ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನ ದಿನವು ಸಮೀಪಿಸುತ್ತಿರುವಾಗ ಜನರ ಬಗ್ಗೆ ನಮ್ಮ ದೃಷ್ಟಿಕೋನ ಹೇಗಿರಬೇಕು?

ಯೆಹೋವನ ದಿನವು ಸಮೀಪಿಸುತ್ತಿರುವಾಗ ಜನರ ಬಗ್ಗೆ ನಮ್ಮ ದೃಷ್ಟಿಕೋನ ಹೇಗಿರಬೇಕು?

ಯೆಹೋವನ ದಿನವು ಸಮೀಪಿಸುತ್ತಿರುವಾಗ ಜನರ ಬಗ್ಗೆ ನಮ್ಮ ದೃಷ್ಟಿಕೋನ ಹೇಗಿರಬೇಕು?

“ಕರ್ತನು [“ಯೆಹೋವನು,” NW] ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ . . . ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.”​—2 ಪೇತ್ರ 3:9.

1, 2. (ಎ) ಇಂದಿನ ಜನರ ಬಗ್ಗೆ ಯೆಹೋವನ ದೃಷ್ಟಿಕೋನ ಏನಾಗಿದೆ? (ಬಿ) ನಾವು ಸ್ವತಃ ಯಾವ ಪ್ರಶ್ನೆಗಳನ್ನು ಕೇಳಿಕೊಳ್ಳಬಹುದು?

ಯೆಹೋವನ ಸೇವಕರಿಗೆ, ‘ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡುವ’ ನೇಮಕವಿದೆ. (ಮತ್ತಾಯ 28:19) ನಾವು ಈ ನೇಮಕವನ್ನು ಪೂರೈಸುತ್ತಾ, ‘ಯೆಹೋವನ ಮಹಾದಿನಕ್ಕಾಗಿ’ ಕಾಯುತ್ತಾ ಇರುವಾಗ, ಜನರ ಬಗ್ಗೆ ಆತನಿಗಿರುವಂಥ ದೃಷ್ಟಿಕೋನವೇ ನಮಗಿರಬೇಕು. (ಚೆಫನ್ಯ 1:14) ಆದರೆ ಜನರ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವೇನು? ಅಪೊಸ್ತಲ ಪೇತ್ರನು ಹೇಳುವುದು: “ಕರ್ತನು [“ಯೆಹೋವನು,” NW] ತನ್ನ ವಾಗ್ದಾನವನ್ನು ನೆರವೇರಿಸುವದಕ್ಕೆ ತಡಮಾಡುತ್ತಾನೆಂಬದಾಗಿ ಕೆಲವರು ಅರ್ಥಮಾಡಿಕೊಳ್ಳುವ ಪ್ರಕಾರ ಆತನು ತಡಮಾಡುವವನಲ್ಲ. ಯಾವನಾದರೂ ನಾಶವಾಗುವದರಲ್ಲಿ ಆತನು ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದು ನಿಮ್ಮ ವಿಷಯದಲ್ಲಿ ದೀರ್ಘಶಾಂತಿಯುಳ್ಳವನಾಗಿದ್ದಾನೆ.” (2 ಪೇತ್ರ 3:9) ದೇವರು ಮಾನವರನ್ನು, ಪಶ್ಚಾತ್ತಾಪಪಡುವ ಸಾಧ್ಯತೆಯುಳ್ಳ ವ್ಯಕ್ತಿಗಳೋಪಾದಿ ದೃಷ್ಟಿಸುತ್ತಾನೆ. “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು ಆತನ ಚಿತ್ತವಾಗಿದೆ.” (1 ತಿಮೊಥೆಯ 2:4) ‘ದುಷ್ಟನು ತನ್ನ ದುರ್ಮಾರ್ಗವನ್ನು ಬಿಟ್ಟು ಬಾಳುವಾಗ’ಲಂತೂ ಯೆಹೋವನು ಹರ್ಷಿಸುತ್ತಾನೆ.​—ಯೆಹೆಜ್ಕೇಲ 33:11.

2 ಜನರ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವು ವೈಯಕ್ತಿಕವಾಗಿ ನಮಗೂ ಇದೆಯೊ? ಆತನಂತೆಯೇ, ನಾವು ಸಹ ಪ್ರತಿಯೊಂದು ಜಾತಿ ಮತ್ತು ದೇಶದ ಜನರನ್ನು ‘ಆತನು ಪಾಲಿಸುವ ಹಿಂಡಿನ’ ಭಾಗವಾಗುವ ಸಾಧ್ಯತೆಯುಳ್ಳವರಾಗಿ ಪರಿಗಣಿಸುತ್ತೇವೊ? (ಕೀರ್ತನೆ 100:3; ಅ. ಕೃತ್ಯಗಳು 10:​34, 35) ದೇವರ ದೃಷ್ಟಿಕೋನವನ್ನು ಹೊಂದುವುದು ಎಷ್ಟು ಮಹತ್ವಪೂರ್ಣವೆಂಬುದನ್ನು ತೋರಿಸುವ ಎರಡು ಉದಾಹರಣೆಗಳನ್ನು ನಾವೀಗ ಪರಿಗಣಿಸೋಣ. ಈ ಎರಡೂ ಸಂದರ್ಭಗಳಲ್ಲಿ ನಾಶನವು ಹತ್ತಿರವಿತ್ತು, ಮತ್ತು ಯೆಹೋವನ ಸೇವಕರಿಗೆ ಇದರ ಬಗ್ಗೆ ಮುಂಚಿತವಾಗಿಯೇ ತಿಳಿಸಲಾಗಿತ್ತು. ನಾವಿಂದು ಯೆಹೋವನ ಮಹಾದಿನಕ್ಕಾಗಿ ಕಾಯುತ್ತಿರುವಾಗ, ಈ ಮಾದರಿಗಳು ವಿಶೇಷವಾದ ಅರ್ಥವುಳ್ಳದ್ದಾಗಿವೆ.

ಅಬ್ರಹಾಮನಿಗೆ ಯೆಹೋವನ ದೃಷ್ಟಿಕೋನವಿತ್ತು

3. ಸೊದೋಮ್‌ ಗೊಮೋರಗಳೆಂಬ ಪಟ್ಟಣಗಳ ನಿವಾಸಿಗಳ ಬಗ್ಗೆ ಯೆಹೋವನ ದೃಷ್ಟಿಕೋನ ಏನಾಗಿತ್ತು?

3 ಮೊದಲನೆಯ ಉದಾಹರಣೆಯು ನಂಬಿಗಸ್ತ ಪೂರ್ವಜನಾದ ಅಬ್ರಹಾಮ ಮತ್ತು ಸೊದೋಮ್‌ ಗೊಮೋರಗಳೆಂಬ ದುಷ್ಟ ಪಟ್ಟಣಗಳಿಗೆ ಸಂಬಂಧಪಟ್ಟದ್ದಾಗಿದೆ. ಯೆಹೋವನು ‘ಸೊದೋಮ್‌ ಗೊಮೋರಗಳ ವಿಷಯವಾಗಿ ದೊಡ್ಡ ಮೊರೆಯನ್ನು’ ಕೇಳಿಸಿಕೊಂಡಾಗ, ಆತನು ಒಡನೆ ಆ ಪಟ್ಟಣಗಳನ್ನೂ ಅವುಗಳ ನಿವಾಸಿಗಳೆಲ್ಲರನ್ನೂ ನಾಶಮಾಡಲಿಲ್ಲ. ಮೊದಲು ಆತನು ಅದರ ಬಗ್ಗೆ ವಿಚಾರಣೆಮಾಡಿದನು. (ಆದಿಕಾಂಡ 18:​20, 21) ಇಬ್ಬರು ದೇವದೂತರನ್ನು ಸೊದೋಮಿಗೆ ಕಳುಹಿಸಲಾಯಿತು. ಅವರು ಅಲ್ಲಿ ನೀತಿವಂತನಾದ ಲೋಟನ ಮನೆಯಲ್ಲಿ ತಂಗಿದರು. ಆ ದೇವದೂತರು ಬಂದು ತಲಪಿದ ರಾತ್ರಿಯಂದು, ಅವರೊಂದಿಗೆ ಸಲಿಂಗಕಾಮವನ್ನು ಮಾಡಲಪೇಕ್ಷಿಸುತ್ತಾ ‘ಹುಡುಗರು ಮುದುಕರು ಸಹಿತವಾಗಿ ಪಟ್ಟಣದವರೆಲ್ಲರೂ ಒಗ್ಗಟ್ಟಾಗಿ ಮನೆಯನ್ನು ಸುತ್ತಿಕೊಂಡರು.’ ಹೀಗೆ ಆ ಪಟ್ಟಣದ ನಿವಾಸಿಗಳ ಕೀಳ್ಮಟ್ಟದ ಸ್ಥಿತಿಯು, ಅದು ನಾಶನಕ್ಕೆ ಅರ್ಹವಾಗಿತ್ತೆಂಬುದನ್ನು ಸ್ಪಷ್ಟವಾಗಿ ರುಜುಪಡಿಸಿತು. ಹಾಗಿದ್ದರೂ, ದೇವದೂತರು ಲೋಟನಿಗಂದದ್ದು: “ಇಲ್ಲಿ ನಿನಗೆ ಇನ್ನಾರಿದ್ದಾರೆ? ಅಳಿಯಂದಿರನ್ನೂ ಗಂಡುಹೆಣ್ಣುಮಕ್ಕಳನ್ನೂ ಪಟ್ಟಣದಲ್ಲಿ ನಿನಗಿರುವ ಬೇರೆ ಎಲ್ಲರನ್ನೂ ಊರ ಹೊರಕ್ಕೆ ಕರದುಕೊಂಡು ಬಾ.” ಆ ಪಟ್ಟಣದ ನಿವಾಸಿಗಳಲ್ಲಿ ಕೆಲವರಾದರೂ ರಕ್ಷಿಸಲ್ಪಡುವಂತೆ ಯೆಹೋವನು ಮಾರ್ಗವನ್ನು ತೆರೆದನು. ಆದರೆ ಕೊನೆಯಲ್ಲಿ ಆ ನಾಶನದಿಂದ ಪಾರಾದವರು, ಲೋಟ ಮತ್ತು ಅವನ ಇಬ್ಬರು ಪುತ್ರಿಯರು ಮಾತ್ರ.​—ಆದಿಕಾಂಡ 19:4, 5, 12, 16, 23-26.

4, 5. ಸೊದೋಮಿನ ನಿವಾಸಿಗಳಿಗೋಸ್ಕರ ಅಬ್ರಹಾಮನು ಬೇಡಿಕೊಂಡದ್ದೇಕೆ, ಮತ್ತು ಅವನ ದೃಷ್ಟಿಕೋನವು ಯೆಹೋವನ ದೃಷ್ಟಿಕೋನದೊಂದಿಗೆ ಹೊಂದಿಕೆಯಲ್ಲಿತ್ತೊ?

4 ಈಗ ನಾವು ಯೆಹೋವನು ಸೊದೋಮ್‌ ಗೊಮೋರ ಪಟ್ಟಣಗಳ ತನಿಖೆನಡೆಸುವ ತನ್ನ ಆಶಯವನ್ನು ವ್ಯಕ್ತಪಡಿಸಿದ ಸಮಯಕ್ಕೆ ಹಿಂದೆರಳೋಣ. ಆ ಸಮಯದಲ್ಲಿ ಅಬ್ರಹಾಮನು ಹೀಗೆ ಬೇಡಿಕೊಂಡನು: “ಒಂದುವೇಳೆ ಆ ಪಟ್ಟಣದಲ್ಲಿ ಐವತ್ತು ಮಂದಿ ನೀತಿವಂತರಿದ್ದರೆ ಏನು ಮಾಡುವೆ? ನೀನು ಆ ಪಟ್ಟಣವನ್ನು ನಾಶಮಾಡುವಿಯೋ? ಖಂಡಿತವಾಗಿಯೂ ಇಲ್ಲ! . . . ಖಂಡಿತವಾಗಿಯೂ ನೀನು ಆ ಪಟ್ಟಣವನ್ನು ನಾಶಮಾಡುವುದಿಲ್ಲ. ಕೆಟ್ಟವರನ್ನು ಕೊಲ್ಲುವುದಕ್ಕಾಗಿ ನೀನು ಐವತ್ತು ಮಂದಿ ನೀತಿವಂತರನ್ನು ಕೊಲ್ಲುವುದಿಲ್ಲ. ಒಂದುವೇಳೆ ನೀನು ಕೊಂದರೆ ಒಳ್ಳೆಯವರೂ ಕೆಟ್ಟವರೂ ಸರಿಸಮಾನರಾಗುವರು. . . . ನೀನು ಲೋಕದವರಿಗೆಲ್ಲ ನ್ಯಾಯಾಧಿಪತಿ. ನೀನು ನ್ಯಾಯವಾದದ್ದನ್ನೇ ಮಾಡುವೆ ಎಂದು ನನಗೆ ಗೊತ್ತಿದೆ.” ‘ಖಂಡಿತವಾಗಿಯೂ ನಾಶಮಾಡುವುದಿಲ್ಲ’ ಎಂಬ ವಾಕ್ಸರಣಿಯನ್ನು ಅಬ್ರಹಾಮನು ಎರಡು ಸಲ ಉಪಯೋಗಿಸಿದನು. ಯೆಹೋವನು ದುಷ್ಟರ ಸಂಗಡ ನೀತಿವಂತರನ್ನು ನಾಶಮಾಡುವುದಿಲ್ಲವೆಂದು ಅಬ್ರಹಾಮನು ತನ್ನ ಅನುಭವದಿಂದ ಚೆನ್ನಾಗಿ ತಿಳಿದಿದ್ದನು. ‘ಸೊದೋಮಿನಲ್ಲಿ ಐವತ್ತು ಮಂದಿ ನೀತಿವಂತರು’ ಇದ್ದರೆ ತಾನು ಆ ಪಟ್ಟಣವನ್ನು ನಾಶಮಾಡುವುದಿಲ್ಲವೆಂದು ಯೆಹೋವನು ಹೇಳಿದಾಗ, ಅಬ್ರಹಾಮನು ಹಂತಹಂತವಾಗಿ, ಆ ಸಂಖ್ಯೆಯನ್ನು ಕೇವಲ ಹತ್ತು ಮಂದಿಗೆ ಇಳಿಸಿದನು.​—ಆದಿಕಾಂಡ 18:22-33, ಪರಿಶುದ್ಧ ಬೈಬಲ್‌. *

5 ಒಂದುವೇಳೆ ಅಬ್ರಹಾಮನ ವಿನಂತಿಗಳು, ಯೆಹೋವನ ಸ್ವಂತ ದೃಷ್ಟಿಕೋನಕ್ಕೆ ಹೊಂದಿಕೆಯಲ್ಲಿ ಇಲ್ಲದಿರುತ್ತಿದ್ದರೆ, ಆತನು ಅವುಗಳಿಗೆ ಕಿವಿಗೊಡುತ್ತಿದ್ದನೊ? ನಿಶ್ಚಯವಾಗಿಯೂ ಇಲ್ಲ. ‘ಯೆಹೋವನ ಸ್ನೇಹಿತ’ನೋಪಾದಿ, ಅಬ್ರಹಾಮನಿಗೆ ಆತನ ದೃಷ್ಟಿಕೋನವೇನಾಗಿದೆ ಎಂಬುದು ತಿಳಿದಿತ್ತು ಮತ್ತು ಅವನಿಗೂ ಅದೇ ರೀತಿಯ ದೃಷ್ಟಿಕೋನವಿತ್ತೆಂಬುದು ಸುವ್ಯಕ್ತ. (ಯಾಕೋಬ 2:23) ಯೆಹೋವನು ಸೊದೋಮ್‌ ಗೊಮೋರಗಳ ಕಡೆಗೆ ತನ್ನ ಗಮನವನ್ನು ತಿರುಗಿಸಿದಾಗ, ಅವನು ಅಬ್ರಹಾಮನ ಕೋರಿಕೆಗಳನ್ನು ಪರಿಗಣಿಸಲು ಸಿದ್ಧನಾಗಿದ್ದನು. ಏಕೆ? ಏಕೆಂದರೆ ನಮ್ಮ ಸ್ವರ್ಗೀಯ ತಂದೆಯು, ‘ಯಾವನಾದರೂ ನಾಶವಾಗುವದರಲ್ಲಿ ಇಷ್ಟಪಡದೆ ಎಲ್ಲರೂ ತನ್ನ ಕಡೆಗೆ ತಿರುಗಿಕೊಳ್ಳಬೇಕೆಂದು ಅಪೇಕ್ಷಿಸುವವನಾಗಿದ್ದಾನೆ.’

ಜನರ ಬಗ್ಗೆ ಯೋನನ ದೃಷ್ಟಿಕೋನ​—ಸಂಪೂರ್ಣವಾಗಿ ತದ್ವಿರುದ್ಧ

6. ಯೋನನ ಘೋಷಣೆಗೆ ನಿನೆವೆಯವರು ಹೇಗೆ ಪ್ರತಿಕ್ರಿಯಿಸಿದರು?

6 ಈಗ ಯೋನನ ಕುರಿತಾದ ಎರಡನೆಯ ಉದಾಹರಣೆಯನ್ನು ಪರಿಗಣಿಸಿರಿ. ಈ ಸಲ ನಾಶನಕ್ಕಾಗಿ ಗೊತ್ತುಮಾಡಲ್ಪಟ್ಟಿದ್ದ ಪಟ್ಟಣವು, ನಿನೆವೆ ಆಗಿತ್ತು. ಆ ಪಟ್ಟಣದ ಕೆಟ್ಟತನವು, ‘ಯೆಹೋವನ ಸನ್ನಿಧಿಗೆ ಮುಟ್ಟಿದೆ’ ಎಂದು ಪ್ರವಾದಿಯಾದ ಯೋನನು ಘೋಷಿಸಬೇಕೆಂದು ಹೇಳಲಾಯಿತು. (ಯೋನ 1:2) ನಿನೆವೆಯು ಅದರ ಹೊರವಲಯಗಳ ಸಮೇತ ಒಂದು ದೊಡ್ಡ ನಗರವಾಗಿತ್ತು. ಅದು ‘ಮೂರು ದಿನದ ಪ್ರಯಾಣದಷ್ಟು ಅತಿವಿಸ್ತಾರವಾಗಿತ್ತು.’ ಕೊನೆಯಲ್ಲಿ ಯೋನನು ವಿಧೇಯನಾಗಿ, ನಿನೆವೆಯನ್ನು ಪ್ರವೇಶಿಸಿದಾಗ, “ನಾಲ್ವತ್ತು ದಿನಗಳಾದ ಮೇಲೆ ನಿನೆವೆಯು ಕೆಡವಲ್ಪಡುವದು” ಎಂದು ಘೋಷಿಸುತ್ತಾ ಇದ್ದನು. “ನಿನೆವೆಯವರು ದೇವರಲ್ಲಿ ನಂಬಿಕೆಯಿಟ್ಟು ಉಪವಾಸವನ್ನು ಗೊತ್ತುಮಾಡಿ ಸಾರಿದರು; . . . ಎಲ್ಲರೂ ಗೋಣಿತಟ್ಟನ್ನು ಸುತ್ತಿಕೊಂಡರು.” ನಿನೆವೆಯ ರಾಜನು ಸಹ ಪಶ್ಚಾತ್ತಾಪಪಟ್ಟನು.​—ಯೋನ 3:​1-6.

7. ನಿನೆವೆಯವರ ಪಶ್ಚಾತ್ತಾಪ ಮನೋಭಾವವನ್ನು ಯೆಹೋವನು ಹೇಗೆ ದೃಷ್ಟಿಸಿದನು?

7 ಸೊದೋಮಿನ ಜನರು ತೋರಿಸಿದ ಪ್ರತಿಕ್ರಿಯೆಗೂ ಇಲ್ಲಿನ ಪ್ರತಿಕ್ರಿಯೆಗೂ ಎಷ್ಟೊಂದು ಅಜಗಜಾಂತರ! ನಿನೆವೆಯವರ ಬಗ್ಗೆ ಯೆಹೋವನ ದೃಷ್ಟಿಕೋನವೇನಾಗಿತ್ತು? ಯೋನ 3:10 ಹೇಳುವುದು: “ದೇವರು ನಿನೆವೆಯವರ ಕಾರ್ಯಗಳನ್ನು ನೋಡಿ ಅವರು ತಮ್ಮ ದುರ್ಮಾರ್ಗದಿಂದ ತಿರುಗಿಕೊಂಡರೆಂದು ತಿಳಿದು ಮನಮರುಗಿ ತಾನು ಅವರಿಗೆ ಮಾಡುವೆನೆಂದು ಪ್ರಕಟಿಸಿದ್ದ ಕೇಡನ್ನು ಮಾಡದೆ ಬಿಟ್ಟನು.” ನಿನೆವೆಯವರು ತಮ್ಮ ಮಾರ್ಗಗಳನ್ನು ಬದಲಾಯಿಸಿದ್ದ ಕಾರಣದಿಂದ ಯೆಹೋವನು ಅವರೊಂದಿಗಿನ ತನ್ನ ವ್ಯವಹಾರಗಳನ್ನು ಮಾರ್ಪಡಿಸಿದ ಅರ್ಥದಲ್ಲಿ ಆತನು ‘ಮನಮರುಗಿದನು.’ ದೇವರ ಮಟ್ಟಗಳು ಬದಲಾಗಲಿಲ್ಲ. ಆದರೆ ನಿನೆವೆಯವರು ಪಶ್ಚಾತ್ತಾಪಪಟ್ಟದ್ದನ್ನು ನೋಡಿ ಯೆಹೋವನು ತನ್ನ ನಿರ್ಣಯವನ್ನು ಬದಲಾಯಿಸಿದನು.​—ಮಲಾಕಿಯ 3:6.

8. ಯೋನನು ಏಕೆ ಅಸಮಾಧಾನಗೊಂಡನು?

8 ನಿನೆವೆಯು ನಾಶವಾಗುವುದಿಲ್ಲವೆಂದು ಯೋನನಿಗೆ ತಿಳಿದುಬಂದಾಗ, ಅವನು ವಿಷಯಗಳನ್ನು ಯೆಹೋವನ ದೃಷ್ಟಿಕೋನದಿಂದ ನೋಡಿದನೊ? ಇಲ್ಲ, ಅದರ ಬದಲು ಹೀಗನ್ನಲಾಗಿದೆ: ‘ಇದರಿಂದ ಯೋನನಿಗೆ ಬಹು ಕರಕರೆಯಾಯಿತು; ಅವನು ಸಿಟ್ಟುಗೊಂಡನು.’ ಯೋನನು ಇನ್ನೇನು ಮಾಡಿದನು? ಆ ವೃತ್ತಾಂತವು ಹೇಳುವುದು: “ಯೆಹೋವಾ, ಲಾಲಿಸು, ನಾನು ಸ್ವದೇಶದಲ್ಲಿರುವಾಗಲೇ ಹೀಗಾಗುವದೆಂದು ಹೇಳಿದೆನಷ್ಟೆ; ನೀನು ದಯೆಯೂ ಕನಿಕರವೂ ದೀರ್ಘಶಾಂತಿಯೂ ಮಹಾಕೃಪೆಯೂ ಉಳ್ಳ ದೇವರು, ಮಾಡಬೇಕೆಂದಿದ್ದ ಕೇಡಿಗೆ ಮನಮರುಗುವವನು ಎಂದು ನಾನು ತಿಳಿದೇ ತಾರ್ಷೀಷಿಗೆ ಓಡಿಹೋಗಲು ತ್ವರೆಪಟ್ಟೆನು. . . . ಎಂದು ವಿಜ್ಞಾಪಿಸಿಕೊಂಡನು.” (ಯೋನ 4:​1-3) ಯೋನನಿಗೆ ಯೆಹೋವನ ಗುಣಗಳ ಕುರಿತಾಗಿ ತಿಳಿದಿತ್ತು. ಆದರೂ ಆ ಹಂತದಲ್ಲಿ ಯೋನನು ಅಸಮಾಧಾನಪಟ್ಟುಕೊಂಡು, ನಿನೆವೆಯ ಪಶ್ಚಾತ್ತಾಪಿ ನಿವಾಸಿಗಳ ಬಗ್ಗೆ ಯೆಹೋವನಿಗಿದ್ದ ದೃಷ್ಟಿಕೋನವನ್ನು ತನ್ನದಾಗಿ ಮಾಡಿಕೊಳ್ಳಲಿಲ್ಲ.

9, 10. (ಎ) ಯೆಹೋವನು ಯೋನನಿಗೆ ಯಾವ ಪಾಠವನ್ನು ಕಲಿಸಿದನು? (ಬಿ) ನಿನೆವೆಯವರ ಬಗ್ಗೆ ಯೆಹೋವನಿಗಿದ್ದ ದೃಷ್ಟಿಕೋನವನ್ನು ಯೋನನು ಕಟ್ಟಕಡೆಗೆ ತನ್ನದಾಗಿಸಿಕೊಂಡನು ಎಂದು ನಾವೇಕೆ ನೆನಸಬಹುದು?

9 ಯೋನನು ನಿನೆವೆಯ ಹೊರಗೆ ಒಂದು ಗುಡಿಸಲನ್ನು ಮಾಡಿ, ‘ಪಟ್ಟಣವು ಏನಾಗುವದೋ ಎಂದು ನೋಡುತ್ತಾ’ ಅದರ ನೆರಳಿನಲ್ಲಿ ಕೂತುಕೊಂಡನು. ಆಗ ಯೆಹೋವನು, ಯೋನನಿಗೆ ನೆರಳನ್ನು ಒದಗಿಸಲಿಕ್ಕಾಗಿ ಒಂದು ಸೋರೆಗಿಡವು ಬೆಳೆಯುವಂತೆ ಮಾಡಿದನು. ಆದರೆ ಮರುದಿನವೇ, ಆ ಗಿಡವು ಬಾಡಿಹೋಯಿತು. ಇದರ ಬಗ್ಗೆ ಯೋನನು ಕೋಪಗೊಂಡಾಗ ಯೆಹೋವನು ಹೇಳಿದ್ದು: “ಇಂಥ ಗಿಡಕ್ಕಾಗಿ ನೀನು ಕನಿಕರಪಟ್ಟಿರುವಲ್ಲಿ ಎಡಗೈ ಬಲಗೈ ತಿಳಿಯದ ಒಂದು ಲಕ್ಷ ಇಪ್ಪತ್ತು ಸಾವಿರ ನರಪ್ರಾಣಿಗಳೂ ಬಹು ಪಶುಗಳೂ ಉಳ್ಳ ಆ ದೊಡ್ಡ ಪಟ್ಟಣವಾದ ನಿನೆವೆಗಾಗಿ ನಾನು ಕನಿಕರಪಡಬಾರದೋ”? (ಯೋನ 4:5-11) ಇದು, ಜನರ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನದ ವಿಷಯದಲ್ಲಿ ಯೋನನಿಗೆ ಎಷ್ಟು ಒಳ್ಳೆಯ ಪಾಠವಾಗಿತ್ತು!

10 ನಿನೆವೆಯ ಜನರ ವಿಷಯದಲ್ಲಿ ಕನಿಕರಪಡುವುದರ ಕುರಿತಾದ ದೇವರ ಹೇಳಿಕೆಗೆ ಯೋನನ ಪ್ರತಿಕ್ರಿಯೆ ಏನಾಗಿತ್ತೆಂಬುದರ ದಾಖಲೆ ಇಲ್ಲ. ಆದರೂ, ಆ ಪಶ್ಚಾತ್ತಾಪಿ ನಿನೆವೆಯವರ ಕುರಿತಾಗಿ ಪ್ರವಾದಿಯು ತನ್ನ ದೃಷ್ಟಿಕೋನವನ್ನು ಬದಲಾಯಿಸಿಕೊಂಡನೆಂಬುದು ಸ್ಪಷ್ಟ. ಈ ಪ್ರೇರಿತ ವೃತ್ತಾಂತವನ್ನು ದಾಖಲಿಸಲು ಯೆಹೋವನು ಅವನನ್ನು ಉಪಯೋಗಿಸಿದ ವಾಸ್ತವಾಂಶದಿಂದಾಗಿ ನಾವು ಈ ತೀರ್ಮಾನಕ್ಕೆ ಬರುತ್ತೇವೆ.

ನಿಮಗೆ ಯಾವ ಮನೋಭಾವವಿದೆ?

11. ಒಂದು ವೇಳೆ ಅಬ್ರಹಾಮನು ಈಗ ಇರುತ್ತಿದ್ದಲ್ಲಿ, ಇಂದು ಜೀವಿಸುತ್ತಿರುವ ಜನರ ಬಗ್ಗೆ ಅವನ ದೃಷ್ಟಿಕೋನ ಹೇಗಿರುತ್ತಿತ್ತು?

11 ಇಂದು ನಾವು ಇನ್ನೊಂದು ನಾಶನಕ್ಕೆ ಮುಖಮಾಡಿ ನಿಂತಿದ್ದೇವೆ. ಅದು, ಯೆಹೋವನ ಮಹಾದಿನದಲ್ಲಿ ಸದ್ಯದ ದುಷ್ಟ ವಿಷಯಗಳ ವ್ಯವಸ್ಥೆಯ ನಾಶನವೇ. (ಲೂಕ 17:​26-30; ಗಲಾತ್ಯ 1:4; 2 ಪೇತ್ರ 3:10) ಒಂದುವೇಳೆ ಅಬ್ರಹಾಮನು ಇಂದು ಬದುಕಿರುತ್ತಿದ್ದರೆ, ಬೇಗನೆ ನಾಶವಾಗಲಿರುವ ಈ ಲೋಕದಲ್ಲಿ ಜೀವಿಸುತ್ತಿರುವ ಜನರ ಬಗ್ಗೆ ಅವನ ದೃಷ್ಟಿಕೋನ ಹೇಗಿರುತ್ತಿತ್ತು? ‘ರಾಜ್ಯದ ಈ ಸುವಾರ್ತೆಯನ್ನು’ ಇದುವರೆಗೂ ಕೇಳಿಸಿಕೊಂಡಿರದವರ ಬಗ್ಗೆ ಅವನು ಚಿಂತಿತನಾಗಿರುತ್ತಿದ್ದನು. (ಮತ್ತಾಯ 24:14) ಸೊದೋಮಿನಲ್ಲಿ ನೀತಿವಂತರಾಗುವ ಸಾಧ್ಯತೆಯಿದ್ದವರ ಕುರಿತಾಗಿ ಅಬ್ರಹಾಮನು ಪದೇ ಪದೇ ಬೇಡಿಕೊಂಡನು. ಪಶ್ಚಾತ್ತಾಪಪಟ್ಟು ದೇವರ ಸೇವೆಮಾಡುವ ಅವಕಾಶ ಕೊಡಲ್ಪಡುವಲ್ಲಿ, ಸೈತಾನನ ನಿಯಂತ್ರಣದಡಿಯಲ್ಲಿರುವ ಈ ಲೋಕದ ರೀತಿನೀತಿಗಳನ್ನು ತಿರಸ್ಕರಿಸಬಹುದಾದ ಜನರ ಕುರಿತಾಗಿ ನಮಗೆ ವೈಯಕ್ತಿಕವಾಗಿ ಚಿಂತೆಯಿದೆಯೊ?​—1 ಯೋಹಾನ 5:19; ಪ್ರಕಟನೆ 18:​2-4.

12. ನಮ್ಮ ಶುಶ್ರೂಷೆಯಲ್ಲಿ ನಾವು ಭೇಟಿಯಾಗುವಂಥ ಜನರ ಕಡೆಗೆ ಯೋನನಂಥ ಮನೋಭಾವವನ್ನು ಬೆಳೆಸಿಕೊಳ್ಳುವುದು ಸುಲಭವೇಕೆ, ಮತ್ತು ಇದರ ಬಗ್ಗೆ ನಾವೇನು ಮಾಡಸಾಧ್ಯವಿದೆ?

12 ದುಷ್ಟತನದ ಅಂತ್ಯಕ್ಕಾಗಿ ಹಾತೊರೆಯುವುದು ಸ್ವಾಭಾವಿಕ. (ಹಬಕ್ಕೂಕ 1:​2, 3) ಹಾಗಿದ್ದರೂ, ಯೋನನಂಥ ಮನೋಭಾವವನ್ನು ವಿಕಸಿಸುತ್ತಾ, ಪಶ್ಚಾತ್ತಾಪಪಡಬಹುದಾದ ಜನರ ಕ್ಷೇಮದ ಕುರಿತಾಗಿ ಕಿಂಚಿತ್ತೂ ಚಿಂತೆಯಿಲ್ಲದವರಾಗಿರುವುದು ಬಹಳ ಸುಲಭ. ನಾವು ರಾಜ್ಯ ಸಂದೇಶದೊಂದಿಗೆ ಜನರ ಮನೆಗಳನ್ನು ಸಂದರ್ಶಿಸುವಾಗ, ಅನಾಸಕ್ತರೂ, ಮುನಿಸಿಕೊಳ್ಳುವವರೂ, ಇಲ್ಲವೆ ಜಗಳಕ್ಕೆ ಬರುವವರೂ ಆದ ವ್ಯಕ್ತಿಗಳನ್ನು ಭೇಟಿಯಾಗುತ್ತಾ ಇರುವಲ್ಲಿ ಈ ಮಾತು ವಿಶೇಷವಾಗಿ ಸತ್ಯವಾಗಿದೆ. ಈ ದುಷ್ಟ ವಿಷಯಗಳ ವ್ಯವಸ್ಥೆಯಿಂದ ಯೆಹೋವನು ಇನ್ನೂ ಒಟ್ಟುಗೂಡಿಸಲಿರುವವರ ಕಡೆಗೆ ನಾವು ನಿರ್ಲಕ್ಷ್ಯಭಾವದವರಾಗಬಹುದು. (ರೋಮಾಪುರ 2:4) ಗಂಭೀರವಾದ ಸ್ವಪರಿಶೀಲನೆಯನ್ನು ಮಾಡುವಾಗ, ಯೋನನಿಗೆ ಆರಂಭದಲ್ಲಿ ನಿನೆವೆಯರ ಕಡೆಗಿದ್ದ ಮನೋಭಾವದಲ್ಲಿ ಸ್ವಲ್ಪಾಂಶವಾದರೂ ನಮಗಿದೆಯೆಂದು ಗೊತ್ತಾಗುವಲ್ಲಿ, ನಮ್ಮ ದೃಷ್ಟಿಕೋನವನ್ನು ಯೆಹೋವನ ದೃಷ್ಟಿಕೋನಕ್ಕೆ ಸರಿಹೊಂದಿಸಿಕೊಳ್ಳುವಂತೆ ಸಹಾಯಕ್ಕಾಗಿ ಪ್ರಾರ್ಥಿಸಬಲ್ಲೆವು.

13. ಯೆಹೋವನು ಇಂದು ತನ್ನ ಜನರ ಬಗ್ಗೆ ಚಿಂತಿತನಾಗಿದ್ದಾನೆಂದು ನಾವೇಕೆ ಹೇಳಬಹುದು?

13 ಈಗಲೂ ತನ್ನ ಸೇವೆಯನ್ನು ಮಾಡದಿರುವವರ ಬಗ್ಗೆ ಯೆಹೋವನಿಗೆ ಚಿಂತೆಯಿದೆ, ಮತ್ತು ತನ್ನ ಸಮರ್ಪಿತ ಜನರ ಬಿನ್ನಹಗಳಿಗೂ ಆತನು ಕಿವಿಗೊಡುತ್ತಾನೆ. (ಮತ್ತಾಯ 10:11) ದೃಷ್ಟಾಂತಕ್ಕಾಗಿ, ಅವರ ಪ್ರಾರ್ಥನೆಗಳಿಗೆ ಪ್ರತಿಕ್ರಿಯೆಯಲ್ಲಿ ಆತನು ‘ನ್ಯಾಯವನ್ನು ತೀರಿಸುವನು.’ (ಲೂಕ 18:​7, 8) ಅದಲ್ಲದೆ, ಯೆಹೋವನು ತನ್ನ ತಕ್ಕ ಸಮಯದಲ್ಲಿ ತನ್ನೆಲ್ಲಾ ವಾಗ್ದಾನಗಳನ್ನೂ ಉದ್ದೇಶಗಳನ್ನೂ ಪೂರೈಸುವನು. (ಹಬಕ್ಕೂಕ 2:3) ಇದರಲ್ಲಿ, ಭೂಮಿಯಿಂದ ಎಲ್ಲಾ ದುಷ್ಟತನವನ್ನು ತೆಗೆದುಹಾಕುವುದೂ ಸೇರಿದೆ. ನಿನೆವೆ ಮತ್ತು ಅದರ ನಿವಾಸಿಗಳು ದುಷ್ಟತನಕ್ಕೆ ಪುನಃ ಹಿಂದಿರುಗಿದಾಗ ಆತನು ಅವರನ್ನು ನಾಶಮಾಡಿದಂತೆಯೇ ಮುಂದೆಯೂ ನಾಶಮಾಡುವನು.​—ನಹೂಮ 3:​5-7.

14. ಯೆಹೋವನ ಮಹಾದಿನಕ್ಕಾಗಿ ನಾವು ಕಾಯುತ್ತಿರುವಾಗ ನಾವೇನು ಮಾಡಬೇಕು?

14 ಈ ದುಷ್ಟ ವಿಷಯಗಳ ವ್ಯವಸ್ಥೆಯು ಯೆಹೋವನ ಮಹಾದಿನದಲ್ಲಿ ತೆಗೆದುಹಾಕಲ್ಪಡುವ ವರೆಗೂ ನಾವು ತಾಳ್ಮೆಯಿಂದ ಕಾಯುತ್ತಾ, ಆತನ ಚಿತ್ತವನ್ನು ಮಾಡುವುದರಲ್ಲಿ ಕಾರ್ಯಮಗ್ನರಾಗಿರುವೆವೊ? ಯೆಹೋವನ ದಿನದ ಆಗಮನಕ್ಕೆ ಮುಂಚೆ ಎಲ್ಲಿಯ ವರೆಗೆ ಸುವಾರ್ತೆಯ ಕೆಲಸವು ಮಾಡಲ್ಪಡಬೇಕೆಂಬುದರ ವಿವರಗಳು ನಮಗೆ ತಿಳಿದಿಲ್ಲ. ಆದರೆ ಅಂತ್ಯವು ಬರುವ ಮುಂಚೆ, ದೇವರಿಗೆ ತೃಪ್ತಿಯಾಗುವ ಹಂತದ ವರೆಗೂ ರಾಜ್ಯದ ಸುವಾರ್ತೆಯು ಸರ್ವಲೋಕದಲ್ಲಿ ಎಲ್ಲಾ ಜನಾಂಗಗಳಿಗೆ ಸಾರಲ್ಪಡುವುದೆಂಬುದಂತೂ ನಮಗೆ ನಿಶ್ಚಯವಾಗಿಯೂ ತಿಳಿದಿದೆ. ಮತ್ತು ಯೆಹೋವನು ತನ್ನ ಆಲಯವನ್ನು ವೈಭವದಿಂದ ತುಂಬಿಸುವುದನ್ನು ಮುಂದುವರಿಸಿದಂತೆ, ಇನ್ನೂ ಒಳತರಲ್ಪಡಬೇಕಾದ ‘ಇಷ್ಟವಸ್ತುಗಳ’ ಬಗ್ಗೆ ನಮಗೆ ನಿಶ್ಚಯವಾಗಿಯೂ ಚಿಂತೆಯಿರಬೇಕು.​—ಹಗ್ಗಾಯ 2:7.

ನಮ್ಮ ಕ್ರಿಯೆಗಳಿಂದ ನಮ್ಮ ದೃಷ್ಟಿಕೋನವು ವ್ಯಕ್ತವಾಗುತ್ತದೆ

15. ಸಾರುವ ಕೆಲಸಕ್ಕಾಗಿರುವ ನಮ್ಮ ಗಣ್ಯತೆಯನ್ನು ಯಾವುದು ಹೆಚ್ಚಿಸಬಲ್ಲದು?

15 ನಮ್ಮ ಸಾರುವಿಕೆಯಲ್ಲಿ ಹೆಚ್ಚು ಆಸಕ್ತಿಯು ತೋರಿಸಲ್ಪಡದಂಥ ಒಂದು ಸಮುದಾಯದಲ್ಲಿ ನಾವು ವಾಸಿಸುತ್ತಿರಬಹುದು. ಮತ್ತು ರಾಜ್ಯ ಘೋಷಕರ ಹೆಚ್ಚಿನ ಅಗತ್ಯವಿರುವಲ್ಲಿಗೆ ಸ್ಥಳಾಂತರಿಸುವ ಸ್ಥಾನದಲ್ಲೂ ನಾವು ಇಲ್ಲದಿರಬಹುದು. ಅಂತ್ಯವು ಬರುವ ಮುಂಚೆ ಹತ್ತು ಮಂದಿ ಸಿಗಬಹುದೆಂದೆಣಿಸಿರಿ. ಆ ಹತ್ತು ಮಂದಿಗಾಗಿ ಹುಡುಕುವುದು ಸಾರ್ಥಕವೆಂದು ನಮಗನಿಸುತ್ತದೊ? ಜನರ ಗುಂಪುಗಳು ‘ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿರುವ’ ಕಾರಣಕ್ಕಾಗಿ ಯೇಸು ‘ಅವರ ಮೇಲೆ ಕನಿಕರಪಟ್ಟನು.’ (ಮತ್ತಾಯ 9:36) ಬೈಬಲ್‌ ಅಧ್ಯಯನ ಮಾಡುವ ಮೂಲಕ ಮತ್ತು ಕಾವಲಿನಬುರುಜು ಹಾಗೂ ಎಚ್ಚರ! ಪತ್ರಿಕೆಗಳಲ್ಲಿ ಬರುವಂಥ ಲೇಖನಗಳನ್ನು ಜಾಗರೂಕತೆಯಿಂದ ಓದುವ ಮೂಲಕ, ಈ ಲೋಕದ ಸ್ಥಿತಿಗತಿಗಳ ಬಗ್ಗೆ ನಾವು ಹೆಚ್ಚಿನ ಒಳನೋಟವನ್ನು ಪಡೆದುಕೊಳ್ಳಬಹುದು. ಮತ್ತು ಇದು, ಸುವಾರ್ತೆಯನ್ನು ಸಾರುವ ಅಗತ್ಯದ ಕಡೆಗಿನ ನಮ್ಮ ಗಣ್ಯತೆಯನ್ನು ಹೆಚ್ಚಿಸುವುದು. ಇದಲ್ಲದೆ, ‘ನಂಬಿಗಸ್ತನೂ ವಿವೇಕಿಯೂ ಆದಂಥ ಆಳಿನ’ ಮುಖಾಂತರ ಒದಗಿಸಲ್ಪಡುವ ಬೈಬಲ್‌ ಆಧಾರಿತ ವಾಚನ ಸಾಮಗ್ರಿಯನ್ನು ಗಣ್ಯತಾಭಾವದಿಂದ ಉಪಯೋಗಿಸುವುದು, ಪದೇ ಪದೇ ಸಾರಲ್ಪಟ್ಟಿರುವ ಟೆರಿಟೊರಿಯಲ್ಲೂ ಇತರರಿಗೆ ಮನಗಾಣಿಸುವ ನಮ್ಮ ಸಾಮರ್ಥ್ಯವನ್ನು ಹೆಚ್ಚಿಸಬಲ್ಲದು.​—ಮತ್ತಾಯ 24:​45-47; 2 ತಿಮೊಥೆಯ 3:​14-17.

16. ನಮ್ಮ ಶುಶ್ರೂಷೆಯ ಪರಿಣಾಮಕಾರಿತ್ವವನ್ನು ನಾವು ಹೇಗೆ ಹೆಚ್ಚಿಸಬಹುದು?

16 ಬೈಬಲಿನ ಜೀವದಾಯಕ ಸಂದೇಶಕ್ಕೆ ಈಗಲೂ ಪ್ರತಿಕ್ರಿಯೆ ತೋರಿಸಬಹುದಾದ ಜನರಿಗಾಗಿರುವ ಚಿಂತೆಯು, ನಮ್ಮ ಶುಶ್ರೂಷೆಯಲ್ಲಿ ಮನೆಯವರೊಂದಿಗೆ ಮಾತಾಡಲು ಬೇರೆ ಬೇರೆ ಸಮಯಗಳು ಹಾಗೂ ವಿಧಾನಗಳನ್ನು ಪ್ರಯತ್ನಿಸಿ ನೋಡುವಂತೆ ಪ್ರಚೋದಿಸುತ್ತದೆ. ನಾವು ಮನೆಯಿಂದ ಮನೆಗೆ ಹೋಗುವಾಗ ಹೆಚ್ಚಿನವರು ಮನೆಯಲ್ಲಿಲ್ಲದಿರುವುದನ್ನು ನೋಡುತ್ತೇವೊ? ಹಾಗಿರುವಲ್ಲಿ, ನಮ್ಮ ಸಾಕ್ಷಿ ಚಟುವಟಿಕೆಯ ಸಮಯಗಳು ಹಾಗೂ ಸ್ಥಳಗಳನ್ನು ಬದಲಾಯಿಸುವ ಮೂಲಕ ನಮ್ಮ ಶುಶ್ರೂಷೆಯ ಪರಿಣಾಮಕಾರಿತ್ವವನ್ನು ನಾವು ಹೆಚ್ಚಿಸಬಹುದು. ಬೆಸ್ತರು ಮೀನನ್ನು ಹಿಡಿಯಸಾಧ್ಯವಿರುವ ಸಮಯದಲ್ಲೇ ಮೀನು ಹಿಡಿಯಲು ಹೋಗುತ್ತಾರೆ. ನಮ್ಮ ಆತ್ಮಿಕ ಮೀನು ಹಿಡಿಯುವ ಕೆಲಸದಲ್ಲೂ ನಾವು ಅದನ್ನೇ ಮಾಡಬಹುದೋ? (ಮಾರ್ಕ 1:​16-18) ಸಂಜೆ ಸಾಕ್ಷಿಕಾರ್ಯ ಮತ್ತು ಕಾನೂನುಸಮ್ಮತ ಸ್ಥಳಗಳಲ್ಲಿ ಟೆಲಿಫೋನ್‌ ಸಾಕ್ಷಿಕಾರ್ಯವನ್ನು ಏಕೆ ಪ್ರಯತ್ನಿಸಿ ನೋಡಬಾರದು? ಕಾರ್‌ ಪಾರ್ಕಿಂಗ್‌ ಸ್ಥಳಗಳು, ಬಸ್‌ ಡಿಪೋಗಳು ಮತ್ತು ಅಂಗಡಿಗಳು ಉತ್ಪನ್ನದಾಯಕ ‘ಮೀನು ಹಿಡಿಯುವ ಕ್ಷೇತ್ರಗಳಾಗಿವೆ.’ ಜನರ ಕಡೆಗೆ ನಮಗಿರುವ ಅಬ್ರಹಾಮನಂಥ ಮನೋಭಾವವು, ಅನೌಪಚಾರಿಕವಾಗಿಯೂ ಸಾಕ್ಷಿಕೊಡುವ ಅವಕಾಶಗಳನ್ನು ಸದ್ವಿನಿಯೋಗಿಸುವಾಗ ಸುವ್ಯಕ್ತವಾಗುತ್ತದೆ.

17. ವಿದೇಶಗಳಲ್ಲಿ ಸೇವೆಸಲ್ಲಿಸುತ್ತಿರುವ ಮಿಷನೆರಿಗಳನ್ನೂ ಇತರರನ್ನೂ ನಾವು ಹೇಗೆ ಉತ್ತೇಜಿಸಬಲ್ಲೆವು?

17 ರಾಜ್ಯ ಸಂದೇಶವು ಈ ವರೆಗೂ ಕೋಟಿಗಟ್ಟಲೆ ಜನರ ಕಿವಿಗೆ ಬಿದ್ದಿಲ್ಲ. ನಮ್ಮ ಸಾರುವಿಕೆಯಲ್ಲದೆ, ಮನೆಯಿಂದ ಹೊರಗೆ ಕಾಲಿಡದೆಯೂ ಅಂಥ ಜನರಿಗೋಸ್ಕರ ನಾವು ನಮ್ಮ ಚಿಂತೆಯನ್ನು ತೋರಿಸಬಹುದೊ? ವಿದೇಶದಲ್ಲಿ ಸೇವೆಸಲ್ಲಿಸುತ್ತಿರುವ ಮಿಷನೆರಿಗಳು ಇಲ್ಲವೆ ಪೂರ್ಣ ಸಮಯದ ಶುಶ್ರೂಷಕರ ಪರಿಚಯ ನಮಗಿದೆಯೊ? ಹಾಗಿರುವಲ್ಲಿ, ಅವರ ಕೆಲಸದ ಕಡೆಗಿನ ನಮ್ಮ ಗಣ್ಯತೆಯನ್ನು ತೋರಿಸುವಂಥ ಪತ್ರಗಳನ್ನು ನಾವು ಅವರಿಗೆ ಬರೆಯಬಹುದು. ಇದು ಯಾವ ರೀತಿಯಲ್ಲಿ ಸಾಮಾನ್ಯ ಜನರಿಗೋಸ್ಕರ ಚಿಂತೆಯನ್ನು ಪ್ರದರ್ಶಿಸುತ್ತದೆ? ಪ್ರೋತ್ಸಾಹ ಹಾಗೂ ಶ್ಲಾಘನೆಯಿಂದ ಕೂಡಿದ ನಮ್ಮ ಪತ್ರಗಳು, ಮಿಷನೆರಿಗಳು ತಮ್ಮ ನೇಮಕದಲ್ಲೇ ಉಳಿಯುವಂತೆ ಅವರನ್ನು ಬಲಪಡಿಸಬಹುದು, ಮತ್ತು ಹೀಗೆ ಇನ್ನೂ ಹೆಚ್ಚು ಜನರು ಸತ್ಯದ ಜ್ಞಾನವನ್ನು ತಿಳಿದುಕೊಳ್ಳಲು ಸಹಾಯವಾಗುವುದು. (ನ್ಯಾಯಸ್ಥಾಪಕರು 11:40) ನಾವು ಮಿಷನೆರಿಗಳಿಗೋಸ್ಕರ ಮತ್ತು ಇತರ ದೇಶಗಳಲ್ಲಿ ಸತ್ಯಕ್ಕಾಗಿ ಹಸಿದಿರುವವರಿಗಾಗಿ ಪ್ರಾರ್ಥನೆಯನ್ನೂ ಮಾಡಬಹುದು. (ಎಫೆಸ 6:​18-20) ಚಿಂತೆಯನ್ನು ತೋರಿಸುವ ಇನ್ನೊಂದು ವಿಧವು, ಯೆಹೋವನ ಸಾಕ್ಷಿಗಳ ಲೋಕವ್ಯಾಪಕ ಕೆಲಸಕ್ಕಾಗಿ ಹಣಕಾಸಿನ ದಾನಗಳನ್ನು ನೀಡುವುದೇ ಆಗಿದೆ.​—2 ಕೊರಿಂಥ 8:​13, 14; 9:​6, 7.

ನೀವು ಸ್ಥಳಾಂತರಿಸಬಹುದೊ?

18. ತಾವು ವಾಸಿಸುತ್ತಿರುವ ದೇಶದಲ್ಲೇ ರಾಜ್ಯಾಭಿರುಚಿಗಳನ್ನು ಪ್ರವರ್ಧಿಸಲಿಕ್ಕಾಗಿ ಕೆಲವು ಕ್ರೈಸ್ತರು ಏನು ಮಾಡಿದ್ದಾರೆ?

18 ರಾಜ್ಯ ಘೋಷಕರ ತೀವ್ರ ಅಗತ್ಯವಿರುವಂಥ ಸ್ಥಳಗಳಿಗೆ ಹೋಗಿರುವವರಿಗೆ, ತಮ್ಮ ಸ್ವತ್ಯಾಗದ ಪ್ರಯತ್ನಗಳಿಗಾಗಿ ಆಶೀರ್ವಾದಗಳು ಸಿಕ್ಕಿವೆ. ಆದರೆ ಯೆಹೋವನ ಇತರ ಸಾಕ್ಷಿಗಳಾದರೊ, ತಮ್ಮ ಸ್ವದೇಶದಲ್ಲೇ ಉಳಿದುಕೊಂಡು, ವಲಸಿಗರಿಗೆ ಆತ್ಮಿಕ ಸಹಾಯವನ್ನು ಕೊಡಲಿಕ್ಕಾಗಿ ಇನ್ನೊಂದು ಭಾಷೆಯನ್ನು ಕಲಿತಿದ್ದಾರೆ. ಅಂಥ ಪ್ರಯತ್ನಗಳು ನಿಶ್ಚಯವಾಗಿಯೂ ಪ್ರತಿಫಲದಾಯಕವಾಗಿವೆ. ಉದಾಹರಣೆಗಾಗಿ, ಅಮೆರಿಕದ ಟೆಕ್ಸಸ್‌ನಲ್ಲಿನ ಒಂದು ನಗರದಲ್ಲಿರುವ ಚೀನೀ ಜನರಿಗೆ ಸಹಾಯಮಾಡುತ್ತಿದ್ದ ಏಳು ಮಂದಿ ಸಾಕ್ಷಿಗಳು, 2001ರಲ್ಲಿ ಕರ್ತನ ಸಂಧ್ಯಾ ಭೋಜನದ ಆಚರಣೆಗಾಗಿ 114 ಮಂದಿಯನ್ನು ಸ್ವಾಗತಿಸಿದರು. ಇಂಥ ಗುಂಪುಗಳಿಗೆ ಸಹಾಯಮಾಡುವವರು, ತಮ್ಮ ಹೊಲವು ಕೊಯ್ಲಿಗಾಗಿ ಸಿದ್ಧವಾಗಿದೆ ಎಂಬುದನ್ನು ಕಂಡುಕೊಂಡಿದ್ದಾರೆ.​—ಮತ್ತಾಯ 9:​37, 38.

19. ರಾಜ್ಯ ಸಾರುವಿಕೆಯ ಕೆಲಸವನ್ನು ಹೆಚ್ಚಿಸಲಿಕ್ಕಾಗಿ ಒಂದು ವಿದೇಶಕ್ಕೆ ಸ್ಥಳಾಂತರಿಸುವ ಬಗ್ಗೆ ನೀವು ಯೋಚಿಸುತ್ತಿರುವಾಗ ಏನನ್ನು ಮಾಡುವುದು ಸೂಕ್ತವಾಗಿದೆ?

19 ನೀವು ರಾಜ್ಯ ಪ್ರಚಾರಕರ ಅಗತ್ಯವು ಹೆಚ್ಚಾಗಿರುವಂಥ ಸ್ಥಳಕ್ಕೆ ಹೋಗುವ ಸ್ಥಾನದಲ್ಲಿದ್ದೀರೆಂದು ಬಹುಶಃ ನಿಮಗೂ ನಿಮ್ಮ ಕುಟುಂಬಕ್ಕೂ ಅನಿಸಬಹುದು. ಆದರೆ ಪ್ರಥಮವಾಗಿ ‘ಕೂತುಕೊಂಡು, ವೆಚ್ಚವನ್ನು ಲೆಕ್ಕಿಸುವುದು’ ಖಂಡಿತವಾಗಿಯೂ ವಿವೇಕಯುತವಾಗಿದೆ. (ಲೂಕ 14:​28, NW) ಒಬ್ಬ ವ್ಯಕ್ತಿಯು ವಿದೇಶಕ್ಕೆ ಸ್ಥಳಾಂತರಿಸುವುದರ ಬಗ್ಗೆ ಯೋಚಿಸುವಾಗ ಇದು ವಿಶೇಷವಾಗಿ ಸತ್ಯ. ಇದನ್ನು ಪರಿಗಣಿಸುತ್ತಿರುವ ಯಾವುದೇ ವ್ಯಕ್ತಿಯು ಇಂಥ ಪ್ರಶ್ನೆಗಳನ್ನು ಸ್ವತಃ ಕೇಳುವುದು ಒಳ್ಳೇದು: ‘ನನ್ನ ಕುಟುಂಬವನ್ನು ಆರ್ಥಿಕವಾಗಿ ಬೆಂಬಲಿಸಲು ಶಕ್ತನಾಗಿರುವೆನೊ? ನನಗೆ ಸರಿಯಾದ ವೀಸಾ ದೊರಕಬಲ್ಲದೊ? ಆ ದೇಶದ ಭಾಷೆಯನ್ನು ನಾನೀಗಾಗಲೇ ಮಾತಾಡಬಲ್ಲೆನೊ, ಅಥವಾ ಅದನ್ನು ಕಲಿಯಲು ಸಿದ್ಧನಾಗಿದ್ದೇನೊ? ಅಲ್ಲಿನ ಹವಾಮಾನ ಮತ್ತು ಸಂಸ್ಕೃತಿಯ ಬಗ್ಗೆ ಯೋಚಿಸಿದ್ದೇನೊ? ಆ ದೇಶದಲ್ಲಿರುವ ಜೊತೆ ವಿಶ್ವಾಸಿಗಳಿಗೆ ಒಂದು ಹೊರೆಯಾಗಿರುವ ಬದಲು, ನಾನು ನಿಜವಾಗಿಯೂ “ಬಲವರ್ಧಕ ಸಹಾಯ” (NW) ಆಗಿರಬಲ್ಲೆನೊ?’ (ಕೊಲೊಸ್ಸೆ 4:​10, 11) ನೀವು ಎಲ್ಲಿಗೆ ಸ್ಥಳಾಂತರಿಸಲು ಯೋಚಿಸುತ್ತಿದ್ದೀರೊ ಆ ದೇಶದಲ್ಲಿ ಎಷ್ಟೊಂದು ಅಗತ್ಯವಿದೆ ಎಂಬದನ್ನು ಕಂಡುಹಿಡಿಯಲು, ಆ ಕ್ಷೇತ್ರದಲ್ಲಿ ಸಾರುವ ಕೆಲಸದ ಉಸ್ತುವಾರಿಯನ್ನು ನೋಡಿಕೊಳ್ಳುತ್ತಿರುವ ಯೆಹೋವನ ಸಾಕ್ಷಿಗಳ ಬ್ರಾಂಚ್‌ ಆಫೀಸಿಗೆ ಬರೆದು ವಿಚಾರಿಸುವುದು ಸೂಕ್ತ. *

20. ಒಬ್ಬ ಯುವ ಕ್ರೈಸ್ತನು ವಿದೇಶವೊಂದರಲ್ಲಿ ಜೊತೆ ವಿಶ್ವಾಸಿಗಳು ಹಾಗೂ ಇತರರ ಪ್ರಯೋಜನಕ್ಕಾಗಿ ತನ್ನನ್ನೇ ಹೇಗೆ ನೀಡಿಕೊಂಡಿದ್ದಾನೆ?

20 ಜಪಾನಿನಲ್ಲಿ ರಾಜ್ಯ ಸಭಾಗೃಹಗಳ ನಿರ್ಮಾಣದಲ್ಲಿ ಒಳಗೂಡಿರುವ ಕ್ರೈಸ್ತನೊಬ್ಬನಿಗೆ, ಪ್ಯಾರಗ್ವೇಯಲ್ಲಿ ಒಂದು ಆರಾಧನಾ ಸ್ಥಳವನ್ನು ಕಟ್ಟಲಿಕ್ಕಾಗಿ ನಿಪುಣ ಕೆಲಸಗಾರರ ಅಗತ್ಯವಿದೆಯೆಂಬುದು ತಿಳಿದುಬಂತು. ಅವಿವಾಹಿತನೂ, ಯೌವನದ ಚೈತನ್ಯವುಳ್ಳವನೂ ಆಗಿದ್ದ ಅವನು ಆ ದೇಶಕ್ಕೆ ಸ್ಥಳಾಂತರಿಸಿದನು ಮತ್ತು ಆ ಕಾರ್ಯಯೋಜನೆಯಲ್ಲಿ ಏಕೈಕ ಪೂರ್ಣ ಸಮಯದ ಕಾರ್ಮಿಕನಾಗಿ ಎಂಟು ತಿಂಗಳುಗಳ ವರೆಗೆ ಕೆಲಸಮಾಡಿದನು. ಅವನು ಅಲ್ಲಿದ್ದ ಸಮಯದಲ್ಲಿ ಸ್ಪ್ಯಾನಿಷ್‌ ಭಾಷೆಯನ್ನು ಕಲಿತನು ಮತ್ತು ಗೃಹ ಬೈಬಲ್‌ ಅಧ್ಯಯನಗಳನ್ನು ನಡೆಸಿದನು. ಆ ದೇಶದಲ್ಲಿ ರಾಜ್ಯ ಘೋಷಕರ ಅಗತ್ಯವಿರುವುದನ್ನು ಅವನು ನೋಡಸಾಧ್ಯವಿತ್ತು. ಅವನು ಜಪಾನಿಗೆ ಹಿಂದಿರುಗಿ ಹೋದರೂ, ಬೇಗನೆ ಪುನಃ ಪ್ಯಾರಗ್ವೇಗೆ ಹಿಂದಿರುಗಿ, ಅದೇ ರಾಜ್ಯ ಸಭಾಗೃಹದಲ್ಲಿ ಜನರನ್ನು ಒಟ್ಟುಗೂಡಿಸುವ ಕೆಲಸದಲ್ಲಿ ಸಹಾಯಮಾಡಿದನು.

21. ನಾವು ಯೆಹೋವನ ಮಹಾ ದಿನಕ್ಕಾಗಿ ಕಾಯುತ್ತಿರುವಾಗ ನಮ್ಮ ಮುಖ್ಯ ಚಿಂತೆ ಮತ್ತು ದೃಷ್ಟಿಕೋನ ಏನಾಗಿರಬೇಕು?

21 ಸಾರುವ ಕೆಲಸವು ತನ್ನ ಚಿತ್ತಕ್ಕೆ ಹೊಂದಿಕೆಯಲ್ಲಿ ಪೂರ್ಣವಾಗಿ ನೆರವೇರಿಸಲ್ಪಡುವಂತೆ ದೇವರು ನೋಡಿಕೊಳ್ಳುವನು. ಇಂದು, ಆತನು ಆ ಕೊನೆಯ ಕೊಯ್ಲಿನ ಕೆಲಸವನ್ನು ತೀವ್ರಗೊಳಿಸುತ್ತಿದ್ದಾನೆ. (ಯೆಶಾಯ 60:22) ಹೀಗೆ ನಾವು ಯೆಹೋವನ ದಿನಕ್ಕಾಗಿ ಕಾಯುತ್ತಿರುವಾಗ, ಕೊಯ್ಲಿನ ಕೆಲಸದಲ್ಲಿ ಹುರುಪಿನಿಂದ ಪಾಲ್ಗೊಳ್ಳೋಣ ಮತ್ತು ನಮ್ಮ ಪ್ರೀತಿಯ ದೇವರಿಗೆ ಜನರ ಬಗ್ಗೆ ಇರುವಂಥ ದೃಷ್ಟಿಕೋನದಿಂದಲೇ ನಾವೂ ಅವರನ್ನು ನೋಡೋಣ.

[ಪಾದಟಿಪ್ಪಣಿಗಳು]

^ ಪ್ಯಾರ. 4 Taken from the HOLY BIBLE: Kannada EASY-TO-READ VERSION © 1997 by World Bible Translation Center, Inc. and used by permission.

^ ಪ್ಯಾರ. 19 ಸಾರುವ ಕೆಲಸವು ನಿಷೇಧಿಸಲ್ಪಟ್ಟಿರುವ ಇಲ್ಲವೆ ಪ್ರತಿಬಂಧಿಸಲ್ಪಟ್ಟಿರುವ ಒಂದು ದೇಶಕ್ಕೆ ನೀವು ಸ್ಥಳಾಂತರಿಸುವುದು ಯಾವಾಗಲೂ ಸಹಾಯಕಾರಿಯಾಗಿರಲಾರದು. ಹಾಗೆ ಮಾಡುವುದು, ಅಂಥ ಪರಿಸ್ಥಿತಿಗಳಲ್ಲಿ ವಿವೇಚನೆಯಿಂದ ಕೆಲಸಮಾಡುತ್ತಿರುವ ರಾಜ್ಯ ಪ್ರಚಾರಕರಿಗೆ ಹಾನಿಯನ್ನೂ ಬರಮಾಡಬಹುದು.

ನಿಮಗೆ ಜ್ಞಾಪಕವಿದೆಯೊ?

ನಾವು ಯೆಹೋವನ ದಿನಕ್ಕಾಗಿ ಕಾಯುತ್ತಾ ಇರುವಾಗ, ಜನರ ಬಗ್ಗೆ ನಮಗೆ ಯಾವ ದೃಷ್ಟಿಕೋನವಿರಬೇಕು?

ಸೊದೋಮಿನಲ್ಲಿ ಜೀವಿಸುತ್ತಿದ್ದಿರಬಹುದಾದ ನೀತಿವಂತರ ಬಗ್ಗೆ ಅಬ್ರಹಾಮನ ದೃಷ್ಟಿಕೋನವೇನಾಗಿತ್ತು?

ನಿನೆವೆಯ ಪಶ್ಚಾತ್ತಾಪಿ ಜನರ ಬಗ್ಗೆ ಯೋನನ ದೃಷ್ಟಿಕೋನವೇನಾಗಿತ್ತು?

ಸುವಾರ್ತೆಯನ್ನು ಈ ವರೆಗೂ ಕೇಳಿಸಿಕೊಂಡಿರದಂಥ ಜನರ ಬಗ್ಗೆ ಯೆಹೋವನಿಗಿರುವ ದೃಷ್ಟಿಕೋನವನ್ನೇ ನಾವು ಹೇಗೆ ತೋರಿಸಬಹುದು?

[ಅಧ್ಯಯನ ಪ್ರಶ್ನೆಗಳು]

[ಪುಟ 16ರಲ್ಲಿರುವ ಚಿತ್ರ]

ಜನರ ಬಗ್ಗೆ ಯೆಹೋವನಿಗಿದ್ದ ದೃಷ್ಟಿಕೋನವೇ ಅಬ್ರಹಾಮನಿಗಿತ್ತು

[ಪುಟ 17ರಲ್ಲಿರುವ ಚಿತ್ರ]

ಪಶ್ಚಾತ್ತಾಪಪಟ್ಟ ನಿನೆವೆಯರ ಕುರಿತಾಗಿ ಯೆಹೋವನಿಗಿದ್ದ ದೃಷ್ಟಿಕೋನವನ್ನು ಸಮಯಾನಂತರ ಯೋನನೂ ರೂಢಿಸಿಕೊಂಡನು

[ಪುಟ 18ರಲ್ಲಿರುವ ಚಿತ್ರಗಳು]

ಜನರಿಗಾಗಿರುವ ಚಿಂತೆಯು, ನಾವು ಬೇರೆ ಬೇರೆ ಸಮಯಗಳಲ್ಲಿ ಹಾಗೂ ವಿಧಗಳಲ್ಲಿ ಸುವಾರ್ತೆ ಸಾರುವುದನ್ನು ಪ್ರಯತ್ನಿಸುವಂತೆ ಪ್ರಚೋದಿಸುತ್ತದೆ