ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಪಕ್ಷಪಾತವಿಲ್ಲದ ನಮ್ಮ ದೇವರಾದ ಯೆಹೋವನನ್ನು ಅನುಕರಿಸಿರಿ

ಪಕ್ಷಪಾತವಿಲ್ಲದ ನಮ್ಮ ದೇವರಾದ ಯೆಹೋವನನ್ನು ಅನುಕರಿಸಿರಿ

ಪಕ್ಷಪಾತವಿಲ್ಲದ ನಮ್ಮ ದೇವರಾದ ಯೆಹೋವನನ್ನು ಅನುಕರಿಸಿರಿ

“ದೇವರಿಗೆ ಪಕ್ಷಪಾತವಿಲ್ಲ.”​—ರೋಮಾಪುರ 2:11.

1, 2. (ಎ) ಒಟ್ಟಾಗಿ ಕಾನಾನ್ಯರ ಕುರಿತು ಯೆಹೋವನ ಉದ್ದೇಶವೇನಾಗಿತ್ತು? (ಬಿ) ಯೆಹೋವನು ಏನು ಮಾಡಿದನು, ಮತ್ತು ಇದು ಯಾವ ಪ್ರಶ್ನೆಗಳನ್ನು ಎಬ್ಬಿಸುತ್ತದೆ?

ಮೋವಾಬಿನ ಬಯಲಲ್ಲಿ ಪಾಳೆಯ ಹೂಡಿದ್ದ ಇಸ್ರಾಯೇಲ್ಯರು ಮೋಶೆಗೆ ಗಮನಕೊಟ್ಟು ಕೇಳಿದರು. ಅದು ಸಾ.ಶ.ಪೂ. 1473ರ ಸಮಯ. ಯೊರ್ದನ್‌ ಹೊಳೆಯಾಚೆಗೆ ಕಷ್ಟಕರವಾದ ಪರಿಸ್ಥಿತಿ ಅವರಿಗಾಗಿ ಕಾದಿತ್ತು. ವಾಗ್ದತ್ತ ದೇಶದಲ್ಲಿ ಇಸ್ರಾಯೇಲ್ಯರು ಏಳು ಮಹಾ ಕಾನಾನ್ಯ ಜನಾಂಗಗಳನ್ನು ಸೋಲಿಸುವುದು ಯೆಹೋವನ ಉದ್ದೇಶವಾಗಿದೆಯೆಂದು ಮೋಶೆ ಅವರಿಗೆ ತಿಳಿಯಪಡಿಸಿದನು. ‘ನಿಮ್ಮ ದೇವರಾದ ಯೆಹೋವನು ಅವರನ್ನು ನಿಮ್ಮ ಎದುರಿನಿಂದ ಹೊರಡಿಸುವವನಾಗಿ, ನಿಮ್ಮಿಂದ ಪರಾಜಯಪಡಿಸುವನು’ ಎಂಬ ಮೋಶೆಯ ಮಾತುಗಳು ಅವರಿಗೆ ಎಷ್ಟೊಂದು ಪುನರಾಶ್ವಾಸನೆಯನ್ನು ಕೊಟ್ಟಿದ್ದಿರಬೇಕು! ಇಸ್ರಾಯೇಲು ಅವರೊಂದಿಗೆ ಯಾವುದೇ ಒಡಂಬಡಿಕೆಯನ್ನು ಮಾಡಬಾರದಾಗಿತ್ತು, ಮತ್ತು ಅವರು ಯಾವುದೇ ರೀತಿಯ ಕನಿಕರಕ್ಕೂ ಅರ್ಹರಾಗಿರಲಿಲ್ಲ.​—ಧರ್ಮೋಪದೇಶಕಾಂಡ 1:1; 7:1, 2.

2 ಆದರೂ ಇಸ್ರಾಯೇಲ್‌ ದಾಳಿ ಮಾಡಿದ ಮೊದಲನೇ ಪಟ್ಟಣದಲ್ಲಿ ಯೆಹೋವನು ಒಂದು ಕುಟುಂಬವನ್ನು ಉಳಿಸಿದನು. ಬೇರೆ ನಾಲ್ಕು ಪಟ್ಟಣಗಳ ಜನರೂ ದೇವರ ರಕ್ಷಣೆಯನ್ನು ಅನುಭವಿಸಿದರು. ಇದೇಕೆ? ಕಾನಾನ್ಯರಾಗಿದ್ದ ಇವರ ಪಾರಾಗುವಿಕೆಗೆ ಸಂಬಂಧಿತ ಗಮನಾರ್ಹ ಘಟನೆಗಳು ನಮಗೆ ಯೆಹೋವನ ಬಗ್ಗೆ ಏನು ತಿಳಿಸುತ್ತವೆ? ಮತ್ತು ನಾವು ಆತನನ್ನು ಹೇಗೆ ಅನುಕರಿಸಬಲ್ಲೆವು?

ಯೆಹೋವನ ಪ್ರಸಿದ್ಧಿಗೆ ಪ್ರತಿಕ್ರಿಯೆ

3, 4. ಇಸ್ರಾಯೇಲಿನ ವಿಜಯಗಳ ಕುರಿತಾದ ಸುದ್ದಿಯು, ಕಾನಾನಿನಲ್ಲಿದ್ದ ಕೆಲವು ವ್ಯಕ್ತಿಗಳ ಮೇಲೆ ಯಾವ ಪರಿಣಾಮವನ್ನು ಬೀರಿತು?

3 ಇಸ್ರಾಯೇಲ್ಯರು ಅರಣ್ಯದಲ್ಲಿದ್ದ 40 ವರುಷಗಳ ಕಾಲದಲ್ಲಿ ಯೆಹೋವನು ತನ್ನ ಜನರನ್ನು ಕಾಪಾಡಿ ಅವರ ಪರವಾಗಿ ಹೋರಾಡಿದನು. ವಾಗ್ದತ್ತ ದೇಶದ ದಕ್ಷಿಣ ದಿಕ್ಕಿನಲ್ಲಿ ಇಸ್ರಾಯೇಲು ಅರಾದಿನ ಕಾನಾನ್ಯ ಅರಸನನ್ನು ಎದುರಿಸಿತು. ಯೆಹೋವನ ಸಹಾಯದಿಂದ ಅವನನ್ನೂ ಅವನ ಜನರನ್ನೂ ಇಸ್ರಾಯೇಲ್ಯರು ಹೊರ್ಮಾದಲ್ಲಿ ಸೋಲಿಸಿದರು. (ಅರಣ್ಯಕಾಂಡ 21:​1-3) ತರುವಾಯ ಇಸ್ರಾಯೇಲ್ಯರು ಏದೋಮ್‌ ದೇಶವನ್ನು ಸುತ್ತಿಬಳಸಿ ಹೋಗಿ, ಉತ್ತರಕ್ಕೆ, ಲವಣ ಸಮುದ್ರದ ಈಶಾನ್ಯಕ್ಕೆ ಪಯಣಿಸಿದರು. ಹಿಂದೆ ಮೋವಾಬ್ಯರು ಜೀವಿಸಿದ್ದ ಈ ಪ್ರದೇಶದಲ್ಲಿ ಈಗ ಅಮೋರಿಯರಿದ್ದರು. ಅಮೋರಿಯರ ಅರಸನಾದ ಸೀಹೋನನು ತನ್ನ ಪ್ರದೇಶವನ್ನು ಹಾದುಹೋಗುವಂತೆ ಅವರಿಗೆ ಅನುಮತಿ ನೀಡಲಿಲ್ಲ. ಅರ್ನೋನ್‌ ಹೊಳೆಯ ಉತ್ತರಕ್ಕಿತ್ತೆಂದು ವ್ಯಕ್ತವಾಗುವ ಯಹಚದಲ್ಲಿ ನಡೆದ ಯುದ್ಧದಲ್ಲಿ ಸೀಹೋನನು ಕೊಲ್ಲಲ್ಪಟ್ಟನು. (ಅರಣ್ಯಕಾಂಡ 21:​23, 24; ಧರ್ಮೋಪದೇಶಕಾಂಡ 2:​30-33) ಇನ್ನೂ ಉತ್ತರ ದಿಕ್ಕಿನಲ್ಲಿದ್ದ ಬಾಷಾನಿನಲ್ಲಿ ಓಗ್‌ ಅರಸನು ಇತರ ಅಮೋರಿಯರನ್ನು ಆಳುತ್ತಿದ್ದನು. ಓಗನು ದೈತ್ಯಾಕಾರದ ವ್ಯಕ್ತಿಯಾಗಿದ್ದರೂ ಅವನು ಯೆಹೋವನಿಗೆ ಎದುರಾಗಿ ನಿಲ್ಲಲು ಸಾಧ್ಯವಾಗಲಿಲ್ಲ. ಓಗನು ಎದ್ರೈವೂರಲ್ಲಿ ಕೊಲ್ಲಲ್ಪಟ್ಟನು. (ಅರಣ್ಯಕಾಂಡ 21:​33-35; ಧರ್ಮೋಪದೇಶಕಾಂಡ 3:​1-3, 11) ಈ ವಿಜಯಗಳ ಸುದ್ದಿ ಮತ್ತು ಐಗುಪ್ತದಿಂದ ಇಸ್ರಾಯೇಲ್ಯರು ಹೊರಟು ಬಂದಿರುವುದರ ಕುರಿತಾದ ವೃತ್ತಾಂತಗಳು​—ಇವೆಲ್ಲ ಕಾನಾನಿನಲ್ಲಿ ಜೀವಿಸುತ್ತಿದ್ದ ಕೆಲವರ ಮೇಲೆ ಬಲವಾದ ಪರಿಣಾಮವನ್ನು ಬೀರಿತು. *

4 ಯೊರ್ದನನ್ನು ದಾಟಿ, ಇಸ್ರಾಯೇಲು ಪ್ರಥಮವಾಗಿ ಕಾನಾನನ್ನು ಪ್ರವೇಶಿಸಿದಾಗ, ಅವರು ಗಿಲ್ಗಾಲಿನಲ್ಲಿ ಪಾಳೆಯ ಹಾಕಿದರು. (ಯೆಹೋಶುವ 4:​9-19) ಕೋಟೆ ಪಟ್ಟಣವಾದ ಯೆರಿಕೋ ಇಲ್ಲಿಂದ ಹೆಚ್ಚು ದೂರದಲ್ಲಿರಲಿಲ್ಲ. ಕಾನಾನ್ಯಳಾಗಿದ್ದ ರಾಹಾಬಳು ಯೆಹೋವನ ಕಾರ್ಯಗಳ ಕುರಿತಾಗಿ ಏನು ಕೇಳಿದ್ದಳೊ ಅದು ಆಕೆ ನಂಬಿಕೆಯಿಂದ ವರ್ತಿಸುವಂತೆ ನಡೆಸಿತು. ಇದರ ಪರಿಣಾಮವಾಗಿ, ಯೆರಿಕೋವನ್ನು ಯೆಹೋವನು ನಾಶಪಡಿಸಿದಾಗ, ಆತನು ಆಕೆಯನ್ನೂ ಆಕೆಯ ಮನೆಯಲ್ಲಿದ್ದವರನ್ನೂ ಉಳಿಸಿದನು.​—ಯೆಹೋಶುವ 2:​1-13; 6:​17, 18; ಯಾಕೋಬ 2:25.

5. ಗಿಬ್ಯೋನ್ಯರು ಚುರುಕು ಬುದ್ಧಿಯಿಂದ ವರ್ತಿಸುವಂತೆ ಯಾವುದು ಪ್ರಚೋದಿಸಿತು?

5 ಬಳಿಕ, ಇಸ್ರಾಯೇಲ್ಯರು ಯೊರ್ದನ್‌ ನದಿಯ ಬಳಿಯಲ್ಲಿದ್ದ ತಗ್ಗುಪ್ರದೇಶದಿಂದ ಮಧ್ಯಬೆಟ್ಟಗಳನ್ನು ಹತ್ತಿದರು. ಯೆಹೋವನ ನಿರ್ದೇಶನದಂತೆ, ಆಯಿ ಪಟ್ಟಣದ ವಿರುದ್ಧ ಯೆಹೋಶುವನು ಹೊಂಚುಹಾಕುವ ತಂತ್ರಗಳನ್ನು ಬಳಸಿದನು. (ಯೆಹೋಶುವ, 8ನೆಯ ಅಧ್ಯಾಯ) ಅಲ್ಲಿ ನಡೆದಂಥ ವಿಪತ್ಕಾರಕ ಸೋಲಿನ ಸುದ್ದಿಯು ಕಾನಾನಿನ ಅನೇಕ ಮಂದಿ ಅರಸರು ಯುದ್ಧಕ್ಕಾಗಿ ಕೂಡಿಬರುವಂತೆ ಮಾಡಿತು. (ಯೆಹೋಶುವ 9:​1, 2) ಆದರೆ ಹತ್ತಿರದಲ್ಲಿದ್ದ ಗಿಬ್ಯೋನ್‌ ಎಂಬ ಹಿವ್ವಿಯ ಪಟ್ಟಣದ ನಿವಾಸಿಗಳು ಭಿನ್ನವಾಗಿ ಪ್ರತಿಕ್ರಿಯಿಸಿದರು. ಅವರು “ಒಂದು ಯುಕ್ತಿಮಾಡಿದರು” ಎಂದು ಯೆಹೋಶುವ 9:4 ತಿಳಿಸುತ್ತದೆ. ರಾಹಾಬಳಂತೆ ಇವರೂ, ಐಗುಪ್ತದಿಂದ ಹೊರಬರುವಾಗ ಹಾಗೂ ಸೀಹೋನ್‌ ಮತ್ತು ಓಗರನ್ನು ಸೋಲಿಸಿದಾಗ ಯೆಹೋವನು ತನ್ನ ಜನರನ್ನು ವಿಮೋಚಿಸಿದ್ದರ ವಿಷಯವನ್ನು ಕೇಳಿಸಿಕೊಂಡಿದ್ದರು. (ಯೆಹೋಶುವ 9:​6-10) ಇಸ್ರಾಯೇಲ್ಯರನ್ನು ಎದುರಿಸಿ ನಿಲ್ಲುವ ವ್ಯರ್ಥತೆಯನ್ನು ಗಿಬ್ಯೋನ್ಯರು ಮನಗಂಡರು. ಆದಕಾರಣ ಅವರು ಗಿಬ್ಯೋನ್‌ ಮತ್ತು ಹತ್ತಿರದಲ್ಲಿದ್ದ ಕೆಫೀರಾ, ಬೇರೋತ್‌ ಮತ್ತು ಕಿರ್ಯತ್ಯಾರೀಮ್‌ ಎಂಬ ಮೂರು ಪಟ್ಟಣಗಳ ಪರವಾಗಿ, ಅವರು ದೂರದ ಪಟ್ಟಣದಿಂದ ಬಂದವರೊ ಎಂಬಂತೆ ವೇಷ ಧರಿಸಿದ ಒಂದು ಪ್ರತಿನಿಧಿ ಮಂಡಲಿಯನ್ನು ಯೆಹೋಶುವನ ಬಳಿ ಗಿಲ್ಗಾಲಿಗೆ ಕಳುಹಿಸಿದರು. ಈ ಉಪಾಯವು ಯಶಸ್ವಿಯಾಯಿತು. ಅವರ ಬದುಕಿ ಉಳಿಯುವಿಕೆಯನ್ನು ಖಚಿತಗೊಳಿಸಿದ ಒಂದು ಒಡಂಬಡಿಕೆಯನ್ನು ಯೆಹೋಶುವನು ಅವರೊಂದಿಗೆ ಮಾಡಿದನು. ತಾವು ಮೋಸಹೋಗಿದ್ದೇವೆಂದು ಯೆಹೋಶುವನಿಗೂ ಇಸ್ರಾಯೇಲ್ಯರಿಗೂ ತಿಳಿದದ್ದು ಮೂರು ದಿನಗಳ ಬಳಿಕವೇ. ಆದರೂ ತಾವು ಆ ಒಡಂಬಡಿಕೆಯಂತೆ ನಡೆಯುವೆವೆಂದು ಯೆಹೋವನ ಹೆಸರಿನಲ್ಲಿ ಪ್ರಮಾಣ ಮಾಡಿದ್ದರಿಂದ ಅವರು ಹಾಗೆಯೇ ನಡೆದರು. (ಯೆಹೋಶುವ 9:​16-19) ಯೆಹೋವನು ಇದನ್ನು ಸಮ್ಮತಿಸಿದನೊ?

6. ಯೆಹೋಶುವನು ಗಿಬ್ಯೋನ್ಯರೊಂದಿಗೆ ಮಾಡಿದ ಒಡಂಬಡಿಕೆಗೆ ಯೆಹೋವನು ಹೇಗೆ ಪ್ರತಿಕ್ರಿಯೆ ತೋರಿಸಿದನು?

6 ಗಿಬ್ಯೋನ್ಯರನ್ನು ಇಸ್ರಾಯೇಲ್ಯರಿಗೂ ಸಾಕ್ಷಿಗುಡಾರದಲ್ಲಿದ್ದ ಯೆಹೋವನ “ಯಜ್ಞವೇದಿ”ಗೂ ಕಟ್ಟಿಗೆ ಒಡೆಯುವವರೂ ನೀರುತರುವವರೂ ಆಗಿರುವಂತೆ ಬಿಡಲಾಯಿತು. (ಯೆಹೋಶುವ 9:​21-27) ಇದಲ್ಲದೆ, ಐವರು ಅಮೋರಿಯ ಅರಸರೂ ಅವರ ಸೈನ್ಯಗಳೂ ಗಿಬ್ಯೋನ್ಯರಿಗೆ ಬೆದರಿಕೆಯೊಡ್ಡಿದ್ದಾಗ, ಯೆಹೋವನು ಅದ್ಭುತಕರವಾಗಿ ಹಸ್ತಕ್ಷೇಪ ಮಾಡಿದನು. ಕಲ್ಮಳೆಯು, ಯೆಹೋಶುವನ ಸೈನ್ಯದವರು ಕೊಂದದ್ದಕ್ಕಿಂತಲೂ ಹೆಚ್ಚು ಮಂದಿ ವೈರಿಗಳನ್ನು ಕೊಂದಿತು. ವೈರಿಗಳನ್ನು ಪೂರ್ಣವಾಗಿ ಸೋಲಿಸಲು ಸಾಧ್ಯವಾಗುವಂತೆ, ಯೆಹೋಶುವನು ಸೂರ್ಯ ಮತ್ತು ಚಂದ್ರ ಚಲಿಸದೆ ನಿಲ್ಲುವಂತೆ ಮಾಡಿದ ಪ್ರಾರ್ಥನೆಗೂ ಯೆಹೋವನು ಉತ್ತರಕೊಟ್ಟನು. ಯೆಹೋಶುವನು ಹೇಳಿದ್ದು: “ಯೆಹೋವನು ಈ ಪ್ರಕಾರ ಒಬ್ಬ ಮನುಷ್ಯನ ಮಾತಿಗೆ ಕಿವಿಗೊಟ್ಟ ದಿವಸವು ಅದಕ್ಕಿಂತ ಹಿಂದೆಯೂ ಮುಂದೆಯೂ ಇಲ್ಲವೇ ಇಲ್ಲ.”​—ಯೆಹೋಶುವ 10:1-14.

7. ಪೇತ್ರನು ಅಂಗೀಕರಿಸಿದಂಥ ಯಾವ ಸತ್ಯವು ಕೆಲವು ಮಂದಿ ಕಾನಾನ್ಯರ ವಿಷಯದಲ್ಲಿ ಪ್ರದರ್ಶಿಸಲ್ಪಟ್ಟಿತು?

7 ಕಾನಾನ್ಯಳಾಗಿದ್ದ ರಾಹಾಬಳೂ ಆಕೆಯ ಕಾನಾನ್ಯ ಕುಟುಂಬವೂ, ಹಾಗೂ ಗಿಬ್ಯೋನ್ಯರು ಯೆಹೋವನಿಗೆ ಭಯಪಟ್ಟು ಅದಕ್ಕನುಸಾರ ಕ್ರಿಯೆಗೈದರು. ಅವರಿಗೆ ಏನು ಸಂಭವಿಸಿತೊ ಅದು “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ” ಎಂದು ಕ್ರೈಸ್ತ ಅಪೊಸ್ತಲ ಪೇತ್ರನು ಸಮಯಾನಂತರ ನುಡಿದ ಸತ್ಯವನ್ನು ಸ್ಪಷ್ಟವಾಗಿ ಪ್ರದರ್ಶಿಸುತ್ತದೆ.​—ಅ. ಕೃತ್ಯಗಳು 10:34, 35.

ಅಬ್ರಹಾಮ ಮತ್ತು ಇಸ್ರಾಯೇಲ್ಯರೊಂದಿಗೆ ಯೆಹೋವನು ವ್ಯವಹರಿಸಿದ ವಿಧ

8, 9. ಅಬ್ರಹಾಮನೊಂದಿಗೆ ಮತ್ತು ಇಸ್ರಾಯೇಲ್‌ ಜನಾಂಗದೊಂದಿಗಿನ ತನ್ನ ವ್ಯವಹಾರದಲ್ಲಿ ಯೆಹೋವನ ನಿಷ್ಪಕ್ಷಪಾತವು ಹೇಗೆ ತೋರಿಬರುತ್ತದೆ?

8 ಅಬ್ರಹಾಮನೊಂದಿಗೆ ಮತ್ತು ಅವನ ಸಂತತಿಯೊಂದಿಗಿನ ತನ್ನ ವ್ಯವಹಾರದಲ್ಲಿ ದೇವರು ತೋರಿಸಿದ ಪ್ರೀತಿಪೂರ್ವಕವಾದ ದಯೆಗೆ ಶಿಷ್ಯ ಯಾಕೋಬನು ಗಮನ ಸೆಳೆಯುತ್ತಾನೆ. ಅಬ್ರಹಾಮನನ್ನು “ದೇವರ ಸ್ನೇಹಿತ”ನಾಗಿ ಮಾಡಿದ್ದು ಅವನ ಕುಲವಲ್ಲ, ಬದಲಾಗಿ ಅವನ ನಂಬಿಕೆಯಾಗಿತ್ತು. (ಯಾಕೋಬ 2:23) ಯೆಹೋವನಲ್ಲಿ ಅಬ್ರಹಾಮನಿಗಿದ್ದ ನಂಬಿಕೆ ಮತ್ತು ಪ್ರೀತಿ, ಅವನ ವಂಶಸ್ಥರಿಗೆ ಆಶೀರ್ವಾದವನ್ನು ತಂದಿತು. (2 ಪೂರ್ವಕಾಲವೃತ್ತಾಂತ 20:7) ಯೆಹೋವನು ಅಬ್ರಹಾಮನಿಗೆ ವಚನ ಕೊಟ್ಟದ್ದು: “ನಿನ್ನ ಸಂತತಿಯನ್ನು ಹೆಚ್ಚಿಸೇ ಹೆಚ್ಚಿಸುವೆನು; ಅದನ್ನು ಆಕಾಶದ ನಕ್ಷತ್ರಗಳಂತೆಯೂ ಸಮುದ್ರತೀರದಲ್ಲಿರುವ ಉಸುಬಿನಂತೆಯೂ ಅಸಂಖ್ಯವಾಗಿ ಮಾಡುವೆನು.” ಆದರೆ ಮುಂದಿನ ವಚನದಲ್ಲಿರುವ ವಾಗ್ದಾನವನ್ನು ಗಮನಿಸಿರಿ: “ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲಾ ಜನಾಂಗಗಳು ತಮ್ಮನ್ನು ಆಶೀರ್ವದಿಸಿಕೊಳ್ಳುವವು.”​—ಆದಿಕಾಂಡ 22:17, 18, NW; ರೋಮಾಪುರ 4:1-8.

9 ಯೆಹೋವನು ಇಸ್ರಾಯೇಲಿನೊಂದಿಗೆ ವ್ಯವಹರಿಸಿದ ವಿಧದ ಮೂಲಕ ಪಕ್ಷಪಾತವನ್ನು ತೋರಿಸುವ ಬದಲಿಗೆ, ತನಗೆ ವಿಧೇಯರಾಗುವವರಿಗೆ ತಾನೇನು ಮಾಡಶಕ್ತನೆಂಬದನ್ನು ಪ್ರದರ್ಶಿಸಿದನು. ಈ ರೀತಿಗಳಲ್ಲಿ ಯೆಹೋವನು ವ್ಯವಹರಿಸಿದ ವಿಧಾನಗಳು, ಆತನು ತನ್ನ ನಂಬಿಗಸ್ತ ಸೇವಕರಿಗೆ ಹೇಗೆ ನಿಷ್ಠಾವಂತ ಪ್ರೀತಿಯನ್ನು ತೋರಿಸುತ್ತಾನೆಂಬುದಕ್ಕೆ ಒಂದು ಮಾದರಿಯಾಗಿದೆ. ಇಸ್ರಾಯೇಲ್ಯರು ಯೆಹೋವನ “ಸ್ವಕೀಯಜನ”ರಾಗಿದ್ದರೂ, ಇತರರು ದೇವರ ಅನುಗ್ರಹವನ್ನು ಅನುಭವಿಸಸಾಧ್ಯವಿರಲಿಲ್ಲ ಎಂದು ಇದರ ಅರ್ಥವಲ್ಲ. (ವಿಮೋಚನಕಾಂಡ 19:5; ಧರ್ಮೋಪದೇಶಕಾಂಡ 7:​6-8) ನಿಜ, ಯೆಹೋವನು ಇಸ್ರಾಯೇಲ್ಯರನ್ನು ಐಗುಪ್ತದಿಂದ ವಿಮೋಚಿಸಿದ್ದರಿಂದ, “ಭೂಮಿಯ ಸಕಲಕುಲಗಳೊಳಗೆ ನಿಮ್ಮನ್ನು ಮಾತ್ರ ನನ್ನವರೆಂದು ಅರಿತುಕೊಂಡಿದ್ದೇನೆ” ಎಂದು ಅವನು ಘೋಷಿಸಿದನು. ಆದರೆ ಪ್ರವಾದಿಯಾದ ಆಮೋಸ ಮತ್ತು ಇತರರ ಮುಖಾಂತರ ಯೆಹೋವನು “ಸಕಲ ಜನಾಂಗಗಳ” ಮುಂದೆಯೂ ಒಂದು ಅದ್ಭುತಕರವಾದ ಪ್ರತೀಕ್ಷೆಯನ್ನು ಎತ್ತಿ ಹಿಡಿದನು.​—ಆಮೋಸ 3:2; 9:11, 12; ಯೆಶಾಯ 2:​2-4.

ಪಕ್ಷಪಾತವಿಲ್ಲದ ಬೋಧಕನಾದ ಯೇಸು

10. ನಿಷ್ಪಕ್ಷಪಾತವನ್ನು ತೋರಿಸುವುದರಲ್ಲಿ ಯೇಸು ತನ್ನ ತಂದೆಯನ್ನು ಹೇಗೆ ಅನುಕರಿಸಿದನು?

10 ತನ್ನ ತಂದೆಯ ನಿಷ್ಕೃಷ್ಟ ಪ್ರತಿರೂಪವಾಗಿರುವ ಯೇಸು ತನ್ನ ಭೂಶುಶ್ರೂಷೆಯಲ್ಲಿ ಯೆಹೋವನ ನಿಷ್ಪಕ್ಷಪಾತವನ್ನು ಅನುಕರಿಸಿದನು. (ಇಬ್ರಿಯ 1:3) ಆಗ ಅವನ ಪ್ರಧಾನ ಕೆಲಸವು, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲನ ಮನೆತನದ” ಜನರನ್ನು ಹುಡುಕುವುದಾಗಿತ್ತು. ಆದರೂ ಇದು, ಅವನು ಬಾವಿಯ ಬಳಿಯಿದ್ದ ಸಮಾರ್ಯದ ಸ್ತ್ರೀಯೊಬ್ಬಳಿಗೆ ಸಾಕ್ಷಿನೀಡುವುದರಿಂದ ಅವನನ್ನು ತಡೆದುಹಿಡಿಯಲಿಲ್ಲ. (ಮತ್ತಾಯ 15:24; ಯೋಹಾನ 4:​7-30) ಅವನು, ಬಹುಶಃ ಒಬ್ಬ ಯೆಹೂದ್ಯನಾಗಿರದಿದ್ದ ಸೈನ್ಯಾಧಿಕಾರಿಯ ಬಿನ್ನಹದ ಮೇರೆಗೆ ಒಂದು ಅದ್ಭುತವನ್ನೂ ಮಾಡಿದನು. (ಲೂಕ 7:​1-10) ಇದು, ದೇವಜನರ ಕಡೆಗೆ ಅವನಿಗಿದ್ದ ಪ್ರೀತಿಯನ್ನು ಕ್ರಿಯೆಗಳ ಮೂಲಕ ತೋರಿಸಿದ್ದಕ್ಕೆ ಕೂಡಿಸಿ ಮಾಡಿದ ವಿಷಯವಾಗಿತ್ತು. ಯೇಸುವಿನ ಶಿಷ್ಯರು ಸಹ ವ್ಯಾಪಕವಾಗಿ ಸಾರಿದರು. ಯೆಹೋವನ ಆಶೀರ್ವಾದವನ್ನು ಪಡೆಯುವುದಕ್ಕಾಗಿರುವ ನಿರ್ಣಾಯಕ ಅಂಶವು, ಒಬ್ಬನ ರಾಷ್ಟ್ರೀಯತೆಯಲ್ಲ, ಬದಲಾಗಿ ಒಬ್ಬ ವ್ಯಕ್ತಿಯ ಮನೋಭಾವಕ್ಕೆ ಸಂಬಂಧಿಸಿದೆಯೆಂದು ಸ್ಪಷ್ಟವಾಯಿತು. ಸತ್ಯಕ್ಕಾಗಿ ಹಸಿದಿದ್ದ ನಮ್ರರೂ ಪ್ರಾಮಾಣಿಕ ಹೃದಯಿಗಳೂ ರಾಜ್ಯ ಸುವಾರ್ತೆಗೆ ಓಗೊಟ್ಟರು. ವ್ಯತಿರಿಕ್ತವಾಗಿ, ದುರಭಿಮಾನ ಹಾಗೂ ಅಹಂಕಾರವಿದ್ದವರು ಯೇಸುವನ್ನೂ ಅವನ ಸಂದೇಶವನ್ನೂ ಉಪೇಕ್ಷಿಸಿದರು. ಯೇಸು ಘೋಷಿಸಿದ್ದು: “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀನು ಜ್ಞಾನಿಗಳಿಗೂ ಬುದ್ಧಿವಂತರಿಗೂ ಈ ಮಾತುಗಳನ್ನು ಮರೆಮಾಡಿ ಬಾಲಕರಿಗೆ ಪ್ರಕಟಮಾಡಿದ್ದೀ ಎಂದು ನಿನ್ನನ್ನು ಕೊಂಡಾಡುತ್ತೇನೆ. ಹೌದು, ತಂದೆಯೇ, ಹೀಗೆ ಮಾಡುವದೇ ಒಳ್ಳೇದೆಂದು ನಿನ್ನ ದೃಷ್ಟಿಗೆ ತೋರಿದ್ದರಿಂದ ನಿನ್ನನ್ನು ಕೊಂಡಾಡುತ್ತೇನೆ.” (ಲೂಕ 10:21) ನಾವು ಇತರರೊಂದಿಗೆ ಪ್ರೀತಿ ಮತ್ತು ನಂಬಿಕೆಯ ಆಧಾರದ ಮೇರೆಗೆ ವ್ಯವಹರಿಸುವಾಗ, ನಿಷ್ಪಕ್ಷಪಾತದಿಂದ ವರ್ತಿಸುತ್ತೇವೆ. ಏಕೆಂದರೆ, ಯೆಹೋವನು ಮೆಚ್ಚುವ ರೀತಿ ಇದೇ ಎಂಬುದು ನಮಗೆ ಗೊತ್ತಿರುತ್ತದೆ.

11. ಆದಿ ಕ್ರೈಸ್ತ ಸಭೆಯಲ್ಲಿ ನಿಷ್ಪಕ್ಷಪಾತವು ಹೇಗೆ ತೋರಿಸಲ್ಪಟ್ಟಿತು?

11 ಆದಿ ಕ್ರೈಸ್ತ ಸಭೆಯಲ್ಲಿ ಯೆಹೂದ್ಯರೂ ಯೆಹೂದ್ಯೇತರರೂ ಸಮಾನರಾಗಿದ್ದರು. ಪೌಲನು ವಿವರಿಸಿದ್ದು: “ಒಳ್ಳೇದನ್ನು ನಡಿಸುವ ಪ್ರತಿಯೊಬ್ಬನಿಗೆ ಪ್ರಭಾವವೂ ಮಾನವೂ ಮನಶ್ಯಾಂತಿಯೂ ಉಂಟಾಗುವವು​—ಯೆಹೂದ್ಯರಿಗೆ ಮೊದಲು, ಅನಂತರ ಗ್ರೀಕರಿಗೆ ಸಹ. ದೇವರಿಗೆ ಪಕ್ಷಪಾತವಿಲ್ಲ.” * (ರೋಮಾಪುರ 2:10, 11) ಅವರು ಯೆಹೋವನ ಅಪಾತ್ರ ದಯೆಯಿಂದ ಪ್ರಯೋಜನಪಡೆಯುವರೋ ಇಲ್ಲವೋ ಎಂಬುದನ್ನು ನಿರ್ಣಯಿಸಿದ ಸಂಗತಿಯು ಅವರ ರಾಷ್ಟ್ರೀಯತೆಯಲ್ಲ, ಬದಲಾಗಿ ಯೆಹೋವನ ಕುರಿತು ಮತ್ತು ಆತನ ಪುತ್ರನಾಗಿದ್ದ ಯೇಸುವಿನ ವಿಮೋಚನಾ ಯಜ್ಞದ ಕುರಿತು ಕಲಿತಾಗ ಅವರು ತೋರಿಸಿದ ಪ್ರತಿಕ್ರಿಯೇ ಆಗಿತ್ತು. (ಯೋಹಾನ 3:​16, 36) ಪೌಲನು ಬರೆದುದು: “ಹೊರಗೆ ಮಾತ್ರ ಯೆಹೂದ್ಯನಾಗಿರುವವನು ಯೆಹೂದ್ಯನಲ್ಲ; ಮತ್ತು ಹೊರಗೆ ಶರೀರದಲ್ಲಿ ಮಾತ್ರ ಮಾಡಿರುವ ಸುನ್ನತಿಯು ಸುನ್ನತಿಯಲ್ಲ. ಆದರೆ ಒಳಗೆ ಯೆಹೂದ್ಯನಾಗಿರುವವನೇ ಯೆಹೂದ್ಯನು; ಮತ್ತು ಹೃದಯದಲ್ಲಿ ಆಗುವ ಸುನ್ನತಿಯೇ ಸುನ್ನತಿ. ಇದು ಬಾಹ್ಯಾಚಾರಕ್ಕೆ ಸಂಬಂಧಪಟ್ಟದ್ದಲ್ಲ.” ಬಳಿಕ, “ಯೆಹೂದ್ಯ” (ಇದರರ್ಥ “ಯೆಹೂದದ,” ಅಂದರೆ ಹೊಗಳಲ್ಪಟ್ಟ ಅಥವಾ ಸ್ತುತಿಸಲ್ಪಟ್ಟ) ಎಂಬ ಪದವನ್ನು ಒಳಗೊಂಡ ಶಬ್ದಗಳನ್ನು ಕೌಶಲದಿಂದ ಉಪಯೋಗಿಸುತ್ತಾ ಪೌಲನು ಕೂಡಿಸಿ ಹೇಳಿದ್ದು: “ಬರುವ ಹೊಗಳಿಕೆಯು ದೇವರಿಂದಲೇ ಹೊರತು ಮನುಷ್ಯರಿಂದ ಬರುವದಲ್ಲ.” (ರೋಮಾಪುರ 2:28, 29) ಯೆಹೋವನು ನಿಷ್ಪಕ್ಷಪಾತದಿಂದ ಹೊಗಳಿಕೆಯನ್ನು ಕೊಡುತ್ತಾನೆ. ನಾವೂ ಹಾಗೆ ಮಾಡುತ್ತೇವೊ?

12. ಪ್ರಕಟನೆ 7:9 ಯಾವ ಪ್ರತೀಕ್ಷೆಯನ್ನು ನೀಡುತ್ತದೆ ಮತ್ತು ಯಾರಿಗೆ?

12 ಸಮಯಾನಂತರ, ಒಂದು ದರ್ಶನದಲ್ಲಿ ಅಪೊಸ್ತಲ ಯೋಹಾನನು ನಂಬಿಗಸ್ತರಾದ ಅಭಿಷಿಕ್ತ ಕ್ರೈಸ್ತರು, ‘ಇಸ್ರಾಯೇಲಿನ ಪ್ರತಿಯೊಂದು ಕುಲಕ್ಕೆ ಸೇರಿದವರು ಮುದ್ರೆ ಒತ್ತಿಸಿಕೊಂಡಿರುವ’ 1,44,000 ಸಂಖ್ಯೆಯ ಒಂದು ಆತ್ಮಿಕ ಜನಾಂಗವಾಗಿ ಚಿತ್ರಿಸಲ್ಪಟ್ಟಿರುವುದನ್ನು ಕಂಡನು. ಇದಾದ ಬಳಿಕ, ಯೋಹಾನನು, “ಯಾರಿಂದಲೂ ಎಣಿಸಲಾಗದಂಥ ಮಹಾ ಸಮೂಹವು ಸಿಂಹಾಸನದ ಮುಂದೆಯೂ ಯಜ್ಞದ ಕುರಿಯಾದಾತನ ಮುಂದೆಯೂ ನಿಂತಿರುವದನ್ನು” ಕಂಡನು. “ಅವರು ಸಕಲ ಜನಾಂಗ ಕುಲ ಪ್ರಜೆಗಳವರೂ ಸಕಲಭಾಷೆಗಳನ್ನಾಡುವವರೂ ಆಗಿದ್ದರು. ಅವರು ಬಿಳೀ ನಿಲುವಂಗಿಗಳನ್ನು ತೊಟ್ಟುಕೊಂಡು ತಮ್ಮ ಕೈಗಳಲ್ಲಿ ಖರ್ಜೂರದ ಗರಿಗಳನ್ನು ಹಿಡಿದುಕೊಂಡಿದ್ದರು.” (ಪ್ರಕಟನೆ 7:4, 9) ಹೀಗೆ ಆಧುನಿಕ ದಿನದ ಕ್ರೈಸ್ತ ಸಭೆಯಿಂದ ಯಾವುದೇ ಕುಲವಾಗಲಿ ಭಾಷೆಯಾಗಲಿ ಹೊರಗಿಡಲ್ಪಡುವುದಿಲ್ಲ. ಎಲ್ಲಾ ಹಿನ್ನೆಲೆಗಳ ವ್ಯಕ್ತಿಗಳಿಗೆ “ಮಹಾ ಸಂಕಟ”ವನ್ನು (NW) ಪಾರಾಗಿ “ಜೀವಜಲದ ಒರತೆ”ಗಳಿಂದ ಕುಡಿಯುವ ಪ್ರತೀಕ್ಷೆಯಿದೆ.​—ಪ್ರಕಟನೆ 7:​14-17.

ಸಕಾರಾತ್ಮಕ ಪರಿಣಾಮಗಳು

13-15. (ಎ) ಕುಲಸಂಬಂಧವಾದ ಮತ್ತು ಸಾಂಸ್ಕೃತಿಕ ಭಿನ್ನತೆಗಳನ್ನು ನಾವು ಹೇಗೆ ಜಯಿಸಬಲ್ಲೆವು? (ಬಿ) ಸ್ನೇಹಭಾವವನ್ನು ತೋರಿಸುವುದರಿಂದ ಬರುವ ಪ್ರಯೋಜನಗಳ ಉದಾಹರಣೆಗಳನ್ನು ಕೊಡಿರಿ.

13 ಒಬ್ಬ ಒಳ್ಳೆಯ ತಂದೆಯು ತನ್ನ ಮಕ್ಕಳನ್ನು ಚೆನ್ನಾಗಿ ತಿಳಿದಿರುವಂತೆಯೇ ಯೆಹೋವನು ನಮ್ಮನ್ನು ಚೆನ್ನಾಗಿ ತಿಳಿದಿರುತ್ತಾನೆ. ಅದೇ ರೀತಿ, ಇತರರ ಸಂಸ್ಕೃತಿ ಮತ್ತು ಹಿನ್ನೆಲೆಗಳಲ್ಲಿ ನಾವು ಆಸಕ್ತಿ ತೋರಿಸುವ ಮೂಲಕ ಇತರರನ್ನು ತಿಳಿದುಕೊಳ್ಳುವಲ್ಲಿ, ಇರುವ ಭಿನ್ನಬೇಧಗಳು ಅಮುಖ್ಯವಾಗುತ್ತವೆ. ಕುಲಸಂಬಂಧವಾದ ತಡೆಗಳು ಕರಗಿ, ಸ್ನೇಹ ಮತ್ತು ಪ್ರೀತಿಯ ಬಂಧಗಳು ಬಲಗೊಳ್ಳುತ್ತವೆ. ಐಕ್ಯವು ಹೆಚ್ಚುತ್ತದೆ. (1 ಕೊರಿಂಥ 9:​19-23) ಇದು ವಿದೇಶಿ ನೇಮಕಗಳಲ್ಲಿ ಸೇವೆಸಲ್ಲಿಸುತ್ತಿರುವ ಮಿಷನೆರಿಗಳ ಚಟುವಟಿಕೆಗಳಿಂದ ಚೆನ್ನಾಗಿ ಪ್ರದರ್ಶಿಸಲ್ಪಟ್ಟಿದೆ. ಅವರು ಅಲ್ಲಿ ಜೀವಿಸುವ ಜನರಲ್ಲಿ ಆಸಕ್ತಿವಹಿಸುತ್ತಾರೆ ಮತ್ತು ಇದರ ಪರಿಣಾಮವಾಗಿ ಅವರು ಸ್ಥಳಿಕ ಸಭೆಗಳೊಂದಿಗೆ ಬೇಗನೆ ಬೆರೆತುಹೋಗುತ್ತಾರೆ.​—ಫಿಲಿಪ್ಪಿ 2:4.

14 ನಿಷ್ಪಕ್ಷಪಾತದ ಸಕಾರಾತ್ಮಕ ಪರಿಣಾಮಗಳು ಅನೇಕ ದೇಶಗಳಲ್ಲಿ ಎದ್ದುಕಾಣುತ್ತವೆ. ಇಥಿಯೋಪ್ಯದಿಂದ ಬಂದಿದ್ದ ಆಕ್ಲೀಲೂ ಬ್ರಿಟನ್ನಿನ ರಾಜಧಾನಿಯಾಗಿರುವ ಲಂಡನ್‌ನಲ್ಲಿ ಒಂಟಿಯಾಗಿ ಜೀವಿಸುತ್ತಿದ್ದನು. ಬೇರೆ ದೇಶಗಳ ಜನರ ಕಡೆಗೆ ಆಧುನಿಕ ಯೂರೋಪಿನ ಅನೇಕ ದೊಡ್ಡ ನಗರಗಳಲ್ಲಿ ಕಂಡುಬರುವ ಸ್ನೇಹಭಾವದ ಕೊರತೆಯಿಂದಾಗಿ ಅವನ ಒಂಟಿತನವು ಇನ್ನೂ ತೀವ್ರವಾಯಿತು. ಆದರೆ ಆಕ್ಲೀಲೂ ಯೆಹೋವನ ಸಾಕ್ಷಿಗಳ ರಾಜ್ಯ ಸಭಾಗೃಹದಲ್ಲಿ ಒಂದು ಕ್ರೈಸ್ತ ಕೂಟಕ್ಕೆ ಹಾಜರಾದಾಗ ಎಷ್ಟು ಭಿನ್ನವಾದ ಅನುಭವ ಅವನಿಗಾಯಿತು! ಅಲ್ಲಿದ್ದವರು ಅವನನ್ನು ಸ್ವಾಗತಿಸಿದರು ಮತ್ತು ಬೇಗನೆ ಅವನಿಗೆ ನೆಮ್ಮದಿಯ ಅನುಭವವಾಯಿತು. ಸೃಷ್ಟಿಕರ್ತನ ಕಡೆಗಿನ ತನ್ನ ಕೃತಜ್ಞತೆಯನ್ನು ಗಾಢಗೊಳಿಸುವುದರಲ್ಲಿ ಅವನು ಶೀಘ್ರ ಪ್ರಗತಿಯನ್ನು ಮಾಡಿದನು. ಅವನು ಬೇಗನೆ ಆ ಪ್ರದೇಶದಲ್ಲಿದ್ದ ಇತರರಿಗೆ ರಾಜ್ಯ ಸುವಾರ್ತೆಯನ್ನು ಹಬ್ಬಿಸುವುದರಲ್ಲಿ ಭಾಗಿಯಾಗಲು ಸಂದರ್ಭಗಳನ್ನು ಹುಡುಕಿದನು. ಒಂದು ದಿನ ಅವನ ಸೇವಾ ಸಂಗಾತಿ ಅವನಿಗೆ, ಈಗ ಜೀವನದಲ್ಲಿ ಅವನ ಗುರಿಗಳೇನು ಎಂದು ಕೇಳಲಾಗಿ, ಆಕ್ಲೀಲೂ ಒಡನೆ, ತನ್ನ ಸ್ವಂತ ಭಾಷೆಯಾದ ಆ್ಯಮ್‌ಹಾರಿಕ್‌ ಮಾತಾಡುವ ಸಭೆಯ ಭಾಗವಾಗಿರುವುದೇ ಎಂದು ಹೇಳಿದನು. ಸ್ಥಳಿಕ ಇಂಗ್ಲಿಷ್‌ ಸಭೆಯ ಹಿರಿಯರು ಇದನ್ನು ಕೇಳಿದೊಡನೆ ಆಕ್ಲೀಲೂವಿನ ಮಾತೃಭಾಷೆಯಲ್ಲಿ ಅವರು ಒಂದು ಸಾರ್ವಜನಿಕ ಭಾಷಣಕ್ಕಾಗಿ ಏರ್ಪಡಿಸಿದರು. ಕೊಡಲ್ಪಟ್ಟ ಆಮಂತ್ರಣದ ಕಾರಣ ಅನೇಕ ಮಂದಿ ವಿದೇಶೀಯರೂ ಸ್ಥಳಿಕರೂ ಬ್ರಿಟನ್‌ನಲ್ಲಿ ನಡೆದ ಪ್ರಥಮ ಆ್ಯಮ್‌ಹಾರಿಕ್‌ ಸಾರ್ವಜನಿಕ ಕೂಟಕ್ಕೆ ಉಪಸ್ಥಿತರಿದ್ದರು. ಇಂದು ಅಲ್ಲಿರುವ ಇಥಿಯೋಪ್ಯದವರೂ ಇತರರೂ ವೃದ್ಧಿಯಾಗುತ್ತಿರುವ ಒಂದು ಸಭೆಯಲ್ಲಿ ಐಕ್ಯರಾಗಿದ್ದಾರೆ. ಅಲ್ಲಿರುವ ಅನೇಕರು, ತಾವು ಯೆಹೋವನ ಪಕ್ಷ ವಹಿಸುವ ವಿಷಯದಲ್ಲಿ ಮತ್ತು ಕ್ರೈಸ್ತ ದೀಕ್ಷಾಸ್ನಾನ ಮಾಡಿಸಿಕೊಳ್ಳುವುದಕ್ಕೆ ತಮಗೆ ಯಾವುದೇ ಅಡ್ಡಿಯಿಲ್ಲವೆಂದು ಕಂಡುಕೊಂಡಿದ್ದಾರೆ.​—ಅ. ಕೃತ್ಯಗಳು 8:​26-36.

15 ವಿಶೇಷ ಗುಣಗಳೂ ಹಿನ್ನೆಲೆಗಳೂ ಬಗೆ ಬಗೆಯದ್ದಾಗಿದ್ದರೂ, ಇವು ಶ್ರೇಷ್ಠತೆ ಅಥವಾ ಕನಿಷ್ಠತೆಯನ್ನು ಅಳೆಯುವ ಮಟ್ಟಗಳಲ್ಲ. ಅವು ಕೇವಲ ಭಿನ್ನತೆಗಳಾಗಿವೆ ಅಷ್ಟೇ. ಮಾಲ್ಟ ದ್ವೀಪದಲ್ಲಿ ಹೊಸದಾಗಿ ಯೆಹೋವನಿಗೆ ಸಮರ್ಪಿತರಾದ ಸೇವಕರ ದೀಕ್ಷಾಸ್ನಾನದ ಸಮಯದಲ್ಲಿ ಸ್ಥಳಿಕ ಸಾಕ್ಷಿಗಳ ತುಂಬಿ ತುಳುಕುತ್ತಿದ್ದ ಸಂತೋಷವನ್ನು ನೋಡಿ ಬ್ರಿಟನ್‌ನಿಂದ ಬಂದ ಸಂದರ್ಶಕರ ಕಣ್ಣುಗಳಿಂದ ಆನಂದಬಾಷ್ಪವು ಹರಿಯಿತು. ಮಾಲ್ಟ ಹಾಗೂ ಬ್ರಿಟನಿನ ಎರಡೂ ಗುಂಪುಗಳು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದವು. ಆದರೆ ವಿಭಿನ್ನ ರೀತಿಗಳಲ್ಲಿ ಅಷ್ಟೇ. ಅವರಿಗೆ ಯೆಹೋವನ ಮೇಲಿದ್ದ ಬಲವಾದ ಪ್ರೀತಿಯು ಕ್ರೈಸ್ತ ಸಾಹಚರ್ಯದ ಬಂಧಗಳನ್ನು ಬಲಪಡಿಸಿತು.​—ಕೀರ್ತನೆ 133:1; ಕೊಲೊಸ್ಸೆ 3:14.

ಪೂರ್ವಾಗ್ರಹವನ್ನು ಜಯಿಸುವುದು

16-18. ಕ್ರೈಸ್ತ ಸಭೆಯಲ್ಲಿ ಪೂರ್ವಾಗ್ರಹವನ್ನು ಹೇಗೆ ಹೋಗಲಾಡಿಸಸಾಧ್ಯವಿದೆ ಎಂಬುದನ್ನು ತೋರಿಸುವ ಒಂದು ಅನುಭವವನ್ನು ತಿಳಿಸಿರಿ.

16 ಯೆಹೋವನಿಗಾಗಿಯೂ ನಮ್ಮ ಕ್ರೈಸ್ತ ಸಹೋದರರಿಗಾಗಿಯೂ ನಮಗಿರುವ ಪ್ರೀತಿ ಆಳವಾದಂತೆ, ನಾವು ಇತರರನ್ನು ಹೇಗೆ ವೀಕ್ಷಿಸುತ್ತೇವೊ ಅದರಲ್ಲಿ ನಾವು ಯೆಹೋವನನ್ನು ಹೆಚ್ಚು ನಿಕಟವಾಗಿ ಅನುಕರಿಸಬಲ್ಲೆವು. ಬೇರೆ ಜನಾಂಗ, ಕುಲ ಅಥವಾ ಸಂಸ್ಕೃತಿಗಳ ಕಡೆಗೆ ನಮಗೆ ಒಂದು ಕಾಲದಲ್ಲಿದ್ದ ಯಾವುದೇ ಪೂರ್ವಾಗ್ರಹವನ್ನು ನಾವು ಜಯಿಸಬಲ್ಲೆವು. ಉದಾಹರಣೆಗೆ, ಆಲ್ಬರ್ಟ್‌ ಎಂಬವನನ್ನು ತೆಗೆದುಕೊಳ್ಳಿ. ಎರಡನೆಯ ಜಾಗತಿಕ ಯುದ್ಧದ ಸಮಯದಲ್ಲಿ ಅವನು ಬ್ರಿಟಿಷ್‌ ಸೈನ್ಯದಲ್ಲಿ ಸೇವೆ ಮಾಡುತ್ತಿದ್ದಾಗ, 1942ರಲ್ಲಿ ಸಿಂಗಾಪುರ್‌ ಜಪಾನೀಯರ ಕೈವಶವಾಯಿತು. ಆಲ್ಬರ್ಟ್‌ ಅವರ ಸೆರೆಯಾಳಾದನು. ತರುವಾಯ ಅವನು, ಯಾವುದು ಆ ಬಳಿಕ ಬ್ರಿಜ್‌ ಆನ್‌ ದ ರಿವರ್‌ ಕ್ವಾಯ್‌ ಎಂದು ಪ್ರಸಿದ್ಧವಾಯಿತೊ ಅದರ ಸಮೀಪದಲ್ಲಿ ಸುಮಾರು ಮೂರು ವರುಷ ಕಾಲ “ಮೃತ್ಯು ರೇಲ್‌ರೋಡ್‌”ನ ಕೆಲಸ ಮಾಡಿದನು. ಯುದ್ಧಾಂತ್ಯದಲ್ಲಿ ಅವನ ಬಿಡುಗಡೆಯಾದಾಗ ಅವನ ತೂಕ 32 ಕಿಲೊಗ್ರ್ಯಾಮ್‌ ಆಗಿತ್ತು. ಅವನ ದವಡೆ, ಮೂಗು ಮುರಿದಿತ್ತು, ಅವನು ಆಮಶಂಕೆ, ಹುಳುಕಡ್ಡಿ ಮತ್ತು ಮಲೇರಿಯದಿಂದ ಬಳಲುತ್ತಿದ್ದನು. ಅವನ ಜೊತೆಕೈದಿಗಳಲ್ಲಿ ಸಾವಿರಾರು ಮಂದಿ ಅದಕ್ಕಿಂತಲೂ ಹೆಚ್ಚು ದುರವಸ್ಥೆಯಲ್ಲಿದ್ದರು. ಅನೇಕರು ಬದುಕಿ ಉಳಿಯಲಿಲ್ಲ. ಆಲ್ಬರ್ಟ್‌ ನೋಡಿ ಅನುಭವಿಸಿದ್ದ ಘೋರ ಕೃತ್ಯಗಳ ಕಾರಣ, 1945ರಲ್ಲಿ ಅವನು ಕಹಿಮನದೊಂದಿಗೆ ಮನೆಗೆ ಹಿಂದಿರುಗಿ ಹೋದನು. ದೇವರು ಅಥವಾ ಧರ್ಮದ ಕುರಿತು ಅವನಿಗೆ ಆಸಕ್ತಿಯೇ ಇರಲಿಲ್ಲ.

17 ಆಲ್ಬರ್ಟ್‌ನ ಹೆಂಡತಿ ಐರೀನ್‌ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾದಳು. ಆಕೆಯನ್ನು ಮೆಚ್ಚಿಸಲು ಆಲ್ಬರ್ಟ್‌ ಯೆಹೋವನ ಸಾಕ್ಷಿಗಳ ಸ್ಥಳಿಕ ಸಭೆಯಲ್ಲಿ ಕೆಲವು ಕೂಟಗಳಿಗೆ ಹಾಜರಾದನು. ಪೂರ್ಣ ಸಮಯದ ಸೇವೆಯಲ್ಲಿದ್ದ ಯುವಕ ಪಾಲ್‌ ಎಂಬವನು ಬೈಬಲನ್ನು ಅಧ್ಯಯನ ಮಾಡಲು ಆಲ್ಬರ್ಟ್‌ನನ್ನು ಭೇಟಿಮಾಡಿದನು. ಯೆಹೋವನು ವ್ಯಕ್ತಿಗಳನ್ನು ಅವರವರ ಹೃದಯದ ಸ್ಥಿತಿಗನುಸಾರ ನೋಡುತ್ತಾನೆಂದು ಆಲ್ಬರ್ಟ್‌ಗೆ ಬೇಗನೆ ತಿಳಿದು ಬಂತು. ಅವನು ತನ್ನ ಜೀವನವನ್ನು ಯೆಹೋವನಿಗೆ ಸಮರ್ಪಿಸಿಕೊಂಡು ದೀಕ್ಷಾಸ್ನಾನ ಪಡೆದುಕೊಂಡನು.

18 ತರುವಾಯ ಪಾಲ್‌ ಲಂಡನ್‌ಗೆ ಹೋಗಿ, ಜ್ಯಾಪನೀಸ್‌ ಭಾಷೆಯನ್ನು ಕಲಿತು, ಜ್ಯಾಪನೀಸ್‌ ಮಾತಾಡುವ ಸಭೆಯೊಂದಿಗೆ ಜೊತೆಗೂಡಿದನು. ಭೇಟಿ ಕೊಡುತ್ತಿದ್ದ ಕೆಲವು ಜ್ಯಾಪನೀಸ್‌ ಸಾಕ್ಷಿಗಳನ್ನು ತನ್ನ ಹಿಂದಿನ ಸಭೆಗೆ ಕರೆದುಕೊಂಡು ಹೋಗಲು ಪಾಲ್‌ ಮನಸ್ಸುಮಾಡಿದಾಗ, ಅಲ್ಲಿಯ ಸಹೋದರರು ಆಲ್ಬರ್ಟ್‌ಗೆ ಆ ಹಿನ್ನೆಲೆಯ ಜನರ ಮೇಲೆ ಇದ್ದ ಬಲವಾದ ಪೂರ್ವಾಗ್ರಹವನ್ನು ನೆನಪಿಸಿಕೊಂಡರು. ಆಲ್ಬರ್ಟ್‌ ಬ್ರಿಟನ್ನಿಗೆ ಹಿಂದಿರುಗಿದಂದಿನಿಂದ ಜಪಾನೀಯರನ್ನು ಮುಖಾಮುಖಿ ಭೇಟಿಯಾಗುವುದರಿಂದ ದೂರವಿದ್ದನು. ಆದುದರಿಂದ ಈಗ ಏನಾಗಬಹುದೆಂದು ಅಲ್ಲಿಯ ಸಹೋದರರು ಕುತೂಹಲಪಟ್ಟರು. ಆದರೆ ಅವರು ಚಿಂತಿಸುವ ಅಗತ್ಯವಿರಲಿಲ್ಲ. ಏಕೆಂದರೆ ಆಲ್ಬರ್ಟ್‌ ಆ ಸಂದರ್ಶಕರನ್ನು ಪೂರ್ಣವಾದ ಸೋದರ ಪ್ರೀತಿಯಿಂದ ಸ್ವಾಗತಿಸಿದನು.​—1 ಪೇತ್ರ 3:​8, 9.

‘ಹೃದಯವನ್ನು ವಿಶಾಲಮಾಡಿ’

19. ನಮಗೆ ಪಕ್ಷಪಾತದ ಪ್ರವೃತ್ತಿಯಿರುವಲ್ಲಿ ಅಪೊಸ್ತಲ ಪೌಲನ ಯಾವ ಸಲಹೆಯು ನಮಗೆ ಸಹಾಯಮಾಡಬಲ್ಲದು?

19 “ಪಕ್ಷಪಾತವು ಅಧರ್ಮ” ಎಂದು ವಿವೇಕಿ ಅರಸ ಸೊಲೊಮೋನನು ಬರೆದನು. (ಜ್ಞಾನೋಕ್ತಿ 28:21) ನಮಗೆ ಚೆನ್ನಾಗಿ ಪರಿಚಯವುಳ್ಳವರೊಂದಿಗೆ ನಿಕಟರಾಗಿರುವುದು ಸುಲಭ. ಆದರೆ ಕೆಲವೊಮ್ಮೆ ನಮಗೆ ಹೆಚ್ಚು ಪರಿಚಯವಿಲ್ಲದವರ ವಿಷಯದಲ್ಲಿ ಕಡಿಮೆ ಆಸಕ್ತಿಯನ್ನು ತೋರಿಸುವ ಪ್ರವೃತ್ತಿ ನಮಗಿರುತ್ತದೆ. ಈ ರೀತಿಯ ಪಕ್ಷಪಾತವು ಯೆಹೋವನ ಸೇವಕನೊಬ್ಬನಿಗೆ ಯೋಗ್ಯವಾಗಿರುವುದಿಲ್ಲ. ನಾವು ನಿಶ್ಚಯವಾಗಿಯೂ ಪೌಲನ ಸ್ಪಷ್ಟ ಸಲಹೆಯನ್ನು ಪಾಲಿಸುತ್ತಾ “ಹೃದಯವನ್ನು ವಿಶಾಲ” ಮಾಡಿಕೊಳ್ಳಬೇಕು. ಹೌದು, ವಿಭಿನ್ನ ಹಿನ್ನೆಲೆಗಳಿಂದ ಬಂದಿರುವ ಜೊತೆ ಕ್ರೈಸ್ತರ ಕಡೆಗೆ ನಮಗಿರುವ ಪ್ರೀತಿಯಲ್ಲಿ ನಾವು ವಿಶಾಲಗೊಳ್ಳಬೇಕು.​—2 ಕೊರಿಂಥ 6:13.

20. ನಮ್ಮ ಜೀವನದ ಯಾವ ಕ್ಷೇತ್ರಗಳಲ್ಲಿ ನಾವು ಪಕ್ಷಪಾತವಿಲ್ಲದ ನಮ್ಮ ದೇವರಾದ ಯೆಹೋವನನ್ನು ಅನುಕರಿಸಬೇಕು?

20 ನಮಗೆ ಸ್ವರ್ಗೀಯ ಕರೆಯ ಸುಯೋಗವಿರಲಿ, ಇಲ್ಲವೆ ಭೂಮಿಯ ಮೇಲೆ ಸದಾ ಜೀವಿಸುವ ಪ್ರತೀಕ್ಷೆಯಿರಲಿ, ನಮ್ಮ ನಿಷ್ಪಕ್ಷಪಾತವು ಒಂದೇ ಹಿಂಡಿನಲ್ಲಿ ಒಬ್ಬನೇ ಕುರುಬನ ಕೆಳಗೆ ಐಕ್ಯವನ್ನು ಅನುಭವಿಸುವುದನ್ನು ಸಾಧ್ಯಮಾಡುತ್ತದೆ. (ಎಫೆಸ 4:​4, 5, 16) ಪಕ್ಷಪಾತವಿಲ್ಲದ ನಮ್ಮ ದೇವರಾದ ಯೆಹೋವನನ್ನು ಅನುಕರಿಸುವ ಪ್ರಯತ್ನವು, ನಮ್ಮ ಕ್ರೈಸ್ತ ಶುಶ್ರೂಷೆಯಲ್ಲಿ, ನಮ್ಮ ಕುಟುಂಬಗಳಲ್ಲಿ, ಮತ್ತು ಸಭೆಗಳಲ್ಲಿ, ಹೌದು, ಜೀವನದ ಎಲ್ಲಾ ಕ್ಷೇತ್ರಗಳಲ್ಲಿ ನಮಗೆ ಸಹಾಯಮಾಡಬಲ್ಲದು. ಅದು ಹೇಗೆ? ಮುಂದಿನ ಲೇಖನ ಈ ವಿಷಯವನ್ನು ಸಂಬೋಧಿಸುವುದು.

[ಪಾದಟಿಪ್ಪಣಿಗಳು]

^ ಪ್ಯಾರ. 3 ಯೆಹೋವನ ಪ್ರಸಿದ್ಧಿಯು ತರುವಾಯ ಪವಿತ್ರ ಗೀತೆಗಳ ವಿಷಯವಸ್ತುವಾಯಿತು.​—ಕೀರ್ತನೆ 135:​8-11; 136:​11-20.

^ ಪ್ಯಾರ. 11 ಇಲ್ಲಿ “ಗ್ರೀಕರಿಗೆ” ಎಂಬ ಪದವು ಸಾಮಾನ್ಯವಾಗಿ ಅನ್ಯರಿಗೆ ಸೂಚಿಸುತ್ತದೆ.​—ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ ಶಾಸ್ತ್ರಗಳ ಕುರಿತಾದ ಒಳನೋಟ (ಇಂಗ್ಲಿಷ್‌) ಸಂಪುಟ 1, ಪುಟ 1004.

ನೀವು ಹೇಗೆ ಉತ್ತರ ಕೊಡುವಿರಿ?

ಯೆಹೋವನು, ರಾಹಾಬಳು ಮತ್ತು ಗಿಬ್ಯೋನ್ಯರಿಗೆ ನಿಷ್ಪಕ್ಷಪಾತವನ್ನು ಹೇಗೆ ತೋರಿಸಿದನು?

ತನ್ನ ಬೋಧಿಸುವಿಕೆಯಲ್ಲಿ ಯೇಸು ಹೇಗೆ ನಿಷ್ಪಕ್ಷಪಾತವನ್ನು ತೋರಿಸಿದನು?

ಸಾಂಸ್ಕೃತಿಕ ಇಲ್ಲವೆ ಕುಲಸಂಬಂಧವಾದ ಪೂರ್ವಾಗ್ರಹವನ್ನು ಜಯಿಸಲು ನಮಗೆ ಯಾವುದು ಸಹಾಯಮಾಡಬಲ್ಲದು?

[ಅಧ್ಯಯನ ಪ್ರಶ್ನೆಗಳು]

[ಪುಟ 13ರಲ್ಲಿರುವ ಚಿತ್ರ]

ಇಸ್ರಾಯೇಲ್ಯರ ಕಾನಾನ್‌ ದೇಶದ ವಶಪಡಿಸುವಿಕೆಯು ಆರಂಭಗೊಳ್ಳುತ್ತದೆ

[ಪುಟ 15ರಲ್ಲಿರುವ ಚಿತ್ರ]

ಸಮಾರ್ಯದ ಸ್ತ್ರೀಗೆ ಸಾಕ್ಷಿಕೊಡಲು ಯೇಸು ಹಿಂಜರಿಯಲಿಲ್ಲ

[ಪುಟ 16ರಲ್ಲಿರುವ ಚಿತ್ರ]

ಬ್ರಿಟನ್‌ನಲ್ಲಿ ಆ್ಯಮ್‌ಹಾರಿಕ್‌ ಸಾರ್ವಜನಿಕ ಕೂಟ

[ಪುಟ 16ರಲ್ಲಿರುವ ಚಿತ್ರ]

ಯೆಹೋವನ ಕಡೆಗೆ ಆಲ್ಬರ್ಟ್‌ಗಿದ್ದ ಪ್ರೀತಿ ಪೂರ್ವಾಗ್ರಹವನ್ನು ಜಯಿಸುವಂತೆ ಸಹಾಯಮಾಡಿತು