ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಧೂಪ ಸುಡುವುದು ಸತ್ಯಾರಾಧನೆಯ ಭಾಗವಾಗಿದೆಯೋ?

ಧೂಪ ಸುಡುವುದು ಸತ್ಯಾರಾಧನೆಯ ಭಾಗವಾಗಿದೆಯೋ?

ಧೂಪ ಸುಡುವುದು ಸತ್ಯಾರಾಧನೆಯ ಭಾಗವಾಗಿದೆಯೋ?

“ದೇವತೆಗಳು ಸುಗಂಧಗಳನ್ನು ಪ್ರೀತಿಸುತ್ತವೆ” ಎಂಬ ಹೇಳಿಕೆಯು ಪುರಾತನ ಐಗುಪ್ತ್ಯರಲ್ಲಿ ಸಾಮಾನ್ಯವಾಗಿತ್ತು. ಅವರಿಗೆ, ಧೂಪ ಸುಡುವುದು ಆರಾಧನೆಯ ಒಂದು ಅತ್ಯಾವಶ್ಯಕ ಭಾಗವಾಗಿತ್ತು. ದೇವತೆಗಳು ತಮ್ಮ ಹತ್ತಿರದಲ್ಲಿಯೇ ಇವೆಯೆಂಬ ನಂಬಿಕೆಯಿಂದ, ಐಗುಪ್ತ್ಯರು ತಮ್ಮ ದೇವಾಲಯಗಳಲ್ಲಿ, ಮನೆಯಲ್ಲಿದ್ದ ವೇದಿಗಳಲ್ಲಿ, ಹಾಗೂ ವ್ಯಾಪಾರದ ಸ್ಥಳದಲ್ಲಿ ದಿನಂಪ್ರತಿ ಧೂಪವನ್ನು ಸುಡುತ್ತಿದ್ದರು. ಇತರ ಜನಾಂಗಗಳಿಗೂ ಇಂತಹದ್ದೇ ಪದ್ಧತಿಗಳಿದ್ದವು.

ಧೂಪವೆಂದರೇನು? ಈ ಪದವು, ಹೊಗೆಯನ್ನು ಅಥವಾ ಸುಡಲ್ಪಡುವ ವಸ್ತುವನ್ನು ಸೂಚಿಸಸಾಧ್ಯವಿದೆ. ಇದು, ಲೋಬಾನ ಮತ್ತು ಸುಗಂಧದ್ರವ್ಯ ಮುಂತಾದ ಸುಗಂಧಿತ ಮೇಣ ಹಾಗೂ ಅಂಟುಗಳಿಂದ ಮಾಡಲ್ಪಡುತ್ತದೆ. ಇದನ್ನು ಕುಟ್ಟಿ, ಪುಡಿಮಾಡಿಲಾಗುತ್ತದೆ ಮತ್ತು ಅನೇಕ ಬಾರಿ ನಿರ್ದಿಷ್ಟ ಬಳಕೆಗನುಸಾರ, ಸುವಾಸನೆಗಾಗಿ ಅದಕ್ಕೆ ಸಂಬಾರ ಪದಾರ್ಥಗಳು, ಮರದ ತೊಗಟೆ, ಮತ್ತು ಹೂವುಗಳಂಥ ವಸ್ತುಗಳನ್ನು ಮಿಶ್ರಮಾಡಲಾಗುತ್ತದೆ.

ಪುರಾತನ ಕಾಲಗಳಲ್ಲಿ ಧೂಪವು ಎಷ್ಟು ಅಪೇಕ್ಷಣೀಯವಾಗಿತ್ತೆಂದರೆ ಅದು ಬೆಲೆಬಾಳುವ ವಸ್ತುವಾಗಿತ್ತು ಮತ್ತು ಅದರ ಸಾಮಗ್ರಿಗಳು ವ್ಯಾಪಾರದ ಮುಖ್ಯ ವಸ್ತುಗಳಾಗಿ ಪರಿಣಮಿಸಿದವು. ವ್ಯಾಪಾರೀ ಪ್ರಯಾಣ ತಂಡಗಳು ದೂರದ ದೇಶಗಳಿಂದ ಇವುಗಳನ್ನು ತರುತ್ತಿದ್ದರು. “ಹಾಲುಮಡ್ಡಿ, ಸುಗಂಧತೈಲ, ರಕ್ತಬೋಳ ಇವುಗಳನ್ನು ಹೇರಿಕೊಂಡು ಗಿಲ್ಯಾದಿನಿಂದ ಐಗುಪ್ತದೇಶಕ್ಕೆ ಪ್ರಯಾಣಮಾಡುತ್ತಾ ಬರುವ” ಇಷ್ಮಾಯೇಲ್ಯ ವ್ಯಾಪಾರಿಗಳಿಗೆ ಯಾಕೋಬನ ಕಿರಿಯ ಮಗನಾದ ಯೋಸೇಫನನ್ನು ಮಾರಲಾಯಿತೆಂಬದು ನೀವು ನೆನಪಿಸಿಕೊಳ್ಳಬಹುದು. (ಆದಿಕಾಂಡ 37:25) ಧೂಪಕ್ಕಾಗಿ ಬೇಡಿಕೆಯು ಎಷ್ಟು ಹೆಚ್ಚಾಯಿತ್ತೆಂದರೆ, ನಿಸ್ಸಂದೇಹವಾಗಿಯೂ ಧೂಪದ ವ್ಯಾಪಾರಿಗಳಿಂದ ಆರಂಭಿಸಲ್ಪಟ್ಟ ಲೋಬಾನ ವ್ಯಾಪಾರ ಮಾರ್ಗವು ಏಷ್ಯಾ ಮತ್ತು ಯುರೋಪಿನ ನಡುವಿನ ಸಂಚಾರ ದ್ವಾರವನ್ನು ತೆರೆಯಿತು.

ಇಂದು ಸಹ, ಅನೇಕ ಧರ್ಮಗಳ ಮತಸಂಬಂಧವಾದ ಆಚರಣೆ ಮತ್ತು ಸಂಸ್ಕಾರಗಳಲ್ಲಿ ಧೂಪವನ್ನು ಸುಡಲಾಗುತ್ತದೆ. ಅದಕ್ಕೆ ಕೂಡಿಕೆಯಾಗಿ, ಈಗ ಹೆಚ್ಚೆಚ್ಚು ಜನರು ತಮ್ಮ ಮನೆಗಳಲ್ಲಿ, ಧೂಪಗಳ ಸುವಾಸನೆಯನ್ನು ಆನಂದಿಸುವುದಕ್ಕಾಗಿ ಅದನ್ನು ಸುಡಲು ಬಯಸುತ್ತಾರೆ. ಆದರೆ ಕ್ರೈಸ್ತರು ಧೂಪ ಸುಡುವುದನ್ನು ಹೇಗೆ ವೀಕ್ಷಿಸಬೇಕು? ಆರಾಧನೆಯಲ್ಲಿ ದೇವರಿಗೆ ಇದು ಸ್ವೀಕಾರಯೋಗ್ಯವಾಗಿದೆಯೋ? ಈ ವಿಷಯದ ಕುರಿತು ಬೈಬಲ್‌ ಏನನ್ನು ತಿಳಿಸುತ್ತದೆ ಎಂಬುದನ್ನು ನಾವು ಪರೀಕ್ಷಿಸೋಣ.

‘ಯೆಹೋವನಿಗೆ ಮೀಸಲಾದ ಪದಾರ್ಥ’

ಪುರಾತನ ಇಸ್ರಾಯೇಲ್ಯರಲ್ಲಿ, ದೇವದರ್ಶನಗುಡಾರದ ಯಾಜಕ ಸೇವೆಯಲ್ಲಿ ಧೂಪ ಉರಿಸುವುದು ಮುಖ್ಯ ಪಾತ್ರವನ್ನು ವಹಿಸಿತು. ಮೆಕ್ಲಿಂಟಕ್‌ ಮತ್ತು ಸ್ಟ್ರಾಂಗ್‌ರವರ ವಿಶ್ವಕೋಶ ಹೀಗೆ ಹೇಳುತ್ತದೆ: “ಇಬ್ರಿಯ ಜನರ ಮಧ್ಯೆ, ಧೂಪ ಸುಡುವುದನ್ನು ಆರಾಧನೆಯ ಭಾಗವಾಗಿ ಅಥವಾ ಪವಿತ್ರ ಕಾಣಿಕೆಯಾಗಿ ಎಷ್ಟರ ಮಟ್ಟಿಗೆ ಪರಿಗಣಿಸಲ್ಪಡುತ್ತಿತ್ತೆಂದರೆ, ಆರಾಧನಾ ಉದ್ದೇಶಕ್ಕಲ್ಲದೆ ಬೇರೆಲ್ಲಿಯೂ ಅವರು ಧೂಪವನ್ನು ಉಪಯೋಗಿಸಿದ್ದನ್ನು ನಾವು ಎಲ್ಲಿಯೂ ಓದುವುದಿಲ್ಲ.”

“ನೀನು ಹಾಲುಮಡ್ಡಿ, ಗುಗ್ಗುಲ, ಗಂಧದಚೆಕ್ಕೆ ಎಂಬ ಪರಿಮಳದ್ರವ್ಯಗಳನ್ನೂ ಸ್ವಚ್ಛವಾದ ಧೂಪವನ್ನೂ ಸಮಭಾಗವಾಗಿ ತೆಗೆದುಕೊಂಡು ಸುವಾಸನೆಯುಳ್ಳ ಬುಕ್ಕಿಟ್ಟಾಗಿರುವಂತೆ ಸುಗಂಧದ್ರವ್ಯಕಾರರ ವಿದ್ಯೆಯ ಮೇರೆಗೆ ಕಲಿಸಿ ಉಪ್ಪು ಹಾಕಿ ದೇವರ ಸೇವೆಗೆ ಸ್ವಚ್ಛವಾದ ಧೂಪದ್ರವ್ಯವನ್ನು ಮಾಡಿಸಬೇಕು. ಅದರಲ್ಲಿ ಸ್ವಲ್ಪವನ್ನು ಪುಡಿಮಾಡಿಸಿ ದೇವದರ್ಶನದಗುಡಾರದೊಳಗೆ ಆಜ್ಞಾಶಾಸನಗಳ ಮಂಜೂಷದ ಎದುರಾಗಿ . . . ಇರಿಸಬೇಕು” ಎಂಬುದಾಗಿ ಹೇಳುತ್ತಾ ಮಿಶ್ರಣಮಾಡಿ, ದೇವದರ್ಶನಗುಡಾರದಲ್ಲಿ ಉರಿಸಬೇಕಾಗಿದ್ದ ನಾಲ್ಕು ಸಾಮಗ್ರಿಗಳನ್ನು ಯೆಹೋವ ದೇವರು ತಿಳಿಸಿದನು. (ವಿಮೋಚನಕಾಂಡ 30:​34-36) ಆಲಯದ ಉಪಯೋಗಕ್ಕಾಗಿ ಇತರ ಸಾಮಗ್ರಿಗಳನ್ನು ಯೆಹೂದಿ ರಬ್ಬಿಗಳಿಂದ ಸಮಯಾನಂತರ ಕೂಡಿಸಲಾಯಿತು ಎಂಬುದಾಗಿ ವಿದ್ವಾಂಸರು ತಿಳಿಸುತ್ತಾರೆ.

ದೇವದರ್ಶನಗುಡಾರದಲ್ಲಿ ಉರಿಸಲ್ಪಟ್ಟ ಧೂಪವು ಪವಿತ್ರವಾಗಿತ್ತು, ಕೇವಲ ದೇವರ ಆರಾಧನೆಯಲ್ಲಿ ಮಾತ್ರ ಉಪಯೋಗಿಸಲ್ಪಡುತ್ತಿತ್ತು. ಯೆಹೋವನು ಆಜ್ಞಾಪಿಸಿದ್ದು: “ನೀವು ಆ ಧೂಪದ್ರವ್ಯದ ಜೀನಸುಗಳ ಮೇರೆಗೆ ನಿಮ್ಮ ಸ್ವಂತಕ್ಕೋಸ್ಕರ ಧೂಪದ್ರವ್ಯವನ್ನು ಮಾಡಿಸಲೇಬಾರದು. ಅದು ಯೆಹೋವನ ಸೇವೆಗೆ ಮಾತ್ರ ಉಪಯೋಗಿಸಬೇಕಾದ ಮೀಸಲಾದ ಪದಾರ್ಥವೆಂದು ಭಾವಿಸಬೇಕು. ಸುವಾಸನೆಗೋಸ್ಕರ ಅಂಥದನ್ನು ಮಾಡಿಕೊಳ್ಳುವವನು ತನ್ನ ಕುಲದಿಂದ ತೆಗೆದು ಹಾಕಲ್ಪಡಬೇಕು.” (ವಿಮೋಚನಕಾಂಡ 30:​37, 38) ನೇಮಿತ ವೇದಿಯ ಮೇಲೆ, ದಿನಕ್ಕೆ ಎರಡಾವರ್ತಿ ಯಾಜಕರು ಧೂಪವನ್ನು ಸುಟ್ಟರು. (2 ಪೂರ್ವಕಾಲವೃತ್ತಾಂತ 13:11) ದೋಷಪರಿಹಾರಕ ದಿನದಂದು, ಮಹಾಯಾಜಕನು ಅತಿ ಪವಿತ್ರಸ್ಥಾನದಲ್ಲಿ ಧೂಪವನ್ನು ಸುಟ್ಟನು.​—ಯಾಜಕಕಾಂಡ 16:​12, 13.

ಎಲ್ಲಾ ಧೂಪ ಯಜ್ಞಗಳು ದೇವರಿಗೆ ಸ್ವೀಕಾರಯೋಗ್ಯವಾಗಿರಲಿಲ್ಲ. ಯಾಜಕರಲ್ಲದವರು ದುರಹಂಕಾರದಿಂದ ಯಾಜಕರಂತೆ ಧೂಪವನ್ನು ಅರ್ಪಿಸಿದಾಗ ಆತನು ಅವರನ್ನು ಶಿಕ್ಷಿಸಿದನು. (ಅರಣ್ಯಕಾಂಡ 16:​16-18, 35-40; 2 ಪೂರ್ವಕಾಲವೃತ್ತಾಂತ 26:​16-20) ಯೆಹೂದಿ ಜನಾಂಗವು ಯೆಹೋವನಿಗೆ ಧೂಪ ಅರ್ಪಿಸಿ, ಅದೇ ಸಮಯದಲ್ಲಿ ಸುಳ್ಳು ಆರಾಧನಾ ಕೃತ್ಯಗಳಲ್ಲಿ ಭಾಗಿಗಳಾಗಿದ್ದಾಗ ಮತ್ತು ತಮ್ಮ ಕೈಗಳನ್ನು ರಕ್ತಾಪರಾಧದಿಂದ ಮಲಿನಮಾಡಿಕೊಂಡಿದ್ದಾಗ, ಅವರ ಧೂಪ ಯಜ್ಞವು ದೇವರಿಗೆ ಕೋಪವನ್ನುಂಟುಮಾಡಿತು. ಅವರ ಕಪಟತನವು ಯೆಹೋವನು ಹೀಗೆ ಹೇಳುವಂತೆ ನಡಿಸಿತು: “ಧೂಪವು ನನಗೆ ಅಸಹ್ಯ.” (ಯೆಶಾಯ 1:​13, 15) ಯೆಹೋವನು ವಿಧಿಸಿದಂಥ ರೀತಿಯ ಆರಾಧನೆಯ ಬಗ್ಗೆ ಇಸ್ರಾಯೇಲ್ಯರು ಎಷ್ಟು ನಿರ್ಲಕ್ಷ್ಯತೆಯನ್ನು ತೋರಿಸಿದರೆಂದರೆ ಅವರು ಆಲಯದ ಬಾಗಲುಗಳನ್ನು ಮುಚ್ಚಿ, ಇತರ ವೇದಿಗಳಲ್ಲಿ ಧೂಪವನ್ನು ಸುಡತೊಡಗಿದರು. (2 ಪೂರ್ವಕಾಲವೃತ್ತಾಂತ 28:24, 25) ಕೆಲವು ವರುಷಗಳ ನಂತರ, ಪವಿತ್ರವಾದ ಈ ಧೂಪವನ್ನು ಸುಳ್ಳು ದೇವರುಗಳ ಭ್ರಷ್ಟ ಆರಾಧನೆಯಲ್ಲಿಯೂ ಉಪಯೋಗಿಸಲಾಯಿತು. ಅಂಥ ಪದ್ಧತಿಗಳು ಯೆಹೋವನಿಗೆ ಅಸಹ್ಯಕರವಾಗಿದ್ದವು.​—ಯೆಹೆಜ್ಕೇಲ 16:​2, 17, 18.

ಧೂಪ ಮತ್ತು ಆದಿಕ್ರೈಸ್ತರು

ಸಾ.ಶ. 33ರಲ್ಲಿ ಕ್ರಿಸ್ತನು ಹೊಸ ಒಡಂಬಡಿಕೆಯನ್ನು ಸ್ಥಾಪಿಸಿದಾಗ, ಪವಿತ್ರ ಧೂಪವನ್ನು ಅರ್ಪಿಸುವಂತೆ ಯಾಜಕರಿಗೆ ನೀಡಿದ ಆಜ್ಞೆಯನ್ನು ಸೇರಿಸಿ ನಿಯಮದೊಡಂಬಡಿಕೆಯು ಅಂತ್ಯಗೊಂಡಿತು. (ಕೊಲೊಸ್ಸೆ 2:​14) ಆದಿಕ್ರೈಸ್ತರು, ಧಾರ್ಮಿಕ ಉದ್ದೇಶಗಳಿಗಾಗಿ ಧೂಪವನ್ನು ಸುಟ್ಟರು ಎಂಬ ಯಾವ ದಾಖಲೆಯೂ ಇಲ್ಲ. ಇದರ ಕುರಿತಾಗಿ, ಮೆಕ್ಲಿಂಟಕ್‌ ಮತ್ತು ಸ್ಟ್ರಾಂಗ್‌ರವರ ವಿಶ್ವಕೋಶ ಹೀಗೆ ಹೇಳುತ್ತದೆ: “[ಆದಿಕ್ರೈಸ್ತರು] ಧೂಪವನ್ನು ಉಪಯೋಗಿಸಲಿಲ್ಲ ಎಂಬುದು ನಿಶ್ಚಯ. ವಾಸ್ತವದಲ್ಲಿ ಇದರ ಉಪಯೋಗವು ವಿಧರ್ಮಿ ಸಂಪ್ರದಾಯದ ಒಂದು ಗುರುತಾಗಿತ್ತು. . . . ಭಕ್ತನೊಬ್ಬನು ವಿಧರ್ಮಿ ವೇದಿಯ ಮೇಲೆ ಧೂಪದ ಕೆಲವು ಕಣಗಳನ್ನು ಎಸೆಯುವುದು, ಆರಾಧನೆಯ ಒಂದು ಕೃತ್ಯವಾಗಿತ್ತು.”

ರೋಮನ್‌ ಸಾಮ್ರಾಟನ “ದೇವತ್ವ”ವನ್ನು ಅಂಗೀಕರಿಸುವ ಸಲುವಾಗಿ ಧೂಪವನ್ನು ಸುಡಲಿಕ್ಕಾಗಿಯೂ ಆದಿಕ್ರೈಸ್ತರು ಒಪ್ಪಲಿಲ್ಲ. ಅದರ ನಿಮಿತ ಅವರು ಕೊಲ್ಲಲ್ಪಡುವ ಸಾಧ್ಯತೆಯಿತ್ತಾದರೂ ಅವರದನ್ನು ಮಾಡಲಿಲ್ಲ. (ಲೂಕ 4:8; 1 ಕೊರಿಂಥ 10:​14, 20) ಆ ದಿನಗಳಲ್ಲಿ ಧೂಪವು ವಿಗ್ರಹಾರಾಧನೆಯಲ್ಲಿ ಉಪಯೋಗಿಸಲ್ಪಡುತ್ತಿದ್ದರಿಂದ ಆದಿಕ್ರೈಸ್ತರು ಧೂಪದ ವ್ಯಾಪಾರದಲ್ಲಿಯೂ ಭಾಗಿಗಳಾಗುತ್ತಿರಲಿಲ್ಲ ಎಂಬುದು ಆಶ್ಚರ್ಯದ ಸಂಗತಿಯೇನಲ್ಲ.

ಇಂದು ಧೂಪ ಸುಡುವಿಕೆ

ಇಂದು ಯಾವ ಉದ್ದೇಶಗಳಿಗಾಗಿ ಧೂಪವು ಉಪಯೋಗಿಸಲ್ಪಡುತ್ತದೆ? ಕ್ರೈಸ್ತಪ್ರಪಂಚದ ಅನೇಕ ಚರ್ಚುಗಳಲ್ಲಿ, ಸಮಾರಂಭಗಳಲ್ಲಿ ಮತ್ತು ಪೂಜಾವಿಧಾನದಲ್ಲಿ ಧೂಪವನ್ನು ಅರ್ಪಿಸಲಾಗುತ್ತದೆ. ಏಷ್ಯಾದಲ್ಲಿರುವ ಅನೇಕ ಕುಟುಂಬಗಳು, ತಮ್ಮ ದೇವರುಗಳನ್ನು ಗೌರವಿಸಲು ಮತ್ತು ಸತ್ತವರನ್ನು ಸಂರಕ್ಷಿಸಲು, ದೇವಾಲಯಗಳಲ್ಲಿ ಅಥವಾ ಅವರ ಮನೆಯಲ್ಲಿರುವ ವೇದಿಗಳ ಮುಂದೆ ಧೂಪವನ್ನು ಸುಡುತ್ತಾರೆ. ಧಾರ್ಮಿಕ ಆಚಾರಗಳಲ್ಲಿ, ಕೋಣೆಯನ್ನು ಸುವಾಸನೆಯಿಂದ ತುಂಬಿಸುವ, ಗುಣಪಡಿಸುವ, ಶುದ್ಧೀಕರಿಸುವ, ಮತ್ತು ಸಂರಕ್ಷಿಸುವ ಮುಂತಾದ ಅನೇಕ ಉದ್ದೇಶಗಳಿಗಾಗಿ ಧೂಪವನ್ನು ಉಪಯೋಗಿಸಲಾಗುತ್ತದೆ.

ಧರ್ಮದಲ್ಲಿ ನಂಬಿಕೆಯಿಲ್ಲದ ಜನರ ಮಧ್ಯೆಯೂ ಇತ್ತೀಚೆಗೆ ಧೂಪವು ಬಹಳ ಪ್ರಖ್ಯಾತಿಪಡೆದಿದೆ. ಕೆಲವರು ಧ್ಯಾನಮಾಡುವಾಗ ಧೂಪವನ್ನು ಸುಡುತ್ತಾರೆ. ಭೌತಿಕ ಲೋಕಕ್ಕೆ ಮೀರಿರುವ “ನವಿರಾದ ಮಟ್ಟಗಳು” ಮತ್ತು “ವಿಶೇಷ ಶಕ್ತಿಯನ್ನು” ಪಡೆಯಲು, ಧೂಪವನ್ನು ಉಪಯೋಗಿಸಬೇಕು ಎಂಬುದಾಗಿ ಒಂದು ಮಾರ್ಗದರ್ಶಿ ಪುಸ್ತಕವು ತಿಳಿಸುತ್ತದೆ. ಅಷ್ಟುಮಾತ್ರವಲ್ಲದೆ, ಜೀವಿತದ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು, “ಆತ್ಮ ಜೀವಿಗಳ” ಸಂಪರ್ಕವನ್ನು ಒಳಗೊಂಡ ಧೂಪ ಉರಿಸುವ ಸಂಸ್ಕಾರಗಳನ್ನು ಸಹ ಆ ಪುಸ್ತಕವು ಉತ್ತೇಜಿಸುತ್ತದೆ. ಅಂಥ ಪದ್ಧತಿಗಳನ್ನು ಕ್ರೈಸ್ತರು ಅನುಸರಿಸಬಹುದೋ?

ಶುದ್ಧ ಆರಾಧನೆಯೊಂದಿಗೆ ಸುಳ್ಳು ಆರಾಧನಾಪದ್ಧತಿಯನ್ನು ಕಲಬೆರಕೆ ಮಾಡುವವರನ್ನು ಯೆಹೋವನು ಬಲವಾಗಿ ಖಂಡಿಸುತ್ತಾನೆ. ಸುಳ್ಳುಧರ್ಮದ ಅಶುದ್ಧವಾದ ಪ್ರಭಾವದಿಂದ ದೂರವಿರುವಂತೆ ಎಚ್ಚರಿಸುತ್ತಾ, ಅಪೊಸ್ತಲ ಪೌಲನು ಯೆಶಾಯನ ಪ್ರವಾದನೆಯನ್ನು ಉಲ್ಲೇಖಿಸಿ, ಅದನ್ನು ಕ್ರೈಸ್ತರಿಗೆ ಅನ್ವಯಿಸುತ್ತಾನೆ. ಅವನು ಬರೆದದ್ದು: “ಅನ್ಯಜನರ ಮಧ್ಯದಲ್ಲಿಂದ ಹೊರಟು ಬಂದು ಪ್ರತ್ಯೇಕವಾಗಿರಿ; ಅಶುದ್ಧವಾದ ಯಾವದನ್ನೂ ಮುಟ್ಟದಿರಿ ಎಂದು ಕರ್ತನು [ಯೆಹೋವನು, NW] ಹೇಳುತ್ತಾನೆ.” (2 ಕೊರಿಂಥ 6:​17; ಯೆಶಾಯ 52:​11) ಸುಳ್ಳು ಆರಾಧನೆ ಅಥವಾ ಮಾಟಮಂತ್ರಕ್ಕೆ ಸಂಬಂಧಪಟ್ಟಿರುವ ಯಾವುದೇ ವಿಷಯದಿಂದ ದೂರವಿರುವಂತೆ ಸತ್ಯ ಕ್ರೈಸ್ತರು ಜಾಗ್ರತೆಯಿಂದಿರಬೇಕು.​—ಯೋಹಾನ 4:​24.

ಧಾರ್ಮಿಕ ಸಮಾರಂಭಗಳಲ್ಲಿ ಮತ್ತು ಪ್ರೇತವ್ಯವಹಾರದಲ್ಲಿ ಧೂಪವನ್ನು ಉಪಯೋಗಿಸಲಾಗುತ್ತದೆ ಎಂದ ಮಾತ್ರಕ್ಕೆ ಎಲ್ಲಾ ರೀತಿಯ ಧೂಪ ಸುಡುವಿಕೆಯು ತಪ್ಪಾಗಿದೆಯೋ? ಹಾಗೇನಿಲ್ಲ. ಒಬ್ಬ ವ್ಯಕ್ತಿಯು, ಸುವಾಸನೆಯನ್ನು ಆನಂದಿಸುವ ಉದ್ದೇಶದಿಂದ ತನ್ನ ಮನೆಯಲ್ಲಿ ಧೂಪವನ್ನು ಉರಿಸಲು ಬಯಸಬಹುದು. (ಜ್ಞಾನೋಕ್ತಿ 27:9) ಹಾಗಿದ್ದರೂ, ಧೂಪವನ್ನು ಉರಿಸಬೇಕೋ ಬೇಡವೋ ಎಂಬುದನ್ನು ನಿರ್ಣಯಿಸುವ ಮುಂಚೆ ಒಬ್ಬ ಕ್ರೈಸ್ತನು ಕೆಲವೊಂದು ವಿಷಯಗಳನ್ನು ಪರಿಗಣಿಸಬೇಕು. ನೀವು ವಾಸಿಸುತ್ತಿರುವ ವಠಾರದಲ್ಲಿರುವವರು ಧೂಪದ ಉಪಯೋಗವನ್ನು ಸುಳ್ಳು ಧಾರ್ಮಿಕ ಪದ್ಧತಿಯೊಂದಿಗೆ ಜೊತೆಗೂಡಿಸುತ್ತಾರೋ? ನಿಮ್ಮ ಸಮುದಾಯದಲ್ಲಿ, ಧೂಪದ ಉಪಯೋಗವನ್ನು ಸಾಮಾನ್ಯವಾಗಿ ಪ್ರೇತವ್ಯವಹಾರಕ್ಕೆ ಸಂಬಂಧಿಸಿದ ಸಂಪ್ರದಾಯಗಳೊಂದಿಗೆ ಜೋಡಿಸಲಾಗಿದೆಯೋ? ಅಥವಾ ಅದು ಸಾಮಾನ್ಯವಾಗಿ ಧಾರ್ಮಿಕವಲ್ಲದ ಉದ್ದೇಶಗಳಿಗಾಗಿ ಉಪಯೋಗಿಸಲ್ಪಡುತ್ತದೋ?

ಒಬ್ಬ ವ್ಯಕ್ತಿಯು ಧೂಪವನ್ನು ಸುಡಲು ಆಯ್ಕೆಮಾಡುವುದಾದರೆ, ಅವನು ಆ ನಿರ್ಣಯವನ್ನು ಮಾಡುವ ಮೊದಲು, ಅವನ ಮನಸ್ಸಾಕ್ಷಿಯನ್ನು ಮತ್ತು ಇತರರ ಭಾವನೆಗಳನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು. (1 ಕೊರಿಂಥ 10:​29) ಅಪೊಸ್ತಲ ಪೌಲನು ರೋಮಾಪುರದವರಿಗೆ ಬರೆದ ಮಾತುಗಳು ಈ ವಿಷಯಕ್ಕೆ ಅನ್ವಯಿಸುತ್ತವೆ. ಅವನು ಬರೆದದ್ದು: “ನಾವು ಸಮಾಧಾನಕ್ಕೂ ಪರಸ್ಪರ ಭಕ್ತಿವೃದ್ಧಿಗೂ ಅನುಕೂಲವಾಗಿರುವವುಗಳನ್ನು ಸಾಧಿಸಿಕೊಳ್ಳೋಣ. ದೇವರು ಕಟ್ಟಿದ್ದನ್ನು ನೀನು ಆಹಾರದ ನಿಮಿತ್ತವಾಗಿ ಕೆಡವಬೇಡ. ಎಲ್ಲಾ ಪದಾರ್ಥಗಳೂ ಶುದ್ಧವೇ; ಆದರೆ ತಿಂದು ಮತ್ತೊಬ್ಬರಿಗೆ ವಿಘ್ನವನ್ನುಂಟುಮಾಡುವದು ಕೆಟ್ಟದ್ದು. ಮಾಂಸ ತಿನ್ನುವದನ್ನಾಗಲಿ ದ್ರಾಕ್ಷಾರಸ ಕುಡಿಯುವದನ್ನಾಗಲಿ ನಿನ್ನ ಸಹೋದರನಿಗೆ ಅಡ್ಡಿಯನ್ನುಂಟುಮಾಡುವ ಬೇರೆ ಯಾವದನ್ನಾಗಲಿ ಬಿಟ್ಟುಬಿಡುವದೇ ಒಳ್ಳೇದು.”​—ರೋಮಾಪುರ 14:​19-21.

“ಧೂಪದಂತೆ” ಇರುವ ಪ್ರಾರ್ಥನೆಗಳು

ಇಸ್ರಾಯೇಲ್ಯರಲ್ಲಿ ಧೂಪವನ್ನು ಅರ್ಪಿಸುವುದು, ಸೂಕ್ತವಾಗಿಯೇ ದೇವರಿಂದ ಆಲಿಸಲ್ಪಟ್ಟ ಪ್ರಾರ್ಥನೆಗಳನ್ನು ಸೂಚಿಸುತ್ತದೆ. ಆದುದರಿಂದ, ಕೀರ್ತನೆಗಾರನಾದ ದಾವೀದನು ಯೆಹೋವನಿಗೆ ಹೀಗೆಂದು ಹಾಡಿದನು: “ನನ್ನ ಪ್ರಾರ್ಥನೆಯು ಧೂಪದಂತೆ . . . ನಿನಗೆ ಸಮರ್ಪಕವಾಗಲಿ.”​—ಕೀರ್ತನೆ 141:2.

ನಂಬಿಗಸ್ತ ಇಸ್ರಾಯೇಲ್ಯರು ಧೂಪ ಅರ್ಪಿಸುವುದನ್ನು ಒಂದು ಅರ್ಥವಿಲ್ಲದ ಸಂಪ್ರದಾಯವಾಗಿ ಪರಿಗಣಿಸುತ್ತಿರಲಿಲ್ಲ. ಅವರು, ಯೆಹೋವನಿಂದ ತಿಳಿಸಲ್ಪಟ್ಟ ರೀತಿಯಲ್ಲಿ ಧೂಪವನ್ನು ತಯಾರಿಸಿ, ಅದನ್ನು ಉರಿಸಲು ಬಹಳ ಜಾಗರೂಕತೆಯನ್ನು ವಹಿಸಿದರು. ಇಂದಿರುವ ಕ್ರೈಸ್ತರು, ಅಕ್ಷರಾರ್ಥವಾದ ಧೂಪವನ್ನು ಉಪಯೋಗಿಸುವ ಬದಲಾಗಿ ನಮ್ಮ ಸ್ವರ್ಗೀಯ ತಂದೆಗೆ ಆಳವಾದ ಗಣ್ಯತೆಯನ್ನು ಮತ್ತು ಗೌರವವನ್ನು ಪ್ರತಿಬಿಂಬಿಸುವ ಪ್ರಾರ್ಥನೆಗಳನ್ನು ಸಲ್ಲಿಸುತ್ತಾರೆ. ಆಲಯದ ಯಾಜಕರಿಂದ ಅರ್ಪಿಸಲ್ಪಡುತ್ತಿದ್ದ ಸುಗಂಧಭರಿತವಾದ ಧೂಪದಂತೆ, “ಶಿಷ್ಟರ ಬಿನ್ನಪ [“ಪ್ರಾರ್ಥನೆ,” NW] ಆತನಿಗೆ ಒಪ್ಪಿತ” ಎಂಬುದಾಗಿ ದೇವರ ವಾಕ್ಯವು ನಮಗೆ ಆಶ್ವಾಸನೆ ನೀಡುತ್ತದೆ.​—ಜ್ಞಾನೋಕ್ತಿ 15:8.

[ಪುಟ 29ರಲ್ಲಿರುವ ಚಿತ್ರಗಳು]

ದೇವದರ್ಶನಗುಡಾರ ಮತ್ತು ಆಲಯದಲ್ಲಿ ಉರಿಸಲ್ಪಟ್ಟ ಧೂಪವು ಪವಿತ್ರವಾಗಿತ್ತು

[ಪುಟ 30ರಲ್ಲಿರುವ ಚಿತ್ರ]

ಧ್ಯಾನಮಾಡುವ ವಿಷಯಕ್ಕೆ ಸಂಬಂಧಿಸಿ ಧೂಪವನ್ನು ಉರಿಸುವುದು ಕ್ರೈಸ್ತರಿಗೆ ಯೋಗ್ಯವಾಗಿದೆಯೋ?