ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

viನೆಯ ಅಲೆಗ್ಸಾಂಡರ್‌ ರೋಮ್‌ ಮರೆಯಲಾಗದ ಒಬ್ಬ ಪೋಪ್‌

viನೆಯ ಅಲೆಗ್ಸಾಂಡರ್‌ ರೋಮ್‌ ಮರೆಯಲಾಗದ ಒಬ್ಬ ಪೋಪ್‌

viನೆಯ ಅಲೆಗ್ಸಾಂಡರ್‌ ರೋಮ್‌ ಮರೆಯಲಾಗದ ಒಬ್ಬ ಪೋಪ್‌

“ಕ್ಯಾಥೊಲಿಕ್‌ ದೃಷ್ಟಿಕೋನದಿಂದ ನೋಡುವುದಾದರೆ VIನೆಯ ಅಲೆಗ್ಸಾಂಡರ್‌ನನ್ನು ಎಷ್ಟು ಕಟುವಾಗಿ ಖಂಡಿಸಿದರೂ ಅದು ಕಡಿಮೆಯೇ.” (ಗೆಷಿಕ್ಟ ಡೇರ್‌ ಪಾಪ್‌ಸ್ಟ ಸೈಟ್‌ ಡೇಮ್‌ ಔಸ್‌ಗಾಂಗ್‌ ಡೆಸ್‌ ಮಿಟಲಾಲ್ಟರ್ಸ್‌ [ಮಧ್ಯಯುಗಗಳ ಅಂತ್ಯದಿಂದ ಪೋಪರುಗಳ ಚರಿತ್ರೆ]) “ಅವನ ಖಾಸಗಿ ಜೀವನ ಖಂಡಿತವಾಗಿಯೂ ಅಕ್ಷಮ್ಯವಾದದ್ದು. . . . ಈ ಪೋಪನ ಅಧಿಕಾರ ಸ್ಥಾನ, ಚರ್ಚ್‌ಗೆ ಯಾವುದೇ ರೀತಿಯಲ್ಲಿ ಮಾನವನ್ನು ತರುವುದಿಲ್ಲವೆಂದು ನಾವು ಒಪ್ಪಿಕೊಳ್ಳಲೇ ಬೇಕಾಗಿದೆ. ಬಾರ್ಜಾ ಕುಟುಂಬದ ಸಮಕಾಲೀನರಿಗೆ ಇಂತಹ ದುಷ್ಕೃತ್ಯಗಳ ಪರಿಚಯವಿದ್ದರೂ, ಆ ಕುಟುಂಬದ ಪಾತಕಗಳನ್ನು ವರ್ಣಿಸಲಾಗದಷ್ಟು ಭೀತಿಯಿಂದ ನೋಡಿದರು. ಅವುಗಳ ಫಲಿತಾಂಶಗಳು ನಾಲ್ಕು ಶತಮಾನಗಳಿಗೂ ಹೆಚ್ಚು ಕಾಲದ ಬಳಿಕ ಇನ್ನೂ ಪೂರ್ತಿಯಾಗಿ ಕಣ್ಮರೆಯಾಗಿಲ್ಲ.”​—ಲೇಗ್ಲೀಸ್‌ ಏ ಲಾ ರನಸಾನ್ಸ್‌ (1449-1517) (ಚರ್ಚು, ಹಾಗೂ ಸಾಹಿತ್ಯ ಮತ್ತು ಕಲೆಗಳ ಪುನರುಜ್ಜೀವನ).

ರೋಮನ್‌ ಕ್ಯಾಥೊಲಿಕ್‌ ಚರ್ಚಿನ ಕುರಿತಾದ ಗೌರವಾನ್ವಿತ ಐತಿಹಾಸಿಕ ಕೃತಿಗಳು ಈ ಪೋಪ್‌ ಮತ್ತು ಅವನ ಕುಟುಂಬದ ಬಗ್ಗೆ ಇಂತಹ ಕಠಿನ ಹೇಳಿಕೆಗಳನ್ನು ಮಾಡುವುದೇಕೆ? ಇಂತಹ ಟೀಕೆಗೆ ಅರ್ಹರಾಗಲು ಅವರೇನು ಮಾಡಿದರು? ರೋಮ್‌ನಲ್ಲಿ ಈ ಬಾರ್ಜಾ ಡೆಲ್‌ ಪೋಟೇರೆ (ಬಾರ್ಜಾ ಕುಟುಂಬ​—ಅಧಿಕಾರದ ಆಟ) ಎಂಬ ಶೀರ್ಷಿಕೆಯುಳ್ಳ ಒಂದು ಪ್ರದರ್ಶನವು (ಅಕ್ಟೋಬರ್‌ 2002-ಫೆಬ್ರವರಿ 2003) ನಡೆಯಿತು. ಈ ಪ್ರದರ್ಶನವು, ಪೋಪರ ಸ್ಥಾನಕ್ಕಿರುವ ಹಕ್ಕು ಅಧಿಕಾರಗಳ ವಿಷಯದಲ್ಲಿ, ಮತ್ತು ವಿಶೇಷವಾಗಿ ರೋಡ್ರೀಗೋ ಬಾರ್ಜಾ, ಅಥವಾ VIನೆಯ ಅಲೆಗ್ಸಾಂಡರ್‌ (1492-1503ರ ವರೆಗಿನ ಪೋಪ್‌) ಎಂಬವನು ಅವುಗಳನ್ನು ಬಳಸಿದ ರೀತಿಯ ವಿಷಯದಲ್ಲಿ ಚಿಂತಿಸಲು ಒಂದು ಅವಕಾಶವನ್ನು ಒದಗಿಸಿತು.

ಅಧಿಕಾರಪ್ರಾಪ್ತಿ

ಇಸವಿ 1431ರಲ್ಲಿ, ಈಗ ಸ್ಪೇನ್‌ನ ಆ್ಯರಗಾನ್‌ ರಾಜ್ಯದಲ್ಲಿರುವ ಹಾಟೀವಾದಲ್ಲಿ ಒಂದು ಗಣ್ಯ ಕುಟುಂಬದಲ್ಲಿ ರೋಡ್ರೀಗೋ ಬಾರ್ಜಾ ಜನಿಸಿದನು. ಅವನ ಮಾವ, ವಲೆನ್‌ಶದ ಬಿಷಪ್‌ ಆಲ್‌ಫಾನ್ಸೋ ಡೆ ಬಾರ್ಜಾ ಎಂಬವನು ತನ್ನ ಈ ಸೋದರಳಿಯನ ವಿದ್ಯಾಭ್ಯಾಸದ ಜವಾಬ್ದಾರಿಯನ್ನು ವಹಿಸಿಕೊಂಡು, ಅವನಿನ್ನೂ ಹದಿಪ್ರಾಯದವನಾಗಿದ್ದಾಗಲೇ ಪಾದ್ರಿ ವರಮಾನ ದೊರೆಯುವಂಥ ಕ್ರೈಸ್ತಮಠೀಯ ಹುದ್ದೆಗಳು ಅವನಿಗೆ ಸಿಗುವಂತೆ ನೋಡಿಕೊಂಡನು. ರೋಡ್ರೀಗೋ ತನ್ನ 18ನೆಯ ವಯಸ್ಸಿನಲ್ಲಿ, ಅಷ್ಟರಲ್ಲಿ ಕಾರ್ಡಿನಲ್‌ ಆಗಿ ಪರಿಣಮಿಸಿದ್ದ ಆಲ್‌ಫಾನ್ಸೋವಿನ ಪಾಲನೆಯ ಕೆಳಗೆ, ವಕೀಲವೃತ್ತಿ ಕಲಿಯಲು ಇಟೆಲಿಗೆ ಹೋದನು. ಮತ್ತು ಆಲ್‌ಫಾನ್ಸೋ, IIIನೆಯ ಕಾಲಿಕ್ಸ್‌ಟಸ್‌ ಪೋಪ್‌ ಆಗಿ ಅಧಿಕಾರವನ್ನು ಪಡೆದಾಗ ಅವನು ರೋಡ್ರೀಗೋ ಮತ್ತು ಇನ್ನೊಬ್ಬ ಸೋದರಳಿಯನನ್ನು ಕಾರ್ಡಿನಲ್‌ಗಳಾಗಿ ನೇಮಿಸಿದನು. ಪೇರೇ ಲ್ವೀಸ್‌ ಬಾರ್ಜಾ ಎಂಬವನಿಗೆ ಅನೇಕ ನಗರಗಳ ಗವರ್ನರ್‌ ಆಗಿ ಅಧಿಕಾರ ದೊರಕಿತು. ಸ್ವಲ್ಪದರಲ್ಲಿ ರೋಡ್ರೀಗೋ ಚರ್ಚಿನ ಉಪಪ್ರಧಾನ ನ್ಯಾಯಾಧಿಕಾರಿಯಾಗಿ ನೇಮಿಸಲ್ಪಟ್ಟನು ಮತ್ತು ಅನೇಕ ಪೋಪರುಗಳ ಕೆಳಗೆ ಅವನು ಈ ಅಧಿಕಾರದಲ್ಲಿದ್ದನು. ಇದರಿಂದಾಗಿ ಅವನು ಅನೇಕ ಸಮೃದ್ಧ ಧರ್ಮಾದಾಯಗಳನ್ನೂ ಅಪರಿಮಿತ ಐಶ್ವರ್ಯವನ್ನೂ ಸಂಪಾದಿಸಿ, ಭಾರೀ ಅಧಿಕಾರವನ್ನು ಚಲಾಯಿಸುತ್ತಾ ರಾಜಕುಮಾರನಂತಹ ಸುಖಭೋಗದ ಜೀವನವನ್ನು ನಡೆಸಲು ಶಕ್ತನಾದನು.

ರೋಡ್ರೀಗೋ ಬುದ್ಧಿವಂತನೂ ವಾಕ್ಚಾತುರ್ಯವುಳ್ಳವನೂ ಕಲಾ ಪೋಷಕನೂ ತನ್ನ ಗುರಿಗಳನ್ನು ಸಾಧಿಸಬಲ್ಲವನೂ ಆಗಿದ್ದನು. ಆದರೆ ಅವನಿಗೆ ಅನೇಕ ನಿಷಿದ್ಧ ಸಂಬಂಧಗಳಿದ್ದವು. ತನ್ನ ಜೀವನುದ್ದದ ಪ್ರಣಯಿನಿಯಿಂದ ಅವನಿಗೆ ನಾಲ್ಕು ಮಂದಿ ಮಕ್ಕಳೂ ಇತರ ಸ್ತ್ರೀಯರಿಂದ ಇನ್ನೂ ಹೆಚ್ಚು ಮಕ್ಕಳೂ ಹುಟ್ಟಿದರು. IIನೆಯ ಪೋಪ್‌ ಪಾಯಸ್‌ ಇವನ “ಅತಿ ಲಂಪಟತನ”ದ ವಿನೋದಕ್ಕಾಗಿ ಮತ್ತು “ಲಂಗುಲಗಾಮಿಲ್ಲದ ಸುಖಭೋಗ”ಕ್ಕಾಗಿದ್ದ ಒಲವನ್ನು ಖಂಡಿಸಿದರೂ, ರೋಡ್ರೀಗೋ ತನ್ನ ರೀತಿನೀತಿಗಳನ್ನು ಬದಲಾಯಿಸಲಿಲ್ಲ.

VIIIನೆಯ ಪೋಪ್‌ ಇನಸೆಂಟ್‌ 1492ರಲ್ಲಿ ನಿಧನರಾದಾಗ, ಚರ್ಚಿನ ಕಾರ್ಡಿನಲರು ಉತ್ತರಾಧಿಕಾರಿಯ ಚುನಾವಣೆಗಾಗಿ ಕೂಡಿಬಂದರು. ಸೊಗಸಾದ ಕೊಡುಗೆಗಳನ್ನು ಕೊಡುವ ಮೂಲಕ ಮತ್ತು ಬಹಿರಂಗವಾದ ಸಿನಿಕತನದ ಮೂಲಕ ರೋಡ್ರೀಗೋ ಬಾರ್ಜಾ, ಆ ಖಾಸಗಿ ಕೂಟಕ್ಕೆ ಹಾಜರಾಗಿದ್ದ ಜೊತೆ ಕಾರ್ಡಿನಲರಿಂದ ಸಾಕಷ್ಟು ಮತಗಳನ್ನು ಖರೀದಿಸಿ, ಆ ಚುನಾವಣೆ ಸಭೆಯಿಂದ VIನೆಯ ಪೋಪ್‌ ಅಲೆಗ್ಸಾಂಡರನಾಗಿ ಹೊರಬಂದನೆಂಬುದು ಎಲ್ಲರಿಗೂ ತಿಳಿದಿರುವ ಸಂಗತಿಯಾಗಿದೆ. ಅವನು ಕಾರ್ಡಿನಲರಿಂದ ಪಡೆದ ಮತಗಳಿಗಾಗಿ ಅವರಿಗೆ ಹೇಗೆ ಪ್ರತಿಫಲ ಕೊಟ್ಟನು? ಅವರಿಗೆ ಕ್ರೈಸ್ತಮಠೀಯ ಸ್ಥಾನಮಾನಗಳನ್ನು, ಅರಮನೆಗಳನ್ನು, ದುರ್ಗಗಳನ್ನು, ಪಟ್ಟಣಗಳನ್ನು, ಪಾದ್ರಿಮಠಗಳನ್ನು, ಮತ್ತು ಬೃಹತ್ಪ್ರಮಾಣದ ಆದಾಯ ಬರುತ್ತಿದ್ದ ಬಿಷಪ್‌ ಆಧಿಪತ್ಯಗಳನ್ನು ದಯಪಾಲಿಸುವ ಮೂಲಕವೇ. ಒಬ್ಬ ಚರ್ಚ್‌ ಇತಿಹಾಸಕಾರನು VIನೆಯ ಅಲೆಗ್ಸಾಂಡರನ ಆಳಿಕೆಯನ್ನು, “ರೋಮನ್‌ ಚರ್ಚಿಗೆ ಕುಖ್ಯಾತಿ ಮತ್ತು ಅಪನಿಂದೆಯ ದಿನಗಳು” ಎಂದು ಏಕೆ ಕರೆದನೆಂಬುದು ಇದರಿಂದ ನಿಮಗೆ ಅರ್ಥವಾಗಬಹುದು.

ಐಹಿಕ ರಾಜಕುಮಾರರಿಗಿಂತ ಉತ್ತಮನಲ್ಲ

ಚರ್ಚಿನ ಶಿರಸ್ಸಿನೋಪಾದಿ ಅವನಿಗಿದ್ದ ಆಧ್ಯಾತ್ಮಿಕ ಅಧಿಕಾರದ ಕಾರಣ VIನೆಯ ಅಲೆಗ್ಸಾಂಡರನು, ಹೊಸದಾಗಿ ಕಂಡುಹಿಡಿಯಲ್ಪಟ್ಟಿದ್ದ ಅಮೆರಿಕದ ಪ್ರದೇಶಗಳನ್ನು, ಸ್ಪೇನ್‌ ಮತ್ತು ಪೋರ್ಚುಗಲ್‌ ದೇಶಗಳ ನಡುವೆ ವಿಭಜಿಸುವುದರ ಕುರಿತಾದ ವಿವಾದವನ್ನು ಇತ್ಯರ್ಥಮಾಡಲು ಸಹಾಯಮಾಡಿದನು. ಅವನಿಗಿದ್ದ ಐಹಿಕ ಅಧಿಕಾರದಿಂದಾಗಿ, ಅವನು ಮಧ್ಯ ಇಟಲಿಯಲ್ಲಿ ಪೋಪನ ಅಧಿಕಾರದ ಕೆಳಗಿದ್ದ ರಾಜ್ಯಗಳ ಶಿರಸ್ಸಾದನು. ಮತ್ತು ಅವನು ತನ್ನ ರಾಜ್ಯವನ್ನು, ಸಾಹಿತ್ಯ ಹಾಗೂ ಕಲೆಯ ಪುನರುಜ್ಜೀವನದ ಆ ಅವಧಿಯಲ್ಲಿದ್ದ ಬೇರೆಲ್ಲ ಚಕ್ರವರ್ತಿಗಳಂತೆಯೇ ಆಳಿದನು. ಅವನ ಮೊದಲೂ ಬಳಿಕವೂ ಬಂದ ಪೋಪರಂತೆ, VIನೆಯ ಅಲೆಗ್ಸಾಂಡರನ ಆಳಿಕೆಯಲ್ಲೂ ಲಂಚಕೋರತನ, ಸ್ವಜನಪಕ್ಷಪಾತ ಮತ್ತು ಕೆಲವು ಕೊಲೆಗಳ ಸಂಶಯವೂ ಇತ್ತು.

ಈ ಗೊಂದಲಮಯ ಸಮಯಗಳಲ್ಲಿ ವಿರೋಧಿ ಪಕ್ಷಗಳು ಇಟಲಿಯ ಪ್ರದೇಶಗಳಿಗಾಗಿ ಹೋರಾಡತೊಡಗಿದಾಗ ಈ ಪೋಪನು ಕೇವಲ ಮೌನ ಪ್ರೇಕ್ಷಕನಾಗಿರಲಿಲ್ಲ. ಅವನ ರಾಜಕೀಯ ಹೂಟಗಳು ಮತ್ತು ಅವನು ಮಾಡಿದಂಥ ಹಾಗೂ ಆಮೇಲೆ ಮುರಿದಂಥ ಮೈತ್ರಿಗಳು, ತನ್ನ ಅಧಿಕಾರವನ್ನು ವರ್ಧಿಸಲು, ತನ್ನ ಮಕ್ಕಳ ಪುರೋಭಿವೃದ್ಧಿಯನ್ನು ಮಾಡಲು ಮತ್ತು ಬಾರ್ಜಾ ಕುಟುಂಬವನ್ನು ಎಲ್ಲಾ ಕುಟುಂಬಗಳಿಗಿಂತ ಉನ್ನತಕ್ಕೇರಿಸುವಂತೆ ರೂಪಿಸಲ್ಪಟ್ಟಿದ್ದವು. ಕ್ಯಾಸ್ಟಿಲ್‌ನ ರಾಜನ ಸೋದರಸಂಬಂಧಿಯನ್ನು ಮದುವೆಯಾಗಿದ್ದ ಅವನ ಮಗ ಹ್ವಾನ್‌ ಎಂಬವನನ್ನು ಸ್ಪೇನ್‌ನ ಗಾಂಡಿಯದ ಡ್ಯೂಕ್‌ ದೊರೆಯಾಗಿ ಮಾಡಲಾಯಿತು. ಜಾಫ್ರೇ ಎಂಬ ಇನ್ನೊಬ್ಬ ಮಗನನ್ನು ನೇಪ್‌ಲ್ಸ್‌ನ ರಾಜನ ಮೊಮ್ಮಗಳೊಂದಿಗೆ ಮದುವೆ ಮಾಡಲಾಯಿತು.

ಫ್ರಾನ್ಸ್‌ನೊಂದಿಗಿದ್ದ ತನ್ನ ಸಂಬಂಧವನ್ನು ಬಲಪಡಿಸಲು ಅವನಿಗೊಬ್ಬ ಮಿತ್ರನ ಅಗತ್ಯವಿದ್ದಾಗ, ಆ್ಯರಂಗಾನ್‌ನ ಕುಲೀನನೊಬ್ಬನೊಂದಿಗೆ ತನ್ನ 13 ವಯಸ್ಸಿನ ಪುತ್ರಿ ಲೂಕ್ರೇಟ್‌ಸ್ಯಾಗೆ ಆಗಿದ್ದ ವಿವಾಹನಿಶ್ಚಯವನ್ನು ಮುರಿದು ಆಕೆಯನ್ನು ಮಿಲನ್‌ನ ಡ್ಯೂಕ್‌ ದೊರೆಯ ಸಂಬಂಧಿಗೆ ವಿವಾಹ ಮಾಡಿಸಿದನು. ಆದರೆ ಆ ವಿವಾಹ ರಾಜಕೀಯವಾಗಿ ಲಾಭದಾಯಕವಾಗಿ ಕಾಣದಿದ್ದಾಗ ಅದನ್ನು ರದ್ದುಗೊಳಿಸಲು ಒಂದು ನೆವವನ್ನು ಹುಡುಕಿ, ನಂತರ ಲೂಕ್ರೇಟ್‌ಸ್ಯಾಳನ್ನು ಎದುರಾಳಿ ರಾಜವಂಶದ ಸದಸ್ಯನಾಗಿದ್ದ ಆ್ಯರಗಾನ್‌ನ ಆಲ್‌ಫಾನ್ಸೋ ಎಂಬವನಿಗೆ ಮದುವೆಮಾಡಿ ಕೊಡಲಾಯಿತು. ಈ ಮಧ್ಯೆ ಲೂಕ್ರೇಟ್‌ಸ್ಯಾಳ ಹೆಬ್ಬಯಕೆಯ ಮತ್ತು ನಿರ್ದಯಿ ಸಹೋದರ ಚೇಸಾರೇ ಬಾರ್ಜಾ, ಫ್ರಾನ್ಸ್‌ನ XIIನೆಯ ಲೂಯಿಯೊಂದಿಗೆ ಮೈತ್ರಿ ಬೆಳೆಸಿದನು. ಇದರಿಂದಾಗಿ, ಅವನ ಸಹೋದರಿಯು ಇತ್ತೀಚೆಗೆ ಒಬ್ಬ ಆ್ಯರಗಾನ್‌ ನಿವಾಸಿಯೊಂದಿಗೆ ಮಾಡಿಕೊಂಡ ವಿವಾಹವು ಅವನನ್ನು ಪೇಚಾಟದಲ್ಲಿ ಸಿಕ್ಕಿಸಿತು. ಇದಕ್ಕೆ ಪರಿಹಾರ? ಒಂದು ಮೂಲಕ್ಕನುಸಾರ, ಆಕೆಯ ಬಡಪಾಯಿ ಗಂಡನಾದ ಆಲ್‌ಫಾನ್ಸೋ, “ಅವನನ್ನು ಕೊಲ್ಲಲು ಪ್ರಯತ್ನಿಸಿದ ನಾಲ್ಕು ಮಂದಿ ಪುರುಷರಿಂದ ಸೆಂಟ್‌ ಪೀಟರ್ಸ್‌ ಬಸಿಲಿಕದ ಮೆಟ್ಟಲುಗಳಲ್ಲಿ ಗಾಯಗೊಳಿಸಲ್ಪಟ್ಟನು. ಆದರೆ ಅವನು ಅದರಿಂದ ಗುಣಹೊಂದುತ್ತಿದ್ದಾಗ ಚೇಸಾರೇಯ ಸೇವಕನೊಬ್ಬನು ಕತ್ತು ಹಿಸುಕಿ ಅವನನ್ನು ಕೊಂದನು.” ಈಗ ಪೋಪನು ಹೊಸ ಮೈತ್ರಿ ಹಂಚಿಕೆಯನ್ನು ಹೂಡುತ್ತಾ, ಈಗ 21 ವಯಸ್ಸಿನವಳಾಗಿದ್ದ ಲೂಕ್ರೇಟ್‌ಸ್ಯಾಳಿಗೆ ಫರಾರದ ಬಲಾಢ್ಯ ಡ್ಯೂಕ್‌ ದೊರೆಯ ಮಗನೊಂದಿಗೆ ಮೂರನೆಯ ಮದುವೆಯನ್ನು ಏರ್ಪಡಿಸಿದನು.

ಚೇಸಾರೇಯ ಜೀವನವೃತ್ತಿಯನ್ನು “ರಕ್ತದಿಂದ ತೋಯಿಸಲ್ಪಟ್ಟಿರುವ ನೀತಿನಿಷ್ಠೆಗಳಿಲ್ಲದ ಕಥೆ” ಎಂದು ವರ್ಣಿಸಲಾಗಿದೆ. ಚೇಸಾರೇಯನ್ನು ಅವನ ತಂದೆ 17ನೆಯ ವಯಸ್ಸಿನಲ್ಲೇ ಕಾರ್ಡಿನಲ್‌ ಆಗಿ ನೇಮಿಸಿದರೂ, ಚರ್ಚ್‌ ವಿಷಯಗಳಿಗಿಂತಲೂ ಅವನು ಯುದ್ಧ ಮಾಡಲು ಹೆಚ್ಚು ಯೋಗ್ಯನಾಗಿದ್ದನು. ಏಕೆಂದರೆ ಅವನಲ್ಲಿ ಚಾತುರ್ಯ, ಅತ್ಯಾಶೆ ಮತ್ತು ಕೆಲವರಲ್ಲೇ ಇರುವಂಥ ಭ್ರಷ್ಟ ಬುದ್ಧಿ ಇತ್ತು. ಪಾದ್ರಿ ಸ್ಥಾನಕ್ಕೆ ರಾಜಿನಾಮೆ ಕೊಟ್ಟ ಮೇಲೆ, ಅವನು ಒಬ್ಬ ಫ್ರೆಂಚ್‌ ರಾಜಕುಮಾರಿಯನ್ನು ಮದುವೆಯಾಗಿ ಹೀಗೆ ವಲೆಂಟಿನಾಯ್‌ ಎಂಬ ಸ್ಥಳದ ಡ್ಯೂಕ್‌ ದೊರೆಯಾದನು. ಆ ಬಳಿಕ ಫ್ರೆಂಚ್‌ ಸೈನ್ಯಗಳ ಬೆಂಬಲದಿಂದ, ಅವನು ಇಟಲಿಯ ಉತ್ತರ ಭಾಗವನ್ನು ತನ್ನ ನಿಯಂತ್ರಣದಡಿ ತರಲಿಕ್ಕಾಗಿ ಮುತ್ತಿಗೆ ಮತ್ತು ಕೊಲೆಗಳ ಕಾರ್ಯಾಚರಣೆಯನ್ನು ಕೈಕೊಂಡನು.

ಫ್ರಾನ್ಸ್‌ನ XIIನೆಯ ಲೂಯಿಗೆ, ಬ್ರಿಟನಿಯ ಆ್ಯನ್‌ಳನ್ನು ಮದುವೆಯಾಗಿ ಆಕೆಯ ಆಧಿಪತ್ಯವನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಳ್ಳುವಂತೆ ಅನುಮತಿಸುವಂಥ ಅನುಕೂಲವಾದ​—ಆದರೆ ಅಪನಿಂದೆಯನ್ನು ತಂದಂಥ​—ವಿವಾಹ ವಿಚ್ಛೇದನೆಯು ಬೇಕಾಗಿತ್ತು. ಪೋಪನು, ಈ ವಿಚ್ಛೇದನಕ್ಕೆ ಒಪ್ಪಿಗೆಯನ್ನು ಕೊಟ್ಟನು, ಏಕೆಂದರೆ ಚೇಸಾರೇಯ ಗುರಿಗಳನ್ನು ಬೆನ್ನಟ್ಟಲಿಕ್ಕಾಗಿ ಅವನಿಗೆ ಅಗತ್ಯವಿದ್ದ ಫ್ರೆಂಚ್‌ ಸೈನ್ಯದ ಬೆಂಬಲವನ್ನು ಅವನು ಗಿಟ್ಟಿಸಲು ಬಯಸಿದನು. ಕಾರ್ಯತಃ, ಒಂದು ಪರಾಮರ್ಶೆ ಗ್ರಂಥ ಹೇಳುವ ಮೇರೆಗೆ, ಪೋಪನು “ತನ್ನ ಕುಟುಂಬದವರಿಗೋಸ್ಕರ ಐಹಿಕ ಪ್ರಯೋಜನಗಳನ್ನು ಗಳಿಸಲಿಕ್ಕಾಗಿ ಚರ್ಚಿನ ಪ್ರತಿಷ್ಠೆಯನ್ನೂ ಕಟ್ಟುನಿಟ್ಟಿನ ಮೂಲತತ್ತ್ವಗಳನ್ನೂ ಬಲಿಕೊಟ್ಟನು.”

ಪೋಪರ ಅತಿರೇಕ ನಡವಳಿಕೆಯ ಟೀಕೆ

ಬಾರ್ಜಾ ಕುಟುಂಬದ ಅತಿರೇಕ ನಡವಳಿಕೆಯಿಂದಾಗಿ ವೈರಿಗಳು ಹುಟ್ಟಿದರು ಮತ್ತು ಟೀಕೆಗೆ ಕಾರಣವಾಯಿತು. ಪೋಪನು ಸಾಮಾನ್ಯವಾಗಿ ತನ್ನ ಟೀಕಾಕಾರರನ್ನು ಅಲಕ್ಷಿಸಿದನು. ಆದರೆ ಅವನು ಅಲಕ್ಷಿಸಲಾಗದಿದ್ದ ಒಬ್ಬನು ಜಿರಲಾಮೋ ಸ್ಯಾವನರೋಲ ಎಂಬವನಾಗಿದ್ದನು. ಅವನು ಒಬ್ಬ ಡೊಮಿನಿಕನ್‌ ಸಂನ್ಯಾಸಿಯೂ, ಕೆಂಡ ಕಾರುವ ಬೋಧಕನೂ, ಫ್ಲಾರೆನ್ಸ್‌ನ ರಾಜಕೀಯ ನಾಯಕನೂ ಆಗಿದ್ದನು. ಪೋಪರ ಆಸ್ಥಾನದಲ್ಲಿದ್ದ ದುಶ್ಚಟಗಳನ್ನು ಮತ್ತು ಸ್ವತಃ ಪೋಪನ ಕೃತ್ಯಗಳನ್ನೂ ರಾಜಕೀಯವನ್ನೂ ಅವನು ಖಂಡಿಸಿದನು. ಪೋಪನನ್ನು ತೆಗೆದು ಹಾಕಬೇಕೆಂದೂ ಚರ್ಚಿನಲ್ಲಿ ಸುಧಾರಣೆಗಳನ್ನು ತರಬೇಕೆಂದೂ ಅವನು ಕರೆಕೊಟ್ಟನು. ಸ್ಯಾವನರೋಲ ಆರ್ಭಟಿಸಿದ್ದು: “ಚರ್ಚ್‌ ನಾಯಕರೇ, . . . ನೀವು ರಾತ್ರಿ ವೇಳೆ ನಿಮ್ಮ ಉಪಪತ್ನಿಯರ ಬಳಿ ಹೋಗಿ ಬೆಳಿಗ್ಗೆ ಪ್ರಭು ಭೋಜನದಲ್ಲಿ ತೊಡಗುತ್ತೀರಿ.” ಅವನು ಆ ಬಳಿಕ ಹೇಳಿದ್ದು: “[ಆ ನಾಯಕರ] ಮುಖ ವೇಶ್ಯೆಯದ್ದು, ಅವರ ಪ್ರಸಿದ್ಧಿ ಚರ್ಚಿಗೆ ಹಾನಿಮಾಡುತ್ತದೆ. ನಾನು ಹೇಳುವುದೇನಂದರೆ, ಇವರಿಗೆ ಕ್ರೈಸ್ತ ನಂಬಿಕೆಯಲ್ಲಿ ವಿಶ್ವಾಸವಿಲ್ಲ.”

ಸ್ಯಾವನರೋಲನ ಬಾಯಿಮುಚ್ಚಿಸುವ ಉದ್ದೇಶದಿಂದ ಪೋಪನು ಅವನಿಗೆ ಕಾರ್ಡಿನಲನ ಸ್ಥಾನವನ್ನು ನೀಡಿದನು, ಆದರೆ ಅವನದನ್ನು ನಿರಾಕರಿಸಿದನು. ಅವನ ದುರ್ಗತಿಗೆ ಕಾರಣ, ಪೋಪನ ವಿರುದ್ಧ ಅವನು ನಡೆಸಿದ ರಾಜಕೀಯವೊ ಇಲ್ಲವೆ ಅವನ ಸಾರುವಿಕೆಯೊ ಆಗಿದ್ದಿರಬಹುದು. ಆದರೆ ಅಂತಿಮವಾಗಿ ಸ್ಯಾವನರೋಲನನ್ನು ಚರ್ಚಿನಿಂದ ಬಹಿಷ್ಕರಿಸಲಾಯಿತು, ದಸ್ತಗಿರಿ ಮಾಡಲಾಯಿತು, ಮತ್ತು ಅವನನ್ನು ಚಿತ್ರಹಿಂಸೆಗೊಳಪಡಿಸಿ ತಪ್ಪೊಪ್ಪಿಕೊಳ್ಳುವಂತೆ ಬಲಾತ್ಕರಿಸಲಾಯಿತು. ಕೊನೆಗೆ ಅವನನ್ನು ಗಲ್ಲಿಗೇರಿಸಿ, ಸುಡಲಾಯಿತು.

ಗಂಭೀರವಾದ ಪ್ರಶ್ನೆಗಳು

ಈ ಮೇಲಿನ ಐತಿಹಾಸಿಕ ಘಟನೆಗಳು ಪ್ರಾಮುಖ್ಯ ಪ್ರಶ್ನೆಗಳನ್ನು ಎಬ್ಬಿಸುತ್ತವೆ. ಪೋಪನೊಬ್ಬನ ಇಂತಹ ಪಿತೂರಿಗಳಿಗೆ ಮತ್ತು ದುರ್ನಡತೆಗೆ ಯಾವ ವಿವರಣೆಯನ್ನು ಕೊಡಸಾಧ್ಯವಿದೆ? ಇತಿಹಾಸಕಾರರು ಅವನ್ನು ಹೇಗೆ ವಿವರಿಸುತ್ತಾರೆ? ವಿವಿಧ ತರ್ಕಸರಣಿಗಳನ್ನು ಉಪಯೋಗಿಸಲಾಗುತ್ತದೆ.

ಈ VIನೆಯ ಅಲೆಗ್ಸಾಂಡರನನ್ನು, ಅವನು ಜೀವಿಸುತ್ತಿದ್ದ ಸಮಯದ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳಬೇಕೆಂದು ಅನೇಕರ ಅಭಿಪ್ರಾಯ. ಅವನ ರಾಜಕೀಯ ಹಾಗೂ ಧರ್ಮಾಚಾರಗಳು ಶಾಂತಿಯನ್ನು ಕಾಪಾಡುವ, ಎದುರಾಳಿ ರಾಜ್ಯಗಳ ಮಧ್ಯೆ ಸಂತುಲನ ಕಾಪಾಡುವ, ಪೋಪರ ಅಧಿಕಾರವನ್ನು ಸಮರ್ಥಿಸುವ ಮಿತ್ರಪಕ್ಷಗಳೊಂದಿಗೆ ಮೈತ್ರಿಯನ್ನು ಬಲಪಡಿಸುವ, ಮತ್ತು ಕ್ರೈಸ್ತಪ್ರಪಂಚದ ಅರಸರನ್ನು ತುರ್ಕಿಯರಿಂದ ಬರುತ್ತಿದ್ದ ಅಪಾಯದ ವಿರುದ್ಧ ಐಕ್ಯವಾಗಿರಿಸುವ ಉದ್ದೇಶವುಳ್ಳದ್ದಾಗಿತ್ತು ಎಂದು ಅವರು ಅಭಿಪ್ರಯಿಸುತ್ತಾರೆ.

ಆದರೆ ಅವನ ನಡತೆಯ ಕುರಿತಾಗಿ ಏನು? ಒಬ್ಬ ವಿದ್ವಾಂಸನು ಹೇಳುವುದು: “ಚರ್ಚಿನ ಪ್ರತಿಯೊಂದು ಯುಗವೂ ಕೆಟ್ಟ ಕ್ರೈಸ್ತರನ್ನೂ ಅಯೋಗ್ಯ ಪಾದ್ರಿಗಳನ್ನೂ ಕಂಡಿದೆ. ಇದರಿಂದ ಯಾರೂ ತಲ್ಲಣಗೊಳ್ಳದಿರುವಂತೆ, ಕ್ರಿಸ್ತನು ತಾನೇ ಅದನ್ನು ಮುಂತಿಳಿಸಿದನು. ಅವನು ತನ್ನ ಚರ್ಚನ್ನು ಒಂದು ಹೊಲಕ್ಕೆ, ಒಳ್ಳೆಯ ಗೋದಿ ಮತ್ತು ಹಣಜಿ ಬೆಳೆಯುವ ಹೊಲಕ್ಕೆ ಅಥವಾ ಒಳ್ಳೆಯ ಮತ್ತು ಕೆಟ್ಟ ಮೀನಿರುವ ಬಲೆಗೆ ಹೋಲಿಸಿದನು. ಅವನು ಸಹ ಅಪೊಸ್ತಲರ ಮಧ್ಯೆ ಒಬ್ಬ ಯೂದನನ್ನೂ ಸಹಿಸಿಕೊಂಡನು.” *

ಅದೇ ವಿದ್ವಾಂಸನು ಮುಂದುವರಿಸುವುದು: “ನ್ಯೂನತೆಯಿರುವ ಹಿನ್ನೆಲೆ ಒಂದು ರತ್ನದ ಬೆಲೆಯನ್ನು ಕಡಮೆ ಮಾಡದಿರುವಂತೆಯೇ, ಒಬ್ಬ ಪಾದ್ರಿಯ ಪಾಪವು . . . ಅವನು ಬೋಧಿಸುವ ಬೋಧನೆಯನ್ನು ಕೆಡಿಸದು. . . . ಕೊಡುವ ಕೈ ಶುದ್ಧವಾಗಿರಲಿ, ಅಶುದ್ಧವಾಗಿರಲಿ, ಚಿನ್ನವು ಚಿನ್ನವಾಗಿಯೇ ಉಳಿಯುತ್ತದೆ.” VIನೆಯ ಅಲೆಗ್ಸಾಂಡರನ ಸಂಬಂಧದಲ್ಲಿ ಯಥಾರ್ಥವಂತರಾದ ಕ್ಯಾಥೊಲಿಕರು, ‘ಅವರು ಹೇಳುವಂತೆ ಮಾಡು, ನಡೆಯುವಂತಲ್ಲ’ ಎಂದು ಯೇಸು ತನ್ನ ಶಿಷ್ಯರಿಗೆ ಶಾಸ್ತ್ರಿಗಳ ಮತ್ತು ಫರಿಸಾಯರ ವಿಷಯದಲ್ಲಿ ಕೊಟ್ಟ ಬುದ್ಧಿವಾದವನ್ನು ಪಾಲಿಸಬೇಕಿತ್ತೆಂದು ಒಬ್ಬ ಕ್ಯಾಥೊಲಿಕ್‌ ಇತಿಹಾಸಕಾರನು ವಾದಿಸುತ್ತಾನೆ. (ಮತ್ತಾಯ 23:​2, 3) ಆದರೆ ಸತ್ಯವಾಗಿ ಹೇಳುವುದಾದರೆ, ಇಂತಹ ತರ್ಕವು ನಿಮ್ಮ ಮನವೊಪ್ಪಿಸುತ್ತದೊ?

ಇದು ನಿಜ ಕ್ರೈಸ್ತತ್ವವೊ?

ಕ್ರೈಸ್ತರೆಂದು ಹೇಳಿಕೊಳ್ಳುವವರ ಗುಣಮಟ್ಟವನ್ನು ಪರೀಕ್ಷಿಸಲು ಯೇಸು ಒಂದು ಸರಳವಾದ ಸೂತ್ರವನ್ನು ಬಿಟ್ಟುಹೋದನು: “ಅವರ ಫಲಗಳಿಂದ ಅವರನ್ನು ತಿಳುಕೊಳ್ಳುವಿರಿ. ಮುಳ್ಳುಗಿಡಗಳಲ್ಲಿ ದ್ರಾಕ್ಷೇಹಣ್ಣುಗಳನ್ನೂ ಮದ್ದುಗುಣಿಕೇಗಿಡಗಳಲ್ಲಿ ಅಂಜೂರಗಳನ್ನೂ ಕೊಯ್ಯುವದುಂಟೇ? ಹಾಗೆಯೇ ಒಳ್ಳೇ ಮರಗಳೆಲ್ಲಾ ಒಳ್ಳೇ ಫಲವನ್ನು ಕೊಡುವವು; ಹುಳುಕು ಮರವು ಕೆಟ್ಟ ಫಲವನ್ನು ಕೊಡುವದು. ಒಳ್ಳೇ ಮರವು ಕೆಟ್ಟ ಫಲವನ್ನು ಕೊಡಲಾರದು; ಹುಳುಕು ಮರವು ಒಳ್ಳೇ ಫಲವನ್ನು ಕೊಡಲಾರದು. ಹೀಗಿರಲಾಗಿ ಅವರ ಫಲಗಳಿಂದ ಅವರನ್ನು ತಿಳಿದುಕೊಳ್ಳುವಿರಿ.”​—ಮತ್ತಾಯ 7:16-18, 20.

ಹಾಗಾದರೆ ಸಾಮಾನ್ಯವಾಗಿ, ಗತ ಶತಮಾನಗಳಲ್ಲಿ ಧಾರ್ಮಿಕ ಮುಖಂಡರು ಈ ಮಟ್ಟವನ್ನು ಎಷ್ಟರ ಮಟ್ಟಿಗೆ ಪಾಲಿಸಿದ್ದಾರೆ, ಮತ್ತು ಯೇಸು ಸ್ಥಾಪಿಸಿದ ಹಾಗೂ ಅವನ ನಿಜ ಹಿಂಬಾಲಕರು ಅನುಸರಿಸಿದ ಸತ್ಯ ಕ್ರೈಸ್ತತ್ವದ ನಮೂನೆಗನುಸಾರ ಅವರು ಇಂದು ಎಷ್ಟರ ಮಟ್ಟಿಗೆ ನಡೆಯುತ್ತಾರೆ? ರಾಜಕೀಯ ಒಳಗೊಳ್ಳುವಿಕೆ ಮತ್ತು ಜೀವನಶೈಲಿ​—ಈ ಎರಡು ಕ್ಷೇತ್ರಗಳನ್ನು ಮಾತ್ರ ನಾವು ಪರಿಗಣಿಸೋಣ.

ಯೇಸು ಲೌಕಿಕ ರಾಜಕುಮಾರನಂತೆ ಜೀವಿಸಲಿಲ್ಲ. ಅವನು ಎಷ್ಟು ಸರಳವಾಗಿ ಜೀವಿಸಿದನೆಂದರೆ, ತನಗೆ “ತಲೆಯಿಡುವಷ್ಟು ಸ್ಥಳವೂ ಇಲ್ಲ” ಎಂದು ಅವನು ಒಪ್ಪಿಕೊಂಡನು. ಅವನ ರಾಜ್ಯವು “ಈ ಲೋಕದ್ದಲ್ಲ” ಮತ್ತು ತಾನು “ಲೋಕದವನಲ್ಲದೆ ಇರುವ ಪ್ರಕಾರ” ಅವನ ಶಿಷ್ಯರು “ಲೋಕದವರಲ್ಲ.” ಹೀಗೆ ಯೇಸು ತನ್ನ ದಿನದಲ್ಲಿದ್ದ ರಾಜಕೀಯ ವ್ಯವಹಾರಗಳಲ್ಲಿ ಒಳಗೂಡಲು ನಿರಾಕರಿಸಿದನು.​—ಮತ್ತಾಯ 8:20; ಯೋಹಾನ 6:15; 17:16; 18:36.

ಆದರೆ ಶತಮಾನಗಳಿಂದಲೂ ಧಾರ್ಮಿಕ ಸಂಸ್ಥೆಗಳು ಅಧಿಕಾರ ಮತ್ತು ಪ್ರಾಪಂಚಿಕ ಲಾಭಕ್ಕಾಗಿ, ಜನಸಾಮಾನ್ಯರು ಇದರಿಂದ ಕಷ್ಟಾನುಭವಿಸಿದರೂ ರಾಜಕೀಯ ಪ್ರಭುಗಳೊಂದಿಗೆ ಮೈತ್ರಿ ಬೆಳೆಸಿದ್ದಾರೆಂಬುದು ನಿಜವಲ್ಲವೊ? ಅಲ್ಲದೆ, ಈ ಸಂಸ್ಥೆಗಳ ಅನೇಕ ಪಾದ್ರಿಗಳು ಯಾರ ಸೇವೆ ಮಾಡಬೇಕೊ ಆ ಜನರಲ್ಲಿ ಬಹುಸಂಖ್ಯಾತರು ಕಡು ಬಡತನದಲ್ಲಿ ಬಳಲುತ್ತಿರುವಾಗ, ಇವರು ಐಷಾರಾಮದ ಜೀವನವನ್ನು ನಡೆಸುತ್ತಿದ್ದಾರೆಂಬುದೂ ನಿಜವಲ್ಲವೊ?

ಯೇಸುವಿನ ಮಲಸಹೋದರ ಯಾಕೋಬನು ಹೇಳಿದ್ದು: “ವ್ಯಭಿಚಾರಿಗಳು ನೀವು; ಇಹಲೋಕಸ್ನೇಹವು ದೇವವೈರವೆಂದು ನಿಮಗೆ ತಿಳಿಯದೋ? ಲೋಕಕ್ಕೆ ಸ್ನೇಹಿತನಾಗಬೇಕೆಂದಿರುವವನು ತನ್ನನ್ನು ದೇವರಿಗೆ ವಿರೋಧಿಯನ್ನಾಗಿ ಮಾಡಿಕೊಳ್ಳುತ್ತಾನೆ.” (ಯಾಕೋಬ 4:4) ಅವನೇಕೆ “ದೇವರಿಗೆ ವಿರೋಧಿ”? ಏಕೆಂದರೆ 1 ಯೋಹಾನ 5:19 ಹೇಳುವುದು: “ಲೋಕವೆಲ್ಲವು ಕೆಡುಕನ ವಶದಲ್ಲಿ ಬಿದ್ದಿದೆ.”

VIನೆಯ ಅಲೆಗ್ಸಾಂಡರನ ನೈತಿಕ ನಡತೆಯ ಕುರಿತು ಬಾರ್ಜಾರವರ ಸಮಯದ ಒಬ್ಬ ಇತಿಹಾಸಕಾರನು ಬರೆದದ್ದು: “ಅವನ ಜೀವನಶೈಲಿ ನೀತಿಗೆಟ್ಟದ್ದಾಗಿತ್ತು. ಅವನಿಗೆ ನಾಚಿಕೆಯೂ ಇರಲಿಲ್ಲ, ಯಥಾರ್ಥತೆಯೂ ಇರಲಿಲ್ಲ; ನಂಬಿಕೆಯೂ ಇರಲಿಲ್ಲ, ಧರ್ಮವೂ ಇರಲಿಲ್ಲ. ಅವನು ತಣಿಸಲಾಗದ ದುರಾಶೆ, ವಿಪರೀತ ಮಹತ್ವಾಕಾಂಕ್ಷೆ, ಪಾಶವೀಯ ಕ್ರೌರ್ಯ ಮತ್ತು ಅವನ ಅನೇಕ ಮಂದಿ ಮಕ್ಕಳ ಪ್ರಗತಿಯ ಗೀಳು ಹಿಡಿದವನಾಗಿದ್ದನು.” ಆದರೆ, ಕ್ರೈಸ್ತಮಠೀಯ ಪುರೋಹಿತ ಪ್ರಭುತ್ವದ ಸದಸ್ಯರಲ್ಲಿ ಈ ರೀತಿಯಲ್ಲಿ ನಡೆದವನು ಬಾರ್ಜಾ ಒಬ್ಬನೇ ಆಗಿರಲಿಲ್ಲವೆಂಬುದು ಖಂಡಿತ.

ಇಂತಹ ದುರ್ನಡತೆಯ ವಿಷಯದಲ್ಲಿ ಶಾಸ್ತ್ರವು ಏನನ್ನುತ್ತದೆ? ಅಪೊಸ್ತಲ ಪೌಲನು, “ಅನ್ಯಾಯಗಾರರು ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲವೆಂಬದು ನಿಮಗೆ ತಿಳಿಯದೋ?” ಎಂದು ಕೇಳಿದ ಮೇಲೆ ಉತ್ತರಕೊಟ್ಟದ್ದು: “ಮೋಸಹೋಗಬೇಡಿರಿ, ಜಾರರು . . . ವ್ಯಭಿಚಾರಿಗಳು . . . ಲೋಭಿಗಳು . . . ಇವರೊಳಗೆ ಒಬ್ಬರಾದರೂ ದೇವರ ರಾಜ್ಯಕ್ಕೆ ಬಾಧ್ಯರಾಗುವದಿಲ್ಲ.”​—1 ಕೊರಿಂಥ 6:9, 10.

ರೋಮ್‌ನಲ್ಲಿ ಬಾರ್ಜಾ ಕುಟುಂಬದ ಸಂಬಂಧದಲ್ಲಿ ಇತ್ತೀಚೆಗೆ ನಡೆದ ಪ್ರದರ್ಶನದ ಉದ್ದೇಶಗಳಲ್ಲಿ ಒಂದು, “ಈ ಮಹಾ ವ್ಯಕ್ತಿಗಳನ್ನು ಅವರ ಐತಿಹಾಸಿಕ ಪೂರ್ವಾಪರದಲ್ಲಿರಿಸುವುದು . . . , ನಿಶ್ಚಿತವಾಗಿಯೂ ಅವರನ್ನು ನಿರಪರಾಧಿಗಳೆಂದು ಹೇಳಲಿಕ್ಕಾಗಲಿ, ಖಂಡಿಸಲಿಕ್ಕಾಗಲಿ ಅಲ್ಲ ಬದಲಾಗಿ ಅವರನ್ನು ಅರ್ಥಮಾಡಿಕೊಳ್ಳುವುದು” ಆಗಿತ್ತು. ವಾಸ್ತವವೇನಂದರೆ, ಸಂದರ್ಶಕರು ತಮ್ಮ ಸ್ವಂತ ತೀರ್ಮಾನವನ್ನು ಮಾಡಬಹುದಿತ್ತು. ಹಾಗಾದರೆ, ನೀವು ಯಾವ ತೀರ್ಮಾನಕ್ಕೆ ಬಂದಿದ್ದೀರಿ?

[ಪಾದಟಿಪ್ಪಣಿ]

^ ಪ್ಯಾರ. 20 ಈ ಸಾಮ್ಯಗಳ ನಿಷ್ಕೃಷ್ಟ ವಿವರಣೆಗಳಿಗೆ, ಫೆಬ್ರವರಿ 1, 1995ರ ಕಾವಲಿನಬುರುಜು 5-6ನೇ ಪುಟಗಳು, ಮತ್ತು ಸೆಪ್ಟೆಂಬರ್‌ 15, 1992, 17-22ನೇ ಪುಟಗಳನ್ನು ನೋಡಿ.

[ಪುಟ 26ರಲ್ಲಿರುವ ಚಿತ್ರ]

ರೋಡ್ರೀಗೋ ಬಾರ್ಜಾ, VIನೆಯ ಪೋಪ್‌ ಅಲೆಗ್ಸಾಂಡರ್‌

[ಪುಟ 27ರಲ್ಲಿರುವ ಚಿತ್ರ]

ಲೂಕ್ರೇಟ್‌ಸ್ಯಾ ಬಾರ್ಜಾಳ ತಂದೆ ತನ್ನ ಅಧಿಕಾರವನ್ನು ಹೆಚ್ಚಿಸಲು ಆಕೆಯನ್ನು ಉಪಯೋಗಿಸಿದನು

[ಪುಟ 28ರಲ್ಲಿರುವ ಚಿತ್ರ]

ಚೇಸಾರೇ ಬಾರ್ಜಾ ಹೆಬ್ಬಯಕೆಯವನೂ ಭ್ರಷ್ಟನೂ ಆಗಿದ್ದನು

[ಪುಟ 29ರಲ್ಲಿರುವ ಚಿತ್ರ]

ಜಿರಲಾಮೋ ಸ್ಯಾವನರೋಲನ ಬಾಯಿಮುಚ್ಚಿಸಲು ಆಗದಿದ್ದುದರಿಂದ ಅವನನ್ನು ಗಲ್ಲಿಗೇರಿಸಿ ಸುಡಲಾಯಿತು