ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂದು ಮತ್ತು ಇಂದು ಮಬ್ಬಾದ ಗತಕಾಲ, ಪ್ರಕಾಶಮಾನವಾದ ಭವಿಷ್ಯತ್ತು

ಅಂದು ಮತ್ತು ಇಂದು ಮಬ್ಬಾದ ಗತಕಾಲ, ಪ್ರಕಾಶಮಾನವಾದ ಭವಿಷ್ಯತ್ತು

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”

ಅಂದು ಮತ್ತು ಇಂದು ಮಬ್ಬಾದ ಗತಕಾಲ, ಪ್ರಕಾಶಮಾನವಾದ ಭವಿಷ್ಯತ್ತು

“ದೇವರ ವಾಕ್ಯವು ಸಜೀವವಾದದ್ದು, ಕಾರ್ಯಸಾಧಕವಾದದ್ದು, ಯಾವ ಇಬ್ಬಾಯಿಕತ್ತಿಗಿಂತಲೂ ಹದವಾದದ್ದು, . . . ಹೃದಯದ ಆಲೋಚನೆಗಳನ್ನೂ ಉದ್ದೇಶಗಳನ್ನೂ ವಿವೇಚಿಸುವಂಥದು ಆಗಿದೆ.” (ಇಬ್ರಿಯ 4:​12) ದೇವರ ಸಂದೇಶಕ್ಕಿರುವ ಛೇದಿಸುವ ಶಕ್ತಿಯ ಕುರಿತು ಪೌಲನು ಈ ರೀತಿ ತಿಳಿಸಿದನು. ಹೃದಯವನ್ನು ತಾಕುವ ಇದರ ಸಾಮರ್ಥ್ಯವು, ವಿಶೇಷವಾಗಿ ಸಾಮಾನ್ಯ ಶಕದ ಪ್ರಥಮ ಶತಮಾನದಲ್ಲಿ ವ್ಯಕ್ತವಾಯಿತು. ಆ ಸಮಯದಲ್ಲಿದ್ದ ಅಹಿತಕರವಾದ ಪ್ರಭಾವದ ಹೊರತಾಗಿಯೂ, ಕ್ರೈಸ್ತರಾಗಿದ್ದವರು ಹೊಸ ವ್ಯಕ್ತಿತ್ವವನ್ನು ಧರಿಸಿಕೊಂಡರು.​—ರೋಮಾಪುರ 1:​28, 29; ಕೊಲೊಸ್ಸೆ 3:​8-10.

ಬೈಬಲಿನಲ್ಲಿ ದಾಖಲಿಸಲ್ಪಟ್ಟಿರುವಂತೆ, ದೇವರ ವಾಕ್ಯಕ್ಕಿರುವ ಪರಿವರ್ತಿಸುವ ಶಕ್ತಿಯು ಇಂದು ಸುವ್ಯಕ್ತವಾಗಿದೆ. ಉದಾಹರಣೆಗೆ, ದೃಢಕಾಯನೂ ಬಲಿಷ್ಠನೂ ಆಗಿರುವ ರಿಕಾರ್ಟ್‌ನನ್ನು ಪರಿಗಣಿಸಿರಿ. ಮುಂಗೋಪಿಯಾಗಿದ್ದ ಕಾರಣ, ರಿಕಾರ್ಟ್‌ ಪ್ರತಿಯೊಂದು ಸಣ್ಣ ರೇಗಿಸುವಿಕೆಗೂ ಹೊಡೆದಾಡುತ್ತಿದ್ದನು. ಅವನ ಜೀವಿತವು ಹಿಂಸಾಚಾರದಿಂದ ಪ್ರತಿಕೂಲವಾಗಿ ಪ್ರಭಾವಿಸಲ್ಪಟ್ಟಿತ್ತು. ರಿಕಾರ್ಟ್‌ ಒಂದು ಬಾಕ್ಸಿಂಗ್‌ ಕ್ಲಬ್‌ ಅನ್ನು ಸಹ ಸೇರಿದನು. ಅವನು ಶ್ರದ್ಧೆಯಿಂದ ಈ ಕೌಶಲವನ್ನು ಕಲಿತನು ಮತ್ತು ಜರ್ಮನಿಯ ವೆಸ್ಟ್‌ಫೇಲ್ಯದ ಹೆವಿವೆಯ್ಟ್‌ ಬಾಕ್ಸಿಂಗ್‌ ಚ್ಯಾಂಪಿಯನ್‌ ಆದನು. ರಿಕಾರ್ಟ್‌ ಬಹಳಷ್ಟು ಮದ್ಯವನ್ನು ಸೇವಿಸತೊಡಗಿದನು ಮತ್ತು ಆಗಾಗ್ಗೆ ಹೊಡೆದಾಡುತ್ತಿದ್ದನು. ಒಮ್ಮೆ ಇಂಥ ಹೊಡೆದಾಟದ ಸಮಯದಲ್ಲಿ ಒಬ್ಬ ವ್ಯಕ್ತಿಯು ಕೊಲ್ಲಲ್ಪಟ್ಟನು ಮತ್ತು ಇದರಿಂದ ಇನ್ನೇನು ಸೆರೆವಾಸಕ್ಕೆ ಹಾಕಲ್ಪಡುವ ಸ್ಥಿತಿಯನ್ನು ತಲಪಿದನು.

ರಿಕಾರ್ಟ್‌ನ ವೈವಾಹಿಕ ಜೀವನದ ಕುರಿತಾಗಿ ಏನು? ರಿಕಾರ್ಟ್‌ ತಿಳಿಸುವುದು: “ಬೈಬಲನ್ನು ಅಧ್ಯಯನ ಮಾಡುವ ಮೊದಲು ನಾನು ಮತ್ತು ಹೈಕ, ನಮಗಿಷ್ಟ ಬಂದ ವಿಷಯವನ್ನು ಮಾಡುತ್ತಾ ಸ್ವತಂತ್ರ ಜೀವನ ಶೈಲಿಯನ್ನು ಅನುಸರಿಸುತ್ತಿದ್ದೆವು. ಹೈಕಳು ಹೆಚ್ಚಿನ ಸಮಯವನ್ನು ತನ್ನ ಸ್ನೇಹಿತೆಯರೊಂದಿಗೆ ಕಳೆಯುತ್ತಿದ್ದಾಗ, ನಾನು ಹೆಚ್ಚಿನ ಸಮಯವನ್ನು ಬಾಕ್ಸಿಂಗ್‌, ತೆರೆನೊರೆ ಸವಾರಿ (ಸರ್ಫಿಂಗ್‌), ಮತ್ತು ಡೈವಿಂಗ್‌ನಂತಹ ಹವ್ಯಾಸಗಳಲ್ಲಿ ಕಳೆಯುತ್ತಿದ್ದೆ.”

ಯೆಹೋವನ ಸಾಕ್ಷಿಗಳೊಂದಿಗೆ ರಿಕಾರ್ಟ್‌ ಮತ್ತು ಹೈಕ ಬೈಬಲನ್ನು ಅಧ್ಯಯನ ಮಾಡಲು ಆರಂಭಿಸಿದಾಗ, ತನ್ನ ಜೀವಿತವನ್ನು ದೇವರ ವಾಕ್ಯದ ಉನ್ನತ ಮಟ್ಟಗಳಿಗನುಸಾರ ಹೊಂದಿಸಿಕೊಳ್ಳಲಿಕ್ಕಾಗಿ ತಾನು ಮಾಡಬೇಕಾಗಿರುವ ಅಸಾಧ್ಯವೆಂದು ತೋರುವ ಬದಲಾವಣೆಗಳ ಕುರಿತಾದ ಆಲೋಚನೆಯೇ ರಿಕಾರ್ಟ್‌ನನ್ನು ಕಂಗೆಡಿಸಿತು. ಹಾಗಿದ್ದರೂ, ಯೆಹೋವ ದೇವರನ್ನು ಉತ್ತಮವಾಗಿ ತಿಳಿಯುತ್ತಾ ಹೋದಂತೆ, ಆತನನ್ನು ಮೆಚ್ಚಿಸಬೇಕೆಂಬ ಆಳವಾದ ಬಯಕೆಯು ರಿಕಾರ್ಟ್‌ನಲ್ಲಿ ಉಂಟಾಯಿತು. ಹಿಂಸಾಚಾರವನ್ನು ಪ್ರೀತಿಸುವವರನ್ನು ಅಥವಾ ಅದನ್ನು ಒಂದು ವಿನೋದವಾಗಿ ಉಪಯೋಗಿಸುವವರನ್ನು ಯೆಹೋವನು ಮೆಚ್ಚುವುದಿಲ್ಲ ಎಂಬುದನ್ನು ರಿಕಾರ್ಟ್‌ ಅರಿತುಕೊಂಡನು. “ಹಿಂಸಾಚಾರವನ್ನು ಪ್ರೀತಿಸುವವರನ್ನು [ಯೆಹೋವನು] ದ್ವೇಷಿಸುತ್ತಾನೆ,” ಎಂಬುದನ್ನು ರಿಕಾರ್ಟ್‌ ಕಲಿತುಕೊಂಡನು.​—ಕೀರ್ತನೆ 11:​5, NW.

ಅಷ್ಟುಮಾತ್ರವಲ್ಲದೆ, ಈ ಭೂಮಿಯ ಮೇಲೆ ಪರದೈಸಿನಲ್ಲಿ ಸದಾ ಜೀವಿಸುವ ನಿರೀಕ್ಷೆಯು ರಿಕಾರ್ಟ್‌ ಮತ್ತು ಹೈಕ ಇವರಿಬ್ಬರನ್ನೂ ಬಹಳ ಆಕರ್ಷಿಸಿತು. ಅವರು ಒಟ್ಟಾಗಿ ಪ್ರಮೋದವನದಲ್ಲಿ ಜೀವಿಸಲು ಬಯಸಿದರು! (ಯೆಶಾಯ 65:​21-23) “ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು” ಎಂಬ ಆಮಂತ್ರಣವು ರಿಕಾರ್ಟ್‌ನನ್ನು ಆಳವಾಗಿ ಪ್ರಭಾವಿಸಿತು. (ಯಾಕೋಬ 4:8) “ಬಲಾತ್ಕಾರಿಯನ್ನು ನೋಡಿ ಹೊಟ್ಟೆಕಿಚ್ಚುಪಡದಿರು, ಅವನ ನಡತೆಯನ್ನು ಎಷ್ಟು ಮಾತ್ರಕ್ಕೂ ಅನುಸರಿಸಬೇಡ. ವಕ್ರಬುದ್ಧಿಯವನು ಯೆಹೋವನಿಗೆ ಅಸಹ್ಯನು, ಯಥಾರ್ಥರಿಗೆ ಆತನ ಸ್ನೇಹವು ದೊರೆಯುವದು” ಎಂಬ ದೈವಪ್ರೇರಿತ ಬುದ್ಧಿವಾದಕ್ಕೆ ಕಿವಿಗೊಡುವುದರ ಮೌಲ್ಯವನ್ನು ಅವನು ಅರಿತುಕೊಂಡನು.​—ಜ್ಞಾನೋಕ್ತಿ 3:​31, 32.

ತನ್ನ ಜೀವನ ರೀತಿಯಲ್ಲಿ ಬದಲಾವಣೆಯನ್ನು ಮಾಡಬೇಕೆಂಬ ಆಳವಾದ ಬಯಕೆಯಿದ್ದರೂ, ಅದನ್ನು ತನ್ನ ಸ್ವಂತ ಶಕ್ತಿಯಿಂದ ಮಾಡಲಾರೆನೆಂಬುದನ್ನು ರಿಕಾರ್ಟ್‌ ತಿಳಿದುಕೊಂಡನು. ಅವನು ಪ್ರಾರ್ಥನೆಯಲ್ಲಿ ದೇವರ ಸಹಾಯಕ್ಕಾಗಿ ಬೇಡಿಕೊಳ್ಳುವ ಅಗತ್ಯವನ್ನು ಮನಗಂಡನು. ಆದುದರಿಂದ, “ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ; ಮನಸ್ಸು ಸಿದ್ಧವಾಗಿದೆ ಸರಿ, ಆದರೆ ದೇಹಕ್ಕೆ ಬಲ ಸಾಲದು” ಎಂಬುದಾಗಿ ಯೇಸು ತನ್ನ ಶಿಷ್ಯರಿಗೆ ಹೇಳಿದ ಮಾತುಗಳಿಗನುಸಾರ ಅವನು ಕ್ರಿಯೆಗೈದನು.​—ಮತ್ತಾಯ 26:​41.

ಹಿಂಸಾಚಾರ ಮತ್ತು ಸಿಟ್ಟನ್ನು ದೇವರು ಯಾವ ರೀತಿಯಲ್ಲಿ ವೀಕ್ಷಿಸುತ್ತಾನೆ ಎಂಬುದನ್ನು ಕಲಿತುಕೊಂಡ ನಂತರ, ಬಾಕ್ಸಿಂಗ್‌ ಖಂಡಿತವಾಗಿಯೂ ದೇವರಿಗೆ ಮೆಚ್ಚಿಕೆಯಾಗದಿರುವ ಕ್ರೀಡೆಯಾಗಿದೆ ಎಂಬುದು ರಿಕಾರ್ಟ್‌ಗೆ ಸ್ಪಷ್ಟವಾಯಿತು. ಯೆಹೋವನ ಸಹಾಯದಿಂದ ಮತ್ತು ಅವನೊಂದಿಗೆ ಬೈಬಲನ್ನು ಅಧ್ಯಯನ ಮಾಡುತ್ತಿದ್ದವರ ಉತ್ತೇಜನದಿಂದ, ರಿಕಾರ್ಟ್‌ ಹಿಂಸಾಚಾರದಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದನು. ಬಾಕ್ಸಿಂಗ್‌ ಮತ್ತು ಜಗಳವಾಡುವುದನ್ನು ನಿಲ್ಲಿಸಿದನು ಹಾಗೂ ತನ್ನ ಕುಟುಂಬ ಜೀವನವನ್ನು ಉತ್ತಮಗೊಳಿಸಲು ನಿರ್ಧರಿಸಿದನು. ಈಗ ಯೆಹೋವನ ಸಾಕ್ಷಿಗಳ ಸಭೆಯಲ್ಲಿ ಮೇಲ್ವಿಚಾರಕನಾಗಿ ಸೇವೆಸಲ್ಲಿಸುತ್ತಿರುವ, ಸೌಮ್ಯಭಾವದವನಾಗಿರುವ ರಿಕಾರ್ಟ್‌ ಹೇಳುವುದು; “ಬೈಬಲಿನಿಂದ ಸತ್ಯವನ್ನು ಕಲಿತುಕೊಂಡದ್ದು, ನಾನು ಯಾವುದೇ ಕೆಲಸವನ್ನು ಮಾಡುವುದಕ್ಕೆ ಮುಂಚೆ ತುಸು ಯೋಚಿಸುವಂತೆ ನನಗೆ ಸಹಾಯಮಾಡಿದೆ.” ಅವನು ಕೂಡಿಸುವುದು: “ಹೆಂಡತಿ ಮತ್ತು ಮಕ್ಕಳೊಂದಿಗಿನ ನನ್ನ ಸಂಬಂಧವನ್ನು, ಪ್ರೀತಿ ಮತ್ತು ಗೌರವದ ಮೂಲತತ್ತ್ವವು ಈಗ ಮಾರ್ಗದರ್ಶಿಸುತ್ತದೆ. ಫಲಿತಾಂಶವಾಗಿ, ನಮ್ಮ ಕುಟುಂಬವು ಒಟ್ಟುಗೂಡಿಸಲ್ಪಟ್ಟಿದೆ.”

ತಪ್ಪಾದ ಮಾಹಿತಿಯನ್ನು ಪಡೆದುಕೊಂಡಿರುವ ಜನರು ಕೆಲವೊಮ್ಮೆ ಯೆಹೋವನ ಸಾಕ್ಷಿಗಳನ್ನು, ಕುಟುಂಬಗಳನ್ನು ಹಾಳುಮಾಡುವವರು ಎಂಬುದಾಗಿ ಆಪಾದಿಸುತ್ತಾರೆ. ಹಾಗಿದ್ದರೂ, ರಿಕಾರ್ಟ್‌ನಂತಹ ವ್ಯಕ್ತಿಗಳ ಉದಾಹರಣೆಯು ಈ ಆಪಾದನೆಯು ತಪ್ಪಾಗಿದೆಯೆಂದು ರುಜುಪಡಿಸುತ್ತದೆ. ವಾಸ್ತವದಲ್ಲಿ, ಬೈಬಲಿನ ಸತ್ಯವು ಗೃಹಜೀವನದಲ್ಲಿ ಸ್ಥಿರತೆಯನ್ನೂ, ಮಬ್ಬಾದ ಗತಕಾಲವಿದ್ದ ಜನರಿಗೆ ಪ್ರಕಾಶಮಾನವಾದ ಭವಿಷ್ಯತ್ತನ್ನೂ ನೀಡಬಲ್ಲದು.​—ಯೆರೆಮೀಯ 29:​11.

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಭೂಪರದೈಸಿನ ನಿರೀಕ್ಷೆಯು, ಬದಲಾವಣೆಯನ್ನು ಮಾಡುವಂತೆ ನನ್ನನ್ನು ಪ್ರಚೋದಿಸಿತು”

[ಪುಟ 9ರಲ್ಲಿರುವ ಚೌಕ]

ಕಾರ್ಯರೂಪದಲ್ಲಿರುವ ಬೈಬಲಿನ ಮೂಲತತ್ತ್ವಗಳು

ಜನರ ಜೀವಿತದಲ್ಲಿ ಬೈಬಲು ಶಕ್ತಿಯುತವಾದ ಪ್ರಭಾವವನ್ನು ಬೀರಬಲ್ಲದು. ಹಿಂಸಾತ್ಮಕ ವ್ಯಕ್ತಿಗಳನ್ನು ಬದಲಾಯಿಸಿದ ಕೆಲವೊಂದು ಶಾಸ್ತ್ರೀಯ ಮೂಲತತ್ತ್ವಗಳು ಇಲ್ಲಿವೆ:

“ದೀರ್ಘಶಾಂತನು ಶೂರನಿಗಿಂತಲೂ ಶ್ರೇಷ್ಠ; ತನ್ನನ್ನು ಆಳುವವನು ಪಟ್ಟಣವನ್ನು ಗೆದ್ದವನಿಗಿಂತಲೂ ಬಲಿಷ್ಠ.” (ಜ್ಞಾನೋಕ್ತಿ 16:32) ಅನಿಯಂತ್ರಿತ ಕೋಪವು, ಬಲದ ಸೂಚನೆಯಲ್ಲ ಬದಲಾಗಿ ಬಲಹೀನತೆಯ ಸೂಚನೆಯಾಗಿದೆ.

“ಮನುಷ್ಯನ ವಿವೇಕವು ಅವನ ಸಿಟ್ಟಿಗೆ ಅಡ್ಡಿ.” (ಜ್ಞಾನೋಕ್ತಿ 19:11) ಸನ್ನಿವೇಶದ ಕುರಿತಾಗಿ ವಿವೇಕ ಮತ್ತು ತಿಳಿವಳಿಕೆಯನ್ನು ಹೊಂದಿರುವುದು, ಪ್ರತಿಭಟನೆಗೆ ಇರಬಹುದಾದ ಬಾಹ್ಯ ಕಾರಣಕ್ಕಿಂತಲೂ ಹೆಚ್ಚಾಗಿ ಆಂತರಿಕ ಕಾರಣವನ್ನು ತಿಳಿದುಕೊಳ್ಳುವಂತೆ ಒಬ್ಬ ವ್ಯಕ್ತಿಗೆ ಸಹಾಯಮಾಡುತ್ತದೆ ಮತ್ತು ಅದು ಅವನನ್ನು ಥಟ್ಟನೆ ಸಿಟ್ಟುಗೊಳ್ಳದಂತೆ ತಡೆಯುತ್ತದೆ.

‘ಸಿಟ್ಟುಗಾರನ ಸಹವಾಸ ಮಾಡಬೇಡ. ಮಾಡಿದರೆ ಒಂದುವೇಳೆ ಅವನ ದುರ್ನಡತೆಯನ್ನನುಸರಿಸುವಿ.’ (ಜ್ಞಾನೋಕ್ತಿ 22:24, 25) ಕ್ರೈಸ್ತರು ಕೋಪಿಷ್ಠರ ಸಂಗಡ ಸಹವಾಸಮಾಡದಿರುವುದು ವಿವೇಕಯುತವಾದದ್ದಾಗಿದೆ.