ದೇವರಾತ್ಮವು ಹೇಳುವುದನ್ನು ಕೇಳಿರಿ!
ದೇವರಾತ್ಮವು ಹೇಳುವುದನ್ನು ಕೇಳಿರಿ!
‘ದೇವರಾತ್ಮವು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.’—ಪ್ರಕಟನೆ 3:22.
1, 2. ಪ್ರಕಟನೆಯಲ್ಲಿ ಹೆಸರಿಸಲ್ಪಟ್ಟಿರುವ ಏಳು ಸಭೆಗಳಿಗೆ ಯೇಸು ಕೊಟ್ಟ ಸಂದೇಶಗಳ ಸಂಬಂಧದಲ್ಲಿ ಯಾವ ಸಲಹೆಯು ಪುನರುಚ್ಚರಿಸಲ್ಪಟ್ಟಿದೆ?
ಬೈಬಲಿನ ಪ್ರಕಟನೆ ಪುಸ್ತಕದಲ್ಲಿ ಹೆಸರಿಸಲ್ಪಟ್ಟಿರುವ ಏಳು ಸಭೆಗಳಿಗೆ ಯೇಸು ಕ್ರಿಸ್ತನು ನುಡಿದಂಥ ಆತ್ಮಪ್ರೇರಿತ ಮಾತುಗಳಿಗೆ ಯೆಹೋವನ ಸೇವಕರು ಗಮನಕೊಡಬೇಕು. ಮತ್ತು ಆ ಸಂದೇಶಗಳಲ್ಲಿ ಪ್ರತಿಯೊಂದರಲ್ಲಿಯೂ ಈ ಸಲಹೆಯು ಕೊಡಲ್ಪಟ್ಟಿದೆ: “ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕಿವಿಯುಳ್ಳವನು ಕೇಳಲಿ.”—ಪ್ರಕಟನೆ 2:7, 11, 17, 29; 3:6, 13, 22.
2 ಎಫೆಸ, ಸ್ಮುರ್ನ ಮತ್ತು ಪೆರ್ಗಮದ ದೂತರಿಗೆ ಇಲ್ಲವೆ ಮೇಲ್ವಿಚಾರಕರಿಗೆ ಯೇಸು ಕೊಟ್ಟ ಸಂದೇಶಗಳನ್ನು ನಾವು ಈಗಾಗಲೇ ಪರಿಗಣಿಸಿದ್ದೇವೆ. ಉಳಿದ ನಾಲ್ಕು ಸಭೆಗಳಿಗೆ ಅವನು ಪವಿತ್ರಾತ್ಮದ ಸಹಾಯದಿಂದ ಹೇಳಿದಂಥ ವಿಷಯಗಳಿಂದ ನಾವು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ?
ಥುವತೈರದಲ್ಲಿರುವ ದೂತನಿಗೆ
3. ಥುವತೈರ ಎಲ್ಲಿತ್ತು, ಮತ್ತು ಅದು ವಿಶೇಷವಾಗಿ ಯಾವ ಉತ್ಪನ್ನಕ್ಕಾಗಿ ಸುಪ್ರಸಿದ್ಧವಾಗಿತ್ತು?
3 “ದೇವಕುಮಾರನು” ಥುವತೈರದಲ್ಲಿದ್ದ ಸಭೆಗೆ ಶ್ಲಾಘನೆಯನ್ನೂ ಗದರಿಕೆಯನ್ನೂ ಕೊಡುತ್ತಾನೆ. (ಪ್ರಕಟನೆ 2:18-29ನ್ನು ಓದಿರಿ.) ಥುವತೈರ (ಈಗ ಅಖೀಸರ್)ವನ್ನು ಏಷ್ಯಾ ಮೈನರ್‌ನ ಪಶ್ಚಿಮ ಭಾಗದಲ್ಲಿದ್ದ ಗಡೀಸ್ (ಪ್ರಾಚೀನಕಾಲದಲ್ಲಿ ಹರ್ಮಸ್) ನದಿಯ ಉಪನದಿಯೊಂದರ ಪಕ್ಕದಲ್ಲಿ ಕಟ್ಟಲಾಗಿತ್ತು. ಆ ನಗರವು ಅಸಂಖ್ಯಾತ ಕರಕುಶಲ ವಸ್ತುಗಳಿಗೆ ಪ್ರಸಿದ್ಧವಾಗಿತ್ತು. ಅಲ್ಲಿನ ವರ್ಣದ್ರವ್ಯಗಳ ತಯಾರಕರು, ಸುಪ್ರಸಿದ್ಧವಾದ ಕಡುಗೆಂಪು ಇಲ್ಲವೆ ಕೆನ್ನೀಲಿ ಬಣ್ಣಗಳ ಉತ್ಪಾದನೆಯಲ್ಲಿ ಮ್ಯಾಡರ್ ಬಳ್ಳಿಯ ಬೇರುಗಳನ್ನು ಬಳಸುತ್ತಿದ್ದರು. ಪೌಲನು ಗ್ರೀಸ್‌ನಲ್ಲಿದ್ದ ಫಿಲಿಪ್ಪಿಗೆ ಭೇಟಿ ನೀಡಿದಾಗ ಕ್ರೈಸ್ತಳಾಗಿ ಪರಿಣಮಿಸಿದ ಲುದ್ಯಳು, “ಧೂಮ್ರವರ್ಣದ ವಸ್ತ್ರಗಳನ್ನು ಮಾರುವವಳೂ ಥುವತೈರ ಎಂಬ ಊರಿನವಳೂ” ಆಗಿದ್ದಳು.—ಅ. ಕೃತ್ಯಗಳು 16:12-15.
4. ಥುವತೈರದ ಸಭೆಯನ್ನು ಯಾವುದಕ್ಕಾಗಿ ಶ್ಲಾಘಿಸಲಾಯಿತು?
4 ಥುವತೈರದಲ್ಲಿದ್ದ ಸಭೆಯ ಸುಕೃತ್ಯಗಳಿಗಾಗಿಯೂ, ಪ್ರೀತಿ, ನಂಬಿಕೆ, ತಾಳ್ಮೆ ಮತ್ತು ಶುಶ್ರೂಷೆಯಲ್ಲಿನ ಶ್ರಮೆಗಾಗಿಯೂ ಯೇಸು ಅದನ್ನು ಶ್ಲಾಘಿಸುತ್ತಾನೆ. ವಾಸ್ತವದಲ್ಲಿ, ‘ಅವರ ಕಡೇ ಕೃತ್ಯಗಳು ಅವರ ಮೊದಲಿನ ಕೃತ್ಯಗಳಿಗಿಂತ ಹೆಚ್ಚಾದವುಗಳಾಗಿದ್ದವು.’ ನಮ್ಮ ಗತಕಾಲದ ಕುರಿತು ನಮಗೆ ಒಂದು ಒಳ್ಳೇ ದಾಖಲೆಯಿರುವುದಾದರೂ ನಮ್ಮ ನೈತಿಕತೆಗಳ ಬಗ್ಗೆ ನಾವೆಂದೂ ನಿರ್ಲಕ್ಷ್ಯದಿಂದಿರಬಾರದು.
5-7. (ಎ) “ಯೆಜೆಬೇಲೆಂಬ ಆ ಹೆಂಗಸು” ಯಾರಾಗಿದ್ದಳು, ಮತ್ತು ಅವಳ ಪ್ರಭಾವದ ಕುರಿತು ಏನು ಮಾಡಬೇಕಾಗಿತ್ತು? (ಬಿ) ಥುವತೈರದ ಸಭೆಗೆ ಕ್ರಿಸ್ತನು ಕೊಟ್ಟ ಸಂದೇಶವು, ದೇವಭಕ್ತಿಯುಳ್ಳ ಸ್ತ್ರೀಯರಿಗೆ ಏನನ್ನು ಮಾಡುವಂತೆ ಸಹಾಯಮಾಡುತ್ತದೆ?
5 ಥುವತೈರದಲ್ಲಿದ್ದ ಸಭೆಯು, ವಿಗ್ರಹಾರಾಧನೆ, ಸುಳ್ಳು ಬೋಧನೆ ಮತ್ತು ಲೈಂಗಿಕ ಅನೈತಿಕತೆಯನ್ನು ಸಹಿಸುತ್ತಿತ್ತು. ಅವರ ಮಧ್ಯದಲ್ಲಿ “ಯೆಜೆಬೇಲೆಂಬ ಆ ಹೆಂಗಸು” ಇದ್ದಳು. ಇವಳು, ಹತ್ತು ಗೋತ್ರಗಳ ರಾಜ್ಯವಾದ ಇಸ್ರಾಯೇಲಿನ ದುಷ್ಟ ರಾಣಿ ಈಜೆಬೆಲಳಿಗಿದ್ದಂಥ ಗುಣಲಕ್ಷಣಗಳಿದ್ದ ಸ್ತ್ರೀಯರ ಒಂದು ಗುಂಪಿಗೆ ಸೂಚಿತವಾಗಿದ್ದಿರಬಹುದು. ಥುವತೈರದ ಈ ‘ಪ್ರವಾದಿನಿಯರು,’ ಸ್ಥಳಿಕ ವ್ಯಾಪಾರಿಗಳು ಮತ್ತು ಕರಕುಶಲಿಗಳ ಮಂಡಳಿಯು ಸೂಚಿಸುವ ದೇವದೇವತೆಗಳನ್ನು ಕ್ರೈಸ್ತರು ಆರಾಧಿಸುವಂತೆ, ಮತ್ತು ಆಹಾರವನ್ನು ವಿಗ್ರಹಗಳಿಗೆ ನೈವೇದ್ಯಮಾಡಲಾಗುತ್ತಿದ್ದ ಹಬ್ಬಗಳಲ್ಲಿ ಭಾಗವಹಿಸುವಂತೆ ಅವರನ್ನು ಸೆಳೆಯಲು ಪ್ರಯತ್ನಿಸುತ್ತಿದ್ದರೆಂದು ಕೆಲವು ವಿದ್ವಾಂಸರು ಸೂಚಿಸುತ್ತಾರೆ. ಇಂದಿನ ಕ್ರೈಸ್ತ ಸಭೆಯಲ್ಲಿ, ಯಾವುದೇ ಸ್ವನೇಮಿತ ಪ್ರವಾದಿನಿಯು ಇತರರನ್ನು ತನ್ನ ವಶದಲ್ಲಿಟ್ಟುಕೊಳ್ಳಲು ಪ್ರಯತ್ನಿಸದಿರಲಿ!
6 ಕ್ರಿಸ್ತನು ‘ಅವಳನ್ನು ರೋಗದ ಹಾಸಿಗೆಯ ಮೇಲೆ ಬಿದ್ದುಕೊಂಡಿರುವಂತೆ ಮಾಡಲಿದ್ದನು, ಮತ್ತು ಅವಳೊಂದಿಗೆ ವ್ಯಭಿಚಾರಮಾಡುವವರು ತಮ್ಮ ಮನಸ್ಸನ್ನು ದೇವರ ಕಡೆಗೆ ತಿರುಗಿಸಿಕೊಂಡು ಅವಳ ಕೃತ್ಯಗಳನ್ನು ಬಿಟ್ಟುಬಿಡದೆ ಹೋದರೆ ಮಹಾ ಸಂಕಟದಲ್ಲಿ ಬೀಳುವಂತೆ ಮಾಡಲಿದ್ದನು.’ ಅಂಥ ದುಷ್ಟ ಬೋಧನೆ ಮತ್ತು ಪ್ರಭಾವಕ್ಕೆ ಮೇಲ್ವಿಚಾರಕರು ಎಂದಿಗೂ ಮಣಿಯಬಾರದು. ಕ್ರೈಸ್ತನೊಬ್ಬನು ಆತ್ಮಿಕ ಮತ್ತು ಶಾರೀರಿಕ ವ್ಯಭಿಚಾರವನ್ನು ಇಲ್ಲವೆ ವಿಗ್ರಹಾರಾಧನೆಯನ್ನು ಮಾಡಿಯೇ, ‘ಸೈತಾನನ ಅಗಾಧ ವಿಷಯಗಳು’ (NW) ಸಂಪೂರ್ಣವಾಗಿ ಕೆಟ್ಟವುಗಳಾಗಿವೆ ಎಂಬುದನ್ನು ಗ್ರಹಿಸಬೇಕಾಗಿಲ್ಲ. ನಾವು ಯೇಸುವಿನ ಎಚ್ಚರಿಕೆಯನ್ನು ಪಾಲಿಸಿದರೆ, ‘ನಮಗಿರುವದನ್ನು ನಾವು ಬಿಗಿಯಾಗಿ ಹಿಡುಕೊಂಡಿರುವೆವು’ ಮತ್ತು ಪಾಪವು ನಮ್ಮ ಮೇಲೆ ಪ್ರಭುತ್ವ ನಡೆಸದು. ಅಭಿಷಿಕ್ತ ಕ್ರೈಸ್ತರು ದೈವಿಕವಲ್ಲದ ಆಚಾರವಿಚಾರಗಳು, ಭೋಗಾಶೆಗಳು ಮತ್ತು ಗುರಿಗಳನ್ನು ತ್ಯಜಿಸಿದ್ದರಿಂದಾಗಿ, ಅವರ ಪುನರುತ್ಥಾನವಾಗುವಾಗ ಅವರು ‘ಜನಾಂಗಗಳ ಮೇಲೆ ಅಧಿಕಾರವನ್ನು’ ಹೊಂದುವರು ಮತ್ತು ಅವುಗಳನ್ನು ಚೂರುಚೂರಾಗಿ ಮಾಡುವುದರಲ್ಲಿ ಯೇಸುವಿನೊಂದಿಗೆ ಜೊತೆಗೂಡುವರು. ಆಧುನಿಕ ದಿನದ ಸಭೆಗಳಲ್ಲಿ ಸಾಂಕೇತಿಕ ನಕ್ಷತ್ರಗಳಿವೆ, ಮತ್ತು ಅಭಿಷಿಕ್ತ ಕ್ರೈಸ್ತರು ಸ್ವರ್ಗಕ್ಕೆ ಪುನರುತ್ಥಾನಗೊಳಿಸಲ್ಪಡುವಾಗ, ಅವರಿಗೆ ‘ಉದಯಸೂಚಕವಾದ ಪ್ರಕಾಶವುಳ್ಳ ನಕ್ಷತ್ರ’ವನ್ನು ಅಂದರೆ ಮದಲಿಂಗನಾದ ಯೇಸು ಕ್ರಿಸ್ತನನ್ನು ಕೊಡಲಾಗುವುದು.—ಪ್ರಕಟನೆ 22:16.
7 ಧರ್ಮಭ್ರಷ್ಟ ಹೆಂಗಸರ ದುಷ್ಟ ಪ್ರಭಾವವನ್ನು ಸಹಿಸದಿರುವಂತೆ ಥುವತೈರದ ಸಭೆಯನ್ನು ಎಚ್ಚರಿಸಲಾಯಿತು. ಆ ಸಭೆಗೆ ಕ್ರಿಸ್ತನು ಕೊಟ್ಟ ಆತ್ಮಪ್ರೇರಿತವಾದ ಸಂದೇಶವು, ಇಂದಿರುವ ದೇವಭಕ್ತಿಯುಳ್ಳ ಸ್ತ್ರೀಯರು ತಮ್ಮ ದೇವನೇಮಿತ ಸ್ಥಾನದಲ್ಲಿರುವಂತೆ ಅವರಿಗೆ ಸಹಾಯಮಾಡುತ್ತದೆ. ಅವರು ಪುರುಷರ ಮೇಲೆ ಅಧಿಕಾರವನ್ನು ಚಲಾಯಿಸಲು ಮತ್ತು ಯಾವುದೇ ಸಹೋದರರನ್ನು ಆತ್ಮಿಕವಾಗಿ ಇಲ್ಲವೆ ಶಾರೀರಿಕವಾಗಿ ವ್ಯಭಿಚಾರಕ್ಕೆ ಸೆಳೆಯಲು ಪ್ರಯತ್ನಿಸುವುದಿಲ್ಲ. (1 ತಿಮೊಥೆಯ 2:12) ಅದಕ್ಕೆ ಬದಲಾಗಿ, ಅಂಥ ಸ್ತ್ರೀಯರು ಸುಕೃತ್ಯಗಳಲ್ಲಿ ಮತ್ತು ದೇವರಿಗೆ ಸ್ತುತಿಯನ್ನು ತರುವ ಸೇವೆಯಲ್ಲಿ ಉತ್ತಮ ಮಾದರಿಯನ್ನಿಡುತ್ತಾರೆ. (ಕೀರ್ತನೆ 68:11; 1 ಪೇತ್ರ 3:1-6) ಸಭೆಯು ತನಗಿರುವುದನ್ನು, ಅಂದರೆ ಶುದ್ಧ ಬೋಧನೆ ಮತ್ತು ನಡತೆ ಹಾಗೂ ಅಮೂಲ್ಯವಾದ ರಾಜ್ಯ ಸೇವೆಯನ್ನು ಕಾಪಾಡಿಕೊಂಡರೆ, ಕ್ರಿಸ್ತನು ನಾಶನದೊಂದಿಗಲ್ಲ ಬದಲಾಗಿ ಆಶೀರ್ವದಿತ ಪ್ರತಿಫಲಗಳೊಂದಿಗೆ ಬರುವನು.
ಸಾರ್ದಿಸಿನಲ್ಲಿರುವ ದೂತನಿಗೆ
8. (ಎ) ಸಾರ್ದಿಸ್ ಎಲ್ಲಿತ್ತು, ಮತ್ತು ಆ ನಗರದ ಕೆಲವೊಂದು ವಿವರಗಳು ಯಾವುವು? (ಬಿ) ಸಾರ್ದಿಸಿನಲ್ಲಿದ್ದ ಸಭೆಗೆ ಏಕೆ ಸಹಾಯದ ಅಗತ್ಯವಿತ್ತು?
8 ಸಾರ್ದಿಸಿನಲ್ಲಿದ್ದ ಸಭೆಗೆ ತುರ್ತಾಗಿ ಸಹಾಯದ ಅಗತ್ಯವಿತ್ತು, ಯಾಕೆಂದರೆ ಅದು ಆತ್ಮಿಕವಾಗಿ ಮೃತಸ್ಥಿತಿಯಲ್ಲಿತ್ತು. (ಪ್ರಕಟನೆ 3:1-6ನ್ನು ಓದಿರಿ.) ಥುವತೈರದ ದಕ್ಷಿಣಕ್ಕೆ ಸುಮಾರು 50 ಕಿಲೊಮೀಟರ್‌ಗಳಷ್ಟು ದೂರದಲ್ಲಿದ್ದ ಸಾರ್ದಿಸ್, ಚಟುವಟಿಕೆಯಿಂದ ಗಿಜಿಗುಟ್ಟುತ್ತಿದ್ದ ಒಂದು ನಗರವಾಗಿತ್ತು. ವ್ಯಾಪಾರ, ಆ ಕ್ಷೇತ್ರದ ಫಲವತ್ತತೆ, ಮತ್ತು ಉಣ್ಣೆ ಬಟ್ಟೆ ಹಾಗೂ ರತ್ನಗಂಬಳಿಗಳ ಉತ್ಪಾದನೆಯು, ಅದನ್ನು ಒಂದು ಧನಿಕ ನಗರವನ್ನಾಗಿ ಮಾಡಲು ಸಹಾಯಮಾಡಿತ್ತು. ಒಂದು ಕಾಲದಲ್ಲಿ ಅಲ್ಲಿ ಸುಮಾರು 50,000 ನಿವಾಸಿಗಳು ಇದ್ದರು. ಇತಿಹಾಸಗಾರನಾದ ಜೋಸೀಫಸನಿಗನುಸಾರ, ಸಾರ್ದಿಸಿನಲ್ಲಿ ಸಾ.ಶ.ಪೂ. ಒಂದನೆಯ ಶತಮಾನದಲ್ಲಿ ಒಂದು ದೊಡ್ಡ ಯೆಹೂದಿ ಸಮುದಾಯವಿತ್ತು. ಆ ನಗರದ ಅವಶೇಷಗಳಲ್ಲಿ ಒಂದು ಸಭಾಮಂದಿರ ಮತ್ತು ಎಫೆಸದ ಅರ್ತೆಮೀ ದೇವಿಯ ಮಂದಿರವು ಇದೆ.
9. ನಮ್ಮ ಸೇವಾ ಚಟುವಟಿಕೆಗಳು ಯಾಂತ್ರಿಕವಾಗಿರುವಲ್ಲಿ ಏನು ಮಾಡತಕ್ಕದ್ದು?
9 ಸಾರ್ದಿಸಿನಲ್ಲಿದ್ದ ಸಭೆಯ ದೂತನಿಗೆ ಕ್ರಿಸ್ತನಂದದ್ದು: “ನಿನ್ನ ಕೃತ್ಯಗಳನ್ನು ಬಲ್ಲೆನು; ಜೀವಿಸುವವನು ಎಂದು ಹೆಸರು ನಿನಗಿದ್ದರೂ ಸತ್ತವನಾಗಿದ್ದೀ ಎಂಬದನ್ನು ಬಲ್ಲೆನು.” ನಮಗೆ ಆತ್ಮಿಕವಾಗಿ ಎಚ್ಚರವಾಗಿದ್ದೇವೆಂಬ ಹೆಸರಿದ್ದರೂ, ಕ್ರೈಸ್ತ ಸುಯೋಗಗಳ ವಿಷಯದಲ್ಲಿ ನಾವು ನಿದ್ದೆಹೋಗಿರುವಲ್ಲಿ ಮತ್ತು ನಮ್ಮ ಸೇವಾ ಚಟುವಟಿಕೆಗಳು ಯಾಂತ್ರಿಕವಾಗಿರುವಲ್ಲಿ ಮತ್ತು ಆತ್ಮಿಕವಾಗಿ ‘ಸಾಯುವ ಹಾಗೆ’ ಇರುವಲ್ಲಿ ಆಗೇನು? ಆಗ ರಾಜ್ಯ ಸಂದೇಶವನ್ನು ‘ನಾವು ಹೊಂದಿದ ಮತ್ತು ಕೇಳಿದ ರೀತಿಯನ್ನು ನೆನಪಿಗೆ ತಂದುಕೊಳ್ಳುತ್ತಾ’ ಇರುವ ಅಗತ್ಯವಿದೆ ಮತ್ತು ಪವಿತ್ರ ಸೇವೆಯಲ್ಲಿನ ನಮ್ಮ ಪ್ರಯತ್ನಗಳಲ್ಲಿ ನಾವು ಪುನಃ ಜೀವತುಂಬಿಸಬೇಕಾಗಿದೆ. ಕ್ರೈಸ್ತ ಕೂಟಗಳಲ್ಲಿ ನಾವು ಖಂಡಿತವಾಗಿಯೂ ಪೂರ್ಣ ಹೃದಯದಿಂದ ಪಾಲ್ಗೊಳ್ಳಲಾರಂಭಿಸಬೇಕು. (ಇಬ್ರಿಯ 10:24, 25) ಸಾರ್ದಿಸಿನಲ್ಲಿದ್ದ ಸಭೆಗೆ ಕ್ರಿಸ್ತನು ಹೀಗೆ ಎಚ್ಚರಿಸಿದನು: “ನೀನು ಎಚ್ಚರವಾಗಿಲ್ಲದಿದ್ದರೆ ಕಳ್ಳನು ಬರುವಂತೆ ಬರುವೆನು; ನಾನು ಯಾವ ಗಳಿಗೆಯಲ್ಲಿ ನಿನ್ನ ಮೇಲೆ ಬರುವೆನೋ ಅದು ನಿನಗೆ ತಿಳಿಯುವದೇ ಇಲ್ಲ.” ನಮ್ಮ ದಿನದ ಕುರಿತಾಗಿ ಏನು? ಬೇಗನೆ ನಾವೂ ಲೆಕ್ಕವನ್ನು ಒಪ್ಪಿಸಬೇಕು.
10. ಸಾರ್ದಿಸಿನಲ್ಲಿದ್ದಂಥ ಸನ್ನಿವೇಶದ ಮಧ್ಯದಲ್ಲಿಯೂ, ಕೆಲವು ಮಂದಿ ಕ್ರೈಸ್ತರ ವಿಷಯದಲ್ಲಿ ಯಾವ ಮಾತು ಸತ್ಯವಾಗಿರಬಹುದು?
10 ಸಾರ್ದಿಸಿನಲ್ಲಿದ್ದಂಥ ಸನ್ನಿವೇಶದಲ್ಲಿ ಇರುವುದಾದರೂ, ‘ತಮ್ಮ ವಸ್ತ್ರಗಳನ್ನು ಮೈಲಿಗೆ ಮಾಡಿಕೊಳ್ಳದಿರುವ ಮತ್ತು ಶುಭ್ರವಸ್ತ್ರಗಳನ್ನು ಧರಿಸಿಕೊಂಡು ಕ್ರಿಸ್ತನ ಜೊತೆಯಲ್ಲಿ ನಡೆಯುವ’ ಕೆಲವರು ಸಭೆಯಲ್ಲಿ ಇರಬಹುದು. ಅವರು ನಿಷ್ಕಳಂಕರಾಗಿ ಉಳಿದು, ಈ ಲೋಕದಿಂದ ಯಾವುದೇ ನೈತಿಕ ಮತ್ತು ಧಾರ್ಮಿಕ ದೋಷವು ಹತ್ತದಂತೆ ನೋಡಿಕೊಂಡು, ತಮ್ಮ ಕ್ರೈಸ್ತ ಗುರುತನ್ನು ಕಾಪಾಡಿಕೊಳ್ಳುತ್ತಾರೆ. (ಯಾಕೋಬ 1:27) ಹೀಗಿರುವುದರಿಂದ ಯೇಸು ‘ಜೀವಬಾಧ್ಯರ ಪಟ್ಟಿಯಿಂದ ಅವರ ಹೆಸರನ್ನು ಅಳಿಸಿಬಿಡದೆ ಅವರನ್ನು ತನ್ನವರೆಂದು ತಂದೆಯ ಮುಂದೆಯೂ ಆತನ ದೂತರ ಮುಂದೆಯೂ ಒಪ್ಪಿಕೊಳ್ಳುವನು.’ ಕ್ರಿಸ್ತನ ಅಭಿಷಿಕ್ತ ಕ್ರೈಸ್ತರ ಮದಲಗಿತ್ತಿ ವರ್ಗದವರು ಅವನೊಂದಿಗೆ ನಡೆಯಲು ಯೋಗ್ಯರೆಂದು ಘೋಷಿಸಲ್ಪಟ್ಟವರಾಗಿ, ಪ್ರಕಾಶಮಾನವೂ ನಿರ್ಮಲವೂ ಆದ ನಯವಾದ ನಾರುಮಡಿಯನ್ನು ಧರಿಸಿಕೊಳ್ಳುವರು. ಇದು ದೇವರ ಪವಿತ್ರ ಜನರ ನೀತಿಯ ಕೃತ್ಯಗಳನ್ನು ಸಂಕೇತಿಸುತ್ತದೆ. (ಪ್ರಕಟನೆ 19:8) ಸ್ವರ್ಗದಲ್ಲಿ ಅವರಿಗಾಗಿ ಕಾದಿರುವ ಅದ್ಭುತವಾದ ಸೇವಾ ಸುಯೋಗಗಳು ಈ ಲೋಕವನ್ನು ಜಯಿಸುವಂತೆ ಅವರಿಗೆ ಸ್ಫೂರ್ತಿಯನ್ನು ಕೊಡುತ್ತವೆ. ಅನಂತ ಭೂಜೀವನಕ್ಕಾಗಿ ಅರ್ಹರಾಗಿರುವವರ ಮುಂದೆಯೂ ಆಶೀರ್ವಾದಗಳು ಇರಿಸಲ್ಪಟ್ಟಿವೆ. ಅವರ ಹೆಸರುಗಳೂ ಜೀವಬಾಧ್ಯರ ಪಟ್ಟಿಯಲ್ಲಿ ಬರೆಯಲ್ಪಟ್ಟಿವೆ.
11. ನಾವು ಆತ್ಮಿಕವಾಗಿ ನಿದ್ರಾವಸ್ಥೆಗೆ ಜಾರುತ್ತಿರುವಲ್ಲಿ ಏನು ಮಾಡತಕ್ಕದ್ದು?
11 ನಿಶ್ಚಯವಾಗಿಯೂ, ನಮ್ಮಲ್ಲಿ ಯಾರೂ ಸಾರ್ದಿಸಿನಲ್ಲಿದ್ದ ಸಭೆಯ ವಿಷಾದಕರವಾದ ಆತ್ಮಿಕ ಸ್ಥಿತಿಗಿಳಿಯಲು ಬಯಸುವುದಿಲ್ಲ. ಆದರೆ ಆತ್ಮಿಕವಾಗಿ ನಾವು ನಿದ್ರಾವಸ್ಥೆಗೆ ಜಾರುತ್ತಿದ್ದೇವೆಂದು ನಮಗೆ ಗೊತ್ತಾಗುವಲ್ಲಿ ಆಗೇನು? ನಮ್ಮ ಸ್ವಂತ ಒಳಿತಿಗಾಗಿ ನಾವು ಕೂಡಲೇ ಕ್ರಿಯೆಗೈಯಬೇಕು. ನಾವು ಭಕ್ತಿಹೀನ ಮಾರ್ಗಗಳೆಡೆಗೆ ಆಕರ್ಷಿತರಾಗುತ್ತಿದ್ದೇವೆ ಇಲ್ಲವೆ ನಮ್ಮ ಕೂಟದ ಹಾಜರಿ ಅಥವಾ ಶುಶ್ರೂಷೆಯು ಕಡಿಮೆಯಾಗುತ್ತಾ ಬರುತ್ತಿದೆಯೆಂದೆಣಿಸಿರಿ. ಹಾಗಿರುವಲ್ಲಿ ಕಟ್ಟಾಸಕ್ತಿಯ ಪ್ರಾರ್ಥನೆಯ ಮೂಲಕ ನಾವು ಯೆಹೋವನ ಸಹಾಯಕ್ಕಾಗಿ ಬೇಡೋಣ. (ಫಿಲಿಪ್ಪಿ 4:6, 7, 13) ದೈನಂದಿನ ಬೈಬಲ್ ವಾಚನ ಮತ್ತು ಶಾಸ್ತ್ರಗಳ ಹಾಗೂ “ನಂಬಿಗಸ್ತ ಮನೆವಾರ್ತೆಯವನು” ಕೊಡುವ ಪ್ರಕಾಶನಗಳ ಅಧ್ಯಯನವು ನಮ್ಮ ಆತ್ಮಿಕ ಎಚ್ಚರಾವಸ್ಥೆಯನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡುವುದು. (ಲೂಕ 12:42-44) ಆಗ ನಾವು, ಸಾರ್ದಿಸಿನಲ್ಲಿ ಕ್ರಿಸ್ತನ ಮೆಚ್ಚುಗೆಗೆ ಪಾತ್ರರಾದವರಂತೆ ಇರುವೆವು ಮತ್ತು ಜೊತೆ ವಿಶ್ವಾಸಿಗಳಿಗೆ ಒಂದು ಆಶೀರ್ವಾದವಾಗಿರುವೆವು.
ಫಿಲದೆಲ್ಫಿಯದಲ್ಲಿರುವ ದೂತನಿಗೆ
12. ಪ್ರಾಚೀನ ಫಿಲದೆಲ್ಫಿಯದಲ್ಲಿದ್ದ ಧಾರ್ಮಿಕ ಸನ್ನಿವೇಶವನ್ನು ನೀವು ಹೇಗೆ ವರ್ಣಿಸುವಿರಿ?
12 ಯೇಸು ಫಿಲದೆಲ್ಫಿಯದಲ್ಲಿದ್ದ ಸಭೆಯನ್ನು ಶ್ಲಾಘಿಸಿದನು. (ಪ್ರಕಟನೆ 3:7-13ನ್ನು ಓದಿರಿ.) ಫಿಲದೆಲ್ಫಿಯ (ಈಗ ಆಲ್‌ಶಹಿರ್)ವು, ಏಷ್ಯಾ ಮೈನರ್‌ನ ಪಶ್ಚಿಮ ಭಾಗದಲ್ಲಿ ದ್ರಾಕ್ಷಾಮದ್ಯವು ತಯಾರಾಗುವ ಪ್ರದೇಶದ ಸಮೃದ್ಧ ಕೇಂದ್ರವಾಗಿತ್ತು. ವಾಸ್ತವದಲ್ಲಿ, ದ್ರಾಕ್ಷಾಮದ್ಯದ ದೇವರಾದ ಡೈಅನೈಸಸ್ ಆ ಕೇಂದ್ರದ ಮುಖ್ಯ ದೇವತೆಯಾಗಿತ್ತು. ಫಿಲದೆಲ್ಫಿಯದಲ್ಲಿದ್ದ ಯೆಹೂದ್ಯರು, ಯೆಹೂದಿ ಕ್ರೈಸ್ತರಿಗೆ ಮೋಶೆಯ ಧರ್ಮಶಾಸ್ತ್ರದ ಕೆಲವೊಂದು ಆಚಾರವಿಚಾರಗಳನ್ನು ಇಟ್ಟುಕೊಳ್ಳುವಂತೆ ಅಥವಾ ಅವುಗಳಿಗೆ ತೆರಳುವಂತೆ ಮನವೊಲಿಸಲು ಪ್ರಯತ್ನಿಸುತ್ತಿದ್ದರೆಂದು ವ್ಯಕ್ತವಾಗುತ್ತದೆ. ಆದರೆ ಈ ಪ್ರಯತ್ನಗಳು ಯಶಸ್ವಿಯಾಗಲಿಲ್ಲ.
13. ಕ್ರಿಸ್ತನು ‘ದಾವೀದನ ಬೀಗದಕೈಯನ್ನು’ ಹೇಗೆ ಉಪಯೋಗಿಸಿದ್ದಾನೆ?
13 ಕ್ರಿಸ್ತನ ಬಳಿ ‘ದಾವೀದನ ಬೀಗದಕೈ’ ಇದೆ. ಈ ಕಾರಣದಿಂದ ರಾಜ್ಯದ ಎಲ್ಲಾ ಅಭಿರುಚಿಗಳು ಹಾಗೂ ನಂಬಿಗಸ್ತ ಮನೆವಾರ್ತೆಯ ಆಡಳಿತವನ್ನು ಅವನಿಗೆ ವಹಿಸಿಕೊಡಲಾಗಿದೆ. (ಯೆಶಾಯ 22:22; ಲೂಕ 1:32) ಪ್ರಾಚೀನ ಫಿಲದೆಲ್ಫಿಯದಲ್ಲಿ ಮತ್ತು ಬೇರೆ ಕಡೆಗಳಲ್ಲಿ, ಕ್ರೈಸ್ತರಿಗೆ ರಾಜ್ಯದ ಸುಸಂದರ್ಭಗಳನ್ನು ಹಾಗೂ ಸುಯೋಗಗಳನ್ನು ತೆರೆಯಲಿಕ್ಕಾಗಿ ಯೇಸು ಆ ಬೀಗದಕೈಯನ್ನು ಉಪಯೋಗಿಸಿದನು. 1919ರಿಂದ ಅವನು ಆ “ನಂಬಿಗಸ್ತ ಮನೆವಾರ್ತೆಯವನ” ಮುಂದೆ, ರಾಜ್ಯ ಸಾರುವಿಕೆಗೆ ನಡೆಸುವಂಥ ‘ಒಂದು ದೊಡ್ಡ ಬಾಗಿಲನ್ನು’ ಇರಿಸಿದ್ದಾನೆ. ಮತ್ತು ಇದನ್ನು ಯಾವ ವಿರೋಧಿಯೂ ಮುಚ್ಚಲಾರನು. (1 ಕೊರಿಂಥ 16:9; ಕೊಲೊಸ್ಸೆ 4:2-4) ರಾಜ್ಯ ಸುಯೋಗಗಳಿಗೆ ನಡೆಸುವ ಈ ಬಾಗಿಲು, ‘ಸೈತಾನನ ಸಮಾಜದವರಿಗೆ’ ಮುಚ್ಚಲ್ಪಟ್ಟಿದೆ ಎಂಬುದಂತೂ ಖಂಡಿತ. ಏಕೆಂದರೆ ಅವರು ಆತ್ಮಿಕ ಇಸ್ರಾಯೇಲ್ಯರಲ್ಲ.
14. (ಎ) ಫಿಲದೆಲ್ಫಿಯದಲ್ಲಿದ್ದ ಸಭೆಗೆ ಯೇಸು ಯಾವ ವಚನವಿತ್ತನು? (ಬಿ) “ಶೋಧನೆಯ ಸಮಯದಲ್ಲಿ” ಬೀಳದಂತೆ ನಾವೇನು ಮಾಡಸಾಧ್ಯವಿದೆ?
14 ಪ್ರಾಚೀನ ಫಿಲದೆಲ್ಫಿಯದಲ್ಲಿದ್ದ ಕ್ರೈಸ್ತರಿಗೆ ಯೇಸು ಹೀಗೆ ವಾಗ್ದಾನಿಸಿದನು: “ನೀನು ನನ್ನ ಸಹನವಾಕ್ಯವನ್ನು ಕಾಪಾಡಿದ್ದರಿಂದ ಭೂನಿವಾಸಿಗಳನ್ನು ಪರೀಕ್ಷಿಸುವದಕ್ಕಾಗಿ ಲೋಕದ ಮೇಲೆಲ್ಲಾ ಬರುವದಕ್ಕಿರುವ ಶೋಧನೆಯ ಸಮಯದಲ್ಲಿ ನಿನ್ನನ್ನು ತಪ್ಪಿಸಿ ಕಾಪಾಡುವೆನು.” ಸಾರುವ ಕೆಲಸವನ್ನು ಮಾಡಲು ಯೇಸು ತೋರಿಸಿದಂಥ ತಾಳ್ಮೆಯು ಆವಶ್ಯಕವಾಗಿದೆ. ಅವನು ಶತ್ರುವಿಗೆ ಎಂದೂ ತಲೆಬಾಗದೆ, ತನ್ನ ತಂದೆಯ ಚಿತ್ತವನ್ನು ಮಾಡುತ್ತಾ ಇದ್ದನು. ಆದುದರಿಂದ, ಕ್ರಿಸ್ತನು ಅಮರವಾದ ಸ್ವರ್ಗೀಯ ಜೀವನಕ್ಕೆ ಪುನರುತ್ಥಾನಗೊಳಿಸಲ್ಪಟ್ಟನು. ಯೆಹೋವನನ್ನು ಆರಾಧಿಸುವ ನಮ್ಮ ನಿರ್ಣಯಕ್ಕೆ ನಾವು ಅಂಟಿಕೊಂಡು, ಸುವಾರ್ತೆಯನ್ನು ಸಾರುವ ಮೂಲಕ ರಾಜ್ಯವನ್ನು ಬೆಂಬಲಿಸುವಲ್ಲಿ, “ಶೋಧನೆಯ ಸಮಯ” ಅಂದರೆ ಸದ್ಯದ ಶೋಧನೆಯ ಕಾಲಾವಧಿಯಲ್ಲಿ ನಾವು ಬಿದ್ದುಹೋಗದಂತೆ ನಮ್ಮನ್ನು ಕಾಯಲಾಗುವುದು. ಆ ರಾಜ್ಯಾಭಿರುಚಿಗಳನ್ನು ಹೆಚ್ಚಿಸಲು ಶ್ರಮಿಸುವ ಮೂಲಕ, ನಾವು ಕ್ರಿಸ್ತನಿಂದ ಪಡೆದಿರುವಂಥದ್ದನ್ನು ‘ಹಿಡಿದುಕೊಂಡಿರುವೆವು.’ ಹೀಗೆ ಮಾಡುವುದರ ಫಲಿತಾಂಶವಾಗಿ, ಅಭಿಷಿಕ್ತರಿಗೆ ಬೆಲೆಕಟ್ಟಲಾಗದಂಥ ಒಂದು ಸ್ವರ್ಗೀಯ ಜಯಮಾಲೆ ಮತ್ತು ಅವರ ನಿಷ್ಠಾವಂತ ಸಂಗಡಿಗರಿಗೆ ಭೂಮಿಯ ಮೇಲೆ ನಿತ್ಯಜೀವವು ಸಿಗುವುದು.
15. ‘ದೇವರ ಆಲಯದಲ್ಲಿ ಸ್ತಂಭ’ಗಳಾಗಿರುವವರಿಂದ ಏನು ಅಪೇಕ್ಷಿಸಲ್ಪಟ್ಟಿದೆ?
15 ಕ್ರಿಸ್ತನು ಕೂಡಿಸಿ ಹೇಳಿದ್ದು: “ಯಾವನು ಜಯಹೊಂದುತ್ತಾನೋ ಅವನನ್ನು ನನ್ನ ದೇವರ ಆಲಯದಲ್ಲಿ ಸ್ತಂಭವಾಗಿ ನಿಲ್ಲಿಸುವೆನು; . . . ನನ್ನ ದೇವರ ಹೆಸರನ್ನೂ ನನ್ನ ದೇವರ ಬಳಿಯಿಂದ
ಪರಲೋಕದೊಳಗಿಂದ ಇಳಿದುಬರುವ ಹೊಸ ಯೆರೂಸಲೇಮ್ ಪಟ್ಟಣವೆಂಬ ನನ್ನ ದೇವರ ಪಟ್ಟಣದ ಹೆಸರನ್ನೂ ನನ್ನ ಹೊಸ ಹೆಸರನ್ನೂ ಅವನ ಮೇಲೆ ಬರೆಯುವೆನು.” ಅಭಿಷಿಕ್ತ ಮೇಲ್ವಿಚಾರಕರು ಸತ್ಯಾರಾಧನೆಯನ್ನು ಎತ್ತಿಹಿಡಿಯಬೇಕು. ದೇವರ ರಾಜ್ಯದ ಕುರಿತಾಗಿ ಸಾರುವ ಮತ್ತು ಆತ್ಮಿಕವಾಗಿ ಶುದ್ಧರಾಗಿರುವ ಮೂಲಕ ಅವರು ‘ಹೊಸ ಯೆರೂಸಲೇಮಿನಲ್ಲಿನ’ ಸದಸ್ಯತ್ವಕ್ಕಾಗಿ ಅರ್ಹರಾಗಿ ಉಳಿಯಬೇಕು. ಮಹಿಮಾಭರಿತ ಸ್ವರ್ಗೀಯ ಆಲಯದಲ್ಲಿ ಅವರು ಸ್ತಂಭಗಳಾಗಿರಬೇಕಾದರೆ ಮತ್ತು ದೇವರ ಪಟ್ಟಣದ ಪ್ರಜೆಗಳಾಗಿ ಅದರ ಹೆಸರನ್ನು ಹೊಂದಿರಬೇಕಾದರೆ ಹಾಗೂ ಕ್ರಿಸ್ತನ ಮದಲಗಿತ್ತಿಯಾಗಿ ಅವನ ಹೆಸರಿನಲ್ಲಿ ಪಾಲಿಗರಾಗಬೇಕಾದರೆ ಅವರು ಹಾಗೆ ಮಾಡುವುದು ಅಗತ್ಯ. ಮತ್ತು ಅವರಿಗೆ ‘ದೇವರಾತ್ಮನು ಸಭೆಗಳಿಗೆ ಹೇಳುವದನ್ನು ಕೇಳಿಸಿಕೊಳ್ಳುವ’ ಕಿವಿಗಳಿರಬೇಕು.ಲವೊದಿಕೀಯದಲ್ಲಿರುವ ದೂತನಿಗೆ
16. ಲವೊದಿಕೀಯದ ಬಗ್ಗೆ ಕೆಲವೊಂದು ವಾಸ್ತವಾಂಶಗಳು ಯಾವುವು?
16 ಲವೊದಿಕೀಯದಲ್ಲಿದ್ದ ನಿಶ್ಚಿಂತ ಸ್ವಭಾವದ ಸಭೆಯನ್ನು ಕ್ರಿಸ್ತನು ಗದರಿಸಿದನು. (ಪ್ರಕಟನೆ 3:14-22ನ್ನು ಓದಿರಿ.) ಲವೊದಿಕೀಯವು, ಎಫೆಸದ ಪೂರ್ವಕ್ಕೆ ಸುಮಾರು 150 ಕಿಲೊಮೀಟರ್‌ಗಳಷ್ಟು ದೂರದಲ್ಲಿದ್ದು, ಲ್ಯೂಕುಸ್ ನದಿಯ ಫಲವತ್ತಾದ ಕಣಿವೆಯಲ್ಲಿದ್ದ ಪ್ರಧಾನ ವ್ಯಾಪಾರ ಮಾರ್ಗಗಳು ಸಂಧಿಸುತ್ತಿದ್ದ ಸ್ಥಳದಲ್ಲಿ ನೆಲೆಸಿತ್ತು. ಅದೊಂದು ಸಂಪದ್ಭರಿತ ನಗರವಾಗಿತ್ತು ಮತ್ತು ಹಣಕಾಸಿನ ಕೇಂದ್ರವಾಗಿತ್ತು. ಆ ಪ್ರದೇಶದ ಕಪ್ಪು ಉಣ್ಣೆಯಿಂದ ಮಾಡಲ್ಪಟ್ಟ ಬಟ್ಟೆಗಳು ಸುಪ್ರಸಿದ್ಧವಾಗಿದ್ದವು. ಅದು ಒಂದು ವಿಖ್ಯಾತ ವೈದ್ಯಕೀಯ ಶಾಲೆಯ ಪೀಠವೂ ಆಗಿತ್ತು. ಆದುದರಿಂದ ಲವೊದಿಕೀಯವು, ಫ್ರಿಜ್ಯನ್ ಪುಡಿ ಎಂದು ಪ್ರಸಿದ್ಧವಾಗಿದ್ದ ಕಣ್ಣಿನ ಔಷಧವನ್ನು ತಯಾರಿಸುತ್ತಿದ್ದಿರಬಹುದು. ಔಷಧದ ದೇವತೆಯಾದ ಆಸ್‌ಕ್ಲೀಪಿಯಸ್ ಆ ನಗರದ ಮುಖ್ಯ ದೇವತೆಗಳಲ್ಲೊಬ್ಬನಾಗಿದ್ದನು. ಲವೊದಿಕೀಯದಲ್ಲಿ ಯೆಹೂದ್ಯರು ದೊಡ್ಡ ಸಂಖ್ಯೆಯಲ್ಲಿದ್ದಂತೆ ತೋರುತ್ತದೆ. ಮತ್ತು ಇವರಲ್ಲಿ ಕೆಲವರು ತುಂಬ ಧನಿಕರಾಗಿದ್ದರೆಂಬುದು ಸುವ್ಯಕ್ತ.
17. ಲವೊದಿಕೀಯದವರನ್ನು ಏಕೆ ಗದರಿಸಲಾಯಿತು?
17 ಅದರ ‘ದೂತನ’ ಮುಖಾಂತರ ಲವೊದಿಕೀಯ ಸಭೆಯನ್ನು ಸಂಬೋಧಿಸುತ್ತಾ ಯೇಸು, “ನಂಬತಕ್ಕ ಸತ್ಯಸಾಕ್ಷಿಯೂ ದೇವರ ಸೃಷ್ಟಿಗೆ ಮೂಲನೂ” ಆಗಿ ಅಧಿಕಾರಯುತವಾಗಿ ಮಾತಾಡುತ್ತಾನೆ. (ಕೊಲೊಸ್ಸೆ 1:13-16) ಲವೊದಿಕೀಯದವರು ಆತ್ಮಿಕ ರೀತಿಯಲ್ಲಿ ‘ಬೆಚ್ಚಗಾಗಲಿ ತಣ್ಣಗಾಗಲಿ’ ಇಲ್ಲದಿದ್ದುದರಿಂದ ಗದರಿಸಲ್ಪಟ್ಟರು. ಅವರು ಉಗುರುಬೆಚ್ಚಗಿದ್ದದರಿಂದ ಕ್ರಿಸ್ತನು ಅವರನ್ನು ತನ್ನ ಬಾಯಿಂದ ಕಾರಲಿದ್ದನು. ಆ ವಿಷಯವನ್ನು ಗ್ರಹಿಸುವುದು ಅವರಿಗೆ ಕಷ್ಟಕರವಾಗಿರಲಿಕ್ಕಿಲ್ಲ. ಏಕೆಂದರೆ ಲವೊದಿಕೀಯದ ಹತ್ತಿರದಲ್ಲೇ ಇದ್ದ ಹಿಎರಾಪೊಲಿಸ್‌ನಲ್ಲಿ ಬಿಸಿ ನೀರಿನ ಚಿಲುಮೆಗಳಿದ್ದವು, ಮತ್ತು ಕೊಲೊಸ್ಸೆಯಲ್ಲಿ ತಣ್ಣಗಿನ ನೀರಿತ್ತು. ಲವೊದಿಕೀಯಕ್ಕೆ ನೀರು ಸುಮಾರು ದೂರದಿಂದ ಪೈಪುಗಳ ಮೂಲಕ ಬರಬೇಕಾಗಿದ್ದುದರಿಂದ, ಆ ನೀರು ನಗರಕ್ಕೆ ತಲಪುವಷ್ಟರಲ್ಲಿ ಉಗುರುಬೆಚ್ಚಗೆ ಆಗುತ್ತಿದ್ದಿರಬಹುದು. ಸ್ವಲ್ಪ ದೂರದ ವರೆಗೆ ನೀರು ಮೇಲು ಕಾಲುವೆಯಿಂದ ಹರಿದುಬರುತ್ತಿತ್ತು. ಲವೊದಿಕೀಯಕ್ಕೆ ಹತ್ತಿರ ಬರುತ್ತಿದ್ದಂತೆ ಅದು, ಜೊತೆಯಾಗಿ ಜೋಡಿಸಲ್ಪಟ್ಟಿದ್ದ ಕಲ್ಲು ಬಂಡೆಗಳಲ್ಲಿ ಕೊರೆಯಲ್ಪಟ್ಟಿದ್ದ ಕೊಳವಿಗಂಡಿಯ ಮುಖಾಂತರ ಹರಿದುಬರುತ್ತಿತ್ತು.
18, 19. ಲವೊದಿಕೀಯದಲ್ಲಿದ್ದ ಕ್ರೈಸ್ತರಂತೆಯೇ ಇರುವ ಸದ್ಯದ ದಿನದ ಕ್ರೈಸ್ತರಿಗೆ ಹೇಗೆ ಸಹಾಯ ಸಿಗಬಹುದು?
18 ಇಂದು ಲವೊದಿಕೀಯದವರಂತಿರುವ ವ್ಯಕ್ತಿಗಳು, ಉತ್ತೇಜಕವಾದ ರೀತಿಯಲ್ಲಿ ಬಿಸಿಯಾಗಿರುವುದಿಲ್ಲ ಇಲ್ಲವೆ ಚೈತನ್ಯಕೊಡುವಷ್ಟು ತಣ್ಣಗೂ ಇರುವುದಿಲ್ಲ. ಉಗುರುಬೆಚ್ಚಗಿನ ನೀರಿನಂತೆ ಅವರನ್ನು ಉಗಿಯಲಾಗುವುದು! ಯೇಸು ಅವರನ್ನು ತನ್ನ ಪ್ರತಿನಿಧಿಯಾಗಿ, ‘ಕ್ರಿಸ್ತನ’ ಅಭಿಷಿಕ್ತ ‘ರಾಯಭಾರಿಗಳಾಗಿಡಲು’ ಬಯಸುವುದಿಲ್ಲ. (2 ಕೊರಿಂಥ 5:20) ಅವರು ಪಶ್ಚಾತ್ತಾಪಪಡದಿದ್ದರೆ, ರಾಜ್ಯ ಘೋಷಕರಾಗಿರುವ ತಮ್ಮ ಸುಯೋಗವನ್ನು ಕಳೆದುಕೊಳ್ಳುವರು. ಲವೊದಿಕೀಯದವರು ಐಹಿಕ ಐಶ್ವರ್ಯವನ್ನು ಬೆನ್ನಟ್ಟಿದರು ಮತ್ತು ತಾವು ‘ದುರವಸ್ಥೆಯಲ್ಲಿ ಬಿದ್ದಿರುವವರು, ದೌರ್ಭಾಗ್ಯರು, ದರಿದ್ರರು, ಕುರುಡರು, ಬಟ್ಟೆಯಿಲ್ಲದವರು ಆಗಿರುವುದನ್ನು ತಿಳಿಯದೆ ಇದ್ದರು.’ ಇಂದು ಅವರಂತೆ ಇರುವ ಯಾವ ವ್ಯಕ್ತಿಗಳಾದರೂ ತಮ್ಮ ಆತ್ಮಿಕ ಬಡತನ, ಕುರುಡು, ಮತ್ತು ನಗ್ನತೆಯನ್ನು ತೆಗೆದುಹಾಕಲಿಕ್ಕಾಗಿ, ಪರೀಕ್ಷಿಸಲ್ಪಟ್ಟ ನಂಬಿಕೆ ಎಂಬ ‘ಪುಟಾಹಾಕಿದ ಚಿನ್ನವನ್ನು,’ ನೀತಿಯೆಂಬ ‘ಹೊದ್ದುಕೊಳ್ಳುವ ಬಿಳೀ ವಸ್ತ್ರಗಳನ್ನು,’ ಮತ್ತು ಆತ್ಮಿಕ ದೃಷ್ಟಿಯನ್ನು ಉತ್ತಮಗೊಳಿಸುವ ‘ಕಣ್ಣುಗಳ ಅಂಜನವನ್ನು’ ಕ್ರಿಸ್ತನಿಂದ ಕೊಂಡುಕೊಳ್ಳಬೇಕು. ಅವರು ‘ನಂಬಿಕೆಯಲ್ಲಿ ಐಶ್ವರ್ಯವಂತರಾಗಿ’ ಪರಿಣಮಿಸುವಂತೆ ತಮ್ಮ ಆತ್ಮಿಕ ಅಗತ್ಯದ ಪ್ರಜ್ಞೆಯುಳ್ಳವರಾಗಿರಲು ಕ್ರೈಸ್ತ ಮೇಲ್ವಿಚಾರಕರು ಅವರಿಗೆ ಸಹಾಯಮಾಡಲು ಸಂತೋಷಿತರಾಗಿದ್ದಾರೆ. (ಯಾಕೋಬ 2:5; ಮತ್ತಾಯ 5:3) ಇದಲ್ಲದೆ, ಅವರು ಆತ್ಮಿಕ ‘ಅಂಜನವನ್ನು’ ಕಣ್ಣುಗಳಿಗೆ ಹಚ್ಚಿಕೊಳ್ಳುವಂತೆ, ಅಂದರೆ ಯೇಸುವಿನ ಬೋಧನೆ, ಸಲಹೆ, ಮಾದರಿ ಮತ್ತು ಮಾನಸಿಕ ಮನೋಭಾವಕ್ಕೆ ಹೊಂದಿಕೊಳ್ಳುವಂತೆ ಮೇಲ್ವಿಚಾರಕರು ಅವರಿಗೆ ಸಹಾಯಮಾಡಬೇಕು. ಇದು, ‘ಶರೀರದಾಶೆ, ಕಣ್ಣಿನಾಶೆ ಮತ್ತು ಬದುಕುಬಾಳಿನ ಡಂಬದ’ ವಿರುದ್ಧ ವಾಸಿಕಾರಕವಾದ ಮದ್ದಾಗಿದೆ.—1 ಯೋಹಾನ 2:15-17.
19 ಯೇಸು ಯಾರನ್ನು ಪ್ರೀತಿಸುತ್ತಾನೊ ಅವರೆಲ್ಲರನ್ನು ಗದರಿಸುತ್ತಾನೆ ಮತ್ತು ಅವರಿಗೆ ಶಿಸ್ತನ್ನು ನೀಡುತ್ತಾನೆ. ಅವನ ಅಧೀನದಲ್ಲಿರುವ ಮೇಲ್ವಿಚಾರಕರು ಸಹ ಕೋಮಲಭಾವದಿಂದ ಇದನ್ನೇ ಮಾಡಬೇಕು. (ಅ. ಕೃತ್ಯಗಳು 20:28, 29) ಲವೊದಿಕೀಯದವರು ತಮ್ಮ ಯೋಚನಾಧಾಟಿಯಲ್ಲಿ ಮತ್ತು ಜೀವನ ರೀತಿಯಲ್ಲಿ ಬದಲಾವಣೆಗಳನ್ನು ಮಾಡುತ್ತಾ, ‘ಆಸಕ್ತರಾಗಿದ್ದು ದೇವರ ಕಡೆಗೆ ತಿರುಗಿ’ಕೊಳ್ಳಬೇಕಾಗಿತ್ತು. ಆದರೆ ನಮ್ಮಲ್ಲಿ ಕೆಲವರು, ದೇವರಿಗೆ ನಾವು ಸಲ್ಲಿಸುವ ಪವಿತ್ರ ಸೇವೆಯನ್ನು ನಮ್ಮ ಬದುಕಿನಲ್ಲಿ ತೀರ ಅಪ್ರಾಮುಖ್ಯವಾದ ಸ್ಥಾನಕ್ಕೆ ಬದಿಗೊತ್ತುವಂಥ ಒಂದು ಜೀವನ ಶೈಲಿಗೆ ಒಗ್ಗಿಹೋಗಿದ್ದೇವೋ? ಹಾಗಿರುವಲ್ಲಿ, ನಾವು ‘ಯೇಸುವಿನಿಂದ ಕಣ್ಣಿಗೆ ಹಚ್ಚಿಕೊಳ್ಳುವ ಅಂಜನವನ್ನು ಕೊಂಡುಕೊಳ್ಳೋಣ.’ ಆಗ ನಾವು ಹುರುಪಿನಿಂದ ರಾಜ್ಯವನ್ನು ಪ್ರಥಮವಾಗಿ ಹುಡುಕುವುದರ ಮಹತ್ವವನ್ನು ಮನಗಾಣುವೆವು.—ಮತ್ತಾಯ 6:33.
20, 21. ಯೇಸು ‘ಬಾಗಿಲು ತಟ್ಟುತ್ತಿರುವಾಗ’ ಇಂದು ಯಾರು ಯೋಗ್ಯವಾಗಿ ಪ್ರತಿಕ್ರಿಯೆ ತೋರಿಸುತ್ತಾರೆ, ಮತ್ತು ಅವರಿಗಿರುವ ಪ್ರತೀಕ್ಷೆಗಳೇನು?
ಲೂಕ 5:29-39; 7:36-50; 14:1-24) ಈಗ ಅವನು ಲವೊದಿಕೀಯದಂತಿರುವ ಸಭೆಯ ಬಾಗಿಲನ್ನು ತಟ್ಟುತ್ತಿದ್ದಾನೆ. ಅದರ ಸದಸ್ಯರು ಇದಕ್ಕೆ ಪ್ರತಿಕ್ರಿಯೆ ತೋರಿಸುತ್ತಾ, ಅವನಿಗಾಗಿರುವ ತಮ್ಮ ಪ್ರೀತಿಯನ್ನು ಪುನರುಜ್ಜೀವಿಸಿ, ಅವನನ್ನು ತಮ್ಮ ಮಧ್ಯದಲ್ಲಿ ಬರಮಾಡಿಕೊಂಡು, ತಮಗೆ ಕಲಿಸುವಂತೆ ಅನುಮತಿಸುವರೋ? ಹಾಗಿರುವಲ್ಲಿ, ಕ್ರಿಸ್ತನು ಅವರೊಂದಿಗೆ ಊಟದಲ್ಲಿ ಆನಂದಿಸುವನು. ಮತ್ತು ಇದು ಅವರಿಗೆ ಅತ್ಯಂತ ಶ್ರೇಷ್ಠವಾದ ಆತ್ಮಿಕ ಪ್ರಯೋಜನವನ್ನು ತರುವುದು.
20 ಕ್ರಿಸ್ತನು ಹೇಳುವುದು: “ಇಗೋ, ಬಾಗಿಲಲ್ಲಿ ನಿಂತುಕೊಂಡು ತಟ್ಟುತ್ತಾ ಇದ್ದೇನೆ; ಯಾವನಾದರೂ ನನ್ನ ಶಬ್ದವನ್ನು ಕೇಳಿ ಬಾಗಿಲನ್ನು ತೆರೆದರೆ ನಾನು ಒಳಗೆ ಬಂದು ಅವನ ಸಂಗಡ ಊಟಮಾಡುವೆನು, ಅವನು ನನ್ನ ಸಂಗಡ ಊಟಮಾಡುವನು.” ಯೇಸು ಊಟಮಾಡುತ್ತಿದ್ದಾಗ ಅನೇಕವೇಳೆ ಆತ್ಮಿಕ ಉಪದೇಶವನ್ನು ಕೊಡುತ್ತಿದ್ದನು. (21 ಇಂದಿನ ‘ಬೇರೆ ಕುರಿಗಳು’ ಸಾಂಕೇತಿಕಾರ್ಥದಲ್ಲಿ ಯೇಸುವನ್ನು ಒಳಗೆ ಸೇರಿಸಿಕೊಳ್ಳುತ್ತಿದ್ದಾರೆ ಮತ್ತು ಈ ಕಾರ್ಯವು ನಿತ್ಯಜೀವಕ್ಕೆ ನಡೆಸುತ್ತದೆ. (ಯೋಹಾನ 10:16; ಮತ್ತಾಯ 25:34-40, 46) ಜಯಹೊಂದುವ ಪ್ರತಿಯೊಬ್ಬ ಅಭಿಷಿಕ್ತನಿಗೆ ಕ್ರಿಸ್ತನು, ‘ತಾನು ತಂದೆಯೊಡನೆ ಸಿಂಹಾಸನದಲ್ಲಿ ಕೂತುಕೊಂಡ ಹಾಗೆಯೇ ತನ್ನೊಡನೆ ಅವನನ್ನು ಸಿಂಹಾಸನದಲ್ಲಿ ಕೂತುಕೊಳ್ಳುವಂತೆ ಮಾಡುವನು.’ ಹೌದು, ಜಯಹೊಂದುವ ಅಭಿಷಿಕ್ತ ವಿಜೇತರಿಗೆ, ಸ್ವರ್ಗದಲ್ಲಿ ತನ್ನ ತಂದೆಯ ಬಲಬದಿಯಲ್ಲಿ ತನ್ನೊಂದಿಗೆ ಒಂದು ಸಿಂಹಾಸನದ ಭವ್ಯ ಪ್ರತಿಫಲವನ್ನು ವಾಗ್ದಾನಿಸುತ್ತಾನೆ. ಮತ್ತು ಜಯಹೊಂದುವ ಬೇರೆ ಕುರಿಗಳು, ರಾಜ್ಯದಾಳಿಕೆಯ ಕೆಳಗೆ ಭೂಮಿಯು ಒಂದು ಅದ್ಭುತ ಸ್ಥಳವಾಗುವುದನ್ನು ಎದುರುನೋಡುತ್ತಾರೆ.
ನಮಗೆಲ್ಲರಿಗೂ ಇರುವ ಪಾಠಗಳು
22, 23. (ಎ) ಏಳು ಸಭೆಗಳಿಗೆ ಯೇಸು ನುಡಿದ ಮಾತುಗಳಿಂದ ಎಲ್ಲಾ ಕ್ರೈಸ್ತರು ಹೇಗೆ ಪ್ರಯೋಜನವನ್ನು ಪಡೆದುಕೊಳ್ಳಸಾಧ್ಯವಿದೆ? (ಬಿ) ನಮ್ಮ ದೃಢನಿರ್ಧಾರವು ಏನಾಗಿರಬೇಕು?
22 ಯೇಸು ಏಷ್ಯಾ ಮೈನರ್‌ನಲ್ಲಿದ್ದ ಏಳು ಸಭೆಗಳಿಗೆ ನುಡಿದ ಮಾತುಗಳಿಂದ ಎಲ್ಲಾ ಕ್ರೈಸ್ತರು ಬಹಳಷ್ಟು ಪ್ರಯೋಜನಗಳನ್ನು ಪಡೆಯಬಲ್ಲರೆಂಬ ವಿಷಯದಲ್ಲಿ ಸಂದೇಹವೇ ಇಲ್ಲ. ದೃಷ್ಟಾಂತಕ್ಕಾಗಿ, ಕ್ರಿಸ್ತನು ಸೂಕ್ತವಾದ ಶ್ಲಾಘನೆಯನ್ನು ಕೊಡುತ್ತಿದ್ದನೆಂಬುದನ್ನು ಗಮನಿಸಿ, ಪ್ರೀತಿಪರ ಕ್ರೈಸ್ತ ಹಿರಿಯರು, ಆತ್ಮಿಕವಾಗಿ ಚೆನ್ನಾಗಿ ಕ್ರಿಯೆಗೈಯುತ್ತಿರುವ ವ್ಯಕ್ತಿಗಳನ್ನೂ ಸಭೆಗಳನ್ನೂ ಶ್ಲಾಘಿಸುವಂತೆ ಪ್ರೇರಿಸಲ್ಪಡುತ್ತಾರೆ. ಜೊತೆ ವಿಶ್ವಾಸಿಗಳಿಗೆ ಬಲಹೀನತೆಗಳಿರುವಾಗ, ಅವರು ಶಾಸ್ತ್ರೀಯ ಮದ್ದನ್ನು ಹಚ್ಚುವಂತೆ ಹಿರಿಯರು ಸಹಾಯಮಾಡುತ್ತಾರೆ. ಕ್ರಿಸ್ತನು ಆ ಏಳು ಸಭೆಗಳಿಗೆ ಕೊಟ್ಟ ಸಲಹೆಯ ವಿವಿಧ ವೈಶಿಷ್ಟ್ಯಗಳಿಂದ ನಾವೆಲ್ಲರೂ ಪ್ರಯೋಜನ ಹೊಂದುತ್ತಾ ಇರಬಲ್ಲೆವು. ಆದರೆ ಇದಕ್ಕಾಗಿ ನಾವು ಆ ಸಲಹೆಯನ್ನು ಪ್ರಾರ್ಥನಾಪೂರ್ವಕವಾಗಿ ಮತ್ತು ತಡಮಾಡದೆ ಅನ್ವಯಿಸಬೇಕು. *
23 ಈ ಕಡೇ ದಿನಗಳು, ನಿಶ್ಚಿಂತಭಾವ, ಪ್ರಾಪಂಚಿಕತೆ ಇಲ್ಲವೆ ದೇವರಿಗೆ ನಾವು ನಾಮಮಾತ್ರದ ಸೇವೆಯನ್ನು ಸಲ್ಲಿಸುವಂತೆ ಮಾಡುವ ಬೇರಾವುದೇ ವಿಷಯಕ್ಕಾಗಿರುವ ಸಮಯವಾಗಿರುವುದಿಲ್ಲ. ಆದುದರಿಂದ ಎಲ್ಲಾ ಸಭೆಗಳು, ದೀಪಸ್ತಂಭಗಳೋಪಾದಿ ಉಜ್ವಲವಾಗಿ ಪ್ರಕಾಶಿಸುತ್ತಾ ಇರಲಿ ಮತ್ತು ಆಗ ಯೇಸು ಅವುಗಳನ್ನು ಸುಸ್ಥಾನದಲ್ಲಿರಿಸುವನು. ನಂಬಿಗಸ್ತ ಕ್ರೈಸ್ತರೋಪಾದಿ ನಾವು, ಯೇಸು ಮಾತಾಡುವಾಗ ಗಮನಕೊಡಲು ಮತ್ತು ಪವಿತ್ರಾತ್ಮವು ಏನು ಹೇಳುತ್ತದೊ ಅದಕ್ಕೆ ಕಿವಿಗೊಡಲು ಯಾವಾಗಲೂ ದೃಢನಿರ್ಧಾರವುಳ್ಳವರಾಗಿರೋಣ. ಆಗ ನಮಗೆ, ಯೆಹೋವನಿಗೆ ಸ್ತುತಿ ತರುವಂಥ ಬೆಳಕುವಾಹಕರೋಪಾದಿ ನಿತ್ಯ ಆನಂದವಿರುವುದು.
[ಪಾದಟಿಪ್ಪಣಿ]
^ ಪ್ಯಾರ. 22 ಪ್ರಕಟನೆ 2:1–3:22ನ್ನು, ಪ್ರಕಟನೆ—ಅದರ ಮಹಾ ಪರಮಾಧಿಯು ಹತ್ತಿರ! ಎಂಬ ಪುಸ್ತಕದ 7ರಿಂದ 13ನೆಯ ಅಧ್ಯಾಯಗಳಲ್ಲಿಯೂ ಚರ್ಚಿಸಲಾಗಿದ್ದು, ಇದು ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿದೆ.
ನೀವು ಹೇಗೆ ಪ್ರತಿಕ್ರಿಯಿಸುವಿರಿ?
• ‘ಯೆಜೆಬೇಲೆಂಬ ಆ ಹೆಂಗಸು’ ಯಾರಾಗಿದ್ದಳು, ಮತ್ತು ದೇವಭಕ್ತ ಸ್ತ್ರೀಯರು ಅವಳನ್ನು ಏಕೆ ಅನುಕರಿಸುವುದಿಲ್ಲ?
• ಸಾರ್ದಿಸಿನಲ್ಲಿದ್ದ ಸಭೆಯಲ್ಲಿ ಯಾವ ಸ್ಥಿತಿಯಿತ್ತು, ಮತ್ತು ಅಲ್ಲಿ ವಾಸಿಸುತ್ತಿದ್ದ ಕ್ರೈಸ್ತರಲ್ಲಿ ಅನೇಕರಂತೆ ಆಗುವುದನ್ನು ತಪ್ಪಿಸಲು ನಾವೇನು ಮಾಡಸಾಧ್ಯವಿದೆ?
• ಯೇಸು ಫಿಲದೆಲ್ಫಿಯದ ಸಭೆಗೆ ಯಾವ ವಾಗ್ದಾನಗಳನ್ನು ಕೊಟ್ಟನು, ಮತ್ತು ಅವು ಇಂದು ಹೇಗೆ ಅನ್ವಯವಾಗುತ್ತವೆ?
• ಲವೊದಿಕೀಯದವರನ್ನು ಏಕೆ ಗದರಿಸಲಾಯಿತು, ಆದರೆ ಹುರುಪಿನ ಕ್ರೈಸ್ತರ ಮುಂದೆ ಯಾವ ಪ್ರತೀಕ್ಷೆಗಳು ಇರಿಸಲ್ಪಟ್ಟಿವೆ?
[ಅಧ್ಯಯನ ಪ್ರಶ್ನೆಗಳು]
[ಪುಟ 16ರಲ್ಲಿರುವ ಚಿತ್ರ]
‘ಯೆಜೆಬೇಲೆಂಬ ಆ ಹೆಂಗಸಿನ’ ದುಷ್ಟ ಮಾರ್ಗಗಳಿಂದ ನಾವು ದೂರವಿರಬೇಕು
[ಪುಟ 18ರಲ್ಲಿರುವ ಚಿತ್ರಗಳು]
ರಾಜ್ಯ ಸುಯೋಗಗಳಿಗೆ ನಡೆಸುವಂಥ ‘ಒಂದು ದೊಡ್ಡ ಬಾಗಿಲನ್ನು’ ಯೇಸು ತನ್ನ ಹಿಂಬಾಲಕರ ಮುಂದಿಟ್ಟಿದ್ದಾನೆ
[ಪುಟ 20ರಲ್ಲಿರುವ ಚಿತ್ರ]
ನೀವು ಯೇಸುವನ್ನು ಸ್ವಾಗತಿಸಿ, ಅವನಿಗೆ ಕಿವಿಗೊಡುತ್ತೀರೊ?