ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸ್ಥಿರಚಿತ್ತರಾಗಿದ್ದು, ಜೀವಕ್ಕಾಗಿರುವ ಓಟವನ್ನು ಗೆಲ್ಲಿರಿ

ಸ್ಥಿರಚಿತ್ತರಾಗಿದ್ದು, ಜೀವಕ್ಕಾಗಿರುವ ಓಟವನ್ನು ಗೆಲ್ಲಿರಿ

ಸ್ಥಿರಚಿತ್ತರಾಗಿದ್ದು, ಜೀವಕ್ಕಾಗಿರುವ ಓಟವನ್ನು ಗೆಲ್ಲಿರಿ

ಬಿರುಗಾಳಿಯಿಂದ ಅಲ್ಲೋಲಕಲ್ಲೋಲವಾಗಿರುವ ಒಂದು ಸಮುದ್ರದಲ್ಲಿ ನಿಮಗೆ ಪ್ರಯಾಣಿಸಬೇಕಾಗಿದೆ ಎಂದು ಭಾವಿಸಿರಿ. ಅದಕ್ಕಾಗಿ ನೀವು ಯಾವ ರೀತಿಯ ನೌಕೆಯನ್ನು ಇಷ್ಟಪಡುವಿರಿ? ದುರ್ಬಲವಾದ ಒಂದು ಚಿಕ್ಕ ದೋಣಿಯನ್ನೋ, ಇಲ್ಲವೆ ಗಟ್ಟಿಮುಟ್ಟಾದ, ಚೆನ್ನಾಗಿ ಕಟ್ಟಲ್ಪಟ್ಟಿರುವ ಹಡಗನ್ನೋ? ನಿಸ್ಸಂದೇಹವಾಗಿಯೂ ನೀವು ಹಡಗನ್ನೇ ಆಯ್ಕೆಮಾಡುವಿರಿ. ಏಕೆಂದರೆ ಅದು ಮಾತ್ರವೇ ಆ ಬಿರುಸಾದ ಅಲೆಗಳ ಮಧ್ಯೆಯೂ ಯಶಸ್ವಿಯಾಗಿ ಸಂಚರಿಸಬಲ್ಲದು.

ನಾವಿಂದು ಈ ಪ್ರಕ್ಷುಬ್ಧ ಹಾಗೂ ಅಪಾಯಕಾರಿಯಾದ ವಿಷಯಗಳ ವ್ಯವಸ್ಥೆಯ ಮಧ್ಯೆ ಹಾದುಹೋಗುತ್ತಿದ್ದೇವೆ. ಮತ್ತು ನಮ್ಮನ್ನು ತಳಮಳಗೊಳಿಸುವಂಥ ಪಂಥಾಹ್ವಾನಗಳನ್ನು ನಾವು ಎದುರಿಸುತ್ತೇವೆ. ದೃಷ್ಟಾಂತಕ್ಕಾಗಿ, ಈ ಲೋಕದ ಗೊಂದಲಮಯ ವಿಚಾರಗಳು ಮತ್ತು ಗೀಳುಗಳ ಮಧ್ಯೆ ಯುವ ಜನರಿಗೆ ಕೆಲವೊಮ್ಮೆ ಗಲಿಬಿಲಿ ಮತ್ತು ಅಭದ್ರತೆಯ ಭಾವನೆಯುಂಟಾಗುತ್ತದೆ. ಇತ್ತೀಚೆಗೆ ಕ್ರೈಸ್ತ ಜೀವನವನ್ನು ನಡೆಸಲಾರಂಭಿಸಿರುವವರಿಗೆ ಈಗಲೂ ಒಂದು ರೀತಿಯ ಅಸ್ಥಿರತೆಯ ಅನಿಸಿಕೆಯಿರಬಹುದು. ಅನೇಕ ವರ್ಷಗಳಿಂದ ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿರುವ ಸ್ಥಿರಚಿತ್ತ ವ್ಯಕ್ತಿಗಳಲ್ಲಿ ಕೆಲವರ ನಿರೀಕ್ಷಣೆಗಳು ಈಗಲೂ ಪೂರ್ಣವಾಗಿ ನೆರವೇರಿಲ್ಲದಿರುವುದರಿಂದ ಅವರು ಸಹ ಪರೀಕ್ಷೆಯನ್ನು ಅನುಭವಿಸುತ್ತಿರಬಹುದು.

ಇಂಥ ಅನಿಸಿಕೆಗಳು ಉಂಟಾಗುವುದು ಹೊಸತೇನಲ್ಲ. ಮೋಶೆ, ಯೋಬ, ಮತ್ತು ದಾವೀದರಂಥ ಯೆಹೋವನ ನಂಬಿಗಸ್ತ ಸೇವಕರು ಸಹ, ಕೆಲವೊಮ್ಮೆ ತಳಮಳವನ್ನು ಅನುಭವಿಸಿದರು. (ಅರಣ್ಯಕಾಂಡ 11:​14, 15; ಯೋಬ 3:​1-4; ಕೀರ್ತನೆ 55:4) ಆದರೆ ಅವರ ಜೀವನ ಕ್ರಮದಲ್ಲಿ, ಯೆಹೋವನಿಗಾಗಿ ಸ್ಥಿರಚಿತ್ತ ಭಕ್ತಿಯು ಇತ್ತು. ಅವರ ಉತ್ತಮ ಮಾದರಿಯು ನಾವು ಸಹ ಹಾಗೆಯೇ ಸ್ಥಿರಚಿತ್ತರಾಗಿರುವಂತೆ ನಮ್ಮನ್ನು ಉತ್ತೇಜಿಸುತ್ತದೆ. ಆದರೆ ಪಿಶಾಚನಾದ ಸೈತಾನನು ನಿತ್ಯಜೀವಕ್ಕಾಗಿರುವ ಓಟದಿಂದ ನಮ್ಮನ್ನು ದಾರಿತಪ್ಪಿಸಲು ಬಯಸುತ್ತಾನೆ. (ಲೂಕ 22:31) ಆದುದರಿಂದ, ನಾವು ಸ್ಥಿರಚಿತ್ತರೂ, ‘ನಂಬಿಕೆಯಲ್ಲಿ ದೃಢರೂ’ ಆಗಿ ಉಳಿಯುವುದು ಹೇಗೆ? (1 ಪೇತ್ರ 5:9) ನಮ್ಮ ಜೊತೆ ವಿಶ್ವಾಸಿಗಳನ್ನು ನಾವು ಹೇಗೆ ಬಲಪಡಿಸಬಹುದು?

ನಾವು ಸ್ಥಿರಚಿತ್ತರಾಗಿರುವಂತೆ ಯೆಹೋವನು ಬಯಸುತ್ತಾನೆ

ನಾವು ಯೆಹೋವನಿಗೆ ನಂಬಿಗಸ್ತರಾಗಿರುವಲ್ಲಿ, ನಮ್ಮ ಸ್ಥಿರತೆಯನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡಲು ಆತನು ಯಾವಾಗಲೂ ಸಿದ್ಧನಿರುವನು. ಕೀರ್ತನೆಗಾರನಾದ ದಾವೀದನು ಅನೇಕ ಕಷ್ಟಕರ ಸನ್ನಿವೇಶಗಳನ್ನು ಎದುರಿಸಿದನು. ಆದರೆ ಅವನು ದೇವರಲ್ಲಿ ನಿರೀಕ್ಷೆಯನ್ನಿಟ್ಟನು. ಆದುದರಿಂದ ಅವನು ಹೀಗೆ ಹಾಡಲು ಶಕ್ತನಾದನು: “ನನ್ನನ್ನು ನಾಶನದ ಗುಂಡಿಯೊಳಗಿಂದ ಎತ್ತಿದನು; ಕೆಸರಿನೊಳಗಿಂದ ನನ್ನನ್ನು ತೆಗೆದು ಬಂಡೆಯ ಮೇಲೆ ನಿಲ್ಲಿಸಿ ನಾನು ದೃಢವಾಗಿ ಹೆಜ್ಜೆಯಿಡುವಂತೆ ಮಾಡಿದನು.”​—ಕೀರ್ತನೆ 40:2.

‘ನಿತ್ಯಜೀವವನ್ನು ಹಿಡಿದುಕೊಳ್ಳಲು’ ಸಾಧ್ಯವಾಗುವಂತೆ ನಾವು ‘ಶ್ರೇಷ್ಠ ಹೋರಾಟವನ್ನು ಮಾಡಲಿಕ್ಕಾಗಿ’ ಯೆಹೋವನು ನಮ್ಮನ್ನು ಬಲಪಡಿಸುತ್ತಾನೆ. (1 ತಿಮೊಥೆಯ 6:12) ನಾವು ಸ್ಥಿರರಾಗಿ ನಿಂತು, ನಮ್ಮ ಆತ್ಮಿಕ ಹೋರಾಟದಲ್ಲಿ ವಿಜೇತರಾಗಲು ನಮಗೆ ಬೇಕಾಗಿರುವ ಸಾಧನಗಳನ್ನೂ ಆತನು ಒದಗಿಸುತ್ತಾನೆ. ಅಪೊಸ್ತಲ ಪೌಲನು ಜೊತೆ ಕ್ರೈಸ್ತರಿಗೆ, ‘ಕರ್ತನನ್ನೂ ಆತನ ಅತ್ಯಧಿಕವಾದ ಶಕ್ತಿಯನ್ನೂ ಆಶ್ರಯಿಸಿಕೊಂಡು ಬಲಗೊಳ್ಳುವಂತೆ’ ಮತ್ತು ‘ಸೈತಾನನ ತಂತ್ರೋಪಾಯಗಳನ್ನು ಎದುರಿಸಿ ನಿಲ್ಲುವದಕ್ಕೆ ಶಕ್ತರಾಗುವಂತೆ ದೇವರು ದಯಪಾಲಿಸುವ ಸರ್ವಾಯುಧಗಳನ್ನು ಧರಿಸಿಕೊಳ್ಳುವಂತೆ’ ಪ್ರೇರಿಸಿದನು. (ಎಫೆಸ 6:​10-17) ಆದರೆ ಯಾವ ವಿಷಯಗಳು ನಮ್ಮ ಮನಶ್ಶಾಂತಿಯನ್ನು ಕೆಡಿಸಬಲ್ಲವು? ಮತ್ತು ಅಂಥ ಅಪಾಯಕಾರಿ ಪ್ರಭಾವಗಳನ್ನು ನಾವು ಹೇಗೆ ಪ್ರತಿರೋಧಿಸಬಹುದು?

ಅಸ್ಥಿರಗೊಳಿಸುವಂಥ ಅಂಶಗಳ ಕುರಿತು ಎಚ್ಚರಿಕೆ

ಈ ಅತ್ಯಾವಶ್ಯಕ ವಾಸ್ತವಾಂಶವನ್ನು ನೆನಪಿನಲ್ಲಿಡುವುದು ವಿವೇಕದ ಸಂಗತಿ: ನಾವು ಮಾಡುವಂಥ ನಿರ್ಣಯಗಳು ಕಟ್ಟಕಡೆಗೆ ನಮ್ಮ ಕ್ರೈಸ್ತ ಸ್ಥಿರತೆಯನ್ನು ಒಂದೇ ಸಕಾರಾತ್ಮಕವಾಗಿ ಇಲ್ಲವೆ ನಕಾರಾತ್ಮಕವಾಗಿ ಬಾಧಿಸುವವು. ಜೀವನವೃತ್ತಿ, ಹೆಚ್ಚಿನ ಶಿಕ್ಷಣ ಮತ್ತು ಮದುವೆಯಂಥ ವಿಷಯಗಳ ಕುರಿತಾಗಿ ಯುವ ಜನರು ನಿರ್ಣಯಗಳನ್ನು ಮಾಡಬೇಕಾಗುತ್ತದೆ. ವಯಸ್ಕರು, ತಾವು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ವರ್ಗಾಯಿಸಬೇಕೊ ಬೇಡವೊ ಅಥವಾ ತಮಗಿರುವ ಉದ್ಯೋಗದೊಂದಿಗೆ ಇನ್ನೊಂದು ಉದ್ಯೋಗವನ್ನು ಮಾಡಬೇಕೊ ಬಾರದೊ ಎಂಬುದನ್ನು ನಿರ್ಣಯಿಸಬೇಕಾಗಬಹುದು. ನಮ್ಮ ಸಮಯವನ್ನು ಹೇಗೆ ಬಳಸುವೆವು ಎಂಬುದರ ಬಗ್ಗೆ ಮತ್ತು ಇತರ ಅನೇಕ ವಿಷಯಗಳ ಸಂಬಂಧದಲ್ಲಿ ನಾವು ಪ್ರತಿ ದಿನ ನಿರ್ಣಯಗಳನ್ನು ಮಾಡುತ್ತೇವೆ. ದೇವರ ಸೇವಕರೋಪಾದಿ ನಮ್ಮ ಸ್ಥಿರತೆಯನ್ನು ಉತ್ತಮಗೊಳಿಸುವಂಥ ವಿವೇಕಯುತ ನಿರ್ಣಯಗಳನ್ನು ಮಾಡಲು ನಮಗೆ ಯಾವುದು ಸಹಾಯಮಾಡುವುದು? ದೀರ್ಘಸಮಯದ ಒಬ್ಬ ಕ್ರೈಸ್ತಳು ಹೇಳಿದ್ದು: “ನಿರ್ಣಯಗಳನ್ನು ಮಾಡುವಾಗ ನಾನು ಯೆಹೋವನ ಸಹಾಯಕ್ಕಾಗಿ ಬೇಡುತ್ತೇನೆ. ಬೈಬಲಿನಲ್ಲಿ, ಕ್ರೈಸ್ತ ಕೂಟಗಳಲ್ಲಿ, ಹಿರಿಯರಿಂದ ಮತ್ತು ಬೈಬಲ್‌ ಆಧಾರಿತ ಪ್ರಕಾಶನಗಳಲ್ಲಿ ಕೊಡಲ್ಪಡುವ ಸಲಹೆಯನ್ನು ಸ್ವೀಕರಿಸಿ, ಅದನ್ನು ಅನ್ವಯಿಸುವುದು ಪ್ರಾಮುಖ್ಯವೆಂದು ನಾನು ನಂಬುತ್ತೇನೆ.”

ನಿರ್ಣಯಗಳನ್ನು ಮಾಡುವಾಗ ನಾವು ಸ್ವತಃ ಹೀಗೆ ಕೇಳಿಕೊಳ್ಳುವುದು ಒಳ್ಳೇದು: ‘ನಾನು ಇಂದು ಮಾಡುತ್ತಿರುವ ನಿರ್ಣಯಗಳ ಬಗ್ಗೆ ಐದು ಅಥವಾ ಹತ್ತು ವರ್ಷಗಳ ನಂತರ ನಾನು ಸಂತೋಷಪಡುವೆನೊ, ಇಲ್ಲವೆ ಅವುಗಳ ಬಗ್ಗೆ ವಿಷಾದಿಸುವೆನೊ? ನನ್ನ ನಿರ್ಣಯಗಳು ನನ್ನನ್ನು ಆತ್ಮಿಕವಾಗಿ ಅಸ್ಥಿರಗೊಳಿಸದೆ, ಆತ್ಮಿಕ ಪ್ರಗತಿಗೆ ನೆರವು ನೀಡುತ್ತವೆ ಎಂಬುದನ್ನು ಖಚಿತಪಡಿಸಿಕೊಳ್ಳಲು ನಾನು ಪ್ರಯತ್ನಿಸುತ್ತೇನೊ?’​—ಫಿಲಿಪ್ಪಿ 3:16.

ದೀಕ್ಷಾಸ್ನಾನ ಪಡೆದ ವ್ಯಕ್ತಿಗಳಲ್ಲಿ ಕೆಲವರು, ಪ್ರಲೋಭನೆಗಳಿಗೆ ಮಣಿಯುವುದು ಇಲ್ಲವೆ ದೇವರ ಆಜ್ಞೆಗಳನ್ನು ಉಲ್ಲಂಘಿಸುವಷ್ಟರ ಮಟ್ಟಿಗೆ ತಮ್ಮನ್ನು ಬಿಟ್ಟುಕೊಟ್ಟಿರುವುದು, ಅಸ್ಥಿರವಾದ ಜೀವಿತವನ್ನು ನಡೆಸಲು ಕಾರಣವಾಗಿಬಿಟ್ಟಿದೆ. ಒಂದು ಪಾಪಪೂರ್ಣ ಮಾರ್ಗಕ್ರಮವನ್ನು ಪಶ್ಚಾತ್ತಾಪಪಡದೆ ಬೆನ್ನಟ್ಟಿಕೊಂಡು ಹೋದದ್ದಕ್ಕಾಗಿ ಸಭೆಯಿಂದ ಹೊರಹಾಕಲ್ಪಟ್ಟವರಲ್ಲಿ ಕೆಲವರು ಪುನಸ್ಸ್ಥಾಪಿಸಲ್ಪಡಲು ಬಹಳಷ್ಟು ಪ್ರಯತ್ನವನ್ನು ಮಾಡಿದರು. ಆದರೆ ಅವರು ಪುನಃ ಒಮ್ಮೆ ಬಹಿಷ್ಕೃತರಾದರು. ಅದು ಕೂಡ ಅದೇ ರೀತಿಯ ತಪ್ಪಿಗಾಗಿ ಮತ್ತು ಕೆಲವೊಂದು ಸಂದರ್ಭಗಳಲ್ಲಿ ಸ್ವಲ್ಪ ಸಮಯದೊಳಗೆಯೇ. ‘ಕೆಟ್ಟತನವನ್ನು ಹೇಸಿ ಒಳ್ಳೇದನ್ನು ಬಿಗಿಯಾಗಿ ಹಿಡಿದುಕೊಳ್ಳಲು’ ದೈವಿಕ ಸಹಾಯಕ್ಕಾಗಿ ಅವರು ಪ್ರಾರ್ಥಿಸದೇ ಇದ್ದದರಿಂದ ಹೀಗಾಗಿರಬಹುದೊ? (ರೋಮಾಪುರ 12:9; ಕೀರ್ತನೆ 97:10) ‘[ನಮ್ಮ] ಕಾಲುಗಳನ್ನು ನೆಟ್ಟಗೆ ಮುಂದೆ ನಡೆಸುವ’ ಅಗತ್ಯ ನಮಗೆಲ್ಲರಿಗಿದೆ. (ಇಬ್ರಿಯ 12:13) ಆದುದರಿಂದ, ಆತ್ಮಿಕ ಸ್ಥಿರತೆಯನ್ನು ಕಾಪಾಡಿಕೊಳ್ಳುವಂತೆ ನಮಗೆ ಸಹಾಯಮಾಡಬಲ್ಲ ಕೆಲವೊಂದು ಅಂಶಗಳನ್ನು ನಾವು ಪರಿಗಣಿಸೋಣ.

ಕ್ರೈಸ್ತ ಚಟುವಟಿಕೆಯ ಮೂಲಕ ಸ್ಥಿರಚಿತ್ತರಾಗಿರಿ

ಜೀವಕ್ಕಾಗಿರುವ ನಮ್ಮ ಓಟದಲ್ಲಿ ಒಂದೇ ಸಮವಾದ ವೇಗಗತಿಯನ್ನು ಕಾಪಾಡಿಕೊಳ್ಳುವ ಒಂದು ವಿಧವು, ರಾಜ್ಯ ಸಾರುವಿಕೆಯ ಕೆಲಸದಲ್ಲಿ ಹೆಚ್ಚನ್ನು ಮಾಡುವುದಾಗಿದೆ. ಹೌದು, ನಮ್ಮ ಹೃದಮನಗಳನ್ನು ದೇವರ ಚಿತ್ತವನ್ನು ಮಾಡುವುದರಲ್ಲಿ ಮತ್ತು ನಿತ್ಯಜೀವದ ಬಹುಮಾನದ ಮೇಲೆ ದೃಢವಾಗಿ ಕೇಂದ್ರೀಕರಿಸುವುದರಲ್ಲಿ ನಮ್ಮ ಕ್ರೈಸ್ತ ಶುಶ್ರೂಷೆಯು ಅಮೂಲ್ಯವಾದ ಸಹಾಯಕವಾಗಿದೆ. ಈ ಸಂಬಂಧದಲ್ಲಿ ಪೌಲನು ಕ್ರೈಸ್ತರನ್ನು ಪ್ರೇರಿಸಿದ್ದು: “ನನ್ನ ಪ್ರಿಯ ಸಹೋದರರೇ, ಸ್ಥಿರಚಿತ್ತರಾಗಿಯೂ ನಿಶ್ಚಲರಾಗಿಯೂ ಇರ್ರಿ. ನೀವು ಕರ್ತನ ಸೇವೆಯಲ್ಲಿ ಪಡುವ ಪ್ರಯಾಸವು ನಿಷ್ಫಲವಾಗುವದಿಲ್ಲವೆಂದು ತಿಳಿದು ಕರ್ತನ ಕೆಲಸವನ್ನು ಯಾವಾಗಲೂ ಅತ್ಯಾಸಕ್ತಿಯಿಂದ ಮಾಡುವವರಾಗಿರಿ.” (1 ಕೊರಿಂಥ 15:58) “ಸ್ಥಿರಚಿತ್ತ” ಎಂಬುದರ ಅರ್ಥ ‘ಒಂದು ಸ್ಥಳದಲ್ಲಿ ದೃಢವಾಗಿ ಸ್ಥಿರವಾಗಿರುವುದು.’ ಮೂಲ ಭಾಷೆಯಲ್ಲಿ ‘‘ನಿಶ್ಚಲ” ಎಂಬುದಕ್ಕಾಗಿರುವ ಪದವು, ‘ಒಬ್ಬನ ನೆಲೆಯಿಂದ ಬಿಡಿಸಲ್ಪಡಲು ಅನುಮತಿಸದಿರುವುದನ್ನು’ ಸೂಚಿಸಬಲ್ಲದು. ಹೀಗೆ, ನಮ್ಮ ಶುಶ್ರೂಷೆಯಲ್ಲಿ ಕಾರ್ಯಮಗ್ನರಾಗಿರುವುದು, ನಮ್ಮ ಕ್ರೈಸ್ತ ಮಾರ್ಗಕ್ರಮದ ಮೇಲೆ ಸ್ಥಿರೀಕರಿಸುವಂಥ ಪ್ರಭಾವವನ್ನು ಬೀರಬಲ್ಲದು. ಯೆಹೋವನ ಬಗ್ಗೆ ತಿಳಿಯುವಂತೆ ಇತರ ಜನರಿಗೆ ಸಹಾಯಮಾಡುವುದು ನಮ್ಮ ಬದುಕಿಗೆ ಅರ್ಥವನ್ನು ಕೊಡುತ್ತದೆ ಮತ್ತು ನಮಗೆ ಸಂತೋಷವನ್ನೂ ತರುತ್ತದೆ.​—ಅ. ಕೃತ್ಯಗಳು 20:35.

ಒಬ್ಬ ಮಿಷನೆರಿಯೋಪಾದಿ ಮತ್ತು ಪೂರ್ಣ ಸಮಯದ ಸಾರುವಿಕೆಯ ಇನ್ನಿತರ ಚಟುವಟಿಕೆಯಲ್ಲಿ 30ಕ್ಕಿಂತಲೂ ಹೆಚ್ಚು ವರ್ಷಗಳನ್ನು ಕಳೆದಿರುವ ಪೌಲಿನ್‌ ಎಂಬ ಕ್ರೈಸ್ತಳೊಬ್ಬಳು ಹೇಳಿದ್ದು: “ಶುಶ್ರೂಷೆಯು ಒಂದು ಸಂರಕ್ಷಣೆಯಾಗಿದೆ. ಏಕೆಂದರೆ ಇತರರಿಗೆ ಸಾಕ್ಷಿಕೊಡುವುದು, ನಿಜವಾಗಿಯೂ ನನ್ನ ಬಳಿ ಸತ್ಯವಿದೆ ಎಂಬುದನ್ನು ದೃಢೀಕರಿಸುತ್ತದೆ.” ಆರಾಧನೆಗಾಗಿರುವ ಕೂಟಗಳಿಗೆ ಹಾಜರಾಗುವುದು ಮತ್ತು ಶ್ರದ್ಧಾಪೂರ್ವಕವಾದ ವೈಯಕ್ತಿಕ ಬೈಬಲ್‌ ಅಧ್ಯಯನವನ್ನು ಮಾಡುವಂಥ ಇನ್ನಿತರ ಕ್ರೈಸ್ತ ಚಟುವಟಿಕೆಗಳಲ್ಲಿ ಕ್ರಮವಾಗಿ ಪಾಲ್ಗೊಳ್ಳುವುದರಿಂದಲೂ ಅದೇ ರೀತಿಯ ನಿಶ್ಚಿತಾಭಿಪ್ರಾಯವು ಹುಟ್ಟುತ್ತದೆ.

ಪ್ರೀತಿಭರಿತ ಸಹೋದರತ್ವದಿಂದ ಸ್ಥಿರಗೊಳಿಸಲ್ಪಡುವುದು

ಸತ್ಯಾರಾಧಕರ ಲೋಕವ್ಯಾಪಕ ಸಂಸ್ಥೆಯ ಭಾಗವಾಗಿರುವುದು, ನಮ್ಮ ಮೇಲೆ ಪ್ರಭಾವಯುಕ್ತವಾದ ಸ್ಥಿರಗೊಳಿಸುವ ಪರಿಣಾಮವನ್ನು ಬೀರಬಲ್ಲದು. ಇಂಥ ಪ್ರೀತಿಪರ, ಭೌಗೋಲಿಕ ಸಹೋದರತ್ವದೊಂದಿಗೆ ಸಹವಾಸಿಸುವುದು ಎಂಥ ಆಶೀರ್ವಾದವಾಗಿದೆ! (1 ಪೇತ್ರ 2:17) ಮತ್ತು ನಮ್ಮ ಜೊತೆ ವಿಶ್ವಾಸಿಗಳ ಮೇಲೆ ನಾವು ಸ್ಥಿರಗೊಳಿಸುವಂಥ ಪರಿಣಾಮವನ್ನು ಬೀರಬಲ್ಲೆವು.

ಯಥಾರ್ಥವಂತನಾದ ಯೋಬನ ಸಹಾಯಕಾರಿ ಕ್ರಿಯೆಗಳನ್ನು ಪರಿಗಣಿಸಿರಿ. ಸುಳ್ಳು ಸಾಂತ್ವನಗಾರನಾದ ಎಲೀಫಜನು ಸಹ ಇದನ್ನು ಒಪ್ಪಿಕೊಳ್ಳುವಂತೆ ಒತ್ತಾಯಿಸಲ್ಪಟ್ಟನು: “ಎಡವಿ ಬೀಳುವವರನ್ನು ನಿನ್ನ ಮಾತುಗಳಿಂದ ಉದ್ಧರಿಸಿ ಕುಸಿಯುವ ಮೊಣಕಾಲುಗಳನ್ನು ದೃಢಪಡಿಸಿದ್ದೀ.” (ಯೋಬ 4:4) ನಾವು ಇತರರಿಗೆ ಹೇಗೆ ಸಹಾಯ ನೀಡುತ್ತೇವೆ? ದೇವರ ಸೇವೆಯಲ್ಲಿ ತಾಳಿಕೊಳ್ಳುವಂತೆ ನಮ್ಮ ಆತ್ಮಿಕ ಸಹೋದರ ಸಹೋದರಿಯರಿಗೆ ಸಹಾಯಮಾಡುವ ಜವಾಬ್ದಾರಿಯು ನಮಲ್ಲಿ ಪ್ರತಿಯೊಬ್ಬರಿಗೂ ಇದೆ. ನಾವು ಅವರೊಂದಿಗೆ ವ್ಯವಹರಿಸುತ್ತಿರುವಾಗ, ಈ ಮಾತುಗಳಲ್ಲಿ ತೋರಿಬರುವ ಮನೋವೃತ್ತಿಯೊಂದಿಗೆ ಕ್ರಿಯೆಗೈಯಬಲ್ಲೆವು: “ಜೋಲುಬಿದ್ದ ಕೈಗಳನ್ನೂ ನಡುಗುವ ಮೊಣಕಾಲುಗಳನ್ನೂ ಬಲಗೊಳಿಸಿರಿ.” (ಯೆಶಾಯ 35:3) ಆದುದರಿಂದ ನೀವು ಕೂಡಿಬರುವಾಗ, ಪ್ರತಿಸಲವೂ ಒಬ್ಬರು ಇಲ್ಲವೆ ಇಬ್ಬರು ಜೊತೆ ಕ್ರೈಸ್ತರನ್ನು ಬಲಪಡಿಸಿ, ಉತ್ತೇಜಿಸುವುದನ್ನು ನಿಮ್ಮ ಗುರಿಯಾಗಿ ಮಾಡಿಕೊಳ್ಳಬಾರದೇಕೆ? (ಇಬ್ರಿಯ 10:​24, 25) ಶ್ಲಾಘನೆಯ ಉತ್ತೇಜಕ ಮಾತುಗಳನ್ನಾಡಿರಿ ಮತ್ತು ಯೆಹೋವನನ್ನು ಸಂತೋಷಪಡಿಸಲು ಅವರು ಮಾಡುವ ನಿರಂತರ ಪ್ರಯತ್ನಗಳಿಗಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿರಿ. ಇದು, ಅವರು ಜೀವಕ್ಕಾಗಿರುವ ಓಟವನ್ನು ಜಯಿಸುವ ಪ್ರತೀಕ್ಷೆಯೊಂದಿಗೆ ಸ್ಥಿರಚಿತ್ತರಾಗಿ ಉಳಿಯುವಂತೆ ನಿಜವಾಗಿಯೂ ಸಹಾಯಮಾಡುವುದು.

ಹೊಸಬರನ್ನು ಉತ್ತೇಜಿಸುವ ಮೂಲಕ ಕ್ರೈಸ್ತ ಹಿರಿಯರು ತುಂಬ ಒಳಿತನ್ನು ಮಾಡಬಲ್ಲರು. ಸಹಾಯಕಾರಿ ಸಲಹೆ ಮತ್ತು ಬಲವಾದ ಶಾಸ್ತ್ರೀಯ ಬುದ್ಧಿವಾದವನ್ನು ಕೊಟ್ಟು, ಅವರೊಂದಿಗೆ ಕ್ಷೇತ್ರ ಸೇವೆಯಲ್ಲಿ ಕೆಲಸಮಾಡುವ ಮೂಲಕ ಇದನ್ನು ಮಾಡಸಾಧ್ಯವಿದೆ. ಅಪೊಸ್ತಲ ಪೌಲನು, ಇತರರನ್ನು ಬಲಪಡಿಸುವ ಅವಕಾಶಗಳನ್ನು ಸದುಪಯೋಗಿಸಿದನು. ಅವನು ರೋಮಿನಲ್ಲಿದ್ದ ಕ್ರೈಸ್ತರನ್ನು ಭೇಟಿಯಾಗಲು ಹಾತೊರೆಯುತ್ತಿದ್ದನು, ಏಕೆಂದರೆ ಅವರು ಆತ್ಮಿಕವಾಗಿ ಬಲಗೊಳ್ಳುವಂತೆ ಸಹಾಯಮಾಡಲು ಅವನು ಬಯಸಿದನು. (ರೋಮಾಪುರ 1:11) ಫಿಲಿಪ್ಪಿಯಲ್ಲಿದ್ದ ತನ್ನ ಪ್ರಿಯ ಸಹೋದರ ಸಹೋದರಿಯರನ್ನು ತನ್ನ ‘ಸಂತೋಷವೂ ಜಯಮಾಲೆಯೂ’ ಆಗಿ ಪರಿಗಣಿಸಿದನು ಮತ್ತು ‘ಕರ್ತನಲ್ಲಿ ದೃಢವಾಗಿ ನಿಲ್ಲುವಂತೆ’ ಅವರನ್ನು ಪ್ರೋತ್ಸಾಹಿಸಿದನು. (ಫಿಲಿಪ್ಪಿ 4:1) ಥೆಸಲೊನೀಕದಲ್ಲಿದ್ದ ತನ್ನ ಸಹೋದರರ ಕಷ್ಟಗಳ ಕುರಿತಾಗಿ ಕೇಳಿದೊಡನೆ, ‘ಅವರ ಮೇಲೆ ಬಂದಿರುವ ಸಂಕಟಗಳಲ್ಲಿ ಒಬ್ಬರೂ ಚಂಚಲರಾಗದಂತೆ, ಅವರನ್ನು ದೃಢಪಡಿಸುವದಕ್ಕೂ, ನಂಬಿಕೆಯ ವೃದ್ಧಿಗಾಗಿ ಪ್ರಬೋಧಿಸುವದಕ್ಕೂ’ ಪೌಲನು ತಿಮೊಥೆಯನನ್ನು ಅವರ ಬಳಿಗೆ ಕಳುಹಿಸಿದನು.​—1 ಥೆಸಲೊನೀಕ 3:​1-3.

ಅಪೊಸ್ತಲರಾದ ಪೌಲ ಮತ್ತು ಪೇತ್ರರು ತಮ್ಮ ಜೊತೆ ಆರಾಧಕರ ನಂಬಿಗಸ್ತ ಪ್ರಯಾಸವನ್ನು ಅಂಗೀಕರಿಸಿ ಗಣ್ಯಮಾಡಿದರು. (ಕೊಲೊಸ್ಸೆ 2:5; 1 ಥೆಸಲೊನೀಕ 3:​7, 8; 2 ಪೇತ್ರ 1:12) ಅದೇ ರೀತಿಯಲ್ಲಿ ನಾವೂ, ನಮ್ಮ ಸಹೋದರರ ಬಲಹೀನತೆಗಳ ಮೇಲಲ್ಲ ಬದಲಾಗಿ ಅವರ ಉತ್ತಮ ಗುಣಗಳು, ಮತ್ತು ಸ್ಥಿರಚಿತ್ತರಾಗಿ ಉಳಿದು ಯೆಹೋವನನ್ನು ಗೌರವಿಸಲು ಅವರು ನಡೆಸುವ ಯಶಸ್ವಿ ಹೋರಾಟದ ಮೇಲೆ ನಮ್ಮ ಗಮನವನ್ನು ಕೇಂದ್ರೀಕರಿಸೋಣ.

ನಾವು ನಕಾರಾತ್ಮಕಭಾವದವರೂ ಟೀಕಿಸುವವರೂ ಆಗಿರುವಲ್ಲಿ, ನಮಗರಿವಿಲ್ಲದೆ ಕೆಲವರು ನಂಬಿಕೆಯಲ್ಲಿ ದೃಢತೆಯನ್ನು ಕಾಪಾಡಿಕೊಳ್ಳುವುದನ್ನು ನಾವು ಹೆಚ್ಚು ಕಷ್ಟಕರವಾಗಿ ಮಾಡುವೆವು. ಈ ವಿಷಯಗಳ ವ್ಯವಸ್ಥೆಯಲ್ಲಿ ನಮ್ಮ ಸಹೋದರರು “ತೊಳಲಿ ಬಳಲಿ ಹೋಗಿ”ದ್ದಾರೆಂಬುದನ್ನು ನೆನಪಿನಲ್ಲಿಡುವುದು ಎಷ್ಟು ಸೂಕ್ತ! (ಮತ್ತಾಯ 9:36) ಕ್ರೈಸ್ತ ಸಭೆಯಲ್ಲಿ ಅವರು ಸಾಂತ್ವನ ಮತ್ತು ಚೈತನ್ಯವನ್ನು ಪಡೆಯಲು ನಿರೀಕ್ಷಿಸುತ್ತಾರೆ. ಆದುದರಿಂದ ನಾವೆಲ್ಲರೂ, ಜೊತೆ ವಿಶ್ವಾಸಿಗಳ ಭಕ್ತಿವೃದ್ಧಿಮಾಡಲು ಮತ್ತು ಅವರು ಸ್ಥಿರಚಿತ್ತರಾಗಿರುವಂತೆ ಸಹಾಯಮಾಡಲು ನಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ಮಾಡೋಣ.

ಆಗಿಂದಾಗ್ಗೆ ಇತರರು ನಮ್ಮ ಸ್ಥಿರಚಿತ್ತತೆಯನ್ನು ಕುಂದಿಸುವಂಥ ರೀತಿಯಲ್ಲಿ ನಮ್ಮೊಂದಿಗೆ ವ್ಯವಹರಿಸಬಹುದು. ಮನನೋಯಿಸುವಂಥ ಒಂದು ಕಠೋರ ಹೇಳಿಕೆ ಇಲ್ಲವೆ ನಿರ್ದಯವಾದ ಕೃತ್ಯವು, ನಾವು ಯೆಹೋವನಿಗೆ ಸಲ್ಲಿಸುವ ಸೇವೆಯನ್ನು ನಿಧಾನಗೊಳಿಸುವಂತೆ ಬಿಡುವೆವೊ? ಯಾವುದೇ ವ್ಯಕ್ತಿಯು ನಮ್ಮ ಸ್ಥಿರಚಿತ್ತತೆಯಿಂದ ನಮ್ಮನ್ನು ವಿಮುಖಗೊಳಿಸುವಂತೆ ನಾವು ಎಂದಿಗೂ ಬಿಡದಿರೋಣ!​—2 ಪೇತ್ರ 3:17.

ದೇವರ ವಾಗ್ದಾನಗಳು​—ಸ್ಥಿರಗೊಳಿಸುವಂಥ ಒಂದು ಪ್ರಭಾವ

ರಾಜ್ಯದ ಆಳ್ವಿಕೆಯ ಕೆಳಗೆ ಅದ್ಭುತಕರವಾದ ಭವಿಷ್ಯತ್ತಿನ ಕುರಿತಾದ ಯೆಹೋವನ ವಾಗ್ದಾನವು, ನಾವು ಸ್ಥಿರಚಿತ್ತತೆಯನ್ನು ಕಾಪಾಡಿಕೊಳ್ಳುವಂತೆ ಸಹಾಯಮಾಡುವ ನಿರೀಕ್ಷೆಯನ್ನು ಕೊಡುತ್ತದೆ. (ಇಬ್ರಿಯ 6:19) ಮತ್ತು ದೇವರು ಯಾವಾಗಲೂ ತನ್ನ ವಾಗ್ದಾನಗಳನ್ನು ಪೂರೈಸುತ್ತಾನೆಂಬ ದೃಢ ನಿಶ್ಚಿತಾಭಿಪ್ರಾಯವು, ನಾವು ‘ಎಚ್ಚರವಾಗಿದ್ದು, ಕ್ರಿಸ್ತನಂಬಿಕೆಯಲ್ಲಿ ದೃಢವಾಗಿ ನಿಲ್ಲುವಂತೆ’ ಪ್ರಚೋದಿಸುತ್ತದೆ. (1 ಕೊರಿಂಥ 16:13; ಇಬ್ರಿಯ 3:6) ದೇವರ ಕೆಲವೊಂದು ವಾಗ್ದಾನಗಳ ನೆರವೇರಿಕೆಯಲ್ಲಿ ತಡವಾಗುತ್ತಿರುವಂತೆ ತೋರುವಾಗ, ಅದು ನಮ್ಮ ನಂಬಿಕೆಯನ್ನು ಪರೀಕ್ಷಿಸಬಹುದು. ಆದುದರಿಂದ ಸುಳ್ಳು ಬೋಧನೆಗಳಿಂದ ದಾರಿತಪ್ಪಿಸಲ್ಪಡುವುದು ಮತ್ತು ನಮ್ಮ ನಿರೀಕ್ಷೆಯಿಂದ ಕದಲಿ ಹೋಗುವುದರ ವಿರುದ್ಧ ಎಚ್ಚರಿಕೆಯಿಂದಿರುವುದು ಬಹಳಷ್ಟು ಪ್ರಾಮುಖ್ಯವಾಗಿದೆ.​—ಕೊಲೊಸ್ಸೆ 1:23; ಇಬ್ರಿಯ 13:9.

ಯೆಹೋವನ ವಾಗ್ದಾನಗಳಲ್ಲಿ ನಂಬಿಕೆಯಿಲ್ಲದ್ದರಿಂದ ನಾಶವಾಗಿ ಹೋದ ಇಸ್ರಾಯೇಲ್ಯರ ಕೆಟ್ಟ ಮಾದರಿಯು ನಮಗೆ ಒಂದು ಎಚ್ಚರಿಕೆಯಾಗಿರಬೇಕು. (ಕೀರ್ತನೆ 78:37) ಅವರಂತೆ ಇರುವ ಬದಲು, ನಾವು ಸ್ಥಿರಚಿತ್ತರಾಗಿದ್ದು, ಈ ಕಡೇ ದಿವಸಗಳಲ್ಲಿ ತುರ್ತುಪ್ರಜ್ಞೆಯೊಂದಿಗೆ ದೇವರ ಸೇವೆ ಮಾಡುತ್ತಿರೋಣ. “ಯೆಹೋವನ ಮಹಾ ದಿನವು ನಾಳೆಯೇ ಬರಲಿಕ್ಕಿದೆಯೊ ಎಂಬಂತೆ ನಾನು ಪ್ರತಿ ದಿನವನ್ನು ಕಳೆಯುತ್ತೇನೆ” ಎಂದು ಒಬ್ಬ ಅನುಭವೀ ಹಿರಿಯನು ಹೇಳಿದನು.​—ಯೋವೇಲ 1:15.

ಹೌದು, ಯೆಹೋವನ ಮಹಾ ದಿನವು ಸನ್ನಿಹಿತವಾಗುತ್ತಿದೆ. ಆದರೆ ನಾವು ಎಷ್ಟರ ವರೆಗೆ ದೇವರಿಗೆ ಸಮೀಪವಾಗಿ ಉಳಿಯುತ್ತೇವೊ ಅಷ್ಟರ ವರೆಗೆ ಯಾವುದಕ್ಕೂ ಭಯಪಡಬೇಕಾಗಿಲ್ಲ. ನಾವಾತನ ನೀತಿಯ ಮಟ್ಟಗಳಿಗೆ ಅಂಟಿಕೊಂಡು, ಸ್ಥಿರಚಿತ್ತರಾಗಿ ಉಳಿದರೆ, ನಿತ್ಯಜೀವಕ್ಕಾಗಿರುವ ಓಟದಲ್ಲಿ ಓಡುತ್ತಾ ನಾವು ಯಶಸ್ವಿಯಾಗಬಲ್ಲೆವು!​—ಜ್ಞಾನೋಕ್ತಿ 11:19; 1 ತಿಮೊಥೆಯ 6:​12, 17-19.

[ಪುಟ 23ರಲ್ಲಿರುವ ಚಿತ್ರ]

ಜೊತೆ ಕ್ರೈಸ್ತರು ಸ್ಥಿರಚಿತ್ತರಾಗಿ ಉಳಿಯುವಂತೆ ಸಹಾಯಮಾಡಲು ನಿಮ್ಮಿಂದ ಸಾಧ್ಯವಿರುವುದೆಲ್ಲವನ್ನೂ ನೀವು ಮಾಡುತ್ತಿದ್ದೀರೊ?

[ಪುಟ 21ರಲ್ಲಿರುವ ಚಿತ್ರ ಕೃಪೆ]

The Complete Encyclopedia of Illustration/J. G. Heck