷೆಯಾದ್ಯಂತ ಯೇಸು ನಮ್ರತೆಯನ್ನು ತೋರಿಸಿದನು. ತನ್ನ ಮರಣಕ್ಕೆ ಆರು ದಿನಗಳ ಮುಂಚೆ ಅವನು ಕತ್ತೆಮರಿಯ ಮೇಲೆ ಕುಳಿತುಕೊಂಡು ಯೆರೂಸಲೇಮಿಗೆ ಬಂದಾಗ ಮತ್ತು ಜನರು ಅವನನ್ನು ಯೆಹೂದ್ಯರ ಅರಸನೆಂದು ಜಯಘೋಷಮಾಡಿದಾಗಲೂ, ಯೇಸು ಲೋಕದ ಅರಸರಿಗಿಂತ ತುಂಬ ಭಿನ್ನನಾಗಿದ್ದನು. ಅವನು ಜೆಕರ್ಯನ ಈ ಮೆಸ್ಸೀಯ ಸಂಬಂಧಿತ ಪ್ರವಾದನೆಯನ್ನು ನೆರವೇರಿಸಿದನು: “ಚೀಯೋನ್‌ ನಗರಿಗೆ​—ನೋಡು, ನಿನ್ನ ಅರಸು ನಿನ್ನ ಬಳಿಗೆ ಬರುತ್ತಾನೆ; ಆತನು ಶಾಂತಗುಣವುಳ್ಳವನಾಗಿಯೂ [“ಸೌಮ್ಯ ಸ್ವಭಾವದವನಾಗಿಯೂ,” NW] ಕತ್ತೆಯನ್ನು, ಹೌದು ಪ್ರಾಯದ ಕತ್ತೆಮರಿಯನ್ನು ಹತ್ತಿದವನಾಗಿಯೂ ಬರುತ್ತಾನೆ.” (ಮತ್ತಾಯ 21:5; ಜೆಕರ್ಯ 9:9) ನಂಬಿಗಸ್ತ ಪ್ರವಾದಿಯಾಗಿದ್ದ ದಾನಿಯೇಲನು, ಯೆಹೋವನು ತನ್ನ ಮಗನಿಗೆ ಆಳುವ ಅಧಿಕಾರವನ್ನು ವಹಿಸಿಕೊಡುವ ದರ್ಶನವನ್ನು ನೋಡಿದ್ದನು. ಆದರೂ, ಅದಕ್ಕಿಂತಲೂ ಮುಂಚಿನ ಪ್ರವಾದನೆಯೊಂದರಲ್ಲಿ, ಯೇಸುವನ್ನು ಮಾನವಕುಲದವರಲ್ಲಿ “ಕನಿಷ್ಠ”ನು ಎಂದು ಅವನು ವರ್ಣಿಸಿದನು. ಆದುದರಿಂದ, ಸೌಮ್ಯಭಾವ ಹಾಗೂ ದೀನಭಾವಗಳು ಪರಸ್ಪರ ನಿಕಟವಾಗಿ ಸಂಬಂಧಿಸಿವೆ ಎಂಬುದಂತೂ ಖಂಡಿತ.​—ದಾನಿಯೇಲ 4:17; 7:​13, 14.

10. ಕ್ರೈಸ್ತ ಸೌಮ್ಯಭಾವವು ಬಲಹೀನತೆಯನ್ನು ಸೂಚಿಸುವುದಿಲ್ಲವೇಕೆ?

10 ಯೆಹೋವನಿಂದ ಹಾಗೂ ಯೇಸುವಿನಿಂದ ತೋರಿಸಲ್ಪಟ್ಟ ಹಿತಕರವಾದ ಸೌಮ್ಯಭಾವವು, ನಾವು ಅವರ ಸಮೀಪಕ್ಕೆ ಹೋಗುವಂತೆ ಸಹಾಯಮಾಡುತ್ತದೆ. (ಯಾಕೋಬ 4:8) ಸೌಮ್ಯಭಾವವು ಬಲಹೀನತೆಯನ್ನು ಸೂಚಿಸುವುದಿಲ್ಲ ಎಂಬುದು ನಿಶ್ಚಯ. ಖಂಡಿತವಾಗಿಯೂ ಇಲ್ಲ! ಸರ್ವಶಕ್ತ ದೇವರಾಗಿರುವ ಯೆಹೋವನು, ಅಪಾರ ಪ್ರಮಾಣದಲ್ಲಿ ಕ್ರಿಯಾಶಕ್ತಿಯನ್ನು ಹಾಗೂ ಬಲವನ್ನು ತೋರಿಸುತ್ತಾನೆ. ಅನೀತಿವಂತರ ವಿರುದ್ಧ ಅವನ ಕೋಪದ ಜ್ವಾಲೆಯು ಹೊತ್ತಿಉರಿಯುತ್ತದೆ. (ಯೆಶಾಯ 30:27; 40:26) ಅದೇ ರೀತಿಯಲ್ಲಿ ಯೇಸು, ಪಿಶಾಚನಾದ ಸೈತಾನನಿಂದ ಆಕ್ರಮಣಕ್ಕೆ ಒಳಗಾಗಿದ್ದಾಗಲೂ ಯಾವುದೇ ಒಪ್ಪಂದವನ್ನು ಮಾಡಿಕೊಳ್ಳದಿರುವ ವಿಷಯದಲ್ಲಿ ದೃಢನಿರ್ಧಾರವನ್ನು ತೋರಿಸಿದನು. ತನ್ನ ದಿನದ ನಿಷಿದ್ಧ ವಾಣಿಜ್ಯ ವ್ಯವಹಾರಗಳನ್ನು ಅವನು ಬಲವಾಗಿ ಖಂಡಿಸಿದನು. (ಮತ್ತಾಯ 4:​1-11; 21:​12, 13; ಯೋಹಾನ 2:​13-17) ಆದರೂ, ತನ್ನ ಶಿಷ್ಯರ ಕುಂದುಕೊರತೆಗಳೊಂದಿಗೆ ವ್ಯವಹರಿಸುವಾಗ ಅವನು ಸೌಮ್ಯ ಮನೋಭಾವವನ್ನು ಕಾಪಾಡಿಕೊಂಡನು ಮತ್ತು ಅವರ ದೌರ್ಬಲ್ಯಗಳನ್ನು ತಾಳ್ಮೆಯಿಂದ ಸಹಿಸಿಕೊಂಡನು. (ಮತ್ತಾಯ 20:​20-28) ಒಬ್ಬ ಬೈಬಲ್‌ ವಿದ್ವಾಂಸನು ಸೌಮ್ಯಭಾವವನ್ನು ಈ ರೀತಿಯಲ್ಲಿ ವರ್ಣಿಸಿದ್ದು ಸೂಕ್ತವಾಗಿತ್ತು: “ಮೃದುಸ್ವಭಾವದ ಹಿಂದೆ ಉಕ್ಕಿನ ಬಲವಿದೆ.” ನಾವು ಸಹ ಈ ಕ್ರಿಸ್ತಸದೃಶ ಗುಣವಾದ ಸೌಮ್ಯಭಾವವನ್ನು ತೋರಿಸೋಣ.

ಅವನ ದಿನದ ಜನರಲ್ಲೇ ಅತ್ಯಂತ ಸೌಮ್ಯ ಸ್ವಭಾವದವನು

11, 12. ಮೋಶೆಯು ಬೆಳೆದುಬಂದ ರೀತಿಯನ್ನು ನೋಡುವಾಗ, ಅವನ ಸೌಮ್ಯಭಾವವನ್ನು ಯಾವುದು ಎದ್ದುಕಾಣುವಂತೆ ಮಾಡಿತು?

11 ನಾವು ಪರಿಗಣಿಸಲಿರುವ ಮೂರನೆಯ ಉದಾಹರಣೆಯು ಮೋಶೆಯ ಕುರಿತಾದದ್ದಾಗಿದೆ. ಬೈಬಲು ಅವನನ್ನು “ಭೂಮಿಯ ಮೇಲಿರುವ ಎಲ್ಲಾ ಮನುಷ್ಯರಿಗಿಂತಲೂ ಬಹುಸಾತ್ವಿಕ”ನೆಂದು ವರ್ಣಿಸುತ್ತದೆ. (ಅರಣ್ಯಕಾಂಡ 12:3) ಈ ವರ್ಣನೆಯು ದೈವಿಕ ಪ್ರೇರಣೆಯ ಕೆಳಗೆ ಬರೆಯಲ್ಪಟ್ಟಿತ್ತು. ಮೋಶೆಯ ಎದ್ದುಕಾಣುತ್ತಿದ್ದ ಸೌಮ್ಯಭಾವವು, ಯೆಹೋವನ ಮಾರ್ಗದರ್ಶನವನ್ನು ಅವನು ಸುಲಭವಾಗಿ ಗ್ರಹಿಸುವಂತೆ ಮಾಡಿತು.

12 ಮೋಶೆಯು ಅಸಾಮಾನ್ಯವಾದ ಸನ್ನಿವೇಶಗಳಲ್ಲಿ ಬೆಳೆದನು. ನಂಬಿಗಸ್ತ ಇಬ್ರಿಯ ಹೆತ್ತವರ ಈ ಪುತ್ರನು, ದ್ರೋಹ ಹಾಗೂ ಕೊಲೆಯ ಒಂದು ಕಾಲದಲ್ಲಿ ಸುರಕ್ಷಿತವಾಗಿ ಬದುಕಿ ಉಳಿಯುವುದನ್ನು ಯೆಹೋವನು ಖಚಿತಪಡಿಸಿಕೊಂಡನು. ಮೋಶೆಯು ತನ್ನ ಜೀವನದ ಆರಂಭದ ವರ್ಷಗಳನ್ನು ತನ್ನ ತಾಯಿಯ ಪರಾಮರಿಕೆಯಲ್ಲಿ ಕಳೆದನು. ಅವಳು ಸತ್ಯ ದೇವರಾದ ಯೆಹೋವನ ಕುರಿತು ಅವನಿಗೆ ಜಾಗರೂಕತೆಯಿಂದ ಕಲಿಸಿದಳು. ಸಮಯಾನಂತರ, ಇದಕ್ಕಿಂತ ತೀರ ಭಿನ್ನವಾಗಿದ್ದಂಥ ಒಂದು ಪರಿಸರದಲ್ಲಿ ಜೀವಿಸಲಿಕ್ಕಾಗಿ ಮೋಶೆಯನ್ನು ಅವನ ಸ್ವದೇಶದಿಂದ ಬೇರೊಂದು ಕಡೆಗೆ ಕರೆದೊಯ್ಯಲಾಯಿತು. ಆರಂಭದ ಕ್ರೈಸ್ತ ಹುತಾತ್ಮನಾಗಿದ್ದ ಸ್ತೆಫನನು ವಿವರವಾಗಿ ತಿಳಿಸಿದ್ದು: “ಮೋಶೆಯು ಐಗುಪ್ತದೇಶದವರ ಸರ್ವವಿದ್ಯೆಗಳಲ್ಲಿಯೂ ಉಪದೇಶಹೊಂದಿ ಮಾತುಗಳಲ್ಲಿಯೂ ಕಾರ್ಯಗಳಲ್ಲಿಯೂ ಸಮರ್ಥನಾದನು.” (ಅ. ಕೃತ್ಯಗಳು 7:22) ಫರೋಹನು ನೇಮಿಸಿದ್ದ ಗುಲಾಮರ ಮುಖ್ಯಸ್ಥನು ತನ್ನ ಸಹೋದರರ ಮೇಲೆ ನಡೆಸುತ್ತಿದ್ದ ಅತ್ಯಾಚಾರವನ್ನು ಅವನು ಗಮನಿಸಿದಾಗ, ಅವನ ನಂಬಿಕೆಯು ವ್ಯಕ್ತವಾಯಿತು. ಒಬ್ಬ ಇಬ್ರಿಯನನ್ನು ಹೊಡೆಯುತ್ತಿದ್ದ ಐಗುಪ್ತ್ಯನನ್ನು ಮೋಶೆಯು ಕೊಂದುಹಾಕಿದ್ದರಿಂದ, ಅವನು ಐಗುಪ್ತ್ಯದಿಂದ ಮಿದ್ಯಾನ್‌ ದೇಶಕ್ಕೆ ಪಲಾಯನಮಾಡಬೇಕಾಯಿತು.​—ವಿಮೋಚನಕಾಂಡ 1:15, 16; 2:1-15; ಇಬ್ರಿಯ 11:24, 25.

13. ಮಿದ್ಯಾನ್‌ ದೇಶದಲ್ಲಿನ ಮೋಶೆಯ 40 ವರ್ಷಗಳ ವಾಸವು ಅವನ ಮೇಲೆ ಯಾವ ಪರಿಣಾಮವನ್ನು ಬೀರಿತು?

13 ತನ್ನ 40ರ ಪ್ರಾಯದಲ್ಲಿ ಮೋಶೆಯು ಒಂದು ಅರಣ್ಯದಲ್ಲಿ ತನ್ನ ಹೊಟ್ಟೆಪಾಡಿಗಾಗಿ ಕೆಲಸಮಾಡಬೇಕಾಯಿತು. ಮಿದ್ಯಾನ್‌ ದೇಶದಲ್ಲಿ ಅವನು ರೆಗೂವೇಲನ ಏಳು ಮಂದಿ ಹೆಣ್ಣುಮಕ್ಕಳನ್ನು ಭೇಟಿಯಾದನು ಮತ್ತು ಅವರ ತಂದೆಯ ದೊಡ್ಡ ಕುರಿಮಂದೆಗಾಗಿ ಬಾವಿಯಿಂದ ನೀರನ್ನು ಸೇದಲು ಅವರಿಗೆ ಸಹಾಯಮಾಡಿದನು. ಈ ಯುವತಿಯರು ಮನೆಗೆ ಹೋಗಿ, “ಐಗುಪ್ತ್ಯನಾದ ಒಬ್ಬ ಮನುಷ್ಯನು” ತಮಗೆ ತೊಂದರೆಯನ್ನು ಕೊಡುತ್ತಿದ್ದ ಕುರುಬರ ಕೈಯಿಂದ ತಮ್ಮನ್ನು ಕಾಪಾಡಿದನೆಂದು ರೆಗೂವೇಲನಿಗೆ ಹರ್ಷದಿಂದ ವಿವರಿಸಿದರು. ರೆಗೂವೇಲನ ಆಮಂತ್ರಣದ ಮೇರೆಗೆ ಮೋಶೆ ಆ ಕುಟುಂಬದೊಂದಿಗೆ ವಾಸಿಸತೊಡಗಿದನು. ಅವನು ಅನುಭವಿಸಿದ ಆಪತ್ತುಗಳು ಅವನಲ್ಲಿ ಕಹಿ ಮನೋಭಾವವನ್ನು ಉಂಟುಮಾಡಲಿಲ್ಲ; ಅಥವಾ ಅದು ತನ್ನ ಜೀವನ ಶೈಲಿಯನ್ನು ತನ್ನ ಹೊಸ ಪರಿಸರಗಳಿಗೆ ಹೊಂದಿಸಿಕೊಳ್ಳಲು ಕಲಿಯುವುದರಿಂದಲೂ ಅವನನ್ನು ತಡೆಗಟ್ಟಲಿಲ್ಲ. ಯೆಹೋವನ ಚಿತ್ತವನ್ನು ಮಾಡಲಿಕ್ಕಾಗಿರುವ ಅವನ ಬಯಕೆಯು ಅಚಲವಾಗಿತ್ತು. ದೀರ್ಘವಾದ 40 ವರ್ಷಗಳಾದ್ಯಂತ ಅವನು ರೆಗೂವೇಲನ ಕುರಿ ಮಂದೆಯನ್ನು ನೋಡಿಕೊಂಡನು, ಚಿಪ್ಪೋರಳನ್ನು ಮದುವೆಯಾದನು, ಮತ್ತು ಅವನಿಗೆ ಹುಟ್ಟಿದ ಗಂಡುಮಕ್ಕಳನ್ನು ಬೆಳೆಸಿದನು. ಮತ್ತು ಈ ಎಲ್ಲಾ ಸಮಯದಲ್ಲಿ ಮೋಶೆಯು, ಅವನನ್ನು ಒಬ್ಬ ವಿಶಿಷ್ಟ ವ್ಯಕ್ತಿಯನ್ನಾಗಿ ಮಾಡಿದ ಈ ಗುಣವನ್ನು ಬೆಳೆಸಿಕೊಳ್ಳುತ್ತಾ ಬಂದನು ಮತ್ತು ಅದರಲ್ಲಿ ಪ್ರಗತಿಯನ್ನು ಮಾಡಿದನು. ಹೌದು, ಆಪತ್ತುಗಳನ್ನು ತಾಳಿಕೊಳ್ಳುವ ಮೂಲಕವೇ ಮೋಶೆ ಸೌಮ್ಯಭಾವವನ್ನು ಕಲಿತನು.​—ವಿಮೋಚನಕಾಂಡ 2:​16-22; ಅ. ಕೃತ್ಯಗಳು 7:​29, 30.

14. ಮೋಶೆಯು ಇಸ್ರಾಯೇಲ್ಯರ ಮುಂದಾಳುತ್ವವನ್ನು ವಹಿಸಿದ್ದ ಸಮಯದಲ್ಲಿ, ಅವನ ಸೌಮ್ಯಭಾವವನ್ನು ಪ್ರದರ್ಶಿಸಿದಂಥ ಒಂದು ಘಟನೆಯನ್ನು ವಿವರಿಸಿರಿ.

14 ಯೆಹೋವನು ಮೋಶೆಯನ್ನು ಇಸ್ರಾಯೇಲ್‌ ಜನಾಂಗದ ಮುಖಂಡನಾಗಿ ನೇಮಿಸಿದ ಬಳಿಕವೂ, ಅವನ ಸೌಮ್ಯಭಾವದ ಗುಣವು ವ್ಯಕ್ತವಾಯಿತು. ಮೋಶೆಗೆ ಸಹಾಯಕರಾಗಿ ಸೇವೆಮಾಡಲಿಕ್ಕಿದ್ದ 70 ಮಂದಿ ಹಿರಿಯರ ಮೇಲೆ ಯೆಹೋವನು ತನ್ನ ಪವಿತ್ರಾತ್ಮವನ್ನು ಸುರಿಸಿದಾಗ ಎಲ್ದಾದ್‌ ಮತ್ತು ಮೇದಾದರು ಅಲ್ಲಿ ಉಪಸ್ಥಿತರಿರಲಿಲ್ಲವಾದರೂ, ಈಗ ಅವರು ಪಾಳೆಯದಲ್ಲಿ ಪರವಶರಾಗಿ ಪ್ರವಾದಿಸುತ್ತಿದ್ದಾರೆ ಎಂದು ಒಬ್ಬ ಯೌವನಸ್ಥನು ಮೋಶೆಗೆ ವರದಿಸಿದನು. ಆಗ ಯೆಹೋಶುವನು ಹೇಳಿದ್ದು: “ಸ್ವಾಮೀ, ಅವರಿಗೆ ಬೇಡವೆನ್ನಬೇಕು.” ಮೋಶೆಯು ಸೌಮ್ಯ ರೀತಿಯಲ್ಲಿ ಉತ್ತರಿಸಿದ್ದು: “ನನ್ನ ಗೌರವವನ್ನು ಕಾಪಾಡಬೇಕೆಂದಿದ್ದೀಯೇ? ಯೆಹೋವನ ಅನುಗ್ರಹದಿಂದ ಆತನ ಜನರೆಲ್ಲರೂ ಆತ್ಮೀಯವರಗಳನ್ನು ಹೊಂದಿದವರೂ ಪ್ರವಾದಿಸುವವರೂ ಆದರೆ ಎಷ್ಟೋ ಒಳ್ಳೇದು.” (ಅರಣ್ಯಕಾಂಡ 11:​26-29) ಆ ಒತ್ತಡಭರಿತ ಸನ್ನಿವೇಶವನ್ನು ಶಾಂತಗೊಳಿಸಲು ಸೌಮ್ಯಭಾವವು ಸಹಾಯಮಾಡಿತು.

15. ಮೋಶೆಯು ಅಪರಿಪೂರ್ಣನಾಗಿದ್ದರೂ, ಅವನ ಮಾದರಿಯು ಅನುಸರಿಸಲು ಯೋಗ್ಯವಾದ ಮಾದರಿಯಾಗಿದೆ ಏಕೆ?

15 ಒಂದು ಸಂದರ್ಭದಲ್ಲಿ ಮೋಶೆಯು ಸೌಮ್ಯಭಾವದ ಕೊರತೆಯುಳ್ಳವನಾಗಿರುವಂತೆ ಕಂಡುಬಂದನು. ಕಾದೇಶಿನ ಬಳಿಯಿದ್ದ ಮೆರೀಬಾದಲ್ಲಿ ಅವನು, ಅದ್ಭುತಗಳನ್ನು ನಡೆಸುವಾತನಾದ ಯೆಹೋವನಿಗೆ ಮಹಿಮೆಯನ್ನು ಕೊಡಲು ತಪ್ಪಿಹೋದನು. (ಅರಣ್ಯಕಾಂಡ 20:​1, 9-13) ಮೋಶೆಯು ಅಪರಿಪೂರ್ಣನಾಗಿದ್ದನಾದರೂ, ಅವನ ಅಚಲ ನಂಬಿಕೆಯು ಅವನ ಜೀವನದಾದ್ಯಂತ ಅವನಿಗೆ ಬೆಂಬಲವಾಗಿತ್ತು, ಮತ್ತು ಅವನ ಅಸಾಮಾನ್ಯ ಸೌಮ್ಯಭಾವವು ಇಂದಿಗೂ ನಮಗೆ ಇಷ್ಟವಾಗುತ್ತದೆ.​—ಇಬ್ರಿಯ 11:​23-28.

ನಿಷ್ಠುರತೆಗೆ ವಿರುದ್ಧವಾಗಿ ಸೌಮ್ಯಭಾವ

16, 17. ನಾಬಾಲ್‌ ಮತ್ತು ಅಬೀಗೈಲರ ವೃತ್ತಾಂತದಿಂದ ನಾವು ಯಾವ ಎಚ್ಚರಿಕೆಯನ್ನು ಪಡೆದುಕೊಳ್ಳಸಾಧ್ಯವಿದೆ?

16 ದೇವರ ಪ್ರವಾದಿಯಾಗಿದ್ದ ಸಮುವೇಲನ ಮರಣದ ಬಳಿಕ, ದಾವೀದನ ಸಮಯಾವಧಿಯಿಂದ ಒಂದು ಎಚ್ಚರಿಕೆಯ ಉದಾಹರಣೆಯು ದೊರಕುತ್ತದೆ. ನಾಬಾಲ್‌ ಮತ್ತು ಅವನ ಹೆಂಡತಿಯಾದ ಅಬೀಗೈಲ್‌ ಎಂಬ ವಿವಾಹಿತ ದಂಪತಿಯನ್ನು ಇದು ಒಳಗೂಡಿದೆ. ಇವರಿಬ್ಬರ ನಡುವೆ ಎಷ್ಟು ವ್ಯತ್ಯಾಸವಿತ್ತು! ಅಬೀಗೈಲಳು “ಬಹುಬುದ್ಧಿವಂತೆ”ಯಾಗಿದ್ದಾಗ, ಅವಳ ಗಂಡನು “ನಿಷ್ಠುರನೂ ದುಷ್ಕರ್ಮಿಯೂ ಆಗಿದ್ದನು.” ಈ ಮುಂಚೆ ದಾವೀದನ ಆಳುಗಳು ನಾಬಾಲನ ದೊಡ್ಡ ಕುರಿ ಮಂದೆಗಳನ್ನು ಕಳ್ಳರಿಂದ ಕಾಪಾಡುವುದರಲ್ಲಿ ಅವನಿಗೆ ತುಂಬ ಸಹಾಯಮಾಡಿದ್ದರು. ಆದರೆ ಈಗ ದಾವೀದನ ಆಳುಗಳು ನಾಬಾಲನ ಬಳಿ ಆಹಾರಪಾನಗಳನ್ನು ಕೇಳಲಿಕ್ಕಾಗಿ ಹೋದಾಗ, ಅವರ ಬೇಡಿಕೆಯನ್ನು ಪೂರೈಸಲು ಅವನು ಒರಟಾಗಿ ನಿರಾಕರಿಸಿದನು. ನ್ಯಾಯವಾಗಿಯೇ ಕುಪಿತನಾದ ದಾವೀದನು ಮತ್ತು ಅವನ ಸೇವಕರ ಒಂದು ಗುಂಪು ಕತ್ತಿಯನ್ನು ಸೊಂಟಕ್ಕೆ ಕಟ್ಟಿಕೊಂಡು ನಾಬಾಲನೊಂದಿಗೆ ಕಾದಾಡಲು ಹೊರಟಿತು.​—1 ಸಮುವೇಲ 25:​2-13.

17 ಇಲ್ಲಿ ಏನು ಸಂಭವಿಸಿತು ಎಂಬ ಸುದ್ದಿಯು ಅಬೀಗೈಲಳ ಕಿವಿಗೆ ಬಿದ್ದಾಗ, ಆ ಕೂಡಲೆ ಅವಳು ರೊಟ್ಟಿ, ದ್ರಾಕ್ಷಾರಸ, ಕುರಿಮಾಂಸ, ಹಾಗೂ ಒಣಗಿದ ದ್ರಾಕ್ಷೇಗೊಂಚಲುಗಳು ಮತ್ತು ಅಂಜೂರಹಣ್ಣಿನ ಉಂಡೆಗಳನ್ನು ತೆಗೆದುಕೊಂಡು ದಾವೀದನನ್ನು ಎದುರುಗೊಳ್ಳಲು ಹೊರಟಳು. ಅವನ ಬಳಿಗೆ ಬಂದಾಗ ಅವಳು ಬೇಡಿಕೊಂಡದ್ದು: “ಸ್ವಾಮೀ, ಅಪರಾಧವು ನನ್ನ ಮೇಲಿರಲಿ; ನಿನ್ನ ದಾಸಿಯು ಮಾತಾಡುವದಕ್ಕೆ ಅಪ್ಪಣೆಯಾಗಲಿ; ಅವಳ ಮಾತನ್ನು ಲಾಲಿಸಬೇಕು.” ಅಬೀಗೈಲಳ ಸೌಮ್ಯ ಬೇಡಿಕೆಯನ್ನು ಕೇಳಿ ದಾವೀದನ ಹೃದಯವು ಕರಗಿತು. ಅಬೀಗೈಲಳ ವಿವರಣೆಯನ್ನು ಕೇಳಿಸಿಕೊಂಡ ಬಳಿಕ ದಾವೀದನು ಉದ್ಗರಿಸಿದ್ದು: “ಈ ಹೊತ್ತು ನನ್ನನ್ನು ಎದುರುಗೊಳ್ಳುವದಕ್ಕಾಗಿ ನಿನ್ನನ್ನು ಕಳುಹಿಸಿದ ಇಸ್ರಾಯೇಲ್‌ದೇವರಾದ ಯೆಹೋವನಿಗೆ ಸ್ತೋತ್ರವಾಗಲಿ. ಸ್ವಹಸ್ತದಿಂದ ಮುಯ್ಯಿತೀರಿಸಿ ರಕ್ತಾಪರಾಧಕ್ಕೆ ಗುರಿಯಾಗದಂತೆ ನನ್ನನ್ನು ತಡೆದ ನೀನೂ ನಿನ್ನ ಬುದ್ಧಿಯೂ ಸೋತ್ರಾರ್ಹವೇ ಸರಿ.” (1 ಸಮುವೇಲ 25:​18, 24, 32, 33) ನಾಬಾಲನ ನಿಷ್ಕರುಣೆಯು ಕಟ್ಟಕಡೆಗೆ ಅವನ ಮರಣಕ್ಕೆ ನಡಿಸಿತು. ಅಬೀಗೈಲಳ ಒಳ್ಳೇ ಗುಣಗಳು, ಕಟ್ಟಕಡೆಗೆ ಅವಳು ದಾವೀದನ ಪತ್ನಿಯಾಗುವ ಆನಂದವನ್ನು ತಂದಿತು. ಇಂದು ಯೆಹೋವನ ಸೇವೆಮಾಡುವವರೆಲ್ಲರಿಗೆ ಅವಳ ಸೌಮ್ಯಭಾವವು ಒಂದು ಮಾದರಿಯಾಗಿದೆ.​—1 ಸಮುವೇಲ 25:​36-42.

ಸೌಮ್ಯಭಾವವನ್ನು ಸಂಪಾದಿಸುವುದಕ್ಕೆ ಪ್ರಯಾಸಪಡಿರಿ

18, 19. (ಎ) ನಾವು ಸೌಮ್ಯಭಾವವನ್ನು ಧರಿಸಿಕೊಳ್ಳುವಾಗ ಯಾವ ಬದಲಾವಣೆಗಳು ವ್ಯಕ್ತವಾಗುತ್ತವೆ? (ಬಿ) ಪರಿಣಾಮಕಾರಿಯಾದ ಸ್ವಪರೀಕ್ಷೆಯನ್ನು ಮಾಡಿಕೊಳ್ಳಲು ನಮಗೆ ಯಾವುದು ಸಹಾಯಮಾಡುತ್ತದೆ?

18 ಹಾಗಾದರೆ, ಸೌಮ್ಯಭಾವವು ಒಂದು ಅತ್ಯಾವಶ್ಯಕವಾದ ಗುಣವಾಗಿದೆ. ಇದು ಮೃದುವಾದ ರೀತಿಯಲ್ಲಿ ವರ್ತಿಸುವುದಕ್ಕಿಂತಲೂ ಹೆಚ್ಚಿನದ್ದನ್ನು ಒಳಗೂಡಿದೆ; ಇದು ಇತರರಿಗೆ ಚೈತನ್ಯ ನೀಡುವಂಥ ಮನೋಧರ್ಮದ ಆಕರ್ಷಕ ಗುಣವಾಗಿದೆ. ಗತ ಸಮಯಗಳಲ್ಲಿ ನಿಷ್ಠುರವಾಗಿ ಮಾತಾಡುವುದಕ್ಕೆ ಮತ್ತು ನಿರ್ದಯದಿಂದ ವರ್ತಿಸುವುದಕ್ಕೆ ನಾವು ಒಗ್ಗಿಹೋಗಿರಬಹುದು. ಆದರೆ ಬೈಬಲ್‌ ಸತ್ಯವನ್ನು ಕಲಿತ ಬಳಿಕ ನಾವು ಬದಲಾದೆವು ಮತ್ತು ಹೆಚ್ಚು ಕೋಮಲರಾದೆವು ಹಾಗೂ ಇತರರಿಂದ ಮೆಚ್ಚಲ್ಪಡುವವರಾದೆವು. ಜೊತೆ ಕ್ರೈಸ್ತರಿಗೆ ಹೀಗೆ ಉತ್ತೇಜಿಸಿದಾಗ ಪೌಲನು ಈ ಬದಲಾವಣೆಯ ಕುರಿತು ಮಾತಾಡಿದನು: “ನೀವು . . . ಕನಿಕರ ದಯೆ ದೀನಭಾವ ಸಾತ್ವಿಕತ್ವ [“ಸೌಮ್ಯಭಾವ,” NW] ದೀರ್ಘಶಾಂತಿ ಎಂಬ ಸದ್ಗುಣಗಳನ್ನು ಧರಿಸಿಕೊಳ್ಳಿರಿ.” (ಕೊಲೊಸ್ಸೆ 3:12) ಬೈಬಲು ಈ ರೂಪಾಂತರವನ್ನು ತೋಳ, ಚಿರತೆ, ಸಿಂಹ, ಕರಡಿ, ಮತ್ತು ನಾಗರಹಾವುಗಳಂಥ ಕ್ರೂರ ಕಾಡುಮೃಗಗಳು, ಕುರಿ, ಮೇಕೆಮರಿ, ಕರು ಮತ್ತು ಪಶುವಿನಂಥ ಶಾಂತಿಭರಿತ ಸಾಕುಪ್ರಾಣಿಗಳಾಗುವುದಕ್ಕೆ ಹೋಲಿಸುತ್ತದೆ. (ಯೆಶಾಯ 11:​6-9; 65:25) ಅಂಥ ವ್ಯಕ್ತಿತ್ವ ಬದಲಾವಣೆಗಳು ಎಷ್ಟು ಎದ್ದುಕಾಣುವಂತಿರುತ್ತವೆಂದರೆ, ಅವುಗಳನ್ನು ಗಮನಿಸುವವರು ಆಶ್ಚರ್ಯಚಕಿತರಾಗುತ್ತಾರೆ. ನಾವಾದರೊ, ಈ ರೂಪಾಂತರಕ್ಕೆ ದೇವರ ಪವಿತ್ರಾತ್ಮದ ಕಾರ್ಯಾಚರಣೆಯೇ ಕಾರಣವೆಂದು ಹೇಳುತ್ತೇವೆ, ಏಕೆಂದರೆ ಅದರ ಗಮನಾರ್ಹ ಫಲಗಳಲ್ಲಿ ಸೌಮ್ಯಭಾವವು ಸಹ ಒಳಗೂಡಿದೆ.

19 ಒಮ್ಮೆ ನಾವು ಅಗತ್ಯವಿರುವ ಬದಲಾವಣೆಗಳನ್ನು ಮಾಡಿ ಯೆಹೋವನಿಗೆ ನಮ್ಮನ್ನು ಸಮರ್ಪಿಸಿಕೊಂಡ ನಂತರ, ಇನ್ನೆಂದೂ ಸೌಮ್ಯ ಸ್ವಭಾವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುವ ಅಗತ್ಯವಿಲ್ಲ ಎಂದು ಇದರ ಅರ್ಥವೋ? ಖಂಡಿತವಾಗಿಯೂ ಇಲ್ಲ. ಉದಾಹರಣೆಗೆ, ಹೊಸ ಬಟ್ಟೆಗಳು ಸ್ವಚ್ಛವಾಗಿಯೂ ನೀಟಾಗಿಯೂ ಕಾಣುತ್ತಾ ಇರಬೇಕಾದರೆ ಸತತವಾಗಿ ಅವುಗಳ ಆರೈಕೆ ಮಾಡಬೇಕು. ದೇವರ ವಾಕ್ಯವನ್ನು ಲಕ್ಷ್ಯಕೊಟ್ಟು ನೋಡುವುದು ಮತ್ತು ಅದರಲ್ಲಿರುವ ಉದಾಹರಣೆಗಳ ಕುರಿತು ಮನನ ಮಾಡುವುದು, ಸ್ವತಃ ನಮ್ಮ ಕಡೆಗೆ ಹೊಸತಾದ ಹಾಗೂ ವಾಸ್ತವಿಕವಾದ ನೋಟವನ್ನು ಹರಿಸಲು ನಮಗೆ ಸಹಾಯಮಾಡುತ್ತದೆ. ಕನ್ನಡಿಯಂತಿರುವ ದೇವರ ಪ್ರೇರಿತ ವಾಕ್ಯವು ನಿಮ್ಮ ಕುರಿತು ಏನನ್ನು ತಿಳಿಯಪಡಿಸುತ್ತದೆ?​—ಯಾಕೋಬ 1:​23-25.

20. ಸೌಮ್ಯಭಾವವನ್ನು ತೋರಿಸುವುದರಲ್ಲಿ ನಾವೆಷ್ಟರ ಮಟ್ಟಿಗೆ ಸಫಲರಾಗಸಾಧ್ಯವಿದೆ?

20 ಸ್ವಭಾವತಃ ಜನರ ಮಾನಸಿಕ ಪ್ರಕೃತಿಗಳು ಒಬ್ಬರಿಂದ ಇನ್ನೊಬ್ಬರಿಗೆ ಭಿನ್ನವಾಗಿರುತ್ತವೆ. ದೇವರ ಸೇವಕರಲ್ಲಿ ಕೆಲವರು ಇತರರಿಗಿಂತಲೂ ಹೆಚ್ಚು ಸುಲಭವಾದ ರೀತಿಯಲ್ಲಿ ಸೌಮ್ಯಭಾವವನ್ನು ತೋರಿಸಲು ಶಕ್ತರಾಗಿರುತ್ತಾರೆ. ಹಾಗಿದ್ದರೂ, ಎಲ್ಲಾ ಕ್ರೈಸ್ತರು, ಸೌಮ್ಯಭಾವವನ್ನು ಒಳಗೊಂಡು ದೇವರಾತ್ಮದ ಎಲ್ಲಾ ಫಲಗಳನ್ನು ಬೆಳೆಸಿಕೊಳ್ಳುವ ಅಗತ್ಯವಿದೆ. ಪೌಲನು ಪ್ರೀತಿಯಿಂದ ತಿಮೊಥೆಯನಿಗೆ ಬುದ್ಧಿವಾದ ನೀಡಿದ್ದು: “ನೀತಿ ಭಕ್ತಿ ನಂಬಿಕೆ ಪ್ರೀತಿ ಸ್ಥಿರಚಿತ್ತ ಸಾತ್ವಿಕತ್ವ [“ಸೌಮ್ಯ ಸ್ವಭಾವ,” NW] ಇವುಗಳನ್ನು ಸಂಪಾದಿಸುವದಕ್ಕೆ ಪ್ರಯಾಸಪಡು.” (1 ತಿಮೊಥೆಯ 6:11) “ಸಂಪಾದಿಸುವದಕ್ಕೆ ಪ್ರಯಾಸಪಡು” ಎಂಬ ಪದವು ತುಂಬ ಪ್ರಯತ್ನದ ಅಗತ್ಯವಿದೆ ಎಂಬುದನ್ನು ಸೂಚಿಸುತ್ತದೆ. ಒಂದು ಬೈಬಲ್‌ ಭಾಷಾಂತರವು ಈ ಬುದ್ಧಿವಾದವನ್ನು ‘ಅದರ ಮೇಲೆ ಮನಸ್ಸಿಡು’ ಎಂದು ತರ್ಜುಮೆಮಾಡುತ್ತದೆ. (ಜೆ. ಬಿ. ಫಿಲಿಪ್ಸ್‌ರ ನ್ಯೂ ಟೆಸ್ಟಮೆಂಟ್‌ ಇನ್‌ ಮಾಡರ್ನ್‌ ಇಂಗ್ಲಿಷ್‌) ದೇವರ ವಾಕ್ಯದಲ್ಲಿರುವ ಅತ್ಯುತ್ತಮ ಉದಾಹರಣೆಗಳ ಕುರಿತು ಮನನ ಮಾಡಲು ನೀವು ಪ್ರಯತ್ನಿಸುವಲ್ಲಿ, ಅವು ನಿಮ್ಮ ದೇಹದಲ್ಲಿ ವಿಲೀನಗೊಂಡಿವೆಯೋ ಎಂಬಂತೆ, ಅಳಿಸಲಾಗದಂಥ ರೀತಿಯಲ್ಲಿ ನಿಮ್ಮ ಮನಸ್ಸಿನಲ್ಲಿ ಉಳಿಯುವವು. ಅವು ನಿಮ್ಮ ಮೇಲೆ ಪ್ರಭಾವ ಬೀರುವವು ಮತ್ತು ನಿಮ್ಮನ್ನು ಮಾರ್ಗದರ್ಶಿಸುವವು.​—ಯಾಕೋಬ 1:21.

21. (ಎ) ನಾವೇಕೆ ಸೌಮ್ಯಭಾವವನ್ನು ಸಂಪಾದಿಸಲು ಪ್ರಯಾಸಪಡಬೇಕು? (ಬಿ) ನಮ್ಮ ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

21 ಇತರರೊಂದಿಗೆ ನಾವು ವರ್ತಿಸುವ ರೀತಿಯು, ನಾವೆಷ್ಟರ ಮಟ್ಟಿಗೆ ಸೌಮ್ಯಭಾವವನ್ನು ತೋರಿಸುತ್ತಿದ್ದೇವೆಂಬುದನ್ನು ವ್ಯಕ್ತಪಡಿಸುತ್ತದೆ. “ನಿಮ್ಮಲ್ಲಿ ಜ್ಞಾನಿಯೂ ಬುದ್ಧಿವಂತನೂ ಯಾರು?” ಎಂದು ಶಿಷ್ಯನಾದ ಯಾಕೋಬನು ಕೇಳುತ್ತಾನೆ. “ಅಂಥವನು ಯೋಗ್ಯವಾಗಿ ನಡೆದುಕೊಂಡು ಜ್ಞಾನದ ಲಕ್ಷಣವಾಗಿರುವ ಶಾಂತಗುಣದಿಂದ [“ಸೌಮ್ಯಭಾವದಿಂದ,” NW] ಅದರ ಫಲವನ್ನು ತೋರಿಸಲಿ.” (ಯಾಕೋಬ 3:13) ಮನೆಯಲ್ಲಿ, ಕ್ರೈಸ್ತ ಶುಶ್ರೂಷೆಯಲ್ಲಿ ಮತ್ತು ಸಭೆಯಲ್ಲಿ ನಾವು ಈ ಕ್ರೈಸ್ತ ಗುಣವನ್ನು ಹೇಗೆ ತೋರಿಸಸಾಧ್ಯವಿದೆ? ಈ ವಿಷಯದಲ್ಲಿ ಮುಂದಿನ ಲೇಖನವು ಸಹಾಯಕರ ಮಾರ್ಗದರ್ಶನವನ್ನು ಸಾದರಪಡಿಸುತ್ತದೆ.

ಪುನರ್ವಿಮರ್ಶೆಯಲ್ಲಿ

• ಈ ಕೆಳಗಿನ ಉದಾಹರಣೆಗಳಿಂದ ನೀವು ಸೌಮ್ಯಭಾವದ ಕುರಿತು ಯಾವ ಪಾಠವನ್ನು ಕಲಿತಿರಿ?

• ಯೆಹೋವ

• ಯೇಸು

• ಮೋಶೆ

• ಅಬೀಗೈಲ್‌

• ನಾವು ಏಕೆ ಸೌಮ್ಯಭಾವವನ್ನು ಸಂಪಾದಿಸಲು ಪ್ರಯಾಸಪಡಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 16ರಲ್ಲಿರುವ ಚಿತ್ರ]

ಯೆಹೋವನು ಹೇಬೆಲನ ಕಾಣಿಕೆಯನ್ನು ಏಕೆ ಮೆಚ್ಚಿಕೊಂಡನು?

[ಪುಟ 17ರಲ್ಲಿರುವ ಚಿತ್ರ]

ಸೌಮ್ಯಭಾವ ಹಾಗೂ ನಮ್ರತೆಯ ಮಧ್ಯೆ ನಿಕಟ ಸಂಬಂಧವಿದೆಯೆಂದು ಯೇಸು ತೋರಿಸಿದನು

[ಪುಟ 18ರಲ್ಲಿರುವ ಚಿತ್ರ]

ಮೋಶೆಯು ಸೌಮ್ಯಭಾವದ ವಿಷಯದಲ್ಲಿ ಒಂದು ಅತ್ಯುತ್ತಮ ಮಾದರಿಯನ್ನಿಟ್ಟನು