ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಾಧಾರಣ ಹಿನ್ನೆಲೆಯಿಂದ ಬಂದ ಪುರುಷರು ಬೈಬಲನ್ನು ಭಾಷಾಂತರಿಸುತ್ತಾರೆ

ಸಾಧಾರಣ ಹಿನ್ನೆಲೆಯಿಂದ ಬಂದ ಪುರುಷರು ಬೈಬಲನ್ನು ಭಾಷಾಂತರಿಸುತ್ತಾರೆ

ಸಾಧಾರಣ ಹಿನ್ನೆಲೆಯಿಂದ ಬಂದ ಪುರುಷರು ಬೈಬಲನ್ನು ಭಾಷಾಂತರಿಸುತ್ತಾರೆ

ಇಸವಿ 1835ರಲ್ಲಿ, ಇಟ್ಟಿಗೆ ಕೆಲಸವನ್ನು ಮಾಡುತ್ತಿದ್ದ ಹೆನ್ರಿ ನಾಟ್‌ ಎಂಬ ಆಂಗ್ಲನು ಮತ್ತು ವೇಲ್ಸ್‌ ದೇಶದ ಅನನುಭವಿ ಕಿರಾಣಿ ವ್ಯಾಪಾರಿಯಾಗಿದ್ದ ಜಾನ್‌ ಡೇವಿಸ್‌, ಒಂದು ಬೃಹತ್‌ ಯೋಜನೆಯ ಅಂತಿಮ ಹಂತವನ್ನು ತಲಪಿದರು. ಸುಮಾರು 30ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಸತತವಾಗಿ ಪರಿಶ್ರಮಿಸಿದ ಬಳಿಕ, ಕೊನೆಗೂ ಅವರು ಇಡೀ ಬೈಬಲನ್ನು ಟಹೀಟ್ಯನ್‌ ಭಾಷೆಗೆ ಭಾಷಾಂತರಿಸುವ ಕೆಲಸವನ್ನು ಪೂರ್ಣಗೊಳಿಸಿದರು. ಸಾಧಾರಣ ಹಿನ್ನೆಲೆಯಿಂದ ಬಂದಿದ್ದ ಈ ಇಬ್ಬರು ಪುರುಷರು ಯಾವ ಪಂಥಾಹ್ವಾನಗಳನ್ನು ಎದುರಿಸಿದರು, ಮತ್ತು ಅವರ ಪ್ರೀತಿಯ ದುಡಿಮೆಯ ಫಲಿತಾಂಶಗಳೇನಾಗಿದ್ದವು?

“ಮಹಾನ್‌ ಜ್ಞಾನೋದಯ”

ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ, “ಮಹಾನ್‌ ಜ್ಞಾನೋದಯ” ಅಥವಾ “ಜ್ಞಾನೋದಯ” ಎಂದು ಕರೆಯಲ್ಪಡುವಂಥ ಒಂದು ಪ್ರಾಟೆಸ್ಟಂಟ್‌ ಕಾರ್ಯಾಚರಣೆಯ ಸದಸ್ಯರು, ಬ್ರಿಟನ್‌ನ ಹಳ್ಳಿಯ ಚೌಕಗಳಲ್ಲಿ ಮತ್ತು ಗಣಿಗಳು ಹಾಗೂ ಕಾರ್ಖಾನೆಗಳ ಬಳಿಯಲ್ಲಿ ಸಾರುವ ಕಾರ್ಯವನ್ನು ನಡೆಸುತ್ತಿದ್ದರು. ಕಾರ್ಮಿಕ ವರ್ಗದ ಜನರನ್ನು ತಲಪುವುದೇ ಅವರ ಗುರಿಯಾಗಿತ್ತು. ಅವೇಕನಿಂಗ್‌ ಕಾರ್ಯಾಚರಣೆಯ ಸೌವಾರ್ತಿಕರು, ಬೈಬಲಿನ ವಿತರಣೆಯನ್ನು ಅತ್ಯಂತ ಹುರುಪಿನಿಂದ ಬೆಂಬಲಿಸಿದರು.

ಆ ಕಾರ್ಯಾಚರಣೆಯ ಮೂಲಕರ್ತನು, ಬ್ಯಾಪ್ಟಿಸ್ಟ್‌ ಪಂಗಡದ ವಿಲಿಯಮ್‌ ಕ್ಯಾರೀ ಎಂಬ ಹೆಸರಿನ ವ್ಯಕ್ತಿಯಾಗಿದ್ದನು. 1795ರಲ್ಲಿ ಸ್ಥಾಪಿಸಲ್ಪಟ್ಟಿದ್ದ ಲಂಡನ್‌ ಮಿಷನೆರಿ ಸೊಸೈಟಿ (LMS)ಯನ್ನು ಆರಂಭಿಸುವುದರಲ್ಲಿ ಇವನೂ ಒಂದು ಪಾತ್ರವನ್ನು ವಹಿಸಿದ್ದನು. ಸ್ಥಳೀಯ ಭಾಷೆಗಳನ್ನು ಕಲಿಯಲು ಹಾಗೂ ದಕ್ಷಿಣ ಪೆಸಿಫಿಕ್‌ ಪ್ರಾಂತದಲ್ಲಿ ಮಿಷನೆರಿಗಳಾಗಿ ಸೇವೆಮಾಡಲು ಇಷ್ಟವಿದ್ದಂಥ ಜನರಿಗೆ LMS ತರಬೇತಿಯನ್ನು ನೀಡಿತು. ಈ ಮಿಷನೆರಿಗಳ ಗುರಿಯು, ಸ್ಥಳಿಕ ಜನರ ಸ್ವಂತ ಭಾಷೆಯಲ್ಲಿ ಸುವಾರ್ತೆಯನ್ನು ಸಾರುವುದೇ ಆಗಿತ್ತು.

ಆಗ ತಾನೇ ಕಂಡುಹಿಡಿಯಲ್ಪಟ್ಟಿದ್ದ ಟಹೀಟಿ ದ್ವೀಪವು, LMSನ ಪ್ರಪ್ರಥಮ ಮಿಷನೆರಿ ಕ್ಷೇತ್ರವಾಗಿ ಪರಿಣಮಿಸಿತು. “ಜ್ಞಾನೋದಯ” ಕಾರ್ಯಾಚರಣೆಯ ಸದಸ್ಯರಿಗಾದರೋ, ಈ ದ್ವೀಪಗಳು ವಿಧರ್ಮಿ ‘ಅಂಧಕಾರದ ಸ್ಥಳಗಳು,’ ಕೊಯ್ಲಿಗಾಗಿ ಸಿದ್ಧವಾಗಿರುವ ಹೊಲಗಳಾಗಿದ್ದವು.

ಸಾಧಾರಣ ಹಿನ್ನೆಲೆಯಿಂದ ಬಂದ ಜನರು ಸಂದರ್ಭ ಒದಗಿಬಂದಾಗ ಸಾಮರ್ಥ್ಯವನ್ನು ತೋರಿಸುತ್ತಾರೆ

ಟಹೀಟಿಯ ಸ್ಥಳೀಯರಿಗೆ ಸಾರಲಿಕ್ಕಾಗಿ, ಸುಮಾರು 30 ಮಂದಿಯನ್ನು ಆತುರಾತುರವಾಗಿ ಆಯ್ಕೆಮಾಡಲಾಯಿತು ಮತ್ತು ಸಾಕಷ್ಟು ಸಿದ್ಧರಾಗಿರದಂಥ ಈ ಮಿಷನೆರಿಗಳು, LMSನಿಂದ ಖರೀದಿಸಲ್ಪಟ್ಟ ಡಫ್‌ ಎಂಬ ಹಡಗನ್ನು ಹತ್ತಿದರು. ಒಂದು ವರದಿಯು ಪಟ್ಟಿಮಾಡುವುದೇನೆಂದರೆ, “ನಾಲ್ಕು ಮಂದಿ ನೇಮಿತ ಪಾಸ್ಟರ್‌ಗಳು [ಇವರಿಗೆ ಯಾವುದೇ ಔಪಚಾರಿಕ ತರಬೇತಿಯು ಕೊಡಲ್ಪಟ್ಟಿರಲಿಲ್ಲ], ಆರು ಮಂದಿ ಬಡಗಿಗಳು, ಇಬ್ಬರು ಚಮ್ಮಾರರು, ಇಬ್ಬರು ಇಟ್ಟಿಗೆ ಕೆಲಸಗಾರರು, ಇಬ್ಬರು ನೇಕಾರರು, ಇಬ್ಬರು ಹೊಲಿಗೆಗಾರರು, ಒಬ್ಬ ಉಗ್ರಾಣಿಕ, ಒಬ್ಬ ಅಶ್ವಸಜ್ಜುಕಾರ, ಒಬ್ಬ ಆಳು, ಒಬ್ಬ ತೋಟದ ಕೆಲಸಗಾರ, ಒಬ್ಬ ವೈದ್ಯ, ಒಬ್ಬ ಕಮ್ಮಾರ, ಒಬ್ಬ ಪೀಪಾಯಿಗಾರ, ಒಬ್ಬ ಹತ್ತಿ ತಯಾರಕ, ಒಬ್ಬ ಹ್ಯಾಟುಗಾರ, ಉಡುಪುಗಳನ್ನು ಸಿದ್ಧಪಡಿಸುವವನೊಬ್ಬ, ಒಬ್ಬ ಕುಶಲ ಬಡಗಿ, ಐವರು ಹೆಂಡತಿಯರು, ಮತ್ತು ಮೂವರು ಮಕ್ಕಳು” ಇವರಲ್ಲಿ ಸೇರಿದ್ದರು.

ಮೂಲ ಬೈಬಲ್‌ ಭಾಷೆಗಳೊಂದಿಗೆ ಚಿರಪರಿಚಿತರಾಗಲು ಈ ಮಿಷನೆರಿಗಳ ಬಳಿಯಲ್ಲಿದ್ದದ್ದು, ಒಂದು ಗ್ರೀಕ್‌-ಇಂಗ್ಲಿಷ್‌ ಶಬ್ದಕೋಶ ಮತ್ತು ಹೀಬ್ರು ಶಬ್ದಕೋಶವಿದ್ದ ಒಂದು ಬೈಬಲ್‌ ಮಾತ್ರ. ಏಳು ತಿಂಗಳುಗಳ ಸಮುದ್ರ ಪ್ರಯಾಣದ ಸಮಯದಲ್ಲಿ ಈ ಮಿಷನೆರಿಗಳು, ಈ ಮುಂಚೆ ಟಹೀಟಿಗೆ ಭೇಟಿನೀಡಿದ್ದ ಸಂದರ್ಶಕರಿಂದ ಪಟ್ಟಿಮಾಡಲ್ಪಟ್ಟಿದ್ದ ಟಹೀಟ್ಯನ್‌ ಪದಗಳಲ್ಲಿ ಕೆಲವನ್ನು ಬಾಯಿಪಾಠಮಾಡಿಕೊಂಡರು. ಈ ಪದಗಳಲ್ಲಿ ಹೆಚ್ಚಿನವು ಬೌಂಟಿ ಎಂಬ ಹಡಗಿನಲ್ಲಿ ಪ್ರಯಾಣಿಸಿದ್ದ ಬಂಡಾಯಗಾರರಿಂದ ಪಟ್ಟಿಮಾಡಲ್ಪಟ್ಟಿದ್ದವು. ಅಂತಿಮವಾಗಿ, ಡಫ್‌ ಹಡಗು ಟಹೀಟಿಯನ್ನು ತಲಪಿತು ಮತ್ತು 1797ರ ಮಾರ್ಚ್‌ 7ರಂದು ಮಿಷನೆರಿಗಳು ದಡಸೇರಿದರು. ಆದರೂ, ಒಂದು ವರ್ಷದ ನಂತರ ಅವರಲ್ಲಿ ಹೆಚ್ಚಿನವರು ಆಶಾಭಂಗಗೊಂಡಿದ್ದರು ಮತ್ತು ಬಂದ ದಾರಿ ಹಿಡಿದು ಹೊರಟುಹೋಗಿದ್ದರು. ಕೇವಲ ಏಳು ಮಂದಿ ಮಿಷನೆರಿಗಳು ಮಾತ್ರ ಅಲ್ಲಿ ಉಳಿದಿದ್ದರು.

ಈ ಏಳು ಮಂದಿಯಲ್ಲಿ ಮಾಜಿ ಇಟ್ಟಿಗೆ ಕೆಲಸಗಾರನಾಗಿದ್ದ ಹೆನ್ರಿ ನಾಟ್‌ ಕೇವಲ 23 ವರ್ಷ ಪ್ರಾಯದವನಾಗಿದ್ದನು. ಅವನು ಬರೆದಂಥ ಪ್ರಪ್ರಥಮ ಪತ್ರಗಳ ಆಧಾರದ ಮೇಲೆ ಹೇಳುವುದಾದರೆ, ಅವನಿಗೆ ಕೇವಲ ಮೂಲಭೂತ ಶಿಕ್ಷಣ ಮಾತ್ರ ಇತ್ತು. ಆದರೂ, ಆರಂಭದಿಂದಲೂ ಅವನು ಟಹೀಟ್ಯನ್‌ ಭಾಷೆಯನ್ನು ಕಲಿಯುವ ವರದಾನವನ್ನು ಪಡೆದವನಾಗಿ ಕಂಡುಬಂದನು. ಪ್ರಾಮಾಣಿಕನು, ಆರಾಮ ಮನೋಭಾವದವನು, ಮತ್ತು ವಿನೋದಪರನು ಎಂದು ಅವನ ಕುರಿತು ವರ್ಣಿಸಲಾಗಿದೆ.

ಇಸವಿ 1801ರಲ್ಲಿ, ಹೊಸದಾಗಿ ಆಗಮಿಸಿದ ಒಂಬತ್ತು ಮಂದಿ ಮಿಷನೆರಿಗಳಿಗೆ ಟಹೀಟ್ಯನ್‌ ಭಾಷೆಯನ್ನು ಕಲಿಸಲು ನಾಟ್‌ ಆಯ್ಕೆಮಾಡಲ್ಪಟ್ಟನು. ಆ ಮಿಷನೆರಿಗಳಲ್ಲಿ ವೇಲ್ಸ್‌ನ 28 ವರ್ಷ ಪ್ರಾಯದ ಜಾನ್‌ ಡೇವಿಸ್‌ ಸಹ ಇದ್ದನು. ಇವನು ಒಬ್ಬ ಸಮರ್ಥ ವಿದ್ಯಾರ್ಥಿಯಾಗಿದ್ದನು ಮತ್ತು ಉದ್ಯೋಗಶೀಲ ಕೆಲಸಗಾರನಾಗಿದ್ದು, ಮೃದು ಸ್ವಭಾವದವನೂ ಉದಾರ ಮನೋಭಾವದವನೂ ಆಗಿದ್ದನು. ಸ್ವಲ್ಪ ಕಾಲಾವಧಿಯ ಬಳಿಕ ಈ ಇಬ್ಬರು ಪುರುಷರು ಬೈಬಲನ್ನು ಟಹೀಟ್ಯನ್‌ ಭಾಷೆಗೆ ಭಾಷಾಂತರಿಸಲು ನಿರ್ಧರಿಸಿದರು.

ದುರ್ಗಮ ಕೆಲಸ

ಆದರೂ, ಬೈಬಲನ್ನು ಟಹೀಟ್ಯನ್‌ ಭಾಷೆಗೆ ಭಾಷಾಂತರಿಸುವುದು ದುರ್ಗಮ ಕೆಲಸವಾಗಿ ಪರಿಣಮಿಸಿತು, ಏಕೆಂದರೆ ಟಹೀಟ್ಯನ್‌ ಭಾಷೆಯು ಅಷ್ಟರ ತನಕ ಅಧಿಕೃತ ಲಿಪಿಯನ್ನು ಹೊಂದಿರಲಿಲ್ಲ. ಮಿಷನೆರಿಗಳು ಶಬ್ದಗಳಿಗೆ ಕಿವಿಗೊಡುವ ಮೂಲಕ ಅದನ್ನು ಸಂಪೂರ್ಣವಾಗಿ ಕಲಿತುಕೊಳ್ಳಬೇಕಿತ್ತು. ಅವರ ಬಳಿ ಆ ಭಾಷೆಯ ಶಬ್ದಕೋಶವೂ ಇರಲಿಲ್ಲ ವ್ಯಾಕರಣ ಪುಸ್ತಕವೂ ಇರಲಿಲ್ಲ. ಕಂಠದ್ವಾರೀಯ ಸ್ಫೋಟದಿಂದ ತಡೆಯಲ್ಪಡುತ್ತಿದ್ದ, ಅನೇಕಬಾರಿ ಅನುಕ್ರಮವಾಗಿ ಬರುವ (ಒಂದೇ ಒಂದು ಪದದಲ್ಲಿ ಸುಮಾರು ಐದು) ಸ್ವರಾಕ್ಷರಗಳಿದ್ದ, ಮತ್ತು ವಿರಳ ವ್ಯಂಜನಾಕ್ಷರಗಳಿದ್ದ, ಉಸಿರು ಬಿಡುವಾಗ ಉಚ್ಚರಿಸುವ ಈ ಭಾಷೆಯು ಮಿಷನೆರಿಗಳನ್ನು ತುಂಬ ನಿರಾಶೆಗೊಳಿಸಿತು. “ಅನೇಕ ಪದಗಳಲ್ಲಿ ಸ್ವರಾಕ್ಷರಗಳನ್ನು ಬಿಟ್ಟರೆ ಬೇರೇನೂ ಇರುವುದಿಲ್ಲ, ಮತ್ತು ಅದರಲ್ಲಿ ಪ್ರತಿಯೊಂದಕ್ಕೂ ಒಂದೊಂದು ಸ್ವರವಿದೆ” ಎಂದು ಅವರು ಪ್ರಲಾಪಿಸಿದರು. ನಾವು “ಕೆಲವು ಪದಗಳ ಸ್ವರಗಳನ್ನು ಅಗತ್ಯವಿರುವಷ್ಟು ನಿರ್ದಿಷ್ಟತೆಯೊಂದಿಗೆ ನಿಷ್ಕೃಷ್ಟವಾಗಿ ಕೇಳಿಸಿಕೊಳ್ಳಲು” ಅಶಕ್ತರಾಗಿದ್ದೆವು ಎಂದು ಅವರು ಒಪ್ಪಿಕೊಂಡರು. ಅಸ್ತಿತ್ವದಲ್ಲೇ ಇಲ್ಲದಿರುವಂಥ ಸ್ವರಗಳನ್ನು ತಾವು ಕೇಳಿಸಿಕೊಂಡೆವು ಎಂದು ಸಹ ಅವರು ನೆನಸಿದರು!

ಸನ್ನಿವೇಶವನ್ನು ಇನ್ನಷ್ಟು ಕಠಿನಗೊಳಿಸಲಿಕ್ಕಾಗಿ, ಆಗಿಂದಾಗ್ಗೆ ಟಹೀಟ್ಯನ್‌ ಭಾಷೆಯಲ್ಲಿನ ಕೆಲವು ಪದಗಳನ್ನು ನಿಷೇಧಿಸಲಾಗುತ್ತಿತ್ತು ಅಥವಾ ಬಹಿಷ್ಕರಿಸಲಾಗುತ್ತಿತ್ತು. ಆದುದರಿಂದ ಅವುಗಳ ಸ್ಥಾನದಲ್ಲಿ ಬೇರೆ ಪದಗಳನ್ನು ಕಂಡುಕೊಳ್ಳಬೇಕಾಗುತ್ತಿತ್ತು. ಸಮಾನಾರ್ಥಕ ಪದಗಳು ಇನ್ನೊಂದು ರೀತಿಯ ತಲೆನೋವನ್ನು ನೀಡುತ್ತಿದ್ದವು. “ಪ್ರಾರ್ಥನೆ” ಎಂಬ ಪದಕ್ಕೆ ಟಹೀಟ್ಯನ್‌ ಭಾಷೆಯಲ್ಲಿ 70ಕ್ಕಿಂತಲೂ ಹೆಚ್ಚು ಶಬ್ದಗಳಿದ್ದವು. ಇಂಗ್ಲಿಷ್‌ ಭಾಷೆಗಿಂತ ಸಂಪೂರ್ಣವಾಗಿ ಭಿನ್ನವಾಗಿರುವ ಟಹೀಟ್ಯನ್‌ ಭಾಷೆಯ ವಾಕ್ಯರಚನೆಯು ಸಹ ಇನ್ನೊಂದು ಪಂಥಾಹ್ವಾನವಾಗಿತ್ತು. ಈ ಎಲ್ಲಾ ತೊಂದರೆಗಳಿದ್ದರೂ, ಕಾಲಕ್ರಮೇಣ ಮಿಷನೆರಿಗಳು ಪದಗಳ ಪಟ್ಟಿಗಳನ್ನು ಸಂಗ್ರಹಿಸಿದರು ಮತ್ತು 50 ವರ್ಷಗಳ ನಂತರ ಡೇವಿಸ್‌ ಅದನ್ನು 10,000 ಪದಗಳಿದ್ದಂಥ ಒಂದು ಶಬ್ದಕೋಶವಾಗಿ ಪ್ರಕಾಶಿಸಿದನು.

ಇದಲ್ಲದೆ, ಟಹೀಟ್ಯನ್‌ ಭಾಷೆಯನ್ನು ಲಿಖಿತ ರೂಪದಲ್ಲಿ ನಮೂದಿಸುವ ಪಂಥಾಹ್ವಾನವೂ ಇತ್ತು. ಈಗಾಗಲೇ ಕಾರ್ಯರೂಪದಲ್ಲಿದ್ದ ಇಂಗ್ಲಿಷ್‌ ಅಕ್ಷರ ಸಂಯೋಜನೆಯನ್ನು ಉಪಯೋಗಿಸುವ ಮೂಲಕ ಮಿಷನೆರಿಗಳು ಟಹೀಟ್ಯನ್‌ ಭಾಷೆಯನ್ನು ಬರೆಯಲು ಪ್ರಯತ್ನಿಸಿದರು. ಆದರೂ, ಲ್ಯಾಟಿನ್‌ ಅಕ್ಷರಮಾಲೆಯ ಇಂಗ್ಲಿಷ್‌ ಉಪಯೋಗವು ಟಹೀಟ್ಯನ್‌ ಸ್ವರಗಳೊಂದಿಗೆ ಸರಿಹೊಂದಲಿಲ್ಲ. ಹೀಗೆ, ಭಾಷಾ ಧ್ವನಿಶಾಸ್ತ್ರ ಮತ್ತು ಕಾಗುಣಿತದ ಕುರಿತು ಮಿಷನೆರಿಗಳು ನಿರಂತರವಾದ ಚರ್ಚೆಗಳನ್ನು ನಡೆಸಿದರು. ಪೆಸಿಫಿಕ್‌ ಸಾಗರದಲ್ಲಿ ಒಂದು ಆಡುಭಾಷೆಯನ್ನು ಲಿಖಿತ ರೂಪಕ್ಕೆ ಅಳವಡಿಸುವುದರಲ್ಲಿ ಈ ಮಿಷನೆರಿಗಳೇ ಅಗ್ರಗಣ್ಯರಾಗಿದ್ದರಿಂದ, ಅನೇಕವೇಳೆ ಇವರೇ ಹೊಸ ಕಾಗುಣಿತಗಳನ್ನು ಕಂಡುಹಿಡಿದರು. ಅವರ ಈ ಕೆಲಸವು ಸಮಯಾನಂತರ ದಕ್ಷಿಣ ಪೆಸಿಫಿಕ್‌ನ ಅನೇಕ ಭಾಷೆಗಳಿಗೆ ಒಂದು ನಮೂನೆಯಾಗಿ ಕಾರ್ಯನಡಿಸುವುದೆಂದು ಅವರೆಂದೂ ಕನಸಿನಲ್ಲೂ ನೆನಸಿರಲಿಕ್ಕಿಲ್ಲ.

ಮಿತವಾದ ಸಾಧನಗಳಿದ್ದರೂ ಸಂಪನ್ಮೂಲಭರಿತರು

ಆ ಭಾಷಾಂತರಕಾರರ ಬಳಿ ಕೇವಲ ಕೆಲವೇ ರೆಫರೆನ್ಸ್‌ ಪುಸ್ತಕಗಳಿದ್ದವು. ಟೆಕ್ಸ್‌ಟಸ್‌ ರಿಸೆಪ್ಟಸ್‌ ಮತ್ತು ಕಿಂಗ್‌ ಜೇಮ್ಸ್‌ ವರ್ಷನ್‌ಗಳನ್ನು ಮೂಲ ಗ್ರಂಥಪಾಠಗಳಾಗಿ ಉಪಯೋಗಿಸುವಂತೆ LMS ಅವರಿಗೆ ನಿರ್ದೇಶನ ನೀಡಿತು. ಹೀಬ್ರು ಮತ್ತು ಗ್ರೀಕ್‌ ಭಾಷೆಗಳಲ್ಲಿ ಹೆಚ್ಚಿನ ಶಬ್ದಕೋಶಗಳನ್ನು ಹಾಗೂ ಎರಡೂ ಭಾಷೆಯ ಬೈಬಲುಗಳನ್ನು ಕಳುಹಿಸಿಕೊಡುವಂತೆ ನಾಟ್‌ LMS ಅನ್ನು ಕೇಳಿಕೊಂಡನು. ಅವನು ಆ ಪುಸ್ತಕಗಳನ್ನು ಪಡೆದುಕೊಂಡನೋ ಇಲ್ಲವೋ ಎಂಬುದು ತಿಳಿದುಬಂದಿಲ್ಲ. ಡೇವಿಸ್‌ ಮಾತ್ರ ವೇಲ್ಸ್‌ ದೇಶದ ಸ್ನೇಹಿತರಿಂದ ಕೆಲವು ಪಾಂಡಿತ್ಯಪೂರ್ಣ ಪುಸ್ತಕಗಳನ್ನು ಪಡೆದುಕೊಂಡನು. ಕೊನೆಗೂ ಅವನು ಒಂದು ಗ್ರೀಕ್‌ ಶಬ್ದಕೋಶವನ್ನು, ಒಂದು ಹೀಬ್ರು ಬೈಬಲನ್ನು, ಗ್ರೀಕ್‌ ಭಾಷೆಯ ಒಂದು ಹೊಸ ಒಡಂಬಡಿಕೆಯನ್ನು, ಮತ್ತು ಸೆಪ್ಟ್ಯೂಅಜಂಟ್‌ ಅನ್ನು ಹೊಂದಿದ್ದನೆಂದು ದಾಖಲೆಗಳು ತೋರಿಸುತ್ತವೆ.

ಈ ಮಧ್ಯೆ ಮಿಷನೆರಿಗಳ ಸಾರುವ ಚಟುವಟಿಕೆಯು ಅಸಫಲವಾಗಿಯೇ ಉಳಿದಿತ್ತು. ಈ ಮಿಷನೆರಿಗಳು ಸುಮಾರು 12 ವರ್ಷಗಳ ವರೆಗೆ ಟಹೀಟಿಯಲ್ಲಿ ಇದ್ದರಾದರೂ, ಸ್ಥಳಿಕ ನಿವಾಸಿಗಳಲ್ಲಿ ಒಬ್ಬನು ಸಹ ದೀಕ್ಷಾಸ್ನಾನವನ್ನು ಪಡೆದುಕೊಳ್ಳಲಿಲ್ಲ. ಕಾಲಕ್ರಮೇಣ, ಸತತವಾಗಿ ನಡೆಯುತ್ತಿದ್ದ ಆಂತರಿಕ ಯುದ್ಧಗಳು ಎಲ್ಲಾ ಮಿಷನೆರಿಗಳು ಆಸ್ಟ್ರೇಲಿಯಕ್ಕೆ ಪಲಾಯನಗೈಯುವಂತೆ ಒತ್ತಾಯಿಸಿದವು. ಆದರೆ ನಾಟ್‌ ಮಾತ್ರ ಅಲ್ಲೇ ಉಳಿಯಲು ದೃಢಸಂಕಲ್ಪಮಾಡಿದ್ದನು. ಸ್ವಲ್ಪಸಮಯದ ವರೆಗೆ ಸೊಸೈಟಿ ಐಲೆಂಡ್ಸ್‌ ಗುಂಪಿನ ವಿಂಡ್ವರ್ಡ್‌ ಐಲೆಂಡ್ಸ್‌ನಲ್ಲಿ ಉಳಿದಿದ್ದ ಏಕಮಾತ್ರ ಮಿಷನೆರಿ ಅವನಾಗಿದ್ದನು. ಆದರೆ ಅರಸನಾದ IIನೆಯ ಪೋಮಾರೇ ಹತ್ತಿರದಲ್ಲಿದ್ದ ಮೋಓರೇ ದ್ವೀಪಕ್ಕೆ ಪಲಾಯನಗೈದಾಗ, ನಾಟ್‌ ಸಹ ಆ ಅರಸನನ್ನು ಹಿಂಬಾಲಿಸಬೇಕಾಯಿತು.

ಆದರೂ, ನಾಟ್‌ನ ಸ್ಥಳಾಂತರವು ಭಾಷಾಂತರದ ಕೆಲಸವನ್ನು ನಿಲ್ಲಿಸಲಿಲ್ಲ, ಮತ್ತು ಡೇವಿಸ್‌ ಆಸ್ಟ್ರೇಲಿಯದಲ್ಲಿ ಎರಡು ವರ್ಷಗಳನ್ನು ಕಳೆದ ಬಳಿಕ, ಅವನು ಪುನಃ ನಾಟ್‌ನನ್ನು ಜೊತೆಗೂಡಿದನು. ಈ ಮಧ್ಯೆ ನಾಟ್‌ ಗ್ರೀಕ್‌ ಮತ್ತು ಹೀಬ್ರು ಭಾಷೆಯ ಅಧ್ಯಯನವನ್ನು ಆರಂಭಿಸಿದ್ದನು ಮತ್ತು ಕಾಲಕ್ರಮೇಣ ಆ ಭಾಷೆಗಳಲ್ಲಿ ಪಾಂಡಿತ್ಯವನ್ನು ಪಡೆದನು. ಇದರ ಪರಿಣಾಮವಾಗಿ, ಅವನು ಹೀಬ್ರು ಶಾಸ್ತ್ರವಚನಗಳ ಕೆಲವು ಭಾಗಗಳನ್ನು ಟಹೀಟ್ಯನ್‌ ಭಾಷೆಗೆ ಭಾಷಾಂತರಿಸಲು ಆರಂಭಿಸಿದನು. ಅವನು ಸ್ಥಳಿಕ ಜನರು ಸುಲಭವಾಗಿ ಅರ್ಥಮಾಡಿಕೊಳ್ಳಲು ಮತ್ತು ಸಕಾರಾತ್ಮಕವಾಗಿ ಪ್ರತಿಕ್ರಿಯಿಸಲು ಸಾಧ್ಯವಿದ್ದಂಥ ವೃತ್ತಾಂತಗಳನ್ನು ಒಳಗೊಂಡಿದ್ದ ಬೈಬಲ್‌ ಭಾಗಗಳನ್ನು ಆರಿಸಿಕೊಂಡನು.

ತದನಂತರ ಡೇವಿಸನ ಜೊತೆಗೂಡಿ ಕಾರ್ಯನಡಿಸುತ್ತಾ ನಾಟ್‌ ಲೂಕನ ಸುವಾರ್ತೆಯನ್ನು ಭಾಷಾಂತರಿಸಲು ಆರಂಭಿಸಿದನು ಮತ್ತು ಅದು 1814ರ ಸೆಪ್ಟೆಂಬರ್‌ ತಿಂಗಳಿನಲ್ಲಿ ಪೂರ್ಣಗೊಳಿಸಲ್ಪಟ್ಟಿತು. ಟಹೀಟ್ಯನ್‌ ಭಾಷೆಯಲ್ಲಿ ಸ್ವಾಭಾವಿಕವಾಗಿ ಕಂಡುಬರುವಂಥ ರೀತಿಯಲ್ಲಿ ಅವನು ತರ್ಜುಮೆಯನ್ನು ಮಾಡುತ್ತಿದ್ದನು ಮತ್ತು ಆ ಭಾಷಾಂತರವನ್ನು ಡೇವಿಸ್‌ ಮೂಲ ಗ್ರಂಥಪಾಠಗಳೊಂದಿಗೆ ಪರೀಕ್ಷಿಸಿ ನೋಡುತ್ತಿದ್ದನು. 1817ರಲ್ಲಿ, ಲೂಕನ ಸುವಾರ್ತೆಯ ಮೊದಲ ಪುಟವನ್ನು ವೈಯಕ್ತಿಕವಾಗಿ ತಾನೇ ಮುದ್ರಿಸಬಹುದೋ ಎಂದು ಅರಸನಾದ IIನೆಯ ಪೋಮಾರೇ ಕೇಳಿದನು. ನಂತರ, ಮೋಓರೇ ದ್ವೀಪದಿಂದ ಮಿಷನೆರಿಗಳು ತಂದಿದ್ದಂಥ, ಕೈಯಿಂದ ನಡೆಸುವ ಪ್ರೆಸ್‌ನಲ್ಲಿ ಅವನು ಅದನ್ನು ಮುದ್ರಿಸಿದನು. ಟಹೀಟಿಯ ಟೂಆಹೀನೆ ಎಂಬ ಹೆಸರಿನ ನಂಬಿಗಸ್ತ ವ್ಯಕ್ತಿಯ ಕುರಿತು ಹೇಳದಿದ್ದರೆ ಬೈಬಲಿನ ಟಹೀಟ್ಯನ್‌ ಭಾಷಾಂತರದ ಕಥೆಯು ಪೂರ್ಣಗೊಳ್ಳಲಿಕ್ಕಿಲ್ಲ. ಏಕೆಂದರೆ ಅವನು ಈ ಎಲ್ಲಾ ವರ್ಷಗಳಾದ್ಯಂತ ಮಿಷನೆರಿಗಳೊಂದಿಗೆ ಉಳಿದಿದ್ದನು ಮತ್ತು ಆ ಭಾಷೆಯ ವಿವರಗಳನ್ನು ಗ್ರಹಿಸಲು ಅವರಿಗೆ ಸಹಾಯಮಾಡಿದ್ದನು.

ಭಾಷಾಂತರವು ಪೂರ್ಣಗೊಳಿಸಲ್ಪಟ್ಟದ್ದು

ಇಸವಿ 1819ರಲ್ಲಿ, ಆರು ವರ್ಷಗಳ ಪರಿಶ್ರಮದ ಬಳಿಕ, ಸುವಾರ್ತಾ ಪುಸ್ತಕಗಳು, ಅಪೊಸ್ತಲರ ಕೃತ್ಯಗಳು, ಮತ್ತು ಕೀರ್ತನೆಗಳ ಪುಸ್ತಕದ ಭಾಷಾಂತರವು ಪೂರ್ಣಗೊಳಿಸಲ್ಪಟ್ಟಿತು. ಹೊಸದಾಗಿ ಆಗಮಿಸಿದಂಥ ಮಿಷನೆರಿಗಳು ತಮ್ಮೊಂದಿಗೆ ತಂದಿದ್ದ ಒಂದು ಪ್ರಿಂಟಿಂಗ್‌ ಪ್ರೆಸ್‌, ಈ ಬೈಬಲ್‌ ಪುಸ್ತಕಗಳ ಮುದ್ರಣ ಕೆಲಸ ಹಾಗೂ ವಿತರಣೆಗೆ ಸಹಾಯಮಾಡಿತು.

ತದನಂತರದ ಕಾಲಾವಧಿಯಲ್ಲಿ, ಭಾಷಾಂತರ, ಕರಡಚ್ಚು ತಿದ್ದುವಿಕೆ, ಮತ್ತು ಪರಿಷ್ಕರಣದ ತೀವ್ರ ಚಟುವಟಿಕೆಯು ನಡೆಸಲ್ಪಟ್ಟಿತು. ಟಹೀಟಿಯಲ್ಲಿ 28 ವರ್ಷಗಳ ವರೆಗೆ ಜೀವಿಸಿದ ಬಳಿಕ, 1825ರಲ್ಲಿ ನಾಟ್‌ ಅಸ್ವಸ್ಥನಾದನು ಮತ್ತು LMS ಅವನು ಇಂಗ್ಲೆಂಡಿಗೆ ಸಮುದ್ರಮಾರ್ಗವಾಗಿ ಹಿಂದಿರುಗುವಂತೆ ಅನುಮತಿಸಿತು. ಸಂತೋಷಕರವಾಗಿಯೇ, ಅಷ್ಟರೊಳಗೆ ಗ್ರೀಕ್‌ ಶಾಸ್ತ್ರವಚನಗಳ ಭಾಷಾಂತರವು ಬಹುಮಟ್ಟಿಗೆ ಪೂರ್ಣಗೊಳಿಸಲ್ಪಟ್ಟಿತ್ತು. ಅವನು ಇಂಗ್ಲೆಂಡಿಗೆ ಪ್ರಯಾಣಿಸುತ್ತಿದ್ದಾಗ ಮತ್ತು ಇಂಗ್ಲೆಂಡಿನಲ್ಲಿ ಉಳಿದುಕೊಂಡಿದ್ದಾಗ, ಬೈಬಲಿನ ಉಳಿದ ಭಾಗವನ್ನು ಭಾಷಾಂತರಿಸುವುದನ್ನು ಮುಂದುವರಿಸಿದನು. ಆದರೆ 1827ರಲ್ಲಿ ನಾಟ್‌ ಟಹೀಟಿಗೆ ಹಿಂದಿರುಗಿದನು. ಎಂಟು ವರ್ಷಗಳ ಬಳಿಕ, ಅಂದರೆ 1835ರ ಡಿಸೆಂಬರ್‌ ತಿಂಗಳಿನಲ್ಲಿ ಅವನು ತನ್ನ ಭಾಷಾಂತರವನ್ನು ಮುಗಿಸಿದನು. ಸುಮಾರು 30ಕ್ಕಿಂತಲೂ ಹೆಚ್ಚಿನ ವರ್ಷಗಳ ಸತತ ಪರಿಶ್ರಮದ ಬಳಿಕ, ಇಡೀ ಬೈಬಲು ಭಾಷಾಂತರಿಸಲ್ಪಟ್ಟಿತ್ತು.

ಇಸವಿ 1836ರಲ್ಲಿ, ಲಂಡನಿನಲ್ಲಿ ಟಹೀಟ್ಯನ್‌ ಭಾಷೆಯ ಇಡೀ ಬೈಬಲನ್ನು ಮುದ್ರಿಸುವ ಸಲುವಾಗಿ ನಾಟ್‌ ಪುನಃ ಇಂಗ್ಲೆಂಡಿಗೆ ಪ್ರಯಾಣ ಬೆಳೆಸಿದನು. 1838ರ ಜೂನ್‌ 8ರಂದು, ರೋಮಾಂಚನಗೊಂಡಿದ್ದ ನಾಟ್‌, ಟಹೀಟ್ಯನ್‌ ಭಾಷೆಯ ಬೈಬಲಿನ ಪ್ರಪ್ರಥಮ ಮುದ್ರಿತ ಸಂಪುಟವನ್ನು ವಿಕ್ಟೋರಿಯ ರಾಣಿಗೆ ಉಡುಗೊರೆಯಾಗಿ ನೀಡಿದನು. 40 ವರ್ಷಗಳ ಮುಂಚೆ ಡಫ್‌ ಹಡಗಿನಲ್ಲಿ ಪ್ರಯಾಣವನ್ನು ಆರಂಭಿಸಿ, ಈ ಬೃಹತ್ತಾದ ಹಾಗೂ ಸುದೀರ್ಘವಾದ ಕೆಲಸವನ್ನು ಪೂರ್ಣಗೊಳಿಸಲಿಕ್ಕಾಗಿ ಟಹೀಟ್ಯನ್‌ ಸಂಸ್ಕೃತಿಯಲ್ಲೇ ತನ್ನನ್ನು ಸಂಪೂರ್ಣವಾಗಿ ಮುಳುಗಿಸಿಕೊಂಡಂಥ ಮಾಜಿ ಇಟ್ಟಿಗೆ ಕೆಲಸಗಾರನಿಗೆ, ಇದು ಅತ್ಯಂತ ಭಾವನಾತ್ಮಕ ಕ್ಷಣವಾಗಿತ್ತು ಎಂಬುದು ಅರ್ಥಮಾಡಿಕೊಳ್ಳತಕ್ಕ ಸಂಗತಿಯಾಗಿದೆ.

ಎರಡು ತಿಂಗಳುಗಳ ಬಳಿಕ, ಟಹೀಟ್ಯನ್‌ ಭಾಷೆಯ ಪೂರ್ಣ ಬೈಬಲಿನ ಮೊದಲ 3,000 ಪ್ರತಿಗಳಿದ್ದ 27 ರಟ್ಟುಪೆಟ್ಟಿಗೆಗಳೊಂದಿಗೆ ನಾಟ್‌ ದಕ್ಷಿಣ ಪೆಸಿಫಿಕ್‌ಗೆ ಪ್ರಯಾಣ ಬೆಳೆಸಿದನು. ಸಿಡ್ನಿಯಲ್ಲಿ ಸ್ವಲ್ಪ ಸಮಯ ತಂಗಿದ ಬಳಿಕ ಅವನು ಪುನಃ ಅಸ್ವಸ್ಥನಾದನು, ಆದರೂ ಅವನು ಆ ಅಮೂಲ್ಯ ರಟ್ಟುಪೆಟ್ಟಿಗೆಗಳಿಂದ ದೂರವಾಗಲು ನಿರಾಕರಿಸಿದನು. ಅಸ್ವಸ್ಥತೆಯಿಂದ ಗುಣಮುಖನಾದ ಬಳಿಕ, 1840ರಲ್ಲಿ ಅವನು ಟಹೀಟಿಗೆ ಆಗಮಿಸಿದನು. ಅಲ್ಲಿ, ಟಹೀಟ್ಯನ್‌ ಬೈಬಲಿನ ಪ್ರತಿಗಳನ್ನು ಪಡೆದುಕೊಳ್ಳಲು ಪ್ರಯತ್ನಿಸುತ್ತಾ ಜನರ ಸಮೂಹಗಳು ಕಾರ್ಯತಃ ಅವನ ಸರಕಿನ ಮೇಲೆ ಆಕ್ರಮಣಮಾಡಿದವು. 1844ರ ಮೇ ತಿಂಗಳಿನಲ್ಲಿ, ತನ್ನ 70ರ ಪ್ರಾಯದಲ್ಲಿ ನಾಟ್‌ ಟಹೀಟಿಯಲ್ಲಿ ಮೃತಪಟ್ಟನು.

ದೂರವ್ಯಾಪ್ತಿಯ ಪ್ರಭಾವ

ಆದರೂ, ನಾಟ್‌ನ ಕೃತಿಯು ಮಾತ್ರ ಸಜೀವವಾಗಿಯೇ ಉಳಿಯಿತು. ಅವನ ಭಾಷಾಂತರವು ಪೊಲಿನೇಷಿಯನ್‌ ಭಾಷೆಗಳ ಮೇಲೆ ದೂರವ್ಯಾಪ್ತಿಯ ಪರಿಣಾಮವನ್ನು ಬೀರಿತು. ಟಹೀಟ್ಯನ್‌ ಭಾಷೆಯನ್ನು ಲಿಖಿತ ರೂಪದಲ್ಲಿ ನಮೂದಿಸುವ ಮೂಲಕ ಮಿಷನೆರಿಗಳು ಆ ಭಾಷೆಯನ್ನು ಜೋಪಾನವಾಗಿ ಕಾಪಾಡಿದರು. ಒಬ್ಬ ಲೇಖಕನು ಹೇಳಿದ್ದು: “ಅತ್ಯುತ್ತಮವಾದ ವ್ಯಾಕರಣಬದ್ಧ ಟಹೀಟ್ಯನ್‌ ಭಾಷೆಯನ್ನು ನಾಟ್‌ ಜೋಪಾನವಾಗಿ ಸಂರಕ್ಷಿಸಿದನು. ಅತ್ಯಂತ ಶುದ್ಧವಾದ ಟಹೀಟ್ಯನ್‌ ಭಾಷೆಯನ್ನು ಕಲಿಯಲು ನಾವು ಯಾವಾಗಲೂ ಬೈಬಲನ್ನೇ ಅವಲಂಬಿಸುವ ಆವಶ್ಯಕತೆಯಿರುವುದು.” ಈ ಭಾಷಾಂತರಕಾರರ ಶ್ರದ್ಧಾಪೂರ್ವಕ ಕೆಲಸವು, ಮರೆತುಹೋಗಲ್ಪಡಸಾಧ್ಯವಿದ್ದಂಥ ಸಾವಿರಾರು ಪದಗಳನ್ನು ಸಂರಕ್ಷಿಸಿತು. ಒಂದು ಶತಮಾನದ ಬಳಿಕ ಒಬ್ಬ ಬರಹಗಾರನು ಹೇಳಿದ್ದು: “ನಾಟ್‌ನ ಗಮನಾರ್ಹ ಟಹೀಟ್ಯನ್‌ ಬೈಬಲು, ಟಹೀಟ್ಯನ್‌ ಭಾಷೆಯ ಅಮೂಲ್ಯ ಕೃತಿಯಾಗಿದೆ ಎಂಬುದನ್ನು ಎಲ್ಲರೂ ಒಪ್ಪಿಕೊಳ್ಳುತ್ತಾರೆ.”

ಈ ಪ್ರಮುಖ ಕೃತಿಯು ಟಹೀಟ್ಯನ್‌ ಜನರಿಗೆ ಮಾತ್ರವಲ್ಲ ದಕ್ಷಿಣ ಪೆಸಿಫಿಕ್‌ ಭಾಷೆಗಳಲ್ಲಿನ ಇತರ ಭಾಷಾಂತರಗಳಿಗೂ ಒಂದು ತಳಪಾಯವನ್ನು ಸ್ಥಾಪಿಸಿದೆ. ಉದಾಹರಣೆಗೆ, ಕುಕ್‌ ಐಲೆಂಡ್ಸ್‌ ಮತ್ತು ಸಮೋವದಲ್ಲಿರುವ ಭಾಷಾಂತರಕಾರರು ಇದನ್ನು ಒಂದು ನಮೂನೆಯಾಗಿ ಉಪಯೋಗಿಸಿದ್ದಾರೆ. “ನಾನು ಶ್ರೀಯುತ ನಾಟ್‌ರನ್ನು ನಿಜವಾಗಿಯೂ ಅನುಸರಿಸಿದ್ದೇನೆ, ಅವರ ಭಾಷಾಂತರವನ್ನು ನಾನು ಜಾಗರೂಕತೆಯಿಂದ ಪರೀಕ್ಷಿಸಿದ್ದೇನೆ” ಎಂದು ಒಬ್ಬ ಭಾಷಾಂತರಕಾರನು ಹೇಳಿದನು. ಇನ್ನೊಬ್ಬ ಭಾಷಾಂತರಕಾರನು ‘ಡೇವಿಸನ ಕೀರ್ತನೆಗಳಲ್ಲಿ ಒಂದನ್ನು ಸಮೋವ ಭಾಷೆಗೆ ಭಾಷಾಂತರಿಸು’ತ್ತಿದ್ದಾಗ, ‘ಅವನ ಮುಂದೆ ಹೀಬ್ರು ಕೀರ್ತನೆ ಪುಸ್ತಕ ಮತ್ತು ಇಂಗ್ಲಿಷ್‌ ಹಾಗೂ ಟಹೀಟ್ಯನ್‌ ಭಾಷಾಂತರಗಳು ಇದ್ದವು’ ಎಂದು ವರದಿಸಲಾಗಿತ್ತು.

ಇಂಗ್ಲೆಂಡ್‌ನ “ಜ್ಞಾನೋದಯ” ಕಾರ್ಯಾಚರಣೆಯ ಸದಸ್ಯರ ಮಾದರಿಯನ್ನು ಅನುಸರಿಸುತ್ತಾ, ಟಹೀಟಿಯಲ್ಲಿದ್ದ ಮಿಷನೆರಿಗಳು ಅತ್ಯಂತ ಹುರುಪಿನಿಂದ ಸಾಕ್ಷರತೆಯನ್ನು ಉತ್ತೇಜಿಸಿದರು. ವಾಸ್ತವದಲ್ಲಿ, ಒಂದು ಶತಮಾನಕ್ಕಿಂತಲೂ ಹೆಚ್ಚು ಸಮಯದ ವರೆಗೆ ಟಹೀಟ್ಯನ್‌ ಜನಸಂಖ್ಯೆಗೆ ಲಭ್ಯವಿದ್ದ ಏಕಮಾತ್ರ ಪುಸ್ತಕವು ಬೈಬಲಾಗಿತ್ತು. ಹೀಗೆ ಅದು ಟಹೀಟ್ಯನ್‌ ಸಂಸ್ಕೃತಿಯಲ್ಲಿ ಒಂದು ಅತ್ಯಾವಶ್ಯಕ ಭಾಗವಾಗಿ ಪರಿಣಮಿಸಿತು.

ನಾಟ್‌ ವರ್ಷನ್‌ನ ಅತ್ಯುತ್ತಮ ವೈಶಿಷ್ಟ್ಯಗಳಲ್ಲಿ ಒಂದು, ಹಳೇ ಮತ್ತು ಹೊಸ ಒಡಂಬಡಿಕೆಗಳಲ್ಲಿ ದೈವಿಕ ನಾಮವು ಹೆಚ್ಚೆಚ್ಚು ಸಂಖ್ಯೆಯಲ್ಲಿ ಕಂಡುಬರುವುದೇ ಆಗಿದೆ. ಇದರ ಫಲಿತಾಂಶವಾಗಿ, ಇಂದು ಟಹೀಟಿಯಲ್ಲಿ ಮತ್ತು ಅದರ ದ್ವೀಪಗಳಲ್ಲಿ ಯೆಹೋವನ ಹೆಸರು ಮನೆಮಾತಾಗಿದೆ. ಇದು ಕೆಲವು ಪ್ರಾಟೆಸ್ಟಂಟ್‌ ಚರ್ಚುಗಳಲ್ಲಿಯೂ ಕಂಡುಬರುತ್ತದೆ. ಆದರೂ, ಈಗ ದೇವರ ಹೆಸರು ನಿಜವಾಗಿಯೂ ಯೆಹೋವನ ಸಾಕ್ಷಿಗಳೊಂದಿಗೆ ಮತ್ತು ಅವರ ಹುರುಪಿನ ಸಾರುವ ಚಟುವಟಿಕೆಯೊಂದಿಗೆ ಸಂಬಂಧಿಸಲ್ಪಡುತ್ತದೆ. ಈ ಮೂಲಕ ಅವರು ನಾಟ್‌ ಹಾಗೂ ಅವನ ಸಹೋದ್ಯಮಿಗಳಿಂದ ಭಾಷಾಂತರಿಸಲ್ಪಟ್ಟ ಟಹೀಟ್ಯನ್‌ ಬೈಬಲಿನ ವ್ಯಾಪಕ ಉಪಯೋಗವನ್ನು ಮಾಡುತ್ತಾರೆ. ಇದಲ್ಲದೆ, ಇಂದು ಮಾನವಕುಲದ ಅಧಿಕಾಂಶ ಮಂದಿಗೆ ದೇವರ ವಾಕ್ಯವು ಸುಲಭವಾಗಿ ಲಭ್ಯವಾಗಿರುವುದಕ್ಕಾಗಿ ನಾವೆಷ್ಟು ಕೃತಜ್ಞರಾಗಿರಬೇಕು ಎಂಬುದನ್ನು, ಹೆನ್ರಿ ನಾಟ್‌ರಂಥ ಭಾಷಾಂತರಕಾರರಿಂದ ಮಾಡಲ್ಪಟ್ಟ ಶ್ರಮದಾಯಕ ಪ್ರಯತ್ನಗಳು ನಮಗೆ ನೆನಪು ಹುಟ್ಟಿಸುತ್ತವೆ.

[ಪುಟ 26ರಲ್ಲಿರುವ ಚಿತ್ರಗಳು]

ಟಹೀಟ್ಯನ್‌ ಭಾಷೆಯಲ್ಲಿ ಬೈಬಲಿನ ಪ್ರಥಮ ಭಾಷಾಂತರಗಳು, 1815. ಯೆಹೋವನ ಹೆಸರು ಕಂಡುಬರುತ್ತದೆ

ಟಹೀಟ್ಯನ್‌ ಭಾಷೆಯ ಬೈಬಲಿನ ಪ್ರಮುಖ ಭಾಷಾಂತರಕಾರ, ಹೆನ್ರಿ ನಾಟ್‌ (1774-1844)

[ಕೃಪೆ]

ಟಹೀಟ್ಯನ್‌ ಬೈಬಲ್‌: Copyright the British Library (3070.a.32); ಹೆನ್ರಿ ನಾಟ್‌ ಮತ್ತು ಪತ್ರ: Collection du Musée de Tahiti et de ses Îles, Punauia, Tahiti; ಕ್ಯಾಟಕಿಸ್ಮ್‌: With permission of the London Missionary Society Papers, Alexander Turnbull Library, Wellington, New Zealand

[ಪುಟ 28ರಲ್ಲಿರುವ ಚಿತ್ರ]

ಬೈಲಿಂಗುವಲ್‌ ಟಹೀಟ್ಯನ್‌ ಆ್ಯಂಡ್‌ ವೆಲ್ಷ್‌ ಕ್ಯಾಟಕಿಸ್ಮ್‌ 1801. ಇದರಲ್ಲಿ ದೇವರ ಹೆಸರು ಕಂಡುಬರುತ್ತದೆ

[ಕೃಪೆ]

With permission of the London Missionary Society Papers, Alexander Turnbull Library, Wellington, New Zealand

[ಪುಟ 29ರಲ್ಲಿರುವ ಚಿತ್ರ]

ಮುಂದುಗಡೆಯಲ್ಲಿ ಯೆಹೋವನ ಹೆಸರನ್ನು ಹೊಂದಿರುವ ಪ್ರಾಟೆಸ್ಟಂಟ್‌ ಚರ್ಚು, ವಾಹೀನೀ ದ್ವೀಪ, ಫ್ರೆಂಚ್‌ ಪಾಲೀನೇಷ್ಯ

[ಕೃಪೆ]

Avec la permission du Pasteur Teoroi Firipa