ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಅಂದು ಮತ್ತು ಇಂದು ಬದಲಾಯಿಸಿಕೊಳ್ಳಲು ಸಹಾಯಮಾಡುವ ಶಕ್ತಿಯನ್ನು ಅವಳು ಕಂಡುಕೊಂಡಳು

ಅಂದು ಮತ್ತು ಇಂದು ಬದಲಾಯಿಸಿಕೊಳ್ಳಲು ಸಹಾಯಮಾಡುವ ಶಕ್ತಿಯನ್ನು ಅವಳು ಕಂಡುಕೊಂಡಳು

“ದೇವರ ಸಮೀಪಕ್ಕೆ ಬನ್ನಿರಿ, ಆಗ ಆತನು ನಿಮ್ಮ ಸಮೀಪಕ್ಕೆ ಬರುವನು”

ಅಂದು ಮತ್ತು ಇಂದು ಬದಲಾಯಿಸಿಕೊಳ್ಳಲು ಸಹಾಯಮಾಡುವ ಶಕ್ತಿಯನ್ನು ಅವಳು ಕಂಡುಕೊಂಡಳು

ಮೆಕ್ಸಿಕೋದಲ್ಲಿ ವಾಸಿಸುತ್ತಿರುವ ಸ್ಯಾಂಡ್ರ ಎಂಬ ಸ್ತ್ರೀಯೊಬ್ಬಳು, ತನ್ನ ಕುಟುಂಬದಲ್ಲಿ ತಾನೊಬ್ಬ ಗೌರವಾರ್ಹ ಸದಸ್ಯಳಾಗಿರಲಿಲ್ಲ ಎಂದು ತನ್ನ ಕುರಿತು ವರ್ಣಿಸಿದಳು. ತ್ಯಜಿಸಲ್ಪಟ್ಟ ಭಾವನೆ ಮತ್ತು ವಾತ್ಸಲ್ಯದ ಕೊರತೆಯು, ಅವಳ ಹದಿಹರೆಯದ ವರುಷಗಳನ್ನು ಹಾಳುಮಾಡಿತ್ತು. ಅವಳನ್ನುವುದು: “ಸದಾ ಶೂನ್ಯಭಾವದಿಂದ ಮತ್ತು ನಾನು ಯಾಕೆ ಜೀವಿಸುತ್ತೇನೆ ಹಾಗೂ ಜೀವಿತದ ಉದ್ದೇಶವೇನು ಎಂಬುದರ ಕುರಿತು ಅನೇಕ ಪ್ರಶ್ನೆಗಳೊಂದಿಗೆ ನಾನು ನನ್ನ ತರುಣಾವಸ್ಥೆಯನ್ನು ಕಳೆದೆ.”

ಸ್ಯಾಂಡ್ರ ಹೈಸ್ಕೂಲ್‌ನಲ್ಲಿದ್ದಾಗ, ತನ್ನ ತಂದೆಯು ಮನೆಯಲ್ಲಿ ತಂದಿಟ್ಟಿದ್ದ ದ್ರಾಕ್ಷಾಮದ್ಯವನ್ನು ಕುಡಿಯಲಾರಂಭಿಸಿದಳು. ಸಮಯಾನಂತರ, ಅವಳು ತನ್ನ ಸ್ವಂತ ಮದ್ಯಸಾರದ ಸೀಸೆಯನ್ನು ಖರೀದಿಸತೊಡಗಿದಳು ಮತ್ತು ಕ್ರಮೇಣ ಕುಡುಕಿಯಾದಳು. “ಜೀವಿಸಬೇಕೆಂಬ ಯಾವ ಬಯಕೆಯೂ ನನ್ನಲ್ಲಿರಲಿಲ್ಲ,” ಎಂಬುದಾಗಿ ಅವಳು ಒಪ್ಪಿಕೊಳ್ಳುತ್ತಾಳೆ. ನಿರಾಶಾಭಾವದ ಕಾರಣ, ಸ್ಯಾಂಡ್ರ ಮಾದಕ ಪದಾರ್ಥಗಳ ಸೇವನೆಯನ್ನು ಆರಂಭಿಸಿದಳು. ಅವಳು ಹೇಳುವುದು: “ನಾನು ಯಾವುದನ್ನು ನನ್ನ ಕೈಚೀಲದಲ್ಲಿ ತೆಗೆದುಕೊಂಡು ಹೋಗುತ್ತಿದ್ದೆನೋ ಆ ಮದ್ಯದ ಒಂದು ಸೀಸೆ, ಕೆಲವೊಂದು ಮಾದಕ ಪದಾರ್ಥಗಳು, ಅಥವಾ ಸ್ವಲ್ಪ ಮಾರಿವಾನ, ಇವೇ ನನ್ನ ಸಮಸ್ಯೆಯನ್ನು ಮರೆತುಬಿಡುವಂತೆ ನನಗೆ ಸಹಾಯಮಾಡಿದವು.”

ಸ್ಯಾಂಡ್ರ ತನ್ನ ವೈದ್ಯಕೀಯ ಶಾಲೆಯನ್ನು ಮುಗಿಸಿದ ನಂತರ, ಮದ್ಯಪಾನೀಯಗಳ ಅತಿರೇಕ ಸೇವನೆಯಲ್ಲಿ ಮುಳುಗಿದಳು. ಅವಳು ಸಾಯಲು ಪ್ರಯತ್ನಿಸಿದಳು. ಆದರೆ ಬದುಕಿ ಉಳಿದಳು.

ಸ್ಯಾಂಡ್ರಳು, ಆತ್ಮಿಕ ಸಹಾಯಕ್ಕಾಗಿ ಮತ್ತು ಭಾವನಾತ್ಮಕ ಬೆಂಬಲಕ್ಕಾಗಿ ಅನೇಕ ಧರ್ಮಗಳ ಕಡೆಗೆ ನೋಡಿದಳು, ಆದರೆ ಅದರಿಂದ ಯಾವ ಪ್ರಯೋಜನವೂ ಸಿಗಲಿಲ್ಲ. ನಿರೀಕ್ಷೆಯನ್ನು ಕಳೆದುಕೊಂಡವಳಾಗಿ ಮತ್ತು ಹತಾಶೆಯ ಭಾವನೆಯಿಂದ ಅವಳು ದೇವರಿಗೆ: “ನೀನು ಎಲ್ಲಿದ್ದೀ? ಯಾಕೆ ನೀನು ನನಗೆ ಸಹಾಯಮಾಡುವುದಿಲ್ಲ?” ಎಂದು ಪದೇ ಪದೇ ಮೊರೆಯಿಟ್ಟಳು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬಾಕೆಯು ಅವಳನ್ನು ಭೇಟಿಯಾದ ಸಮಯದಲ್ಲಿ, ಅವಳು ತನ್ನ ಸ್ವ-ಗೌರವವನ್ನು ಸಂಪೂರ್ಣವಾಗಿ ಕಳೆದುಕೊಂಡಿದ್ದಳು. ಇದು ಒಂದು ವೈಯಕ್ತಿಕ ಬೈಬಲ್‌ ಅಧ್ಯಯನಕ್ಕೆ ನಡಿಸಿತು. “ಮುರಿದ ಮನಸ್ಸುಳ್ಳವರಿಗೆ ಯೆಹೋವನು ನೆರವಾಗುತ್ತಾನೆ [“ಹತ್ತಿರವಾಗಿದ್ದಾನೆ,” NW]” ಎಂಬುದನ್ನು ಸ್ಯಾಂಡ್ರಳು ಕಲಿತಾಗ, ಅದು ಅವಳ ಹೃದಯವನ್ನು ಸ್ಪರ್ಶಿಸಿತು.​—ಕೀರ್ತನೆ 34:18.

ಸ್ಯಾಂಡ್ರಳೊಂದಿಗೆ ಅಧ್ಯಯನವನ್ನು ಮಾಡಿದ ಆ ಸ್ತ್ರೀಯು, ಆದಾಮನಿಂದ ಬಾಧ್ಯತೆಯಾಗಿ ಪಡೆದಿರುವ ಪಾಪ ಮತ್ತು ಅಪರಿಪೂರ್ಣತೆಯ ಕಾರಣ ನಾವು ಬಲಹೀನರಾಗಿದ್ದೇವೆಂದು ಯೆಹೋವ ದೇವರಿಗೆ ತಿಳಿದಿದೆ ಎಂಬುದನ್ನು ಅವಳು ಮನಗಾಣುವಂತೆ ಸಹಾಯಮಾಡಿದಳು. ನಾವು ನೀತಿಯ ಮಟ್ಟಗಳನ್ನು ಪರಿಪೂರ್ಣವಾಗಿ ತಲಪಲು ಸಾಧ್ಯವಿಲ್ಲ ಎಂಬುದನ್ನು ದೇವರು ಅರ್ಥಮಾಡಿಕೊಳ್ಳುತ್ತಾನೆಂದು ಸ್ಯಾಂಡ್ರ ಗ್ರಹಿಸಿದಳು. (ಕೀರ್ತನೆ 51:5; ರೋಮಾಪುರ 3:23; 5:​12, 18) ಯೆಹೋವನು ನಮ್ಮ ಬಲಹೀನತೆಗಳನ್ನು ಲಕ್ಷಿಸುವುದಿಲ್ಲ ಮತ್ತು ನಾವು ಮಾಡಸಾಧ್ಯವಿರುವುದಕ್ಕಿಂತ ಹೆಚ್ಚನ್ನು ಆತನು ನಮ್ಮಿಂದ ಕೇಳಿಕೊಳ್ಳುವುದಿಲ್ಲ ಎಂಬುದನ್ನು ಕಲಿಯಲು ಅವಳು ಸಂತೋಷಿಸಿದಳು. ಕೀರ್ತನೆಗಾರನು ಅವಲೋಕಿಸುವುದು: “ಯಾಹುವೇ, ನೀನು ಪಾಪಗಳನ್ನು ಎಣಿಸುವದಾದರೆ ನಿನ್ನ ಮುಂದೆ ಯಾರು ನಿಂತಾರು?”​—ಕೀರ್ತನೆ 130:3.

ಸ್ಯಾಂಡ್ರಳ ಹೃದಯವನ್ನು ಸ್ಪರ್ಶಿಸಿದ ಒಂದು ಮುಖ್ಯ ಬೈಬಲ್‌ ಸತ್ಯವು, ಯೇಸು ಕ್ರಿಸ್ತನ ವಿಮೋಚನಾ ಯಜ್ಞವಾಗಿತ್ತು. ಅದರ ಮೂಲಕ ಯೆಹೋವನು ಕರುಣಾಭರಿತನಾಗಿ, ವಿಧೇಯ ಮಾನವರಿಗೆ ಅವರ ಅಪರಿಪೂರ್ಣತೆಯ ಹೊರತಾಗಿಯೂ ಒಂದು ಯೋಗ್ಯವಾದ ನಿಲುವನ್ನು ನೀಡಿದ್ದಾನೆ. (1 ಯೋಹಾನ 2:2; 4:​9, 10) ಹೌದು, ‘ನಮ್ಮ ಅಪರಾಧಗಳಿಗೆ ಪರಿಹಾರವನ್ನು’ ನಾವು ಪಡೆದುಕೊಳ್ಳಬಲ್ಲೆವು ಮತ್ತು ಈ ಮೂಲಕ, ನಾವು ನಿಷ್ಪ್ರಯೋಜಕರೆಂಬ ಯಾವುದೇ ಭಾವನೆಗಳನ್ನು ಹೋಗಲಾಡಿಸಲು ನಮಗೆ ಸಹಾಯವಾಗುತ್ತದೆ.​—ಎಫೆಸ 1:7.

ಅಪೊಸ್ತಲ ಪೌಲನ ಉದಾಹರಣೆಯಿಂದ ಸ್ಯಾಂಡ್ರಳು ಒಂದು ಉತ್ತಮ ಪಾಠವನ್ನು ಕಲಿತುಕೊಂಡಳು. ಅವನ ಹಿಂದಿನ ಪಾಪಗಳನ್ನು ದಯಾಪೂರ್ವಕವಾಗಿ ಕ್ಷಮಿಸುವ ಮತ್ತು ಪುನಃ ಪುನಃ ಸಂಭವಿಸುವ ಬಲಹೀನತೆಗಳ ವಿರುದ್ಧ ಹೋರಾಡಲು ಅವನಿಗೆ ಬೇಕಾಗಿರುವ ಬೆಂಬಲವನ್ನು ಕೊಡುವ ಮೂಲಕ ದೇವರು ತೋರಿಸಿದ ದಯೆಯನ್ನು ಅವನು ಗಣ್ಯಮಾಡಿದ್ದನು. (ರೋಮಾಪುರ 7:​15-25; 1 ಕೊರಿಂಥ 15:9, 10) ಪೌಲನು ತನ್ನ ಜೀವನ ಮಾರ್ಗವನ್ನು ಸರಿಪಡಿಸಿಕೊಂಡನು, ದೇವರಿಗೆ ಮೆಚ್ಚಿಕೆಯಾದ ಹಾದಿಯಲ್ಲಿ ಉಳಿಯಲು ‘ತನ್ನ ಮೈಯನ್ನು ಜಜ್ಜಿ ಸ್ವಾಧೀನಪಡಿಸಿಕೊಂಡನು.’ (1 ಕೊರಿಂಥ 9:27) ಅವನ ಪಾಪಪೂರ್ಣ ಮನೋಭಾವವು ಅವನನ್ನು ದಾಸನಂತೆ ನಡಿಸಲು ಅವನು ಬಿಟ್ಟುಕೊಡಲಿಲ್ಲ.

ಸ್ಯಾಂಡ್ರಳ ಬಲಹೀನತೆಗಳು ಅವಳನ್ನು ಪೀಡಿಸುತ್ತಾ ಇದ್ದವಾದರೂ, ಅವಳು ಅದರ ವಿರುದ್ಧ ಹೋರಾಡುತ್ತಾ ಇದ್ದಳು. ಅದನ್ನು ಹೊಗಲಾಡಿಸುವಂತೆ ಯೆಹೋವನಲ್ಲಿ ಸಹಾಯಕ್ಕಾಗಿ ಸತತವಾಗಿ ಪ್ರಾರ್ಥಿಸಿ, ಆತನ ಕರುಣೆಯನ್ನು ಪಡೆದುಕೊಂಡಳು. (ಕೀರ್ತನೆ 55:22; ಯಾಕೋಬ 4:8) ದೇವರು ಅವಳ ಬಗ್ಗೆ ತೆಗೆದುಕೊಳ್ಳುವ ವೈಯಕ್ತಿಕ ಆಸಕ್ತಿಯನ್ನು ಗ್ರಹಿಸುತ್ತಾ, ಸ್ಯಾಂಡ್ರಳು ತನ್ನ ಜೀವಿತವನ್ನು ಸಂಪೂರ್ಣವಾಗಿ ಬದಲಾಯಿಸಶಕ್ತಳಾದಳು. ಅವಳು ಹೇಳುವುದು: “ಪೂರ್ಣಸಮಯ ಬೈಬಲನ್ನು ಇತರರಿಗೆ ಕಲಿಸುವ ಆನಂದವು ನನ್ನದಾಗಿದೆ.” ತನ್ನ ಅಕ್ಕ ಮತ್ತು ತಂಗಿಗೆ ಯೆಹೋವನ ಕುರಿತು ತಿಳಿದುಕೊಳ್ಳುವಂತೆ ಸಹಾಯಮಾಡುವ ಸುಯೋಗವೂ ಸ್ಯಾಂಡ್ರಳಿಗೆ ದೊರಕಿತು. ಅವಳು ‘ಒಳ್ಳೆಯ ಕೆಲಸಗಳನ್ನು’ ಮಾಡುತ್ತಿರುವಾಗ, ಯೆಹೋವನ ಸಾಕ್ಷಿಗಳ ಜಿಲ್ಲಾ ಅಧಿವೇಶನದಲ್ಲಿ ಸ್ವಯಂಸೇವಕಳಾಗಿ ತನ್ನ ವೈದಕೀಯ ಕೌಶಲಗಳನ್ನೂ ಉಪಯೋಗಿಸುತ್ತಾಳೆ.​—ಗಲಾತ್ಯ 6:10.

ಸ್ಯಾಂಡ್ರಳ ದುಶ್ಚಟಗಳ ಕುರಿತಾಗಿ ಏನು? ನಿಶ್ಚಿತಾಭಿಪ್ರಾಯದಿಂದ ಅವಳು ಹೇಳುವುದು: “ನನ್ನ ಮನಸ್ಸು ಶುದ್ಧವಾಗಿದೆ. ಈಗ ನಾನು ಕುಡಿಯುವುದಿಲ್ಲ, ಸೇದುವುದಿಲ್ಲ, ಅಥವಾ ಯಾವುದೇ ಮಾದಕ ಪದಾರ್ಥಗಳನ್ನು ಸೇವಿಸುವುದಿಲ್ಲ. ನನಗೆ ಅವುಗಳ ಆವಶ್ಯಕತೆಯೂ ಇಲ್ಲ. ನಾನು ಯಾವುದಕ್ಕಾಗಿ ಹುಡುಕುತ್ತಿದ್ದೇನೋ ಅದು ನನಗೆ ಸಿಕ್ಕಿದೆ.”

[ಪುಟ 9ರಲ್ಲಿರುವ ಸಂಕ್ಷಿಪ್ತ ವಿವರಣೆ]

“ನಾನು ಯಾವುದಕ್ಕಾಗಿ ಹುಡುಕುತ್ತಿದ್ದೇನೋ ಅದು ನನಗೆ ಸಿಕ್ಕಿದೆ”

[ಪುಟ 9ರಲ್ಲಿರುವ ಚೌಕ]

ಬೈಬಲಿನ ಮೂಲತತ್ತ್ವಗಳು ಕಾರ್ಯೋನ್ಮುಖವಾಗಿವೆ

ತಮ್ಮನ್ನು ಮಲಿನಗೊಳಿಸುವಂಥ ದುಶ್ಚಟಗಳಿಂದ ಹೊರಬರಲು ಅನೇಕರಿಗೆ ಸಹಾಯಮಾಡಿದಂಥ ಕೆಲವು ಬೈಬಲ್‌ ಮೂಲತತ್ತ್ವಗಳು ಇಲ್ಲಿವೆ:

“ನಾವು ಶರೀರಾತ್ಮಗಳ ಕಲ್ಮಶವನ್ನು ತೊಲಗಿಸಿ ನಮ್ಮನ್ನು ಶುಚಿಮಾಡಿಕೊಂಡು ದೇವರ ಭಯದಿಂದ ಕೂಡಿದವರಾಗಿ ಪವಿತ್ರತ್ವವನ್ನು ಸಿದ್ಧಿಗೆ ತರುವದಕ್ಕೆ ಪ್ರಯತ್ನಿಸೋಣ.” (2 ಕೊರಿಂಥ 7:1) ಕಲ್ಮಶವನ್ನು ತೊಲಗಿಸಿ ತಮ್ಮನ್ನು ಶುಚಿಮಾಡಿಕೊಂಡು, ಅಶುದ್ಧ ವಿಷಯಗಳಿಂದ ದೂರವಿರುವ ಜನರನ್ನು ದೇವರು ಆಶೀರ್ವದಿಸುತ್ತಾನೆ.

“ಯೆಹೋವನ ಭಯವು ಪಾಪದ್ವೇಷವನ್ನು ಹುಟ್ಟಿಸುತ್ತದೆ.” (ಜ್ಞಾನೋಕ್ತಿ 8:13) ಮಾದಕ ಪದಾರ್ಥಗಳ ದುರುಪಯೋಗವನ್ನು ಸೇರಿಸಿ ಇತರ ಎಲ್ಲಾ ಕೆಟ್ಟ ಹವ್ಯಾಸಗಳನ್ನು ಬಿಟ್ಟು ದೂರವಿರಲು, ದೇವರ ಪೂಜ್ಯಭಯವು ನಮಗೆ ಸಹಾಯಮಾಡುತ್ತದೆ. ದೇವರನ್ನು ಮೆಚ್ಚಿಸುವುದರೊಂದಿಗೆ, ತನ್ನನ್ನು ಬದಲಾಯಿಸಿಕೊಂಡ ವ್ಯಕ್ತಿಯು ಭಯಾನಕ ರೋಗಗಳಿಂದ ಸುರಕ್ಷಿತನಾಗಿರುತ್ತಾನೆ.

‘ಅಧಿಪತಿಗಳಿಗೂ ಅಧಿಕಾರಿಗಳಿಗೂ ಅಧೀನರಾಗಿ ವಿಧೇಯರಾಗಿರಬೇಕು.’ (ತೀತ 3:1) ಅನೇಕ ಸ್ಥಳಗಳಲ್ಲಿ, ಕೆಲವು ಮಾದಕ ಪದಾರ್ಥಗಳನ್ನು ಹೊಂದಿರುವುದು ಅಥವಾ ಉಪಯೋಗಿಸುವುದು ಕಾನೂನಿಗೆ ವಿರುದ್ಧವಾಗಿದೆ. ಸತ್ಯ ಕ್ರೈಸ್ತರು ಕಾನೂನಿಗೆ ವಿರುದ್ಧವಾದ ಯಾವುದೇ ಮಾದಕ ಪದಾರ್ಥಗಳನ್ನು ಪಡೆದುಕೊಳ್ಳುವುದಿಲ್ಲ ಅಥವಾ ಉಪಯೋಗಿಸುವುದಿಲ್ಲ.