ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನೋಹನ ದಿನಚರಿ ಪುಸ್ತಕ ಇದರಲ್ಲಿ ನಮಗೆ ಮಹತ್ವಪೂರ್ಣವಾಗಿರುವ ವಿಷಯವಿದೆಯೆ?

ನೋಹನ ದಿನಚರಿ ಪುಸ್ತಕ ಇದರಲ್ಲಿ ನಮಗೆ ಮಹತ್ವಪೂರ್ಣವಾಗಿರುವ ವಿಷಯವಿದೆಯೆ?

ನೋಹನ ದಿನಚರಿ ಪುಸ್ತಕ ಇದರಲ್ಲಿ ನಮಗೆ ಮಹತ್ವಪೂರ್ಣವಾಗಿರುವ ವಿಷಯವಿದೆಯೆ?

ಯೇಸು ತನ್ನ ಸಾನ್ನಿಧ್ಯ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಕುರಿತಾದ ಸೂಚನೆಯನ್ನು ತಿಳಿಸುವಾಗ ಹೇಳಿದ್ದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ [“ಸಾನ್ನಿಧ್ಯವೂ,” NW] ಇರುವದು.” (ಮತ್ತಾಯ 24:3, 37) ಸ್ಪಷ್ಟವಾಗಿ, ನಮ್ಮ ದಿನದಲ್ಲಿ ಸಂಭವಿಸುತ್ತಿರುವ ವಿಷಯಗಳು ನೋಹನ ಸಮಯಕ್ಕೆ ಸಮಾಂತರವಾಗಿವೆಯೆಂದು ಯೇಸು ಮುಂತಿಳಿಸಿದನು. ನೋಹನ ದಿನದಲ್ಲಿ ಸಂಭವಿಸಿದ ಸಂಗತಿಗಳ ಭರವಸಾರ್ಹ ಮತ್ತು ನಿಷ್ಕೃಷ್ಟವಾದ ದಾಖಲೆಯು ಒಂದು ಅಮೂಲ್ಯವಾದ ನಿಕ್ಷೇಪವಾಗಿ ಪರಿಣಮಿಸಸಾಧ್ಯವಿದೆ.

ನೋಹನ ದಿನಚರಿಯು ನಿಜವಾಗಿಯೂ ಅಂಥ ಒಂದು ನಿಕ್ಷೇಪವಾಗಿದೆಯೋ? ನಿಜ ಐತಿಹಾಸಿಕ ದಾಖಲೆಗೆ ಬೇಕಾಗಿರುವ ರುಜುವಾತುಗಳು ಅದರಲ್ಲಿವೆಯೇ? ಜಲಪ್ರಳಯವು ಯಾವಾಗ ಸಂಭವಿಸಿತು ಎಂಬುದನ್ನು ನಾವು ನಿರ್ಧರಿಸಬಲ್ಲೆವೋ?

ಜಲಪ್ರಳಯವು ಯಾವಾಗ ಸಂಭವಿಸಿತು?

ಮಾನವ ಇತಿಹಾಸದ ಆರಂಭಕ್ಕೆ ಜಾಗರೂಕತೆಯಿಂದ ಹಿಮ್ಮುಖವಾಗಿ ಎಣಿಸಲು ಸಾಧ್ಯಮಾಡುವ ಕಾಲಾನುಕ್ರಮದ ಮಾಹಿತಿಯನ್ನು ಬೈಬಲ್‌ ಒದಗಿಸುತ್ತದೆ. ಆದಿಕಾಂಡ 5:​1-29ನೆಯ ವಚನಗಳಲ್ಲಿ, ಮೊದಲನೆಯ ಮನುಷ್ಯನಾದ ಆದಾಮನ ಸೃಷ್ಟಿಯಿಂದ ನೋಹನ ಜನನದ ವರೆಗಿನ ವಂಶಾವಳಿಯ ದಾಖಲೆಯನ್ನು ನಾವು ನೋಡುತ್ತೇವೆ. “ನೋಹನ ಜೀವಮಾನದ ಆರುನೂರನೆಯ ವರುಷ”ದಲ್ಲಿ ಜಲಪ್ರಳಯವು ಆರಂಭವಾಯಿತು.​—ಆದಿಕಾಂಡ 7:​11.

ಜಲಪ್ರಳಯದ ಸಮಯವನ್ನು ನಿಷ್ಕರ್ಷಿಸಲು ನಾವು ಒಂದು ನಿರ್ಣಾಯಕ ತಾರೀಖಿನೊಂದಿಗೆ ಆರಂಭಿಸಬೇಕು. ಅಂದರೆ, ಇತಿಹಾಸದಲ್ಲಿ ಸ್ವೀಕರಣೀಯವಾಗಿರುವ ಮತ್ತು ಬೈಬಲಿನಲ್ಲಿ ದಾಖಲಾಗಿರುವ ಒಂದು ನಿರ್ದಿಷ್ಟ ಘಟನೆಗೆ ಅನುಗುಣವಾಗಿರುವ ಒಂದು ತಾರೀಖಿನೊಂದಿಗೆ ನಾವು ಆರಂಭಿಸಬೇಕು. ಆ ಪ್ರಧಾನ ತಾರೀಖಿನಿಂದ ನಾವು ಲೆಕ್ಕಮಾಡುತ್ತಾ ಈಗ ಸಾಮಾನ್ಯವಾಗಿ ಉಪಯೋಗಿಸಲ್ಪಡುವ ಗ್ರಿಗೋರಿಯನ್‌ ಕ್ಯಾಲೆಂಡರಿನ ಆಧಾರದ ಮೇಲೆ ಜಲಪ್ರಳಯದ ನಿರ್ದಿಷ್ಟ ತಾರೀಖನ್ನು ನಿಗದಿಪಡಿಸಸಾಧ್ಯವಿದೆ.

ಪಾರಸಿಯ ಅರಸನಾದ ಕೋರೆಷನು ಬಾಬೆಲನ್ನು ಪತನಗೊಳಿಸಿದ ವರುಷವಾದ ಸಾ.ಶ.ಪೂ 539 ಒಂದು ನಿರ್ಣಾಯಕ ತಾರೀಖಾಗಿದೆ. ಅವನ ಆಳ್ವಿಕೆಯ ಸಮಯವನ್ನು ಗೊತ್ತುಪಡಿಸಲು, ಡಯೊಡೋರಸ್‌, ಆಫ್ರೀಕೇನಸ್‌, ಯುಸೀಬಿಯಸ್‌, ಹಾಗೂ ಟಾಲೆಮಿಯ ದಾಖಲೆಗಳೇ ಐಹಿಕ ಆಧಾರಗಳಾಗಿವೆ. ಕೋರೆಷನಿಂದ ಕೊಡಲ್ಪಟ್ಟ ಆಜ್ಞೆಯ ಕಾರಣ, ಸಾ.ಶ.ಪೂ. 537ರಲ್ಲಿ ಯೆಹೂದಿ ಉಳಿಕೆಯವರು ಬಾಬೆಲನ್ನು ಬಿಟ್ಟು ತಮ್ಮ ಸ್ವದೇಶಕ್ಕೆ ತಲಪಿದರು. ಈ ವರುಷವು, ಯೆಹೂದದ 70 ವರುಷಗಳ ನಿರ್ಜನತೆಯ ಅಂತ್ಯವನ್ನು ಗುರುತಿಸಿತು. ಬೈಬಲಿನ ದಾಖಲೆಗನುಸಾರ, ಆ 70 ವರುಷಗಳ ನಿರ್ಜನತೆಯು ಸಾ.ಶ.ಪೂ. 607ರಲ್ಲಿ ಆರಂಭವಾಗಿತ್ತು. ನ್ಯಾಯಸ್ಥಾಪಕರ ಮತ್ತು ಇಸ್ರಾಯೇಲಿನ ಅರಸರ ಆಳ್ವಿಕೆಯ ಸಮಯಾವಧಿಯನ್ನು ಪರಿಗಣಿಸುವುದರ ಮೂಲಕ, ಐಗುಪ್ತದಿಂದ ಇಸ್ರಾಯೇಲ್ಯರ ವಿಮೋಚನೆಯು ಸಾ.ಶ.ಪೂ. 1513ರಲ್ಲಿ ಸಂಭವಿಸಿತೆಂಬುದನ್ನು ನಾವು ನಿರ್ಣಯಿಸಸಾಧ್ಯವಿದೆ. ಬೈಬಲ್‌ ಆಧಾರಿತ ಕಾಲಾನುಕ್ರಮವು ನಮ್ಮನ್ನು ಇನ್ನೂ 430 ವರುಷಗಳ ಕಾಲ ಹಿಂದಕ್ಕೆ ಅಂದರೆ ಸಾ.ಶ.ಪೂ. 1943ರಲ್ಲಿ ಅಬ್ರಹಾಮನೊಂದಿಗೆ ಮಾಡಲ್ಪಟ್ಟ ಒಡಂಬಡಿಕೆಯ ಸಮಯಕ್ಕೆ ಕೊಂಡೊಯ್ಯುತ್ತದೆ. ನಂತರ, “ಜಲಪ್ರಳಯವು ಕಳೆದು ಎರಡು ವರುಷಗಳಾದ ಮೇಲೆ” ಹುಟ್ಟಿದ ತೆರಹ, ನಾಹೋರ, ಸೆರೂಗ, ರೆಗೂವ, ಪೆಲೆಗ, ಎಬರ, ಮತ್ತು ಶೆಲಹ, ಹಾಗೂ ಅರ್ಪಕ್ಷದ ಮುಂತಾದವರ ಜನನ ಹಾಗೂ ಜೀವನಾವಧಿಯನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಕು. (ಆದಿಕಾಂಡ 11:10-32) ಈ ಎಲ್ಲಾ ಪರಿಗಣನೆಯ ನಂತರ, ಸಾ.ಶ.ಪೂ. 2370ರಲ್ಲಿ ಜಲಪ್ರಳಯವು ಆರಂಭವಾಯಿತು ಎಂದು ನಾವು ಹೇಳಸಾಧ್ಯವಿದೆ. *

ಜಲಪ್ರಳಯವು ಆರಂಭಗೊಂಡಿತು

ನೋಹನ ದಿನದ ಘಟನೆಗಳನ್ನು ವಿಮರ್ಶಿಸುವುದಕ್ಕೆ ಮೊದಲು, ಆದಿಕಾಂಡ ಅಧ್ಯಾಯ 7, ವಚನ 11ರಿಂದ ಅಧ್ಯಾಯ 8, ವಚನ 4ರ ವರೆಗೆ ದಯವಿಟ್ಟು ಓದಿರಿ. ಆ ಭಯಂಕರ ಮಳೆಯ ಬಗ್ಗೆ ಅಲ್ಲಿ ಹೀಗೆಂದು ತಿಳಿಸಲಾಗಿದೆ: “ನೋಹನ ಜೀವಮಾನದ ಆರುನೂರನೆಯ ವರುಷದ [ಸಾ.ಶ.ಪೂ. 2370] ಎರಡನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ಭೂಮಿಯ ಕೆಳಗಿರುವ ಸಾಗರದ ಸೆಲೆಗಳು ಒಡೆದವು; ಆಕಾಶದ ತೂಬುಗಳು ತೆರೆದವು.”​—ಆದಿಕಾಂಡ 7:​11.

ನೋಹನು ವರುಷಗಳನ್ನು, 30 ದಿನಗಳಿದ್ದ 12 ತಿಂಗಳುಗಳಾಗಿ ವಿಭಾಗಿಸಿದನು. ಪೂರ್ವಕಾಲದಲ್ಲಿ, ನಮ್ಮ ಕ್ಯಾಲೆಂಡರಿನಲ್ಲಿರುವ ಸೆಪ್ಟೆಂಬರ್‌ ತಿಂಗಳಿನ ಮಧ್ಯ ಭಾಗದಲ್ಲಿ ಮೊದಲನೆಯ ತಿಂಗಳು ಆರಂಭವಾಗುತ್ತಿತ್ತು. ಜಲಪ್ರಳಯವು “ಎರಡನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ” ಆರಂಭಗೊಂಡು, ಸಾ.ಶ.ಪೂ. 2370ರ ನವೆಂಬರ್‌ ಮತ್ತು ಡಿಸೆಂಬರ್‌ ತಿಂಗಳುಗಳ ಪರ್ಯಂತ 40 ದಿನ ಹಗಲಿರುಳು ಮಳೆ ಸುರಿಯಿತು.

ಜಲಪ್ರಳಯದ ಕುರಿತು ನಮಗೆ ಹೀಗೆ ತಿಳಿಸಲಾಗಿದೆ: “ಪ್ರಳಯದ ನೀರು ಭೂಮಿಯ ಮೇಲೆ ನೂರೈವತ್ತು ದಿನ ಪ್ರಬಲವಾಯಿತು. . . . ಆಗ ಭೂಮಿಯ ಮೇಲಿದ್ದ ನೀರು ಕ್ರಮವಾಗಿ ತಗ್ಗುತ್ತಾ ಬಂತು. ಹೀಗೆ ನೂರೈವತ್ತು ದಿನಗಳಾದ ಮೇಲೆ ನೀರು ಕಡಿಮೆಯಾಯಿತು. ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್‌ ಸೀಮೆಯ ಬೆಟ್ಟಗಳಲ್ಲಿ ನಿಂತಿತು.” (ಆದಿಕಾಂಡ 7:​24–8:4) ಅಂದರೆ, ನೀರು ಸಂಪೂರ್ಣವಾಗಿ ಭೂಮಿಯನ್ನು ಆವರಿಸಿದಂದಿನಿಂದ ಅದು ತಗ್ಗುವ ತನಕ 150 ದಿನಗಳು ಅಥವಾ ಐದು ತಿಂಗಳುಗಳು ಕಳೆದವು. ಹೀಗೆ ಸಾ.ಶ.ಪೂ. 2369ರ ಏಪ್ರಿಲ್‌ ತಿಂಗಳಿನಲ್ಲಿ ನಾವೆಯು ಅರಾರಾಟ್‌ ಸೀಮೆಯ ಬೆಟ್ಟಗಳಲ್ಲಿ ನಿಂತಿತು.

ಈಗ ನೀವು ಆದಿಕಾಂಡ 8:​5-17ರ ತನಕದ ವಚನಗಳನ್ನು ಓದಲು ಬಯಸಬಹುದು. ಸುಮಾರು ಎರಡೂವರೆ ತಿಂಗಳುಗಳ (73 ದಿನಗಳ) ನಂತರ ಅಂದರೆ “ಹತ್ತನೆಯ ತಿಂಗಳಿನ [ಜೂನ್‌] ಮೊದಲನೆಯ ದಿನದಲ್ಲಿ” ಬೆಟ್ಟ ಗಳ ಶಿಖರಗಳು ಕಾಣ ಬಂದವು. (ಆದಿಕಾಂಡ 8:5) * ಮೂರು ತಿಂಗಳುಗಳ (90 ದಿನಗಳ) ನಂತರ ಅಂದರೆ ನೋಹನ “ಆರುನೂರ ಒಂದನೆಯ ವರುಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ” ಅಥವಾ ಸಾ.ಶ.ಪೂ. 2369ರ ಸೆಪ್ಟೆಂಬರ್‌ ತಿಂಗಳಿನ ಮಧ್ಯ ಭಾಗದಲ್ಲಿ, ನೋಹನು ನಾವೆಯಿಂದ ಹೊರಬಂದನು. ಆಗ ಅವನು “ಭೂಮಿಯು ಆರಿಹೋಗಿ”ರುವುದನ್ನು ನೋಡಶಕ್ತನಾದನು. (ಆದಿಕಾಂಡ 8:13) ಒಂದು ತಿಂಗಳು, 27 ದಿನಗಳ (57 ದಿನಗಳು) ನಂತರ, ಅಂದರೆ “ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ [ಸಾ.ಶ.ಪೂ. 2369ರ ನವೆಂಬರ್‌ ತಿಂಗಳಿನ ಮಧ್ಯ ಭಾಗ] ಭೂಮಿಯು ಒಣಗಿತ್ತು.” ಆಗ, ನೋಹನು ಮತ್ತು ಅವನ ಕುಟುಂಬವು ನಾವೆಯಿಂದ ಹೊರಗೆ ಒಣಭೂಮಿಗೆ ಕಾಲಿಟ್ಟಿತು. ಆದುದರಿಂದ, ಚಾಂದ್ರಮಾನ ಕ್ಯಾಲೆಂಡರಿಗನುಸಾರ, ನೋಹ ಮತ್ತು ಇತರರು ಒಂದು ವರುಷ ಹತ್ತು ದಿನಗಳ (370 ದಿನಗಳು) ತನಕ ನಾವೆಯಲ್ಲಿದ್ದರು.​—ಆದಿಕಾಂಡ 8:​14.

ಘಟನೆಗಳ, ವಿವರಗಳ ಮತ್ತು ಸಮಯಗಳ ಕುರಿತಾದ ನಿಷ್ಕೃಷ್ಟವಾದ ದಾಖಲೆಗಳು ಏನನ್ನು ರುಜುಪಡಿಸುತ್ತವೆ? ಈ ನಿಜಾಂಶವನ್ನು ರುಜುಪಡಿಸುತ್ತವೆ: ಯಾರು ತನಗೆ ದೊರೆತ ದಾಖಲೆಗಳ ಆಧಾರದ ಮೇಲೆ ಆದಿಕಾಂಡ ಪುಸ್ತಕವನ್ನು ಬರೆದನೋ ಆ ಇಬ್ರಿಯ ಪ್ರವಾದಿಯಾದ ಮೋಶೆಯು ಒಂದು ಕಾಲ್ಪನಿಕ ಕಥೆಯನ್ನಲ್ಲ ಬದಲಾಗಿ ವಾಸ್ತವಾಂಶಗಳನ್ನು ತಿಳಿಸಿದನು. ಆದುದರಿಂದ, ಜಲಪ್ರಳಯದ ಕುರಿತಾದ ದಾಖಲೆಯು ಇಂದಿರುವ ನಮಗೆ ಒಂದು ಮಹತ್ತ್ವಪೂರ್ಣ ಅರ್ಥವನ್ನು ಹೊಂದಿದೆ.

ಜಲಪ್ರಳಯದ ದಾಖಲೆಯನ್ನು ಇತರ ಬೈಬಲ್‌ ಬರಹಗಾರರು ಹೇಗೆ ವೀಕ್ಷಿಸಿದರು?

ಆದಿಕಾಂಡ ಪುಸ್ತಕದಲ್ಲಿರುವ ದಾಖಲೆಗೆ ಕೂಡಿಕೆಯಾಗಿ, ಬೈಬಲಿನಲ್ಲಿ ನೋಹನ ಅಥವಾ ಜಲಪ್ರಳಯದ ಕುರಿತಾದ ಅನೇಕ ಉಲ್ಲೇಖಗಳಿವೆ. ಉದಾಹರಣೆಗೆ:

(1) ಸಂಶೋಧಕನಾದ ಎಜ್ರನು, ಇಸ್ರಾಯೇಲ್‌ ಜನಾಂಗದ ವಂಶಾವಳಿ ಪಟ್ಟಿಯಲ್ಲಿ ನೋಹ ಮತ್ತು ಅವನ ಗಂಡು ಮಕ್ಕಳನ್ನೂ (ಶೇಮ್‌, ಹಾಮ್‌, ಯೆಫೆತ್‌) ಸೇರಿಸಿದ್ದಾನೆ.​—1 ಪೂರ್ವಕಾಲವೃತ್ತಾಂತ 1:​4-17.

(2) ವೈದ್ಯನೂ ಸುವಾರ್ತಾ ಪುಸ್ತಕದ ಲೇಖಕನೂ ಆದ ಲೂಕನು, ಯೇಸು ಕ್ರಿಸ್ತನ ಪೂರ್ವಜರ ಹೆಸರುಗಳನ್ನು ಪಟ್ಟಿಮಾಡುವಾಗ ನೋಹನನ್ನೂ ಸೇರಿಸಿದನು.​—ಲೂಕ 3:36.

(3) ಅಪೊಸ್ತಲ ಪೇತ್ರನು ತನ್ನ ಜೊತೆ ಕ್ರೈಸ್ತರಿಗೆ ಬರೆಯುವಾಗ ಜಲಪ್ರಳಯದ ಕುರಿತಾದ ಘಟನೆಯನ್ನು ಅನೇಕ ಬಾರಿ ಉಲ್ಲೇಖಿಸುತ್ತಾನೆ.​—2 ಪೇತ್ರ 2:5; 3:​5, 6.

(4) ನೋಹನು ತನ್ನ ಮನೆಯವರ ಸಂರಕ್ಷಣೆಗೋಸ್ಕರ ನಾವೆಯನ್ನು ಕಟ್ಟುವ ಮೂಲಕ ತೋರಿಸಿದ ಮಹಾ ನಂಬಿಕೆಯ ಕುರಿತು ಅಪೊಸ್ತಲ ಪೌಲನು ತಿಳಿಸಿದನು.​—ಇಬ್ರಿಯ 11:7.

ಈ ದೈವಪ್ರೇರಿತ ಬೈಬಲ್‌ ಬರಹಗಾರರು ಜಲಪ್ರಳಯದ ಕುರಿತು ಆದಿಕಾಂಡದಲ್ಲಿ ಕಂಡುಬರುವ ದಾಖಲೆಯನ್ನು ಸ್ವೀಕರಿಸಿದರು ಎಂಬುದಕ್ಕೆ ಯಾವುದಾದರೂ ಸಂಶಯವಿರಸಾಧ್ಯವೋ? ಯಾವುದೇ ಸಂಶಯವಿಲ್ಲದೆ ಅವರಿದನ್ನು ಒಂದು ಸತ್ಯ ಘಟನೆಯಾಗಿ ಪರಿಗಣಿಸಿದ್ದಾರೆ.

ಯೇಸು ಮತ್ತು ಜಲಪ್ರಳಯ

ಯೇಸು ಕ್ರಿಸ್ತನಿಗೆ ಮಾನವಪೂರ್ವ ಅಸ್ತಿತ್ವವಿತ್ತು. (ಜ್ಞಾನೋಕ್ತಿ 8:30, 31) ಜಲಪ್ರಳಯದ ಸಮಯದಲ್ಲಿ ಅವನು ಸ್ವರ್ಗದಲ್ಲಿ ಒಬ್ಬ ಆತ್ಮಜೀವಿಯಾಗಿದ್ದನು. ಆದುದರಿಂದ, ಈ ಘಟನೆಯನ್ನು ಯೇಸು ಕಣ್ಣಾರೆ ಕಂಡವನೋಪಾದಿ, ನೋಹನ ಮತ್ತು ಜಲಪ್ರಳಯದ ಕುರಿತಾಗಿ ಮಹತ್ತಾದ ಶಾಸ್ತ್ರೀಯ ದೃಢೀಕರಣವನ್ನು ಒದಗಿಸುತ್ತಾನೆ. ಯೇಸು ಹೇಳಿದ್ದು: “ನೋಹನ ದಿವಸಗಳು ಹೇಗಿದ್ದವೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯೂ ಇರುವದು. ಹೇಗಂದರೆ ಜಲಪ್ರಳಯಕ್ಕೆ ಮುಂಚಿನ ದಿನಗಳಲ್ಲಿ ನೋಹನು ನಾವೆಯಲ್ಲಿ ಸೇರಿದ ದಿನದ ತನಕ ಜನರು ಉಣ್ಣುತ್ತಾ ಕುಡಿಯುತ್ತಾ ಮದುವೆಮಾಡಿಕೊಳ್ಳುತ್ತಾ ಮಾಡಿಕೊಡುತ್ತಾ ಇದ್ದು ಪ್ರಳಯದ ನೀರು ಬಂದು ಎಲ್ಲರನ್ನು ಬಡುಕೊಂಡುಹೋಗುವ ತನಕ ಏನೂ ತಿಳಿಯದೇ ಇದ್ದರಲ್ಲಾ. ಅದರಂತೆ ಮನುಷ್ಯಕುಮಾರನು ಪ್ರತ್ಯಕ್ಷನಾಗುವ ಕಾಲದಲ್ಲಿಯೂ ಇರುವದು.”​—ಮತ್ತಾಯ 24:37-39.

ಈ ವಿಷಯಗಳ ವ್ಯವಸ್ಥೆಯ ಮೇಲೆ ಬರಲಿರುವ ಅಂತ್ಯದ ಕುರಿತು ನಮ್ಮನ್ನು ಎಚ್ಚರಿಸಲು ಯೇಸು ಒಂದು ಕಲ್ಪನಾಕಥೆಯನ್ನು ಉಪಯೋಗಿಸಿರಬಹುದೋ? ಖಂಡಿತವಾಗಿಯೂ ಇಲ್ಲ! ದುಷ್ಟರ ವಿರುದ್ಧವಾದ ದೇವರ ನ್ಯಾಯತೀರ್ಪಿನ ಕುರಿತಾದ ನಿಜವಾದ ಉದಾಹರಣೆಯನ್ನು ಅವನು ಉಪಯೋಗಿಸಿದನು ಎಂಬುದರಲ್ಲಿ ನಮಗೆ ದೃಢಭರವಸೆಯಿದೆ. ಹೌದು, ಅನೇಕ ಜನರು ತಮ್ಮ ಜೀವಗಳನ್ನು ಕಳೆದುಕೊಂಡರಾದರೂ, ನೋಹ ಮತ್ತು ಅವನ ಕುಟುಂಬವು ಜಲಪ್ರಳಯದಿಂದ ಪಾರಾಯಿತು ಎಂಬುದನ್ನು ತಿಳಿಯುವುದರಿಂದ ನಾವು ಸಾಂತ್ವನವನ್ನು ಪಡೆದುಕೊಳ್ಳಬಲ್ಲೆವು.

“ಮನುಷ್ಯಕುಮಾರನು [ಯೇಸು ಕ್ರಿಸ್ತನು] ಪ್ರತ್ಯಕ್ಷನಾಗುವ ಕಾಲದಲ್ಲಿ” ಅಂದರೆ ಇಂದು ಜೀವಿಸುವವರಿಗೆ “ನೋಹನ ದಿವಸಗಳು” ಅತಿ ಮಹತ್ವಪೂರ್ಣವಾದ ದಿನಗಳಾಗಿವೆ. ನೋಹನು ಇಟ್ಟಿದ್ದ ದಾಖಲೆಯಲ್ಲಿ ಉಳಿಸಲಾಗಿರುವ ಭೌಗೋಳಿಕ ಜಲಪ್ರಳಯದ ಕುರಿತಾದ ವಿವರವಾದ ದಾಖಲೆಯನ್ನು ನಾವು ಓದುವಾಗ, ಅದೊಂದು ನೈಜವಾದ ಐತಿಹಾಸಿಕ ದಾಖಲೆಯಾಗಿದೆ ಎಂದು ನಾವು ನಿಶ್ಚಯದಿಂದಿರಬಲ್ಲೆವು. ಅಷ್ಟುಮಾತ್ರವಲ್ಲದೆ, ಜಲಪ್ರಳಯದ ಕುರಿತಾದ ದೈವಪ್ರೇರಿತ ಆದಿಕಾಂಡ ದಾಖಲೆಯು ನಮಗೆ ಮಹತ್ತಾದ ಅರ್ಥವನ್ನು ಹೊಂದಿದೆ. ಪಾರಾಗುವಿಕೆಗಾಗಿರುವ ದೇವರ ಏರ್ಪಾಡಿನಲ್ಲಿ ನೋಹ, ಅವನ ಗಂಡುಮಕ್ಕಳು, ಮತ್ತು ಅವರ ಹೆಂಡತಿಯರು ನಂಬಿಕೆಯನ್ನಿಟ್ಟಂತೆ, ಇಂದಿರುವ ನಾವು ಸಹ ಯೇಸುವಿನ ಪ್ರಾಯಶ್ಚಿತ್ತ ಯಜ್ಞದಲ್ಲಿ ನಮ್ಮ ನಂಬಿಕೆಯನ್ನಿಡುವ ಮೂಲಕ ಯೆಹೋವನ ಸಂರಕ್ಷಣೆಯ ಕೆಳಗೆ ಬರಸಾಧ್ಯವಿದೆ. (ಮತ್ತಾಯ 20:28) ಅಷ್ಟುಮಾತ್ರವಲ್ಲದೆ, ನೋಹನ ಸಮಯದಲ್ಲಿ ದೇವಭಯವಿಲ್ಲದ ಆ ಲೋಕಕ್ಕೆ ಅಂತ್ಯವನ್ನು ತಂದ ಜಲಪ್ರಳಯವನ್ನು ಅವನು ಮತ್ತು ಅವನ ಕುಟುಂಬವು ಪಾರಾದದ್ದನ್ನು ಅವನ ದಿನಚರಿ ಪುಸ್ತಕವು ತೋರಿಸುವಂತೆ, ದುಷ್ಟ ವಿಷಯಗಳ ವ್ಯವಸ್ಥೆಯ ಅಂತ್ಯವನ್ನು ಪಾರಾಗುವವರಲ್ಲಿ ನಾವೊಬ್ಬರಾಗಿರುವ ನಿರೀಕ್ಷೆಯನ್ನು ಹೊಂದಸಾಧ್ಯವಿದೆ.

[ಪಾದಟಿಪ್ಪಣಿಗಳು]

^ ಪ್ಯಾರ. 7 ಜಲಪ್ರಳಯದ ತಾರೀಖಿನ ಕುರಿತಾದ ಹೆಚ್ಚಿನ ವಿವರಗಳಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಶಾಸ್ತ್ರವಚನಗಳ ಒಳನೋಟ (ಇಂಗ್ಲಿಷ್‌) ಎಂಬ ಪುಸ್ತಕದ ಸಂಪುಟ 1ರ 458-60ನೆಯ ಪುಟಗಳನ್ನು ನೋಡಿರಿ.

^ ಪ್ಯಾರ. 12 “ನಾವೆಯು ಪರ್ವತದ ಮೇಲೆ ಬಂದು ನಿಂತು ಪ್ರಾಯಶಃ 73 ದಿನಗಳ ನಂತರ, ಬೆಟ್ಟಗಳ ಶಿಖರಗಳು ಅಂದರೆ ನಾವೆಯು ಯಾವುದರಿಂದ ಸುತ್ತುವರಿಯಲ್ಪಟ್ಟಿತ್ತೋ ಆ ಅರ್‌ಮೇನಿಯದ ಎತ್ತರ ಪ್ರದೇಶಗಳ ಶಿಖರಗಳು ಕಾಣಬಂದವು” ಎಂಬುದಾಗಿ ಕೈಲ್‌ ಡೀಲಿಟ್ಸ್‌ರ ಕಮೆಂಟರಿ ಆನ್‌ ದಿ ಓಲ್ಡ್‌ ಟೆಸ್ಟಮೆಂಟ್‌ನ ಒಂದನೆಯ ಸಂಪುಟ, ಪು 148 ತಿಳಿಸುತ್ತದೆ.

[ಪುಟ 5ರಲ್ಲಿರುವ ಚೌಕ]

ಅವರು ಅಷ್ಟೊಂದು ವರುಷ ಬದುಕಿದರೋ?

“ಅವನು [ನೋಹನು] ಒಟ್ಟು ಒಂಭೈನೂರೈವತ್ತು ವರುಷ ಬದುಕಿ ಸತ್ತನು” ಎಂದು ಬೈಬಲ್‌ ತಿಳಿಸುತ್ತದೆ. (ಆದಿಕಾಂಡ 9:​29) ನೋಹನ ಅಜ್ಜನಾದ ಮೆತೂಷೆಲಹನು 969 ವರುಷಗಳ ವರೆಗೆ ಬದುಕಿದನು​—ದಾಖಲೆಯಾಗಿರುವವರಲ್ಲಿಯೇ ಅತ್ಯಂತ ಅಧಿಕ ಕಾಲಾವಧಿಯ ವರೆಗೆ ಜೀವಿಸಿದ ವ್ಯಕ್ತಿ. ಆದಾಮನಿಂದ ನೋಹನ ವರೆಗಿನ ಹತ್ತು ಸಂತತಿಗಳ ಸರಾಸರಿ ಜೀವನಾಯುಷ್ಯವು 850ಕ್ಕಿಂತಲೂ ಹೆಚ್ಚು ವರುಷಗಳಾಗಿದ್ದವು. (ಆದಿಕಾಂಡ 5:​5-31) ಹಾಗಾದರೆ, ಹಿಂದೆ ಆ ಕಾಲದಲ್ಲಿ ಜೀವಿಸಿದ ಜನರು ನಿಜವಾಗಿಯೂ ಅಷ್ಟೊಂದು ವರುಷ ಬದುಕಿದರೊ?

ಮನುಷ್ಯರು ಸದಾಕಾಲ ಜೀವಿಸಬೇಕೆಂಬುದೇ ದೇವರ ಮೂಲ ಉದ್ದೇಶವಾಗಿತ್ತು. ಪ್ರಥಮ ಮನುಷ್ಯನಾದ ಆದಾಮನು, ದೇವರಿಗೆ ವಿಧೇಯನಾಗಿರುತ್ತಿದ್ದಲ್ಲಿ ಅಂತ್ಯವಿಲ್ಲದ ಒಂದು ಜೀವನಾಯುಷ್ಯವನ್ನು ಆನಂದಿಸುವ ಸದವಕಾಶದೊಂದಿಗೆ ಸೃಷ್ಟಿಸಲ್ಪಟ್ಟನು. (ಆದಿಕಾಂಡ 2:​15-17) ಆದರೆ ಆದಾಮನು ಅವಿಧೇಯನಾಗಿ ಆ ಸದವಕಾಶವನ್ನು ಕಳೆದುಕೊಂಡನು. ಆದಾಮನು ಕ್ರಮೇಣ ಮರಣದ ಹಂತದತ್ತ ಸಾಗುತ್ತಾ, ಒಟ್ಟು 930 ವರುಷಗಳ ವರೆಗೆ ಬದುಕಿ, ಅವನು ಯಾವುದರಿಂದ ತೆಗೆಯಲ್ಪಟ್ಟನೋ ಅದೇ ಮಣ್ಣಿಗೆ ಪುನಃ ಸೇರಿದನು. (ಆದಿಕಾಂಡ 3:​19; 5:5) ಈ ಮೊದಲನೆಯ ಮನುಷ್ಯನು, ಪಾಪ ಮತ್ತು ಮರಣವೆಂಬ ಆಸ್ತಿಯನ್ನು ತನ್ನ ಸಂತತಿಗೆ ದಾಟಿಸಿದನು.​—ರೋಮಾಪುರ 5:12.

ಹಾಗಿದ್ದರೂ, ಆ ಸಮಯದಲ್ಲಿ ಜೀವಿಸಿದ ಜನರು ಆದಾಮನ ಆರಂಭದ ಪರಿಪೂರ್ಣತೆಗೆ ಹೆಚ್ಚು ನಿಕಟರಾಗಿದ್ದ ಕಾರಣ, ನಂತರ ಹುಟ್ಟಿದ ಜನರಿಗಿಂತ ಹೆಚ್ಚು ದೀರ್ಘಾಯುಷ್ಯವುಳ್ಳವರು ಆಗಿದ್ದರು. ಆದುದರಿಂದಲೇ, ಜಲಪ್ರಳಯಕ್ಕೆ ಮುಂಚಿನ ಅವಧಿಯಲ್ಲಿ ಕೆಲವು ಮನುಷ್ಯರ ಸರಾಸರಿ ಜೀವನಾಯುಷ್ಯವು ಒಂದು ಸಾವಿರ ವರುಷಗಳ ಹತ್ತಿರವಿತ್ತು, ಆದರೆ ಮುಂದಕ್ಕೆ ಜಲಪ್ರಳಯದ ನಂತರ ಅದು ಕ್ಷಿಪ್ರವಾಗಿ ಕೆಳಗಿಳಿಯಿತು. ಉದಾಹರಣೆಗೆ, ಅಬ್ರಹಾಮನು ಕೇವಲ 175 ವರುಷ ಬದುಕಿದನು. (ಆದಿಕಾಂಡ 25:7) ಈ ನಂಬಿಗಸ್ತ ಪಿತೃವಾದ ಅಬ್ರಹಾಮನ ಮರಣದ ಸುಮಾರು 400 ವರುಷಗಳ ನಂತರ, ಪ್ರವಾದಿಯಾದ ಮೋಶೆಯು ಬರೆದದ್ದು: “ನಮ್ಮ ಆಯುಷ್ಕಾಲವು ಎಪ್ಪತ್ತು ವರುಷ; ಬಲ ಹೆಚ್ಚಿದ್ದರೆ ಎಂಭತ್ತು. ಕಷ್ಟಸಂಕಟಗಳೇ ಅದರ ಆಡಂಬರ. ಅದು ಬೇಗನೆ ಗತಿಸಿಹೋಗುತ್ತದೆ; ನಾವು ಹಾರಿ ಹೋಗುತ್ತೇವೆ.” (ಕೀರ್ತನೆ 90:10) ಇಂದೂ ಜೀವನಾಯುಷ್ಯವು ಅಷ್ಟೇ ಇದೆ.

[ಪುಟ 6, 7ರಲ್ಲಿರುವ ಚಾರ್ಟು/ಚಿತ್ರಗಳು]

ಯೆಹೂದ್ಯರು ಬಂಧಿವಾಸದಿಂದ ಹಿಂದಿರುಗಿ ಹೋಗುವಂತೆ ಕೋರೆಷನು ಆಜ್ಞೆ ಹೊರಡಿಸಿದಂದಿನಿಂದ, ನೋಹನ ದಿನದ ಜಲಪ್ರಳಯದ ತನಕ ಹಿಂದಕ್ಕೆ ಲೆಕ್ಕಿಸುವುದು

537 ಕೋರೆಷನ ಆಜ್ಞೆ *

539 ಪಾರಸಿಯನಾದ ಕೋರೆಷನಿಂದ ಬಾಬೆಲಿನ

ಪತನ

68 ವರ್ಷಗಳು

607 ಯೆಹೂದದ 70 ವರುಷಗಳ ನಿರ್ಜನತೆಯು

ಆರಂಭಗೊಳ್ಳುತ್ತದೆ

ನಾಯಕರು, ನ್ಯಾಯಸ್ಥಾಪಕರು,

ಮತ್ತು ಇಸ್ರಾಯೇಲಿನ ಅರಸರಿಂದ

906 ವರುಷಗಳ ಮೇಲ್ವಿಚಾರಣೆ

1513 ಐಗುಪ್ತದಿಂದ ಇಸ್ರಾಯೇಲ್ಯರ ವಿಮೋಚನೆ

430 ವರ್ಷಗಳು ಇಸ್ರಾಯೇಲ್ಯರು ಐಗುಪ್ತ ಮತ್ತು ಕಾನಾನ್‌

ದೇಶದಲ್ಲಿ ವಾಸವಾಗಿದ್ದ 430 ವರುಷಗಳ

ಕಾಲಾವಧಿ (ವಿಮೋಚನಕಾಂಡ 12:40, 41)

1943 ಅಬ್ರಹಾಮಸಂಬಂಧಿತ ಒಡಂಬಡಿಕೆಯು

ಕಾರ್ಯರೂಪಕ್ಕೆ ತರಲ್ಪಟ್ಟದ್ದು

205 ವರುಷಗಳು

2148 ತೆರಹನ ಜನನ

222 ವರುಷಗಳು

2370 ಜಲಪ್ರಳಯದ ಆರಂಭ

[ಪಾದಟಿಪ್ಪಣಿ]

^ ಪ್ಯಾರ. 35 ಬಂಧಿವಾಸದಿಂದ ಯೆಹೂದ್ಯರ ಬಿಡುಗಡೆಗಾಗಿ ಕೋರೆಷನು ಆಜ್ಞೆಯನ್ನು ಹೊರಡಿಸಿದ್ದು, “ಪಾರಸಿಯ ಅರಸನಾದ ಕೋರೆಷನ ಮೊದಲನೆಯ ವರುಷದಲ್ಲಿ,” ಅಂದರೆ ಸಾ.ಶ.ಪೂ. 538ನೆಯ ವರುಷದಲ್ಲಿ ಅಥವಾ ಸಾ.ಶ.ಪೂ. 537ನೆಯ ವರುಷದ ಆರಂಭದಲ್ಲಾಗಿತ್ತು.