ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ನಾವು ಇತರರಿಂದ ಸ್ವತಂತ್ರರಾಗಿ ಇರಲಾರೆವೇಕೆ?

ನಾವು ಇತರರಿಂದ ಸ್ವತಂತ್ರರಾಗಿ ಇರಲಾರೆವೇಕೆ?

ನಾವು ಇತರರಿಂದ ಸ್ವತಂತ್ರರಾಗಿ ಇರಲಾರೆವೇಕೆ?

“ಒಬ್ಬನಿಗಿಂತ ಇಬ್ಬರು ಲೇಸು. . . . ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು.”​—ರಾಜ ಸೊಲೊಮೋನ

ಪುರಾತನ ಇಸ್ರಾಯೇಲಿನ ರಾಜ ಸೊಲೊಮೋನನು ಹೇಳಿದ್ದು: “ಒಬ್ಬನಿಗಿಂತ ಇಬ್ಬರು ಲೇಸು; ಅವರ ಪ್ರಯಾಸಕ್ಕೆ ಒಳ್ಳೆಯ ಲಾಭ. ಒಬ್ಬನು ಬಿದ್ದರೆ ಇನ್ನೊಬ್ಬನು ಎತ್ತುವನು; ಬಿದ್ದಾಗ ಎತ್ತುವವನು ಇನ್ನೊಬ್ಬನಿಲ್ಲದಿದ್ದರೆ ಅವನ ಗತಿ ದುರ್ಗತಿಯೇ.” (ಪ್ರಸಂಗಿ 4:9, 10) ಈ ರೀತಿಯಲ್ಲಿ, ಮಾನವ ವರ್ತನೆಯ ಈ ವಿವೇಕಿ ಪ್ರೇಕ್ಷಕನು, ನಮಗಿರುವ ಒಡನಾಟದ ಆವಶ್ಯಕತೆಯನ್ನೂ ನಾವು ನಮ್ಮನ್ನೇ ಪ್ರತ್ಯೇಕಿಸಿಕೊಳ್ಳದಿರುವ ಮಹತ್ವವನ್ನೂ ಒತ್ತಿಹೇಳುತ್ತಾನೆ. ಆದರೂ, ಇದು ಬರೀ ಮಾನವ ಅಭಿಪ್ರಾಯವಾಗಿರಲಿಲ್ಲ. ಸೊಲೊಮೋನನ ಆ ಹೇಳಿಕೆಯು ದೈವಿಕ ವಿವೇಕ ಮತ್ತು ಪ್ರೇರಣೆಯ ಫಲಿತಾಂಶವಾಗಿತ್ತು.

ನಮ್ಮನ್ನು ಎಲ್ಲರಿಂದ ಪ್ರತ್ಯೇಕಿಸಿಕೊಳ್ಳುವುದು ವಿವೇಕದ ಕೃತ್ಯವಲ್ಲ. ಜನರಿಗೆ ಪರಸ್ಪರರ ಆವಶ್ಯಕತೆಯಿದೆ. ಬೇರೆ ಮಾನವರಿಂದ ನಮಗೆ ಸಿಗಬಹುದಾದ ಬಲ ಮತ್ತು ಸಹಾಯವು ನಮಗೆಲ್ಲರಿಗೂ ಆವಶ್ಯಕ. “ಜನರಲ್ಲಿ ಸೇರದವನು ಸ್ವೇಚ್ಛಾನುಸಾರ ನಡೆಯುತ್ತಾ ಸಮಸ್ತ ಸುಜ್ಞಾನಕ್ಕೂ ರೇಗುವನು” ಎನ್ನುತ್ತದೆ ಬೈಬಲಿನ ಒಂದು ಜ್ಞಾನೋಕ್ತಿ. (ಜ್ಞಾನೋಕ್ತಿ 18:1) ಆದುದರಿಂದ, ವ್ಯಕ್ತಿಗಳು ಒಂದು ಗುಂಪಿನ ಭಾಗವಾಗಬೇಕೆಂದೂ ಇತರರಲ್ಲಿ ಆಸಕ್ತಿಯನ್ನು ವಹಿಸಬೇಕೆಂದೂ ಸಮಾಜ ವಿಜ್ಞಾನಿಗಳು ಉತ್ತೇಜಿಸುವುದು ಆಶ್ಚರ್ಯವೇನಲ್ಲ.

ಸಾಮುದಾಯಿಕ ಜೀವನವನ್ನು ಪುನರುಜ್ಜೀವಿಸಲು ಅಗತ್ಯವಿರುವ ಸಂಗತಿಗಳನ್ನು ಶಿಫಾರಸ್ಸುಮಾಡುವಾಗ, ಪ್ರೊಫೆಸರ್‌ ರಾಬರ್ಟ್‌ ಪಟ್ನಮ್‌ರವರು “ಆಧ್ಯಾತ್ಮಿಕ ನಂಬಿಕೆಯ ಪ್ರಭಾವವನ್ನು ಬಲಗೊಳಿಸುವ” ವಿಷಯವನ್ನು ಹೇಳುತ್ತಾರೆ. ಈ ಸಂಬಂಧದಲ್ಲಿ ಯೆಹೋವನ ಸಾಕ್ಷಿಗಳು ಗಮನಾರ್ಹರಾಗಿದ್ದಾರೆ, ಏಕೆಂದರೆ ಅವರು ಲೋಕಾದ್ಯಂತವಾಗಿ ಕುಟುಂಬಸದೃಶ ಸಭೆಗಳಲ್ಲಿ ಸಂರಕ್ಷಣೆಯನ್ನು ಅನುಭವಿಸುತ್ತಾರೆ. ಅಪೊಸ್ತಲ ಪೇತ್ರನ ಮಾತುಗಳಿಗೆ ಹೊಂದಿಕೆಯಲ್ಲಿ, ಅವರಿಗೆ ಪೂಜ್ಯಭಾವನೆಯ ‘ದೇವ ಭಯವಿರುವ’ “ಸಹೋದರರ ಸಂಪೂರ್ಣ ಸಂಘಕ್ಕಾಗಿ ಪ್ರೀತಿ” ಇದೆ. (1 ಪೇತ್ರ 2:​17, NW) ಸಾಕ್ಷಿಗಳು ಪ್ರತ್ಯೇಕೀಕರಣ ಮತ್ತು ಅದರ ಹಾನಿಕರ ಪರಿಣಾಮಗಳಿಂದಲೂ ತಪ್ಪಿಸಿಕೊಳ್ಳುತ್ತಾರೆ, ಏಕೆಂದರೆ ಸತ್ಯಾರಾಧನೆಯಲ್ಲಿ ಸೇರಿರುವ ಅನೇಕ ಸಕಾರಾತ್ಮಕ ಚಟುವಟಿಕೆಗಳು, ದೇವರ ವಾಕ್ಯವಾದ ಬೈಬಲಿನಲ್ಲಿ ಕಂಡುಬರುವ ಸತ್ಯವನ್ನು ತಮ್ಮ ನೆರೆಯವರು ಕಲಿತುಕೊಳ್ಳುವಂತೆ ಸಹಾಯಮಾಡುವ ಕೆಲಸದಲ್ಲಿ ಮಗ್ನರಾಗಿರುವಂತೆ ಮಾಡುತ್ತವೆ.​—2 ತಿಮೊಥೆಯ 2:15.

ಪ್ರೀತಿ ಮತ್ತು ಒಡನಾಟವು ಅವರ ಜೀವನಗಳನ್ನು ಮಾರ್ಪಡಿಸಿತು

ಯೆಹೋವನ ಸಾಕ್ಷಿಗಳು ಒಂದು ಐಕ್ಯ ಸಮಾಜವಾಗಿದ್ದು, ಅದರಲ್ಲಿ ಪ್ರತಿಯೊಬ್ಬ ಸದಸ್ಯನೂ ಒಂದು ಪ್ರಮುಖ ಪಾತ್ರವನ್ನು ವಹಿಸುತ್ತಾನೆ. ಉದಾಹರಣೆಗೆ ಲ್ಯಾಟಿನ್‌ ಅಮೆರಿಕದಲ್ಲಿ, ಒಂದೇ ಕುಟುಂಬಕ್ಕೆ ಸೇರಿದವರಾಗಿರುವ ಮೀಗೆಲ್‌, ಫ್ರೋಈಲಾನ್‌ ಮತ್ತು ಆಲ್ಮ ರೂಟ್‌ ಎಂಬ ಮೂರು ಮಂದಿ ಸದಸ್ಯರನ್ನು ಪರಿಗಣಿಸಿರಿ. ಅವರಿಗೆ ಹುಟ್ಟಿನಿಂದಲೇ ಇದ್ದ ಎಲುಬು ಕಾಯಿಲೆಯು ಅವರನ್ನು ಕುಬ್ಜರನ್ನಾಗಿ ಮಾಡಿತ್ತು. ಆ ಮೂವರೂ ಗಾಲಿಕುರ್ಚಿಗಳಿಗೆ ನಿರ್ಬಂಧಿತರಾಗಿದ್ದಾರೆ. ಹಾಗಾದರೆ ಸಾಕ್ಷಿಗಳೊಂದಿಗಿನ ಅವರ ಸಹವಾಸವು ಅವರನ್ನು ಹೇಗೆ ಪ್ರಭಾವಿಸಿದೆ?

ಮೀಗೆಲ್‌ ಹೇಳುವುದು: “ನಾನು ಸಂಕಟದ ಅವಧಿಗಳನ್ನು ಅನುಭವಿಸುತ್ತಿದ್ದೆ. ಆದರೆ ನಾನು ಯೆಹೋವನ ಜನರೊಂದಿಗೆ ಕೂಡಿಬರಲು ಆರಂಭಿಸಿದಾಗ, ನನ್ನ ಬದುಕು ಬದಲಾಯಿತು. ಒಬ್ಬ ವ್ಯಕ್ತಿಯು ತನ್ನನ್ನೇ ಬೇರೆಯವರಿಂದ ಪ್ರತ್ಯೇಕಿಸಿಕೊಳ್ಳುವುದು ತೀರ ಅಪಾಯಕರ. ಜೊತೆ ವಿಶ್ವಾಸಿಗಳೊಂದಿಗೆ ಕ್ರೈಸ್ತ ಕೂಟಗಳಲ್ಲಿ ಕೂಡಿಬರುವುದು, ಪ್ರತಿ ವಾರವೂ ಅವರೊಂದಿಗಿರುವುದು, ನಾನು ಸಂತೃಪ್ತಿ ಮತ್ತು ಸಮಾಧಾನವನ್ನು ಕಂಡುಕೊಳ್ಳುವಂತೆ ನನಗೆ ಬಹಳ ಸಹಾಯಮಾಡಿತು.”

ಆಲ್ಮ ರೂಟ್‌ ಕೂಡಿಸಿ ಹೇಳುವುದು: “ನಾನು ತುಂಬ ಖಿನ್ನತೆಗೊಳಗಾಗುತ್ತಿದ್ದ ಕ್ಷಣಗಳಿರುತ್ತಿದ್ದವು; ನಾನು ತೀರ ದುಃಖಿತಳಾಗುತ್ತಿದ್ದೆ. ಆದರೆ ಯೆಹೋವನ ಕುರಿತು ಕಲಿತಾಗ, ನಾನು ಆತನೊಡನೆ ನಿಕಟ ಸಂಬಂಧವನ್ನು ಹೊಂದಸಾಧ್ಯವಿದೆಯೆಂದು ನನಗನಿಸಿತು. ಇದು ನನ್ನ ಜೀವನದಲ್ಲಿ ಅತಿ ಬೆಲೆಬಾಳುವ ವಿಷಯವಾಗಿ ಪರಿಣಮಿಸಿತು. ನನ್ನ ಕುಟುಂಬವು ನಮಗೆ ತುಂಬ ಬೆಂಬಲವನ್ನು ಕೊಟ್ಟಿದೆ ಮತ್ತು ಅದು ನಮ್ಮನ್ನು ಇನ್ನೂ ಹೆಚ್ಚು ಐಕ್ಯಗೊಳಿಸಿದೆ.”

ಮೀಗೆಲ್‌ನ ತಂದೆ ಪ್ರೀತಿಯಿಂದ ಅವನಿಗೆ ಓದುಬರಹ ಕಲಿಸಿದನು. ನಂತರ ಮೀಗೆಲ್‌, ಫ್ರೋಈಲಾನ್‌ ಮತ್ತು ಆಲ್ಮ ರೂಟ್‌ಗೂ ಓದುಬರಹ ಕಲಿಸಿದನು. ಇದು ಅವರ ಆತ್ಮಿಕತೆಗೆ ಅತ್ಯಗತ್ಯವಾಗಿತ್ತು. “ಓದಲು ಕಲಿತದ್ದು ನಮಗೆ ತುಂಬ ಪ್ರಯೋಜನಗಳನ್ನು ತಂದಿತು. ಏಕೆಂದರೆ ಬೈಬಲ್‌ ಮತ್ತು ಬೈಬಲಾಧಾರಿತ ಸಾಹಿತ್ಯಗಳ ಓದುವಿಕೆಯಿಂದ ನಾವು ಆತ್ಮಿಕವಾಗಿ ನಮ್ಮನ್ನೇ ಪೋಷಿಸಿಕೊಳ್ಳಲು ಸಾಧ್ಯವಾಯಿತು,” ಎನ್ನುತ್ತಾಳೆ ಆಲ್ಮ ರೂಟ್‌.

ಈಗ ಮೀಗೆಲ್‌ ಒಬ್ಬ ಕ್ರೈಸ್ತ ಹಿರಿಯನಾಗಿ ಸೇವೆಸಲ್ಲಿಸುತ್ತಿದ್ದಾನೆ. ಫ್ರೋಈಲಾನ್‌ ಬೈಬಲನ್ನು ಒಂಬತ್ತು ಬಾರಿ ಓದಿ ಮುಗಿಸಿದ್ದಾನೆ. ಆಲ್ಮ ರೂಟ್‌ 1996ರಿಂದ ಪಯನೀಯರ್‌ ಶುಶ್ರೂಷಕಿಯಾಗಿ ಅಥವಾ ಪೂರ್ಣ ಸಮಯದ ರಾಜ್ಯ ಘೋಷಕಳಾಗಿ ಯೆಹೋವನಿಗೆ ತಾನು ಸಲ್ಲಿಸುವ ಸೇವೆಯನ್ನು ಹೆಚ್ಚಿಸಿದ್ದಾಳೆ. ಅವಳು ಹೇಳುವುದು: “ಯೆಹೋವನ ಆಶೀರ್ವಾದದಿಂದ ನಾನು ಈ ಗುರಿಯನ್ನು ತಲಪಿದ್ದೇನೆ. ನನಗೆ ಸಾರಲು ಮಾತ್ರವಲ್ಲ, ನಾನು ಆರಂಭಿಸಲು ಶಕ್ತಳಾಗಿರುವ 11 ಬೈಬಲ್‌ ಅಧ್ಯಯನಗಳನ್ನು ನಡೆಸುವ ಮೂಲಕ ಕಲಿಸಲು ಸಹ ಸಹಾಯಮಾಡುವ ನನ್ನ ಪ್ರಿಯ ಸಾಕ್ಷಿ ಸಹೋದರಿಯರ ಬೆಂಬಲವೂ ನನಗಿದೆ.”

ಎಮೀಲೀಯಾ ಎಂಬವಳು ಇನ್ನೊಂದು ಉತ್ತಮ ಮಾದರಿಯನ್ನು ಇಟ್ಟಿದ್ದಾಳೆ. ಒಂದು ಅಪಘಾತದಿಂದಾಗಿ ಕಾಲು ಮತ್ತು ಬೆನ್ನೆಲುಬಿನಲ್ಲಿ ಗಾಯಗೊಂಡ ಆಕೆ ಗಾಲಿಕುರ್ಚಿಯನ್ನು ಉಪಯೋಗಿಸಬೇಕಾಯಿತು. ಮೆಕ್ಸಿಕೊ ಸಿಟಿಯಲ್ಲಿದ್ದ ಯೆಹೋವನ ಸಾಕ್ಷಿಗಳು ಆಕೆಯೊಂದಿಗೆ ಅಧ್ಯಯನ ಮಾಡಿದ ಮೇಲೆ 1996ರಲ್ಲಿ ಆಕೆ ದೀಕ್ಷಾಸ್ನಾನ ಹೊಂದಿದಳು. ಎಮೀಲೀಯಾ ಹೇಳುವುದು: “ಸತ್ಯವನ್ನು ತಿಳಿಯುವ ಮುಂಚೆ ನಾನು ಆತ್ಮಹತ್ಯೆಮಾಡಿಕೊಳ್ಳಲು ಬಯಸುತ್ತಿದ್ದೆ; ನನಗೆ ಬದುಕಲು ಮನಸ್ಸಿರಲಿಲ್ಲ. ನನಗೆ ದೊಡ್ಡ ಶೂನ್ಯತೆಯ ಅನಿಸಿಕೆಯಾಗುತ್ತಿತ್ತು ಮತ್ತು ಹಗಲೂರಾತ್ರಿ ಅಳುತ್ತಾ ಇರುತ್ತಿದ್ದೆ. ಆದರೆ ನಾನು ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸ ಮಾಡಿದಾಗ, ನಾನು ಸಹೋದರರ ಪ್ರೀತಿಯನ್ನು ಅನುಭವಿಸಿದೆ. ಅವರು ನನ್ನ ವಿಷಯದಲ್ಲಿ ತೋರಿಸುವ ವ್ಯಕ್ತಿಪರವಾದ ಆಸಕ್ತಿಯು ಪ್ರೋತ್ಸಾಹಕರವಾಗಿರುತ್ತದೆ. ಹಿರಿಯರಲ್ಲಿ ಒಬ್ಬರು ನನಗೆ ಅಣ್ಣ ಅಥವಾ ತಂದೆಯಂತಿದ್ದಾರೆ. ಅವರು ಮತ್ತು ಕೆಲವು ಶುಶ್ರೂಷಾ ಸೇವಕರು ನನ್ನನ್ನು ಗಾಲಿಕುರ್ಚಿಯಲ್ಲಿ ಕೂಟಗಳಿಗೂ ಸಾರುವ ಕೆಲಸಕ್ಕೂ ಕರೆದೊಯ್ಯುತ್ತಾರೆ.”

ಯೆಹೋವನ ಸಾಕ್ಷಿಗಳಲ್ಲಿ ಒಬ್ಬನೋಪಾದಿ 1992ರಲ್ಲಿ ದೀಕ್ಷಾಸ್ನಾನ ಹೊಂದಿದ ಹೋಸೇ ಒಬ್ಬಂಟಿಗನಾಗಿ ವಾಸಿಸುತ್ತಾನೆ. ಅವನಿಗೆ 70 ವರ್ಷ ವಯಸ್ಸು. ಅವನು 1990ರಲ್ಲಿ ಕೆಲಸದಿಂದ ನಿವೃತ್ತಿ ಹೊಂದಿದ್ದನು. ಹೋಸೇ ಖಿನ್ನತೆಯಿಂದ ಬಳಲುತ್ತಿದ್ದನು. ಆದರೆ ಸಾಕ್ಷಿಯೊಬ್ಬನು ಅವನಿಗೆ ಸಾರಿದಾಗ ಅವನು ಕೂಡಲೇ ಕ್ರೈಸ್ತ ಕೂಟಗಳಿಗೆ ಹಾಜರಾಗತೊಡಗಿದನು. ಅಲ್ಲಿ ಕೇಳಿಸಿಕೊಂಡ ಮತ್ತು ನೋಡಿದ ವಿಷಯಗಳು ಅವನಿಗೆ ತುಂಬ ಇಷ್ಟವಾದವು. ಉದಾಹರಣೆಗೆ, ಅವನು ಸಹೋದರರ ಒಡನಾಟವನ್ನು ಮತ್ತು ಒಬ್ಬ ವ್ಯಕ್ತಿಯೋಪಾದಿ ಅವರು ತನ್ನ ವಿಷಯದಲ್ಲಿ ತೋರಿಸಿದ ಚಿಂತೆಯನ್ನು ಗಮನಿಸಿದನು. ಅವನ ಸಭೆಯಲ್ಲಿರುವ ಹಿರಿಯರೂ ಶುಶ್ರೂಷಾ ಸೇವಕರೂ ಈಗ ಅವನನ್ನು ನೋಡಿಕೊಳ್ಳುತ್ತಾರೆ. (ಫಿಲಿಪ್ಪಿ 1:1; 1 ಪೇತ್ರ 5:2) ಇಂತಹ ಜೊತೆ ವಿಶ್ವಾಸಿಗಳು ಅವನಿಗೆ “ಬಲವರ್ಧಕ ಸಹಾಯ” ಆಗಿದ್ದಾರೆ. (ಕೊಲೊಸ್ಸೆ 4:​11, NW) ಅವರು ಅವನನ್ನು ಡಾಕ್ಟರರ ಬಳಿ ಕರೆದೊಯ್ಯುತ್ತಾರೆ, ಅವನ ಮನೆಯಲ್ಲಿ ಸಂದರ್ಶಿಸುತ್ತಾರೆ, ಮತ್ತು ಅವನ ನಾಲ್ಕು ಆಪರೇಷನ್‌ಗಳ ಸಮಯದಲ್ಲಿ ಅವನಿಗೆ ಬೇಕಾಗಿದ್ದ ಭಾವಾತ್ಮಕ ಬೆಂಬಲವನ್ನು ಕೊಟ್ಟಿದ್ದಾರೆ. ಅವನು ಹೇಳುವುದು: “ಅವರು ನನ್ನ ಬಗ್ಗೆ ಚಿಂತಿಸುತ್ತಾರೆ. ಅವರು ನಿಜವಾಗಿಯೂ ನನ್ನ ಕುಟುಂಬವಾಗಿದ್ದಾರೆ. ಅವರ ಒಡನಾಟ ನನಗೆ ತುಂಬ ಇಷ್ಟ.”

ಕೊಡುವುದರಲ್ಲಿ ನಿಜ ಸಂತೋಷವಿದೆ

“ಒಬ್ಬನಿಗಿಂತ ಇಬ್ಬರು ಲೇಸು” ಎಂದು ರಾಜ ಸೊಲೊಮೋನನು ಹೇಳಿದಾಗ, ಅವನು ಪ್ರಾಪಂಚಿಕ ಐಶ್ವರ್ಯವನ್ನು ಗಳಿಸಲು ಒಬ್ಬನು ಸಕಲ ಶಕ್ತಿಯನ್ನು ವಿನಿಯೋಗಿಸುವ ವ್ಯರ್ಥತೆಯ ಕುರಿತು ಆಗ ತಾನೇ ಮಾತಾಡಿದ್ದನು. (ಪ್ರಸಂಗಿ 4:​7-9) ಇದಕ್ಕಾಗಿ ಕುಟುಂಬದ ಒಳಗೂ ಹೊರಗೂ ಮಾನವ ಸಂಬಂಧಗಳನ್ನು ತ್ಯಾಗಮಾಡಬೇಕಾಗಿ ಬಂದರೂ ಇಂದು ಅನೇಕರು ಅದನ್ನೇ ಅತ್ಯುತ್ಸುಕತೆಯಿಂದ ಬೆನ್ನಟ್ಟುತ್ತಾರೆ.

ಈ ಲೋಭ ಮತ್ತು ಸ್ವಾರ್ಥದ ಮನೋಭಾವವು ಅನೇಕರು ತಮ್ಮನ್ನು ಪ್ರತ್ಯೇಕಿಸಿಕೊಳ್ಳುವಂತೆ ನಡೆಸಿದೆ. ಆದರೆ ಇದು, ಅವರ ಜೀವನದಲ್ಲಿ ಸಂತೋಷವನ್ನಾಗಲಿ ಸಂತೃಪ್ತಿಯನ್ನಾಗಲಿ ತಂದಿರುವುದಿಲ್ಲ. ಬದಲಿಗೆ ಇಂತಹ ಮನೋಭಾವಕ್ಕೆ ಬಲಿಬೀಳುವವರಲ್ಲಿ ಹತಾಶೆ ಮತ್ತು ನಿರೀಕ್ಷಾಹೀನತೆಯೇ ಸಾಮಾನ್ಯವಾಗಿರುತ್ತದೆ. ಇದಕ್ಕೆ ತದ್ವಿರುದ್ಧವಾಗಿ, ಈ ಮುಂಚೆ ಕೊಡಲ್ಪಟ್ಟಿರುವ ವೃತ್ತಾಂತಗಳು, ಯೆಹೋವನನ್ನು ಸೇವಿಸುವ ಮತ್ತು ಆತನಿಗಾಗಿ ಹಾಗೂ ನೆರೆಯವರಿಗಾಗಿರುವ ಪ್ರೀತಿಯಿಂದ ಪ್ರಚೋದಿಸಲ್ಪಟ್ಟವರೊಂದಿಗೆ ಸಹವಾಸ ಮಾಡುವುದರ ಒಳ್ಳೇ ಪರಿಣಾಮಗಳನ್ನು ತೋರಿಸುತ್ತವೆ. ಕ್ರೈಸ್ತ ಕೂಟಗಳಲ್ಲಿ ಕ್ರಮವಾದ ಉಪಸ್ಥಿತಿ, ಜೊತೆ ಕ್ರೈಸ್ತರ ಬೆಂಬಲ ಮತ್ತು ಚಿಂತೆ ಹಾಗೂ ಶುಶ್ರೂಷೆಯಲ್ಲಿ ಹುರುಪಿನ ಕೆಲಸ​—ಇವುಗಳು ಬೇರೆಯವರಿಂದ ಪ್ರತ್ಯೇಕರಾಗಿರುವುದರೊಂದಿಗೆ ಜೊತೆಗೂಡಿರುವ ನಕಾರಾತ್ಮಕ ಭಾವನೆಗಳನ್ನು ಈ ವ್ಯಕ್ತಿಗಳು ಜಯಿಸುವಂತೆ ಸಹಾಯಮಾಡಿರುವ ಮುಖ್ಯ ಅಂಶಗಳಾಗಿದ್ದವು.​—ಜ್ಞಾನೋಕ್ತಿ 17:17; ಇಬ್ರಿಯ 10:​24, 25.

ನಾವು ಒಬ್ಬರ ಮೇಲೊಬ್ಬರು ಹೊಂದಿಕೊಂಡಿರುವುದರಿಂದ, ಇತರರ ಪರವಾಗಿ ನಾವು ಮಾಡುವ ಕೆಲಸಗಳು ತೃಪ್ತಿ ತರುವುದು ಸ್ವಾಭಾವಿಕ. ಯಾರ ಕೆಲಸಗಳು ಇತರರಿಗೆ ಪ್ರಯೋಜನಗಳನ್ನು ತಂದವೊ ಆ ಆಲ್ಬರ್ಟ್‌ ಐನ್‌ಸ್ಟೈನ್‌ ಹೇಳಿದ್ದು: “ಮನುಷ್ಯನ ಮೌಲ್ಯವನ್ನು . . . ಅವನು ಏನು ಕೊಡುತ್ತಾನೊ ಅದರಲ್ಲಿ ನೋಡಬೇಕೇ ಹೊರತು ಅವನು ಏನನ್ನು ಪಡೆದುಕೊಳ್ಳುತ್ತಾನೊ ಅದರಲ್ಲಲ್ಲ.” ಇದು ನಮ್ಮ ಕರ್ತನಾದ ಯೇಸು ಕ್ರಿಸ್ತನ ಮಾತುಗಳಿಗೆ ಹೊಂದಿಕೆಯಲ್ಲಿದೆ: “ಪಡೆದುಕೊಳ್ಳುವುದಕ್ಕಿಂತ ಕೊಡುವುದರಲ್ಲಿಯೇ ಹೆಚ್ಚು ಸಂತೋಷವಿದೆ.” (ಅ. ಕೃತ್ಯಗಳು 20:​35, NW) ಆದಕಾರಣ, ಪ್ರೀತಿಯನ್ನು ಪಡೆಯುವುದು ಒಳ್ಳೆಯದಾದರೂ, ಇತರರಿಗೆ ಪ್ರೀತಿ ತೋರಿಸುವುದೂ ತುಂಬ ಆರೋಗ್ಯಕರವಾದ ವಿಷಯವಾಗಿದೆ.

ಅನೇಕ ವರ್ಷಕಾಲ ಆತ್ಮಿಕ ನೆರವನ್ನು ನೀಡಲು ಸಭೆಗಳನ್ನು ಭೇಟಿಮಾಡಿರುವ ಮತ್ತು ಬಡ ಕ್ರೈಸ್ತರಿಗಾಗಿ ಕೂಟದ ಸ್ಥಳಗಳನ್ನು ಕಟ್ಟುವಂತೆ ಸಹಾಯಮಾಡಿರುವ ಸಂಚರಣ ಮೇಲ್ವಿಚಾರಕನೊಬ್ಬನು ತನ್ನ ಅನಿಸಿಕೆಗಳನ್ನು ಹೀಗೆ ವ್ಯಕ್ತಪಡಿಸುತ್ತಾನೆ: “ನನ್ನ ಸಹೋದರರ ಸೇವೆಮಾಡುವ ಸಂತೋಷ ಮತ್ತು ಕೃತಜ್ಞತೆಯಿಂದ ತುಂಬಿರುವ ಅವರ ಮುಖಗಳನ್ನು ನೋಡುವುದು, ಅವರಿಗೆ ಸಹಾಯಮಾಡಲು ಇನ್ನೂ ಹೆಚ್ಚು ಅವಕಾಶಗಳನ್ನು ಹುಡುಕುತ್ತಾ ಹೋಗುವಂತೆ ನನ್ನನ್ನು ಪ್ರೇರಿಸುತ್ತದೆ. ಇತರರಲ್ಲಿ ವ್ಯಕ್ತಿಪರ ಆಸಕ್ತಿಯನ್ನು ತೋರಿಸುವುದೇ ಸಂತೋಷಕ್ಕಿರುವ ಕೀಲಿಕೈ ಎಂಬುದು ನನ್ನ ಅನುಭವ. ಮತ್ತು ಹಿರಿಯರೋಪಾದಿ ನಾವು ‘ಗಾಳಿಯಲ್ಲಿ ಮರೆಯಂತೆಯೂ ಮರುಭೂಮಿಯಲ್ಲಿ ನೀರಿನ ಕಾಲಿವೆಗಳ ಪ್ರಕಾರವೂ ಬೆಂಗಾಡಿನಲ್ಲಿ ದೊಡ್ಡ ಬಂಡೆಯ ನೆರಳಿನೋಪಾದಿಯಲ್ಲಿಯೂ’ ಇರಬೇಕೆಂದು ನನಗೆ ತಿಳಿದದೆ.”​—ಯೆಶಾಯ 32:2.

ಒಂದಾಗಿರುವುದು ಎಷ್ಟೋ ರಮ್ಯ!

ಇತರರಿಗೆ ಸಹಾಯಮಾಡುವುದರಲ್ಲಿ ಮತ್ತು ಯೆಹೋವನನ್ನು ಸೇವಿಸುವವರೊಂದಿಗೆ ಒಡನಾಟವನ್ನು ಮಾಡಲು ಪ್ರಯತ್ನಿಸುವುದರಲ್ಲಿ ಬಹಳಷ್ಟು ಪ್ರಯೋಜನವೂ ನಿಜ ಸಂತೋಷವೂ ಇದೆಯೆಂಬುದು ನಿಶ್ಚಯ. ಕೀರ್ತನೆಗಾರನು ಉದ್ಘರಿಸಿದ್ದು: “ಆಹಾ, ಸಹೋದರರು ಒಂದಾಗಿರುವದು ಎಷ್ಟೋ ಒಳ್ಳೇದು, ಎಷ್ಟೋ ರಮ್ಯವಾದದ್ದು!” (ಕೀರ್ತನೆ 133:1) ಮೀಗೆಲ್‌, ಫ್ರೋಈಲಾನ್‌ ಮತ್ತು ಆಲ್ಮ ರೂಟ್‌ರವರ ಸಂಬಂಧದಲ್ಲಿ ತೋರಿಸಲ್ಪಟ್ಟಂತೆ, ಪರಸ್ಪರರನ್ನು ಬೆಂಬಲಿಸುವುದರಲ್ಲಿ ಕುಟುಂಬ ಐಕ್ಯವು ಮಹತ್ವದ್ದಾಗಿದೆ. ಮತ್ತು ಸತ್ಯಾರಾಧನೆಯಲ್ಲಿ ಪರಸ್ಪರ ಐಕ್ಯವಾಗಿರುವುದು ಒಂದು ಆಶೀರ್ವಾದವೇ ಸರಿ! ಕ್ರೈಸ್ತ ಪತಿಪತ್ನಿಯರಿಗೆ ಸಲಹೆ ನೀಡಿದ ಬಳಿಕ ಅಪೊಸ್ತಲ ಪೇತ್ರನು ಬರೆದದ್ದು: “ಕಡೆಗೆ ನೀವೆಲ್ಲರೂ ಏಕಮನಸ್ಸುಳ್ಳವರಾಗಿರಿ; ಪರರ ಸುಖದುಃಖಗಳಲ್ಲಿ ಸೇರುವವರಾಗಿರಿ; ಅಣ್ಣತಮ್ಮಂದಿರಂತೆ ಒಬ್ಬರನ್ನೊಬ್ಬರು ಪ್ರೀತಿಸಿರಿ; ಕರುಣೆಯೂ ದೀನಭಾವವೂ ಉಳ್ಳವರಾಗಿರಿ.”​—1 ಪೇತ್ರ 3:8.

ನೈಜ ಮಿತ್ರತ್ವವು, ಭಾವಾತ್ಮಕವಾಗಿಯೂ ಆಧ್ಯಾತ್ಮಿಕವಾಗಿಯೂ ಮಹಾ ಪ್ರಯೋಜನಗಳನ್ನು ತರುತ್ತದೆ. ಅಪೊಸ್ತಲ ಪೌಲನು ನಂಬಿಕೆಯಲ್ಲಿದ್ದ ಜೊತೆ ಸಂಗಾತಿಗಳನ್ನು ಸಂಬೋಧಿಸುತ್ತಾ ಉತ್ತೇಜಿಸುವುದು: “ಮನಗುಂದಿದವರನ್ನು ಧೈರ್ಯಪಡಿಸಿರಿ, ಬಲಹೀನರಿಗೆ ಆಧಾರವಾಗಿರಿ, ಎಲ್ಲರಲ್ಲಿಯೂ ದೀರ್ಘಶಾಂತರಾಗಿರಿ . . . ಯಾವಾಗಲೂ ನೀವು ಒಬ್ಬರಿಗೊಬ್ಬರು ಹಿತವನ್ನು ಮಾಡಿಕೊಂಡಿರುವದಲ್ಲದೆ ಎಲ್ಲರಿಗೂ ಹಿತವನ್ನು ಮಾಡುವವರಾಗಿರಿ.”​—1 ಥೆಸಲೊನೀಕ 5:14, 15.

ಆದುದರಿಂದ, ಇತರರಿಗೆ ಒಳ್ಳೇದನ್ನು ಮಾಡಲು ಪ್ರಾಯೋಗಿಕ ಮಾರ್ಗಗಳನ್ನು ಹುಡುಕಿರಿ. “ಸಮಯವಿರಲಾಗಿ ಎಲ್ಲರಿಗೆ ಒಳ್ಳೇದನ್ನು ಮಾಡೋಣ; ಮುಖ್ಯವಾಗಿ . . . ಕ್ರಿಸ್ತನಂಬಿಕೆಯುಳ್ಳವರಿಗೆ ಮಾಡೋಣ.” ಏಕೆಂದರೆ ಇದು ನಿಮ್ಮ ಜೀವನಕ್ಕೆ ನಿಜಾರ್ಥವನ್ನು ಕೊಟ್ಟು, ನಿಮ್ಮ ನೆಮ್ಮದಿ ಮತ್ತು ಸಂತೃಪ್ತಿಗೆ ನೆರವಾಗುವುದು. (ಗಲಾತ್ಯ 6:9, 10) ಯೇಸುವಿನ ಶಿಷ್ಯನಾದ ಯಾಕೋಬನು ಬರೆದದ್ದು: “ಒಬ್ಬ ಸಹೋದರನಿಗೆ ಇಲ್ಲವೇ ಒಬ್ಬ ಸಹೋದರಿಗೆ ಬಟ್ಟೆಯೂ ಆ ದಿನದ ಆಹಾರವೂ ಇಲ್ಲದೆ ಇರುವಾಗ ನಿಮ್ಮಲ್ಲಿ ಒಬ್ಬನು ಅವರಿಗೆ ದೇಹಕ್ಕೆ ಬೇಕಾದದ್ದನ್ನು ಕೊಡದೆ​—ಸಮಾಧಾನದಿಂದ ಹೋಗಿರಿ, ಬೆಂಕಿಕಾಯಿಸಿಕೊಳ್ಳಿ, ಹೊಟ್ಟೆತುಂಬಿಸಿಕೊಳ್ಳಿ ಎಂದು ಬರೀ ಮಾತು ಹೇಳಿದರೆ ಪ್ರಯೋಜನವೇನು?” (ಯಾಕೋಬ 2:15, 16) ಇದಕ್ಕಿರುವ ಉತ್ತರ ಸುವ್ಯಕ್ತ. ನಾವು ‘ಸ್ವಹಿತವನ್ನು ಮಾತ್ರ ನೋಡದೆ ಪರಹಿತವನ್ನು ಸಹ ನೋಡುವ’ ಅಗತ್ಯವಿದೆ.​—ಫಿಲಿಪ್ಪಿ 2:4.

ವಿಶೇಷ ಅಗತ್ಯದ ಸಮಯದಲ್ಲಿ ಅಥವಾ ವಿಪತ್ತು ಸಂಭವಿಸುವ ಸಮಯದಲ್ಲಿ ಭೌತಿಕವಾಗಿ ಸಹಾಯಮಾಡುವುದರೊಂದಿಗೆ, ಯೆಹೋವನ ಸಾಕ್ಷಿಗಳು ಜೊತೆಮಾನವರಿಗೆ ಅತಿ ಪ್ರಾಮುಖ್ಯವಾದ ಇನ್ನೊಂದು ವಿಧದಲ್ಲೂ ಸಹಾಯಮಾಡುವುದರಲ್ಲಿ ಕಾರ್ಯಮಗ್ನರಾಗಿದ್ದಾರೆ​—ಅದು ದೇವರ ರಾಜ್ಯದ ಸುವಾರ್ತೆಯನ್ನು ಸಾರುವ ಮೂಲಕವೇ. (ಮತ್ತಾಯ 24:14) ನಿರೀಕ್ಷೆ ಮತ್ತು ಸಾಂತ್ವನದ ಈ ಸಂದೇಶವನ್ನು ಸಾರುವುದರಲ್ಲಿ 60,00,000ಕ್ಕೂ ಹೆಚ್ಚಿನ ಸಾಕ್ಷಿಗಳ ಭಾಗವಹಿಸುವಿಕೆಯು, ಇತರರಲ್ಲಿ ಅವರಿಗಿರುವ ನೈಜ ಹಾಗೂ ಪ್ರೀತಿಪರವಾದ ಆಸಕ್ತಿಗೆ ಸಾಕ್ಷ್ಯವಾಗಿದೆ. ಆದರೆ ಪವಿತ್ರ ಶಾಸ್ತ್ರದಿಂದ ಇಂತಹ ಸಹಾಯವನ್ನು ಕೊಡುವುದು ಇನ್ನೊಂದು ಮಾನವ ಅಗತ್ಯವನ್ನೂ ನಾವು ಪೂರೈಸುವಂತೆ ಸಹಾಯಮಾಡುತ್ತದೆ. ಅದೇನು?

ಅತ್ಯಾವಶ್ಯಕವಾದ ಒಂದು ಅಗತ್ಯವನ್ನು ಪೂರೈಸುವುದು

ನಾವು ನೈಜ ಸಂತೋಷವನ್ನು ಅನುಭವಿಸಬೇಕಾದರೆ ದೇವರೊಂದಿಗೆ ಯೋಗ್ಯವಾದ ಸಂಬಂಧವನ್ನು ಹೊಂದುವುದು ಅಗತ್ಯ. ಈ ವಿಷಯದಲ್ಲಿ ಹೀಗೆ ಹೇಳಲಾಗುತ್ತದೆ: “ಮನುಷ್ಯನು ಸದಾ ಮತ್ತು ಎಲ್ಲೆಲ್ಲಿಯೂ, ಆದಿಯಿಂದ ಹಿಡಿದು ಇಂದಿನ ತನಕ, ಸಹಾಯಕ್ಕಾಗಿ ತನಗಿಂತ ಹೆಚ್ಚು ಉನ್ನತವೂ ಬಲಾಢ್ಯವೂ ಆದ ಯಾವುದೊ ಒಂದು ವಿಷಯಕ್ಕೆ ಮೊರೆಯಿಡಲು ಪ್ರೇರಿಸಲ್ಪಟ್ಟಿದ್ದಾನೆಂಬ ಸಂಗತಿಯೇ, ಧರ್ಮವು ಸ್ವಭಾವಸಿದ್ಧವಾಗಿದೆಯೆಂದೂ ವೈಜ್ಞಾನಿಕವಾಗಿ ಒಪ್ಪಿಕೊಳ್ಳಬೇಕಾದ ವಿಷಯವಾಗಿದೆಯೆಂದೂ ತೋರಿಸುತ್ತದೆ. . . . ಒಬ್ಬ ಪರಮೋಚ್ಚ ಜೀವಿಗಾಗಿ ಮಾನವನ ಅನ್ವೇಷಣೆ ಮತ್ತು ಆತನಲ್ಲಿನ ನಂಬಿಕೆಯ ಸಾರ್ವತ್ರಿಕತೆಯನ್ನು ನೋಡುವುದು, ನಮ್ಮಲ್ಲಿ ಭಯಭಕ್ತಿಯನ್ನು ಮತ್ತು ಪೂಜ್ಯಭಾವನೆಯನ್ನು ಹುಟ್ಟಿಸಬೇಕು.”​—ಮನುಷ್ಯನು ಸ್ವತಂತ್ರನಾಗಿ ಇರುವುದಿಲ್ಲ (ಇಂಗ್ಲಿಷ್‌), ಎ. ಕ್ರೆಸೀ ಮಾರಿಸನ್‌ ಅವರಿಂದ.

ಯೇಸು ಕ್ರಿಸ್ತನು ಹೇಳಿದ್ದು: “ತಮ್ಮ ಆಧ್ಯಾತ್ಮಿಕ ಆವಶ್ಯಕತೆಯ ಪ್ರಜ್ಞೆಯಿರುವವರು ಸಂತೋಷಿತರು.” (ಮತ್ತಾಯ 5:​3, NW) ಬೇರೆ ಮಾನವರಿಂದ ದೀರ್ಘಕಾಲದ ಪ್ರತ್ಯೇಕತೆಯು ಜನರಿಗೆ ಒಳಿತನ್ನು ತರುವುದಿಲ್ಲ. ಆದರೆ, ನಮ್ಮನ್ನು ಸೃಷ್ಟಿಕರ್ತನಿಂದ ಪ್ರತ್ಯೇಕಿಸಿಕೊಳ್ಳುವುದು ಇದಕ್ಕಿಂತಲೂ ಎಷ್ಟೋ ಹೆಚ್ಚು ಗಂಭೀರವಾದದ್ದಾಗಿದೆ. (ಪ್ರಕಟನೆ 4:11) “ದೈವಜ್ಞಾನ”ವನ್ನು ಪಡೆದು ಅನ್ವಯಿಸಿಕೊಳ್ಳುವುದು ನಮ್ಮ ಜೀವನದ ಪ್ರಮುಖ ಭಾಗವಾಗಿರಬೇಕು. (ಜ್ಞಾನೋಕ್ತಿ 2:​1-5) ಹೌದು, ನಮ್ಮ ಆಧ್ಯಾತ್ಮಿಕ ಆವಶ್ಯಕತೆಯನ್ನು ತೃಪ್ತಿಪಡಿಸಿಕೊಳ್ಳಲು ನಾವು ದೃಢನಿಶ್ಚಯವನ್ನು ಮಾಡಿಕೊಳ್ಳಬೇಕು. ಏಕೆಂದರೆ ನಾವು ಒಬ್ಬಂಟಿಗರಾಗಿ ಮತ್ತು ದೇವರಿಂದ ಪ್ರತ್ಯೇಕರಾಗಿ ನಿಲ್ಲುವುದು ಅಸಾಧ್ಯ. ಸಂತೋಷಕರವಾದ ಮತ್ತು ನಿಜವಾಗಿಯೂ ಪ್ರತಿಫಲದಾಯಕವಾದ ಜೀವನವು “ಭೂಲೋಕದಲ್ಲೆಲ್ಲಾ ಸರ್ವೋನ್ನತ”ನಾದ ಯೆಹೋವನೊಂದಿಗಿನ ಸುಸಂಬಂಧದ ಮೇಲೆ ಹೊಂದಿಕೊಂಡಿರುತ್ತದೆ.​—ಕೀರ್ತನೆ 83:18.

[ಪುಟ 5ರಲ್ಲಿರುವ ಚಿತ್ರ]

ಮೀಗೆಲ್‌: “ನಾನು ಸಂಕಟದ ಅವಧಿಗಳನ್ನು ಅನುಭವಿಸುತ್ತಿದ್ದೆ. ಆದರೆ ನಾನು ಯೆಹೋವನ ಜನರೊಂದಿಗೆ ಕೂಡಿಬರಲು ಆರಂಭಿಸಿದಾಗ, ನನ್ನ ಬದುಕು ಬದಲಾಯಿತು”

[ಪುಟ 5ರಲ್ಲಿರುವ ಚಿತ್ರ]

ಆಲ್ಮ ರೂಟ್‌: “ಯೆಹೋವನ ಕುರಿತು ಕಲಿತಾಗ ನಾನು ಆತನೊಡನೆ ನಿಕಟ ಸಂಬಂಧವನ್ನು ಹೊಂದಸಾಧ್ಯವಿದೆಯೆಂದು ನನಗನಿಸಿತು”

[ಪುಟ 6ರಲ್ಲಿರುವ ಚಿತ್ರ]

ಎಮೀಲೀಯಾ: “ಸತ್ಯವನ್ನು ತಿಳಿಯುವ ಮುಂಚೆ . . . ನನಗೆ ದೊಡ್ಡ ಶೂನ್ಯತೆಯ ಅನಿಸಿಕೆಯಾಗುತ್ತಿತ್ತು”

[ಪುಟ 7ರಲ್ಲಿರುವ ಚಿತ್ರ]

ಸತ್ಯಾರಾಧಕರೊಂದಿಗೆ ಸಹವಾಸಮಾಡುವುದು ನಮ್ಮ ಆತ್ಮಿಕ ಅಗತ್ಯವನ್ನು ಪೂರೈಸಲು ಸಹಾಯಮಾಡುತ್ತದೆ