ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ತುಂಬ ರೋಗಿಷ್ಠವಾದ ಅಥವಾ ವಯಸ್ಸಾದ ಒಂದು ಸಾಕುಪ್ರಾಣಿಯನ್ನು ಕೊಲ್ಲುವುದು ತಪ್ಪಾಗಿದೆಯೋ?

ಬಹುತೇಕ ಜನರು ಬೇರೆ ಬೇರೆ ಪ್ರಾಣಿಗಳನ್ನು ಆಸಕ್ತಿಯ ಹಾಗೂ ಆನಂದದ ಮೂಲವಾಗಿ ಪರಿಗಣಿಸುತ್ತಾರೆ. ಚೆನ್ನಾಗಿ ಪಳಗಿಸಲ್ಪಟ್ಟ ಕೆಲವು ಪ್ರಾಣಿಗಳು ಸಾಕುಪ್ರಾಣಿಗಳೋಪಾದಿ ಒಳ್ಳೆಯ ಸಂಗಾತಿಗಳಾಗುತ್ತವೆ. ಉದಾಹರಣೆಗೆ, ನಾಯಿಗಳು ತಮ್ಮ ಧಣಿಗಳಿಗೆ ಸಂಪೂರ್ಣ ವಿಧೇಯತೆ ಹಾಗೂ ಪ್ರೀತಿಯನ್ನು ಕೊಡುವುದಕ್ಕೆ ತುಂಬ ಪ್ರಸಿದ್ಧವಾಗಿವೆ. ಹೀಗೆ, ಅಂಥ ಒಂದು ಸಾಕುಪ್ರಾಣಿಯೊಂದಿಗೆ, ಅದರಲ್ಲೂ ವಿಶೇಷವಾಗಿ ಅನೇಕ ವರ್ಷಗಳಿಂದ ಜೊತೆಗಿದ್ದಂಥ ಒಂದು ಪ್ರಾಣಿಯೊಂದಿಗೆ ಜನರಿಗಿರಬಹುದಾದ ಆಪ್ತತೆಯನ್ನು ಸುಲಭವಾಗಿ ಅರ್ಥಮಾಡಿಕೊಳ್ಳಸಾಧ್ಯವಿದೆ.

ಆದರೂ, ಅಧಿಕಾಂಶ ಸಾಕುಪ್ರಾಣಿಗಳ ಜೀವನಾಯುಷ್ಯವು ತುಂಬ ದೀರ್ಘವಾದದ್ದಾಗಿರುವುದಿಲ್ಲ. ಸಾಮಾನ್ಯವಾಗಿ ನಾಯಿಗಳು 10ರಿಂದ 15 ವರ್ಷಗಳ ವರೆಗೆ ಬದುಕಬಹುದು; ಬೆಕ್ಕುಗಳು ಸಹ ಅಷ್ಟೇ ಕಾಲಾವಧಿಯ ವರೆಗೆ ಬದುಕುತ್ತವೆ​—ಇದು ಹೆಚ್ಚಾಗಿ ಅವು ಯಾವ ವರ್ಗಕ್ಕೆ ಸೇರಿವೆ ಎಂಬುದರ ಮೇಲೆ ಹೊಂದಿಕೊಂಡಿರುತ್ತದೆ. ತುಂಬ ವಯಸ್ಸಾದ ಮೇಲೆ ಸಾಕುಪ್ರಾಣಿಗಳು ರೋಗಕ್ಕೆ ತುತ್ತಾಗಬಹುದು ಅಥವಾ ದೈಹಿಕ ಅಸಾಮರ್ಥ್ಯಗಳನ್ನು ಹೊಂದಬಹುದು. ಮತ್ತು ಇದು, ಈ ಪ್ರಾಣಿಗಳು ಎಳೆಯವುಗಳಾಗಿದ್ದಾಗ ಮತ್ತು ಚಟುವಟಿಕೆಯಿಂದ ಓಡಾಡಿಕೊಂಡಿದ್ದಾಗಿನ ದಿನಗಳನ್ನು ನೆನಪಿಸಿಕೊಳ್ಳುವ ಅವುಗಳ ಧಣಿಗಳಿಗೆ ತುಂಬ ದುಃಖವನ್ನು ತಂದೊಡ್ಡಬಹುದು. ಇಂಥ ಪ್ರಾಣಿಗಳ ದುರವಸ್ಥೆಯನ್ನು ಕೊನೆಗಾಣಿಸುವುದು, ಅಂದರೆ ಅವುಗಳನ್ನು ಕೊಲ್ಲುವುದು ತಪ್ಪಾಗಿರುತ್ತದೋ?

ಪ್ರಾಣಿಗಳೊಂದಿಗೆ ವ್ಯವಹರಿಸುವಾಗ ಕ್ರೈಸ್ತನೊಬ್ಬನು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿ ಕ್ರಿಯೆಗೈಯಲು ಬಯಸುತ್ತಾನೆ. ಅವುಗಳೊಂದಿಗೆ ಕ್ರೂರವಾಗಿ ವರ್ತಿಸುವುದು ಖಂಡಿತವಾಗಿಯೂ ದೇವರ ಚಿತ್ತಕ್ಕೆ ವಿರುದ್ಧವಾದದ್ದಾಗಿದೆ. ಏಕೆಂದರೆ ಆತನ ವಾಕ್ಯವು ತಿಳಿಸುವುದು: “ಶಿಷ್ಟನು ತನ್ನ ದನದ [“ಸಾಕುಪ್ರಾಣಿಯ,” NW] ಕ್ಷೇಮವನ್ನು ಲಕ್ಷಿಸುತ್ತಾನೆ.” (ಜ್ಞಾನೋಕ್ತಿ 12:10) ಆದರೂ, ದೇವರು ಮನುಷ್ಯರನ್ನು ಹೇಗೆ ವೀಕ್ಷಿಸುತ್ತಾನೋ ಹಾಗೆಯೇ ಪ್ರಾಣಿಗಳನ್ನೂ ವೀಕ್ಷಿಸುತ್ತಾನೆ ಎಂಬುದನ್ನು ಇದು ಅರ್ಥೈಸುವುದಿಲ್ಲ. ದೇವರು ಮಾನವರನ್ನು ಸೃಷ್ಟಿಸಿದಾಗ, ಅವರ ಹಾಗೂ ಪ್ರಾಣಿಗಳ ನಡುವೆ ಸ್ಪಷ್ಟವಾದ ಒಂದು ಭಿನ್ನತೆಯಿದೆ ಎಂಬುದನ್ನು ತೋರಿಸಿದನು. ಉದಾಹರಣೆಗೆ, ಮಾನವರಿಗೆ ಆತನು ನಿತ್ಯಜೀವದ ನಿರೀಕ್ಷೆಯನ್ನು ಕೊಟ್ಟನು, ಆದರೆ ಪ್ರಾಣಿಗಳಿಗೆಂದೂ ಈ ನಿರೀಕ್ಷೆಯನ್ನು ಕೊಡಲಿಲ್ಲ. (ರೋಮಾಪುರ 6:23; 2 ಪೇತ್ರ 2:12) ಆತನು ಸೃಷ್ಟಿಕರ್ತನಾಗಿರುವುದರಿಂದ, ಮಾನವರು ಹಾಗೂ ಪ್ರಾಣಿಗಳ ನಡುವಿನ ಯೋಗ್ಯವಾದ ಸಂಬಂಧವನ್ನು ಸೂಚಿಸಲು ಆತನಿಗೆ ಹಕ್ಕಿದೆ.

ಆ ಸಂಬಂಧವು ಏನಾಗಿದೆ ಎಂಬುದನ್ನು ಆದಿಕಾಂಡ 1:28 ನಮಗೆ ತಿಳಿಯಪಡಿಸುತ್ತದೆ. ಪ್ರಥಮ ಮಾನವರಿಗೆ ದೇವರು ಹೇಳಿದ್ದು: “ಸಮುದ್ರದ ಮೀನುಗಳ ಮೇಲೆಯೂ ಆಕಾಶದ ಪಕ್ಷಿಗಳ ಮೇಲೆಯೂ ಭೂಮಿಯಲ್ಲಿ ಚಲಿಸುವ ಎಲ್ಲಾ ಜೀವಿಗಳ ಮೇಲೆಯೂ ದೊರೆತನಮಾಡಿರಿ.” ಅದೇ ರೀತಿಯಲ್ಲಿ ಕೀರ್ತನೆ 8:​6-8 ಹೇಳುವುದು: “ನೀನು [ದೇವರು] ಸೃಷ್ಟಿಸಿದ ಎಲ್ಲಾ ವಸ್ತುಗಳ ಮೇಲೆ ಪ್ರಭುತ್ವವನ್ನು ಅವನಿಗೆ [ಮನುಷ್ಯನಿಗೆ] ಅನುಗ್ರಹಿಸಿದಿ; ನೀನು ಎಲ್ಲಾ ಕುರಿದನಗಳನ್ನು ಮಾತ್ರವೇ ಅಲ್ಲದೆ ಕಾಡುಮೃಗಗಳು, ಆಕಾಶಪಕ್ಷಿಗಳು, ಸಮುದ್ರದ ಮೀನುಗಳು . . . ಇದೆಲ್ಲವನ್ನೂ ಅವನಿಗೆ ಅಧೀನಮಾಡಿದ್ದೀಯಲ್ಲವೇ.”

ಮನುಷ್ಯನು ಪ್ರಾಣಿಗಳನ್ನು ಯೋಗ್ಯ ರೀತಿಯಲ್ಲಿ ಉಪಯೋಗಿಸಸಾಧ್ಯವಿದೆ ಮತ್ತು ಅವುಗಳನ್ನು ಕೊಲ್ಲಸಾಧ್ಯವಿದೆ ಎಂಬುದನ್ನು ದೇವರು ಸ್ಪಷ್ಟಪಡಿಸಿದನು. ದೃಷ್ಟಾಂತಕ್ಕಾಗಿ, ಅವುಗಳ ಚರ್ಮವನ್ನು ವಸ್ತ್ರವಾಗಿ ಉಪಯೋಗಿಸಸಾಧ್ಯವಿದೆ. ನೋಹನ ದಿನದ ಜಲಪ್ರಳಯದ ಬಳಿಕ, ಮಾನವರು ಪ್ರಾಣಿಗಳ ಮಾಂಸವನ್ನು ತಿನ್ನುವಂತೆಯೂ ದೇವರು ಅನುಮತಿಯನ್ನು ಕೊಟ್ಟನು. ಇದು ಮೂಲತಃ ಅವರಿಗೆ ಕೊಡಲ್ಪಟ್ಟಿದ್ದ ಸಸ್ಯಾಹಾರಕ್ಕೆ ಬದಲಿಯಾದ ಆಹಾರ ವ್ಯವಸ್ಥೆಯಾಗಿತ್ತು.​—ಆದಿಕಾಂಡ 3:21; 4:4; 9:3.

ಆದರೆ ಇದು, ಕ್ರೀಡೆಗಾಗಿ ಪ್ರಾಣಿಗಳನ್ನು ಅನಿಯಂತ್ರಿತವಾಗಿ ಕೊಲ್ಲುವ ಅಧಿಕಾರವನ್ನು ನೀಡುವುದಿಲ್ಲ. ಆದಿಕಾಂಡ 10:9ರಲ್ಲಿ (NW) ಬೈಬಲು ನಿಮ್ರೋದನನ್ನು ‘ಅತಿಸಾಹಸಿಯಾದ ಬೇಟೆಗಾರನೆಂದು’ ವರ್ಣಿಸುತ್ತದೆ. ಆದರೆ ಅದೇ ವಚನವು, ಇದು ಅವನನ್ನು ‘ಯೆಹೋವನಿಗೆ ವಿರೋಧಿಯನ್ನಾಗಿ’ ಮಾಡಿತೆಂದು ಹೇಳುತ್ತದೆ.

ಹೀಗೆ, ಮನುಷ್ಯನಿಗೆ ಪ್ರಾಣಿಗಳ ಮೇಲೆ ದೊರೆತನ ನಡೆಸುವ ಅಧಿಕಾರವಿದೆಯಾದರೂ, ಅವನು ಆ ಅಧಿಕಾರವನ್ನು ದುರುಪಯೋಗಿಸಬಾರದು. ಬದಲಾಗಿ ದೇವರ ವಾಕ್ಯದಲ್ಲಿರುವ ಮೂಲತತ್ತ್ವಗಳಿಗೆ ಹೊಂದಿಕೆಯಲ್ಲಿ ಅದನ್ನು ಉಪಯೋಗಿಸಬೇಕು. ಒಂದು ಸಾಕುಪ್ರಾಣಿಯು ತುಂಬ ವಯಸ್ಸಾದದ್ದರಿಂದ, ಗುರುತರವಾದ ಗಾಯದಿಂದ, ಅಥವಾ ಮಾರಕ ರೋಗದಿಂದ ಅನಗತ್ಯವಾಗಿ ಕಷ್ಟಾನುಭವಿಸುವುದನ್ನು ತಡೆಯುವುದೂ ಇದರಲ್ಲಿ ಒಳಗೂಡಿರಬಹುದು. ಇಂಥ ಸಂದರ್ಭದಲ್ಲಿ, ಏನು ಮಾಡಬೇಕು ಎಂಬುದನ್ನು ನಿರ್ಧರಿಸುವುದು ಆಯಾ ಕ್ರೈಸ್ತನ ಜವಾಬ್ದಾರಿಯಾಗಿದೆ. ಗುಣವಾಗುವ ಯಾವುದೇ ನಿರೀಕ್ಷೆಯಿಲ್ಲದಿರುವಾಗ ಸಾಕುಪ್ರಾಣಿಯೊಂದು ನರಳುತ್ತಾ ಇರುವುದನ್ನು ಅನುಮತಿಸದಿರುವುದು ದಯಾಪರ ಕೃತ್ಯವಾಗಿದೆ ಎಂದು ಅವನು ನಿರ್ಧರಿಸುವಲ್ಲಿ, ಅವನು ಅದನ್ನು ಕೊಲ್ಲುವ ಆಯ್ಕೆ ಮಾಡಬಹುದು.