ನೀವು ಯಾವ ಪ್ರಶ್ನೆಯನ್ನು ದೇವರಿಗೆ ಕೇಳಲು ಬಯಸುತ್ತೀರಿ?
ನೀವು ಯಾವ ಪ್ರಶ್ನೆಯನ್ನು ದೇವರಿಗೆ ಕೇಳಲು ಬಯಸುತ್ತೀರಿ?
ಭೂಮ್ಯಾದ್ಯಂತವಿರುವ ಜನರಿಗೆ, ಜೀವಿತದ ಕುರಿತು ಗಂಭೀರವಾದ ಪ್ರಶ್ನೆಗಳಿವೆ. ನಿಮ್ಮ ವಿಷಯದಲ್ಲೂ ಇದು ಸತ್ಯವಾಗಿದೆಯೋ? ಅನೇಕರು ತಮ್ಮ ಪ್ರಶ್ನೆಗಳನ್ನು ಧಾರ್ಮಿಕ ಉಪದೇಶಕರ ಮುಂದೆ ಪ್ರಸ್ತುತಪಡಿಸಿದ್ದಾರೆ, ಆದರೆ ತೃಪ್ತಿದಾಯಕ ಉತ್ತರಗಳನ್ನು ಪಡೆದುಕೊಂಡಿರುವುದಿಲ್ಲ. ಇತರರು ಈ ಪ್ರಶ್ನೆಗಳ ಕುರಿತು ಸ್ವತಃ ಆಲೋಚಿಸುತ್ತಾರೆ. ಕೆಲವರು ಮಾರ್ಗದರ್ಶನಕ್ಕಾಗಿ ಪ್ರಾರ್ಥಿಸಿದ್ದಾರೆ. ನಿಮ್ಮನ್ನು ಕ್ಷೋಭೆಗೊಳಿಸುವ ವಿಚಾರಗಳಿಗೆ ದೇವರಿಂದ ಉತ್ತರಗಳನ್ನು ಪಡೆದುಕೊಳ್ಳಲು ನಿಮಗೆ ನಿಜವಾಗಿಯೂ ಸಾಧ್ಯವಿದೆಯೋ? ಅನೇಕರು ತಾವು ದೇವರಲ್ಲಿ ಕೇಳಬಯಸುತ್ತೇವೆಂದು ಹೇಳುವ ಪ್ರಶ್ನೆಗಳಲ್ಲಿ ಕೆಲವು ಇಲ್ಲಿವೆ.
ದೇವರೆ ನೀನು ನಿಜವಾಗಿಯೂ ಯಾವ ರೀತಿಯ ವ್ಯಕ್ತಿಯಾಗಿದ್ದೀ?
ಮಾನವರು ದೇವರನ್ನು ವೀಕ್ಷಿಸುವ ವಿಧವು, ಅವರ ಸಂಸ್ಕೃತಿ, ಅವರ ಹೆತ್ತವರ ಧರ್ಮ, ಮತ್ತು ಒಂದುವೇಳೆ ಅವರ ಸ್ವಂತ ಆಯ್ಕೆಯಿಂದ ಪ್ರಭಾವಿಸಲ್ಪಡುತ್ತದೆ. ಕೆಲವರು ತಮ್ಮ ದೇವತೆಗೆ ಒಂದು ಹೆಸರನ್ನು ಉಪಯೋಗಿಸುತ್ತಾರೆ; ಇತರರು ಆತನನ್ನು ಕೇವಲ ದೇವರು ಎಂದು ಕರೆಯುತ್ತಾರೆ. ಆದರೆ ಇದು ನಿಜವಾಗಿಯೂ ಪ್ರಾಮುಖ್ಯವಾದ ವಿಷಯವಾಗಿದೆಯೋ? ತನ್ನನ್ನು ಮತ್ತು ತನ್ನ ಹೆಸರನ್ನು ನಮಗೆ ತಿಳಿಯಪಡಿಸುವ ಒಬ್ಬ ಸತ್ಯ ದೇವರು ಇದ್ದಾನೋ?
ಇಷ್ಟೊಂದು ಕಷ್ಟಾನುಭವವಿರುವುದೇಕೆ?
ಒಬ್ಬ ವ್ಯಕ್ತಿಯ ಅಜಾಗರೂಕತೆ ಮತ್ತು ಅನೈತಿಕ ಜೀವನ ರೀತಿಯು, ಅವನ ಆರೋಗ್ಯವನ್ನು ಕುಂದಿಸಿರುವುದಾದರೆ ಅಥವಾ ಅವನನ್ನು ದಾರಿದ್ರ್ಯಕ್ಕಿಳಿಸಿರುವುದಾದರೆ, ತನ್ನ ಸನ್ನಿವೇಶವು ಅಸಂತೃಪ್ತಿಕರವಾಗಿದೆ ಎಂದು ಅವನು ದೂರಬಹುದು. ಆದರೂ ಅದೇ ಸಮಯದಲ್ಲಿ ತಾನು ಏಕೆ ಈ ದುಸ್ಥಿತಿಯಲ್ಲಿದ್ದೇನೆ ಎಂಬುದು ಅವನಿಗೆ ತಿಳಿದಿರಬಹುದು.
ಆದರೆ ಇನ್ನಿತರರು ಯಾವುದೇ ತಪ್ಪಿಗೆ ಕಾರಣರಲ್ಲದಿದ್ದರೂ ಘೋರವಾದ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಕೆಲವರಿಗೆ ದೀರ್ಘಕಾಲಿಕ ರೋಗಗಳಿವೆ. ಇತರರು, ವಾಸಿಸಲಿಕ್ಕೆ ಒಂದು ಮನೆ ಮತ್ತು ಕುಟುಂಬಕ್ಕೆ ಸಾಕಷ್ಟು ಆಹಾರವನ್ನು ಪಡೆದುಕೊಳ್ಳಲು ದುಸ್ತರವೆಂದು ಕಂಡುಬರುವ ಪ್ರತಿಕೂಲ ಪರಿಸ್ಥಿತಿಗಳೊಂದಿಗೆ ಹೋರಾಡುತ್ತಾರೆ. ಕೋಟ್ಯಾಂತರ ಜನರು ಪಾತಕ, ಯುದ್ಧ, ಗೊತ್ತುಗುರಿಯಿಲ್ಲದ ಹಿಂಸಾಚಾರ, ನೈಸರ್ಗಿಕ ವಿಪತ್ತುಗಳು, ಅಥವಾ ಉನ್ನತ ಅಧಿಕಾರಿಗಳ ಅನ್ಯಾಯಕೃತ್ಯಗಳಿಗೆ ಬಲಿಯಾಗಿದ್ದಾರೆ.
‘ಇಂತಹ ಪರಿಸ್ಥಿತಿಗಳು ಇಷ್ಟು ವ್ಯಾಪಕವಾಗಿರುವುದು ಏಕೆ? ಈ ಎಲ್ಲಾ ಕಷ್ಟಾನುಭವಗಳನ್ನು ದೇವರು ಏಕೆ ಅನುಮತಿಸುತ್ತಾನೆ?’ ಎಂದು ಅನೇಕರು ಕೇಳುವುದು ಗ್ರಹಿಸಸಾಧ್ಯವಿರುವ ವಿಷಯವಾಗಿದೆ.
ನಾನೇಕೆ ಇಲ್ಲಿದ್ದೇನೆ? ಜೀವಿತದ ಉದ್ದೇಶವೇನು?
ಈ ಪ್ರಶ್ನೆಗಳು, ತನ್ನ ಪ್ರತಿನಿತ್ಯದ ಕಾರ್ಯಕಲಾಪಗಳಿಂದ ನಿಜ ಸಂತೃಪ್ತಿಯನ್ನು ಪಡೆಯದಿರುವಂಥ ಒಬ್ಬ ವ್ಯಕ್ತಿಯ ಹತಾಶಮನಸ್ಸಿನ ಹೊರಹೊಮ್ಮುವಿಕೆಗಳಾಗಿವೆ—ಮತ್ತು ಇದು ಅನೇಕ ಜನರ ವಿಷಯದಲ್ಲಿಯೂ ಸತ್ಯವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಜೀವನ ರೀತಿಯು ಒಂದಲ್ಲ ಒಂದು ರೀತಿಯಲ್ಲಿ ದೇವರಿಂದ ಮುಂಚಿತವಾಗಿಯೇ ನಿಶ್ಚಯಿಸಲ್ಪಟ್ಟಿದೆ ಎಂದು ಇತರ ಲಕ್ಷಾಂತರ ಮಂದಿ ನಂಬುತ್ತಾರೆ. ಇದು ಸತ್ಯವೋ? ಒಂದುವೇಳೆ ದೇವರ ಮನಸ್ಸಿನಲ್ಲಿ ನಿಮಗೆಂದು ಒಂದು ವಿಶೇಷ ಉದ್ದೇಶವಿರುವುದಾದರೆ, ನೀವದನ್ನು ಖಂಡಿತವಾಗಿಯೂ ತಿಳಿದುಕೊಳ್ಳಲು ಬಯಸುವಿರಿ ಅಲ್ಲವೇ.
ಲೋಕದಲ್ಲಿರುವ ಎಲ್ಲಾ ಪುಸ್ತಕಗಳಿಗೆ ವ್ಯತಿರಿಕ್ತವಾಗಿ, ದೇವರಿಂದ ಪ್ರೇರಿಸಲ್ಪಟ್ಟಿದೆ ಎಂದು ಸ್ಪಷ್ಟವಾಗಿ ತಿಳಿಯಪಡಿಸುವ ಒಂದು ಪುಸ್ತಕವಿದೆ. ಇಡೀ ಮಾನವಕುಲಕ್ಕಾಗಿ ನಿಜವಾಗಿಯೂ ದೇವರಿಂದ ಒಂದು ಸಂದೇಶವಿರಬೇಕು ಎಂದು ನೀವು ಅಪೇಕ್ಷಿಸುವಂತೆಯೇ, ಬರೆಯಲ್ಪಟ್ಟ ಬೇರೆಲ್ಲಾ ಪುಸ್ತಕಗಳಿಗಿಂತಲೂ ಈ ಪುಸ್ತಕವು ಹೆಚ್ಚು ಭಾಷೆಗಳಲ್ಲಿ ಲಭ್ಯವಿದೆ. ಅದು ಪವಿತ್ರ ಬೈಬಲ್ ಆಗಿದೆ. ಇದರಲ್ಲಿ, ಭೂಮ್ಯಾಕಾಶಗಳ ಸೃಷ್ಟಿಕರ್ತನಾದ ದೇವರು, ಸ್ವತಃ ತಾನು ಯಾರು ಮತ್ತು ತನ್ನ ಹೆಸರು ಏನು ಎಂಬುದನ್ನು ತಿಳಿಸುತ್ತಾನೆ. ನಿಮಗೆ ಆ ಹೆಸರು ಗೊತ್ತಿದೆಯೋ? ದೇವರು ಯಾವ ರೀತಿಯ ವ್ಯಕ್ತಿ ಎಂಬುದರ ಕುರಿತು ಬೈಬಲ್ ಏನು ಹೇಳುತ್ತದೆಂಬುದು ನಿಮಗೆ ಗೊತ್ತಿದೆಯೋ? ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ ಎಂಬುದರ ಕುರಿತು ಅದು ಏನು ಹೇಳುತ್ತದೆಂಬುದು ನಿಮಗೆ ಗೊತ್ತಿದೆಯೋ?
[ಪುಟ 2ರಲ್ಲಿರುವ ಚಿತ್ರ ಕೃಪೆ]
COVER: Chad Ehlers/Index Stock Photography
[ಪುಟ 3ರಲ್ಲಿರುವ ಚಿತ್ರ ಕೃಪೆ]
ಪರ್ವತ: Chad Ehlers/Index Stock Photography