ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಕೊರಿಯದಲ್ಲಿ ಒಂದು ವಿಶಿಷ್ಟವಾದ ಭಾಷಾಗುಂಪಿಗೆ ಸೇವೆಸಲ್ಲಿಸುವುದು

ಕೊರಿಯದಲ್ಲಿ ಒಂದು ವಿಶಿಷ್ಟವಾದ ಭಾಷಾಗುಂಪಿಗೆ ಸೇವೆಸಲ್ಲಿಸುವುದು

ಕೊರಿಯದಲ್ಲಿ ಒಂದು ವಿಶಿಷ್ಟವಾದ ಭಾಷಾಗುಂಪಿಗೆ ಸೇವೆಸಲ್ಲಿಸುವುದು

ಇಸವಿ 1997ರ ಬೇಸಿಗೆಯಲ್ಲಿ ನಡೆದ ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನಕ್ಕೆ ಅತಿ ಹುರುಪಿನ ಆದರೆ ಮೌನವಾದ ಒಂದು ಗುಂಪು ಹಾಜರಾಗಿತ್ತು. ಕೊರಿಯದಲ್ಲಿ ಕಿವುಡರಿಗಾಗಿ ಈ ರೀತಿಯ ಅಧಿವೇಶನವು ಇದೇ ಪ್ರಥಮ ಬಾರಿಗೆ ಏರ್ಪಡಿಸಲಾಗಿತ್ತು. ಇದರ ಉಚ್ಚಾಂಕ ಹಾಜರಿಯು 1,174 ಆಗಿತ್ತು. ಭಾಷಣಗಳು, ಇಂಟರ್‌ವ್ಯೂಗಳು ಮತ್ತು ಒಂದು ಡ್ರಾಮವನ್ನು ಒಳಗೊಂಡು ಎಲ್ಲಾ ಕಾರ್ಯಕ್ರಮವು ಕೊರಿಯನ್‌ ಸಂಕೇತ ಭಾಷೆಯಲ್ಲಿ ಪ್ರಸ್ತುತಪಡಿಸಲಾಯಿತು ಹಾಗೂ ಸಮ್ಮೇಳನ ಹಾಲ್‌ನಲ್ಲಿರುವ ಎಲ್ಲರಿಗೂ ಕಾಣಿಸುವಷ್ಟು ದೊಡ್ಡದಾದ ಒಂದು ಪರದೆಯ ಮೇಲೆ ಪ್ರದರ್ಶಿಸಲಾಯಿತು. ಇದು, ಅಸಂಖ್ಯಾತ ಸ್ವಯಂಸೇವಕರ ಅನೇಕ ವರುಷಗಳ ಕಠಿಣ ಪರಿಶ್ರಮದ ಪರಮಾವಧಿಯಾಗಿತ್ತು.

ಭೂಪರದೈಸಿನಲ್ಲಿ “ಕಿವುಡರ ಕಿವಿ ಕೇಳುವ” ಸಮಯವು ಬರಲಿದೆ. (ಯೆಶಾಯ 35:5) ಆ ಪರದೈಸಿನಲ್ಲಿ ಜೀವನವನ್ನು ಅನುಭವಿಸಬೇಕಾದರೆ, ಕಿವುಡರನ್ನು ಸೇರಿಸಿ ಪ್ರತಿಯೊಬ್ಬರೂ ದೇವರ ಆಶೀರ್ವದಿತ ಜನರ ಸಮೃದ್ಧ ಆತ್ಮಿಕ ಸ್ಥಿತಿಯಾದ ಆತ್ಮಿಕ ಪರದೈಸನ್ನು ಮೊದಲಾಗಿ ಪ್ರವೇಶಿಸಬೇಕು. ಅವರು ಯೆಹೋವನಿಂದ ಬೋಧಿಸಲ್ಪಟ್ಟ, ಆತನ ಸಮರ್ಪಿತ ದೀಕ್ಷಾಸ್ನಾತ ಸಾಕ್ಷಿಗಳಾಗಬೇಕು.​—ಮೀಕ 4:​1-4.

ಸಣ್ಣ ಆರಂಭಗಳು

ಇಸವಿ 1960ಗಳಲ್ಲಿ ಕಿವುಡರಿಗೆ ಸ್ವಲ್ಪಮಟ್ಟಿಗೆ ಸುವಾರ್ತೆಯು ಸಾರಲ್ಪಟ್ಟಿತ್ತಾದರೂ, ಕೇವಲ 1970ರಿಂದ ಕೆಲವು ಕಿವುಡ ವ್ಯಕ್ತಿಗಳು ಕೊರಿಯದ ಮುಖ್ಯ ನಗರವಾದ ಸೋಲ್‌ನಲ್ಲಿ ಯೆಹೋವನ ಸಾಕ್ಷಿಗಳ ಕೂಟಗಳಿಗೆ ಹಾಜರಾಗಲು ತೊಡಗಿದರು. ವೇಗವಾಗಿ ಬರೆಯಬಲ್ಲ ಒಬ್ಬ ಕ್ರೈಸ್ತ ಸಹೋದರನು, ಭಾಷಣಗಳಲ್ಲಿ ತಿಳಿಸಲಾದ ಮುಖ್ಯ ಅಂಶಗಳನ್ನು ಮತ್ತು ಉಪಯೋಗಿಸಲ್ಪಟ್ಟ ಬೈಬಲ್‌ ವಚನಗಳನ್ನು ಒಂದು ಕಪ್ಪುಹಲಗೆಯ ಮೇಲೆ ಬರೆದನು.

ಇಸವಿ 1971ರಲ್ಲಿ ಟೈಜಾನ್‌ ನಗರದಲ್ಲಿ, ಸಾಕ್ಷಿಯೊಬ್ಬನು ಕಿವುಡನಾಗಿದ್ದ ತನ್ನ ಮಗನಿಗೂ ಅವನ ಕಿವುಡ ಸ್ನೇಹಿತರಿಗೂ ರಾಜ್ಯದ ಸಂದೇಶವನ್ನು ಕಲಿಸಲಾರಂಭಿಸಿದನು. ಈ ಗುಂಪಿನಲ್ಲಿ ಅಧ್ಯಯನ ಮಾಡಿದ ಅನೇಕರು, ಈಗ ಸಂಕೇತ ಭಾಷೆಯ ಕ್ಷೇತ್ರದಲ್ಲಿ ಹುರುಪಿನಿಂದ ಸೇವೆಸಲ್ಲಿಸುತ್ತಿದ್ದಾರೆ.​—ಜೆಕರ್ಯ 4:10.

ಯುವ ಜನರು ತಮ್ಮನ್ನು ಸಂತೋಷದಿಂದ ನೀಡಿಕೊಳ್ಳುತ್ತಾರೆ

ಕಿವುಡ ವ್ಯಕ್ತಿಗಳು ಯೆಹೋವನ ಮತ್ತು ಯೇಸುವಿನ ಜ್ಞಾನವನ್ನು ಪಡೆದುಕೊಂಡು ನಿತ್ಯಜೀವದ ದಾರಿಯಲ್ಲಿ ಸೇರಬೇಕಾದರೆ, ಇನ್ನಿತರ ಸ್ವಯಂಸೇವಕರಿಂದ ಅತ್ಯಧಿಕ ಪ್ರಯತ್ನದ ಅಗತ್ಯವಿದೆ. (ಯೋಹಾನ 17:3) ಈ ಗುರಿಯನ್ನು ತಲಪಲು, ಯೆಹೋವನ ಸಾಕ್ಷಿಗಳಲ್ಲಿ ಅನೇಕರು ಸಂಕೇತ ಭಾಷೆಯನ್ನು ಕಲಿತಿದ್ದಾರೆ ಮತ್ತು ಬಲವರ್ದಕ ಅನುಭವಗಳಿಂದ ಆಶೀರ್ವದಿಸಲ್ಪಟ್ಟಿದ್ದಾರೆ.

ಪಾರ್ಕ್‌ ಇನ್‌ಸನ್‌ ಎಂಬ ಹೆಸರಿನ 15 ವರುಷ ಪ್ರಾಯದ ಒಬ್ಬ ಸಹೋದರನು ಸಂಕೇತ ಭಾಷೆಯನ್ನು ಕಲಿಯುವುದನ್ನು ತನ್ನ ಗುರಿಯನ್ನಾಗಿ ಮಾಡಿದನು. ಈ ಗುರಿಯನ್ನು ಸಾಧಿಸಲು, 20 ಮಂದಿ ಕಿವುಡ ವ್ಯಕ್ತಿಗಳ ಒಂದು ಗುಂಪು ಕೆಲಸಮಾಡುತ್ತಿದ್ದ ಕಾರ್ಖಾನೆಯಲ್ಲಿ ಅವನು ಒಬ್ಬ ಅಪ್ರೆಂಟಿಸ್‌ನೋಪಾದಿ ಸೇರಿಕೊಂಡನು. ಕಿವುಡರ ಭಾಷೆಯನ್ನು ಮತ್ತು ಆಲೋಚನಾದಾಟಿಯನ್ನು ಕಲಿತುಕೊಳ್ಳಲು ಎಂಟು ತಿಂಗಳುಗಳ ವರೆಗೆ ಅವರೊಂದಿಗೆ ಕೆಲಸಮಾಡಿದನು. ಮುಂದಿನ ವರುಷ, ಅವನು ರೆಗ್ಯುಲರ್‌ ಪಯನೀಯರ್‌ ಅಥವಾ ಪೂರ್ಣ ಸಮಯದ ರಾಜ್ಯ ಘೋಷಕನಾದನು ಮತ್ತು ಬೈಬಲ್‌ ಸತ್ಯದಲ್ಲಿ ಆಸಕ್ತರಾಗಿದ್ದ ಕಿವುಡ ವ್ಯಕ್ತಿಗಳ ಗುಂಪಿನೊಂದಿಗೆ ಕೆಲಸಮಾಡಿದನು. ಈ ಗುಂಪು ತ್ವರಿತವಾಗಿ ಬೆಳೆಯಿತು ಮತ್ತು ಬೇಗನೆ, 35ಕ್ಕಿಂತಲೂ ಹೆಚ್ಚು ಮಂದಿ ಭಾನುವಾರದ ಕೂಟಗಳಿಗೆ ಹಾಜರಾದರು.​—ಕೀರ್ತನೆ 110:3.

ತದನಂತರ, ಸೋಲ್‌ನಲ್ಲಿ ಪ್ರಪ್ರಥಮವಾಗಿ, ಸಂಕೇತ ಭಾಷೆಯಲ್ಲಿ ಕ್ರೈಸ್ತ ಕೂಟವನ್ನು ಪ್ರತ್ಯೇಕವಾಗಿ ಏರ್ಪಡಿಸಲಾಯಿತು. ಬೆಳೆಯುತ್ತಿರುವ ಈ ಗುಂಪಿನಲ್ಲಿ ಸಹೋದರ ಪಾರ್ಕ್‌ ಇನ್‌ಸನ್‌ ಒಬ್ಬ ವಿಶೇಷ ಪಯನೀಯರ್‌ನಾಗಿ ಸೇವೆಸಲ್ಲಿಸಿದನು. ಇಷ್ಟರಲ್ಲಿ ಅವನು ಸಂಕೇತ ಭಾಷೆಯಲ್ಲಿ ಪರಿಣತನಾಗಿದ್ದನು. ಕೆಲವು ತಿಂಗಳುಗಳಲ್ಲೇ ಅವನು ಕಿವುಡ ವ್ಯಕ್ತಿಗಳೊಂದಿಗೆ 28 ಮನೆ ಬೈಬಲ್‌ ಅಧ್ಯಯನಗಳನ್ನು ನಡೆಸುತ್ತಿದ್ದನು. ಇವರಲ್ಲಿ ಅನೇಕರು ಪ್ರಗತಿಮಾಡಿದರು ಮತ್ತು ಯೆಹೋವನ ದೀಕ್ಷಾಸ್ನಾನಿತ ಸಾಕ್ಷಿಗಳಾದರು.

ಸ್ವಯಂಸೇವಕರ ಸಕ್ರಿಯ ಕೆಲಸದ ಫಲಿತಾಂಶವಾಗಿ, 1976ರ ಅಕ್ಟೋಬರ್‌ ತಿಂಗಳಿನಲ್ಲಿ 40 ಮಂದಿ ಪ್ರಚಾರಕರು ಮತ್ತು 2 ಮಂದಿ ರೆಗ್ಯುಲರ್‌ ಪಯನೀಯರ್‌ರಿಂದ ಕೂಡಿದ ಸಂಕೇತ ಭಾಷೆಯ ಒಂದು ಸಭೆಯು ಸೋಲ್‌ನಲ್ಲಿ ಸ್ಥಾಪಿಸಲ್ಪಟ್ಟಿತು. ಇದು, ಕೊರಿಯದ ಇತರ ನಗರಗಳಲ್ಲಿ ನಡೆಯುವ ಚಟುವಟಿಕೆಯನ್ನೂ ಹುರಿದುಂಬಿಸಿತು. ಅನೇಕ ಕಿವುಡ ವ್ಯಕ್ತಿಗಳು ಸುವಾರ್ತೆಗಾಗಿ ಹಸಿದಿದ್ದು, ಸಹೋದರರ ಭೇಟಿಗಾಗಿ ಕಾಯುತ್ತಿದ್ದರು.

ಕಿವುಡರ ಮಧ್ಯೆ ಕೆಲಸಮಾಡುವುದು

ಕಿವುಡರು ಹೇಗೆ ಕಂಡುಹಿಡಿಯಲ್ಪಟ್ಟರು ಎಂಬುದಾಗಿ ನೀವು ಕುತೂಹಲಪಡಬಹುದು. ಒಬ್ಬರು ಇನ್ನೊಬ್ಬರ ಪರಿಚಯವನ್ನು ಮಾಡಿಕೊಡುವ ಮೂಲಕ ಅನೇಕರನ್ನು ಸಂಪರ್ಕಿಸಸಾಧ್ಯವಾಯಿತು. ಅಷ್ಟುಮಾತ್ರವಲ್ಲದೆ, ಸ್ಥಳಿಕ ಅಕ್ಕಿ ಮಳಿಗೆಗಳ ಧಣಿಗಳನ್ನು ಭೇಟಿಯಾಗಿ, ಅವರಿಂದ ಕಿವುಡ ವ್ಯಕ್ತಿಗಳ ಹೆಸರು ಮತ್ತು ವಿಳಾಸವನ್ನು ಪಡೆದುಕೊಳ್ಳಲಾಯಿತು. ಕೆಲವು ಸರಕಾರಿ ಕಛೇರಿಗಳೂ ಇಂಥ ಮಾಹಿತಿಯನ್ನು ಒದಗಿಸುವುದರಲ್ಲಿ ಸಹಾಯಮಾಡಿದವು. ಕಿವುಡರಿರುವ ಕ್ಷೇತ್ರವನ್ನು ಶ್ರದ್ಧೆಯಿಂದ ಆವರಿಸಿದ್ದರಿಂದ, ತಕ್ಕ ಸಮಯದಲ್ಲಿ ನಾಲ್ಕು ಸಂಕೇತ ಭಾಷೆಯ ಸಭೆಗಳು ಸ್ಥಾಪಿಸಲ್ಪಟ್ಟವು. ಸಂಕೇತ ಭಾಷೆಯನ್ನು ಕಲಿಯುವಂತೆ ಅನೇಕ ಕ್ರೈಸ್ತ ಯುವಕರು ಉತ್ತೇಜಿಸಲ್ಪಟ್ಟರು.

ಸಂಕೇತ ಭಾಷೆಯನ್ನು ಕಲಿತಿರುವ ವಿಶೇಷ ಪಯನೀಯರ್‌ ಶುಶ್ರೂಷಕರು ಇಂಥ ಸಭೆಗಳೊಂದಿಗೆ ಕೆಲಸಮಾಡಲು ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿನಿಂದ ನೇಮಿಸಲ್ಪಟ್ಟರು. ಇತ್ತೀಚೆಗೆ, ಮಿನಿಸ್ಟೀರಿಯಲ್‌ ಟ್ರೇನಿಂಗ್‌ ಸ್ಕೂಲ್‌ನ ಪದವೀಧರರು ಈ ಸಭೆಗಳಿಗೆ ನೇಮಿಸಲ್ಪಟ್ಟಿದ್ದಾರೆ ಮತ್ತು ಇವರು, ಆತ್ಮಿಕವಾಗಿ ಅವರನ್ನು ಬಲಪಡಿಸಿದ್ದಾರೆ.

ಎದುರಿಸಬೇಕಾದ ಕಷ್ಟಗಳೂ ಇವೆ. ಇಂಥ ಕ್ಷೇತ್ರದಲ್ಲಿ ಕೆಲಸಮಾಡುವುದು, ಕಿವುಡರ ಸಂಸ್ಕೃತಿಯನ್ನು ತಿಳಿದುಕೊಳ್ಳಲು ಕಠಿಣ ಪರಿಶ್ರಮಪಡುವುದನ್ನು ಅಗತ್ಯಪಡಿಸುತ್ತದೆ. ಆಲೋಚನೆ ಮತ್ತು ಕ್ರಿಯೆಯಲ್ಲಿ ಅವರು ಬಹಳ ಮುಚ್ಚುಮರೆಯಿಲ್ಲದವರಾಗಿದ್ದಾರೆ. ಇದು ಕೆಲವೊಮ್ಮೆ ಜನರನ್ನು ಆಶ್ಚರ್ಯಗೊಳಿಸುತ್ತದೆ ಮತ್ತು ವೈಮನಸ್ಸನ್ನೂ ಉಂಟುಮಾಡಬಹುದು. ಅಷ್ಟುಮಾತ್ರವಲ್ಲದೆ, ಕಿವುಡರೊಂದಿಗೆ ಸಾಕ್ಷಿಗಳು ಬೈಬಲ್‌ ಅಧ್ಯಯನವನ್ನು ಮಾಡುವಾಗ, ಅವರು ತಮ್ಮ ಸಂಕೇತ ಭಾಷೆಯಲ್ಲಿ ಪ್ರವೀಣರಾಗುವಂತೆ ಸಹಾಯಮಾಡುವುದೂ ಓದುವ ಹಾಗೂ ಅಧ್ಯಯನಮಾಡುವ ತಮ್ಮ ಕಾರ್ಯಕ್ರಮದಲ್ಲಿ ಪ್ರಗತಿಮಾಡುವಂತೆ ಅವರನ್ನು ಉತ್ತೇಜಿಸುವುದೂ ಅಗತ್ಯವಾಗಿರುತ್ತದೆ.

ಕಿವುಡರು ತಮ್ಮ ದಿನನಿತ್ಯದ ಚಟುವಟಿಕೆಗಳಲ್ಲಿ ಕಷ್ಟಗಳನ್ನು ಎದುರಿಸಬೇಕಾಗುತ್ತದೆ ಮತ್ತು ಹೆಚ್ಚಾಗಿ ಇದು ಇತರರಿಗೆ ತಿಳಿದಿರುವುದಿಲ್ಲ. ಸರಕಾರಿ ಕಛೇರಿಗಳಲ್ಲಿ ಮತ್ತು ಆರೋಗ್ಯಾರೈಕೆಯ ಸೌಕರ್ಯಗಳಲ್ಲಿ ಸಂವಾದಿಸುವುದು ಹಾಗೂ ಸಣ್ಣ ವ್ಯಾಪಾರ ವ್ಯವಹಾರಗಳನ್ನು ಮಾಡುವುದು ಸಹ ಅವರಿಗೆ ಅನೇಕಬಾರಿ ಒಂದು ದೊಡ್ಡ ಸಮಸ್ಯೆಯಾಗಿ ಪರಿಣಮಿಸುತ್ತದೆ. ಸಮೀಪದ ಸಭೆಗಳಲ್ಲಿರುವ ಸಾಕ್ಷಿಗಳು ಇವರಿಗೆ ಪ್ರೀತಿಪರ ನೆರವನ್ನು ನೀಡಿದ್ದರಿಂದ, ಕಿವುಡ ವ್ಯಕ್ತಿಗಳು ಸಭೆಯಲ್ಲಿ ನಿಜವಾದ ಸಹೋದರತ್ವವನ್ನು ಅನುಭವಿಸಿದ್ದಾರೆ.​—ಯೋಹಾನ 13:​34, 35.

ಅನೌಪಚಾರಿಕ ಸಾಕ್ಷಿಕಾರ್ಯವು ಪ್ರತಿಫಲವನ್ನು ತರುತ್ತದೆ

ಕೊರಿಯಾದ ದಕ್ಷಿಣ ಭಾಗದಲ್ಲಿರುವ ದೊಡ್ಡ ರೇವು ಪಟ್ಟಣವಾದ ಪೂಸಾನ್‌ನಲ್ಲಿ, ಒಬ್ಬ ಸಾಕ್ಷಿಯು ಇಬ್ಬರು ಕಿವುಡರನ್ನು ಅನೌಪಚಾರಿಕವಾಗಿ ಭೇಟಿಯಾದನು. ಆ ಕಿವುಡರು ಒಂದು ಕಾಗದದ ತುಂಡಿನಲ್ಲಿ ಹೀಗೆಂದು ಬರೆದರು: “ನಾವು ಪರದೈಸನ್ನು ಇಷ್ಟಪಡುತ್ತೇವೆ. ನಿತ್ಯಜೀವದ ಕುರಿತು ತಿಳಿಸುವ ಶಾಸ್ತ್ರವಚನಗಳನ್ನು ನಾವು ತಿಳಯಬಯಸುತ್ತೇವೆ.” ಸಹೋದರನು ಅವರ ವಿಳಾಸವನ್ನು ಬರೆದುಕೊಂಡು, ಪುನರ್ಭೇಟಿಗಾಗಿ ಏರ್ಪಡಿಸಿದನು. ಅವನು ಪುನರ್ಭೇಟಿಮಾಡಿದಾಗ, ರಾಜ್ಯದ ಸಂದೇಶವನ್ನು ಆಲಿಸಲು ಕಾಯುತ್ತಿದ್ದ ಒಂದು ಕೋಣೆಯ ತುಂಬಾ ಕಿವುಡರನ್ನು ಅವನು ಕಂಡನು. ಈ ಅನುಭವವು ಅವನನ್ನು ಸಂಕೇತ ಭಾಷೆಯನ್ನು ಕಲಿಯುವಂತೆ ಪ್ರೇರೇಪಿಸಿತು. ಶೀಘ್ರದಲ್ಲಿ, ಸಂಕೇತ ಭಾಷೆಯ ಒಂದು ಸಭೆಯು ಪೂಸಾನ್‌ನಲ್ಲಿ ಸ್ಥಾಪಿಸಲ್ಪಟ್ಟಿತು.

ಆ ಸಭೆಯಲ್ಲಿದ್ದ ಒಬ್ಬ ಸಹೋದರನು, ಸಂಕೇತ ಭಾಷೆಯ ಮೂಲಕ ಒಬ್ಬರಿಗೊಬ್ಬರು ಮಾತಾಡಿಕೊಳ್ಳುತ್ತಿದ್ದ ಇಬ್ಬರು ಕಿವುಡರನ್ನು ಗಮನಿಸಿ, ಅವರನ್ನು ಸಮೀಪಿಸಿದನು. ಅವರು ಆಗತಾನೇ ಒಂದು ಧಾರ್ಮಿಕ ಕೂಟಕ್ಕೆ ಹಾಜರಾಗಿ ಬಂದಿದ್ದಾರೆಂದು ತಿಳಿದು, ಅವನು ಅವರನ್ನು ಅದೇ ದಿನ ಮಧ್ಯಾಹ್ನ ಎರಡು ಗಂಟೆಗೆ ರಾಜ್ಯ ಸಭಾಗೃಹಕ್ಕೆ ಆಮಂತ್ರಿಸಿದನು. ಅವರು ಹಾಜರಾದರು ಮತ್ತು ಒಂದು ಬೈಬಲ್‌ ಅಧ್ಯಯನವು ಆರಂಭಿಸಲ್ಪಟ್ಟಿತು. ಸ್ವಲ್ಪ ಸಮಯದ ನಂತರ, ಆ 2 ವ್ಯಕ್ತಿಗಳೂ ತಮ್ಮ 20 ಮಂದಿ ಕಿವುಡ ಸ್ನೇಹಿತರೊಂದಿಗೆ ಜಿಲ್ಲಾ ಅಧಿವೇಶನಕ್ಕೆ ಹಾಜರಾದರು. ಆ ಗುಂಪಿನಲ್ಲಿ, ಅನೇಕರು ತಮ್ಮ ಜೀವಿತವನ್ನು ಯೆಹೋವನಿಗೆ ಸಮರ್ಪಿಸಿಕೊಂಡಿದ್ದಾರೆ. ಇಬ್ಬರು ಈಗ ಸಂಕೇತ ಭಾಷೆಯ ಸಭೆಗಳಲ್ಲಿ ಹಿರಿಯರಾಗಿದ್ದಾರೆ ಮತ್ತು ಒಬ್ಬನು ಶುಶ್ರೂಷಕ ಸೇವಕನಾಗಿದ್ದಾನೆ.

ದೃಢನಿಶ್ಚಯಕ್ಕೆ ಪ್ರತಿಫಲ ದೊರೆಯಿತು

ಕೆಲವು ಕಿವುಡ ವ್ಯಕ್ತಿಗಳು ವಾಸಿಸುವ ಸ್ಥಳದ ಸಮೀಪದಲ್ಲಿ ಯಾವುದೇ ಸಂಕೇತ ಭಾಷೆಯ ಸಭೆಗಳಿಲ್ಲದಿರುವುದರಿಂದ, ಬೈಬಲಿನಿಂದ ಕ್ರಮವಾಗಿ ಆತ್ಮಿಕ ಪೋಷಣೆಯನ್ನು ಅವರಿಗೆ ಒದಗಿಸಲು ಅನೇಕವೇಳೆ ಹೆಚ್ಚಿನ ಪ್ರಯತ್ನ ಮತ್ತು ದೃಢನಿಶ್ಚಯದ ಅಗತ್ಯವಿದೆ. ಉದಾಹರಣೆಗೆ, 31 ವರುಷ ಪ್ರಾಯದ ವ್ಯಕ್ತಿಯೊಬ್ಬನು ಒಂದು ದ್ವೀಪದ ಕರಾವಳಿ ಭಾಗದಲ್ಲಿ ಬೆಸ್ತನಾಗಿ ಜೀವನ ಸಾಗಿಸುತ್ತಿದ್ದನು. ಅವನು, ಯೆಹೋವನ ಸಾಕ್ಷಿಗಳಿಂದ ಸಂಪರ್ಕಿಸಲ್ಪಟ್ಟಿದ್ದ ಅವನ ತಮ್ಮನಿಂದ ಬೈಬಲಿನ ಸಂದೇಶವನ್ನು ಕೇಳಿಸಿಕೊಂಡನು. ಬೆಸ್ತನಾದ ಈ ಕಿವುಡನು ತನ್ನ ಆತ್ಮಿಕ ಹಸಿವೆಯನ್ನು ತೃಪ್ತಿಗೊಳಿಸಲು, ಕೊರಿಯದ ಪಶ್ಚಿಮ ಕರಾವಳಿಯಲ್ಲಿರುವ ಟ್ಯಾಂಗ್ಯಂಗ್‌ ನಗರಕ್ಕೆ ದೋಣಿಯ ಮೂಲಕ 16 ಕಿಲೊಮೀಟರ್‌ ಪ್ರಯಾಣಿಸಿದನು. ಅವನಿದನ್ನು, ಮಾಸಾನ್‌ ನಗರದ ಸಂಕೇತ ಭಾಷೆಯ ಸಭೆಯಲ್ಲಿದ್ದ ಒಬ್ಬ ವಿಶೇಷ ಪಯನೀಯರನನ್ನು ಭೇಟಿಯಾಗುವ ಉದ್ದೇಶದಿಂದ ಮಾಡಿದನು. ಈ ಬೆಸ್ತನಾದ ಕಿವುಡ ವ್ಯಕ್ತಿಯೊಂದಿಗೆ ಬೈಬಲ್‌ ಅಧ್ಯಯವನ್ನು ನಡಿಸಲು ಆ ಸಹೋದರನು, ಪ್ರತಿ ಸೋಮವಾರ ಸುಮಾರು 65 ಕಿಲೊಮೀಟರ್‌ ದೂರದ ವರೆಗೂ ಪ್ರಯಾಣಿದನು.

ಮಾಸಾನ್‌ ನಗರದಲ್ಲಿ ಭಾನುವಾರದ ಕೂಟಕ್ಕೆ ಹಾಜರಾಗಲು, ಆ ಕಿವುಡ ಬೈಬಲ್‌ ವಿದ್ಯಾರ್ಥಿಯು ದೋಣಿಯಲ್ಲಿ 16 ಕಿಲೋಮೀಟರ್‌ ಪ್ರಯಾಣಿಸಿ, ನಂತರ ಬಸ್ಸಿನ ಮೂಲಕ 65 ಕಿಲೊಮೀಟರ್‌ ಪ್ರಯಾಣಿಸಬೇಕಿತ್ತು. ಅವನ ದೃಢನಿಶ್ಚಯವು ಪ್ರತಿಫಲವನ್ನು ತಂದಿತು. ಕೆಲವೇ ತಿಂಗಳುಗಳಲ್ಲಿ, ಅವನು ಸಂಕೇತ ಭಾಷೆಯಲ್ಲಿ ಪ್ರಗತಿಮಾಡಿದನು, ಹೆಚ್ಚಿನ ಕೊರಿಯನ್‌ ಅಕ್ಷರಗಳನ್ನು ಕಲಿತುಕೊಂಡನು ಮತ್ತು ಎಲ್ಲದಕ್ಕಿಂತಲೂ ಪ್ರಾಮುಖ್ಯವಾಗಿ ಯೆಹೋವನೊಂದಿಗೆ ಸಂಬಂಧವನ್ನು ಬೆಳೆಸಿಕೊಳ್ಳಸಾಧ್ಯವಿರುವ ಏಕೈಕ ಮಾರ್ಗವನ್ನು ಕಲಿತುಕೊಂಡನು. ಕೂಟಗಳ ಮತ್ತು ಕ್ರಮವಾಗಿ ಸಾಕ್ಷಿನೀಡುವುದರ ಪ್ರಾಮುಖ್ಯತೆಯನ್ನು ಗ್ರಹಿಸಿಕೊಂಡವನಾಗಿ ಅವನು ಸಂಕೇತ ಭಾಷೆಯ ಸಭೆಯಿರುವ ಕ್ಷೇತ್ರಕ್ಕೆ ಸ್ಥಳಾಂತರಿಸಿದನು. ಅದು ಅವನಿಗೆ ಸುಲಭವಾಗಿತ್ತೋ? ಇಲ್ಲ. ಒಂದು ತಿಂಗಳಿಗೆ ಸುಮಾರು 3,800 ಡಾಲರ್‌ ಲಾಭ ತರುತ್ತಿದ್ದ ಮೀನುಹಿಡಿಯುವ ಕೆಲಸವನ್ನು ಅವನು ಬಿಡಬೇಕಿತ್ತು. ಆದರೆ ಅವನ ದೃಢನಿಶ್ಚಯವು ಪ್ರತಿಫಲವನ್ನು ತಂದಿತು. ಸತ್ಯದಲ್ಲಿ ಪ್ರಗತಿಮಾಡಿದ ನಂತರ ಅವನು ದೀಕ್ಷಾಸ್ನಾನವನ್ನು ಪಡೆದುಕೊಂಡನು ಮತ್ತು ಈಗ ತನ್ನ ಕುಟುಂಬದೊಂದಿಗೆ ಯೆಹೋವನನ್ನು ಸಂತೋಷದಿಂದ ಸೇವಿಸುತ್ತಿದ್ದಾನೆ.

ಕಿವುಡರಿಗಾಗಿ ಭಾಷಾಂತರ

ರಾಜ್ಯದ ಸುವಾರ್ತೆಯು ಸಾಮಾನ್ಯವಾಗಿ ಮೌಖಿಕವಾಗಿ ತಿಳಿಸಲ್ಪಡುತ್ತದೆ. ಹಾಗಿದ್ದರೂ, ದೇವರ ವಾಕ್ಯದಿಂದ ಸಂದೇಶವನ್ನು ಅತಿ ನಿಷ್ಕೃಷ್ಟವಾಗಿ ತಿಳಿಸಬೇಕಾದರೆ, ಬೈಬಲ್‌ ಬೋಧನೆಯನ್ನು ಹೆಚ್ಚು ಶಾಶ್ವತವಾದ ರೂಪದಲ್ಲಿ ಪ್ರಸ್ತುತಪಡಿಸುವುದು ಪ್ರಾಮುಖ್ಯವಾಗಿದೆ. ಆದುದರಿಂದಲೇ ಮೊದಲನೆಯ ಶತಮಾನದಲ್ಲಿ, ಅನುಭವಸ್ಥ ಹಿರೀ ಪುರುಷರಿಂದ ಪುಸ್ತಕಗಳು ಹಾಗೂ ಪತ್ರಗಳು ಬರೆಯಲ್ಪಟ್ಟವು. (ಅ. ಕೃತ್ಯಗಳು 15:22-31; ಎಫೆಸ 3:4; ಕೊಲೊಸ್ಸೆ 1:2; ಕೊಲೊಸ್ಸೆ 4:16) ನಮ್ಮ ದಿನಗಳಲ್ಲಿ, ಪುಸ್ತಕಗಳ ಮತ್ತು ಇತರ ಕ್ರೈಸ್ತ ಪ್ರಕಾಶನಗಳ ಮೂಲಕ ಹೇರಳವಾದ ಆತ್ಮಿಕ ಆಹಾರವು ಒದಗಿಸಲ್ಪಡುತ್ತಿದೆ. ಇವುಗಳು, ಸಂಕೇತ ಭಾಷೆಗಳನ್ನೊಳಗೊಂಡು ಅನೇಕ ಭಾಷೆಗಳಲ್ಲಿ ಭಾಷಾಂತರಿಸಲ್ಪಟ್ಟಿವೆ. ಇದನ್ನು ಕೊರಿಯನ್‌ ಸಂಕೇತ ಭಾಷೆಯಲ್ಲಿ ಭಾಷಾಂತರಿಸಲು, ಬ್ರಾಂಚ್‌ ಆಫೀಸ್‌ ಸಂಕೇತ ಭಾಷೆಯ ಭಾಷಾಂತರ ವಿಭಾಗವನ್ನೂ ಹೊಂದಿದೆ. ವಿಡಿಯೋ ವಿಭಾಗವು ಸಂಕೇತ ಭಾಷೆಯ ವಿಡಿಯೋಗಳನ್ನು ತಯಾರಿಸುತ್ತದೆ. ಇದು, ಕೊರಿಯದಾದ್ಯಂತವಿರುವ ಸಭೆಗಳಲ್ಲಿನ ಸುವಾರ್ತೆಯ ಕಿವುಡ ಘೋಷಕರನ್ನು ಮತ್ತು ಆಸಕ್ತರಾಗಿರುವವರನ್ನು ಆತ್ಮಿಕವಾಗಿ ಪೋಷಿಸಿದೆ.

ಅನೇಕರು ಸಂಕೇತ ಭಾಷೆಗಳಲ್ಲಿ ಪ್ರವೀಣರಾಗಿರುವುದಾದರೂ ಮತ್ತು ವಿಡಿಯೋಗಳನ್ನು ತಯಾರಿಸುವುದರಲ್ಲಿ ಸಹಾಯಮಾಡಿರುವುದಾದರೂ, ಸಾಮಾನ್ಯವಾಗಿ ಕಿವುಡ ಹೆತ್ತವರಿರುವ ಮಕ್ಕಳು ಉತ್ತಮ ಭಾಷಾಂತರಗಾರರಾಗಿದ್ದಾರೆ. ಅವರು ಶೈಶವದಿಂದ ಸಂಕೇತ ಭಾಷೆಯನ್ನು ಕಲಿತಿದ್ದಾರೆ. ಇವರು ನಿಷ್ಕೃಷ್ಟವಾಗಿ ಸಂಕೇತ ಮಾಡುವುದು ಮಾತ್ರವಲ್ಲದೆ, ತಮ್ಮ ಭಾವಾಭಿನಯಗಳ ಮತ್ತು ಮುಖಭಾವಗಳ ಮೂಲಕ ಸಂದೇಶಕ್ಕೆ ಹೆಚ್ಚಿನ ಒತ್ತನ್ನು ಹಾಗೂ ಹೃತ್ಪೂರ್ವಕವಾದ ಅರ್ಥವನ್ನೂ ನೀಡುತ್ತಾರೆ. ಈ ರೀತಿಯಲ್ಲಿ ಅವರು ಮನಸ್ಸು ಮತ್ತು ಹೃದಯವನ್ನು ತಲಪುತ್ತಾರೆ.

ಮೊದಲು ತಿಳಿಸಿದಂತೆ, ಕೊರಿಯದಲ್ಲಿ ಈಗ ಸಂಕೇತ ಭಾಷೆಯಲ್ಲಿ ಅಧಿವೇಶನಗಳು ಮತ್ತು ಸಮ್ಮೇಳನಗಳು ಕ್ರಮವಾಗಿ ನಡಿಸಲ್ಪಡುತ್ತವೆ. ಇದನ್ನು ಸಾಧಿಸಲು ಹೆಚ್ಚಿನ ಕೆಲಸ, ಖರ್ಚು, ಮತ್ತು ಪ್ರಯತ್ನದ ಅಗತ್ಯವಿದೆ. ಹಾಗಿದ್ದರೂ, ಇದಕ್ಕೆ ಹಾಜರಾದವರೆಲ್ಲರೂ ಈ ಏರ್ಪಾಡಿಗಾಗಿ ಆಭಾರಿಗಳಾಗಿದ್ದಾರೆ. ಇಂಥ ಒಟ್ಟುಗೂಡುವಿಕೆಯು ಮುಕ್ತಾಯಗೊಂಡಾಗ, ಅನೇಕರು ಹಿತಕರವಾದ ಸಹವಾಸವನ್ನು ಮುಂದುವರಿಸಲು ಮತ್ತು ಒದಗಿಸಲ್ಪಟ್ಟ ಉತ್ತಮ ಆತ್ಮಿಕ ಆಹಾರದ ಕುರಿತು ಮಾತಾಡಲು ಬಯಸುವವರಾಗಿ ತಮ್ಮ ಮನೆಗೆ ಹಿಂದಿರುಗದೆ ಅದೇ ಸ್ಥಳದಲ್ಲಿ ಹೆಚ್ಚು ಸಮಯದ ವರೆಗೆ ಉಳಿಯುತ್ತಾರೆ. ಈ ವಿಶಿಷ್ಟವಾದ ಗುಂಪಿನಲ್ಲಿ ಸೇವೆಸಲ್ಲಿಸುವಾಗ ಪಂಥಾಹ್ವಾನಗಳನ್ನು ಎದುರಿಸಬೇಕಾದರೂ ಮುಂದೆ ಸಿಗುವ ಆತ್ಮಿಕ ಆಶೀರ್ವಾದಗಳು ಅದನ್ನು ಸಾರ್ಥಕವನ್ನಾಗಿ ಮಾಡುತ್ತವೆ.

[ಪುಟ 10ರಲ್ಲಿರುವ ಚಿತ್ರ]

ಕೊರಿಯದಲ್ಲಿ ತಯಾರಿಸಲಾದ ಸಂಕೇತ ಭಾಷೆಯ ವಿಡಿಯೋಗಳು: “ದೇವರು ನಮ್ಮಿಂದ ಏನನ್ನು ಅಪೇಕ್ಷಿಸುತ್ತಾನೆ?,” “ನಮ್ಮ ಆತ್ಮಿಕ ಪರಂಪರೆಯನ್ನು ಗಣ್ಯಮಾಡುವುದು,” “ನಮ್ಮ ದಿನಕ್ಕಾಗಿ ಎಚ್ಚರಿಕೆಯ ಉದಾಹರಣೆಗಳು,” ಮತ್ತು “ಯೆಹೋವನ ಅಧಿಕಾರವನ್ನು ಗೌರವಿಸಿರಿ”

[ಪುಟ 10ರಲ್ಲಿರುವ ಚಿತ್ರಗಳು]

ಕೆಳಗಿನಿಂದ ಪ್ರದಕ್ಷಿಣವಾಗಿ: ಕೊರಿಯ ಬ್ರಾಂಚ್‌ನಲ್ಲಿ ತಯಾರಿಸಲಾದ ಸಂಕೇತ ಭಾಷೆಯ ವಿಡಿಯೋಗಳು; ದೇವಪ್ರಭುತ್ವಾತ್ಮಕ ಪದಗಳಿಗಾಗಿ ಸಂಕೇತವನ್ನು ತಯಾರಿಸುವುದು; ಸಂಕೇತ ಭಾಷೆಯ ಭಾಷಾಂತರ ತಂಡ; ವಿಡಿಯೋವನ್ನು ತಯಾರಿಸುತ್ತಿರುವಾಗ ಸಂಕೇತ ಮಾಡುವವರನ್ನು ಪ್ರೇರೇಪಿಸುವುದು