ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕ್ರಿಸ್ತನು ಸಭೆಗಳಿಗೆ ಮಾತಾಡುತ್ತಾನೆ

ಕ್ರಿಸ್ತನು ಸಭೆಗಳಿಗೆ ಮಾತಾಡುತ್ತಾನೆ

ಕ್ರಿಸ್ತನು ಸಭೆಗಳಿಗೆ ಮಾತಾಡುತ್ತಾನೆ

‘ಏಳು ನಕ್ಷತ್ರಗಳನ್ನು ಬಲಗೈಯಲ್ಲಿ ಹಿಡುಕೊಂಡು ಏಳು ಚಿನ್ನದ ದೀಪಸ್ತಂಭಗಳ ಮಧ್ಯದಲ್ಲಿ ತಿರುಗಾಡುವಾತನು ಹೇಳುವದು.’​—ಪ್ರಕಟನೆ 2:1.

1, 2. ಏಷ್ಯಾ ಮೈನರ್‌ನಲ್ಲಿದ್ದ ಏಳು ಸಭೆಗಳಿಗೆ ಕ್ರಿಸ್ತನು ಹೇಳಿದ ವಿಷಯಗಳಲ್ಲಿ ನಾವೇಕೆ ಆಸಕ್ತರಾಗಿರಬೇಕು?

ಯೆಹೋವನ ಏಕಜಾತ ಪುತ್ರನಾದ ಯೇಸು ಕ್ರಿಸ್ತನು ಕ್ರೈಸ್ತ ಸಭೆಯ ತಲೆಯಾಗಿದ್ದಾನೆ. ತನ್ನ ಅಭಿಷಿಕ್ತ ಹಿಂಬಾಲಕರ ಈ ಸಭೆಯನ್ನು ಕಳಂಕರಹಿತವಾಗಿರಿಸಲು, ಅವರನ್ನು ಶ್ಲಾಘಿಸಿ, ತಿದ್ದುವ ಮೂಲಕ ಕ್ರಿಸ್ತನು ತನ್ನ ತಲೆತನವನ್ನು ನಿರ್ವಹಿಸುತ್ತಾನೆ. (ಎಫೆಸ 5:​21-27) ಅವನಿದನ್ನು ಮಾಡಿರುವ ಉದಾಹರಣೆಗಳು, ಪ್ರಕಟನೆ 2 ಮತ್ತು 3ನೆಯ ಅಧ್ಯಾಯಗಳಲ್ಲಿವೆ. ಈ ಅಧ್ಯಾಯಗಳಲ್ಲಿ ಯೇಸು ಏಷ್ಯಾ ಮೈನರ್‌ನಲ್ಲಿದ್ದ ಏಳು ಸಭೆಗಳಿಗೆ ನಿರ್ದೇಶಿಸಿದಂಥ ಪ್ರಬಲವಾದ ಹಾಗೂ ಪ್ರೀತಿಭರಿತ ಸಂದೇಶಗಳನ್ನು ನಾವು ಓದಬಹುದು.

2 ಅಪೊಸ್ತಲ ಯೋಹಾನನು ಆ ಏಳು ಸಭೆಗಳಿಗೆ ಯೇಸು ನುಡಿದಂಥ ಮಾತುಗಳನ್ನು ಕೇಳಿಸಿಕೊಳ್ಳುವ ಮುಂಚೆ, ‘ಕರ್ತನ ದಿನದ’ ಕುರಿತಾದ ಒಂದು ದರ್ಶನವನ್ನು ಅವನಿಗೆ ದಯಪಾಲಿಸಲಾಯಿತು. (ಪ್ರಕಟನೆ 1:10) ಮೆಸ್ಸೀಯ ರಾಜ್ಯವು 1914ರಲ್ಲಿ ಸ್ಥಾಪನೆಗೊಂಡಾಗ ಆ ‘ದಿನವು’ ಆರಂಭವಾಯಿತು. ಆದುದರಿಂದಲೇ ಕ್ರಿಸ್ತನು ಆ ಸಭೆಗಳಿಗೆ ಏನನ್ನು ಹೇಳಿದನೊ ಅದೆಲ್ಲವೂ ಈ ಕಡೇ ದಿನಗಳಲ್ಲೂ ಬಹಳಷ್ಟು ಪ್ರಾಮುಖ್ಯವಾಗಿದೆ. ಅವನು ಕೊಟ್ಟ ಉತ್ತೇಜನ ಹಾಗೂ ಸಲಹೆಯು, ಈ ಕಠಿನಕಾಲಗಳನ್ನು ನಿಭಾಯಿಸುವಂತೆ ನಮಗೆ ಸಹಾಯಮಾಡುತ್ತದೆ.​—2 ತಿಮೊಥೆಯ 3:​1-5.

3. ಅಪೊಸ್ತಲ ಯೋಹಾನನು ನೋಡಿದಂಥ “ನಕ್ಷತ್ರಗಳು,” “ದೂತರು” ಮತ್ತು “ಚಿನ್ನದ ದೀಪಸ್ತಂಭಗಳ” ಸಾಂಕೇತಿಕಾರ್ಥಗಳೇನು?

3 ಯೋಹಾನನು ಮಹಿಮಾಭರಿತನಾದ ಯೇಸು ಕ್ರಿಸ್ತನನ್ನು ಕಂಡನು. ಅವನು “ಏಳು ನಕ್ಷತ್ರಗಳನ್ನು ಬಲಗೈಯಲ್ಲಿ ಹಿಡುಕೊಂಡು ಏಳು ಚಿನ್ನದ ದೀಪಸ್ತಂಭಗಳ” ಇಲ್ಲವೆ ಸಭೆಗಳ “ಮಧ್ಯದಲ್ಲಿ ತಿರುಗಾಡುವಾತನು” ಆಗಿದ್ದಾನೆ. ಆ ‘ನಕ್ಷತ್ರಗಳು’ “ಏಳು ಸಭೆಗಳ ದೂತರು” ಆಗಿದ್ದಾರೆ. (ಪ್ರಕಟನೆ 1:20; 2:1) ನಕ್ಷತ್ರಗಳು ಕೆಲವೊಮ್ಮೆ ಆತ್ಮಜೀವಿಗಳಾದ ದೇವದೂತರನ್ನು ಸಂಕೇತಿಸುತ್ತವೆ. ಆದರೆ ಕ್ರಿಸ್ತನು ಆತ್ಮಜೀವಿಗಳಿಗಾಗಿ ಸಂದೇಶಗಳನ್ನು ದಾಖಲಿಸಲು ಒಬ್ಬ ಮನುಷ್ಯನನ್ನು ಉಪಯೋಗಿಸಲಿಕ್ಕಿಲ್ಲ. ಆದುದರಿಂದ, ಈ “ನಕ್ಷತ್ರಗಳು” ಸಮರ್ಥನೀಯವಾಗಿ ಆತ್ಮಾಭಿಷಿಕ್ತ ಮೇಲ್ವಿಚಾರಕರನ್ನು ಇಲ್ಲವೆ ಹಿರಿಯರ ಮಂಡಲಿಗಳನ್ನು ಸೂಚಿಸುತ್ತವೆ. “ದೂತರು” ಎಂಬ ಪದವು, ಸಂದೇಶವಾಹಕರೋಪಾದಿ ಅವರು ನಿರ್ವಹಿಸುವ ಪಾತ್ರಕ್ಕೆ ಸಂಬಂಧಿಸುತ್ತದೆ. ದೇವರ ಸಂಸ್ಥೆಯು ವಿಸ್ತಾರಗೊಂಡಿರುವುದರಿಂದ, ‘ನಂಬಿಗಸ್ತ ಮನೆವಾರ್ತೆ’ ವರ್ಗವು ಯೇಸುವಿನ ‘ಬೇರೆ ಕುರಿ’ಗಳಿಂದಲೂ ಅರ್ಹರಾದ ಪುರುಷರನ್ನು ಮೇಲ್ವಿಚಾರಕರಾಗಿ ನೇಮಿಸಿದೆ.​—ಲೂಕ 12:​42-44; ಯೋಹಾನ 10:16.

4. ಕ್ರಿಸ್ತನು ಆ ಸಭೆಗಳಿಗೆ ಹೇಳುತ್ತಿರುವ ವಿಷಯಗಳಿಗೆ ಗಮನಕೊಡುವ ಮೂಲಕ ಹಿರಿಯರು ಹೇಗೆ ಪ್ರಯೋಜನ ಪಡೆದುಕೊಳ್ಳುತ್ತಾರೆ?

4 “ನಕ್ಷತ್ರಗಳು” ಯೇಸುವಿನ ಬಲಗೈಯಲ್ಲಿರುವುದು, ಅವು ಅವನ ಅಧಿಕಾರ, ನಿಯಂತ್ರಣ, ಅನುಗ್ರಹ ಮತ್ತು ಸಂರಕ್ಷಣೆಯ ಕೆಳಗಿವೆ ಎಂಬುದನ್ನು ಅರ್ಥೈಸುತ್ತದೆ. ಆದುದರಿಂದ ಅವು ಅವನಿಗೆ ಲೆಕ್ಕ ಒಪ್ಪಿಸಬೇಕು. ಆ ಏಳು ಸಭೆಗಳಲ್ಲಿ ಪ್ರತಿಯೊಂದಕ್ಕೂ ಅವನು ನುಡಿದಂಥ ಮಾತುಗಳನ್ನು ಪಾಲಿಸುವ ಮೂಲಕ, ಇಂದಿನ ಹಿರಿಯರು ತಾವು ತದ್ರೀತಿಯ ಸನ್ನಿವೇಶಗಳನ್ನು ಹೇಗೆ ನಿರ್ವಹಿಸಬಹುದೆಂಬುದನ್ನು ನೋಡಬಹುದು. ಆದರೆ, ಎಲ್ಲಾ ಕ್ರೈಸ್ತರು ಕೂಡ ದೇವಪುತ್ರನ ಮಾತುಗಳಿಗೆ ಕಿವಿಗೊಡುವ ಅಗತ್ಯವಿದೆ ನಿಜ. (ಮಾರ್ಕ 9:7) ಹಾಗಾದರೆ, ಕ್ರಿಸ್ತನು ಆ ಸಭೆಗಳೊಂದಿಗೆ ಮಾತಾಡುತ್ತಿರುವಾಗ ಗಮನಕೊಡುವುದರಿಂದ ನಾವೇನನ್ನು ಕಲಿಯಬಲ್ಲೆವು?

ಎಫೆಸದಲ್ಲಿದ್ದ ದೂತನಿಗೆ

5. ಎಫೆಸವು ಯಾವ ರೀತಿಯ ನಗರವಾಗಿತ್ತು?

5 ಯೇಸು ಎಫೆಸದಲ್ಲಿದ್ದ ಸಭೆಯನ್ನು ಶ್ಲಾಘಿಸಿದನು ಮತ್ತು ತಿದ್ದಿದನು. (ಪ್ರಕಟನೆ 2:​1-7ನ್ನು ಓದಿರಿ.) ಏಷ್ಯಾ ಮೈನರ್‌ನ ಪಶ್ಚಿಮ ಕರಾವಳಿಯಲ್ಲಿ ಐಶ್ವರ್ಯಭರಿತವಾದ ಈ ವಾಣಿಜ್ಯ ಹಾಗೂ ಧಾರ್ಮಿಕ ಕೇಂದ್ರದಲ್ಲಿ ಅರ್ತೆಮೀ ದೇವಿಯ ಬೃಹತ್‌ ಮಂದಿರವೊಂದಿತ್ತು. ಎಫೆಸವು ಅನೈತಿಕತೆ, ಸುಳ್ಳು ಧರ್ಮ ಮತ್ತು ಮಾಟಮಂತ್ರದಿಂದ ತುಂಬಿಕೊಂಡಿತ್ತು. ಆದರೂ ಆ ನಗರದಲ್ಲಿ ಅಪೊಸ್ತಲ ಪೌಲನ ಮತ್ತು ಇತರರ ಶುಶ್ರೂಷೆಯನ್ನು ದೇವರು ಆಶೀರ್ವದಿಸಿದನು.​—ಅ. ಕೃತ್ಯಗಳು ಅಧ್ಯಾಯ 19.

6. ಇಂದಿನ ನಿಷ್ಠಾವಂತ ಕ್ರೈಸ್ತರು ಪ್ರಾಚೀನ ಎಫೆಸದಲ್ಲಿನ ಕ್ರೈಸ್ತರನ್ನು ಹೇಗೆ ಹೋಲುತ್ತಾರೆ?

6 ಎಫೆಸದಲ್ಲಿದ್ದ ಸಭೆಯನ್ನು ಕ್ರಿಸ್ತನು ಶ್ಲಾಘಿಸುತ್ತಾ ಅಂದದ್ದು: “ನಿನ್ನ ಕೃತ್ಯಗಳನ್ನೂ ಪ್ರಯಾಸವನ್ನೂ ತಾಳ್ಮೆಯನ್ನೂ ಬಲ್ಲೆನು; ನೀನು ದುಷ್ಟರನ್ನು ಸಹಿಸಲಾರಿ; ಅಪೊಸ್ತಲರಲ್ಲದಿದ್ದರೂ ತಮ್ಮನ್ನು ಅಪೊಸ್ತಲರೆಂದು ಹೇಳಿಕೊಳ್ಳುವವರನ್ನು ನೀನು ಪರೀಕ್ಷಿಸಿ ಅವರನ್ನು ಸುಳ್ಳುಗಾರರೆಂದು ಕಂಡುಕೊಂಡಿ.” ಇಂದು ಯೇಸುವಿನ ನಿಜ ಹಿಂಬಾಲಕರ ಸಭೆಗಳಿಗೂ ತದ್ರೀತಿಯ ಸುಕೃತ್ಯಗಳ, ಪ್ರಯಾಸ ಹಾಗೂ ತಾಳ್ಮೆಯ ದಾಖಲೆಯಿದೆ. ತಮ್ಮನ್ನು ಅಪೊಸ್ತಲರೋಪಾದಿ ಪರಿಗಣಿಸಬೇಕೆಂದು ಬಯಸುವ ಸುಳ್ಳು ಸಹೋದರರನ್ನು ಅವರು ಸಹಿಸಿಕೊಳ್ಳುವುದಿಲ್ಲ. (2 ಕೊರಿಂಥ 11:​13, 26) ಎಫೆಸದವರಂತೆ, ಇಂದು ನಿಷ್ಠಾವಂತ ಕ್ರೈಸ್ತರು ‘ದುಷ್ಟರನ್ನು ಸಹಿಸಲಾರರು.’ ಆದುದರಿಂದಲೇ ಯೆಹೋವನ ಆರಾಧನೆಯ ಶುದ್ಧತೆಯನ್ನು ಕಾಪಾಡಿಕೊಳ್ಳಲು ಮತ್ತು ಸಭೆಯನ್ನು ಸಂರಕ್ಷಿಸಲು ಅವರು ಪಶ್ಚಾತ್ತಾಪಪಡದ ಧರ್ಮಭ್ರಷ್ಟರೊಂದಿಗೆ ಸಹವಾಸಿಸುವುದಿಲ್ಲ.​—ಗಲಾತ್ಯ 2:​4, 5; 2 ಯೋಹಾನ 8-11.

7, 8. ಎಫೆಸದಲ್ಲಿದ್ದ ಸಭೆಯಲ್ಲಿ ಯಾವ ಗಂಭೀರ ಸಮಸ್ಯೆಯಿತ್ತು, ಮತ್ತು ತದ್ರೀತಿಯ ಸನ್ನಿವೇಶವನ್ನು ನಾವು ಹೇಗೆ ನಿಭಾಯಿಸಬಹುದು?

7 ಆದರೆ ಎಫೆಸದಲ್ಲಿದ್ದ ಕ್ರೈಸ್ತರಿಗೆ ಒಂದು ಗಂಭೀರವಾದ ಸಮಸ್ಯೆಯಿತ್ತು. ಯೇಸುವಂದದ್ದು: “ಮೊದಲು ನಿನಗಿದ್ದ ಪ್ರೀತಿಯನ್ನು ನೀನು ಬಿಟ್ಟು ಬಿಟ್ಟಿದ್ದೀಯೆಂದು ನಾನು ನಿನ್ನ ಮೇಲೆ ತಪ್ಪುಹೊರಿಸಬೇಕಾಗುತ್ತದೆ.” ಆ ಸಭೆಯಲ್ಲಿದ್ದ ಸಹೋದರರು, ಅವರಿಗೆ ಆರಂಭದಲ್ಲಿ ಯೆಹೋವನಿಗಾಗಿದ್ದ ತಮ್ಮ ಪ್ರೀತಿಯನ್ನು ಈಗ ಪುನಃ ಹೊತ್ತಿಸಬೇಕಾಗಿತ್ತು. (ಮಾರ್ಕ 12:​28-30; ಎಫೆಸ 2:4; 5:​1, 2) ನಾವೆಲ್ಲರೂ, ದೇವರಿಗಾಗಿ ನಮಗೆ ಆರಂಭದಲ್ಲಿದ್ದ ಪ್ರೀತಿಯನ್ನು ಕಳೆದುಕೊಳ್ಳದಂತೆ ಎಚ್ಚರವಾಗಿರಬೇಕು. (3 ಯೋಹಾನ 3) ಆದರೆ ಲೌಕಿಕ ಐಶ್ವರ್ಯಕ್ಕಾಗಿರುವ ಆಸೆಯು ಇಲ್ಲವೆ ಸುಖವಿಲಾಸದ ಬೆನ್ನಟ್ಟುವಿಕೆಯಂಥ ಸಂಗತಿಗಳೇ ನಮ್ಮ ಬದುಕಿನ ಪ್ರಧಾನ ವಿಷಯಗಳಾಗುತ್ತಿರುವಲ್ಲಿ ಆಗೇನು? (1 ತಿಮೊಥೆಯ 4:8; 6:​9, 10) ಆಗ ನಾವು, ಇಂಥ ಪ್ರವೃತ್ತಿಗಳನ್ನು ತೆಗೆದುಹಾಕಿ, ಇವುಗಳ ಸ್ಥಾನದಲ್ಲಿ ಯೆಹೋವನಿಗಾಗಿ ಗಾಢವಾದ ಪ್ರೀತಿ ಮತ್ತು ಆತನು ಹಾಗೂ ಆತನ ಪುತ್ರನು ನಮಗಾಗಿ ಮಾಡಿರುವಂಥದ್ದೆಲ್ಲದಕ್ಕಾಗಿ ಕೃತಜ್ಞತೆಯನ್ನು ತುಂಬಿಸಬೇಕು. ಇದೆಲ್ಲವನ್ನು ಮಾಡಲು ದೈವಿಕ ಸಹಾಯಕ್ಕಾಗಿ ನಾವು ಕಟ್ಟಾಸಕ್ತಿಯಿಂದ ಪ್ರಾರ್ಥಿಸಬೇಕು.​—1 ಯೋಹಾನ 4:​10, 16.

8 ಕ್ರಿಸ್ತನು ಎಫೆಸದವರಿಗೆ ಪ್ರೇರಿಸಿದ್ದು: “ನೀನು ಎಲ್ಲಿಂದ ಬಿದ್ದಿದ್ದೀಯೋ ಅದನ್ನು ನಿನ್ನ ನೆನಪಿಗೆ ತಂದುಕೊಂಡು ದೇವರ ಕಡೆಗೆ ತಿರುಗಿಕೋ. ನೀನು ಮೊದಲು ಮಾಡುತ್ತಿದ್ದ ಕೃತ್ಯಗಳನ್ನು ಮಾಡು.” ಅವರು ಹಾಗೆ ಮಾಡದಿದ್ದರೆ ಆಗೇನು? ಯೇಸು ಹೇಳಿದ್ದು: “ನೀನು ದೇವರ ಕಡೆಗೆ ತಿರುಗಿಕೊಳ್ಳದೆ ಹೋದರೆ ನಾನು ಬಂದು ನಿನ್ನ ದೀಪಸ್ತಂಭವನ್ನು ಅದರ ಸ್ಥಳದಿಂದ ತೆಗೆದುಹಾಕುವೆನು.” ಕುರಿಗಳೆಲ್ಲರೂ ತಮ್ಮ ಆರಂಭದ ಪ್ರೀತಿಯನ್ನು ಕಳೆದುಕೊಳ್ಳುವಲ್ಲಿ, ಆ “ದೀಪಸ್ತಂಭ” ಇಲ್ಲವೆ ಸಭೆಯೇ ಅಸ್ತಿತ್ವದಲ್ಲಿರದು. ಆದುದರಿಂದ ಸಭೆಯು ಆತ್ಮಿಕವಾಗಿ ಕಂಗೊಳಿಸುತ್ತಾ ಇರುವಂತೆ ಹುರುಪುಳ್ಳ ಕ್ರೈಸ್ತರೋಪಾದಿ ನಾವು ಶ್ರಮಿಸೋಣ.​—ಮತ್ತಾಯ 5:​14-16.

9. ಪಂಥಾಭಿಮಾನವನ್ನು ಯಾವ ದೃಷ್ಟಿಕೋನದಿಂದ ನೋಡಬೇಕು?

9 ಶ್ಲಾಘನೀಯ ಸಂಗತಿಯೇನೆಂದರೆ, ಎಫೆಸದವರು “ನಿಕೊಲಾಯಿತರ ಕೃತ್ಯಗಳನ್ನು” ದ್ವೇಷಿಸುತ್ತಿದ್ದರು. ಪ್ರಕಟನೆ ಪುಸ್ತಕದಲ್ಲಿ ಈ ಧಾರ್ಮಿಕ ಪಂಥದ ಬಗ್ಗೆ ಏನು ತಿಳಿಸಲ್ಪಟ್ಟಿದೆಯೊ ಅದರ ಹೊರತು, ಈ ಪಂಥದ ಮೂಲ, ಬೋಧನೆಗಳು ಮತ್ತು ಆಚರಣೆಗಳ ಬಗ್ಗೆ ಖಚಿತವಾದ ಯಾವುದೇ ಮಾಹಿತಿಯಿಲ್ಲ. ಆದರೆ ಮನುಷ್ಯರನ್ನು ಹಿಂಬಾಲಿಸುವುದನ್ನು ಯೇಸು ಖಂಡಿಸಿರುವುದರಿಂದ, ನಾವು ಕೂಡ ಎಫೆಸದಲ್ಲಿದ್ದ ಕ್ರೈಸ್ತರಂತೆಯೇ ಪಂಥಾಭಿಮಾನವನ್ನು ದ್ವೇಷಿಸುತ್ತಾ ಇರಬೇಕು.​—ಮತ್ತಾಯ 23:10.

10. ಪವಿತ್ರಾತ್ಮವು ಹೇಳುವಂಥದ್ದನ್ನು ಪಾಲಿಸುವವರಿಗೆ ಪ್ರತಿಫಲ ಏನಾಗಿರುವುದು?

10 “ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ” ಎಂದು ಕ್ರಿಸ್ತನು ಹೇಳಿದನು. ಭೂಮಿಯ ಮೇಲಿದ್ದಾಗ ಯೇಸು ದೇವರಾತ್ಮದ ಪ್ರಭಾವದಿಂದ ಮಾತಾಡಿದನು. (ಯೆಶಾಯ 61:1; ಲೂಕ 4:​16-21) ಆದುದರಿಂದ ದೇವರು ಈಗ ಪವಿತ್ರಾತ್ಮದ ಸಹಾಯದಿಂದ ಯೇಸುವಿನ ಮುಖಾಂತರ ಹೇಳುವಂಥ ವಿಷಯಗಳಿಗೆ ನಾವು ಗಮನಕೊಡತಕ್ಕದ್ದು. ಪವಿತ್ರಾತ್ಮದ ನಿರ್ದೇಶನಕ್ಕನುಸಾರ ಯೇಸು ವಾಗ್ದಾನಿಸಿದ್ದು: “ಯಾವನು ಜಯಹೊಂದುತ್ತಾನೋ ಅವನಿಗೆ ದೇವರ ಪರದೈಸಿನಲ್ಲಿರುವ ಜೀವದಾಯಕ ವೃಕ್ಷದ ಹಣ್ಣನ್ನು ತಿನ್ನುವದಕ್ಕೆ ಕೊಡುವೆನು.” ಪವಿತ್ರಾತ್ಮವು ಏನು ಹೇಳುತ್ತದೋ ಅದನ್ನು ಪಾಲಿಸುವಂಥ ಅಭಿಷಿಕ್ತರಿಗೆ ಇದು ‘ದೇವರ’ ಸ್ವರ್ಗೀಯ ‘ಪರದೈಸಿನಲ್ಲಿ’ ಇಲ್ಲವೆ ಯೆಹೋವನ ಸಮಕ್ಷಮದಲ್ಲಿ ಅಮರತ್ವವನ್ನು ಅರ್ಥೈಸುತ್ತದೆ. ಪವಿತ್ರಾತ್ಮವು ಹೇಳುವ ವಿಷಯಗಳಿಗೆ ಕಿವಿಗೊಡುವ “ಮಹಾ ಸಮೂಹ”ದವರು ಭೂಮಿಯ ಮೇಲಿನ ಪರದೈಸಿನಲ್ಲಿ ಆನಂದಿಸುವರು. ಅಲ್ಲಿ ಅವರು ‘ಜೀವಜಲದ ನದಿಯ’ ನೀರನ್ನು ಕುಡಿಯುವರು ಮತ್ತು ಅದರ ಪಕ್ಕಗಳಲ್ಲಿರುವ ‘ಮರದ ಎಲೆಗಳಿಂದ’ ವಾಸಿಯಾಗುವರು.​—ಪ್ರಕಟನೆ 7:9; 22:​1, 2; ಲೂಕ 23:43.

11. ಯೆಹೋವನಿಗಾಗಿರುವ ಪ್ರೀತಿಯನ್ನು ನಾವು ಹೇಗೆ ಪ್ರವರ್ಧಿಸಬಹುದು?

11 ಎಫೆಸದವರು ಆರಂಭದಲ್ಲಿ ತಮಗಿದ್ದ ಪ್ರೀತಿಯನ್ನು ಕಳೆದುಕೊಂಡಿದ್ದರು, ಆದರೆ ಇಂದು ಒಂದು ಸಭೆಯಲ್ಲಿ ಅದೇ ರೀತಿಯ ಸನ್ನಿವೇಶವು ವಿಕಸಿಸುತ್ತಿರುವುದಾದರೆ ಆಗೇನು? ಯೆಹೋವನ ಪ್ರೀತಿಭರಿತ ಕ್ರಿಯಾವಿಧಾನಗಳ ಕುರಿತಾಗಿ ಮಾತಾಡುವ ಮೂಲಕ ನಾವು ವೈಯಕ್ತಿಕವಾಗಿ ಯೆಹೋವನಿಗಾಗಿರುವ ಪ್ರೀತಿಯನ್ನು ಪ್ರವರ್ಧಿಸೋಣ. ತನ್ನ ಪ್ರಿಯ ಪುತ್ರನ ಮೂಲಕ ವಿಮೋಚನಾ ಬೆಲೆಯನ್ನು ಒದಗಿಸುವುದರಲ್ಲಿ ದೇವರು ತೋರಿಸಿದ ಪ್ರೀತಿಗಾಗಿ ನಮ್ಮ ಕೃತಜ್ಞತೆಯನ್ನು ನಾವು ವ್ಯಕ್ತಪಡಿಸಬಲ್ಲೆವು. (ಯೋಹಾನ 3:16; ರೋಮಾಪುರ 5:8) ಸೂಕ್ತವಾಗಿರುವಾಗಲೆಲ್ಲ, ನಾವು ಕೂಟಗಳಲ್ಲಿ ಕೊಡುವಂಥ ಉತ್ತರಗಳಲ್ಲಿ ಮತ್ತು ಕಾರ್ಯಕ್ರಮದ ಭಾಗಗಳಲ್ಲಿ ದೇವರ ಪ್ರೀತಿಯ ಬಗ್ಗೆ ತಿಳಿಸಬಹುದು. ಕ್ರೈಸ್ತ ಶುಶ್ರೂಷೆಯಲ್ಲಿ ಆತನ ನಾಮವನ್ನು ಸ್ತುತಿಸುವ ಮೂಲಕ ವೈಯಕ್ತಿಕವಾಗಿ ಯೆಹೋವನಿಗಾಗಿರುವ ನಮ್ಮ ಸ್ವಂತ ಪ್ರೀತಿಯನ್ನು ನಾವು ತೋರಿಸಬಲ್ಲೆವು. (ಕೀರ್ತನೆ 145:​10-13) ಹೌದು ನಮ್ಮ ಮಾತುಗಳು ಮತ್ತು ಕ್ರಿಯೆಗಳು, ಒಂದು ಸಭೆಯ ಆರಂಭದ ಪ್ರೀತಿಯನ್ನು ಪುನಃ ಹೊತ್ತಿಸಲು ಇಲ್ಲವೆ ಬಲಪಡಿಸಲು ಬಹಳಷ್ಟನ್ನು ಮಾಡಬಹುದು.

ಸ್ಮುರ್ನದಲ್ಲಿರುವ ದೂತನಿಗೆ

12. ಸ್ಮುರ್ನ ಮತ್ತು ಅಲ್ಲಿ ನಡೆಯುತ್ತಿದ್ದ ಧಾರ್ಮಿಕ ಆಚಾರಗಳ ಬಗ್ಗೆ ಇತಿಹಾಸವು ಏನನ್ನು ತಿಳಿಸುತ್ತದೆ?

12 “ಸತ್ತವನಾಗಿದ್ದು” ಪುನರುತ್ಥಾನದ ಮೂಲಕ “ಜೀವಿತನಾಗಿ ಬಂದ ಆದ್ಯಂತ”ನಾದ ಕ್ರಿಸ್ತನು ಸ್ಮುರ್ನದಲ್ಲಿದ್ದ ಸಭೆಯನ್ನು ಶ್ಲಾಘಿಸಿದನು. (ಪ್ರಕಟನೆ 2:​8-11ನ್ನು ಓದಿರಿ.) ಸ್ಮುರ್ನ (ಈಗ ಟರ್ಕಿ ದೇಶದಲ್ಲಿ ಇಸ್ಮೀರ್‌ ಆಗಿದೆ) ಏಷ್ಯಾ ಮೈನರ್‌ನ ಪಶ್ಚಿಮ ಕರಾವಳಿಯಲ್ಲಿ ಕಟ್ಟಲ್ಪಟ್ಟಿತ್ತು. ಗ್ರೀಕರು ಆ ನಗರದಲ್ಲಿ ನೆಲೆಸಿದರು, ಆದರೆ ಲಿಡ್ಯದವರು ಅದನ್ನು ಸುಮಾರು ಸಾ.ಶ.ಪೂ. 580ರಲ್ಲಿ ನಾಶಮಾಡಿದರು. ಮಹಾ ಅಲೆಕ್ಸಾಂಡರನ ಉತ್ತರಾಧಿಕಾರಿಗಳು ಸ್ಮುರ್ನವನ್ನು ಒಂದು ಹೊಸ ನಿವೇಶನದಲ್ಲಿ ಪುನರ್‌ನಿರ್ಮಿಸಿದರು. ಅದು ರೋಮ್‌ನ ಏಷ್ಯಾ ಪ್ರಾಂತದ ಭಾಗವಾಯಿತು ಮತ್ತು ಉತ್ತಮವಾದ ಸಾರ್ವಜನಿಕ ಕಟ್ಟಡಗಳಿಗಾಗಿ ಪ್ರಸಿದ್ಧವಾದ ಒಂದು ಗಿಜಿಗುಟ್ಟುವ ವಾಣಿಜ್ಯ ಕೇಂದ್ರವಾಯಿತು. ಅಲ್ಲಿ ಕೈಸರನಾದ ತಿಬೇರಿಯನಿಗಾಗಿ ಒಂದು ಮಂದಿರವಿದ್ದದ್ದರಿಂದ, ಅದು ಸಾಮ್ರಾಟನ ಆರಾಧನೆಯ ಕೇಂದ್ರವಾಯಿತು. ಆರಾಧಕರು ಒಂದು ಚಿಟಿಕೆಯಷ್ಟು ಧೂಪವನ್ನು ಸುಟ್ಟು, “ಕೈಸರನೇ ಕರ್ತನು” ಎಂದು ಹೇಳಬೇಕಾಗುತ್ತಿತ್ತು. ಆದರೆ ಕ್ರೈಸ್ತರಿಗೆ ‘ಯೇಸುವೇ ಕರ್ತನು’ ಆಗಿದ್ದರಿಂದ ಹೀಗೆ ಮಾಡಲಾಗುತ್ತಿರಲಿಲ್ಲ. ಈ ಕಾರಣದಿಂದಾಗಿ ಅವರು ಹಿಂಸೆಯನ್ನು ಅನುಭವಿಸಿದರು.​—ರೋಮಾಪುರ 10:9.

13. ಸ್ಮುರ್ನದಲ್ಲಿದ್ದ ಕ್ರೈಸ್ತರು ಲೌಕಿಕ ರೀತಿಯಲ್ಲಿ ಬಡವರಾಗಿದ್ದರೂ, ಯಾವ ಅರ್ಥದಲ್ಲಿ ಐಶ್ವರ್ಯವಂತರಾಗಿದ್ದರು?

13 ಸ್ಮುರ್ನದಲ್ಲಿದ್ದ ಕ್ರೈಸ್ತರು ಹಿಂಸೆಯನ್ನು ಮಾತ್ರವಲ್ಲದೆ ಬಡತನ ಮತ್ತು ಸಾಮ್ರಾಟನ ಆರಾಧನೆಯಲ್ಲಿ ಭಾಗವಹಿಸದೇ ಇದ್ದದ್ದಕ್ಕಾಗಿ ಬಹುಶಃ ಆರ್ಥಿಕ ತೊಂದರೆಗಳನ್ನೂ ಅನುಭವಿಸಿ ತಾಳಿಕೊಂಡರು. ಇದೇ ರೀತಿಯ ಪರೀಕ್ಷೆಗಳನ್ನು ಇಂದಿರುವ ಯೆಹೋವನ ಸೇವಕರೂ ಎದುರಿಸುತ್ತಾರೆ. (ಪ್ರಕಟನೆ 13:​16, 17) ಸ್ಮುರ್ನದಲ್ಲಿದ್ದ ಕ್ರೈಸ್ತರಂತಿರುವವರು ಲೌಕಿಕ ರೀತಿಯಲ್ಲಿ ಬಡವರಾಗಿದ್ದರೂ, ಆತ್ಮಿಕ ರೀತಿಯಲ್ಲಿ ಐಶ್ವರ್ಯವಂತರಾಗಿದ್ದಾರೆ. ಮತ್ತು ಇದೇ ಅತಿ ಪ್ರಾಮುಖ್ಯ ವಿಷಯವಾಗಿದೆ!​—ಜ್ಞಾನೋಕ್ತಿ 10:22; 3 ಯೋಹಾನ 2.

14, 15. ಪ್ರಕಟನೆ 2:10ರಿಂದ ಅಭಿಷಿಕ್ತರು ಯಾವ ಸಾಂತ್ವನವನ್ನು ಪಡೆದುಕೊಳ್ಳಬಲ್ಲರು?

14 ಸ್ಮುರ್ನದಲ್ಲಿದ್ದ ಹೆಚ್ಚಿನ ಯೆಹೂದ್ಯರು ‘ಸೈತಾನನ ಸಮಾಜದವರಾಗಿದ್ದರು.’ ಏಕೆಂದರೆ ಅವರು ಅಶಾಸ್ತ್ರೀಯ ಸಂಪ್ರದಾಯಗಳಿಗೆ ಅಂಟಿಕೊಂಡಿದ್ದರು, ದೇವರ ಪುತ್ರನನ್ನು ತಿರಸ್ಕರಿಸಿದ್ದರು, ಮತ್ತು ಅವನ ಆತ್ಮಾಭಿಷಿಕ್ತ ಹಿಂಬಾಲಕರನ್ನು ದೂಷಿಸಿದ್ದರು. (ರೋಮಾಪುರ 2:​28, 29) ಆದರೆ ಕ್ರಿಸ್ತನ ಮುಂದಿನ ಮಾತುಗಳಿಂದ ಅಭಿಷಿಕ್ತರು ಎಷ್ಟೊಂದು ಸಾಂತ್ವನವನ್ನು ಪಡೆಯಬಲ್ಲರು! ಅವನು ಹೇಳುವುದು: “ನಿನಗೆ ಸಂಭವಿಸುವದಕ್ಕಿರುವ ಬಾಧೆಗಳಿಗೆ ಹೆದರಬೇಡ. ಇಗೋ ನೀವು ದುಷ್ಪ್ರೇರಣೆಗೆ ಒಳಗಾಗುವಂತೆ ಸೈತಾನನು ನಿಮ್ಮಲ್ಲಿ ಕೆಲವರನ್ನು ಸೆರೆಮನೆಯೊಳಗೆ ಹಾಕುವದಕ್ಕಿದ್ದಾನೆ; ಮತ್ತು ಹತ್ತು ದಿವಸಗಳ ತನಕ ನಿಮಗೆ ಸಂಕಟವಿರುವದು. ನೀನು ಸಾಯಬೇಕಾದರೂ ನಂಬಿಗಸ್ತನಾಗಿರು; ನಾನು ನಿನಗೆ ಜೀವವೆಂಬ ಜಯಮಾಲೆಯನ್ನು ಕೊಡುವೆನು.”​—ಪ್ರಕಟನೆ 2:10.

15 ಯೇಸು, ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುವುದಕ್ಕಾಗಿ ಸಾಯಲೂ ಹೆದರಲಿಲ್ಲ. (ಫಿಲಿಪ್ಪಿ 2:​5-8) ಸೈತಾನನು ಈಗ ಅಭಿಷಿಕ್ತ ಉಳಿಕೆಯವರ ಮೇಲೆ ಯುದ್ಧಮಾಡುತ್ತಿದ್ದರೂ, ಅವರು ಒಂದು ಗುಂಪಿನೋಪಾದಿ ಎದುರಿಸಬೇಕಾಗುವ ಹಿಂಸೆ, ಸೆರೆಮನೆವಾಸ ಇಲ್ಲವೆ ಘೋರ ಮರಣಕ್ಕೂ ಅಂಜುವುದಿಲ್ಲ. (ಪ್ರಕಟನೆ 12:17) ಅವರು ಲೋಕ ವಿಜೇತರಾಗುವರು. ವಿಧರ್ಮಿ ಆಟಗಳಲ್ಲಿ ವಿಜೇತರು ಕಿರೀಟದೋಪಾದಿ ಬಾಡಿಹೋಗುವ ಹೂಮಾಲೆಯನ್ನು ಧರಿಸುತ್ತಿದ್ದರು. ಪುನರುತ್ಥಾನಹೊಂದಿರುವ ಅಭಿಷಿಕ್ತರಿಗಾದರೋ ಯೇಸು ಪರಲೋಕದಲ್ಲಿ ಅಮರ ಜೀವಿಗಳೋಪಾದಿ “ಜೀವದ ಜಯಮಾಲೆಯನ್ನು” ವಾಗ್ದಾನಿಸುತ್ತಾನೆ. ಇದೆಂಥ ಅಮೂಲ್ಯವಾದ ವರದಾನ!

16. ಪ್ರಾಚೀನ ಸ್ಮುರ್ನದಲ್ಲಿದ್ದಂಥ ರೀತಿಯ ಒಂದು ಸಭೆಯೊಂದಿಗೆ ನಾವು ಸಹವಾಸಿಸುತ್ತಿರುವುದಾದರೆ, ನಮ್ಮ ಗಮನವು ಯಾವ ವಿವಾದಾಂಶದ ಮೇಲೆ ಕೇಂದ್ರೀಕರಿಸಲ್ಪಡಬೇಕು?

16 ನಮಗೆ ಸ್ವರ್ಗೀಯ ನಿರೀಕ್ಷೆಯಿರಲಿ ಅಥವಾ ಭೂನಿರೀಕ್ಷೆಯಿರಲಿ, ಒಂದುವೇಳೆ ಪ್ರಾಚೀನ ಸ್ಮುರ್ನದಲ್ಲಿದ್ದಂಥ ರೀತಿಯ ಒಂದು ಸಭೆಯೊಂದಿಗೆ ನಾವು ಸಹವಾಸಿಸುತ್ತಿರುವುದಾದರೆ ಆಗೇನು? ನಾವು ಜೊತೆ ವಿಶ್ವಾಸಿಗಳಿಗೆ, ದೇವರು ಹಿಂಸೆಯನ್ನು ಅನುಮತಿಸುವ ಮುಖ್ಯ ಕಾರಣದ ಮೇಲೆ ಅಂದರೆ ವಿಶ್ವ ಪರಮಾಧಿಕಾರದ ವಿವಾದಾಂಶದ ಮೇಲೆ ಅವರು ಗಮನವನ್ನು ಕೇಂದ್ರೀಕರಿಸುವಂತೆ ಸಹಾಯಮಾಡೋಣ. ಸಮಗ್ರತೆಯನ್ನು ಕಾಪಾಡಿಕೊಳ್ಳುವ ಯೆಹೋವನ ಪ್ರತಿಯೊಬ್ಬ ಸಾಕ್ಷಿಯು ಸೈತಾನನನ್ನು ಒಬ್ಬ ಸುಳ್ಳುಗಾರನೆಂದು ರುಜುಪಡಿಸುತ್ತಾನೆ. ಮತ್ತು ಹಿಂಸಿಸಲ್ಪಟ್ಟಿರುವ ಒಬ್ಬ ಮಾನವನು ಸಹ, ವಿಶ್ವದ ಪರಮಾಧಿಕಾರಿಯೋಪಾದಿ ಆಳುವ ದೇವರ ಹಕ್ಕನ್ನು ಸಮರ್ಥಿಸುವ ಅಚಲ ಬೆಂಬಲಿಗನು ಆಗಿರಬಲ್ಲನೆಂಬುದನ್ನು ಪ್ರದರ್ಶಿಸುತ್ತಾನೆ. (ಜ್ಞಾನೋಕ್ತಿ 27:11) ಹಿಂಸೆಯನ್ನು ತಾಳಿಕೊಳ್ಳುವಂತೆ ಮತ್ತು ಫಲಸ್ವರೂಪವಾಗಿ ನಿರಂತರವೂ “ನಮ್ಮ ಜೀವಮಾನದಲೆಲ್ಲಾ ನಿರ್ಮಲಚಿತ್ತದಿಂದಲೂ ನೀತಿಯಿಂದಲೂ [ಯೆಹೋವನ] ಸನ್ನಿಧಿಯಲ್ಲಿ ಸೇವೆಮಾಡುವ” ಸುಯೋಗವನ್ನು ಹೊಂದುವಂತೆ ನಾವು ಇತರ ಕ್ರೈಸ್ತರನ್ನು ಉತ್ತೇಜಿಸೋಣ.​—ಲೂಕ 1:​68, 69, 74, 75.

ಪೆರ್ಗಮದಲ್ಲಿರುವ ದೂತನಿಗೆ

17, 18. ಪೆರ್ಗಮವು ಯಾವ ರೀತಿಯ ಆರಾಧನೆಯ ಕೇಂದ್ರವಾಗಿತ್ತು, ಮತ್ತು ಅಂಥ ವಿಗ್ರಹಾರಾಧನೆಯಲ್ಲಿ ಪಾಲ್ಗೊಳ್ಳಲು ನಿರಾಕರಿಸುವುದರ ಫಲಿತಾಂಶ ಏನಾಗಿರಸಾಧ್ಯವಿತ್ತು?

17 ಪೆರ್ಗಮದಲ್ಲಿದ್ದ ಸಭೆಗೆ ಶ್ಲಾಘನೆಯನ್ನೂ ತಿದ್ದುಪಾಟನ್ನೂ ಕೊಡಲಾಯಿತು. (ಪ್ರಕಟನೆ 2:​12-17ನ್ನು ಓದಿರಿ.) ಸ್ಮುರ್ನದ ಉತ್ತರಕ್ಕೆ ಸುಮಾರು 80 ಕಿಲೊಮೀಟರ್‌ಗಳಷ್ಟು ದೂರದಲ್ಲಿದ್ದ ಪೆರ್ಗಮವು, ವಿಧರ್ಮದಲ್ಲಿ ಮುಳುಗಿದ್ದ ಒಂದು ನಗರವಾಗಿತ್ತು. ಕಸ್ದೀಯ ಜ್ಯೋತಿಷಿಗಳು ಬಾಬೆಲಿನಿಂದ ಅಲ್ಲಿಗೆ ಪಲಾಯನಗೈದಿರುವಂತೆ ತೋರುತ್ತದೆ. ಅಸ್ವಸ್ಥ ಜನರು ಪೆರ್ಗಮದಲ್ಲಿದ್ದ ವಾಸಿಯಾಗುವಿಕೆ ಮತ್ತು ಔಷಧಕ್ಕೆ ಹೆಸರುವಾಸಿಯಾಗಿದ್ದ ಸುಳ್ಳು ದೇವತೆಯಾದ ಅಸ್ಕ್‌ಲೀಪಿಯಸ್‌ನ ಪ್ರಸಿದ್ಧ ಮಂದಿರಕ್ಕೆ ಹಿಂಡುಹಿಂಡಾಗಿ ಬರುತ್ತಿದ್ದರು. ಪೆರ್ಗಮದಲ್ಲಿ ಕೈಸರ್‌ ಆಗಸ್ಟಸ್‌ನ ಆರಾಧನೆಗೆ ಮೀಸಲಾಗಿಡಲ್ಪಟ್ಟ ಮಂದಿರವಿದ್ದದರಿಂದ, ಅದನ್ನು “ಆ ಆದಿ ಸಾಮ್ರಾಜ್ಯದಲ್ಲಿದ್ದ ಸಾಮ್ರಾಟನ ಪಂಥದ ಮುಖ್ಯ ಕೇಂದ್ರ” ಎಂದು ಕರೆಯಲಾಗುತ್ತಿತ್ತು.​—ಎನ್‌ಸೈಕ್ಲಪೀಡೀಯ ಬ್ರಿಟ್ಯಾನಿಕಾ, 1959, ಸಂಪುಟ 17, ಪುಟ 507.

18 ಪೆರ್ಗಮದಲ್ಲಿ, ಸ್ಯೂಸ್‌ ದೇವತೆಗೆ ಪ್ರತಿಷ್ಠಾಪಿಸಲ್ಪಟ್ಟಿದ್ದ ಒಂದು ಬಲಿಪೀಠವಿತ್ತು. ಆ ನಗರವು ಪಿಶಾಚನಿಂದ ಪ್ರೇರಿಸಲ್ಪಟ್ಟ ಮಾನವ ಆರಾಧನೆಯ ಕೇಂದ್ರವೂ ಆಗಿತ್ತು. ಆದುದರಿಂದ ಅಲ್ಲಿದ್ದ ಸಭೆಯು, “ಸೈತಾನನ ಸಿಂಹಾಸನವಿರುವ ಸ್ಥಳ”ದಲ್ಲಿದೆ ಎಂದು ಹೇಳಿದ್ದರಲ್ಲಿ ಆಶ್ಚರ್ಯವೇನಿಲ್ಲ! ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುವಂಥ ಒಬ್ಬ ವ್ಯಕ್ತಿಯು, ಸಾಮ್ರಾಟನನ್ನು ಆರಾಧಿಸಲು ನಿರಾಕರಿಸುವುದು ಅವನ ಮರಣದಲ್ಲಿ ಫಲಿಸಸಾಧ್ಯವಿತ್ತು. ಈ ಲೋಕವು ಈಗಲೂ ಪಿಶಾಚನ ವಶದಲ್ಲಿ ಬಿದ್ದಿರುತ್ತದೆ ಮತ್ತು ರಾಷ್ಟ್ರೀಯ ಲಾಂಛನಗಳನ್ನು ಈಗಲೂ ಮೂರ್ತಿಕರಿಸಲಾಗುತ್ತಿದೆ. (1 ಯೋಹಾನ 5:19) ಪ್ರಥಮ ಶತಮಾನದಿಂದ ಈ ವರೆಗೂ ಅನೇಕ ನಂಬಿಗಸ್ತ ಕ್ರೈಸ್ತರು ಹುತಾತ್ಮರಾಗಿದ್ದಾರೆ. ಅವರಲ್ಲೊಬ್ಬನ ಬಗ್ಗೆ ಕ್ರಿಸ್ತನು ಹೇಳಿದ್ದು: ‘ನನಗೆ ನಂಬಿಗಸ್ತನೂ ಸಾಕ್ಷಿಯೂ ಆದ ಅಂತಿಪನು ಕೊಲ್ಲಲ್ಪಟ್ಟನು.’ ಯೆಹೋವ ದೇವರು ಮತ್ತು ಯೇಸು ಕ್ರಿಸ್ತನು ಖಂಡಿತವಾಗಿಯೂ ಅಂಥ ನಿಷ್ಠಾವಂತ ಸೇವಕರನ್ನು ನೆನಪಿನಲ್ಲಿಡುತ್ತಾರೆ.​—1 ಯೋಹಾನ 5:21.

19. ಬಿಳಾಮನು ಏನು ಮಾಡಿದನು, ಮತ್ತು ಎಲ್ಲಾ ಕ್ರೈಸ್ತರು ಯಾವುದರ ವಿರುದ್ಧ ಎಚ್ಚರವಾಗಿರಬೇಕು?

19 ಕ್ರಿಸ್ತನು ‘ಬಿಳಾಮನ ದುರ್ಬೋಧನೆಯ’ ಕುರಿತಾಗಿಯೂ ಮಾತಾಡಿದನು. ಪ್ರಾಪಂಚಿಕ ಲಾಭದ ದುರಾಶೆಯಿಂದಾಗಿ, ಸುಳ್ಳು ಪ್ರವಾದಿಯಾದ ಬಿಳಾಮನು ಇಸ್ರಾಯೇಲನ್ನು ಶಪಿಸಲು ಪ್ರಯತ್ನಿಸಿದನು. ಆದರೆ ದೇವರು ಅವನ ಶಾಪವನ್ನು ಆಶೀರ್ವಾದವಾಗಿ ಪರಿವರ್ತಿಸಿದನು. ಆಗ, ಬಿಳಾಮನು ಮೋವಾಬ್ಯ ರಾಜನಾದ ಬಾಲಾಕನೊಂದಿಗೆ ಪಿತೂರಿಹೂಡಿ ಅನೇಕ ಇಸ್ರಾಯೇಲ್ಯರನ್ನು ವಿಗ್ರಹಾರಾಧನೆ ಮತ್ತು ಲೈಂಗಿಕ ಅನೈತಿಕತೆಯ ಪಾಶಕ್ಕೆ ಸೆಳೆದನು. ಬಿಳಾಮನ ಕೃತ್ಯಗಳ ವಿರುದ್ಧ ಕ್ರಿಯೆಗೈದ ಫಿನೇಹಾಸನಂತೆಯೇ ಕ್ರೈಸ್ತ ಹಿರಿಯರು ನೀತಿಯ ವಿಷಯದಲ್ಲಿ ದೃಢರಾಗಿರುವ ಆವಶ್ಯಕತೆಯಿದೆ. (ಅರಣ್ಯಕಾಂಡ 22:​1–25:15; 2 ಪೇತ್ರ 2:​15, 16; ಯೂದ 11) ವಾಸ್ತವದಲ್ಲಿ ಎಲ್ಲಾ ಕ್ರೈಸ್ತರು, ವಿಗ್ರಹಾರಾಧನೆ ಮತ್ತು ಲೈಂಗಿಕ ಅನೈತಿಕತೆಯು ಸಭೆಯೊಳಗೆ ನುಸುಳಿಬರುವುದರ ವಿರುದ್ಧ ಎಚ್ಚರವಾಗಿರಬೇಕು.​—ಯೂದ 3, 4.

20. ಒಬ್ಬ ಕ್ರೈಸ್ತನು ಧರ್ಮಭ್ರಷ್ಟ ಅಭಿಪ್ರಾಯಗಳನ್ನು ಮನಸ್ಸಿನಲ್ಲೇ ಪೋಷಿಸುತ್ತಿರುವಲ್ಲಿ ಅವನೇನು ಮಾಡತಕ್ಕದ್ದು?

20 ಪೆರ್ಗಮದಲ್ಲಿದ್ದ ಸಭೆಯು, ‘ನಿಕೊಲಾಯಿತರ ಬೋಧನೆಯನ್ನು ಅವಲಂಬಿಸಿರುವವರು’ ತಮ್ಮಲ್ಲಿರುವಂತೆ ಅನುಮತಿಸಿದ್ದರಿಂದ ತುಂಬ ಗಂಡಾಂತರದಲ್ಲಿತ್ತು. ಕ್ರಿಸ್ತನು ಆ ಸಭೆಗೆ ಹೇಳಿದ್ದು: “ದೇವರ ಕಡೆಗೆ ತಿರುಗಿಕೋ, ತಿರುಗಿಕೊಳ್ಳದಿದ್ದರೆ ನಾನು ಬೇಗನೇ ನಿನ್ನ ಬಳಿಗೆ ಬಂದು ನನ್ನ ಬಾಯ ಕತ್ತಿಯಿಂದ ಅವರ ಮೇಲೆ ಯುದ್ಧಮಾಡುವೆನು.” ಪಂಥವಾದಿಗಳು ಕ್ರೈಸ್ತರಿಗೆ ಆತ್ಮಿಕ ಹಾನಿಯನ್ನು ಮಾಡಲು ಬಯಸುತ್ತಾರೆ, ಮತ್ತು ಈ ರೀತಿಯಲ್ಲಿ ವಿಭಜನೆಗಳನ್ನೂ ಪಂಥಗಳನ್ನೂ ಪ್ರವರ್ಧಿಸಲು ಪಣತೊಡುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ. (ರೋಮಾಪುರ 16:​17, 18; 1 ಕೊರಿಂಥ 1:10; ಗಲಾತ್ಯ 5:​19-21) ಯಾವ ಕ್ರೈಸ್ತನಾದರೂ ಧರ್ಮಭ್ರಷ್ಟ ಅಭಿಪ್ರಾಯಗಳನ್ನು ಮನಸ್ಸಿನಲ್ಲಿ ಪೋಷಿಸುತ್ತಿರುವುದಾದರೆ ಮತ್ತು ಅವುಗಳನ್ನು ಹಬ್ಬಿಸಲು ಬಯಸುತ್ತಿರುವುದಾದರೆ, ಅವನು ಕ್ರಿಸ್ತನ ಈ ಎಚ್ಚರಿಕೆಗೆ ಕಿವಿಗೊಡಬೇಕು! ಅವನು ತನ್ನನ್ನೇ ವಿಪತ್ತಿನಿಂದ ರಕ್ಷಿಸಿಕೊಳ್ಳಲಿಕ್ಕಾಗಿ ಪಶ್ಚಾತ್ತಾಪಪಟ್ಟು, ಸಭೆಯಲ್ಲಿರುವ ಹಿರಿಯರ ಆತ್ಮಿಕ ನೆರವನ್ನು ಕೋರಬೇಕು. (ಯಾಕೋಬ 5:​13-18) ತಡಮಾಡದೇ ಕ್ರಿಯೆಗೈಯುವುದು ಅತ್ಯಾವಶ್ಯಕ, ಯಾಕೆಂದರೆ ಯೇಸು ನ್ಯಾಯತೀರ್ಪನ್ನು ಜಾರಿಗೊಳಿಸಲು ಬೇಗನೆ ಬರುತ್ತಿದ್ದಾನೆ.

21, 22. “ಬಚ್ಚಿಟ್ಟಿರುವ ಮನ್ನವನ್ನು” ಯಾರು ತಿನ್ನುತ್ತಾರೆ, ಮತ್ತು ಅದು ಏನನ್ನು ಸಾಂಕೇತಿಸುತ್ತದೆ?

21 ನಂಬಿಗಸ್ತ ಅಭಿಷಿಕ್ತ ಕ್ರೈಸ್ತರು ಮತ್ತು ಅವರ ನಿಷ್ಠಾವಂತ ಸಂಗಾತಿಗಳು, ಬರುತ್ತಿರುವ ನ್ಯಾಯತೀರ್ಪಿಗೆ ಹೆದರಬೇಕಾಗಿಲ್ಲ. ದೇವರ ಪವಿತ್ರಾತ್ಮದ ನಿರ್ದೇಶನದಿಂದ ಕೊಡಲ್ಪಟ್ಟಿರುವ ಯೇಸುವಿನ ಸಲಹೆಯನ್ನು ಪಾಲಿಸುವವರೆಲ್ಲರಿಗಾಗಿ ಆಶೀರ್ವಾದಗಳು ಕಾದಿರಿಸಲ್ಪಟ್ಟಿವೆ. ದೃಷ್ಟಾಂತಕ್ಕಾಗಿ, ಲೋಕವನ್ನು ಜಯಿಸುವ ಅಭಿಷಿಕ್ತರಿಗೆ “ಬಚ್ಚಿಟ್ಟಿರುವ ಮನ್ನ”ದಲ್ಲಿ ಸ್ವಲ್ಪವನ್ನು ತಿನ್ನುವಂತೆ ಆಮಂತ್ರಿಸಲಾಗುವುದು ಮತ್ತು ‘ಹೊಸ ಹೆಸರು’ ಕೆತ್ತಲ್ಪಟ್ಟಿರುವ ಒಂದು “ಬಿಳೀ ಕಲ್ಲನ್ನೂ” ಕೊಡಲಾಗುವುದು.

22 ಅರಣ್ಯದಲ್ಲಿನ 40 ವರ್ಷಗಳ ಪ್ರಯಾಣದ ಸಮಯದಲ್ಲಿ ಇಸ್ರಾಯೇಲ್ಯರ ಪೋಷಣೆಗಾಗಿ ದೇವರು ಮನ್ನವನ್ನು ಒದಗಿಸಿದ್ದನು. ಆ “ಆಹಾರ”ದಲ್ಲಿ ಸ್ವಲ್ಪವನ್ನು ಒಡಂಬಡಿಕೆಯ ಮಂಜೂಷದೊಳಗೆ ಒಂದು ಚಿನ್ನದ ಪಾತ್ರೆಯಲ್ಲಿಡಲಾಗಿತ್ತು. ಹೀಗೆ ಅದು ದೇವದರ್ಶನಗುಡಾರದ ಅತಿಪವಿತ್ರ ಸ್ಥಾನದಲ್ಲಿ ಬಚ್ಚಿಡಲ್ಪಟ್ಟಿತ್ತು. ಮತ್ತು ಅಲ್ಲಿರುತ್ತಿದ್ದ ಒಂದು ಅದ್ಭುತಕರ ಬೆಳಕು ಯೆಹೋವನ ಪ್ರತ್ಯಕ್ಷತೆಯನ್ನು ಸಂಕೇತಿಸುತ್ತಿತ್ತು. (ವಿಮೋಚನಕಾಂಡ 16:​14, 15, 23, 26, 33; 26:34; ಇಬ್ರಿಯ 9:​3, 4) ಯಾರೂ ಆ ಬಚ್ಚಿಡಲ್ಪಟ್ಟ ಮನ್ನವನ್ನು ತಿನ್ನಲು ಅನುಮತಿಯಿರಲಿಲ್ಲ. ಆದರೆ ತಮ್ಮ ಪುನರುತ್ಥಾನದ ಸಮಯದಲ್ಲಿ ಯೇಸುವಿನ ಅಭಿಷಿಕ್ತ ಹಿಂಬಾಲಕರು ಅಮರತ್ವವನ್ನು ಧರಿಸಿಕೊಳ್ಳುತ್ತಾರೆ. ಇದು ಅವರು “ಬಚ್ಚಿಟ್ಟಿರುವ ಮನ್ನವನ್ನು” ತಿನ್ನುವುದರಿಂದ ಸಾಂಕೇತಿಸಲ್ಪಟ್ಟಿದೆ.​—1 ಕೊರಿಂಥ 15:​53-57.

23. ‘ಬಿಳೀ ಕಲ್ಲು’ ಮತ್ತು ‘ಹೊಸ ಹೆಸರಿನ’ ಸೂಚಿತಾರ್ಥವೇನು?

23 ಒಂದು ಕಪ್ಪು ಕಲ್ಲು, ರೋಮನ್‌ ನ್ಯಾಯಾಲಯಗಳಲ್ಲಿ ಖಂಡನೆಯ ತೀರ್ಪನ್ನು ಅರ್ಥೈಸುತ್ತಿತ್ತು, ಆದರೆ ಬಿಳೀ ಕಲ್ಲು ಬಿಡುಗಡೆಯನ್ನು ಸೂಚಿಸುತ್ತಿತ್ತು. ಜಯಹೊಂದುವ ಅಭಿಷಿಕ್ತ ಕ್ರೈಸ್ತರಿಗೆ ಯೇಸು ‘ಬಿಳೀ ಕಲ್ಲನ್ನು’ ಕೊಡುವುದು, ಅವನು ಅವರನ್ನು ನಿರ್ದೋಷಿಗಳೂ ನಿಷ್ಕಳಂಕರೂ ಶುದ್ಧರೂ ಆಗಿ ಪರಿಗಣಿಸುತ್ತಾನೆ ಎಂಬುದನ್ನು ಸೂಚಿಸುತ್ತದೆ. ರೋಮನರು ಪ್ರಮುಖ ಸಮಾರಂಭಗಳು ನಡೆಯುತ್ತಿದ್ದ ಸ್ಥಳಗಳಲ್ಲಿ ಪ್ರವೇಶವನ್ನು ಪಡೆಯಲಿಕ್ಕಾಗಿಯೂ ಕಲ್ಲುಗಳನ್ನು ಉಪಯೋಗಿಸುತ್ತಿದ್ದದರಿಂದ, ಈ ‘ಬಿಳೀ ಕಲ್ಲು’ ಒಬ್ಬ ಅಭಿಷಿಕ್ತ ವ್ಯಕ್ತಿಯು ಕುರಿಮರಿಯ ವಿವಾಹಕ್ಕಾಗಿ ಸ್ವರ್ಗೀಯ ಸ್ಥಾನವನ್ನು ಪ್ರವೇಶಿಸಲು ಅನುಮತಿಸಲ್ಪಡುವುದನ್ನೂ ಸೂಚಿಸಬಹುದು. (ಪ್ರಕಟನೆ 19:​7-9) ಆ ‘ಹೊಸ ಹೆಸರು’ ಯೇಸುವಿನೊಂದಿಗೆ ಸ್ವರ್ಗೀಯ ರಾಜ್ಯದಲ್ಲಿ ಜೊತೆ ಬಾಧ್ಯಸ್ಥರಾಗಿ ಐಕ್ಯರಾಗುವ ಸುಯೋಗವನ್ನು ಸೂಚಿಸುತ್ತದೆಂಬುದು ಸುವ್ಯಕ್ತ. ಇದೆಲ್ಲವೂ ಅಭಿಷಿಕ್ತರಿಗೂ ಪರದೈಸ್‌ ಭೂಮಿಯಲ್ಲಿ ಜೀವಿಸಲು ನಿರೀಕ್ಷಿಸುತ್ತಿದ್ದು, ಯೆಹೋವನ ಸೇವೆಯಲ್ಲಿ ಅವರ ಸಂಗಾತಿಗಳಾಗಿರುವವರಿಗೂ ಎಷ್ಟೊಂದು ಉತ್ತೇಜನವನ್ನು ಕೊಡುತ್ತದೆ!

24. ಧರ್ಮಭ್ರಷ್ಟತೆಯ ಸಂಬಂಧದಲ್ಲಿ ನಾವು ಯಾವ ಸ್ಥಾನವನ್ನು ತೆಗೆದುಕೊಳ್ಳಬೇಕು?

24 ಪೆರ್ಗಮದ ಸಭೆಯು ಧರ್ಮಭ್ರಷ್ಟರಿಂದ ಅಪಾಯಕ್ಕೊಳಗಾಗಿತ್ತೆಂಬುದನ್ನು ನೆನಪಿನಲ್ಲಿಡುವುದು ವಿವೇಕದ ಸಂಗತಿಯಾಗಿದೆ. ನಾವು ಇರುವಂಥ ಸಭೆಯ ಆತ್ಮಿಕ ಕ್ಷೇಮಕ್ಕೆ ತದ್ರೀತಿಯ ಸನ್ನಿವೇಶವೊಂದು ಬೆದರಿಕೆಯನ್ನೊಡ್ಡುವಲ್ಲಿ, ನಾವು ಧರ್ಮಭ್ರಷ್ಟತೆಯನ್ನು ಸಂಪೂರ್ಣವಾಗಿ ತ್ಯಜಿಸಿ, ಸತ್ಯದಲ್ಲಿ ನಡೆಯುತ್ತಾ ಇರೋಣ. (ಯೋಹಾನ 8:​32, 44; 3 ಯೋಹಾನ 4) ಸುಳ್ಳು ಬೋಧಕರು ಇಲ್ಲವೆ ಧರ್ಮಭ್ರಷ್ಟತೆಯ ಕಡೆಗೆ ಒಲವುಳ್ಳ ವ್ಯಕ್ತಿಗಳು ಒಂದು ಇಡೀ ಸಭೆಯನ್ನು ಭ್ರಷ್ಟಗೊಳಿಸಬಲ್ಲರು. ಆದುದರಿಂದ ನಾವು ಧರ್ಮಭ್ರಷ್ಟತೆಯ ವಿರುದ್ಧ ದೃಢವಾದ ನಿಲುವನ್ನು ಕಾಪಾಡಿಕೊಂಡು, ದುಷ್ಟ ರೀತಿಯ ಬೋಧನೆಯು ನಾವು ಸತ್ಯಕ್ಕೆ ವಿಧೇಯರಾಗುವುದರಿಂದ ನಮ್ಮನ್ನು ತಡೆಯುವಂತೆ ಎಂದಿಗೂ ಅನುಮತಿಸಬಾರದು.​—ಗಲಾತ್ಯ 5:​7-12; 2 ಯೋಹಾನ 8-11.

25. ಕ್ರಿಸ್ತನು ಯಾವ ಸಭೆಗಳಿಗೆ ಕಳುಹಿಸಿದಂಥ ಸಂದೇಶಗಳನ್ನು ಮುಂದಿನ ಲೇಖನದಲ್ಲಿ ಚರ್ಚಿಸಲಾಗುವುದು?

25 ನಾವೀಗ ಪರಿಗಣಿಸಿರುವಂಥ ಏಷ್ಯಾ ಮೈನರ್‌ನ ಏಳು ಸಭೆಗಳಲ್ಲಿ ಮೂರು ಸಭೆಗಳಿಗೆ ಮಹಿಮಾಭರಿತನಾದ ಯೇಸು ಕ್ರಿಸ್ತನು ಎಷ್ಟೊಂದು ವಿಚಾರಪ್ರೇರಕ ಶ್ಲಾಘನೆ ಹಾಗೂ ಸಲಹೆಯ ಮಾತುಗಳನ್ನಾಡಿದನು! ಆದರೆ ಪವಿತ್ರಾತ್ಮದಿಂದ ನಿರ್ದೇಶಿಸಲ್ಪಟ್ಟಂತೆ, ಉಳಿದಿರುವ ನಾಲ್ಕು ಸಭೆಗಳಿಗೂ ಅವನಿಗೆ ಹೇಳಲು ಬಹಳಷ್ಟಿದೆ. ಥುವತೈರ, ಸಾರ್ದಿಸ್‌, ಫಿಲದೆಲ್ಫಿಯ ಮತ್ತು ಲವೊದಿಕೀಯ ಸಭೆಗಳಿಗೆ ನಿರ್ದೇಶಿಸಲ್ಪಟ್ಟ ಈ ಸಂದೇಶಗಳು ಮುಂದಿನ ಲೇಖನದಲ್ಲಿ ಚರ್ಚಿಸಲ್ಪಡುವವು.

ನೀವು ಹೇಗೆ ಉತ್ತರಿಸುವಿರಿ?

• ಕ್ರಿಸ್ತನು ಸಭೆಗಳಿಗೆ ಏನನ್ನುತ್ತಾನೊ ಅದಕ್ಕೆ ನಾವೇಕೆ ಗಮನಕೊಡಬೇಕು?

• ಒಂದು ಸಭೆಗಿದ್ದ ಆರಂಭದ ಪ್ರೀತಿಯನ್ನು ಪುನಃ ಹೊತ್ತಿಸಲು ನಾವು ಹೇಗೆ ಶಕ್ತರಾಗಬಹುದು?

• ಪ್ರಾಚೀನ ಸ್ಮುರ್ನದ ಕ್ರೈಸ್ತರು ಆರ್ಥಿಕವಾಗಿ ಬಡವರಾಗಿದ್ದರೂ ನಿಜವಾಗಿಯೂ ಐಶ್ವರ್ಯವಂತರಾಗಿದ್ದರು ಎಂದು ಏಕೆ ಹೇಳಸಾಧ್ಯವಿದೆ?

• ಪೆರ್ಗಮದ ಸಭೆಯಲ್ಲಿದ್ದ ಸನ್ನಿವೇಶದ ಕುರಿತಾಗಿ ಪರ್ಯಾಲೋಚಿಸುವಾಗ, ನಾವು ಧರ್ಮಭ್ರಷ್ಟ ಯೋಚನಾರೀತಿಯನ್ನು ಹೇಗೆ ದೃಷ್ಟಿಸಬೇಕು?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಭೂಪಟ]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಗ್ರೀಸ್‌

ಏಷ್ಯಾ ಮೈನರ್‌

ಎಫೆಸ

ಸ್ಮುರ್ನ

ಪೆರ್ಗಮ

ಥುವತೈರ

ಸಾರ್ದಿಸ್‌

ಫಿಲದೆಲ್ಫಿಯ

ಲವೊದಿಕೀಯ

[ಪುಟ 12ರಲ್ಲಿರುವ ಚಿತ್ರ]

“ಮಹಾ ಸಮೂಹವು” ಭೂಪರದೈಸಿನಲ್ಲಿ ಆನಂದಿಸುವುದು

[ಪುಟ 13ರಲ್ಲಿರುವ ಚಿತ್ರಗಳು]

ಹಿಂಸಿಸಲ್ಪಟ್ಟಿರುವ ಕ್ರೈಸ್ತರು ಲೋಕ ವಿಜೇತರಾಗಿದ್ದಾರೆ