ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಆಧ್ಯಾತ್ಮಿಕ ಮೌಲ್ಯಗಳು ಎತ್ತ ಸಾಗುತ್ತಿವೆ?

ಆಧ್ಯಾತ್ಮಿಕ ಮೌಲ್ಯಗಳು ಎತ್ತ ಸಾಗುತ್ತಿವೆ?

ಆಧ್ಯಾತ್ಮಿಕ ಮೌಲ್ಯಗಳು ಎತ್ತ ಸಾಗುತ್ತಿವೆ?

“ವಿವಾಹಪೂರ್ವದ ಸಲಹೆಸೂಚನೆಗಳಿಗಾಗಿ, ಹದಿನೈದು ದಂಪತಿಗಳು [ಕ್ಯಾತಲಿಕ್‌] ಸಂಧ್ಯಾ ಕಾರ್ಯಕ್ರಮವೊಂದಕ್ಕೆ ಹಾಜರಾಗುತ್ತಾರೆ. ಉಪಸ್ಥಿತರಿದ್ದ 30 ವ್ಯಕ್ತಿಗಳಲ್ಲಿ, ತಮಗೆ ನಂಬಿಕೆಯಿದೆ ಎಂದು ಹೇಳಿದವರು 3 ಮಂದಿ ಮಾತ್ರ.”—ಲಾ ಕೃವಾ, ಫ್ರೆಂಚ್‌ ಕ್ಯಾತಲಿಕ್‌ ದೈನಿಕ.

ಧಾರ್ಮಿಕ ಮೌಲ್ಯಗಳು ಗಂಡಾಂತರದಲ್ಲಿವೆ. ನ್ಯೂಸ್‌ವೀಕ್‌ ಪತ್ರಿಕೆಯ ಅಂತಾರಾಷ್ಟ್ರೀಯ ಸಂಚಿಕೆಯು, ತನ್ನ ಜುಲೈ 12, 1999ರ ಮುಖಪುಟದಲ್ಲಿ “ದೇವರು ಸತ್ತಿದ್ದಾನೋ?” ಎಂಬ ಪ್ರಶ್ನೆಯನ್ನು ಕೇಳಿತ್ತು. ಪಶ್ಚಿಮ ಯೂರೋಪಿನ ವಿಷಯದಲ್ಲಿ ದೇವರು ನಿಜವಾಗಿಯೂ ಸತ್ತಿದ್ದಾನೆಂಬಂತೆಯೇ ತೋರುತ್ತದೆ ಎಂಬುದು ಆ ಪತ್ರಿಕೆಯ ಉತ್ತರವಾಗಿತ್ತು. ಅದೇ ವರ್ಷದ ಅಕ್ಟೋಬರ್‌ನಲ್ಲಿ, ರೋಮನ್‌ ಕ್ಯಾತಲಿಕ್‌ ಆಡಳಿತ ಸಭೆಯು ರೋಮಿನಲ್ಲಿ ಸಭೆ ಸೇರಿತ್ತು. ಅದರ ಕುರಿತು ವರದಿಸುತ್ತಾ ಲ ಮಾಂಡ್‌ ಫ್ರೆಂಚ್‌ ವಾರ್ತಾಪತ್ರಿಕೆಯು ಹೇಳಿದ್ದು: “ಚರ್ಚು, ತನ್ನ ಕಡೆಗೆ ‘ಹೇವರಿಕೆಯನ್ನು’ ಬೆಳೆಸಿಕೊಂಡಿರುವ ಸಂಸ್ಕೃತಿಯೊಂದಕ್ಕೆ ತನ್ನ ಸಂದೇಶವನ್ನು ತಲಪಿಸುವುದನ್ನು ಅತಿ ಕಷ್ಟಕರವಾದದ್ದಾಗಿ ಕಾಣುತ್ತಿದೆ. . . . ಇಟಲಿಯಲ್ಲಿ, ಕ್ಯಾತಲಿಕ್‌ ಧರ್ಮದ ಬೋಧನೆ ಮತ್ತು ಪದ್ಧತಿಗಳ ವಿಷಯದಲ್ಲಿ ಕ್ಯಾತಲಿಕರೆಲ್ಲರೂ ಒಮ್ಮತದಲ್ಲಿಲ್ಲ. . . . ಜರ್ಮನಿಯಲ್ಲಿ, ಗರ್ಭಪಾತ ಯೋಜನೆಯ ಸಲಹೆ ನೀಡುವ ಕೇಂದ್ರಗಳ ಕುರಿತ ವಾಗ್ವಾದವು, ಪೋಪ್‌ ಮತ್ತು ಪ್ರಜಾಸ್ವಾತಂತ್ರ್ಯ ವ್ಯವಸ್ಥೆಯ ನಡುವಣ ಅಂತರವನ್ನು ಹೆಚ್ಚಿಸುತ್ತಿದೆ, ಅವರ ಕಟ್ಟಪ್ಪಣೆಗಳನ್ನು ಪರಿಪಾಲಿಸಲು ಅವರು ಇನ್ನು ಮುಂದೆ ತಯಾರಿಲ್ಲ. ನೈತಿಕತೆ ಮತ್ತು ಸುಖಮರಣದ ಕುರಿತ [ನೆದರ್‌ಲೆಂಡಿನ] ಸಾಹಸಿಕ ನಿಲುವುಗಳಿಗೆ ಕಾರಣವು, ಅದರ ದಿಢೀರ್‌ ಅಕ್ರೈಸ್ತೀಕರಣವೇ ಎಂದು ಕೆಲವು ಪ್ರೇಕ್ಷಕರು ಈಗಾಗಲೆ ಹೇಳುತ್ತಿದ್ದಾರೆ.”

ಇನ್ನಿತರ ಕಡೆಗಳಲ್ಲಿಯೂ ಪರಿಸ್ಥಿತಿಯು ಇದೇ ರೀತಿಯಲ್ಲಿದೆ. 1999ರಲ್ಲಿ, ಕ್ಯಾಂಟರ್‌ಬರಿಯ ಆರ್ಚ್‌ಬಿಷಪರಾದ ಜಾರ್ಜ್‌ ಕ್ಯಾರೀ, ಚರ್ಚ್‌ ಆಫ್‌ ಇಂಗ್ಲೆಂಡ್‌ “ಒಂದೇ ಸಂತತಿಯೊಳಗೆ ಅಂತ್ಯವಾಗುವ” ಸ್ಥಿತಿಯಲ್ಲಿದೆ ಎಂಬ ಎಚ್ಚರಿಕೆಯನ್ನು ನೀಡಿದರು. “ಕ್ರೈಸ್ತ ಯೂರೋಪಿನ ಅಂತ್ಯ” ಎಂಬ ಶೀರ್ಷಿಕೆಯ ಲೇಖನದಲ್ಲಿ, ಲ ಫೀಗಾರೊ ಫ್ರೆಂಚ್‌ ವಾರ್ತಾಪತ್ರಿಕೆಯು ಹೇಳಿದ್ದು: “ಇದೇ ರೀತಿಯ ನಮೂನೆಯನ್ನು ಎಲ್ಲಾ ಕಡೆಗಳಲ್ಲೂ ಕಾಣಸಾಧ್ಯವಿದೆ. . . . ನೀತಿಶಾಸ್ತ್ರ ಮತ್ತು ಬೋಧನಾ ತತ್ತ್ವಗಳ ಕುರಿತು ಜನರು ಏಕಪ್ರಕಾರವಾಗಿ ಸಂದೇಹವನ್ನು ವ್ಯಕ್ತಪಡಿಸುತ್ತಿದ್ದಾರೆ.”

ಧಾರ್ಮಿಕ ಪಾಲ್ಗೊಳ್ಳುವಿಕೆ ಕಡಿಮೆ

ಯೂರೋಪಿನಲ್ಲಿ ಚರ್ಚ್‌ ಹಾಜರಿಯಲ್ಲಿ ಕಡಿದಾದ ಇಳಿತವುಂಟಾಗಿದೆ. ಫ್ರೆಂಚ್‌ ಕ್ಯಾತಲಿಕರಲ್ಲಿ 10 ಪ್ರತಿಶತಕ್ಕಿಂತಲೂ ಕಡಿಮೆ ಜನರು ಪ್ರತಿ ಭಾನುವಾರದ ಮಾಸ್‌ಗೆ ಹಾಜರಾಗುತ್ತಾರೆ. ಪ್ಯಾರಿಸ್‌ನ ಕ್ಯಾತಲಿಕರಲ್ಲಂತೂ ಪ್ರತಿ ವಾರ ಚರ್ಚಿಗೆ ಹೋಗುವವರು ಕೇವಲ 3ರಿಂದ 4 ಪ್ರತಿಶತ ಮಾತ್ರ. ಬ್ರಿಟನ್‌, ಜರ್ಮನಿ ಮತ್ತು ಸ್ಕ್ಯಾಂಡಿನೇವಿಯದ ದೇಶಗಳಲ್ಲಿ ತದ್ರೀತಿಯ ಅಥವಾ ಅದಕ್ಕಿಂತಲೂ ಕಡಿಮೆ ಹಾಜರಿಗಳನ್ನು ಅವಲೋಕಿಸಲಾಗಿದೆ.

ಪಾದ್ರಿಗಳಾಗಿ ಸೇವೆಸಲ್ಲಿಸಲು ಬಯಸುವ ಅಭ್ಯರ್ಥಿಗಳ ಕೊರತೆಯು ಧಾರ್ಮಿಕ ಮುಖಂಡರನ್ನು ಗಂಭೀರವಾದ ಚಿಂತೆಗೀಡುಮಾಡಿದೆ. ಒಂದು ಶತಕಕ್ಕಿಂತಲೂ ಕಡಿಮೆ ವರ್ಷಗಳಲ್ಲಿ ಫ್ರಾನ್ಸಿನ ಪಾದ್ರಿಗಳ ಸಂಖ್ಯೆಯಲ್ಲಿ ತೀವ್ರ ಇಳಿತವುಂಟಾಗಿದೆ. ಹಿಂದೆ, 10,000 ನಿವಾಸಿಗಳಿಗೆ 14 ಪಾದ್ರಿಗಳಿದ್ದರು. ಈಗ 10,000 ನಿವಾಸಿಗಳಿಗೆ 1ಕ್ಕಿಂತಲೂ ಕಡಿಮೆ ಪಾದ್ರಿಗಳಿದ್ದಾರೆ. ಯೂರೋಪಿನಾದ್ಯಂತ ಪಾದ್ರಿಗಳ ಸರಾಸರಿ ವಯಸ್ಸು ಹೆಚ್ಚಾಗುತ್ತಾ ಇದೆ. ಮತ್ತು ಐರ್ಲಂಡ್‌ ಹಾಗೂ ಬೆಲ್ಜಿಯಮ್‌ ಅಂಥ ದೇಶಗಳಲ್ಲೂ ಪಾದ್ರಿಗಳಲ್ಲಿ ಇಳಿತವು ತೋರಿಬಂದಿದೆ. ಅದೇ ಸಮಯದಲ್ಲಿ ಚರ್ಚಿನ ಕ್ಯಾಟಿಕಿಸಮ್‌ ಕ್ಲಾಸಿನಲ್ಲಿ ಸೇರಿಕೊಳ್ಳುವ ಮಕ್ಕಳ ಸಂಖ್ಯೆಯೂ ಇಳಿಮುಖವಾಗುತ್ತಾ ಇರುವುದು, ಅದನ್ನು ಮುಂದುವರಿಸುತ್ತಾ ಹೋಗಲು ಕ್ಯಾತಲಿಕ್‌ ಚರ್ಚಿಗಿರುವ ಶಕ್ಯತೆಯನ್ನು ಗಂಭೀರ ಸಂದೇಹಕ್ಕೆ ಒಳಪಡಿಸಿದೆ.

ಧರ್ಮದ ಸಂಬಂಧದಲ್ಲಿಯಾದರೊ ಜನರು ತಮ್ಮ ಭರವಸೆಯನ್ನು ಕಳೆದುಕೊಂಡಿದ್ದಾರೆ ಎನ್ನಬಹುದು. ಫ್ರೆಂಚ್‌ ಜನರಲ್ಲಿ ಕೇವಲ 6 ಪ್ರತಿಶತ, “ಒಂದೇ ಒಂದು ಧರ್ಮ ಮಾತ್ರ ಸತ್ಯವಾಗಿರಬಲ್ಲದು” ಎಂದು ನಂಬುತ್ತಾರೆ. 1981ರಲ್ಲಿ 15 ಪ್ರತಿಶತ ಹಾಗೂ 1952ರಲ್ಲಿ 50 ಪ್ರತಿಶತ ಜನರು ಹಾಗೆ ನಂಬಿದ್ದರು. ಧಾರ್ಮಿಕ ವಿಷಯಗಳಲ್ಲಿ ನಿರಾಸಕ್ತಿಯು ಹಬ್ಬುತ್ತಾ ಇದೆ. ತಾವು ಯಾವ ಧರ್ಮದ ಸದಸ್ಯರೂ ಅಲ್ಲ ಎಂದನ್ನುವ ಜನರ ಸಂಖ್ಯೆಯು 1980ರಲ್ಲಿ ಇದ್ದ 26 ಪ್ರತಿಶತವು, 2000ದಲ್ಲಿ 42 ಪ್ರತಿಶತಕ್ಕೇರಿದೆ.​—ಫ್ರೆಂಚ್‌ ಮೌಲ್ಯಗಳ ವಿಕಾಸ​—1980ರಿಂದ 2000 (ಫ್ರೆಂಚ್‌).

ನೈತಿಕ ಮೌಲ್ಯಗಳಲ್ಲಿ ಕ್ಷಿಪ್ರ ಬದಲಾವಣೆ

ನೀತಿತತ್ತ್ವಗಳ ವಿಷಯವಾದ ಮೌಲ್ಯಗಳಲ್ಲೂ ವಿಷಮ ಸ್ಥಿತಿಯು ತೋರಿಬಂದಿದೆ. ಆರಂಭದಲ್ಲಿ ತಿಳಿಸಿದ ಮೇರೆಗೆ, ಚರ್ಚ್‌ಹೋಕರಲ್ಲಿ ಅನೇಕರು ತಮ್ಮ ಚರ್ಚಿನ ನೈತಿಕ ವಿಧಿನಿಯಮಗಳನ್ನು ಪರಿಪಾಲಿಸಲು ನೇರವಾಗಿ ನಿರಾಕರಿಸುತ್ತಾರೆ. ನಡವಳಿಕೆಯ ಮಟ್ಟಗಳನ್ನು ವಿಧಿಸಲು ಧಾರ್ಮಿಕ ಮುಖಂಡರಿಗೆ ಹಕ್ಕಿದೆ ಎಂಬದನ್ನು ಅವರು ಒಪ್ಪುವುದಿಲ್ಲ. ಮಾನವ ಹಕ್ಕುಗಳ ಕುರಿತ ಪೋಪರ ನಿಲುವನ್ನು ಉತ್ಸಾಹದಿಂದ ಅನುಮೋದಿಸುವ ಅದೇ ಜನತೆಯು, ತಮ್ಮ ಖಾಸಗಿ ಜೀವಿತದ ಮೇಲೆ ಅವರು ವಿಧಿಸುವ ನಿಯಮಗಳನ್ನು ಪಾಲಿಸಲು ನಿರಾಕರಿಸುತ್ತದೆ. ಉದಾಹರಣೆಗೆ, ಗರ್ಭನಿರೋಧದ ಸಂಬಂಧದಲ್ಲಿ ಪೋಪರ ನಿಲುವು, ಅನೇಕ ಕ್ಯಾತಲಿಕ್‌ ದಂಪತಿಗಳನ್ನು ಒಳಗೊಂಡು ವ್ಯಾಪಕವಾಗಿ ತಿರಸ್ಕರಿಸಲ್ಪಟ್ಟಿದೆ.

ಈ ರೀತಿಯ ಮನೋಭಾವ, ಸಮಾಜದ ಎಲ್ಲಾ ಮಟ್ಟಗಳಲ್ಲಿ ಧಾರ್ಮಿಕ ಮತ್ತು ಧಾರ್ಮಿಕರಲ್ಲದ ಜನರಿಂದ ತೋರಿಸಲ್ಪಡುತ್ತದೆ. ಪವಿತ್ರ ಶಾಸ್ತ್ರಗಳಲ್ಲಿ ಸ್ಪಷ್ಟವಾಗಿ ಖಂಡಿಸಲ್ಪಟ್ಟಿರುವ ಪದ್ಧತಿಗಳು ಸೈರಿಸಿಕೊಳ್ಳಲ್ಪಡುತ್ತವೆ. ಇಪ್ಪತ್ತು ವರ್ಷಗಳ ಹಿಂದೆ, ಸಲಿಂಗಕಾಮ, 45 ಪ್ರತಿಶತ ಫ್ರೆಂಚ್‌ ಜನತೆಯಿಂದ ತಿರಸ್ಕಾರಕ್ಕೆ ಒಳಗಾಗಿತ್ತು. ಇಂದು 80 ಪ್ರತಿಶತ ಜನರು ಅದನ್ನು ಸ್ವೀಕರಣೀಯವಾಗಿ ಎಣಿಸುತ್ತಾರೆ. ದಾಂಪತ್ಯನಿಷ್ಠೆಯ ಕುರಿತು ಅಧಿಕಾಂಶ ಜನರು ಒಪ್ಪಿಗೆ ವ್ಯಕ್ತಪಡಿಸುತ್ತಾರಾದರೂ, ದಾಂಪತ್ಯ ಧರ್ಮದ ಹೊರಗಿನ ವ್ಯವಹಾರವು ನ್ಯಾಯಸಮ್ಮತವಲ್ಲವೆಂದು ಖಂಡಿಸುವವರು ಕೇವಲ 36 ಪ್ರತಿಶತ ಮಾತ್ರ.​—ರೋಮಾಪುರ 1:​26, 27; 1 ಕೊರಿಂಥ 6:​9, 10; ಇಬ್ರಿಯ 13:4.

ಧಾರ್ಮಿಕ ಕಲಬೆರಕೆ

ಪಾಶ್ಚಾತ್ಯ ಸಮಾಜದಲ್ಲಿ, ಪ್ರತಿಯೊಬ್ಬರೂ ತಮಗೋಸ್ಕರವೆಂದೇ ರಚಿಸಬಹುದಾದ ಧರ್ಮವೊಂದು ವಿಕಾಸಗೊಳ್ಳುತ್ತಿದೆ. ಅದರಲ್ಲಿ ಎಲ್ಲರೂ ತಮತಮಗೆ ಬೇಕಾದ ನಂಬಿಕೆಗಳನ್ನು ಆರಿಸಿಕೊಳ್ಳುವ ಹಕ್ಕನ್ನು ವಹಿಸಿಕೊಳ್ಳುತ್ತಾರೆ. ನಿರ್ದಿಷ್ಟ ಮತತತ್ತ್ವಗಳು ಸ್ವೀಕರಿಸಲ್ಪಡುತ್ತವೆ, ಬೇರೆಯವುಗಳನ್ನು ತಿರಸ್ಕರಿಸಲಾಗುತ್ತದೆ. ಕೆಲವರು ತಮ್ಮನ್ನು ಕ್ರೈಸ್ತರೆಂದು ಕರೆದುಕೊಳ್ಳುತ್ತಾರಾದರೂ ಪುನರ್ಜನ್ಮದಲ್ಲಿ ನಂಬಿಕೆಯಿಡುತ್ತಾರೆ. ಇತರರಾದರೊ ಹಲವಾರು ಧಾರ್ಮಿಕ ಮತನಂಬಿಕೆಗಳನ್ನು ಇಷ್ಟಪೂರ್ವಕವಾಗಿ ಸ್ವೀಕರಿಸುತ್ತಾರೆ. (ಪ್ರಸಂಗಿ 9:​5, 10; ಯೆಹೆಜ್ಕೇಲ 18:​4, 20; ಮತ್ತಾಯ 7:21; ಎಫೆಸ 4:​5, 6) ಫ್ರೆಂಚ್‌ ಮೌಲ್ಯಗಳ ವಿಕಾಸ (ಫ್ರೆಂಚ್‌) ಪುಸ್ತಕವು ಸ್ಪಷ್ಟವಾಗಿ ತೋರಿಸಿದ್ದೇನೆಂದರೆ, ಇಂದು ಅನೇಕ ವಿಶ್ವಾಸಿಗಳು ಚರ್ಚಿನಿಂದ ಸ್ಥಾಪಿಸಲ್ಪಟ್ಟ ಮಾರ್ಗಗಳಿಂದ ಹಿಂದಕ್ಕೆ ಬರಲಾರದ ರೀತಿಯಲ್ಲಿ ಅಗಲಿದ್ದಾರೆ.

ಆದರೂ ಜನರು ಹೆಚ್ಚೆಚ್ಚಾಗಿ ಸ್ವ-ಇಷ್ಟದ ಪ್ರಕಾರ ವೈಯಕ್ತಿಕವಾದ ಧರ್ಮಗಳನ್ನು ರಚಿಸುವ ಈ ಪ್ರವೃತ್ತಿಯು ಅಪಾಯಕ್ಕೆ ಹೊರತಾಗಿಲ್ಲ. ಎನ್ಸ್‌ಟಿಟ್ಯೂ ಡ ಫ್ರಾನ್ಸ್‌ನ ಸದಸ್ಯರೂ ಇತಿಹಾಸಕಾರರೂ ಆದ ಸಾನ್‌ ಡೆಲ್ಯೂಮೊ ದೃಢವಾಗಿ ನಂಬುವುದೇನಂದರೆ, ಯಾವುದೇ ಸಂಸ್ಥಾಪಿತ ವ್ಯವಸ್ಥಾಪನೆಯ ಹೊರತು ಒಬ್ಬನಿಗೆ ತನ್ನ ಸ್ವಂತ ಧರ್ಮವನ್ನು ರಚಿಸಿಕೊಳ್ಳಲು ಸಾಧ್ಯವೇ ಇಲ್ಲ. “ಒಂದು ನಿರ್ದಿಷ್ಟ ಮತಸೂತ್ರದಲ್ಲಿ ದೃಢವಾಗಿ ಬೇರೂರಿಕೊಂಡ ಹೊರತು ಅವನ ನಂಬಿಕೆಯು ಬದುಕಿ ಉಳಿಯಲಾರದು.” ದೃಢವಾದ ಆಧ್ಯಾತ್ಮಿಕ ಮೌಲ್ಯಗಳು ಹಾಗೂ ಧಾರ್ಮಿಕ ಆಚಾರವು, ಒಬ್ಬನ ಧರ್ಮಪದ್ಧತಿಗಳಲ್ಲಿ ಸುಸಂಗತವಾಗಿ ಕೂಡಿರಬೇಕು. ಬದಲಾವಣೆಯಿಂದ ಬಾಧಿತವಾಗಿರುವ ಸಮಾಜವೊಂದರಲ್ಲಿ ಅಂಥ ಹೊಂದಾಣಿಕೆಯು ಎಲ್ಲಿ ಕಂಡುಬರಸಾಧ್ಯವಿದೆ?

ಸ್ವೀಕರಣೀಯವಾದ ನಡವಳಿಕೆಯ ಮಟ್ಟ ಮತ್ತು ನೈತಿಕತೆಯ ಮಾದರಿಯನ್ನು ಸ್ಥಾಪಿಸುವಾತನು ದೇವರಾಗಿರುತ್ತಾನಾದರೂ, ಅವನ್ನು ಪಾಲಿಸುವ ಇಲ್ಲವೆ ಪಾಲಿಸದಿರುವ ಸ್ವಾತಂತ್ರ್ಯವನ್ನು ಮನುಷ್ಯರಿಗೆ ಕೊಟ್ಟಿದ್ದಾನೆಂಬ ಜ್ಞಾಪಕವನ್ನು ಬೈಬಲು ನಮಗೆ ಕೊಡುತ್ತದೆ. ದೀರ್ಘಕಾಲದಿಂದ ಗೌರವಿಸಲ್ಪಟ್ಟಿರುವ ಈ ಪುಸ್ತಕದ ವ್ಯಾವಹಾರಿಕ ಮೌಲ್ಯವನ್ನು ಲೋಕದಾದ್ಯಂತ ಕೋಟ್ಯಾಂತರ ಜನರು ಅಂಗೀಕರಿಸಿದ್ದಾರೆ ಮತ್ತು ಅದು ‘ತಮ್ಮ ಕಾಲಿಗೆ ದೀಪವೂ ದಾರಿಗೆ ಬೆಳಕೂ ಆಗಿದೆ’ ಎಂದು ಒಪ್ಪಿದ್ದಾರೆ. (ಕೀರ್ತನೆ 119:105) ಅವರು ಆ ತೀರ್ಮಾನಕ್ಕೆ ಬಂದದ್ದು ಹೇಗೆ? ಇದನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು.