ಸುಮ್ಮನೆ ನಿಂತುಕೊಂಡು ಯೆಹೋವನು ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ!
ಸುಮ್ಮನೆ ನಿಂತುಕೊಂಡು ಯೆಹೋವನು ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ!
“ನಿಮ್ಮ ಸ್ಥಾನದಲ್ಲಿರಿ, ಸುಮ್ಮನೆ ನಿಂತುಕೊಳ್ಳಿರಿ ಮತ್ತು ಯೆಹೋವನು ನಿಮಗೋಸ್ಕರ ನಡಿಸುವ ರಕ್ಷಣಾಕಾರ್ಯವನ್ನು ನೋಡಿರಿ.”—2 ಪೂರ್ವಕಾಲವೃತ್ತಾಂತ 20:17, NW.
1, 2. ‘ಮಾಗೋಗ್ ದೇಶದ ಗೋಗನ’ ಸನ್ನಿಹಿತ ಆಕ್ರಮಣವು, ಅಂತಾರಾಷ್ಟ್ರೀಯ ಭಯೋತ್ಪಾದನೆಯ ಬೆದರಿಕೆಗಿಂತಲೂ ಹೆಚ್ಚು ಗಂಭೀರವಾದದ್ದಾಗಿದೆ ಏಕೆ?
ಭಯೋತ್ಪಾದನೆಯನ್ನು ಕೆಲವರು ಜಾಗತಿಕ ಸಮುದಾಯದ ಮೇಲಿನ ಹಾಗೂ ಸ್ವತಃ ನಾಗರಿಕತೆಯ ಮೇಲಿನ ಆಕ್ರಮಣವೆಂದು ವರ್ಣಿಸುತ್ತಾರೆ. ಆದುದರಿಂದ ಇಂಥ ಬೆದರಿಕೆಯನ್ನು ಗಂಭೀರವಾಗಿ ಪರಿಗಣಿಸಬೇಕು ಎಂಬುದು ಒಪ್ಪತಕ್ಕ ಸಂಗತಿಯೇ. ಆದರೆ ಇನ್ನೊಂದು ಕಡೆಯಲ್ಲಿ, ಇನ್ನೂ ಹೆಚ್ಚು ಗಂಭೀರವಾದ ಪರಿಣಾಮವನ್ನು ಬೀರುವ ಹಾಗೂ ಜಾಗತಿಕ ಸಮುದಾಯವು ತೀರ ಕಡಿಮೆ ಗಮನವನ್ನು ಕೊಡುವ ಅಥವಾ ಗಮನವನ್ನೇ ಕೊಡದಿರುವಂಥ ಇನ್ನೊಂದು ಆಕ್ರಮಣವೂ ಇದೆ. ಇದು ಯಾವುದು?
2 ಇದು ಯೆಹೆಜ್ಕೇಲ ಪುಸ್ತಕದ 38ನೆಯ ಅಧ್ಯಾಯದಲ್ಲಿ ಬೈಬಲು ಯಾವುದರ ಕುರಿತು ಮಾತಾಡುತ್ತದೋ ಆ ‘ಮಾಗೋಗ್ ದೇಶದ ಗೋಗನ’ ಆಕ್ರಮಣವೇ ಆಗಿದೆ. ಈ ಆಕ್ರಮಣವು ಅಂತಾರಾಷ್ಟ್ರೀಯ ಭಯೋತ್ಪಾದನೆಯ ಬೆದರಿಕೆಗಿಂತಲೂ ಹೆಚ್ಚು ಗಂಭೀರವಾದದ್ದಾಗಿದೆ ಎಂದು ಹೇಳುವುದು ಅತಿಶಯೋಕ್ತಿಯಾಗಿದೆಯೋ? ಖಂಡಿತವಾಗಿಯೂ ಇಲ್ಲ. ಏಕೆಂದರೆ ಗೋಗನ ಆಕ್ರಮಣವು ಕೇವಲ ಮಾನವ ಸರಕಾರಗಳ ಮೇಲಿನ ಆಕ್ರಮಣಕ್ಕಿಂತಲೂ ಹೆಚ್ಚಿನದ್ದನ್ನು
ಒಳಗೂಡಿದೆ. ಇದು ದೇವರ ಸ್ವರ್ಗೀಯ ಸರಕಾರದ ಮೇಲೆ ಆಕ್ರಮಣಮಾಡುತ್ತದೆ! ಆದರೂ, ತಮ್ಮ ವ್ಯವಸ್ಥೆಯ ಮೇಲಿನ ಆಕ್ರಮಣಗಳೊಂದಿಗೆ ವ್ಯವಹರಿಸುವುದರಲ್ಲಿ ಕೇವಲ ಮಿತವಾದ ಯಶಸ್ಸನ್ನು ಪಡೆದಿರುವ ಮಾನವರಿಗೆ ಅಸದೃಶವಾಗಿ, ಸೃಷ್ಟಿಕರ್ತನು ಗೋಗನ ಹೆಚ್ಚು ದುಷ್ಟ ಆಕ್ರಮಣಗಳೊಂದಿಗೆ ವ್ಯವಹರಿಸಲು ಪೂರ್ಣವಾಗಿ ಸಮರ್ಥನಾಗಿದ್ದಾನೆ.ದೇವರ ಸರಕಾರದ ಮೇಲೆ ಆಕ್ರಮಣ
3. ಇಸವಿ 1914ರಿಂದ ಲೋಕದ ರಾಜರಿಗೆ ಏನು ಮಾಡುವಂತೆ ಕರೆಕೊಡಲಾಗಿದೆ, ಮತ್ತು ಇದಕ್ಕೆ ಅವರು ಹೇಗೆ ಪ್ರತಿಕ್ರಿಯಿಸಿದ್ದಾರೆ?
3 ಇಸವಿ 1914ರಲ್ಲಿ ಸ್ವರ್ಗದಲ್ಲಿ ದೇವರ ರಾಜ್ಯವು ಸ್ಥಾಪಿಸಲ್ಪಟ್ಟಂದಿನಿಂದ, ದೇವರ ಈಗ ಆಳುತ್ತಿರುವ ಅರಸನು ಹಾಗೂ ಸೈತಾನನ ದುಷ್ಟ ವ್ಯವಸ್ಥೆಯ ನಡುವಿನ ಹೋರಾಟವು ಮುಂದುವರಿಯುತ್ತಾ ಇದೆ. ಆ ಸಮಯದಲ್ಲಿ, ದೇವರಾದುಕೊಂಡ ರಾಜನಿಗೆ ತಮ್ಮನ್ನು ಅಧೀನಪಡಿಸಿಕೊಳ್ಳುವಂತೆ ಮಾನವ ರಾಜರಿಗೆ ತಿಳಿಸಲಾಗಿತ್ತು. ಆದರೆ ಮುಂತಿಳಿಸಲ್ಪಟ್ಟಂತೆಯೇ ಅವರು ಹಾಗೆ ಮಾಡಲು ನಿರಾಕರಿಸಿದ್ದಾರೆ: “ಯೆಹೋವನಿಗೂ ಆತನು ಅಭಿಷೇಕಿಸಿದವನಿಗೂ ವಿರೋಧವಾಗಿ ಭೂಪತಿಗಳು ಸನ್ನದ್ಧರಾಗಿ ನಿಂತಿದ್ದಾರೆ, ಅಧಿಕಾರಿಗಳು ಒಟ್ಟಾಗಿ ಸೇರಿ ಆಲೋಚಿಸುತ್ತಿದ್ದಾರೆ. ನಮಗೆ ಅವರು ಹಾಕಿದ ಬಂಧನಗಳನ್ನು ಕಿತ್ತು ಬೇಡಿಗಳನ್ನು ಮುರಿದು ಬೀಸಾಡೋಣ ಎಂದು ಮಾತಾಡಿಕೊಳ್ಳುತ್ತಾರಲ್ಲಾ.” (ಕೀರ್ತನೆ 2:1-3) ಮಾಗೋಗ್ ದೇಶದ ಗೋಗನ ಆಕ್ರಮಣದ ಸಮಯದಲ್ಲಿ, ರಾಜ್ಯದ ಆಳ್ವಿಕೆಯ ಕಡೆಗಿನ ಪ್ರತಿರೋಧವು ಪರಮಾವಧಿಗೇರುವುದು ಎಂಬುದಂತೂ ಸುಸ್ಪಷ್ಟ.
4, 5. ಮಾನವರು ದೇವರ ಅದೃಶ್ಯ ಸ್ವರ್ಗೀಯ ಸರಕಾರದ ವಿರುದ್ಧ ಹೇಗೆ ಹೋರಾಡಸಾಧ್ಯವಿದೆ?
4 ಮಾನವರು ಒಂದು ಅದೃಶ್ಯ ಸ್ವರ್ಗೀಯ ಸರಕಾರದ ವಿರುದ್ಧ ಹೇಗೆ ಹೋರಾಡಸಾಧ್ಯವಿದೆ ಎಂದು ನಾವು ಕುತೂಹಲಪಡಬಹುದು. ಈ ಸರಕಾರವು “ಯಜ್ಞದ ಕುರಿಯಾದಾತ”ನಾಗಿರುವ ಕ್ರಿಸ್ತ ಯೇಸುವಿನೊಂದಿಗೆ ‘ಭೂಲೋಕದೊಳಗಿಂದ ಕೊಂಡುಕೊಳ್ಳಲ್ಪಟ್ಟ ಲಕ್ಷದ ನಾಲ್ವತ್ತುನಾಲ್ಕು ಸಾವಿರ ಮಂದಿ’ಯಿಂದ ರಚಿತವಾಗಿದೆ ಎಂದು ಬೈಬಲು ಪ್ರಕಟಪಡಿಸುತ್ತದೆ. (ಪ್ರಕಟನೆ 14:1, 3; ಯೋಹಾನ 1:29) ಹೊಸ ಸರಕಾರವು ಸ್ವರ್ಗೀಯವಾಗಿರುವುದರಿಂದ, “ನೂತನಾಕಾಶಮಂಡಲ” ಎಂದು ಇದರ ಕುರಿತು ಮಾತಾಡಲಾಗುತ್ತದೆ. ಅದೇ ಸಮಯದಲ್ಲಿ ಅದರ ಭೂಪ್ರಜೆಗಳನ್ನು ನ್ಯಾಯಸಮ್ಮತವಾಗಿಯೇ “ನೂತನಭೂಮಂಡಲ” ಎಂದು ಕರೆಯಲಾಗಿದೆ. (ಯೆಶಾಯ 65:17; 2 ಪೇತ್ರ 3:13) ಕ್ರಿಸ್ತನೊಂದಿಗೆ ಜೊತೆ ಅರಸರಾಗಿ ಆಳಲಿರುವ 1,44,000 ಮಂದಿಯಲ್ಲಿ ಹೆಚ್ಚಿನವರು ಈಗಾಗಲೇ ತಮ್ಮ ಭೂಜೀವಿತವನ್ನು ನಂಬಿಗಸ್ತಿಕೆಯಿಂದ ಪೂರ್ಣಗೊಳಿಸಿದ್ದಾರೆ. ಹೀಗೆ ಅವರು, ಸ್ವರ್ಗದಲ್ಲಿ ತಮ್ಮ ಸೇವೆಯ ಹೊಸ ನೇಮಕಗಳನ್ನು ಸ್ವೀಕರಿಸಲಿಕ್ಕಾಗಿರುವ ತಮ್ಮ ಅರ್ಹತೆಯನ್ನು ರುಜುಪಡಿಸಿದ್ದಾರೆ.
5 ಆದರೂ, 1,44,000 ಮಂದಿಯಲ್ಲಿ ಚಿಕ್ಕ ಸಂಖ್ಯೆಯ ಉಳಿಕೆಯವರು ಇನ್ನೂ ಭೂಮಿಯಲ್ಲಿದ್ದಾರೆ. 2002ನೇ ಇಸವಿಯಲ್ಲಿ ಕರ್ತನ ಸಂಧ್ಯಾ ಭೋಜನದ ಆಚರಣೆಗೆ ಹಾಜರಾಗಿದ್ದ 1,50,00,000ಕ್ಕಿಂತಲೂ ಹೆಚ್ಚಿನವರಲ್ಲಿ ಕೇವಲ 8,760 ಮಂದಿ ಮಾತ್ರ ಈ ಸ್ವರ್ಗೀಯ ನೇಮಕಕ್ಕಾಗಿ ಆಯ್ಕೆಮಾಡಲ್ಪಟ್ಟಿರುವುದರ ತಮ್ಮ ನಿರೀಕ್ಷೆಯನ್ನು ವ್ಯಕ್ತಪಡಿಸಿದರು. ರಾಜ್ಯದ ಉಳಿದಿರುವ ಭಾವೀ ಸದಸ್ಯರ ಮೇಲೆ ಆಕ್ರಮಣಮಾಡಲು ಧೈರ್ಯಮಾಡುತ್ತಿರುವ ಯಾರೇ ಆಗಲಿ, ವಾಸ್ತವದಲ್ಲಿ ದೇವರ ರಾಜ್ಯದ ಮೇಲೆ ಆಕ್ರಮಣಮಾಡುತ್ತಿದ್ದಾರೆ.—ಪ್ರಕಟನೆ 12:17.
ಅರಸನು ತನ್ನ ಜಯವನ್ನು ಪೂರ್ಣಗೊಳಿಸುತ್ತಾನೆ
6. ದೇವಜನರ ಕಡೆಗೆ ತೋರಿಸಲ್ಪಡುವ ವಿರೋಧವನ್ನು ಯೆಹೋವನೂ ಕ್ರಿಸ್ತನೂ ಹೇಗೆ ವೀಕ್ಷಿಸುತ್ತಾರೆ?
6 ತನ್ನ ಸ್ಥಾಪಿತ ರಾಜ್ಯಕ್ಕೆ ತೋರಿಸಲ್ಪಡುವ ವಿರೋಧಕ್ಕೆ ಯೆಹೋವನು ಹೇಗೆ ಪ್ರತಿಕ್ರಿಯಿಸುತ್ತಾನೆ ಎಂಬುದರ ಕುರಿತು ಹೀಗೆ ಮುಂತಿಳಿಸಲಾಗಿತ್ತು: “ಪರಲೋಕದಲ್ಲಿ ಆಸನಾರೂಢನಾಗಿರುವಾತನು ಅದಕ್ಕೆ ನಗುವನು; ಕರ್ತನು [“ಯೆಹೋವನು,” NW] ಅವರನ್ನು ಪರಿಹಾಸ್ಯಮಾಡುವನು. ಅನಂತರ ಆತನು ಸಿಟ್ಟಾಗಿ—ನಾನು ನೇಮಿಸಿದ ಅರಸನನ್ನು ಚೀಯೋನೆಂಬ ನನ್ನ ಪರಿಶುದ್ಧ ಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು ಎಂದು ಹೇಳಿ ಕೋಪಾವೇಶದಿಂದ ಅವರನ್ನು ಕಳವಳಗೊಳಿಸುವನು.” (ಕೀರ್ತನೆ 2:4-6) ಕ್ರಿಸ್ತನು ಯೆಹೋವನ ಮಾರ್ಗದರ್ಶನದ ಕೆಳಗೆ ‘ತನ್ನ ಜಯವನ್ನು’ ಪೂರ್ಣಗೊಳಿಸುವ ಸಮಯವು ಈಗ ಆಗಮಿಸಿದೆ. (ಪ್ರಕಟನೆ 6:2) ಅಂತಿಮ ವಿಜಯದ ಸಮಯದಲ್ಲಿ ತನ್ನ ಜನರ ಕಡೆಗೆ ತೋರಿಸಲ್ಪಡುವ ವಿರೋಧವನ್ನು ಯೆಹೋವನು ಹೇಗೆ ವೀಕ್ಷಿಸುವನು? ಇದನ್ನು ಸ್ವತಃ ತನ್ನ ವಿರುದ್ಧ ಮತ್ತು ತನ್ನ ಆಳುತ್ತಿರುವ ಅರಸನ ವಿರುದ್ಧ ನಿರ್ದೇಶಿಸಲ್ಪಟ್ಟದ್ದಾಗಿ ಪರಿಗಣಿಸುವನು. ‘ನಿಮ್ಮನ್ನು ತಾಕುವವನು ನನ್ನ ಕಣ್ಣು ಗುಡ್ಡನ್ನು ತಾಕುವವನಾಗಿದ್ದಾನೆ’ ಎಂದು ಯೆಹೋವನು ಹೇಳುತ್ತಾನೆ. (ಜೆಕರ್ಯ 2:8) ಮತ್ತು ತನ್ನ ಅಭಿಷಿಕ್ತ ಸಹೋದರರಿಗೆ ಜನರು ಏನು ಮಾಡುತ್ತಾರೋ ಅಥವಾ ಏನನ್ನು ಮಾಡಲು ತಪ್ಪಿಹೋಗುತ್ತಾರೋ ಅದನ್ನು ಸ್ವತಃ ತನಗೆ ಮಾಡಿದ ಹಾಗೆ ಅಥವಾ ಮಾಡಲು ತಪ್ಪಿಹೋದ ಹಾಗೆ ಪರಿಗಣಿಸುವೆನೆಂದು ಯೇಸು ಒತ್ತಿಹೇಳಿದನು.—ಮತ್ತಾಯ 25:40, 45.
7. ಪ್ರಕಟನೆ 7:9ರಲ್ಲಿ ವರ್ಣಿಸಲ್ಪಟ್ಟಿರುವ ‘ಮಹಾ ಸಮೂಹದವರ’ ಮೇಲೆ ಯಾವ ಕಾರಣಗಳಿಗಾಗಿ ಗೋಗನ ರೋಷಾವೇಶವು ತಟ್ಟುತ್ತದೆ?
7 ಅಭಿಷಿಕ್ತ ಉಳಿಕೆಯವರನ್ನು ಕ್ರಿಯಾಶೀಲವಾಗಿ ಬೆಂಬಲಿಸುವವರು ಸಹ ಗೋಗನ ರೋಷಾವೇಶವನ್ನು ಅನುಭವಿಸುವರು ಎಂಬುದಂತೂ ನಿಶ್ಚಯ. ದೇವರ “ನೂತನಭೂಮಂಡಲ”ದ ಈ ಭಾವೀ ಸದಸ್ಯರು, “ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ” ಆಗಿರುವವರಿಂದ ಕರೆಯಲ್ಪಟ್ಟಿರುವ “ಮಹಾ ಸಮೂಹ”ವಾಗಿದ್ದಾರೆ. (ಪ್ರಕಟನೆ 7:9) ಅವರು ‘ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿದ್ದಾರೆ’ ಎಂದು ಅವರ ಕುರಿತು ತಿಳಿಸಲಾಗಿದೆ. ಹೀಗೆ ಅವರು ದೇವರ ಹಾಗೂ ಕ್ರಿಸ್ತ ಯೇಸುವಿನ ಮುಂದೆ ಒಂದು ಅಂಗೀಕೃತ ನಿಲುವನ್ನು ಹೊಂದಿದ್ದಾರೆ. ಅವರು “ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು” ಹಿಡಿದುಕೊಂಡಿದ್ದು, ತನ್ನ ಸಿಂಹಾಸನಾರೂಢ ಅರಸನೂ “ದೇವರು ನೇಮಿಸಿದ ಕುರಿ”ಯೂ ಆಗಿರುವ ಯೇಸು ಕ್ರಿಸ್ತನ ಪ್ರಭುತ್ವದ ಮೂಲಕ ಯಾರ ಆಳ್ವಿಕೆಯು ಪ್ರತಿನಿಧಿಸಲ್ಪಡುತ್ತದೋ ಆ ಯೆಹೋವನಿಗೆ ವಿಶ್ವದ ಯೋಗ್ಯ ಪರಮಾಧಿಕಾರಿಯೋಪಾದಿ ಜಯಕಾರವೆತ್ತುತ್ತಾರೆ.—ಯೋಹಾನ 1:29, 36.
8. ಗೋಗನ ಆಕ್ರಮಣವು ಕ್ರಿಸ್ತನನ್ನು ಏನು ಮಾಡುವಂತೆ ಪ್ರಚೋದಿಸುವುದು, ಮತ್ತು ಯಾವ ಫಲಿತಾಂಶದೊಂದಿಗೆ?
8 ಗೋಗನ ಆಕ್ರಮಣವು ದೇವರ ಸಿಂಹಾಸನಾರೂಢನಾದ ಅರಸನು ಕ್ರಿಯೆಗೈಯುವಂತೆ ಮತ್ತು ಅರ್ಮಗೆದೋನ್ ಯುದ್ಧವನ್ನು ನಡೆಸುವಂತೆ ಪ್ರಚೋದಿಸುವುದು. (ಪ್ರಕಟನೆ 16:14, 16) ಯೆಹೋವನ ಪರಮಾಧಿಕಾರವನ್ನು ಅಂಗೀಕರಿಸಲು ನಿರಾಕರಿಸಿರುವವರು ನಾಶನವನ್ನು ಅನುಭವಿಸುವರು. ಇನ್ನೊಂದು ಕಡೆಯಲ್ಲಿ, ದೇವರ ರಾಜ್ಯಕ್ಕೆ ತಮ್ಮ ನಿಷ್ಠೆಯ ಕಾರಣ ಸಂಕಟವನ್ನು ತಾಳಿಕೊಂಡಿರುವವರು ಶಾಶ್ವತವಾದ ಬಿಡುಗಡೆಯನ್ನು ಅನುಭವಿಸುವರು. ಇದರ ಕುರಿತು ಅಪೊಸ್ತಲ ಪೌಲನು ಬರೆದುದು: “ದೇವರು ನ್ಯಾಯವಾದ ತೀರ್ಪು ಮಾಡುತ್ತಾನೆಂಬದಕ್ಕೆ ನಿಮ್ಮ ತಾಳ್ಮೆಯು ಸ್ಪಷ್ಟವಾದ ನಿದರ್ಶನವಾಗಿದೆ. ಯಾವ ದೇವರಾಜ್ಯಕ್ಕೋಸ್ಕರ ನೀವು ಕಷ್ಟವನ್ನನುಭವಿಸುತ್ತೀರೋ ಅದಕ್ಕೆ ನೀವು ಯೋಗ್ಯರಾಗಬೇಕೆಂಬದೇ ದೇವರ ಅಭಿಪ್ರಾಯ. ನಿಮ್ಮನ್ನು ಸಂಕಟಪಡಿಸುವವರಿಗೆ ಪ್ರತಿಯಾಗಿ ಸಂಕಟವನ್ನೂ ಸಂಕಟಪಡುವವರಾದ ನಿಮಗೆ ನಮ್ಮೊಡನೆ ಉಪಶಮನವನ್ನೂ ಕೊಡುವದು ದೇವರ ಎಣಿಕೆಯಲ್ಲಿ ನ್ಯಾಯವಾಗಿದೆಯಷ್ಟೆ. ಯಾವಾಗ ಕೊಡುವನಂದರೆ ಯೇಸುಕರ್ತನು ತನ್ನ ಶಕ್ತಿಯನ್ನು ತೋರ್ಪಡಿಸುವ ದೇವದೂತರಿಂದ ಕೂಡಿದವನಾಗಿ ಉರಿಯುವ ಬೆಂಕಿಯಲ್ಲಿ ಆಕಾಶದಿಂದ ಪ್ರತ್ಯಕ್ಷನಾಗುವ ಕಾಲದಲ್ಲಿ ಅದನ್ನು ಕೊಡುವನು. ಆಗ ನಮ್ಮ ಕರ್ತನಾದ ಯೇಸುವು ದೇವರನ್ನರಿಯದವರಿಗೂ ತನ್ನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವನು.”—2 ಥೆಸಲೊನೀಕ 1:5-8.
9, 10. (ಎ) ದುಸ್ಸಾಧ್ಯವಾಗಿದ್ದ ವೈರಿಯ ಎದುರಿನಲ್ಲಿ ಯೆಹೋವನು ಯೆಹೂದಕ್ಕೆ ಹೇಗೆ ಜಯವನ್ನು ನೀಡಿದನು? (ಬಿ) ಇಂದು ಕ್ರೈಸ್ತರು ಏನನ್ನು ಮಾಡುತ್ತಾ ಮುಂದುವರಿಯಬೇಕು?
9 ಅರ್ಮಗೆದೋನ್ ಯುದ್ಧದಲ್ಲಿ ಕೊನೆಗೊಳ್ಳಲಿರುವ, ಮುಂಬರುತ್ತಿರುವ ಮಹಾ ಸಂಕಟದ ಸಮಯದಲ್ಲಿ ಕ್ರಿಸ್ತನು ಎಲ್ಲಾ ಕೆಡುಕಿನ ವಿರುದ್ಧ ಹೋರಾಡುವನು. ಆದರೆ ಸಾವಿರಾರು ವರ್ಷಗಳ ಹಿಂದೆ ಯೆಹೂದದ ಎರಡು ಕುಲಗಳ ರಾಜ್ಯದ ನಿವಾಸಿಗಳು ಹೇಗೆ ಹೋರಾಡುವುದು ಅನಗತ್ಯವಾಗಿತ್ತೋ ತದ್ರೀತಿಯಲ್ಲಿ ಇಂದು ಅವನ ಹಿಂಬಾಲಕರು ಹೋರಾಡುವ ಆವಶ್ಯಕತೆಯಿರುವುದಿಲ್ಲ. ಆ ಸಮಯದಲ್ಲಿ ಕದನವು ಯೆಹೋವನಿಗೆ ಸೇರಿದ್ದಾಗಿತ್ತು ಮತ್ತು ಆತನೇ ವಿಜಯವನ್ನು ಕೊಟ್ಟನು. ದಾಖಲೆಯು ಹೀಗೆ ತಿಳಿಸುತ್ತದೆ: “ಅವರು ಉತ್ಸಾಹಧ್ವನಿಯಿಂದ ಕೀರ್ತಿಸುವದಕ್ಕೆ ಪ್ರಾರಂಭಿಸಲು ಯೆಹೋವನು ಯೆಹೂದ್ಯರಿಗೆ ವಿರೋಧವಾಗಿ ಬಂದ ಅಮ್ಮೋನಿಯರನ್ನೂ ಮೋವಾಬ್ಯರನ್ನೂ ಸೇಯೀರ್ ಪರ್ವತದವರನ್ನೂ ನಶಿಸುವದಕ್ಕೋಸ್ಕರ ಅವರಲ್ಲಿ ಹೊಂಚುಹಾಕುವವರನ್ನು ಇರಿಸಿದ್ದರಿಂದ ಅಮ್ಮೋನಿಯರೂ ಮೋವಾಬ್ಯರೂ ಸೇಯೀರ್ ಪರ್ವತದವರ ಮೇಲೆ ಬಿದ್ದು ಅವರನ್ನು ಪೂರ್ಣವಾಗಿ ಸಂಹರಿಸಿಬಿಟ್ಟರು; ಅವರನ್ನು ಮುಗಿಸಿಬಿಟ್ಟ ಮೇಲೆ ತಾವೇ ಒಬ್ಬರನ್ನೊಬ್ಬರು ಕೊಲ್ಲುವದಕ್ಕೆ ಪ್ರಾರಂಭಿಸಿದರು. ಯೆಹೂದ್ಯರು ಅರಣ್ಯದಲ್ಲಿನ ಬುರುಜಿಗೆ ಬಂದು ಆ ಸಮೂಹವಿದ್ದ ಕಡೆಗೆ ನೋಡಿದಾಗ ನೆಲದ ಮೇಲೆ ಬಿದ್ದಿರುವ ಹೆಣಗಳು ಹೊರತಾಗಿ ಜೀವದಿಂದುಳಿದವರು ಯಾರೂ ಕಾಣಿಸಲಿಲ್ಲ.”—2 ಪೂರ್ವಕಾಲವೃತ್ತಾಂತ 20:22-24.
10 ಇದು, “ನೀವು ಯುದ್ಧಮಾಡುವದು ಅವಶ್ಯವಿಲ್ಲ” ಎಂದು ಯೆಹೋವನು ನಿರ್ದಿಷ್ಟವಾಗಿ ಮುಂತಿಳಿಸಿದಂತೆಯೇ ನಡೆದಿತ್ತು. (2 ಪೂರ್ವಕಾಲವೃತ್ತಾಂತ 20:17) ‘ತನ್ನ ಜಯವನ್ನು’ ಪೂರ್ಣಗೊಳಿಸಲಿಕ್ಕಾಗಿ ಯೇಸು ಕ್ರಿಸ್ತನು ಕ್ರಿಯೆಗೈಯುವಾಗ, ಇದು ಕ್ರೈಸ್ತರಿಗೆ ಅನುಸರಿಸಲು ನಮೂನೆಯನ್ನು ಒದಗಿಸುತ್ತದೆ. ಅಷ್ಟರ ತನಕ ಅವರು ಕೆಡುಕಿನೊಂದಿಗೆ ಹೋರಾಡುವುದನ್ನು ಮುಂದುವರಿಸುತ್ತಾರೆ, ಆದರೆ ಅಕ್ಷರಾರ್ಥವಾದ ಆಯುಧಗಳಿಂದಲ್ಲ ಬದಲಾಗಿ ಆತ್ಮಿಕ ಆಯುಧಗಳಿಂದಲೇ. ಹೀಗೆ ಅವರು “ಒಳ್ಳೇತನದಿಂದ ಕೆಟ್ಟತನವನ್ನು ಸೋಲಿಸು”ತ್ತಾರೆ.—ರೋಮಾಪುರ 6:13; 12:17-21; 13:12; 2 ಕೊರಿಂಥ 10:3-5.
ಗೋಗನ ಆಕ್ರಮಣದಲ್ಲಿ ಯಾರು ನಾಯಕತ್ವವನ್ನು ವಹಿಸುವರು?
11. (ಎ) ತನ್ನ ಆಕ್ರಮಣವನ್ನು ಕಾರ್ಯರೂಪಕ್ಕೆ ತರಲಿಕ್ಕಾಗಿ ಗೋಗನು ಯಾವ ಮಾಧ್ಯಮಗಳನ್ನು ಉಪಯೋಗಿಸುತ್ತಾನೆ? (ಬಿ) ಆತ್ಮಿಕವಾಗಿ ಎಚ್ಚರವಾಗಿರುವುದರಲ್ಲಿ ಏನು ಒಳಗೂಡಿದೆ?
11 ಮಾಗೋಗ್ ದೇಶದ ಗೋಗನು, 1914ರಿಂದ ಅವನತಿಹೊಂದಿರುವ ಸ್ಥಿತಿಯಲ್ಲಿರುವ ಪಿಶಾಚನಾದ ಸೈತಾನನೇ ಎಂದು ಗುರುತಿಸಲ್ಪಟ್ಟಿದ್ದಾನೆ. ಒಬ್ಬ ಆತ್ಮಜೀವಿಯೋಪಾದಿ ಅವನು ನೇರವಾಗಿ ತನ್ನ ಆಕ್ರಮಣವನ್ನು ಮಾಡಲಾರನು, ಆದರೆ ತನ್ನ ಕೆಲಸಗಳನ್ನು ಪೂರೈಸುವಂತೆ ಮಾನವ ಮಾಧ್ಯಮಗಳನ್ನು ಅವನು ಉಪಯೋಗಿಸುವನು. ಈ ಮಾನವ ಮಾಧ್ಯಮಗಳು ಯಾವುವು? ಬೈಬಲು ಇದರ ಕುರಿತು
ವಿವರಗಳನ್ನು ಕೊಡುವುದಿಲ್ಲವಾದರೂ, ಅವು ಯಾವುವು ಎಂಬುದನ್ನು ಗುರುತಿಸಲು ನಮಗೆ ಸಹಾಯಮಾಡುವಂಥ ನಿರ್ದಿಷ್ಟ ಸೂಚನೆಗಳನ್ನು ಅದು ಕೊಡುತ್ತದೆ. ಬೈಬಲ್ ಪ್ರವಾದನೆಗಳ ನೆರವೇರಿಕೆಯಲ್ಲಿ ಘಟನೆಗಳು ಸಂಭವಿಸುವಾಗ, ನಾವು ಇನ್ನಷ್ಟು ಸ್ಪಷ್ಟವಾದ ಚಿತ್ರಣವನ್ನು ಕ್ರಮೇಣ ಪಡೆದುಕೊಳ್ಳುವೆವು. ಯೆಹೋವನ ಜನರು ಊಹಾಪೋಹಗಳಿಂದ ದೂರವಿರುತ್ತಾರಾದರೂ ಆತ್ಮಿಕವಾಗಿ ಎಚ್ಚರವಾಗಿ ಉಳಿಯುತ್ತಾರೆ; ಬೈಬಲ್ ಪ್ರವಾದನೆಯ ನೆರವೇರಿಕೆಯನ್ನು ಯೋಗ್ಯವಾಗಿ ಸೂಚಿಸುವಂಥ ರಾಜಕೀಯ ಹಾಗೂ ಧಾರ್ಮಿಕ ಸನ್ನಿವೇಶಗಳ ಬಗ್ಗೆ ಅವರಿಗೆ ಪೂರ್ಣ ಅರಿವಿದೆ.12, 13. ದೇವಜನರ ಮೇಲಿನ ಅಂತಿಮ ಆಕ್ರಮಣವನ್ನು ಪ್ರವಾದಿಯಾದ ದಾನಿಯೇಲನು ಹೇಗೆ ಮುಂತಿಳಿಸಿದನು?
12 ದೇವಜನರ ವಿರುದ್ಧ ಮಾಡಲ್ಪಡುವ ಒಂದು ಅಂತಿಮ ಆಕ್ರಮಣದ ಕುರಿತು ಪ್ರವಾದಿಯಾದ ದಾನಿಯೇಲನು ಬೆಳಕು ಬೀರುತ್ತಾನೆ. ಅವನು ಬರೆದುದು: “ಅವನು [ಉತ್ತರದ ರಾಜನು] ಅತಿರೋಷಗೊಂಡು ಬಹು ಜನರನ್ನು ಧ್ವಂಸಿಸಿ ನಿರ್ನಾಮಮಾಡುವದಕ್ಕೆ ಹೊರಡುವನು. ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ ಅರಮನೆಯಂಥ ತನ್ನ ಗುಡಾರಗಳನ್ನು ಹಾಕಿಸುವನು.”—ದಾನಿಯೇಲ 11:44, 45.
13 ಬೈಬಲ್ ಸಮಯಗಳಲ್ಲಿ “ಸಮುದ್ರ”ವು ಮಹಾಸಾಗರ ಅಥವಾ ಮೆಡಿಟರೇನಿಯನ್ ಸಾಗರವಾಗಿತ್ತು ಮತ್ತು “ಪರಿಶುದ್ಧಪರ್ವತ”ವು ಚೀಯೋನಾಗಿತ್ತು. ಇದರ ಕುರಿತು ಯೆಹೋವನು ಹೇಳಿದ್ದು: “ನಾನು ನೇಮಿಸಿದ ಅರಸನನ್ನು ಚೀಯೋನೆಂಬ ನನ್ನ ಪರಿಶುದ್ಧ ಪರ್ವತದಲ್ಲಿಯೇ ಸ್ಥಾಪಿಸಿದ್ದಾಯಿತು.” (ಕೀರ್ತನೆ 2:5; ಯೆಹೋಶುವ 1:4) ಹೀಗೆ ಆತ್ಮಿಕ ಅರ್ಥದಲ್ಲಿ “ಸಮುದ್ರಕ್ಕೂ ಅಂದಚಂದದ ಪರಿಶುದ್ಧಪರ್ವತಕ್ಕೂ ನಡುವೆ” ಇರುವ ಪ್ರದೇಶವು, ಅಭಿಷಿಕ್ತ ಕ್ರೈಸ್ತರ ಸಮೃದ್ಧ ಆತ್ಮಿಕ ಚಟುವಟಿಕೆಯ ಕ್ಷೇತ್ರವನ್ನು ಪ್ರತಿನಿಧಿಸುತ್ತದೆ. ಅವರು ದೇವರಿಂದ ವಿಮುಖವಾಗಿರುವ ಮಾನವಕುಲದ ಸಮುದ್ರದೊಂದಿಗೆ ಇನ್ನೆಂದಿಗೂ ಗುರುತಿಸಲ್ಪಡುವುದಿಲ್ಲ ಮತ್ತು ಅವರು ಸ್ವರ್ಗೀಯ ರಾಜ್ಯದಲ್ಲಿ ಕ್ರಿಸ್ತ ಯೇಸುವಿನೊಂದಿಗೆ ಆಳುವುದಕ್ಕಾಗಿ ಎದುರುನೋಡುತ್ತಾ ಇದ್ದಾರೆ. ದಾನಿಯೇಲ ಪ್ರವಾದನೆಯ ನೆರವೇರಿಕೆಯಲ್ಲಿ ಉತ್ತರದ ರಾಜನು ತನ್ನ ಉಗ್ರ ಆಕ್ರಮಣವನ್ನು ಆರಂಭಿಸುವಾಗ, ದೇವರ ಅಭಿಷಿಕ್ತ ಸೇವಕರು ಮತ್ತು ಅವರೊಂದಿಗೆ ಮಹಾ ಸಮೂಹದ ನಿಷ್ಠಾವಂತ ಜೊತೆಗಾರರು ಆ ರಾಜನ ಗುರಿಹಲಗೆಯಾಗಿರುವರು ಎಂಬುದಂತೂ ಸ್ಪಷ್ಟ.—ಯೆಶಾಯ 57:20; ಇಬ್ರಿಯ 12:22, 25ಬಿ; ಪ್ರಕಟನೆ 14:1.
ದೇವರ ಸೇವಕರು ಹೇಗೆ ಪ್ರತಿಕ್ರಿಯಿಸುವರು?
14. ದೇವಜನರು ಆಕ್ರಮಣಕ್ಕೊಳಗಾಗುವಾಗ ಯಾವ ಮೂರು ವಿಷಯಗಳನ್ನು ಮಾಡುವರು?
14 ದೇವರ ಸೇವಕರು ಈ ಆಕ್ರಮಣದ ಕೆಳಗೆ ಬಂದ ಕೂಡಲೆ ಏನು ಮಾಡುವಂತೆ ಅವರಿಂದ ನಿರೀಕ್ಷಿಸಲಾಗುತ್ತದೆ? ಈ ವಿಷಯದಲ್ಲಿಯೂ, ಯೆಹೋಷಾಫಾಟನ ದಿನಗಳಲ್ಲಿ ದೇವರ ಪ್ರತಿನಿಧಿರೂಪದ ಜನಾಂಗವು ಪ್ರತಿಕ್ರಿಯಿಸಿದ ವಿಧವು ಒಂದು ನಮೂನೆಯಾಗಿ ಕಾರ್ಯನಡಿಸುತ್ತದೆ. ಅದರ ಪ್ರಜೆಗಳಿಗೆ ಈ ಮೂರು ವಿಷಯಗಳನ್ನು ಮಾಡುವಂತೆ ಅಪ್ಪಣೆ ನೀಡಲಾಗಿತ್ತು ಎಂಬುದನ್ನು ಗಮನಿಸಿರಿ: (1) ತಮ್ಮ ಸ್ಥಾನದಲ್ಲಿರುವುದು, (2) ಸುಮ್ಮನೆ ನಿಂತುಕೊಳ್ಳುವುದು, ಮತ್ತು (3) ಯೆಹೋವನು ನಡಿಸುವ ರಕ್ಷಣಾಕಾರ್ಯವನ್ನು ನೋಡುವುದು. ಇಂದು ದೇವಜನರು ಈ ಮಾತುಗಳಿಗೆ ಹೊಂದಿಕೆಯಲ್ಲಿ ಹೇಗೆ ಕ್ರಿಯೆಗೈಯುತ್ತಾರೆ?—2 ಪೂರ್ವಕಾಲವೃತ್ತಾಂತ 20:17, NW.
15. ಯೆಹೋವನ ಜನರು ತಮ್ಮ ಸ್ಥಾನದಲ್ಲಿ ನಿಲ್ಲುವುದು ಏನನ್ನು ಅರ್ಥೈಸುತ್ತದೆ?
15ತಮ್ಮ ಸ್ಥಾನದಲ್ಲಿರುವುದು: ದೇವಜನರು ಅಚಲರಾಗಿದ್ದು, ದೇವರ ರಾಜ್ಯಕ್ಕಾಗಿ ಕ್ರಿಯಾಶೀಲ ಬೆಂಬಲವನ್ನು ಕೊಡುವ ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುತ್ತಾ ಹೋಗುವರು. ಅವರು ಕ್ರೈಸ್ತ ತಾಟಸ್ಥ್ಯದ ತಮ್ಮ ಸ್ಥಾನವನ್ನು ಕಾಪಾಡಿಕೊಳ್ಳುತ್ತಾ ಮುಂದುವರಿಯುವರು. ಯೆಹೋವನಿಗೆ ಸಲ್ಲಿಸುವ ತಮ್ಮ ನಿಷ್ಠೆಯ ಸೇವೆಯಲ್ಲಿ ಅವರು ‘ಸ್ಥಿರಚಿತ್ತರೂ ನಿಶ್ಚಲರೂ’ ಆಗಿರುವರು ಮತ್ತು ಯೆಹೋವನ ಪ್ರೀತಿದಯೆಗಾಗಿ ಆತನನ್ನು ಬಹಿರಂಗವಾಗಿ ಸ್ತುತಿಸುತ್ತಾ ಇರುವರು. (1 ಕೊರಿಂಥ 15:58; ಕೀರ್ತನೆ 118:28, 29) ಸದ್ಯದ ಹಾಗೂ ಭವಿಷ್ಯತ್ತಿನ ಯಾವುದೇ ಒತ್ತಡಗಳು, ಈ ದೈವಿಕ ಅಂಗೀಕೃತ ಸ್ಥಾನದಿಂದ ಅವರನ್ನು ಕದಲಿಸಲಾರವು.
16. ಯಾವ ವಿಧದಲ್ಲಿ ಯೆಹೋವನ ಸೇವಕರು ಸುಮ್ಮನೆ ನಿಂತುಕೊಳ್ಳುತ್ತಾರೆ?
16ಸುಮ್ಮನೆ ನಿಂತುಕೊಳ್ಳುವುದು: ಯೆಹೋವನ ಸೇವಕರು ಸ್ವತಃ ತಮ್ಮನ್ನು ರಕ್ಷಿಸಿಕೊಳ್ಳಲು ಪ್ರಯತ್ನಿಸುವುದಿಲ್ಲ, ಬದಲಾಗಿ ಅವರು ತಮ್ಮ ಸಂಪೂರ್ಣ ಭರವಸೆಯನ್ನು ಯೆಹೋವನ ಮೇಲಿಡುವರು. ಲೋಕದ ಅಸ್ತವ್ಯಸ್ತತೆಯಿಂದ ತನ್ನ ಸೇವಕರನ್ನು ರಕ್ಷಿಸಲು ಆತನು ಮಾತ್ರ ಸಮರ್ಥನಾಗಿದ್ದಾನೆ, ಮತ್ತು ಹಾಗೆ ರಕ್ಷಿಸುತ್ತೇನೆಂದು ಆತನೇ ವಾಗ್ದಾನಿಸಿದ್ದಾನೆ. (ಯೆಶಾಯ 43:10, 11; 54:15; ಪ್ರಲಾಪಗಳು 3:26) ಯೆಹೋವನ ಮೇಲೆ ಭರವಸೆಯಿಡುವುದರಲ್ಲಿ, ತನ್ನ ಉದ್ದೇಶಗಳನ್ನು ಪೂರೈಸಲಿಕ್ಕಾಗಿ ಆತನು ದಶಕಗಳಿಂದಲೂ ಸ್ಪಷ್ಟವಾಗಿ ಉಪಯೋಗಿಸುತ್ತಾ ಬಂದಿರುವ ಆಧುನಿಕ ದಿನದ ದೃಶ್ಯ ಮಾಧ್ಯಮದ ಮೇಲೆ ಭರವಸೆಯಿಡುವುದೂ ಒಳಗೂಡಿದೆ. ಆದುದರಿಂದ ಹಿಂದೆಂದಿಗಿಂತಲೂ ಹೆಚ್ಚಾಗಿ ಇಂದು, ನಿಜ ಕ್ರೈಸ್ತರು ಯೆಹೋವನಿಂದ ಮತ್ತು ಆಳುತ್ತಿರುವ ಆತನ ಅರಸನಿಂದ ನಾಯಕತ್ವವನ್ನು ವಹಿಸಲಿಕ್ಕಾಗಿ ಅಧಿಕಾರವನ್ನು ಪಡೆದಿರುವಂಥ ಜೊತೆ ಆರಾಧಕರಲ್ಲಿ ತಮ್ಮ ಭರವಸೆಯನ್ನು ಇಡುವ ಆವಶ್ಯಕತೆಯಿದೆ. ಈ ನಂಬಿಗಸ್ತ ಪುರುಷರು ದೇವಜನರನ್ನು ಮಾರ್ಗದರ್ಶಿಸುವರು. ಅವರ ಮಾರ್ಗದರ್ಶನವನ್ನು ಅಲಕ್ಷಿಸುವುದು ವಿಪತ್ತಿನಲ್ಲಿ ಕೊನೆಗೊಳ್ಳಸಾಧ್ಯವಿದೆ.—ಮತ್ತಾಯ 24:45-47; ಇಬ್ರಿಯ 13:7, 17.
17. ದೇವರ ನಂಬಿಗಸ್ತ ಸೇವಕರು ಏಕೆ ಯೆಹೋವನು ನಡಿಸುವ ರಕ್ಷಣಾಕಾರ್ಯವನ್ನು ನೋಡುವರು?
17ಯೆಹೋವನು ನಡಿಸುವ ರಕ್ಷಣಾಕಾರ್ಯವನ್ನು ನೋಡುವುದು: ಯಾರು ಕ್ರೈಸ್ತ ಸಮಗ್ರತೆಯ ಸ್ಥಾನಕ್ಕೆ ಅಂಟಿಕೊಂಡು, ಬಿಡುಗಡೆಗಾಗಿ ಯೆಹೋವನಲ್ಲಿ ಭರವಸೆಯಿಡುತ್ತಾರೋ ಅವರೆಲ್ಲರಿಗೂ ರಕ್ಷಣೆಯು ಬಹುಮಾನವಾಗಿರುವುದು. ಅಂತಿಮ ತಾಸಿನ ವರೆಗೆ ಮತ್ತು ಸಾಧ್ಯವಿರುವಷ್ಟರ ಮಟ್ಟಿಗೆ ಅವರು ಯೆಹೋವನ ನ್ಯಾಯತೀರ್ಪಿನ ದಿನದ ಆಗಮನದ ಕುರಿತು ಪ್ರಕಟಿಸುವರು. ಯೆಹೋವನೇ ಸತ್ಯ ದೇವರು ಮತ್ತು ಭೂಮಿಯ ಮೇಲೆ ಆತನಿಗೆ ನಂಬಿಗಸ್ತ ಸೇವಕರಿದ್ದಾರೆ ಎಂಬುದನ್ನು ಸರ್ವ ಸೃಷ್ಟಿಯೂ ತಿಳಿದುಕೊಳ್ಳಬೇಕು. ಇನ್ನೆಂದಿಗೂ ಯೆಹೋವನ ಪರಮಾಧಿಕಾರದ ನ್ಯಾಯೋಚಿತತೆಯ ವಿಷಯದಲ್ಲಿ ಸುದೀರ್ಘ ವಾದವಿವಾದಕ್ಕೆ ಆಸ್ಪದವಿರುವುದಿಲ್ಲ.—ಯೆಹೆಜ್ಕೇಲ 33:33; 36:23.
18, 19. (ಎ) ವಿಮೋಚನಕಾಂಡ 15ನೆಯ ಅಧ್ಯಾಯದಲ್ಲಿರುವ ವಿಜಯಗೀತೆಯು, ಗೋಗನ ಆಕ್ರಮಣವನ್ನು ಪಾರಾಗುವವರ ಭಾವನೆಗಳನ್ನು ಹೇಗೆ ಪ್ರತಿಬಿಂಬಿಸುತ್ತದೆ? (ಬಿ) ದೇವಜನರು ಈಗ ಏನನ್ನು ಮಾಡುವುದು ಯೋಗ್ಯವಾದದ್ದಾಗಿದೆ?
18 ನವೀಕೃತ ಶಕ್ತಿಯೊಂದಿಗೆ, ದೇವಜನರು ಹೊಸ ಲೋಕವನ್ನು ಪ್ರವೇಶಿಸುವರು. ಪುರಾತನ ಇಸ್ರಾಯೇಲ್ಯರು ಕೆಂಪು ಸಮುದ್ರದ ಮಾರ್ಗವಾಗಿ ಬಿಡುಗಡೆಮಾಡಲ್ಪಟ್ಟ ನಂತರ ಹಾಡಿದಂತೆಯೇ ಇವರೂ ವಿಜಯಗೀತೆಯನ್ನು ಹಾಡಲು ಅತ್ಯಾತುರರಾಗಿರುವರು. ವೈಯಕ್ತಿಕವಾಗಿ ಮತ್ತು ಒಂದು ಗುಂಪಿನೋಪಾದಿ ಯೆಹೋವನ ಸಂರಕ್ಷಣೆಗಾಗಿ ಸರ್ವದಾ ಕೃತಜ್ಞರಾಗಿದ್ದು, ದೀರ್ಘ ಸಮಯದ ಹಿಂದೆ ನುಡಿಯಲ್ಪಟ್ಟ ಈ ಮಾತುಗಳನ್ನು ಇವರು ಪ್ರತಿಧ್ವನಿಸುವರು: “ಯೆಹೋವನ ಸ್ತೋತ್ರವನ್ನು ಗಾನಮಾಡೋಣ; . . . ಯೆಹೋವನು ಯುದ್ಧಶೂರನು; . . . ಯೆಹೋವನೇ, ನಿನ್ನ ಭುಜಬಲವು ನಿನ್ನ ಶತ್ರುಗಳನ್ನು ಪುಡಿಪುಡಿಮಾಡುತ್ತದೆ. ನೀನು ಅತ್ಯಧಿಕಮಹತ್ವವುಳ್ಳವನಾಗಿ ನಿನಗೆದುರಾಗಿ ನಿಲ್ಲುವವರನ್ನು ಕೆಡವಿಬಿಡುತ್ತೀ. ನಿನ್ನ ಕೋಪಾಗ್ನಿಯು ಹೊರಟು ಅವರನ್ನು ಒಣಗಿದ ಹುಲ್ಲನ್ನೋ ಎಂಬಂತೆ ಭಸ್ಮಮಾಡುತ್ತದೆ. . . . ನೀನು ಬಿಡುಗಡೆ ಮಾಡಿದ ಪ್ರಜೆಯನ್ನೋ ಪ್ರೀತಿಯಿಂದ ನಡಿಸಿಕೊಂಡು ನಿನ್ನ ಪರಿಶುದ್ಧನಿವಾಸಸ್ಥಾನದ ತನಕ ನಿನ್ನ ಶಕ್ತಿಯಿಂದ ಬರಮಾಡಿದಿ. . . . ನೀನು ಅವರನ್ನು ನಿನ್ನ ಸ್ವಕೀಯದೇಶವಾಗಿರುವ ಬೆಟ್ಟದ ಸೀಮೆಗೆ ತಂದು ಸ್ಥಾಪಿಸುವಿ. ಯೆಹೋವನೇ, ನೀನು ಸ್ವಂತ ನಿವಾಸಕ್ಕಾಗಿ ಏರ್ಪಡಿಸಿಕೊಂಡಿರುವ ಸ್ಥಾನವಾಗಿಯೂ ಕರ್ತನೇ, ನೀನು ಸಿದ್ಧಪಡಿಸಿಕೊಂಡಿರುವ ಪವಿತ್ರಾಲಯವಾಗಿಯೂ ಇರುವಲ್ಲಿಗೆ ಅವರನ್ನು ಬರಮಾಡುವಿ. ಯೆಹೋವನೇ ಯುಗಯುಗಾಂತರಗಳಲ್ಲಿಯೂ ಆಳುವನು.”—ವಿಮೋಚನಕಾಂಡ 15:1-19.
19 ನಿತ್ಯಜೀವದ ಪ್ರತೀಕ್ಷೆಯು ಹಿಂದೆಂದಿಗಿಂತಲೂ ಹೆಚ್ಚು ಈಗ ಸುವ್ಯಕ್ತವಾಗಿರುವಾಗ, ದೇವರ ಸೇವಕರು ಯೆಹೋವನಿಗೆ ತಮ್ಮ ಭಕ್ತಿಯನ್ನು ತೋರಿಸುವ ಮತ್ತು ತಮ್ಮ ನಿತ್ಯ ಅರಸನಾಗಿ ಆತನನ್ನೇ ಸೇವಿಸುವ ತಮ್ಮ ದೃಢನಿರ್ಧಾರವನ್ನು ನವೀಕರಿಸಲು ಇದೆಂಥ ಸುಸಂದರ್ಭವಾಗಿದೆ!—1 ಪೂರ್ವಕಾಲವೃತ್ತಾಂತ 29:11-13.
ನೀವು ವಿವರಿಸಬಲ್ಲಿರೋ?
• ಗೋಗನ ಆಕ್ರಮಣವು ಅಭಿಷಿಕ್ತರು ಮತ್ತು ಬೇರೆ ಕುರಿಗಳ ಕಡೆಗೆ ಏಕೆ ನಿರ್ದೇಶಿಸಲ್ಪಡುವುದು?
• ದೇವಜನರು ಹೇಗೆ ತಮ್ಮ ಸ್ಥಾನದಲ್ಲಿರುವರು?
• ಸುಮ್ಮನೆ ನಿಂತುಕೊಳ್ಳುವುದರ ಅರ್ಥವೇನು?
• ದೇವಜನರು ಯೆಹೋವನು ನಡಿಸುವ ರಕ್ಷಣಾಕಾರ್ಯವನ್ನು ಹೇಗೆ ನೋಡುವರು?
[ಅಧ್ಯಯನ ಪ್ರಶ್ನೆಗಳು]
[ಪುಟ 18ರಲ್ಲಿರುವ ಚಿತ್ರ]
ಯೆಹೋಷಾಫಾಟನೂ ಅವನ ಜನರೂ ಹೋರಾಡುವ ಅಗತ್ಯವೇ ಇರಲಿಲ್ಲವಾದರೂ ಯೆಹೋವನು ಅವರಿಗೆ ಜಯವನ್ನು ನೀಡಿದನು
[ಪುಟ 20ರಲ್ಲಿರುವ ಚಿತ್ರ]
ಅಭಿಷಿಕ್ತರು ಮತ್ತು ಬೇರೆ ಕುರಿಗಳು ಯೆಹೋವನ ಪರಮಾಧಿಕಾರವನ್ನು ಎತ್ತಿಹಿಡಿಯುವ ಕೆಲಸದಲ್ಲಿ ಪಾಲ್ಗೊಳ್ಳುತ್ತಾರೆ
[ಪುಟ 22ರಲ್ಲಿರುವ ಚಿತ್ರ]
ಪುರಾತನ ಇಸ್ರಾಯೇಲ್ಯರಂತೆ, ದೇವಜನರು ಅತಿ ಬೇಗನೆ ಒಂದು ವಿಜಯಗೀತೆಯನ್ನು ಹಾಡಲಿರುವರು