ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಇತರರ ಸೇವೆಮಾಡುವುದು ನೋವನ್ನು ಸಹ್ಯಗೊಳಿಸುತ್ತದೆ

ಇತರರ ಸೇವೆಮಾಡುವುದು ನೋವನ್ನು ಸಹ್ಯಗೊಳಿಸುತ್ತದೆ

ಜೀವನ ಕಥೆ

ಇತರರ ಸೇವೆಮಾಡುವುದು ನೋವನ್ನು ಸಹ್ಯಗೊಳಿಸುತ್ತದೆ

ಹೂಲ್ಯಾನ್‌ ಆರ್ಯಾಸ್‌ ಅವರು ಹೇಳಿದಂತೆ

ಇಸವಿ 1988ರಲ್ಲಿ, ನಾನು 40 ವರ್ಷ ವಯಸ್ಸಿನವನಾದಾಗ ನನ್ನ ವೃತ್ತಿಜೀವನವು ಭದ್ರವಾಗಿದ್ದಂತೆ ತೋರುತ್ತಿತ್ತು. ಬಹುರಾಷ್ಟ್ರೀಯ ಕಂಪೆನಿಯೊಂದರಲ್ಲಿ ನಾನೊಬ್ಬ ರೀಜನಲ್‌ ಡೈರೆಕ್ಟರ್‌ ಆಗಿದ್ದೆ. ಈ ಉದ್ಯೋಗದಿಂದಾಗಿ ನನಗೊಂದು ದುಬಾರಿ ಕಾರು, ಒಳ್ಳೇ ಸಂಬಳ, ಮತ್ತು ಸ್ಪೆಯ್ನ್‌ ದೇಶದ ಮಡ್ರಿಡ್‌ ನಗರದ ಮಧ್ಯಭಾಗದಲ್ಲೇ ಒಂದು ಸೊಗಸಾದ ಆಫೀಸು ಇತ್ತು. ನಾನು ಆ ಕಂಪನಿಯ ನ್ಯಾಷನಲ್‌ ಡೈರಕ್ಟರ್‌ ಸಹ ಆಗಬಹುದೆಂದು ಪರೋಕ್ಷವಾಗಿ ಸೂಚನೆಯನ್ನು ಕೊಡಲಾಗಿತ್ತು. ಆದರೆ ನನ್ನ ಬದುಕಿನಲ್ಲಿ ಬೇಗನೆ ಒಂದು ದೊಡ್ಡ ಬದಲಾವಣೆಯು ಆಗಲಿತ್ತೆಂದು ನಾನು ಆಗ ನೆನಸಲೇ ಇಲ್ಲ.

ಆ ವರ್ಷದಲ್ಲೇ ಒಂದು ದಿನ, ನನ್ನ ವೈದ್ಯರು, ನನಗೆ ನರಜಡ್ಡು ರೋಗ (ಮಲ್ಟಿಪಲ್‌ ಸ್ಕ್ಲರೋಸಿಸ್‌) ಇದೆಯೆಂದು ಹೇಳಿದರು. ಇದು ಗುಣಪಡಿಸಲಾಗದಂಥ ರೋಗವಾಗಿದೆ. ಅದನ್ನು ಕೇಳಿದೊಡನೆ ನನಗೆ ಆಕಾಶವೇ ಕಳಚಿ ಬಿದ್ದಂತಾಯಿತು. ಈ ನರಜಡ್ಡು ರೋಗವು ಒಬ್ಬ ವ್ಯಕ್ತಿಯನ್ನು ಯಾವ ಸ್ಥಿತಿಗಿಳಿಸಬಲ್ಲದೆಂಬದನ್ನು ನಾನು ಆಮೇಲೆ ಓದಿನೋಡಿದಾಗ ಹೆದರಿಹೋದೆ. * ಒಂದು ನಾಣ್ಣುಡಿಯಂತೆ, ನನ್ನ ಉಳಿದ ಜೀವಮಾನವೆಲ್ಲಾ ನನ್ನ ತಲೆಯ ಮೇಲೆ ಕತ್ತಿ ನೇತಾಡಲಿರುವಂತೆ ನನಗೆ ಅನಿಸಿತು. ನನ್ನ ಪತ್ನಿ ಮಿಲಾಗ್ರೋಸ್‌ ಮತ್ತು ನನ್ನ ಮೂರು ವರ್ಷ ಪ್ರಾಯದ ಮಗ ಈಸ್ಮಾಎಲ್‌ನನ್ನು ನಾನು ಹೇಗೆ ಪರಾಮರಿಸುವೆ? ನಾವು ಅದನ್ನು ಹೇಗೆ ಯಶಸ್ವಿಯಾಗಿ ನಿಭಾಯಿಸುವೆವು? ಈ ಪ್ರಶ್ನೆಗಳ ಉತ್ತರಗಳಿಗಾಗಿ ನಾನಿನ್ನೂ ತಡಕಾಡುತ್ತಿದ್ದಾಗ, ನನಗೆ ಇನ್ನೊಂದು ದೊಡ್ಡ ಹೊಡೆತವು ಬಂತು.

ನನ್ನ ಕಾಯಿಲೆಯ ಬಗ್ಗೆ ವೈದ್ಯರು ನನಗೆ ತಿಳಿಸಿದ ಸುಮಾರು ಒಂದು ತಿಂಗಳ ನಂತರ, ನನ್ನ ಸೂಪರ್‌ವೈಸರ್‌ ನನ್ನನ್ನು ಅವರ ಆಫೀಸಿಗೆ ಕರೆದು, ಕಂಪೆನಿಗೆ “ಒಳ್ಳೆಯ ತೋರಿಕೆಯಿರುವ” ಜನರ ಅಗತ್ಯವಿದೆ ಎಂದು ಹೇಳಿದರು. ಮತ್ತು ಅಂಗ ವಿಕೃತಿಗೊಳಿಸುವಂಥ ರೋಗವುಳ್ಳ​—ಅದು ಆರಂಭದ ಹಂತಗಳಲ್ಲಿದ್ದರೂ​—ಒಬ್ಬ ವ್ಯಕ್ತಿಯು ಅಂಥ ತೋರಿಕೆಯನ್ನು ಕೊಡಲಾರನು. ಆದುದರಿಂದ, ಅಲ್ಲಿಯೇ ಆ ಕ್ಷಣವೇ ನನ್ನ ಬಾಸ್‌ ನನ್ನನ್ನು ಕೆಲಸದಿಂದ ತೆಗೆದುಹಾಕಿದರು. ಕಣ್ಮುಚ್ಚಿತೆರೆಯುವಷ್ಟರಲ್ಲಿ, ನನ್ನ ಐಹಿಕ ವೃತ್ತಿಜೀವನವು ಕೊನೆಗೊಂಡಿತ್ತು!

ನನ್ನ ಕುಟುಂಬದ ಮುಂದೆ ನಾನು ತುಂಬ ಧೀರನಾಗಿರುವ ಮುಖವಾಡವನ್ನು ಹಾಕಿಕೊಳ್ಳುತ್ತಿದ್ದೆ. ಆದರೆ ನಾನು ನನ್ನ ಹೊಸ ಪರಿಸ್ಥಿತಿಗಳ ಕುರಿತಾಗಿ ಯೋಚಿಸಲು ಮತ್ತು ನನ್ನ ಭವಿಷ್ಯದ ಕುರಿತಾಗಿ ಧ್ಯಾನಿಸಲು ಒಂಟಿಯಾಗಿರುವ ಸ್ವಲ್ಪ ಸಮಯಕ್ಕಾಗಿ ಹಾತೊರೆಯುತ್ತಿದ್ದೆ. ಹೆಚ್ಚುತ್ತಾ ಹೋಗುತ್ತಿದ್ದ ಖಿನ್ನತೆಯ ವಿರುದ್ಧ ಹೋರಾಡಲು ಪ್ರಯತ್ನಿಸಿದೆ. ನನ್ನ ಮನಸ್ಸಿಗೆ ಅತಿಯಾದ ನೋವನ್ನುಂಟುಮಾಡಿದ ಸಂಗತಿಯೇನೆಂದರೆ, ದಿನಬೆಳಗಾಗುವಷ್ಟರಲ್ಲಿ ನನ್ನ ಕಂಪೆನಿಯ ದೃಷ್ಟಿಯಲ್ಲಿ ನಾನು ನಿಷ್ಪ್ರಯೋಜಕನಾದೆ ಎಂಬುದೇ.

ಬಲಹೀನತೆಯಿಂದ ಬಲವನ್ನು ಕಂಡುಕೊಳ್ಳುವುದು

ಈ ಕರಾಳ ಸಮಯದಲ್ಲಿ ನನ್ನ ಬಳಿ ಬಲದ ಹಲವಾರು ಮೂಲಗಳಿದ್ದುದಕ್ಕೆ ನಾನು ಆಭಾರಿಯಾಗಿದ್ದೇನೆ. ಸುಮಾರು 20 ವರ್ಷಗಳ ಹಿಂದೆ ನಾನೊಬ್ಬ ಯೆಹೋವನ ಸಾಕ್ಷಿಯಾಗಿದ್ದೆ. ಆದುದರಿಂದ ನನ್ನ ಭಾವನೆಗಳ ಮತ್ತು ಭವಿಷ್ಯದ ಕುರಿತಾದ ನನ್ನ ಭೀತಿಯ ವಿಷಯವಾಗಿ ನಾನು ಪೂರ್ಣಮನಸ್ಸಿನಿಂದ ಯೆಹೋವನಿಗೆ ಪ್ರಾರ್ಥಿಸಿದೆ. ನನ್ನಂತೆ, ಒಬ್ಬ ಯೆಹೋವನ ಸಾಕ್ಷಿಯಾಗಿರುವ ನನ್ನ ಹೆಂಡತಿಯು, ಬಲದ ಬುರುಜು ಆಗಿದ್ದಳು. ಮತ್ತು ಯಾರ ದಯೆ ಹಾಗೂ ಕರುಣೆಯು ಅತ್ಯಮೂಲ್ಯವಾದದ್ದಾಗಿ ಪರಿಣಮಿಸಿತೊ ಆ ಕೆಲವು ಆಪ್ತ ಸ್ನೇಹಿತರ ಬೆಂಬಲವೂ ನನಗಿತ್ತು.​—ಜ್ಞಾನೋಕ್ತಿ 17:17.

ಬೇರೆಯವರ ಕಡೆಗೆ ನನಗೆ ಒಂದು ಜವಾಬ್ದಾರಿ ಇದೆಯೆಂಬ ಭಾವನೆಯೂ ಸಹಾಯಮಾಡಿತು. ನನ್ನ ಮಗನನ್ನು ಚೆನ್ನಾಗಿ ಬೆಳೆಸಬೇಕು, ಅವನಿಗೆ ಕಲಿಸಬೇಕು, ಅವನೊಂದಿಗೆ ಆಟವಾಡಬೇಕು ಮತ್ತು ಸಾರುವ ಕೆಲಸದಲ್ಲಿ ತರಬೇತಿಗೊಳಿಸಬೇಕೆಂಬ ಬಯಕೆ ನನಗಿತ್ತು. ಆದುದರಿಂದ ನಾನು ಸೋಲನ್ನೊಪ್ಪಿಕೊಳ್ಳಲು ಸಾಧ್ಯವಿರಲಿಲ್ಲ. ಅಷ್ಟುಮಾತ್ರವಲ್ಲದೆ, ನಾನು ಯೆಹೋವನ ಸಾಕ್ಷಿಗಳ ಸಭೆಗಳಲ್ಲೊಂದರಲ್ಲಿ ಹಿರಿಯನಾಗಿದ್ದೆ, ಮತ್ತು ನನ್ನ ಕ್ರೈಸ್ತ ಸಹೋದರ ಸಹೋದರಿಯರಿಗೆ ನನ್ನ ಬೆಂಬಲದ ಅಗತ್ಯವಿತ್ತು. ನನ್ನ ಬಾಧೆಯು ನನ್ನ ನಂಬಿಕೆಯನ್ನು ಶಿಥಿಲಗೊಳಿಸುವಂತೆ ನಾನು ಅನುಮತಿಸುವಲ್ಲಿ, ನಾನು ಇತರರಿಗೆ ಯಾವ ರೀತಿಯ ಮಾದರಿಯಾಗಿರುವೆ?

ಅನಿವಾರ್ಯವಾಗಿ ನನ್ನ ಬದುಕು, ಶಾರೀರಿಕವಾಗಿಯೂ ಆರ್ಥಿಕವಾಗಿಯೂ ಬದಲಾಯಿತು. ಈ ಬದಲಾವಣೆಯು, ಕೆಲವೊಂದು ವಿಷಯಗಳಲ್ಲಿ ನನ್ನ ಜೀವಿತವನ್ನು ಹೆಚ್ಚು ಅವನತಿಗಿಳಿಸಿತು, ಆದರೆ ಇನ್ನಿತರ ವಿಷಯಗಳಲ್ಲಿ ಉನ್ನತಿಗೇರಿಸಿತು. ಒಬ್ಬ ವೈದ್ಯರು ಹೀಗೆ ಹೇಳುವುದನ್ನು ಒಮ್ಮೆ ಕೇಳಿಸಿಕೊಂಡಿದ್ದೆ: “ಒಂದು ರೋಗವು ವ್ಯಕ್ತಿಯನ್ನು ನಾಶಪಡಿಸುವುದಿಲ್ಲ; ಬದಲಿಗೆ ಅವನನ್ನು ಬದಲಾಯಿಸುತ್ತದೆ.” ಮತ್ತು ಈ ಬದಲಾವಣೆಗಳು ಯಾವಾಗಲೂ ನಕಾರಾತ್ಮಕ ಆಗಿರುವುದಿಲ್ಲವೆಂಬುದನ್ನು ನಾನು ಕಲಿತುಕೊಂಡಿದ್ದೇನೆ.

ಮೊತ್ತಮೊದಲು, ನನ್ನ ‘ಶರೀರದಲ್ಲಿ ನಾಟಿರುವ ಶೂಲವು’ ನಾನು ಬೇರೆ ಜನರ ಆರೋಗ್ಯ ಸಮಸ್ಯೆಗಳನ್ನು ಹೆಚ್ಚು ಉತ್ತಮವಾಗಿ ಅರ್ಥಮಾಡಿಕೊಳ್ಳುವಂತೆ ಮತ್ತು ಅವರಿಗೆ ಅನುಕಂಪ ತೋರಿಸುವಂತೆ ಸಹಾಯಮಾಡಿದೆ. (2 ಕೊರಿಂಥ 12:7) ಹಿಂದಿಗಿಂತಲೂ ಹೆಚ್ಚು ಉತ್ತಮವಾಗಿ ನಾನು ಜ್ಞಾನೋಕ್ತಿ 3:5ರ ಈ ಮಾತುಗಳನ್ನು ಅರ್ಥಮಾಡಿಕೊಳ್ಳಲು ಶಕ್ತನಾದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು.” ಎಲ್ಲಕ್ಕಿಂತಲೂ ಮಿಗಿಲಾಗಿ, ನನ್ನ ಹೊಸ ಪರಿಸ್ಥಿತಿಗಳು, ಜೀವನದಲ್ಲಿ ಯಾವುದು ನಿಜವಾಗಿಯೂ ಪ್ರಾಮುಖ್ಯ ಮತ್ತು ಯಾವುದು ನಿಜ ಸಂತೃಪ್ತಿ ಹಾಗೂ ಸ್ವಯೋಗ್ಯತೆಯ ಭಾವನೆಯನ್ನು ಕೊಡಬಲ್ಲದೆಂಬದನ್ನು ಕಲಿಸಿದವು. ನಾನು ಯೆಹೋವನ ಸಂಸ್ಥೆಯಲ್ಲಿ ಇನ್ನೂ ಬಹಳಷ್ಟನ್ನು ಮಾಡಸಾಧ್ಯವಿತ್ತು. “ತೆಗೆದುಕೊಳ್ಳುವದಕ್ಕಿಂತ ಕೊಡುವದೇ ಹೆಚ್ಚಿನ ಭಾಗ್ಯ” ಎಂಬ ಯೇಸುವಿನ ಮಾತುಗಳ ನಿಜ ಅರ್ಥವನ್ನು ನಾನು ಗ್ರಹಿಸಿದೆ.​—ಅ. ಕೃತ್ಯಗಳು 20:35.

ಒಂದು ಹೊಸ ಜೀವನ

ನನ್ನ ರೋಗವೇನೆಂಬುದನ್ನು ಪತ್ತೆಹಚ್ಚಿದ ಸ್ವಲ್ಪ ಸಮಯದ ನಂತರವೇ, ನನ್ನನ್ನು ಮಡ್ರಿಡ್‌ನಲ್ಲಿ ನಡೆಯಲಿದ್ದ ಒಂದು ಸೆಮಿನಾರ್‌ಗೆ ಆಮಂತ್ರಿಸಲಾಯಿತು. ಅಲ್ಲಿ, ಕ್ರೈಸ್ತ ಸ್ವಯಂಸೇವಕರಿಗೆ, ವೈದ್ಯರು ಹಾಗೂ ಯೆಹೋವನ ಸಾಕ್ಷಿಗಳಾಗಿರುವ ಅವರ ರೋಗಿಗಳ ನಡುವೆ ಸಹಕಾರವನ್ನು ಬೆಳೆಸುವುದನ್ನು ಕಲಿಸಲಾಯಿತು. ತದನಂತರ ಆ ಸ್ವಯಂಸೇವಕರನ್ನು ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಗಳಾಗಿ ಸಂಘಟಿಸಲಾಯಿತು. ನನಗಾದರೊ ಈ ಸೆಮಿನಾರ್‌ ಸರಿಯಾದ ಸಮಯದಲ್ಲಿ ಬಂತು. ನಾನು ಹೆಚ್ಚು ಉತ್ತಮವಾದ ಒಂದು ವೃತ್ತಿಯನ್ನು ಕಂಡುಹಿಡಿದೆ; ಇದು ಯಾವುದೇ ವ್ಯಾಪಾರೀ ಉದ್ಯೋಗಕ್ಕಿಂತಲೂ ಹೆಚ್ಚು ಆನಂದವನ್ನು ತರಲಿತ್ತು.

ಹೊಸದಾಗಿ ರಚಿಸಲ್ಪಟ್ಟ ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಗಳು, ಆಸ್ಪತ್ರೆಗಳಿಗೆ ಭೇಟಿನೀಡಿ, ವೈದ್ಯರನ್ನು ಇಂಟರ್‌ವ್ಯೂ ಮಾಡಿ, ಆರೋಗ್ಯ ಕಾರ್ಮಿಕರೆಲ್ಲರ ಮುಂದೆ ನಿರೂಪಣೆಗಳನ್ನು ಮಾಡಲಿದೆ ಮತ್ತು ಇದೆಲ್ಲದರ ಉದ್ದೇಶವು, ಸಹಕಾರಭಾವವನ್ನು ಬೆಳೆಸುವುದು ಮತ್ತು ಘರ್ಷಣೆಗಳನ್ನು ತಡೆಗಟ್ಟುವುದೇ ಆಗಿದೆ ಎಂದು ನಾವು ಆ ಸೆಮಿನಾರ್‌ನಲ್ಲಿ ಕಲಿತೆವು. ಈ ಕಮಿಟಿಗಳು, ರಕ್ತವನ್ನು ಉಪಯೋಗಿಸದೇ ವೈದ್ಯಕೀಯ ಕ್ರಮಗಳನ್ನು ನಿರ್ವಹಿಸಲು ಸಿದ್ಧರಿರುವ ವೈದ್ಯರನ್ನು ಕಂಡುಹಿಡಿಯಲು ಜೊತೆ ಸಾಕ್ಷಿಗಳಿಗೆ ಸಹಾಯಮಾಡಲಿದ್ದವು. ನಾನು ಯಾವುದೇ ವೈದ್ಯಕೀಯ ತರಬೇತಿಯಿಲ್ಲದ ಒಬ್ಬ ಸಾಧಾರಣ ವ್ಯಕ್ತಿಯಾಗಿದ್ದದರಿಂದ, ವೈದ್ಯಕೀಯ ಪದಗಳು, ವೈದ್ಯಕೀಯ ನೀತಿಸೂತ್ರಗಳು, ಮತ್ತು ಆಸ್ಪತ್ರೆಯ ಸಂಘಟನೆಯ ಬಗ್ಗೆ ಬಹಳಷ್ಟನ್ನು ಕಲಿಯಲಿಕ್ಕಿತ್ತು. ಹಾಗಿದ್ದರೂ, ಆ ಸೆಮಿನಾರ್‌ ಮುಗಿಸಿ ಮನೆಗೆ ಹೋದಾಗ ನಾನೊಬ್ಬ ಹೊಸ ಮನುಷ್ಯನಾಗಿದ್ದೆ. ನನ್ನನ್ನು ರೋಮಾಂಚನಗೊಳಿಸಿದಂಥ ಒಂದು ಹೊಸ ಪಂಥಾಹ್ವಾನದೊಂದಿಗೆ ಸಜ್ಜಿತನಾಗಿದ್ದೆ.

ಆಸ್ಪತ್ರೆಯ ಭೇಟಿಗಳು​—ತೃಪ್ತಿಯ ಒಂದು ಮೂಲ

ನನ್ನ ರೋಗವು ನನ್ನನ್ನು ನಿಧಾನವಾಗಿ ಮತ್ತು ನಿರ್ದಯವಾಗಿ ಕುಂಠಿತಗೊಳಿಸುತ್ತಾ ಇತ್ತಾದರೂ, ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಯ ಒಬ್ಬ ಸದಸ್ಯನೋಪಾದಿ ನನ್ನ ಜವಾಬ್ದಾರಿಗಳು ಹೆಚ್ಚುತ್ತಾ ಹೋದವು. ನನಗೆ, ಅಂಗವಿಕಲರ ವೇತನ ಸಿಗುತ್ತಿತ್ತು, ಆದುದರಿಂದ ಆಸ್ಪತ್ರೆಗಳಿಗೆ ಭೇಟಿನೀಡಲು ನನ್ನ ಬಳಿ ಸಮಯವಿತ್ತು. ಆಗಾಗ್ಗೆ ನನಗೆ ನಿರಾಶೆಗೊಳಿಸುವಂಥ ಘಟನೆಗಳು ನಡೆಯುತ್ತಿದ್ದರೂ, ಈ ಭೇಟಿಗಳು ನಾನು ನಿರೀಕ್ಷಿಸಿದ್ದಕ್ಕಿಂತಲೂ ಹೆಚ್ಚು ಸುಲಭ ಮತ್ತು ಹೆಚ್ಚು ಪ್ರತಿಫಲದಾಯಕವಾಗಿರುತ್ತಿದ್ದವು. ನಾನೀಗ ಒಂದು ಗಾಲಿಕುರ್ಚಿಯಲ್ಲೇ ಇರಬೇಕಾದರೂ, ಇದು ಅಷ್ಟೊಂದು ದೊಡ್ಡ ತಡೆಯಾಗಿ ಕಂಡುಬರುವುದಿಲ್ಲ. ಯಾವಾಗಲೂ ನನ್ನೊಟ್ಟಿಗೆ ಕಮಿಟಿಯ ಒಬ್ಬ ಜೊತೆ ಸದಸ್ಯನು ಇರುತ್ತಾನೆ. ಅಲ್ಲದೆ ವೈದ್ಯರಿಗೆ, ಗಾಲಿಕುರ್ಚಿಯಲ್ಲಿರುವ ಜನರೊಂದಿಗೆ ಮಾತಾಡಿ ಅಭ್ಯಾಸವಿದೆ. ನಾನು ಅವರನ್ನು ಸಂದರ್ಶಿಸಲಿಕ್ಕಾಗಿ ಮಾಡುತ್ತಿದ್ದ ಪ್ರಯತ್ನವನ್ನು ಗಮನಿಸಿ, ಅವರು ನನಗೆ ಹೆಚ್ಚು ಗೌರವದಿಂದ ಕಿವಿಗೊಡುತ್ತಿದ್ದರೆಂದು ಕೆಲವೊಮ್ಮೆ ತೋರುತ್ತಿತ್ತು.

ಕಳೆದ ಹತ್ತು ವರ್ಷಗಳಲ್ಲಿ, ನಾನು ನೂರಾರು ಮಂದಿ ವೈದ್ಯರನ್ನು ಭೇಟಿಮಾಡಿದ್ದೇನೆ. ಕೆಲವರು ಬಹುಮಟ್ಟಿಗೆ ಆರಂಭದಿಂದಲೇ ಸಹಾಯಮಾಡಲು ಸಿದ್ಧರಿದ್ದರು. ಒಬ್ಬ ರೋಗಿಯ ಮನಸ್ಸಾಕ್ಷಿಯನ್ನು ಗೌರವಿಸುವುದರಲ್ಲಿ ಹೆಮ್ಮೆಪಡುತ್ತಿದ್ದ, ಮಡ್ರಿಡ್‌ನಲ್ಲಿರುವ ಒಬ್ಬ ಹೃದಯ ಶಸ್ತ್ರಚಿಕಿತ್ಸಕರಾದ ಡಾಕ್ಟರ್‌ ಕ್ವಾನ್‌ ಡ್ವಾರ್ಟೆರವರು ತಮ್ಮ ಸೇವೆಯನ್ನು ಆ ಕೂಡಲೇ ನಮಗೆ ನೀಡಿದರು. ಅಂದಿನಿಂದ ಅವರು, ಸ್ಪೆಯ್ನಿನ ಅನೇಕ ಭಾಗಗಳಿಂದ ಬಂದಿರುವ ಸಾಕ್ಷಿ ರೋಗಿಗಳಿಗೆ ರಕ್ತವನ್ನು ಬಳಸದೇ 200ಕ್ಕಿಂತಲೂ ಹೆಚ್ಚು ಶಸ್ತ್ರಚಿಕಿತ್ಸೆಗಳನ್ನು ನಡೆಸಿದ್ದಾರೆ. ಈ ಎಲ್ಲಾ ವರ್ಷಗಳಲ್ಲಿ ಹೆಚ್ಚೆಚ್ಚು ವೈದ್ಯರು ರಕ್ತರಹಿತ ಶಸ್ತ್ರಚಿಕಿತ್ಸೆಯನ್ನು ಮಾಡಲಾರಂಭಿಸಿದ್ದಾರೆ. ಇದರಲ್ಲಿ, ನಮ್ಮ ಕ್ರಮವಾದ ಭೇಟಿಗಳು ಒಂದು ಕಾರಣವಾಗಿರುತ್ತವೆ. ಆದರೆ ಈ ಪ್ರಗತಿಗೆ, ವೈದ್ಯಕೀಯ ಮುನ್ನಡೆಗಳು ಹಾಗೂ ರಕ್ತರಹಿತ ಶಸ್ತ್ರಚಿಕಿತ್ಸೆಗಳಿಂದಾಗಿ ಸಿಕ್ಕಿದಂಥ ಉತ್ತಮ ಫಲಿತಾಂಶಗಳೂ ಕಾರಣವಾಗಿವೆ. ಮತ್ತು ನಮ್ಮ ಪ್ರಯತ್ನಗಳನ್ನು ಯೆಹೋವನು ಆಶೀರ್ವದಿಸಿದ್ದಾನೆ ಎಂಬ ನಿಶ್ಚಿತಾಭಿಪ್ರಾಯ ನಮಗಿದೆ.

ಮಕ್ಕಳ ಚಿಕಿತ್ಸೆಯಲ್ಲಿ ವಿಶೇಷಜ್ಞರಾಗಿರುವ ಕೆಲವು ಹೃದಯ ಶಸ್ತ್ರಚಿಕಿತ್ಸಕರ ಪ್ರತಿಕ್ರಿಯೆಯಿಂದ ನಾನು ವಿಶೇಷವಾಗಿ ಉತ್ತೇಜನವನ್ನು ಪಡೆದಿದ್ದೇನೆ. ಇಬ್ಬರು ಶಸ್ತ್ರಚಿಕಿತ್ಸಕರು ಮತ್ತು ಅವರ ಅರಿವಳಿಕೆತಜ್ಞರಿಂದ ಕೂಡಿದ ಒಂದು ತಂಡವನ್ನು ನಾವು ಎರಡು ವರ್ಷಗಳ ವರೆಗೆ ಭೇಟಿಮಾಡಿದೆವು. ಈ ಕ್ಷೇತ್ರದಲ್ಲಿ ಇತರ ವೈದ್ಯರು ಏನು ಮಾಡುತ್ತಿದ್ದರೆಂಬುದನ್ನು ವಿವರಿಸಿದ ವೈದ್ಯಕೀಯ ಸಾಹಿತ್ಯವನ್ನು ನಾವು ಅವರಿಗೆ ಒದಗಿಸುತ್ತಿದ್ದೆವು. 1999ರಲ್ಲಿ ನಡೆದ, ಕೂಸುಗಳ ಹೃದಯರಕ್ತನಾಳ ಶಸ್ತ್ರಚಿಕಿತ್ಸೆಯ ಕುರಿತಾದ ವೈದ್ಯಕೀಯ ಸಮ್ಮೇಳನದ ಸಮಯದಲ್ಲಿ ನಮ್ಮ ಈ ಪ್ರಯತ್ನಗಳ ಪ್ರತಿಫಲ ದೊರೆಯಿತು. ಈ ಇಬ್ಬರು ಶಸ್ತ್ರಚಿಕಿತ್ಸಕರು, ಇಂಗ್ಲೆಂಡಿನಿಂದ ಬಂದಿದ್ದು, ಅವರೊಂದಿಗೆ ಸಹಕರಿಸಿದ ಒಬ್ಬ ಶಸ್ತ್ರಚಿಕಿತ್ಸಕರ ಸಮರ್ಥ ನಿರ್ದೇಶನದ ಮೇರೆಗೆ, ಮಹಾಪಧಮನಿಯ ಕವಾಟದಲ್ಲಿ ಮಾರ್ಪಡಿಸುವಿಕೆಯ ಅಗತ್ಯವಿದ್ದ ಒಬ್ಬ ಸಾಕ್ಷಿ ಮಗುವಿನ ಮೇಲೆ ತುಂಬ ಕಷ್ಟಕರವಾದ ಶಸ್ತ್ರಚಿಕಿತ್ಸೆಯನ್ನು ನಡೆಸಿದರು. * ಈ ಶಸ್ತ್ರಚಿಕಿತ್ಸಕರಲ್ಲಿ ಒಬ್ಬರು, ಶಸ್ತ್ರಚಿಕಿತ್ಸೆಯ ಕೋಣೆಯಿಂದ ಹೊರಬಂದು, ಆಪರೇಷನ್‌ ಯಶಸ್ವಿಯಾಯಿತೆಂದೂ, ಕುಟುಂಬದ ಮನಸ್ಸಾಕ್ಷಿಗೆ ಗೌರವವನ್ನು ಕೊಡಲಾಯಿತೆಂದೂ ಹೇಳಿದಾಗ ನಾನೂ ಆ ಹೆತ್ತವರೊಂದಿಗೆ ಹರ್ಷಿಸಿದೆ. ಈಗ ಈ ಇಬ್ಬರೂ ವೈದ್ಯರು, ಸ್ಪೆಯ್ನ್‌ನ ಎಲ್ಲಾ ಕಡೆಯಿಂದಲೂ ಬರುವ ಸಾಕ್ಷಿ ರೋಗಿಗಳನ್ನು ಸ್ವೀಕರಿಸುತ್ತಾರೆ.

ಇಂಥ ವಿಷಯಗಳಲ್ಲಿ ನನಗೆ ನಿಜವಾಗಿಯೂ ಸಂತೋಷತರುವ ಸಂಗತಿಯೇನೆಂದರೆ, ನನ್ನ ಕ್ರೈಸ್ತ ಸಹೋದರರಿಗೆ ನಾನು ಸ್ವಲ್ಪ ಸಹಾಯಮಾಡಬಲ್ಲೆ ಎಂಬುದೇ. ಏಕೆಂದರೆ ಸಾಮಾನ್ಯವಾಗಿ ಅವರು ಒಂದು ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಯನ್ನು ಸಂಪರ್ಕಿಸುವಾಗ, ಅದು ಅವರ ಬದುಕಿನಲ್ಲಿ ಅತ್ಯಂತ ಕಷ್ಟಕರವಾದ ಸಮಯಗಳಲ್ಲೊಂದಾಗಿರುತ್ತದೆ. ಅವರು ಒಂದು ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿದೆ, ಮತ್ತು ಸ್ಥಳಿಕ ಆಸ್ಪತ್ರೆಯಲ್ಲಿರುವ ವೈದ್ಯರು ರಕ್ತವಿಲ್ಲದೆ ಚಿಕಿತ್ಸೆ ನೀಡಲು ಒಂದೇ ಸಿದ್ಧರಿರುವುದಿಲ್ಲ ಇಲ್ಲವೆ ಅವರು ಹಾಗೆ ಮಾಡಲು ಶಕ್ತರಾಗಿರುವುದಿಲ್ಲ. ಆದರೆ, ಇಲ್ಲಿ ಮಡ್ರಿಡ್‌ನಲ್ಲಿ ಎಲ್ಲಾ ವೈದ್ಯಕೀಯ ಕ್ಷೇತ್ರಗಳಲ್ಲಿ ಸಹಕರಿಸುವಂಥ ಶಸ್ತ್ರಚಿಕಿತ್ಸಕರಿದ್ದಾರೆಂದು ಆ ಸಹೋದರರಿಗೆ ತಿಳಿದುಬರುವಾಗ, ಅವರಿಗೆ ತುಂಬ ನೆಮ್ಮದಿಯಾಗುತ್ತದೆ. ಒಬ್ಬ ಸಹೋದರನು ಆಸ್ಪತ್ರೆಗೆ ಸೇರಿಸಲ್ಪಟ್ಟಿರುವಾಗ ನಾವು ಕೇವಲ ಅವನ ಪಕ್ಕದಲ್ಲಿ ಹೋಗಿ ನಿಂತಾಗ ಅವನ ಮುಖದಲ್ಲಿದ್ದ ಚಿಂತೆಯು ಮಾಯವಾಗಿ ನಿರಾಳತೆಯು ಕಾಣಿಸಿಕೊಳ್ಳುವುದನ್ನು ನಾನು ನೋಡಿದ್ದೇನೆ.

ನ್ಯಾಯಾಧೀಶರು ಹಾಗೂ ವೈದ್ಯಕೀಯ ನೀತಿಸೂತ್ರಗಳ ಜಗತ್ತು

ಇತ್ತೀಚಿನ ವರ್ಷಗಳಲ್ಲಿ, ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಗಳ ಸದಸ್ಯರು, ನ್ಯಾಯಧೀಶರನ್ನೂ ಭೇಟಿಮಾಡಿದ್ದಾರೆ. ಈ ಭೇಟಿಗಳ ಸಂದರ್ಭದಲ್ಲಿ ನಾವು ಅವರಿಗೆ, ಕುಟುಂಬ ಆರೈಕೆ ಮತ್ತು ಯೆಹೋವನ ಸಾಕ್ಷಿಗಳಿಗಾಗಿ ವೈದ್ಯಕೀಯ ನಿರ್ವಹಣೆ (ಇಂಗ್ಲಿಷ್‌) ಎಂಬ ಪ್ರಕಾಶನವನ್ನು ಕೊಡುತ್ತೇವೆ. ಇದು, ಇಂಥ ಅಧಿಕಾರಿಗಳಿಗೆ, ರಕ್ತದ ಉಪಯೋಗದ ವಿಷಯದಲ್ಲಿ ನಮ್ಮ ಸ್ಥಾನವನ್ನು ಹಾಗೂ ರಕ್ತವಿಲ್ಲದ ವೈದ್ಯಕೀಯ ಅನ್ಯಮಾರ್ಗಗಳ ಲಭ್ಯತೆಯ ಬಗ್ಗೆ ತಿಳಿಸುವುದಕ್ಕಾಗಿಯೇ ವಿಶೇಷವಾಗಿ ತಯಾರಿಸಲ್ಪಟ್ಟಿತು. ಈ ರೀತಿಯ ಭೇಟಿಗಳು ಬಹಳಷ್ಟು ಅಗತ್ಯವಾಗಿದ್ದವು, ಏಕೆಂದರೆ ಒಂದು ಕಾಲದಲ್ಲಿ, ನ್ಯಾಯಾಧೀಶರು ರೋಗಿಗಳ ಇಷ್ಟದ ವಿರುದ್ಧ ರಕ್ತಪೂರಣವನ್ನು ಕೊಡಲು ವೈದ್ಯರಿಗೆ ಅಧಿಕಾರವನ್ನು ಕೊಡುವುದು ಸರ್ವಸಾಮಾನ್ಯವಾಗಿತ್ತು.

ನ್ಯಾಯಾಧೀಶರುಗಳ ಕೋಣೆಗಳು ದೊಡ್ಡದಾದ, ಹೃದಯಂಗಮ ಸ್ಥಳಗಳಾಗಿರುತ್ತವೆ. ಆದುದರಿಂದ ನನ್ನ ಪ್ರಥಮ ಭೇಟಿಯ ಸಮಯದಲ್ಲಿ ನನ್ನ ಗಾಲಿಕುರ್ಚಿಯಲ್ಲಿ ಆ ಹಜಾರದ ಹಾದಿಗಳನ್ನು ಹಾದುಹೋಗುತ್ತಿದ್ದಾಗ, ನಾನು ತೀರ ಅಲ್ಪನೆಂದು ನನಗನಿಸಿತು. ಇದಕ್ಕಿಂತಲೂ ದುರವಸ್ಥೆಯ ಸಂಗತಿಯೇನೆಂದರೆ, ಒಂದು ಚಿಕ್ಕ ಅಪಘಾತದ ಕಾರಣ ನಾನು ನನ್ನ ಕುರ್ಚಿಯಿಂದ ಹೊರಗೆ ನನ್ನ ಮೊಣಕಾಲುಗಳ ಮೇಲೆ ಬಿದ್ದೆ. ಕೆಲವು ಮಂದಿ ನ್ಯಾಯಾಧೀಶರು ಮತ್ತು ವಕೀಲರು, ನನ್ನ ಈ ಸಂದಿಗ್ದ ಸ್ಥಿತಿಯನ್ನು ನೋಡಿ, ಸಹಾಯಮಾಡಲು ಬಂದರು. ಆದರೆ ನನಗೆ ಅವರೆಲ್ಲರ ಮುಂದೆ ತುಂಬ ನಾಚಿಕೆಯಾಯಿತು.

ನಾವು ಅವರನ್ನೇಕೆ ಭೇಟಿಮಾಡುತ್ತಿದ್ದೇವೆ ಎಂಬುದರ ಬಗ್ಗೆ ನ್ಯಾಯಾಧೀಶರುಗಳಿಗೆ ನಿಶ್ಚಯವಿಲ್ಲದಿದ್ದರೂ, ಹೆಚ್ಚಿನವರು ನಮ್ಮನ್ನು ದಯೆಯಿಂದ ಉಪಚರಿಸಿದರು. ನಾನು ಭೇಟಿಮಾಡಿದ ಮೊದಲ ನ್ಯಾಯಾಧೀಶರು ಆಗಲೇ ನಮ್ಮ ನಿಲುವಿನ ಕುರಿತಾಗಿ ಯೋಚಿಸುತ್ತಿದ್ದರು, ಮತ್ತು ನಮ್ಮೊಂದಿಗೆ ಬಹಳಷ್ಟು ಮಾತಾಡಲು ಬಯಸುತ್ತಾರೆಂದು ಹೇಳಿದರು. ನಮ್ಮ ಮುಂದಿನ ಭೇಟಿಯ ಸಮಯದಲ್ಲಿ, ಸ್ವತಃ ಅವರೇ ನನ್ನ ಗಾಲಿಕುರ್ಚಿಯನ್ನು ತಳ್ಳಿಕೊಂಡು ತಮ್ಮ ಕೋಣೆಗೆ ಕರೆದುಕೊಂಡು ಹೋದರು ಮತ್ತು ತದೇಕಚಿತ್ತದಿಂದ ನಮಗೆ ಕಿವಿಗೊಟ್ಟರು. ಈ ಆರಂಭದ ಭೇಟಿಯಲ್ಲೇ ಸಿಕ್ಕಿದಂಥ ಈ ಉತ್ತಮ ಫಲಿತಾಂಶಗಳು ನಾನೂ ನನ್ನ ಸಂಗಡಿಗರೂ ನಮ್ಮ ಭಯವನ್ನು ಜಯಿಸುವಂತೆ ಉತ್ತೇಜಿಸಿತು. ಸ್ವಲ್ಪ ಸಮಯದೊಳಗೆ ನಾವು ಇನ್ನೂ ಹೆಚ್ಚಿನ ಉತ್ತಮ ಫಲಿತಾಂಶಗಳನ್ನು ಪಡೆದೆವು.

ಅದೇ ವರ್ಷದಲ್ಲಿ, ನಾವು ಕುಟುಂಬ ಆರೈಕೆ ಸಂಪುಟದ (ಇಂಗ್ಲಿಷ್‌) ಇನ್ನೊಂದು ಪ್ರತಿಯನ್ನು ಇನ್ನೊಬ್ಬ ನ್ಯಾಯಧೀಶನಿಗೆ ಕೊಟ್ಟೆವು. ಇವರು ನಮ್ಮನ್ನು ದಯೆಯಿಂದ ಬರಮಾಡಿಕೊಂಡು, ಆ ಮಾಹಿತಿಯನ್ನು ಓದುವೆನೆಂದು ಮಾತುಕೊಟ್ಟರು. ಯಾವುದೇ ತುರ್ತುಪರಿಸ್ಥಿತಿಯಲ್ಲಿ ನಮ್ಮನ್ನು ಸಂಪರ್ಕಿಸುವ ಅಗತ್ಯಬೀಳುವಲ್ಲಿ, ಉಪಯೋಗಿಸಲಿಕ್ಕೆಂದು ನನ್ನ ಟೆಲಿಫೋನ್‌ ನಂಬರನ್ನು ಕೊಟ್ಟೆ. ಎರಡು ವಾರಗಳ ಬಳಿಕ, ಅವರು ನನಗೆ ಫೋನ್‌ ಮಾಡಿ ಹೇಳಿದ್ದೇನೆಂದರೆ, ಒಬ್ಬ ಸ್ಥಳಿಕ ಶಸ್ತ್ರಚಿಕಿತ್ಸಕನು, ಶಸ್ತ್ರಚಿಕಿತ್ಸೆಯ ಅಗತ್ಯವಿದ್ದ ಒಬ್ಬ ಸಾಕ್ಷಿ ಮಹಿಳೆಗೆ ರಕ್ತಪೂರಣವನ್ನು ಕೊಡಲಿಕ್ಕಾಗಿ ತನಗೆ ಅಧಿಕಾರವನ್ನು ಕೊಡುವಂತೆ ಕೇಳಿಕೊಂಡಿದ್ದನು. ಆ ಸಾಕ್ಷಿಗೆ ರಕ್ತದಿಂದ ದೂರವಿರಲು ಇದ್ದಂಥ ಬಯಕೆಯನ್ನು ಗೌರವಿಸುವಂಥ ರೀತಿಯ ಪರಿಹಾರಮಾರ್ಗವನ್ನು ಕಂಡುಕೊಳ್ಳಲು ತನಗೆ ಸಹಾಯಮಾಡುವಂತೆ ತಾನು ಅಪೇಕ್ಷಿಸುತ್ತೇನೆಂದು ಆ ನ್ಯಾಯಾಧೀಶನು ನಮಗೆ ಹೇಳಿದನು. ಇನ್ನೊಂದು ಆಸ್ಪತ್ರೆಯನ್ನು ಕಂಡುಹಿಡಿಯಲು ನಮಗೆ ಅಷ್ಟೇನೂ ಕಷ್ಟವಾಗಲಿಲ್ಲ. ಅಲ್ಲಿನ ಶಸ್ತ್ರಚಿಕಿತ್ಸಕರು, ಆ ಶಸ್ತ್ರಚಿಕಿತ್ಸೆಯನ್ನು ರಕ್ತಕೊಡದೆ ಮಾಡಿದರು. ಈ ಫಲಿತಾಂಶವನ್ನು ಕೇಳಿ ನ್ಯಾಯಧೀಶನಿಗೆ ಬಹಳ ಸಂತೋಷವಾಯಿತು, ಮತ್ತು ಭವಿಷ್ಯದಲ್ಲಿ ತಾನು ಇದೇ ರೀತಿಯ ಪರಿಹಾರಮಾರ್ಗಗಳಿಗಾಗಿ ಪ್ರಯತ್ನಿಸುವೆನೆಂದು ನಮಗೆ ಆಶ್ವಾಸನೆ ನೀಡಿದನು.

ನನ್ನ ಆಸ್ಪತ್ರೆಯ ಭೇಟಿಗಳ ಸಮಯದಲ್ಲಿ ವೈದ್ಯಕೀಯ ನೀತಿಶಾಸ್ತ್ರಗಳ ಕುರಿತಾದ ಪ್ರಶ್ನೆಯು ಅನೇಕವೇಳೆ ಏಳುತ್ತಿತ್ತು. ಏಕೆಂದರೆ, ವೈದ್ಯರು ರೋಗಿಯ ಹಕ್ಕುಗಳನ್ನೂ ಮನಸ್ಸಾಕ್ಷಿಯನ್ನೂ ಲೆಕ್ಕಕ್ಕೆ ತೆಗೆದುಕೊಳ್ಳಬೇಕೆಂದು ನಾವು ಬಯಸುತ್ತಿದ್ದೆವು. ಮಡ್ರಿಡ್‌ನಲ್ಲಿ ನಮ್ಮೊಂದಿಗೆ ಸಹಕರಿಸುತ್ತಿದ್ದ ಒಂದು ಆಸ್ಪತ್ರೆಯು, ಈ ನೀತಿಶಾಸ್ತ್ರಗಳ ಬಗ್ಗೆ ನೀಡುತ್ತಿದ್ದ ಒಂದು ಪಾಠಕ್ರಮದಲ್ಲಿ ಪಾಲ್ಗೊಳ್ಳುವಂತೆ ನನ್ನನ್ನು ಆಮಂತ್ರಿಸಿತು. ಈ ಪಾಠಕ್ರಮವು ನನಗೆ ಈ ಕ್ಷೇತ್ರದಲ್ಲಿದ್ದ ಅನೇಕ ವಿಶೇಷಜ್ಞರಿಗೆ ನಮ್ಮ ಬೈಬಲ್‌ ಆಧಾರಿತ ದೃಷ್ಟಿಕೋನವನ್ನು ಪ್ರಸ್ತುತಪಡಿಸುವಂತೆ ಶಕ್ತನನ್ನಾಗಿ ಮಾಡಿತು. ವೈದ್ಯರು ಮಾಡಬೇಕಾಗುವಂಥ ಅನೇಕ ಕಠಿನ ನಿರ್ಣಯಗಳನ್ನು ಗ್ರಹಿಸುವಂತೆಯೂ ಇದು ನನಗೆ ಸಹಾಯಮಾಡಿತು.

ಆ ಪಾಠಕ್ರಮದಲ್ಲಿ ಒಬ್ಬ ಶಿಕ್ಷಕರಾಗಿದ್ದ ಪ್ರೊಫೆಸರ್‌ ಡ್ಯೋಗೋ ಗ್ರಾಸ್ಯಾ, ಸ್ಪ್ಯಾನಿಷ್‌ ವೈದ್ಯರಿಗಾಗಿ ನೀತಿಶಾಸ್ತ್ರಗಳ ಬಗ್ಗೆ ಒಂದು ಪ್ರತಿಷ್ಠಿತ ಮಾಸ್ಟರ್ಸ್‌ ಕೋರ್ಸ್‌ ಅನ್ನು ಕ್ರಮವಾಗಿ ಸಂಘಟಿಸುತ್ತಾರೆ. ಅಷ್ಟುಮಾತ್ರವಲ್ಲದೆ ಅವರು ರಕ್ತಪೂರಣಗಳ ಸಂಬಂಧದಲ್ಲಿ ನಮಗಿರುವ ತಿಳಿವಳಿಕೆಭರಿತ ಸಮ್ಮತಿಯ ಹಕ್ಕನ್ನು ದೃಢವಾಗಿ ಬೆಂಬಲಿಸುವವರಾಗಿದ್ದಾರೆ. * ಅವರೊಂದಿಗಿನ ನಮ್ಮ ಕ್ರಮವಾದ ಸಂಪರ್ಕದಿಂದಾಗಿ, ಯೆಹೋವನ ಸಾಕ್ಷಿಗಳ ಸ್ಪೆಯ್ನ್‌ ಬ್ರಾಂಚ್‌ ಆಫೀಸಿನ ಕೆಲವು ಮಂದಿ ಪ್ರತಿನಿಧಿಗಳು, ಪ್ರೊಫೆಸರ್‌ ಗ್ರಾಸ್ಯಾರವರ ಪದವಿಪೂರ್ಣ ವಿದ್ಯಾರ್ಥಿಗಳಿಗೆ ನಮ್ಮ ನಿಲುವನ್ನು ವಿವರಿಸಲು ಆಮಂತ್ರಿಸಲ್ಪಟ್ಟಿದ್ದಾರೆ. ಈ ವಿದ್ಯಾರ್ಥಿಗಳಲ್ಲಿ ಕೆಲವರು, ಇಡೀ ದೇಶದಲ್ಲಿ ಅತ್ಯುತ್ತಮ ವೈದ್ಯರೆಂದು ಪರಿಗಣಿಸಲ್ಪಟ್ಟಿದ್ದಾರೆ.

ವಸ್ತುಸ್ಥಿತಿಯನ್ನು ಅಂಗೀಕರಿಸುವುದು

ನನ್ನ ಜೊತೆ ವಿಶ್ವಾಸಿಗಳ ಪರವಾಗಿ ನಾನು ಮಾಡುವ ಈ ತೃಪ್ತಿದಾಯಕ ಕೆಲಸವು ನನ್ನ ಎಲ್ಲಾ ವೈಯಕ್ತಿಕ ಸಮಸ್ಯೆಗಳನ್ನು ಬಗೆಹರಿಸಿಲ್ಲವೆಂಬುದು ನಿಜ. ನನ್ನ ರೋಗವಂತೂ ಪಟ್ಟುಹಿಡಿದು ಮುಂದೆಸಾಗುತ್ತಾ ಇದೆ. ಸಂತೋಷದ ವಿಷಯವೇನೆಂದರೆ, ನನ್ನ ಮನಸ್ಸು ಈಗಲೂ ಚುರುಕಾಗಿದೆ. ಎಂದೂ ಗೊಣಗದ ನನ್ನ ಹೆಂಡತಿ ಮತ್ತು ಮಗನಿಂದಾಗಿ ನಾನೀಗಲೂ ನನ್ನ ಜವಾಬ್ದಾರಿಗಳನ್ನು ನಿಭಾಯಿಸಬಲ್ಲೆ. ಅವರ ಸಹಾಯ ಮತ್ತು ಬೆಂಬಲವಿಲ್ಲದೆ ಇದೆಲ್ಲವೂ ಅಸಾಧ್ಯ. ನನ್ನ ಪ್ಯಾಂಟಿನ ಬಟನ್‌ಗಳನ್ನು ಇಲ್ಲವೆ ಒಂದು ಕೋಟನ್ನು ಹಾಕಲೂ ನನ್ನಿಂದಾಗುವುದಿಲ್ಲ. ಪ್ರತಿ ಶನಿವಾರ ನನ್ನ ಮಗನಾದ ಈಸ್ಮಾಎಲ್‌ನೊಂದಿಗೆ ಸಾರುವುದರಲ್ಲಿ ನಾನು ವಿಶೇಷವಾಗಿ ಆನಂದಿಸುತ್ತೇನೆ. ನಾನು ಬೇರೆಬೇರೆ ಮನೆಯವರೊಂದಿಗೆ ಮಾತಾಡಲು ಸಾಧ್ಯವಾಗುವಂತೆ ಅವನು ನನ್ನನ್ನು ನನ್ನ ಗಾಲಿಕುರ್ಚಿಯಲ್ಲಿ ಕರೆದೊಯ್ಯುತ್ತಾನೆ. ಮತ್ತು ನಾನು ಈಗಲೂ ಒಬ್ಬ ಸಭಾ ಹಿರಿಯನೋಪಾದಿ ನನ್ನ ಕರ್ತವ್ಯಗಳನ್ನು ಪಾಲಿಸಲು ಶಕ್ತನಾಗಿದ್ದೇನೆ.

ಕಳೆದ 12 ವರ್ಷಗಳಲ್ಲಿ ನಾನು ಕೆಲವೊಂದು ವೇದನಾಮಯ ಕ್ಷಣಗಳನ್ನು ಅನುಭವಿಸಬೇಕಾಯಿತು. ನನ್ನ ದೌರ್ಬಲ್ಯವು ನನ್ನ ಕುಟುಂಬವನ್ನು ಬಾಧಿಸುತ್ತಿರುವ ರೀತಿಯನ್ನು ನೋಡಿ ಕೆಲವೊಮ್ಮೆ, ನನಗೆ ನಿಜವಾದ ಕಾಯಿಲೆಯಿಂದಾಗುವ ನೋವಿಗಿಂತಲೂ ಹೆಚ್ಚು ನೋವಾಗುತ್ತದೆ. ಅವರೂ ನರಳುತ್ತಿದ್ದಾರೆ, ಆದರೆ ವ್ಯತ್ಯಾಸವಿಷ್ಟೇ, ಅವರದನ್ನು ಮೌನವಾಗಿ ಸಹಿಸುತ್ತಿದ್ದಾರೆ. ಇದು ನನಗೆ ಗೊತ್ತು. ಸ್ವಲ್ಪ ಸಮಯದ ಹಿಂದೆ, ನನ್ನ ಅತ್ತೆ ಹಾಗೂ ನನ್ನ ತಂದೆ ಒಂದೇ ವರ್ಷದೊಳಗೆ ತೀರಿಹೋದರು. ಅದೇ ವರ್ಷದಲ್ಲಿ ನಾನು ಗಾಲಿಕುರ್ಚಿಯಿಲ್ಲದೆ ಎಲ್ಲಿಗೂ ಹೋಗಲಾರದಂಥ ಸ್ಥಿತಿಯನ್ನು ತಲಪಿದೆ. ನಮ್ಮ ಮನೆಯಲ್ಲೇ ವಾಸಿಸುತ್ತಿದ್ದ ನನ್ನ ತಂದೆಯವರು ಇನ್ನೊಂದು ರೀತಿಯ ಅಂಗ ವಿಕೃತಿಗೊಳಿಸುವ ರೋಗದಿಂದ ಸಾವನ್ನಪ್ಪಿದರು. ಅವರ ಶುಶ್ರೂಷೆಯನ್ನು ಮಾಡಿದ ಮಿಲಾಗ್ರೋಸಳಿಗೆ, ನನಗೆ ಭವಿಷ್ಯದಲ್ಲಿ ಏನಾಗಲಿದೆಯೊ ಅದನ್ನೇ ನೋಡುತ್ತಿರುವಂತೆ ಭಾಸವಾಗುತ್ತಿತ್ತು.

ಆದರೆ ಸಕಾರಾತ್ಮಕ ಅಂಶಗಳನ್ನು ನೋಡುವುದಾದರೆ, ನಮ್ಮ ಕುಟುಂಬವು ಈ ಎಲ್ಲಾ ಕಷ್ಟಗಳನ್ನು ಎದುರಿಸುತ್ತಿರುವಾಗ ಐಕ್ಯವಾಗಿ ಉಳಿದಿದೆ. ನನಗೆ ಕಾರ್ಯನಿರ್ವಾಹಕನ ಕುರ್ಚಿಯ ಬದಲು ಗಾಲಿಕುರ್ಚಿ ಸಿಕ್ಕಿದೆ, ಆದರೆ ನನ್ನ ಬದುಕು ಈಗ ಹೆಚ್ಚು ಉತ್ತಮವಾಗಿದೆ. ಏಕೆಂದರೆ ಈಗ ಅದು ಇತರರ ಸೇವೆಯನ್ನು ಮಾಡಲಿಕ್ಕಾಗಿ ಪೂರ್ಣ ರೀತಿಯಲ್ಲಿ ಮುಡಿಪಾಗಿರಿಸಲ್ಪಟ್ಟಿದೆ. ಇತರರಿಗೆ ಕೊಡುವುದು, ನಮ್ಮ ಸ್ವಂತ ಬೇನೆಯನ್ನು ಉಪಶಮನಗೊಳಿಸಬಲ್ಲದು, ಮತ್ತು ಕಷ್ಟದ ಸಮಯದಲ್ಲಿ ನಮ್ಮನ್ನು ಬಲಪಡಿಸುವೆನೆಂದು ಯೆಹೋವನು ಕೊಟ್ಟಿರುವ ಮಾತನ್ನು ಆತನು ಖಂಡಿತವಾಗಿಯೂ ನಡೆಸಿ ಕೊಡುತ್ತಾನೆ. ಪೌಲನಂತೆ, ನಾನು ಸತ್ಯವಾಗಿಯೂ ಹೇಳಬಲ್ಲೆ: “ನನ್ನನ್ನು ಬಲಪಡಿಸುವಾತನಲ್ಲಿದ್ದುಕೊಂಡು ಎಲ್ಲಕ್ಕೂ ಶಕ್ತನಾಗಿದ್ದೇನೆ.”​—ಫಿಲಿಪ್ಪಿ 4:13.

[ಪಾದಟಿಪ್ಪಣಿಗಳು]

^ ಪ್ಯಾರ. 5 ನರಜಡ್ಡು ರೋಗವು, ಮಧ್ಯ ನರಮಂಡಲದ ಒಂದು ಕಾಯಿಲೆಯಾಗಿದೆ. ಅದು, ಸಮತೋಲನದಲ್ಲಿ, ಕೈಕಾಲುಗಳ ಉಪಯೋಗ ಮತ್ತು ಕೆಲವೊಮ್ಮೆ ದೃಷ್ಟಿ, ಮಾತು ಇಲ್ಲವೆ ಗ್ರಹಣಾಶಕ್ತಿಯಲ್ಲಿ ಕ್ರಮೇಣವಾದ ಕ್ಷಯಿಸುವಿಕೆಯನ್ನು ಉಂಟುಮಾಡುತ್ತದೆ.

^ ಪ್ಯಾರ. 19 ಈ ಆಪರೇಷನ್‌ ಅನ್ನು ‘ರಾಸ್‌ ಪ್ರೋಸೀಜರ್‌’ ಎಂದು ಕರೆಯಲಾಗುತ್ತದೆ.

^ ಪ್ಯಾರ. 27 ಫೆಬ್ರವರಿ 15, 1997ರ ಕಾವಲಿನಬುರುಜು ಪತ್ರಿಕೆಯ 19-20ನೆಯ ಪುಟಗಳನ್ನು ನೋಡಿರಿ.

[ಪುಟ 24ರಲ್ಲಿರುವ ಚೌಕ]

ಹೆಂಡತಿಯ ಅಭಿಪ್ರಾಯ

ನರಜಡ್ಡು ರೋಗದಿಂದ ಬಳಲುತ್ತಿರುವ ಒಬ್ಬ ಸಂಗಾತಿಯೊಂದಿಗೆ ಬಾಳುವುದು, ಹೆಂಡತಿಯಾದವಳಿಗೆ ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಶಾರೀರಿಕವಾಗಿ ಕಷ್ಟಕರವಾದ ಸಂಗತಿ. ನಾನೇನು ಯೋಜನೆ ಮಾಡುತ್ತೇನೊ ಅದರ ಬಗ್ಗೆ ವಿವೇಚನಾಶೀಲಳಾಗಿರಬೇಕು ಮತ್ತು ಭವಿಷ್ಯದ ಕುರಿತಾಗಿ ಅನಾವಶ್ಯಕ ಚಿಂತೆಯನ್ನು ದೂರವಿಡಲು ಸಿದ್ಧಳಾಗಿರಬೇಕು. (ಮತ್ತಾಯ 6:34) ಹಾಗಿದ್ದರೂ, ಕಷ್ಟಾನುಭವದೊಂದಿಗೆ ಜೀವಿಸುವುದರಿಂದ ಒಬ್ಬ ವ್ಯಕ್ತಿಯಲ್ಲಿರುವ ಅತ್ಯುತ್ತಮ ಗುಣಗಳು ಬಯಲಾಗುತ್ತವೆ. ನಮ್ಮ ವಿವಾಹ ಸಂಬಂಧವು ಹಿಂದಿಗಿಂತಲೂ ಈಗ ಹೆಚ್ಚು ಬಲವಾಗಿದೆ ಮತ್ತು ಯೆಹೋವನೊಂದಿಗಿನ ನನ್ನ ಸಂಬಂಧವು ಹೆಚ್ಚು ಆಪ್ತವಾಗಿದೆ. ತದ್ರೀತಿಯ ಒತ್ತಡಭರಿತ ಪರಿಸ್ಥಿತಿಗಳಲ್ಲಿರುವ ಇತರರ ಜೀವನ ಕಥೆಗಳು ನನ್ನನ್ನು ಮಹತ್ತರವಾಗಿ ಬಲಪಡಿಸಿವೆ. ಸಹೋದರರ ಪರವಾಗಿ ಹೂಲ್ಯಾನ್‌ ಮಾಡುವ ಅಮೂಲ್ಯವಾದ ಸೇವೆಯಿಂದಾಗಿ ಫಲಿಸುವಂಥ ತೃಪ್ತಿಯಲ್ಲಿ ನಾನೂ ಭಾಗಿಯಾಗುತ್ತೇನೆ, ಮತ್ತು ಪ್ರತಿಯೊಂದು ದಿನ ಒಂದು ಹೊಸ ಸವಾಲನ್ನು ತಂದುನಿಲ್ಲಿಸುವುದಾದರೂ, ಯೆಹೋವನು ಎಂದಿಗೂ ನಮ್ಮ ಕೈಬಿಡುವುದಿಲ್ಲವೆಂಬದನ್ನು ನಾವು ಕಂಡುಹಿಡಿದಿದ್ದೇವೆ.

[ಪುಟ 24ರಲ್ಲಿರುವ ಚೌಕ]

ಮಗನ ಅಭಿಪ್ರಾಯ

ನನ್ನ ತಂದೆಯ ತಾಳ್ಮೆ ಮತ್ತು ಸಕಾರಾತ್ಮಕ ಆತ್ಮದಿಂದಾಗಿ ನನಗೊಂದು ಅತ್ಯುತ್ಕೃಷ್ಟ ಮಾದರಿ ಇದೆ, ಮತ್ತು ನಾನು ಅವರನ್ನು ಗಾಲಿಕುರ್ಚಿಯಲ್ಲಿ ಕರಕೊಂಡು ಹೋಗುವಾಗ ನಾನು ಉಪಯುಕ್ತನೆಂಬ ಭಾವನೆಯುಂಟಾಗುತ್ತದೆ. ನಾನೇನನ್ನು ಮಾಡಲು ಇಷ್ಟಪಡುತ್ತೇನೊ ಅದನ್ನು ಯಾವಾಗಲೂ ಮಾಡಲಾರೆನೆಂದು ನನಗೆ ತಿಳಿದಿದೆ. ನಾನೀಗ ಒಬ್ಬ ಹದಿವಯಸ್ಕನಾಗಿದ್ದೇನೆ, ಆದರೆ ನಾನು ದೊಡ್ಡವನಾದಾಗ, ಹಾಸ್ಪಿಟಲ್‌ ಲಿಏಸಾನ್‌ ಕಮಿಟಿಯ ಒಬ್ಬ ಸದಸ್ಯನಾಗಲು ಬಯಸುತ್ತೇನೆ. ಕಷ್ಟತೊಂದರೆಗಳು ತಾತ್ಕಾಲಿಕವಾಗಿವೆಯೆಂದು ಬೈಬಲಿನ ವಾಗ್ದಾನಗಳಿಂದ ನನಗೆ ತಿಳಿದಿದೆ ಮತ್ತು ಅನೇಕ ಮಂದಿ ಸಹೋದರ ಸಹೋದರಿಯರು ನಮಗಿಂತಲೂ ಹೆಚ್ಚು ಕಷ್ಟಪಡುತ್ತಾರೆಂದೂ ನನಗೆ ಗೊತ್ತಿದೆ.

[ಪುಟ 22ರಲ್ಲಿರುವ ಚಿತ್ರ]

ನನ್ನ ಹೆಂಡತಿ ನನಗೆ ಬಲದ ಒಂದು ಮೂಲವಾಗಿದ್ದಾಳೆ

[ಪುಟ 23ರಲ್ಲಿರುವ ಚಿತ್ರ]

ಹೃದಯ ಶಸ್ತ್ರಚಿಕಿತ್ಸಕ ಡಾಕ್ಟರ್‌ ಕ್ವಾನ್‌ ಡ್ವಾರ್ಟೆರೊಂದಿಗೆ ಸಂಭಾಷಿಸುತ್ತಿರುವುದು

[ಪುಟ 25ರಲ್ಲಿರುವ ಚಿತ್ರ]

ಶುಶ್ರೂಷೆಯಲ್ಲಿ ಜೊತೆಯಾಗಿ ಕೆಲಸಮಾಡುವುದರಲ್ಲಿ ನನ್ನ ಮಗನೂ ನಾನೂ ಆನಂದಿಸುತ್ತೇವೆ