ಅತ್ಯಂತ ಉದಾತ್ತ ರೀತಿಯ ಪ್ರೀತಿ
ಅತ್ಯಂತ ಉದಾತ್ತ ರೀತಿಯ ಪ್ರೀತಿ
ಕ್ರೈಸ್ತ ಗ್ರೀಕ್ ಶಾಸ್ತ್ರಗಳಲ್ಲಿ ಇಲ್ಲವೆ ಹೊಸ ಒಡಂಬಡಿಕೆಯಲ್ಲಿ ಅಧಿಕಾಂಶ ಸ್ಥಳಗಳಲ್ಲಿ “ಪ್ರೀತಿ” ಎಂಬ ಪದವು, ಆಘಾಪೀ ಎಂಬ ಗ್ರೀಕ್ ಪದದ ಭಾಷಾಂತರವಾಗಿದೆ.
ಆ ಪದದ ಅರ್ಥವನ್ನು ವಿವರಿಸುತ್ತಾ, ಶಾಸ್ತ್ರಗಳ ಕುರಿತಾದ ಒಳನೋಟ * ಎಂಬ ಪರಾಮರ್ಶೆ ಕೃತಿಯು ಹೇಳುವುದು: “ಸಾಮಾನ್ಯವಾಗಿ ಯೋಚಿಸಲಾಗುವಂತೆ [ಆಘಾಪೀ] ಕೇವಲ ವೈಯಕ್ತಿಕ ಅಂಟಿಕೆಯ ಮೇಲಾಧರಿತವಾದ ಭಾವಾವೇಶ ಅಲ್ಲ, ಬದಲಾಗಿ ಒಂದು ನೈತಿಕ ಇಲ್ಲವೆ ಸಾಂಘಿಕ ಪ್ರೀತಿಯಾಗಿದೆ. ಈ ಪ್ರೀತಿಯನ್ನು ತೋರಿಸುವುದು ತತ್ತ್ವ, ಕರ್ತವ್ಯ ಮತ್ತು ಔಚಿತ್ಯದ ವಿಷಯವಾಗಿರುವುದರಿಂದ, ಅದು ಮುಂಚಿತವಾಗಿಯೇ ಮಾಡಿರುವ ದೃಢನಿರ್ಧಾರದ ಮೇಲೆ ಆಧಾರಿತವಾಗಿರುತ್ತದೆ ಮತ್ತು ಯಾವುದು ಯಥೋಚಿತವಾಗಿದೆಯೊ ಅದಕ್ಕನುಗುಣವಾಗಿ ಇನ್ನೊಬ್ಬ ವ್ಯಕ್ತಿಗೆ ಹಿತವನ್ನು ಮಾಡಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತದೆ. ಆಘಾಪೀ (ಪ್ರೀತಿ) ವೈಯಕ್ತಿಕ ಹಗೆತನಗಳಿಗಿಂತಲೂ ಮೇಲೇರುತ್ತದೆ, ಅಂದರೆ ಈ ಹಗೆತನಗಳು ಸರಿಯಾದ ತತ್ತ್ವಗಳನ್ನು ತೊರೆಯುವಂತೆ ಮತ್ತು ಆ ವ್ಯಕ್ತಿ ಮಾಡಿದಂತೆಯೇ ಮಾಡಿ ಪ್ರತೀಕಾರ ಸಲ್ಲಿಸುವಂತೆ ಅನುಮತಿಸುವುದಿಲ್ಲ.”
ಆಘಾಪೀ ಪ್ರೀತಿಯಲ್ಲಿ ಗಾಢವಾದ ಭಾವನೆಯೂ ಒಳಗೂಡಿರಬಲ್ಲದು. “ನಿಮ್ಮನಿಮ್ಮೊಳಗೆ ಯಥಾರ್ಥವಾದ ಪ್ರೀತಿ [ಆಘಾಪೀ]ಯಿರಲಿ” ಎಂದು ಅಪೊಸ್ತಲ ಪೇತ್ರನು ಬುದ್ಧಿವಾದ ನೀಡಿದನು. (1 ಪೇತ್ರ 4:8, ಓರೆ ಅಕ್ಷರಗಳು ನಮ್ಮವು.) ಹೀಗೆ, ಆಘಾಪೀ ಪ್ರೀತಿಯಲ್ಲಿ, ಹೃದಯ ಹಾಗೂ ಮನ ಎರಡೂ ಒಳಗೂಡಿವೆಯೆಂದು ಹೇಳಸಾಧ್ಯವಿದೆ. ಪ್ರೀತಿಯ ಈ ಉದಾತ್ತ ರೂಪದ ಶಕ್ತಿ ಹಾಗೂ ವ್ಯಾಪ್ತಿಯನ್ನು ತೋರಿಸುವ ಕೆಲವೊಂದು ಶಾಸ್ತ್ರವಚನಗಳನ್ನು ಏಕೆ ಪರಿಗಣಿಸಬಾರದು? ಈ ಮುಂದಿನ ವಚನಗಳು ಸಹಾಯಕಾರಿಯಾಗಿರಬಲ್ಲವು: ಮತ್ತಾಯ 5:43-47; ಯೋಹಾನ 15:12, 13; ರೋಮಾಪುರ 13:8-10; ಎಫೆಸ 5:2, 25, 28; 1 ಯೋಹಾನ 3:15-18; 4:16-21.
[ಪಾದಟಿಪ್ಪಣಿ]
^ ಪ್ಯಾರ. 3 ಯೆಹೋವನ ಸಾಕ್ಷಿಗಳಿಂದ ಪ್ರಕಾಶಿತ. ಕನ್ನಡದಲ್ಲಿ ಲಭ್ಯವಿಲ್ಲ.