ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವನೇ ಸಂತೋಷಭರಿತನು
ಜೀವನ ಕಥೆ
ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವನೇ ಸಂತೋಷಭರಿತನು
ಟಾಮ್ ಡೀಡರ್ ಅವರು ಹೇಳಿದಂತೆ
ಸಮುದಾಯ ಭವನವು ಈಗಾಗಲೇ ಬಾಡಿಗೆಗೆ ತೆಗೆದುಕೊಳ್ಳಲ್ಪಟ್ಟಿತ್ತು. ಕೆನಡದ ಪಾರ್ಕ್ಯುಪೈನ್ ಪ್ಲೆಯ್‌ನ್ಸ್‌ನ ಸಸ್ಕ್ಯಾಚಿವಾನ್‌ನಲ್ಲಿ ನಡೆಯಲಿದ್ದ ಸಮ್ಮೇಳನಕ್ಕೆ ಸುಮಾರು 300 ಮಂದಿ ಬರಲಿಕ್ಕಿದ್ದರು. ಆದರೆ ಬುಧವಾರದಂದು ಹಿಮವು ಬೀಳಲು ಆರಂಭಿಸಿತು, ಮತ್ತು ಶುಕ್ರವಾರದಷ್ಟಕ್ಕೆ ದಟ್ಟವಾಗಿ ಮಂಜುಗರೆಯುವ ಬಿರುಗಾಳಿಯು ಬೀಸುತ್ತಲಿದ್ದು, ಕಣ್ಣುಹಾಯಿಸುವಷ್ಟು ಉದ್ದಕ್ಕೂ ಏನೂ ಕಾಣಿಸುತ್ತಿರಲಿಲ್ಲ. ತಾಪಮಾನವು -40°Cಗೆ ಇಳಿದಿತ್ತು. ಕೆಲವು ಮಕ್ಕಳನ್ನು ಒಳಗೊಂಡು ಇಪ್ಪತ್ತೆಂಟು ಮಂದಿ ಹಾಜರಿದ್ದರು. ಒಬ್ಬ ಹೊಸ ಸರ್ಕಿಟ್ ಮೇಲ್ವಿಚಾರಕನೋಪಾದಿ ಇದು ನನ್ನ ಪ್ರಥಮ ಸಮ್ಮೇಳನವಾಗಿತ್ತು, ಮತ್ತು ಆಗ ನಾನು ಕೇವಲ 25 ವರ್ಷ ಪ್ರಾಯದವನಾಗಿದ್ದು, ಭಯಮಿಶ್ರಿತ ಅನಿಸಿಕೆಯೊಂದಿಗೆ ಅಲ್ಲಿದ್ದೆ. ಅಲ್ಲಿ ಏನು ಸಂಭವಿಸಿತು ಎಂಬುದನ್ನು ನಿಮಗೆ ತಿಳಿಸುವುದಕ್ಕೆ ಮೊದಲು, ಈ ವಿಶೇಷ ಸೇವಾ ಸುಯೋಗವು ನನಗೆ ಹೇಗೆ ಸಿಕ್ಕಿತು ಎಂಬುದರ ಕುರಿತು ಸ್ವಲ್ಪ ಹಿನ್ನೆಲೆಯನ್ನು ತಿಳಿಸಲು ಬಯಸುತ್ತೇನೆ.
ನ ನ್ನ ಒಡಹುಟ್ಟಿದ ಎಂಟುಮಂದಿ ಹುಡುಗರಲ್ಲಿ ನಾನು ಏಳನೆಯವನಾಗಿದ್ದೆ. ಹಿರಿಯವನು ಬಿಲ್, ಅವನ ನಂತರ ಮೆಟ್ರೋ, ಜಾನ್, ಫ್ರೆಡ್, ಮೈಕ್, ಮತ್ತು ಅಲೆಕ್ಸ್. ನಾನು 1925ರಲ್ಲಿ ಜನಿಸಿದೆ ಮತ್ತು ವಾಲೀ ಎಂಬುವವನೇ ಕಿರಿಯವನು. ಮ್ಯಾನಿಟೊಬಾ ಪ್ರಾಂತದ ಊಕ್ರೇನ ಎಂಬ ಪಟ್ಟಣದ ಬಳಿ ನಾವು ವಾಸಿಸುತ್ತಿದ್ದೆವು. ನನ್ನ ಹೆತ್ತವರಾಗಿದ್ದ ಮೈಕಲ್ ಹಾಗೂ ಆ್ಯನ ಡೀಡರ್‌ರಿಗೆ ಅಲ್ಲಿ ಒಂದು ಚಿಕ್ಕ ಫಾರ್ಮ್ ಇತ್ತು. ತಂದೆಯವರು ರೈಲ್ವೇ ಇಲಾಖೆಯಲ್ಲಿ ಸೆಕ್ಷನ್ ಮ್ಯಾನ್ ಆಗಿ ಕೆಲಸಮಾಡುತ್ತಿದ್ದರು. ಪಟ್ಟಣದಿಂದ ಬಹಳ ದೂರದಲ್ಲಿದ್ದ ಬಂಕ್‌ಹೌಸ್ (ಅಟ್ಟವಿರುವ ಚಿಕ್ಕ ಮನೆ)ನಲ್ಲಿ ಒಂದು ದೊಡ್ಡ ಕುಟುಂಬವನ್ನು ಬೆಳೆಸುವುದು ಅನುಕೂಲಕರವಾಗಿ ಇರಲಿಲ್ಲವಾದ್ದರಿಂದ, ನಾವು ಫಾರ್ಮ್‌ನಲ್ಲೇ ವಾಸಿಸುತ್ತಿದ್ದೆವು. ತಂದೆಯವರು ಹೆಚ್ಚಾಗಿ ಮನೆಯಿಂದ ದೂರವೇ ಇರುತ್ತಿದ್ದರು, ಆದುದರಿಂದ ತಾಯಿಯವರು ನಮ್ಮನ್ನು ಬೆಳೆಸುವ ಜವಾಬ್ದಾರಿಯನ್ನು ಹೊತ್ತಿದ್ದರು. ಅವರು ಆಗಿಂದಾಗ್ಗೆ ಒಂದು ವಾರವೋ ಅಥವಾ ಹೆಚ್ಚು ದಿನಗಳ ವರೆಗೋ ತಂದೆಯೊಂದಿಗೆ ಇರಲಿಕ್ಕಾಗಿ ಹೋಗಿಬಿಡುತ್ತಿದ್ದರು. ಆದರೆ ಅವರು ಅಡಿಗೆಮಾಡುವುದನ್ನು, ಬೇಕ್‌ಮಾಡುವುದನ್ನು ಹಾಗೂ ಇನ್ನಿತರ ಗೃಹಕೃತ್ಯಗಳನ್ನು ನಮಗೆ ಕಲಿಸಿದ್ದರು. ಮತ್ತು
ನಾವು ಗ್ರೀಕ್ ಕ್ಯಾಥೊಲಿಕ್ ಚರ್ಚಿನ ಸದಸ್ಯರಾಗಿದ್ದುದರಿಂದ, ತಾಯಿಯಿಂದ ನಮಗೆ ಕೊಡಲ್ಪಟ್ಟ ನಮ್ಮ ಆರಂಭದ ತರಬೇತಿಯಲ್ಲಿ, ಪ್ರಾರ್ಥನೆಗಳನ್ನು ಬಾಯಿಪಾಠಮಾಡುವುದು ಮತ್ತು ಇನ್ನಿತರ ಮತಸಂಸ್ಕಾರಗಳಲ್ಲಿ ಭಾಗವಹಿಸುವುದೂ ಒಳಗೂಡಿತ್ತು.ಬೈಬಲ್ ಸತ್ಯದೊಂದಿಗೆ ಸಂಪರ್ಕ
ಬೈಬಲನ್ನು ಅರ್ಥಮಾಡಿಕೊಳ್ಳಬೇಕೆಂಬ ನನ್ನ ಹಂಬಲವು, ಯುವಪ್ರಾಯದಲ್ಲೇ ಆರಂಭವಾಗಿತ್ತು. ಯೆಹೋವನ ಸಾಕ್ಷಿಗಳಲ್ಲಿ ಒಬ್ಬನಾಗಿದ್ದ ನಮ್ಮ ನೆರೆಯವನು, ನಮ್ಮ ಕುಟುಂಬವನ್ನು ಕ್ರಮವಾಗಿ ಸಂದರ್ಶಿಸಿ, ದೇವರ ರಾಜ್ಯ, ಅರ್ಮಗೆದೋನ್, ಮತ್ತು ಹೊಸ ಲೋಕದ ಆಶೀರ್ವಾದಗಳಿಗೆ ಸಂಬಂಧಿಸಿದ ವಿಷಯಗಳನ್ನು ಬೈಬಲಿನ ಕೆಲವು ಭಾಗಗಳಿಂದ ಓದಿಹೇಳುತ್ತಿದ್ದನು. ಅವನು ಏನು ಹೇಳುತ್ತಿದ್ದನೋ ಅದರಲ್ಲಿ ತಾಯಿಯವರಿಗೆ ಕಿಂಚಿತ್ತೂ ಆಸಕ್ತಿಯಿರಲಿಲ್ಲವಾದರೂ, ಮೈಕ್ ಮತ್ತು ಅಲೆಕ್ಸ್‌ಗೆ ಈ ಸಂದೇಶವು ತುಂಬ ಇಷ್ಟವಾಯಿತು. ವಾಸ್ತವದಲ್ಲಿ, ಅವರು ಏನನ್ನು ಕಲಿತರೋ ಅದು, ಎರಡನೆಯ ಲೋಕ ಯುದ್ಧದ ಸಮಯದಲ್ಲಿ ಮನಸ್ಸಾಕ್ಷಿಯ ಕಾರಣ ಮಿಲಿಟರಿ ಸೇವೆಗೆ ಸೇರಲು ನಿರಾಕರಿಸುವಂತೆ ಅವರನ್ನು ಪ್ರಚೋದಿಸಿತು. ಇದರ ಪರಿಣಾಮವಾಗಿ ಮೈಕ್‌ಗೆ ಅಲ್ಪ ಕಾಲಾವಧಿಯ ಸೆರೆಮನೆ ಶಿಕ್ಷೆಯನ್ನು ವಿಧಿಸಲಾಯಿತು, ಆದರೆ ಅಲೆಕ್ಸ್‌ನನ್ನು ಆಂಟೇರಿಯೊದಲ್ಲಿನ ಕಾರ್ಮಿಕ ಶಿಬಿರಕ್ಕೆ ಕಳುಹಿಸಲಾಯಿತು. ಸಕಾಲದಲ್ಲಿ, ಫ್ರೆಡ್ ಮತ್ತು ವಾಲೀ ಸಹ ಸತ್ಯವನ್ನು ಸ್ವೀಕರಿಸಿದರು. ನನ್ನ ಮೂವರು ಹಿರಿಯ ಅಣ್ಣಂದಿರು ಮಾತ್ರ ಸತ್ಯವನ್ನು ಸ್ವೀಕರಿಸಲಿಲ್ಲ. ಅನೇಕ ವರ್ಷಗಳ ವರೆಗೆ ತಾಯಿಯವರು ಸಹ ಸತ್ಯವನ್ನು ವಿರೋಧಿಸುತ್ತಿದ್ದರಾದರೂ, ಸಮಯಾನಂತರ ಯೆಹೋವನಿಗೋಸ್ಕರ ದೃಢನಿಲುವನ್ನು ತೆಗೆದುಕೊಳ್ಳುವ ಮೂಲಕ ನಮ್ಮೆಲ್ಲರನ್ನೂ ಆಶ್ಚರ್ಯಗೊಳಿಸಿದರು. ಅವರು 83ರ ಪ್ರಾಯದಲ್ಲಿ ದೀಕ್ಷಾಸ್ನಾನವನ್ನು ಪಡೆದುಕೊಂಡರು. ತಾಯಿಯವರು ತೀರಿಕೊಂಡಾಗ ಅವರಿಗೆ 96 ವರ್ಷವಾಗಿತ್ತು. ತಂದೆಯವರು ಸಹ ಸಾಯುವ ಮುಂಚೆ ಸತ್ಯದ ಕಡೆಗೆ ಸಕಾರಾತ್ಮಕ ಮನೋಭಾವವನ್ನು ತೋರಿಸಿದ್ದರು.
ಹದಿನೇಳರ ಪ್ರಾಯದಲ್ಲಿ ನಾನು, ಕೆಲಸವನ್ನು ಹುಡುಕಲಿಕ್ಕಾಗಿ ಮತ್ತು ಬೈಬಲ್ ಅಧ್ಯಯನಮಾಡುವಂತೆ ನನಗೆ ಸಹಾಯಮಾಡಸಾಧ್ಯವಿದ್ದ ಜನರೊಂದಿಗೆ ಸಹವಾಸಿಸಲಿಕ್ಕಾಗಿ ವಿನಿಪೆಗ್‌ಗೆ ಪ್ರಯಾಣಿಸಿದೆ. ಆ ಸಮಯದಲ್ಲಿ ಯೆಹೋವನ ಸಾಕ್ಷಿಗಳ ಕೆಲಸದ ಮೇಲೆ ನಿಷೇಧ ಹಾಕಲಾಗಿತ್ತಾದರೂ, ಕೂಟಗಳು ಮಾತ್ರ ಕ್ರಮವಾಗಿ ನಡೆಸಲ್ಪಡುತ್ತಿದ್ದವು. ನಾನು ಹಾಜರಾದ ಪ್ರಥಮ ಕೂಟವು ಒಂದು ಖಾಸಗಿ ಮನೆಯಲ್ಲಾಗಿತ್ತು. ಚಿಕ್ಕಂದಿನಿಂದಲೂ ನಾನು ಗ್ರೀಕ್ ಕ್ಯಾಥೊಲಿಕ್ ನಂಬಿಕೆಗನುಸಾರ ಬೆಳೆಸಲ್ಪಟ್ಟಿದ್ದೆನಾದ್ದರಿಂದ, ಮೊದಮೊದಲು ನಾನು ಕೇಳಿಸಿಕೊಂಡ ವಿಷಯಗಳು ನನಗೆ ವಿಚಿತ್ರವಾಗಿ ತೋರಿದವು. ಆದರೂ, ಪಾದ್ರಿ-ಲೌಕಿಕ ಏರ್ಪಾಡು ಏಕೆ ಅಶಾಸ್ತ್ರೀಯವಾಗಿದೆ ಮತ್ತು ಪಾದ್ರಿಗಳು ಯುದ್ಧದ ಪ್ರಯತ್ನಗಳನ್ನು ಆಶೀರ್ವದಿಸಿದ್ದನ್ನು ದೇವರು ಏಕೆ ಅನುಮೋದಿಸಲಿಲ್ಲ ಎಂಬುದನ್ನು ನಾನು ಕಾಲಕ್ರಮೇಣ ಅರ್ಥಮಾಡಿಕೊಂಡೆ. (ಯೆಶಾಯ 2:4; ಮತ್ತಾಯ 23:8-10; ರೋಮಾಪುರ 12:17, 18) ಸದಾಕಾಲಕ್ಕೂ ದೂರದಲ್ಲಿರುವ ಬೇರೊಂದು ಸ್ಥಳಕ್ಕೆ ಹೋಗುವುದಕ್ಕೆ ಬದಲಾಗಿ, ಭೂಪರದೈಸಿನಲ್ಲಿ ಜೀವಿಸುವುದು ನನಗೆ ಹೆಚ್ಚೆಚ್ಚು ಪ್ರಾಯೋಗಿಕವಾದದ್ದಾಗಿಯೂ ಸಮಂಜಸವಾದದ್ದಾಗಿಯೂ ತೋರಿತು.
ಇದೇ ಸತ್ಯವೆಂದು ನನಗೆ ಮನದಟ್ಟಾದ್ದರಿಂದ, ನಾನು ನನ್ನನ್ನು ಯೆಹೋವನಿಗೆ ಸಮರ್ಪಿಸಿಕೊಂಡೆ ಮತ್ತು 1942ರಲ್ಲಿ ವಿನಿಪೆಗ್‌ನಲ್ಲಿ ದೀಕ್ಷಾಸ್ನಾನ ಪಡೆದುಕೊಂಡೆ. 1943ರಷ್ಟಕ್ಕೆ ಕೆನಡದಲ್ಲಿ ಯೆಹೋವನ ಸಾಕ್ಷಿಗಳ ಮೇಲಿದ್ದ ನಿಷೇಧವನ್ನು ತೆಗೆದುಹಾಕಲಾಯಿತು, ಮತ್ತು ಸಾರುವ ಕೆಲಸವು ಪುನಃ ರಭಸವಾಗಿ ಮುಂದುವರಿಯಿತು. ಬೈಬಲ್ ಸತ್ಯವು ಸಹ ನನ್ನ ಹೃದಯದ ಮೇಲೆ ಆಳವಾದ ಪ್ರಭಾವವನ್ನು ಬೀರುತ್ತಲಿತ್ತು. ಸಭೆಯಲ್ಲಿ ಒಬ್ಬ ಹಿರಿಯನಾಗಿ ಸೇವೆಮಾಡುವ ಹಾಗೂ ಸಾರ್ವಜನಿಕ ಭಾಷಣಗಳನ್ನು ನೀಡುವ ಮತ್ತು ನೇಮಿಸಲ್ಪಟ್ಟಿರದಂಥ ಟೆರಿಟೊರಿಯಲ್ಲಿ ಸಾಕ್ಷಿನೀಡುವ ಸುಯೋಗವೂ ನನಗೆ ಸಿಕ್ಕಿತು. ಅಮೆರಿಕದಲ್ಲಿನ ದೊಡ್ಡ ಅಧಿವೇಶನಗಳಿಗೆ ಹಾಜರಾಗುವುದು ಸಹ ನನ್ನ ಆತ್ಮಿಕ ಮುನ್ನಡೆಗೆ ಅತ್ಯಧಿಕವಾಗಿ ಒತ್ತಾಸೆನೀಡಿತು.
ಯೆಹೋವನಿಗೆ ನನ್ನ ಸೇವೆಯನ್ನು ಇನ್ನಷ್ಟು ವಿಸ್ತರಿಸುವುದು
ಇಸವಿ 1950ರಲ್ಲಿ ನಾನು ಒಬ್ಬ ಪಯನೀಯರ್ ಶುಶ್ರೂಷಕನಾಗಿ ಹೆಸರನ್ನು ನಮೂದಿಸಿಕೊಂಡೆ, ಮತ್ತು ಅದೇ ವರ್ಷದ ಡಿಸೆಂಬರ್ ತಿಂಗಳಿನಲ್ಲಿ ನಾನು ಒಬ್ಬ ಸರ್ಕಿಟ್ ಮೇಲ್ವಿಚಾರಕನಾಗಿ ಸೇವೆಮಾಡುವಂತೆ ಆಮಂತ್ರಿಸಲ್ಪಟ್ಟೆ. ಟೊರಾಂಟೊದ ಬಳಿಯ ಸರ್ಕಿಟ್‌ವೊಂದರಲ್ಲಿ, ಒಬ್ಬ ಅನುಭವಸ್ಥ ಹಾಗೂ ನಿಷ್ಠಾವಂತ ಸಹೋದರರಾಗಿದ್ದ ಚಾರ್ಲಿ ಹೆಪ್‌ವರ್ಥ್‌ರಿಂದ ತರಬೇತಿಯನ್ನು ಪಡೆದುಕೊಳ್ಳುವ ಸುಯೋಗ ನನಗೆ ಸಿಕ್ಕಿತು. ನನ್ನ ತರಬೇತಿಯ ಅಂತಿಮ ವಾರವನ್ನು, ಈಗಾಗಲೇ ವಿನಿಪೆಗ್‌ನಲ್ಲಿ ಸರ್ಕಿಟ್ ಕೆಲಸದಲ್ಲಿದ್ದ ನನ್ನ ಅಣ್ಣನಾದ ಅಲೆಕ್ಸ್‌ನೊಂದಿಗೆ ಕಳೆಯುವ ಆನಂದವೂ ನನಗೆ ಲಭಿಸಿತ್ತು.
ಈ ಲೇಖನದ ಆರಂಭದಲ್ಲಿ ವರ್ಣಿಸಲ್ಪಟ್ಟಂತೆ, ನನ್ನ ಪ್ರಪ್ರಥಮ ಸರ್ಕಿಟ್ ಸಮ್ಮೇಳನವು ನನ್ನ ನೆನಪಿನಲ್ಲಿ ಅಚ್ಚಳಿಯದೆ ಉಳಿದಿದೆ. ಅದರ ಪರಿಣಾಮದ ಕುರಿತು ನಾನು ಸಹಜವಾಗಿಯೇ ಚಿಂತಿತನಾಗಿದ್ದೆ. ನಮ್ಮ ಜಿಲ್ಲಾ ಮೇಲ್ವಿಚಾರಕರಾದ ಸಹೋದರ ಜ್ಯಾಕ್ ನೇಥನ್‌ರವರು ನಮ್ಮನ್ನು ಬೇರೆ ಬೇರೆ ಚಟುವಟಿಕೆಗಳಲ್ಲಿ ಒಳಗೂಡಿಸಿದರು ಮತ್ತು ನಾವು ಸಂತೋಷದಿಂದಿರುವಂತೆ ನೋಡಿಕೊಂಡರು. ಹಾಜರಿದ್ದ ಸಹಭಾಗಿಗಳೊಂದಿಗೆ ನಾವು ಸಮ್ಮೇಳನದ ಕಾರ್ಯಕ್ರಮವನ್ನು ಸಾರಾಂಶಿಸಿದೆವು. ನಾವು ಒಬ್ಬರಾದ ಮೇಲೆ ಇನ್ನೊಬ್ಬರು ಅನುಭವಗಳನ್ನು ಹೇಳುತ್ತಿದ್ದೆವು, ಮನೆಯಿಂದ ಮನೆಯ ನಿರೂಪಣೆಗಳನ್ನು ಪ್ರ್ಯಾಕ್ಟೀಸ್ ಮಾಡುತ್ತಿದ್ದೆವು, ಪುನರ್ಭೇಟಿಗಳನ್ನು ಹೇಗೆ ಮಾಡುವುದು ಎಂಬುದನ್ನು ಹೇಳುತ್ತಿದ್ದೆವು, ಮತ್ತು ಮನೆ ಬೈಬಲ್ ಅಧ್ಯಯನಗಳನ್ನು ಹೇಗೆ ನಡೆಸುವುದು ಎಂಬುದನ್ನು ಪ್ರತ್ಯಕ್ಷಾಭಿನಯಿಸುತ್ತಿದ್ದೆವು. ನಾವು ರಾಜ್ಯ ಗೀತೆಗಳನ್ನು ಸಹ ಹಾಡಿದೆವು. ಅಲ್ಲಿ ಬೇಕಾದಷ್ಟು ಆಹಾರವೂ ಲಭ್ಯಗೊಳಿಸಲ್ಪಟ್ಟಿತ್ತು. ಹೆಚ್ಚುಕಡಿಮೆ ಪ್ರತಿ ಎರಡು ತಾಸಿಗೆ ಒಂದು ಸಲ ಕಾಫಿ ಮತ್ತು ಕಡುಬನ್ನು ಸೇವಿಸುತ್ತಿದ್ದೆವು. ಕೆಲವರು ಬೆಂಚುಗಳ ಮೇಲೆಯೂ ಇನ್ನಿತರರು ವೇದಿಕೆಯ ಮೇಲೆಯೂ ಅನೇಕರು ನೆಲದ ಮೇಲೆಯೂ ಮಲಗಿದರು. ಭಾನುವಾರದಷ್ಟಕ್ಕೆ
ಹಿಮಗಾಳಿಯು ಸ್ವಲ್ಪಮಟ್ಟಿಗೆ ಕಡಿಮೆಯಾದ್ದರಿಂದ, ಬಹಿರಂಗ ಭಾಷಣಕ್ಕೆ ಸುಮಾರು 96 ಪ್ರತಿಶತದಷ್ಟು ಜನರು ಹಾಜರಿದ್ದರು. ಪ್ರತಿಕೂಲ ಸನ್ನಿವೇಶಗಳನ್ನು ಹೇಗೆ ನಿಭಾಯಿಸುವುದು ಎಂಬುದನ್ನು ಈ ಅನುಭವವು ನನಗೆ ಕಲಿಸಿತು.ನನ್ನ ಮುಂದಿನ ಸರ್ಕಿಟ್ ನೇಮಕವು ನನ್ನನ್ನು ಉತ್ತರ ಆ್ಯಲ್ಬರ್ಟ, ಬ್ರಿಟಿಷ್ ಕೊಲಂಬಿಯ, ಮತ್ತು ನಡುರಾತ್ರಿ ಸೂರ್ಯನ ಪ್ರದೇಶವಾಗಿದ್ದ ಯೂಕಾನ್ ಟೆರಿಟೊರಿಗೆ ಕರೆದೊಯ್ದಿತು. ಬ್ರಿಟಿಷ್ ಕೊಲಂಬಿಯದ ಡಾಸನ್ ಕ್ರೀಕ್‌ನಿಂದ ಯೂಕಾನ್ (ಸುಮಾರು 1,477 ಕಿಲೊಮೀಟರುಗಳಷ್ಟು ಅಂತರ)ನ ವೈಟ್‌ಹಾರ್ಸ್ ವರೆಗಿನ ಒರಟೊರಟಾದ ಅಲಾಸ್ಕ ಹೈವೇಯಲ್ಲಿ ಪ್ರಯಾಣಿಸುವುದು, ಮತ್ತು ದಾರಿಯುದ್ದಕ್ಕೂ ಸಾಕ್ಷಿ ನೀಡುತ್ತಾ ಮುಂದುವರಿಯುವುದು ತಾಳ್ಮೆ ಮತ್ತು ಎಚ್ಚರಿಕೆಯನ್ನು ಅಗತ್ಯಪಡಿಸಿತು. ಹಿಮಕುಸಿತ, ಪರ್ವತದ ಜಾರುವ ಇಳುಕಲು ಪ್ರದೇಶಗಳು ಮತ್ತು ಹಿಮಗಾಳಿಯ ಕಾರಣದಿಂದ ಕಣ್ಣಿಗೆ ಎಲ್ಲವೂ ಅಸ್ಪಷ್ಟವಾಗಿ ಕಾಣಿಸುವಂಥ ಸಮಸ್ಯೆಗಳು ನೈಜ ಪಂಥಾಹ್ವಾನವಾಗಿದ್ದವು.
ಸತ್ಯವು ದೂರದ ಉತ್ತರ ನಾಡುಗಳನ್ನು ಹೇಗೆ ಭೇದಿಸಿಕೊಂಡು ಹೋಗಿದೆಯೆಂಬುದನ್ನು ನೋಡಿ ನಾನು ಆಶ್ಚರ್ಯಚಕಿತನಾದೆ. ಒಂದು ಸಂದರ್ಭದಲ್ಲಿ, ನಾನು ಮತ್ತು ವಾಲ್ಟರ್ ಲೂಕಾವಿಟ್ಸ್ ಇಬ್ಬರೂ, ಯೂಕಾನ್ ಟೆರಿಟೊರಿಯ ಗಡಿಯ ಬಳಿಯಲ್ಲಿದ್ದ ಅಲಾಸ್ಕ ಹೈವೇಯ ಉದ್ದಕ್ಕೂ, ಬ್ರಿಟಿಷ್ ಕೊಲಂಬಿಯದ ಲೋವರ್ ಪೋಸ್ಟ್ ಹಳ್ಳಿಗೆ ಸಮೀಪದಲ್ಲಿದ್ದ ಒಂದು ಚಿಕ್ಕ ಸಾಮಾನ್ಯ ರೀತಿಯ ಕ್ಯಾಬಿನ್ ಬಳಿ ಹೋದೆವು. ಆ ಕ್ಯಾಬಿನ್‌ನಲ್ಲಿ ಯಾರೋ ವಾಸವಾಗಿದ್ದಾರೆಂಬುದು ನಮಗೆ ಗೊತ್ತಿತ್ತು, ಏಕೆಂದರೆ ಒಂದು ಚಿಕ್ಕ ಕಿಟಕಿಯ ಮೂಲಕ ಬೆಳಕಿನ ಮಿಣುಕನ್ನು ನಾವು ನೋಡಸಾಧ್ಯವಿತ್ತು. ಆಗ ರಾತ್ರಿ ಒಂಬತ್ತು ಗಂಟೆಯಾಗಿತ್ತು, ಮತ್ತು ನಾವು ಆ ಕ್ಯಾಬಿನ್‌ನ ಬಾಗಿಲನ್ನು ತಟ್ಟಿದೆವು. ಒಳಗೆ ಬನ್ನಿ ಎಂದು ಗಟ್ಟಿಯಾಗಿ ಹೇಳಿದಂಥ ಒಂದು ಪುರುಷ ಧ್ವನಿಯು ನಮಗೆ ಕೇಳಿಸಿತು, ಆದುದರಿಂದ ನಾವು ಒಳಗೆ ಪ್ರವೇಶಿಸಿದೆವು. ಒಬ್ಬ ಮುದುಕನು ತನ್ನ ಬಂಕ್‌ಬೆಡ್ (ಅಟ್ಟದ ಮಂಚ)ನ ಮೇಲೆ ಮಲಗಿಕೊಂಡು ಕಾವಲಿನಬುರುಜು ಪತ್ರಿಕೆಯನ್ನು ಓದುತ್ತಿರುವುದನ್ನು ನೋಡಿ ನಮಗೆಷ್ಟು ಆಶ್ಚರ್ಯವಾಯಿತು! ವಾಸ್ತವದಲ್ಲಿ, ನಾವು ನೀಡುತ್ತಿದ್ದಂಥ ಸಂಚಿಕೆಗಿಂತಲೂ ಹೆಚ್ಚು ಇತ್ತೀಚಿನ ಒಂದು ಸಂಚಿಕೆಯು ಅವನ ಬಳಿಯಿತ್ತು. ತಾನು ಏರ್‌ಮೇಲ್ (ವಿಮಾನ ಟಪಾಲು)ನ ಮೂಲಕ ಪತ್ರಿಕೆಯನ್ನು ಪಡೆದುಕೊಂಡೆ ಎಂದು ಅವನು ವಿವರಿಸಿದನು. ಇಷ್ಟರಲ್ಲಾಗಲೇ ನಾವು ಸಭೆಯಿಂದ ದೂರ ಉಳಿದು ಎಂಟಕ್ಕಿಂತಲೂ ಹೆಚ್ಚು ದಿನಗಳಾಗಿದ್ದರಿಂದ, ನಮ್ಮ ಬಳಿ ಇತ್ತೀಚಿನ ಪತ್ರಿಕೆಗಳು ಇರಲಿಲ್ಲ. ನನ್ನ ಹೆಸರು ಫ್ರೆಡ್ ಬರ್ಗ್ ಎಂದು ಆ ವ್ಯಕ್ತಿಯು ತನ್ನನ್ನು ಪರಿಚಯಿಸಿಕೊಂಡನು, ಮತ್ತು ಅನೇಕ ವರ್ಷಗಳಿಂದ ಅವನು ಈ ಪತ್ರಿಕೆಗಳ ಚಂದಾದಾರನಾಗಿದ್ದನಾದರೂ, ಯೆಹೋವನ ಸಾಕ್ಷಿಗಳು ಅವನನ್ನು ಭೇಟಿಯಾದದ್ದು ಇದೇ ಪ್ರಥಮ ಬಾರಿಯಾಗಿತ್ತು. ಫ್ರೆಡ್ ಆ ರಾತ್ರಿ ನಮ್ಮನ್ನು ತನ್ನ ಬಳಿಯೇ ಉಳಿಸಿಕೊಂಡನು. ನಾವು ಅವನೊಂದಿಗೆ ಅನೇಕ ಶಾಸ್ತ್ರೀಯ ಸತ್ಯತೆಗಳನ್ನು ಹಂಚಿಕೊಳ್ಳಶಕ್ತರಾದೆವು ಮತ್ತು ಅವನನ್ನು ಭೇಟಿಯಾಗಲಿಕ್ಕಾಗಿ ಕ್ರಮವಾಗಿ ಆ ಕ್ಷೇತ್ರದ ಮೂಲಕ ಹಾದುಹೋಗುತ್ತಿದ್ದ ಇತರ ಸಾಕ್ಷಿಗಳು ಅಲ್ಲಿಗೆ ಹೋಗುವಂತೆ ಏರ್ಪಾಡನ್ನು ಮಾಡಿದೆವು.
ಅನೇಕ ವರ್ಷಗಳ ವರೆಗೆ ನಾನು ಮೂರು ಚಿಕ್ಕ ಸರ್ಕಿಟ್‌ಗಳಲ್ಲಿ ಸೇವೆಮಾಡಿದೆ. ಅದು ಪೂರ್ವದಲ್ಲಿ, ಆಲ್ಬರ್ಟದ ಗ್ರಾಂಡ್ ಪ್ರೇರಿಯಿಂದ ಪಶ್ಚಿಮದಲ್ಲಿ ಅಲಾಸ್ಕದ ಕೋಡೀಯ್ಯಾಕ್ ತನಕ ಹಬ್ಬಿದ್ದು 3,500 ಕಿಲೊಮೀಟರುಗಳಿಗಿಂತ ಹೆಚ್ಚು ಅಂತರವನ್ನು ಹೊಂದಿತ್ತು.
ಬೇರೆಲ್ಲಾ ಕಡೆಗಳಲ್ಲಿ ಇರುವಂತೆಯೇ ಗ್ರಾಮೀಣ ಸ್ಥಳಗಳಲ್ಲಿಯೂ ಯೆಹೋವನ ಅಪಾತ್ರ ಕೃಪೆಯು
ಎಲ್ಲಾ ಜನರಿಗಾಗಿದೆ ಮತ್ತು ನಿತ್ಯಜೀವಕ್ಕೆ ನೇಮಿಸಲ್ಪಟ್ಟಿರುವವರ ಹೃದಮನಗಳನ್ನು ದೇವರಾತ್ಮವು ಪ್ರಚೋದಿಸುತ್ತದೆ ಎಂಬುದನ್ನು ಕಂಡುಕೊಂಡಾಗ ನಾನು ಮಹದಾನಂದಪಟ್ಟೆ. ಅಂಥ ವ್ಯಕ್ತಿಗಳಲ್ಲಿ ಒಬ್ಬನು, ಈಗ ಡಾಸನ್ ಎಂದು ಕರೆಯಲ್ಪಡುವ ಯೂಕಾನ್‌ನ ಡಾಸನ್ ಸಿಟಿಯ ಹೆನ್ರಿ ಲಪೈನ್ ಆಗಿದ್ದರು. ಹೆನ್ರಿ ಬಹುದೂರದ ಪ್ರತ್ಯೇಕ ಕ್ಷೇತ್ರವೊಂದರಲ್ಲಿ ವಾಸಿಸುತ್ತಿದ್ದರು. ವಾಸ್ತವದಲ್ಲಿ, 60ಕ್ಕಿಂತಲೂ ಹೆಚ್ಚು ವರ್ಷಗಳಿಂದ ಅವರು ಎಂದೂ ಚಿನ್ನದ ಗಣಿಗಾರಿಕೆಯ ಕ್ಷೇತ್ರದಿಂದ ಹೊರಗೆಹೋಗಿರಲಿಲ್ಲ. ಆದರೂ, 84 ವರ್ಷ ಪ್ರಾಯದ ಈ ವೃದ್ಧರು, ಒಂದು ಸರ್ಕಿಟ್ ಸಮ್ಮೇಳನಕ್ಕೆ ಹಾಜರಾಗಲಿಕ್ಕಾಗಿ ಆ್ಯಂಕರೆಜ್‌ಗೆ ಬರೇ ಹೋಗಲಿಕ್ಕಾಗಿ 1,600 ಕಿಲೊಮೀಟರುಗಳಿಗಿಂತಲೂ ಹೆಚ್ಚು ದೂರ ಪ್ರಯಾಣಿಸುವಂತೆ ಯೆಹೋವನ ಆತ್ಮವು ಇವರನ್ನು ಪ್ರಚೋದಿಸಿತು; ಈ ಮುಂಚೆ ಇವರೆಂದೂ ಒಂದು ಸಭಾ ಕೂಟಕ್ಕೆ ಸಹ ಹಾಜರಾಗಿರಲಿಲ್ಲ. ಆ ಕಾರ್ಯಕ್ರಮವನ್ನು ನೋಡಿ ಇವರು ರೋಮಾಂಚಿತರಾದರು ಮತ್ತು ಅಲ್ಲಿನ ಸಹವಾಸದಲ್ಲಿ ಮಹದಾನಂದಿಸಿದರು. ಡಾಸನ್ ಸಿಟಿಗೆ ಹಿಂದಿರುಗಿದ ಬಳಿಕ ಹೆನ್ರಿಯವರು ತಮ್ಮ ಮರಣದ ವರೆಗೆ ನಂಬಿಗಸ್ತರಾಗಿ ಉಳಿದರು. ಇಷ್ಟು ದೀರ್ಘವಾದ ಪ್ರಯಾಣವನ್ನು ಮಾಡುವಂತೆ ಈ ವೃದ್ಧ ಮಹಾಶಯರನ್ನು ಯಾವುದು ಪ್ರಚೋದಿಸಿತು ಎಂದು ಅನೇಕರು ಕುತೂಹಲಪಟ್ಟರು. ಈ ಕುತೂಹಲವು, ಅನೇಕ ವೃದ್ಧರು ಸತ್ಯವನ್ನು ಸ್ವೀಕರಿಸುವಂತೆ ಮಾಡಿತು. ಹೀಗೆ, ಪರೋಕ್ಷವಾದ ರೀತಿಯಲ್ಲಿ ಹೆನ್ರಿಯವರು ಒಂದು ಅತ್ಯುತ್ತಮ ಸಾಕ್ಷಿಯನ್ನು ನೀಡಲು ಶಕ್ತರಾಗಿದ್ದರು.ಯೆಹೋವನ ಅಪಾತ್ರ ಕೃಪೆಯು ನನಗೆ ದೊರಕಿತು
ಇಸವಿ 1955ರಲ್ಲಿ, ವಾಚ್‌ಟವರ್ ಬೈಬಲ್ ಸ್ಕೂಲ್ ಆಫ್ ಗಿಲ್ಯಡ್‌ನ 26ನೆಯ ಕ್ಲಾಸ್‌ಗೆ ಹಾಜರಾಗುವ ಆಮಂತ್ರಣ ಪತ್ರವನ್ನು ಪಡೆದುಕೊಂಡಾಗ ನನಗೆ ಅಪಾರ ಆನಂದವಾಯಿತು. ಈ ತರಬೇತಿಯು ನನ್ನ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿತು ಮತ್ತು ನಾನು ಯೆಹೋವನಿಗೆ ಇನ್ನಷ್ಟು ಸಮೀಪವಾಗುವಂತೆ ಸಹಾಯಮಾಡಿತು. ಆ ಸ್ಕೂಲ್‌ನಿಂದ ಪದವಿಯನ್ನು ಪಡೆದುಕೊಂಡ ಬಳಿಕ, ಕೆನಡದಲ್ಲಿನ ಸರ್ಕಿಟ್ ಕೆಲಸದಲ್ಲೇ ಮುಂದುವರಿಯುವ ನೇಮಕವು ನನಗೆ ಸಿಕ್ಕಿತು.
ಸುಮಾರು ಒಂದು ವರ್ಷದ ವರೆಗೆ ನಾನು ಆಂಟೇರಿಯೋ ಪ್ರಾಂತದಲ್ಲಿ ಸೇವೆಮಾಡಿದೆ. ಆ ಬಳಿಕ ನನ್ನನ್ನು ಅತಿ ಸುಂದರವಾಗಿದ್ದ ಉತ್ತರ ನಾಡಿಗೆ ನೇಮಿಸಲಾಯಿತು. ಸ್ಪಷ್ಟವಾದ ಅಂಚುಗಳಿದ್ದ ಹೆದ್ದಾರಿಗಳು, ತಿಳಿಯಾಗಿ ಹೊಳೆಯುತ್ತಿದ್ದ ಸರೋವರಗಳು ಮತ್ತು ಹಿಮತುದಿಗಳನ್ನು ಹೊಂದಿದ್ದ ಪರ್ವತ ಶಿಖರಗಳ ಶ್ರೇಣಿಗಳಿಂದ ಕೂಡಿದ್ದ ನಯನಮನೋಹರ ದೃಶ್ಯವು ಈಗಲೂ ನನ್ನ ಕಣ್ಣ ಮುಂದಿದೆ. ಬೇಸಗೆಕಾಲದಲ್ಲಿ ಕಣಿವೆಗಳು ಮತ್ತು ಹುಲ್ಲುಗಾವಲುಗಳು, ವರ್ಣರಂಜಿತ ವನಪುಷ್ಪಗಳಿಂದ ರಚಿತವಾದ ಅಪೂರ್ವ ಸೌಂದರ್ಯರಾಶಿಯುಳ್ಳ ರತ್ನಗಂಬಳಿಯಂತೆ ಕಂಡುಬರುತ್ತವೆ. ಇಲ್ಲಿನ ಗಾಳಿಯು ತಾಜಾ ಇರುತ್ತದೆ ಮತ್ತು ನೀರು ಶುದ್ಧವಾಗಿರುತ್ತದೆ. ಇಲ್ಲಿನ ನೈಸರ್ಗಿಕ ಇರುನೆಲೆಗಳಲ್ಲಿ, ಕರಡಿಗಳು, ತೋಳಗಳು, ಕಡವೆಗಳು, ಹಿಮಸಾರಂಗಗಳು, ಹಾಗೂ ಇನ್ನಿತರ ಕಾಡುಪ್ರಾಣಿಗಳು ಯಾವುದೇ ಭಯವಿಲ್ಲದೆ ಸ್ವಚ್ಛಂದವಾಗಿ ಓಡಾಡುತ್ತಿರುತ್ತವೆ.
ಆದರೂ, ಅಲಾಸ್ಕವು ಅನೇಕ ಪಂಥಾಹ್ವಾನಗಳನ್ನು ತಂದೊಡ್ಡಿತು—ಕೇವಲ ಹವಾಮಾನದ ಪಂಥಾಹ್ವಾನವಲ್ಲ, ಬದಲಾಗಿ ದೂರ ದೂರದ ಅಂತರಗಳು ಸಹ ಇದರಲ್ಲಿ ಒಳಗೂಡಿದ್ದವು. ನನ್ನ ಸರ್ಕಿಟ್ ಪೂರ್ವದಿಂದ ಪಶ್ಚಿಮಕ್ಕೆ 3,200 ಕಿಲೊಮೀಟರುಗಳಷ್ಟು ವಿಸ್ತೃತವಾಗಿತ್ತು. ಆ ಕಾಲದಲ್ಲಿ ಸರ್ಕಿಟ್ ಮೇಲ್ವಿಚಾರಕರಿಗೆ ಕಾರ್‌ನ ಒದಗಿಸುವಿಕೆಯೂ ಇರಲಿಲ್ಲ. ಸ್ಥಳಿಕ ಸಹೋದರರು ಒಂದು ಸಭೆಯಿಂದ ಮುಂದಿನ ಸಭೆಯ ತನಕ ನನ್ನನ್ನು ತಮ್ಮ ವಾಹನದಲ್ಲಿ ಕರೆದೊಯ್ಯಲು ಮುಂದೆ ಬರುತ್ತಿದ್ದರು, ಆದರೂ ಕೆಲವೊಮ್ಮೆ ಟ್ರಕ್‌ನ ಚಾಲಕರು ಹಾಗೂ ಪ್ರವಾಸಿಗರ ಬಳಿ ವಿನಂತಿಸಿ ಅವರ ವಾಹನಗಳಲ್ಲಿ ಪ್ರಯಾಣಿಸುತ್ತಿದ್ದೆ.
ಅಂಥ ಘಟನಾವಳಿಯಲ್ಲಿ ಒಂದು, ಅಲಾಸ್ಕ ಹೈವೇಯ ಒಂದು ಭಾಗದಲ್ಲಿ, ಅಂದರೆ ಅಲಾಸ್ಕದ ಟೋಕ್ ಜಂಕ್ಷನ್ ಮತ್ತು ಮೈಲ್ 1202 ಅಥವಾ ಸ್ಕಾಟೀ ಕ್ರೀಕ್ ಕ್ಷೇತ್ರದ ನಡುವೆ ಸಂಭವಿಸಿತು. ಈ ಎರಡು ಕ್ಷೇತ್ರಗಳಲ್ಲಿದ್ದ ಕಸ್ಟಮ್ಸ್ ಆಫೀಸುಗಳ ನಡುವೆ 160 ಕಿಲೊಮೀಟರುಗಳ ಅಂತರವಿತ್ತು. ನಾನು ಟೋಕ್ ಜಂಕ್ಷನ್‌ನಲ್ಲಿದ್ದ ಅಮೆರಿಕದ ಕಸ್ಟಮ್ಸ್ ಆಫೀಸನ್ನು ಹಾದುಹೋಗಿ, ಅಲ್ಲಿಂದ ಸುಮಾರು 50 ಕಿಲೊಮೀಟರುಗಳ ವರೆಗೂ ಪ್ರಯಾಣಿಸಲಿಕ್ಕಾಗಿ ನನಗೆ ಕಾರ್ ಸಿಕ್ಕಿತು. ತದನಂತರ ಆ ದಾರಿಯಲ್ಲಿ ಯಾವುದೇ ಕಾರ್ ಬರಲಿಲ್ಲ, ಮತ್ತು ನಾನು ಸುಮಾರು ಹತ್ತು ತಾಸುಗಳ ವರೆಗೆ ನಡೆದು 40 ಕಿಲೊಮೀಟರುಗಳನ್ನು ಆವರಿಸಿದ್ದೆ. ಆದರೆ ನಾನು ಆ ಕಸ್ಟಮ್ಸ್ ಹಂತದಿಂದ ಹಾದುಹೋದ ಸ್ವಲ್ಪ ಸಮಯದ ಬಳಿಕ, ಕಸ್ಟಮ್ಸ್ ಕ್ರಾಸಿಂಗ್ ಪಾಯಿಂಟ್‌ನಿಂದ ಸ್ವಲ್ಪವೇ ದೂರದಲ್ಲಿ ಹಿಮಕುಸಿತವಾದ್ದರಿಂದ, ಹೆದ್ದಾರಿಯ ಈ ಭಾಗದಲ್ಲಿ ಎಲ್ಲಾ ಸಂಚಾರವು ಸ್ಥಗಿತಗೊಳಿಸಲ್ಪಟ್ಟಿತ್ತು ಎಂಬುದು ಸಮಯಾನಂತರ ನನಗೆ ಗೊತ್ತಾಯಿತು. ಮಧ್ಯರಾತ್ರಿಯಷ್ಟಕ್ಕೆ ತಾಪಮಾನವು -23°Cಗೆ ಇಳಿದಿತ್ತು, ಮತ್ತು ಅಲ್ಲಿಂದ ಅತಿ ಸಮೀಪವಿದ್ದ ವಸತಿಯನ್ನು ತಲಪಲು ನಾನು ಇನ್ನೂ 80 ಕಿಲೊಮೀಟರುಗಳಷ್ಟು ದೂರ ನಡೆಯಬೇಕಾಗಿತ್ತು. ನಾನು ಸ್ವಲ್ಪಮಟ್ಟಿಗೆ ವಿಶ್ರಮಿಸಸಾಧ್ಯವಿದ್ದ ವಸತಿಯನ್ನು ಕಂಡುಕೊಳ್ಳುವುದಲ್ಲದೆ ಬೇರೆ ದಾರಿಯೇ ಇರಲಿಲ್ಲ.
ನಾನು ಕಾಲೆಳೆಯುತ್ತಾ ನಡೆಯುತ್ತಿದ್ದಾಗ, ರಸ್ತೆಯ ಪಕ್ಕದಲ್ಲಿ ಪಾಳುಬಿದ್ದಿದ್ದ ಒಂದು ಕಾರು ನನ್ನ ಕಣ್ಣಿಗೆ ಬಿತ್ತು. ಅದರ ಒಂದು ಭಾಗವು ಹಿಮದಿಂದಾವೃತವಾಗಿತ್ತು. ಹೇಗೋ ನಾನು ಅದರ ಒಳಗೆ ಸೇರಿಕೊಂಡು, ಮೃದುವಾದ ಸೀಟ್‌ಗಳ ಮೇಲೆ ಮಲಗಿಕೊಳ್ಳಲು ಸಾಧ್ಯವಾಗುವಲ್ಲಿ,
ಈ ಶೀತಲ ರಾತ್ರಿಯಿಂದ ಪಾರಾಗಿ ಉಳಿಯಬಹುದು ಎಂದು ನಾನು ಆಲೋಚಿಸಿದೆ. ನಂತರ ಅದರ ಮೇಲಿದ್ದ ಹಿಮವನ್ನು ಕೆರೆದು ಹಾಕಿ ಬಾಗಿಲನ್ನು ತೆರೆಯುವುದರಲ್ಲಿ ಯಶಸ್ವಿಯಾದೆನಾದರೂ, ಒಳಗೆ ನೋಡಿದಾಗ ಅದರ ಒಳಭಾಗವನ್ನೆಲ್ಲಾ ಕಿತ್ತುಹಾಕಲಾಗಿತ್ತು, ಮತ್ತು ಕೇವಲ ಲೋಹದ ತಗಡು ಮಾತ್ರ ಇತ್ತು. ಆದರೆ ಅದೇ ರಸ್ತೆಯಲ್ಲಿ ಸ್ವಲ್ಪ ಮುಂದೆ ಹೋದಾಗ, ಒಂದು ಖಾಲಿ ಕ್ಯಾಬಿನ್ ನನ್ನ ಕಣ್ಣಿಗೆ ಬಿದ್ದದ್ದನ್ನು ನೋಡಿ ನನಗೆ ಸಂತೋಷವಾಯಿತು. ಅದರೊಳಗೆ ಹೋಗಲು ಮತ್ತು ಬೆಳಕನ್ನು ಹೊತ್ತಿಸಲು ಸ್ವಲ್ಪ ಕಷ್ಟಪಟ್ಟ ಬಳಿಕ, ಕೆಲವು ತಾಸುಗಳ ವರೆಗೆ ಅದರಲ್ಲೇ ವಿಶ್ರಮಿಸಲು ಶಕ್ತನಾದೆ. ಮರುದಿನ ಬೆಳಗ್ಗೆ, ಬೇರೊಂದು ವಾಹನದಲ್ಲಿ ಪ್ರಯಾಣಿಸಿ ಹೇಗೋ ಮುಂದಿನ ಲಾಡ್ಜನ್ನು ತಲಪಿದ್ದೆ. ಅಲ್ಲಿ ಹಸಿವೆಯಿಂದ ನರಳುತ್ತಿದ್ದ ನನಗೆ ಆಹಾರ ಸಿಕ್ಕಿತು ಮತ್ತು ಹಿಮದ ಕಾರಣ ನನ್ನ ಬೆರಳುಗಳಲ್ಲಾದ ಗಾಯಗಳಿಗೆ ಆರೈಕೆಮಾಡಲು ಸಾಧ್ಯವಾಯಿತು.ಉತ್ತರ ನಾಡಿನಲ್ಲಿ ಯೆಹೋವನು ಅಭಿವೃದ್ಧಿಯನ್ನು ಉಂಟುಮಾಡುತ್ತಾನೆ
ಫೇರ್‌ಬ್ಯಾಂಕ್ಸ್‌ಗೆ ನಾನು ನೀಡಿದ ಮೊದಲ ಭೇಟಿಯು ಅತ್ಯಂತ ಪ್ರೋತ್ಸಾಹದಾಯಕವಾಗಿತ್ತು. ಶುಶ್ರೂಷೆಯಲ್ಲಿ ನಾವು ಒಳ್ಳೇ ಸಾಫಲ್ಯವನ್ನು ಪಡೆದೆವು, ಮತ್ತು ಆ ಭಾನುವಾರ ಸುಮಾರು 50 ಮಂದಿ ಬಹಿರಂಗ ಭಾಷಣಕ್ಕೆ ಹಾಜರಿದ್ದರು. ಎಲ್ಲಿ ವರ್ನರ್ ಹಾಗೂ ಲೊರೇನ್ ಡೇವಿಸ್ ದಂಪತಿಗಳು ವಾಸವಾಗಿದ್ದರೋ ಆ ಮಿಷನೆರಿ ಗೃಹದಲ್ಲಿ ನಾವು ಕೂಡಿಬಂದೆವು. ಭಾಷಣವನ್ನು ಕೇಳಿಸಿಕೊಳ್ಳಲಿಕ್ಕಾಗಿ ಕೂಡಿಬಂದಿದ್ದ ಜನರ ತಲೆಗಳು, ಮಿಷನೆರಿ ಗೃಹದ ಅಡಿಗೆಮನೆ, ಬೆಡ್‌ರೂಮ್ ಮತ್ತು ಹಜಾರದಿಂದ ಹೊರಗೆ ಇಣಕುತ್ತಿದ್ದವು. ಭಾಷಣವನ್ನು ಕೇಳಿಸಿಕೊಳ್ಳಲಿಕ್ಕಾಗಿ ಇಷ್ಟೊಂದು ಜನರು ಬಂದಿರುವ ವಾಸ್ತವಾಂಶದಿಂದ, ಒಂದು ರಾಜ್ಯ ಸಭಾಗೃಹವು ಫೇರ್‌ಬ್ಯಾಂಕ್ಸ್‌ನಲ್ಲಿನ ಸಾರುವ ಕೆಲಸಕ್ಕೆ ಸ್ಥಿರತೆಯನ್ನು ನೀಡುವುದು ಎಂದು ನಮಗೆ ತಿಳಿದುಬಂತು. ಆದುದರಿಂದ, ಯೆಹೋವನ ಸಹಾಯದಿಂದ ನಾವು ಈ ಮುಂಚೆ ನೃತ್ಯ ಶಾಲೆಯಾಗಿದ್ದಂಥ ಒಂದು ದೊಡ್ಡ ಕಟ್ಟಡವನ್ನು ಖರೀದಿಸಿ, ಸೂಕ್ತವಾದ ಜಮೀನಿಗೆ ಆ ಕಟ್ಟಡವನ್ನು ಸ್ಥಳಾಂತರಿಸಿದೆವು. ಒಂದು ಬಾವಿಯನ್ನು ತೋಡಲಾಯಿತು, ಮತ್ತು ಸ್ನಾನಗೃಹಗಳು ಹಾಗೂ ಶಾಖವನ್ನು ಹೆಚ್ಚಿಸುವ ಉಪಕರಣಗಳನ್ನು ಅದಕ್ಕೆ ಅಳವಡಿಸಲಾಯಿತು. ಒಂದೇ ವರ್ಷದೊಳಗೆ, ಫೇರ್‌ಬ್ಯಾಂಕ್ಸ್‌ನಲ್ಲಿ ಒಂದು ಕಾರ್ಯಸಾಧಕ ರಾಜ್ಯ ಸಭಾಗೃಹವಿತ್ತು. ಇದಕ್ಕೆ ಒಂದು ಅಡಿಗೆಮನೆಯನ್ನು ಸೇರಿಸಿದ ಬಳಿಕ, 1958ರಲ್ಲಿ ಒಂದು ಜಿಲ್ಲಾ ಅಧಿವೇಶನಕ್ಕಾಗಿ ಈ ಸಭಾಗೃಹವನ್ನು ಉಪಯೋಗಿಸಲಾದಾಗ, ಅಲ್ಲಿ 330 ಮಂದಿ ಹಾಜರಿದ್ದರು.
ಇಸವಿ 1960ರ ಬೇಸಗೆಕಾಲದಲ್ಲಿ, ಅಮೆರಿಕ ಹಾಗೂ ಕೆನಡದಲ್ಲಿದ್ದ ಎಲ್ಲಾ ಸಂಚರಣ ಮೇಲ್ವಿಚಾರಕರಿಗಾಗಿದ್ದ ರಿಫ್ರೆಶರ್ ಕೋರ್ಸ್‌ಗೆ ಹಾಜರಾಗಲಿಕ್ಕಾಗಿ, ನ್ಯೂ ಯಾರ್ಕ್‌ನಲ್ಲಿರುವ ಯೆಹೋವನ ಸಾಕ್ಷಿಗಳ ಲೋಕ ಮುಖ್ಯಕಾರ್ಯಾಲಯಕ್ಕೆ ಕಾರ್‌ನ ಮೂಲಕ ದೀರ್ಘ ಪ್ರಯಾಣವನ್ನು ಮಾಡಿದೆ. ನಾನು ಅಲ್ಲಿದ್ದಾಗ, ಅಲಾಸ್ಕದಲ್ಲಿ ಒಂದು ಬ್ರಾಂಚ್ ಆಫೀಸನ್ನು ತೆರೆಯುವ ಸಾಧ್ಯತೆಯ ಕುರಿತು, ಸಹೋದರ ನೇಥನ್ ನಾರರು ಮತ್ತು ಇತರ ಜವಾಬ್ದಾರಿಯುತ ಸಹೋದರರು ನನ್ನೊಂದಿಗೆ ಇಂಟರ್‌ವ್ಯೂ ನಡೆಸಿದರು. ಕೆಲವು ತಿಂಗಳುಗಳ ಬಳಿಕ, 1961ರ ಸೆಪ್ಟೆಂಬರ್ 1ರಷ್ಟಕ್ಕೆ, ಅಲಾಸ್ಕದಲ್ಲಿ ಅದರ ಸ್ವಂತ ಬ್ರಾಂಚ್ ಆಫೀಸು ನಿರ್ಮಿಸಲ್ಪಡುವುದು ಎಂಬ ಸವಿಸುದ್ದಿಯನ್ನು ಕೇಳಿ ನಮಗೆ ತುಂಬ ಸಂತೋಷವಾಯಿತು. ಬ್ರಾಂಚ್‌ನ ಕೆಲಸಗಳನ್ನು ನೋಡಿಕೊಳ್ಳುವಂತೆ ಸಹೋದರ ಆ್ಯಂಡ್ರೂ ಕೆ. ವ್ಯಾಗ್ನರ್ ಅವರನ್ನು ನೇಮಿಸಲಾಯಿತು. ಅವರು ಹಾಗೂ ಅವರ ಪತ್ನಿ ವಿರ ಅವರು 20 ವರ್ಷಗಳಿಂದ ಬ್ರೂಕ್ಲಿನ್‌ನಲ್ಲಿ ಸೇವೆಮಾಡಿದ್ದರು ಮತ್ತು ಸಂಚರಣ ಕೆಲಸದಲ್ಲೂ ಅನುಭವಹೊಂದಿದವರಾಗಿದ್ದರು. ಅಲಾಸ್ಕ ಬ್ರಾಂಚ್ ಆಫೀಸಿನ ಸ್ಥಾಪನೆಯ ಏರ್ಪಾಡು ಪರಿಗಣನಾರ್ಹವಾದದ್ದಾಗಿತ್ತು, ಏಕೆಂದರೆ ಸರ್ಕಿಟ್ ಮೇಲ್ವಿಚಾರಕನು ಮಾಡಬೇಕಾಗಿದ್ದ ಪ್ರಯಾಣದ ಪ್ರಮಾಣವನ್ನು ಅದು ಕಡಿಮೆಗೊಳಿಸಿತು, ಮತ್ತು ಅವನು ಸಭೆಗಳ ಹಾಗೂ ಪ್ರತ್ಯೇಕ ಟೆರಿಟೊರಿಗಳ ನಿರ್ದಿಷ್ಟ ಆವಶ್ಯಕತೆಗಳ ಮೇಲೆ ಹೆಚ್ಚೆಚ್ಚು ಗಮನವನ್ನು ಕೇಂದ್ರೀಕರಿಸುವಂತೆ ಸಹಾಯಮಾಡಿತು.
ಇಸವಿ 1962ರ ಬೇಸಗೆಕಾಲವು ಈ ಉತ್ತರ ನಾಡಿನಲ್ಲಿ ತುಂಬ ಸಂತೋಷಭರಿತ ಸಮಯವಾಗಿತ್ತು. ಆ ವರ್ಷದಲ್ಲಿ ಅಲಾಸ್ಕ ಬ್ರಾಂಚ್‌ನ ಸಮರ್ಪಣೆಯಾಯಿತು, ಮತ್ತು ಅಲಾಸ್ಕದ ಜೂನೋನಲ್ಲಿ ಒಂದು ಜಿಲ್ಲಾ ಅಧಿವೇಶನವೂ ನಡೆಸಲ್ಪಟ್ಟಿತು. ಜೂನೋನಲ್ಲಿ ಮತ್ತು ಯೂಕಾನ್‌ನ ವೈಟ್‌ಹಾರ್ಸ್‌ನಲ್ಲಿ ಹೊಸ ರಾಜ್ಯ ಸಭಾಗೃಹಗಳು ಕಟ್ಟಲ್ಪಟ್ಟವು ಮತ್ತು ಹೊಸ ಪ್ರತ್ಯೇಕ ಗುಂಪುಗಳು ಸಹ ರೂಪಿಸಲ್ಪಟ್ಟವು.
ಕೆನಡಕ್ಕೆ ಹಿಂದೆರಳಿದ್ದು
ಅನೇಕ ವರ್ಷಗಳ ವರೆಗೆ ನಾನು ಕೆನಡದ ಮಾರ್ಗರೀಟ ಪೆಟ್‌ರಸ್‌ಳೊಂದಿಗೆ ಪತ್ರವ್ಯವಹಾರ ನಡೆಸುತ್ತಿದ್ದೆ. ಸಾಮಾನ್ಯವಾಗಿ ರೀಟ ಎಂದೇ ಕರೆಯಲ್ಪಡುತ್ತಿದ್ದ ಅವಳು 1947ರಲ್ಲಿ ಪಯನೀಯರ್ ಸೇವೆಯನ್ನು ಆರಂಭಿಸಿದಳು, 1955ರಲ್ಲಿ ಗಿಲ್ಯಡ್ ಪದವೀಧರಳಾದಳು, ಮತ್ತು ಪೂರ್ವ ಕೆನಡದಲ್ಲಿ ಪಯನೀಯರ್ ಸೇವೆಮಾಡುತ್ತಿದ್ದಳು. ನಾನು ಅವಳಿಗೆ ವಿವಾಹದ ಪ್ರಸ್ತಾಪ ಮಾಡಿದೆ, ಅವಳು ಒಪ್ಪಿಕೊಂಡಳು. 1963ರ ಫೆಬ್ರವರಿ ತಿಂಗಳಿನಲ್ಲಿ ನಾವು ವೈಟ್‌ಹಾರ್ಸ್‌ನಲ್ಲಿ ಮದುವೆಯಾದೆವು. ಆ ವರ್ಷದ ಶರತ್‌ಕಾಲದಷ್ಟಕ್ಕೆ, ಪಶ್ಚಿಮ ಕೆನಡದಲ್ಲಿನ ಸರ್ಕಿಟ್ ಕೆಲಸಕ್ಕೆ ನನ್ನನ್ನು ನೇಮಿಸಲಾಯಿತು, ಮತ್ತು ಮುಂದಿನ 25 ವರ್ಷಗಳ ವರೆಗೂ ಅಲ್ಲಿ ಸೇವೆಸಲ್ಲಿಸುವ ಸಂತೋಷ ನಮಗೆ ಸಿಕ್ಕಿತ್ತು.
ಆರೋಗ್ಯದ ಸಮಸ್ಯೆಯ ಕಾರಣ 1988ರಲ್ಲಿ ನಾವು ಮ್ಯಾನಿಟೊಬಾದ ವಿನಿಪೆಗ್‌ನಲ್ಲಿ ವಿಶೇಷ ಪಯನೀಯರ್ ಸೇವೆಯನ್ನು ಮಾಡುವಂತೆ ನೇಮಿಸಲ್ಪಟ್ಟೆವು. ಸುಮಾರು ಐದು ವರ್ಷಗಳ ವರೆಗೆ ಒಂದು ಅಸೆಂಬ್ಲಿ ಹಾಲ್ ಅನ್ನು ನೋಡಿಕೊಳ್ಳುವ ಜವಾಬ್ದಾರಿಯೂ ಇದರಲ್ಲಿ ಒಳಗೂಡಿತ್ತು. ಶಿಷ್ಯರನ್ನಾಗಿ ಮಾಡುವ ಹರ್ಷಭರಿತ ಕೆಲಸದಲ್ಲಿ ಸಾಧ್ಯವಿರುವಷ್ಟು ಮಟ್ಟಿಗೆ ನಾವಿನ್ನೂ ಪಾಲ್ಗೊಳ್ಳುತ್ತಿದ್ದೇವೆ. ಸರ್ಕಿಟ್ ಕೆಲಸದಲ್ಲಿ, ಇತರರು ಮುಂದುವರಿಸಿಕೊಂಡು ಹೋಗುವಂತೆ ನಾವು ಅನೇಕ ಬೈಬಲ್ ಅಧ್ಯಯನಗಳನ್ನು ಆರಂಭಿಸಿದೆವು. ಈಗ, ಯೆಹೋವನ ಅಪಾತ್ರ ಕೃಪೆಯ ಕಾರಣ, ನಾವು ಅವುಗಳನ್ನು ಆರಂಭಿಸುವುದು ಮಾತ್ರವಲ್ಲ, ವಿದ್ಯಾರ್ಥಿಗಳು ಸಮರ್ಪಣೆ ಹಾಗೂ ದೀಕ್ಷಾಸ್ನಾನಕ್ಕೆ ಪ್ರಗತಿಯನ್ನು ಮಾಡುವುದನ್ನು ನೋಡುವ ಇನ್ನೂ ಹೆಚ್ಚಿನ ಸಂತೋಷವೂ ನಮಗಿದೆ.
ಯೆಹೋವನ ಸೇವೆಮಾಡುವುದೇ ಜೀವನದ ಅತ್ಯುತ್ತಮ ಮಾರ್ಗವಾಗಿದೆ ಎಂಬುದನ್ನು ನಾನು ಮನಗಂಡಿದ್ದೇನೆ. ಇದು ಅರ್ಥಭರಿತವಾದದ್ದಾಗಿದೆ ಮತ್ತು ಸಂತೃಪ್ತಿಕರವಾಗಿದೆ, ಮತ್ತು ಪ್ರತಿ ದಿನ ಯೆಹೋವನಿಗಾಗಿರುವ ನಮ್ಮ ಪ್ರೀತಿಯನ್ನು ಅದು ಇನ್ನಷ್ಟು ಆಳಗೊಳಿಸುತ್ತದೆ. ಇದೇ ನಿಜವಾದ ಸಂತೋಷವನ್ನು ನೀಡುತ್ತದೆ. ನಮಗೆ ಯಾವುದೇ ದೇವಪ್ರಭುತ್ವಾತ್ಮಕ ನೇಮಕವಿರಲಿ, ಅಥವಾ ನಾವು ಭೌಗೋಳಿಕವಾಗಿ ಎಲ್ಲೇ ನೆಲೆಸಿರಲಿ, “ಯಾರಿಗೆ ಯೆಹೋವನು ದೇವರಾಗಿರುತ್ತಾನೋ ಅವರು ಭಾಗ್ಯವಂತರು” ಎಂದು ಹೇಳಿದಂಥ ಕೀರ್ತನೆಗಾರನ ಮಾತುಗಳನ್ನು ನಾವು ಅನುಮೋದಿಸುತ್ತೇವೆ.—ಕೀರ್ತನೆ 144:15.
[ಪುಟ 24, 25ರಲ್ಲಿರುವ ಚಿತ್ರ]
ಸರ್ಕಿಟ್ ಕೆಲಸದಲ್ಲಿ
[ಪುಟ 25ರಲ್ಲಿರುವ ಚಿತ್ರ]
ಡಾಸನ್ ಸಿಟಿಯಲ್ಲಿ ಹೆನ್ರಿ ಲಪೈನ್‌ರನ್ನು ಭೇಟಿಯಾಗುತ್ತಿರುವುದು. ನಾನು ಎಡಭಾಗದಲ್ಲಿದ್ದೇನೆ
[ಪುಟ 26ರಲ್ಲಿರುವ ಚಿತ್ರ]
ಆ್ಯಂಕರೆಜ್‌ನಲ್ಲಿ ಪ್ರಥಮ ರಾಜ್ಯ ಸಭಾಗೃಹ
[ಪುಟ 26ರಲ್ಲಿರುವ ಚಿತ್ರ]
1998ರಲ್ಲಿ ರೀಟ ಮತ್ತು ನಾನು