ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ವಾಚಕರಿಂದ ಪ್ರಶ್ನೆಗಳು

ಇಬ್ರಿಯ 2:14ರಲ್ಲಿ (NW) ಸೈತಾನನನ್ನು, “ಮರಣವನ್ನು ಬರಮಾಡುವ ಸಾಧನೋಪಾಯ” ಇರುವವನು ಎಂದು ಏಕೆ ಕರೆಯಲಾಗಿದೆ?

ಉತ್ತರವನ್ನು ಸಂಕ್ಷಿಪ್ತವಾಗಿ ಹೇಳುವುದಾದರೆ, ಸೈತಾನನು ವೈಯಕ್ತಿಕವಾಗಿ ಅಥವಾ ತನ್ನ ಮಧ್ಯವರ್ತಿಗಳ ಮೂಲಕ ಮಾನವರಿಗೆ ಮರಣವನ್ನು ಉಂಟುಮಾಡಬಲ್ಲನು ಎಂದು ಪೌಲನು ಅರ್ಥೈಸಿದನು. ಇದಕ್ಕೆ ಹೊಂದಿಕೆಯಲ್ಲಿ, ಯೇಸು ಸೈತಾನನನ್ನು “ಅವನು ಆದಿಯಿಂದಲೂ ಕೊಲೆಗಾರ”ನು ಎಂದು ಕರೆದನು.​—ಯೋಹಾನ 8:44.

ಕೆಲವು ಭಾಷಾಂತರಗಳು ತರ್ಜುಮೆಮಾಡುವ ವಿಧದಿಂದಾಗಿ ಇಬ್ರಿಯ 2:14ನ್ನು ಸುಲಭವಾಗಿ ಅಪಾರ್ಥಮಾಡಿಕೊಳ್ಳಬಹುದು. ಏಕೆಂದರೆ ಸೈತಾನನು “ಮರಣದ ಅಧಿಕಾರ”ವನ್ನು ಅಥವಾ “ಮರಣದ ಮೇಲಿನ ಅಧಿಕಾರ”ವನ್ನು ಹೊಂದಿದ್ದಾನೆ ಎಂದು ಅವು ತಿಳಿಸುತ್ತವೆ. (ಕಿಂಗ್‌ ಜೇಮ್ಸ್‌ ವರ್ಷನ್‌; ರಿವೈಸ್ಡ್‌ ಸ್ಟ್ಯಾಂಡರ್ಡ್‌; ನ್ಯೂ ಇಂಟರ್‌ನ್ಯಾಷನಲ್‌ ವರ್ಷನ್‌; ಜೆರೂಸಲೆಮ್‌ ಬೈಬಲ್‌) ಇಂಥ ತರ್ಜುಮೆಗಳು, ತಾನು ಇಷ್ಟಪಡುವ ಯಾರನ್ನೇ ಆಗಲಿ ಕೊಲ್ಲಲು ಸೈತಾನನಿಗೆ ಅಪರಿಮಿತವಾದ ಸಾಮರ್ಥ್ಯವಿದೆ ಎಂದು ಕಂಡುಬರುವಂತೆ ಮಾಡಸಾಧ್ಯವಿದೆ. ಆದರೂ, ಸ್ಪಷ್ಟವಾಗಿಯೇ ವಿಚಾರವು ಇದಾಗಿರುವುದಿಲ್ಲ. ಒಂದುವೇಳೆ ಈ ಅಧಿಕಾರವಿರುತ್ತಿದ್ದಲ್ಲಿ, ಬಹಳ ದೀರ್ಘ ಸಮಯದ ಹಿಂದೆಯೇ ಅವನು ಇಡೀ ಭೂಮಿಯಿಂದಲೇ ಯೆಹೋವನ ಎಲ್ಲಾ ಆರಾಧಕರನ್ನು ಸಂಪೂರ್ಣವಾಗಿ ನಿರ್ನಾಮಮಾಡುವ ಸಂಭವನೀಯತೆ ಇತ್ತು.​—ಆದಿಕಾಂಡ 3:15.

ಕೆಲವು ಭಾಷಾಂತರಗಳಲ್ಲಿ “ಮರಣದ ಮೇಲಿನ ಅಧಿಕಾರ” ಎಂದು ಮತ್ತು ನೂತನ ಲೋಕ ಭಾಷಾಂತರ (ಇಂಗ್ಲಿಷ್‌)ದಲ್ಲಿ “ಮರಣವನ್ನು ಬರಮಾಡುವ ಸಾಧನೋಪಾಯ” ಇರುವವನು ಎಂದು ತರ್ಜುಮೆಮಾಡಲ್ಪಡುವ ಗ್ರೀಕ್‌ ಅಭಿವ್ಯಕ್ತಿಯು “ಕ್ರೇಟಾಸ್‌ ಟೂ ಥಾನೇಟೂ” ಆಗಿದೆ. ಟೂ ಥಾನೇಟೂ ಎಂಬುದು ಆ ಅಭಿವ್ಯಕ್ತಿಯ ಒಂದು ರೂಪವಾಗಿದ್ದು, ಇದರ ಅರ್ಥ “ಮರಣ” ಎಂದಾಗಿದೆ. ಕ್ರೇಟಾಸ್‌ ಎಂಬುದರ ಮೂಲಾರ್ಥವು “ಶಕ್ತಿ, ಸಾಮರ್ಥ್ಯ, ಬಲ” ಎಂದಾಗಿದೆ. ಥಿಯೊಲಾಜಿಕಲ್‌ ಡಿಕ್ಷನೆರಿ ಆಫ್‌ ದ ನ್ಯೂ ಟೆಸ್ಟಮೆಂಟ್‌ಗನುಸಾರ, ಇದು “ಶಕ್ತಿ ಅಥವಾ ಸಾಮರ್ಥ್ಯದ ಉಪಯೋಗಕ್ಕೆ ಬದಲಾಗಿ ಅದರ ಅಸ್ತಿತ್ವ ಹಾಗೂ ಗಮನಾರ್ಹತೆಯನ್ನು” ಸೂಚಿಸುತ್ತದೆ. ಆದುದರಿಂದ, ಇಬ್ರಿಯ 2:14ರಲ್ಲಿ ಪೌಲನು, ಸೈತಾನನಿಗೆ ಮರಣದ ಮೇಲೆ ಸಂಪೂರ್ಣ ಅಧಿಕಾರವಿದೆ ಎಂಬುದನ್ನು ಅರ್ಥೈಸಲಿಲ್ಲ. ಅದಕ್ಕೆ ಬದಲಾಗಿ, ಮರಣವನ್ನು ಉಂಟುಮಾಡಲು ಸೈತಾನನಿಗಿರುವ ಸಾಮರ್ಥ್ಯ ಹಾಗೂ ಸಾಧ್ಯತೆಯನ್ನು ಅವನು ಸೂಚಿಸುತ್ತಿದ್ದನು.

‘ಮರಣವನ್ನು ಬರಮಾಡುವ ಸಾಧನೋಪಾಯವನ್ನು’ ಸೈತಾನನು ಹೇಗೆ ಉಪಯೋಗಿಸುತ್ತಾನೆ? ನಾವು ಯೋಬನ ಪುಸ್ತಕದಲ್ಲಿ, ಕೊಂಚ ಮಟ್ಟಿಗೆ ಅಸಾಧಾರಣವಾಗಿ ಕಂಡುಬರುವಂಥ ಒಂದು ಘಟನೆಯ ಕುರಿತು ಓದುತ್ತೇವೆ. ಯೋಬನ ಮಕ್ಕಳನ್ನು ‘ಸಾಯಿಸಲಿಕ್ಕಾಗಿ’ ಸೈತಾನನು ಬಿರುಗಾಳಿಯನ್ನು ಉಪಯೋಗಿಸಿದನು ಎಂದು ಆ ವೃತ್ತಾಂತವು ಹೇಳುತ್ತದೆ. ಆದರೂ, ಅತ್ಯಾವಶ್ಯಕವಾದ ಒಂದು ವಾದಾಂಶವು ನಿರ್ಣಯಿಸಲ್ಪಡುತ್ತಿದ್ದ ಕಾರಣ ಕೊಡಲ್ಪಟ್ಟ ದೇವರ ಅನುಮತಿಯಿಂದ ಮಾತ್ರ ಸೈತಾನನು ಹೀಗೆ ಮಾಡಸಾಧ್ಯವಿತ್ತು ಎಂಬುದನ್ನು ಗಮನಿಸಿರಿ. (ಯೋಬ 1:​12, 18, 19) ಆದರೆ ಸೈತಾನನು ಯೋಬನನ್ನು ಕೊಲ್ಲಲು ಶಕ್ತನಾಗಲಿಲ್ಲ ಎಂಬುದಂತೂ ಖಂಡಿತ. ಏಕೆಂದರೆ ಅದಕ್ಕೆ ಅನುಮತಿಯು ಕೊಡಲ್ಪಟ್ಟಿರಲಿಲ್ಲ. (ಯೋಬ 2:6) ಕೆಲವೊಮ್ಮೆ, ಸೈತಾನನು ನಂಬಿಗಸ್ತ ಮಾನವರಿಗೆ ಮರಣವನ್ನು ಉಂಟುಮಾಡಲು ಶಕ್ತನಾಗಿರುವುದಾದರೂ, ತಾನು ಬಯಸಿದಾಗಲೆಲ್ಲಾ ನಮಗೆ ಮರಣವನ್ನು ತರಬಲ್ಲನು ಎಂದು ನಾವು ಭಯಪಡುವ ಆವಶ್ಯಕತೆಯಿಲ್ಲ ಎಂಬುದನ್ನು ಇದು ತೋರಿಸುತ್ತದೆ.

ಮಾನವ ಮಧ್ಯವರ್ತಿಗಳ ಮೂಲಕವೂ ಸೈತಾನನು ಮರಣವನ್ನು ಬರಮಾಡಿದ್ದಾನೆ. ಹೀಗೆ, ಅನೇಕ ಕ್ರೈಸ್ತರು ತಮ್ಮ ನಂಬಿಕೆಯ ಕಾರಣ ಮೃತಪಟ್ಟಿದ್ದಾರೆ, ಕೆಲವರು ಉದ್ರಿಕ್ತ ಜನರ ಗುಂಪುಗಳಿಂದ ಕೊಲ್ಲಲ್ಪಟ್ಟಿದ್ದಾರೆ ಅಥವಾ ಸರಕಾರಿ ಅಧಿಕಾರಿಗಳು ಇಲ್ಲವೆ ಭ್ರಷ್ಟ ನ್ಯಾಯಾಧೀಶರ ಆಜ್ಞೆಯ ಮೇರೆಗೆ ಅನ್ಯಾಯವಾಗಿ ವಧಿಸಲ್ಪಟ್ಟಿದ್ದಾರೆ.​—ಪ್ರಕಟನೆ 2:13.

ಅಷ್ಟುಮಾತ್ರವಲ್ಲ, ಸೈತಾನನು ಕೆಲವೊಮ್ಮೆ ಮಾನವ ಬಲಹೀನತೆಗಳನ್ನು ಸದುಪಯೋಗಿಸಿಕೊಳ್ಳುವ ಮೂಲಕವೂ ಮರಣವನ್ನು ಉಂಟುಮಾಡಿದ್ದಾನೆ. ಇಸ್ರಾಯೇಲ್ಯರ ದಿನಗಳಲ್ಲಿ ಪ್ರವಾದಿಯಾದ ಬಿಳಾಮನು, “ಯೆಹೋವನಿಗೆ ದ್ರೋಹಿಗಳನ್ನಾಗಿ” ಮಾಡಲು ಇಸ್ರಾಯೇಲ್ಯರನ್ನು ಪ್ರಚೋದಿಸುವಂತೆ ಮೋವಾಬ್ಯರಿಗೆ ಸಲಹೆಯನ್ನಿತ್ತನು. (ಅರಣ್ಯಕಾಂಡ 31:16) ಇದರ ಫಲಿತಾಂಶವಾಗಿ 23,000ಕ್ಕಿಂತಲೂ ಹೆಚ್ಚು ಮಂದಿ ಇಸ್ರಾಯೇಲ್ಯರು ಮರಣಪಟ್ಟರು. (ಅರಣ್ಯಕಾಂಡ 25:9; 1 ಕೊರಿಂಥ 10:8) ತದ್ರೀತಿಯಲ್ಲಿ ಇಂದು ಸಹ ಕೆಲವರು ಸೈತಾನನ ‘ತಂತ್ರೋಪಾಯಗಳಿಂದ’ ವಂಚಿಸಲ್ಪಡುತ್ತಾರೆ ಮತ್ತು ಅನೈತಿಕತೆ ಅಥವಾ ಇತರ ಭಕ್ತಿಹೀನ ಕೃತ್ಯಗಳನ್ನು ಮಾಡುವ ಸುಳಿಯಲ್ಲಿ ಸಿಕ್ಕಿಕೊಳ್ಳುತ್ತಾರೆ. (ಎಫೆಸ 6:11) ಸಾಮಾನ್ಯವಾಗಿ ಅಂಥವರು ಆ ಕೂಡಲೆ ತಮ್ಮ ಜೀವಗಳನ್ನು ಕಳೆದುಕೊಳ್ಳುವುದಿಲ್ಲ ಎಂಬುದಂತೂ ನಿಜ. ಆದರೆ ಅವರು ನಿತ್ಯಜೀವವನ್ನು ಪಡೆದುಕೊಳ್ಳುವ ಸುಯೋಗವನ್ನು ಕಳೆದುಕೊಳ್ಳುತ್ತಾರೆ, ಮತ್ತು ಈ ರೀತಿಯಲ್ಲಿ ಸೈತಾನನು ಅವರಿಗೆ ಮರಣವನ್ನು ಬರಮಾಡುತ್ತಾನೆ.

ಹಾನಿಯನ್ನು ಉಂಟುಮಾಡಲು ಸೈತಾನನಿಗಿರುವ ಸಾಧ್ಯತೆಯನ್ನು ನಾವು ಮನಗಾಣುತ್ತೇವಾದರೂ, ಇದರ ವಿಷಯದಲ್ಲಿ ನಾವು ಅನಗತ್ಯವಾಗಿ ಭಯಪಡುವ ಆವಶ್ಯಕತೆಯಿಲ್ಲ. ಸೈತಾನನು ಮರಣವನ್ನು ಬರಮಾಡುವ ಸಾಧನವುಳ್ಳವನಾಗಿದ್ದಾನೆ ಎಂದು ಪೌಲನು ಹೇಳಿದಾಗ, “ಸೈತಾನನನ್ನು ಅಡಗಿಸಿಬಿಡುವದಕ್ಕೂ, ಮರಣಭಯದ ದೆಸೆಯಿಂದ ತಮ್ಮ ಜೀವಮಾನದಲ್ಲೆಲ್ಲಾ ದಾಸತ್ವದೊಳಗಿದ್ದವರನ್ನು ಬಿಡಿಸುವದಕ್ಕೂ” ಕ್ರಿಸ್ತನು ಮರಣಪಟ್ಟನು ಎಂದು ಸಹ ಅವನು ಹೇಳಿದನು. (ಇಬ್ರಿಯ 2:14, 15) ಹೌದು, ಯೇಸು ವಿಮೋಚನಾ ಬೆಲೆಯನ್ನು ತೆತ್ತು, ನಂಬಿಕೆಯನ್ನಿಡುವ ಮಾನವಕುಲವನ್ನು ಪಾಪ ಮತ್ತು ಮರಣದ ದಾಸತ್ವದಿಂದ ಬಿಡಿಸಿದನು.​—2 ತಿಮೊಥೆಯ 1:10.

ಮರಣವನ್ನು ಬರಮಾಡುವ ಸಾಧನೋಪಾಯವು ಸೈತಾನನ ಬಳಿಯಲ್ಲಿದೆ ಎಂದು ಆಲೋಚಿಸುವುದು ಗಂಭೀರವಾದ ಸಂಗತಿಯಾಗಿದೆಯಾದರೂ, ಸೈತಾನನಿಂದ ಮತ್ತು ಅವನ ಮಧ್ಯವರ್ತಿಗಳಿಂದ ಉಂಟುಮಾಡಲ್ಪಡುವ ಯಾವುದೇ ಹಾನಿಯನ್ನು ಯೆಹೋವನು ಸರಿಪಡಿಸಬಲ್ಲನು ಎಂಬ ದೃಢವಿಶ್ವಾಸ ನಮಗಿದೆ ಎಂಬುದಂತೂ ನಿಶ್ಚಯ. ಪುನರುತ್ಥಿತ ಯೇಸುವು “ಸೈತಾನನ ಕೆಲಸಗಳನ್ನು ಲಯಮಾಡು”ವನು ಎಂದು ಯೆಹೋವನು ನಮಗೆ ಆಶ್ವಾಸನೆ ನೀಡುತ್ತಾನೆ. (1 ಯೋಹಾನ 3:8) ಯೆಹೋವನ ಶಕ್ತಿಯಿಂದ ಯೇಸು ಮೃತರನ್ನು ಪುನರುತ್ಥಾನಗೊಳಿಸುವನು ಮತ್ತು ಮರಣವನ್ನೇ ಇಲ್ಲವಾಗಿಸುವನು. (ಯೋಹಾನ 5:​28, 29) ಕಾಲಕ್ರಮೇಣ, ಯೇಸು ಸೈತಾನನನ್ನು ಅಧೋಲೋಕದಲ್ಲಿ ಬಂಧಿಸುವ ಮೂಲಕ, ಅವನ ಶಕ್ತಿಯ ಇತಿಮಿತಿಗಳನ್ನು ಸಂಪೂರ್ಣವಾಗಿ ಬಯಲಿಗೆ ತರುವನು. ತದನಂತರ ಅಂತಿಮವಾಗಿ ಸೈತಾನನು ನಿತ್ಯನಾಶನಕ್ಕೆ ಒಳಪಡಿಸಲ್ಪಡುವನು.​—ಪ್ರಕಟನೆ 20:​1-10.