“ಯೆಹೋವನು ಎಲ್ಲಿ” ಎಂದು ನೀವು ಕೇಳುತ್ತೀರೋ?
“ಯೆಹೋವನು ಎಲ್ಲಿ” ಎಂದು ನೀವು ಕೇಳುತ್ತೀರೋ?
‘ಅವರು ನನ್ನನ್ನು ಬಿಟ್ಟು ದೂರವಾಗಿದ್ದಾರೆ ಮತ್ತು ಯೆಹೋವನು ಎಲ್ಲಿ ಎಂದು ಅವರು ಅಂದುಕೊಳ್ಳಲಿಲ್ಲವಲ್ಲ.’—ಯೆರೆಮೀಯ 2:5, 6.
1. “ದೇವರು ಎಲ್ಲಿದ್ದಾನೆ?” ಎಂದು ಜನರು ಕೇಳುವಾಗ, ಅವರ ಮನಸ್ಸಿನಲ್ಲಿ ಏನಿರಬಹುದು?
“ದೇವರು ಎಲ್ಲಿದ್ದಾನೆ?” ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ. ಅವರಲ್ಲಿ ಕೆಲವರು ಕೇವಲ ಸೃಷ್ಟಿಕರ್ತನ ಕುರಿತಾದ ಮೂಲಭೂತ ವಿಚಾರವನ್ನು, ಅಂದರೆ ಆತನು ಎಲ್ಲಿ ವಾಸಿಸುತ್ತಾನೆ ಎಂಬ ಅಂಶವನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ ಅಷ್ಟೆ. ಇನ್ನಿತರರು ವ್ಯಾಪಕವಾಗಿರುವ ಒಂದು ವಿಪತ್ತನ್ನು ನೋಡಿದ ಬಳಿಕ ಅಥವಾ ಸ್ವತಃ ತಾವೇ ಗಂಭೀರವಾದ ತೊಂದರೆಯಲ್ಲಿರುವಾಗ ಮತ್ತು ದೇವರು ಮಧ್ಯೆ ಪ್ರವೇಶಿಸಿ ವಿಷಯಗಳನ್ನು ಯಾಕೆ ಸರಿಪಡಿಸಲಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಲು ಅಸಮರ್ಥರಾಗುವಾಗ ಈ ಪ್ರಶ್ನೆಯನ್ನು ಎಬ್ಬಿಸಿದ್ದಾರೆ. ಇನ್ನೂ ಕೆಲವರು, ಏನೇ ಆದರೂ ದೇವರ ಬಗ್ಗೆ ವಿಚಾರಿಸುವುದೇ ಇಲ್ಲ, ಏಕೆಂದರೆ ದೇವರು ಅಸ್ತಿತ್ವದಲ್ಲಿದ್ದಾನೆ ಎಂಬ ಸಂಗತಿಯನ್ನೇ ಅವರು ಅಲ್ಲಗಳೆಯುತ್ತಾರೆ.—ಕೀರ್ತನೆ 10:4.
2. ದೇವರಿಗಾಗಿರುವ ಹುಡುಕಾಟದಲ್ಲಿ ಯಾರು ಸಫಲರಾಗಿದ್ದಾರೆ?
2 ಆದರೂ, ದೇವರೊಬ್ಬನು ಅಸ್ತಿತ್ವದಲ್ಲಿದ್ದಾನೆ ಎಂಬುದಕ್ಕಿರುವ ಸಮೃದ್ಧ ಪುರಾವೆಯನ್ನು ಅಂಗೀಕರಿಸುವಂಥ ಜನರೂ ಅನೇಕರಿದ್ದಾರೆ. (ಕೀರ್ತನೆ 19:1; 104:24) ಇವರಲ್ಲಿ ಕೆಲವರು ಯಾವುದಾದರೊಂದು ರೀತಿಯ ಧರ್ಮವನ್ನು ಹೊಂದಿರುವುದರಲ್ಲೇ ತೃಪ್ತರಾಗಿರುತ್ತಾರೆ. ಆದರೆ ಸತ್ಯಕ್ಕಾಗಿರುವ ಆಳವಾದ ಪ್ರೀತಿಯು, ಎಲ್ಲಾ ದೇಶಗಳಲ್ಲಿರುವ ಇನ್ನಿತರ ಲಕ್ಷಾಂತರ ಜನರು ಸತ್ಯ ದೇವರಿಗಾಗಿ ಹುಡುಕುವಂತೆ ಅವರನ್ನು ಪ್ರಚೋದಿಸಿದೆ. ಅವರ ಪ್ರಯತ್ನವು ವ್ಯರ್ಥವಾಗಿಲ್ಲ, ಏಕೆಂದರೆ ಆ ಸತ್ಯ ದೇವರು “ನಮ್ಮಲ್ಲಿ ಒಬ್ಬನಿಗೂ ದೂರವಾದವನಲ್ಲ.”—ಅ. ಕೃತ್ಯಗಳು 17:26-28.
3. (ಎ) ದೇವರು ಎಲ್ಲಿ ನೆಲೆಸಿದ್ದಾನೆ? (ಬಿ) “ಯೆಹೋವನು ಎಲ್ಲಿ” ಎಂಬ ಶಾಸ್ತ್ರೀಯ ಪ್ರಶ್ನೆಯಿಂದ ಏನು ಅರ್ಥೈಸಲ್ಪಟ್ಟಿದೆ?
3 ಒಬ್ಬ ವ್ಯಕ್ತಿಯು ನಿಜವಾಗಿಯೂ ಯೆಹೋವನನ್ನು ಕಂಡುಕೊಳ್ಳುವಾಗ, “ದೇವರು ಆತ್ಮಸ್ವರೂಪ”ನಾಗಿದ್ದಾನೆ, ಮಾನವ ಕಣ್ಣುಗಳಿಗೆ ಅಗೋಚರನಾಗಿದ್ದಾನೆ ಎಂಬುದನ್ನು ಅವನು ಗ್ರಹಿಸುತ್ತಾನೆ. (ಯೋಹಾನ 4:24) ಸತ್ಯ ದೇವರನ್ನು ಯೇಸು ‘ಪರಲೋಕದಲ್ಲಿರುವ ನನ್ನ ತಂದೆ’ ಎಂದು ಸಂಬೋಧಿಸಿದನು. ಅದು ಏನನ್ನು ಅರ್ಥೈಸಿತು? ಆತ್ಮಿಕ ಅರ್ಥದಲ್ಲಿ ಹೇಳುವುದಾದರೆ, ಭೌತಿಕ ಆಕಾಶವು ಭೂಮಿಗಿಂತ ಎಷ್ಟೋ ಮೇಲಿರುವಂತೆಯೇ, ನಮ್ಮ ಸ್ವರ್ಗೀಯ ತಂದೆಯು ನೆಲೆಸಿರುವ ಕ್ಷೇತ್ರವು ತುಂಬ ಉನ್ನತವಾದದ್ದಾಗಿದೆ. (ಮತ್ತಾಯ 12:50; ಯೆಶಾಯ 63:15) ನಾವು ದೇವರನ್ನು ನಮ್ಮ ಭೌತಿಕ ಕಣ್ಣುಗಳಿಂದ ನೋಡಸಾಧ್ಯವಿಲ್ಲವಾದರೂ, ನಾವು ಆತನ ಕುರಿತು ತಿಳಿದುಕೊಳ್ಳುವುದನ್ನು ಹಾಗೂ ಆತನ ಉದ್ದೇಶಗಳ ಕುರಿತು ಹೆಚ್ಚನ್ನು ಕಲಿಯುವುದನ್ನು ಆತನು ಸಾಧ್ಯಗೊಳಿಸುತ್ತಾನೆ. (ವಿಮೋಚನಕಾಂಡ 33:20; 34:6, 7) ಜೀವನದ ಅರ್ಥವೇನು ಎಂಬುದನ್ನು ತಿಳಿದುಕೊಳ್ಳಲು ಬಯಸುವಂಥ ಪ್ರಾಮಾಣಿಕ ಜನರಿಂದ ಕೇಳಲ್ಪಡುವ ಪ್ರಶ್ನೆಗಳಿಗೆ ಆತನು ಉತ್ತರವನ್ನೀಯುತ್ತಾನೆ. ನಮ್ಮ ಜೀವಿತಗಳ ಮೇಲೆ ಪರಿಣಾಮವನ್ನು ಬೀರುವಂಥ ವಿಷಯಗಳಲ್ಲಿ ಆತನ ದೃಷ್ಟಿಕೋನವನ್ನು, ಅಂದರೆ ಅಂಥ ವಿಷಯಗಳನ್ನು ಆತನು ಹೇಗೆ ಪರಿಗಣಿಸುತ್ತಾನೆ ಮತ್ತು ನಮ್ಮ ಬಯಕೆಗಳು ಆತನ ಉದ್ದೇಶಗಳಿಗೆ ಹೊಂದಿಕೆಯಲ್ಲಿವೆಯೋ ಇಲ್ಲವೋ ಎಂಬುದನ್ನು ನಿರ್ಧರಿಸಲಿಕ್ಕಾಗಿ ನಮಗೆ ಸದೃಢವಾದ ಆಧಾರವನ್ನು ಒದಗಿಸುತ್ತಾನೆ. ನಮ್ಮ ಜೀವಿತಗಳ ಮೇಲೆ ಪರಿಣಾಮ ಬೀರುವಂಥ ವಿಷಯಗಳ ಕುರಿತು ವಿಚಾರಿಸಿ ತಿಳಿದುಕೊಳ್ಳುವಂತೆ ಮತ್ತು ಅವುಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಪ್ರಯತ್ನಿಸುವಂತೆ ಆತನು ಬಯಸುತ್ತಾನೆ. ಪುರಾತನ ಇಸ್ರಾಯೇಲಿನ ಜನರು ಹೀಗೆ ಮಾಡಲು ತಪ್ಪಿಹೋದ ಕಾರಣ, ಪ್ರವಾದಿಯಾದ ಯೆರೆಮೀಯನ ಮೂಲಕ ಯೆಹೋವನು ಅವರಿಗೆ ತಿದ್ದುಪಾಟನ್ನು ನೀಡಿದನು. ಅವರಿಗೆ ಯೆಹೋವನ ಹೆಸರು ತಿಳಿದಿತ್ತು, ಆದರೆ “ಯೆಹೋವನು ಎಲ್ಲಿ”? ಎಂದು ಅವರು ಕೇಳಲಿಲ್ಲ. (ಯೆರೆಮೀಯ 2:6) ಯೆಹೋವನ ಉದ್ದೇಶವು ಅವರ ಆದ್ಯ ಚಿಂತೆಯಾಗಿರಲಿಲ್ಲ. ಅವರು ಆತನ ಮಾರ್ಗದರ್ಶನಕ್ಕಾಗಿ ಮುನ್ನೋಡುತ್ತಿರಲಿಲ್ಲ. ನೀವು ಚಿಕ್ಕದಾದ ಅಥವಾ ದೊಡ್ಡದಾದ ನಿರ್ಣಯಗಳನ್ನು ಮಾಡಬೇಕಾಗಿರುವಾಗ, “ಯೆಹೋವನು ಎಲ್ಲಿ” ಎಂದು ಕೇಳುತ್ತೀರೋ?
ದೇವರ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದವರು
4. ಯೆಹೋವನ ಬಳಿ ವಿಚಾರಿಸುವುದರಲ್ಲಿ ದಾವೀದನು ಇಟ್ಟ ಮಾದರಿಯಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಬಲ್ಲೆವು?
4 ಇಷಯನ ಮಗನಾದ ದಾವೀದನು ಇನ್ನೂ ಚಿಕ್ಕವನಾಗಿದ್ದಾಗಲೇ ಯೆಹೋವನಲ್ಲಿ ಬಲವಾದ ನಂಬಿಕೆಯನ್ನು ಬೆಳೆಸಿಕೊಂಡನು. ಯೆಹೋವನು ‘ಜೀವಸ್ವರೂಪನಾದ ದೇವರು’ ಎಂಬುದು ಅವನಿಗೆ ತಿಳಿದಿತ್ತು. ದಾವೀದನು ಯೆಹೋವನ ಸಂರಕ್ಷಣೆಯನ್ನು ವೈಯಕ್ತಿಕವಾಗಿ ಅನುಭವಿಸಿದ್ದನು. ನಂಬಿಕೆಯಿಂದ ಮತ್ತು “ಯೆಹೋವನ ನಾಮ”ಕ್ಕಾಗಿರುವ ಪ್ರೀತಿಯಿಂದ ಪ್ರಚೋದಿತನಾದ ದಾವೀದನು, ಅತ್ಯಧಿಕ ಪ್ರಮಾಣದಲ್ಲಿ ಶಸ್ತ್ರಸಜ್ಜಿತನಾಗಿದ್ದ ಫಿಲಿಷ್ಟಿಯರ ದೈತ್ಯನಾದ ಗೊಲ್ಯಾತನನ್ನು ಸಾಯಿಸಿದನು. (1 ಸಮುವೇಲ 17:26, 34-51) ಆದರೂ, ದಾವೀದನ ಯಶಸ್ಸು ಅವನು ವಿಪರೀತ ಆತ್ಮವಿಶ್ವಾಸಿಯಾಗುವಂತೆ ಮಾಡಲಿಲ್ಲ. ಈಗ ತಾನು ಏನೇ ಮಾಡಿದರೂ ಯೆಹೋವನು ತನ್ನನ್ನು ಆಶೀರ್ವದಿಸುವನು ಎಂದು ಅವನು ತರ್ಕಿಸಲಿಲ್ಲ. ತದನಂತರದ ವರ್ಷಗಳಲ್ಲಿ, ನಿರ್ಣಯಗಳನ್ನು ಮಾಡಲಿಕ್ಕಿದ್ದಾಗ ದಾವೀದನು ಪದೇ ಪದೇ ಯೆಹೋವನ ಬಳಿ ವಿಚಾರಿಸಿದನು. (1 ಸಮುವೇಲ 23:2; 30:8; 2 ಸಮುವೇಲ 2:1; 5:19) ಅವನು ಹೀಗೆ ಪ್ರಾರ್ಥಿಸುತ್ತಾ ಇದ್ದನು: “ಯೆಹೋವನೇ, ನಿನ್ನ ಮಾರ್ಗವನ್ನು ನನಗೆ ತಿಳಿಸು; ನೀನು ಒಪ್ಪುವ ದಾರಿಯನ್ನು ತೋರಿಸು. ನಿನ್ನ ಸತ್ಯಾನುಸಾರವಾಗಿ ನನ್ನನ್ನು ನಡಿಸುತ್ತಾ ಉಪದೇಶಿಸು; ನೀನೇ ನನ್ನನ್ನು ರಕ್ಷಿಸುವ ದೇವರು; ಹಗಲೆಲ್ಲಾ ನಿನ್ನನ್ನೇ ನಿರೀಕ್ಷಿಸುವವನಾಗಿದ್ದೇನೆ.” (ಕೀರ್ತನೆ 25:4, 5) ಇದು ನಾವು ಅನುಸರಿಸಲು ಎಷ್ಟು ಅತ್ಯುತ್ತಮವಾದ ಒಂದು ಮಾದರಿಯಾಗಿದೆ!
5, 6. ಯೆಹೋಷಾಫಾಟನು ತನ್ನ ಜೀವಿತದ ಬೇರೆ ಬೇರೆ ಸಮಯಾವಧಿಗಳಲ್ಲಿ ಯೆಹೋವನಿಗಾಗಿ ಹೇಗೆ ಹುಡುಕಿದನು?
5 ದಾವೀದನ ರಾಜವಂಶಾವಳಿಯಲ್ಲಿ ಐದನೆಯ ರಾಜನಾಗಿದ್ದ ಯೆಹೋಷಾಫಾಟನ ದಿನಗಳಲ್ಲಿ, ಮೂರು ಜನಾಂಗಗಳ ಸೈನ್ಯಗಳು ಜೊತೆಗೂಡಿ ಯೆಹೂದಕ್ಕೆ ವಿರೋಧವಾಗಿ ಯುದ್ಧಕ್ಕೆ ಬಂದವು. ಈ ತುರ್ತುಪರಿಸ್ಥಿತಿಯನ್ನು ಎದುರಿಸಿದಾಗ, ಯೆಹೋಷಾಫಾಟನು “ಯೆಹೋವನಿಗಾಗಿ ಹುಡುಕಲು ಮನಸ್ಸು ಮಾಡಿದನು.” (2 ಪೂರ್ವಕಾಲವೃತ್ತಾಂತ 20:1-3, NW) ಯೆಹೋಷಾಫಾಟನು ಯೆಹೋವನಿಗಾಗಿ ಹುಡುಕಿದ್ದು ಇದೇ ಮೊದಲ ಬಾರಿಯಾಗಿರಲಿಲ್ಲ. ಧರ್ಮಭ್ರಷ್ಟ ಉತ್ತರ ಇಸ್ರಾಯೇಲ್ ರಾಜ್ಯವು ಯಾವುದರಲ್ಲಿ ವಿಪರೀತವಾಗಿ ಒಳಗೂಡಿತ್ತೋ ಆ ಬಾಳನ ಆರಾಧನೆಯನ್ನು ತೊರೆದು, ಯೆಹೋವನ ಮಾರ್ಗಗಳಲ್ಲೇ ನಡೆಯುವ ಆಯ್ಕೆಯನ್ನು ರಾಜನು ಮಾಡಿದ್ದನು. (2 ಪೂರ್ವಕಾಲವೃತ್ತಾಂತ 17:3, 4) ಆದುದರಿಂದ, ಈಗ ಯೆಹೋಷಾಫಾಟನು ಒಂದು ಬಿಕ್ಕಟ್ಟನ್ನು ಎದುರಿಸುತ್ತಿರುವಾಗ, ಅವನು ಯಾವ ರೀತಿಯಲ್ಲಿ ‘ಯೆಹೋವನಿಗಾಗಿ ಹುಡುಕಿದನು?’
6 ಈ ಸಂಕಟಕರ ಸಮಯದಲ್ಲಿ ಯೆಹೋಷಾಫಾಟನು ಯೆರೂಸಲೇಮಿನಲ್ಲಿ ಮಾಡಿದ ಬಹಿರಂಗ ಪ್ರಾರ್ಥನೆಯಲ್ಲಿ, ಯೆಹೋವನ ಬಲಾಢ್ಯ ಶಕ್ತಿಯನ್ನು ತಾನು ಜ್ಞಾಪಿಸಿಕೊಂಡೆನೆಂಬುದನ್ನು ಅವನು ಸೂಚಿಸಿದನು. ಯೆಹೋವನು ಬೇರೆ ಜನಾಂಗಗಳನ್ನು ಹೊರಡಿಸಿ, ಒಂದು ನಿರ್ದಿಷ್ಟ ದೇಶವನ್ನು ಇಸ್ರಾಯೇಲ್ಯರಿಗೆ ಸ್ವಾಸ್ತ್ಯವಾಗಿ ಕೊಟ್ಟದ್ದರ ಮೂಲಕ ಪ್ರಕಟಿಸಲ್ಪಟ್ಟಂಥ ಯೆಹೋವನ ಉದ್ದೇಶಗಳ ಕುರಿತು ಅವನು ಆಳವಾಗಿ ಆಲೋಚಿಸಿದ್ದನು. ಯೆಹೋವನ ಸಹಾಯಕ್ಕಾಗಿರುವ ಆವಶ್ಯಕತೆಯನ್ನು ಈ ರಾಜನು ಮನಗಂಡನು. (2 ಪೂರ್ವಕಾಲವೃತ್ತಾಂತ 20:6-12) ಆ ಸಂದರ್ಭದಲ್ಲಿ ರಾಜನು ತನ್ನನ್ನು ಕಂಡುಕೊಳ್ಳುವಂತೆ ಯೆಹೋವನು ಅನುಮತಿಸಿದನೋ? ಹೌದು. ಲೇವಿಯನಾದ ಯಹಜೀಯೇಲನ ಮೂಲಕ ಯೆಹೋವನು ನಿರ್ದಿಷ್ಟವಾದ ಮಾರ್ಗದರ್ಶನವನ್ನು ನೀಡಿದನು, ಮತ್ತು ಮರುದಿನ ತನ್ನ ಜನರಿಗೆ ವಿಜಯವನ್ನು ದಯಪಾಲಿಸಿದನು. (2 ಪೂವಕಾಲವೃತ್ತಾಂತ 20:14-28) ಮಾರ್ಗದರ್ಶನಕ್ಕಾಗಿ ಯೆಹೋವನ ಕಡೆಗೆ ತಿರುಗುವಾಗ, ನೀವು ಸಹ ಆತನನ್ನು ಕಂಡುಕೊಳ್ಳುವಂತೆ ಆತನು ಅನುಮತಿಸುವನು ಎಂಬ ವಿಷಯದಲ್ಲಿ ನೀವು ಹೇಗೆ ಖಾತ್ರಿಯಿಂದಿರಬಲ್ಲಿರಿ?
7. ದೇವರು ಯಾರ ಪ್ರಾರ್ಥನೆಗಳನ್ನು ಕೇಳಿಸಿಕೊಳ್ಳುತ್ತಾನೆ?
7 ಯೆಹೋವನು ಪಕ್ಷಪಾತಿಯಲ್ಲ. ಎಲ್ಲಾ ಜನಾಂಗಗಳ ಜನರು ಪ್ರಾರ್ಥನೆಯಲ್ಲಿ ತನ್ನನ್ನು ಹುಡುಕುವಂತೆ ಆತನು ಅವರನ್ನು ಆಮಂತ್ರಿಸುತ್ತಾನೆ. (ಕೀರ್ತನೆ 65:2; ಅ. ಕೃತ್ಯಗಳು 10:34, 35) ಯಾರು ತನಗೆ ಮೊರೆಯಿಡುತ್ತಾರೋ ಅವರ ಹೃದಯದಲ್ಲಿ ಏನಿದೆ ಎಂಬುದು ಆತನಿಗೆ ಗೊತ್ತಿರುತ್ತದೆ. ನೀತಿವಂತರ ಪ್ರಾರ್ಥನೆಗಳನ್ನು ತಾನು ಕೇಳಿಸಿಕೊಳ್ಳುತ್ತೇನೆ ಎಂಬ ಆಶ್ವಾಸನೆಯನ್ನು ಆತನು ನೀಡುತ್ತಾನೆ. (ಜ್ಞಾನೋಕ್ತಿ 15:29) ಈ ಮುಂಚೆ ಆತನಲ್ಲಿ ಯಾವುದೇ ಆಸಕ್ತಿಯನ್ನು ತೋರಿಸದೆ ಇದ್ದು, ಈಗ ದೀನಭಾವದಿಂದ ಆತನ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುವಂಥ ಜನರು ತನ್ನನ್ನು ಕಂಡುಕೊಳ್ಳುವಂತೆ ಆತನು ಅನುಮತಿಸುತ್ತಾನೆ. (ಯೆಶಾಯ 65:1) ಆತನ ನಿಯಮವನ್ನು ಅನುಸರಿಸಲು ತಪ್ಪಿಹೋಗಿರುವುದಾದರೂ, ಈಗ ದೀನಭಾವದಿಂದ ಪಶ್ಚಾತ್ತಾಪವನ್ನು ತೋರಿಸುವಂಥ ಜನರ ಪ್ರಾರ್ಥನೆಗಳನ್ನು ಸಹ ಆತನು ಕೇಳಿಸಿಕೊಳ್ಳುತ್ತಾನೆ. (ಕೀರ್ತನೆ 32:5, 6; ಅ. ಕೃತ್ಯಗಳು 3:19) ಆದರೂ, ಒಬ್ಬ ವ್ಯಕ್ತಿಯ ಹೃದಯವು ದೇವರಿಗೆ ಅಧೀನವಾಗಿಲ್ಲದಿರುವಾಗ, ಅವನ ಪ್ರಾರ್ಥನೆಗಳು ವ್ಯರ್ಥವಾಗಿವೆ. (ಮಾರ್ಕ 7:6, 7) ಕೆಲವು ಉದಾಹರಣೆಗಳನ್ನು ಪರಿಗಣಿಸಿರಿ.
ಅವರು ಪ್ರಾರ್ಥಿಸಿದರೂ, ಉತ್ತರವನ್ನು ಪಡೆದುಕೊಳ್ಳಲಿಲ್ಲ
8. ಯಾವುದು ಸೌಲನ ಪ್ರಾರ್ಥನೆಗಳನ್ನು ಯೆಹೋವನಿಗೆ ಅಸ್ವೀಕರಣೀಯವಾಗಿ ಮಾಡಿತ್ತು?
8 ಅವಿಧೇಯತೆಯ ಕಾರಣ ದೇವರು ಅರಸನಾದ ಸೌಲನನ್ನು ತಳ್ಳಿಬಿಟ್ಟಿದ್ದಾನೆ ಎಂದು ಪ್ರವಾದಿಯಾದ ಸಮುವೇಲನು ಹೇಳಿದಾಗ, ಸೌಲನು ತಾನೇ ಯೆಹೋವನಿಗೆ ಸಾಷ್ಟಾಂಗ ನಮಸ್ಕಾರಮಾಡಿ ಆತನನ್ನು ಆರಾಧಿಸಿದನು. (1 ಸಮುವೇಲ 15:30, 31) ಆದರೆ ಅದು ಕೇವಲ ಹೊರತೋರಿಕೆಯಾಗಿತ್ತು. ಸೌಲನ ಬಯಕೆಯು ದೇವರಿಗೆ ವಿಧೇಯನಾಗುವುದಾಗಿರಲಿಲ್ಲ; ಜನರ ಸನ್ಮಾನಕ್ಕೆ ಪಾತ್ರನಾಗುವುದೇ ಆಗಿತ್ತು. ತದನಂತರ ಇಸ್ರಾಯೇಲ್‌ಗೆ ವಿರುದ್ಧವಾಗಿ ಫಿಲಿಷ್ಟಿಯರು ಯುದ್ಧಮಾಡುತ್ತಿದ್ದಾಗ, ಔಪಚಾರಿಕವಾಗಿ ಸೌಲನು ಯೆಹೋವನ ಬಳಿ ವಿಚಾರಿಸಿದನು. ಆದರೆ ಅವನಿಗೆ ಉತ್ತರ ದೊರಕದಿದ್ದಾಗ, ಅವನು ಪ್ರೇತಮಾಧ್ಯಮವನ್ನು ಸಂಪರ್ಕಿಸಿದನು. ಪ್ರೇತಸಿದ್ಧರನ್ನು ವಿಚಾರಿಸುವುದನ್ನು ದೇವರು ಖಂಡಿಸುತ್ತಾನೆಂಬುದು ಗೊತ್ತಿದ್ದರೂ ಅವನು ಹಾಗೆ ಮಾಡಿದನು. (ಧರ್ಮೋಪದೇಶಕಾಂಡ 18:10-12; 1 ಸಮುವೇಲ 28:6, 7) ಅದರ ಸಾರಾಂಶವನ್ನು ತಿಳಿಸುತ್ತಾ 1 ಪೂರ್ವಕಾಲವೃತ್ತಾಂತ 10:13 ಸೌಲನ ಕುರಿತಾಗಿ ಹೇಳುವುದು: ‘ಸೌಲನು ಯೆಹೋವನನ್ನು ವಿಚಾರಿಸಲಿಲ್ಲ.’ ಈ ವಚನವು ಏಕೆ ಹೀಗೆ ಹೇಳುತ್ತದೆ? ಏಕೆಂದರೆ ಸೌಲನ ಪ್ರಾರ್ಥನೆಗಳು ನಂಬಿಕೆಯ ಮೇಲೆ ಆಧಾರಿತವಾಗಿರಲಿಲ್ಲ. ಆದುದರಿಂದ, ಅದು ಸೌಲನು ಪ್ರಾರ್ಥಿಸಲೇ ಇಲ್ಲವೋ ಎಂಬಂತಿತ್ತು.
9. ಯೆಹೋವನ ಮಾರ್ಗದರ್ಶನಕ್ಕಾಗಿರುವ ಚಿದ್ಕೀಯನ ವಿನಂತಿಯಲ್ಲಿ ಯಾವ ತಪ್ಪು ಒಳಗೂಡಿತ್ತು?
9 ತದ್ರೀತಿಯಲ್ಲಿ, ಯೆಹೂದ ರಾಜ್ಯದ ಅಂತ್ಯವು ಸಮೀಪಿಸುತ್ತಿದ್ದಂತೆ, ಹೆಚ್ಚೆಚ್ಚು ಪ್ರಾರ್ಥನೆಗಳನ್ನು ಮಾಡಲಾಯಿತು ಮತ್ತು ಯೆಹೋವನ ಪ್ರವಾದಿಗಳು ಸಂಪರ್ಕಿಸಲ್ಪಟ್ಟರು. ಆದರೂ, ಜನರು ಯೆಹೋವನನ್ನು ಗೌರವಿಸುತ್ತೇವೆಂದು ಹೇಳಿಕೊಳ್ಳುತ್ತಿದ್ದರಾದರೂ, ಅದೇ ಸಮಯದಲ್ಲಿ ಅವರು ವಿಗ್ರಹಾರಾಧನೆಯನ್ನೂ ಮಾಡುತ್ತಿದ್ದರು. (ಚೆಫನ್ಯ 1:4-6) ಕಾಟಾಚಾರಕ್ಕಾಗಿ ಅವರು ದೇವರನ್ನು ವಿಚಾರಿಸುತ್ತಿದ್ದರಾದರೂ, ಆತನ ಚಿತ್ತಕ್ಕೆ ಅಧೀನರಾಗಲು ತಮ್ಮ ಹೃದಯಗಳನ್ನು ಸಿದ್ಧಪಡಿಸಿಕೊಳ್ಳಲಿಲ್ಲ. ಅರಸನಾದ ಚಿದ್ಕೀಯನು, ತನಗೋಸ್ಕರ ಯೆಹೋವನ ಬಳಿ ವಿಚಾರಿಸುವಂತೆ ಯೆರೆಮೀಯನ ಬಳಿ ವಿನಂತಿಸಿಕೊಂಡನು. ಅರಸನು ಏನು ಮಾಡಬೇಕು ಎಂಬುದನ್ನು ಯೆಹೋವನು ಈಗಾಗಲೇ ಅವನಿಗೆ ತಿಳಿಸಿದ್ದನು. ಆದರೆ ಅರಸನಲ್ಲಿ ನಂಬಿಕೆಯ ಕೊರತೆಯಿದ್ದದರಿಂದ ಮತ್ತು ಅವನು ಮನುಷ್ಯರ ಭಯಕ್ಕೆ ಒಳಗಾದದ್ದರಿಂದ, ಅವನು ಯೆಹೋವನ ಮಾತಿಗೆ ವಿಧೇಯನಾಗಲಿಲ್ಲ, ಹಾಗೂ ಈ ಅರಸನು ಕೇಳಿಸಿಕೊಳ್ಳಲು ಬಯಸಿದಂಥ ಇತರ ಯಾವುದೇ ಉತ್ತರವನ್ನು ಯೆಹೋವನು ಕೊಡಲಿಲ್ಲ.—ಯೆರೆಮೀಯ 21:1-12; 38:14-19.
10. ಯೋಹಾನಾನನು ಯೆಹೋವನ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸಿದಂಥ ವಿಧದಲ್ಲಿ ಯಾವ ತಪ್ಪು ಒಳಗೂಡಿತ್ತು, ಮತ್ತು ಅವನ ತಪ್ಪಿನಿಂದ ನಾವು ಯಾವ ಪಾಠವನ್ನು ಕಲಿಯುತ್ತೇವೆ?
10 ಯೆರೂಸಲೇಮ್ ನಾಶಮಾಡಲ್ಪಟ್ಟು, ಬಾಬೆಲಿನ ಸೈನ್ಯವು ಯೆಹೂದಿ ದೇಶಭ್ರಷ್ಟರೊಂದಿಗೆ ಹೊರಟುಹೋದ ಬಳಿಕ, ಯೆಹೂದದಲ್ಲಿ ಉಳಿದಿದ್ದ ಯೆಹೂದ್ಯರ ಒಂದು ಚಿಕ್ಕ ಗುಂಪನ್ನು ಐಗುಪ್ತ್ಯಕ್ಕೆ ಕರೆದುಕೊಂಡುಹೋಗಲು ಯೋಹಾನಾನನು ಸಿದ್ಧನಾದನು. ಅವರು ಯೋಜನೆಗಳನ್ನು ಮಾಡಿದರು, ಆದರೆ ಅಲ್ಲಿಂದ ಹೊರಡುವ ಮೊದಲು ತಮ್ಮ ಪರವಾಗಿ ಪ್ರಾರ್ಥಿಸುವಂತೆ ಮತ್ತು ಯೆಹೋವನಿಂದ ಮಾರ್ಗದರ್ಶನವನ್ನು ಪಡೆದುಕೊಳ್ಳುವಂತೆ ಅವರು ಯೆರೆಮೀಯನನ್ನು ಕೇಳಿಕೊಂಡರು. ನಂತರ ತಾವು ಬಯಸಿದಂಥ ಉತ್ತರವನ್ನು ಅವರು ಪಡೆದುಕೊಳ್ಳದಿದ್ದರೂ, ಅವರು ಯಾವ ಯೋಜನೆಗಳನ್ನು ಈಗಾಗಲೇ ಮಾಡಿದ್ದರೋ ಅದನ್ನನುಸರಿಸಿ ಮುಂದುವರಿದರು. (ಯೆರೆಮೀಯ 41:16–43:7) ನೀವು ಯೆಹೋವನ ದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುವಾಗ, ಆತನನ್ನು ನೀವು ಕಂಡುಕೊಳ್ಳುವಂತೆ ನಿಮಗೆ ಸಹಾಯಮಾಡಸಾಧ್ಯವಿರುವ ಪಾಠಗಳನ್ನು ಈ ಘಟನೆಗಳಲ್ಲಿ ನೀವು ಕಾಣುತ್ತೀರೋ?
“ಪರಿಶೋಧಿಸಿ ತಿಳುಕೊಳ್ಳಿರಿ”
11. ಎಫೆಸ 5:10ನ್ನು ನಾವು ಏಕೆ ಅನ್ವಯಿಸಿಕೊಳ್ಳುವ ಅಗತ್ಯವಿದೆ?
11 ನೀರಿನ ನಿಮಜ್ಜನದ ಮೂಲಕ ನಮ್ಮ ಸಮರ್ಪಣೆಯನ್ನು ಸಂಕೇತಿಸುವುದು, ಸಭಾ ಕೂಟಗಳಿಗೆ ಹಾಜರಾಗುವುದು, ಮತ್ತು ಸಾರ್ವಜನಿಕ ಶುಶ್ರೂಷೆಯಲ್ಲಿ ಭಾಗವಹಿಸುವುದಕ್ಕಿಂತಲೂ ಹೆಚ್ಚಿನದ್ದು ಸತ್ಯಾರಾಧನೆಯಲ್ಲಿ ಒಳಗೂಡಿದೆ. ನಮ್ಮ ಇಡೀ ಜೀವನ ರೀತಿಯೇ ಇದರಲ್ಲಿ ಒಳಗೂಡಿದೆ. ದೈವಿಕ ಭಕ್ತಿಯೊಂದಿಗೆ ಹೊಂದಿಕೆಯಲ್ಲಿರುವ ಮಾರ್ಗದಿಂದ ನಮ್ಮನ್ನು ಅಪಕರ್ಷಿಸಸಾಧ್ಯವಿರುವಂಥ ಕೆಲವು ನವಿರಾದ, ಕೆಲವು ಸುವ್ಯಕ್ತವಾಗಿರುವ ಒತ್ತಡಗಳ ಪರಿಣಾಮವನ್ನು ನಾವು ದಿನಾಲೂ ಅನುಭವಿಸುತ್ತೇವೆ. ನಾವು ಈ ಒತ್ತಡಗಳಿಗೆ ಹೇಗೆ ಪ್ರತಿಕ್ರಿಯಿಸುತ್ತೇವೆ? ಎಫೆಸದಲ್ಲಿದ್ದ ನಂಬಿಗಸ್ತ ಕ್ರೈಸ್ತರಿಗೆ ಪತ್ರವನ್ನು ಬರೆಯುತ್ತಿದ್ದಾಗ, ಅಪೊಸ್ತಲ ಪೌಲನು ಅವರನ್ನು ಉತ್ತೇಜಿಸಿದ್ದು: “ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬುದನ್ನು ಪರಿಶೋಧಿಸಿ ತಿಳುಕೊಳ್ಳಿರಿ.” (ಎಫೆಸ 5:10) ಇದನ್ನು ಮಾಡುವುದರ ಪ್ರಯೋಜನವು, ಶಾಸ್ತ್ರವಚನಗಳಲ್ಲಿ ವರದಿಸಲ್ಪಟ್ಟಿರುವ ಅನೇಕ ಸನ್ನಿವೇಶಗಳಿಂದ ದೃಷ್ಟಾಂತಿಸಲ್ಪಟ್ಟಿದೆ.
12. ದಾವೀದನು ಮಂಜೂಷವನ್ನು ಯೆರೂಸಲೇಮಿಗೆ ರವಾನಿಸಿದಾಗ, ಯೆಹೋವನು ಏಕೆ ಅಪ್ರಸನ್ನನಾದನು?
12 ಮಂಜೂಷವು ಇಸ್ರಾಯೇಲಿಗೆ ತರಲ್ಪಟ್ಟು, ಕಿರ್ಯತ್ಯಾರೀಮಿನಲ್ಲಿ ಅನೇಕ ವರ್ಷಗಳ ವರೆಗೆ ಇಡಲ್ಪಟ್ಟ ಬಳಿಕ, ಅರಸನಾದ ದಾವೀದನು ಅದನ್ನು ಯೆರೂಸಲೇಮಿಗೆ ರವಾನಿಸಲು ಬಯಸಿದನು. ಅವನು ಗೋತ್ರಪ್ರಮುಖರನ್ನು ಸಂಪರ್ಕಿಸಿ, ‘ಅವರಿಗೆ ಒಳ್ಳೇದಾಗಿ ಕಂಡುಬರುವುದಾದರೆ ಮತ್ತು ಅದು ಯೆಹೋವನಿಗೆ ಸ್ವೀಕಾರಾರ್ಹವಾಗಿರುವುದಾದರೆ’ ಮಂಜೂಷವನ್ನು ಅಲ್ಲಿಂದ ಸ್ಥಳಾಂತರಿಸಬೇಕೆಂದು ಹೇಳಿದನು. ಆದರೆ ಈ ವಿಷಯದಲ್ಲಿ ಯೆಹೋವನ ಚಿತ್ತವೇನು ಎಂಬುದನ್ನು ವಿಚಾರಿಸಿ ತಿಳಿದುಕೊಳ್ಳಲು ಸಾಕಷ್ಟು ಪ್ರಯತ್ನವನ್ನು ಮಾಡಲು ಅವನು ತಪ್ಪಿಹೋದನು. ಅವನು ಹಾಗೆ ಮಾಡುತ್ತಿದ್ದಲ್ಲಿ, ಮಂಜೂಷವು ಎಂದೂ ಒಂದು ಕಮಾನುಬಂಡಿಗೆ ಏರಿಸಲ್ಪಡುತ್ತಿರಲಿಲ್ಲ. ಅದಕ್ಕೆ ಬದಲಾಗಿ, ದೇವರು ಸ್ಪಷ್ಟವಾಗಿ ಸೂಚನೆ ನೀಡಿದ್ದಂತೆಯೇ, ಕೆಹಾತ್ಯ ಲೇವಿಯರು ಅದನ್ನು ತಮ್ಮ ಹೆಗಲುಗಳ ಮೇಲೆ ಹೊತ್ತುಕೊಂಡುಹೋಗುತ್ತಿದ್ದರು. ದಾವೀದನು ಅನೇಕಬಾರಿ ಯೆಹೋವನ ಬಳಿ ವಿಚಾರಿಸಿದ್ದನಾದರೂ, ಈ ಸಂದರ್ಭದಲ್ಲಿ ಯೋಗ್ಯವಾದ ರೀತಿಯಲ್ಲಿ ಹಾಗೆ ಮಾಡಲು ತಪ್ಪಿಹೋಗಿದ್ದನು. ಇದರ ಫಲಿತಾಂಶ ವಿಪತ್ಕಾರಕವಾಗಿತ್ತು. ಸಮಯಾನಂತರ 1 ಪೂರ್ವಕಾಲವೃತ್ತಾಂತ 13:1-3; 15:11-13, NW; ಅರಣ್ಯಕಾಂಡ 4:4-6, 15; 7:1-9.
ದಾವೀದನು ಒಪ್ಪಿಕೊಂಡಿದ್ದು: “ಧರ್ಮವಿಧಿಗನುಸಾರ ನಾವು ಯೆಹೋವನ ಬಳಿ ವಿಚಾರಿಸದ ಕಾರಣ, ಆತನು ನಮ್ಮಲ್ಲಿ ಒಬ್ಬನನ್ನು ಸಂಹರಿಸಿದನು.”—13. ಮಂಜೂಷವು ಯಶಸ್ವಿಕರವಾಗಿ ಸ್ಥಳಾಂತರಿಸಲ್ಪಟ್ಟಾಗ ಹಾಡಲ್ಪಟ್ಟ ಒಂದು ಕೀರ್ತನೆಯಲ್ಲಿ, ಯಾವ ಜ್ಞಾಪನವು ಒಳಗೂಡಿತ್ತು?
13 ಕಟ್ಟಕಡೆಗೆ ಲೇವಿಯರು ಮಂಜೂಷವನ್ನು ಓಬೇದೆದೋಮನ ಮನೆಯಿಂದ ಯೆರೂಸಲೇಮಿಗೆ ಕೊಂಡೊಯ್ದಾಗ, ದಾವೀದನಿಂದ ರಚಿಸಲ್ಪಟ್ಟ ಒಂದು ಕೀರ್ತನೆಯು ಹಾಡಲ್ಪಟ್ಟಿತು. ಇದರಲ್ಲಿ ಹೃತ್ಪೂರ್ವಕವಾದ ಈ ಜ್ಞಾಪನವು ಒಳಗೂಡಿತ್ತು: “ಯೆಹೋವನನ್ನೂ ಆತನ ಬಲವನ್ನೂ ಆಶ್ರಯಿಸಿರಿ [“ಹುಡುಕಿರಿ,” NW]; ನಿತ್ಯವೂ ಆತನ ದರ್ಶನವನ್ನು ಅಪೇಕ್ಷಿಸಿರಿ. ಆತನ ಅದ್ಭುತಕೃತ್ಯ ಮಹತ್ಕಾರ್ಯ ನ್ಯಾಯ ನಿರ್ಣಯಗಳನ್ನು ನೆನಪುಮಾಡಿಕೊಳ್ಳಿರಿ.”—1 ಪೂರ್ವಕಾಲವೃತ್ತಾಂತ 16:11, 13.
14. ಸೊಲೊಮೋನನ ಒಳ್ಳೇ ಮಾದರಿಯಿಂದ ಮತ್ತು ಅವನ ಜೀವಿತದ ಅಂತಿಮ ವರ್ಷಗಳಲ್ಲಿ ಅವನು ಮಾಡಿದ ತಪ್ಪುಗಳಿಂದ ನಾವು ಹೇಗೆ ಪ್ರಯೋಜನಗಳನ್ನು ಪಡೆದುಕೊಳ್ಳಸಾಧ್ಯವಿದೆ?
14 ತನ್ನ ಮರಣಕ್ಕೆ ಮುಂಚೆ ದಾವೀದನು ತನ್ನ ಮಗನಾದ ಸೊಲೊಮೋನನಿಗೆ ಸಲಹೆ ನೀಡಿದ್ದು: “ನೀನು [ಯೆಹೋವನನ್ನು] ಹುಡುಕುವದಾದರೆ ಆತನು ನಿನಗೆ ಸಿಕ್ಕುವನು.” (1 ಪೂರ್ವಕಾಲವೃತ್ತಾಂತ 28:9) ಸೊಲೊಮೋನನು ರಾಜ್ಯಭಾರವನ್ನು ವಹಿಸಿಕೊಂಡ ಮೇಲೆ, ದೇವದರ್ಶನದ ಗುಡಾರವಿದ್ದ ಗಿಬ್ಯೋನಿಗೆ ಹೋಗಿ, ಯೆಹೋವನಿಗೆ ಯಜ್ಞವನ್ನು ಅರ್ಪಿಸಿದನು. ಅಲ್ಲಿ ಯೆಹೋವನು ಸೊಲೊಮೋನನಿಗೆ, “ನಿನಗೆ ಯಾವ ವರ ಬೇಕು, ಕೇಳಿಕೋ” ಎಂದು ಹೇಳಿದನು. ಸೊಲೊಮೋನನ ಬೇಡಿಕೆಗೆ ಪ್ರತ್ಯುತ್ತರವಾಗಿ, ಇಸ್ರಾಯೇಲ್ ಜನಾಂಗವನ್ನು ಪಾಲಿಸುವುದಕ್ಕೋಸ್ಕರ ಯೆಹೋವನು ಅವನಿಗೆ ಉದಾರವಾಗಿ ಜ್ಞಾನವಿವೇಕಗಳನ್ನು ಕೊಟ್ಟದ್ದಲ್ಲದೆ ಘನಧನೈಶ್ವರ್ಯಗಳನ್ನೂ ಅನುಗ್ರಹಿಸಿದನು. (2 ಪೂರ್ವಕಾಲವೃತ್ತಾಂತ 1:3-12) ಯೆಹೋವನು ದಾವೀದನಿಗೆ ಕೊಟ್ಟಿದ್ದ ನಕ್ಷೆಯನ್ನು ಉಪಯೋಗಿಸುತ್ತಾ ಸೊಲೊಮೋನನು ಒಂದು ಭವ್ಯವಾದ ದೇವಾಲಯವನ್ನು ಕಟ್ಟಿಸಿದನು. ಆದರೆ ತನ್ನ ಸ್ವಂತ ವೈವಾಹಿಕ ವಿಷಯಗಳಲ್ಲಿ ಸೊಲೊಮೋನನು ಯೆಹೋವನಿಗಾಗಿ ಹುಡುಕಲು ತಪ್ಪಿಹೋದನು. ಸೊಲೊಮೋನನು ಯೆಹೋವನ ಆರಾಧಕರಲ್ಲದ ಸ್ತ್ರೀಯರನ್ನು ಮದುವೆಮಾಡಿಕೊಂಡನು. ಅವನ ಅಂತಿಮ ವರ್ಷಗಳಲ್ಲಿ ಅವರು ಅವನ ಹೃದಯವನ್ನು ಯೆಹೋವನಿಂದ ವಿಮುಖಗೊಳಿಸಿದರು. (1 ಅರಸುಗಳು 11:1-10) ನಾವೆಷ್ಟೇ ಅಗ್ರಗಣ್ಯರು, ವಿವೇಕಿಗಳು, ಅಥವಾ ಜ್ಞಾನಿಗಳಾಗಿ ಕಂಡುಬರಬಹುದಾದರೂ, ‘ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬುದನ್ನು ಪರಿಶೋಧಿಸಿ ತಿಳುಕೊಳ್ಳುತ್ತಾ’ ಇರುವುದು ತುಂಬ ಪ್ರಾಮುಖ್ಯವಾದದ್ದಾಗಿದೆ!
15. ಕೂಷ್ಯನಾದ ಜೆರಹನು ಯೆಹೂದದ ಜನರಿಗೆ ವಿರುದ್ಧವಾಗಿ ಯುದ್ಧಕ್ಕೆ ಬಂದಾಗ, ಯೆಹೋವನು ಯೆಹೂದವನ್ನು ರಕ್ಷಿಸಸಾಧ್ಯವಾಗುವಂತೆ ಆಸನು ಏಕೆ ದೃಢಭರವಸೆಯಿಂದ ಪ್ರಾರ್ಥಿಸಲು ಶಕ್ತನಾದನು?
15 ಇದನ್ನು ಮಾಡುವುದರ ಆವಶ್ಯಕತೆಯು, ಸೊಲೊಮೋನನ ಮರಿಮಗನಾದ ಆಸನ ರಾಜ್ಯಭಾರದ ಕುರಿತಾದ ದಾಖಲೆಯಿಂದ ಇನ್ನಷ್ಟು ಒತ್ತಿಹೇಳಲ್ಪಟ್ಟಿತು. ಆಸನು ಅರಸನಾಗಿ ಹನ್ನೊಂದು ವರ್ಷಗಳು ಕಳೆದ ಬಳಿಕ, ಕೂಷ್ಯನಾದ ಜೆರಹನು ಹತ್ತು ಲಕ್ಷ ಸೈನಿಕರಿದ್ದ ಸೈನ್ಯದೊಂದಿಗೆ ಯೆಹೂದದ ಜನರಿಗೆ ವಿರುದ್ಧವಾಗಿ ಯುದ್ಧಮಾಡಲು ಬಂದನು. ಯೆಹೋವನು ಯೆಹೂದವನ್ನು ರಕ್ಷಿಸಲಿದ್ದನೋ? ಐನೂರಕ್ಕಿಂತಲೂ ಹೆಚ್ಚು ವರ್ಷಗಳ ಮುಂಚೆಯೇ, ತನ್ನ ಜನರು ತನಗೆ ಕಿವಿಗೊಡುವಲ್ಲಿ ಮತ್ತು ತನ್ನ ಆಜ್ಞೆಗಳನ್ನು ಪಾಲಿಸುವಲ್ಲಿ ಅವರು ಏನನ್ನು ನಿರೀಕ್ಷಿಸಸಾಧ್ಯವಿದೆ ಹಾಗೂ ಹಾಗೆ ಮಾಡದಿರುವಲ್ಲಿ ಅವರು ಏನನ್ನು ನಿರೀಕ್ಷಿಸಸಾಧ್ಯವಿದೆ ಎಂಬುದನ್ನು ಯೆಹೋವನು ಸ್ಪಷ್ಟವಾಗಿ ತಿಳಿಸಿದ್ದನು. (ಧರ್ಮೋಪದೇಶಕಾಂಡ 28:1, 7, 15, 25) ಆಸನ ಆಳ್ವಿಕೆಯ ಆರಂಭದಲ್ಲಿ, ಸುಳ್ಳು ಆರಾಧನೆಯಲ್ಲಿ ಉಪಯೋಗಿಸಲ್ಪಡುತ್ತಿದ್ದ ಯಜ್ಞವೇದಿಗಳನ್ನು ಮತ್ತು ಕಲ್ಲುಕಂಬಗಳನ್ನು ಇಡೀ ಸಾಮ್ರಾಜ್ಯದಿಂದ ನಿರ್ಮೂಲಮಾಡಿದನು. “ಯೆಹೋವನಿಗಾಗಿ ಹುಡುಕುವಂತೆ” (NW) ಅವನು ಜನರನ್ನು ಉತ್ತೇಜಿಸಿದನು. ಅರಸನಾದ ಆಸನು ಸಂಕಟಕರ ಪರಿಸ್ಥಿತಿಗೆ ಒಳಗಾಗುವುದಕ್ಕಿಂತ ಮುಂಚೆಯೇ ಇದನ್ನು ಮಾಡಿದ್ದನು. ಆದುದರಿಂದ, ಯೆಹೋವನಲ್ಲಿ ನಂಬಿಕೆಯಿಂದ ಆಸನು, ತನ್ನ ಜನರ ಪರವಾಗಿ ಕಾರ್ಯನಡಿಸುವಂತೆ ಆತನ ಬಳಿ ಪ್ರಾರ್ಥಿಸಲು ಶಕ್ತನಾದನು. ಇದರ ಫಲಿತಾಂಶವೇನು? ಯೆಹೂದಕ್ಕೆ ಗಮನಾರ್ಹ ರೀತಿಯಲ್ಲಿ ಜಯದೊರಕಿತು.—2 ಪೂರ್ವಕಾಲವೃತ್ತಾಂತ 14:2-12.
16, 17. (ಎ) ಆಸನು ವಿಜಯಿಯಾದರೂ, ಯೆಹೋವನು ಅವನಿಗೆ ಯಾವ ಮರುಜ್ಞಾಪನವನ್ನು ನೀಡಿದನು? (ಬಿ) ಆಸನು ಅವಿವೇಕಿಯಾಗಿ ವರ್ತಿಸಿದಾಗ ಅವನಿಗೆ ಯಾವ ಸಹಾಯವು ಕೊಡಲ್ಪಟ್ಟಿತು, ಆದರೆ ಅವನು ಹೇಗೆ ಪ್ರತಿಕ್ರಿಯಿಸಿದನು? (ಸಿ) ಆಸನ ನಡತೆಯನ್ನು ಪರಿಗಣಿಸುವ ಮೂಲಕ ನಾವು ಹೇಗೆ ಪ್ರಯೋಜನ ಪಡೆದುಕೊಳ್ಳಸಾಧ್ಯವಿದೆ?
16 ಆದರೂ, ಆಸನು ವಿಜಯಿಯಾಗಿ ಹಿಂದಿರುಗಿದಾಗ, ಅಜರ್ಯನು ಅವನನ್ನು ಸಂಧಿಸಿ ಹೀಗೆ ಹೇಳುವಂತೆ ಯೆಹೋವನು ಏರ್ಪಡಿಸಿದನು: “ಆಸನೇ, ಎಲ್ಲಾ ಯೆಹೂದ ಬೆನ್ಯಾಮೀನ್ ಕುಲಗಳವರೇ, ಕಿವಿಗೊಡಿರಿ. ನೀವು ಯೆಹೋವನನ್ನು ಹೊಂದಿಕೊಂಡಿರುವ ತನಕ ಆತನೂ ನಿಮ್ಮೊಂದಿಗಿರುವನು; ನೀವು ಆತನನ್ನು ಹುಡುಕಿದರೆ ನಿಮಗೆ ಸಿಕ್ಕುವನು; ಆತನನ್ನು ಬಿಟ್ಟರೆ ಆತನೂ ನಿಮ್ಮನ್ನು ಬಿಟ್ಟುಬಿಡುವನು.” (2 ಪೂರ್ವಕಾಲವೃತ್ತಾಂತ 15:2) ನವೋತ್ಸಾಹದಿಂದ ಆಸನು ಸತ್ಯಾರಾಧನೆಯನ್ನು ಉತ್ತೇಜಿಸಿದನು. ಆದರೆ 24 ವರ್ಷಗಳ ನಂತರ, ಪುನಃ ಯುದ್ಧವನ್ನು ಎದುರಿಸಿದಾಗ ಆಸನು ಯೆಹೋವನನ್ನು ಹುಡುಕಲು ತಪ್ಪಿಹೋದನು. ಅವನು ದೇವರ ವಾಕ್ಯವನ್ನು ಸಂಪರ್ಕಿಸಲಿಲ್ಲ, ಮತ್ತು ಕೂಷ್ಯ ಸೈನ್ಯವು ಯೆಹೂದದ ಮೇಲೆ ದಾಳಿಮಾಡಿದ್ದಾಗ ಯೆಹೋವನು ಏನು ಮಾಡಿದ್ದನು ಎಂಬುದನ್ನು ಜ್ಞಾಪಿಸಿಕೊಳ್ಳಲೂ ಇಲ್ಲ. ಮೂರ್ಖತನದಿಂದ ಅವನು ಅರಾಮ್ಯರೊಂದಿಗೆ ಮೈತ್ರಿಯನ್ನು ಬೆಳೆಸಿಕೊಂಡನು.—2 ಪೂರ್ವಕಾಲವೃತ್ತಾಂತ 16:1-6.
17 ಈ ಕಾರಣದಿಂದಲೇ ಯೆಹೋವನು ದರ್ಶಿಯಾದ ಹನಾನಿಯು ಆಸನಿಗೆ ತಿದ್ದುಪಾಟು ನೀಡುವಂತೆ ಮಾಡಿದನು. ಈ ಹಂತದಲ್ಲಿ, ವಿಷಯಗಳ ಕುರಿತಾದ ಯೆಹೋವನ ನೋಟವನ್ನು ವಿವರಿಸಿದಾಗ ಆಸನು ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿತ್ತು. ಆದರೆ ಅವನು ಅಸಮಾಧಾನಗೊಂಡನು ಮತ್ತು ಹನಾನಿಯನ್ನು ಸೆರೆಮನೆಯಲ್ಲಿರಿಸಿ ಕೋಳಹಾಕಿಸಿದನು. (2 ಪೂರ್ವಕಾಲವೃತ್ತಾಂತ 16:7-10) ಎಷ್ಟು ದುಃಖಕರ ಸಂಗತಿಯಿದು! ನಮ್ಮ ಕುರಿತಾಗಿ ಏನು? ನಾವು ದೇವರಿಗಾಗಿ ಹುಡುಕುತ್ತೇವಾದರೂ ಸಲಹೆಯನ್ನು ಸ್ವೀಕರಿಸಲು ನಿರಾಕರಿಸುತ್ತೇವೋ? ನಾವು ಲೋಕದ ಬಲೆಯಲ್ಲಿ ಸಿಕ್ಕಿಬೀಳುತ್ತಿರುವ ಕಾರಣ, ಹಿತಾಸಕ್ತಿಯುಳ್ಳ ಮತ್ತು ಕಾಳಜಿವಹಿಸುವಂಥ ಹಿರಿಯರೊಬ್ಬರು ನಮಗೆ ಸಲಹೆ ನೀಡಲಿಕ್ಕಾಗಿ ಬೈಬಲನ್ನು ಉಪಯೋಗಿಸುವಾಗ, “ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬುದನ್ನು” ಅರ್ಥಮಾಡಿಕೊಳ್ಳಲು ನಮಗೆ ಕೊಡಲ್ಪಡುವ ಪ್ರೀತಿಯ ಸಹಾಯಕ್ಕಾಗಿ ನಾವು ಗಣ್ಯತೆಯನ್ನು ತೋರಿಸುತ್ತೇವೋ?
ಯೆಹೋವನು ಎಲ್ಲಿ ಎಂದು ವಿಚಾರಿಸಲು ಮರೆಯದಿರಿ
18. ಯೋಬನಿಗೆ ಎಲೀಹು ನುಡಿದ ಮಾತುಗಳಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?
18 ಒತ್ತಡದ ಕೆಳಗಿರುವಾಗ, ಯೆಹೋವನ ಸೇವೆಯಲ್ಲಿ ಅತ್ಯುತ್ತಮ ದಾಖಲೆಯನ್ನು ಸ್ಥಾಪಿಸಿರುವ ವ್ಯಕ್ತಿಯು ಸಹ ಯೆಹೋವನ ಮೆಚ್ಚುಗೆಯನ್ನು ಪಡೆದುಕೊಳ್ಳಲು ತಪ್ಪಿಹೋಗಬಹುದು. ಯೋಬನು ಅಸಹ್ಯಕರವಾದ ಒಂದು ರೋಗದಿಂದ ಬಾಧಿಸಲ್ಪಟ್ಟಾಗ, ಅವನ ಮಕ್ಕಳನ್ನು ಹಾಗೂ ಭೌತಿಕ ಸಂಪತ್ತನ್ನು ಕಳೆದುಕೊಂಡಾಗ, ಮತ್ತು ಅವನ ಸಂಗಡಿಗರಿಂದ ಸುಳ್ಳಾರೋಪ ಹೊರಿಸಲ್ಪಟ್ಟಾಗ, ಅವನ ಸರ್ವ ಆಲೋಚನೆಗಳೂ ಸ್ವತಃ ಅವನ ಮೇಲೆ ಕೇಂದ್ರೀಕೃತವಾದವು. ಎಲೀಹು ಅವನಿಗೆ, “ನನ್ನ ಸೃಷ್ಟಿಕರ್ತನಾದ ದೇವರು ಎಲ್ಲಿ . . . ಎಂದು ಹೇಳಿಕೊಳ್ಳುವದೇ ಇಲ್ಲ” ಎಂದು ನೆನಪು ಹುಟ್ಟಿಸಿದನು. (ಯೋಬ 35:10, 11) ಯೋಬನು ತನ್ನ ಗಮನವನ್ನು ಯೆಹೋವನ ಮೇಲೆ ಕೇಂದ್ರೀಕರಿಸುವ ಹಾಗೂ ಆತನು ಸನ್ನಿವೇಶವನ್ನು ಹೇಗೆ ಪರಿಗಣಿಸುತ್ತಾನೆ ಎಂಬುದನ್ನು ಪರ್ಯಾಲೋಚಿಸುವ ಆವಶ್ಯಕತೆಯಿತ್ತು. ಯೋಬನು ದೀನಭಾವದಿಂದ ಆ ಮರುಜ್ಞಾಪನವನ್ನು ಅಂಗೀಕರಿಸಿದನು, ಮತ್ತು ನಾವು ಸಹ ಹಾಗೆ ಮಾಡುವಂತೆ ಅವನ ಮಾದರಿಯು ನಮಗೆ ಸಹಾಯಮಾಡಬಲ್ಲದು.
19. ಇಸ್ರಾಯೇಲ್ಯರು ಅನೇಕಬಾರಿ ಏನು ಮಾಡಲು ತಪ್ಪಿಹೋದರು?
19 ತಮ್ಮ ಜನಾಂಗದೊಂದಿಗೆ ದೇವರು ವ್ಯವಹರಿಸಿದ ವಿಷಯಗಳ ಕುರಿತಾದ ದಾಖಲೆಯನ್ನು ಇಸ್ರಾಯೇಲ್ಯರು ಚೆನ್ನಾಗಿ ತಿಳಿದಿದ್ದರು. ಆದರೂ, ಅವರೊಂದಿಗಿನ ದೇವರ ಗತ ವ್ಯವಹಾರಗಳನ್ನು ಅವರು ಮನಸ್ಸಿಗೆ ತಂದುಕೊಳ್ಳಲಿಲ್ಲ. (ಯೆರೆಮೀಯ 2:5, 6, 8) ಜೀವನದಲ್ಲಿ ನಿರ್ಣಯಗಳನ್ನು ಮಾಡಬೇಕಾಗಿರುವಾಗ, “ಯೆಹೋವನು ಎಲ್ಲಿ”? ಎಂದು ವಿಚಾರಿಸುವುದಕ್ಕೆ ಬದಲಾಗಿ ತಮ್ಮ ಸ್ವಂತ ಸುಖಭೋಗವನ್ನೇ ಅವರು ಬೆನ್ನಟ್ಟಿದರು.—ಯೆಶಾಯ 5:11, 12.
“ಯೆಹೋವನು ಎಲ್ಲಿ” ಎಂದು ಕೇಳುತ್ತಾ ಇರಿ
20, 21. (ಎ) ಯೆಹೋವನ ಮಾರ್ಗದರ್ಶನವನ್ನು ಪಡೆದುಕೊಳ್ಳಲು ಪ್ರಯತ್ನಿಸುವುದರಲ್ಲಿ ಇಂದು ಯಾರು ಎಲೀಷನ ಆತ್ಮವನ್ನು ತೋರಿಸಿದ್ದಾರೆ? (ಬಿ) ಅವರ ನಂಬಿಕೆಯ ಮಾದರಿಯನ್ನು ನಾವು ಹೇಗೆ ಅನುಕರಿಸಸಾಧ್ಯವಿದೆ ಮತ್ತು ಅದರಿಂದ ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?
20 ಎಲೀಯನ ಸಾರ್ವಜನಿಕ ಶುಶ್ರೂಷೆಯು ಕೊನೆಗೊಂಡಾಗ, ಅವನ ಸೇವಕನಾದ ಎಲೀಷನು ಮೇಲಣಿಂದ ಬಿದ್ದ ಎಲೀಯನ ಕಂಬಳಿಯನ್ನು ತೆಗೆದುಕೊಂಡು, ಯೋರ್ದನ್ ನದಿಯ ಬಳಿಗೆ ಹೋಗಿ ಕಂಬಳಿಯಿಂದ ನೀರನ್ನು ಹೊಡೆಯುತ್ತಾ ಕೇಳಿದ್ದು: “ಎಲೀಯನ ದೇವರಾದ ಯೆಹೋವನೆಲ್ಲಿ?” (2 ಅರಸುಗಳು 2:13, 14) ಈಗ ತನ್ನ ಆತ್ಮವು ಎಲೀಷನ ಮೇಲಿದೆ ಎಂಬುದನ್ನು ತೋರಿಸುವ ಮೂಲಕ ಯೆಹೋವನು ಅವನಿಗೆ ಉತ್ತರಿಸಿದನು. ಇದರಿಂದ ನಾವು ಯಾವ ಪಾಠವನ್ನು ಕಲಿಯಸಾಧ್ಯವಿದೆ?
21 ತುಲನಾತ್ಮಕವಾದ ಅಂಥದ್ದೇ ಸಂಗತಿಯು ಆಧುನಿಕ ಸಮಯಗಳಲ್ಲಿಯೂ ನಡೆಯಿತು. ಸಾರುವ ಕೆಲಸದಲ್ಲಿ ನಾಯಕತ್ವವನ್ನು ವಹಿಸಿದ್ದ ಇಬ್ರಿಯ 13:7) ಹಾಗಿರುವಲ್ಲಿ, ನಾವು ಯೆಹೋವನ ಸಂಸ್ಥೆಗೆ ನಿಕಟವಾಗಿ ಉಳಿಯುವೆವು, ಅದರ ಮಾರ್ಗದರ್ಶನಕ್ಕೆ ಪ್ರತಿಕ್ರಿಯಿಸುವೆವು, ಮತ್ತು ಅದು ಯೇಸು ಕ್ರಿಸ್ತನ ಮಾರ್ಗದರ್ಶನದ ಕೆಳಗೆ ಮಾಡುತ್ತಿರುವ ಕೆಲಸದಲ್ಲಿ ಪೂರ್ಣವಾಗಿ ಭಾಗವಹಿಸುವೆವು.—ಜೆಕರ್ಯ 8:23.
ಅಭಿಷಿಕ್ತ ಕ್ರೈಸ್ತರಲ್ಲಿ ಕೆಲವರು ಮೃತಪಟ್ಟರು. ಆ ಸಮಯದಲ್ಲಿ ಮೇಲ್ವಿಚಾರಣೆಯನ್ನು ವಹಿಸಿಕೊಂಡಿದ್ದವರು ಶಾಸ್ತ್ರವಚನಗಳನ್ನು ಪರೀಕ್ಷಿಸಿದರು ಮತ್ತು ಮಾರ್ಗದರ್ಶನಕ್ಕಾಗಿ ಯೆಹೋವನ ಬಳಿ ಪ್ರಾರ್ಥಿಸಿದರು. “ಯೆಹೋವನು ಎಲ್ಲಿ” ಎಂದು ಕೇಳಲು ಅವರು ತಪ್ಪಿಹೋಗಲಿಲ್ಲ. ಇದರ ಫಲಿತಾಂಶವಾಗಿ, ಯೆಹೋವನು ತನ್ನ ಜನರನ್ನು ಪ್ರಗತಿಪರವಾಗಿ ಮುನ್ನಡೆಸುತ್ತಾ ಇದ್ದಾನೆ ಹಾಗೂ ಅವರ ಚಟುವಟಿಕೆಯನ್ನು ಸಂಪದ್ಭರಿತವಾದದ್ದಾಗಿ ಮಾಡುತ್ತಿದ್ದಾನೆ. ನಾವು ಸಹ ಅವರ ನಂಬಿಕೆಯನ್ನು ಅನುಕರಿಸುತ್ತೇವೋ? (ನೀವು ಹೇಗೆ ಉತ್ತರಿಸುವಿರಿ?
• ಯಾವ ಉದ್ದೇಶದಿಂದ ನಾವು “ಯೆಹೋವನು ಎಲ್ಲಿ” ಎಂದು ಕೇಳುತ್ತಿರಬೇಕು?
• “ಯೆಹೋವನು ಎಲ್ಲಿ” ಎಂಬ ಪ್ರಶ್ನೆಗೆ ನಾವಿಂದು ಹೇಗೆ ಉತ್ತರವನ್ನು ಕಂಡುಕೊಳ್ಳಸಾಧ್ಯವಿದೆ?
• ಮಾರ್ಗದರ್ಶನಕ್ಕಾಗಿ ದೇವರಿಗೆ ಮಾಡಲ್ಪಡುವ ಕೆಲವು ಪ್ರಾರ್ಥನೆಗಳು ಏಕೆ ಉತ್ತರಿಸಲ್ಪಡುವುದಿಲ್ಲ?
• ‘ಕರ್ತನಿಗೆ ಮೆಚ್ಚಿಗೆಯಾದದ್ದು ಏನೆಂಬುದನ್ನು ಪರಿಶೋಧಿಸಿ ತಿಳುಕೊಳ್ಳುತ್ತಾ’ ಇರುವುದರ ಆವಶ್ಯಕತೆಯನ್ನು ಯಾವ ಬೈಬಲ್ ಉದಾಹರಣೆಗಳು ದೃಷ್ಟಾಂತಿಸುತ್ತವೆ?
[ಅಧ್ಯಯನ ಪ್ರಶ್ನೆಗಳು]
[ಪುಟ 9ರಲ್ಲಿರುವ ಚಿತ್ರ]
ರಾಜನಾಗಿದ್ದ ಯೆಹೋಷಾಫಾಟನು ಹೇಗೆ ಯೆಹೋವನಿಗಾಗಿ ಹುಡುಕಿದನು?
[ಪುಟ 10ರಲ್ಲಿರುವ ಚಿತ್ರ]
ಸೌಲನು ಏಕೆ ಪ್ರೇತಮಾಧ್ಯಮವನ್ನು ಸಂಪರ್ಕಿಸಿದನು?
[ಪುಟ 12ರಲ್ಲಿರುವ ಚಿತ್ರಗಳು]
“ಯೆಹೋವನು ಎಲ್ಲಿ” ಎಂಬುದನ್ನು ವಿಚಾರಿಸಲಿಕ್ಕಾಗಿ ಪ್ರಾರ್ಥಿಸಿರಿ, ಅಧ್ಯಯನ ಮಾಡಿರಿ ಮತ್ತು ಮನನಮಾಡಿರಿ