ಸ್ವಸಂತುಷ್ಟಿಯ ಗುಟ್ಟನ್ನು ತಿಳಿದುಕೊಳ್ಳುವುದು
ಸ್ವಸಂತುಷ್ಟಿಯ ಗುಟ್ಟನ್ನು ತಿಳಿದುಕೊಳ್ಳುವುದು
ಫಿಲಿಪ್ಪಿಯಲ್ಲಿದ್ದ ಕ್ರೈಸ್ತರಿಗೆ ಬರೆದ ಒಂದು ಉತ್ತೇಜನದಾಯಕ ಪತ್ರದಲ್ಲಿ ಅಪೊಸ್ತಲ ಪೌಲನು ತಿಳಿಸಿದ್ದು: “ನಾನಂತೂ ಇದ್ದ ಸ್ಥಿತಿಯಲ್ಲಿಯೇ [ಸ್ವ]ಸಂತುಷ್ಟನಾಗಿರುವದನ್ನು ಕಲಿತುಕೊಂಡಿದ್ದೇನೆ. . . . ನಾನು ತೃಪ್ತನಾಗಿದ್ದರೂ ಹಸಿದವನಾಗಿದ್ದರೂ, ಸಮೃದ್ಧಿಯುಳ್ಳವನಾದರೂ ಕೊರತೆಯುಳ್ಳವನಾದರೂ, ಯಾವ ತರದ ಸ್ಥಿತಿಯಲ್ಲಿರುವವನಾದರೂ ಅದರ ಗುಟ್ಟು ನನಗೆ ತಿಳಿದದೆ.”—ಫಿಲಿಪ್ಪಿ 4:11, 12.
ಪೌಲನ ಸ್ವಸಂತುಷ್ಟಿಯ ಗುಟ್ಟು ಏನಾಗಿತ್ತು? ನಮ್ಮ ಕಾಲದ ದುಬಾರಿ ಜೀವನವೆಚ್ಚ ಹಾಗೂ ಆರ್ಥಿಕ ಅಸ್ಥಿರತೆಯನ್ನು ಪರಿಗಣಿಸುವಾಗ, ದೇವರಿಗೆ ಸಲ್ಲಿಸುವ ಸೇವೆಯ ಮೇಲೆ ಗಮನವನ್ನು ಕೇಂದ್ರೀಕರಿಸಲಿಕ್ಕಾಗಿ ತಾವು ಹೇಗೆ ಸ್ವಸಂತುಷ್ಟರಾಗಿರಸಾಧ್ಯವಿದೆ ಎಂಬುದನ್ನು ಸತ್ಯ ಕ್ರೈಸ್ತರು ಕಲಿಯುವುದು ಖಂಡಿತವಾಗಿಯೂ ಪ್ರಯೋಜನದಾಯಕವಾಗಿರುವುದು.
ಈ ಮುಂಚೆ ತನ್ನ ಪತ್ರದಲ್ಲಿ ಪೌಲನು, ತನ್ನ ಹಿಂದಿನ ಯಶಸ್ವಿಕರ ಜೀವನ ವೃತ್ತಿಯ ಕುರಿತು ವರ್ಣಿಸಿದನು. ಅವನು ಹೇಳಿದ್ದು: “ನಾನಾದರೋ ಶರೀರಸಂಬಂಧವಾದವುಗಳಲ್ಲಿಯೂ ಭರವಸವಿಟ್ಟರೂ ಇಡಬಹುದು. ಬೇರೆ ಯಾವನಾದರೂ ಶರೀರಸಂಬಂಧವಾದವುಗಳಲ್ಲಿ ಭರವಸವಿಡಬಹುದೆಂದು ಯೋಚಿಸುವದಾದರೆ ನಾನು ಅವನಿಗಿಂತಲೂ ಹೆಚ್ಚಾಗಿ ಹಾಗೆ ಯೋಚಿಸಬಹುದು. ಹುಟ್ಟಿದ ಎಂಟನೆಯ ದಿನದಲ್ಲಿ ನನಗೆ ಸುನ್ನತಿಯಾಯಿತು; ನಾನು ಇಸ್ರಾಯೇಲ್ ವಂಶದವನು, ಬೆನ್ಯಾಮೀನನ ಕುಲದವನು, ಇಬ್ರಿಯರಿಂದ ಹುಟ್ಟಿದ ಇಬ್ರಿಯನು; ನೇಮನಿಷ್ಠೆಗಳನ್ನು ನೋಡಿದರೆ ನಾನು ಫರಿಸಾಯನು, ಮತಾಸಕ್ತಿಯನ್ನು ನೋಡಿದರೆ ನಾನು ಕ್ರೈಸ್ತಸಭೆಯ ಹಿಂಸಕನು, ಧರ್ಮಶಾಸ್ತ್ರದಲ್ಲಿ ಹೇಳಿರುವ ನೀತಿಯನ್ನು ನೋಡಿದರೆ ನಾನು ನಿರ್ದೋಷಿ.” (ಫಿಲಿಪ್ಪಿ 3:4-6) ಇದಕ್ಕೆ ಕೂಡಿಸಿ, ಹುರುಪಿನಿಂದ ಕೂಡಿದ್ದ ಯೆಹೂದ್ಯನೋಪಾದಿ ಪೌಲನಿಗೆ ಯೆರೂಸಲೇಮಿನಲ್ಲಿದ್ದ ಮಹಾಯಾಜಕರು ಒಂದು ನೇಮಕವನ್ನು ಕೊಟ್ಟಿದ್ದರು ಮತ್ತು ಅವರ ಬೆಂಬಲವೂ ಅವನಿಗಿತ್ತು. ಇದೆಲ್ಲವೂ ಅವನಿಗೆ ಯೆಹೂದಿ ವ್ಯವಸ್ಥೆಯಲ್ಲಿ—ರಾಜಕೀಯ, ಧಾರ್ಮಿಕ, ಮತ್ತು ನಿಸ್ಸಂದೇಹವಾಗಿ ಆರ್ಥಿಕ—ಅಧಿಕಾರ ಹಾಗೂ ಘನತೆಯ ನಿರೀಕ್ಷೆಯನ್ನು ನೀಡಿತು.—ಅ. ಕೃತ್ಯಗಳು 26:10, 12.
ಆದರೂ, ಪೌಲನು ಒಬ್ಬ ಹುರುಪಿನ ಕ್ರೈಸ್ತ ಶುಶ್ರೂಷಕನಾದಾಗ, ಎಲ್ಲವೂ ತುಂಬ ಗಮನಾರ್ಹವಾದ ರೀತಿಯಲ್ಲಿ ಬದಲಾಯಿತು. ಸುವಾರ್ತೆಗೋಸ್ಕರ ಅವನು ತನ್ನ ಯಶಸ್ವಿಕರ ಜೀವನ ವೃತ್ತಿಯನ್ನು ಹಾಗೂ ಈ ಮುಂಚೆ ಯೆಹೂದಿ ಸಮುದಾಯದಿಂದ ಪ್ರಾಮುಖ್ಯವೆಂದು ಪರಿಗಣಿಸಲ್ಪಡುತ್ತಿದ್ದ ಸರ್ವವನ್ನೂ ಮನಃಪೂರ್ವಕವಾಗಿ ತೊರೆದುಬಿಟ್ಟನು. (ಫಿಲಿಪ್ಪಿ 3:7, 8) ಹೀಗಿರುವಾಗ, ಅವನು ಈಗ ಹೇಗೆ ತನ್ನನ್ನು ಪೋಷಿಸಿಕೊಳ್ಳಲಿದ್ದನು? ಒಬ್ಬ ಶುಶ್ರೂಷಕನೋಪಾದಿ ಅವನಿಗೆ ಸಂಬಳವು ದೊರೆಯಲಿತ್ತೋ? ಅವನ ವೈಯಕ್ತಿಕ ಆವಶ್ಯಕತೆಗಳು ಹೇಗೆ ಪೂರೈಸಲ್ಪಡಲಿದ್ದವು?
ಯಾವುದೇ ಸಂಬಳವಿಲ್ಲದೆ ಪೌಲನು ತನ್ನ ಶುಶ್ರೂಷೆಯನ್ನು ನಿರ್ವಹಿಸಿದನು. ಅವನು ಯಾರ ಸೇವೆಯನ್ನು ಮಾಡುತ್ತಿದ್ದನೋ ಅವರಿಗೆ ಹೊರೆಯಾಗಿರಬಾರದೆಂಬ ಕಾರಣಕ್ಕಾಗಿ, ಕೊರಿಂಥದಲ್ಲಿದ್ದಾಗ ಅವನು ಅಕ್ವಿಲ ಮತ್ತು ಪ್ರಿಸ್ಕಿಲ್ಲರೊಂದಿಗೆ ಗುಡಾರಮಾಡುವ ಕೆಲಸದಲ್ಲಿ ಜೊತೆಗೂಡಿದನು. ಮತ್ತು ತನ್ನನ್ನು ಪೋಷಿಸಿಕೊಳ್ಳಲಿಕ್ಕಾಗಿ ಅವನು ಇನ್ನಿತರ ಕೆಲಸಗಳನ್ನೂ ಮಾಡಿದನು. (ಅ. ಕೃತ್ಯಗಳು 18:1-3; 1 ಥೆಸಲೊನೀಕ 2:9; 2 ಥೆಸಲೊನೀಕ 3:8-10) ಪೌಲನು ವ್ಯಾಪಕವಾದ ಮೂರು ಮಿಷನೆರಿ ಪ್ರಯಾಣಗಳನ್ನು ಮಾಡಿದನು, ಮತ್ತು ಸಂದರ್ಶನದ ಅಗತ್ಯವಿದ್ದ ಸಭೆಗಳಿಗೂ ಅವನು ಪ್ರಯಾಣಿಸಿದನು. ಅವನು ದೇವರ ಸೇವೆಯಲ್ಲಿ ಸಂಪೂರ್ಣವಾಗಿ ಮಗ್ನನಾಗಿದ್ದರಿಂದ, ಅವನ ಬಳಿ ಹೆಚ್ಚು ಭೌತಿಕ ಸ್ವತ್ತುಗಳಿರಲಿಲ್ಲ. ಸಾಮಾನ್ಯವಾಗಿ ಸಹೋದರರು ಅವನ ಆವಶ್ಯಕತೆಗಳನ್ನು ಪೂರೈಸಿದರು. ಆದರೂ ಕೆಲವೊಮ್ಮೆ ಪ್ರತಿಕೂಲ ಸನ್ನಿವೇಶಗಳ ಕಾರಣ, ಅವನು ಅಗತ್ಯದಲ್ಲಿ ಬಿದ್ದನು ಮತ್ತು ಅವನಿಗೆ ಕೊರತೆಯೂ ಉಂಟಾಯಿತು. (2 ಕೊರಿಂಥ 11:27; ಫಿಲಿಪ್ಪಿ 4:15-18) ಆದರೂ ಪೌಲನು ತನ್ನ ಅವಸ್ಥೆಯ ಕುರಿತು ಎಂದೂ ದೂರಲಿಲ್ಲ, ಮತ್ತು ಇತರರ ಬಳಿ ಏನಿತ್ತೋ ಅದಕ್ಕಾಗಿ ದುರಾಸೆಪಡಲಿಲ್ಲ. ಜೊತೆ ಕ್ರೈಸ್ತರ ಪ್ರಯೋಜನಕ್ಕಾಗಿ ಅವನು ಮನಃಪೂರ್ವಕವಾಗಿ ಮತ್ತು ಸಂತೋಷದಿಂದ ಶ್ರಮಿಸಿದನು. ವಾಸ್ತವದಲ್ಲಿ, “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಎಂಬ ಯೇಸುವಿನ ಸುಪ್ರಸಿದ್ಧ ಮಾತುಗಳನ್ನು ಉದ್ಧರಿಸಿದವನು ಪೌಲನೇ ಆಗಿದ್ದನು. ನಮ್ಮೆಲ್ಲರಿಗಾಗಿ ಎಷ್ಟು ಅತ್ಯುತ್ತಮವಾದ ಮಾದರಿ!—ಅ. ಕೃತ್ಯಗಳು 20:33-35.
ಸ್ವಸಂತುಷ್ಟಿಯ ಅರ್ಥ
ಪೌಲನ ಸಂತೋಷಕ್ಕೆ ಹಾಗೂ ಸಂತೃಪ್ತಿಗೆ ಪ್ರಮುಖ ಕಾರಣವು, ಅವನಿಗಿದ್ದ ಸ್ವಸಂತುಷ್ಟಿಯ ಪರಿಜ್ಞಾನವೇ ಆಗಿತ್ತು. ಆದರೂ, ಸ್ವಸಂತುಷ್ಟರಾಗಿರುವುದು ಏನನ್ನು ಅರ್ಥೈಸುತ್ತದೆ? ಸರಳವಾದ ಮಾತುಗಳಲ್ಲಿ ಹೇಳುವುದಾದರೆ, ಮೂಲಭೂತ ವಿಷಯಗಳಲ್ಲಿ ಸಂತೃಪ್ತರಾಗಿರುವುದೇ ಅದರ ಅರ್ಥವಾಗಿದೆ. ಇದರ ಕುರಿತು ಪೌಲನು ಶುಶ್ರೂಷೆಯಲ್ಲಿ ತನ್ನ ಸಂಗಡಿಗನಾಗಿದ್ದ ತಿಮೊಥೆಯನಿಗೆ ಹೇಳಿದ್ದು: “ಸಂತುಷ್ಟಿಸಹಿತವಾದ ಭಕ್ತಿಯು ದೊಡ್ಡ ಲಾಭವೇ ಸರಿ. ನಾವು ಲೋಕದೊಳಕ್ಕೆ ಏನೂ ತಕ್ಕೊಂಡು ಬರಲಿಲ್ಲವಷ್ಟೆ; ಅದರೊಳಗಿಂದ ಏನೂ ತಕ್ಕೊಂಡು ಹೋಗಲಾರೆವು. ನಮಗೆ ಅನ್ನವಸ್ತ್ರಗಳಿದ್ದರೆ ಸಾಕು.”—1 ತಿಮೊಥೆಯ 6:6-8.
ಪೌಲನು ಸ್ವಸಂತುಷ್ಟಿಯನ್ನು ದೈವಿಕ ಭಕ್ತಿಯೊಂದಿಗೆ ಸಂಬಂಧಿಸಿದನೆಂಬುದನ್ನು ಗಮನಿಸಿರಿ. ನಿಜ ಸಂತೋಷವು ಭೌತಿಕ ಸ್ವತ್ತು ಅಥವಾ ಐಶ್ವರ್ಯದಿಂದಲ್ಲ, ಬದಲಾಗಿ ದೈವಿಕ ಭಕ್ತಿಯಿಂದ ಅಂದರೆ ದೇವರಿಗೆ ನಾವು ಸಲ್ಲಿಸುವ ಸೇವೆಗೆ ಪ್ರಥಮ ಸ್ಥಾನವನ್ನು ಕೊಡುವುದರಿಂದ ಬರುತ್ತದೆ ಎಂಬುದನ್ನು ಅವನು ಮನಗಂಡನು. ‘ಅನ್ನವಸ್ತ್ರಗಳು’ ಅವನು ದೈವಿಕ ಭಕ್ತಿಯನ್ನು ಬೆನ್ನಟ್ಟುತ್ತಾ ಹೋಗಲು ಅವನನ್ನು ಶಕ್ತನನ್ನಾಗಿ ಮಾಡುವ ಮಾಧ್ಯಮಗಳಾಗಿದ್ದವು ಅಷ್ಟೇ. ಆದುದರಿಂದ, ಪೌಲನ ದೃಷ್ಟಿಯಲ್ಲಿ ಸ್ವಸಂತುಷ್ಟಿಯ ಗುಟ್ಟು, ಸನ್ನಿವೇಶಗಳು ಏನೇ ಆಗಿರಲಿ, ಯೆಹೋವನ ಮೇಲೆ ಆತುಕೊಳ್ಳಬೇಕು ಎಂಬುದಾಗಿತ್ತು.
ಅನೇಕ ಜನರು ಇಂದು ಅತ್ಯಧಿಕ ಚಿಂತೆ ಹಾಗೂ ಅಸಂತೋಷವನ್ನು ಅನುಭವಿಸುತ್ತಾರೆ, ಏಕೆಂದರೆ ಅವರಿಗೆ ಆ ಗುಟ್ಟಿನ ಬಗ್ಗೆ ಅರಿವಿಲ್ಲ ಅಥವಾ ಅವರು ಅದನ್ನು ಅಲಕ್ಷಿಸುತ್ತಾರೆ. ಅವರು ಸ್ವಸಂತುಷ್ಟಿಯನ್ನು ಬೆಳೆಸಿಕೊಳ್ಳುವುದಕ್ಕೆ ಬದಲಾಗಿ, ಹಣದಲ್ಲಿ ಹಾಗೂ ಹಣದಿಂದ ಅವರು ಖರೀದಿಸಸಾಧ್ಯವಿರುವ ವಸ್ತುಗಳಲ್ಲಿ ತಮ್ಮ ಭರವಸೆಯನ್ನಿಡಲು ಇಷ್ಟಪಡುತ್ತಾರೆ. ಜಾಹೀರಾತಿನ ಉದ್ಯಮ ಹಾಗೂ ವಾರ್ತಾ ಮಾಧ್ಯಮಗಳು, ತಮ್ಮ ಬಳಿ ನವನವೀನ ಹಾಗೂ ಅತ್ಯಂತ ದುಬಾರಿಯಾದ ವಸ್ತುಗಳು ಹಾಗೂ ಸಾಧನಗಳು ಇಲ್ಲದಿರುವಲ್ಲಿ, ಅದು ಕೂಡ ಈಗಲೇ ಇಲ್ಲದಿರುವಲ್ಲಿ, ತಾವು ಸಂತೋಷದಿಂದ ಇರಲು ಸಾಧ್ಯವಿಲ್ಲ ಎಂದು ಜನರು ನೆನಸುವಂತೆ ಮಾಡುತ್ತವೆ. ಇದರ ಪರಿಣಾಮವಾಗಿ, ಅನೇಕರು ಹಣ ಮತ್ತು ಪ್ರಾಪಂಚಿಕ ವಸ್ತುಗಳ ಬೆನ್ನಟ್ಟುವಿಕೆಗೆ ಬಲಿಯಾಗುತ್ತಾರೆ. ಹೀಗೆ ಅವರು ಸಂತೋಷ 1 ತಿಮೊಥೆಯ 6:9, 10.
ಹಾಗೂ ಸಂತೃಪ್ತಿಯನ್ನು ಕಂಡುಕೊಳ್ಳುವುದಕ್ಕೆ ಬದಲಾಗಿ, “ದುಷ್ಪ್ರೇರಣೆಯೆಂಬ ಉರ್ಲಿನಲ್ಲಿ ಸಿಕ್ಕಿಕೊಂಡು ಬುದ್ಧಿವಿರುದ್ಧವಾಗಿಯೂ ಹಾನಿಕರವಾಗಿಯೂ ಇರುವ ಅನೇಕ ಆಶೆಗಳಲ್ಲಿ ಬೀಳುತ್ತಾರೆ. ಇಂಥ ಆಶೆಗಳು ಮನುಷ್ಯರನ್ನು ಸಂಹಾರನಾಶನಗಳಲ್ಲಿ ಮುಳುಗಿಸುತ್ತವೆ.”—ಆ ಗುಟ್ಟನ್ನು ತಿಳಿದುಕೊಂಡಿರುವವರು
ಈ ದಿನಗಳಲ್ಲಿ, ದೈವಿಕ ಭಕ್ತಿ ಮತ್ತು ಸ್ವಸಂತುಷ್ಟಿಯಿಂದ ಜೀವಿಸುವುದು ಹಾಗೂ ಸಂತೋಷ ಮತ್ತು ಸಂತೃಪ್ತಿಯನ್ನು ಕಂಡುಕೊಳ್ಳುವುದು ನಿಜವಾಗಿಯೂ ಸಾಧ್ಯವಿದೆಯೋ? ಹೌದು, ಸಾಧ್ಯವಿದೆ. ವಾಸ್ತವದಲ್ಲಿ, ಇಂದು ಲಕ್ಷಾಂತರ ಜನರು ಇದನ್ನೇ ಮಾಡುತ್ತಿದ್ದಾರೆ. ತಮ್ಮ ಬಳಿ ಇರುವ ಭೌತಿಕ ವಸ್ತುಗಳಲ್ಲಿಯೇ ಸಂತೋಷಪಡುವುದರ ಗುಟ್ಟನ್ನು ಅವರು ತಿಳಿದುಕೊಂಡಿದ್ದಾರೆ. ಇವರು ಯೆಹೋವನ ಸಾಕ್ಷಿಗಳೇ ಆಗಿದ್ದು, ತಮ್ಮನ್ನು ದೇವರಿಗೆ ಸಮರ್ಪಿಸಿಕೊಂಡಿದ್ದಾರೆ, ಆತನ ಚಿತ್ತವನ್ನು ಮಾಡುತ್ತಿದ್ದಾರೆ ಮತ್ತು ಎಲ್ಲಾ ಕಡೆಗಳಲ್ಲಿರುವ ಜನರಿಗೆ ಆತನ ಉದ್ದೇಶಗಳ ಕುರಿತು ಕಲಿಸುತ್ತಿದ್ದಾರೆ.
ಉದಾಹರಣೆಗೆ, ತರಬೇತಿಯನ್ನು ಪಡೆದು ದೇವರ ರಾಜ್ಯದ ಸುವಾರ್ತೆಯನ್ನು ಸಾರಲಿಕ್ಕಾಗಿ ಅಪರಿಚಿತ ದೇಶಗಳಿಗೆ ಮಿಷನೆರಿಗಳಾಗಿ ಕಳುಹಿಸಲ್ಪಡಲು ತಮ್ಮನ್ನೇ ನೀಡಿಕೊಂಡಿರುವವರನ್ನು ಪರಿಗಣಿಸಿರಿ. (ಮತ್ತಾಯ 24:14) ಅನೇಕವೇಳೆ, ಅವರು ಯಾವ ದೇಶಗಳಿಗೆ ಕಳುಹಿಸಲ್ಪಡುತ್ತಾರೋ ಆ ದೇಶಗಳಲ್ಲಿನ ಜೀವಿಸುವ ಪರಿಸ್ಥಿತಿಗಳು, ಅವರು ಯಾವ ಜೀವನ ರೀತಿಗೆ ಒಗ್ಗಿಹೋಗಿದ್ದರೋ ಅಷ್ಟರ ಮಟ್ಟಿಗೆ ಭೌತಿಕವಾಗಿ ಮುಂದುವರಿದಂಥದ್ದಾಗಿರುವುದಿಲ್ಲ. ದೃಷ್ಟಾಂತಕ್ಕಾಗಿ, 1947ರ ಆರಂಭದಲ್ಲಿ ಮಿಷನೆರಿಗಳು ಏಷ್ಯಾದ ದೇಶವೊಂದಕ್ಕೆ ಆಗಮಿಸಿದಾಗ, ಯುದ್ಧಾನಂತರದ ಪರಿಣಾಮಗಳು ಇನ್ನೂ ಅಸ್ತಿತ್ವದಲ್ಲಿದ್ದವು ಮತ್ತು ಕೆಲವೇ ಮನೆಗಳಲ್ಲಿ ವಿದ್ಯುತ್ ದೀಪಗಳಿದ್ದವು. ಅನೇಕ ದೇಶಗಳಲ್ಲಿ, ಒಂದು ಇಲೆಕ್ಟ್ರಿಕ್ ವಾಷಿಂಗ್ ಮಷೀನ್‌ನಲ್ಲಿ ಬಟ್ಟೆಗಳನ್ನು ಒಗೆಯುವುದಕ್ಕೆ ಬದಲಾಗಿ, ಬಟ್ಟೆ ಒಗೆಯುವಂಥ ಒಂದು ಕಲ್ಲಿನ ಮೇಲೋ ಅಥವಾ ನದಿಯ ಬಳಿಯಿರುವ ಬಂಡೆಗಳ ಮೇಲೋ ಒಂದೊಂದಾಗಿ ಬಟ್ಟೆಗಳನ್ನು ಒಗೆಯಬೇಕೆಂಬುದು ಮಿಷನೆರಿಗಳಿಗೆ ಗೊತ್ತಾಯಿತು. ಆದರೆ ಅವರು ಜನರಿಗೆ ಬೈಬಲ್ ಸತ್ಯವನ್ನು ಕಲಿಸಲು ಬಂದಿದ್ದರು, ಆದುದರಿಂದ ಸ್ಥಳಿಕ ಪರಿಸ್ಥಿತಿಗಳಿಗೆ ಅವರು ಹೊಂದಿಕೊಂಡರು ಮತ್ತು ಶುಶ್ರೂಷೆಯಲ್ಲಿ ಕಾರ್ಯಮಗ್ನರಾದರು.
ಇನ್ನಿತರರು ಪೂರ್ಣ ಸಮಯದ ಶುಶ್ರೂಷೆಯನ್ನು ಆರಂಭಿಸಿದ್ದಾರೆ ಅಥವಾ ಸುವಾರ್ತೆಯು ಇನ್ನೂ ತಲಪಿಲ್ಲದಿರುವಂಥ ಕ್ಷೇತ್ರಗಳಿಗೆ ಸ್ಥಳಾಂತರಿಸಿದ್ದಾರೆ. ಆಡೂಲ್‌ಫೊ ಎಂಬುವವರು ಮೆಕ್ಸಿಕೊದ ಬೇರೆ ಬೇರೆ ಭಾಗಗಳಲ್ಲಿ 50ಕ್ಕಿಂತಲೂ ಹೆಚ್ಚು ವರ್ಷಗಳಿಂದ ಪೂರ್ಣ ಸಮಯದ ಶುಶ್ರೂಷಕರಾಗಿ ಸೇವೆಸಲ್ಲಿಸಿದ್ದಾರೆ. ಅವರು ಹೇಳುವುದು: “ಅಪೊಸ್ತಲ ಪೌಲನಂತೆ, ನಾನೂ ನನ್ನ ಹೆಂಡತಿಯೂ ಸನ್ನಿವೇಶಗಳಿಗೆ ತಕ್ಕಂತೆ ನಮ್ಮನ್ನು ಹೊಂದಿಸಿಕೊಳ್ಳಲು ಕಲಿತಿದ್ದೇವೆ. ಉದಾಹರಣೆಗೆ, ನಾವು ಸಂದರ್ಶಿಸಿದ ಸಭೆಗಳಲ್ಲಿ ಒಂದು, ನಗರದಿಂದ ಹಾಗೂ ಮಾರುಕಟ್ಟೆಯಿಂದ ತುಂಬ ದೂರದಲ್ಲಿತ್ತು. ಪ್ರತಿಯೊಂದು ಊಟದ ಸಮಯದಲ್ಲಿ ಅಲ್ಲಿನ ಸಹೋದರರು ಮುಸುಕಿನ ಜೋಳದ ಒಂದೇ ಒಂದು ರೊಟ್ಟಿ ಹಾಗೂ ಸ್ವಲ್ಪ ಹಂದಿಯ ಕೊಬ್ಬು ಮತ್ತು ಉಪ್ಪು, ಅದರ ಜೊತೆಗೆ ಒಂದು ಕಪ್ ಕಾಫಿಯನ್ನು ಸೇವಿಸುವುದರಲ್ಲೇ ತೃಪ್ತರಾಗಿದ್ದರು. ತಿನ್ನಲು ಅವರ ಬಳಿ ಇದ್ದದ್ದು, ದಿನಕ್ಕೆ ಮೂರು ಮುಸುಕಿನ ಜೋಳದ ರೊಟ್ಟಿಗಳು ಮಾತ್ರ. ಆದುದರಿಂದ ನಾವು ಸಹ ಆ ಸಹೋದರರಂತೆಯೇ ಜೀವಿಸಲು ಕಲಿತೆವು. ನಾನು ಯೆಹೋವನನ್ನು ಪೂರ್ಣ ಸಮಯ ಸೇವಿಸಿರುವ ಈ 54 ವರ್ಷಗಳಾದ್ಯಂತ ನಾನು ಇಂಥ ಅನೇಕ ಅನುಭವಗಳಲ್ಲಿ ಆನಂದಿಸಿದ್ದೇನೆ.”
ತಾನು ಹಾಗೂ ತನ್ನ ಕುಟುಂಬವು ಕಷ್ಟಕರ ಪರಿಸ್ಥಿತಿಗಳಿಗೆ ಹೇಗೆ ಹೊಂದಿಕೊಳ್ಳಬೇಕಾಗಿತ್ತು ಎಂಬುದನ್ನು ಫ್ಲೊರಂಟೀನೊ ಜ್ಞಾಪಿಸಿಕೊಳ್ಳುತ್ತಾರೆ. ತಮ್ಮ ಆರಂಭದ ದಿನಗಳನ್ನು ನೆನಪಿಸಿಕೊಳ್ಳುತ್ತಾ ಅವರು ಹೇಳುವುದು: “ನನ್ನ ತಂದೆ ತುಂಬ ಸಂಪದ್ಭರಿತ ವ್ಯಾಪಾರಿಯಾಗಿದ್ದರು. ಅವರ ಬಳಿ ತುಂಬ ಜಮೀನು ಇತ್ತು. ನಮ್ಮ ಸ್ವಂತ ಕಿರಾಣಿ ಅಂಗಡಿಯಲ್ಲಿದ್ದ ಅಂಗಡಿಮೇಜು ನನಗಿನ್ನೂ ನೆನಪಿದೆ. ಅಲ್ಲಿ ಸುಮಾರು 50 ಸೆಂಟಿಮೀಟರುಗಳಷ್ಟು ಅಗಲವೂ 20 ಸೆಂಟಿಮೀಟರುಗಳಷ್ಟು ಎತ್ತರದ್ದೂ ಆಗಿದ್ದ ಒಂದು ಗಲ್ಲಪೆಟ್ಟಿಗೆಯಿತ್ತು, ಮತ್ತು ಅದರಲ್ಲಿ ನಾಲ್ಕು ಕಂಪಾರ್ಟ್‌ಮೆಂಟ್‌ಗಳಿದ್ದವು. ಅದರಲ್ಲಿ ನಾವು ಪ್ರತಿ ದಿನ ಗಿರಾಕಿಗಳಿಂದ ಪಡೆಯುತ್ತಿದ್ದ ಹಣವನ್ನು ಇಡುತ್ತಿದ್ದೆವು. ಪ್ರತಿ ದಿನದ ಕೊನೆಯಲ್ಲಿ, ಆ ಗಲ್ಲಪೆಟ್ಟಿಗೆಯು ಯಾವಾಗಲೂ ನಾಣ್ಯಗಳು ಹಾಗೂ ನೋಟುಗಳಿಂದ ತುಂಬಿತುಳುಕುತ್ತಿತ್ತು.
“ತದನಂತರ ಇದ್ದಕ್ಕಿದ್ದಂತೆ ನಾವು ಆರ್ಥಿಕ ಮುಗ್ಗಟ್ಟನ್ನು ಅನುಭವಿಸಿದೆವು ಮತ್ತು ಒಂದುಕಾಲದಲ್ಲಿ ತುಂಬ ಶ್ರೀಮಂತ ಜೀವನವನ್ನು ನಡೆಸುತ್ತಿದ್ದ ನಾವು ತುಂಬ ಬಡಸ್ಥಿತಿಗೆ ಇಳಿದೆವು. ನಮ್ಮ ಮನೆಯನ್ನು ಬಿಟ್ಟು ಉಳಿದದ್ದನ್ನೆಲ್ಲಾ ಕಳೆದುಕೊಂಡೆವು. ಅಷ್ಟುಮಾತ್ರವಲ್ಲ, ನನ್ನ ಅಣ್ಣಂದಿರಲ್ಲಿ ಒಬ್ಬನು ಅಪಘಾತಕ್ಕೆ ಒಳಗಾದನು ಮತ್ತು ಅವನ ಎರಡೂ ಕಾಲುಗಳು ನಿಷ್ಕ್ರಿಯಗೊಂಡವು. ಪರಿಸ್ಥಿತಿಯೂ ಸಂಪೂರ್ಣವಾಗಿ ಬದಲಾಯಿತು. ಸ್ವಲ್ಪ ಕಾಲದ ವರೆಗೆ ನಾನು ಹಣ್ಣುಗಳನ್ನು ಮತ್ತು ಮಾಂಸವನ್ನು ಮಾರುತ್ತಿದ್ದೆ. ನಾನು ಹತ್ತಿ, ದ್ರಾಕ್ಷಿ, ಮತ್ತು ಆ್ಯಲ್‌ಫ್ಯಾಲ್ಫ ಸೊಪ್ಪಿನ ಕೊಯ್ಲನ್ನೂ ಮಾಡುತ್ತಿದ್ದೆ, ಮತ್ತು ಹೊಲಗಳಿಗೆ ನೀರು ಹಾಯಿಸುವ ಕೆಲಸವನ್ನೂ ಮಾಡಿದೆ. ಕೆಲವರು ನನ್ನನ್ನು ಸರ್ವ ಕಾರ್ಯನಿಪುಣನೆಂದು ಕರೆಯುತ್ತಿದ್ದರು. ನಮ್ಮ ಬಳಿ ಸತ್ಯವಿದೆ, ಕೆಲವೇ ಜನರ ಬಳಿಯಿರುವಂಥ ಒಂದು ಆತ್ಮಿಕ ಸಂಪತ್ತು ನಮ್ಮಲ್ಲಿದೆ ಎಂದು ಹೇಳುವ ಮೂಲಕ ನನ್ನ ತಾಯಿ ನಮ್ಮನ್ನು ಸಂತೈಸುತ್ತಿದ್ದರು. ಆದುದರಿಂದ, ನಾನು ಬಹಳಷ್ಟನ್ನು ಹೊಂದಲು ಮತ್ತು ಸ್ವಲ್ಪವನ್ನು ಹೊಂದಿರುವುದರಲ್ಲಿ ಅಥವಾ ಏನೂ ಇಲ್ಲದಿರುವಲ್ಲಿಯೂ ಸಂತೃಪ್ತನಾಗಿರಲು ಕಲಿತೆ. ಈಗ ನಾನು ಸುಮಾರು 25 ವರ್ಷಗಳಿಂದ ಪೂರ್ಣ ಸಮಯ ಯೆಹೋವನ ಸೇವೆಮಾಡಿರುವುದರಿಂದ, ನಾನು ಜೀವಿತದ ಅತ್ಯುತ್ತಮ ಮಾರ್ಗವನ್ನು ಆಯ್ಕೆಮಾಡಿದ್ದೇನೆ—ಪೂರ್ಣ ಸಮಯ ಯೆಹೋವನನ್ನು ಸೇವಿಸುವುದು—ಎಂಬುದನ್ನು ತಿಳಿದಿರುವುದರಿಂದ ಸಿಗುವ ಆನಂದವನ್ನು ಅನುದಿನವೂ ಪಡೆದುಕೊಂಡಿದ್ದೇನೆ.”
“ಈ ಪ್ರಪಂಚದ ತೋರಿಕೆಯು ಗತಿಸಿಹೋಗುತ್ತಾ ಅದೆ” ಎಂದು ಬೈಬಲು ನಮಗೆ ಒತ್ತಿಹೇಳುತ್ತದೆ. ಈ ಕಾರಣದಿಂದಲೇ, ಅದು ಹೀಗೂ ನಮ್ಮನ್ನು ಉತ್ತೇಜಿಸುತ್ತದೆ: “ಸಂತೋಷಪಡುವವರು ಸಂತೋಷಪಡದವರಂತೆಯೂ, ಕೊಂಡುಕೊಳ್ಳುವವರು ಕೊಂಡದ್ದು ತಮ್ಮದೇ ಎಂದು ಹೇಳದವರಂತೆಯೂ, ಲೋಕವನ್ನು ಅನುಭೋಗಿಸುವವರು ಅದನ್ನು ಪರಿಪೂರ್ಣವಾಗಿ ಅನುಭೋಗಿಸದವರಂತೆಯೂ ಇರಬೇಕು.”—1 ಕೊರಿಂಥ 7:29-31.
ಆದುದರಿಂದ, ನಿಮ್ಮ ಜೀವನ ರೀತಿಯನ್ನು ಪರೀಕ್ಷಿಸುವ ಸಮಯವು ಇದೇ ಆಗಿದೆ. ಸೀಮಿತವಾದ ಸಂಪನ್ಮೂಲಗಳಿರುವ ಸನ್ನಿವೇಶಗಳಲ್ಲಿ ನೀವಿರುವಲ್ಲಿ, ಇದರಿಂದ ಅಸಮಾಧಾನಪಡುವುದು, ಕಹಿಮನೋಭಾವ ಅಥವಾ ಅಸೂಯೆಯಿಂದ ತುಂಬುವುದರ ವಿರುದ್ಧ ಎಚ್ಚರಿಕೆಯಿಂದಿರಿ. ಇನ್ನೊಂದು ಬದಿಯಲ್ಲಿ, ನಿಮ್ಮ ಬಳಿ ಯಾವುದೇ ಭೌತಿಕ ಸ್ವತ್ತು ಇರುವಲ್ಲಿ, ಅವು ನಿಮ್ಮ ಮೇಲೆ ಅಧಿಕಾರ ಚಲಾಯಿಸದಂತೆ ನಿಮ್ಮ ಬದುಕಿನಲ್ಲಿ ಅವುಗಳನ್ನು ಯೋಗ್ಯ ಸ್ಥಾನದಲ್ಲಿಡುವುದು ವಿವೇಕಯುತವಾದದ್ದಾಗಿದೆ. ಅಪೊಸ್ತಲ ಪೌಲನು ಬುದ್ಧಿಹೇಳಿದಂತೆ, ‘ಅಸ್ಥಿರವಾದ ಐಶ್ವರ್ಯದ ಮೇಲೆ ನಿರೀಕ್ಷೆಯನ್ನಿಡದೆ ನಮ್ಮ ಅನುಭೋಗಕ್ಕೋಸ್ಕರ ನಮಗೆ ಎಲ್ಲವನ್ನೂ ಹೇರಳವಾಗಿ ದಯಪಾಲಿಸುವ ದೇವರ ಮೇಲೆ ನಿರೀಕ್ಷೆಯನ್ನಿಡಿರಿ.’ ನೀವು ಹಾಗೆ ಮಾಡುವಲ್ಲಿ, ನೀವೂ ಸ್ವಸಂತುಷ್ಟಿಯ ಗುಟ್ಟನ್ನು ತಿಳಿದುಕೊಂಡಿದ್ದೀರೆಂದು ಹೇಳಸಾಧ್ಯವಿದೆ.—1 ತಿಮೊಥೆಯ 6:17-19.
[ಪುಟ 9ರಲ್ಲಿರುವ ಚಿತ್ರ]
ಇತರರಿಗೆ ಹೊರೆಯಾಗಿರದಿರಲು ಪೌಲನು ಸ್ವತಃ ಕೆಲಸಮಾಡಿದನು
[ಪುಟ 10ರಲ್ಲಿರುವ ಚಿತ್ರಗಳು]
“ಸಂತುಷ್ಟಿಸಹಿತವಾದ ಭಕ್ತಿಯ” ಜೀವನದಲ್ಲಿ ಸಾವಿರಾರು ಮಂದಿ ಸಂತೋಷವನ್ನು ಕಂಡುಕೊಳ್ಳುತ್ತಿದ್ದಾರೆ