ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಪರಿಮಿತವಾದ ಆನಂದಗಳು!

ಅಪರಿಮಿತವಾದ ಆನಂದಗಳು!

ಜೀವನ ಕಥೆ

ಅಪರಿಮಿತವಾದ ಆನಂದಗಳು!

ರೆಜಿನಾಲ್ಡ್‌ ವಾಲ್‌ವರ್ಕ್‌ ಅವರು ಹೇಳಿದಂತೆ

“ಯೆಹೋವನಿಗಾಗಿ ಮಾಡಿದಂಥ ನಮ್ಮ ಪೂರ್ಣ ಸಮಯದ ಮಿಷನೆರಿ ಸೇವೆಯಲ್ಲಿ ನಮಗೆ ದೊರೆತ ಆನಂದಗಳೊಂದಿಗೆ ಈ ಲೋಕದಲ್ಲಿರುವ ಯಾವುದನ್ನೂ ಹೋಲಿಸಸಾಧ್ಯವಿಲ್ಲ!” ಈ ಬರಹವುಳ್ಳ ಒಂದು ಚೀಟಿಯನ್ನು, 1994ರ ಮೇ ತಿಂಗಳಿನಲ್ಲಿ ನನ್ನ ಪತ್ನಿಯು ಮರಣಹೊಂದಿದ ಸ್ವಲ್ಪ ಸಮಯದ ನಂತರ ನಾನು ಆಕೆಯ ಕಾಗದಪತ್ರಗಳ ನಡುವೆ ಕಂಡುಕೊಂಡೆ.

ಐರೀನ್‌ ಬರೆದ ಈ ಮಾತುಗಳ ಕುರಿತು ಆಲೋಚಿಸುವಾಗ, ನಾವು ಪೆರೂವಿನಲ್ಲಿ ಮಿಷನೆರಿಗಳಾಗಿ ಒಟ್ಟಾಗಿ ಕಳೆದ ಸಂತೋಷಕರವೂ ಸಂತೃಪ್ತಿದಾಯಕವೂ ಆದ ಆ 37 ವರುಷಗಳ ಸವಿನೆನಪುಗಳು ಇನ್ನೂ ನನ್ನ ಕಣ್ಣ ಮುಂದಿದೆ. 1942ರ ಡಿಸೆಂಬರ್‌ ತಿಂಗಳಿನಲ್ಲಿ ನಮ್ಮ ವಿವಾಹವಾದಂದಿನಿಂದ, ಅತ್ಯಮೂಲ್ಯವಾದ ಕ್ರೈಸ್ತ ಜೊತೆಗಾರಿಕೆಯನ್ನು ನಾವು ಆನಂದಿಸಿದೆವು. ನನ್ನ ಜೀವನ ಕಥೆಯನ್ನು ಆರಂಭಿಸಲು ಇದೇ ಸೂಕ್ತವಾದ ಹಂತವಾಗಿದೆ.

ಐರೀನ್‌, ಇಂಗ್ಲೆಂಡ್‌ನ ಲಿವರ್‌ಪೂಲ್‌ನಲ್ಲಿ ಒಬ್ಬ ಯೆಹೋವನ ಸಾಕ್ಷಿಯೋಪಾದಿ ಬೆಳೆಸಲ್ಪಟ್ಟಳು. ಮೂರು ಮಂದಿ ಹೆಣ್ಣು ಮಕ್ಕಳಲ್ಲಿ ಒಬ್ಬಳಾಗಿದ್ದ ಅವಳು ಒಂದನೇ ಲೋಕ ಯುದ್ಧದ ಸಮಯದಲ್ಲಿ ತನ್ನ ತಂದೆಯನ್ನು ಕಳೆದುಕೊಂಡಳು. ಸಮಯಾನಂತರ ಅವಳ ತಾಯಿಯು ವಿನ್‌ಟನ್‌ ಫ್ರೇಝರ್‌ನನ್ನು ವಿವಾಹವಾದಳು. ಅವರಿಗೆ ಸಿಡ್ನೀ ಎಂಬ ಮಗನು ಹುಟ್ಟಿದನು. ಎರಡನೆಯ ಲೋಕ ಯುದ್ಧಕ್ಕೆ ಸ್ವಲ್ಪ ಮುಂಚೆ ಅವರ ಕುಟುಂಬವು ನಾರ್ತ್‌ ವೇಲ್ಸ್‌ನ ಬ್ಯಾನ್ಗೋರ್‌ ಎಂಬಲ್ಲಿಗೆ ಸ್ಥಳಾಂತರಿಸಿತು ಮತ್ತು ಅಲ್ಲಿ 1939ರಲ್ಲಿ ಐರೀನ್‌ ದೀಕ್ಷಾಸ್ನಾನ ಪಡೆದುಕೊಂಡಳು. ಅದರ ಹಿಂದಿನ ವರುಷ ಸಿಡ್ನೀ ದೀಕ್ಷಾಸ್ನಾನ ಪಡೆದುಕೊಂಡಿದ್ದನು. ಆದುದರಿಂದ ಅವರಿಬ್ಬರೂ ಜೊತೆಗೂಡಿ ಪೂರ್ಣ ಸಮಯದ ಸೌವಾರ್ತಿಕರೋಪಾದಿ, ಆ್ಯಂಗಲ್‌ಸೀ ದ್ವೀಪವನ್ನು ಸೇರಿಸಿ ವೇಲ್ಸ್‌ನ ಉತ್ತರ ಕಿನಾರೆಯ ಬ್ಯಾನ್ಗೋರ್‌ನಿಂದ ಕಾರ್ನಾರ್ವನ್‌ ವರೆಗೆ ಸೇವೆ ಸಲ್ಲಿಸಿದರು.

ಆ ಸಮಯದಲ್ಲಿ ನಾನು ರನ್‌ಕಾರ್ನ್‌ ಸಭೆಯಲ್ಲಿ, ಈಗ ನಾವು ಅಧ್ಯಕ್ಷ ಮೇಲ್ವಿಚಾರಕನೆಂದು ಕರೆಯುವ ಸ್ಥಾನದಲ್ಲಿದ್ದು ಸೇವೆಸಲ್ಲಿಸುತ್ತಿದ್ದೆ. ಈ ಸ್ಥಳವು, ಲಿವರ್‌ಪೂಲ್‌ನ ನೈರುತ್ಯ ದಿಕ್ಕಿನಿಂದ ಸುಮಾರು 20 ಕಿಲೋಮೀಟರ್‌ ದೂರದಲ್ಲಿದೆ. ಒಂದು ಸರ್ಕಿಟ್‌ ಸಮ್ಮೇಳನದಲ್ಲಿ ಐರೀನ್‌ ನನ್ನನ್ನು ಭೇಟಿಯಾಗಿ, ರನ್‌ಕಾರ್ನ್‌ನಲ್ಲಿದ್ದ ಅವಳ ವಿವಾಹಿತ ಸಹೋದರಿಯಾದ ವಿರಾಳೊಂದಿಗೆ ಅವಳು ಸ್ವಲ್ಪ ಸಮಯದ ವರೆಗೆ ಉಳಿದುಕೊಳ್ಳುವದರಿಂದ ಅಲ್ಲಿ ಸಾರಲು ಸಾಧ್ಯವಾಗುವಂತೆ ಸ್ವಲ್ಪ ಟೆರಿಟೊರಿಯನ್ನು ಕೇಳಿಕೊಂಡಳು. ಅವಳು ನಮ್ಮೊಂದಿಗಿದ್ದ ಆ ಎರಡು ವಾರಗಳಲ್ಲಿ ನಾನು ಮತ್ತು ಐರೀನ್‌ ಒಬ್ಬರಿಗೊಬ್ಬರು ಹೊಂದಿಕೊಂಡೆವು. ಮುಂದಕ್ಕೆ, ಬ್ಯಾನ್ಗೋರ್‌ನಲ್ಲಿ ನಾನು ಅವಳನ್ನು ಅನೇಕ ಸಂದರ್ಭಗಳಲ್ಲಿ ಭೇಟಿಯಾದೆ. ಒಂದು ವಾರಾಂತ್ಯದಂದು ನನ್ನ ಮದುವೆ ಪ್ರಸ್ತಾಪವನ್ನು ಐರೀನ್‌ ಸ್ವೀಕರಿಸಿದಾಗ ನಾನು ಅದೆಷ್ಟು ಸಂತೋಷಿತನಾದೆ!

ಭಾನುವಾರದಂದು ನಾನು ಮನೆಗೆ ಹಿಂದಿರುಗಿದ ಕೂಡಲೆ ನಮ್ಮ ವಿವಾಹಕ್ಕಾಗಿ ಯೋಜನೆಗಳನ್ನು ಮಾಡಲಾರಂಭಿಸಿದೆ. ಆದರೆ ಮಂಗಳವಾರದಂದು ನನಗೊಂದು ಟೆಲಿಗ್ರಾಮ್‌ ಬಂತು. ಆ ಟೆಲಿಗ್ರಾಮ್‌ ಈ ರೀತಿಯಾಗಿ ಓದಿತು: “ಈ ಟೆಲಿಗ್ರಾಮ್‌ ನಿಮ್ಮನ್ನು ಬಹಳ ದುಃಖಿತರನ್ನಾಗಿ ಮಾಡುವುದು. ದಯವಿಟ್ಟು ನನ್ನನ್ನು ಕ್ಷಮಿಸಿ. ನಾನು ನಮ್ಮ ಮದುವೆಯನ್ನು ರದ್ದುಮಾಡುತ್ತಿದ್ದೇನೆ. ಹಿಂಬಾಲಿಸಿ ಬರುವ ಪತ್ರದಲ್ಲಿ ವಿವರವಿದೆ.” ನಾನು ತಲ್ಲಣಗೊಂಡೆ. ಏನು ತಪ್ಪಾಗಿರಬೇಕು?

ಐರೀನ್‌ಳ ಪತ್ರವು ಮರುದಿನ ತಲಪಿತು. ಹಿಲ್ಡ ಪ್ಯಾಜೆಟ್‌ಳೊಂದಿಗೆ ಪಯನೀಯರ್‌ ಸೇವೆಯನ್ನು ಮಾಡಲು ಯಾರ್ಕ್‌ಶರ್‌ನ ಹಾರ್ಸ್‌ಫೋರ್ತ್‌ಗೆ ಅವಳು ಹೋಗುತ್ತಿರುವುದಾಗಿ ತಿಳಿಸಿದಳು. * ಎಲ್ಲಿ ಹೆಚ್ಚಿನ ಅಗತ್ಯವಿದೆಯೋ ಅಲ್ಲಿ ಸೇವೆಸಲ್ಲಿಸಲು ಕೇಳಲ್ಪಡುವಲ್ಲಿ ತಾನು ಹೋಗಲು ಸಿದ್ಧಳಿದ್ದೇನೆಂದು 12 ತಿಂಗಳುಗಳ ಮೊದಲು ಒಪ್ಪಿಕೊಂಡಿದ್ದೆ ಎಂದು ಅವಳು ವಿವರಿಸಿದಳು. ಅವಳು ಬರೆದದ್ದು: “ಇದು ನನಗೆ, ಯೆಹೋವನಿಗೆ ಮಾಡಿದ ಒಂದು ಹರಕೆಯಂತಿದೆ ಮತ್ತು ನಿಮ್ಮ ಪರಿಚಯವಾಗುವುದಕ್ಕಿಂತಲೂ ಮುಂಚೆಯೇ ನಾನು ಈ ಹರಕೆಯನ್ನು ಆತನಿಗೆ ಮಾಡಿರುವುದರಿಂದ ಅದನ್ನು ನಾನು ಪೂರೈಸಲೇಬೇಕು.” ನನಗೆ ಬೇಸರವಾದರೂ, ಅವಳ ಯಥಾರ್ಥತೆಯನ್ನು ನಾನು ಬಹಳಷ್ಟು ಮೆಚ್ಚಿದೆ ಮತ್ತು “ಸರಿ ನೀನು ಹೋಗು. ನಾನು ನಿನಗಾಗಿ ಕಾಯುವೆ” ಎಂಬ ನನ್ನ ಉತ್ತರವನ್ನು ಟೆಲಿಗ್ರಾಮ್‌ ಮೂಲಕ ಕಳುಹಿಸಿದೆ.

ಯಾರ್ಕ್‌ಶರ್‌ನಲ್ಲಿರುವಾಗ, ಮನಸ್ಸಾಕ್ಷಿಯ ಕಾರಣ ಯುದ್ಧ ಪ್ರಯತ್ನವನ್ನು ಬೆಂಬಲಿಸಲು ನಿರಾಕರಿಸಿದ್ದರಿಂದ ಐರೀನ್‌ಳಿಗೆ ಮೂರು ತಿಂಗಳುಗಳ ಸೆರೆವಾಸವನ್ನು ವಿಧಿಸಲಾಯಿತು. ಆದರೆ 18 ತಿಂಗಳುಗಳ ನಂತರ, 1942ರ ಡಿಸೆಂಬರ್‌ ತಿಂಗಳಿನಲ್ಲಿ ನಾವು ವಿವಾಹವಾದೆವು.

ನನ್ನ ಆರಂಭದ ದಿನಗಳು

ಇಸವಿ 1919ರಲ್ಲಿ ನನ್ನ ತಾಯಿಯು ಶಾಸ್ತ್ರಗಳ ಅಧ್ಯಯನ * ಎಂಬ ಪುಸ್ತಕದ ಒಂದು ಸೆಟ್‌ ಅನ್ನು ಖರೀದಿಸಿದ್ದರು. ನನ್ನ ತಂದೆಯು, ನೀನು ಹಿಂದೆಂದೂ ಪುಸ್ತಕವನ್ನು ಓದಲಿಲ್ಲ ಎಂಬುದಾಗಿ ತಾಯಿಯನ್ನು ಟೀಕಿಸುತ್ತಿದ್ದರು ಮತ್ತು ಇದು ಸತ್ಯವೂ ಆಗಿತ್ತು. ಆದರೆ ಈಗ ತಾಯಿಯು, ಬೈಬಲಿನೊಂದಿಗೆ ಈ ಸಂಪುಟಗಳನ್ನು ಜಾಗರೂಕತೆಯಿಂದ ಅಧ್ಯಯನ ಮಾಡಲು ದೃಢನಿಶ್ಚಯದಿಂದಿದ್ದರು. ಮತ್ತು ಅವರು ಹಾಗೆ ಮಾಡಿ, 1920ರಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡರು.

ನನ್ನ ತಂದೆಯವರು ಕಟ್ಟುನಿಟ್ಟಿನ ವ್ಯಕ್ತಿಯಾಗಿರಲಿಲ್ಲ ಮತ್ತು ನಮ್ಮ ತಾಯಿಗೆ ಇಷ್ಟವಾದದ್ದನ್ನು ಮಾಡುವುದರಿಂದ ಆಕೆಯನ್ನು ತಡೆಯುತ್ತಿರಲಿಲ್ಲ. ಇದರಲ್ಲಿ, ಅವರ ನಾಲ್ಕು ಮಂದಿ ಮಕ್ಕಳನ್ನು​—ನನ್ನ ಇಬ್ಬರು ಅಕ್ಕಂದಿರಾದ ಗ್ವೆನ್‌ ಮತ್ತು ಐವೀ; ನನ್ನ ಅಣ್ಣನಾದ ಆ್ಯಲೆಕ್‌ ಮತ್ತು ನನ್ನನ್ನು​—ಸತ್ಯದ ಮಾರ್ಗದಲ್ಲಿ ಬೆಳೆಸುವುದೂ ಸೇರಿತ್ತು. ಲಿವರ್‌ಪೂಲ್‌ನಲ್ಲಿದ್ದ ಸ್ಟ್ಯಾನ್ಲಿ ರಾಜರ್ಸ್‌ ಮತ್ತು ಇತರ ನಂಬಿಗಸ್ತ ಸಾಕ್ಷಿಗಳು, ಬೈಬಲ್‌ ಭಾಷಣಗಳನ್ನು ಕೊಡಲು ಹೊಸದಾಗಿ ಸ್ಥಾಪಿತವಾದ ರನ್‌ಕಾರ್ನ್‌ನಲ್ಲಿನ ಸಭೆಗೆ ಪ್ರಯಾಣಿಸಿ ಬರುತ್ತಿದ್ದರು. ಸಭೆಯೊಂದಿಗೆ ನಮ್ಮ ಕುಟುಂಬವೂ ಆತ್ಮಿಕವಾಗಿ ಪ್ರಗತಿಹೊಂದಿತು.

ಚರ್ಚ್‌ ಆಫ್‌ ಇಂಗ್ಲೆಂಡ್‌ನಲ್ಲಿ ಗ್ವೆನ್‌ ದೃಢೀಕರಣದ ಪಾಠಗಳನ್ನು ಕಲಿಯುತ್ತಿದ್ದಳು. ಆದರೆ ತಾಯಿಯೊಂದಿಗೆ ಸತ್ಯವನ್ನು ಕಲಿಯಲಾರಂಭಿಸಿದ ಕೂಡಲೇ ಅವಳದನ್ನು ನಿಲ್ಲಿಸಿದಳು. ಪಾದ್ರಿಯೊಬ್ಬನು ತನ್ನ ತರಗತಿಗೆ ಅವಳು ಏಕೆ ಹಾಜರಾಗುತ್ತಿಲ್ಲ ಎಂಬುದನ್ನು ಕಂಡುಹಿಡಿಯಲು ನಮ್ಮನ್ನು ಭೇಟಿನೀಡಿದಾಗ, ಪ್ರಶ್ನೆಗಳ ಸುರಿಮಳೆಯನ್ನು ಅವನು ಎದುರಿಸಬೇಕಾಯಿತು ಮತ್ತು ಆ ಪ್ರಶ್ನೆಗಳಲ್ಲಿ ಯಾವುದಕ್ಕೂ ಅವನಲ್ಲಿ ಉತ್ತರವಿರಲಿಲ್ಲ. ಗ್ವೆನ್‌ ಅವನಿಗೆ ಕರ್ತನ ಪ್ರಾರ್ಥನೆಯ ಅರ್ಥವೇನೆಂದು ಕೇಳಿದಳು ಮತ್ತು ಕೊನೆಗೆ ಅದರ ವಿವರಣೆಯನ್ನು ಅವಳೇ ಹೇಳಬೇಕಾಯಿತು! ಸಮಾಪ್ತಿಯಲ್ಲಿ ಅವಳು 1 ಕೊರಿಂಥ 10:21ನ್ನು ಉಲ್ಲೇಖಿಸುತ್ತಾ, ಇನ್ನು ಮುಂದೆ ತಾನು ‘ಎರಡು ಪಂಕ್ತಿಯಲ್ಲಿ ಊಟಮಾಡಲು ಸಾಧ್ಯವಿಲ್ಲ’ ಎಂಬುದಾಗಿ ಸ್ಪಷ್ಟವಾಗಿ ತಿಳಿಸಿದಳು. ಅವನು ನಮ್ಮ ಮನೆಯಿಂದ ಹೊರಹೋಗುತ್ತಿದ್ದಾಗ, ತಾನು ಗ್ವೆನ್‌ಗಾಗಿ ಪ್ರಾರ್ಥಿಸುವುದಾಗಿಯೂ ಅವಳ ಪ್ರಶ್ನೆಗಳನ್ನು ಉತ್ತರಿಸಲು ಹಿಂದಿರುಗಿ ಬರುವುದಾಗಿಯೂ ತಿಳಿಸಿದನು. ಆದರೆ, ಅವನು ಪುನಃ ಎಂದೂ ಹಿಂದಿರುಗಿ ಬರಲಿಲ್ಲ. ಅವಳ ದೀಕ್ಷಾಸ್ನಾನದ ನಂತರ, ಗ್ವೆನ್‌ ಸ್ವಲ್ಪ ಸಮಯದಲ್ಲೇ ಪೂರ್ಣ ಸಮಯದ ಸೌವಾರ್ತಿಕಳಾದಳು.

ಯುವ ಜನರ ಬಗ್ಗೆ ಕಾಳಜಿ ವಹಿಸುವುದರಲ್ಲಿ ನಮ್ಮ ಸಭೆಯು ಉತ್ತಮ ಮಾದರಿಯಾಗಿತ್ತು. ನಾನು ಏಳು ವರುಷ ಪ್ರಾಯದವನಾಗಿದ್ದಾಗ, ಸಂದರ್ಶಕ ಹಿರಿಯನೊಬ್ಬನ ಭಾಷಣಕ್ಕೆ ಕಿವಿಗೊಡುತ್ತಿದ್ದದನ್ನು ನಾನು ಇನ್ನೂ ನೆನಪಿಸಿಕೊಳ್ಳಬಲ್ಲೆ. ನಂತರ ಅವನು ನನ್ನೊಂದಿಗೆ ಮಾತಾಡಲು ಬಂದನು. ಅಬ್ರಹಾಮನ ಕುರಿತು ಮತ್ತು ಅವನು ತನ್ನ ಮಗನಾದ ಇಸಾಕನನ್ನು ಬಲಿಕೊಡಲು ಸಿದ್ಧನಿದ್ದ ವಿಷಯದ ಕುರಿತು ನಾನು ಓದುತ್ತಿದ್ದೇನೆಂಬುದನ್ನು ಅವನಿಗೆ ತಿಳಿಸಿದೆ. “ವೇದಿಕೆಯ ಬದಿಯಲ್ಲಿ ನಿಂತು ನೀನು ಓದಿದ್ದನ್ನು ನನಗೆ ಸಂಪೂರ್ಣವಾಗಿ ವಿವರಿಸು,” ಎಂಬುದಾಗಿ ಅವನು ನನಗೆ ತಿಳಿಸಿದನು. ಅಲ್ಲಿ ನಿಂತು ನಾನು ಮೊದಲ “ಬಹಿರಂಗ ಭಾಷಣವನ್ನು” ಕೊಡಲು ಎಷ್ಟು ಪುಳಕಿತನಾಗಿದ್ದೆ!

ನಾನು 15 ವರುಷ ಪ್ರಾಯದವನಾಗಿದ್ದಾಗ, ಇಸವಿ 1931ರಲ್ಲಿ ನನ್ನ ತಾಯಿಯವರು ಮರಣಹೊಂದಿದ ಅದೇ ವರುಷದಲ್ಲಿ ದೀಕ್ಷಾಸ್ನಾನಪಡೆದುಕೊಂಡೆ, ಮತ್ತು ಶಾಲೆಯನ್ನು ಬಿಟ್ಟು ಒಬ್ಬ ಅಪ್ರೆಂಟಿಸ್‌ ಇಲೆಕ್ಟ್ರಿಶನ್‌ನಾದೆ. 1936ರಲ್ಲಿ, ರೆಕಾರ್ಡ್‌ ಮಾಡಲ್ಪಟ್ಟಿದ್ದ ಬೈಬಲ್‌ ಭಾಷಣಗಳನ್ನು ಒಂದು ಟ್ರಾನ್‌ಸ್ಕ್ರಿಪ್‌ಷನ್‌ ಯಂತ್ರದ ಮೂಲಕ ಸಾರ್ವಜನಿಕ ಸ್ಥಳಗಳಲ್ಲಿ ನುಡಿಸಲಾಗುತ್ತಿತ್ತು. ಈ ಚಟುವಟಿಕೆಯಲ್ಲಿ ಭಾಗವಹಿಸುವಂತೆ ಒಬ್ಬ ವೃದ್ಧ ಸಹೋದರಿಯು ನನ್ನನ್ನು ಮತ್ತು ನನ್ನ ಅಣ್ಣನನ್ನು ಉತ್ತೇಜಿಸಿದರು. ಆದಕಾರಣ, ನಾನು ಮತ್ತು ಆ್ಯಲೆಕ್‌ ಒಂದು ಸೈಕಲನ್ನು ಖರೀದಿಸಿ, ಟ್ರಾನ್‌ಸ್ಕ್ರಿಪ್‌ಷನ್‌ ಯಂತ್ರವನ್ನು ಹೊತ್ತುಕೊಂಡು ಹೋಗಲು ಸಾಧ್ಯವಾಗುವಂತೆ ಆ ಸೈಕಲಿಗೆ ಒಂದು ಸೈಡ್‌ಕಾರನ್ನು ಜೋಡಿಸಲು ಲಿವರ್‌ಪೂಲ್‌ಗೆ ಹೋದೆವು. ಆ ಸೈಡ್‌ಕಾರಿನ ಹಿಂದೆ ಎರಡು ಮೀಟರ್‌ ಎತ್ತರದ ಕೊಳವೆಯಾಕಾರದ ಮಡಿಸಲಾಗುವ ಸಾಧನದ ತುದಿಯಲ್ಲಿ ಧ್ವನಿವರ್ಧಕವನ್ನು ಕಟ್ಟಿಡಲಾಗಿತ್ತು. ಈ ರೀತಿಯ ಯಾವುದೇ ಸಾಧನವನ್ನು ಹಿಂದೆಂದೂ ತಾನು ಮಾಡಲಿಲ್ಲವೆಂದು ಮೆಕ್ಯಾನಿಕ್‌ ಹೇಳಿದನು. ಆದರೆ ಇದು ಬಹಳ ಪರಿಣಾಮಕಾರಿಯಾಯಿತು! ನಮಗೆ ನೇಮಕವಾದ ಕ್ಷೇತ್ರವನ್ನು ನಾವು ಅತಿ ಉತ್ಸಾಹದಿಂದ ಆವರಿಸಿದೆವು. ಆ ವೃದ್ಧ ಸಹೋದರಿಯ ಉತ್ತೇಜನಕ್ಕೆ ಮತ್ತು ನಮಗೆ ವಹಿಸಲಾದ ಸೇವಾ ಸುಯೋಗಕ್ಕೆ ನಾವು ಬಹಳ ಅಭಾರಿಗಳಾಗಿದ್ದೇವೆ.

ಎರಡನೆಯ ಲೋಕ ಯುದ್ಧ​—ಪರೀಕ್ಷೆಯ ಸಮಯ

ಯುದ್ಧದ ಕಾರ್ಮೋಡಗಳು ಕವಿಯುತ್ತಿದ್ದಂತೆ, 1938ರ ಸೆಪ್ಟೆಂಬರ್‌ 11ರಂದು ಲಂಡನಿನ ರಾಯಲ್‌ ಆ್ಯಲ್ಬರ್ಟ್‌ ಹಾಲ್‌ನಲ್ಲಿ ಕೊಡಲ್ಪಡಲಿದ್ದ, “ನಿಜತ್ವಗಳನ್ನು ಎದುರಿಸಿರಿ” ಎಂಬ ಶೀರ್ಷಿಕೆಯ ಸಾರ್ವಜನಿಕ ಭಾಷಣದ ಬಗ್ಗೆ ಪ್ರಚಾರಮಾಡುವುದರಲ್ಲಿ ನಾನು ಮತ್ತು ಸ್ಟ್ಯಾನ್ಲಿ ರಾಜರ್ಸ್‌ರವರು ಕಾರ್ಯಮಗ್ನರಾಗಿದ್ದೆವು. ನಂತರ, ಈ ಭಾಷಣದ ವಿಷಯವನ್ನು ಪುಸ್ತಿಕೆಯ ರೂಪದಲ್ಲಿ ವಿತರಿಸುವುದರಲ್ಲಿ ನಾನು ಪಾಲಿಗನಾದೆ. ಅಷ್ಟುಮಾತ್ರವಲ್ಲದೆ ಅದರೊಂದಿಗೆ, ಮುಂದಿನ ವರುಷ ಪ್ರಕಾಶಿಸಲ್ಪಟ್ಟ ಸರ್ವಾಧಿಕಾರವೋ ಸ್ವಾತಂತ್ರ್ಯವೋ (ಇಂಗ್ಲಿಷ್‌) ಎಂಬ ಪುಸ್ತಿಕೆಯನ್ನೂ ವಿತರಿಸಿದೆ. ಈ ಎರಡೂ ಪುಸ್ತಿಕೆಗಳು, ಹಿಟ್ಲರ್‌ನ ಜರ್ಮನಿಯ ನಿರಂಕುಶ ಪ್ರಭುತ್ವ ಸಂಬಂಧಿತ ಮಹತ್ವಾಕಾಂಕ್ಷೆಗಳನ್ನು ಸ್ಪಷ್ಟವಾಗಿ ಬಯಲಿಗೆಳೆದವು. ಇಷ್ಟರಲ್ಲಿ ನಾನು ನನ್ನ ಸಾರ್ವಜನಿಕ ಶುಶ್ರೂಷೆಗೋಸ್ಕರ ರನ್‌ಕಾರ್ನ್‌ನಲ್ಲಿ ಪ್ರಸಿದ್ಧನಾಗಿದ್ದೆ ಮತ್ತು ಗೌರವಿಸಲ್ಪಡುತ್ತಿದ್ದೆ. ನಾನು ಯಾವಾಗಲೂ ದೇವಪ್ರಭುತ್ವಾತ್ಮಕ ಚಟುವಟಿಕೆಯಲ್ಲಿ ಮುಂದಿದ್ದದ್ದು, ವಿಶೇಷವಾಗಿ ನಂತರದ ಸಮಯದಲ್ಲಿ ನನಗೆ ಬಹಳ ಉಪಯುಕ್ತವಾಯಿತು.

ನಾನು ಕೆಲಸಮಾಡುತ್ತಿದ್ದ ಕಂಪೆನಿಯು, ನಗರದ ಹೊರಭಾಗದಲ್ಲಿ ಒಂದು ಹೊಸ ಕಾರ್ಖಾನೆಗೆ ವಿದ್ಯುತ್‌ ಶಕ್ತಿಯ ಮೂಲಕ್ಕೆ ಎಲೆಕ್ಟ್ರಿಕಲ್‌ ಉಪಕರಣವನ್ನು ಜೋಡಿಸುವ ಕೆಲಸದ ಕಾಂಟ್ರ್ಯಾಕ್ಟನ್ನು ತೆಗೆದುಕೊಂಡಿತು. ಆ ಕಾರ್ಖಾನೆಯು ಯುದ್ಧ ಶಸ್ತಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆಯೆಂಬುದು ನನಗೆ ತಿಳಿದುಬಂದಾಗ, ನಾನು ಅಲ್ಲಿ ಕೆಲಸಮಾಡಲಾರೆ ಎಂಬುದನ್ನು ಸ್ಪಷ್ಟವಾಗಿ ತಿಳಿಸಿದೆ. ನನ್ನ ಈ ನಿರ್ಣಯದಿಂದಾಗಿ ನನ್ನ ಧಣಿಗಳಿಗೆ ಅಸಂತೋಷವಾಯಿತಾದರೂ, ನನ್ನ ಮೇಲ್ವಿಚಾರಕನು ನನ್ನ ಪರವಾಗಿ ಮಾತಾಡಿದನು ಮತ್ತು ನನಗೆ ಬೇರೊಂದು ಕೆಲಸವನ್ನು ಕೊಡಲಾಯಿತು. ಅವನ ಆ್ಯಂಟಿಯು ಯೆಹೋವನ ಸಾಕ್ಷಿಯಾಗಿದ್ದರೆಂಬುದು ನನಗೆ ನಂತರ ತಿಳಿದುಬಂತು.

“ರೆಜ್‌, ನೀನು ಅನೇಕ ವರುಷಗಳಿಂದ ಆ ಬೈಬಲ್‌ ಕೆಲಸದಲ್ಲಿ ಭಾಗವಹಿಸುತ್ತಿರುವದರಿಂದ ನೀನು ತೆಗೆದುಕೊಂಡ ಈ ನಿಲುವಲ್ಲದೆ ನಾವು ನಿನ್ನಿಂದ ಇನ್ನೇನನ್ನೂ ಅಪೇಕ್ಷಿಸಲಾರೆವು” ಎಂದು ಹೇಳುವ ಮೂಲಕ ನನ್ನ ಒಬ್ಬ ಜೊತೆಕೆಲಸಗಾರನು ನನ್ನನ್ನು ಬಹಳ ಉತ್ತೇಜಿಸಿದನು. ಹಾಗಿದ್ದರೂ, ನನ್ನ ಜೊತೆಕೆಲಸಗಾರರಲ್ಲಿ ಅನೇಕರು ನನಗೆ ತೊಂದರೆಯನ್ನುಂಟು ಮಾಡಲು ಬಯಸುತ್ತಿದ್ದ ಕಾರಣ ನಾನು ಬಹಳ ಜಾಗರೂಕನಾಗಿರಬೇಕಾಗಿತ್ತು.

ಮನಸ್ಸಾಕ್ಷಿಯ ಕಾರಣ ಸೇನೆಗೆ ಸೇರಲು ಒಪ್ಪುವುದಿಲ್ಲವೆಂದು ನಾನು ಮಾಡಿದ ನೋಂದಣಿಯನ್ನು, 1940ರ ಜೂನ್‌ ತಿಂಗಳಿನಲ್ಲಿ ಲಿವರ್‌ಪೂಲ್‌ನಲ್ಲಿರುವ ಕೋರ್ಟ್‌ ಅಂಗೀಕರಿಸಿತು. ಆದರೆ ಅದು, ನಾನು ಸದ್ಯದಲ್ಲಿದ್ದ ನನ್ನ ಉದ್ಯೋಗದಲ್ಲಿಯೇ ಉಳಿಯಬೇಕೆಂಬ ಷರತ್ತಿನ ಮೇಲೆ ಆಧಾರಿಸಿತ್ತು. ಇದು ನಿಶ್ಚಯವಾಗಿಯೂ, ನನ್ನ ಕ್ರೈಸ್ತ ಶುಶ್ರೂಷೆಯನ್ನು ಮುಂದುವರಿಸಲು ನನಗೆ ಸಾಧ್ಯಮಾಡಿತು.

ಪೂರ್ಣ ಸಮಯದ ಸೇವೆಯನ್ನು ಆರಂಭಿಸಿದೆ

ಯುದ್ಧವು ಕೊನೆಗೊಳ್ಳುತ್ತಿದ್ದಂತೆ, ನಾನು ನನ್ನ ಉದ್ಯೋಗವನ್ನು ಬಿಟ್ಟು ಐರೀನ್‌ಳೊಂದಿಗೆ ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸೇರುವ ನಿರ್ಣಯವನ್ನು ಮಾಡಿದೆ. 1946ರಲ್ಲಿ, ನಾನು ಐದು ಮೀಟರ್‌ಗಳಷ್ಟು ಉದ್ದವಾಗಿದ್ದ ಟ್ರೇಲರ್‌ ಅನ್ನು ಕಟ್ಟಿದೆ ಮತ್ತು ಅದು ನಮ್ಮ ಮನೆಯಾಯಿತು. ಮುಂದಿನ ವರುಷ, ಗ್ಲೌಸ್ಟರ್ಶರ್‌ನಲ್ಲಿರುವ ಒಂದು ಹಳ್ಳಿಯಾದ ಆ್ಯಲ್‌ವೆಸ್ಟನ್‌ಗೆ ಸ್ಥಳಾಂತರಿಸುವಂತೆ ನಮ್ಮನ್ನು ಕೇಳಿಕೊಳ್ಳಲಾಯಿತು. ತದನಂತರ, ಪುರಾತನ ಪಟ್ಟಣವಾದ ಸೈರೆನ್‌ಸೆಸ್ಟರ್‌ ಮತ್ತು ಬಾತ್‌ ನಗರದಲ್ಲಿ ನಾವು ಪಯನೀಯರ್‌ ಸೇವೆಯನ್ನು ಮಾಡಿದೆವು. 1951ರಲ್ಲಿ, ಸಂಚಾರ ಮೇಲ್ವಿಚಾರಕನೋಪಾದಿ ವೇಲ್ಸ್‌ನ ದಕ್ಷಿಣ ಭಾಗದಲ್ಲಿರುವ ಸಭೆಗಳನ್ನು ಭೇಟಿಮಾಡಲು ನನ್ನನ್ನು ಆಮಂತ್ರಿಸಲಾಯಿತು. ಆದರೆ ಎರಡು ವರುಷಗಳೊಳಗಾಗಿ ನಾವು ಮಿಷನೆರಿ ತರಬೇತಿಗಾಗಿ ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ಗೆ ಹೋದೆವು.

ಶಾಲೆಯ 21ನೆಯ ತರಗತಿಯು, ನ್ಯೂ ಯಾರ್ಕ್‌ನ ಸೌತ್‌ ಲ್ಯಾಂಸಿಂಗ್‌ನಲ್ಲಿ ಜರಗಿತು. 1953ರಲ್ಲಿ, ನ್ಯೂ ಯಾರ್ಕ್‌ ನಗರದಲ್ಲಿ ನಡೆದ ಹೊಸ ಲೋಕ ಸಮಾಜ ಸಮ್ಮೇಳನದಲ್ಲಿ ನಾವು ಪದವೀಧರರಾದೆವು. ನನಗೆ ಮತ್ತು ಐರೀನ್‌ಗೆ, ಪದವಿಯನ್ನು ಪಡೆಯುವ ದಿನದ ವರೆಗೂ ನಮ್ಮ ಮುಂದಿನ ನೇಮಕ ಎಲ್ಲಿ ಎಂಬುದು ತಿಳಿದಿರಲಿಲ್ಲ. ಪೆರೂ ನಾವು ಹೋಗಬೇಕಾದ ಸ್ಥಳವೆಂದು ತಿಳಿದೊಡನೆ ನಮಗೆ ಬಹಳ ಸಂತೋಷವಾಯಿತು. ಏಕೆ? ಏಕೆಂದರೆ ಐರೀನ್‌ಳ ಮಲತಮ್ಮನಾದ ಸಿಡ್ನೀ ಫ್ರೇಝರ್‌ ಮತ್ತು ಅವನ ಪತ್ನಿ ಮಾರ್ಗರೇಟ್‌, ಗಿಲ್ಯಡ್‌ ಶಾಲೆಯ 19ನೆಯ ತರಗತಿಯಿಂದ ಪದವೀಧರರಾದ ನಂತರ ಲೀಮ ಬ್ರಾಂಚ್‌ ಆಫೀಸಿನಲ್ಲಿ ಒಂದು ವರುಷಕ್ಕಿಂತಲೂ ಹೆಚ್ಚು ಸಮಯದಿಂದ ಸೇವೆಸಲ್ಲಿಸುತ್ತಿದ್ದರು!

ನಮ್ಮ ವೀಸಾಕ್ಕಾಗಿ ಕಾಯುತ್ತಿದ್ದಾಗ, ಸ್ವಲ್ಪ ಸಮಯ ನಾವು ಬ್ರೂಕ್ಲಿನ್‌ ಬೆತೆಲ್‌ನಲ್ಲಿ ಕೆಲಸಮಾಡಿದೆವು, ನಂತರ ಲೀಮಕ್ಕೆ ಹೋದೆವು. ಲೀಮಕ್ಕೆ ಪಶ್ಚಿಮದಲ್ಲಿದ್ದ ಪೆರೂವಿನ ಮುಖ್ಯ ರೇವುಪಟ್ಟಣವಾದ ಕಯಾವೊ ನಮಗೆ ದೊರೆತ ಹತ್ತು ಮಿಷನೆರಿ ನೇಮಕಗಳಲ್ಲಿ ಮೊದಲನೆಯದ್ದಾಗಿತ್ತು. ನಾವು ಸ್ಪ್ಯಾನಿಷ್‌ ಭಾಷೆಯ ಕೆಲವೊಂದು ಪದಗಳನ್ನು ಕಲಿತಿದ್ದೇವಾದರೂ, ಆ ಸಮಯದಲ್ಲಿ ನನಗಾಗಲಿ ಐರೀನ್‌ಳಿಗಾಗಲಿ ಸ್ಪ್ಯಾನಿಷ್‌ ಭಾಷೆಯಲ್ಲಿ ಸರಾಗವಾಗಿ ಮಾತಾಡಲು ಬರುತ್ತಿರಲಿಲ್ಲ. ಹಾಗಿರುವಾಗ, ನಾವು ಹೇಗೆ ನಮ್ಮ ಕೆಲಸವನ್ನು ಮಾಡುವೆವು?

ಸಮಸ್ಯೆಗಳು ಮತ್ತು ಸಾರುವುದರಿಂದ ದೊರೆತ ಸುಯೋಗಗಳು

ತಾಯಿಯು ತನ್ನ ಮಗುವಿಗೆ ಭಾಷೆಯನ್ನು ಕಲಿಸುವುದಿಲ್ಲ ಎಂಬುದಾಗಿ ನಮಗೆ ಗಿಲ್ಯಡ್‌ ಶಾಲೆಯಲ್ಲಿ ತಿಳಿಸಲಾಯಿತು. ಬದಲಾಗಿ, ತಾಯಿಯು ಮಾತಾಡುವುದನ್ನು ಕೇಳಿ ಮಗು ತಾನಾಗಿ ಕಲಿಯುತ್ತದೆ. ಆದುದರಿಂದ, ನಮಗೆ ಕೊಡಲ್ಪಟ್ಟ ಸಲಹೆ ಏನೆಂದರೆ: “ಕೂಡಲೇ ಸಾರುವ ಕೆಲಸದಲ್ಲಿ ತೊಡಗಿರಿ, ಮತ್ತು ಸಾರ್ವಜನಿಕರಿಂದ ಭಾಷೆಯನ್ನು ಕಲಿತುಕೊಳ್ಳಿರಿ. ಅವರು ನಿಮಗೆ ಸಹಾಯಮಾಡುವರು.” ಈ ಹೊಸ ಭಾಷೆಯನ್ನು ಅರ್ಥಮಾಡಿಕೊಳ್ಳಲು ಮತ್ತು ಮಾತಾಡಲು ನಾನು ಪ್ರಯತ್ನಿಸುತ್ತಿದ್ದಾಗಲೇ ಅಂದರೆ ನಾವು ಬಂದು ಎರಡು ವಾರಗಳೊಳಗಾಗಿಯೇ ಕಯಾವೊ ಸಭೆಯ ಅಧ್ಯಕ್ಷ ಮೇಲ್ವಿಚಾರಕನಾಗಿ ನಾನು ನೇಮಿಸಲ್ಪಟ್ಟಾಗ ನನಗೆ ಹೇಗನಿಸಿತು ಎಂಬುದನ್ನು ಊಹಿಸಿರಿ! ನಾನು ಕೂಡಲೆ ಸಿಡ್ನೀ ಫ್ರೇಝರ್‌ನನ್ನು ಭೇಟಿಮಾಡಿ, ಅವನಲ್ಲಿ ಈ ವಿಷಯವನ್ನು ತಿಳಿಸಿದೆ. ಆದರೆ ಅವನು, ಸಭೆಯೊಂದಿಗೆ ಮತ್ತು ನಿನ್ನ ಕ್ಷೇತ್ರದಲ್ಲಿರುವ ಜನರೊಂದಿಗೆ ಸೇರು, ಆಗ ಭಾಷೆಯನ್ನು ಕಲಿತುಕೊಳ್ಳುವಿ ಎಂಬ ಗಿಲ್ಯಡ್‌ ಶಾಲೆಯಲ್ಲಿ ಕೊಟ್ಟಂಥ ಸಲಹೆಯನ್ನೇ ಕೊಟ್ಟನು. ಈ ಬುದ್ಧಿವಾದವನ್ನು ಅನುಸರಿಸಲು ನಾನು ದೃಢನಿಶ್ಚಯವನ್ನು ಮಾಡಿದೆ.

ಒಂದು ಶನಿವಾರ ಬೆಳಿಗ್ಗೆ, ನಾನು ಒಬ್ಬ ಮರಗೆಲಸದವನನ್ನು ಅವನ ಅಂಗಡಿಯಲ್ಲಿ ಭೇಟಿಯಾದೆ. “ನನ್ನ ಕೆಲಸವನ್ನು ನಾನು ಮುಂದುವರಿಸಬೇಕು, ಆದರೆ ನೀವು ದಯಮಾಡಿ ಕುಳಿತುಕೊಂಡು ನನ್ನೊಂದಿಗೆ ಮಾತನಾಡಿ” ಎಂಬುದಾಗಿ ಅವನು ಹೇಳಿದ. ನಾನು ಹಾಗೆ ಮಾಡುವೆ, ಆದರೆ ಒಂದು ಷರತ್ತಿನ ಮೇರೆಗೆ ಎಂದು ಹೇಳಿದೆ: “ನಾನು ಮಾತನಾಡುವಾಗ ತಪ್ಪು ಮಾಡುವಲ್ಲಿ ದಯವಿಟ್ಟು ನನ್ನನ್ನು ತಿದ್ದಿರಿ. ನನಗೆ ಬೇಸರವಾಗುವುದಿಲ್ಲ.” ಅವನು ನಕ್ಕನು ಮತ್ತು ನನ್ನ ವಿನಂತಿಗೆ ಒಪ್ಪಿಕೊಂಡನು. ವಾರದಲ್ಲಿ ಎರಡಾವರ್ತಿ ನಾನು ಅವನನ್ನು ಭೇಟಿಯಾದೆ ಮತ್ತು ನನಗೆ ತಿಳಿಸಲ್ಪಟ್ಟಂತೆ ಹೊಸ ಭಾಷೆಯಲ್ಲಿ ನಿಪುಣನಾಗಲು ಇದೊಂದು ಉತ್ತಮ ವಿಧಾನವೆಂಬುದನ್ನು ಕಂಡುಕೊಂಡೆ.

ನಮ್ಮ ಎರಡನೆಯ ಮಿಷನೆರಿ ನೇಮಕವಾದ ಈಕಾದಲ್ಲಿಯೂ ನಾನು ಇನ್ನೊಬ್ಬ ಮರಗೆಲಸದವನನ್ನು ಅನಿರೀಕ್ಷಿತವಾಗಿ ಭೇಟಿಯಾದೆ ಮತ್ತು ಕಯಾವೊದಲ್ಲಿ ನಾನು ಮಾಡಿದ ಏರ್ಪಾಡನ್ನು ಅವನಿಗೆ ವಿವರಿಸಿದೆ. ಅದೇ ರೀತಿಯಲ್ಲಿ ನನಗೆ ಸಹಾಯಮಾಡಲು ಅವನು ಸಹ ಒಪ್ಪಿಕೊಂಡನು. ಆದುದರಿಂದ, ಸ್ಪ್ಯಾನಿಷ್‌ ಭಾಷೆಯಲ್ಲಿ ನಿಜವಾಗಿಯೂ ನಿಪುಣನಾಗಲು ನನಗೆ ಮೂರು ವರುಷ ತಗಲಿತಾದರೂ ನಾನು ಆ ಭಾಷೆಯಲ್ಲಿ ಒಳ್ಳೇ ಪ್ರಗತಿಯನ್ನು ಮಾಡುತ್ತಾ ಮುಂದುವರಿದೆ. ಈ ವ್ಯಕ್ತಿಯು ಯಾವಾಗಲೂ ಬಹಳ ಕಾರ್ಯಮಗ್ನನಾಗಿರುತ್ತಿದ್ದನು. ಆದರೆ ನಾನು ಶಾಸ್ತ್ರವಚನಗಳನ್ನು ಓದಿ, ನಂತರ ಅದರ ಅರ್ಥವನ್ನು ಅವನಿಗೆ ವಿವರಿಸುವ ಮೂಲಕ ಒಂದು ಬೈಬಲ್‌ ಅಧ್ಯಯನವನ್ನು ಅವನೊಂದಿಗೆ ನಡಿಸುತ್ತಿದ್ದೆ. ಒಂದು ವಾರ ನಾನು ಅವನನ್ನು ಭೇಟಿಯಾಗಲು ಹೋದಾಗ, ಅವನು ಲೀಮದಲ್ಲಿ ಹೊಸ ಕೆಲಸವನ್ನು ಕಂಡುಕೊಂಡ ಕಾರಣ ಈ ಕೆಲಸವನ್ನು ಬಿಟ್ಟುಹೋದನೆಂಬುದಾಗಿ ಅವನ ಧಣಿಯು ನನಗೆ ತಿಳಿಸಿದರು. ಸ್ವಲ್ಪ ಸಮಯದ ನಂತರ ನಾನು ಮತ್ತು ಐರೀನ್‌, ಲೀಮಕ್ಕೆ ಒಂದು ಅಧಿವೇಶನಕ್ಕಾಗಿ ಹೋದಾಗ, ನಾನು ಈ ವ್ಯಕ್ತಿಯನ್ನು ಪುನಃ ಭೇಟಿಯಾದೆ. ತನ್ನ ಅಧ್ಯಯನವನ್ನು ಮುಂದುವರಿಸಲಿಕ್ಕಾಗಿ ಅವನು ಸ್ಥಳಿಕ ಸಾಕ್ಷಿಗಳನ್ನು ಸಂಪರ್ಕಿಸಿದ್ದನ್ನು, ಮತ್ತು ಈಗ ಅವನೂ ಅವನ ಕುಟುಂಬ ಸದಸ್ಯರೆಲ್ಲರೂ ಯೆಹೋವನ ಸಮರ್ಪಿತ ಸೇವಕರಾಗಿದ್ದಾರೆಂಬುದನ್ನು ತಿಳಿದು ನಾನೆಷ್ಟು ಪುಳಕಿತನಾದೆ!

ಒಂದು ಸಭೆಯಲ್ಲಿ, ಒಂದು ಯುವ ದಂಪತಿಯು ವಿವಾಹವಾಗದೆ ಒಟ್ಟಾಗಿ ಜೀವಿಸುತ್ತಿದ್ದರೂ ದೀಕ್ಷಾಸ್ನಾನವನ್ನು ಪಡೆದುಕೊಂಡಿರುವುದಾಗಿ ನಮಗೆ ತಿಳಿದುಬಂತು. ಇದರ ಕುರಿತಾದ ಶಾಸ್ತ್ರೀಯ ಮೂಲತತ್ತ್ವಗಳನ್ನು ಅವರೊಂದಿಗೆ ನಾವು ಚರ್ಚಿಸಿದ ಕಾರಣ, ಅವರು ತಮ್ಮ ಸಂಬಂಧವನ್ನು ಕಾನೂನುಬದ್ಧಗೊಳಿಸಲು ನಿರ್ಧರಿಸಿದರು. ಇದು ಅವರನ್ನು ದೀಕ್ಷಾಸ್ನಾತ ಸಾಕ್ಷಿಗಳಾಗಲು ಅರ್ಹರನ್ನಾಗಿ ಮಾಡುವುದು. ಆದುದರಿಂದ, ಅವರ ವಿವಾಹವನ್ನು ಅಧಿಕೃತವಾಗಿ ದಾಖಲಿಸಲು ನಾನು ಅವರನ್ನು ಪುರಭವನಕ್ಕೆ ಕರೆದುಕೊಂಡು ಹೋದೆ. ಆದರೆ ಆಗ ಒಂದು ಸಮಸ್ಯೆಯು ತಲೆದೋರಿತು. ಅವರಿಗೆ ನಾಲ್ಕು ಮಂದಿ ಮಕ್ಕಳಿದ್ದರು, ಆದರೆ ಆ ಮಕ್ಕಳನ್ನೂ ನೋಂದಾಯಿಸಿರಲಿಲ್ಲ ಮತ್ತು ಇದು ಕಾನೂನಿನ ಅವಶ್ಯಕತೆಯಾಗಿತ್ತು. ಪೌರ ಸಭಾಧ್ಯಕ್ಷನು ಏನು ಕ್ರಿಯೆಕೈಗೊಳ್ಳುತ್ತಾನೆ ಎಂಬುದಾಗಿ ನಾವು ಸಹಜವಾಗಿಯೇ ಕುತೂಹಲಪಟ್ಟೆವು. “ನಿಮ್ಮ ಸ್ನೇಹಿತರಾದ ಈ ಸದ್ಗುಣಶೀಲ ಯೆಹೋವನ ಸಾಕ್ಷಿಗಳು ನೀವು ಕಾನೂನುಬದ್ಧವಾಗಿ ವಿವಾಹವಾಗಬೇಕೆಂದು ಏರ್ಪಡಿಸಿದರಿಂದ, ನಾನು ಪ್ರತಿಯೊಂದು ಮಗುವಿಗಾಗಿ ಒಂದು ಕಾನೂನುಬದ್ಧ ಪ್ರಮಾಣವನ್ನು ಕೊಡಬೇಕಾಗಿ ಕೋರ್ಟ್‌ ಆದೇಶವನ್ನು ನೀಡುವುದಿಲ್ಲ ಮತ್ತು ಅವರನ್ನು ಯಾವುದೇ ಹಣ ತೆಗೆದುಕೊಳ್ಳದೆ ದಾಖಲಾತಿಮಾಡುತ್ತೇನೆ” ಎಂಬುದಾಗಿ ಪೌರ ಸಭಾಧ್ಯಕ್ಷನು ತಿಳಿಸಿದನು. ಇದಕ್ಕಾಗಿ ನಾವು ಎಷ್ಟು ಅಭಾರಿಗಳಾದೆವು. ಇದೊಂದು ಬಡ ಕುಟುಂಬವಾಗಿದ್ದರಿಂದ, ಯಾವುದೇ ದಂಡ ತೆರುವುದು ಅವರಿಗೆ ಒಂದು ದೊಡ್ಡ ಹೊರೆಯಾಗಿರುತ್ತಿತ್ತು!

ಯೆಹೋವನ ಸಾಕ್ಷಿಗಳ ಬ್ರೂಕ್ಲಿನ್‌ ಮುಖ್ಯಕಾರ್ಯಾಲಯದಿಂದ ಬಂದ ಆಲ್ಬರ್ಟ್‌ ಡಿ. ಶ್ರೋಡರ್‌ರವರು ನಮ್ಮನ್ನು ತದನಂತರ ಭೇಟಿಯಾದರು ಮತ್ತು ಲೀಮದ ಇನ್ನೊಂದು ಭಾಗದಲ್ಲಿ ಹೊಸ ಮಿಷನೆರಿ ಗೃಹವನ್ನು ಸ್ಥಾಪಿಸುವಂತೆ ಶಿಫಾರಸ್ಸುಮಾಡಿದರು. ಆದುದರಿಂದ, ಅಮೆರಿಕದಿಂದ ಬಂದ ಇಬ್ಬರು ಸಹೋದರಿಯರಾದ ಫ್ರಾನ್ಸೆಸ್‌ ಮತ್ತು ಎಲಿಸಬೇತ್‌ ಗುಡ್‌ ಹಾಗೂ ಕೆನಡದ ಒಂದು ದಂಪತಿಯೊಂದಿಗೆ ನಾನು ಮತ್ತು ಐರೀನ್‌, ಸಾನ್‌ ಬೋರ್ಹಾ ಎಂಬ ಜಿಲ್ಲೆಗೆ ಸ್ಥಳಾಂತರಿಸಿದೆವು. ಎರಡು ಅಥವಾ ಮೂರು ವರುಷದೊಳಗೆ, ಇನ್ನೊಂದು ಪ್ರಗತಿಪರ ಸಭೆಯನ್ನು ನಾವು ಸ್ಥಾಪಿಸಿದೆವು.

ಮೂರು ಸಾವಿರ ಮೀಟರ್‌ಗಿಂತಲೂ ಹೆಚ್ಚು ಎತ್ತರದ ಮಧ್ಯ ಮಲೆನಾಡು ಪ್ರದೇಶವಾದ ವಾಂಕಾಯೊದಲ್ಲಿ ಸೇವೆಮಾಡುವಾಗ, 80 ಮಂದಿ ಸಾಕ್ಷಿಗಳಿದ್ದ ಅದರ ಸಭೆಯೊಂದಿಗೆ ನಾವು ಸಹವಾಸಮಾಡಿದೆವು. ಆ ದೇಶದಲ್ಲಿ ಕಟ್ಟಲ್ಪಟ್ಟ ಎರಡನೇ ರಾಜ್ಯ ಸಭಾಗೃಹದ ನಿರ್ಮಾಣ ಕಾರ್ಯದಲ್ಲಿ ನಾನು ಭಾಗಿಯಾದೆ. ನಾವು ಖರೀದಿಸಿದ ಸ್ಥಳದ ಕಾನೂನುಬದ್ಧ ಹಕ್ಕುಗಳನ್ನು ಸ್ಥಾಪಿಸಲು ನಾವು ಮೂರು ಬಾರಿ ಕೋರ್ಟಿಗೆ ಹೋಗಬೇಕಾಗಿದ್ದ ಕಾರಣ, ಯೆಹೋವನ ಸಾಕ್ಷಿಗಳ ಕಾನೂನು ಬದ್ಧ ಪ್ರತಿನಿಧಿಯಾಗಿ ನನ್ನನ್ನು ನೇಮಿಸಲಾಯಿತು. ಇಂಥ ಕೆಲಸಗಳು ಮತ್ತು ಆ ಆರಂಭದ ವರ್ಷಗಳಲ್ಲಿ ಅನೇಕ ಮಂದಿ ನಂಬಿಗಸ್ತ ಮಿಷನೆರಿಗಳ ವಿಸ್ತಾರವಾದ ಶಿಷ್ಯರನ್ನಾಗಿ ಮಾಡುವ ಕೆಲಸವು, ಪೆರೂವಿನಲ್ಲಿ ಇಂದು ನಾವು ನೋಡುವ ಉತ್ತಮ ವೃದ್ಧಿಗೆ​—1953ರಲ್ಲಿ ಇದ್ದ 283 ಸಾಕ್ಷಿಗಳಿಂದ ಇಂದು 83,000ಕ್ಕಿಂತಲೂ ಹೆಚ್ಚಿನ ಸಾಕ್ಷಿಗಳ ವೃದ್ಧಿಗೆ​—ಒಂದು ಬಲವಾದ ಅಸ್ತಿವಾರವನ್ನು ಹಾಕಿತು.

ದುಃಖಕರವಾದ ವಿದಾಯ

ಎಲ್ಲಾ ಮಿಷನೆರಿ ಗೃಹಗಳಲ್ಲಿ ನಾವು ನಮ್ಮ ಜೊತೆ ಮಿಷನೆರಿ ಸಹೋದರ ಸಹೋದರಿಯರೊಂದಿಗೆ ಅತ್ಯುತ್ತಮವಾದ ಸಹವಾಸದಲ್ಲಿ ಆನಂದಿಸಿದೆವು. ಅನೇಕಬಾರಿ ಈ ವಿವಿಧ ಮಿಷನೆರಿ ಗೃಹಗಳಲ್ಲಿ ನನಗೆ ಗೃಹ ಮೇಲ್ವಿಚಾರಕನಾಗಿ ಸೇವೆಸಲ್ಲಿಸುವ ಸುಯೋಗವಿತ್ತು. ನಮ್ಮ ಮುಂದಿನ ಇಡಿ ವಾರದ ಕಾರ್ಯಕ್ರಮವನ್ನು ಚರ್ಚಿಸಲು ಮತ್ತು ನಮ್ಮ ಗೃಹದ ಕೆಲಸಗಳನ್ನು ಬೇರೆ ಬೇರೆ ವ್ಯಕ್ತಿಗಳಿಗೆ ನೇಮಿಸಲು, ಸೋಮವಾರ ಬೆಳಿಗ್ಗೆ ನಾವೆಲ್ಲರೂ ಒಟ್ಟುಸೇರುತ್ತಿದ್ದೆವು. ಮುಖ್ಯವಾದ ಕೆಲಸವು ಸಾರುವ ಕೆಲಸವಾಗಿದೆ ಎಂಬುದನ್ನು ನಾವೆಲ್ಲರೂ ಗ್ರಹಿಸಿದೆವು ಮತ್ತು ಅದನ್ನು ನೆರವೇರಿಸಲು ನಾವೆಲ್ಲರೂ ಒಟ್ಟಾಗಿ ಐಕ್ಯದಿಂದ ಕೆಲಸಮಾಡಿದೆವು. ನಮ್ಮ ಯಾವುದೇ ಗೃಹದಲ್ಲಿ ಎಂದಿಗೂ ಒಂದು ದೊಡ್ಡ ಕಾದಾಟ ನಡೆದಿಲ್ಲವೆಂಬುದನ್ನು ನೆನಪಿಸಿಕೊಳ್ಳಲು ನಾನು ಬಹಳ ಸಂತೋಷಿಸುತ್ತೇನೆ.

ಲೀಮದ ಇನ್ನೊಂದು ಹೊರ ಪ್ರಾಂತವಾದ ಬ್ರೆನ್ಯಾ ನಮ್ಮ ಕೊನೆಯ ನೇಮಕವಾಗಿತ್ತು. 70 ಮಂದಿ ಸಾಕ್ಷಿಗಳಿಂದ ಕೂಡಿದ್ದ ಆ ಪ್ರೀತಿಪರ ಸಭೆಯು ಬಹಳ ತ್ವರಿತವಾಗಿ ವೃದ್ಧಿಹೊಂದಿ 100ಕ್ಕಿಂತಲೂ ಹೆಚ್ಚು ಸಾಕ್ಷಿಗಳಿಂದ ತುಂಬಿತು. ಇದೇ ಸಮಯದಲ್ಲಿ ಐರೀನ್‌ಳು ಅಸ್ವಸ್ಥಳಾದಳು. ಮೊದಲಾಗಿ, ಅವಳು ತಾನು ಏನು ಹೇಳಿದ್ದಳೋ ಅದನ್ನು ನೆನಪಿಸಿಕೊಳ್ಳಲು ಅಶಕ್ತಳಾಗುತ್ತಿರುವುದನ್ನು ಮತ್ತು ಕೆಲವೊಮ್ಮೆ ಮನೆಗೆ ಹಿಂದಿರುಗುವ ದಾರಿಯನ್ನು ನೆನಪಿಸಿಕೊಳ್ಳಲು ಕಷ್ಟಪಡುವುದನ್ನು ನಾನು ಗಮನಿಸಿದೆ. ಅವಳಿಗೆ ಅತ್ಯುತ್ತಮವಾದ ವೈದ್ಯಕೀಯ ಚಿಕಿತ್ಸೆಯು ದೊರೆತರೂ, ಅವಳ ಸ್ಥಿತಿಯು ಕ್ರಮೇಣ ಕುಂದುತ್ತಾ ಹೋಯಿತು.

ದುಃಖಕರವಾಗಿ, 1990ರಲ್ಲಿ ನಾವು ಇಂಗ್ಲೆಂಡಿಗೆ ಹಿಂದಿರುಗಿ ಹೋಗುವ ಏರ್ಪಾಡನ್ನು ನಾನು ಮಾಡಬೇಕಾಯಿತು. ಅಲ್ಲಿ ನನ್ನ ಅಕ್ಕ ಐವೀ ದಯಾಪೂರ್ವಕವಾಗಿ ಅವಳ ಮನೆಗೆ ನಮ್ಮನ್ನು ಸ್ವಾಗತಿಸಿದಳು. ನಾಲ್ಕು ವರುಷಗಳ ನಂತರ ಐರೀನ್‌ ತನ್ನ 81ನೆಯ ವರುಷ ಪ್ರಾಯದಲ್ಲಿ ಮರಣಹೊಂದಿದಳು. ನಾನು ನನ್ನ ಪೂರ್ಣ ಸಮಯದ ಶುಶ್ರೂಷೆಯನ್ನು ಮುಂದುವರಿಸುತ್ತಾ, ನನ್ನ ಸ್ವಂತ ಊರಿನಲ್ಲಿರುವ ಮೂರು ಸಭೆಗಳಲ್ಲಿ ಒಂದರಲ್ಲಿ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದೇನೆ. ಆಗಿಂದಾಗ್ಗೆ, ಸ್ಪ್ಯಾನಿಷ್‌ ಭಾಷೆಯ ಗುಂಪನ್ನು ಉತ್ತೇಜಿಸಲು ಮ್ಯಾಂಚೆಸ್ಟರ್‌ಗೂ ಪ್ರಯಾಣಿಸುತ್ತೇನೆ.

ನನಗೆ ಇತ್ತೀಚೆಗೆ ಒಂದು ಹೃದಯೋಲ್ಲಾಸಗೊಳಿಸುವಂಥ ಅನುಭವವಾಯಿತು. ಅದು ನಿಜವಾಗಿಯೂ ಅನೇಕ ವರುಷಗಳ ಹಿಂದೆ ನಾನು ಐದು ನಿಮಿಷದ ಪ್ರಸಂಗವನ್ನು ನನ್ನ ಫೋನೋಗ್ರಾಫ್‌ನಿಂದ ಒಂದು ಮನೆಯವರಿಗೆ ಕೇಳಿಸಿದಾಗ ಆರಂಭವಾದ ವಿಷಯವಾಗಿದೆ. ಒಬ್ಬ ಯುವ ಶಾಲಾಹುಡುಗಿಯು ಬಾಗಿಲ ಬಳಿಯಲ್ಲಿ, ತನ್ನ ತಾಯಿಯ ಹಿಂದೆ ನಿಂತುಕೊಂಡು ಸಂದೇಶವನ್ನು ಆಲಿಸುತ್ತಿದ್ದದ್ದು ನನಗೆ ಈಗಲೂ ಸ್ಪಷ್ಟವಾಗಿ ನೆನಪಿದೆ.

ಈ ಹುಡುಗಿಯು ಕ್ರಮೇಣ ಕೆನಡಕ್ಕೆ ವಲಸೆಹೋದಳು. ಆದರೆ, ಈಗಲೂ ರನ್‌ಕಾರ್ನ್‌ನಲ್ಲಿ ವಾಸಿಸುತ್ತಿರುವ ಮತ್ತು ಈಗ ಒಬ್ಬ ಸಾಕ್ಷಿಯಾಗಿರುವ ಅವಳ ಸ್ನೇಹಿತೆ ಅವಳೊಂದಿಗೆ ಪತ್ರಗಳ ಮೂಲಕ ಸಂಪರ್ಕವನ್ನು ಇಟ್ಟುಕೊಂಡಿದ್ದಳು. ಆ ಹುಡುಗಿಯು ಇತ್ತೀಚೆಗೆ ರನ್‌ಕಾರ್ನ್‌ನಲ್ಲಿರುವ ತನ್ನ ಸ್ನೇಹಿತೆಗೆ ಪತ್ರವನ್ನು ಬರೆದಾಗ, ತನ್ನನ್ನು ಎರಡು ಸಾಕ್ಷಿಗಳು ಭೇಟಿನೀಡಿದಾಗಿಯೂ ಅವರು ಉಪಯೋಗಿಸಿದ ಅಭಿವ್ಯಕ್ತಿಗಳು ತಾನು ಚಿಕ್ಕವಳಿರುವಾಗ ಐದು ನಿಮಿಷ ಫೋನೋಗ್ರಾಫ್‌ ಮೂಲಕ ಆಲಿಸಿದ ವಿಷಯವನ್ನು ತನ್ನ ನೆನಪಿಗೆ ತಂದದ್ದಾಗಿಯೂ ತಿಳಿಸಿದಳು. ಇದೇ ಸತ್ಯವೆಂಬುದನ್ನು ಅರಿತು ಅವಳು ಅದನ್ನು ಅಂಗೀಕರಿಸಿದಳು ಮತ್ತು ಈಗ ಯೆಹೋವನ ಸಮರ್ಪಿತ ಸೇವಕಿಯಾಗಿದ್ದಾಳೆ. ಅಷ್ಟುಮಾತ್ರವಲ್ಲದೆ, 60 ವರುಷಗಳ ಹಿಂದೆ ತನ್ನ ತಾಯಿಯ ಮನೆಯನ್ನು ಭೇಟಿನೀಡಿದ ಆ ಯುವ ವ್ಯಕ್ತಿಗೆ ತನ್ನ ಉಪಕಾರವನ್ನು ತಿಳಿಸುವಂತೆಯೂ ಕೇಳಿಕೊಂಡಿದ್ದಾಳೆ! ನಿಜವಾಗಿಯೂ, ಸತ್ಯದ ಬೀಜವು ಹೇಗೆ ಬೇರೂರಿ ಬೆಳೆಯುವವೆಂದು ನಮಗಾರಿಗೂ ತಿಳಿದಿಲ್ಲ.​—ಪ್ರಸಂಗಿ 11:6.

ಹೌದು, ಯೆಹೋವನ ಅಮೂಲ್ಯವಾದ ಸೇವೆಯಲ್ಲಿ ಕಳೆದ ನನ್ನ ಜೀವಿತವನ್ನು ನಾನು ಆಳವಾದ ಕೃತಜ್ಞತೆಯಿಂದ ನೋಡುತ್ತೇನೆ. 1931ರಲ್ಲಿ ನಾನು ಸಮರ್ಪಣೆ ಮಾಡಿದಂದಿನಿಂದ ನಾನು ಯೆಹೋವನ ಜನರ ಸಮ್ಮೇಳನದಲ್ಲಿ ಒಂದನ್ನೂ ತಪ್ಪಿಸಲಿಲ್ಲ. ನನಗೆ ಮತ್ತು ಐರೀನ್‌ಗೆ ನಮ್ಮದೇ ಆದ ಮಕ್ಕಳಿಲ್ಲವಾದರೂ, ನಮ್ಮ ಸ್ವರ್ಗೀಯ ತಂದೆಯಾದ ಯೆಹೋವನನ್ನು ಸೇವಿಸುತ್ತಿರುವ 150ಕ್ಕಿಂತಲೂ ಹೆಚ್ಚಿನ ಗಂಡು ಹೆಣ್ಣು ಮಕ್ಕಳನ್ನು ಆತ್ಮಿಕ ರೀತಿಯಲ್ಲಿ ಹೊಂದಿರಲು ನಾನು ಸಂತೋಷಿಸುತ್ತೇನೆ. ನನ್ನ ಪ್ರೀತಿಯ ಪತ್ನಿಯು ಬರೆದಿಟ್ಟಿದಂತೆ, ನಮ್ಮ ಸುಯೋಗಗಳು ನಮಗೆ ನಿಜವಾಗಿಯೂ ಅಪರಿಮಿತವಾದ ಆನಂದಗಳಾಗಿವೆ.

[ಪಾದಟಿಪ್ಪಣಿಗಳು]

^ ಪ್ಯಾರ. 9 “ನನ್ನ ಹೆತ್ತವರ ಹೆಜ್ಜೆ ಹಿಡಿದು ಹೋಗುವುದು,” ಎಂಬ ಹಿಲ್ಡ ಪ್ಯಾಜೆಟ್‌ರವರ ಜೀವನ ಕಥೆಯು, 1995, ಅಕ್ಟೋಬರ್‌ 1ರ ಕಾವಲಿನಬುರುಜು ಪುಟಗಳು 19-24ರಲ್ಲಿ ಕಂಡುಬರುತ್ತದೆ.

^ ಪ್ಯಾರ. 12 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಕನ್ನಡದಲ್ಲಿ ಲಭ್ಯವಿಲ್ಲ.

[ಪುಟ 24ರಲ್ಲಿರುವ ಚಿತ್ರ]

ಇಸವಿ 1900ರ ಆರಂಭದ ವರುಷಗಳಲ್ಲಿ ತಾಯಿಯವರು

[ಪುಟ 24, 25ರಲ್ಲಿರುವ ಚಿತ್ರ]

ಎಡಕ್ಕೆ: ಇಸವಿ 1940ರಲ್ಲಿ ಇಂಗ್ಲೆಂಡಿನ ಲೀಡ್ಸ್‌ನಲ್ಲಿ ಹಿಲ್ಡ ಪ್ಯಾಜೆಟ್‌, ನಾನು, ಐರೀನ್‌, ಮತ್ತು ಜೋಯ್ಸಿ ರೋವ್‌ಲೇ

[ಪುಟ 24, 25ರಲ್ಲಿರುವ ಚಿತ್ರ]

ಮೇಲೆ: ನಾನು ಮತ್ತು ಐರೀನ್‌ ನಮ್ಮ ಟ್ರೇಲರ್‌ ಮನೆಯ ಮುಂದೆ

[ಪುಟ 27ರಲ್ಲಿರುವ ಚಿತ್ರ]

ಇಸವಿ 1952ರಲ್ಲಿ ವೇಲ್ಸ್‌ನ ಕಾರ್ಡಿಫ್‌ನಲ್ಲಿ ಬಹಿರಂಗ ಭಾಷಣದ ಬಗ್ಗೆ ಪ್ರಚಾರಮಾಡುತ್ತಿರುವುದು