ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

‘ಇವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಸೊಲೊಮೋನನಿಗೆ ಇರಲಿಲ್ಲ’

‘ಇವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಸೊಲೊಮೋನನಿಗೆ ಇರಲಿಲ್ಲ’

‘ಇವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಸೊಲೊಮೋನನಿಗೆ ಇರಲಿಲ್ಲ’

ಈ ಪುಟದಲ್ಲಿ ಕಂಡುಬರುವ ಅಡವಿಯ ಹೂವುಗಳು, ದಕ್ಷಿಣ ಆಫ್ರಿಕದ ದಾರಿಮಗ್ಗುಲಲ್ಲಿರುವ ಸಾಮಾನ್ಯ ನೋಟವಾಗಿದೆ. ಅವುಗಳನ್ನು ಕೋಸ್‌ಮೋಸ್‌ ಎಂದು ಕರೆಯಲಾಗುತ್ತದೆ ಮತ್ತು ಅವುಗಳ ಮೂಲ, ಕರ್ಕಾಟಕ ವೃತ್ತ ಮತ್ತು ಮಕರ ವೃತ್ತದ ನಡುವಿನ ಪ್ರದೇಶಗಳಾಗಿವೆ. ಇಂಥ ಬಹುಕಾಂತಿಯ ಹೂವುಗಳು, ಯೇಸು ಕಲಿಸಿದ ಒಂದು ಪಾಠವನ್ನು ನಮ್ಮ ಮನಸ್ಸಿಗೆ ತರಬಹುದು. ಅವನ ಸಭಿಕರಲ್ಲಿ ಅನೇಕರು ಬಡವರಾಗಿದ್ದರು ಮತ್ತು ಅವರು ತಮ್ಮ ಶಾರೀರಿಕ ಅಗತ್ಯಗಳ, ತಮ್ಮ ಆಹಾರದ ಮತ್ತು ಬಟ್ಟೆಗಳ ವಿಷಯದಲ್ಲಿ ಚಿಂತಿತರಾಗಿದ್ದರು.

ಯೇಸು ಕೇಳಿದ್ದು: “ಇದಲ್ಲದೆ ನೀವು ಉಡುಪಿನ ವಿಷಯದಲ್ಲಿ ಚಿಂತೆಮಾಡುವದೇಕೆ? ಅಡವಿಯ ಹೂವುಗಳು ಬೆಳೆಯುವ ರೀತಿಯನ್ನು ಯೋಚಿಸಿ ತಿಳಿಯಿರಿ, ಅವು ದುಡಿಯುವದಿಲ್ಲ, ನೂಲುವದಿಲ್ಲ; ಆದಾಗ್ಯೂ ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲವೆಂದು ನಿಮಗೆ ಹೇಳುತ್ತೇನೆ.”​—ಮತ್ತಾಯ 6:​28, 29.

ಯೇಸುವಿನ ಮನಸ್ಸಿನಲ್ಲಿದ್ದಿರಬಹುದಾದ ವಿಶೇಷ ಜಾತಿಯ ಅಡವಿಯ ಹೂವುಗಳ ವಿಷಯದಲ್ಲಿ ಅನೇಕ ಹೇಳಿಕೆಗಳು ಮಾಡಲ್ಪಟ್ಟಿವೆ. ಹಾಗಿದ್ದರೂ, ಯೇಸು ಅದನ್ನು ಸಾಮಾನ್ಯ ಹುಲ್ಲಿಗೆ ಹೋಲಿಸುತ್ತಾನೆ. ಅವನು ಹೇಳುವುದು: “ಎಲೈ ಅಲ್ಪ ವಿಶ್ವಾಸಿಗಳೇ, ಈ ಹೊತ್ತು ಇದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೆ ದೇವರು ಹೀಗೆ ಉಡಿಸಿದರೆ ಅದಕ್ಕಿಂತ ಎಷ್ಟೋ ಹೆಚ್ಚಾಗಿ ನಿಮಗೆ ಉಡಿಸಿ ತೊಡಿಸುವನಲ್ಲವೇ”?​—ಮತ್ತಾಯ 6:​30.

ಕೋಸ್‌ಮೋಸ್‌ ಹೂವುಗಳು ಇಸ್ರಾಯೇಲ್‌ನಲ್ಲಿರದಿದ್ದರೂ, ಯೇಸು ಕಲಿಸಿಕೊಟ್ಟಂಥ ಪಾಠವನ್ನು ಅವು ಖಂಡಿತವಾಗಿಯೂ ಬೆಂಬಲಿಸುತ್ತವೆ. ಅವುಗಳನ್ನು ಹತ್ತಿರದಿಂದಾಗಲಿ ದೂರದಿಂದಾಗಲಿ ನೋಡಿದರೂ ಅವು ಅತಿ ಸುಂದರವಾಗಿವೆ ಮತ್ತು ಇವು ಛಾಯಾಗ್ರಾಹಕರ ಹಾಗೂ ಕಲಾಕಾರರ ಅಚ್ಚುಮೆಚ್ಚಿನ ವಿಷಯವಾಗಿದೆ. “ಈ ಹೂವುಗಳಲ್ಲಿ ಒಂದಕ್ಕಿರುವಷ್ಟು ಅಲಂಕಾರವು ಅರಸನಾದ ಸೊಲೊಮೋನನಿಗೆ ಸಹ ಅವನು ತನ್ನ ಸಕಲ ವೈಭವದಿಂದಿರುವಾಗಲೂ ಇರಲಿಲ್ಲ” ಎಂಬುದಾಗಿ ಯೇಸು ಹೇಳಿದಾಗ, ನಿಶ್ಚಯವಾಗಿಯೂ ಈ ಸಂಗತಿಯನ್ನು ಅತಿಶಯಿಸಿ ಹೇಳುತ್ತಿರಲಿಲ್ಲ.

ಇಂದು ನಮಗೆ ಇದರಿಂದ ಯಾವ ಪಾಠವಿದೆ? ಕಷ್ಟಕರವಾದ ಸಮಯದಲ್ಲೂ, ದಿನನಿತ್ಯದ ಆವಶ್ಯಕತೆಗಳನ್ನು ಪಡೆದುಕೊಳ್ಳುವಂತೆ ದೇವರು ತಮಗೆ ಸಹಾಯಮಾಡುತ್ತಾನೆಂದು ಆತನನ್ನು ಸೇವಿಸುವವರು ದೃಢಭರವಸೆಯಿಂದಿರಬಲ್ಲರು. ಯೇಸು ವಿವರಿಸಿದ್ದು: “ನೀವಾದರೋ ದೇವರ ರಾಜ್ಯಕ್ಕಾಗಿ ತವಕಪಡಿರಿ; ಇದರ ಕೂಡ ಅವೂ [ಅಗತ್ಯವಿರುವ ಆಹಾರ ಮತ್ತು ಬಟ್ಟೆ ಮುಂತಾದವುಗಳು] ನಿಮಗೆ ದೊರಕುವವು.” (ಲೂಕ 12:31) ಹೌದು, ದೇವರ ರಾಜ್ಯಕ್ಕಾಗಿ ತವಕಪಡುವ ಮೂಲಕ ನಿಜವಾದ ಪ್ರಯೋಜನಗಳು ದೊರಕುತ್ತವೆ. ಆದರೆ ದೇವರ ರಾಜ್ಯವೆಂದರೇನು ಮತ್ತು ಮಾನವಕುಲಕ್ಕಾಗಿ ಅದು ಏನನ್ನು ಮಾಡಲಿದೆ ಎಂಬುದು ನಿಮಗೆ ತಿಳಿದಿದೆಯೋ? ಬೈಬಲಿನ ಮೂಲಕ ಈ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವಂತೆ ಯೆಹೋವನ ಸಾಕ್ಷಿಗಳು ನಿಮಗೆ ಸಹಾಯಮಾಡಲು ಸಂತೋಷಿಸುತ್ತಾರೆ.