ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಿಜವಾದ ಪ್ರೀತಿಯನ್ನು ಬೆಳೆಸಿಕೊಳ್ಳುವ ವಿಧ

ನಿಜವಾದ ಪ್ರೀತಿಯನ್ನು ಬೆಳೆಸಿಕೊಳ್ಳುವ ವಿಧ

ನಿಜವಾದ ಪ್ರೀತಿಯನ್ನು ಬೆಳೆಸಿಕೊಳ್ಳುವ ವಿಧ

“ಪ್ರೀತಿಯೇ ಬದುಕಿಗೆ ಅಮೃತ; ಪ್ರೀತಿಯೇ ಜೀವನ.”​—ಜೀವನದಿಂದ ಸರ್ವೋತ್ತಮವಾದದ್ದನ್ನು ಪಡೆದುಕೊಳ್ಳುವುದು (ಇಂಗ್ಲಿಷ್‌), ಜೋಸೆಫ್‌ ಜಾನ್ಸನ್‌ರಿಂದ, 1871.

ಒಬ್ಬ ಮಾನವನು ಪ್ರೀತಿಸಲು ಕಲಿಯುವುದು ಹೇಗೆ? ಮನಶ್ಶಾಸ್ತ್ರವನ್ನು ಕಲಿಯುವುದರಿಂದಲೊ? ಸ್ವಸಹಾಯದ ಪುಸ್ತಕಗಳನ್ನು ಓದುವುದರಿಂದಲೊ? ಪ್ರೀತಿಪ್ರಣಯದ ಚಲನಚಿತ್ರಗಳನ್ನು ನೋಡುವುದರಿಂದಲೊ? ಖಂಡಿತವಾಗಿಯೂ ಅಲ್ಲ. ಮಾನವರು ಪ್ರಥಮವಾಗಿ ಪ್ರೀತಿಸಲು ಕಲಿಯುವುದು, ತಮ್ಮ ಹೆತ್ತವರ ಮಾದರಿ ಮತ್ತು ತರಬೇತಿಯಿಂದಲೇ. ಒಂದುವೇಳೆ ಮಕ್ಕಳು ಬೆಚ್ಚಗಿನ ವಾತ್ಸಲ್ಯಭರಿತ ಪರಿಸರದಲ್ಲಿ, ತಮ್ಮ ಹೆತ್ತವರು ತಮಗೆ ಉಣಿಸಿ ಸಂರಕ್ಷಿಸುವುದನ್ನು, ತಮ್ಮೊಂದಿಗೆ ಸಂವಾದಮಾಡುವುದನ್ನು, ಮತ್ತು ತಮ್ಮಲ್ಲಿ ತುಂಬ ವೈಯಕ್ತಿಕ ಆಸಕ್ತಿ ತೋರಿಸುವುದನ್ನು ನೋಡುವುದಾದರೆ ಆಗ ಅವರು ಪ್ರೀತಿಯ ಅರ್ಥವೇನೆಂಬದನ್ನು ಕಲಿಯುವರು. ಸರಿ ಮತ್ತು ತಪ್ಪಿನ ವಿಷಯದಲ್ಲಿ ಬಲವಾದ ಮೂಲತತ್ತ್ವಗಳನ್ನು ಪಾಲಿಸುವಂತೆ ಹೆತ್ತವರು ಕಲಿಸುವಾಗಲೂ ಅವರು ಪ್ರೀತಿಸಲು ಕಲಿಯುತ್ತಾರೆ.

ನಿಜವಾದ ಪ್ರೀತಿಯು, ಕೇವಲ ವಾತ್ಸಲ್ಯ ಇಲ್ಲವೆ ಭಾವಾವೇಶಕ್ಕಿಂತಲೂ ಹೆಚ್ಚಿನದ್ದಾಗಿದೆ. ಅದು ಯಾವಾಗಲೂ ಇತರರ ಹಿತಕ್ಕಾಗಿಯೇ​—ಅವರು ಆ ಸಮಯದಲ್ಲಿ ಇದನ್ನು ಗಣ್ಯಮಾಡದಿದ್ದರೂ​—ಕೆಲಸಮಾಡುತ್ತದೆ. ಇದು ಹೆಚ್ಚಾಗಿ ಮಕ್ಕಳಿಗೆ ಪ್ರೀತಿಪರವಾದ ಶಿಸ್ತು ಕೊಡಲ್ಪಡುವಾಗ ಸತ್ಯವಾಗಿರುತ್ತದೆ. ನಿಸ್ವಾರ್ಥ ಪ್ರೀತಿಯನ್ನು ತೋರಿಸುವುದರ ಪರಮೋತ್ತಮ ಮಾದರಿಯು, ಸ್ವತಃ ಸೃಷ್ಟಿಕರ್ತನೇ ಆಗಿದ್ದಾನೆ. ಅಪೊಸ್ತಲ ಪೌಲನು ಬರೆದುದು: “ಮಗನೇ, ಕರ್ತನ [“ಯೆಹೋವನ,” NW] ಶಿಕ್ಷೆಯನ್ನು ತಾತ್ಸಾರಮಾಡಬೇಡ; ಆತನು ನಿನ್ನನ್ನು ಗದರಿಸುವಾಗ ಬೇಸರಗೊಳ್ಳಬೇಡ; ಕರ್ತನು [“ಯೆಹೋವನು,” NW] ತಾನು ಪ್ರೀತಿಸುವವನನ್ನೇ ಶಿಕ್ಷಿಸುತ್ತಾನೆ.”​—ಇಬ್ರಿಯ 12:5, 6.

ಹೆತ್ತವರೇ, ನಿಮ್ಮ ಕುಟುಂಬಕ್ಕೆ ಪ್ರೀತಿಯನ್ನು ತೋರಿಸುವಾಗ ನೀವು ಯೆಹೋವನನ್ನು ಹೇಗೆ ಅನುಕರಿಸಬಲ್ಲಿರಿ? ಮತ್ತು ಗಂಡಹೆಂಡತಿಯರೋಪಾದಿ ನಿಮ್ಮ ನಡುವಿನ ಸಂಬಂಧದಲ್ಲಿ ನೀವು ಇಡುವಂಥ ಮಾದರಿಯು ಎಷ್ಟು ಮಹತ್ವಪೂರ್ಣವಾಗಿದೆ?

ಮಾದರಿಯ ಮೂಲಕ ಪ್ರೀತಿಯನ್ನು ಕಲಿಸಿರಿ

ನೀವು ಗಂಡನಾಗಿರುವಲ್ಲಿ, ನಿಮ್ಮ ಹೆಂಡತಿಯನ್ನು ಗೌರವದಿಂದ ಕಾಣುತ್ತೀರೊ ಇಲ್ಲವೆ ಅವಳಿಗೆ ಬಹಳ ಮೌಲ್ಯವನ್ನು ಕೊಡುತ್ತೀರೊ, ಮತ್ತು ಅವಳನ್ನು ಮಾನಮರ್ಯಾದೆಯಿಂದ ಉಪಚರಿಸುತ್ತೀರೊ? ನೀವು ಹೆಂಡತಿಯಾಗಿರುವಲ್ಲಿ, ನಿಮ್ಮ ಗಂಡನನ್ನು ಪ್ರೀತಿಸಿ, ಬೆಂಬಲಿಸುತ್ತೀರೊ? ಗಂಡಹೆಂಡತಿಯರು ಪರಸ್ಪರರನ್ನು ಪ್ರೀತಿಸಿ, ಗೌರವಿಸಬೇಕೆಂದು ಬೈಬಲ್‌ ಹೇಳುತ್ತದೆ. (ಎಫೆಸ 5:28; ತೀತ 2:4) ಅವರು ಹಾಗೆ ಮಾಡುವಾಗ, ಮಕ್ಕಳು ಕ್ರಿಸ್ತೀಯ ಪ್ರೀತಿಯನ್ನು ಕಾರ್ಯರೂಪದಲ್ಲಿ ನೋಡುತ್ತಾರೆ. ಇದು, ಅವರಿಗಾಗಿ ಎಷ್ಟು ಬಲವಾದ ಹಾಗೂ ಅಮೂಲ್ಯವಾದ ಪಾಠವಾಗಿರಬಲ್ಲದು!

ಮನೋರಂಜನೆ, ನೈತಿಕತೆ, ಮತ್ತು ಗುರಿಗಳು ಹಾಗೂ ಆದ್ಯತೆಗಳಂಥ ವಿಷಯಗಳಲ್ಲಿ ಕುಟುಂಬಕ್ಕಾಗಿ ಉಚ್ಚ ಮಟ್ಟಗಳನ್ನಿಟ್ಟು ಅವುಗಳಿಗೆ ಅಂಟಿಕೊಳ್ಳುವಾಗಲೂ, ಹೆತ್ತವರು ಮನೆಯಲ್ಲಿ ಪ್ರೀತಿಯನ್ನು ವರ್ಧಿಸುತ್ತಾರೆ. ಇಂಥ ಕುಟುಂಬ ಮಟ್ಟಗಳನ್ನಿಡುವುದರಲ್ಲಿ ಬೈಬಲ್‌ ತುಂಬ ಸಹಾಯಕಾರಿಯಾಗಿದೆ ಎಂಬುದನ್ನು ಲೋಕವ್ಯಾಪಕವಾಗಿ ಜನರು ಕಂಡುಕೊಂಡಿದ್ದಾರೆ. ಮತ್ತು ಇದು, ಬೈಬಲು ನಿಜವಾಗಿಯೂ ‘ದೈವಪ್ರೇರಿತವಾಗಿದೆ ಮತ್ತು ಉಪದೇಶಕ್ಕೂ ಖಂಡನೆಗೂ ತಿದ್ದುಪಾಟಿಗೂ ನೀತಿಶಿಕ್ಷೆಗೂ ಉಪಯುಕ್ತವಾಗಿದೆ’ ಎಂಬುದಕ್ಕೆ ಜೀವಂತ ಸಾಕ್ಷ್ಯವಾಗಿದೆ. (2 ತಿಮೊಥೆಯ 3:16) ಹೌದು, ಕೇವಲ ಪರ್ವತ ಪ್ರಸಂಗವೊಂದನ್ನೇ ತೆಗೆದುಕೊಳ್ಳುವುದಾದರೂ, ಅದರಲ್ಲಿ ಜೀವನಕ್ಕಾಗಿ ಇರುವಂಥ ನೈತಿಕ ಬೋಧೆಗಳು ಹಾಗೂ ಮಾರ್ಗದರ್ಶನವು ತುಂಬ ಅನುಪಮವಾದದ್ದೆಂದು ವ್ಯಾಪಕವಾಗಿ ಪರಿಗಣಿಸಲಾಗಿದೆ.​—ಮತ್ತಾಯ, 5-7ನೆಯ ಅಧ್ಯಾಯಗಳು.

ಇಡೀ ಕುಟುಂಬವು ಮಾರ್ಗದರ್ಶನಕ್ಕಾಗಿ ದೇವರೆಡೆಗೆ ನೋಡಿ, ಆತನ ಮಟ್ಟಗಳಿಗೆ ಅಂಟಿಕೊಳ್ಳುವಾಗ, ಪ್ರತಿಯೊಬ್ಬ ವ್ಯಕ್ತಿಗೆ ಹೆಚ್ಚು ಸುರಕ್ಷಿತ ಅನಿಸಿಕೆಯಾಗುತ್ತದೆ, ಮತ್ತು ಮಕ್ಕಳು ತಮ್ಮ ಹೆತ್ತವರಿಗಾಗಿ ಪ್ರೀತಿ ಹಾಗೂ ಗೌರವದಲ್ಲಿ ಬೆಳೆಯುವ ಸಾಧ್ಯತೆ ಹೆಚ್ಚಾಗಿರುತ್ತದೆ. ಇದಕ್ಕೆ ವಿರುದ್ಧವಾಗಿ, ಇಬ್ಬಗೆಯ, ತಪ್ಪಾದ, ಇಲ್ಲವೆ ಸಡಿಲು ಮಟ್ಟಗಳುಳ್ಳ ಮನೆಯಲ್ಲಿ, ಮಕ್ಕಳು ರೇಗುವವರು, ಕೋಪಗೊಳ್ಳುವವರು ಮತ್ತು ಪ್ರತಿಭಟಿಸುವವರಾಗಬಹುದು.​—ರೋಮಾಪುರ 2:21; ಕೊಲೊಸ್ಸೆ 3:21.

ಏಕ ಹೆತ್ತವರ ಕುರಿತಾಗಿ ಏನು? ತಮ್ಮ ಮಕ್ಕಳಿಗೆ ಪ್ರೀತಿಯನ್ನು ಕಲಿಸಲು ಅವರಿಗೆ ಗಂಭೀರವಾದ ಕೊರತೆಯಿದೆಯೊ? ಹಾಗಿರಬೇಕೆಂದಿಲ್ಲ. ಒಳ್ಳೇ ತಂದೆತಾಯಿಯುಳ್ಳ ಒಂದು ತಂಡಕ್ಕೆ ಬೇರಾವುದೇ ಬದಲಿಯಿಲ್ಲದಿದ್ದರೂ, ಕುಟುಂಬ ಸಂಬಂಧಗಳ ಗುಣಮಟ್ಟವು ಒಳ್ಳೇದಾಗಿರುವಲ್ಲಿ, ಅದು ಒಬ್ಬ ತಂದೆ/ತಾಯಿಯ ಅನುಪಸ್ಥಿತಿಯನ್ನು ಸ್ವಲ್ಪ ಮಟ್ಟಿಗೆ ಸರಿದೂಗಿಸಬಲ್ಲದೆಂದು ಅನುಭವವು ತೋರಿಸುತ್ತದೆ. ನೀವೊಬ್ಬ ಏಕ ಹೆತ್ತವರಾಗಿರುವಲ್ಲಿ, ನಿಮ್ಮ ಮನೆಯಲ್ಲಿ ಬೈಬಲ್‌ ಮೂಲತತ್ತ್ವಗಳನ್ನು ಅನ್ವಯಿಸಿಕೊಳ್ಳಲು ಪ್ರಯತ್ನಿಸಿರಿ. ಹೌದು, ಒಂದು ಜ್ಞಾನೋಕ್ತಿಯು ನಮಗೆ ಹೀಗನ್ನುತ್ತದೆ: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು”​—ಹೆತ್ತವರ ಮಾರ್ಗವನ್ನೂ​—“ಸರಾಗಮಾಡುವನು.”​—ಜ್ಞಾನೋಕ್ತಿ 3:5, 6; ಯಾಕೋಬ 1:5.

ಅನೇಕ ಉತ್ತಮ ಯುವ ಜನರು, ಏಕ ಹೆತ್ತವರುಳ್ಳ ಪರಿಸರದಲ್ಲಿ ಬೆಳೆಸಲ್ಪಟ್ಟವರಾಗಿದ್ದರು ಮತ್ತು ಈಗ ಲೋಕದಾದ್ಯಂತ ಯೆಹೋವನ ಸಾಕ್ಷಿಗಳ ಸಾವಿರಾರು ಕ್ರೈಸ್ತ ಸಭೆಗಳಲ್ಲಿ ದೇವರನ್ನು ನಂಬಿಗಸ್ತಿಕೆಯಿಂದ ಸೇವಿಸುತ್ತಿದ್ದಾರೆ. ತಮ್ಮ ಮಕ್ಕಳಿಗೆ ಪ್ರೀತಿಯನ್ನು ಕಲಿಸುವುದರಲ್ಲಿ ಏಕ ಹೆತ್ತವರು ಸಹ ಯಶಸ್ವಿಯಾಗಬಲ್ಲರು ಎಂಬುದಕ್ಕೆ ಇದು ರುಜುವಾತಾಗಿದೆ.

ಪ್ರೀತಿಯನ್ನು ಎಲ್ಲರೂ ಬೆಳೆಸಿಕೊಳ್ಳಬಲ್ಲ ವಿಧ

“ಕಡೇ ದಿವಸಗಳಲ್ಲಿ” ‘ಮಮತೆಯಿಲ್ಲದಿರುವುದು,’ ಅಂದರೆ ಸಾಮಾನ್ಯವಾಗಿ ಕುಟುಂಬ ಸದಸ್ಯರಿಗಾಗಿ ಇರುವಂಥ ಸ್ವಾಭಾವಿಕ ನಂಟು ಇರುವುದಿಲ್ಲವೆಂದು ಬೈಬಲ್‌ ಮುಂತಿಳಿಸಿತು. (2 ತಿಮೊಥೆಯ 3:​1, 3) ಆದರೆ, ಪ್ರೀತಿವಾತ್ಸಲ್ಯದ ಕೊರತೆಯಿದ್ದ ಪರಿಸರದಲ್ಲಿ ಬೆಳೆದವರು ಸಹ, ಪ್ರೀತಿಯನ್ನು ಬೆಳೆಸಿಕೊಳ್ಳಲು ಕಲಿಯಬಲ್ಲರು. ಹೇಗೆ? ಪ್ರೀತಿಯ ಮೂಲಕರ್ತನು ಆಗಿರುವ ಯೆಹೋವನಿಂದ ಕಲಿಯುವ ಮೂಲಕವೇ. ಪೂರ್ಣ ಹೃದಯದಿಂದ ತನ್ನೆಡೆಗೆ ತಿರುಗುವವರೆಲ್ಲರಿಗಾಗಿಯೂ ಆತನು ಪ್ರೀತಿವಾತ್ಸಲ್ಯವನ್ನು ತೋರಿಸುತ್ತಾನೆ. (1 ಯೋಹಾನ 4:​7, 8) “ತಂದೆತಾಯಿಗಳು ನನ್ನನ್ನು ತೊರೆದುಬಿಟ್ಟರೇನು; ಯೆಹೋವನು ನನ್ನನ್ನು ಸೇರಿಸಿಕೊಳ್ಳುವನು” ಎಂದು ಒಬ್ಬ ಕೀರ್ತನೆಗಾರನು ಹೇಳಿದನು.​—ಕೀರ್ತನೆ 27:10.

ನಮ್ಮ ಕಡೆಗಿನ ತನ್ನ ಪ್ರೀತಿಯನ್ನು ಯೆಹೋವನು ಅನೇಕ ವಿಧಗಳಲ್ಲಿ ತೋರಿಸುತ್ತಾನೆ. ಇದರಲ್ಲಿ, ಬೈಬಲಿನ ಮೂಲಕ ಪಿತೃಸದೃಶ ಮಾರ್ಗದರ್ಶನ, ಪವಿತ್ರಾತ್ಮದ ಸಹಾಯ ಮತ್ತು ಕ್ರೈಸ್ತ ಸಹೋದರತ್ವದ ಬೆಚ್ಚಗಿನ ಬೆಂಬಲವು ಸೇರಿದೆ. (ಕೀರ್ತನೆ 119:​97-105; ಲೂಕ 11:13; ಇಬ್ರಿಯ 10:​24, 25) ದೇವರ ಹಾಗೂ ನೆರೆಯವರ ಕಡೆಗಿನ ನಿಮ್ಮ ಪ್ರೀತಿಯನ್ನು ಹೆಚ್ಚಿಸಲು ಈ ಮೂರು ಒದಗಿಸುವಿಕೆಗಳು ಹೇಗೆ ಸಹಾಯಮಾಡಬಲ್ಲವೆಂಬದನ್ನು ಪರಿಗಣಿಸಿರಿ.

ಪ್ರೇರಿತವಾದ ಪಿತೃಸದೃಶ ಮಾರ್ಗದರ್ಶನ

ಒಬ್ಬ ವ್ಯಕ್ತಿಯೊಂದಿಗೆ ಪ್ರೀತಿಭರಿತ ಬಂಧವನ್ನು ಬೆಳೆಸಿಕೊಳ್ಳಲಿಕ್ಕಾಗಿ ನಾವು ಮೊದಲು ಆ ವ್ಯಕ್ತಿಯನ್ನು ಚೆನ್ನಾಗಿ ತಿಳಿದುಕೊಳ್ಳಬೇಕು. ಬೈಬಲಿನ ಪುಟಗಳ ಮೂಲಕ ಯೆಹೋವನು ತನ್ನ ಬಗ್ಗೆ ಪ್ರಕಟಿಸುತ್ತಾ, ನಾವು ಆತನ ಹತ್ತಿರಕ್ಕೆ ಬರುವಂತೆ ನಮ್ಮನ್ನು ಆಮಂತ್ರಿಸುತ್ತಾನೆ. ಆದರೆ ಬೈಬಲನ್ನು ಓದುವುದು ಮಾತ್ರ ಸಾಕಾಗುವುದಿಲ್ಲ. ನಾವು ಅದರ ಬೋಧನೆಗಳನ್ನು ಅನ್ವಯಿಸಿಕೊಳ್ಳಬೇಕು ಮತ್ತು ಅದರಿಂದ ಫಲಿಸುವ ಪ್ರಯೋಜನಗಳನ್ನು ಅನುಭವಿಸಬೇಕು. (ಕೀರ್ತನೆ 19:​7-10) “ನಾನೇ ನಿನ್ನ ದೇವರಾದ ಯೆಹೋವನು, ನಿನಗೆ ವೃದ್ಧಿಮಾರ್ಗವನ್ನು ಬೋಧಿಸಿ ನೀನು ನಡೆಯಬೇಕಾದ ದಾರಿಯಲ್ಲಿ ನಿನ್ನನ್ನು ನಡೆಯಿಸುವವನಾಗಿದ್ದೇನೆ” ಎಂದು ಯೆಶಾಯ 48:17 ಹೇಳುತ್ತದೆ. ಹೌದು, ಪ್ರೀತಿಯ ಸಾಕಾರಮೂರ್ತಿಯೇ ಆಗಿರುವ ಯೆಹೋವನು ನಮ್ಮ ಪ್ರಯೋಜನಕ್ಕಾಗಿ ಬೋಧಿಸುತ್ತಾನೆಯೇ ಹೊರತು, ಅನಗತ್ಯವಾದ ನಿಯಮಗಳೊಂದಿಗೆ ನಮ್ಮ ಸ್ವಾತಂತ್ರ್ಯವನ್ನು ನಿರ್ಬಂಧಿಸಲಿಕ್ಕಾಗಿ ಅಲ್ಲ.

ಬೈಬಲಿನ ಕುರಿತಾದ ನಿಷ್ಕೃಷ್ಟ ಜ್ಞಾನವು ಸಹ, ನಮ್ಮ ಜೊತೆ ಮಾನವರಿಗಾಗಿ ಪ್ರೀತಿಯಲ್ಲಿ ಬೆಳೆಯುವಂತೆ ಸಹಾಯಮಾಡುತ್ತದೆ. ಏಕೆಂದರೆ ಬೈಬಲ್‌ ಸತ್ಯವು, ಮಾನವರನ್ನು ದೇವರು ಹೇಗೆ ದೃಷ್ಟಿಸುತ್ತಾನೆಂಬುದನ್ನು ಕಲಿಸುತ್ತದೆ ಮತ್ತು ಪರಸ್ಪರರೊಂದಿಗಿನ ನಮ್ಮ ವ್ಯವಹಾರಗಳನ್ನು ನಿಯಂತ್ರಿಸಬೇಕಾದ ಮೂಲತತ್ತ್ವಗಳನ್ನು ತೋರಿಸುತ್ತದೆ. ಅಂಥ ಮಾಹಿತಿಯೊಂದಿಗೆ, ನೆರೆಯವನಿಗಾಗಿ ಪ್ರೀತಿಯನ್ನು ಬೆಳೆಸಿಕೊಳ್ಳಲು ನಮಗೆ ಬಲವಾದ ಆಧಾರವಿದೆ. ಅಪೊಸ್ತಲ ಪೌಲನು ಹೇಳಿದ್ದು: ‘ನಿಮ್ಮ ಪ್ರೀತಿಯು ಹೆಚ್ಚುತ್ತಾ ಹೆಚ್ಚುತ್ತಾ ಪೂರ್ಣ ಜ್ಞಾನವಿವೇಕಗಳಿಂದ ಕೂಡಿರಬೇಕೆಂತಲೂ ಬೇಡಿಕೊಳ್ಳುತ್ತೇನೆ.’​—ಫಿಲಿಪ್ಪಿ 1:​10, 11, ಓರೆ ಅಕ್ಷರಗಳು ನಮ್ಮವು.

ಪ್ರೀತಿಯು “ಪೂರ್ಣ ಜ್ಞಾನ”ದಿಂದ ಹೇಗೆ ಸರಿಯಾಗಿ ನಿರ್ದೇಶಿಸಲ್ಪಡಸಾಧ್ಯವಿದೆ ಎಂಬುದನ್ನು ದೃಷ್ಟಾಂತಿಸಲು, ಅಪೊಸ್ತಲರ ಕೃತ್ಯಗಳು 10:​34, 35ರಲ್ಲಿ ತಿಳಿಸಲ್ಪಟ್ಟಿರುವ ಮೂಲಭೂತ ಸತ್ಯವನ್ನು ಪರಿಗಣಿಸಿರಿ: “ದೇವರು ಪಕ್ಷಪಾತಿಯಲ್ಲ, ಯಾವ ಜನರಲ್ಲಿಯಾದರೂ ದೇವರಿಗೆ ಭಯಪಟ್ಟು ನೀತಿಯನ್ನು ನಡಿಸುವವರು ಆತನಿಗೆ ಮೆಚ್ಚಿಗೆಯಾಗಿದ್ದಾರೆ.” ಸ್ವತಃ ದೇವರೇ ಜನರನ್ನು, ಅವರ ರಾಷ್ಟ್ರೀಯತೆ ಇಲ್ಲವೆ ಜಾತಿಗನುಸಾರವಲ್ಲ ಬದಲಾಗಿ ಅವರ ನೀತಿಯ ಕ್ರಿಯೆಗಳು ಮತ್ತು ದೈವಿಕ ಭಯದಿಂದ ಅಳೆಯುತ್ತಾನಾದರೆ, ನಾವು ಸಹ ಅದೇ ರೀತಿಯ ನಿಷ್ಪಕ್ಷಪಾತ ಮನೋಭಾವದಿಂದ ನಮ್ಮ ಜೊತೆಮಾನವನನ್ನು ದೃಷ್ಟಿಸಬಾರದೊ?​—ಅ. ಕೃತ್ಯಗಳು 17:​26, 27; 1 ಯೋಹಾನ 4:​7-11, 20, 21.

ಪ್ರೀತಿ​—ದೇವರಾತ್ಮದ ಒಂದು ಫಲ

ಸಮಯಕ್ಕೆ ಸರಿಯಾಗಿ ಬೀಳುವ ಮಳೆಯಿಂದಾಗಿ ಒಂದು ಹಣ್ಣಿನ ತೋಟದಲ್ಲಿ ಒಳ್ಳೇ ಫಲವು ದೊರೆಯುವಂತೆಯೇ, ಬೈಬಲು ಯಾವುದನ್ನು ‘ಆತ್ಮದ ಫಲ’ ಎಂದು ಕರೆಯುತ್ತದೊ ಆ ಗುಣಗಳನ್ನು ದೇವರಾತ್ಮವು ಗ್ರಹಣಶೀಲ ವ್ಯಕ್ತಿಗಳಲ್ಲಿ ಉತ್ಪಾದಿಸಬಲ್ಲದು. (ಗಲಾತ್ಯ 5:​22, 23) ಇವುಗಳಲ್ಲಿ ಅತಿ ಪ್ರಧಾನವಾದದ್ದು, ಪ್ರೀತಿಯೇ ಆಗಿದೆ. (1 ಕೊರಿಂಥ 13:13) ಆದರೆ ನಾವು ದೇವರಾತ್ಮವನ್ನು ಹೇಗೆ ಪಡೆಯಬಲ್ಲೆವು? ಒಂದು ಪ್ರಮುಖ ವಿಧವು ಪ್ರಾರ್ಥನೆಯಾಗಿದೆ. ನಾವು ದೇವರಾತ್ಮಕ್ಕಾಗಿ ಪ್ರಾರ್ಥಿಸುವಲ್ಲಿ, ಆತನು ಅದನ್ನು ನಮಗೆ ಕೊಡುವನು. (ಲೂಕ 11:​9-13) ನೀವು ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸುತ್ತಾ ಇರುತ್ತೀರೊ? ನೀವು ಹಾಗೆ ಮಾಡುವಲ್ಲಿ, ಪ್ರೀತಿಯನ್ನೂ ಸೇರಿಸಿ ಅದರ ಇತರ ಅಮೂಲ್ಯ ಫಲವು ನಿಮ್ಮ ಜೀವನದಲ್ಲಿ ಹೆಚ್ಚೆಚ್ಚು ಪ್ರಕಟವಾಗುವುದು.

ಆದರೆ ದೇವರಾತ್ಮಕ್ಕೆ ವಿರುದ್ಧವಾಗಿ ಕ್ರಿಯೆಗೈಯುವ ಇನ್ನೊಂದು ವಿಧದ ಆತ್ಮವುಂಟು. ಬೈಬಲ್‌ ಇದನ್ನು “ಪ್ರಾಪಂಚಿಕ ಆತ್ಮ” ಎಂದು ಕರೆಯುತ್ತದೆ. (1 ಕೊರಿಂಥ 2:12; ಎಫೆಸ 2:2) ಅದೊಂದು ದುಷ್ಟ ಪ್ರಭಾವವಾಗಿದೆ. ಮತ್ತು ಅದರ ಮೂಲಕರ್ತನು “ಇಹಲೋಕಾಧಿಪತಿ,” ಅಂದರೆ ದೇವರಿಂದ ದೂರಸರಿದಿರುವ ಮಾನವಕುಲವೆಂಬ ಈ ಲೋಕದ ಅಧಿಪತಿಯಾಗಿರುವ ಪಿಶಾಚನಾದ ಸೈತಾನನಾಗಿದ್ದಾನೆ. (ಯೋಹಾನ 12:31) ಧೂಳು ಮತ್ತು ಕಸಕಡ್ಡಿಯನ್ನು ಎಬ್ಬಿಸುವಂಥ ಗಾಳಿಯಂತೆ, ಈ “ಪ್ರಾಪಂಚಿಕ ಆತ್ಮ”ವು ಹಾನಿಕಾರಕ ಆಸೆಗಳನ್ನು ಎಬ್ಬಿಸುತ್ತದೆ ಮತ್ತು ಇವು ಪ್ರೀತಿಯನ್ನು ನಾಶಮಾಡಿ ಶರೀರದ ಬಲಹೀನತೆಗಳನ್ನು ತೃಪ್ತಿಪಡಿಸುತ್ತವೆ.​—ಗಲಾತ್ಯ 5:​19-21.

ಜನರು ತಮ್ಮನ್ನೇ ಐಹಿಕ, ಸ್ವಾರ್ಥಪರ ಯೋಚನಾಧಾಟಿಗೆ, ಹಿಂಸಾತ್ಮಕ ಮನೋಭಾವಗಳಿಗೆ, ಮತ್ತು ಲೋಕದಲ್ಲಿ ಸರ್ವಸಾಮಾನ್ಯವಾಗಿರುವ ಪ್ರೀತಿಯ ಕುರಿತಾದ ತಿರುಚಲ್ಪಟ್ಟ ಹಾಗೂ ಅನೇಕವೇಳೆ ವಕ್ರವಾದ ದೃಷ್ಟಿಕೋನಕ್ಕೆ ಒಡ್ಡಿಕೊಳ್ಳುವಾಗ, ಆ ದುಷ್ಟಾತ್ಮವನ್ನು ಅವರು ಹೀರಿಕೊಳ್ಳುತ್ತಾರೆ. ನೀವು ನಿಜವಾದ ಪ್ರೀತಿಯಲ್ಲಿ ಬೆಳೆಯಲು ಬಯಸುವಲ್ಲಿ, ಈ ಪ್ರಾಪಂಚಿಕ ಆತ್ಮವನ್ನು ದೃಢವಾಗಿ ಪ್ರತಿರೋಧಿಸಬೇಕು. (ಯಾಕೋಬ 4:7) ಆದರೆ ನಿಮ್ಮ ಸ್ವಂತ ಬಲದ ಮೇಲೆ ಭರವಸೆಯಿಡಬೇಡಿರಿ, ಸಹಾಯಕ್ಕಾಗಿ ಯೆಹೋವನನ್ನು ಬೇಡಿರಿ. ಇಡೀ ವಿಶ್ವದಲ್ಲೇ ಅತ್ಯಂತ ಬಲಶಾಲಿಯಾದ ಶಕ್ತಿಯಾಗಿರುವ ಆತನ ಆತ್ಮವು ನಿಮ್ಮನ್ನು ಬಲಪಡಿಸಿ, ನಿಮಗೆ ಯಶಸ್ಸನ್ನು ಕೊಡಬಲ್ಲದು.​—ಕೀರ್ತನೆ 121:2.

ಕ್ರೈಸ್ತ ಸಹೋದರತ್ವದಿಂದ ಪ್ರೀತಿಯನ್ನು ಕಲಿಯಿರಿ

ಮನೆಯಲ್ಲಿ ಪ್ರೀತಿಯನ್ನು ಅನುಭವಿಸುವುದರಿಂದ ಮಕ್ಕಳು ಪ್ರೀತಿಯನ್ನು ತೋರಿಸಲು ಕಲಿಯುವಂತೆಯೇ, ನಾವೆಲ್ಲರೂ​—ಆಬಾಲವೃದ್ಧರು​—ಇತರ ಕ್ರೈಸ್ತರೊಂದಿಗೆ ಸಹವಾಸಮಾಡುವ ಮೂಲಕ ಪ್ರೀತಿಯಲ್ಲಿ ಬೆಳೆಯಬಲ್ಲೆವು. (ಯೋಹಾನ 13:​34, 35) ವಾಸ್ತವದಲ್ಲಿ, ಕ್ರೈಸ್ತ ಸಭೆಯ ಒಂದು ಮುಖ್ಯ ಕಾರ್ಯಾಚರಣೆಯು, ವ್ಯಕ್ತಿಗಳು ‘ಪ್ರೀತಿಸಬೇಕೆಂತಲೂ ಸತ್ಕಾರ್ಯಮಾಡಬೇಕೆಂತಲೂ ಒಬ್ಬರನ್ನೊಬ್ಬರು ಪ್ರೇರೇಪಿಸುವ’ ವಾತಾವರಣವನ್ನು ಒದಗಿಸುವುದೇ ಆಗಿದೆ.​—ಇಬ್ರಿಯ 10:​24, ಇಂಟರ್‌ನ್ಯಾಷನಲ್‌ ವರ್ಷನ್‌.

ನಮ್ಮ ಸುತ್ತಲಿರುವ ಪ್ರೀತಿರಹಿತ ಲೋಕದಲ್ಲಿ “ತೊಳಲಿ ಬಳಲಿ ಹೋಗಿ”ರುವವರು ಇಂಥ ಪ್ರೀತಿಯನ್ನು ವಿಶೇಷವಾಗಿ ಗಣ್ಯಮಾಡುತ್ತಾರೆ. (ಮತ್ತಾಯ 9:36) ಒಬ್ಬ ವ್ಯಕ್ತಿಗೆ ಬಾಲ್ಯದಲ್ಲಿ ಪ್ರೀತಿಯು ಸಿಗದೇ ಇದ್ದುದರಿಂದ ಉಂಟಾದ ಕೆಟ್ಟ ಪರಿಣಾಮಗಳನ್ನು, ಅವನು ವಯಸ್ಕನಾಗಿರುವಾಗ ಹೊಂದುವ ಪ್ರೀತಿಪರವಾದ ಸಂಬಂಧಗಳು ತೆಗೆದುಹಾಕಬಲ್ಲವೆಂದು ಅನುಭವವು ತೋರಿಸುತ್ತದೆ. ಆದುದರಿಂದ, ಎಲ್ಲಾ ಸಮರ್ಪಿತ ಕ್ರೈಸ್ತರು ತಮ್ಮೊಂದಿಗೆ ಸಹವಾಸ ಮಾಡಲಾರಂಭಿಸುವ ಹೊಸಬರಿಗೆ ನಿಜವಾಗಿಯೂ ಹೃತ್ಪೂರ್ವಕವಾದ ಸ್ವಾಗತವನ್ನು ನೀಡುವುದು ಎಷ್ಟು ಪ್ರಾಮುಖ್ಯವಾಗಿದೆ!

“ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ”

“ಪ್ರೀತಿಯು ಎಂದಿಗೂ ಬಿದ್ದುಹೋಗುವದಿಲ್ಲ” ಎಂದು ಬೈಬಲ್‌ ಹೇಳುತ್ತದೆ. (1 ಕೊರಿಂಥ 13:8) ಅದು ಹೇಗೆ? ಅಪೊಸ್ತಲ ಪೌಲನು ನಮಗನ್ನುವುದು: “ಪ್ರೀತಿ ಬಹು ತಾಳ್ಮೆಯುಳ್ಳದ್ದು, ಪ್ರೀತಿ ದಯೆ ತೋರಿಸುವದು. ಪ್ರೀತಿಯು ಹೊಟ್ಟೆಕಿಚ್ಚುಪಡುವದಿಲ್ಲ, ಹೊಗಳಿಕೊಳ್ಳುವದಿಲ್ಲ; ಉಬ್ಬಿಕೊಳ್ಳುವದಿಲ್ಲ; ಮರ್ಯಾದೆಗೆಟ್ಟು ನಡೆಯುವದಿಲ್ಲ, ಸ್ವಪ್ರಯೋಜನವನ್ನು ಚಿಂತಿಸುವದಿಲ್ಲ, ಸಿಟ್ಟುಗೊಳ್ಳುವದಿಲ್ಲ, ಅಪಕಾರವನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳುವದಿಲ್ಲ.” (1 ಕೊರಿಂಥ 13:4, 5) ಈ ಪ್ರೀತಿಯು ಒಂದು ಕಾಲ್ಪನಿಕ ವಿಚಾರವಾಗಲಿ, ಮೇಲುಮೇಲಿನ ಭಾವಾವೇಶವಾಗಲಿ ಅಲ್ಲವೆಂಬುದು ಸ್ಪಷ್ಟ. ಅದರ ಬದಲು, ಅದನ್ನು ತೋರಿಸುವವರಿಗೆ ಬದುಕಿನ ನಿರಾಶೆ ಹಾಗೂ ನೋವುಗಳ ಅರಿವಿದ್ದು ಅದನ್ನು ಅಂಗೀಕರಿಸುತ್ತಾರಾದರೂ, ಅವು ಜೊತೆಮಾನವನಿಗಾಗಿರುವ ತಮ್ಮ ಪ್ರೀತಿಯನ್ನು ಅಳಿಸಿಹಾಕುವಂತೆ ಅವರು ಬಿಡುವುದಿಲ್ಲ. ಅಂಥ ಪ್ರೀತಿಯು ನಿಜವಾಗಿಯೂ “ಪೂರ್ಣಮಾಡುವ ಬಂಧ”ವಾಗಿದೆ.​—ಕೊಲೊಸ್ಸೆ 3:​12-14.

ಕೊರಿಯದಲ್ಲಿನ 17 ವರ್ಷ ಪ್ರಾಯದ ಒಬ್ಬ ಕ್ರೈಸ್ತ ಹುಡುಗಿಯ ಉದಾಹರಣೆಯನ್ನು ಪರಿಗಣಿಸಿರಿ. ಅವಳು ಯೆಹೋವ ದೇವರನ್ನು ಸೇವಿಸಲಾರಂಭಿಸಿದಾಗ, ಅವಳ ಕುಟುಂಬವು ಅದಕ್ಕೆ ಒಪ್ಪಿಗೆ ಕೊಡಲಿಲ್ಲ, ಮತ್ತು ಈ ಕಾರಣದಿಂದ ಅವಳು ಮನೆಯನ್ನು ಬಿಟ್ಟುಹೋಗಬೇಕಾಯಿತು. ಹಾಗಿದ್ದರೂ ಕೋಪಗೊಳ್ಳುವ ಬದಲು, ಅವಳು ಈ ವಿಷಯವಾಗಿ ಪ್ರಾರ್ಥಿಸಿ, ದೇವರ ವಾಕ್ಯ ಹಾಗೂ ಆತ್ಮವು ಅವಳ ಯೋಚನೆಗಳನ್ನು ರೂಪಿಸುವಂತೆ ಅನುಮತಿಸಿದಳು. ತದನಂತರ ಅವಳು ಅನೇಕಸಲ ತನ್ನ ಕುಟುಂಬಕ್ಕೆ ಪತ್ರಬರೆದಳು. ಈ ಪತ್ರಗಳಲ್ಲೆಲ್ಲಾ, ಅವರ ಬಗ್ಗೆ ಅವಳಿಗಿದ್ದ ನಿಜವಾದ ಪ್ರೀತಿಭರಿತ ವಾತ್ಸಲ್ಯದ ಕುರಿತಾಗಿ ಬರೆಯುತ್ತಿದ್ದಳು. ಇದಕ್ಕೆ ಪ್ರತಿಕ್ರಿಯೆಯಲ್ಲಿ, ಅವಳ ಇಬ್ಬರು ಅಣ್ಣಂದಿರು ಬೈಬಲ್‌ ಅಧ್ಯಯನ ಮಾಡಲಾರಂಭಿಸಿ, ಈಗ ಸಮರ್ಪಿತ ಕ್ರೈಸ್ತರಾಗಿದ್ದಾರೆ. ಅವಳ ತಾಯಿ ಮತ್ತು ತಮ್ಮ ಸಹ ಬೈಬಲ್‌ ಸತ್ಯವನ್ನು ಸ್ವೀಕರಿಸಿದರು. ಕೊನೆಗೆ, ಸತ್ಯವನ್ನು ಬಹಳಷ್ಟು ವಿರೋಧಿಸುತ್ತಿದ್ದ ಅವಳ ತಂದೆ ಸಹ ತಮ್ಮ ಮನೋಭಾವವನ್ನು ಬದಲಾಯಿಸಿದರು. ಆ ಸಾಕ್ಷಿ ಹುಡುಗಿ ಬರೆಯುವುದು: “ನಾವೆಲ್ಲರೂ ಜೊತೆ ಕ್ರೈಸ್ತರನ್ನು ಮದುವೆಯಾದೆವು, ಮತ್ತು ಈಗ ಐಕ್ಯ ಆರಾಧಕರ ನಮ್ಮ ಕುಟುಂಬದ ಒಟ್ಟು ಸಂಖ್ಯೆ 23 ಆಗಿದೆ.” ಪ್ರೀತಿಗೆ ಎಂಥ ಜಯ!

ನಿಜವಾದ ಪ್ರೀತಿಯನ್ನು ಬೆಳೆಸಿಕೊಂಡು, ಇತರರೂ ಹಾಗೆ ಮಾಡುವಂತೆ ನೀವು ಬಯಸುತ್ತೀರೊ? ಹಾಗಿರುವಲ್ಲಿ, ಆ ಅಮೂಲ್ಯ ಗುಣದ ಮೂಲನಾಗಿರುವ ಯೆಹೋವನೆಡೆಗೆ ತಿರುಗಿರಿ. ಹೌದು, ಆತನ ವಾಕ್ಯದ ಕುರಿತು ಚಿಂತಿಸಿ, ಪವಿತ್ರಾತ್ಮಕ್ಕಾಗಿ ಪ್ರಾರ್ಥಿಸಿರಿ, ಮತ್ತು ಕ್ರೈಸ್ತ ಸಹೋದರತ್ವದೊಂದಿಗೆ ಕ್ರಮವಾಗಿ ಸಹವಾಸಮಾಡಿರಿ. (ಯೆಶಾಯ 11:9; ಮತ್ತಾಯ 5:5) ಬೇಗನೆ ಎಲ್ಲಾ ದುಷ್ಟರು ಇಲ್ಲವಾಗುವರು, ಮತ್ತು ನಿಜವಾದ ಕ್ರೈಸ್ತ ಪ್ರೀತಿಯನ್ನು ತೋರಿಸುವವರು ಮಾತ್ರ ಉಳಿಯುವರು ಎಂಬುದನ್ನು ತಿಳಿದಿರುವುದು ಎಷ್ಟೊಂದು ಹೃದಯಸ್ಪರ್ಶಿ ಸಂಗತಿಯಾಗಿದೆ! ನಿಜವಾಗಿಯೂ, ಪ್ರೀತಿಯೇ ಸಂತೋಷ ಹಾಗೂ ಜೀವದ ಕೀಲಿ ಕೈ ಆಗಿದೆ.​—ಕೀರ್ತನೆ 37:​10, 11; 1 ಯೋಹಾನ 3:14.

[ಪುಟ 6ರಲ್ಲಿರುವ ಚಿತ್ರಗಳು]

ಪ್ರಾರ್ಥನೆ ಮತ್ತು ದೇವರ ವಾಕ್ಯದ ಅಧ್ಯಯನವು, ನಾವು ನಿಜವಾದ ಪ್ರೀತಿಯನ್ನು ಬೆಳೆಸಿಕೊಳ್ಳಲು ಸಹಾಯಮಾಡುವುದು