ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಪಿಶಾಚನಾದ ಸೈತಾನನಿಗೆ ಮನುಷ್ಯರ ಮನಸ್ಸನ್ನು ಓದುವ ಸಾಮರ್ಥ್ಯವಿದೆಯೋ?

ಇದರ ಕುರಿತು ನಾವು ಖಚಿತವಾಗಿ ಹೇಳಸಾಧ್ಯವಿಲ್ಲದಿದ್ದರೂ, ನಮ್ಮ ಆಲೋಚನೆಗಳನ್ನು ಓದುವ ಸಾಮರ್ಥ್ಯವು ಸೈತಾನನಿಗಾಗಲಿ ಅವನ ದೆವ್ವಗಳಿಗಾಗಲಿ ಇಲ್ಲ ಎಂಬುದು ವ್ಯಕ್ತ.

ಸೈತಾನನಿಗೆ ಕೊಡಲ್ಪಟ್ಟ ವರ್ಣನಾತ್ಮಕ ಹೆಸರುಗಳನ್ನು ಪರಿಗಣಿಸಿರಿ. ಅವನನ್ನು, ಸೈತಾನ (ಪ್ರತಿಭಟಕ), ಪಿಶಾಚ (ನಿಂದಕ), ಸರ್ಪ (ವಂಚಕ ಎಂಬುದರ ಸಮಾನಾರ್ಥಕ ಪದ), ಶೋಧಕ, ಮತ್ತು ಸುಳ್ಳುಗಾರ ಮುಂತಾದ ಹೆಸರುಗಳಿಂದ ಕರೆಯಲಾಗಿದೆ. (ಯೋಬ 1:6; ಮತ್ತಾಯ 4:3; ಯೋಹಾನ 8:44; 2 ಕೊರಿಂಥ 11:3; ಪ್ರಕಟನೆ 12:9) ಈ ವರ್ಣನಾತ್ಮಕ ಹೆಸರುಗಳಲ್ಲಿ ಯಾವುದೂ ಸೈತಾನನಿಗೆ ಮನಸ್ಸನ್ನು ಓದುವ ಸಾಮರ್ಥ್ಯವಿದೆ ಎಂಬುದನ್ನು ಸೂಚಿಸುವುದಿಲ್ಲ.

ಇದಕ್ಕೆ ವ್ಯತಿರಿಕ್ತವಾಗಿ, ಯೆಹೋವ ದೇವರನ್ನು “ಹೃದಯಗಳನ್ನು ಶೋಧಿಸುವವನು” ಎಂಬುದಾಗಿ ವರ್ಣಿಸಲಾಗಿದೆ. (ಜ್ಞಾನೋಕ್ತಿ 17:3; 1 ಸಮುವೇಲ 16:7; 1 ಪೂರ್ವಕಾಲವೃತ್ತಾಂತ 29:17) “ನಾವು ಯಾವಾತನಿಗೆ ಲೆಕ್ಕ ಒಪ್ಪಿಸಬೇಕಾಗಿದೆಯೋ ಆತನ ದೃಷ್ಟಿಗೆ ಸಮಸ್ತವೂ ಮುಚ್ಚುಮರೆಯಿಲ್ಲದ್ದಾಗಿಯೂ ಬೈಲಾದದ್ದಾಗಿಯೂ ಅದೆ. ಆತನ ಸನ್ನಿಧಿಯಲ್ಲಿ ಅಗೋಚರವಾಗಿರುವ ಸೃಷ್ಟಿಯು ಒಂದೂ ಇಲ್ಲ” ಎಂಬುದಾಗಿ ಇಬ್ರಿಯ 4:13 ತಿಳಿಸುತ್ತದೆ. ಯೆಹೋವನು ತನ್ನ ಮಗನಾದ ಯೇಸುವಿಗೆ ಹೃದಯಗಳನ್ನು ಶೋಧಿಸುವ ಸಾಮರ್ಥ್ಯವನ್ನು ಒದಗಿಸಿದ್ದಾನೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ. ಪುನರುತ್ಥಿತ ಯೇಸು ಘೋಷಿಸಿದ್ದು: “ನಾನು ಮನುಷ್ಯರ ಅಂತರಿಂದ್ರಿಯವನ್ನೂ ಹೃದಯವನ್ನೂ ಪರೀಕ್ಷಿಸುವವನಾಗಿದ್ದೇನೆ . . . ನಿಮ್ಮಲ್ಲಿ ಪ್ರತಿಯೊಬ್ಬನಿಗೆ ಅವನವನ ಕೃತ್ಯಗಳಿಗೆ ತಕ್ಕ ಹಾಗೆ ಪ್ರತಿಫಲ ಕೊಡುವೆನು.”​—ಪ್ರಕಟನೆ 2:23.

ಸೈತಾನನಿಗೆ ಮಾನವನ ಹೃದಯಗಳನ್ನು ಮತ್ತು ಮನಸ್ಸನ್ನು ಶೋಧಿಸುವ ಸಾಮರ್ಥ್ಯವಿದೆ ಎಂದು ಬೈಬಲ್‌ ತಿಳಿಸುವುದಿಲ್ಲ. ಕ್ರೈಸ್ತರು ‘ಸೈತಾನನ ಯೋಚನೆಗಳನ್ನು ಅರಿಯದವರಲ್ಲವಲ್ಲಾ’ ಎಂಬುದಾಗಿ ಅಪೊಸ್ತಲ ಪೌಲನು ಆಶ್ವಾಸನೆಯನ್ನು ನೀಡುವುದರಿಂದ ಇದು ಇನ್ನೂ ಸ್ಪಷ್ಟವಾಗುತ್ತದೆ. (2 ಕೊರಿಂಥ 2:11) ಆದುದರಿಂದ, ನಮಗೆ ಅರಿಯದಿರುವ ಕೆಲವು ಅಸಾಧಾರಣವಾದ ಸಾಮರ್ಥ್ಯವು ಸೈತಾನನಿಗಿದೆ ಎಂಬುದಾಗಿ ನಾವು ಭಯಪಡುವ ಅಗತ್ಯವಿಲ್ಲ.

ಹಾಗಿದ್ದರೂ, ನಮ್ಮ ಬಲಹೀನತೆಗಳನ್ನು ನಮ್ಮ ವಿರೋಧಿಗೆ ಗ್ರಹಿಸಸಾಧ್ಯವಿಲ್ಲ ಎಂಬುದಾಗಿ ಇದರ ಅರ್ಥವಲ್ಲ. ಮನುಷ್ಯರ ವರ್ತನೆಯನ್ನು ಅಧ್ಯಯನ ಮಾಡಲು ಸೈತಾನನಿಗೆ ಅನೇಕ ಶತಮಾನಗಳ ಅವಕಾಶ ದೊರಕಿರುತ್ತದೆ. ನಾವು ಯಾವ ರೀತಿಯ ವರ್ತನೆಯನ್ನು ಅನುಸರಿಸುತ್ತೇವೆ ಎಂಬುದನ್ನು ಗ್ರಹಿಸಲು, ಎಂಥ ಮನೋರಂಜನೆಯನ್ನು ಬೆನ್ನಟ್ಟುತ್ತೇವೆ ಎಂಬುದನ್ನು ಗಮನಿಸಲು, ಯಾವ ವಿಷಯಗಳ ಕುರಿತು ಮಾತನಾಡುತ್ತೇವೆ ಎಂಬುದಕ್ಕೆ ಕಿವಿಗೊಡಲು ಅವನು ನಮ್ಮ ಮನಸ್ಸನ್ನು ಓದುವ ಸಾಮರ್ಥ್ಯವನ್ನು ಹೊಂದಿರುವ ಅಗತ್ಯವಿಲ್ಲ. ನಾವು ಏನನ್ನು ಆಲೋಚಿಸುತ್ತಿದ್ದೇವೆ ಅಥವಾ ಭಾವಿಸುತ್ತಿದ್ದೇವೆ ಎಂಬುದು ನಮ್ಮ ಮುಖಭಾವಗಳು ಮತ್ತು ದೇಹಭಂಗಿ ಸಹ ಸುಳಿವು ನೀಡಬಹುದು.

ಆದರೂ, ಮುಖ್ಯವಾಗಿ ಏದೆನ್‌ ತೋಟದಲ್ಲಿ ಉಪಯೋಗಿಸಿದ ಅದೇ ಸಾಧನಗಳನ್ನು ಅಂದರೆ ಸುಳ್ಳು, ವಂಚನೆ, ಮತ್ತು ತಪ್ಪಾದ ಮಾಹಿತಿಯನ್ನು ಸೈತಾನನು ಉಪಯೋಗಿಸುತ್ತಾನೆ. (ಆದಿಕಾಂಡ 3:​1-5) ಸೈತಾನನು ತಮ್ಮ ಮನಸ್ಸನ್ನು ಓದುತ್ತಾನೆಂದು ಕ್ರೈಸ್ತರು ಭಯಪಡುವ ಅಗತ್ಯವಿಲ್ಲವಾದರೂ, ಅವನು ತಮ್ಮ ಮನಸ್ಸಿನ ಒಳಗೆ ಹಾಕಸಾಧ್ಯವಿರುವ ಆಲೋಚನೆಗಳ ಕುರಿತು ಚಿಂತಿತರಾಗಿರುವುದಕ್ಕೆ ಅವರಿಗೆ ಸಕಾರಣವಿದೆ. ಕ್ರೈಸ್ತರು “ಬುದ್ಧಿಗೆಟ್ಟು ಸತ್ಯವಿಹೀನ”ರಾಗಬೇಕೆಂಬುದು ಅವನ ಬಯಕೆಯಾಗಿದೆ. (1 ತಿಮೊಥೆಯ 6:5) ಆದುದರಿಂದ, ಸೈತಾನನ ಲೋಕದಲ್ಲಿ ಭ್ರಷ್ಟಗೊಳಿಸುವ ಮಾಹಿತಿ ಮತ್ತು ಮನೋರಂಜನೆಯ ಪ್ರವಾಹವೇ ಇದೆ ಎಂಬುದು ಆಶ್ಚರ್ಯವೇನಲ್ಲ. ಈ ಆಕ್ರಮಣವನ್ನು ಎದುರಿಸಿ ನಿಲ್ಲಲು, ಕ್ರೈಸ್ತರು “ರಕ್ಷಣೆಯೆಂಬ ಶಿರಸ್ತ್ರಾಣವನ್ನು” ಧರಿಸಿಕೊಳ್ಳುವುದರ ಮೂಲಕ ತಮ್ಮ ಮನಸ್ಸನ್ನು ಕಾಪಾಡಿಕೊಳ್ಳಬೇಕು. (ಎಫೆಸ 6:17) ಇದನ್ನು ಅವರು, ಬೈಬಲಿನ ಸತ್ಯಗಳಿಂದ ತಮ್ಮ ಮನಸ್ಸನ್ನು ತುಂಬಿಸುವ ಮತ್ತು ಸೈತಾನನ ಲೋಕದ ಅಹಿತಕರವಾದ ಪ್ರಭಾವಗಳ ಅನಗತ್ಯ ಸಂಪರ್ಕವನ್ನು ತೊರೆಯುವ ಮೂಲಕ ಮಾಡುತ್ತಾರೆ.

ಸೈತಾನನು ಒಬ್ಬ ಭಯಂಕರ ವೈರಿಯಾಗಿದ್ದಾನೆ. ಆದರೆ ಅವನ ಬಗ್ಗೆಯಾಗಲಿ ಅಥವಾ ಅವನ ದೆವ್ವಗಳ ವಿಷಯದಲ್ಲಾಗಲಿ ನಮಗೆ ಅಹಿತಕರವಾದ ಭಯವಿರುವ ಅಗತ್ಯವಿಲ್ಲ. ಯಾಕೋಬ 4:7 ಆಶ್ವಾಸನೆ ನೀಡುವುದು: “ಸೈತಾನನನ್ನು ಎದುರಿಸಿರಿ. ಅವನು ನಿಮ್ಮನ್ನು ಬಿಟ್ಟು ಓಡಿಹೋಗುವನು.” ಈ ಸಲಹೆಯನ್ನು ನಾವು ಅನುಸರಿಸುವುದಾದರೆ, ಯೇಸುವಿನಂತೆ ನಾವು ಸಹ, ಸೈತಾನನಿಗೆ ನಮ್ಮ ಮೇಲೆ ಅಧಿಕಾರವಿಲ್ಲ ಎಂಬುದಾಗಿ ಘೋಷಿಸಬಲ್ಲೆವು.​—ಯೋಹಾನ 14:​30, ಪರಿಶುದ್ಧ ಬೈಬಲ್‌. *

[ಪಾದಟಿಪ್ಪಣಿ]

^ ಪ್ಯಾರ. 9 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.