ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಸಾ.ಶ. 33ರಿಂದ ಸಾ.ಶ. 36ರ ತನಕದ ಯೆಹೂದ್ಯರ ದೀಕ್ಷಾಸ್ನಾನವು ವೈಯಕ್ತಿಕ ಸಮರ್ಪಣೆಯನ್ನು ಅಗತ್ಯಪಡಿಸುವುದಿಲ್ಲವೆಂದು ಹಿಂದೆ ನಂಬಲಾಗಿತ್ತು. ಆದರೆ, 2002, ಏಪ್ರಿಲ್‌ 1ರ ಕಾವಲಿನಬುರುಜು ಪತ್ರಿಕೆಯ 11ನೆಯ ಪುಟದಲ್ಲಿರುವ 7ನೆಯ ಪ್ಯಾರಗ್ರಾಫ್‌ನಲ್ಲಿ, ಸಾ.ಶ. 33ರ ಪಂಚಾಶತ್ತಮದಂದು ಸಂಭವಿಸಿದ ಹೊಸ ಯೆಹೂದಿ ವಿಶ್ವಾಸಿಗಳ ನೀರಿನ ದೀಕ್ಷಾಸ್ನಾನವು “ದೇವರಿಗೆ ಕ್ರಿಸ್ತನ ಮೂಲಕ ಮಾಡಿದ ಅವರ ವೈಯಕ್ತಿಕ ಸಮರ್ಪಣೆಯನ್ನು” ಸಂಕೇತಿಸುತ್ತದೆ ಎಂಬುದಾಗಿ ಏಕೆ ತಿಳಿಸಲಾಗಿದೆ?

ಸಾ.ಶ.ಪೂ. 1513ರಲ್ಲಿ, ಇಸ್ರಾಯೇಲ್ಯರು ಯೆಹೋವನ ‘ಮಾತನ್ನು ಶ್ರದ್ಧೆಯಿಂದ ಕೇಳಿ ಆತನು ಮಾಡುವ ನಿಬಂಧನೆಯನ್ನು ಅನುಸರಿಸುವಷ್ಟು’ ಕಾಲ ಆತನಿಗೆ ಸ್ವಕೀಯಜನರಾಗುವ ಅವಕಾಶವನ್ನು ಯೆಹೋವನು ಅವರಿಗೆ ನೀಡಿದನು. ಅವರು ಉತ್ತರಿಸಿದ್ದು: “ಯೆಹೋವನು ಹೇಳಿದಂತೆಯೇ ಮಾಡುವೆವು.”​—ವಿಮೋಚನಕಾಂಡ 19:​3-8; 24:​1-8.

ಮೋಶೆಯ ಧರ್ಮಶಾಸ್ತ್ರದೊಡಂಬಡಿಕೆಯ ಷರತ್ತುಗಳಿಗೆ ವಿಧೇಯತೆ ತೋರಿಸಲು ಸಮ್ಮತಿಸಿದಾಗ, ಇಸ್ರಾಯೇಲ್‌ ಜನಾಂಗವು ತನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡಿತು. ಹಿಂಬಾಲಿಸಿ ಬಂದ ಯೆಹೂದ್ಯರ ಸಂತತಿಯು ಹುಟ್ಟಿನಿಂದಲೇ ಸಮರ್ಪಿತ ಜನಾಂಗವಾಗಿತ್ತು. ಹಾಗಿದ್ದರೂ, ಸಾ.ಶ. 33ರ ಪಂಚಾಶತ್ತಮದ ನಂತರ ಯೇಸು ಕ್ರಿಸ್ತನ ಹಿಂಬಾಲಕರಾದ ಯೆಹೂದ್ಯರ ದೀಕ್ಷಾಸ್ನಾನದಲ್ಲಿ, ಅವರನ್ನು ಒಂದು ಸಮರ್ಪಿತ ಜನಾಂಗವಾಗಿ ದೇವರಿಗೆ ಒಪ್ಪಿಸಿಕೊಳ್ಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಆ ದೀಕ್ಷಾಸ್ನಾನವು, ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ಒಂದು ಹೊಸ ಸಂಬಂಧಕ್ಕೆ ಅವರನ್ನು ತರುವ, ಯೆಹೋವನಿಗಾಗಿರುವ ಅವರ ಸಮರ್ಪಣೆಯನ್ನು ಸಂಕೇತಿಸುತ್ತದೆ. ಇದು ಹೇಗೆ?

ಸಾ.ಶ. 33ರ ಪಂಚಾಶತ್ತಮದಂದು ಯೆರೂಸಲೇಮಿನ ಮೇಲಂತಸ್ತಿನ ಕೋಣೆಯಲ್ಲಿ ಕೂಡಿಬಂದಿದ್ದ 120 ಮಂದಿ ಶಿಷ್ಯರ ಮೇಲೆ ಪವಿತ್ರಾತ್ಮವು ಸುರಿಸಲ್ಪಟ್ಟ ನಂತರ ಅಪೊಸ್ತಲ ಪೇತ್ರನು ಎದ್ದು ನಿಂತು, ಏನು ಸಂಭವಿಸಿತ್ತೆಂಬುದನ್ನು ನೋಡುವುದಕ್ಕಾಗಿ ಅಲ್ಲಿ ನೆರೆದುಬಂದಿದ್ದ ಸಾವಿರಾರು ಯೆಹೂದ್ಯರಿಗೂ ಮತಾವಲಂಬಿಗಳಿಗೂ ಸಾರಲು ಆರಂಭಿಸಿದನು. ಸಂಪೂರ್ಣವಾಗಿ ಸಾಕ್ಷಿನೀಡಿದ ಬಳಿಕ, ಅವನು ಮನಸ್ಸಾಕ್ಷಿ ಪೀಡಿತರಾದ ಯೆಹೂದ್ಯರಿಗೆ ಹೇಳಿದ್ದು: “ನಿಮ್ಮ ಪಾಪಗಳು ಪರಿಹಾರವಾಗುವದಕ್ಕಾಗಿ ನಿಮ್ಮಲ್ಲಿ ಪ್ರತಿಯೊಬ್ಬರು ದೇವರ ಕಡೆಗೆ ತಿರುಗಿಕೊಂಡು ಯೇಸು ಕ್ರಿಸ್ತನ ಹೆಸರಿನ ಮೇಲೆ ದೀಕ್ಷಾಸ್ನಾನಮಾಡಿಸಿಕೊಳ್ಳಿರಿ.” ಪೇತ್ರನ ಬುದ್ಧಿವಾದಕ್ಕೆ ಪ್ರತಿಕ್ರಿಯಿಸುತ್ತಾ, “ಅವನ ಮಾತಿಗೆ ಒಪ್ಪಿಕೊಂಡವರು ದೀಕ್ಷಾಸ್ನಾನಮಾಡಿಸಿಕೊಂಡರು. ಆ ದಿವಸ ಸುಮಾರು ಮೂರು ಸಾವಿರ ಜನರು ಅವರಲ್ಲಿ ಸೇರಿದರು.”​—ಅ. ಕೃತ್ಯಗಳು 2:​1-41.

ಪೇತ್ರನ ಬುದ್ಧಿವಾದವನ್ನು ಕೇಳಿ ದೀಕ್ಷಾಸ್ನಾನಮಾಡಿಸಿಕೊಂಡ ಯೆಹೂದ್ಯರು ಈಗಾಗಲೇ ಸಮರ್ಪಿತ ಜನಾಂಗದ ಸದಸ್ಯರಾಗಿರಲಿಲ್ಲವೋ? ದೇವರೊಂದಿಗೆ ಸಮರ್ಪಿತ ಸಂಬಂಧವನ್ನು ಅವರು ಅನುಭವಿಸುತ್ತಿರಲಿಲ್ಲವೋ? ಇಲ್ಲ. ‘ದೇವರು ಧರ್ಮಶಾಸ್ತ್ರದೊಡಂಬಡಿಕೆಯನ್ನು ಶಿಲುಬೆಗೆ ಜಡಿದು ಇಲ್ಲದಂತಾಗಮಾಡಿದನು’ ಎಂಬುದಾಗಿ ಅಪೊಸ್ತಲ ಪೌಲನು ಬರೆದನು. (ಕೊಲೊಸ್ಸೆ 2:14) ಸಾ.ಶ. 33ರಲ್ಲಿ ಸಂಭವಿಸಿದ ಕ್ರಿಸ್ತನ ಮರಣದ ಮೂಲಕ, ಯೆಹೋವ ದೇವರು ಇಸ್ರಾಯೇಲ್ಯರನ್ನು ಆತನೊಂದಿಗೆ ಒಂದು ಸಮರ್ಪಿತ ಸಂಬಂಧದೊಳಕ್ಕೆ ತರಲು ಸಾಧ್ಯವನ್ನಾಗಿ ಮಾಡಿದ ಆ ಧರ್ಮಶಾಸ್ತ್ರದೊಡಂಬಡಿಕೆಯನ್ನೇ ತೆಗೆದುಹಾಕಿದನು. ದೇವರ ಮಗನನ್ನು ನಿರಾಕರಿಸಿದ ಜನಾಂಗವು ಈಗ ಸ್ವತಃ ದೇವರಿಂದ ನಿರಾಕರಿಸಲ್ಪಟ್ಟಿತು. ‘ವಂಶಕ್ರಮದಿಂದ ಇಸ್ರಾಯೇಲ್ಯರಾಗಿರುವವರು’ ಇನ್ನೆಂದೂ ದೇವರಿಗೆ ಸಮರ್ಪಿತ ಜನಾಂಗವೆಂದು ಹೇಳಿಕೊಳ್ಳಸಾಧ್ಯವಿರಲಿಲ್ಲ.​—1 ಕೊರಿಂಥ 10:18; ಮತ್ತಾಯ 21:43.

ಧರ್ಮಶಾಸ್ತ್ರದೊಡಂಬಡಿಕೆಯು ಸಾ.ಶ. 33ರಲ್ಲಿ ತೆಗೆದುಹಾಕಲ್ಪಟ್ಟಿತು. ಆದರೆ ಯೆಹೂದ್ಯರಿಗೆ, ದೇವರ ವಿಶೇಷ ಅನುಗ್ರಹ ಮತ್ತು ಗಮನದ ಕಾಲಾವಧಿಯು ಆ ಸಮಯದಲ್ಲಿ ಇನ್ನೂ ಅಂತ್ಯಗೊಳ್ಳಲಿಲ್ಲ. * ದೇವಭಯವುಳ್ಳ ಇತಾಲ್ಯದ ಕೊರ್ನೇಲ್ಯನು ಮತ್ತು ಅವನ ಮನೆಯವರು ಹಾಗೂ ಇತರ ಅನ್ಯಜನರಿಗೆ ಪೇತ್ರನು ಉಪದೇಶಮಾಡುವ ವರೆಗೆ ಅಂದರೆ ಸಾ.ಶ. 36ರ ವರೆಗೆ ಆ ಕಾಲಾವಧಿಯು ಮುಂದುವರಿಯಿತು. (ಅ. ಕೃತ್ಯಗಳು 10:​1-48) ಇಷ್ಟೊಂದು ಕಾಲಾವಧಿಯ ವರೆಗೆ ಈ ಅನುಗ್ರಹವನ್ನು ಮುಂದೂಡಲು ಆಧಾರವೇನು?

“[ಮೆಸ್ಸೀಯನು] ಒಂದು ವಾರದ ಮಟ್ಟಿಗೆ ಬಹು ಜನರೊಂದಿಗೆ ದೃಢವಾದ ಒಡಂಬಡಿಕೆಯನ್ನು ಮಾಡಿಕೊಳ್ಳುವನು,” ಎಂಬುದಾಗಿ ದಾನಿಯೇಲ 9:​27 ತಿಳಿಸುತ್ತದೆ. ಸಾ.ಶ. 29ರಲ್ಲಿ ಯೇಸುವಿನ ದೀಕ್ಷಾಸ್ನಾನ ಮತ್ತು ಅವನ ಸಾರ್ವಜನಿಕ ಶುಶ್ರೂಷೆಯು ಆರಂಭಗೊಂಡಂದಿನಿಂದ ಏಳು ವರುಷ ಅಥವಾ “ಒಂದು ವಾರ” ದೃಢವಾಗಿಡಲ್ಪಟ್ಟ ಒಡಂಬಡಿಕೆಯು ಅಬ್ರಹಾಮಸಂಬಂಧಿತ ಒಡಂಬಡಿಕೆಯಾಗಿತ್ತು. ಆ ಒಡಂಬಡಿಕೆಯ ಸಂಬಂಧದಲ್ಲಿರಬೇಕಾದರೆ ಒಬ್ಬ ವ್ಯಕ್ತಿಯು ಕೇವಲ ಅಬ್ರಹಾಮನ ಸಂತಾನದವನಾಗಿರುವ ಅಗತ್ಯವಿತ್ತು. ಈ ಏಕಪಕ್ಷ ಒಡಂಬಡಿಕೆಯು, ಒಬ್ಬ ವ್ಯಕ್ತಿಗೆ ಯೆಹೋವನೊಂದಿಗೆ ಒಂದು ಸಮರ್ಪಿತ ಸಂಬಂಧವನ್ನು ಸಾಧ್ಯಗೊಳಿಸಲಿಲ್ಲ. ಆದುದರಿಂದ, ಸಾ.ಶ. 33ರ ಪಂಚಾಶತ್ತಮದಂದು ಪೇತ್ರನ ಭಾಷಣವನ್ನು ಕೇಳಿಸಿಕೊಂಡು ನಂತರ ದೀಕ್ಷಾಸ್ನಾನಹೊಂದಿದ ಆ ಯೆಹೂದಿ ವಿಶ್ವಾಸಿಗಳು ಶಾರೀರಿಕ ಯೆಹೂದ್ಯರಾದ ಕಾರಣ ವಿಶೇಷ ಗಮನವನ್ನು ಪಡೆದುಕೊಂಡರಾದರೂ, ಧರ್ಮಶಾಸ್ತ್ರದೊಡಂಬಡಿಕೆಯು ತೆಗೆದುಹಾಕಲ್ಪಟ್ಟಿದ್ದ ಕಾರಣ ಅವರು ದೇವರೊಂದಿಗೆ ಸಮರ್ಪಿತ ಸಂಬಂಧವನ್ನು ಪಡೆದಿರಲಿಲ್ಲ. ಅವರು ವೈಯಕ್ತಿಕವಾಗಿ ದೇವರಿಗೆ ತಮ್ಮನ್ನು ಸಮರ್ಪಿಸಿಕೊಳ್ಳಬೇಕಿತ್ತು.

ಸಾ.ಶ. 33ರ ಪಂಚಾಶತ್ತಮ ದಿನದಂದು ತಮ್ಮನ್ನು ದೀಕ್ಷಾಸ್ನಾನಕ್ಕೆ ಒಪ್ಪಿಸಿಕೊಟ್ಟ ಯೆಹೂದ್ಯರ ಮತ್ತು ಮತಾವಲಂಬಿಗಳ ವೈಯಕ್ತಿಕ ಸಮರ್ಪಣೆಯು ಇನ್ನೊಂದು ಕಾರಣಕ್ಕಾಗಿಯೂ ಅಗತ್ಯವಿತ್ತು. ಅಪೊಸ್ತಲ ಪೇತ್ರನು ತನ್ನ ಕೇಳುಗರಿಗೆ, ಪಶ್ಚಾತ್ತಾಪಪಟ್ಟು ಯೇಸುವಿನ ಹೆಸರಿನಲ್ಲಿ ದೀಕ್ಷಾಸ್ನಾಹೊಂದಿರಿ ಎಂಬುದಾಗಿ ಬುದ್ಧಿವಾದ ಹೇಳಿದನು. ಹಾಗೆ ಮಾಡುವುದು, ಲೋಕವನ್ನು ತ್ಯಜಿಸಿ, ಯೇಸುವನ್ನು ಕರ್ತನು ಮತ್ತು ಮೆಸ್ಸೀಯನು, ಮಹಾ ಯಾಜಕನು ಹಾಗೂ ಸ್ವರ್ಗದಲ್ಲಿ ದೇವರ ಬಲಗಡೆಯಲ್ಲಿ ಕೂತುಕೊಂಡಿರುವವನು ಎಂಬುದಾಗಿ ಅಂಗೀಕರಿಸುವುದನ್ನು ಅಗತ್ಯಪಡಿಸಿತು. ಅವರು ರಕ್ಷಣೆಗಾಗಿ, ಕ್ರಿಸ್ತ ಯೇಸುವಿನ ಮೂಲಕ ಯೆಹೋವ ದೇವರ ನಾಮವನ್ನು ಹೇಳಿಕೊಳ್ಳುವುದು ಆವಶ್ಯವಾಗಿದೆ. ಇದರಲ್ಲಿ, ಕ್ರಿಸ್ತನ ಮೇಲೆ ನಂಬಿಕೆಯನ್ನಿಡುವುದು ಮತ್ತು ತಮ್ಮ ನಾಯಕನನ್ನಾಗಿ ಅವನನ್ನು ಅಂಗೀಕರಿಸುವುದು ಒಳಗೂಡಿದೆ. ದೇವರೊಂದಿಗೆ ಸಂಬಂಧವನ್ನು ಇಟ್ಟುಕೊಳ್ಳಲು ಮತ್ತು ಪಾಪಗಳಿಗಾಗಿ ಕ್ಷಮಾಪಣೆಯನ್ನು ಪಡೆಯಲು ಆವಶ್ಯಕವಾದ ವಿಷಯಗಳು ಈಗ ಬದಲಾಗಿವೆ. ವ್ಯಕ್ತಿಗತವಾಗಿ, ವಿಶ್ವಾಸಿಗಳಾದ ಯೆಹೂದ್ಯರು ಈ ಹೊಸ ಏರ್ಪಾಡನ್ನು ಸ್ವೀಕರಿಸಬೇಕಾಗಿತ್ತು. ಹೇಗೆ? ತಮ್ಮನ್ನು ದೇವರಿಗೆ ಸಮರ್ಪಿಸಿಕೊಳ್ಳುವ ಮತ್ತು ಯೇಸು ಕ್ರಿಸ್ತನ ಹೆಸರಿನಲ್ಲಿ ನೀರಿನ ದೀಕ್ಷಾಸ್ನಾನವನ್ನು ಪಡೆದುಕೊಂಡು, ಆ ಸಮರ್ಪಣೆಯನ್ನು ಬಹಿರಂಗವಾಗಿ ತೋರಿಸುವ ಮೂಲಕವೇ. ನೀರಿನ ದೀಕ್ಷಾಸ್ನಾನವು, ಯೇಸು ಕ್ರಿಸ್ತನ ಮೂಲಕ ದೇವರೊಂದಿಗೆ ಒಂದು ಹೊಸ ಸಂಬಂಧಕ್ಕೆ ಅವರನ್ನು ತರುವ ಅವರ ಸಮರ್ಪಣೆಯ ಸಂಕೇತವಾಗಿದೆ.​—ಅ. ಕೃತ್ಯಗಳು 2:21, 33-36; 3:​19-23.

[ಪಾದಟಿಪ್ಪಣಿ]

^ ಪ್ಯಾರ. 7 ಯೇಸು ಕ್ರಿಸ್ತನು ಪರಲೋಕಕ್ಕೆ ಏರಿಹೋಗಿ, ತನ್ನ ಯಜ್ಞಾರ್ಪಿತ ಮಾನವ ದೇಹದ ಬೆಲೆಯನ್ನು ಯೆಹೋವ ದೇವರಿಗೆ ನೀಡಿದಾಗ, ಮೋಶೆಯ ಧರ್ಮಶಾಸ್ತ್ರದೊಡಂಬಡಿಕೆಯು ತೆಗೆದುಹಾಕಲ್ಪಟ್ಟಿತು ಮತ್ತು ಮುಂತಿಳಿಸಲ್ಪಟ್ಟ ‘ಹೊಸ ಒಡಂಬಡಿಕೆಗೆ’ ಒಂದು ಆಧಾರವಾಯಿತು.​—ಯೆರೆಮೀಯ 31:​31-34.