ಟೇಷನ್—ಕ್ರೈಸ್ತಮತ ಸಮರ್ಥಕನೋ ಪಾಷಂಡವಾದಿಯೊ?
ಟೇಷನ್—ಕ್ರೈಸ್ತಮತ ಸಮರ್ಥಕನೋ ಪಾಷಂಡವಾದಿಯೊ?
ಅಪೊಸ್ತಲ ಪೌಲನ ಮೂರನೇ ಮಿಷನೆರಿ ಪ್ರಯಾಣವು ಕೊನೆಗೊಳ್ಳುವಾಗ, ಎಫೆಸ ಸಭೆಯ ಹಿರೀ ಪುರುಷರೊಂದಿಗೆ ಅವನು ಒಂದು ಕೂಟವನ್ನು ಏರ್ಪಡಿಸಿದನು. ಅವನು ಅವರಿಗೆ ತಿಳಿಸಿದ್ದು: “ನಾನು ಹೋದ ಮೇಲೆ ಕ್ರೂರವಾದ ತೋಳಗಳು ನಿಮ್ಮೊಳಗೆ ಬರುವವೆಂದು ನಾನು ಬಲ್ಲೆನು; ಅವು ಹಿಂಡನ್ನು ಕನಿಕರಿಸುವದಿಲ್ಲ. ಇದಲ್ಲದೆ ನಿಮ್ಮಲ್ಲಿಯೂ ಕೆಲವರು ಎದ್ದು ವ್ಯತ್ಯಾಸ ಬೋಧನೆಗಳನ್ನು ಮಾಡಿ ಯೇಸುವಿನ ಶಿಷ್ಯರನ್ನು ತಮ್ಮ ಹಿಂದೆ ಎಳಕೊಳ್ಳುವರು.”—ಅ. ಕೃತ್ಯಗಳು 20:29, 30.
ಪೌಲನ ಮಾತಿಗನುಸಾರ, ಸಾಮಾನ್ಯ ಶಕದ ಎರಡನೆಯ ಶತಮಾನವು ಬದಲಾವಣೆಯ ಮತ್ತು ಮುಂತಿಳಿಸಲ್ಪಟ್ಟಿದ್ದ ಧರ್ಮಭ್ರಷ್ಟತೆಯ ಸಮಯವಾಗಿ ಪರಿಣಮಿಸಿತು. ಕೆಲವು ವಿಶ್ವಾಸಿಗಳ ನಂಬಿಕೆಯನ್ನು ಹಾಳುಮಾಡಿದಂಥ ಜನಪ್ರಿಯವಾದ ಧಾರ್ಮಿಕ ಮತ್ತು ತತ್ತ್ವಜ್ಞಾನ ಚಳವಳಿಯಾದ ಅಧ್ಯಾತ್ಮ ರಹಸ್ಯವಾದ (ನಾಸ್ಟಿಕ್ ವಾದ)ವು ಆ ಸಮಯದಲ್ಲಿ ಪ್ರಬಲವಾಗಿತ್ತು. ಈ ನಾಸ್ಟಿಕರು, ಭೌತಿಕವಾದದ್ದೆಲ್ಲಾ ಕೆಟ್ಟದ್ದೆಂದೂ ಆತ್ಮ ಸಂಬಂಧವಾಗಿರುವುದು ಮಾತ್ರ ಒಳ್ಳೆಯದೆಂದೂ ನಂಬಿದರು. ಭೌತಿಕ ದೇಹವೆಲ್ಲ ಕೆಟ್ಟದ್ದೆಂದು ಅವರು ವಾದಿಸುವುದರಿಂದ, ವಿವಾಹ ಮತ್ತು ಸಂತಾನೋತ್ಪತ್ತಿಯು ಸೈತಾನನಿಂದ ಬಂದದ್ದಾಗಿದೆ ಎಂದು ಹೇಳಿ ಅವರು ಅದನ್ನು ನಿರಾಕರಿಸುತ್ತಾರೆ. ಆತ್ಮ ಸಂಬಂಧವಾಗಿರುವುದು ಮಾತ್ರ ಒಳ್ಳೆಯದಾಗಿರುವುದರಿಂದ, ಭೌತಿಕ ದೇಹದಲ್ಲಿ ಮನುಷ್ಯನು ಏನು ಮಾಡಿದರೂ ಚಿಂತೆಯಿಲ್ಲವೆಂದು ಅವರಲ್ಲಿ ಕೆಲವರು ನಂಬಿದರು. ಇಂಥ ದೃಷ್ಟಿಕೋನವು, ಅವರು ಒಂದೇ ಸಂನ್ಯಾಸವನ್ನು ಇಲ್ಲವೆ ಶಾರೀರಿಕ ವಿಷಯಗಳಲ್ಲೇ ಮುಳುಗಿರುವಂತಹ ರೀತಿಯ ಅತಿರೇಕ ಜೀವನ ಶೈಲಿಯನ್ನು ಬೆನ್ನಟ್ಟುವಂತೆ ನಡೆಸಿತು. ನಾಸ್ಟಿಕ್ ವಾದದಿಂದ ಅಥವಾ ಸ್ವಜ್ಞಾನದಿಂದ ಮಾತ್ರವೇ ರಕ್ಷಣೆ ದೊರೆಯುತ್ತದೆ ಎಂಬುದಾಗಿ ನಾಸ್ಟಿಕರು ವಾದಿಸುತ್ತಾರೆ. ಆದುದರಿಂದ, ದೇವರ ವಾಕ್ಯದ ಸತ್ಯವನ್ನು ಅವರು ತ್ಯಜಿಸುತ್ತಾರೆ.
ನಾಸ್ಟಿಕ್ ವಾದವೆಂಬ ಈ ಅಪಾಯಕ್ಕೆ ಕ್ರೈಸ್ತರೆನಿಸಿಕೊಳ್ಳುವವರು ಹೇಗೆ ಪ್ರತಿಕ್ರಿಯಿಸಿದರು? ಸುಶಿಕ್ಷಿತರಾಗಿದ್ದ ಕೆಲವು ವ್ಯಕ್ತಿಗಳು ಈ ಸುಳ್ಳು ಸಿದ್ಧಾಂತದ ವಿರುದ್ಧ ದಂಗೆ ಎದ್ದರು, ಆದರೆ ಇತರರು ಅದರ ಪ್ರಭಾವಕ್ಕೆ ಬಲಿಯಾದರು. ಉದಾಹರಣೆಗೆ, ಐರೀನೀಯಸ್ ಈ ಪಾಷಂಡ ಬೋಧನೆಗೆ ವಿರುದ್ಧವಾಗಿ ಜೀವನಪರ್ಯಂತ ಹೋರಾಡಿದನು. ಅವನು, ಅಪೊಸ್ತಲರ ಕಾಲದಲ್ಲಿ ಜೀವಿಸಿದ ಪಾಲಿಕಾರ್ಪ್‌ನಿಂದ ಶಿಕ್ಷಿತನಾಗಿದ್ದನು. ಪಾಲಿಕಾರ್ಪ್, ಯೇಸು ಕ್ರಿಸ್ತನ ಮತ್ತು ಅವನ ಅಪೊಸ್ತಲರ ಬೋಧನೆಗಳಿಗೆ ಸ್ಥಿರವಾಗಿ ಅಂಟಿಕೊಂಡಿದ್ದನು. ಆದರೆ, ಐರೀನೀಯಸ್‌ನ ಸ್ನೇಹಿತನಾದ ಫ್ಲೋರೀನಸ್ ಪಾಲಿಕಾರ್ಪ್‌ನಿಂದಲೇ ಶಿಕ್ಷಿತನಾಗಿದ್ದರೂ, ಕ್ರಮೇಣ ಅತಿ ಪ್ರಖ್ಯಾತ ನಾಸ್ಟಿಕ್ ವಾದಿಯಾಗಿದ್ದ ವೆಲಂಟೈನಸ್‌ನ ಬೋಧನೆಗೆ ಬಲಿಯಾದನು. ನಿಜವಾಗಿಯೂ, ಅವು ಅತ್ಯಂತ ಗೊಂದಲಮಯ ಸಮಯವಾಗಿದ್ದವು ಎಂಬುದರಲ್ಲಿ ಯಾವ ಸಂಶಯವೂ ಇಲ್ಲ.
ಎರಡನೆಯ ಶತಮಾನದ ಪ್ರಸಿದ್ಧ ಬರಹಗಾರನಾದ ಟೇಷನ್‌ನ ಬರಹಗಳು, ಆ ಸಮಯಾವಧಿಯ ಜನರ ಧಾರ್ಮಿಕ ನೋಟಗಳ ಮೇಲೆ ಬೆಳಕನ್ನು ಬೀರುತ್ತವೆ. ಟೇಷನ್ ಯಾವ ರೀತಿಯ ವ್ಯಕ್ತಿಯಾಗಿದ್ದನು? ಅವನು ಹೇಗೆ ಕ್ರೈಸ್ತನೆನಿಸಿಕೊಂಡನು? ನಾಸ್ಟಿಕ್ ವಾದ ಎಂಬ ಪಾಷಂಡವಾದದ ಪ್ರಭಾವವನ್ನು ಟೇಷನ್ ಹೇಗೆ ಎದುರಿಸಿದನು? ಅವನ ಉತ್ತರಗಳು ಮತ್ತು ಸ್ವಂತ ಉದಾಹರಣೆಯು, ಇಂದಿರುವ ಸತ್ಯದ ಅನ್ವೇಷಕರಿಗೆ ಅಮೂಲ್ಯವಾದ ಪಾಠಗಳನ್ನು ಒದಗಿಸುತ್ತದೆ.
“ಕೆಲವು ವಿದೇಶೀ ಬರಹಗಳ” ಸಂಪರ್ಕ
ಟೇಷನ್ ಅರಾಮ್ಯದ ನಿವಾಸಿಯಾಗಿದ್ದನು. ವಿಸ್ತೃತ ದೇಶಸಂಚಾರ ಮತ್ತು ಅಧಿಕ ಓದುವಿಕೆಯು, ಅವನ ದಿನಗಳ ಗ್ರೀಕ್-ರೋಮನ್ ಸಂಸ್ಕೃತಿಯಲ್ಲಿ ಅವನಿಗೆ ಯಥೇಚ್ಛವಾದ ಜ್ಞಾನವನ್ನು ಒದಗಿಸಿತು. ಟೇಷನ್ ಒಬ್ಬ ಸಂಚಾರಿ ಭಾಷಣಕಾರನೋಪಾದಿ ರೋಮ್‌ಗೆ ಬಂದನು. ಅವನು ರೋಮ್‌ನಲ್ಲಿದ್ದಾಗ, ಅವನ
ಗಮನವು ಕ್ರೈಸ್ತತ್ವದ ಕಡೆಗೆ ಸೆಳೆಯಲ್ಪಟ್ಟಿತು. ಅವನು ಜಸ್ಟಿನ್ ಮಾರ್ಟರ್‌ನೊಂದಿಗೆ ಪ್ರಾಯಶಃ ಅವನ ಶಿಷ್ಯನಾಗಿ ಸಹವಾಸಿಸಲಾರಂಭಿಸಿದನು.ತನ್ನ ದಿನದಲ್ಲಿದ್ದಂಥ ಕ್ರೈಸ್ತತ್ವಕ್ಕೆ ಅವನ ಮತಾಂತರದ ಕುರಿತು ತಿಳಿಸುವ ದಾಖಲೆಯಲ್ಲಿ, ಟೇಷನ್ ಹೇಳುವುದು: “ಸತ್ಯವನ್ನು ಹೇಗೆ ಕಂಡುಕೊಳ್ಳಸಾಧ್ಯವಿದೆ ಎಂಬುದಾಗಿ ನಾನು ಅನ್ವೇಷಣೆಮಾಡಿದೆ.” ಶಾಸ್ತ್ರವಚನಗಳನ್ನು ಓದಲು ಅವನಿಗೆ ಸಂದರ್ಭ ದೊರೆತಾಗಿನ ವೈಯಕ್ತಿಕ ಅನುಭವದ ಕುರಿತು ಅವನು ಹೇಳುವುದು: “ನಾನು, ಕೆಲವು ವಿದೇಶೀ ಬರಹಗಳನ್ನು ಕಂಡುಕೊಂಡೆ. ಗ್ರೀಕ್ ಜನರ ಅಭಿಪ್ರಾಯಗಳೊಂದಿಗೆ ಹೋಲಿಸುವಾಗ ಅವು ಅತಿ ಹಳೆಯ ಬರಹವಾಗಿದ್ದವು, ಆದರೆ ಗ್ರೀಕ್ ಜನರ ಬರಹಗಳಲ್ಲಿರುವ ತಪ್ಪುಗಳಿಗೆ ಹೋಲಿಸುವಾಗ ಈ ಬರಹಗಳು ಅತ್ಯುತ್ಕೃಷ್ಟವಾಗಿದ್ದವು; ಇವುಗಳ ಸರಳವಾದ ಭಾಷೆ, ಬರಹಗಾರರ ಯಥಾರ್ಥತೆ, ಭವಿಷ್ಯತ್ತಿನ ಕುರಿತು ಇವು ಮುಂತಿಳಿಸಿರುವ ವಿಷಯ, ಅತ್ಯುತ್ತಮ ಗುಣಮಟ್ಟದ ಆಜ್ಞೆಗಳು, ಮತ್ತು ವಿಶ್ವದ ಪರಮಾಧಿಕಾರಿಯು ಒಬ್ಬನೇ ಎಂದು ಇವು ಮಾಡುವ ಘೋಷಣೆಯಿಂದ ನಾನು ಈ ಬರಹಗಳಲ್ಲಿ ನಂಬಿಕೆಯನ್ನಿಡುವಂತೆ ಪ್ರೇರಿಸಲ್ಪಟ್ಟೆ.”
ಟೇಷನನು ತನ್ನ ದಿನದ ಕ್ರೈಸ್ತತ್ವವನ್ನು ಪರೀಕ್ಷಿಸುವಂತೆ ಮತ್ತು ಅನ್ಯಧರ್ಮದಲ್ಲಿರುವ ಗಲಿಬಿಲಿಗೆ ವಿರುದ್ಧವಾಗಿ ಕ್ರೈಸ್ತತ್ವದಲ್ಲಿರುವ ಸರಳತೆ ಹಾಗೂ ಸ್ಪಷ್ಟತೆಯನ್ನು ಗಮನಿಸುವಂತೆ ತನ್ನ ಸಮಕಾಲೀನರನ್ನು ಆಮಂತ್ರಿಸಲು ಹಿಂಜರಿಯಲಿಲ್ಲ. ಅವನ ಬರಹಗಳಿಂದ ನಾವೇನನ್ನು ಕಲಿಯಸಾಧ್ಯವಿದೆ?
ಅವನ ಬರಹಗಳು ಏನನ್ನು ತಿಳಿಯಪಡಿಸುತ್ತವೆ?
ಟೇಷನ್‌ನ ಬರಹಗಳು ಅವನನ್ನು, ತನ್ನ ಧಾರ್ಮಿಕ ನಂಬಿಕೆಗಳನ್ನು ಧೈರ್ಯದಿಂದ ತರ್ಕಿಸುವ ಕ್ರೈಸ್ತ ಮತದ ಒಬ್ಬ ಸಮರ್ಥಕನನ್ನಾಗಿ ತೋರಿಸಿಕೊಡುತ್ತವೆ. ವಿಧರ್ಮಿ ತತ್ತ್ವಜ್ಞಾನದ ಕಡೆಗೆ ಅವನಿಗೆ ಕಟ್ಟುನಿಟ್ಟಿನ ಮತ್ತು ದ್ವೇಷದ ಮನೋಭಾವವಿತ್ತು. ಗ್ರೀಕರಿಗೆ ಸಂಬೋಧನೆ (ಇಂಗ್ಲಿಷ್) ಎಂಬ ಟೇಷನ್‌ನ ಬರಹದಲ್ಲಿ, ವಿಧರ್ಮಿ ಆಚರಣೆಗಳ ವ್ಯರ್ಥತೆಯನ್ನೂ ಅವನು ತಿಳಿದಿದ್ದ ಕ್ರೈಸ್ತತ್ವದ ವಿವೇಚನಾಶೀಲತೆಯನ್ನೂ ಒತ್ತಿಹೇಳಿದನು. ಗ್ರೀಕರ ತತ್ತ್ವಜ್ಞಾನದ ಕಡೆಗೆ ತನ್ನ ಉಪೇಕ್ಷೆಯನ್ನು ವ್ಯಕ್ತಪಡಿಸಿದಾಗ, ಅದನ್ನು ಅವನು ಬಹು ಒರಟಾಗಿ ತಿಳಿಸಿದ್ದಾನೆ. ಉದಾಹರಣೆಗೆ, ತತ್ತ್ವಜ್ಞಾನಿ ಹೆರಕ್ಲೈಟಸ್‌ನನ್ನು ಸೂಚಿಸುತ್ತಾ ಅವನು ಹೇಳಿದ್ದು: “ಮರಣವು ಈ ವ್ಯಕ್ತಿಯ ಮೂರ್ಖತವನ್ನು ವ್ಯಕ್ತಪಡಿಸಿತು. ಅವನು ಜಲೋದರ ರೋಗದಿಂದ ಬಾಧಿತನಾಗಿದ್ದನು. ಅವನು, ವೈದ್ಯಶಾಸ್ತ್ರ ಮತ್ತು ತತ್ತ್ವಜ್ಞಾನವನ್ನು ಅಭ್ಯಾಸ ಮಾಡಿದ್ದ ಕಾರಣ ತನ್ನ ಇಡಿ ದೇಹಕ್ಕೆ ಸೆಗಣಿಯನ್ನು ಹಚ್ಚಿಕೊಂಡನು. ಒಣಗುತ್ತಾ ಬಂದಂತೆ ಅದು ಅವನ ಇಡೀ ದೇಹವನ್ನು ಸುಕ್ಕುಗಟ್ಟಿಸಿತು ಮತ್ತು ದೇಹವು ಒಡೆಯಲಾರಂಭಿಸಿ ಅವನು ಮರಣಹೊಂದಿದನು.”
ಟೇಷನ್, ಸಮಸ್ತ ವಿಷಯಕ್ಕೆ ಮೂಲನಾದ ಒಬ್ಬ ದೇವರಲ್ಲಿ ನಂಬಿಕೆಯಿಟ್ಟನು. (ಇಬ್ರಿಯ 3:4) ಗ್ರೀಕರಿಗೆ ಸಂಬೋಧನೆ (ಇಂಗ್ಲಿಷ್) ಎಂಬ ತನ್ನ ಪುಸ್ತಕದಲ್ಲಿ, ಅವನು ದೇವರನ್ನು “ಆತ್ಮಸ್ವರೂಪನು” ಎಂಬುದಾಗಿ ಸೂಚಿಸುತ್ತಾ ಹೇಳಿದ್ದು: “ಅವನೊಬ್ಬನೇ ಆದಿಯಿಲ್ಲದವನು, ಮತ್ತು ಅವನೇ ಸಮಸ್ತಕ್ಕೂ ಮೂಲಕಾರಣನು.” (ಯೋಹಾನ 4:24; 1 ತಿಮೊಥೆಯ 1:17) ಆರಾಧನೆಯಲ್ಲಿ ವಿಗ್ರಹಗಳ ಉಪಯೋಗವನ್ನು ನಿರಾಕರಿಸುತ್ತಾ ಟೇಷನ್ ಬರೆಯುವುದು: “ಮರದ ತುಂಡನ್ನು ಮತ್ತು ಕಲ್ಲುಗಳನ್ನು ನಾನು ದೇವರೆಂದು ಹೇಗೆ ಹೇಳಸಾಧ್ಯವಿದೆ?” (1 ಕೊರಿಂಥ 10:14) ವಾಕ್ಯವೆಂಬವನು ಅಥವಾ ಲೋಗೋಸ್, ಸ್ವರ್ಗೀಯ ತಂದೆಯ ಸೃಷ್ಟಿಗೆಲ್ಲಾ ಜ್ಯೇಷ್ಠಪುತ್ರನು ಮತ್ತು ತದನಂತರ ವಿಶ್ವವನ್ನು ಸೃಷ್ಟಿಸುವಾಗ ಅವನನ್ನು ಉಪಯೋಗಿಸಲಾಯಿತು ಎಂಬುದನ್ನು ಟೇಷನ್ ನಂಬಿದ್ದನು. (ಯೋಹಾನ 1:1-3; ಕೊಲೊಸ್ಸೆ 1:13-17) ನೇಮಿತ ಸಮಯದಲ್ಲಿ ಸಂಭವಿಸುವ ಪುನರುತ್ಥಾನದ ಕುರಿತು ಟೇಷನ್ ತಿಳಿಸುವುದು: “ಎಲ್ಲಾ ವಿಷಯಗಳ ಅಂತ್ಯದ ನಂತರ ದೇಹಗಳಿಗೆ ಪುನರುತ್ಥಾನವಾಗುವುದು ಎಂಬುದನ್ನು ನಾವು ನಂಬುತ್ತೇವೆ.” ನಾವು ಏಕೆ ಸಾಯುತ್ತೇವೆ ಎಂಬುದರ ಕುರಿತು ಟೇಷನ್ ಬರೆಯುವುದು: “ನಾವು ಮರಣಹೊಂದಲು ಸೃಷ್ಟಿಸಲ್ಪಡಲಿಲ್ಲ, ಆದರೆ ನಾವು ನಮ್ಮ ಸ್ವಂತ ದೋಷದಿಂದ ಮರಣಹೊಂದುತ್ತೇವೆ. ನಮ್ಮ ಸ್ವ-ಇಷ್ಟವು ನಮ್ಮನ್ನು ನಾಶಮಾಡಿದೆ; ಸ್ವತಂತ್ರರಾಗಿದ್ದ ನಾವು ಈಗ ದಾಸರಾಗಿದ್ದೇವೆ; ಪಾಪದ ಕಾರಣ ನಾವು ಮಾರಲ್ಪಟ್ಟಿದ್ದೇವೆ.”
ಮಾನವನ ದೇಹದ ಯಾವುದೋ ಒಂದು ಭಾಗವು ಅವನ ಮರಣವನ್ನು ಪಾರಾಗುವುದರ ಸಾಧ್ಯತೆಯ ಕುರಿತು ಟೇಷನ್ ನೀಡುವ ವಿವರಣೆಯು ಗಲಿಬಿಲಿಯನ್ನು ಹುಟ್ಟಿಸುವಂತಹದ್ದಾಗಿದೆ. ಅವನು ತಿಳಿಸುವುದು: “ಗ್ರೀಕರೇ, ಆತ್ಮವು ತನ್ನಲ್ಲೇ ಅಮರವಲ್ಲ, ಆದರೆ ಮರಣಾಧೀನ. ಆದರೂ, ಸಾಯದೇ ಇರಲು ಅದಕ್ಕೆ ಸಾಧ್ಯವಿದೆ. ಸತ್ಯವನ್ನು ತಿಳಿಯದೆ ಇದ್ದಲ್ಲಿ ಮಾತ್ರ ಆತ್ಮವು ಸಾಯುತ್ತದೆ ಮತ್ತು ದೇಹದೊಂದಿಗೆ ಇಲ್ಲದೆ ಹೋಗುತ್ತದೆ. ಆದರೆ ಲೋಕದ ಅಂತ್ಯದಲ್ಲಿ ದೇಹವು ಎಬ್ಬಿಸಲ್ಪಡುವಾಗ ಅದರೊಂದಿಗೆ ಆತ್ಮವೂ ಎದ್ದುಬರುತ್ತದೆ. ನಂತರ ಆತ್ಮವು ಅಮರತ್ವವನ್ನು ಒಂದು ಮರಣದಂಡನೆಯಾಗಿ ಪಡೆಯುತ್ತದೆ.” ಈ ಹೇಳಿಕೆಗಳ ಮೂಲಕ ಟೇಷನ್ ನಿಜವಾಗಿಯೂ ಏನನ್ನು ಅರ್ಥೈಸಿದನೆಂಬುದು ಯಾರಿಗೂ ತಿಳಿದಿಲ್ಲ. ಅವನು ಬೈಬಲಿನ ಕೆಲವು ಬೋಧನೆಗಳಿಗೆ ಅಂಟಿಕೊಂಡು, ಅದೇ ಸಮಯದಲ್ಲಿ ಶಾಸ್ತ್ರೀಯ ಸತ್ಯತೆಯನ್ನು ವಿಧರ್ಮಿ ತತ್ತ್ವಜ್ಞಾನಗಳೊಂದಿಗೆ ವಿಲೀನಗೊಳಿಸುವ ಮೂಲಕ ಒಂದುವೇಳೆ ತನ್ನ ಸಮಕಾಲೀನರಿಂದ ಮೆಚ್ಚಿಕೆಯನ್ನು ಪಡೆಯಲು ಬಯಸಿದ್ದಿರಬಹುದೋ?
ಡಯಟೆಸರನ್ ಅಥವಾ ನಾಲ್ಕು ಸುವಾರ್ತೆಗಳ ಸಾಮರಸ್ಯ (ಇಂಗ್ಲಿಷ್) ಎಂಬುದು ಟೇಷನ್‌ನ ಇನ್ನೊಂದು ಪ್ರಸಿದ್ಧವಾದ ಕೃತಿಯಾಗಿದೆ. ಮೊತ್ತಮೊದಲಾಗಿ ಟೇಷನ್ ಸಿರಿಯದಲ್ಲಿರುವ ಸಭೆಗಳಿಗೆ ಅವರ ಮಾತೃಭಾಷೆಯಲ್ಲಿ ಸುವಾರ್ತಾ ಪುಸ್ತಕಗಳನ್ನು ಒದಗಿಸಿದನು. ನಾಲ್ಕು ಸುವಾರ್ತೆಗಳ ಸಾರವನ್ನು ಸಂಗ್ರಹಿಸಿ, ಒಂದು ಹೊಂದಿಕೆಯಾದ ವೃತ್ತಾಂತವಾಗಿ ಸಂಕಲಿಸಲ್ಪಟ್ಟಿರುವ ಈ ಕೃತಿಯು ಬಹಳ ಗಣ್ಯಮಾಡಲ್ಪಟ್ಟಿರುವ ಕೃತಿಯಾಗಿದೆ. ಇದನ್ನು ಸಿರಿಯನ್ ಚರ್ಚ್ ಉಪಯೋಗಿಸಿತು.
ಒಬ್ಬ ಕ್ರೈಸ್ತನೋ ಅಥವಾ ಪಾಷಂಡವಾದಿಯೊ?
ಟೇಷನ್‌ನ ಬರಹಗಳನ್ನು ಕೂಲಂಕಷವಾಗಿ ಪರೀಕ್ಷಿಸುವಾಗ, ಅವನಿಗೆ ಶಾಸ್ತ್ರವಚನಗಳ ಪರಿಚಯವಿತ್ತು ಮತ್ತು ಅವುಗಳ ಕಡೆಗೆ ಆಳವಾದ ಗೌರವವಿತ್ತು ಎಂಬುದು ವ್ಯಕ್ತವಾಗುತ್ತದೆ. ಶಾಸ್ತ್ರವಚನಗಳು ಅವನ ಮೇಲೆ ಬೀರಿದ ಪ್ರಭಾವದ ಕುರಿತು ಅವನು ಬರೆಯುವುದು: “ನನಗೆ ಐಶ್ವರ್ಯವಂತನಾಗಬೇಕೆಂಬ ಬಯಕೆಯಿಲ್ಲ; ನಾನು ಮಿಲಿಟರಿ ಅಧಿಕಾರವನ್ನು ಬಿಟ್ಟುಬಿಟ್ಟೆ; ವ್ಯಭಿಚಾರವನ್ನು ನಾನು ಹಗೆಮಾಡಿದೆ; ಸಂಪತ್ತಿನ ಅತ್ಯಾಸೆಯಿಂದ ನಾವಿಕನಾಗಬೇಕೆಂದು ನಾನು ಪ್ರಚೋದಿಸಲ್ಪಡಲಿಲ್ಲ; . . . ಖ್ಯಾತಿ ಪಡೆಯಬೇಕೆಂಬ ಹುಚ್ಚು ಆಸೆಯಿಂದ ನಾನು ಸ್ವತಂತ್ರನು; . . . ಜನರು ಸುಖಾನುಭವದ ಜೀವನವನ್ನೋ ಅಥವಾ ದಾರಿದ್ರ್ಯದ ಜೀವನವನ್ನೋ, ಯಾವುದನ್ನು ಅನುಭವಿಸುತ್ತಿದ್ದರೂ ಎಲ್ಲರೂ ಒಂದೇ ಸೂರ್ಯನಿಂದ ಪ್ರಯೋಜನ ಪಡೆದುಕೊಳ್ಳುತ್ತಾರೆ, ಎಲ್ಲರೂ ಮರಣಹೊಂದುತ್ತಾರೆ.” ಟೇಷನ್ ಬುದ್ಧಿಹೇಳುವುದು: “ಲೋಕದಲ್ಲಿರುವ ಹುಚ್ಚುತನವನ್ನು ನಿರಾಕರಿಸುತ್ತಾ, ಲೋಕದ ವಿಷಯದಲ್ಲಿ ಮರಣಹೊಂದಿರಿ, ಮತ್ತು ದೇವರ ಚಿತ್ತವನ್ನು ಗ್ರಹಿಸಿಕೊಂಡು ನಿಮ್ಮ ಹಳೆಯ ವ್ಯಕ್ತಿತ್ವವನ್ನು ತೆಗೆದುಹಾಕಿ, ದೇವರಿಗಾಗಿ ಜೀವಿಸಿರಿ.”—ಮತ್ತಾಯ 5:45; 1 ಕೊರಿಂಥ 6:18; 1 ತಿಮೊಥೆಯ 6:10.
ಹಾಗಿದ್ದರೂ, ರಕ್ಷಕನ ಸಿದ್ಧಾಂತಕ್ಕನುಸಾರ ಪರಿಪೂರ್ಣತೆಯತ್ತ (ಇಂಗ್ಲಿಷ್) ಎಂಬ ಟೇಷನ್‌ನ ಬರಹವನ್ನು ಪರಿಗಣಿಸಿರಿ. ಅವನು ಈ ಬರಹದಲ್ಲಿ, ವಿವಾಹದ ಏರ್ಪಾಡನ್ನು ಪಿಶಾಚನು ಸ್ಥಾಪಿಸಿದನೆಂಬುದಾಗಿ ತಿಳಿಸುತ್ತಾನೆ. ಜನರು ವಿವಾಹದ ಮೂಲಕ ನಶಿಸಿಹೋಗುವ ಈ ಲೋಕಕ್ಕೆ ತಮ್ಮನ್ನು ದಾಸರನ್ನಾಗಿ ಮಾಡಿಕೊಳ್ಳುತ್ತಾರೆ ಎಂಬುದಾಗಿ ಅವನು ವಾದಿಸುತ್ತಾನೆ. ಈ ಕಾರಣ, ಟೇಷನ್ ವಿವಾಹವನ್ನು ಬಲವಾಗಿ ವಿರೋಧಿಸುತ್ತಾನೆ.
ಸಾಮಾನ್ಯ ಶಕ 166ರಲ್ಲಿ ಜಸ್ಟಿನ್ ಮಾರ್ಟರ್ ನಿಧನನಾದ ನಂತರ, ಏಕ್ರಾಟೀಟಸ್ ಎಂದು ಕರೆಯಲಾದ ಸಂನ್ಯಾಸ ಪಂಥವನ್ನು ಟೇಷನ್ ಆರಂಭಿಸಿದನು ಅಥವಾ ಅದರೊಂದಿಗೆ ಸಹವಾಸಿಸಲಾರಂಭಿಸಿದನು. ಈ ಪಂಥದಲ್ಲಿ, ದಮೆ ಮತ್ತು ಸ್ವದೇಹದ ಮೇಲೆ ಪೂರ್ಣವಾದ ನಿಗ್ರಹಕ್ಕೆ ಮಹತ್ವವನ್ನು ಕೊಡಲಾಯಿತು. ದ್ರಾಕ್ಷಾಮದ್ಯ, ವಿವಾಹ ಮತ್ತು ಸಂಪತ್ತನ್ನು ಹೊಂದಿರುವುದು ಮುಂತಾದವುಗಳಿಂದ ದೂರವಿರುವುದನ್ನು ಅಗತ್ಯಪಡಿಸುವ ಸಂನ್ಯಾಸ ತತ್ತ್ವವನ್ನು ಅವರು ರೂಢಿಸಿಕೊಂಡರು.
ಕಲಿತುಕೊಳ್ಳಬೇಕಾಗಿರುವ ಒಂದು ಪಾಠ
ಟೇಷನ್ ಯಾವ ಕಾರಣಕ್ಕಾಗಿ ಶಾಸ್ತ್ರವಚನಗಳ ಬೋಧನೆಯಿಂದ ಅಷ್ಟೊಂದು ದೂರ ಸಾಗಿದನು? ಅವನು “ಕೇಳಿ ಮರೆತುಹೋಗುವ” ವ್ಯಕ್ತಿಯಂತಾದನೋ? (ಯಾಕೋಬ 1:23-25) ಟೇಷನ್ ಸುಳ್ಳು ಕಥೆಗಳನ್ನು ತಳ್ಳಿಬಿಡಲು ಅಶಕ್ತನಾದ ಕಾರಣ, ಮಾನವ ತತ್ತ್ವಜ್ಞಾನಕ್ಕೆ ಬಲಿಯಾದನೋ? (ಕೊಲೊಸ್ಸೆ 2:8; 1 ತಿಮೊಥೆಯ 4:7) ಅವನು ಬೆಂಬಲಿಸಿದ ತಪ್ಪುಗಳು ಬಹಳವಾಗಿರುವುದರಿಂದ, ಒಂದುವೇಳೆ ಅವನು ಮಾನಸಿಕ ಸಮತೆಯನ್ನು ಕಳೆದುಕೊಂಡನೆಂದು ನಾವು ಶಂಕಿಸಬಹುದೋ?
ಕಾರಣವು ಏನೇ ಇರಲಿ, ಟೇಷನ್‌ನ ಬರಹಗಳು ಮತ್ತು ಅವನ ಉದಾಹರಣೆಯು ಅವನ ದಿನಗಳ ಧಾರ್ಮಿಕ ಸ್ಥಿತಿಯ ಚಿತ್ರಣವನ್ನು ನಮಗೆ ಒದಗಿಸುತ್ತದೆ. ಲೌಕಿಕ ತತ್ತ್ವಜ್ಞಾನವು ಎಷ್ಟು ಹಾನಿಕಾರಕವಾಗಿರಸಾಧ್ಯವಿದೆ ಎಂಬುದನ್ನು ಅದು ನಮಗೆ ತೋರಿಸುತ್ತದೆ. “ಜ್ಞಾನೋಪದೇಶವೆಂದು ಸುಳ್ಳಾಗಿ ಹೇಳಿಕೊಳ್ಳುವ ಬೋಧನೆಗೆ ಸಂಬಂಧಪಟ್ಟ ಪ್ರಾಪಂಚಿಕವಾದ ಆ ಹರಟೆಮಾತು”ಗಳಿಂದ ದೂರವಿರಬೇಕೆಂಬ ಅಪೊಸ್ತಲ ಪೌಲನ ಎಚ್ಚರಿಕೆಯನ್ನು ನಾವು ಹೃದಯಕ್ಕೆ ತೆಗೆದುಕೊಳ್ಳೋಣ.—1 ತಿಮೊಥೆಯ 6:20.