ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೇಸು ಕ್ರಿಸ್ತನು ಭೂಮಿಯಲ್ಲಿ ಜೀವಿಸಿದನೆಂಬುದಕ್ಕೆ ಸಾಕ್ಷ್ಯ

ಯೇಸು ಕ್ರಿಸ್ತನು ಭೂಮಿಯಲ್ಲಿ ಜೀವಿಸಿದನೆಂಬುದಕ್ಕೆ ಸಾಕ್ಷ್ಯ

ಯೇಸು ಕ್ರಿಸ್ತನು ಭೂಮಿಯಲ್ಲಿ ಜೀವಿಸಿದನೆಂಬುದಕ್ಕೆ ಸಾಕ್ಷ್ಯ

ಆಲ್ಬರ್ಟ್‌ ಐನ್‌ಸ್ಟೈನ್‌ ಎಂಬ ವ್ಯಕ್ತಿ ಜೀವಿಸಿದ್ದರು ಎಂದು ನೀವು ನಂಬುತ್ತೀರೊ? ನೀವು ಒಡನೆ ಹೌದು ಎಂದು ಉತ್ತರಿಸಬಹುದು, ಆದರೆ ಏಕೆ? ಹೆಚ್ಚಿನ ಜನರು ಅವರನ್ನು ಮುಖಾಮುಖಿಯಾಗಿ ಭೇಟಿಯಾಗಿಲ್ಲ. ಆದರೂ ಅವರ ಸಾಧನೆಗಳ ವಿಶ್ವಾಸಾರ್ಹ ವರದಿಗಳು ಅವರು ನಿಜವಾಗಿಯೂ ಜೀವಿಸಿದ್ದರೆಂಬದನ್ನು ರುಜುಪಡಿಸುತ್ತವೆ. ಅವರ ಆವಿಷ್ಕಾರಗಳ ವೈಜ್ಞಾನಿಕ ಅನ್ವಯಗಳ ಮೂಲಕ ಅವರ ಅಸ್ತಿತ್ವದ ಪ್ರಭಾವವನ್ನು ನಾವು ನೋಡಬಹುದು. ಉದಾಹರಣೆಗೆ, ನ್ಯೂಕ್ಲಿಯರ್‌ ಶಕ್ತಿಯಿಂದ ಉತ್ಪಾದಿಸಲ್ಪಟ್ಟಿರುವ ವಿದ್ಯುಚ್ಛಕ್ತಿಯಿಂದ ಅನೇಕರು ಪ್ರಯೋಜನ ಪಡೆದುಕೊಳ್ಳುತ್ತಾರೆ. ಆ ಶಕ್ತಿಯ ಬಿಡುಗಡೆಯು, E=mc2 (ಯಾವುದೇ ವಸ್ತುವಿನಲ್ಲಿ ಅಡಗಿರುವ ಶಕ್ತಿಯ ಪರಿಮಾಣವು ಅದರ ದ್ರವ್ಯರಾಶಿ ಹಾಗೂ ಬೆಳಕಿನ ವೇಗದ ವರ್ಗದ ಗುಣಲಬ್ದಕ್ಕೆ ಸಮಾನವಾಗಿದೆ) ಎಂಬ ಐನ್‌ಸ್ಟೈನರ ಪ್ರಸಿದ್ಧ ಸಮೀಕರಣದ ಅನ್ವಯದೊಂದಿಗೆ ನಿಕಟವಾಗಿ ಸಂಬಂಧಿಸಿದೆ.

ಇದೇ ತರ್ಕವು, ಇತಿಹಾಸದಲ್ಲೇ ಅತಿ ಪ್ರಭಾವಶಾಲಿ ವ್ಯಕ್ತಿಯೆಂದು ಅಂಗೀಕರಿಸಲಾಗುವ ಯೇಸು ಕ್ರಿಸ್ತನಿಗೂ ಅನ್ವಯವಾಗುತ್ತದೆ. ಅವನ ಬಗ್ಗೆ ಏನು ಬರೆಯಲಾಗಿತ್ತೊ ಅದು ಮತ್ತು ಅವನಿಗಿದ್ದ ಪ್ರಭಾವದ ಕುರಿತಾದ ದೃಶ್ಯ ರುಜುವಾತು, ಅವನು ಅಸ್ತಿತ್ವದಲ್ಲಿದ್ದನೆಂಬುದನ್ನು ನಿಸ್ಸಂಶಯವಾಗಿ ರುಜುಪಡಿಸುತ್ತದೆ. ಹಿಂದಿನ ಲೇಖನದಲ್ಲಿ ವರ್ಣಿಸಲಾಗಿರುವ ಯಾಕೋಬನ ಸಂಬಂಧದ ಕೆತ್ತನೆಲಿಪಿಯ ಪ್ರಾಕ್ತನಶಾಸ್ತ್ರೀಯ ಕಂಡುಹಿಡಿತವು ಆಸಕ್ತಿಯ ವಿಷಯವಾಗಿದೆ. ಆದರೂ ಯೇಸುವಿನ ಐತಿಹಾಸಿಕತೆಯು, ಕೇವಲ ಇದರ ಮೇಲಾಗಲಿ ಅಥವಾ ಬೇರಾವುದೇ ಪ್ರಾಕ್ತನಕೃತಿಯ ಮೇಲಾಗಲಿ ಹೊಂದಿಕೊಂಡಿರುವುದಿಲ್ಲ. ನಿಜತ್ವವೇನೆಂದರೆ, ಯೇಸುವಿನ ಮತ್ತು ಅವನ ಶಿಷ್ಯರ ಕುರಿತು ಇತಿಹಾಸಕಾರರು ಬರೆದಂಥ ವಿಷಯಗಳಿಂದಲೂ ನಾವು ಅವನ ಅಸ್ತಿತ್ವಕ್ಕೆ ಸಾಕ್ಷ್ಯವನ್ನು ಕಂಡುಕೊಳ್ಳಸಾಧ್ಯವಿದೆ.

ಇತಿಹಾಸಕಾರರ ಸಾಕ್ಷ್ಯ

ಉದಾಹರಣೆಗೆ, ಫರಿಸಾಯನಾಗಿದ್ದ ಪ್ರಥಮ ಶತಮಾನದ ಯೆಹೂದಿ ಇತಿಹಾಸಕಾರ ಫ್ಲೇವಿಯಸ್‌ ಜೋಸೀಫಸ್‌ನ ಸಾಕ್ಷ್ಯವನ್ನು ತೆಗೆದುಕೊಳ್ಳಿ. ಜ್ಯೂವಿಷ್‌ ಆ್ಯಂಟಿಕ್ವಿಟೀಸ್‌ ಎಂಬ ಪುಸ್ತಕದಲ್ಲಿ ಅವನು ಯೇಸು ಕ್ರಿಸ್ತನನ್ನು ಸೂಚಿಸಿ ಬರೆದನು. ಇದರಲ್ಲಿ ಜೋಸೀಫಸನು ಯೇಸುವನ್ನು ಮೆಸ್ಸೀಯನೆಂದು ಸೂಚಿಸಿ ಬರೆದ ಮೊದಲನೇ ಉಲ್ಲೇಖದ ವಿಶ್ವಾಸಾರ್ಹತೆಯನ್ನು ಕೆಲವರು ಸಂದೇಹಿಸುತ್ತಾರೆ. ಆದರೆ, ಯೆಶೀವ ಯೂನಿವರ್ಸಿಟಿಯ ಪ್ರೊಫೆಸರ್‌ ಲೂವಸ್‌ ಎಚ್‌. ಫೆಲ್ಡ್‌ಮನ್‌ರವರು ಹೇಳುವ ಪ್ರಕಾರ, ಅದರಲ್ಲಿರುವ ಎರಡನೆಯ ಉಲ್ಲೇಖದ ನಿಜತ್ವವನ್ನು ಸಂಶಯಿಸುವವರು ಸ್ವಲ್ಪ ಜನರೇ. ಅಲ್ಲಿ ಜೋಸೀಫಸ್‌ ಹೇಳಿದ್ದು: “[ಮಹಾಯಾಜಕನಾದ ಅನ್ನನು] ಸನ್ಹೆದ್ರಿನ್‌ನ ನ್ಯಾಯಾಧೀಶರನ್ನು ಒಟ್ಟುಸೇರಿಸಿ, ಕ್ರಿಸ್ತನೆಂದು ಕರೆಯಲ್ಪಡುತ್ತಿದ್ದ ಯೇಸುವಿನ ಸಹೋದರನಾಗಿದ್ದ ಯಾಕೋಬನನ್ನು ಅವರ ಮುಂದೆ ತರಿಸಿದನು.” (ಜ್ಯೂವಿಷ್‌ ಆ್ಯಂಟಿಕ್ವಿಟೀಸ್‌, XX, 200) ಹೌದು, ಯೇಸುವಿನ ಕಂಠೋಕ್ತ ವೈರಿಗಳ ಪಂಥದ ಸದಸ್ಯನಾಗಿದ್ದ ಫರಿಸಾಯನೊಬ್ಬನು “ಯೇಸುವಿನ ಸಹೋದರನಾಗಿದ್ದ ಯಾಕೋಬನ” ಅಸ್ತಿತ್ವವನ್ನು ಒಪ್ಪಿಕೊಂಡನು.

ಯೇಸುವಿನ ಅಸ್ತಿತ್ವದ ಪ್ರಭಾವವು ಅವನ ಹಿಂಬಾಲಕರ ಚಟುವಟಿಕೆಗಳಲ್ಲೂ ಪ್ರತಿಬಿಂಬಿಸಲ್ಪಟ್ಟಿತು. ಸುಮಾರು ಸಾ.ಶ. 59ರಲ್ಲಿ ಅಪೊಸ್ತಲ ಪೌಲನು ರೋಮಿನಲ್ಲಿ ಸೆರೆಯಲ್ಲಿದ್ದಾಗ, ಯೆಹೂದಿ ಪ್ರಧಾನರು ಅವನಿಗಂದದ್ದು: “ಆ ಮತದ ವಿಷಯದಲ್ಲಿ ಜನರು ಎಲ್ಲೆಲ್ಲಿಯೂ ವಿರುದ್ಧವಾಗಿ ಮಾತಾಡುತ್ತಾರೆಂಬುದೊಂದೇ ನಮಗೆ ಗೊತ್ತದೆ.” (ಅ. ಕೃತ್ಯಗಳು 28:​17-22) ಅವರು ಯೇಸುವಿನ ಶಿಷ್ಯರನ್ನು ಸೂಚಿಸಿ ಮಾತಾಡುವಾಗ, “ಆ ಮತ” ಎಂದು ಕರೆದರು. ಅವರ ವಿರುದ್ಧವಾಗಿ ಜನರು ಎಲ್ಲೆಡೆಗಳಲ್ಲಿಯೂ ಮಾತಾಡುತ್ತಿದ್ದರೆ ಇತಿಹಾಸಕಾರರು ಅವರ ಬಗ್ಗೆ ವರದಿ ಮಾಡುವುದು ಸಂಭಾವ್ಯವಲ್ಲವೆ?

ಸುಮಾರು ಸಾ.ಶ. 55ರಲ್ಲಿ ಜನಿಸಿದ ಮತ್ತು ಲೋಕದ ಅತಿ ಶ್ರೇಷ್ಠ ಇತಿಹಾಸಕಾರರಲ್ಲಿ ಒಬ್ಬನೆಂದು ಪರಿಗಣಿಸಲಾಗಿರುವ ಟ್ಯಾಸಿಟಸ್‌, ಆ್ಯನಲ್ಸ್‌ ಎಂಬ ತನ್ನ ಕೃತಿಯಲ್ಲಿ ಕ್ರೈಸ್ತರ ಬಗ್ಗೆ ತಿಳಿಸಿದನು. ಸಾ.ಶ. 64ರಲ್ಲಿ ರೋಮ್‌ನಲ್ಲಿ ಸಂಭವಿಸಿದ ಮಹಾ ಅಗ್ನಿ ದುರಂತಕ್ಕೆ ನೀರೊ ಚಕ್ರವರ್ತಿ ಕ್ರೈಸ್ತರನ್ನು ಹೊಣೆಗಾರರನ್ನಾಗಿ ಮಾಡಿದ್ದರ ಕುರಿತಾದ ವೃತ್ತಾಂತದಲ್ಲಿ ಅವನು ಬರೆದದ್ದು: “ನೀರೊ ಆ ದೋಷವನ್ನು, ಅಸಹ್ಯ ಪದ್ಧತಿಗಳಿಗಾಗಿ ದ್ವೇಷಿಸಲ್ಪಡುತ್ತಿದ್ದ ವರ್ಗದ ಮೇಲೆ, ಜನರು ಯಾರನ್ನು ಕ್ರೈಸ್ತರೆಂದು ಕರೆಯುತ್ತಿದ್ದರೊ ಅವರ ಮೇಲೆ ಹಾಕಿ ಅವರಿಗೆ ಭಯಂಕರ ಚಿತ್ರಹಿಂಸೆಯನ್ನು ಕೊಟ್ಟನು. ಕ್ರೈಸ್ತರೆಂಬ ಆ ಹೆಸರು ಯಾರಿಂದ ಬಂದಿತ್ತೊ ಆ ಕ್ರಿಸ್ಟಸ್‌ ಎಂಬವನು, ತಿಬೇರಿಯನ ಆಳಿಕೆಯ ಕಾಲದಲ್ಲಿ ನಮ್ಮ ಆಡಳಿತಾಧಿಕಾರಿಗಳಲ್ಲಿ ಒಬ್ಬನಾದ ಪೊಂತ್ಯ ಪಿಲಾತನಿಂದ ಮರಣದಂಡನೆಗೆ ಗುರಿಯಾದನು.” ಈ ವೃತ್ತಾಂತದಲ್ಲಿರುವ ವಿವರಗಳು ಬೈಬಲಿನ ಯೇಸುವಿನ ಕುರಿತಾದ ಮಾಹಿತಿಯನ್ನು ಹೋಲುತ್ತವೆ.

ಯೇಸುವಿನ ಹಿಂಬಾಲಕರ ಕುರಿತು ಹೇಳಿಕೆಯನ್ನು ನೀಡಿದ ಇನ್ನೊಬ್ಬ ಲೇಖಕನು ಬಿಥೂನ್ಯದ ರಾಜ್ಯಪಾಲನಾಗಿದ್ದ ಪ್ಲಿನಿ ದ ಯಂಗರ್‌. ಸುಮಾರು ಸಾ.ಶ. 111ರಲ್ಲಿ ಈ ಪ್ಲಿನಿ, ಕ್ರೈಸ್ತರನ್ನು ಹೇಗೆ ನಿಯಂತ್ರಿಸಬೇಕೆಂಬದನ್ನು ಕೇಳುತ್ತಾ ಟ್ರೇಜನ್‌ ಚಕ್ರವರ್ತಿಗೆ ಪತ್ರ ಬರೆದನು. ಯಾರನ್ನು ಕ್ರೈಸ್ತರೆಂದು ತಪ್ಪಾಗಿ ಆರೋಪಿಸಲಾಗಿತ್ತೊ ಅವರು, ತಾವು ಕ್ರೈಸ್ತರಲ್ಲವೆಂದು ತೋರಿಸಿಕೊಡಲು ದೇವತೆಗಳಿಗೆ ಹೇಳುವ ಮಂತ್ರವನ್ನು ಪುನರುಚ್ಚರಿಸಿ ಟ್ರೇಜನನ ಮೂರ್ತಿಯನ್ನು ಆರಾಧಿಸುತ್ತಾರೆ ಎಂದು ಪ್ಲಿನಿ ಬರೆದನು. ಪ್ಲಿನಿ ಮುಂದುವರಿಸಿದ್ದು: “ಆದರೆ ನಿಜವಾಗಿಯೂ ಕ್ರೈಸ್ತರಾಗಿರುವವರನ್ನು ಈ ರೀತಿಯ ಯಾವುದೇ ಆಚರಣೆಗಳಿಗೆ ಬಾಗುವಂತೆ ಒತ್ತಾಯಿಸುವುದು ಅಸಾಧ್ಯವೆಂದು ಹೇಳಲಾಗುತ್ತದೆ.” ಇದು ಕ್ರಿಸ್ತನ ಅಸ್ತಿತ್ವದ ನಿಜತ್ವಕ್ಕೆ ಸಾಕ್ಷ್ಯವನ್ನು ಕೊಡುತ್ತದೆ. ಅವನ ಹಿಂಬಾಲಕರು ಅವನಲ್ಲಿ ತಮಗಿದ್ದ ನಂಬಿಕೆಗಾಗಿ ತಮ್ಮ ಜೀವವನ್ನು ಕೊಡಲೂ ಸಿದ್ಧರಾಗಿದ್ದರು.

ಮೊದಲನೆಯ ಎರಡು ಶತಮಾನಗಳಲ್ಲಿ ಇತಿಹಾಸಕಾರರು ಯೇಸು ಕ್ರಿಸ್ತನ ಮತ್ತು ಅವನ ಹಿಂಬಾಲಕರ ಬಗ್ಗೆ ಹೇಳಿರುವ ಉಲ್ಲೇಖಗಳನ್ನು ಸಾರಾಂಶಿಸಿದ ನಂತರ, ದಿ ಎನ್‌ಸೈಕ್ಲಪೀಡಿಯ ಬ್ರಿಟ್ಯಾನಿಕ (2002ರ ಮುದ್ರಣ) ಈ ನಿರ್ಣಯಕ್ಕೆ ಬರುತ್ತದೆ: “ಈ ಸ್ವಾಯತ್ತ ವೃತ್ತಾಂತಗಳು, ಪುರಾತನ ಕಾಲಗಳಲ್ಲಿ ಕ್ರೈಸ್ತತ್ವದ ವಿರೋಧಿಗಳೂ ಯೇಸುವಿನ ಐತಿಹಾಸಿಕತೆಯನ್ನು ಸಂಶಯಿಸಲಿಲ್ಲವೆಂಬುದನ್ನು ರುಜುಪಡಿಸುತ್ತವೆ. ಇದು ಪ್ರಥಮವಾಗಿ ಮತ್ತು ಸಾಕಷ್ಟು ಆಧಾರವಿಲ್ಲದೆ ವಿವಾದಕ್ಕೊಳಗಾದದ್ದು 18ನೆಯ ಶತಮಾನದ ಅಂತ್ಯದಲ್ಲಿ, 19ನೆಯ ಶತಮಾನದಲ್ಲಿ ಮತ್ತು 20ನೆಯ ಶತಮಾನದ ಆರಂಭದಲ್ಲಿಯೇ.”

ಯೇಸುವಿನ ಹಿಂಬಾಲಕರ ಸಾಕ್ಷ್ಯ

ದಿ ಎನ್‌ಸೈಕ್ಲಪೀಡಿಯ ಅಮೆರಿಕಾನ ಹೇಳುವುದು: “ಯೇಸುವಿನ ಜೀವನ ಮತ್ತು ಅಂತ್ಯದ ಬಗ್ಗೆ ಪುನಃ ಒಂದು ಐತಿಹಾಸಿಕ ಚಿತ್ರಣವನ್ನು ಕಲ್ಪಿಸಲಿಕ್ಕಾಗಿ ಹಾಗೂ ಆತ್ಯಾರಂಭದಲ್ಲಿ ಅವನ ಮಹತ್ವದ ಕುರಿತಾಗಿ ಕ್ರೈಸ್ತರು ಕೊಡುತ್ತಿದ್ದ ಅರ್ಥವಿವರಣೆಗಳಿಗಾಗಿ, ಹೊಸ ಒಡಂಬಡಿಕೆಯಲ್ಲಿ ಹೆಚ್ಚು ಕಡಮೆ ಎಲ್ಲಾ ಸಾಕ್ಷ್ಯವು ಇದೆ.” ಆಜ್ಞೇಯತಾವಾದಿಗಳು ಯೇಸುವಿನ ಅಸ್ತಿತ್ವಕ್ಕೆ ಬೈಬಲನ್ನು ಸಾಕ್ಷ್ಯವಾಗಿ ಅಂಗೀಕರಿಸದಿರಬಹುದು. ಆದರೂ ಶಾಸ್ತ್ರೀಯ ವೃತ್ತಾಂತಗಳ ಮೇಲೆ ಆಧರಿತವಾದ ಎರಡು ತರ್ಕಸರಣಿಗಳು ಯೇಸು ನಿಜವಾಗಿಯೂ ಭೂಮಿಯಲ್ಲಿ ಜೀವಿಸಿದನೆಂಬುದನ್ನು ಸ್ಥಾಪಿಸಲು ವಿಶೇಷವಾಗಿ ಸಹಾಯಮಾಡುತ್ತವೆ.

ನಾವು ಗಮನಿಸಿರುವಂತೆ ಐನ್‌ಸ್ಟೈನ್‌ನ ಮಹಾ ತತ್ತ್ವಗಳು, ಅವನ ಅಸ್ತಿತ್ವವನ್ನು ರುಜುಪಡಿಸುವಂತೆಯೇ ಯೇಸುವಿನ ಬೋಧನೆಗಳು ಅವನ ಅಸ್ತಿತ್ವದ ವಾಸ್ತವಿಕತೆಯನ್ನು ರುಜುಪಡಿಸುತ್ತವೆ. ಉದಾಹರಣೆಗಾಗಿ, ಯೇಸು ಕೊಟ್ಟ ಪ್ರಸಿದ್ಧ ಪ್ರವಚನವಾದ ಪರ್ವತಪ್ರಸಂಗವನ್ನು ತೆಗೆದುಕೊಳ್ಳಿ. (ಮತ್ತಾಯ, ಅಧ್ಯಾಯಗಳು 5-7) ಆ ಪ್ರಸಂಗದ ಪ್ರಭಾವದ ಕುರಿತಾಗಿ ಅಪೊಸ್ತಲ ಮತ್ತಾಯನು ಬರೆದದ್ದು: “ಆ ಜನರ ಗುಂಪುಗಳು ಆತನ ಉಪದೇಶಕ್ಕೆ ಆತ್ಯಾಶ್ಚರ್ಯಪಟ್ಟವು. ಯಾಕಂದರೆ ಆತನು . . . ಅಧಿಕಾರವಿದ್ದವನಂತೆ ಅವರಿಗೆ ಉಪದೇಶಮಾಡುತ್ತಿದ್ದನು.” (ಮತ್ತಾಯ 7:28, 29) ಆ ಪ್ರಸಂಗವು ಶತಮಾನಗಳಾದ್ಯಂತ ಜನರ ಮೇಲೆ ಬೀರಿರುವ ಪರಿಣಾಮದ ಕುರಿತು ಪ್ರೊಫೆಸರ್‌ ಹಾನ್ಸ್‌ ಡೀಟರ್‌ ಬೆಟ್ಸ್‌ ಬರೆದುದು: “ಪರ್ವತಪ್ರಸಂಗವು ಬೀರಿರುವ ಪ್ರಭಾವಗಳು, ಯೆಹೂದಿ ಮತವನ್ನು ಮತ್ತು ಕ್ರೈಸ್ತತ್ವದ ಮೇರೆಗಳನ್ನು ಅಥವಾ ಪಾಶ್ಚಾತ್ಯ ಸಂಸ್ಕೃತಿಯನ್ನೂ ಬಹಳಷ್ಟು ಮೀರಿ ಹೋಗಿವೆ.” ಅವರು ಕೂಡಿಸಿ ಹೇಳಿದ್ದೇನೆಂದರೆ ಈ ಪ್ರಸಂಗಕ್ಕೆ “ವಿಶ್ವವ್ಯಾಪಕವಾಗಿ ಒಂದು ವಿಶಿಷ್ಟವಾದ ಆಕರ್ಷಣೆಯಿದೆ.”

ಪರ್ವತಪ್ರಸಂಗದಲ್ಲಿ ಕಂಡುಬರುವ ಈ ಕೆಳಗಿನ ಸಂಕ್ಷಿಪ್ತ ಮತ್ತು ಪ್ರಾಯೋಗಿಕ ವಿವೇಕದ ಮಾತುಗಳನ್ನು ಪರಿಗಣಿಸಿರಿ: “ಒಬ್ಬನು ನಿನ್ನ ಬಲಗೆನ್ನೆಯ ಮೇಲೆ ಹೊಡೆದರೆ ಅವನಿಗೆ ಮತ್ತೊಂದು ಕೆನ್ನೆಯನ್ನೂ ಒಡ್ಡು.” “ಜನರು ನೋಡಲಿ ಎಂದು ನಿಮ್ಮ ಧರ್ಮಕಾರ್ಯಗಳನ್ನು ಅವರ ಮುಂದೆ ಮಾಡಬಾರದು.” “ನಾಳಿನ ವಿಷಯವಾಗಿ ಚಿಂತೆ ಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು.” “ನಿಮ್ಮ ಮುತ್ತುಗಳನ್ನು ಹಂದಿಗಳ ಮುಂದೆ ಚೆಲ್ಲಬೇಡಿರಿ.” “ಬೇಡಿಕೊಳ್ಳಿರಿ, ನಿಮಗೆ ದೊರೆಯುವದು.” “ಜನರು ನಿಮಗೆ ಏನೇನು ಮಾಡಬೇಕೆಂದು ಅಪೇಕ್ಷಿಸುತ್ತೀರೋ ಅದನ್ನೇ ನೀವು ಅವರಿಗೆ ಮಾಡಿರಿ.” “ಇಕ್ಕಟ್ಟಾದ ಬಾಗಲಿನಿಂದ ಒಳಕ್ಕೆ ಹೋಗಿರಿ.” “ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ.” “ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು.”​—ಮತ್ತಾಯ 5:39; 6:​1, 34; 7:​6, 7, 12, 13, 16, 17.

ನೀವು ಈ ಪದಗುಚ್ಛಗಳಲ್ಲಿ ಕೆಲವನ್ನೊ ಅವುಗಳ ಸಾರಾಂಶವನ್ನೊ ಕೇಳಿದ್ದೀರೆಂಬುದು ನಿಸ್ಸಂದೇಹ. ಈ ಮಾತುಗಳು ನಿಮ್ಮ ಭಾಷೆಯಲ್ಲಿ ನಾಣ್ಣುಡಿಗಳೂ ಆಗಿರಬಹುದು. ಆದರೆ ಅವೆಲ್ಲವೂ ಪರ್ವತಪ್ರಸಂಗದಿಂದ ತೆಗೆಯಲ್ಪಟ್ಟ ಮಾತುಗಳಾಗಿವೆ. ಈ ಪ್ರಸಂಗವು ಅನೇಕ ಜನರ ಮತ್ತು ಸಂಸ್ಕೃತಿಗಳ ಮೇಲೆ ಬೀರಿರುವ ಪ್ರಭಾವವು ಆ “ಮಹಾ ಬೋಧಕ”ನ ಅಸ್ತಿತ್ವಕ್ಕೆ ಸ್ಪಷ್ಟವಾದ ಸಾಕ್ಷ್ಯವನ್ನು ಕೊಡುತ್ತದೆ.

ಆದರೆ ಯಾರೊ ಒಬ್ಬನು, ಯೇಸು ಕ್ರಿಸ್ತನೆಂಬ ವ್ಯಕ್ತಿಯನ್ನು ಕಲ್ಪಿಸಿಕೊಂಡು ಸೃಷ್ಟಿಸಿದನೆಂದು ಭಾವಿಸೋಣ. ಮತ್ತು ಅವನು ಬೈಬಲಿನಲ್ಲಿ ಯೇಸು ಕ್ರಿಸ್ತನ ಬೋಧನೆಗಳೆಂದು ಹೇಳಲಾಗಿರುವ ಬೋಧನೆಗಳನ್ನು ಸ್ವತಃ ಕಲ್ಪಿಸಿಕೊಳ್ಳುವಷ್ಟು ಬುದ್ಧಿವಂತನಾಗಿದ್ದನೆಂದು ಭಾವಿಸಿರಿ. ಯೇಸುವನ್ನೂ ಅವನ ಬೋಧನೆಗಳನ್ನೂ ಜನಸಾಮಾನ್ಯರಿಗೆ ಇಷ್ಟವಾಗುವಂಥ ರೀತಿಯಲ್ಲಿ ಅವನು ಕಥೆಕಟ್ಟುವನಲ್ಲವೊ? ಆದರೆ ಅಪೊಸ್ತಲ ಪೌಲನು ಹೇಳಿದ್ದು: “ಯೆಹೂದ್ಯರು ಸೂಚಕಕಾರ್ಯಗಳನ್ನು ಕೇಳುತ್ತಾರೆ, ಗ್ರೀಕರು ಜ್ಞಾನವನ್ನು ಹುಡುಕುತ್ತಾರೆ; ನಾವಾದರೋ ಶಿಲುಬೆಗೆ ಹಾಕಲ್ಪಟ್ಟ [“ಶೂಲಕ್ಕೇರಿಸಲ್ಪಟ್ಟಿರುವ,” NW] ಕ್ರಿಸ್ತನನ್ನು ಪ್ರಚುರಪಡಿಸುತ್ತೇವೆ. ಇಂಥ ಕ್ರಿಸ್ತನ ಸಂಗತಿಯು ಯೆಹೂದ್ಯರಿಗೆ ವಿಘ್ನವೂ ಅನ್ಯಜನರಿಗೆ ಹುಚ್ಚುಮಾತೂ ಆಗಿದೆ.” (1 ಕೊರಿಂಥ 1:22, 23) ಶೂಲಕ್ಕೇರಿಸಲ್ಪಟ್ಟ ಕ್ರಿಸ್ತನ ಕುರಿತಾದ ಸಂದೇಶವು ಯೆಹೂದ್ಯರಿಗಾಗಲಿ ಅನ್ಯರಿಗಾಗಲಿ ಆಕರ್ಷಕವಾಗಿರಲಿಲ್ಲ. ಆದರೆ ಪ್ರಥಮ ಶತಮಾನದ ಕ್ರೈಸ್ತರು ಘೋಷಿಸಿದ್ದು ಈ ಸಂದೇಶವನ್ನೇ. ಹಾಗಾದರೆ ಶೂಲಕ್ಕೇರಿಸಲ್ಪಟ್ಟಿರುವ ಕ್ರಿಸ್ತನ ಚಿತ್ರಣವೇಕೆ? ಏಕೆಂದರೆ ಕ್ರೈಸ್ತ ಗ್ರೀಕ್‌ ಶಾಸ್ತ್ರಗಳ ಲೇಖಕರು ಯೇಸುವಿನ ಜೀವಮರಣಗಳ ಕುರಿತು ಸತ್ಯವನ್ನಾಡಿದರು ಎಂಬುದೇ ಇದಕ್ಕಿರುವ ಏಕಮಾತ್ರ ತೃಪ್ತಿಕರವಾದ ವಿವರಣೆಯಾಗಿದೆ.

ಯೇಸುವಿನ ಐತಿಹಾಸಿಕತೆಯನ್ನು ಬೆಂಬಲಿಸುವ ಇನ್ನೊಂದು ತರ್ಕಸರಣಿಯು ಅವನ ಹಿಂಬಾಲಕರು ಅವನ ಬೋಧನೆಗಳನ್ನು ಅವಿಶ್ರಾಂತವಾಗಿ ಸಾರಿದ್ದರಲ್ಲಿ ಕಂಡುಬರುತ್ತದೆ. ಯೇಸು ತನ್ನ ಶುಶ್ರೂಷೆಯನ್ನು ಪ್ರಾರಂಭಿಸಿ ಸುಮಾರು 30 ವರುಷಗಳು ಕಳೆಯುವಷ್ಟರಲ್ಲೇ, ‘ಸರ್ವಸೃಷ್ಟಿಗೆ ಸುವಾರ್ತೆ ಸಾರಲ್ಪಟ್ಟಿದೆ’ ಎಂದು ಪೌಲನು ಬರೆಯಸಾಧ್ಯವಾಯಿತು. (ಕೊಲೊಸ್ಸೆ 1:23) ಹೌದು, ವಿರೋಧದ ಎದುರಿನಲ್ಲೂ, ಯೇಸುವಿನ ಬೋಧನೆಗಳು ಪುರಾತನ ಲೋಕಾದ್ಯಂತ ಹಬ್ಬಿದವು. ಕ್ರೈಸ್ತನಾಗಿದ್ದದ್ದಕ್ಕಾಗಿ ಸ್ವತಃ ಹಿಂಸೆಗೊಳಗಾದ ಪೌಲನು ಬರೆದುದು: “ಕ್ರಿಸ್ತನು ಎದ್ದುಬರಲಿಲ್ಲವಾದರೆ ನಮ್ಮ ಪ್ರಸಂಗವು ಹುರುಳಿಲ್ಲದ್ದು, ಮತ್ತು ನಿಮ್ಮ ನಂಬಿಕೆಯೂ ಹುರುಳಿಲ್ಲದ್ದು.” (1 ಕೊರಿಂಥ 15:​12-17) ಪುನರುತ್ಥಾನ ಹೊಂದಿರದ ಕ್ರಿಸ್ತನ ಕುರಿತು ಸಾರುವುದು ವ್ಯರ್ಥವಾಗಿದ್ದಿರುವಲ್ಲಿ, ಅಸ್ತಿತ್ವದಲ್ಲೇ ಇದ್ದಿರದ ಒಬ್ಬ ಕ್ರಿಸ್ತನ ಬಗ್ಗೆ ಸಾರುವುದು ಅದಕ್ಕಿಂತಲೂ ಹೆಚ್ಚು ವ್ಯರ್ಥವೇ ಸರಿ. ಪ್ಲಿನಿ ದ ಯಂಗರ್‌ ಬರೆದ ವರದಿಯಲ್ಲಿ ನಾವು ಓದಿರುವಂತೆ, ಪ್ರಥಮ ಶತಮಾನದ ಕ್ರೈಸ್ತರು ತಮಗೆ ಕ್ರಿಸ್ತ ಯೇಸುವಿನಲ್ಲಿದ್ದ ನಂಬಿಕೆಗಾಗಿ ಸಾಯಲು ಸಿದ್ಧರಾಗಿದ್ದರು. ಕ್ರಿಸ್ತನು ಒಬ್ಬ ನೈಜ ವ್ಯಕ್ತಿಯಾಗಿದ್ದುದರಿಂದ, ಮತ್ತು ಸುವಾರ್ತಾ ವೃತ್ತಾಂತಗಳು ಹೇಳುವಂತೆ ಅವನು ಭೂಮಿಯಲ್ಲಿ ಜೀವಿಸಿದ್ದರಿಂದ ಅವರು ಅವನಿಗಾಗಿ ತಮ್ಮ ಜೀವವನ್ನೇ ಅಪಾಯಕ್ಕೊಳಪಡಿಸಿದರು.

ನೀವು ರುಜುವಾತನ್ನು ನೋಡಿರುವಿರಿ

ಕ್ರಿಸ್ತೀಯ ಸಾರುವಿಕೆಗಿರುವ ಪೂರ್ವಾಪೇಕ್ಷಿತ ವಿಷಯವು ಯೇಸು ಕ್ರಿಸ್ತನ ಪುನರುತ್ಥಾನದಲ್ಲಿನ ನಂಬಿಕೆಯೇ ಆಗಿತ್ತು. ಯೇಸು ಇಂದಿನ ದಿನಗಳಲ್ಲಿ ಬೀರುತ್ತಿರುವ ಪ್ರಭಾವವನ್ನು ನೋಡುವ ಮೂಲಕ ನೀವೂ ನಿಮ್ಮ ಮನೋನೇತ್ರಗಳಿಂದ ಪುನರುತ್ಥಿತ ಯೇಸುವಿನ ಬಗ್ಗೆ ಯೋಚಿಸಬಲ್ಲಿರಿ.

ಯೇಸು ಶೂಲಕ್ಕೆ ಜಡಿಯಲ್ಪಡುವ ತುಸು ಮೊದಲಾಗಿ ಅವನು ತನ್ನ ಭಾವೀ ಸಾನ್ನಿಧ್ಯದ ಬಗ್ಗೆ ವಿಸ್ತಾರವಾದ ಒಂದು ಪ್ರವಾದನೆಯನ್ನು ಕೊಟ್ಟನು. ತನ್ನ ಪುನರುತ್ಥಾನವಾಗುವುದೆಂದೂ ತನ್ನ ಶತ್ರುಗಳಿಗೆ ನ್ಯಾಯತೀರಿಸುವ ಸಮಯಕ್ಕಾಗಿ ಕಾಯುತ್ತ ದೇವರ ಬಲಗಡೆಯಲ್ಲಿ ಕುಳಿತುಕೊಳ್ಳುವೆನೆಂದೂ ಅವನು ಸೂಚಿಸಿದನು. (ಕೀರ್ತನೆ 110:1; ಯೋಹಾನ 6:62; ಅ. ಕೃತ್ಯಗಳು 2:​34, 35; ರೋಮಾಪುರ 8:34) ಆ ಬಳಿಕ, ಅವನು ಕ್ರಮ ಕೈಕೊಂಡು ಸೈತಾನನನ್ನೂ ಅವನ ದೆವ್ವಗಳನ್ನೂ ಸ್ವರ್ಗದಿಂದ ಹೊರದೂಡುವನು.​—ಪ್ರಕಟನೆ 12:​7-9.

ಅದೆಲ್ಲವೂ ಯಾವಾಗ ಸಂಭವಿಸುವುದು? ಯೇಸು ತನ್ನ ಶಿಷ್ಯರಿಗೆ ‘ತನ್ನ ಸಾನ್ನಿಧ್ಯದ ಮತ್ತು ವಿಷಯಗಳ ವ್ಯವಸ್ಥೆಯ ಸಮಾಪ್ತಿಯ ಸೂಚನೆ’ಯನ್ನು ಕೊಟ್ಟನು. ತನ್ನ ಅದೃಶ್ಯ ಸಾನ್ನಿಧ್ಯವನ್ನು ಗುರುತಿಸುವ ಸೂಚನೆಯಲ್ಲಿ ಮಹಾ ಯುದ್ಧಗಳು, ಆಹಾರದ ಅಭಾವಗಳು, ಭೂಕಂಪಗಳು, ಸುಳ್ಳು ಪ್ರವಾದಿಗಳ ಕಾಣಿಸಿಕೊಳ್ಳುವಿಕೆ, ನಿಯಮರಾಹಿತ್ಯದ ವರ್ಧಿಸುವಿಕೆ ಮತ್ತು ತೀವ್ರವಾದ ಅಂಟುಜಾಡ್ಯಗಳು ಸೇರಿದ್ದವು. ಇಂತಹ ವಿಪತ್ಕಾರಕ ಸಂಭವಗಳನ್ನು ನಿರೀಕ್ಷಿಸಬೇಕಾಗಿತ್ತು, ಏಕೆಂದರೆ ಪಿಶಾಚನಾದ ಸೈತಾನನ ಹೊರದೊಬ್ಬವಿಕೆಯು ಭೂಮಿಗೆ “ದುರ್ಗತಿ”ಯ ಅರ್ಥದಲ್ಲಿರುವುದು. “ತನಗಿರುವ ಕಾಲವು ಸ್ವಲ್ಪವೆಂದು ತಿಳಿದು” ಪಿಶಾಚನು “ಮಹಾ ರೌದ್ರವುಳ್ಳವನಾಗಿ” ಭೂಪರಿಸರಕ್ಕೆ ಇಳಿದುಬಂದಿದ್ದಾನೆ. ಇದಲ್ಲದೆ, ಆ ಸೂಚನೆಯಲ್ಲಿ, ರಾಜ್ಯದ ಸುವಾರ್ತೆಯು “ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾಕ್ಷಿಗಾಗಿ ಸಾರ”ಲ್ಪಡುವುದೂ ಒಳಗೂಡಿದೆ.​—ಮತ್ತಾಯ 24:​3-14; ಪ್ರಕಟನೆ 12:12; ಲೂಕ 21:7-19.

ಒಂದಕ್ಕೊಂದು ಕೂಡಿಕೊಳ್ಳುವಂತಹ ಚಿತ್ರಬಂಧದ ಬಿಡಿಭಾಗಗಳಂತೆ, ಯೇಸು ಪ್ರವಾದಿಸಿದಂತಹ ಸಂಗತಿಗಳು ಅಂತೆಯೇ ಸಂಭವಿಸಿವೆ. ಒಂದನೆಯ ಜಾಗತಿಕ ಯುದ್ಧವು 1914ರಲ್ಲಿ ಆರಂಭವಾದಂದಿನಿಂದ, ಯೇಸು ಕ್ರಿಸ್ತನ ಅದೃಶ್ಯ ಸಾನ್ನಿಧ್ಯದ ಸಮ್ಮಿಳಿತ ಸಾಕ್ಷ್ಯವನ್ನು ನಾವು ನೋಡಿದ್ದೇವೆ. ಅವನು ದೇವರ ರಾಜ್ಯದ ಅರಸನಾಗಿ ಆಳುತ್ತಾ ಮಹತ್ತರವಾದ ಪ್ರಭಾವವನ್ನು ಬೀರುತ್ತಿದ್ದಾನೆ. ನಿಮ್ಮ ಕೈಯಲ್ಲಿ ಈ ಪತ್ರಿಕೆ ಇದೆಯೆಂಬ ಸಂಗತಿಯೇ ರಾಜ್ಯ ಸಾರುವಿಕೆಯು ಇಂದು ನಡೆಯುತ್ತಿದೆ ಎಂಬುದಕ್ಕೆ ರುಜುವಾತಾಗಿದೆ.

ಯೇಸುವಿನ ಅಸ್ತಿತ್ವದ ಪರಿಣಾಮವನ್ನು ಇನ್ನೂ ಹೆಚ್ಚು ತಿಳಿದುಕೊಳ್ಳಲು ನೀವು ಬೈಬಲಿನ ಅಧ್ಯಯನ ಮಾಡುವುದು ಆವಶ್ಯಕ. ಯೇಸುವಿನ ಸಾನ್ನಿಧ್ಯದ ವಿವರಗಳಿಗಾಗಿ ಯೆಹೋವನ ಸಾಕ್ಷಿಗಳನ್ನು ಏಕೆ ಕೇಳಬಾರದು?

[ಪುಟ 5ರಲ್ಲಿರುವ ಚಿತ್ರಗಳು]

ಜೋಸೀಫಸ್‌, ಟ್ಯಾಸಿಟಸ್‌ ಮತ್ತು ಪ್ಲಿನಿ ದ ಯಂಗರ್‌, ಯೇಸು ಕ್ರಿಸ್ತನನ್ನು ಮತ್ತು ಅವನ ಹಿಂಬಾಲಕರನ್ನು ಸೂಚಿಸಿ ಬರೆದರು

[ಕೃಪೆ]

ಎಲ್ಲಾ ಮೂರು ಪ್ರತಿಮೆಗಳು: © Bettmann/CORBIS

[ಪುಟ 7ರಲ್ಲಿರುವ ಚಿತ್ರ]

ಯೇಸು ನೈಜ ವ್ಯಕ್ತಿಯಾಗಿದ್ದನೆಂದು ಆದಿ ಕ್ರೈಸ್ತರಿಗೆ ಮನವರಿಕೆಯಾಗಿತ್ತು