ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ತರ್ಕಬದ್ಧವಾಗಿ ಆಲೋಚಿಸಿರಿ ವಿವೇಕದಿಂದ ಕಾರ್ಯವೆಸಗಿರಿ

ತರ್ಕಬದ್ಧವಾಗಿ ಆಲೋಚಿಸಿರಿ ವಿವೇಕದಿಂದ ಕಾರ್ಯವೆಸಗಿರಿ

ತರ್ಕಬದ್ಧವಾಗಿ ಆಲೋಚಿಸಿರಿ ವಿವೇಕದಿಂದ ಕಾರ್ಯವೆಸಗಿರಿ

ಈದೃಶ್ಯವನ್ನು ಮನಸ್ಸಿನಲ್ಲಿ ಚಿತ್ರಿಸಿಕೊಳ್ಳಿರಿ: ಯೆರೂಸಲೇಮಿನಲ್ಲಿ ಧಾರ್ಮಿಕ ಶತ್ರುಗಳು ತನ್ನನ್ನು ತೀವ್ರ ಯಾತನೆಗೊಳಪಡಿಸಿ ಕೊಲ್ಲುವರೆಂಬುದನ್ನು ಯೇಸು ಕ್ರಿಸ್ತನು ವಿವರಿಸುತ್ತಾ ಇದ್ದಾನೆ. ಆದರೆ ಅವನ ಆಪ್ತ ಗೆಳೆಯನಾದ ಅಪೊಸ್ತಲ ಪೇತ್ರನಿಗೆ ಇದನ್ನು ನಂಬಲು ಸಾಧ್ಯವಾಗುತ್ತಿಲ್ಲ. ಅವನು ಯೇಸುವನ್ನು ಪಕ್ಕಕ್ಕೆ ಕರೆದೊಯ್ದು ಗದರಿಸುತ್ತಾನೆ ಸಹ. ಪೇತ್ರನಿಗೆ ನಿಷ್ಕಲ್ಮಷವಾದ ಮನಸ್ಸು ಮತ್ತು ನಿಜವಾದ ಚಿಂತೆಯಿತ್ತೆಂಬ ವಿಷಯದಲ್ಲಿ ಸಂದೇಹವೇ ಇಲ್ಲ. ಆದರೆ ಅವನ ಯೋಚನಾಧಾಟಿಯ ಬಗ್ಗೆ ಯೇಸು ಏನು ಹೇಳುತ್ತಾನೆ? ಅವನನ್ನುವುದು: “ಸೈತಾನನೇ, ನನ್ನ ಮುಂದೆ ನಿಲ್ಲಬೇಡ, ನಡೆ, ನನಗೆ ನೀನು ವಿಘ್ನವಾಗಿದ್ದೀ; ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ.”​—ಮತ್ತಾಯ 16:21-23.

ಪೇತ್ರನಿಗೆ ಇದೆಂಥ ಧಕ್ಕೆಯನ್ನು ಉಂಟುಮಾಡಿದ್ದಿರಬಹುದು! ಸಹಾಯ ಮತ್ತು ಬೆಂಬಲ ಕೊಡುವವನಾಗಿರುವ ಬದಲು, ಅವನು ತನ್ನ ಅತಿ ಪ್ರಿಯ ಯಜಮಾನನಿಗೆ ಈ ಸಂದರ್ಭದಲ್ಲಿ ಒಂದು “ವಿಘ್ನ”ವಾಗಿದ್ದನು. ಇದು ಹೇಗಾಯಿತು? ತಾನು ನಂಬಲು ಬಯಸಿದ್ದನ್ನು ಮಾತ್ರ ನಂಬುವುದು ಎಂಬ ಮಾನವ ಸಹಜ ಯೋಚನೆಯಲ್ಲಿನ ಒಂದು ಸರ್ವಸಾಮಾನ್ಯ ದೋಷಕ್ಕೆ ಅವನೂ ಬಲಿಯಾಗಿದ್ದನು.

ಅತಿಯಾದ ಆತ್ಮವಿಶ್ವಾಸವುಳ್ಳವರಾಗಿರಬೇಡಿ

ತರ್ಕಬದ್ಧವಾಗಿ ಆಲೋಚಿಸುವ ನಮ್ಮ ಸಾಮರ್ಥ್ಯಕ್ಕಿರುವ ಒಂದು ಬೆದರಿಕೆಯು, ಅತಿಯಾದ ಆತ್ಮವಿಶ್ವಾಸವುಳ್ಳವರಾಗಿರುವ ಪ್ರವೃತ್ತಿಯಾಗಿದೆ. ಪುರಾತನ ಕೊರಿಂಥದಲ್ಲಿದ್ದ ಜೊತೆ ಕ್ರೈಸ್ತರಿಗೆ ಅಪೊಸ್ತಲ ಪೌಲನು ಹೀಗೆ ಎಚ್ಚರಿಕೆ ಕೊಟ್ಟನು: “ನಿಂತಿದ್ದೇನೆಂದು ನೆನಸುವವನು ಬೀಳದಂತೆ ಎಚ್ಚರಿಕೆಯಾಗಿರಲಿ.” (1 ಕೊರಿಂಥ 10:12) ಪೌಲನು ಹೀಗೆ ಹೇಳಿದ್ದೇಕೆ? ಏಕೆಂದರೆ, ಮಾನವ ಆಲೋಚನೆಯು ಎಷ್ಟು ಸುಲಭವಾಗಿ ವಕ್ರವಾಗಬಲ್ಲದೆಂದು ಅವನಿಗೆ ತಿಳಿದಿತ್ತೆಂಬುದು ಸ್ಪಷ್ಟ. ಕ್ರೈಸ್ತರ ಮನಸ್ಸುಗಳು ಸಹ “ಕ್ರಿಸ್ತನ ವಿಷಯದಲ್ಲಿರಬೇಕಾದ ಯಥಾರ್ಥತ್ವವನ್ನೂ ಪಾತಿವ್ರತ್ಯವನ್ನೂ ಬಿಟ್ಟು ಕೆಟ್ಟು”ಹೋಗಸಾಧ್ಯವಿತ್ತು.​—2 ಕೊರಿಂಥ 11:3.

ಇದು ಪೌಲನ ಪೂರ್ವಜರ ಒಂದು ಇಡೀ ತಲೆಮಾರಿಗೆ ಸಂಭವಿಸಿತ್ತು. ಆ ಸಮಯದಲ್ಲಿ ಯೆಹೋವನು ಅವರಿಗೆ ಹೇಳಿದ್ದು: “ನನ್ನ ಆಲೋಚನೆಗಳು ನಿಮ್ಮ ಆಲೋಚನೆಗಳಲ್ಲ, ನಿಮ್ಮ ಮಾರ್ಗಗಳು ನನ್ನ ಮಾರ್ಗಗಳಲ್ಲ.” (ಯೆಶಾಯ 55:8) ಅವರು ‘ತಮ್ಮಲ್ಲಿ ತಾವೇ ಜ್ಞಾನಿಗಳಾಗಿ’ ವಿಪತ್ಕಾರಕ ಪರಿಣಾಮಗಳನ್ನು ಅನುಭವಿಸಬೇಕಾಯಿತು. (ಯೆಶಾಯ 5:21) ಹೀಗಿರುವುದರಿಂದ, ನಾವು ನಮ್ಮ ಸ್ವಂತ ಯೋಚನಾಧಾಟಿಯನ್ನು ಹೇಗೆ ತರ್ಕಬದ್ಧವಾಗಿರಿಸಿ, ಆ ರೀತಿಯ ವಿಪತ್ತಿನಿಂದ ತಪ್ಪಿಸಿಕೊಳ್ಳಬಹುದು ಎಂಬುದನ್ನು ಪರೀಕ್ಷಿಸಿ ನೋಡುವುದು ಬುದ್ಧಿವಂತಿಕೆಯ ಕೆಲಸ.

ಶಾರೀರಿಕ ಯೋಚನೆಯ ಬಗ್ಗೆ ಎಚ್ಚರವಾಗಿರಿ

ಕೊರಿಂಥದಲ್ಲಿದ್ದ ಕೆಲವರು ಶಾರೀರಿಕ ಯೋಚನೆಯಿಂದ ಬಹಳಷ್ಟು ಪ್ರಭಾವಿಸಲ್ಪಟ್ಟಿದ್ದರು. (1 ಕೊರಿಂಥ 3:​1-3) ದೇವರ ವಾಕ್ಯಕ್ಕಿಂತಲೂ ಅವರು ಮಾನವೀಯ ತತ್ತ್ವಜ್ಞಾನಗಳಿಗೆ ಹೆಚ್ಚು ಪ್ರಾಧಾನ್ಯತೆಯನ್ನು ಕೊಟ್ಟರು. ನಿಸ್ಸಂದೇಹವಾಗಿಯೂ ಆ ಸಮಯದಲ್ಲಿನ ಗ್ರೀಕ್‌ ಚಿಂತಕರು ತುಂಬ ಬುದ್ಧಿವಂತ ಪುರುಷರಾಗಿದ್ದರು. ಆದರೆ ದೇವರ ದೃಷ್ಟಿಯಲ್ಲಿ ಅವರು ಮೂರ್ಖರಾಗಿದ್ದರು. ಪೌಲನಂದದ್ದು: “ಜ್ಞಾನಿಗಳ ಜ್ಞಾನವನ್ನು ನಾಶಮಾಡುವೆನು, ವಿವೇಕಿಗಳ ವಿವೇಕವನ್ನು ನಿರಾಕರಿಸುವೆನು ಎಂಬದಾಗಿ ಶಾಸ್ತ್ರೋಕ್ತಿಯುಂಟಲ್ಲಾ. ಜ್ಞಾನಿಯು ಎಲ್ಲಿ? ಶಾಸ್ತ್ರಿಯೆಲ್ಲಿ? ಇಹಲೋಕದ ತರ್ಕವಾದಿ ಎಲ್ಲಿ? ದೇವರು ಇಹಲೋಕಜ್ಞಾನವನ್ನು ಹುಚ್ಚುತನವಾಗ ಮಾಡಿದ್ದಾನಲ್ಲವೇ.” (1 ಕೊರಿಂಥ 1:19, 20) ಈ ಬುದ್ಧಿಜೀವಿಗಳು, ದೇವರಾತ್ಮದಿಂದಲ್ಲ ಬದಲಾಗಿ “ಪ್ರಾಪಂಚಿಕ ಆತ್ಮ”ದಿಂದ ನಿಯಂತ್ರಿಸಲ್ಪಟ್ಟಿದ್ದರು. (1 ಕೊರಿಂಥ 2:12) ಅವರ ತತ್ತ್ವಜ್ಞಾನಗಳೂ ವಿಚಾರಗಳೂ ಯೆಹೋವನ ಯೋಚನೆಗಳಿಗೆ ಹೊಂದಿಕೆಯಲ್ಲಿರಲಿಲ್ಲ.

ಇಂಥ ಶಾರೀರಿಕ ಯೋಚನೆಗಳ ಮೂಲನು ಪಿಶಾಚನಾದ ಸೈತಾನನಾಗಿದ್ದಾನೆ. ಹವ್ವಳನ್ನು ದುಷ್ಪ್ರೇರಣೆಗೆಳೆಯಲು ಅವನು ಸರ್ಪವನ್ನು ಬಳಸಿದನು. (ಆದಿಕಾಂಡ 3:​1-6; 2 ಕೊರಿಂಥ 11:3) ಈಗಲೂ ಅವನಿಂದ ನಮಗೆ ಅಪಾಯವಿದೆಯೊ? ಹೌದು! ದೇವರ ವಾಕ್ಯಕ್ಕನುಸಾರ, ಸೈತಾನನು ಜನರ ‘ಮನಸ್ಸನ್ನು ಮಂಕುಮಾಡಿದ್ದಾನೆ.’ ಇದನ್ನು ಎಷ್ಟರ ಮಟ್ಟಿಗೆ ಮಾಡಿದ್ದಾನೆಂದರೆ, ಈಗ ಅವನು ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುತ್ತಿದ್ದಾನೆ.’ (2 ಕೊರಿಂಥ 4:4; ಪ್ರಕಟನೆ 12:9) ನಾವಾತನ ಕುತಂತ್ರಗಳ ವಿಷಯದಲ್ಲಿ ಎಚ್ಚರವಾಗಿರುವುದು ಎಷ್ಟು ಪ್ರಾಮುಖ್ಯ!​—2 ಕೊರಿಂಥ 2:11.

“ದುರ್ಜನರ ವಂಚನೆ”ಯ ವಿಷಯದಲ್ಲಿ ಹುಷಾರಾಗಿರಿ

“ದುರ್ಬೋಧಕರ ವಂಚನೆ”ಯ ವಿರುದ್ಧವೂ ಅಪೊಸ್ತಲ ಪೌಲನು ಎಚ್ಚರಿಸುತ್ತಾನೆ. (ಎಫೆಸ 4:14) ಸತ್ಯವನ್ನು ತಿಳಿಸುತ್ತಿರುವಂತೆ ನಟಿಸುತ್ತಿದ್ದರೂ ವಾಸ್ತವದಲ್ಲಿ ಅದನ್ನು ತಿರಿಚಿ ಹೇಳುತ್ತಿದ್ದ ‘ಮೋಸಗಾರರಾದ ಕೆಲಸದವರನ್ನೂ’ ಅವನು ಎದುರಿಸಿದನು. (2 ಕೊರಿಂಥ 11:​12-15) ತಮ್ಮ ಗುರಿಗಳನ್ನು ಸಾಧಿಸಲಿಕ್ಕಾಗಿ ಈ ಪುರುಷರು, ತಮ್ಮ ವಿಚಾರಧಾರೆಯನ್ನು ಮಾತ್ರ ಬೆಂಬಲಿಸುವಂಥ ಪುರಾವೆಯ ಬಳಕೆ, ಭಾವಾವೇಶಗಳನ್ನು ಕೆರಳಿಸುವಂಥ ಭಾಷೆ, ಮರುಳುಗೊಳಿಸುವಂಥ ಅರ್ಧಸತ್ಯಗಳು, ಕುಟಿಲ ವ್ಯಂಗ್ಯೋಕ್ತಿ, ಮತ್ತು ನೇರವಾದ ಸುಳ್ಳುಗಳನ್ನೂ ಬಳಸಬಹುದು.

ಪ್ರಾಪಗ್ಯಾಂಡ ಮಾಡುವವರು ಅನೇಕವೇಳೆ, ಇತರರ ಹೆಸರಿಗೆ ಮಸಿ ಬಳಿಯಲಿಕ್ಕೋಸ್ಕರ “ಪಂಗಡ” ಎಂಬಂಥ ಪದವನ್ನು ಉಪಯೋಗಿಸುತ್ತಾರೆ. ಎಸೆಂಬ್ಲಿ ಆಫ್‌ ದಿ ಕೌನ್ಸಿಲ್‌ ಆಫ್‌ ಯೂರೋಪ್‌ಗೆ ಮಾಡಲ್ಪಟ್ಟ ಒಂದು ಪ್ರಸ್ತಾಪದಲ್ಲಿ, ಹೊಸ ಧಾರ್ಮಿಕ ಗುಂಪುಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳು “ಈ ಪದವನ್ನು ಬಳಸದೇ ಇರುವುದು ಯುಕ್ತ” ಎಂಬ ಸಲಹೆಯನ್ನು ಕೊಡಲಾಯಿತು. ಹೀಗೇಕೆ? “ಪಂಥ” ಎಂಬ ಪದಕ್ಕೆ ವಿಪರೀತವಾಗಿ ನಕಾರಾತ್ಮಕವಾದ ಸೂಚ್ಯಾರ್ಥವಿದೆಯೆಂದು ಭಾವಿಸಲಾಗಿದ್ದ ಕಾರಣದಿಂದಲೇ. ತದ್ರೀತಿಯಲ್ಲೇ, ಗ್ರೀಕ್‌ ಬುದ್ಧಿಜೀವಿಗಳು ಅಪೊಸ್ತಲ ಪೌಲನು ಒಬ್ಬ “ಮಾತಾಳಿ” ಇಲ್ಲವೆ ಅಕ್ಷರಶಃವಾಗಿ ಹೇಳುವುದಾದರೆ ‘ಬೀಜ ಹೆಕ್ಕುವವನು’ ಆಗಿದ್ದನೆಂದು ತಪ್ಪಾಗಿ ಆರೋಪಿಸಿದರು. ಅವನು ಅಲ್ಲಿಲ್ಲಿ ಜ್ಞಾನದ ಕೆಲವೊಂದು ಚಿಕ್ಕಪುಟ್ಟ ತುಣುಕುಗಳನ್ನು ಹೆಕ್ಕಿ ಅದನ್ನೇ ಪುನಃ ಪುನಃ ಹೇಳುವ ಕೆಲಸವಿಲ್ಲದ ಹರಟೆಮಲ್ಲನಲ್ಲದೆ ಇನ್ನೇನೂ ಅಲ್ಲ ಎಂಬುದನ್ನು ಅವರು ಸೂಚ್ಯವಾಗಿ ಹೇಳುತ್ತಿದ್ದರು. ಆದರೆ ವಾಸ್ತವದಲ್ಲಿ ಪೌಲನು, “ಯೇಸುವಿನ ವಿಷಯವಾಗಿಯೂ ಸತ್ತವರು ಎದ್ದುಬರುವರೆಂಬುವ ವಿಷಯವಾಗಿಯೂ ಸಾರುತ್ತಿದ್ದ”ನು.​—ಅ. ಕೃತ್ಯಗಳು 17:18.

ಪ್ರಾಪಗ್ಯಾಂಡ ಮಾಡುವವರ ವಿಧಾನಗಳು ಕಾರ್ಯಸಾಧಕವಾಗಿರುತ್ತವೊ? ಹೌದು. ಇತರ ರಾಷ್ಟ್ರಗಳು ಇಲ್ಲವೆ ಇತರ ಧರ್ಮಗಳ ಕುರಿತಾಗಿ ಜನರಿಗಿರುವ ಗ್ರಹಿಕೆಯನ್ನು ವಕ್ರಗೊಳಿಸುವ ಮೂಲಕ, ಜಾತಿ ಹಾಗೂ ಧರ್ಮ ಸಂಬಂಧಿತ ವೈರಗಳನ್ನು ಹುಟ್ಟಿಸಲು ಅವರು ಪ್ರಧಾನ ಕಾರಣವಾಗಿದ್ದಾರೆ. ಜನಪ್ರಿಯರಲ್ಲದ ಅಲ್ಪಸಂಖ್ಯಾತರನ್ನು ಪಕ್ಕಕ್ಕೆ ತಳ್ಳಲು ಅನೇಕರು ಆ ವಿಧಾನಗಳನ್ನು ಬಳಸಿದ್ದಾರೆ. ಅಡಾಲ್ಫ್‌ ಹಿಟ್ಲರನು ಯೆಹೂದ್ಯರು ಹಾಗೂ ಇತರ ಅಲ್ಪಸಂಖ್ಯಾತರ ಬಗ್ಗೆ ಅವರು “ಹೀನರು,” “ದುಷ್ಟರು” ಮತ್ತು ಸರಕಾರಕ್ಕೆ “ಬೆದರಿಕೆಯನ್ನೊಡುವವರು” ಆಗಿದ್ದಾರೆಂಬ ಚಿತ್ರಣವನ್ನು ಪ್ರಸರಿಸಿದಾಗ, ಇಂಥ ವಿಧಾನಗಳನ್ನೇ ಪರಿಣಾಮಕಾರಿಯಾಗಿ ಉಪಯೋಗಿಸಿದನು. ಈ ರೀತಿಯ ವಂಚನೆಯು ನಿಮ್ಮ ಯೋಚನೆಗಳಲ್ಲಿ ವಿಷಬೆರೆಸುವಂತೆ ಎಂದಿಗೂ ಬಿಡಬೇಡಿರಿ.​—ಅ. ಕೃತ್ಯಗಳು 28:​19-22.

ನಿಮ್ಮನ್ನು ನೀವೇ ವಂಚಿಸಿಕೊಳ್ಳಬೇಡಿರಿ

ನಾವು ಸ್ವತಃ ನಮ್ಮನ್ನೇ ವಂಚಿಸಿಕೊಳ್ಳುವುದು ಸಹ ಸುಲಭ. ನಮಗೆ ಬಲು ಪ್ರಿಯವಾಗಿರುವ ಅಭಿಪ್ರಾಯಗಳನ್ನು ಬಿಟ್ಟುಬಿಡುವುದು ಇಲ್ಲವೆ ಅವುಗಳನ್ನು ಪ್ರಶ್ನಿಸುವುದು ಸಹ ನಮಗೆ ತುಂಬ ಕಷ್ಟಕರವಾಗಿರಬಹುದು. ಏಕೆ? ಏಕೆಂದರೆ ನಮ್ಮ ಅಭಿಪ್ರಾಯಗಳೊಂದಿಗೆ ನಾವು ಭಾವಾತ್ಮಕವಾಗಿ ಅಂಟಿಕೊಂಡಿದ್ದೇವೆ. ಆಗ ನಾವು, ಅವುಗಳನ್ನು ನಮ್ಮ ಬುದ್ಧಿಗೊಪ್ಪುವಂತೆ ವಿವರಿಸುತ್ತೇವೆ, ಅಂದರೆ ವಾಸ್ತವದಲ್ಲಿ ತಪ್ಪಾದ ಹಾಗೂ ದಾರಿತಪ್ಪಿಸುವಂಥ ನಂಬಿಕೆಗಳನ್ನು ಸಮರ್ಥಿಸುವಂಥ ಕಾರಣಗಳನ್ನು ಸೃಷ್ಟಿಸುತ್ತೇವೆ.

ಪ್ರಥಮ ಶತಮಾನದ ಕೆಲವು ಮಂದಿ ಕ್ರೈಸ್ತರಿಗೆ ಹೀಗೆಯೇ ಆಯಿತು. ದೇವರ ವಾಕ್ಯವು ಅವರಿಗೆ ಗೊತ್ತಿತ್ತು, ಆದರೆ ಅದು ತಮ್ಮ ಯೋಚನೆಗಳನ್ನು ನಿಯಂತ್ರಿಸುವಂತೆ ಅವರು ಬಿಡಲಿಲ್ಲ. ಕೊನೆಯಲ್ಲಿ, ಅವರು “ಸುಳ್ಳು ತರ್ಕದೊಂದಿಗೆ [ತಮ್ಮನ್ನೇ] ಮೋಸಗೊಳಿಸುವವರಾದರು.” (ಯಾಕೋಬ 1:​22, 26) ನಾವು ಈ ರೀತಿಯ ಸ್ವವಂಚನೆಗೆ ಬಲಿಯಾಗಿದ್ದೇವೆಂಬುದರ ಒಂದು ಸೂಚನೆಯು, ನಮ್ಮ ನಂಬಿಕೆಗಳನ್ನು ಯಾರಾದರೂ ಪ್ರಶ್ನಿಸುವಾಗ ನಾವು ಸಿಟ್ಟುಗೊಳ್ಳುವುದೇ ಆಗಿದೆ. ಸಿಟ್ಟುಗೊಳ್ಳುವ ಬದಲು, ಬಿಚ್ಚುಮನಸ್ಸಿನವರಾಗಿದ್ದು, ನಮ್ಮ ಅಭಿಪ್ರಾಯ ಸರಿಯೆಂದು ನಮಗೆ ಖಾತ್ರಿಯಿರುವುದಾದರೂ ಬೇರೆಯವರಿಗೆ ಏನು ಹೇಳಲಿಕ್ಕಿದೆ ಎಂಬುದನ್ನು ಜಾಗರೂಕತೆಯಿಂದ ಕಿವಿಗೊಡುವುದು ವಿವೇಕದ ಸಂಗತಿಯಾಗಿದೆ.​—ಜ್ಞಾನೋಕ್ತಿ 18:17.

“ದೈವಜ್ಞಾನ”ಕ್ಕಾಗಿ ಅಗೆಯಿರಿ

ನಮ್ಮ ಯೋಚನೆಗಳನ್ನು ತರ್ಕಬದ್ಧವಾಗಿರಿಸಲು ನಾವೇನು ಮಾಡಬಲ್ಲೆವು? ಬಹಳಷ್ಟು ಸಹಾಯ ಲಭ್ಯವಿದೆ, ಆದರೆ ನಾವು ಮಾತ್ರ ಅದಕ್ಕಾಗಿ ಶ್ರಮಿಸಲು ಸಿದ್ಧರಿರಬೇಕು. ವಿವೇಕಿ ಅರಸನಾದ ಸೊಲೊಮೋನನು ಹೇಳಿದ್ದು: “ಕಂದಾ, ನನ್ನ ಮಾತುಗಳನ್ನು ಅಂಗೀಕರಿಸಿ ನನ್ನ ವಿಧಿಗಳನ್ನು ನಿಧಿಯಂತೆ ಕಾಪಾಡಿಕೋ, ನಿನ್ನ ಕಿವಿಯನ್ನು ಜ್ಞಾನದ ಕಡೆಗೂ ಹೃದಯವನ್ನು ವಿವೇಕದ ಕಡೆಗೂ ತಿರುಗಿಸು; ಬುದ್ಧಿಗಾಗಿ ಮೊರೆಯಿಟ್ಟು ವಿವೇಕಕ್ಕಾಗಿ ಕೂಗಿಕೊಂಡು ಅದನ್ನು ಬೆಳ್ಳಿಯಂತೆಯೂ ನಿಕ್ಷೇಪದಂತೆಯೂ ಹುಡುಕು; ಆಗ ನೀನು ಯೆಹೋವನ ಭಯವನ್ನು ಅರಿತು ದೈವಜ್ಞಾನವನ್ನು ಪಡೆದುಕೊಳ್ಳುವಿ.” (ಜ್ಞಾನೋಕ್ತಿ 2:1-5) ಹೌದು, ನಾವು ನಮ್ಮ ಹೃದಮನಗಳಲ್ಲಿ ದೇವರ ವಾಕ್ಯದ ಸತ್ಯಗಳನ್ನು ತುಂಬಿಸಲು ವೈಯಕ್ತಿಕವಾಗಿ ಪ್ರಯತ್ನವನ್ನು ಮಾಡುವಲ್ಲಿ, ನಮಗೆ ನಿಜವಾದ ವಿವೇಕ, ಒಳನೋಟ ಹಾಗೂ ವಿವೇಚನಾಶಕ್ತಿಯು ಸಿಗಸಾಧ್ಯವಿದೆ. ಕಾರ್ಯತಃ ನಾವು, ಬೆಳ್ಳಿ ಅಥವಾ ಬೇರಾವುದೇ ಭೌತಿಕ ಐಶ್ವರ್ಯಕ್ಕಿಂತ ಎಷ್ಟೋ ಹೆಚ್ಚು ಅಮೂಲ್ಯವಾದ ವಿಷಯಗಳಿಗಾಗಿ ಅಗೆಯುತ್ತಿರುವೆವು.​—ಜ್ಞಾನೋಕ್ತಿ 3:​13-15.

ತರ್ಕಬದ್ಧವಾದ ಯೋಚನೆಗಾಗಿ ನಿಶ್ಚಯವಾಗಿಯೂ ವಿವೇಕ ಮತ್ತು ಜ್ಞಾನಗಳು ಅತ್ಯಾವಶ್ಯಕವಾದ ಅಂಶಗಳಾಗಿವೆ. ದೇವರ ವಾಕ್ಯವು ಹೀಗನ್ನುತ್ತದೆ: “ಜ್ಞಾನವು [“ವಿವೇಕವು,” NW] ನಿನ್ನ ಹೃದಯದೊಳಗೆ ಪ್ರವೇಶಿಸುವದು, ತಿಳುವಳಿಕೆಯು ನಿನ್ನ ಆತ್ಮಕ್ಕೆ ಅಂದವಾಗಿರುವದು. ಬುದ್ಧಿಯು ನಿನಗೆ ಕಾವಲಾಗಿರುವದು, ವಿವೇಕವು ನಿನ್ನನ್ನು ಕಾಪಾಡುವದು; ಇದರಿಂದ ನೀನು ದುರ್ಮಾರ್ಗದಿಂದಲೂ ಕೆಟ್ಟ ಮಾತನಾಡುವವರಿಂದಲೂ ತಪ್ಪಿಸಿಕೊಳ್ಳುವಿ. ಅವರಾದರೋ ಕತ್ತಲ ಹಾದಿಗಳನ್ನು ಹಿಡಿಯಬೇಕೆಂದು ಧರ್ಮಮಾರ್ಗಗಳನ್ನು ತೊರೆದುಬಿಡುವರು.”​—ಜ್ಞಾನೋಕ್ತಿ 2:10-13.

ವಿಶೇಷವಾಗಿ ಒತ್ತಡ ಹಾಗೂ ಅಪಾಯದ ಸಮಯಗಳಲ್ಲಿ ದೇವರ ಆಲೋಚನೆಗಳು ನಮ್ಮ ಯೋಚನೆಗಳನ್ನು ಮಾರ್ಗದರ್ಶಿಸುವಂತೆ ಬಿಡುವುದು ಪ್ರಾಮುಖ್ಯವಾಗಿದೆ. ಸಿಟ್ಟು ಹಾಗೂ ಭಯದಂಥ ಬಲವಾದ ಭಾವನೆಗಳು ನಾವು ತರ್ಕಬದ್ಧವಾಗಿ ಆಲೋಚಿಸುವುದನ್ನು ಕಷ್ಟಕರವಾಗಿ ಮಾಡಬಲ್ಲವು. “ದಬ್ಬಾಳಿಕೆಯು ಬುದ್ಧಿವಂತನನ್ನೂ ಹುಚ್ಚನ ಹಾಗೆ ವರ್ತಿಸುವಂತೆ ಮಾಡುವುದು” ಎಂದು ಸೊಲೊಮೋನನು ಹೇಳಿದನು. (ಪ್ರಸಂಗಿ 7:7, NW) ಆಗ “ಯೆಹೋವನ ಮೇಲೆ ಕುದಿಯುವ” ಸಾಧ್ಯತೆಯೂ ಇದೆ. (ಜ್ಞಾನೋಕ್ತಿ 19:3) ಹೇಗೆ? ದೇವರೇ ನಮ್ಮ ಸಮಸ್ಯೆಗಳಿಗೆ ಕಾರಣನೆಂದು ದೂಷಿಸುತ್ತಾ, ಆತನ ನಿಯಮಗಳಿಗೂ ಮೂಲತತ್ತ್ವಗಳಿಗೂ ಹೊಂದಿಕೆಯಲ್ಲಿಲ್ಲದ ಕೆಲಸಗಳನ್ನು ಮಾಡಲು ಅವುಗಳನ್ನು ಒಂದು ನೆಪವಾಗಿ ಉಪಯೋಗಿಸುವ ಮೂಲಕವೇ. ಸರ್ವೋತ್ತಮವಾದದ್ದು ಏನೆಂಬುದು ಯಾವಾಗಲೂ ನಮಗೇ ತಿಳಿದಿದೆ ಎಂದು ನೆನಸುವ ಬದಲು, ಶಾಸ್ತ್ರಗಳನ್ನು ಉಪಯೋಗಿಸುತ್ತಾ ನಮಗೆ ಸಹಾಯಮಾಡಲು ಪ್ರಯತ್ನಿಸುವ ವಿವೇಕಿ ಸಲಹೆಗಾರರ ಮಾತುಗಳಿಗೆ ನಾವು ನಮ್ರತೆಯಿಂದ ಕಿವಿಗೊಡೋಣ. ಮತ್ತು ನಾವು ತುಂಬ ಬಲವಾಗಿ ಹಿಡಿದುಕೊಂಡಿದ್ದ ದೃಷ್ಟಿಕೋನಗಳು ತಪ್ಪಾಗಿವೆಯೆಂಬುದು ವ್ಯಕ್ತವಾಗುವಾಗ, ಅಗತ್ಯಬೀಳುವಲ್ಲಿ ಅವುಗಳನ್ನು ತೊರೆದುಬಿಡಲೂ ಸಿದ್ಧರಾಗಿರೋಣ.​—ಜ್ಞಾನೋಕ್ತಿ 1:​1-5; 15:22.

“ದೇವರನ್ನು ಕೇಳಿಕೊಳ್ಳುತ್ತಾ ಇರಿ”

ನಾವು ತುಂಬ ಗೊಂದಲಮಯವಾದ ಹಾಗೂ ಅಪಾಯಕಾರಿ ಸಮಯಗಳಲ್ಲಿ ಜೀವಿಸುತ್ತಿದ್ದೇವೆ. ನಾವು ಒಳ್ಳೆಯ ವಿಮರ್ಶನಾ ಶಕ್ತಿಯನ್ನು ಬಳಸಿ, ವಿವೇಕದಿಂದ ಕಾರ್ಯವೆಸಗಬೇಕಾದರೆ ಯೆಹೋವನ ನಿರ್ದೇಶನಕ್ಕಾಗಿ ಕ್ರಮವಾಗಿ ಪ್ರಾರ್ಥನೆ ಮಾಡುವುದು ಅತ್ಯಾವಶ್ಯಕ. ಪೌಲನು ಬರೆದದ್ದು: “ಯಾವ ಸಂಬಂಧವಾಗಿಯೂ ಚಿಂತೆಮಾಡದೆ ಸರ್ವವಿಷಯದಲ್ಲಿ ದೇವರ ಮುಂದೆ ಕೃತಜ್ಞತಾಸ್ತುತಿಯನ್ನೂ ಪ್ರಾರ್ಥನೆವಿಜ್ಞಾಪನೆಗಳನ್ನೂ ಮಾಡುತ್ತಾ ನಿಮಗೆ ಬೇಕಾದದ್ದನ್ನು ತಿಳಿಯಪಡಿಸಿರಿ. ಆಗ ಎಲ್ಲಾ ಗ್ರಹಿಕೆಯನ್ನು ಮೀರುವ ದೇವಶಾಂತಿಯು ನಿಮ್ಮ ಹೃದಯಗಳನ್ನೂ ಯೋಚನೆಗಳನ್ನೂ ಕ್ರಿಸ್ತ ಯೇಸುವಿನಲ್ಲಿ ಕಾಯುವದು.” (ಫಿಲಿಪ್ಪಿ 4:6, 7) ತಬ್ಬಿಬ್ಬುಗೊಳಿಸುವಂಥ ಸಮಸ್ಯೆಗಳು ಇಲ್ಲವೆ ಪರೀಕ್ಷೆಗಳನ್ನು ನಿಭಾಯಿಸಲು ಬೇಕಾದ ವಿವೇಕದ ಕೊರತೆ ನಮಗಿರುವಲ್ಲಿ, ಅದಕ್ಕಾಗಿ ನಾವು ಸತತವಾಗಿ “ದೇವರನ್ನು ಕೇಳಿಕೊಳ್ಳ”ಬೇಕು. ಏಕೆಂದರೆ “ದೇವರು ಹಂಗಿಸದೆ ಎಲ್ಲರಿಗೂ ಉದಾರ ಮನಸ್ಸಿನಿಂದ ಕೊಡುವವನಾಗಿದ್ದಾನೆ.”​—ಯಾಕೋಬ 1:5-8.

ಜೊತೆ ಕ್ರೈಸ್ತರು ವಿವೇಕವನ್ನು ಉಪಯೋಗಿಸುವ ಅಗತ್ಯವಿದೆಯೆಂಬ ಅರಿವುಳ್ಳವನಾಗಿ ಅಪೊಸ್ತಲ ಪೇತ್ರನು ಅವರ ‘ಮನಸ್ಸನ್ನು ಪ್ರೇರಿಸಲು’ ಪ್ರಯತ್ನಿಸಿದನು. ಅವರು, “ಪರಿಶುದ್ಧ ಪ್ರವಾದಿಗಳು ಪೂರ್ವದಲ್ಲಿ ಹೇಳಿದ ಮಾತುಗಳನ್ನೂ ಕರ್ತನಾದ ರಕ್ಷಕನು” ಅಂದರೆ ಯೇಸು ಕ್ರಿಸ್ತನು ‘ಕೊಟ್ಟ ಅಪ್ಪಣೆಯನ್ನೂ ಜ್ಞಾಪಕಮಾಡಿಕೊಳ್ಳುವಂತೆ’ ಅವನು ಬಯಸಿದನು. (2 ಪೇತ್ರ 3:​1, 2) ನಾವಿದನ್ನು ಮಾಡುವಲ್ಲಿ ಮತ್ತು ನಮ್ಮ ಯೋಚನೆಗಳನ್ನು ಯೆಹೋವನ ವಾಕ್ಯಕ್ಕೆ ಹೊಂದಿಕೆಯಲ್ಲಿ ಇಡುವಲ್ಲಿ, ನಾವು ತರ್ಕಬದ್ಧವಾಗಿ ಆಲೋಚಿಸಲು ಮತ್ತು ವಿವೇಕದಿಂದ ಕಾರ್ಯವೆಸಗಲು ಶಕ್ತರಾಗಿರುವೆವು.

[ಪುಟ 21ರಲ್ಲಿರುವ ಚಿತ್ರಗಳು]

ಆರಂಭದ ಕ್ರೈಸ್ತರು ತತ್ತ್ವಜ್ಞಾನಕ್ಕೆ ಸಂಬಂಧಿಸಿದ ತರ್ಕಸರಣಿಯಲ್ಲ, ಬದಲಾಗಿ ದೈವಿಕ ವಿವೇಕವು ತಮ್ಮ ಯೋಚನೆಗಳನ್ನು ರೂಪಿಸುವಂತೆ ಅನುಮತಿಸಿದರು

[ಕೃಪೆ]

ಎಡಬದಿಯಿಂದ ಬಲಬದಿಯಲ್ಲಿರುವ ತತ್ತ್ವಜ್ಞಾನಿಗಳು: ಎಪಿಕ್ಯೂರಸ್‌: Photograph taken by courtesy of the British Museum; ಸಿಸೆರೋ: Reproduced from The Lives of the Twelve Caesars; ಪ್ಲೇಟೋ: Roma, Musei Capitolini

[ಪುಟ 23ರಲ್ಲಿರುವ ಚಿತ್ರಗಳು]

ಪ್ರಾರ್ಥನೆ ಮತ್ತು ದೇವರ ವಾಕ್ಯದ ಅಧ್ಯಯನವು ಅತ್ಯಾವಶ್ಯಕ