ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಮಗೆ ನಿಜವಾಗಿಯೂ ಇತರರ ಆವಶ್ಯಕತೆ ಇದೆಯೇ?

ನಮಗೆ ನಿಜವಾಗಿಯೂ ಇತರರ ಆವಶ್ಯಕತೆ ಇದೆಯೇ?

ನಮಗೆ ನಿಜವಾಗಿಯೂ ಇತರರ ಆವಶ್ಯಕತೆ ಇದೆಯೇ?

“ನಾವು ನಮ್ಮ ಬಾಳನ್ನು ಮತ್ತು ಅದರ ಆಗುಹೋಗುಗಳನ್ನು ಅವಲೋಕಿಸುವಾಗ, ಬಹುಮಟ್ಟಿಗೆ ನಮ್ಮೆಲ್ಲಾ ಕಾರ್ಯಗಳೂ ಅಪೇಕ್ಷೆಗಳೂ ಬೇರೆ ಮಾನವರ ಅಸ್ತಿತ್ವದೊಂದಿಗೆ ಪರಸ್ಪರ ಜೋಡಿಸಲ್ಪಟ್ಟಿವೆ ಎಂಬದನ್ನು ಆ ಕೂಡಲೆ ಗಮನಿಸುತ್ತೇವೆ” ಎಂದರು ಸುಪ್ರಸಿದ್ಧ ವಿಜ್ಞಾನಿ ಆಲ್ಬರ್ಟ್‌ ಐನ್‌ಸ್ಟೈನ್‌. ಅವರು ಕೂಡಿಸಿ ಹೇಳಿದ್ದು: “ನಾವು ಬೇರೆಯವರು ಬೆಳೆಸಿದ ಆಹಾರವನ್ನು ತಿಂದು, ಬೇರೆಯವರು ತಯಾರಿಸಿದ ಬಟ್ಟೆಯನ್ನು ತೊಟ್ಟು, ಬೇರೆಯವರು ಕಟ್ಟಿರುವ ಮನೆಗಳಲ್ಲಿ ವಾಸಿಸುತ್ತೇವೆ. . . . ಒಬ್ಬ ವ್ಯಕ್ತಿಯು ಏನಾಗಿದ್ದಾನೋ ಅದು ಮತ್ತು ಅವನಿಗಿರುವ ವಿಶೇಷತೆಯು ಅವನ ಪ್ರತ್ಯೇಕವಾದ ಅಸ್ತಿತ್ವದ ಕಾರಣದಿಂದಲ್ಲ, ಬದಲಾಗಿ ಜನನದಿಂದ ಮರಣದ ವರೆಗೂ ಅವನ ಪ್ರಾಪಂಚಿಕ ಮತ್ತು ಆಧ್ಯಾತ್ಮಿಕ ಅಸ್ತಿತ್ವವನ್ನು ಯಾವುದು ನಿರ್ದೇಶಿಸುತ್ತದೊ ಆ ಮಹಾ ಮಾನವ ಸಮಾಜದ ಸದಸ್ಯನಾಗಿರುವ ಕಾರಣದಿಂದಾಗಿಯೇ ಇದೆ.”

ಪ್ರಾಣಿ ಜಗತ್ತಿನಲ್ಲಿ ಸಹಜ ಪ್ರವೃತ್ತಿಯ ಒಡನಾಟವನ್ನು ನೋಡುವುದು ಸಾಮಾನ್ಯ. ಆನೆಗಳು ಹಿಂಡುಹಿಂಡಾಗಿ ಸುತ್ತಾಡುತ್ತಾ ತಮ್ಮ ಮರಿಗಳನ್ನು ಜಾಗರೂಕತೆಯಿಂದ ಕಾಯುತ್ತವೆ. ಸಿಂಹಿಣಿಗಳು ಕೂಡಿ ಬೇಟೆಯಾಡಿ ತಮ್ಮ ಆಹಾರವನ್ನು ಸಿಂಹಗಳೊಂದಿಗೆ ಹಂಚಿಕೊಳ್ಳುತ್ತವೆ. ಡಾಲ್ಫಿನ್‌ಗಳು ಜೊತೆಜೊತೆಯಾಗಿ ಆಟವಾಡುತ್ತವೆ, ಮತ್ತು ಅಪಾಯಕ್ಕೊಳಗಾಗಿರುವ ಬೇರೆ ಪ್ರಾಣಿಗಳನ್ನು ಹಾಗೂ ಈಜುಗಾರರನ್ನು ಸಹ ಸಂರಕ್ಷಿಸಿವೆ.

ಆದರೆ, ಸಮಾಜ ವಿಜ್ಞಾನಿಗಳು ಮಾನವರ ಸಂಬಂಧದಲ್ಲಿ ಗಮನಿಸಿರುವ ಒಂದು ಪ್ರವೃತ್ತಿಯು, ಬೆಳೆಯುತ್ತಿರುವ ಚಿಂತೆಗೆ ಕಾರಣವಾಗಿಬಿಟ್ಟಿದೆ. ಮೆಕ್ಸಿಕೋದಲ್ಲಿ ಪ್ರಕಾಶಿಸಲ್ಪಟ್ಟ ಒಂದು ವಾರ್ತಾಪತ್ರಕ್ಕನುಸಾರ, “ಅನೇಕ ದಶಕಗಳ ವರೆಗಿನ ವ್ಯಕ್ತಿಪರವಾದ ಪ್ರತ್ಯೇಕಿಸಿಕೊಳ್ಳುವಿಕೆ ಮತ್ತು ಸಾಮುದಾಯಿಕ ಜೀವನದ ಸವೆತವು ಅಮೆರಿಕದ ಸಮಾಜಕ್ಕೆ ಭಾರೀ ಹಾನಿಯನ್ನುಂಟುಮಾಡಿದೆ” ಎಂದು ಕೆಲವು ವಿಜ್ಞಾನಿಗಳು ಅಭಿಪ್ರಯಿಸಿದ್ದಾರೆ. ಆ ವಾರ್ತಾಪತ್ರವು ಹೇಳಿದ್ದು: “ಈ ದೇಶದ ಕಲ್ಯಾಣವು, ಸಾಮುದಾಯಿಕ ಜೀವನಕ್ಕೆ ಮರಳುವುದನ್ನು ಒಳಗೂಡಿಸುವ ಒಂದು ವ್ಯಾಪಕ ಸಾಮಾಜಿಕ ಬದಲಾವಣೆಯ ಮೇಲೆ ಹೊಂದಿಕೊಂಡಿದೆ.”

ಈ ಸಮಸ್ಯೆಯು ವಿಶೇಷವಾಗಿ ವಿಕಾಸಹೊಂದಿರುವಂಥ ದೇಶಗಳ ಜನರಲ್ಲಿ ಹಬ್ಬಿಕೊಂಡಿದೆ. ಅನೇಕರಲ್ಲಿ ಸ್ವತಃ ತಮ್ಮನ್ನೇ ಪ್ರತ್ಯೇಕಿಸಿಕೊಳ್ಳುವ ಪ್ರವೃತ್ತಿಯು ತೀವ್ರಗತಿಯಲ್ಲಿ ಹೆಚ್ಚುತ್ತಿದೆ. ಜನರಲ್ಲಿ ‘ಸ್ವತಂತ್ರವಾಗಿ ಜೀವಿಸುವ’ ಬಯಕೆಯಿದೆ ಮತ್ತು ಇತರರು ತಮ್ಮ ‘ಏಕಾಂತತೆಗೆ ಭಂಗವುಂಟಾಗುವುದನ್ನು’ ಬಲವಾಗಿ ವಿರೋಧಿಸುತ್ತಾರೆ. ಈ ಮನೋಭಾವವೇ, ಮಾನವ ಸಮಾಜವು ಅತ್ಯಧಿಕ ಪ್ರಮಾಣದಲ್ಲಿ ಭಾವಾತ್ಮಕ ಸಮಸ್ಯೆಗಳಿಗೆ, ಖಿನ್ನತೆ ಮತ್ತು ಆತ್ಮಹತ್ಯೆಗೆ ತುತ್ತಾಗುವಂತೆ ನಡೆಸಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗಿದೆ.

ಈ ವಿಷಯದಲ್ಲಿ ಡಾ. ಡ್ಯಾನಿಯಲ್‌ ಗೋಲ್ಮನ್‌ ಹೇಳಿದ್ದು: “ಸಾಮಾಜಿಕ ಪ್ರತ್ಯೇಕೀಕರಣ ಅಂದರೆ ಒಬ್ಬನ ಅಂತರಂಗದ ಭಾವನೆಗಳನ್ನು ಹೇಳಿಕೊಳ್ಳಲು ಅಥವಾ ನಿಕಟ ಸಂಪರ್ಕವನ್ನು ಇಟ್ಟುಕೊಳ್ಳಲು ಯಾರೂ ಇಲ್ಲವೆಂಬ ಭಾವನೆಯು, ಅಸ್ವಸ್ಥತೆ ಅಥವಾ ಮರಣದ ಸಾಧ್ಯತೆಯನ್ನು ಇಮ್ಮಡಿಗೊಳಿಸುತ್ತದೆ.” ಸಾಮಾಜಿಕ ಪ್ರತ್ಯೇಕೀಕರಣಕ್ಕೆ ‘ಸಿಗರೇಟ್‌ ಸೇವನೆ, ಅಧಿಕ ರಕ್ತದೊತ್ತಡ, ಹೆಚ್ಚಿನ ಕೊಲೆಸ್ಟರಾಲ್‌, ಬೊಜ್ಜು ಮತ್ತು ಶಾರೀರಿಕ ವ್ಯಾಯಾಮದ ಕೊರತೆಗಿರುವಷ್ಟೇ ಗಮನಾರ್ಹವಾದ ಮರಣ ಪ್ರಮಾಣವಿದೆ’ ಎಂದು ವಿಜ್ಞಾನ (ಇಂಗ್ಲಿಷ್‌) ಪತ್ರಿಕೆಯ ಒಂದು ವರದಿಯು ನಿರ್ಧರಿಸಿತು.

ಹೀಗೆ ಹಲವಾರು ಕಾರಣಗಳಿಗಾಗಿ, ನಮಗೆ ನಿಜವಾಗಿಯೂ ಇತರರ ಆವಶ್ಯಕತೆಯಿದೆ. ನಾವು ಇತರರಿಂದ ಸ್ವತಂತ್ರರಾಗಿರಲು ಪ್ರಯತ್ನಿಸುವುದು ಅಸಾಧ್ಯ. ಹಾಗಾದರೆ ಈ ಪ್ರತ್ಯೇಕೀಕರಣದ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು? ಅನೇಕರ ಬಾಳಿಗೆ ಯಾವುದು ನಿಜ ಅರ್ಥವನ್ನು ಒದಗಿಸಿದೆ? ಮುಂದಿನ ಲೇಖನವು ಇಂತಹ ಪ್ರಶ್ನೆಗಳನ್ನು ಸಂಬೋಧಿಸಲಿದೆ.

[ಪುಟ 3ರಲ್ಲಿರುವ ಸಂಕ್ಷಿಪ್ತ ವಿವರಣೆ]

“ಬಹುಮಟ್ಟಿಗೆ ನಮ್ಮೆಲ್ಲಾ ಕಾರ್ಯಗಳೂ ಅಪೇಕ್ಷೆಗಳೂ ಬೇರೆ ಮಾನವರ ಅಸ್ತಿತ್ವದೊಂದಿಗೆ ಪರಸ್ಪರ ಜೋಡಿಸಲ್ಪಟ್ಟಿವೆ.”​—ಆಲ್ಬರ್ಟ್‌ ಐನ್‌ಸ್ಟೈನ್‌