ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೂಗಾರಿಟ್‌ ಬಾಳನ ನೆರಳಿನಲ್ಲಿದ್ದ ಪ್ರಾಚೀನ ನಗರ

ಯೂಗಾರಿಟ್‌ ಬಾಳನ ನೆರಳಿನಲ್ಲಿದ್ದ ಪ್ರಾಚೀನ ನಗರ

ಯೂಗಾರಿಟ್‌ ಬಾಳನ ನೆರಳಿನಲ್ಲಿದ್ದ ಪ್ರಾಚೀನ ನಗರ

ಇಸವಿ 1928ರಲ್ಲಿ, ಸಿರಿಯದ ರೈತನೊಬ್ಬನು ಕೆಲಸಮಾಡುತ್ತಿದ್ದಾಗ, ಅವನ ನೇಗಿಲು ಪ್ರಾಚೀನ ಪಿಂಗಾಣಿ ವಸ್ತುಗಳಿದ್ದಂಥ ಒಂದು ಸಮಾಧಿಯ ಮೇಲಿದ್ದ ಕಲ್ಲಿಗೆ ಬಡಿಯಿತು. ಅವನೇನನ್ನು ಕಂಡುಹಿಡಿದಿದ್ದನೊ ಅದರ ಮಹತ್ವದ ಬಗ್ಗೆ ಅವನು ಊಹಿಸಿರಲಿಕ್ಕೂ ಇಲ್ಲ. ಈ ಅನಿರೀಕ್ಷಿತ ಆವಿಷ್ಕಾರದ ಸುದ್ದಿಯನ್ನು ಕೇಳಿಸಿಕೊಂಡಾಗ, ಮುಂದಿನ ವರ್ಷವೇ ಕ್ಲಾಡ್‌ ಶಾಫೆರ್‌ರ ನೇತೃತ್ವದಲ್ಲಿ ಒಂದು ಫ್ರೆಂಚ್‌ ಪ್ರಾಕ್ತನಶಾಸ್ತ್ರ ತಂಡವು ಆ ನಿವೇಶನಕ್ಕೆ ಪ್ರಯಾಣ ಬೆಳೆಸಿತು.

ಸ್ವಲ್ಪ ಸಮಯದೊಳಗೆಯೇ, ಒಂದು ಕೆತ್ತನೆಲಿಪಿಯನ್ನು ಅಗೆದು ಹೊರತೆಗೆಯಲಾಯಿತು. ಇದು ಆ ತಂಡದವರು ತಮ್ಮ ಕರಣಿಗಳಿಂದ ಅಗೆದು, ನೆಲದಡಿಯಿಂದ ಹೊರತೆಗೆಯುತ್ತಿದ್ದ ಅವಶೇಷಗಳನ್ನು ಗುರುತಿಸಲು ಅವರನ್ನು ಶಕ್ತರನ್ನಾಗಿ ಮಾಡಿತು. ಅದು “ಸಮೀಪ ಪೂರ್ವದಲ್ಲಿದ್ದ ಅತಿ ಪ್ರಾಮುಖ್ಯ ಪ್ರಾಚೀನ ನಗರಗಳಲ್ಲೊಂದಾದ” ಯೂಗಾರಿಟ್‌ ಆಗಿತ್ತು. ಲೇಖಕರಾದ ಬ್ಯಾರಿ ಹೋಬರ್ಮನ್‌ ಹೀಗೂ ಅಂದರು: “ಬೈಬಲಿನ ಕುರಿತಾದ ನಮ್ಮ ತಿಳಿವಳಿಕೆಯ ಮೇಲೆ ಬೇರಾವುದೇ ಪ್ರಾಕ್ತನಶಾಸ್ತ್ರದ ಕಂಡುಹಿಡಿತವು​—ಮೃತಸಮುದ್ರದ ಸುರುಳಿಗಳು ಸಹ​—ಇದಕ್ಕಿಂತಲೂ ಹೆಚ್ಚು ಗಾಢವಾದ ಪ್ರಭಾವವನ್ನು ಬೀರಿಲ್ಲ.”​—ದಿ ಅಟ್ಲಾಂಟಿಕ್‌ ಮಂತ್ಲಿ.

ಮಾರ್ಗಗಳ ಸಂಧಿಸ್ಥಾನ

ಯೂಗಾರಿಟ್‌, ರಾಸ್‌ ಶಾಮ್‌ರಾ ಎಂಬ ದಿಬ್ಬದ ಮೇಲೆ ನೆಲೆಸಿತ್ತು. ಇದು ಈಗ ಉತ್ತರ ಸಿರಿಯ ಎಂದು ಕರೆಯಲ್ಪಡುವ ಮೆಡಿಟರೇನಿಯನ್‌ ಸಮುದ್ರದ ಕರಾವಳಿಯಲ್ಲಿತ್ತು. ಅದು ಸಾ.ಶ.ಪೂ. ಎರಡನೆಯ ಸಹಸ್ರಮಾನದಲ್ಲಿ ಹುಲುಸಾಗಿ ಬೆಳೆಯುತ್ತಿದ್ದ ಒಂದು ಬಹುಭಾಷೀಯ ನಗರವಾಗಿತ್ತು. ಅದರ ರಾಜ್ಯವು ಉತ್ತರದಲ್ಲಿ ಕಾಸೀಯಸ್‌ ಪರ್ವತದಿಂದ ಹಿಡಿದು 60 ಕಿಲೊಮೀಟರ್‌ ದೂರದಷ್ಟು ದಕ್ಷಿಣದಲ್ಲಿ ಟೆಲ್‌ ಸೂಕೇಸ್‌ ವರೆಗೆ ಮತ್ತು ಪಶ್ಚಿಮದಲ್ಲಿ ಮೆಡಿಟರೇನಿಯನ್‌ ಸಮುದ್ರದಿಂದ 30ರಿಂದ 45 ಕಿಲೊಮೀಟರ್‌ ಪೂರ್ವದಲ್ಲಿರುವ ಆರಾಂಟೀಸ್‌ ಕಣಿವೆಯ ವರೆಗೂ ವ್ಯಾಪಿಸಿತು.

ಯೂಗಾರಿಟ್‌ನ ಸಮಶೀತೋಷ್ಣ ಹವಾಮಾನದಲ್ಲಿ ಜಾನುವಾರುಗಳು ಚೆನ್ನಾಗಿ ಏಳಿಗೆಹೊಂದಿದವು. ಆ ಪ್ರದೇಶವು ದವಸಧಾನ್ಯ, ಆಲಿವ್‌ ಎಣ್ಣೆ, ದ್ರಾಕ್ಷಾಮದ್ಯ, ಮತ್ತು ಮೆಸೊಪೊತಾಮ್ಯ ಹಾಗೂ ಐಗುಪ್ತದಲ್ಲಿ ಬಹಳಷ್ಟು ಕೊರತೆಯಿದ್ದ ಉತ್ಪನ್ನವಾಗಿದ್ದ ಮರವನ್ನು ಉತ್ಪಾದಿಸುತ್ತಿತ್ತು. ಅದಲ್ಲದೆ, ಆ ನಗರವು ಅತ್ಯಂತ ಪ್ರಮುಖ ವ್ಯಾಪಾರಿ ಮಾರ್ಗಗಳು ಕೂಡಿಬರುವ ಸ್ಥಳದಲ್ಲಿದ್ದುದರಿಂದ, ಅದು ಆರಂಭದ ಮಹಾ ಅಂತಾರಾಷ್ಟ್ರೀಯ ಬಂದರುಗಳಲ್ಲಿ ಒಂದಾಯಿತು. ಯೂಗಾರಿಟ್‌ನಲ್ಲಿ, ಏಜೀಯನ್‌, ಆ್ಯನಾಟೊಲಿಯ, ಬ್ಯಾಬಿಲಾನ್‌, ಈಜಿಪ್ಟ್‌ ಮತ್ತು ಮಧ್ಯ ಪೂರ್ವದ ಇತರ ಭಾಗಗಳಿಂದ ಬರುತ್ತಿದ್ದ ವ್ಯಾಪಾರಿಗಳು, ಲೋಹಗಳು, ಕೃಷಿ ಉತ್ಪನ್ನಗಳು ಮತ್ತು ಅಲ್ಲಿಯೇ ಸ್ಥಳಿಕವಾಗಿ ಉತ್ಪಾದಿಸಲಾಗುತ್ತಿದ್ದ ಸಾಮಾನುಗಳನ್ನು ಮಾರಾಟಮಾಡುತ್ತಿದ್ದರು.

ಯೂಗಾರಿಟ್‌ ಭೌತಿಕವಾಗಿ ಸಮೃದ್ಧವಾಗಿದ್ದರೂ, ಅದು ಯಾವಾಗಲೂ ಒಂದು ಸಾಮಂತ ರಾಜ್ಯವಾಗಿತ್ತು. ಆ ನಗರವು ಐಗುಪ್ತ ಸಾಮ್ರಾಜ್ಯದ ಉತ್ತರ ದಿಕ್ಕಿನ ಗಡಿಕಾವಲು ಆಗಿತ್ತು. ಆಮೇಲೆ ಸಾ.ಶ.ಪೂ. 14ನೆಯ ಶತಮಾನದಲ್ಲಿ ಅದನ್ನು ಐಹಿಕ ಹಿತ್ತಿಯ ಸಾಮ್ರಾಜ್ಯಕ್ಕೆ ಸೇರಿಸಲಾಯಿತು. ಆಗ ಯೂಗಾರಿಟ್‌ ತನ್ನ ಮೇಲೆ ಆಳುತ್ತಿದ್ದ ಈ ಶಕ್ತಿಗೆ ಕಪ್ಪಕಾಣಿಕೆಯನ್ನೂ, ಸೈನಿಕರನ್ನೂ ಕೊಡುವಂತೆ ಒತ್ತಾಯಿಸಲ್ಪಟ್ಟಿತು. “ಸಮುದ್ರದ ಜನರು” * ಆ್ಯನಾಟೊಲಿಯ (ಮಧ್ಯ ಟರ್ಕಿ) ಮತ್ತು ಉತ್ತರ ಸಿರಿಯದ ಮೇಲೆ ಹಾವಳಿಮಾಡಲಾರಂಭಿಸಿದಾಗ, ಯೂಗಾರಿಟ್‌ನ ಸೈನಿಕರನ್ನೂ ಹಡಗುಪಡೆಯನ್ನೂ ಹಿತ್ತಿಯರು ಕೇಳಿಕೊಂಡರು. ಆದುದರಿಂದ, ಸ್ವತಃ ಯೂಗಾರಿಟ್‌ಗೆ ಯಾವುದೇ ರಕ್ಷಣೆಯಿಲ್ಲದೆ, ಸುಮಾರು ಸಾ.ಶ.ಪೂ. 1200ರಲ್ಲಿ ಅದು ಸಂಪೂರ್ಣವಾಗಿ ನಾಶಗೊಳಿಸಲ್ಪಟ್ಟಿತ್ತು.

ಗತಚರಿತ್ರೆಗೆ ಜೀವಕೊಡುವುದು

ಯೂಗಾರಿಟ್‌ನ ಸರ್ವನಾಶದಿಂದಾಗಿ, ಬಹುಮಟ್ಟಿಗೆ 20 ಮೀಟರ್‌ ಎತ್ತರ ಹಾಗೂ 60 ಎಕ್ರೆಗಿಂತಲೂ ಹೆಚ್ಚು ವಿಸ್ತಾರವಾದ ಜಮೀನನ್ನು ಆವರಿಸುವ ಒಂದು ದೊಡ್ಡ ದಿಬ್ಬವು ಉಳಿಯಿತು. ಈ ಕ್ಷೇತ್ರದಲ್ಲಿ ಕೇವಲ ಆರನೆಯ ಒಂದು ಭಾಗವನ್ನು ಅಗೆದು ತೆಗೆಯಲಾಗಿದೆ. ಈ ಭಗ್ನಾವಶೇಷಗಳಿಂದ ಪ್ರಾಕ್ತನಶಾಸ್ತ್ರಜ್ಞರು, ಬಹುಮಟ್ಟಿಗೆ ನೂರು ಕೋಣೆಗಳು ಮತ್ತು ಅಂಗಣಗಳಿದ್ದ ಹಾಗೂ ಸುಮಾರು 10,000 ಚದರ ಮೀಟರುಗಳಷ್ಟು ಸ್ಥಳವನ್ನು ವ್ಯಾಪಿಸಿದ್ದ ಒಂದು ಬೃಹತ್‌ ಅರಮನೆ ಸಂಕೀರ್ಣದ ಅಳಿದುಳಿದ ಭಾಗಗಳನ್ನು ಹೊರತೆಗೆದಿದ್ದಾರೆ. ಆ ಕಟ್ಟಡ ಸಂಕೀರ್ಣದಲ್ಲಿ, ನಲ್ಲಿ ನೀರು, ಪಾಯಿಖಾನೆಗಳು ಹಾಗೂ ಚರಂಡಿ ವ್ಯವಸ್ಥೆಯು ಇತ್ತು. ಪೀಠೋಪಕರಣಗಳಲ್ಲಿ ಚಿನ್ನ, ವೈಡೂರ್ಯ ಶಿಲೆ, ಮತ್ತು ದಂತವು ಕೂರಿಸಲ್ಪಟ್ಟಿತ್ತು. ಸೂಕ್ಷ್ಮ ಕೆತ್ತನೆಯುಳ್ಳ ದಂತದ ಫಲಕಗಳು ಅಲ್ಲಿ ಸಿಕ್ಕಿದವು. ಸುತ್ತಲೂ ಗೋಡೆಗಳಿರುವ ಒಂದು ತೋಟ ಹಾಗೂ ನೆಲದಿಂದ ಕೆಳಗಿರುವ ಒಂದು ಚಿಕ್ಕ ಕೊಳವು, ಆ ಅರಮನೆಯ ಸೊಬಗನ್ನು ಇನ್ನೂ ಹೆಚ್ಚಿಸಿತ್ತು.

ಆ ನಗರ ಮತ್ತು ಸುತ್ತಲಿನ ಬಯಲು ಪ್ರದೇಶದಲ್ಲೆಲ್ಲಾ, ಬಾಳ್‌ ಹಾಗೂ ಡಾಗಾನನ ದೇಗುಲಗಳು ತುಂಬಿದ್ದವು. * ಈ ದೇಗುಲಗಳ ಬುರುಜುಗಳು ಬಹುಶಃ 20 ಮೀಟರ್‌ಗಳಷ್ಟು ಎತ್ತರವಾಗಿದ್ದವು. ಅವುಗಳಲ್ಲಿ, ಆ ದೇವರ ವಿಗ್ರಹವುಳ್ಳ ಒಂದು ಒಳಗಣ ಕೋಣೆಗೆ ನಡೆಸುತ್ತಿದ್ದ ಒಂದು ಚಿಕ್ಕ ಮೊಗಸಾಲೆ ಇರುತ್ತಿತ್ತು. ಎಲ್ಲಿಂದ ರಾಜನು ಭಿನ್ನ ಭಿನ್ನ ಸಮಾರಂಭಗಳ ಅಧ್ಯಕ್ಷತೆ ವಹಿಸುತ್ತಿದ್ದನೊ ಆ ತಾರಸಿಗೆ ನಡೆಸುವ ಒಂದು ಮೆಟ್ಟಿಲಸಾಲು ಇತ್ತು. ರಾತ್ರಿ ಸಮಯದಲ್ಲಿ ಇಲ್ಲವೆ ಬಿರುಗಾಳಿಗಳ ಸಮಯದಲ್ಲಿ, ಹಡಗುಗಳು ಬಂದರಿಗೆ ಸುರಕ್ಷಿತವಾಗಿ ತಲಪುವಂತೆ ಆ ದೇಗುಲಗಳ ನೆತ್ತಿಯಲ್ಲಿ ಸಂಕೇತದೀಪಗಳು ಬೆಳಗಿಸಲ್ಪಡುತ್ತಿದ್ದಿರಬಹುದು. ಬಿರುಗಾಳಿಯ ದೇವನಾದ ಬಾಳ್‌ ಹಾಡಾಡ್‌ನಿಂದಾಗಿ ತಾವು ಸುರಕ್ಷಿತವಾಗಿ ಹಿಂದಿರುಗಲು ಸಾಧ್ಯವಾಯಿತೆಂದು ನಂಬುತ್ತಿದ್ದ ನಾವಿಕರು, ಅವನ ಆ ಗರ್ಭಗುಡಿಯಲ್ಲಿ ಸಿಕ್ಕಿರುವಂಥ ಕಲ್ಲಿನ 17 ಲಂಗರುಗಳನ್ನು ಹರಕೆಯಾಗಿ ಅರ್ಪಿಸಿದ್ದಿರಬಹುದು.

ಕೆತ್ತನೆಲಿಪಿಗಳ ಭಂಡಾರ

ಯೂಗಾರಿಟ್‌ನ ಅವಶೇಷಗಳಾದ್ಯಂತ ಸಾವಿರಾರು ಜೇಡಿಮಣ್ಣಿನ ಫಲಕಗಳು ಸಿಕ್ಕಿದವು. ಐದು ಲಿಪಿಗಳನ್ನುಪಯೋಗಿಸಿ ಬರೆಯಲ್ಪಟ್ಟಿರುವ ಎಂಟು ಭಾಷೆಗಳಲ್ಲಿ, ಹಣಕಾಸು, ಕಾನೂನು, ರಾಜತಾಂತ್ರಿಕ, ಹಾಗೂ ಆಡಳಿತಸಂಬಂಧಿತ ಗ್ರಂಥಪಾಠಗಳು ದೊರಕಿವೆ. ಶಾಫೆರ್‌ನ ತಂಡವು, ಇದುವರೆಗೂ ಗೊತ್ತಿಲ್ಲದಿರುವ​—ಈಗ ಯೂಗಾರಿಟಿಕ್‌ ಎಂದು ಹೆಸರಿಸಲ್ಪಟ್ಟಿರುವ​—ಭಾಷೆಯಲ್ಲಿ ಕೆತ್ತನೆಲಿಪಿಗಳನ್ನು ಕಂಡುಕೊಂಡಿತು. ಈ ಭಾಷೆಯು, 30 ಬೆಣೆಲಿಪಿ ಸಂಕೇತಗಳನ್ನು ಉಪಯೋಗಿಸುತ್ತಿದ್ದು, ಇದು ಈ ವರೆಗೂ ಕಂಡುಹಿಡಿಯಲ್ಪಟ್ಟಿರುವ ಅತ್ಯಂತ ಹಳೆಯ ಅಕ್ಷರಮಾಲೆಗಳಲ್ಲಿ ಒಂದಾಗಿತ್ತು.

ದಿನನಿತ್ಯದ ವಿಷಯಗಳ ಬಗ್ಗೆ ತಿಳಿಸುವುದರೊಂದಿಗೆ, ಈ ಯೂಗಾರಿಟಿಕ್‌ ದಾಖಲೆಗಳಲ್ಲಿ ಸಾಹಿತ್ಯಾತ್ಮಕ ಗ್ರಂಥಪಾಠಗಳೂ ಇದ್ದವು. ಮತ್ತು ಇವು, ಆ ಸಮಯದ ಧಾರ್ಮಿಕ ವಿಚಾರಗಳ ಕುರಿತು ಹಾಗೂ ವಿಧಿವಿಧಾನಗಳ ಕುರಿತು ಹೊಸ ತಿಳಿವಳಿಕೆಯನ್ನು ಕೊಟ್ಟವು. ಯೂಗಾರಿಟ್‌ ನಗರದ ಧರ್ಮಕ್ಕೂ, ನೆರೆಹೊರೆಯಲ್ಲಿದ್ದ ಕಾನಾನ್ಯರಿಂದ ಆಚರಿಸಲ್ಪಡುತ್ತಿದ್ದ ಧರ್ಮಕ್ಕೂ ತುಂಬ ಸಮಾನತೆಗಳಿರುವಂತೆ ತೋರುತ್ತದೆ. ರಾಲೆಂಡ್‌ ಡ ವೋಗನುಸಾರ, ಈ ಮೂಲಪಾಠಗಳು, “ಇಸ್ರಾಯೇಲ್ಯರ ವಿಜಯಕ್ಕಿಂತಲೂ ಸ್ವಲ್ಪ ಮುಂಚೆ ಕಾನಾನ್‌ ದೇಶದಲ್ಲಿದ್ದ ನಾಗರಿಕತೆಯ ಬಗ್ಗೆ ಸಾಧಾರಣಮಟ್ಟಿಗೆ ನಿಷ್ಕೃಷ್ಟವಾದ ಪ್ರತಿಬಿಂಬವನ್ನು” ಕೊಡುತ್ತವೆ.

ಬಾಳನ ನಗರದಲ್ಲಿ ಧರ್ಮ

ರಾಸ್‌ ಶಾಮ್‌ರಾ ಗ್ರಂಥಪಾಠಗಳಲ್ಲಿ 200ಕ್ಕಿಂತಲೂ ಹೆಚ್ಚು ದೇವದೇವತೆಗಳ ಬಗ್ಗೆ ತಿಳಿಸಲಾಗಿದೆ. ಪರಮ ದೇವನು ಏಲ್‌ ಆಗಿದ್ದನು. ಅವನನ್ನು ದೇವತೆಗಳ ಮತ್ತು ಮಾನವರ ಪಿತನೆಂದು ಕರೆಯಲಾಗಿದೆ. ಮತ್ತು ಬಿರುಗಾಳಿಯ ದೇವನಾದ ಬಾಳ್‌ ಹಾಡಾಡ್‌ “ಮೇಘಗಳ ಸವಾರನು” ಹಾಗೂ “ಭೂಮಿಯ ಪ್ರಭು” ಆಗಿದ್ದನು. ಏಲ್‌ ಒಬ್ಬ ಬುದ್ಧಿವಂತ, ಬಿಳಿ ಗಡ್ಡವುಳ್ಳ ಮುದುಕನೂ, ಮಾನವಕುಲದಿಂದ ದೂರದಲ್ಲಿರುವವನೂ ಆಗಿ ಚಿತ್ರಿಸಲ್ಪಟ್ಟಿದ್ದಾನೆ. ಇನ್ನೊಂದು ಬದಿಯಲ್ಲಿ, ಬಾಳನು ಒಬ್ಬ ಬಲಶಾಲಿ ಹಾಗೂ ಮಹತ್ತ್ವಾಕಾಂಕ್ಷಿ ದೇವನಾಗಿದ್ದು, ದೇವರುಗಳನ್ನೂ ಮಾನವಕುಲವನ್ನೂ ಆಳಲು ಪ್ರಯತ್ನಿಸುವವನಾಗಿದ್ದಾನೆ.

ಕಂಡುಹಿಡಿಯಲ್ಪಟ್ಟ ಈ ಮೂಲಪಾಠಗಳು, ಬಹುಶಃ ಹೊಸ ವರ್ಷ ಇಲ್ಲವೆ ಕೊಯ್ಲಿನ ಸಮಯದಂಥ ಧಾರ್ಮಿಕ ಹಬ್ಬಗಳ ಸಮಯದಲ್ಲಿ ಪಠಿಸಲ್ಪಡುತ್ತಿದ್ದವು. ಆದರೆ ಇವುಗಳ ಸರಿಯಾದ ಅರ್ಥವೇನೆಂಬುದು ಇನ್ನೂ ಅಸ್ಪಷ್ಟವಾಗಿದೆ. ಪ್ರಭುತ್ವದ ಸಂಬಂಧದಲ್ಲಿ ನಡೆದ ಒಂದು ವಾಗ್ವಾದದ ಕುರಿತಾದ ಕವಿತೆಯೊಂದರಲ್ಲಿ, ಏಲ್‌ನ ಅಚ್ಚುಮೆಚ್ಚಿನ ಮಗನಾದ ಸಮುದ್ರ ದೇವ ಯಾಮ್‌ನನ್ನು ಬಾಳನು ಸೋಲಿಸುತ್ತಾನೆ. ಪ್ರಾಯಶಃ ಈ ವಿಜಯವು, ಯೂಗಾರಿಟ್‌ನ ನಾವಿಕರಿಗೆ, ಬಾಳನು ತಮ್ಮನ್ನು ಸಮುದ್ರಯಾನದಲ್ಲಿ ಸಂರಕ್ಷಿಸುವನೆಂಬ ಭರವಸೆಯನ್ನು ಕೊಟ್ಟಿತು. ಮಾಟ್‌ನೊಂದಿಗಿನ ಒಂದು ವ್ಯಾಜ್ಯದಲ್ಲಿ ಬಾಳನು ಸೋಲುಂಡು, ಅಧೋಲೋಕಕ್ಕೆ ಇಳಿಯುತ್ತಾನೆ. ಇದರ ಪರಿಣಾಮವಾಗಿ ಬರಗಾಲ ಬರುತ್ತದೆ, ಮತ್ತು ಮಾನವ ಚಟುವಟಿಕೆಗಳು ನಿಂತುಹೋಗುತ್ತವೆ. ಬಾಳನ ಹೆಂಡತಿ ಹಾಗೂ ಸಹೋದರಿಯಾದ ಆನಾಟಳು​—ಪ್ರೀತಿ ಹಾಗೂ ಯುದ್ಧದ ದೇವತೆ​—ಮಾಟ್‌ನನ್ನು ಕೊಂದು, ಬಾಳನನ್ನು ಜೀವಕ್ಕೆ ತರುತ್ತಾಳೆ. ಬಾಳನು, ಏಲ್‌ನ ಹೆಂಡತಿಯಾದ ಆಥೀರಾಟಳ (ಅಶೇರ) ಪುತ್ರರನ್ನು ಸಂಹರಿಸುತ್ತಾನೆ ಮತ್ತು ಪಟ್ಟವನ್ನು ಮರಳಿಪಡೆಯುತ್ತಾನೆ. ಮಾಟ್‌ ಏಳು ವರ್ಷಗಳ ಬಳಿಕ ಹಿಂದಿರುಗಿ ಬರುತ್ತಾನೆ.

ಈ ಕವಿತೆಯು, ಜೀವದಾಯಕ ಮಳೆಯ ಮೇಲೆ ಬೇಸಗೆಕಾಲದ ಸುಡುವಂಥ ಶಾಖವು ಮೇಲುಗೈ ಪಡೆದು, ಆಮೇಲೆ ಪುನಃ ಶರತ್ಕಾಲದಲ್ಲಿ ಅವುಗಳು ಹಿಂದಿರುಗುವ ಋತುಗಳ ವಾರ್ಷಿಕ ಚಕ್ರವನ್ನು ಸೂಚಿಸುತ್ತದೆಂದು ಕೆಲವರು ಅರ್ಥಕೊಡುತ್ತಾರೆ. ಆ ಏಳು ವರ್ಷಗಳ ಚಕ್ರವು, ಕ್ಷಾಮ ಹಾಗೂ ಬರಗಾಲದೊಂದಿಗೆ ಸಂಬಂಧಿಸುತ್ತದೆಂದು ಇತರರು ನೆನಸುತ್ತಾರೆ. ಏನೇ ಆಗಲಿ, ಮಾನವ ಪ್ರಯತ್ನಗಳ ಯಶಸ್ಸಿಗಾಗಿ ಬಾಳನು ಸರ್ವೋಚ್ಚನಾಗಿರುವುದು ಪ್ರಾಮುಖ್ಯವೆಂದು ಪರಿಗಣಿಸಲಾಗಿತ್ತು. ವಿದ್ವಾಂಸ ಪೀಟರ್‌ ಕ್ರೇಗೀ ಗಮನಿಸುವುದು: “ಬಾಳನ ಧರ್ಮದ ಗುರಿಯು ಅವನ ಸರ್ವೋತ್ಕೃಷ್ಟತೆಯನ್ನು ಸುರಕ್ಷಿತವಾಗಿರಿಸುವುದೇ ಆಗಿತ್ತು; ಅವನ ಆರಾಧಕರ ಅಭಿಪ್ರಾಯದಂತೆ ಅವನು ಸರ್ವೋತ್ಕೃಷ್ಟನಾಗಿರುವಲ್ಲಿ ಮಾತ್ರ, ಮಾನವನ ಬದುಕಿ ಉಳಿಯುವಿಕೆಗಾಗಿ ತೀರ ಆವಶ್ಯಕವಾಗಿರುವ ಬೆಳೆಗಳು ಮತ್ತು ದನಕರುಗಳು ನಾಶವಾಗದೆ ಮುಂದುವರಿಯುವವು.”

ವಿಧರ್ಮಕ್ಕೆದುರಾಗಿ ಒಂದು ರಕ್ಷಣೆ

ನೆಲದಿಂದ ಅಗೆದು ತೆಗೆಯಲ್ಪಟ್ಟ ಗ್ರಂಥಪಾಠಗಳಲ್ಲಿ, ಯೂಗಾರಿಟಿಕ್‌ ಧರ್ಮದ ಹೀನತೆಯು ತೀರ ಸ್ಪಷ್ಟವಾಗುತ್ತದೆ. ದ ಇಲಸ್ಟ್ರೇಟಡ್‌ ಬೈಬಲ್‌ ಡಿಕ್ಷನೆರಿ ಹೇಳುವುದು: “ಈ ದೇವತೆಗಳ ಆರಾಧನೆಯ ಅವಮಾನಕರ ಫಲಿತಾಂಶಗಳನ್ನು ಈ ಗ್ರಂಥಪಾಠಗಳು ತೋರಿಸುತ್ತವೆ; ಯುದ್ಧ, ಪವಿತ್ರ ವೇಶ್ಯಾವಾಟಿಕೆ, ಕಾಮುಕ ಪ್ರೀತಿ ಮತ್ತು ಫಲಸ್ವರೂಪ ಸಾಮಾಜಿಕ ಅವನತಿಯ ಮೇಲೆ ಅವು ಹೆಚ್ಚು ಒತ್ತನ್ನು ಹಾಕುತ್ತವೆ.” ಡ ವೋ ಹೇಳುವುದು: “ಈ ಕವಿತೆಗಳನ್ನು ಓದುವಾಗ, ಯಾಹ್ವೆ ಮತದ ನಿಜ ವಿಶ್ವಾಸಿಗಳು ಮತ್ತು ಮಹಾ ಪ್ರವಾದಿಗಳಿಗೆ ಈ ಆರಾಧನೆಯ ಕುರಿತಾಗಿ ಇದ್ದ ಹೇವರಿಕೆಯನ್ನು ಅರ್ಥಮಾಡಿಕೊಳ್ಳಬಹುದು.” ಪುರಾತನ ಇಸ್ರಾಯೇಲ್‌ ಜನಾಂಗಕ್ಕೆ ದೇವರು ಕೊಟ್ಟ ಧರ್ಮಶಾಸ್ತ್ರವು ಇಂಥ ಸುಳ್ಳು ಧರ್ಮದ ವಿರುದ್ಧ ಒಂದು ರಕ್ಷಣೆಯಾಗಿತ್ತು.

ಕಾಲಜ್ಞಾನ, ಜ್ಯೋತಿಷ್ಯ ಮತ್ತು ಮಾಟಮಂತ್ರವನ್ನು ಯೂಗಾರಿಟ್‌ನಲ್ಲಿ ವ್ಯಾಪಕವಾಗಿ ಆಚರಿಸಲಾಗುತ್ತಿತ್ತು. ಆಕಾಶಸ್ಥಕಾಯಗಳಲ್ಲಿ ಮಾತ್ರವಲ್ಲ, ಕಡಿದುಹಾಕಲ್ಪಟ್ಟ ಪ್ರಾಣಿಗಳ ಅಂಗವಿಕೃತಿಯುಳ್ಳ ಭ್ರೂಣಗಳು ಹಾಗೂ ಒಳಾಂಗಗಳಿಂದಲೂ ಸಂಕೇತಗಳು ಮತ್ತು ಶಕುನಗಳನ್ನು ನೋಡಲು ಪ್ರಯತ್ನಿಸಲಾಗುತ್ತಿತ್ತು. “ಸಂಸ್ಕಾರವಿಧಿಗನುಸಾರ ಯಾವ ದೇವರಿಗೆ ಪ್ರಾಣಿಯನ್ನು ಬಲಿಕೊಡಲಾಗುತ್ತಿತ್ತೊ ಅದರೊಂದಿಗೆ ಆ ಪ್ರಾಣಿಯು ಒಂದಾಗುತ್ತದೆಂದು, ಮತ್ತು ಆ ದೇವರ ಆತ್ಮವು ಪ್ರಾಣಿಯ ಆತ್ಮದೊಂದಿಗೆ ಒಂದಾಗುತ್ತದೆಂದು ನಂಬಲಾಗುತ್ತಿತ್ತು” ಎಂದು ಇತಿಹಾಸಕಾರರಾದ ಸಾಕ್ಲೀನ್‌ ಗಾಷೇ ಹೇಳುತ್ತಾರೆ. “ಫಲಸ್ವರೂಪವಾಗಿ ಈ ಅಂಗಗಳ ಮೇಲಿದ್ದ ದೃಶ್ಯ ಸಂಕೇತಗಳನ್ನು ಓದುವ ಮೂಲಕ, ಭವಿಷ್ಯತ್ತಿನ ಘಟನೆಗಳ ಕುರಿತು ಇಲ್ಲವೆ ಒಂದು ನಿರ್ದಿಷ್ಟ ಸನ್ನಿವೇಶದಲ್ಲಿ ತೆಗೆದುಕೊಳ್ಳಬೇಕಾದ ಮಾರ್ಗಕ್ರಮದ ಕುರಿತಾದ ಯಾವುದೇ ಪ್ರಶ್ನೆಗೆ ಸಕಾರಾತ್ಮಕ ಇಲ್ಲವೆ ನಕಾರಾತ್ಮಕ ಉತ್ತರವನ್ನು ಕೊಡಲು ಶಕ್ತರಾಗಿದ್ದ ದೇವರುಗಳ ಆತ್ಮದ ಇಷ್ಟವೇನೆಂಬದನ್ನು ಪತ್ತೆಹಚ್ಚುವ ಸಾಧ್ಯತೆಯಿತ್ತು.” (ಲಾ ಪೇಈ ಡೂ ಗಾರೀಟ್‌ ಓಟೂರ್‌ ಡ 1200 ಆವಾ.J.C.) ತದ್ವಿರುದ್ಧವಾಗಿ ಇಸ್ರಾಯೇಲ್ಯರು ಇಂಥ ರೂಢಿಗಳಿಂದ ದೂರವಿರಬೇಕಿತ್ತು.​—ಧರ್ಮೋಪದೇಶಕಾಂಡ 18:​9-14.

ಮೋಶೆಯ ಧರ್ಮಶಾಸ್ತ್ರವು ಪಶುಗಮನವನ್ನು ಸ್ಪಷ್ಟವಾಗಿ ನಿಷೇಧಿಸಿತು. (ಯಾಜಕಕಾಂಡ 18:23) ಈ ಆಚರಣೆಯ ಬಗ್ಗೆ ಯೂಗಾರಿಟ್‌ನಲ್ಲಿ ಯಾವ ದೃಷ್ಟಿಕೋನವಿತ್ತು? ಕಂಡುಹಿಡಿಯಲ್ಪಟ್ಟ ಗ್ರಂಥಪಾಠಗಳಲ್ಲಿ, ಬಾಳನು ಒಂದು ಎಳೆ ಹಸುವಿನೊಂದಿಗೆ ಸಂಭೋಗಿಸುತ್ತಾನೆ. ಪ್ರಾಕ್ತನಶಾಸ್ತ್ರಜ್ಞ ಸೈರಸ್‌ ಗಾರ್ಡನ್‌ ಹೇಳಿದ್ದು: “ಈ ಕೃತ್ಯಕ್ಕಾಗಿ ಬಾಳನು ಒಂದು ಗೂಳಿಯ ರೂಪವನ್ನು ತಾಳುತ್ತಾನೆಂದು ವಾದಿಸಲಾಗುವುದಾದರೂ, ಅವನ ಮಿಥ್ಯಾ ಜೀವನಕ್ರಮವನ್ನು ಪುನರ್‌ಅಭಿನಯಿಸಿದ ಅವನ ಪುರೋಹಿತರ ಬಗ್ಗೆ ಹಾಗೆ ಹೇಳಲು ಸಾಧ್ಯವಿಲ್ಲ.”

ಇಸ್ರಾಯೇಲ್ಯರಿಗೆ ಈ ಆಜ್ಞೆಯನ್ನೀಯಲಾಯಿತು: “ಸತ್ತವರಿಗೋಸ್ಕರ ದುಃಖವನ್ನು ಸೂಚಿಸುವದಕ್ಕಾಗಿ ದೇಹವನ್ನು ಗಾಯಮಾಡಿಕೊಳ್ಳಬಾರದು.” (ಯಾಜಕಕಾಂಡ 19:28) ಆದರೆ ಬಾಳನ ಮೃತ್ಯುವಿಗೆ ಪ್ರತಿಕ್ರಿಯೆಯಲ್ಲಿ, ಏಲ್‌ನು “ತನ್ನ ಚರ್ಮವನ್ನು ಒಂದು ಕತ್ತಿಯಿಂದ ಕತ್ತರಿಸಿದನು, ಒಂದು ಕ್ಷೌರ ಕತ್ತಿಯಿಂದ ಗಾಯಗಳನ್ನು ಮಾಡಿದನು; ತನ್ನ ಕೆನ್ನೆ ಮತ್ತು ಗಲ್ಲವನ್ನು ಕತ್ತರಿಸಿದನು.” ಬಾಳನ ಆರಾಧಕರ ನಡುವೆ ಸಂಸ್ಕಾರಬದ್ಧವಾಗಿ ತಮ್ಮನ್ನೇ ಸೀಳಿಕೊಳ್ಳುವುದು ಒಂದು ಪದ್ಧತಿಯಾಗಿತ್ತೆಂಬುದು ಸುವ್ಯಕ್ತ.​—1 ಅರಸುಗಳು 18:28.

ಒಂದು ಯೂಗಾರಿಟಿಕ್‌ ಕವಿತೆಯು, ಆಡುಮರಿಯನ್ನು ಹಾಲಿನಲ್ಲಿ ಬೇಯಿಸುವುದು ಕಾನಾನ್ಯ ಧರ್ಮದಲ್ಲಿ ಸಾಮಾನ್ಯವಾಗಿ ಫಲೋತ್ಪತ್ತಿಯ ಸಂಸ್ಕಾರದ ಭಾಗವಾಗಿದೆ ಎಂಬದನ್ನು ಸೂಚಿಸುವಂತೆ ತೋರುತ್ತದೆ. ಆದರೆ ಮೋಶೆಯ ಧರ್ಮಶಾಸ್ತ್ರದಲ್ಲಿ ಇಸ್ರಾಯೇಲ್ಯರಿಗೆ ಹೀಗೆ ಆಜ್ಞಾಪಿಸಲಾಯಿತು: “ಆಡುಮರಿಯನ್ನು ಅದರ ತಾಯಿಯ ಹಾಲಿನಲ್ಲಿ ಬೇಯಿಸಬಾರದು.”​—ವಿಮೋಚನಕಾಂಡ 23:19.

ಬೈಬಲ್‌ ಗ್ರಂಥಪಾಠಗಳೊಂದಿಗೆ ಹೋಲಿಕೆಗಳು

ಮೂಲತಃ ಯೂಗಾರಿಟಿಕ್‌ ಗ್ರಂಥಪಾಠಗಳನ್ನು ಪ್ರಧಾನವಾಗಿ ಬೈಬಲಿನ ಹೀಬ್ರು ಭಾಷೆಯ ಸಹಾಯದಿಂದ ಭಾಷಾಂತರಿಸಲಾಯಿತು. ಪೀಟರ್‌ ಕ್ರೇಗೀ ಹೇಳುವುದು: “ಹೀಬ್ರು ಗ್ರಂಥಪಾಠಗಳಲ್ಲಿ, ಅರ್ಥವು ಅಸ್ಪಷ್ಟವಾಗಿರುವ ಮತ್ತು ಕೆಲವೊಮ್ಮೆ ಗೊತ್ತಿರದ ಅನೇಕ ಪದಗಳಿವೆ; 20ನೆಯ ಶತಮಾನಕ್ಕಿಂತಲೂ ಹಿಂದಿನ ಭಾಷಾಂತರಕಾರರು ವಿಭಿನ್ನ ವಿಧಾನಗಳ ಮೂಲಕ, ಅವುಗಳ ಸಂಭಾವ್ಯ ಅರ್ಥವೇನಾಗಿರಬಹುದೆಂಬುದನ್ನು ಊಹಿಸಿದರು. ಆದರೆ ಅವೇ ಪದಗಳು ಯೂಗಾರಿಟಿಕ್‌ ಮೂಲಪಾಠಗಳಲ್ಲಿ ಕಂಡುಬರುವಾಗ, ಅವುಗಳನ್ನು ಅರ್ಥಮಾಡಿಕೊಳ್ಳುವುದರಲ್ಲಿ ಪ್ರಗತಿಯನ್ನು ಮಾಡಸಾಧ್ಯವಿದೆ.”

ಉದಾಹರಣೆಗಾಗಿ, ಯೆಶಾಯ 3:18ರಲ್ಲಿರುವ ಒಂದು ಹೀಬ್ರು ಪದವನ್ನು ಸಾಮಾನ್ಯವಾಗಿ “ತುರುಬು ಬಲೆ” (“ಹಣೆಯ ಪಟ್ಟಿ,” ಪಾದಟಿಪ್ಪಣಿ) ಎಂದು ಭಾಷಾಂತರಿಸಲಾಗುತ್ತದೆ. ತದ್ರೀತಿಯ ಒಂದು ಯೂಗಾರಿಟಿಕ್‌ ಮೂಲಪದವು, ಸೂರ್ಯ ಮತ್ತು ಸೂರ್ಯ ದೇವತೆಯ ಕಡೆಗೆ ನಿರ್ದೇಶಿಸುತ್ತದೆ. ಹೀಗಿರುವುದರಿಂದ ಯೆಶಾಯನ ಪ್ರವಾದನೆಯಲ್ಲಿ ತಿಳಿಸಲ್ಪಟ್ಟಿರುವಂಥ ಯೆರೂಸಲೇಮಿನ ಸ್ತ್ರೀಯರು, ಕಾನಾನ್ಯ ದೇವರುಗಳ ಗೌರವಕ್ಕಾಗಿ ಸೂರ್ಯನ ಪುಟ್ಟ ಕಂಠ ಪದಕಗಳೊಂದಿಗೆ, “ಅರ್ಧಚಂದ್ರ” ಆಭರಣಗಳೊಂದಿಗೆ ಅಲಂಕೃತರಾಗಿದ್ದಿರಬಹುದು.

ಮ್ಯಾಸರೇಟಿಕ್‌ ಗ್ರಂಥಪಾಠದಲ್ಲಿ ಜ್ಞಾನೋಕ್ತಿ 26:23ರಲ್ಲಿ, “ಕೆಟ್ಟ ಹೃದಯದಿಂದ ಪ್ರೀತಿಯನ್ನಾಡುವ ತುಟಿ”ಯನ್ನು “ಕೊಟ್ಟಿಬೆಳ್ಳಿ” ಲೇಪಮಾಡಲ್ಪಟ್ಟಿರುವ ಮಣ್ಣುಮಡಿಕೆಯೊಂದಿಗೆ ಹೋಲಿಸಲಾಗಿದೆ. “ಸುಡುತ್ತಿರುವ ತುಟಿಗಳನ್ನು ಮತ್ತು ಒಂದು ದುಷ್ಟ ಹೃದಯವನ್ನು,” “ಬೆಳ್ಳಿಯ ಕಿಟ್ಟಿ”ನಿಂದ ಮುಚ್ಚಲ್ಪಟ್ಟಿರುವ ಒಂದು ಮಣ್ಣಿನ ಪಾತ್ರೆಗೆ ಹೋಲಿಸಲಾಗಿದೆ. ಇದಕ್ಕಾಗಿರುವ ಯೂಗಾರಿಟಿಕ್‌ ಮೂಲಪದವು ಈ ಹೋಲಿಕೆಯು, “ಮಣ್ಣಿನ ಪಾತ್ರೆಯ ಮೇಲಿನ ಹೊಳಪಿನ ಲೇಪದಂತೆ” ಎಂದು ಭಾಷಾಂತರಿಸಲ್ಪಡುವಂತೆ ಅನುಮತಿಸುತ್ತದೆ. ಕನ್ನಡ ಬೈಬಲ್‌ ಈ ಜ್ಞಾನೋಕ್ತಿಯನ್ನು ಸರಿಯಾಗಿಯೇ ಭಾಷಾಂತರಿಸುತ್ತದೆ: “ಕೆಟ್ಟ ಹೃದಯದಿಂದ ಪ್ರೀತಿಯನ್ನಾಡುವ ತುಟಿಯು ಕೊಟ್ಟಿಬೆಳ್ಳಿ ಮುಲಾಮು ಮಾಡಿದ ಮಣ್ಣುಮಡಿಕೆಯ ಹಾಗೆ.”

ಬೈಬಲ್‌ಗಾಗಿ ಮೂಲ ಆಧಾರವೊ?

ರಾಸ್‌ ಶಾಮ್‌ರಾ ಗ್ರಂಥಪಾಠಗಳನ್ನು ಪರೀಕ್ಷಿಸಿರುವ ಕೆಲವು ಮಂದಿ ವಿದ್ವಾಂಸರು, ಬೈಬಲಿನ ನಿರ್ದಿಷ್ಟ ಭಾಗಗಳು ಯೂಗಾರಿಟಿಕ್‌ ಕಾವ್ಯಾತ್ಮಕ ಸಾಹಿತ್ಯದ ರೂಪಾಂತರವಾಗಿವೆಯೆಂದು ಹೇಳುವಂತೆ ನಡೆಸಿದೆ. ಫ್ರೆಂಚ್‌ ಇನ್ಸ್‌ಟಿಟ್ಯೂಟ್‌ನ ಸದಸ್ಯರಾಗಿರುವ ಆಂಡ್ರೇ ಕಾಕೊ, “ಇಸ್ರಾಯೇಲ್ಯರ ಧರ್ಮದ ತಳಪಾಯದಲ್ಲಿರುವ ಕಾನಾನ್ಯ ಸಾಂಸ್ಕೃತಿಕ ಆಧಾರಕಟ್ಟಿನ” ಕುರಿತಾಗಿ ಮಾತಾಡುತ್ತಾರೆ.

ರೋಮ್‌ನಲ್ಲಿರುವ ಪಾಂಟಿಫಿಕಲ್‌ ಬಿಬ್ಲಿಕಲ್‌ ಇನ್ಸ್‌ಟಿಟ್ಯೂಟ್‌ನ ಮಿಚೆಲ್‌ ಡೇಹಕ್‌ ಕೀರ್ತನೆ 29ರ ಬಗ್ಗೆ ಹೇಳುವುದು: “ಈ ಕೀರ್ತನೆಯು, ಬಿರುಗಾಳಿಯ ದೇವರಾದ ಬಾಳನಿಗೆ ರಚಿಸಲ್ಪಟ್ಟ ಹಳೆಯ ಕಾನಾನ್ಯ ಸ್ತೋತ್ರಗೀತೆಯ, ಯಾಹ್ವೆ ಮತವಾದಿಯ ರೂಪಾಂತರವಾಗಿದೆ . . . ಆ ಕೀರ್ತನೆಯಲ್ಲಿನ ಕಾರ್ಯತಃ ಪ್ರತಿಯೊಂದು ಪದವನ್ನು ಹಳೆಯ ಕಾನಾನ್ಯ ಗ್ರಂಥಪಾಠಗಳಿಂದ ನಕಲುಮಾಡಬಹುದು.” ಈ ತೀರ್ಮಾನವು ನ್ಯಾಯಸಮ್ಮತವೊ? ಖಂಡಿತವಾಗಿಯೂ ಇಲ್ಲ!

ಹೆಚ್ಚು ಮಿತಭಾವದ ವಿದ್ವಾಂಸರು, ಹೋಲಿಕೆಯುಳ್ಳ ಅಂಶಗಳನ್ನು ಉತ್ಪ್ರೇಕ್ಷಿಸಿ ಹೇಳಲಾಗಿದೆಯೆಂಬುದನ್ನು ಅಂಗೀಕರಿಸುತ್ತಾರೆ. ಇತರರು ಯಾವುದನ್ನು ಪ್ಯಾನ್‌ ಯೂಗಾರಿಟಿಸಮ್‌ ಎಂದು ಕರೆಯುತ್ತಾರೊ ಅದನ್ನು ಟೀಕಿಸಿದ್ದಾರೆ. “ಒಂದೇ ಒಂದು ಯೂಗಾರಿಟಿಕ್‌ ಮೂಲಪಾಠವು ಸಹ ಪೂರ್ಣ ರೀತಿಯಲ್ಲಿ ಕೀರ್ತನೆ 29ಕ್ಕೆ ಹೋಲುವುದಿಲ್ಲ” ಎಂದು ದೇವತಾಶಾಸ್ತ್ರಜ್ಞರಾದ ಗ್ಯಾರಿ ಬ್ರಾಂಟ್ಲಿ ಹೇಳುತ್ತಾರೆ. “ಕೀರ್ತನೆ 29 (ಇಲ್ಲವೆ ಬೇರಾವುದೇ ಬೈಬಲ್‌ ಗ್ರಂಥಪಾಠ) ಒಂದು ವಿಧರ್ಮಿ ಕಟ್ಟುಕಥೆಯ ರೂಪಾಂತರವಾಗಿದೆ ಎಂದು ಸೂಚಿಸಲು ಯಾವುದೇ ಸಾಕ್ಷ್ಯಭರಿತ ಆಧಾರವಿಲ್ಲ.”

ಭಾಷಾಲಂಕಾರ, ಕಾವ್ಯಾತ್ಮಕ ಸಮಾನಾಂತರಗಳು, ಮತ್ತು ಶೈಲಿಯ ವೈಶಿಷ್ಟ್ಯಗಳಲ್ಲಿ ಹೋಲಿಕೆಗಳಿವೆಯೆಂಬ ವಾಸ್ತವಾಂಶವು, ಅದೊಂದು ರೂಪಾಂತರವೆಂಬದಕ್ಕೆ ರುಜುವಾತಾಗಿರಬಲ್ಲದೊ? ತದ್ವಿರುದ್ಧವಾಗಿ, ಅಂಥ ಹೋಲಿಕೆಗಳನ್ನು ನಿರೀಕ್ಷಿಸಬೇಕು. ದಿ ಎನ್‌ಸೈಕ್ಲಪೀಡಿಯ ಆಫ್‌ ರಿಲಿಜನ್‌ ಹೇಳುವುದು: “ವಿನ್ಯಾಸ ಮತ್ತು ಒಳವಿಷಯದಲ್ಲಿರುವ ಈ ಹೋಲಿಕೆಗೆ ಕಾರಣವು ಸಾಂಸ್ಕೃತಿಕವಾಗಿದೆ: ಯೂಗಾರಿಟ್‌ ಮತ್ತು ಇಸ್ರಾಯೇಲಿನ ನಡುವೆ ಮಹತ್ತರವಾದ ಭೂವಿನ್ಯಾಸ ಹಾಗೂ ಕಾಲದ ವ್ಯತ್ಯಾಸಗಳಿದ್ದರೂ, ಅವು ಒಂದೇ ಸಾಮಾನ್ಯ ಕಾವ್ಯಾತ್ಮಕ ಹಾಗೂ ಧಾರ್ಮಿಕ ಶಬ್ದಭಂಡಾರವುಳ್ಳ ಹೆಚ್ಚು ದೊಡ್ಡದಾದ ಸಾಂಸ್ಕೃತಿಕ ಅಸ್ತಿತ್ವದ ಭಾಗವಾಗಿದ್ದವು.” ಆದುದರಿಂದ ಗ್ಯಾರಿ ಬ್ರಾಂಟ್ಲಿ ಈ ತೀರ್ಮಾನಕ್ಕೆ ಬರುತ್ತಾರೆ: “ಕೇವಲ ಭಾಷಾಸಂಬಂಧಿತ ಹೋಲಿಕೆಗಳಿರುವ ಕಾರಣಮಾತ್ರದಿಂದ, ವಿಧರ್ಮಿ ನಂಬಿಕೆಗಳು ಬೈಬಲ್‌ ಗ್ರಂಥಪಾಠದ ಮೂಲವಾಗಿವೆಯೆಂದು ಪಟ್ಟುಹಿಡಿಯುವುದು ತಪ್ಪಾದ ವ್ಯಾಖ್ಯಾನವಾಗಿದೆ.”

ಕೊನೆಯದಾಗಿ ಹೇಳುವುದಾದರೆ, ರಾಸ್‌ ಶಾಮ್‌ರಾ ಮೂಲಪಾಠಗಳು ಮತ್ತು ಬೈಬಲಿನ ನಡುವೆ ಯಾವುದೇ ಹೋಲಿಕೆಗಳಿದ್ದರೂ, ಅವು ಪೂರ್ಣಾರ್ಥದಲ್ಲಿ ಸಾಹಿತ್ಯಿಕವಾಗಿವೆಯೇ ಹೊರತು ಆಧ್ಯಾತ್ಮಿಕವಲ್ಲವೆಂಬುದನ್ನು ಗಮನಿಸಬೇಕಾಗಿದೆ. “ಬೈಬಲಿನಲ್ಲಿರುವ ನೀತಿಶಾಸ್ತ್ರ ಹಾಗೂ ನೈತಿಕ ಶಿಖರಗಳನ್ನು ಯೂಗಾರಿಟ್‌ನಲ್ಲಿ ಕಂಡುಕೊಳ್ಳಲು [ಸಾಧ್ಯವಿಲ್ಲ]” ಎಂದು ಪ್ರಾಕ್ತನಶಾಸ್ತ್ರಜ್ಞರಾದ ಸೈರಸ್‌ ಗಾರ್ಡನ್‌ ಹೇಳುತ್ತಾರೆ. ವಾಸ್ತವದಲ್ಲಿ, ಹೋಲಿಕೆಗಳಿಗಿಂತಲೂ ವ್ಯತ್ಯಾಸಗಳೇ ಹೆಚ್ಚಿವೆ.

ಯೂಗಾರಿಟಿಕ್‌ ಭಾಷೆಯ ಅಧ್ಯಯನಗಳು, ಬೈಬಲ್‌ ಲೇಖಕರ ಮತ್ತು ಸಾಮಾನ್ಯವಾಗಿ ಹೀಬ್ರು ಜನಾಂಗದ ಸಾಂಸ್ಕೃತಿಕ, ಐತಿಹಾಸಿಕ, ಹಾಗೂ ಧಾರ್ಮಿಕ ಪರಿಸರವನ್ನು ಅರ್ಥಮಾಡಿಕೊಳ್ಳಲು ಬೈಬಲ್‌ ವಿದ್ಯಾರ್ಥಿಗಳಿಗೆ ಸಹಾಯಮಾಡುತ್ತಾ ಮುಂದುವರಿಯಬಹುದು. ರಾಸ್‌ ಶಾಮ್‌ರಾದ ಮೂಲಪಾಠಗಳ ಕುರಿತಾದ ಇನ್ನೂ ಹೆಚ್ಚಿನ ಪರಿಶೀಲನೆಯು, ಪ್ರಾಚೀನ ಹೀಬ್ರು ಭಾಷೆಯ ಮೇಲೆ ಹೊಸ ಬೆಳಕನ್ನು ಚೆಲ್ಲಬಹುದು. ಆದರೆ ಎಲ್ಲಕ್ಕಿಂತಲೂ ಹೆಚ್ಚಾಗಿ ಯೂಗಾರಿಟ್‌ನಲ್ಲಿನ ಪ್ರಾಕ್ತನಶಾಸ್ತ್ರೀಯ ಕಂಡುಹಿಡಿತಗಳು, ಬಾಳನ ಹೀನ ಆರಾಧನೆ ಹಾಗೂ ಯೆಹೋವನ ಶುದ್ಧಾರಾಧನೆಯ ನಡುವಿನ ವ್ಯತ್ಯಾಸವನ್ನು ಪ್ರಬಲವಾಗಿ ಎತ್ತಿತೋರಿಸುತ್ತವೆ.

[ಪಾದಟಿಪ್ಪಣಿಗಳು]

^ ಪ್ಯಾರ. 7 ಈ “ಸಮುದ್ರದ ಜನರು” ಸಾಮಾನ್ಯವಾಗಿ ಮೆಡಿಟರೇನಿಯನ್‌ ದ್ವೀಪಗಳು ಹಾಗೂ ಕರಾವಳಿಪ್ರದೇಶದ ಸಮುದ್ರಸಂಚಾರಿಗಳೆಂದು ಗುರುತಿಸಲ್ಪಟ್ಟಿದ್ದಾರೆ. ಅವರಲ್ಲಿ ಫಿಲಿಷ್ಟಿಯರೂ ಸೇರಿರಬಹುದು.​—ಆಮೋಸ 9:7.

^ ಪ್ಯಾರ. 10 ಭಿನ್ನ ಭಿನ್ನ ಅಭಿಪ್ರಾಯಗಳಿರುವುದಾದರೂ, ಡಾಗಾನನ ದೇಗುಲವನ್ನು ಕೆಲವರು ಏಲ್‌ನ ದೇಗುಲವೆಂದು ಹೇಳುತ್ತಾರೆ. ಒಬ್ಬ ಫ್ರೆಂಚ್‌ ವಿದ್ವಾಂಸರೂ ಬೈಬಲ್‌ ಸಂಬಂಧಿತ ಅಧ್ಯಯನಗಳ ಜೆರೂಸಲೇಮ್‌ ಸ್ಕೂಲಿನಲ್ಲಿ ಪ್ರೊಫೆಸರರೂ ಆಗಿರುವ ರೊಲ್ಯಾಂಡ್‌ ಡ ವೋರವರು, ಡಾಗಾನ್‌​—ನ್ಯಾಯಸ್ಥಾಪಕರು 16:23ರಲ್ಲಿ ಮತ್ತು 1 ಸಮುವೇಲ 5:​1-5ರಲ್ಲಿರುವ ದಾಗೋನ್‌​—ಎಂಬುದು ಏಲ್‌ನ ವೈಯಕ್ತಿಕ ಹೆಸರಾಗಿದೆಯೆಂದು ಸೂಚಿಸುತ್ತಾರೆ. ದಿ ಎನ್‌ಸೈಕ್ಲಪೀಡಿಯ ಆಫ್‌ ರಿಲಿಜನ್‌ ಹೇಳುವುದು, ಬಹುಶಃ “ಡಾಗಾನನು ಯಾವುದೊ ರೀತಿಯಲ್ಲಿ, [ಏಲ್‌]ನೊಂದಿಗೆ ಜೋಡಿಸಲ್ಪಟ್ಟಿದ್ದನು ಇಲ್ಲವೆ ಅವನಲ್ಲಿ ಸೇರಿಸಲ್ಪಟ್ಟಿದ್ದನು.” ರಾಸ್‌ ಶಾಮ್‌ರಾ ಮೂಲಪಾಠಗಳಲ್ಲಿ, ಬಾಳನನ್ನು ಡಾಗಾನನ ಪುತ್ರನೆಂದು ಕರೆಯಲಾಗಿದೆ. ಆದರೆ ಇಲ್ಲಿ “ಪುತ್ರ” ಎಂಬ ಶಬ್ದದ ಅರ್ಥವೇನೆಂಬುದು ಅನಿಶ್ಚಿತವಾಗಿದೆ.

[ಪುಟ 25ರಲ್ಲಿರುವ ಸಂಕ್ಷಿಪ್ತ ವಿವರಣೆ]

ಯೂಗಾರಿಟ್‌ನಲ್ಲಿನ ಪ್ರಾಕ್ತನಶಾಸ್ತ್ರೀಯ ಕಂಡುಹಿಡಿತಗಳು, ಶಾಸ್ತ್ರಗಳ ಕುರಿತಾದ ನಮ್ಮ ತಿಳಿವಳಿಕೆಯನ್ನು ಹೆಚ್ಚಿಸಿವೆ

[ಪುಟ 24, 25ರಲ್ಲಿರುವ ಭೂಪಟ/ಚಿತ್ರಗಳು]

(ಚಿತ್ರ ರೂಪವನ್ನು ಪ್ರಕಾಶನದಲ್ಲಿ ನೋಡಿ)

ಸಾ.ಶ.ಪೂ. 14ನೆಯ ಶತಮಾನದಲ್ಲಿ ಹಿತ್ತಿಯ ಸಾಮ್ರಾಜ್ಯ

ಮೆಡಿಟರೇನಿಯನ್‌ ಸಮುದ್ರ

ಯೂಫ್ರೇಟೀಸ್‌

ಮೌಂಟ್‌ ಕಾಸೀಯಸ್‌ (ಜಿಬೆಲ್‌ ಏಲ್‌-ಆಗ್ರಾ)

ಯೂಗಾರಿಟ್‌ (ರಾಸ್‌ ಶಾಮ್‌ರಾ)

ಟೆಲ್‌ ಸೂಕೇಸ್‌

ಆರಾಂಟೀಸ್‌

ಸಿರಿಯ

ಈಜಿಪ್ಟ್‌

[ಕೃಪೆ]

ಬಾಳನ ಸಣ್ಣ ಪ್ರತಿಮೆ ಮತ್ತು ಒಂದು ಪ್ರಾಣಿಯ ತಲೆಯ ಆಕಾರದಲ್ಲಿರುವ ಒಂದು ಕುಡಿಯುವ ಬಟ್ಟಲು: Musée du Louvre, Paris; ರಾಜವೈಭವದ ಅರಮನೆಯ ವರ್ಣಚಿತ್ರ: © D. Héron-Hugé pour “Le Monde de la Bible”

[ಪುಟ 25ರಲ್ಲಿರುವ ಚಿತ್ರ]

ಅರಮನೆಯ ಪ್ರವೇಶದ್ವಾರದ ಅವಶೇಷಗಳು

[ಪುಟ 26ರಲ್ಲಿರುವ ಚಿತ್ರ]

ಒಂದು ಮಿಥ್ಯ ಯೂಗಾರಿಟಿಕ್‌ ಕವಿತೆಯು, ವಿಮೋಚನಕಾಂಡ 23:19ರ ಕುರಿತಾಗಿ ಹಿನ್ನೆಲೆ ಮಾಹಿತಿಯನ್ನು ಕೊಡಬಹುದು

[ಕೃಪೆ]

Musée du Louvre, Paris

[ಪುಟ 27ರಲ್ಲಿರುವ ಚಿತ್ರಗಳು]

ಬಾಳನ ಸ್ಮಾರಕಸ್ತಂಭ

ಬೇಟೆಯಾಡುವ ದೃಶ್ಯವನ್ನು ಚಿತ್ರಿಸುತ್ತಿರುವ ಚಿನ್ನದ ತಟ್ಟೆ

ಫಲೋತ್ಪತ್ತಿಯ ದೇವತೆಯೊಬ್ಬಳನ್ನು ಚಿತ್ರಿಸುವ, ಸೌಂದರ್ಯ ಪ್ರಸಾಧನಗಳ ದಂತದ ಪೆಟ್ಟಿಗೆಯ ಮುಚ್ಚಳ

[ಕೃಪೆ]

ಎಲ್ಲಾ ಚಿತ್ರಗಳು: Musée du Louvre, Paris