ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಗಿಲ್ಯಡ್‌ ಶಾಲೆ 60 ವರ್ಷಗಳ ಮಿಷನೆರಿ ತರಬೇತಿ

ಗಿಲ್ಯಡ್‌ ಶಾಲೆ 60 ವರ್ಷಗಳ ಮಿಷನೆರಿ ತರಬೇತಿ

ಗಿಲ್ಯಡ್‌ ಶಾಲೆ 60 ವರ್ಷಗಳ ಮಿಷನೆರಿ ತರಬೇತಿ

“ನಮ್ಮ ಗಾಢವಾದ ಬೈಬಲ್‌ ಅಧ್ಯಯನದಿಂದಾಗಿ ನಾವು ಯೆಹೋವನಿಗೆ ಇನ್ನಷ್ಟು ಹತ್ತಿರವಾದೆವು ಮತ್ತು ಆತನ ಸಂಸ್ಥೆಯ ಕುರಿತಾಗಿ ಹೆಚ್ಚನ್ನು ಕಲಿತೆವು. ಇದು ನಮ್ಮನ್ನು, ಒಂದು ವಿದೇಶಿ ನೇಮಕದಲ್ಲಿನ ಜೀವನಕ್ಕಾಗಿ ಸಿದ್ಧಗೊಳಿಸಿತು.” ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಲ್ಲಿನ ಅಧ್ಯಯನಗಳ ಪಾಠಕ್ರಮದಲ್ಲಿ ತೊಡಗಿದ ಮೊದಲನೆಯ ತರಗತಿಯ ಒಬ್ಬ ವಿದ್ಯಾರ್ಥಿನಿಯು ಅದನ್ನು ಹೀಗೆಂದು ವರ್ಣಿಸಿದಳು. 60 ವರ್ಷಗಳ ಹಿಂದೆ ಗಿಲ್ಯಡ್‌ ಶಾಲೆಯ ಆರಂಭವಾದಂದಿನಿಂದ, ಅದು ಮಿಷನೆರಿಗಳನ್ನು ಕಳುಹಿಸುತ್ತಾ ಇದೆ. 2003ರ ಮಾರ್ಚ್‌ 8ರಂದು, 114ನೆಯ ತರಗತಿಯ ಪದವಿಪ್ರಾಪ್ತಿ ಕಾರ್ಯಕ್ರಮವು, ನ್ಯೂ ಯಾರ್ಕ್‌ ರಾಜ್ಯದ ಪ್ಯಾಟರ್‌ಸನ್‌ನಲ್ಲಿರುವ ವಾಚ್‌ಟವರ್‌ ಎಡ್ಯೂಕೇಷನಲ್‌ ಸೆಂಟರ್‌ನಲ್ಲಿ ನಡೆಯಿತು. ಆ ಸಭಾಂಗಣದಲ್ಲಿ ಮತ್ತು ಟೆಲಿವಿಷನ್‌ ಮುಖಾಂತರ ಕಾರ್ಯಕ್ರಮವನ್ನು ವೀಕ್ಷಿಸಲು ಒಟ್ಟುಗೂಡಿದ 6,404 ಮಂದಿ ಜನರು, ಕಾರ್ಯಕ್ರಮಕ್ಕೆ ಏಕಾಗ್ರತೆಯಿಂದ ಕಿವಿಗೊಟ್ಟರು. ಈ ಕಾರ್ಯಕ್ರಮದಲ್ಲಿ ಭಾಷಣಗಳು, ಇಂಟರ್‌ವ್ಯೂಗಳು ಮತ್ತು ಗುಂಪು ಚರ್ಚೆಗಳಿದ್ದವು.

ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಥೀಅಡೋರ್‌ ಜರಸ್‌ ಅಧ್ಯಕ್ಷರಾಗಿದ್ದರು. ಅವರು ತಮ್ಮ ಆರಂಭದ ಹೇಳಿಕೆಗಳಲ್ಲಿ, ಸಭಿಕರ ಅಂತಾರಾಷ್ಟ್ರೀಯ ವೈಶಿಷ್ಟ್ಯದ ಕಡೆಗೆ ಗಮನಸೆಳೆದರು. ಏಷ್ಯಾ, ಕೆರಿಬೀಯನ್‌, ಮಧ್ಯ ಮತ್ತು ದಕ್ಷಿಣ ಆಫ್ರಿಕಾ ಹಾಗೂ ಯೂರೋಪಿನಿಂದ ಬಂದ ಸಂದರ್ಶಕರು ಅಲ್ಲಿದ್ದರು. ತಮ್ಮ ಮಾತುಗಳನ್ನು 2 ತಿಮೊಥೆಯ 4:5ರ ಮೇಲಾಧರಿಸುತ್ತಾ, ಸಹೋದರ ಜರಸ್‌, ಗಿಲ್ಯಡ್‌ ಶಿಕ್ಷಿತ ಮಿಷನೆರಿಯೊಬ್ಬನ ಪ್ರಾಮುಖ್ಯ ಕೆಲಸವನ್ನು ಎತ್ತಿಹೇಳಿದರು. ಅದು, ‘ಸೌವಾರ್ತಿಕನ ಕೆಲಸವನ್ನು ಮಾಡುವದೇ’ ಆಗಿದೆ. ಜನರಿಗೆ ಬೈಬಲನ್ನು ಕಲಿಸುವ ಮೂಲಕ ಮಿಷನೆರಿಗಳು ಸತ್ಯಕ್ಕೆ ಸಾಕ್ಷಿಯನ್ನು ಕೊಡುತ್ತಾರೆ.

ವಿದ್ಯಾರ್ಥಿಗಳು ಕೊನೆಯ ಸೂಚನೆಗಳನ್ನು ಪಡೆಯುತ್ತಾರೆ

ಅಮೆರಿಕದ ಬ್ರಾಂಚ್‌ ಕಮಿಟಿಯ ಒಬ್ಬ ಸದಸ್ಯರಾಗಿರುವ ಜಾನ್‌ ಲಾರ್ಸನ್‌ರವರು “ದೇವರು ನಮ್ಮ ಕಡೆ ಇದ್ದರೆ ನಮ್ಮನ್ನು ಎದುರಿಸುವವರು ಯಾರು?” ಎಂಬ ನಂಬಿಕೆಯನ್ನು ವರ್ಧಿಸುವ ವಿಷಯದ ಕುರಿತಾಗಿ ಮಾತಾಡುತ್ತಾ ಲಘು ಭಾಷಣಗಳ ಒಂದು ಶ್ರೇಣಿಯನ್ನು ಆರಂಭಿಸಿದರು. (ರೋಮಾಪುರ 8:31) ವಿದ್ಯಾರ್ಥಿಗಳು ತಮ್ಮ ನೇಮಕದ ಸ್ಥಳಗಳಲ್ಲಿ ಎದುರಿಸಬಹುದಾದ ಯಾವುದೇ ತಡೆಯನ್ನು ಜಯಿಸಲು ಸಹಾಯಕ್ಕಾಗಿ ಯೆಹೋವನ ಶಕ್ತಿಯಲ್ಲಿ ಸಂಪೂರ್ಣ ಭರವಸೆಯನ್ನಿಡುವುದಕ್ಕಾಗಿ ಇರುವ ಬೈಬಲ್‌ ಆಧಾರವನ್ನು ಅವರು ವಿವರಿಸಿದರು. ರೋಮಾಪುರ 8:​38, 39ನ್ನು ಉಪಯೋಗಿಸುತ್ತಾ, ಸಹೋದರ ಲಾರ್ಸನ್‌ ವಿದ್ಯಾರ್ಥಿಗಳಿಗೆ ಈ ಬುದ್ಧಿವಾದವನ್ನು ನೀಡಿದರು: “ಸ್ವಲ್ಪ ನಿಂತು, ನಿಮ್ಮ ಪರವಾಗಿ ದೇವರು ಉಪಯೋಗಿಸುತ್ತಿರುವ ಶಕ್ತಿಯ ಕುರಿತಾಗಿ ಯೋಚಿಸಿರಿ. ಮತ್ತು ನಿಮ್ಮೊಂದಿಗೆ ಯೆಹೋವನಿಗಿರುವ ವೈಯಕ್ತಿಕ ಅಂಟಿಕೆಯನ್ನು ಯಾವುದೇ ಸಂಗತಿಯು ಮುರಿಯಲಾರದೆಂಬುದನ್ನು ನೆನಪಿನಲ್ಲಿಡಿರಿ.”

ಕಾರ್ಯಕ್ರಮದಲ್ಲಿ ಮುಂದಿನ ಭಾಗವು, ಆಡಳಿತ ಮಂಡಲಿಯ ಒಬ್ಬ ಸದಸ್ಯರಾಗಿರುವ ಗೈ ಪಿಯರ್ಸ್‌ ಅವರದ್ದಾಗಿತ್ತು. ಅವರ ಶೀರ್ಷಿಕೆ, “ನಿಮ್ಮ ಕಣ್ಣುಗಳನ್ನು ಸಂತೋಷವಾಗಿರಿಸಿರಿ!” ಎಂದಾಗಿತ್ತು. (ಲೂಕ 10:​23, NW) ಅವರು ವಿವರಿಸುತ್ತಾ ಹೇಳಿದ್ದೇನೆಂದರೆ, ನಿಜ ಸಂತೋಷದಲ್ಲಿ, ಯೆಹೋವನನ್ನು ತಿಳಿಯುವುದು ಮತ್ತು ಆತನ ನಿತ್ಯ ಉದ್ದೇಶವನ್ನು ಅರ್ಥಮಾಡಿಕೊಳ್ಳುವುದು ಹಾಗೂ ಬೈಬಲ್‌ ಪ್ರವಾದನೆಗಳ ನೆರವೇರಿಕೆಯನ್ನು ನೋಡುವುದು ಒಳಗೂಡಿದೆ. ಈ ವಿದ್ಯಾರ್ಥಿಗಳು ಎಲ್ಲಿಯೇ ಹೋದರೂ, ತಮ್ಮ ಕಣ್ಣುಗಳನ್ನು ಸಂತೋಷವಾಗಿರಿಸುವ ಮೂಲಕ ನಿಜ ಸಂತೋಷವನ್ನು ಕಾಪಾಡಿಕೊಳ್ಳಬಹುದು. ಸಹೋದರ ಪಿಯರ್ಸ್‌ ಪದವೀಧರ ವಿದ್ಯಾರ್ಥಿಗಳಿಗೆ, ಯೆಹೋವನ ಒಳ್ಳೇತನದ ಕುರಿತಾಗಿ ಗಾಢವಾಗಿ ಮನನಮಾಡುವಂತೆ ಮತ್ತು ತಮ್ಮ ಹೃದಮನಗಳನ್ನು ಆತನ ಚಿತ್ತವನ್ನು ಮಾಡುವುದರ ಮೇಲೆ ಕೇಂದ್ರೀಕರಿಸುವಂತೆ ಉತ್ತೇಜಿಸಿದರು. (ಕೀರ್ತನೆ 77:12) ಸಕಾರಾತ್ಮಕ ಮನೋಭಾವವನ್ನು ಕಾಪಾಡಿಕೊಳ್ಳುವ ಮೂಲಕ, ಈ ಪದವೀಧರರು ತಮ್ಮ ಮಾರ್ಗದಲ್ಲಿ ಬರುವ ಯಾವುದೇ ಸಮಸ್ಯೆಗಳನ್ನು ಜಯಿಸಸಾಧ್ಯವಿತ್ತು.

ಅನಂತರ ಆ ತರಗತಿಗೆ ದಿನಾಲೂ ಕಲಿಸುತ್ತಿದ್ದ ಇಬ್ಬರು ಶಿಕ್ಷಕರು, ಬೀಳ್ಕೊಡುವಿಕೆಯ ಉತ್ತೇಜನದಾಯಕ ಮಾತುಗಳನ್ನಾಡಿದರು. “ನೀವು ಮಹಿಮೆಯನ್ನು ಪಡೆಯಲು ಪ್ರಯತ್ನಿಸುತ್ತೀರೊ?” ಎಂದು ಲಾರೆನ್ಸ್‌ ಬೋಅನ್‌ ತಮ್ಮ ಭಾಷಣದ ಶೀರ್ಷಿಕೆಯಲ್ಲಿ ಕೇಳಿದಂಥ ಪ್ರಶ್ನೆಯಾಗಿತ್ತು. ಹೆಚ್ಚಿನ ಜನರು ಮಹಿಮೆಯೆಂದರೆ, ಸ್ವತಃ ತಮಗಾಗಿ ಸ್ತುತಿ, ಮಾನ ಮತ್ತು ಘನತೆಯೊಂದಿಗೆ ಸಮವೆಂದು ನಿರೂಪಿಸುತ್ತಾರೆ. ಕೀರ್ತನೆಗಾರನಾದ ಆಸಾಫನಾದರೊ ನಿಜವಾದ ಮಹಿಮೆಯೇನೆಂಬುದನ್ನು ಅರ್ಥಮಾಡಿಕೊಂಡನು. ಅದು ಯೆಹೋವನೊಂದಿಗೆ ಒಂದು ಗೌರವಾರ್ಹ ಸಂಬಂಧದ ಬೆಲೆಕಟ್ಟಲಾಗದಂಥ ನಿಧಿಯೇ. (ಕೀರ್ತನೆ 73:​24, 25) ಪದವಿಯನ್ನು ಪಡೆದುಕೊಳ್ಳುತ್ತಿದ್ದ ಈ ವಿದ್ಯಾರ್ಥಿಗಳಿಗೆ, ಬೈಬಲಿನ ನಿರಂತರವಾದ ಗಾಢ ಅಧ್ಯಯನದ ಮುಖಾಂತರ ಯೆಹೋವನೊಂದಿಗೆ ಒಂದು ಆಪ್ತ ಸಂಬಂಧವನ್ನು ಕಾಪಾಡಿಕೊಳ್ಳುವಂತೆ ಉತ್ತೇಜಿಸಲಾಯಿತು. ಕ್ರಿಸ್ತನ ಮುಖಾಂತರ ಯೆಹೋವನ ಉದ್ದೇಶವು ನೆರವೇರುವುದರ ಕುರಿತಾದ ವಿವರಗಳನ್ನು ‘ಲಕ್ಷ್ಯವಿಟ್ಟು ನೋಡಬೇಕೆಂಬ ಅಪೇಕ್ಷೆಯು’ ದೇವದೂತರಿಗಿದೆ. (1 ಪೇತ್ರ 1:12) ಅವರು ಆತನ ಮಹಿಮೆಯನ್ನು ಪ್ರತಿಫಲಿಸಲಿಕ್ಕಾಗಿ ತಮ್ಮ ತಂದೆಯ ಬಗ್ಗೆ ಸಾಧ್ಯವಿರುವಷ್ಟು ಹೆಚ್ಚನ್ನು ಕಲಿಯಲು ಬಯಸುತ್ತಾರೆ. ಆಮೇಲೆ ಭಾಷಣಕರ್ತರು, ವಿದ್ಯಾರ್ಥಿಗಳು ಆ ಬೆಲೆಕಟ್ಟಲಾಗದ ಮೌಲ್ಯವುಳ್ಳ ನಿಧಿಯನ್ನು ಇತರರು ಕಂಡುಕೊಳ್ಳುವಂತೆ ಸಹಾಯಮಾಡುವ ಮೂಲಕ ತಮ್ಮ ಮಿಷನೆರಿ ನೇಮಕಗಳಲ್ಲಿ ಯೆಹೋವನನ್ನು ಮಹಿಮೆಪಡಿಸುವಂತೆ ಉತ್ತೇಜಿಸಿದರು.

ಆ ಶಾಲೆಯ ರೆಜಿಸ್ಟ್ರಾರ್‌ ಆಗಿದ್ದ ವಾಲೆಸ್‌ ಲಿವರೆನ್ಸ್‌ರವರು, ಆರಂಭದ ಭಾಷಣಗಳ ಸರಣಿಯನ್ನು, “ಪವಿತ್ರ ರಹಸ್ಯದಲ್ಲಿರುವ ದೇವರ ವಿವೇಕದ ಕುರಿತಾಗಿ ಮಾತಾಡಿರಿ” ಎಂಬ ಶೀರ್ಷಿಕೆಯ ಭಾಷಣದೊಂದಿಗೆ ಕೊನೆಗೊಳಿಸಿದರು. (1 ಕೊರಿಂಥ 2:​7, NW) ತನ್ನ ಮಿಷನೆರಿ ಸೇವೆಯ ಸಮಯದಲ್ಲಿ ಅಪೊಸ್ತಲ ಪೌಲನು ಮಾತಾಡಿದಂಥ ಈ ದೈವಿಕ ವಿವೇಕವು ಯಾವುದು? ವಿಶ್ವ ಶಾಂತಿ ಮತ್ತು ಐಕ್ಯವನ್ನು ತರಲಿಕ್ಕಾಗಿರುವ ಯೆಹೋವನ ವಿವೇಕಯುತ ಹಾಗೂ ಶಕ್ತಿಯುತ ಸಾಧನವೇ. ಈ ವಿವೇಕವು ಯೇಸುವಿನ ಮೇಲೆ ಕೇಂದ್ರೀಕರಿಸುತ್ತದೆ. ಒಂದು ಸಾಮಾಜಿಕ ಸುವಾರ್ತೆಯನ್ನು ಸಾರುವ ಬದಲು, ದೇವರು ಆದಾಮನ ಪಾಪಗಳ ಪರಿಣಾಮಗಳನ್ನು ಹೇಗೆ ತೊಡೆದುಹಾಕುವನು ಎಂಬದನ್ನು ನೋಡುವಂತೆ ಪೌಲನು ಜನರಿಗೆ ಸಹಾಯಮಾಡಿದನು. (ಎಫೆಸ 3:​8, 9) ಭಾಷಣಕರ್ತರು ತಮ್ಮ ಕೇಳುಗರಿಗೆ ಹೀಗೆ ಬುದ್ಧಿಹೇಳಿದರು: “ಪೌಲನಂತೆ ನಿಮಗಿರುವ ಸುಯೋಗವನ್ನು ಬಳಸಿರಿ. ಅವನು ತನ್ನ ಮಿಷನೆರಿ ನೇಮಕವನ್ನು, ಯೆಹೋವನು ತನ್ನ ಉದ್ದೇಶವನ್ನು ಹೇಗೆ ಪೂರೈಸುವನೆಂಬುದನ್ನು ಜನರು ಮನಗಾಣುವಂತೆ ಸಹಾಯಮಾಡಲಿಕ್ಕಾಗಿರುವ ಒಂದು ಅವಕಾಶದೋಪಾದಿ ವೀಕ್ಷಿಸಿದನು.”

ಇದರ ನಂತರ ಗಿಲ್ಯಡ್‌ ಶಾಲೆಯ ಇನ್ನೊಬ್ಬ ಶಿಕ್ಷಕರಾದ ಮಾರ್ಕ್‌ ನ್ಯೂಮರ್‌, ಆ ತರಗತಿಯ ಅನೇಕ ವಿದ್ಯಾರ್ಥಿಗಳೊಂದಿಗೆ ಒಂದು ಉತ್ಸುಕ ಚರ್ಚೆಯನ್ನು ನಡೆಸಿದರು. ಅದರ ಶೀರ್ಷಿಕೆ “ದೇವರ ವಾಕ್ಯದ ಅಧ್ಯಯನವು ಹುರುಪಿನ ಶುಶ್ರೂಷಕರನ್ನು ಹುಟ್ಟಿಸುತ್ತದೆ” ಎಂದಾಗಿದ್ದು, ಅದು ರೋಮಾಪುರ 10:10ರಲ್ಲಿರುವ ಪೌಲನ ಮಾತುಗಳನ್ನು ಎತ್ತಿತೋರಿಸಿತು. ಶಾಲೆಗೆ ಹಾಜರಾಗುವಾಗ ತರಗತಿಯ ವಿದ್ಯಾರ್ಥಿಗಳು ಆನಂದಿಸಿದಂಥ ಅಸಂಖ್ಯಾತ ಕ್ಷೇತ್ರ ಸೇವಾ ಅನುಭವಗಳನ್ನು ಅವರು ತಿಳಿಸಿದರು. ನಾವು ದೇವರ ವಾಕ್ಯದ ಅಧ್ಯಯನ ಮಾಡಿ, ಅದರ ಕುರಿತು ಧ್ಯಾನಿಸುವಾಗ, ಯೆಹೋವನ ಮತ್ತು ಆತನ ರಾಜ್ಯದ ಕುರಿತಾದ ಒಳ್ಳೇ ವಿಷಯಗಳು ನಮ್ಮ ಹೃದತುಂಬಿ, ನಮ್ಮ ತುಟಿಗಳನ್ನು ತಲಪುವವು. ಈ ವಿದ್ಯಾರ್ಥಿಗಳು ವಾಚ್‌ಟವರ್‌ ಎಡ್ಯೂಕೇಷನಲ್‌ ಸೆಂಟರ್‌ನಲ್ಲಿ ಕಳೆದಂಥ ಐದು ತಿಂಗಳುಗಳಲ್ಲಿ, ಹತ್ತಿರದ ಸಭೆಗಳ ಅನೇಕ ಸಲ ಆವರಿಸಲ್ಪಟ್ಟ ಟೆರಿಟೊರಿಗಳಲ್ಲಿ, ಆಸಕ್ತ ಜನರೊಂದಿಗೆ 30ಕ್ಕಿಂತಲೂ ಹೆಚ್ಚು ಮನೆ ಬೈಬಲ್‌ ಅಧ್ಯಯನಗಳನ್ನು ಆರಂಭಿಸಲು ಶಕ್ತರಾಗಿದ್ದರು.

ಪ್ರೌಢರ ಬುದ್ಧಿವಾದ

ಈ ವಿದ್ಯಾರ್ಥಿಗಳು ತಮ್ಮ ಶಾಲಾ ಸಮಯದಲ್ಲಿ ಅಮೆರಿಕದ ಬೆತೆಲ್‌ ಕುಟುಂಬದ ಸದಸ್ಯರೊಂದಿಗೆ ಸಹವಾಸಿಸುವುದರಿಂದ ಪ್ರಯೋಜನಪಡೆದರು. ಆ ಬ್ರಾಂಚಿನ ಸಿಬ್ಬಂದಿಯ ಸದಸ್ಯರಾಗಿರುವ ರಾಬರ್ಟ್‌ ಸಿರಾಂಕೊ ಮತ್ತು ರಾಬರ್ಟ್‌ ಪಿ. ಜಾನ್ಸನ್‌, ದೀರ್ಘ ಸಮಯದಿಂದ ನಂಬಿಗಸ್ತಿಕೆಯಿಂದ ಸೇವೆ ಸಲ್ಲಿಸುತ್ತಿರುವ ಯೆಹೋವನ ಹಲವಾರು ಸೇವಕರನ್ನು ಇಂಟರ್‌ವ್ಯೂ ಮಾಡಿದರು. ಇವರಲ್ಲಿ ಪ್ರಸ್ತುತ, ವಾಚ್‌ಟವರ್‌ ಎಡ್ಯೂಕೇಷನಲ್‌ ಸೆಂಟರ್‌ನಲ್ಲಿ ವಿಶೇಷ ತರಬೇತಿಯನ್ನು ಪಡೆದುಕೊಳ್ಳುತ್ತಿರುವ ಸಂಚರಣಾ ಮೇಲ್ವಿಚಾರಕರೂ ಇದ್ದರು. ಇಂಟರ್‌ವ್ಯೂ ಮಾಡಲ್ಪಟ್ಟವರೆಲ್ಲರೂ, ಒಂದು ಕಾಲದಲ್ಲಿ ಮಿಷನೆರಿಗಳೋಪಾದಿ ಸೇವೆಸಲ್ಲಿಸಿದ್ದರು. ಆದುದರಿಂದ ಈ ಅನುಭವೀ ಆತ್ಮಿಕ ಪುರುಷರಿಂದ ವಿವೇಕದ ನುಡಿಮುತ್ತುಗಳನ್ನು ಆಲಿಸುವುದರಿಂದ, ವಿದ್ಯಾರ್ಥಿಗಳಿಗೂ ಅವರ ಕುಟುಂಬಗಳಿಗೂ ಪುನರಾಶ್ವಾಸನೆ ಸಿಕ್ಕಿತು.

ಅವರ ಬುದ್ಧಿವಾದದಲ್ಲಿ ಈ ಮಾತುಗಳು ಒಳಗೂಡಿದ್ದವು: “ಶುಶ್ರೂಷೆಯಲ್ಲೂ, ಸಭೆಯಲ್ಲೂ ಸಾಧ್ಯವಿರುವಷ್ಟು ಕಾರ್ಯಮಗ್ನರಾಗಿರಿ.” “ನಿಮ್ಮ ಪ್ರಾಮುಖ್ಯತೆಯ ಬಗ್ಗೆ ಅತಿರೇಕವಾಗಿ ಚಿಂತಿಸಬೇಡಿರಿ. ಒಬ್ಬ ಮಿಷನೆರಿಯೋಪಾದಿ ನಿಮ್ಮ ಉದ್ದೇಶದ ಮೇಲೆ ಗಮನವನ್ನು ಕೇಂದ್ರೀಕರಿಸಿರಿ ಮತ್ತು ನಿಮ್ಮ ನೇಮಕದ ಸ್ಥಳವನ್ನು ನಿಮ್ಮ ನಿವಾಸವನ್ನಾಗಿ ಮಾಡಿ.” ಇತರ ಸಹಾಯಕಾರಿ ಹೇಳಿಕೆಗಳು ಗಿಲ್ಯಡ್‌ ತರಬೇತಿಯು ಒಬ್ಬ ಶುಶ್ರೂಷಕನನ್ನು, ಅವನು ಎಲ್ಲಿಯೇ ನೇಮಿಸಲ್ಪಡಲಿ ಒಳ್ಳೇ ಕೆಲಸಕ್ಕಾಗಿ ಸಜ್ಜುಗೊಳಿಸುವ ವಿಧವನ್ನು ದೃಷ್ಟಾಂತಿಸುತ್ತದೆ. ಇವುಗಳಲ್ಲಿ ಕೆಲವು ಇವಾಗಿವೆ: “ನಾವು ಸಹಕರಿಸಿ, ಒಟ್ಟಿಗೆ ಕೆಲಸಮಾಡುವುದನ್ನು ಕಲಿತೆವು.” “ಹೊಸ ಸಂಸ್ಕೃತಿಗಳನ್ನು ಅರ್ಥಮಾಡಿಕೊಳ್ಳುವಂತೆ ಶಾಲೆಯು ಸಹಾಯಮಾಡಿತು.” “ಶಾಸ್ತ್ರವಚನಗಳನ್ನು ಒಂದು ಹೊಸ ದೃಷ್ಟಿಕೋನದಿಂದ ಉಪಯೋಗಿಸುವಂತೆ ನಮಗೆ ಕಲಿಸಲಾಯಿತು.”

ದೀರ್ಘ ಸಮಯದಿಂದ ಆಡಳಿತ ಮಂಡಲಿಯ ಸದಸ್ಯರಾಗಿರುವ ಜಾನ್‌ ಈ. ಬಾರ್‌ರವರು ಆ ಕಾರ್ಯಕ್ರಮದ ಮುಖ್ಯ ಭಾಷಣವನ್ನು ನೀಡಿದರು. ಅವರ ಭಾಷಣದ ಶಾಸ್ತ್ರಾಧಾರಿತ ಶೀರ್ಷಿಕೆಯು, “ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು” ಎಂದಾಗಿತ್ತು. (ರೋಮಾಪುರ 10:18) ಅವರು ಈ ಪ್ರಶ್ನೆಯನ್ನು ಕೇಳಿದರು: ಇಂದು ದೇವಜನರು ಈ ಕಷ್ಟಕರವಾದ ಕೆಲಸವನ್ನು ಪೂರೈಸಲು ಶಕ್ತರಾಗಿದ್ದಾರೊ? ಹೌದು, ಖಂಡಿತವಾಗಿಯೂ! ಹಿಂದೆ 1881ರಲ್ಲಿ, ಕಾವಲಿನಬುರುಜು ಪತ್ರಿಕೆಯ ವಾಚಕರಿಗೆ ಹೀಗೆ ಕೇಳಲಾಗಿತ್ತು: “ನೀವು ಸಾರುತ್ತಿದ್ದೀರೊ?” ಆಮೇಲೆ ಭಾಷಣಕರ್ತರು, ಅಮೆರಿಕದ ಓಹಾಯೊದ ಸೀಡಾರ್‌ ಪಾಯಿಂಟ್‌ನಲ್ಲಿ 1922ರಲ್ಲಿ ನಡೆದ ಅಧಿವೇಶನದಲ್ಲಿ ಕೊಡಲ್ಪಟ್ಟ, “ರಾಜನನ್ನೂ ಅವನ ರಾಜ್ಯವನ್ನೂ ಪ್ರಕಟಪಡಿಸಿರಿ!” ಎಂಬ ಐತಿಹಾಸಿಕ ಕರೆಯ ಬಗ್ಗೆ ಸಭಿಕರಿಗೆ ಜ್ಞಾಪಕಹುಟ್ಟಿಸಿದರು. ಸಮಯ ದಾಟಿದಂತೆ, ದೇವರ ನಂಬಿಗಸ್ತ ಸೇವಕರ ಹುರುಪು, ಅವರು ಎಲ್ಲಾ ರಾಷ್ಟ್ರಗಳಿಗೆ ಅದ್ಭುತಕರವಾದ ರಾಜ್ಯ ಸತ್ಯಗಳನ್ನು ಘೋಷಿಸುವಂತೆ ಪ್ರಚೋದಿಸಿತು. ಮುದ್ರಿತ ಪುಟ ಹಾಗೂ ಬಾಯಿಮಾತಿನ ಮೂಲಕ, ಸುವಾರ್ತೆಯು ನಿವಾಸಿತ ಭೂಮಿಯ ಕಟ್ಟಕಡೆಯ ವರೆಗೆ ತಲಪಿದೆ. ಇದೆಲ್ಲವೂ ಯೆಹೋವನಿಗೆ ಮಹಿಮೆ ಹಾಗೂ ಸ್ತುತಿಯನ್ನು ತಂದಿದೆ. ಸ್ಫೂರ್ತಿ ನೀಡಿದಂಥ ಸಮಾಪ್ತಿಯಲ್ಲಿ ಸಹೋದರ ಬಾರ್‌ರವರು, ಪದವೀಧರರು ತಮಗೆ ಸಿಕ್ಕಿರುವ ಆಶೀರ್ವಾದಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳುವಂತೆ ಪ್ರೋತ್ಸಾಹಿಸುತ್ತಾ ಹೇಳಿದ್ದು: “ಪ್ರತಿ ದಿನ ನೀವು ನಿಮ್ಮ ನೇಮಕದಲ್ಲಿ ಯೆಹೋವನಿಗೆ ಪ್ರಾರ್ಥಿಸುವಾಗ, ‘ಸಾರುವವರ ಧ್ವನಿಯು ಭೂಮಿಯಲ್ಲೆಲ್ಲಾ ಪ್ರಸರಿಸಿತು’ ಎಂಬ ಮಾತುಗಳ ನೆರವೇರಿಕೆಯಲ್ಲಿ ನಿಮಗಿರುವ ಪಾತ್ರಕ್ಕಾಗಿ ಹೃದಯದಾಳದಿಂದ ಆತನಿಗೆ ಉಪಕಾರಹೇಳಿರಿ.”

ಈ ಭಾಷಣದ ನಂತರ, ಬೇರೆ ಬೇರೆ ಬ್ರಾಂಚ್‌ಗಳಿಂದ ಬಂದ ಅಭಿನಂದನೆಯ ಮಾತುಗಳನ್ನು ಓದಿಹೇಳಲಾಯಿತು, ಮತ್ತು ಅಧ್ಯಕ್ಷರು ಪ್ರತಿಯೊಬ್ಬ ಪದವೀಧರನಿಗೆ ಒಂದು ಡಿಪ್ಲೊಮಾ ಕೊಟ್ಟರು. ಆಮೇಲೆ ಆ ತರಗತಿಯನ್ನು ಪ್ರತಿನಿಧಿಸಿದ ಒಬ್ಬ ಸಹೋದರನು, ತಮ್ಮ ಪ್ರಿಯ ಶಾಲೆಯನ್ನು ಬಿಟ್ಟುಹೋಗಬೇಕಾದ ಕಾರಣ ಆನಂದ ಹಾಗೂ ದುಃಖದಿಂದ ಕೂಡಿದ ಮಿಶ್ರ ಭಾವನೆಗಳೊಂದಿಗೆ, ಆಡಳಿತ ಮಂಡಲಿ ಹಾಗೂ ಬೆತೆಲ್‌ ಕುಟುಂಬಕ್ಕೆ ಸಂಬೋಧಿಸಲ್ಪಟ್ಟ ಒಂದು ಹೃತ್ಪೂರ್ವಕವಾದ ಠರಾವನ್ನು ಓದಿ, “ಇಂದಿನಿಂದ ಸದಾಕಾಲವೂ ಯಾಹುವನ್ನು ಕೊಂಡಾಡುವೆವು” ಎಂದು ಪದವೀಧರರು ಮಾಡಿರುವ ದೃಢಸಂಕಲ್ಪವನ್ನು ವ್ಯಕ್ತಪಡಿಸಿದನು.​—ಕೀರ್ತನೆ 115:18.

ಇವರಿಗಿಂತ ಮುಂಚೆ ಈ ಶಾಲೆಯಿಂದ ಹೋಗಿರುವವರು ಸುಮಾರು 60 ವರ್ಷಗಳಿಂದ ಮಾಡಿರುವಂತೆಯೇ ಈ ಪದವೀಧರರು ಕೂಡ ತಮ್ಮ ಹೊಸ ನಿವಾಸಗಳಿಗೆ ಹೊಂದಿಕೊಂಡು, ಲೋಕವ್ಯಾಪಕವಾದ ಸಾರುವ ಕೆಲಸದ ಮುನ್ನಡೆಯಲ್ಲಿ ನೆರವು ನೀಡಲಿ ಎಂದು ಪ್ರಾರ್ಥಿಸುತ್ತೇವೆ.

[ಪುಟ 23ರಲ್ಲಿರುವ ಚೌಕ]

ತರಗತಿಯ ಅಂಕಿಅಂಶಗಳು

ಪ್ರತಿನಿಧಿಸಲ್ಪಟ್ಟ ದೇಶಗಳ ಸಂಖ್ಯೆ: 12

ನೇಮಿಸಲ್ಪಟ್ಟ ದೇಶಗಳ ಸಂಖ್ಯೆ: 16

ವಿದ್ಯಾರ್ಥಿಗಳ ಸಂಖ್ಯೆ: 48

ಸರಾಸರಿ ಪ್ರಾಯ: 34.4

ಸತ್ಯದಲ್ಲಿ ಸರಾಸರಿ ವರ್ಷಗಳು: 17.6

ಪೂರ್ಣ ಸಮಯದ ಶುಶ್ರೂಷೆಯಲ್ಲಿ ಸರಾಸರಿ ವರ್ಷಗಳು: 13.5

[ಪುಟ 24ರಲ್ಲಿರುವ ಚಿತ್ರ]

ವಾಚ್‌ಟವರ್‌ ಬೈಬಲ್‌ ಸ್ಕೂಲ್‌ ಆಫ್‌ ಗಿಲ್ಯಡ್‌ನಿಂದ ಪದವಿಯನ್ನು ಪಡೆದ 114ನೆಯ ತರಗತಿ

ಈ ಕೆಳಗಿರುವ ಪಟ್ಟಿಯಲ್ಲಿ, ಸಾಲುಗಳು ಮುಂದಿನಿಂದ ಹಿಂದಕ್ಕೆ ಎಣಿಸಲ್ಪಟ್ಟು, ಪ್ರತಿ ಸಾಲಿನಲ್ಲಿರುವ ಹೆಸರುಗಳು ಎಡದಿಂದ ಬಲಕ್ಕೆ ಪಟ್ಟಿಮಾಡಲ್ಪಟ್ಟಿವೆ.

(1) ರೋಸ, ಡಿ.; ಗಾರೀಗೋಲಾಸ್‌, ಜೆ.; ಲಿಂಡ್‌ಸ್ಟ್ರಮ್‌, ಆರ್‌.; ಪಾವನೆಲೋ, ಪಿ.; ಟೇಟ್‌, ಎನ್‌. (2) ವಾನ್‌ ಹೌಟ್‌, ಎಮ್‌.; ಡಾನಬಾವರ್‌, ಸಿ.; ಮಾರ್ಟೀನೆಸ್‌, ಎಲ್‌.; ಮಿಲರ್‌, ಡಿ.; ಫೆಸ್ಟ್ರೇ, ವೈ.; ನಟರ್‌, ಎಸ್‌. (3) ಮಾರ್ಟೀನೆಸ್‌, ಪಿ.; ಕ್ಲಾರ್ಕ್‌, ಎಲ್‌.; ಮಾನ್‌, ಬಿ.; ಫಿಶರ್‌, ಎಲ್‌.; ರೋಮೋ, ಜಿ. (4) ರೋಮೋ, ಆರ್‌.; ಈಡೀ, ಎಸ್‌.; ಟೈಮನ್‌, ಸಿ.; ಕ್ಯಾಂಪೆಲ್‌, ಪಿ.; ಮಿಲರ್‌, ಡಿ.; ರೋಸ, ಡಬ್ಲ್ಯು. (5) ಲಿಂಡ್‌ಸ್ಟ್ರಮ್‌, ಡಿ.; ಗಾರೀಗೋಲಾಸ್‌, ಜೆ.; ಮಾರ್ಕವಿಕ್‌, ಎನ್‌.; ಲಿಂಡ್ಯಾಲ, ಕೆ.; ವಾನ್‌ ಡೆನ್‌ ಹೂವಲ್‌, ಜೆ.; ಟೇಟ್‌, ಎಸ್‌.; ನಟರ್‌, ಪಿ. (6) ಮಾನ್‌, ಪಿ.; ಪಾವನೆಲೋ, ವಿ.; ಈಡೀ, ಎನ್‌.; ವೆಸ್ಟ್‌, ಎ.; ಕ್ಲಾರ್ಕ್‌, ಡಿ.; ಮಾರ್ಕವಿಕ್‌, ಜೆ. (7) ಫಿಶರ್‌, ಡಿ.; ಡಾನಬಾವರ್‌, ಆರ್‌.; ಕರಿ, ಪಿ.; ಕರಿ, ವೈ.; ಕಾರ್‌ಫಾನೋ ಡಬ್ಲ್ಯು.; ವೆಸ್ಟ್‌, ಎಮ್‌.; ಟೈಮನ್‌, ಎ. (8) ವಾನ್‌ ಹೌಟ್‌, ಎಮ್‌.; ಕ್ಯಾಂಪೆಲ್‌, ಸಿ.; ಫೆಸ್ಟ್ರೇ, ವೈ.; ಕಾರ್‌ಫಾನೋ, ಸಿ.; ವಾನ್‌ ಡೆನ್‌ ಹೂವಲ್‌, ಕೆ.; ಲಿಂಡಾಲ, ಡಿ.