“ಇಬ್ಬರು ನಮ್ಮ ಮನೆಬಾಗಿಲನ್ನು ತಟ್ಟಿದರು”
“ಇಬ್ಬರು ನಮ್ಮ ಮನೆಬಾಗಿಲನ್ನು ತಟ್ಟಿದರು”
“ನಾವು ನಮ್ಮ ಮುದ್ದು ಮಗಳನ್ನು ಕಳೆದುಕೊಂಡ ಅಪಾರ ದುಃಖವನ್ನು ಅನುಭವಿಸಲು ಆರಂಭಿಸಿ ಈಗ ಎರಡು ವರ್ಷಗಳೇ ಸಂದಿವೆ.” ಹೀಗೆಂದು ಫ್ರಾನ್ಸ್‌ನ ಸೆಂಟ್ ಏಟ್ಯನ್‌ನಲ್ಲಿ ಪ್ರಕಾಶಿಸಲ್ಪಟ್ಟ ಲ ಪ್ರಾಗ್ರೆ ಎಂಬ ವಾರ್ತಾಪತ್ರಿಕೆಯಲ್ಲಿನ ಮುಕ್ತ ಪತ್ರವೊಂದು ಆರಂಭಗೊಳ್ಳುತ್ತದೆ.
“ಮೆಲೀಸಳು ಮೂರು ತಿಂಗಳ ಮಗುವಾಗಿದ್ದು, ಟ್ರೈಸೋಮೀ 18 ಎಂಬ ಗುರುತರ ಅಸ್ವಸ್ಥತೆಯಿಂದ ನರಳುತ್ತಿದ್ದಳು. ಇಷ್ಟೊಂದು ಅನ್ಯಾಯಭರಿತವಾಗಿ ತೋರುವಂತಹ ಈ ರೀತಿಯ ಒಂದು ದುರಂತದಿಂದ ಒಬ್ಬನು ಎಂದಿಗೂ ಪೂರ್ಣವಾಗಿ ಚೇತರಿಸಿಕೊಳ್ಳಲಾರನು. ನಾವು ಕ್ಯಾಥೊಲಿಕ್ ನಂಬಿಕೆಯಲ್ಲಿ ಬೆಳೆಸಲ್ಪಟ್ಟಿದ್ದೆವಾದರೂ, ‘ದೇವರೇ, ಒಂದುವೇಳೆ ನೀನು ಅಸ್ತಿತ್ವದಲ್ಲಿರುವುದಾದರೆ, ಇಂಥ ಘಟನೆಗಳು ನಡೆಯುವಂತೆ ಏಕೆ ಅನುಮತಿಸುತ್ತೀ?’ ಎಂಬ ಆಲೋಚನೆಯೇ ನಮ್ಮ ಮನಸ್ಸಿನಲ್ಲಿ ತುಂಬಿತ್ತು.” ಈ ಪತ್ರವನ್ನು ಬರೆದ ಆ ತಾಯಿಯು ತುಂಬ ಸಂಕಟವನ್ನು ಅನುಭವಿಸುತ್ತಿದ್ದಳು ಮತ್ತು ಅಸಹಾಯಕಳಾಗಿದ್ದಳು ಎಂಬುದಂತೂ ಸ್ಪಷ್ಟ. ಅವಳ ಪತ್ರವು ಹೀಗೆ ಮುಂದುವರಿಯುತ್ತದೆ:
“ಈ ಘಟನೆಗಳು ನಡೆದ ಸ್ವಲ್ಪ ಕಾಲಾನಂತರ, ಇಬ್ಬರು ನಮ್ಮ ಮನೆಬಾಗಿಲನ್ನು ತಟ್ಟಿದರು. ಅವರು ಯೆಹೋವನ ಸಾಕ್ಷಿಗಳಾಗಿದ್ದಾರೆಂಬುದನ್ನು ನಾನು ಆ ಕೂಡಲೆ ಮನಗಂಡೆ. ನಾನು ವಿನಯಭಾವದಿಂದ ಅವರನ್ನು ಹಿಂದೆ ಕಳುಹಿಸಿಬಿಡಲು ಸಿದ್ಧಳಾಗಿದ್ದೆನಾದರೂ, ಅಷ್ಟರಲ್ಲೇ ಅವರು ತೋರಿಸುತ್ತಿದ್ದ ಒಂದು ಬ್ರೋಷರ್ ನನ್ನ ಕಣ್ಣಿಗೆ ಬಿತ್ತು. ಅದು, ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ ಎಂಬುದರ ಕುರಿತಾಗಿತ್ತು. ಆದುದರಿಂದ, ಅವರ ವಿಚಾರಧಾರೆಗಳು ಸರಿಯಲ್ಲವೆಂದು ಸಮರ್ಥಿಸುವ ಉದ್ದೇಶದಿಂದ ನಾನು ಅವರನ್ನು ಮನೆಯೊಳಗೆ ಕರೆಯಲು ನಿರ್ಧರಿಸಿದೆ. ಕಷ್ಟಾನುಭವದ ವಿಷಯಕ್ಕೆ ಬರುವಾಗ, ನನ್ನ ಕುಟುಂಬವು ಈಗಾಗಲೇ ನಿಜವಾಗಿಯೂ ಅಗತ್ಯಕ್ಕಿಂತ ಹೆಚ್ಚು ಕಷ್ಟನಷ್ಟಗಳನ್ನು ಅನುಭವಿಸಿದೆ ಮತ್ತು ‘ದೇವರೇ ಅವಳನ್ನು ನಮಗೆ ಕೊಟ್ಟು, ದೇವರೇ ಅವಳನ್ನು ನಮ್ಮಿಂದ ಕಸಿದುಕೊಂಡನು’ ಎಂಬಂಥ ಮಾತುಗಳನ್ನು ಬೇಕಾದಷ್ಟು ಕೇಳಿಸಿಕೊಂಡಿದ್ದೇವೆ ಎಂದು ನಾನು ನೆನಸಿದೆ. ಆ ಸಾಕ್ಷಿಗಳು ಒಂದು ತಾಸಿಗಿಂತಲೂ ಹೆಚ್ಚು ಸಮಯದ ವರೆಗೆ ಇದ್ದರು. ಅವರು ತುಂಬ ಸಹಾನುಭೂತಿಯಿಂದ ನನ್ನ ಮಾತುಗಳಿಗೆ ಕಿವಿಗೊಟ್ಟರು, ಮತ್ತು ಅವರು ನಮ್ಮ ಮನೆಯಿಂದ ಹೊರಡುತ್ತಿದ್ದಾಗ, ನನಗೆ ಎಷ್ಟು ಹಾಯಾದ ಅನಿಸಿಕೆಯಾಯಿತೆಂದರೆ, ಅವರ ಇನ್ನೊಂದು ಭೇಟಿಗೆ ನಾನು ತಲೆಯಾಡಿಸಿದೆ. ಇದು ಸಂಭವಿಸಿ ಎರಡು ವರ್ಷಗಳೇ ಕಳೆದಿವೆ. ನಾನು ಇನ್ನೂ ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳಾಗಿ ಪರಿಣಮಿಸಿಲ್ಲವಾದರೂ, ಅವರೊಂದಿಗೆ ಬೈಬಲ್ ಅಧ್ಯಯನವನ್ನು ಮಾಡಲು ಆರಂಭಿಸಿದ್ದೇನೆ, ಮತ್ತು ನನ್ನಿಂದ ಸಾಧ್ಯವಾದಾಗಲೆಲ್ಲಾ ಅವರ ಕೂಟಗಳಿಗೆ ಹಾಜರಾಗುತ್ತೇನೆ.”