ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯದ ದೇವರನ್ನು ಅನುಕರಿಸುವುದು

ಸತ್ಯದ ದೇವರನ್ನು ಅನುಕರಿಸುವುದು

ಸತ್ಯದ ದೇವರನ್ನು ಅನುಕರಿಸುವುದು

“ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ [“ಅನುಕರಿಸುವವರಾಗಿರಿ,” NW].”—ಎಫೆಸ 5:1.

1. ಸತ್ಯದ ಕುರಿತು ಕೆಲವರು ಏನನ್ನು ನಂಬುತ್ತಾರೆ, ಮತ್ತು ಅವರ ತರ್ಕವು ಲೋಪವುಳ್ಳದ್ದಾಗಿದೆ ಏಕೆ?

“ಸತ್ಯವಂದರೇನು?” (ಯೋಹಾನ 18:38) ಸುಮಾರು 2,000 ವರ್ಷಗಳ ಹಿಂದೆ ಪೊಂತ್ಯ ಪಿಲಾತನು ಸಿನಿಕತನದಿಂದ ಕೇಳಿದ ಈ ಪ್ರಶ್ನೆಯು, ಸತ್ಯವನ್ನು ಬೆನ್ನಟ್ಟುವುದು ಕೈಗೆ ನಿಲುಕದ ಸಂಗತಿಯಾಗಿದೆ ಎಂಬರ್ಥವನ್ನು ಕೊಡುತ್ತದೆ. ಇಂದು ಅನೇಕರು ಈ ಮಾತನ್ನು ಸಮ್ಮತಿಸಬಹುದು. ವಸ್ತುತಃ ಸತ್ಯವು ಆಕ್ರಮಣಕ್ಕೊಳಗಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನ್ನದೇ ಆದ ಸತ್ಯವನ್ನು ಸ್ಥಾಪಿಸಿಕೊಂಡಿರುತ್ತಾನೆ, ಅಥವಾ ಸತ್ಯವು ಸಾಪೇಕ್ಷವಾಗಿದೆ, ಇಲ್ಲವೆ ಸತ್ಯವು ಯಾವಾಗಲೂ ಬದಲಾಗುತ್ತಾ ಇರುತ್ತದೆ ಎಂದು ಹೇಳುವುದನ್ನು ನೀವು ಕೇಳಿಸಿಕೊಂಡಿರಬಹುದು. ಇಂಥ ತರ್ಕವು ಲೋಪವುಳ್ಳದ್ದಾಗಿದೆ. ಸಂಶೋಧನೆ ಮತ್ತು ಶಿಕ್ಷಣದ ಪ್ರಾಮುಖ್ಯ ಗುರಿಯು, ನಾವು ಜೀವಿಸುತ್ತಿರುವಂಥ ಲೋಕದ ಕುರಿತಾದ ವಾಸ್ತವಾಂಶಗಳನ್ನೂ ಸತ್ಯತೆಯನ್ನೂ ಕಲಿಯುವುದೇ ಆಗಿದೆ. ಸತ್ಯವು ವೈಯಕ್ತಿಕ ಅಭಿಪ್ರಾಯಕ್ಕೆ ಸಂಬಂಧಿಸಿದ ವಿಚಾರವಾಗಿಲ್ಲ. ಉದಾಹರಣೆಗೆ, ಒಬ್ಬ ಮಾನವನಲ್ಲಿರುವ ಯಾವುದೋ ಒಂದು ವಸ್ತುವು, ದೇಹ ಸತ್ತ ಬಳಿಕವೂ ಬದುಕಿ ಉಳಿಯುತ್ತದೆ ಅಥವಾ ಬದುಕಿ ಉಳಿಯುವುದಿಲ್ಲ. ಸೈತಾನನು ಅಸ್ತಿತ್ವದಲ್ಲಿದ್ದಾನೆ ಅಥವಾ ಅಸ್ತಿತ್ವದಲ್ಲಿಲ್ಲ. ಜೀವಿತಕ್ಕೆ ಒಂದು ಉದ್ದೇಶವಿದೆ ಅಥವಾ ಉದ್ದೇಶವಿಲ್ಲ. ಈ ಪ್ರತಿಯೊಂದು ಉದಾಹರಣೆಯಲ್ಲೂ ನೋಡುವುದಾದರೆ, ಪ್ರತಿಯೊಂದಕ್ಕೂ ಸರಿಯಾದ ಒಂದೇ ಒಂದು ಉತ್ತರವಿರಸಾಧ್ಯವಿದೆಯಷ್ಟೆ. ಒಂದು ಉತ್ತರವು ಸತ್ಯವಾಗಿರುತ್ತದೆ, ಮತ್ತು ಇನ್ನೊಂದು ಸುಳ್ಳಾಗಿರುತ್ತದೆ; ಎರಡೂ ಸತ್ಯವಾಗಿರಲಾರವು.

2. ಯಾವ ವಿಧಗಳಲ್ಲಿ ಯೆಹೋವನು ಸತ್ಯದ ದೇವರಾಗಿದ್ದಾನೆ, ಮತ್ತು ಈಗ ಯಾವ ಪ್ರಶ್ನೆಗಳು ಚರ್ಚಿಸಲ್ಪಡುವವು?

2 ಹಿಂದಿನ ಲೇಖನದಲ್ಲಿ, ಯೆಹೋವನು ಸತ್ಯದ ದೇವರಾಗಿದ್ದಾನೆ ಎಂಬುದನ್ನು ನಾವು ಪರಿಗಣಿಸಿದೆವು. ಎಲ್ಲಾ ಸಂಗತಿಗಳ ಕುರಿತಾದ ಸತ್ಯವು ಆತನಿಗೆ ತಿಳಿದಿದೆ. ವಂಚನಾತ್ಮಕ ವಿರೋಧಿಯಾಗಿರುವ ಪಿಶಾಚನಾದ ಸೈತಾನನಿಗೆ ಸಂಪೂರ್ಣ ತದ್ವಿರುದ್ಧವಾಗಿ, ಯೆಹೋವನು ಸದಾ ಸತ್ಯವಂತನಾಗಿದ್ದಾನೆ. ಅಷ್ಟುಮಾತ್ರವಲ್ಲದೆ, ಯೆಹೋವನು ಉದಾತ್ತ ಸ್ವಭಾವದಿಂದ ಇತರರಿಗೆ ಸತ್ಯವನ್ನು ತಿಳಿಯಪಡಿಸುತ್ತಾನೆ. ಅಪೊಸ್ತಲ ಪೌಲನು ಜೊತೆ ಕ್ರೈಸ್ತರನ್ನು ಹೀಗೆ ಉತ್ತೇಜಿಸಿದನು: “ದೇವರ ಪ್ರಿಯರಾದ ಮಕ್ಕಳಿಗೆ ತಕ್ಕ ಹಾಗೆ ಆತನನ್ನು ಅನುಸರಿಸುವವರಾಗಿರಿ [“ಅನುಕರಿಸುವವರಾಗಿರಿ,” NW].” (ಎಫೆಸ 5:1) ಯೆಹೋವನ ಸಾಕ್ಷಿಗಳೋಪಾದಿ ನಾವು, ಸತ್ಯಕ್ಕನುಸಾರ ಮಾತಾಡುವುದರಲ್ಲಿ ಹಾಗೂ ಜೀವಿಸುವುದರಲ್ಲಿ ಆತನನ್ನು ಹೇಗೆ ಅನುಕರಿಸಬಹುದು? ಹಾಗೆ ಮಾಡುವುದು ಏಕೆ ಪ್ರಾಮುಖ್ಯವಾದದ್ದಾಗಿದೆ? ಮತ್ತು ಸತ್ಯತೆಯ ಮಾರ್ಗವನ್ನು ಬೆನ್ನಟ್ಟುವವರಿಗೆ ಯೆಹೋವನು ಅನುಗ್ರಹವನ್ನು ತೋರಿಸುತ್ತಾನೆ ಎಂಬುದಕ್ಕೆ ನಮಗೆ ಯಾವ ಆಶ್ವಾಸನೆಯಿದೆ? ನಾವೀಗ ಅದನ್ನು ಪರಿಗಣಿಸೋಣ.

3, 4. “ಕಡೇ ದಿವಸಗಳಲ್ಲಿ” ಏನು ಸಂಭವಿಸಲಿತ್ತೋ ಅದನ್ನು ಅಪೊಸ್ತಲರಾದ ಪೌಲ ಮತ್ತು ಪೇತ್ರರು ಹೇಗೆ ವರ್ಣಿಸಿದರು?

3 ಧಾರ್ಮಿಕ ಅಸತ್ಯತೆಯು ವ್ಯಾಪಕವಾಗಿರುವಂಥ ಒಂದು ಯುಗದಲ್ಲಿ ನಾವು ಜೀವಿಸುತ್ತಿದ್ದೇವೆ. ದೈವಿಕ ಪ್ರೇರಣೆಯ ಕೆಳಗೆ ಅಪೊಸ್ತಲ ಪೌಲನಿಂದ ಮುಂತಿಳಿಸಲ್ಪಟ್ಟಂತೆ, ಈ “ಕಡೇ ದಿವಸಗಳಲ್ಲಿ” ಅನೇಕ ಜನರು ದೈವಿಕ ಭಕ್ತಿಯ ವೇಷವನ್ನು ಹೊಂದಿರುವುದಾದರೂ ಅದರ ಬಲವನ್ನು ಬೇಡವೆನ್ನುವವರಾಗಿದ್ದಾರೆ. ಸಂಪೂರ್ಣವಾಗಿ ‘ಬುದ್ಧಿಗೆಟ್ಟವರೂ ಭ್ರಷ್ಟರೂ’ ಆಗಿರುವ ಕೆಲವರು ಸತ್ಯವನ್ನು ನಿರಾಕರಿಸುತ್ತಾರೆ. ಅಷ್ಟುಮಾತ್ರವಲ್ಲದೆ, “ದುಷ್ಟರೂ ವಂಚಕರೂ ಇತರರನ್ನು ಮೋಸಮಾಡುತ್ತಾ ತಾವೇ ಮೋಸಹೋಗುತ್ತಾ ಹೆಚ್ಚಾದ ಕೆಟ್ಟತನಕ್ಕೆ” ಹೋಗುತ್ತಾರೆ. ಇಂತಹ ಜನರು ಯಾವಾಗಲೂ ಕಲಿಯುತ್ತಾ ಇರುತ್ತಾರಾದರೂ, ಅವರೆಂದಿಗೂ “ಸತ್ಯದ ಪರಿಜ್ಞಾನವನ್ನು” ಹೊಂದುವುದೇ ಇಲ್ಲ.​—2 ತಿಮೊಥೆಯ 3:1, 5, 7, 8, 13.

4 ಕಡೇ ದಿವಸಗಳ ಕುರಿತು ಬರೆಯುವಂತೆ ಅಪೊಸ್ತಲ ಪೇತ್ರನು ಸಹ ಪ್ರೇರಿಸಲ್ಪಟ್ಟನು. ಅವನು ಪ್ರವಾದಿಸಿದಂತೆಯೇ, ಜನರು ಸತ್ಯವನ್ನು ತಿರಸ್ಕರಿಸಿದರು ಮಾತ್ರವಲ್ಲ ದೇವರ ವಾಕ್ಯವನ್ನೂ ಅದರ ಸತ್ಯವನ್ನೂ ಯಾರು ಸಾರಿದರೋ ಅವರನ್ನೂ ಕುಚೋದ್ಯಮಾಡಿದರು. ಅಂಥ ಕುಚೋದ್ಯಗಾರರು, ನ್ಯಾಯತೀರ್ಪಿನ ಭಾವೀ ದಿನಕ್ಕಾಗಿ ಒಂದು ನಮೂನೆಯನ್ನಿಡುತ್ತಾ, ನೋಹನ ದಿನದ ಲೋಕವು ಜಲಪ್ರಲಯದ ನೀರಿನಿಂದಲೇ ನಾಶವಾಯಿತು ಎಂಬ ನಿಜತ್ವವನ್ನು “ತಮ್ಮ ಇಷ್ಟಾನುಸಾರ” (NW) ಅಲಕ್ಷಿಸುತ್ತಾರೆ. ಆದರೆ ದೇವಭಕ್ತಿಯಿಲ್ಲದ ಜನರನ್ನು ನಾಶಮಾಡಲಿಕ್ಕಾಗಿರುವ ದೇವರ ನೇಮಿತ ಸಮಯವು ಬರುವಾಗ, ಅವರು ಬಯಸಿದಂಥ ಯೋಚನೆಯು ಅವರಿಗೆ ಭಾರೀ ದೊಡ್ಡ ವಿಪತ್ತಾಗಿ ಪರಿಣಮಿಸುವುದು.​—2 ಪೇತ್ರ 3:​3-7.

ಯೆಹೋವನ ಸೇವಕರು ಸತ್ಯವನ್ನು ಬಲ್ಲವರಾಗಿದ್ದಾರೆ

5. ಪ್ರವಾದಿಯಾದ ದಾನಿಯೇಲನಿಗನುಸಾರ, ‘ಅಂತ್ಯಕಾಲದಲ್ಲಿ’ ಏನು ಸಂಭವಿಸುವುದು, ಮತ್ತು ಈ ಪ್ರವಾದನೆಯು ಹೇಗೆ ನೆರವೇರಿದೆ?

5 “ಅಂತ್ಯಕಾಲದ” ಕುರಿತಾದ ಒಂದು ವರ್ಣನೆಯಲ್ಲಿ, ದೇವಜನರ ನಡುವಿನ ತೀರ ಭಿನ್ನವಾದಂಥ ಒಂದು ವಿಕಸನದ ಬಗ್ಗೆ ಪ್ರವಾದಿಯಾದ ದಾನಿಯೇಲನು ಮುಂತಿಳಿಸಿದನು. ಅದು, ಧಾರ್ಮಿಕ ಸತ್ಯದ ಪುನರುಜ್ಜೀವನವೇ ಆಗಿತ್ತು. ಅವನು ಬರೆದುದು: “ಬಹು ಜನರು ಅತ್ತಿತ್ತ ತಿರುಗುವರು, ತಿಳುವಳಿಕೆಯು [“ಜ್ಞಾನವು,” NW] ಹೆಚ್ಚುವದು.” (ದಾನಿಯೇಲ 12:4) ಯೆಹೋವನ ಜನರು ಅತಿ ದೊಡ್ಡ ವಂಚಕನಿಂದ ಗೊಂದಲಕ್ಕೊಳಗಾಗಲಿಲ್ಲ ಅಥವಾ ಕುರುಡುಗೊಳಿಸಲ್ಪಡಲಿಲ್ಲ. ಬೈಬಲಿನ ಪುಟಗಳಾದ್ಯಂತ ತಿರುಗುವ ಮೂಲಕ ಅವರು ಸತ್ಯ ಜ್ಞಾನವನ್ನು ಪಡೆದುಕೊಳ್ಳತೊಡಗಿದ್ದಾರೆ. ಪ್ರಥಮ ಶತಮಾನದಲ್ಲಿ ಯೇಸು ತನ್ನ ಶಿಷ್ಯರಿಗೆ ಜ್ಞಾನೋದಯ ನೀಡಿದನು. ‘ಅವರು ಶಾಸ್ತ್ರವಚನಗಳನ್ನು ತಿಳುಕೊಳ್ಳುವಂತೆ ಅವನು ಅವರ ಬುದ್ಧಿಯನ್ನು ತೆರೆದನು.’ (ಲೂಕ 24:45) ನಮ್ಮ ದಿನದಲ್ಲಿಯೂ ಯೆಹೋವನು ತದ್ರೀತಿಯಲ್ಲಿಯೇ ಕ್ರಿಯೆಗೈದಿದ್ದಾನೆ. ತನ್ನ ವಾಕ್ಯ, ತನ್ನ ಆತ್ಮ, ಮತ್ತು ತನ್ನ ಸಂಸ್ಥೆಯ ಮೂಲಕ ಆತನು, ತನಗೆ ಈಗಾಗಲೇ ತಿಳಿದಿರುವಂಥ ಸತ್ಯದ ಕುರಿತು ಭೂಮಿಯಾದ್ಯಂತ ಇರುವ ಲಕ್ಷಾಂತರ ಜನರು ಅರ್ಥಮಾಡಿಕೊಳ್ಳುವಂತೆ ಸಹಾಯಮಾಡಿದ್ದಾನೆ.

6. ಇಂದು ದೇವಜನರು ಯಾವ ಬೈಬಲ್‌ ಸತ್ಯತೆಗಳನ್ನು ಅರ್ಥಮಾಡಿಕೊಳ್ಳುತ್ತಾರೆ?

6 ದೇವಜನರೋಪಾದಿ ನಾವು, ಪರಿಸ್ಥಿತಿ ಬೇರೆಯಾಗಿರುತ್ತಿದ್ದರೆ ಎಂದೂ ಅರ್ಥಮಾಡಿಕೊಳ್ಳದಿರುತ್ತಿದ್ದ ಅನೇಕ ವಿಷಯಗಳನ್ನು ಈಗ ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇವೆ. ಸಹಸ್ರಾರು ವರ್ಷಗಳಿಂದ ಲೋಕದ ಜ್ಞಾನಸಂಪನ್ನ ವ್ಯಕ್ತಿಗಳು ಯಾವ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಹೋರಾಡುತ್ತಿದ್ದಾರೋ ಆ ಪ್ರಶ್ನೆಗಳಿಗೆ ಉತ್ತರಗಳು ನಮಗೆ ಗೊತ್ತಿವೆ. ಉದಾಹರಣೆಗೆ, ಕಷ್ಟಾನುಭವ ಏಕಿದೆ, ಜನರು ಏಕೆ ಸಾಯುತ್ತಾರೆ, ಮತ್ತು ಮಾನವರು ಏಕೆ ಜಾಗತಿಕ ಶಾಂತಿ ಹಾಗೂ ಐಕ್ಯಭಾವವನ್ನು ತರಲಾರರು ಎಂಬುದು ನಮಗೆ ಚೆನ್ನಾಗಿ ಗೊತ್ತಿದೆ. ಭವಿಷ್ಯತ್ತಿನಲ್ಲಿ ಏನು ಕಾದಿರಿಸಲ್ಪಟ್ಟಿದೆ ಎಂಬುದರ ಕುರಿತಾದ ಒಂದು ದರ್ಶನದಿಂದಲೂ ನಾವು ಆಶೀರ್ವದಿಸಲ್ಪಟ್ಟಿದ್ದೇವೆ. ಅದೇನೆಂದರೆ, ದೇವರ ರಾಜ್ಯ, ಒಂದು ಪರದೈಸ್‌ ಭೂಮಿ, ಮತ್ತು ಪರಿಪೂರ್ಣವಾದ ಅನಂತ ಜೀವನವೇ. ಪರಮಾತ್ಮನಾಗಿರುವ ಯೆಹೋವನ ಕುರಿತೂ ನಾವು ತಿಳಿದುಕೊಂಡಿದ್ದೇವೆ. ಆತನ ಚಿತ್ತಾಕರ್ಷಕ ವ್ಯಕ್ತಿತ್ವದ ಕುರಿತು ಹಾಗೂ ಆತನ ಆಶೀರ್ವಾದವನ್ನು ಪಡೆಯಬೇಕಾದರೆ ನಾವೇನು ಮಾಡಬೇಕು ಎಂಬುದರ ಕುರಿತೂ ನಾವು ಕಲಿತುಕೊಂಡಿದ್ದೇವೆ. ಸತ್ಯವನ್ನು ಅರಿತಿರುವುದು, ಯಾವುದು ಅಸತ್ಯವಾಗಿದೆಯೋ ಅದನ್ನು ಸುಲಭವಾಗಿ ಗ್ರಹಿಸುವಂತೆ ನಮ್ಮನ್ನು ಶಕ್ತರನ್ನಾಗಿ ಮಾಡುತ್ತದೆ. ಸತ್ಯವನ್ನು ಅನ್ವಯಿಸಿಕೊಳ್ಳುವುದು, ನಿಷ್ಫಲವಾದ ಬೆನ್ನಟ್ಟುವಿಕೆಗಳಿಂದ ನಮ್ಮನ್ನು ಸಂರಕ್ಷಿಸುತ್ತದೆ, ಜೀವನದಲ್ಲಿ ಯಶಸ್ವಿಯನ್ನು ಪಡೆದುಕೊಳ್ಳುವಂತೆ ಸಹಾಯಮಾಡುತ್ತದೆ, ಮತ್ತು ಭವಿಷ್ಯತ್ತಿಗಾಗಿ ಅದ್ಭುತಕರವಾದ ನಿರೀಕ್ಷೆಯನ್ನು ನಮಗೆ ನೀಡುತ್ತದೆ.

7. ಯಾರಿಗೆ ಬೈಬಲ್‌ ಸತ್ಯತೆಗಳು ಸುಲಭವಾಗಿ ಅರ್ಥವಾಗುತ್ತವೆ, ಮತ್ತು ಯಾರಿಗೆ ಸುಲಭವಾಗಿ ಅರ್ಥವಾಗುವುದಿಲ್ಲ?

7 ನೀವು ಬೈಬಲ್‌ ಸತ್ಯವನ್ನು ಅರ್ಥಮಾಡಿಕೊಳ್ಳುತ್ತೀರೋ? ಮಾಡಿಕೊಳ್ಳುತ್ತಿರುವಲ್ಲಿ, ನೀವು ಮಹತ್ತರವಾಗಿ ಆಶೀರ್ವದಿಸಲ್ಪಟ್ಟಿದ್ದೀರಿ. ಒಬ್ಬ ಲೇಖಕರು ಒಂದು ಪುಸ್ತಕವನ್ನು ಬರೆಯುವಾಗ, ಅವನು ಅಥವಾ ಅವಳು ಸಾಮಾನ್ಯವಾಗಿ ನಿರ್ದಿಷ್ಟ ಜನರ ಗುಂಪಿಗೆ ಹಿಡಿಸುವಂಥ ರೀತಿಯಲ್ಲಿ ಅದನ್ನು ವಿನ್ಯಾಸಿಸುತ್ತಾರೆ. ಕೆಲವು ಪುಸ್ತಕಗಳು ಅತ್ಯುಚ್ಚ ಶಿಕ್ಷಣವನ್ನು ಪಡೆದವರಿಗಾಗಿ ಬರೆಯಲ್ಪಟ್ಟಿವೆ, ಇನ್ನಿತರ ಪುಸ್ತಕಗಳು ಮಕ್ಕಳಿಗಾಗಿ, ಇನ್ನೂ ಅನೇಕ ವಿಶೇಷ ಕ್ಷೇತ್ರಗಳಲ್ಲಿ ಪ್ರವೀಣರಾಗಿರುವ ಜನರಿಗಾಗಿ ಬರೆಯಲ್ಪಟ್ಟಿವೆ. ಬೈಬಲ್‌ ಎಲ್ಲರಿಗೂ ಸುಲಭವಾಗಿ ಲಭ್ಯವಿರುವ ಗ್ರಂಥವಾಗಿರುವುದಾದರೂ, ಒಂದು ನಿರ್ದಿಷ್ಟ ಜನರ ಗುಂಪು ಮಾತ್ರ ಅದನ್ನು ಅರ್ಥಮಾಡಿಕೊಳ್ಳುವಂತೆ ಮತ್ತು ಗಣ್ಯಮಾಡುವಂತೆ ಕೊಡಲ್ಪಟ್ಟಿದೆ. ಯೆಹೋವನು ಭೂಮಿಯಲ್ಲಿರುವ ದೀನಮನೋಭಾವದ ಜನರಿಗಾಗಿ ಅದನ್ನು ದಯಪಾಲಿಸಿದ್ದಾನೆ. ಅಂಥ ಜನರ ಶಿಕ್ಷಣ, ಸಂಸ್ಕೃತಿ, ಸ್ಥಾನಮಾನ, ಅಥವಾ ಜಾತಿಯು ಯಾವುದೇ ಆಗಿರಲಿ, ಅವರು ಬೈಬಲಿನ ಅರ್ಥವನ್ನು ಗ್ರಹಿಸಬಲ್ಲರು. (1 ತಿಮೊಥೆಯ 2:​3, 4) ಇನ್ನೊಂದು ಕಡೆಯಲ್ಲಿ, ಯಾರು ನಿತ್ಯಜೀವಕ್ಕೆ ನೇಮಿಸಲ್ಪಟ್ಟಿಲ್ಲವೋ ಅವರು ಎಷ್ಟೇ ಬುದ್ಧಿವಂತರಾಗಿರುವುದಾದರೂ ಅಥವಾ ಉಚ್ಚ ಶಿಕ್ಷಣವನ್ನು ಪಡೆದವರಾಗಿರುವುದಾದರೂ, ಬೈಬಲ್‌ ಸತ್ಯವನ್ನು ಅರ್ಥಮಾಡಿಕೊಳ್ಳುವ ಸುಯೋಗ ಅವರಿಗಿಲ್ಲ. ಹಠಮಾರಿಗಳು, ಅಹಂಕಾರಿಗಳು ಖಂಡಿತವಾಗಿಯೂ ದೇವರ ವಾಕ್ಯದ ಅಮೂಲ್ಯ ಸತ್ಯತೆಗಳನ್ನು ಗ್ರಹಿಸಲಾರರು. (ಮತ್ತಾಯ 13:11-15; ಲೂಕ 10:21; ಅ. ಕೃತ್ಯಗಳು 13:48) ದೇವರು ಮಾತ್ರ ಅಂಥ ಗ್ರಂಥವನ್ನು ಸಿದ್ಧಪಡಿಸಶಕ್ತನಾಗಿದ್ದನು.

ಯೆಹೋವನ ಸೇವಕರು ಸತ್ಯವಂತರಾಗಿದ್ದಾರೆ

8. ಯೇಸುವು ಸತ್ಯದ ಸಾಕಾರರೂಪವೇ ಆಗಿದ್ದನೇಕೆ?

8 ಯೆಹೋವನಂತೆ ಆತನ ನಂಬಿಗಸ್ತ ಸೇವಕರು ಸಹ ಸತ್ಯವಂತರಾಗಿದ್ದಾರೆ. ಯೆಹೋವನ ಸರ್ವೋತ್ಕೃಷ್ಟ ಸಾಕ್ಷಿಯಾಗಿರುವ ಯೇಸು ಕ್ರಿಸ್ತನು, ತಾನು ಕಲಿಸಿದಂಥ ವಿಷಯಗಳ ಮೂಲಕ ಹಾಗೂ ತಾನು ಜೀವಿಸಿದ ಮತ್ತು ಮರಣಪಟ್ಟ ರೀತಿಯ ಮೂಲಕ ಸತ್ಯವನ್ನು ದೃಢೀಕರಿಸಿದನು. ಅವನು ಯೆಹೋವನ ವಾಕ್ಯ ಹಾಗೂ ವಾಗ್ದಾನಗಳ ಸತ್ಯತೆಯನ್ನು ಎತ್ತಿಹಿಡಿದನು. ಇದರ ಪರಿಣಾಮವಾಗಿ, ಯೇಸು ಸ್ವತಃ ಹೇಳಿದಂತೆ ಅವನು ಸತ್ಯದ ಸಾಕಾರರೂಪವಾಗಿದ್ದನು.​—ಯೋಹಾನ 14:6; ಪ್ರಕಟನೆ 3:14; 19:10.

9. ಸತ್ಯವನ್ನು ನುಡಿಯುವ ವಿಷಯದಲ್ಲಿ ಶಾಸ್ತ್ರವಚನಗಳು ಏನು ಹೇಳುತ್ತವೆ?

9 ಯೇಸು, “ಕೃಪೆಯಿಂದಲೂ ಸತ್ಯದಿಂದಲೂ ತುಂಬಿದವನಾಗಿದ್ದನು” ಮತ್ತು ‘ಅವನ ಬಾಯಲ್ಲಿ ಯಾವ ವಂಚನೆಯೂ ಇರಲಿಲ್ಲ.’ (ಯೋಹಾನ 1:14; ಯೆಶಾಯ 53:9) ಇತರರೊಂದಿಗೆ ಸತ್ಯವಂತರಾಗಿರುವುದರಲ್ಲಿ ಯೇಸುವಿಟ್ಟ ಮಾದರಿಯನ್ನೇ ನಿಜ ಕ್ರೈಸ್ತರು ಅನುಸರಿಸುತ್ತಾರೆ. ಪೌಲನು ಜೊತೆ ವಿಶ್ವಾಸಿಗಳಿಗೆ ಹೀಗೆ ಸಲಹೆ ನೀಡಿದನು: “ಆದಕಾರಣ ಸುಳ್ಳಾಡುವದನ್ನು ಬಿಟ್ಟುಬಿಟ್ಟು ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ಸತ್ಯವನ್ನೇ ಆಡಲಿ; ಯಾಕಂದರೆ ನಾವು ಒಬ್ಬರಿಗೊಬ್ಬರು ಅಂಗಗಳಾಗಿದ್ದೇವಲ್ಲಾ.” (ಎಫೆಸ 4:25) ಅದಕ್ಕೂ ಮುಂಚೆ ಪ್ರವಾದಿಯಾದ ಜೆಕರ್ಯನು ಬರೆದುದು: “ಪ್ರತಿಯೊಬ್ಬನು ತನ್ನ ನೆರೆಯವನ ಸಂಗಡ ನಿಜವನ್ನೇ ಆಡಲಿ.” (ಜೆಕರ್ಯ 8:16) ಕ್ರೈಸ್ತರು ದೇವರನ್ನು ಮೆಚ್ಚಿಸಲು ಬಯಸುತ್ತಾರಾದ್ದರಿಂದ ಅವರು ಸತ್ಯವಂತರಾಗಿದ್ದಾರೆ. ಯೆಹೋವನು ಸತ್ಯಭರಿತನಾಗಿದ್ದಾನೆ ಮತ್ತು ಸುಳ್ಳಾಡುವಿಕೆಯಿಂದ ಉಂಟಾಗುವ ಹಾನಿಯ ಕುರಿತು ಆತನಿಗೆ ಗೊತ್ತಿದೆ. ಆದುದರಿಂದ, ತನ್ನ ಸೇವಕರು ಸತ್ಯವನ್ನೇ ನುಡಿಯುವಂತೆ ಆತನು ನಿರೀಕ್ಷಿಸುವುದು ನ್ಯಾಯೋಚಿತವಾದದ್ದಾಗಿದೆ.

10. ಜನರು ಏಕೆ ಸುಳ್ಳಾಡುತ್ತಾರೆ, ಮತ್ತು ಯಾವ ಹಾನಿಕರ ಫಲಿತಾಂಶಗಳೊಂದಿಗೆ?

10 ಅನೇಕರಿಗಾದರೋ, ಸುಳ್ಳಾಡುವಿಕೆಯು ಕೆಲವೊಂದು ಪ್ರಯೋಜನಗಳನ್ನು ಪಡೆದುಕೊಳ್ಳಲು ಅನುಕೂಲಕರವಾದ ಸಾಧನವಾಗಿ ಕಂಡುಬರಬಹುದು. ಜನರು ಶಿಕ್ಷೆಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ, ಯಾವುದಾದರೊಂದು ವಿಧದಲ್ಲಿ ಲಾಭವನ್ನು ಪಡೆದುಕೊಳ್ಳಲಿಕ್ಕಾಗಿ, ಅಥವಾ ಇತರರ ಹೊಗಳಿಕೆಯನ್ನು ಪಡೆಯಲಿಕ್ಕಾಗಿ ಸುಳ್ಳುಹೇಳುತ್ತಾರೆ. ಆದರೂ, ಸುಳ್ಳಾಡುವ ರೂಢಿಯು ಒಂದು ದುರ್ಗುಣವಾಗಿದೆ. ಎಲ್ಲಕ್ಕಿಂತಲೂ ಮಿಗಿಲಾಗಿ, ಒಬ್ಬ ಸುಳ್ಳುಗಾರನು ದೇವರ ಅನುಗ್ರಹವನ್ನು ಪಡೆದುಕೊಳ್ಳಲು ಸಾಧ್ಯವಿಲ್ಲ. (ಪ್ರಕಟನೆ 21:​8, 27; 22:15) ನಾವು ಸತ್ಯವಂತರೆಂಬ ಪ್ರಖ್ಯಾತಿಯನ್ನು ಪಡೆದಿರುವಾಗ, ನಾವು ಏನು ಹೇಳುತ್ತೇವೋ ಅದನ್ನು ಇತರರು ನಂಬುತ್ತಾರೆ; ಅವರು ನಮ್ಮ ಮೇಲೆ ಭರವಸೆಯಿಡುತ್ತಾರೆ. ಆದರೂ, ಒಂದೇ ಒಂದು ಸುಳ್ಳನ್ನು ನಾವು ಹೇಳಿದ್ದು ಇತರರ ಗಮನಕ್ಕೆ ಬೀಳುವಲ್ಲಿ, ಭವಿಷ್ಯತ್ತಿನಲ್ಲಿ ನಾವು ಏನೇ ಹೇಳುವುದಾದರೂ ಅದರ ಸತ್ಯತೆಯನ್ನು ಅವರು ಸಂದೇಹಿಸಬಹುದು. ಆಫ್ರಿಕದ ಒಂದು ಗಾದೆಮಾತು ಹೀಗಿದೆ: “ಒಂದು ಸುಳ್ಳು ಸಾವಿರ ಸತ್ಯಗಳನ್ನು ಹಾಳುಮಾಡಿಬಿಡುತ್ತದೆ.” ಇನ್ನೊಂದು ಗಾದೆಮಾತು ಹೇಳುವುದು: “ಒಬ್ಬ ಸುಳ್ಳುಗಾರನು ಸತ್ಯವನ್ನಾಡಿದರೂ ನಂಬುವವರಾರು.”

11. ಯಾವ ವಿಧದಲ್ಲಿ ಸತ್ಯವಂತರಾಗಿರುವುದರಲ್ಲಿ ಕೇವಲ ಸತ್ಯವನ್ನು ಹೇಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ?

11 ಸತ್ಯವಂತರಾಗಿರುವುದರಲ್ಲಿ ಕೇವಲ ಸತ್ಯವನ್ನು ಹೇಳುವುದಕ್ಕಿಂತಲೂ ಹೆಚ್ಚಿನದ್ದು ಒಳಗೂಡಿದೆ. ಅದು ಒಂದು ಜೀವನಮಾರ್ಗವಾಗಿದೆ. ಅದು ನಾವು ಎಂಥ ವ್ಯಕ್ತಿಯಾಗಿದ್ದೇವೆಂಬುದನ್ನು ತಿಳಿಯಪಡಿಸುತ್ತದೆ. ನಾವು ಏನು ಹೇಳುತ್ತೇವೋ ಅದರಿಂದ ಮಾತ್ರವಲ್ಲ ನಾವು ಏನು ಮಾಡುತ್ತೇವೋ ಅದರ ಮೂಲಕವೂ ಇತರರಿಗೆ ಸತ್ಯವನ್ನು ತಿಳಿಯಪಡಿಸುತ್ತೇವೆ. ಅಪೊಸ್ತಲ ಪೌಲನು ಕೇಳಿದ್ದು: “ಹೀಗಿರಲಾಗಿ ಮತ್ತೊಬ್ಬನಿಗೆ ಉಪದೇಶಮಾಡುವ ನೀನು ನಿನಗೆ ಉಪದೇಶಮಾಡಿಕೊಳ್ಳದೆ ಇದ್ದೀಯೋ? ಕದಿಯಬಾರದೆಂದು ಬೋಧಿಸುವ ನೀನು ಕದಿಯುತ್ತೀಯೋ? ಹಾದರ ಮಾಡಬಾರದೆಂದು ಹೇಳುವ ನೀನು ಹಾದರ ಮಾಡುತ್ತೀಯೋ?” (ರೋಮಾಪುರ 2:21, 22) ಒಂದುವೇಳೆ ನಾವು ಇತರರಿಗೆ ಸತ್ಯವನ್ನು ಕಲಿಸಬೇಕಾಗಿರುವುದಾದರೆ, ನಮ್ಮ ಎಲ್ಲಾ ಮಾರ್ಗಗಳಲ್ಲಿ ನಾವು ಸತ್ಯವಂತರಾಗಿರಬೇಕು. ಸತ್ಯವಂತರು ಹಾಗೂ ಪ್ರಾಮಾಣಿಕರು ಎಂಬ ಒಳ್ಳೇ ಹೆಸರು, ನಾವು ಏನನ್ನು ಕಲಿಸುತ್ತೇವೋ ಅದಕ್ಕೆ ಜನರು ಹೇಗೆ ಪ್ರತಿಕ್ರಿಯಿಸುತ್ತಾರೆ ಎಂಬುದರ ಮೇಲೆ ಬಲವಾದ ಪ್ರಭಾವವನ್ನು ಬೀರುತ್ತದೆ.

12, 13. ಸತ್ಯಭಾವದ ವಿಷಯದಲ್ಲಿ ಒಬ್ಬ ಹುಡುಗಿಯು ಏನು ಬರೆದಳು, ಮತ್ತು ಅವಳ ಉಚ್ಚ ನೈತಿಕ ಮಟ್ಟಕ್ಕೆ ಯಾವುದು ಕಾರಣವಾಗಿತ್ತು?

12 ಯೆಹೋವನ ಸೇವಕರ ನಡುವೆ ಇರುವಂಥ ಎಳೆಯರು ಸಹ ಸತ್ಯವಂತರಾಗಿರುವುದರ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುತ್ತಾರೆ. ಶಾಲೆಯೊಂದರ ಪ್ರಬಂಧ ಸ್ಪರ್ಧೆಯಲ್ಲಿ, ಆ ಸಮಯದಲ್ಲಿ 13 ವರ್ಷದವಳಾಗಿದ್ದ ಜೆನೀ ಹೀಗೆ ಬರೆದಳು: “ಪ್ರಾಮಾಣಿಕತೆಯನ್ನು ನಾನು ನಿಜವಾಗಿಯೂ ಅಮೂಲ್ಯವಾಗಿ ಪರಿಗಣಿಸುತ್ತೇನೆ. ಅಸಂತೋಷಕರವಾಗಿಯೇ, ಇಂದು ಹೆಚ್ಚು ಜನರು ಸಂಪೂರ್ಣ ರೀತಿಯಲ್ಲಿ ಪ್ರಾಮಾಣಿಕರಾಗಿಲ್ಲ. ಜೀವನದಾದ್ಯಂತ ನಾನು ಯಾವಾಗಲೂ ಪ್ರಾಮಾಣಿಕತೆಯನ್ನು ಕಾಪಾಡಿಕೊಳ್ಳುತ್ತೇನೆ ಎಂದು ಸ್ವತಃ ನನಗೆ ವಚನಕೊಟ್ಟುಕೊಂಡಿದ್ದೇನೆ. ಸತ್ಯವನ್ನು ಹೇಳುವುದರಿಂದ ನನಗೆ ಅಥವಾ ನನ್ನ ಸ್ನೇಹಿತರಿಗೆ ಆ ಕೂಡಲೆ ಯಾವುದೇ ಪ್ರಯೋಜನ ದೊರಕದಿರುವಂಥ ಸಮಯದಲ್ಲೂ ನಾನು ಪ್ರಾಮಾಣಿಕಳಾಗಿರುವೆ. ಸತ್ಯವನ್ನು ನುಡಿಯುವವರು ಹಾಗೂ ಪ್ರಾಮಾಣಿಕರಾಗಿರುವ ಜನರೇ ನನ್ನ ಸ್ನೇಹಿತರಾಗಿದ್ದಾರೆ ಎಂಬುದನ್ನು ನಾನು ಖಚಿತಪಡಿಸಿಕೊಳ್ಳುವೆ.”

13 ಈ ಪ್ರಬಂಧದ ಕುರಿತು ಹೇಳಿಕೆ ನೀಡುತ್ತಾ, ಜೆನೀಯ ಶಿಕ್ಷಕಿಯು ಈ ರೀತಿ ತಿಳಿಸಿದಳು: “ನೀನು ತುಂಬ ಚಿಕ್ಕ ಪ್ರಾಯದವಳಾಗಿರುವುದಾದರೂ, ಎಷ್ಟು ಬಲವಾದ ನೈತಿಕ ಹಾಗೂ ನೀತಿಯ ನಿಯಮಾವಳಿಯನ್ನು ಬೆಳೆಸಿಕೊಂಡಿದ್ದೀ. ನಿನ್ನ ಬಳಿ ಅಪಾರ ನೈತಿಕ ಬಲವಿರುವುದರಿಂದ, ನಿನ್ನ ನೀತಿಯ ನಿಯಮಾವಳಿಯನ್ನು ಖಂಡಿತವಾಗಿಯೂ ಪಾಲಿಸಿಕೊಂಡು ಹೋಗುತ್ತೀ ಎಂಬುದು ನನಗೆ ಗೊತ್ತು.” ಈ ಶಾಲಾಹುಡುಗಿಯ ನೈತಿಕ ಬಲಕ್ಕೆ ಯಾವುದು ಕಾರಣವಾಗಿತ್ತು? ತನ್ನ ಪ್ರಬಂಧದ ಪೀಠಿಕೆಯಲ್ಲಿ, ತನ್ನ ಧರ್ಮವು “[ತನ್ನ] ಜೀವಿತಕ್ಕೆ ಅಗತ್ಯವಿರುವ ಮಟ್ಟಗಳನ್ನು ಸ್ಥಾಪಿಸಿದೆ” ಎಂದು ಜೆನೀ ತಿಳಿಸಿದಳು. ಜೆನೀ ಆ ಪ್ರಬಂಧವನ್ನು ಬರೆದು ಏಳು ವರ್ಷಗಳು ಸಂದಿವೆ. ಅವಳ ಶಿಕ್ಷಕಿಯು ಅಂದಾಜುಮಾಡಿದಂತೆ, ಯೆಹೋವನ ಸಾಕ್ಷಿಗಳಲ್ಲಿ ಒಬ್ಬಳೋಪಾದಿ ಜೆನೀ ತನ್ನ ಜೀವಿತದಲ್ಲಿ ಉಚ್ಚ ನೈತಿಕ ಮಟ್ಟಗಳನ್ನು ಕಾಪಾಡಿಕೊಳ್ಳುತ್ತಾ ಮುಂದುವರಿಯುತ್ತಿದ್ದಾಳೆ.

ಯೆಹೋವನ ಸೇವಕರು ಸತ್ಯವನ್ನು ತಿಳಿಯಪಡಿಸುತ್ತಾರೆ

14. ಯಾವುದು ಸತ್ಯವೋ ಅದನ್ನು ಎತ್ತಿಹಿಡಿಯುವ ವಿಶೇಷವಾದ ದೊಡ್ಡ ಜವಾಬ್ದಾರಿಯು ದೇವರ ಸೇವಕರಿಗಿದೆ ಏಕೆ?

14 ಯೆಹೋವನ ಸಾಕ್ಷಿಗಳಲ್ಲದೆ ಇತರರು ಸಹ ಸತ್ಯವನ್ನು ನುಡಿಯಬಹುದು ಮತ್ತು ಪ್ರಾಮಾಣಿಕರಾಗಿರಲು ಪ್ರಯತ್ನಿಸಬಹುದು ಎಂಬುದಂತೂ ನಿಶ್ಚಯ. ಆದರೂ, ದೇವರ ಸೇವಕರೋಪಾದಿ ನಾವು, ಯಾವುದು ಸತ್ಯವೋ ಅದನ್ನು ಎತ್ತಿಹಿಡಿಯುವ ವಿಶೇಷವಾದ ದೊಡ್ಡ ಜವಾಬ್ದಾರಿಯನ್ನು ಹೊತ್ತಿದ್ದೇವೆ. ಒಬ್ಬ ವ್ಯಕ್ತಿಯನ್ನು ನಿತ್ಯಜೀವಕ್ಕೆ ನಡಿಸಬಲ್ಲ ಬೈಬಲ್‌ ಸತ್ಯತೆಗಳು ನಮ್ಮ ವಶಕ್ಕೆ ಕೊಡಲ್ಪಟ್ಟಿವೆ. ಆದುದರಿಂದ, ಆ ಜ್ಞಾನವನ್ನು ಇತರರೊಂದಿಗೆ ಹಂಚಿಕೊಳ್ಳುವ ಹಂಗು ನಮಗಿದೆ. ಯೇಸು ಹೇಳಿದ್ದು: “ಯಾವನಿಗೆ ಬಹಳವಾಗಿ ಕೊಟ್ಟದೆಯೋ ಅವನ ಕಡೆಯಿಂದ ಬಹಳವಾಗಿ ನಿರೀಕ್ಷಿಸಲ್ಪಡುವದು.” (ಲೂಕ 12:48) ದೇವರ ಅಮೂಲ್ಯ ಜ್ಞಾನದಿಂದ ಆಶೀರ್ವದಿಸಲ್ಪಟ್ಟಿರುವವರಿಂದ ‘ಬಹಳವಾಗಿ ನಿರೀಕ್ಷಿಸಲ್ಪಡುತ್ತದೆ’ ಎಂಬುದಂತೂ ನಿಶ್ಚಯ.

15. ಇತರರಿಗೆ ಬೈಬಲ್‌ ಸತ್ಯವನ್ನು ತಿಳಿಯಪಡಿಸುವುದರಲ್ಲಿ ನೀವು ಯಾವ ಸಂತೋಷವನ್ನು ಕಂಡುಕೊಳ್ಳುತ್ತೀರಿ?

15 ಬೈಬಲ್‌ ಸತ್ಯವನ್ನು ಇತರರಿಗೆ ತಿಳಿಯಪಡಿಸುವುದರಲ್ಲಿ ಮಹತ್ತರವಾದ ಸಂತೋಷವಿದೆ. ಯೇಸುವಿನ ಪ್ರಥಮ ಶತಮಾನದ ಶಿಷ್ಯರಂತೆ, ‘ಕುರುಬನಿಲ್ಲದ ಕುರಿಗಳ ಹಾಗೆ ತೊಳಲಿ ಬಳಲಿ ಹೋಗಿರುವವರಿಗೆ’ ಮತ್ತು ‘ದೆವ್ವಗಳ ಬೋಧನೆಗಳಿಂದ’ ಕುರುಡುಗೊಳಿಸಲ್ಪಟ್ಟು ಕಸಿವಿಸಿಗೊಂಡಿರುವವರಿಗೆ, ನಾವು ಸುವಾರ್ತೆಯನ್ನು ಅಂದರೆ ನಿರೀಕ್ಷೆಯ ಹೃತ್ಪೂರ್ವಕ ಸಂದೇಶವನ್ನು ಸಾರುತ್ತೇವೆ. (ಮತ್ತಾಯ 9:36; 1 ತಿಮೊಥೆಯ 4:1) ಅಪೊಸ್ತಲ ಯೋಹಾನನು ಬರೆದುದು: “ನನ್ನ ಮಕ್ಕಳು ಸತ್ಯವನ್ನನುಸರಿಸಿ ನಡೆಯುವವರಾಗಿದ್ದಾರೆಂದು ಕೇಳುವದಕ್ಕಿಂತ ಹೆಚ್ಚಾದ ಸಂತೋಷವು ನನಗಿಲ್ಲ.” (3 ಯೋಹಾನ 4) ಯೋಹಾನನ ‘ಮಕ್ಕಳ’​—ಬಹುಶಃ ಅವನು ಯಾರಿಗೆ ಸತ್ಯವನ್ನು ಪರಿಚಯಿಸಿದನೋ ಅವರು​—ನಂಬಿಗಸ್ತಿಕೆಯು, ಅವನಿಗೆ ಅಪಾರ ಆನಂದವನ್ನು ತಂದಿತು. ದೇವರ ವಾಕ್ಯದ ಕಡೆಗೆ ಗಣ್ಯತೆಯನ್ನು ತೋರಿಸುವ ಮೂಲಕ ಜನರು ಪ್ರತಿಕ್ರಿಯಿಸುವುದನ್ನು ನೋಡುವುದು ನಮಗೂ ಆನಂದವನ್ನು ನೀಡುತ್ತದೆ.

16, 17. (ಎ) ಎಲ್ಲರೂ ಸತ್ಯವನ್ನು ಅಂಗೀಕರಿಸುವುದಿಲ್ಲವೇಕೆ? (ಬಿ) ನೀವು ಬೈಬಲ್‌ ಸತ್ಯವನ್ನು ಪ್ರಕಟಿಸುವಾಗ ಯಾವ ಮಹದಾನಂದವನ್ನು ಅನುಭವಿಸಸಾಧ್ಯವಿದೆ?

16 ಎಲ್ಲರೂ ಸತ್ಯವನ್ನು ಸ್ವೀಕರಿಸುವುದಿಲ್ಲ ಎಂಬುದು ಒಪ್ಪಿಕೊಳ್ಳತಕ್ಕ ಸಂಗತಿಯೇ. ದೇವರ ಕುರಿತಾದ ಸತ್ಯವನ್ನು ಮಾತಾಡುವುದು ಅಷ್ಟೇನೂ ಜನಪ್ರಿಯವಾಗಿರದಿದ್ದಂಥ ಸಮಯದಲ್ಲೂ ಯೇಸು ಹಾಗೆ ಮಾಡಿದನು. ಯೆಹೂದಿ ವಿರೋಧಿಗಳಿಗೆ ಅವನು ಹೇಳಿದ್ದು: “ನಾನು ಸತ್ಯವನ್ನು ಹೇಳುವವನಾಗಿರುವಲ್ಲಿ ನೀವು ನನ್ನ ಮಾತನ್ನು ನಂಬದೆ ಇರುವದು ಯಾಕೆ? ದೇವರಿಂದ ಹುಟ್ಟಿದವನು ದೇವರ ಮಾತುಗಳನ್ನು ಕೇಳುತ್ತಾನೆ. ನೀವು ದೇವರಿಂದ ಹುಟ್ಟದ ಕಾರಣ ಅವುಗಳನ್ನು ಕೇಳುವದಿಲ್ಲ.”​—ಯೋಹಾನ 8:46, 47.

17 ಯೇಸುವಿನಂತೆ ನಾವು ಸಹ ಯೆಹೋವನ ಕುರಿತಾದ ಅಮೂಲ್ಯ ಸತ್ಯವನ್ನು ಹೇಳಲು ಎಂದಿಗೂ ಹಿಂಜರಿಯುವುದಿಲ್ಲ. ನಾವು ಇತರರಿಗೆ ಏನು ಹೇಳುತ್ತೇವೋ ಅದನ್ನು ಪ್ರತಿಯೊಬ್ಬರೂ ಅಂಗೀಕರಿಸುತ್ತಾರೆ ಎಂದು ನಾವು ನಿರೀಕ್ಷಿಸುವುದಿಲ್ಲ, ಏಕೆಂದರೆ ಯೇಸು ಏನು ಹೇಳಿದನೋ ಅದನ್ನು ಎಲ್ಲರೂ ಅಂಗೀಕರಿಸಲಿಲ್ಲ. ಆದರೂ, ನಾವು ಸರಿಯಾದದ್ದನ್ನೇ ಮಾಡುತ್ತಿದ್ದೇವೆ ಎಂಬುದನ್ನು ತಿಳಿಯುವುದರಿಂದ ಸಿಗುವ ಮಹದಾನಂದ ನಮಗಿದೆ. ಯೆಹೋವನು ತನ್ನ ಪ್ರೀತಿಪೂರ್ವಕ ದಯೆಯ ಕಾರಣದಿಂದಲೇ, ಸತ್ಯವು ಮಾನವಕುಲಕ್ಕೆ ಪ್ರಕಟಪಡಿಸಲ್ಪಡಬೇಕೆಂದು ಬಯಸುತ್ತಾನೆ. ಸತ್ಯವನ್ನು ಹೊಂದಿದವರಾಗಿರುವ ಕ್ರೈಸ್ತರು, ಅಂಧಕಾರದಿಂದ ತುಂಬಿರುವ ಲೋಕದಲ್ಲಿ ಬೆಳಕುವಾಹಕರಾಗಿ ಪರಿಣಮಿಸಿದ್ದಾರೆ. ನಮ್ಮ ನಡೆನುಡಿಗಳಲ್ಲಿ ಸತ್ಯದ ಬೆಳಕನ್ನು ಪ್ರಕಾಶಿಸುವ ಮೂಲಕ, ಇತರರು ನಮ್ಮ ಸ್ವರ್ಗೀಯ ತಂದೆಗೆ ಮಹಿಮೆಯನ್ನು ಸಲ್ಲಿಸುವಂತೆ ನಾವು ಅವರಿಗೆ ಸಹಾಯಮಾಡಸಾಧ್ಯವಿದೆ. (ಮತ್ತಾಯ 5:​14, 16) ನಾವು ಸೈತಾನನ ನಕಲಿ ಸತ್ಯವನ್ನು ತಿರಸ್ಕರಿಸುತ್ತೇವೆ ಮತ್ತು ಶುದ್ಧವೂ ಪಾರಮಾರ್ಥಿಕವೂ ಆಗಿರುವ ದೇವರ ವಾಕ್ಯವನ್ನು ಎತ್ತಿಹಿಡಿಯುತ್ತೇವೆ ಎಂಬುದನ್ನು ಸಾರ್ವಜನಿಕವಾಗಿ ತಿಳಿಯಪಡಿಸುತ್ತೇವೆ. ನಮಗೆ ಗೊತ್ತಿರುವ ಹಾಗೂ ನಾವು ಇತರರೊಂದಿಗೆ ಹಂಚಿಕೊಳ್ಳುವ ಸತ್ಯವು, ಯಾರು ಅದನ್ನು ಅಂಗೀಕರಿಸುತ್ತಾರೋ ಅವರಿಗೆ ನಿಜವಾದ ಸ್ವಾತಂತ್ರ್ಯವನ್ನು ನೀಡಬಲ್ಲದು.​—ಯೋಹಾನ 8:32.

ಸತ್ಯತೆಯ ಮಾರ್ಗವನ್ನು ಬೆನ್ನಟ್ಟಿರಿ

18. ಏಕೆ ಮತ್ತು ಹೇಗೆ ಯೇಸು ನತಾನಯೇಲನಿಗೆ ಅನುಗ್ರಹವನ್ನು ತೋರಿಸಿದನು?

18 ಯೇಸು ಸತ್ಯವನ್ನು ಪ್ರೀತಿಸಿದನು ಮತ್ತು ಸತ್ಯವನ್ನೇ ಮಾತಾಡಿದನು. ತನ್ನ ಭೂಶುಶ್ರೂಷೆಯ ಸಮಯದಲ್ಲಿ ಅವನು ಸತ್ಯವಂತರಿಗೆ ಅನುಗ್ರಹವನ್ನು ತೋರಿಸಿದನು. ನತಾನಯೇಲನ ಕುರಿತು ಯೇಸು ಹೇಳಿದ್ದು: “ಇಗೋ ಇವನು ನಿಜವಾದ ಇಸ್ರಾಯೇಲನು; ಇವನಲ್ಲಿ ಕಪಟವಿಲ್ಲ.” (ಯೋಹಾನ 1:47) ತರುವಾಯ, ಬಾರ್ತೊಲೊಮಾಯ ಎಂದು ಕರೆಯಲ್ಪಡುವ ನತಾನಯೇಲನು, 12 ಮಂದಿ ಅಪೊಸ್ತಲರಲ್ಲಿ ಒಬ್ಬನಾಗಿ ಆಯ್ಕೆಮಾಡಲ್ಪಟ್ಟನು. (ಮತ್ತಾಯ 10:​2-4) ಎಷ್ಟು ದೊಡ್ಡ ಸನ್ಮಾನ!

19-21. ಈ ಮುಂಚೆ ಕುರುಡನಾಗಿದ್ದ ಒಬ್ಬ ವ್ಯಕ್ತಿಯು ತನ್ನ ಧೈರ್ಯಭರಿತ ಸತ್ಯತೆಗಾಗಿ ಹೇಗೆ ಆಶೀರ್ವದಿಸಲ್ಪಟ್ಟನು?

19 ಯೋಹಾನ ಎಂಬ ಬೈಬಲ್‌ ಪುಸ್ತಕದಲ್ಲಿನ ಒಂದು ಇಡೀ ಅಧ್ಯಾಯವು, ಯೇಸುವಿನಿಂದ ಆಶೀರ್ವದಿಸಲ್ಪಟ್ಟಂಥ ಇನ್ನೊಬ್ಬ ಪ್ರಾಮಾಣಿಕ ವ್ಯಕ್ತಿಯ ವೃತ್ತಾಂತವನ್ನು ನೀಡುತ್ತದೆ. ನಮಗೆ ಅವನ ಹೆಸರು ಗೊತ್ತಿಲ್ಲ. ಅವನು ಹುಟ್ಟುಕುರುಡನಾಗಿದ್ದ ಒಬ್ಬ ಭಿಕ್ಷುಕನು ಎಂಬುದಷ್ಟೇ ನಮಗೆ ಗೊತ್ತು. ಯೇಸು ಅವನಿಗೆ ಪುನಃ ದೃಷ್ಟಿಯನ್ನು ನೀಡಿದಾಗ ಜನರು ಅತ್ಯಾಶ್ಚರ್ಯಪಟ್ಟರು. ಈ ಅದ್ಭುತಕರ ವಾಸಿಮಾಡುವಿಕೆಯ ಸುದ್ದಿಯು, ಸತ್ಯವನ್ನು ದ್ವೇಷಿಸುತ್ತಿದ್ದಂಥ ಕೆಲವು ಫರಿಸಾಯರ ಕಿವಿಗೆ ಬಿತ್ತು. ಇವರು, ಯಾರು ಯೇಸುವಿನಲ್ಲಿ ನಂಬಿಕೆಯನ್ನು ಇಡುತ್ತಾರೋ ಅವರನ್ನು ಸಭಾಮಂದಿರದಿಂದ ಬಹಿಷ್ಕರಿಸಬೇಕು ಎಂದು ತೀರ್ಮಾನಿಸಿದರು. ಅವರ ಒಳಸಂಚನ್ನು ಅರಿತವರಾಗಿ, ಈ ಮುಂಚೆ ಕುರುಡನಾಗಿದ್ದ ವ್ಯಕ್ತಿಯ ಭಯಭೀತ ಹೆತ್ತವರು, ಈಗ ತಮ್ಮ ಮಗನಿಗೆ ಹೇಗೆ ದೃಷ್ಟಿ ಬಂತು ಅಥವಾ ಇದಕ್ಕೆ ಯಾರು ಕಾರಣರು ಎಂಬುದು ನಮಗೆ ಗೊತ್ತಿಲ್ಲ ಎಂದು ತಿಳಿಸುವ ಮೂಲಕ ಫರಿಸಾಯರಿಗೆ ಸುಳ್ಳು ಹೇಳಿದರು.​—ಯೋಹಾನ 9:​1-23.

20 ವಾಸಿಮಾಡಲ್ಪಟ್ಟಿದ್ದ ವ್ಯಕ್ತಿಯು ಪುನಃ ಫರಿಸಾಯರ ಮುಂದೆ ಬರಮಾಡಲ್ಪಟ್ಟನು. ಮುಂದಿನ ಪರಿಣಾಮಗಳ ಕಡೆಗೆ ಗಮನ ಹರಿಸದೆ, ಅವನು ಧೈರ್ಯವಾಗಿ ಸತ್ಯವನ್ನು ಹೇಳಿದನು. ತಾನು ಹೇಗೆ ವಾಸಿಮಾಡಲ್ಪಟ್ಟೆ ಮತ್ತು ಯೇಸುವೇ ತನಗೆ ದೃಷ್ಟಿಯನ್ನು ನೀಡಿದ್ದು ಎಂಬುದನ್ನು ಅವನು ವಿವರಿಸಿದನು. ಅಗ್ರಗಣ್ಯರಾದ ಹಾಗೂ ಶಿಕ್ಷಿತರಾದ ಈ ಪುರುಷರು ಯೇಸು ನಿಜವಾಗಿಯೂ ದೇವರಿಂದ ಕಳುಹಿಸಲ್ಪಟ್ಟವನೆಂದು ನಂಬಲಿಲ್ಲವೆಂಬುದನ್ನು ನೋಡಿ ದಿಗ್ಭ್ರಮೆಗೊಂಡವನಾಗಿ, ವಾಸಿಗೊಂಡ ವ್ಯಕ್ತಿಯು ಧೈರ್ಯದಿಂದ ಅವರಿಗೆ ವಾಸ್ತವ ಸಂಗತಿಯನ್ನು ಅಂಗೀಕರಿಸುವಂತೆ ಉತ್ತೇಜಿಸುತ್ತಾ ಹೇಳಿದ್ದು: “ಈತನು ದೇವರಿಂದ ಬಂದವನಲ್ಲದಿದ್ದರೆ ಏನೂ ಮಾಡಲಾರದೆ ಇರುತ್ತಿದ್ದನು.” ಇದಕ್ಕೆ ಪ್ರತಿವಾದಿಸಲು ಯಾವುದೇ ಅಂಶವು ಇರಲ್ಲಿಲ್ಲವಾದ್ದರಿಂದ, ಫರಿಸಾಯರು ಆ ವ್ಯಕ್ತಿಯನ್ನು ದುರಹಂಕಾರಿಯೆಂದು ದೂಷಿಸಿದರು ಮತ್ತು ಅವನನ್ನು ಹೊರಗೆ ಹಾಕಿದರು.​—ಯೋಹಾನ 9:​24-34.

21 ಯೇಸುವಿಗೆ ಇದರ ಕುರಿತು ತಿಳಿದುಬಂದಾಗ, ಆ ವ್ಯಕ್ತಿಯನ್ನು ಕಂಡುಹಿಡಿಯಲಿಕ್ಕಾಗಿ ಅವನು ಪ್ರೀತಿಯಿಂದ ಸಮಯವನ್ನು ವಿನಿಯೋಗಿಸಿದನು. ಅವನನ್ನು ಕಂಡುಕೊಂಡ ಬಳಿಕ, ಈ ಮುಂಚೆ ಕುರುಡನಾಗಿದ್ದ ಆ ವ್ಯಕ್ತಿಯ ನಂಬಿಕೆಯನ್ನು ಇನ್ನಷ್ಟು ಬಲಪಡಿಸಿದನು. ತಾನೇ ಮೆಸ್ಸೀಯನು ಎಂಬುದನ್ನು ಯೇಸು ಬಿಚ್ಚುಮನಸ್ಸಿನಿಂದ ಹೇಳಿಕೊಂಡನು. ಸತ್ಯವನ್ನು ಹೇಳಿದ್ದಕ್ಕಾಗಿ ಈ ಮನುಷ್ಯನು ಎಷ್ಟು ಆಶೀರ್ವದಿಸಲ್ಪಟ್ಟನು! ಯಾರು ಸತ್ಯವನ್ನಾಡುತ್ತಾರೋ ಅವರ ಮೇಲೆ ದೈವಿಕ ಅನುಗ್ರಹವು ಇರುತ್ತದೆ ಎಂಬುದು ನಿಶ್ಚಯ.​—ಯೋಹಾನ 9:​35-37.

22. ನಾವು ಸತ್ಯತೆಯ ಮಾರ್ಗವನ್ನು ಏಕೆ ಬೆನ್ನಟ್ಟಬೇಕು?

22 ಸತ್ಯವನ್ನು ರೂಢಿಮಾಡಿಕೊಳ್ಳುವುದು, ನಾವು ಗಂಭೀರವಾಗಿ ಪರಿಗಣಿಸಬೇಕಾದ ಒಂದು ಬೆನ್ನಟ್ಟುವಿಕೆಯಾಗಿದೆ. ಜನರೊಂದಿಗೆ ಮತ್ತು ದೇವರೊಂದಿಗೆ ಒಳ್ಳೇ ಸಂಬಂಧಗಳನ್ನು ಬೆಳೆಸಿಕೊಳ್ಳುವುದರಲ್ಲಿ ಮತ್ತು ಕಾಪಾಡಿಕೊಳ್ಳುವುದರಲ್ಲಿ ಇದು ತುಂಬ ಮೂಲಭೂತವಾದದ್ದಾಗಿದೆ. ಸತ್ಯವಂತರಾಗಿರುವುದು ಅಂದರೆ, ಮುಚ್ಚುಮರೆಯಿಲ್ಲದವರಾಗಿರುವುದು, ಪ್ರಾಮಾಣಿಕರಾಗಿರುವುದು, ಸ್ನೇಹಪರರಾಗಿರುವುದು ಮತ್ತು ಭರವಸಾರ್ಹರಾಗಿರುವುದಾಗಿದೆ, ಮತ್ತು ಈ ಗುಣವು ನಮ್ಮನ್ನು ಯೆಹೋವನ ಅನುಗ್ರಹಕ್ಕೆ ಪಾತ್ರರನ್ನಾಗಿ ಮಾಡುತ್ತದೆ. (ಕೀರ್ತನೆ 15:​1, 2) ಅಸತ್ಯವಂತರಾಗಿರುವುದು ಅಂದರೆ, ವಂಚಿಸುವವರಾಗಿರುವುದು, ಅವಿಶ್ವಾಸಾರ್ಹರಾಗಿರುವುದು ಮತ್ತು ಸುಳ್ಳಾಡುವವರಾಗಿರುವುದಾಗಿದೆ, ಮತ್ತು ಇದು ನಮ್ಮನ್ನು ಯೆಹೋವನ ಅಪ್ರಸನ್ನತೆಗೆ ಗುರಿಪಡಿಸುತ್ತದೆ. (ಜ್ಞಾನೋಕ್ತಿ 6:​16-19) ಆದುದರಿಂದ, ಸತ್ಯತೆಯ ಮಾರ್ಗವನ್ನು ಬೆನ್ನಟ್ಟಲು ದೃಢನಿಶ್ಚಿತರಾಗಿರಿ. ವಾಸ್ತವದಲ್ಲಿ, ಸತ್ಯದ ದೇವರನ್ನು ಅನುಕರಿಸಬೇಕಾದರೆ, ನಾವು ಸತ್ಯವನ್ನು ತಿಳಿದುಕೊಳ್ಳಬೇಕು, ಸತ್ಯವನ್ನು ಮಾತಾಡಬೇಕು, ಮತ್ತು ಸತ್ಯಕ್ಕನುಸಾರ ಜೀವಿಸಬೇಕು.

ನೀವು ಹೇಗೆ ಉತ್ತರಿಸುವಿರಿ?

• ನಮಗೆ ಸತ್ಯವು ತಿಳಿದಿರುವುದರಿಂದ ನಾವೇಕೆ ಕೃತಜ್ಞರಾಗಿರಸಾಧ್ಯವಿದೆ?

• ಸತ್ಯವಂತರಾಗಿರುವುದರಲ್ಲಿ ನಾವು ಯೆಹೋವನನ್ನು ಹೇಗೆ ಅನುಕರಿಸಬಹುದು?

• ಇತರರಿಗೆ ಬೈಬಲ್‌ ಸತ್ಯವನ್ನು ತಿಳಿಯಪಡಿಸುವುದರಲ್ಲಿ ಯಾವ ಪ್ರಯೋಜನಗಳಿವೆ?

• ಸತ್ಯತೆಯ ಮಾರ್ಗವನ್ನು ಬೆನ್ನಟ್ಟುವುದು ಏಕೆ ಪ್ರಾಮುಖ್ಯವಾದದ್ದಾಗಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 17ರಲ್ಲಿರುವ ಚಿತ್ರಗಳು]

ಬೈಬಲ್‌ ಸತ್ಯವು ಕ್ರೈಸ್ತರ ವಶಕ್ಕೆ ಕೊಡಲ್ಪಟ್ಟಿರುವುದರಿಂದ ಅವರು ಅತ್ಯಂತ ಹುರುಪಿನಿಂದ ಅದನ್ನು ಇತರರೊಂದಿಗೆ ಹಂಚಿಕೊಳ್ಳುತ್ತಾರೆ

[ಪುಟ 18ರಲ್ಲಿರುವ ಚಿತ್ರಗಳು]

ಯೇಸುವಿನಿಂದ ವಾಸಿಮಾಡಲ್ಪಟ್ಟ ಕುರುಡನು ಸತ್ಯವನ್ನು ಹೇಳಿದ್ದರಿಂದ ಮಹತ್ತರವಾಗಿ ಆಶೀರ್ವದಿಸಲ್ಪಟ್ಟನು