ಅವುಗಳಿಗೆ ಏನಾಯಿತು?
ಅವುಗಳಿಗೆ ಏನಾಯಿತು?
ಒಂದು ಕಾಲದಲ್ಲಿ ಐಗುಪ್ತದ ಪ್ರಸಿದ್ಧ ರಾಜಧಾನಿಗಳಾಗಿದ್ದ ಮೆಂಫಿಸ್ ಮತ್ತು ಥೀಬ್ಸ್ ಎಂಬ ನಗರಗಳಿಗೆ ಬೈಬಲ್ ಹೆಸರುಗಳು ನೋಫ್ ಮತ್ತು ನೋ ಎಂದಾಗಿದ್ದವು. ನೋಫ್ (ಮೆಂಫಿಸ್), ನೈಲ್ ನದಿಯ ಪಶ್ಚಿಮ ದಿಕ್ಕಿನಲ್ಲಿದ್ದ ಕೈರೊವಿನ ದಕ್ಷಿಣಕ್ಕೆ ಸುಮಾರು 23 ಕಿಲೊಮೀಟರ್ ದೂರದಲ್ಲಿತ್ತು. ಆದರೆ ಕಾಲಾನಂತರ, ಐಗುಪ್ತದ ರಾಜಧಾನಿಯಾಗಿದ್ದ ತನ್ನ ಸ್ಥಾನವನ್ನು ಮೆಂಫಿಸ್ ಕಳೆದುಕೊಂಡಿತು. ಸಾ.ಶ.ಪೂ. 15ನೆಯ ಶತಮಾನದ ಆರಂಭದೊಳಗೆ, ಮೆಂಫಿಸ್‌ನ ದಕ್ಷಿಣಕ್ಕೆ ಸುಮಾರು 500 ಕಿಲೊಮೀಟರ್ ದೂರದಲ್ಲಿದ್ದ ನೋ (ಥೀಬ್ಸ್) ಐಗುಪ್ತದ ಹೊಸ ರಾಜಧಾನಿಯಾಯಿತು. ಥೀಬ್ಸ್‌ನಲ್ಲಿರುವ ದೇವಸ್ಥಾನಗಳ ಅನೇಕ ಅವಶೇಷಗಳಲ್ಲಿ, ಕಾರ್ನಾಕ್ ಒಂದಾಗಿದೆ. ಇದು ಆಧಾರಸ್ತಂಭಗಳಿಂದ ಕಟ್ಟಲ್ಪಟ್ಟ ಅತಿ ದೊಡ್ಡ ಕಟ್ಟಡ ರಚನೆಯೆಂದು ಪರಿಗಣಿಸಲ್ಪಟ್ಟಿದೆ. ಥೀಬ್ಸ್ ಮತ್ತು ಅದರ ಕಾರ್ನಾಕ್ ದೇವಸ್ಥಾನವು, ಐಗುಪ್ತರ ಮುಖ್ಯ ದೇವನಾದ ಆಮೋನ್‌ಗೆ ಅರ್ಪಿಸಲ್ಪಟ್ಟಿದ್ದವು.
ಮೆಂಫಿಸ್ ಮತ್ತು ಥೀಬ್ಸ್‌ನ ಕುರಿತಾಗಿ ಬೈಬಲ್ ಪ್ರವಾದನೆಯು ಏನನ್ನು ಮುಂತಿಳಿಸಿತು? ಐಗುಪ್ತದ ಫರೋಹ ಹಾಗೂ ಅದರ ದೇವರುಗಳು, ವಿಶೇಷವಾಗಿ ಅದರ ಮುಖ್ಯ ದೇವರಾದ ‘ನೋ ಪಟ್ಟಣದ ಆಮೋನ್’ ವಿರುದ್ಧ ನ್ಯಾಯದಂಡನೆಯನ್ನು ಘೋಷಿಸಲಾಯಿತು. (ಯೆರೆಮೀಯ 46:25, 26) ಅಲ್ಲಿಗೆ ಹಿಂಡುಹಿಂಡಾಗಿ ಬರುತ್ತಿದ್ದ ಆರಾಧಕರು ‘ಕತ್ತರಿಸಲ್ಪಡಲಿದ್ದರು.’ (ಯೆಹೆಜ್ಕೇಲ 30:14, 15) ಮತ್ತು ಹಾಗೆಯೇ ಆಯಿತು. ಆಮೋನ್‌ನ ಆರಾಧನೆಯಲ್ಲಿ ಉಳಿದಿರುವಂಥದ್ದು ದೇವಸ್ಥಾನದ ಅವಶೇಷಗಳಷ್ಟೇ. ಪ್ರಾಚೀನ ಥೀಬ್ಸ್ ಇದ್ದ ನಿವೇಶನದ ಒಂದು ಭಾಗದಲ್ಲಿ ಇಂದಿನ ಆಧುನಿಕ ಲಕ್ಸರ್ ಪಟ್ಟಣವು ನೆಲೆಸಿದೆ. ಮತ್ತು ಅದರ ಅವಶೇಷಗಳ ನಡುವೆ ಇನ್ನಿತರ ಚಿಕ್ಕಪುಟ್ಟ ಹಳ್ಳಿಗಳಿವೆ.
ಮೆಂಫಿಸ್ ವಿಷಯದಲ್ಲಾದರೊ, ಅದರ ಸ್ಮಶಾನಗಳನ್ನು ಬಿಟ್ಟರೆ ಬೇರೇನೂ ಉಳಿದಿಲ್ಲ. ಬೈಬಲ್ ವಿದ್ವಾಂಸನಾದ ಲೂಯಿ ಗೋಲ್ಡಿಂಗ್ ಹೇಳುವುದು: “ಐಗುಪ್ತವನ್ನು ಜಯಿಸಿದ ಅರಬ್ಬಿಯರು, ನೂರಾರು ವರ್ಷಗಳ ವರೆಗೆ ಮೆಂಫಿಸ್‌ನ ಬೃಹತ್ಗಾತ್ರದ ಅವಶೇಷಗಳನ್ನು, ನದಿಯಾಚೆ ತಮ್ಮ ರಾಜಧಾನಿಯನ್ನು [ಕೈರೊ] ಕಟ್ಟಲಿಕ್ಕಾಗಿ ಒಂದು ಕಲ್ಲುಗಣಿಯಾಗಿ ಉಪಯೋಗಿಸಿದರು. ನೈಲ್ ನದಿ ಮತ್ತು ಆ ಅರಬ್ಬಿ ನಗರ ನಿರ್ಮಾಪಕರು ತಮ್ಮ ಕೆಲಸವನ್ನು ಎಷ್ಟು ಚೆನ್ನಾಗಿ ಮಾಡಿದ್ದಾರೆಂದರೆ, ಆ ಪ್ರಾಚೀನ ನಗರದ ಕ್ಷೇತ್ರದಲ್ಲಿ ಅನೇಕಾನೇಕ ಮೈಲುಗಳ ವರೆಗೆ ಆ ಕಪ್ಪು ಮಣ್ಣಿನಿಂದ ಒಂದೇ ಒಂದು ಕಲ್ಲು ಸಹ ಹೊರಚಾಚಿಕೊಂಡಿರುವುದನ್ನು ನೋಡಸಾಧ್ಯವಿಲ್ಲ.” ನಿಜವಾಗಿಯೂ ಬೈಬಲಿನಲ್ಲಿ ಮುಂತಿಳಿಸಿದಂತೆಯೇ, ಮೆಂಫಿಸ್ ‘ಹಾಳಾಗಿ . . . ನಿರ್ಜನವಾಯಿತು.’—ಯೆರೆಮೀಯ 46:19.
ಬೈಬಲ್ ಪ್ರವಾದನೆಗಳ ನಿಷ್ಕೃಷ್ಟತೆಯನ್ನು ಪ್ರದರ್ಶಿಸುವಂಥ ಅನೇಕ ಉದಾಹರಣೆಗಳಲ್ಲಿ ಇವು ಕೇವಲ ಎರಡು. ಥೀಬ್ಸ್ ಮತ್ತು ಮೆಂಫಿಸ್ ನಗರಗಳ ಧ್ವಂಸವು, ಇನ್ನೂ ನೆರವೇರದಿರುವಂಥ ಬೈಬಲ್ ಪ್ರವಾದನೆಗಳಲ್ಲಿ ಭರವಸೆಯನ್ನಿಡಲು ನಮಗೆ ಬಲವಾದ ಕಾರಣಗಳನ್ನು ಕೊಡುತ್ತದೆ.—ಕೀರ್ತನೆ 37:10, 11, 29; ಲೂಕ 23:43; ಪ್ರಕಟನೆ 21:3-5.
[ಪುಟ 32ರಲ್ಲಿರುವ ಚಿತ್ರ ಕೃಪೆ]
Photograph taken by courtesy of the British Museum