ಸಾರುವಿಕೆಯು ವಿಶೇಷವಾಗಿ ಸ್ಮರಣೀಯವಾದಂಥ ಸಮಯ
ಸಾರುವಿಕೆಯು ವಿಶೇಷವಾಗಿ ಸ್ಮರಣೀಯವಾದಂಥ ಸಮಯ
“ಪ್ರಕಾಶಮಾನವಾದ ಸೂರ್ಯನ ಬಿಸಿಲು. ಅನಂತವಾಗಿ ತೋರುವ ಪರ್ವತಸಾಲುಗಳು. ಹಲವಾರು ತಡೆಗಟ್ಟುಗಳನ್ನು ದಾಟಿಯಾದ ಮೇಲೆ ನಾವು ಕಟ್ಟಕಡೆಗೆ ನಮ್ಮ ಗುರಿಮುಟ್ಟುತ್ತೇವೆ. ಅದು ಅತ್ಯಂತ ದೂರದಲ್ಲಿರುವ ಚಿಕ್ಕ ಹಳ್ಳಿ. ಮೊದಲನೆ ಮನೆಬಾಗಲನ್ನು ನಾವು ತಟ್ಟಿದಾಗ ದೊರೆತ ಸ್ವಾಗತವು, ನಮ್ಮ ಆಯಾಸವನ್ನು ಆನಂದಕ್ಕೆ ಮಾರ್ಪಡಿಸುತ್ತದೆ. ದಿನದಂತ್ಯದೊಳಗೆ, ನಾವು ತಂದ ಸಾಹಿತ್ಯಗಳೆಲ್ಲವು ಮುಗಿದು ಹೋಗುತ್ತವೆ. ಹಲವಾರು ಬೈಬಲಧ್ಯಯನಗಳು ಆರಂಭಿಸಲ್ಪಟ್ಟಿರುತ್ತವೆ. ಕಲಿಯಲು ಅತ್ಯಾತುರಪಡುವ ಜನರು ಅಲ್ಲಿದ್ದಾರೆ. ಆದರೆ ನಾವೀಗ ಹೊರಡಬೇಕು, ಹಿಂದೆ ಬರುತ್ತೇವೆಂಬ ವಚನಕೊಟ್ಟಾದ ಮೇಲೆ, ನಾವು ಹೊರಡುತ್ತೇವೆ.”
ಇಂಥ ಅನುಭವಗಳು ಮೆಕ್ಸಿಕೊ ದೇಶದ ಒಂದು ಪಯನೀಯರ್ ಶುಶ್ರೂಷಕ ಗುಂಪಿಗೆ ಸರ್ವಸಾಮಾನ್ಯ. “ನೀವು . . . ಭೂಲೋಕದ ಕಟ್ಟಕಡೆಯ ವರೆಗೂ ನನಗೆ ಸಾಕ್ಷಿಗಳಾಗಿರಬೇಕು” ಎಂದು ಯೇಸು ತನ್ನ ಶಿಷ್ಯರಿಗೆ ಕೊಟ್ಟ ಈ ಆಜ್ಞೆಯ ನೆರವೇರಿಕೆಯಲ್ಲಿ ಉತ್ಸಾಹದಿಂದ ಭಾಗವಹಿಸಲು ಇವರು ದೃಢನಿಶ್ಚಯ ಮಾಡಿರುತ್ತಾರೆ. (ಅ. ಕೃತ್ಯಗಳು 1:8) ಮೆಕ್ಸಿಕೊ ದೇಶದಲ್ಲಿ, ಸಭೆಗೆ ನೇಮಕವಾಗಿರದ ಟೆರಿಟೊರಿಗಳನ್ನು ತಲಪಲು ಪಯನೀಯರ್ ರೂಟ್ಸ್ ಎಂದು ಕರೆಯಲ್ಪಡುವ ವಿಶೇಷ ಸಾರುವ ಚಟುವಟಿಕೆಗಳು ಏರ್ಪಡಿಸಲ್ಪಟ್ಟಿವೆ. ಯಾಕಂದರೆ ಈ ಕ್ಷೇತ್ರಗಳಲ್ಲಿ ದೇವರ ರಾಜ್ಯದ ಸುವಾರ್ತೆಯು ಕ್ರಮವಾಗಿ ಸಾರಲ್ಪಡುತ್ತಿಲ್ಲ. ಸಾಮಾನ್ಯವಾಗಿ ಇವು ಅತಿದೂರದ ಹಾಗೂ ತಲಪಲು ಕಷ್ಟಕರವಾದ ಟೆರಿಟೊರಿಗಳು. ವಿಸ್ತಾರವಾದ ಕ್ಷೇತ್ರಗಳನ್ನು ಆವರಿಸಲಿಕ್ಕಿರುವ ದೂರದ ಒಂಟಿ ಸಭೆಗಳಿಗೂ ಸಹಾಯವು ನೀಡಲ್ಪಡುತ್ತಿದೆ.
ಪಯನೀಯರ್ ರೂಟ್ಸ್‌ನಿಂದ, ದೇಶದ ಯಾವ ಕ್ಷೇತ್ರಗಳು ಆವರಿಸಲ್ಪಡಬೇಕೆಂದು ನಿರ್ಣಯಿಸುವುದಕ್ಕಾಗಿ, ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸು, ಟೆರಿಟೊರಿಯ ಅಗತ್ಯಗಳನ್ನು ಪರಿಶೀಲಿಸಿ ನೋಡುತ್ತದೆ. * ಇದಾದ ಮೇಲೆ, ಈ ಟೆರಿಟೊರಿಯನ್ನು ಆವರಿಸಲು ವಿಶೇಷ ಪಯನೀಯರರ ಗುಂಪನ್ನು ನೇಮಿಸಲಾಗುತ್ತದೆ. ಏರುಪೇರುಗಳುಳ್ಳ ಹಳ್ಳಿತಿಟ್ಟಿನ ಹಾದಿಗಳನ್ನು ದಾಟಲು ತಕ್ಕದಾದ ವಾಹನಗಳನ್ನು ಒದಗಿಸಲಾಗುತ್ತದೆ. ಈ ವಾಹನಗಳಲ್ಲಿ ಸಾಹಿತ್ಯ ಸಂಗ್ರಹ ಹಾಗೂ ಬೇಕಾದ ವಿಶ್ರಾಂತಿಗಾಗಿ ಸ್ಥಳವಿರುತ್ತದೆ.
ಸಿದ್ಧ ಪ್ರತಿವರ್ತನೆ
ಅಕ್ಟೋಬರ್ 1996ರಿಂದ ಈ ಚಟುವಟಿಕೆಯಲ್ಲಿ ವಿಶೇಷ ಪಯನೀಯರರೊಂದಿಗೆ ಭಾಗವಹಿಸಲು ಇತರ ಸೌವಾರ್ತಿಕರಿಗೂ ಕರೆಯನ್ನು ನೀಡಲಾಗಿತ್ತು. ಹೆಚ್ಚಿನ ಅಗತ್ಯವಿರುವ ಇಂಥ ಕ್ಷೇತ್ರಗಳಲ್ಲಿ ಸೇವೆಮಾಡಲು ಸಿದ್ಧರಾಗಿರುವ ರಾಜ್ಯ ಪ್ರಚಾರಕರು ಹಾಗೂ ಕ್ರಮದ ಪಯನೀಯರರು, ವಿವಿಧ ಹಂತಗಳಲ್ಲಿ ಈ ಚಟುವಟಿಕೆಯಲ್ಲಿ ಕೂಡಿಕೊಳ್ಳುತ್ತಾರೆ. ಈ ರೂಟ್‌ನಲ್ಲಿರುವ ಸಭೆಗಳಿಗೆ ನೇಮಿಸಲ್ಪಡುವ ಕೆಲವರು, ಆ ಟೆರಿಟೊರಿಯ ಉಸ್ತುವಾರಿಯನ್ನು ಹಾಗೂ ಕಂಡುಕೊಂಡ ಆಸಕ್ತಿಯನ್ನು ಬೆಳೆಸುವುದನ್ನು ನೋಡಿಕೊಳ್ಳುವರು. ಅನೇಕ ಯುವ ಪ್ರಚಾರಕರು ಮತ್ತು ಪಯನೀಯರರು ಈ ಕರೆಯನ್ನು ಸ್ವೀಕರಿಸಿದ್ದಾರೆ ಮತ್ತು ಅತ್ಯುತ್ತೇಜಕ ಅನುಭವಗಳನ್ನು ಪಡೆದಿದ್ದಾರೆ.
ಉದಾಹರಣೆಗೆ, ಆಬೀಮಾಎಲ್ ಎಂಬ ಕ್ರೈಸ್ತ ಯುವಕನು, ಇಂಥ ದೂರದ ಕ್ಷೇತ್ರಗಳಿಗೆ ಹೋಗಿ ಸಾರಲು ನಿರ್ಣಯಿಸಿದನು. ಅವನಿಗೆ ಮೋಬೈಲ್-ಫೋನ್ ಕಂಪೆನಿಯೊಂದರಲ್ಲಿ ಉತ್ತಮ ವೇತನದ ಉದ್ಯೋಗವಿತ್ತು. ಅವನು ಕೆಲಸವನ್ನು ಬಿಡಲಿದ್ದಾನೆಂದು ಕಂಪೆನಿಗೆ ತಿಳಿದಾಗ, ಅವರು ಅವನನ್ನು ಮೇಲಿನ ಹುದ್ದೆಗೆ ಬಡತಿಮಾಡಿದರು. ಇಂಥ ಉತ್ತಮ ಬಡತಿಯನ್ನು ನಿರಾಕರಿಸುವುದು ಮೂಢತನವೆಂದು ಒತ್ತಾಯಿಸುತ್ತಾ ಸಹೋದ್ಯೋಗಿಗಳು ಸಹ ಒತ್ತಡಹಾಕಿದರು. ಆದರೂ ಮೂರು ತಿಂಗಳು ಈ ಸಾರುವ ವಿಶೇಷ ಚಟುವಟಿಕೆಯನ್ನು ಬೆಂಬಲಿಸಲು ಆಬೀಮಾಎಲ್ ನಿಶ್ಚೈಸಿದನು. ಅವನು ಅದರಲ್ಲಿ ಎಷ್ಟು ಸಂತೋಷ ಪಟ್ಟನೆಂದರೆ, ರಾಜ್ಯ ಪ್ರಚಾರಕರ ಹೆಚ್ಚಿನ ಅಗತ್ಯವಿದ್ದ ದೂರದ ಒಂಟಿ ಸಭೆಯೊಂದರಲ್ಲಿ
ಅನಿರ್ದಿಷ್ಟ ಸಮಯದ ತನಕ ಉಳಿದನು. ಅವನಿಗೆ ಈಗ ಸಾಧಾರಣ ರೀತಿಯ ಕೆಲಸವಿದೆ ಮತ್ತು ತನ್ನ ಜೀವನವನ್ನು ಸರಳೀಕರಿಸಲು ಅವನು ಕಲಿತಿದ್ದಾನೆ.ಇನ್ನೊಂದು ಉದಾಹರಣೆಯಾಗಿ, ಕೂಲೀಸಾ ಎಂಬವಳಿಗೆ ಬಸ್ಸಿನಲ್ಲಿ ತನ್ನ ಸೇವಾ ನೇಮಕಕ್ಕೆ ಹೋಗಲು 22 ತಾಸು ಹಿಡಿಯಲಿತ್ತು. ಅವಳ ಪ್ರಯಾಣದ ಕೊನೆಯ ಹಂತದಲ್ಲಿ, ದಿನದ ಕಡೇ ಬಸ್ ಅವಳಿಗೆ ತಪ್ಪಿಹೋಯಿತು. ಆದರೆ ಕೆಲಸಗಾರರನ್ನು ರವಾನಿಸುವ ಒಂದು ಪಿಕ್ಕಪ್ ಟ್ರಕ್ ಅಲ್ಲಿತ್ತು. ಕೂಲೀಸಾ ಧೈರ್ಯತೆಗೆದುಕೊಂಡು, ತಾನು ಟ್ರಕ್‌ನಲ್ಲಿ ಅವರೊಂದಿಗೆ ಪ್ರಯಾಣಿಸಬಹುದೊ ಎಂದು ಕೇಳಿದಳು. ಅಷ್ಟು ಮಂದಿ ಗಂಡಸರೊಂದಿಗೆ ತಾನೊಬ್ಬಳೆ ಹೆಂಗಸಾಗಿದ್ದರಿಂದ ಅವಳಿಗೆ ಹೆದರಿಕೆಯಾದದ್ದು ಅರ್ಥಮಾಡಿಕೊಳ್ಳಬಹುದಾದ ಸಂಗತಿ. ಯುವಕನೊಬ್ಬನಿಗೆ ಸಾಕ್ಷಿ ಕೊಡಲು ತೊಡಗಿದಾಗ, ಅವನೂ ಯೆಹೋವನ ಸಾಕ್ಷಿಯೆಂದು ಅವಳಿಗೆ ತಿಳಿದುಬಂತು! ಆ ಘಟನೆಯನ್ನು ಮರುಜ್ಞಾಪಿಸಿಕೊಳ್ಳುತ್ತಾ ಅವಳನ್ನುವುದು: “ಅದಲ್ಲದೆ ಟ್ರಕ್ಕಿನ ಡ್ರೈವರ್ ಸಹ ಅಲ್ಲಿ ನಾನು ನೇಮಿಸಲ್ಪಟ್ಟಿದ್ದಂಥ ಸಭೆಯ ಒಬ್ಬ ಹಿರಿಯನಾಗಿದ್ದನು!”
ವೃದ್ಧ ಜನರು ಪಾಲಿಗರಾಗುತ್ತಾರೆ
ಆದರೆ ಈ ಕಾರ್ಯವು ಕೇವಲ ಯುವ ಜನರಿಗಾಗಿ ಅಲ್ಲ. ವೃದ್ಧ ಸಹೋದರಿ ಆಥೇಲಾ ಯಾವಾಗಲೂ ಸಾರುವ ಕೆಲಸಕ್ಕಾಗಿ ಹೆಚ್ಚು ಸಮಯವನ್ನು ಮೀಸಲಾಗಿಡಲು ಬಯಸಿದ್ದರು. ಈ ವಿಶೇಷ ಸಾರುವ ಕಾರ್ಯದಲ್ಲಿ ಭಾಗವಹಿಸಲು ಅವರು ಆಮಂತ್ರಿಸಲ್ಪಟ್ಟಾಗ ಅದನ್ನು ಮಾಡುವ ಅವಕಾಶ ಅವರಿಗೆ ಲಭಿಸಿತು. ಅವರು ಹೇಳುವುದು: “ನಾನು ನನ್ನ ನೇಮಕದಲ್ಲಿ ಎಷ್ಟು ಆನಂದಿಸಿದೆನೆಂದರೆ, ನಾನು ಅದರಲ್ಲಿ ಅನಿರ್ದಿಷ್ಟ ಸಮಯದ ತನಕ ಉಳಿಯಲು ಅನುಮತಿಸುವಂತೆ ಸಭೆಯ ಹಿರಿಯರನ್ನು ಕೇಳಿಕೊಂಡೆ. ನಾನು ಸಂತೋಷಿಸುತ್ತೇನೆ ಯಾಕಂದರೆ ನಾನು ವೃದ್ಧೆಯಾಗಿದ್ದರೂ ಇನ್ನೂ ಯೆಹೋವನಿಗೆ ಉಪಯುಕ್ತಳಾಗಿರಬಲ್ಲೆ.”
ತದ್ರೀತಿಯಲ್ಲಿ 60 ವಯಸ್ಸಿನ ಮಾರ್‌ಟಾ, ಯೆಹೋವನ ಮತ್ತು ತಮ್ಮ ನೆರೆಯವನ ಮೇಲಣ ಪ್ರೀತಿಯಿಂದ ಪ್ರೇರಿತರಾಗಿ ಈ ಚಟುವಟಿಕೆಯಲ್ಲಿ ಪಾಲುಗಾರರಾದರು. ಅದು ದೂರದ ಮರಳು ಪ್ರದೇಶವಾದುದರಿಂದ ಜನರೆಲ್ಲರನ್ನು ಭೇಟಿಯಾಗಲು ಅವರ ಗುಂಪಿಗೆ ತಡೆಗಟ್ಟಾದುದನ್ನು ನೋಡಿ, ಪಯನೀಯರರ ಉಪಯೋಗಕ್ಕಾಗಿ ಅವರು ಒಂದು ಕಾರನ್ನು ಖರೀದಿಸಿದರು. ಈ ಸಹೋದರಿಯ ಕಾಣಿಕೆಯು, ಅಧಿಕ ಕ್ಷೇತ್ರವನ್ನು ಆವರಿಸಲು ಮತ್ತು ಹೆಚ್ಚು ಜನರಿಗೆ ಬೈಬಲ್ ಸತ್ಯವನ್ನು ಹಂಚಲು ಸಾಧ್ಯಮಾಡಿತು.
ಹೃದಯಸ್ಪರ್ಶಿ ಪ್ರತಿಕ್ರಿಯೆ
ಈ ವಿಶೇಷ ಸಾರುವ ಚಟುವಟಿಕೆಯಲ್ಲಿ ಭಾಗವಹಿಸುವವರ ಧ್ಯೇಯವು, “ಶಿಷ್ಯರನ್ನಾಗಿ” ಮಾಡುವುದೇ ಆಗಿರುತ್ತದೆ. ಇದರಿಂದ ದೊರೆತ ಪ್ರತಿಫಲವಾದರೊ ಅತ್ಯುತ್ತಮ. ದೂರದ ಕ್ಷೇತ್ರಗಳಲ್ಲಿದ್ದ ಜನರಿಗೆ ಬೈಬಲಿನಿಂದ ಜೀವದಾಯಕ ಸತ್ಯವು ದೊರೆಯಿತು. (ಮತ್ತಾಯ 28:19, 20) ಅನೇಕ ಬೈಬಲ್ ಅಧ್ಯಯನಗಳು ಆರಂಭಗೊಂಡವು. ಆ ಕ್ಷೇತ್ರದ ಪ್ರಚಾರಕರಿಂದ ಅಥವಾ ಆ ಕ್ಷೇತ್ರದಲ್ಲಿ ಉಳುಕೊಳ್ಳ ಶಕ್ತರಾದ ಸೌವಾರ್ತಿಕರಿಂದ ಈ ಅಧ್ಯಯನಗಳು ಮುಂದುವರಿಸಲ್ಪಡುತ್ತಿವೆ. ಕೆಲವು ಸಂದರ್ಭಗಳಲ್ಲಿ, ಪ್ರಚಾರಕರ ಗುಂಪುಗಳು ಸಂಸ್ಥಾಪಿಸಲ್ಪಟ್ಟವು, ಕೆಲವು ಕಡೆಗಳಲ್ಲಿ ಇತರ ಚಿಕ್ಕ ಸಭೆಗಳು ಸಹ ರಚಿಸಲ್ಪಟ್ಟವು.
ಮಾಗ್ಡಾಲೇನೊ ಮತ್ತು ಅವನ ಸಂಗಡಿಗರು ಸಾರ್ವಜನಿಕ ವಾಹನ ಸೌಕರ್ಯವನ್ನುಪಯೋಗಿಸಿ ತಮಗೆ ನೇಮಿತವಾದ ದೂರದ ಪ್ರತ್ಯೇಕ ಟೆರಿಟೊರಿಯನ್ನು ತಲಪಿದರು. ದಾರಿಯಲ್ಲಿ
ಅವರು ಡ್ರೈವರನಿಗೆ ಸಾಕ್ಷಿಕೊಡುವ ಸಂದರ್ಭವನ್ನು ಸದುಪಯೋಗಿಸಿದರು. “ಆ ಡ್ರೈವರ್ ಹೇಳಿದ್ದೇನೆಂದರೆ, ಒಂದು ವಾರದ ಹಿಂದೆ ಅವನ ಮನೆಗೆ ಕೆಲವು ಸಾಕ್ಷಿಗಳು ಬಂದಿದ್ದರು. ಆಗ ಅವನು ಮನೆಯಲ್ಲಿರಲಿಲ್ಲ. ಬಂದಾಗ ಮನೆಯವರು ತಾವು ಕೇಳಿಸಿಕೊಂಡ ಸಂಗತಿಯನ್ನು ಅವನಿಗೆ ತಿಳಿಸಿದರಂತೆ. ಮತ್ತು ನಾವು ಆ ನೆರೆಹೊರೆಯವರಲ್ಲವೆಂದೂ, ಒಂದು ವಿಶೇಷ ಸಾರುವ ಕಾರ್ಯಕ್ಕಾಗಿ ದೇಶದ ವಿವಿಧ ರಾಜ್ಯಗಳಿಂದ ನಮ್ಮ ಸ್ವಂತ ಖರ್ಚಿನಲ್ಲಿ ಬಂದವರೆಂದೂ ನಾವು ಅವನಿಗೆ ತಿಳಿಸಿದೆವು. ಡ್ರೈವರನು ಪ್ರಭಾವಿತನಾಗಿ ಅದೇ ವಾರ ತನ್ನ ಕುಟುಂಬದೊಂದಿಗೆ ಬೈಬಲಧ್ಯಯನಕ್ಕಾಗಿ ಒಪ್ಪಿಕೊಂಡನು. ಬಸ್ ಪ್ರಯಾಣದ ಖರ್ಚನ್ನು ತೆಗೆದುಕೊಳ್ಳದೆ ನಮ್ಮ ಕಾರ್ಯಕ್ಕೆ ತನ್ನ ಬೆಂಬಲವನ್ನೂ ಕೊಟ್ಟನು.”ಮಾಗ್ಡಾಲೇನೊ ಚೀಯೊಪಾಸ್ ಬೆಟ್ಟ ನಿವಾಸಿಗಳ ಪ್ರತಿವರ್ತನೆಯಿಂದಲೂ ಪ್ರಭಾವಿತನಾದನು. “ಪ್ರೆಸ್‌ಬಿಟೇರಿಯನ್ ಚರ್ಚಿಗೆ ಹಾಜರಾಗುತ್ತಿದ್ದ 26 ಯುವ ಜನರ ಗುಂಪಿಗೆ ನಾನು ಮತ್ತು ನನ್ನ ಪತ್ನಿ ರಾಜ್ಯದ ಸುವಾರ್ತೆಯನ್ನು ಸಾರಿದೆವು. ಸುಮಾರು 30 ನಿಮಿಷಗಳ ತನಕ ಅವರು ನಮಗೆ ಗಮನಕೊಟ್ಟು ಆಲಿಸಿದರು. ಅವರು ತಮ್ಮ ಬೈಬಲುಗಳನ್ನು ಹೊರತೆಗೆದಾಗ, ನಾವು ಅವರಿಗೆ ಯೆಹೋವನ ಉದ್ದೇಶಗಳ ಕುರಿತ ಪೂರ್ಣ ಸಾಕ್ಷಿಯನ್ನು ಕೊಡಶಕ್ತರಾದೆವು. ಹೆಚ್ಚಿನ ಜನರಲ್ಲಿ ಟ್ಸೆಲ್‌ಟಾಲ್ ಭಾಷೆಯಲ್ಲಿ ಅವರ ಸ್ವಂತ ಬೈಬಲಿದೆ.” ಅನೇಕ ಪ್ರಗತಿಪರ ಬೈಬಲ್ ಅಧ್ಯಯನಗಳು ಆರಂಭಿಸಲ್ಪಟ್ಟವು.
ವಿರೋಧವು ಕರಗಿತು
ಚೀಯೊಪಾಸ್‌ನಲ್ಲಿ ಒಂದು ನಿರ್ದಿಷ್ಟ ಸಮಾಜದ ಜನರಿಗೆ ಎರಡು ವರ್ಷಗಳಿಗಿಂತಲೂ ಹೆಚ್ಚು ಸಮಯದಿಂದ ಬೈಬಲಿನ ಸಂದೇಶವು ಸಾರಲ್ಪಟ್ಟಿರಲಿಲ್ಲ; ಯಾಕಂದರೆ ಕೆಲವು ಜನರು ಅದನ್ನು ವಿರೋಧಿಸುತ್ತಿದ್ದರು. ಆ ಹಳ್ಳಿಯಲ್ಲಿ ಸಾರುವುದಕ್ಕೆ ಕೆಲವು ಸಾಕ್ಷಿಗಳು ಹೆದರಿದ್ದನ್ನು ಪೂರ್ಣ ಸಮಯದ ಸೌವಾರ್ತಿಕಳಾದ ಟೇರೇಸಾ ಕಂಡುಕೊಂಡಳು. “ಆದರೆ ಜನರು ಕಿವಿಗೊಡಲು ಸಿದ್ಧರಾಗಿದ್ದದ್ದು ಎಲ್ಲರಿಗೆ ಆಶ್ಚರ್ಯವೆನಿಸಿತು. ಸಾರುವಿಕೆಯನ್ನು ಮುಗಿಸಿದಾಗ ಜೋರು ಮಳೆ ಶುರುವಾಯಿತು. ಮರೆಗಾಗಿ ಹುಡುಕುತ್ತಾ, ನಾವು ಸತ್ಕರಿಸುವ ಸ್ವಭಾವದ ಸೇಬಾಸ್ಟಿಯಾನ್‌ನ ಮನೆಗೆ ಬಂದೆವು. ಅಲ್ಲಿ ನಾವು ಮಳೆಯಿಂದ ಮರೆಯನ್ನು ಪಡೆದೆವು. ಅವನನ್ನು ಈ ಮೊದಲು ಯಾರಾದರೂ ಭೇಟಿಮಾಡಿದ್ದರೊ ಎಂದು ಕೇಳಿದಾಗ ಅವನು ಇಲ್ಲವೆಂದನು. ನಾನು ಅವನಿಗೆ ಸಾಕ್ಷಿಕೊಟ್ಟು, ನಿತ್ಯಜೀವಕ್ಕೆ ನಡೆಸುವ ಜ್ಞಾನ * ಪುಸ್ತಕದಲ್ಲಿ ಅಧ್ಯಯನ ಆರಂಭಿಸಿದೆನು. ನಾವು ಮುಗಿಸಿದಾಗ, ಹಿಂದೆ ಬಂದು ತನ್ನೊಂದಿಗೆ ಅಧ್ಯಯನ ಮುಂದುವರಿಸುವಂತೆ ಸೇಬಾಸ್ಟಿಯಾನ್ ಬೇಡಿಕೊಂಡನು.”
ಚೀಯೊಪಾಸ್‌ಗೆ ಭೇಟಿಯಿತ್ತ ಇನ್ನೊಂದು ಪಯನೀಯರ್ ಗುಂಪು ವರದಿಮಾಡುವುದು: “ಯೆಹೋವನ ಸಹಾಯದಿಂದ ನಮಗೆ ಒಳ್ಳೇ ಫಲಿತಾಂಶಗಳು ದೊರೆತವು. ಮೊದಲನೆಯ ವಾರದಲ್ಲಿ ನಾವು 27 ಅಧ್ಯಯನಗಳನ್ನು ಆರಂಭಿಸಿದೆವು, ಎರಡನೆಯ ವಾರದಲ್ಲಿ ಬೈಬಲ್—ನಿಮ್ಮ ಜೀವಿತದಲ್ಲಿ ಅದರ ಪ್ರಭಾವ ಎಂಬ ನಮ್ಮ ವಿಡಿಯೋ ನೋಡಲು ಜನರನ್ನು ಆಮಂತ್ರಿಸಿದೆವು. ಅರುವತ್ತು ಜನರು ಹಾಜರಾದರು. ವಿಡಿಯೋ ಎಲ್ಲರಿಗೆ ಬಹಳ ಇಷ್ಟವಾಯಿತು. ಕೊನೆಯಲ್ಲಿ, ಬೈಬಲ್ ಅಧ್ಯಯನ ಗುಂಪನ್ನು ಆರಂಭಿಸಲು ನಾವು ಪ್ರಸ್ತಾಪಿಸಿದೆವು. ಈ ಹಳ್ಳಿಯಲ್ಲಿ ಎರಡು ಗುಂಪು ಅಧ್ಯಯನಗಳನ್ನು ಆರಂಭಿಸಲು ಶಕ್ತವಾದದ್ದು ಆಶ್ಚರ್ಯ.
“ನೇಮಿಸಲ್ಪಟ್ಟ ಟೆರಿಟೊರಿಗಳಲ್ಲಿ ಸೇವೆ ನಡಿಸಿದ ಬಳಿಕ, ಆಸಕ್ತ ಜನರನ್ನು ಬಲಪಡಿಸಲು ಮತ್ತು ಗುಂಪು ಅಧ್ಯಯನಗಳ ಪ್ರಗತಿಯನ್ನು ನೋಡಲು ಆ ಹಳ್ಳಿಗೆ ಹಿಂದಿರುಗಿ ಬಂದೆವು. ಬಹಿರಂಗ
ಕೂಟಕ್ಕೆ ಮತ್ತು ಕಾವಲಿನಬುರುಜು ಅಧ್ಯಯನಕ್ಕೆ ಅವರನ್ನು ಆಮಂತ್ರಿಸಿದೆವು. ಆದರೆ ಕೂಟಗಳನ್ನು ನಡಿಸಲು ಸಾಕಷ್ಟು ದೊಡ್ಡದಾದ ಸ್ಥಳ ಅಲ್ಲಿರಲಿಲ್ಲ. ಗುಂಪು ಅಧ್ಯಯನಕ್ಕೆ ಸ್ಥಳಕೊಟ್ಟ ವ್ಯಕ್ತಿಯು ತನ್ನ ಮನೆಯ ಹಿತ್ತಲಿಗೆ ಕೈತೋರಿಸುತ್ತಾ, ‘ಕೂಟಗಳನ್ನು ಹಿತ್ತಲಲ್ಲಿ ನಡಿಸಬಹುದಲ್ಲಾ’ ಎಂದನು.”ಆ ವಾರಾಂತ್ಯದಲ್ಲಿ ಸಂದರ್ಶಿಸಿದ ಪಯನೀಯರರು ಹಾಗೂ ಆಸಕ್ತ ಜನರು, ಹಿತ್ತಲನ್ನು ಕೂಟಕ್ಕಾಗಿ ತಯಾರಿಸಲು ಉತ್ಸಾಹದಿಂದ ಕೆಲಸಮಾಡಿದರು. ಮೊದಲನೆಯ ಕೂಟಕ್ಕೆ 103 ಮಂದಿ ಹಾಜರಾದರು. ಈಗ ಆ ಹಳ್ಳಿಯಲ್ಲಿ 40 ಬೈಬಲ್ ಅಧ್ಯಯನಗಳು ನಡಿಸಲ್ಪಡುತ್ತಿವೆ.
“ಅದೊಂದು ಆಶ್ಚರ್ಯಕರ ಅನುಭವ”
ಸಾರುವ ಕಾರ್ಯದಲ್ಲಿ ಅತ್ಯುತ್ತಮ ಫಲಿತಾಂಶ ದೊರೆತದ್ದು ಮಾತ್ರವಲ್ಲದೆ, ಈ ಸೌವಾರ್ತಿಕ ಕಾರ್ಯದಲ್ಲಿ ಭಾಗವಹಿಸಿದವರು ಸ್ವತಃ ಮಹಾ ಪ್ರಯೋಜನವನ್ನು ಪಡೆದರು. ಈ ಚಟುವಟಿಕೆಗಳೊಂದರಲ್ಲಿ ಪಾಲಿಗಳಾದ ಮಾರಿಯಾ ಎಂಬ ಯುವ ಪಯನೀಯರಳು ತನ್ನ ಅನಿಸಿಕೆಗಳನ್ನು ಹೀಗೆ ತಿಳಿಸುತ್ತಾಳೆ: “ಎರಡು ಕಾರಣಗಳಿಂದಾಗಿ ಅದೊಂದು ಆಶ್ಚರ್ಯಕರ ಅನುಭವವಾಗಿದೆ. ಪಯನೀಯರ್ ಸೇವೆಯಲ್ಲಿ ನನ್ನ ಆನಂದವು ಅಧಿಕಗೊಂಡಿದೆ, ಮತ್ತು ಯೆಹೋವನೊಂದಿಗೆ ನನ್ನ ಸಂಬಂಧವು ನಿಕಟವಾಗಿರುತ್ತದೆ. ಒಮ್ಮೆ ನಾವು ಗುಡ್ಡವೊಂದನ್ನು ಹತ್ತುವಾಗ, ನಮಗೆ ವಿಪರೀತ ದಣಿವಾಯಿತು. ಸಹಾಯಕ್ಕಾಗಿ ಯೆಹೋವನನ್ನು ಬೇಡಿಕೊಂಡ ಅನಂತರ, “ಯೆಹೋವನನ್ನು ನಿರೀಕ್ಷಿಸುವವರೋ ಹೊಸ ಬಲವನ್ನು ಹೊಂದುವರು” ಎಂಬ ಯೆಶಾಯ 40:29-31ರ ಮಾತುಗಳ ಅನುಭವವು ನಮಗಾಯಿತು. ಹೀಗೆ ನಾವು ನಮ್ಮ ಸ್ಥಳವನ್ನು ಮುಟ್ಟಿದಾಗ, ಜನರೊಂದಿಗೆ ಅನೇಕ ಅಧ್ಯಯನಗಳನ್ನು ನಡಿಸಶಕ್ತರಾದೆವು ಮತ್ತು ಅವರು ನಮ್ಮನ್ನು ಆದರಾತಿಥ್ಯದಿಂದ ಬರಮಾಡಿದರು.”
ಇನ್ನೊಬ್ಬ ಯುವ ಪಯನೀಯರಳಾದ 17 ವರ್ಷ ಪ್ರಾಯದ ಕ್ಲೌಡ್ಯಾ ನಮಗನ್ನುವುದು: “ನಾನು ತುಂಬ ಪ್ರಯೋಜನಗಳನ್ನು ಪಡೆದುಕೊಂಡಿದ್ದೇನೆ. ಶುಶ್ರೂಷೆಯಲ್ಲಿ ಹೆಚ್ಚಿನ ಕೌಶಲವನ್ನು ಪಡೆದಿರುವ ವಿಷಯವು ನನಗೆ ಆನಂದವನ್ನು ತಂದಿದೆ, ಇದು ನನ್ನನ್ನು ಆತ್ಮಿಕ ಗುರಿಗಳನ್ನು ಇಡುವುದಕ್ಕೆ ನಡೆಸಿದೆ. ಮನೆಯಲ್ಲಿ ನನ್ನ ತಾಯಿ ನನಗಾಗಿ ಎಲ್ಲವನ್ನೂ ಮಾಡುತ್ತಿದ್ದರು. ಈಗಲಾದರೊ ನಾನು ಅಧಿಕ ಜವಾಬ್ದಾರಿಯನ್ನು ಕಲಿತಿರುವೆ. ಉದಾಹರಣೆಗೆ, ತಿನ್ನುವ ವಿಷಯದಲ್ಲಿ ನಾನು ಅತಿಯಾದ ಜೋಕೆ ವಹಿಸುತ್ತಿದ್ದೆ. ಆದರೆ ಈಗ ವಿವಿಧ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಾಗ, ತಿನ್ನುವ ವಿಷಯದಲ್ಲಿ ನಾನು ಗೊಣಗುವುದಿಲ್ಲ. ಈ ರೀತಿಯ ಸೇವೆಯು ಅತ್ಯುತ್ತಮ ಮಿತ್ರತ್ವಗಳನ್ನು ಬೆಳೆಸಿಕೊಳ್ಳಲು ಸಹಾಯಮಾಡಿರುತ್ತದೆ. ನಮಗಿರುವ ಎಲ್ಲವನ್ನೂ ನಾವು ಹಂಚಿಕೊಂಡು ಒಬ್ಬರಿಗೊಬ್ಬರು ನೆರವಾಗುತ್ತೇವೆ.”
ಒಂದು ಹರ್ಷಭರಿತ ಕೊಯ್ಲು
ಈ ವಿಶೇಷ ಪ್ರಯತ್ನದ ಫಲಿತಾಂಶಗಳೇನು? ಇಸವಿ 2002ರ ಆರಂಭದೊಳಗೆ, ಈ ಪಯನೀಯರ್ ರೂಟ್‌ಗಳಲ್ಲಿ 28,300 ಪಯನೀಯರರು ಭಾಗವಹಿಸಿದರು. 1,40,000 ಬೈಬಲಧ್ಯಯನಗಳನ್ನು ಅವರು ನಡಿಸಿದ್ದರು ಮತ್ತು ಸಾರುವ ಕಾರ್ಯದಲ್ಲಿ 20 ಲಕ್ಷಕ್ಕಿಂತಲೂ ಹೆಚ್ಚು ತಾಸುಗಳನ್ನು ವ್ಯಯಿಸಿದ್ದಾರೆ. ಬೈಬಲ್ ಸತ್ಯವನ್ನು ಜನರಿಗೆ ಕಲಿಸಲು ಸಹಾಯಕ್ಕಾಗಿ 1,21,000 ಪುಸ್ತಕಗಳನ್ನೂ 7,30,000 ಪತ್ರಿಕೆಗಳನ್ನೂ ಅವರು ನೀಡಿದ್ದರು. ಕೆಲವು ಪಯನೀಯರರು 20 ಅಥವಾ ಹೆಚ್ಚು ಬೈಬಲಧ್ಯಯನಗಳನ್ನು ನಡಿಸುವುದು ಅದೇನೂ ಅಸಾಮಾನ್ಯವಾಗಿರಲಿಲ್ಲ.
ಬೈಬಲ್ ಸಂದೇಶದೊಂದಿಗೆ ತಮ್ಮನ್ನು ತಲಪಲು ಮಾಡಿದ ಈ ದಯೆಯುಳ್ಳ ಪರಿಶ್ರಮಕ್ಕಾಗಿ, ಆ ಸಂದೇಶವನ್ನು ಸ್ವೀಕರಿಸಿದವರು ತುಂಬಾ ಆಭಾರಿಗಳು. ಅವರು ಬಡವರಾಗಿದ್ದಾಗ್ಯೂ ಕಾಣಿಕೆಗಳನ್ನು ಸ್ವೀಕರಿಸುವಂತೆ ಅವರು ಪ್ರಚಾರಕರನ್ನು ಒತ್ತಾಯಿಸುತ್ತಿದ್ದರು. ಬಡವಳಾಗಿರುವ ಒಬ್ಬ 70 ವರ್ಷದ ಸ್ತ್ರೀ, ತನ್ನನ್ನು ಭೇಟಿಮಾಡುವ ಪಯನೀಯರರಿಗೆ ಯಾವಾಗಲೂ ಏನನ್ನಾದರೂ ನೀಡುತ್ತಿದ್ದರು. ಅದನ್ನು ತೆಗೆದುಕೊಳ್ಳಲು ಅವರು ನಿರಾಕರಿಸಿದರೆ, ಆ ಸ್ತ್ರೀ ಅಳುತ್ತಿದ್ದರು. ಒಂದು ಬಡ ಕುಟುಂಬವು, ತಮ್ಮ ಕೋಳಿಯು ಪಯನೀಯರರಿಗಾಗಿಯೇ ಕೆಲವು ಮೊಟ್ಟೆಗಳನ್ನಿಟ್ಟಿದೆಯೆಂದು ಹೇಳುತ್ತಾ ಅವನ್ನು ತೆಗೆದುಕೊಳ್ಳಲು ಅವರನ್ನು ಒತ್ತಾಯಿಸುತ್ತಿತ್ತು.
ಆ ಪ್ರಾಮಾಣಿಕ ಜನರು ಆತ್ಮಿಕ ವಿಷಯಕ್ಕಾಗಿ ನಿಜ ಗಣ್ಯತೆಯನ್ನು ತೋರಿಸುವುದು ಹೆಚ್ಚು ಮಹತ್ವದ್ದಾಗಿದೆ. ಉದಾಹರಣೆಗೆ, ಒಬ್ಬ ಯುವ ಸ್ತ್ರೀಯು ಒಂಟಿಯಾಗಿ ಮೂರೂವರೆ ಗಂಟೆ ಕಾಲ್ನಡಿಗೆಯಲ್ಲಿ ಹೋಗಿ, ಕ್ರೈಸ್ತ ಕೂಟಗಳಲ್ಲಿ ಒಂದನ್ನೂ ತಪ್ಪದೆ ಹಾಜರಾಗುತ್ತಿದ್ದಾಳೆ. ವೃದ್ಧ ಆಸಕ್ತ ಸ್ತ್ರೀಯೊಬ್ಬರಿಗೆ ಮೊಣಕಾಲುಗಳ ಸಮಸ್ಯೆಗಳಿದ್ದರೂ, ಸರ್ಕಿಟ್ ಮೇಲ್ವಿಚಾರಕರ ಭೇಟಿಯ ಸಮಯದಲ್ಲಿ ಬೈಬಲಿನ ಉಪದೇಶವನ್ನು ಪಡೆಯಲು ಎರಡು ತಾಸು ಪ್ರಯಾಣಮಾಡಿದರು. ಅನಕ್ಷರಸ್ಥರಾಗಿದ್ದ ಕೆಲವರು ಬೈಬಲಿನ ಶಿಕ್ಷಣದಿಂದ ಹೆಚ್ಚು ಪ್ರಯೋಜನ ಪಡೆಯಲಿಕ್ಕಾಗಿ ಓದುಬರಹ ಕಲಿಯಲು ಬಯಸಿದರು. ಅವರ ಪ್ರಯತ್ನಗಳು ಅತಿಯಾಗಿ ಆಶೀರ್ವದಿಸಲ್ಪಟ್ಟಿವೆ.
ಅಪೊಸ್ತಲರ ಕೃತ್ಯಗಳು ಪುಸ್ತಕದಲ್ಲಿ, ಅಪೊಸ್ತಲ ಪೌಲನು ನೋಡಿದಂಥ ಒಂದು ದರ್ಶನವನ್ನು ಲೂಕನು ವರ್ಣಿಸುತ್ತಾನೆ: “ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು—ನೀನು ಸಮುದ್ರವನ್ನು ದಾಟಿ ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕು.” ಪೌಲನು ಆ ಆಮಂತ್ರಣವನ್ನು ಸ್ವೀಕರಿಸಿ ಕೂಡಲೆ ಹೊರಟನು. ಇಂದು ಅನೇಕರು ಮೆಕ್ಸಿಕೊ ದೇಶದ ದೂರದೂರದ ಕ್ಷೇತ್ರಗಳಲ್ಲಿ ಇದೇ ಹುರುಪಿನಿಂದ ಪ್ರತಿಕ್ರಿಯೆಯನ್ನು ತೋರಿಸಿದ್ದಾರೆ, “ಭೂಲೋಕದ ಕಟ್ಟಕಡೆಯ ವರೆಗೆ” ಸುವಾರ್ತೆಯನ್ನು ಸಾರಲು ತಮ್ಮನ್ನು ನೀಡಿಕೊಂಡಿದ್ದಾರೆ.—ಅ. ಕೃತ್ಯಗಳು 1:8; 16:9, 10.
[ಪಾದಟಿಪ್ಪಣಿಗಳು]
^ ಪ್ಯಾರ. 4 ಇತ್ತೀಚಿನ ವರ್ಷವೊಂದರಲ್ಲಿ, ಮೆಕ್ಸಿಕೊ ದೇಶದ ಟೆರಿಟೊರಿಯ 8 ಪ್ರತಿಶತಕ್ಕಿಂತಲೂ ಹೆಚ್ಚು ಕ್ಷೇತ್ರವು ಯೆಹೋವನ ಸಾಕ್ಷಿಗಳ ಸಭೆಗಳಿಂದ ಕ್ರಮವಾಗಿ ಆವರಿಸಲ್ಪಡುತ್ತಿರಲಿಲ್ಲ. ಇದರ ಅರ್ಥವೇನಂದರೆ, ಸೀಮಿತ ಸಾರುವಿಕೆಯು ನಡೆಯುವ ದೂರದ ಪ್ರತ್ಯೇಕ ಕ್ಷೇತ್ರಗಳಲ್ಲಿ 82 ಲಕ್ಷಕ್ಕಿಂತಲೂ ಹೆಚ್ಚು ಜನರು ವಾಸಿಸುತ್ತಾರೆ.
^ ಪ್ಯಾರ. 17 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ.
[ಪುಟ 9ರಲ್ಲಿರುವ ಚಿತ್ರ]
ಅನೇಕ ಮೆಕ್ಸಿಕನ್ ಸಾಕ್ಷಿಗಳು ವಿಶೇಷ ಸಾರುವ ಕಾರ್ಯಾಚರಣೆಗಳಲ್ಲಿ ಪಾಲಿಗರಾಗಿದ್ದಾರೆ