ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸತ್ಯದ ದೇವರಾಗಿರುವ ಯೆಹೋವನು

ಸತ್ಯದ ದೇವರಾಗಿರುವ ಯೆಹೋವನು

ಸತ್ಯದ ದೇವರಾಗಿರುವ ಯೆಹೋವನು

“ಸತ್ಯದ ದೇವರಾಗಿರುವ ಯೆಹೋವನೇ, ನೀನು ನನ್ನನ್ನು ವಿಮೋಚಿಸಿದ್ದೀ.”​—ಕೀರ್ತನೆ 31:​5, NW.

1. ಅಸತ್ಯವು ಅಸ್ತಿತ್ವದಲ್ಲಿರದಿದ್ದಂಥ ಕಾಲದಲ್ಲಿ ಸ್ವರ್ಗದಲ್ಲಿ ಮತ್ತು ಭೂಮಿಯಲ್ಲಿ ಪರಿಸ್ಥಿತಿಗಳು ಹೇಗಿದ್ದವು?

ಒಂದು ಕಾಲದಲ್ಲಿ ಅಸತ್ಯ ಎಂಬುದು ಅಸ್ತಿತ್ವದಲ್ಲೇ ಇರಲಿಲ್ಲ. ಅಗೋಚರವಾದ ಸ್ವರ್ಗದಲ್ಲಿ ಪರಿಪೂರ್ಣವಾದ ಆತ್ಮಜೀವಿಗಳು ನಿವಾಸಿಸುತ್ತಿದ್ದರು ಮತ್ತು ಅವರು “ಸತ್ಯದ ದೇವರಾಗಿರುವ” ತಮ್ಮ ಸೃಷ್ಟಿಕರ್ತನ ಸೇವೆಮಾಡಿಕೊಂಡಿದ್ದರು. (ಕೀರ್ತನೆ 31:5) ಅಲ್ಲಿ ಅಸತ್ಯವೂ ಇರಲಿಲ್ಲ, ವಂಚನೆಯೂ ಇರಲಿಲ್ಲ. ಯೆಹೋವನು ಆತ್ಮಜೀವಿಗಳಾಗಿರುವ ತನ್ನ ಪುತ್ರರೊಂದಿಗೆ ಯಾವುದು ಸತ್ಯವಾಗಿತ್ತೋ ಅದನ್ನೇ ಸಂವಾದಿಸಿದನು. ಏಕೆಂದರೆ ಆತನು ಅವರನ್ನು ತುಂಬ ಪ್ರೀತಿಸುತ್ತಿದ್ದನು ಮತ್ತು ಅವರ ಹಿತಕ್ಷೇಮದಲ್ಲಿ ಅಪಾರ ಆಸಕ್ತಿಯುಳ್ಳವನಾಗಿದ್ದನು. ಭೂಮಿಯಲ್ಲಿಯೂ ಅದೇ ರೀತಿಯ ಪರಿಸ್ಥಿತಿಯಿತ್ತು. ಯೆಹೋವನು ಪ್ರಥಮ ಸ್ತ್ರೀಪುರುಷರನ್ನು ಸೃಷ್ಟಿಸಿದನು, ಮತ್ತು ತನ್ನ ನೇಮಿತ ಮಾಧ್ಯಮದ ಮೂಲಕ ಆತನು ಯಾವಾಗಲೂ ಅವರೊಂದಿಗೆ ಸ್ಪಷ್ಟವಾಗಿ, ನೇರವಾಗಿ, ಮತ್ತು ಸತ್ಯಭರಿತ ರೀತಿಯಲ್ಲಿ ಸಂವಾದಿಸಿದನು. ಅದೆಷ್ಟು ಅದ್ಭುತಕರವಾಗಿದ್ದಿರಬೇಕು!

2. ಅಸತ್ಯವನ್ನು ಯಾರು ಪರಿಚಯಿಸಿದನು, ಮತ್ತು ಏಕೆ?

2 ಆದರೂ ಸಮಯಾನಂತರ, ಆತ್ಮಜೀವಿಯಾಗಿದ್ದ ದೇವರ ಪುತ್ರನೊಬ್ಬನು ಉದ್ಧಟತನದಿಂದ ಮುಂದುವರಿದು, ಯೆಹೋವನನ್ನು ವಿರೋಧಿಸುವಂಥ ಪ್ರತಿಸ್ಪರ್ಧಿ ದೇವರನ್ನಾಗಿ ತನ್ನನ್ನು ಮಾಡಿಕೊಳ್ಳಲು ಪ್ರಯತ್ನಿಸತೊಡಗಿದನು. ನಂತರ ಸೈತಾನನಾಗಿ ಪ್ರಸಿದ್ಧನಾದ ಈ ಆತ್ಮಜೀವಿಯು, ಇತರರು ತನ್ನನ್ನೇ ಆರಾಧಿಸಬೇಕೆಂದು ಆಶಿಸಿದನು. ತನ್ನ ಗುರಿಯನ್ನು ಸಾಧಿಸಲಿಕ್ಕಾಗಿ ಅವನು ಅಸತ್ಯವನ್ನು ಪರಿಚಯಿಸಿದನು ಮತ್ತು ಇತರರನ್ನು ತನ್ನ ನಿಯಂತ್ರಣದ ಕೆಳಗೆ ತರಲಿಕ್ಕಾಗಿ ಇದನ್ನು ಸಾಧನವಾಗಿ ಉಪಯೋಗಿಸಿದನು. ಹೀಗೆ ಮಾಡುವ ಮೂಲಕ ಅವನು “ಸುಳ್ಳುಗಾರನೂ ಸುಳ್ಳಿಗೆ ಮೂಲಪುರುಷನೂ” ಆಗಿ ಪರಿಣಮಿಸಿದನು.​—ಯೋಹಾನ 8:44.

3. ಸೈತಾನನ ಸುಳ್ಳುಗಳಿಗೆ ಆದಾಮಹವ್ವರು ಹೇಗೆ ಪ್ರತಿಕ್ರಿಯಿಸಿದರು, ಮತ್ತು ಅದರ ಫಲಿತಾಂಶಗಳೇನು?

3 ಒಂದುವೇಳೆ ಪ್ರಥಮ ಸ್ತ್ರೀಯಾದ ಹವ್ವಳು ದೇವರ ಆಜ್ಞೆಯನ್ನು ಕಡೆಗಣಿಸಿ ನಿಷೇಧಿತ ಹಣ್ಣನ್ನು ತಿನ್ನುವಲ್ಲಿ, ಅವಳು ಖಂಡಿತವಾಗಿಯೂ ಸಾಯುವುದಿಲ್ಲ ಎಂದು ಅವಳಿಗೆ ಒಂದು ಸರ್ಪದ ಮೂಲಕ ಸೈತಾನನು ಹೇಳಿದನು. ಅದೊಂದು ಸುಳ್ಳಾಗಿತ್ತು. ಅಷ್ಟುಮಾತ್ರವಲ್ಲ, ಅದನ್ನು ತಿನ್ನುವ ಮೂಲಕ ಅವಳು ದೇವರಂತೆ ಆಗಿ ಒಳ್ಳೇದರ ಕೆಟ್ಟದ್ದರ ಭೇದವನ್ನು ಅರಿತವಳಾಗುವಳೆಂದೂ ಅವನು ಹೇಳಿದನು. ಇದು ಸಹ ಒಂದು ಸುಳ್ಳಾಗಿತ್ತು. ಈ ಮುಂಚೆ ಎಂದೂ ಹವ್ವಳಿಗೆ ಯಾರೂ ಸುಳ್ಳು ಹೇಳಿರಲಿಲ್ಲವಾದರೂ, ಸರ್ಪನಿಂದ ಅವಳು ಏನನ್ನು ಕೇಳಿಸಿಕೊಂಡಳೋ ಅದು, ಅವಳ ಗಂಡನಾಗಿದ್ದ ಆದಾಮನಿಗೆ ದೇವರು ಏನು ಹೇಳಿದ್ದನೋ ಅದಕ್ಕೆ ಹೊಂದಿಕೆಯಲ್ಲಿರಲಿಲ್ಲ ಎಂಬುದನ್ನು ಅವಳು ಗ್ರಹಿಸಿದ್ದಿರಬೇಕು. ಆದರೂ, ಅವಳು ಯೆಹೋವನ ಮಾತಿಗೆ ಬದಲಾಗಿ ಸೈತಾನನ ಮಾತನ್ನು ನಂಬುವ ಆಯ್ಕೆಮಾಡಿದಳು. ಸಂಪೂರ್ಣವಾಗಿ ವಂಚನೆಗೆ ಒಳಗಾದ ಹವ್ವಳು ಆ ಹಣ್ಣನ್ನು ತೆಗೆದುಕೊಂಡು ತಿಂದಳು. ನಂತರ, ಆದಾಮನು ಸಹ ಹಣ್ಣನ್ನು ತಿಂದನು. (ಆದಿಕಾಂಡ 3:​1-6) ಹವ್ವಳಂತೆ ಆದಾಮನು ಸಹ ಈ ಮುಂಚೆ ಎಂದೂ ಸುಳ್ಳನ್ನು ಕೇಳಿಸಿಕೊಂಡಿರಲಿಲ್ಲವಾದರೂ ಅವನು ವಂಚನೆಗೆ ಒಳಗಾಗಲಿಲ್ಲ. (1 ತಿಮೊಥೆಯ 2:14) ತನ್ನ ಕೃತ್ಯಗಳ ಮೂಲಕ ಅವನು, ತಾನು ತನ್ನ ರಚಕನನ್ನು ತಿರಸ್ಕರಿಸುತ್ತೇನೆಂಬುದನ್ನು ತೋರಿಸಿದನು. ಇದರಿಂದಾಗಿ ಮಾನವಕುಲದ ಮೇಲೆ ಉಂಟಾದ ಪರಿಣಾಮಗಳು ವಿಪತ್ಕಾರಕವಾಗಿದ್ದವು. ಆದಾಮನ ಅವಿಧೇಯತೆಯ ಕಾರಣ, ಪಾಪ ಮತ್ತು ಮರಣ ಹಾಗೂ ಇದರೊಂದಿಗೆ ಭ್ರಷ್ಟಾಚಾರ ಮತ್ತು ಅಸಂಖ್ಯಾತ ದುರವಸ್ಥೆಗಳು ಅವನ ಸಂತತಿಯಾದ್ಯಂತ ಹಬ್ಬಿದವು.​—ರೋಮಾಪುರ 5:12.

4. (ಎ) ಏದೆನಿನಲ್ಲಿ ನುಡಿಯಲ್ಪಟ್ಟ ಸುಳ್ಳುಗಳು ಯಾವುವು? (ಬಿ) ಸೈತಾನನಿಂದ ತಪ್ಪುದಾರಿಗೆ ನಡೆಸಲ್ಪಡದಿರಬೇಕಾದರೆ ನಾವೇನು ಮಾಡಬೇಕು?

4 ಅಸತ್ಯವು ಸಹ ಎಲ್ಲೆಡೆಯೂ ವ್ಯಾಪಿಸಿತು. ಏದೆನ್‌ ತೋಟದಲ್ಲಿ ಹೇಳಲ್ಪಟ್ಟ ಸುಳ್ಳುಗಳು, ಸ್ವತಃ ಯೆಹೋವನ ಸತ್ಯಭಾವದ ವಿರುದ್ಧ ಮಾಡಲ್ಪಟ್ಟ ಆಕ್ರಮಣಗಳಾಗಿದ್ದವು ಎಂಬುದನ್ನು ನಾವು ಗ್ರಹಿಸಬೇಕು. ಪ್ರಥಮ ಮಾನವ ದಂಪತಿಯಿಂದ ಏನೋ ಒಳ್ಳೇದನ್ನು ತಡೆಹಿಡಿಯುವ ಮೂಲಕ ದೇವರು ವಂಚನಾತ್ಮಕವಾಗಿ ವರ್ತಿಸುತ್ತಿದ್ದಾನೆಂದು ಸೈತಾನನು ಪ್ರತಿಪಾದಿಸಿದನು. ಆದರೆ ಇದು ನಿಜವಾಗಿರಲಿಲ್ಲ. ಏಕೆಂದರೆ ಆದಾಮಹವ್ವರು ತಮ್ಮ ಅವಿಧೇಯತೆಯಿಂದ ಯಾವುದೇ ಪ್ರಯೋಜನವನ್ನು ಪಡೆದುಕೊಳ್ಳಲಿಲ್ಲ. ಈ ಮುಂಚೆ ಯೆಹೋವನು ಅವರಿಗೆ ಹೇಳಿದ್ದಂತೆಯೇ ಅವರು ಸತ್ತುಹೋದರು. ಆದರೂ, ಯೆಹೋವನ ವಿರುದ್ಧವಾದ ಸೈತಾನನ ಮಿಥ್ಯಾಪವಾದದ ಆಕ್ರಮಣವು ಮಾತ್ರ ಎಷ್ಟರ ಮಟ್ಟಿಗೆ ಮುಂದುವರಿಯಿತೆಂದರೆ, ಸೈತಾನನು ‘ಭೂಲೋಕದವರನ್ನೆಲ್ಲಾ ಮರುಳುಗೊಳಿಸುತ್ತಿದ್ದಾನೆ’ ಎಂದು ಶತಮಾನಗಳ ಬಳಿಕ ಅಪೊಸ್ತಲ ಯೋಹಾನನು ಬರೆಯುವಂತೆ ಪ್ರೇರಿಸಲ್ಪಟ್ಟನು. (ಪ್ರಕಟನೆ 12:9) ಪಿಶಾಚನಾದ ಸೈತಾನನಿಂದ ನಾವು ತಪ್ಪುದಾರಿಗೆ ನಡೆಸಲ್ಪಡದಿರಬೇಕಾದರೆ, ಯೆಹೋವನ ಮತ್ತು ಆತನ ವಾಕ್ಯದ ಸತ್ಯತೆಯಲ್ಲಿ ನಮಗೆ ಸಂಪೂರ್ಣ ಭರವಸೆಯಿರಬೇಕು. ನೀವು ಯೆಹೋವನಲ್ಲಿ ಭರವಸೆಯನ್ನು ಬೆಳೆಸಿಕೊಂಡು, ಅದನ್ನು ಇನ್ನಷ್ಟು ಬಲಪಡಿಸಿ, ಆತನ ವಿರೋಧಿಯಿಂದ ಪ್ರವರ್ಧಿಸಲ್ಪಡುವ ವಂಚನೆ ಹಾಗೂ ಸುಳ್ಳುಗಳ ವಿರುದ್ಧ ನಿಮ್ಮನ್ನು ದೃಢಪಡಿಸಿಕೊಳ್ಳಬಲ್ಲಿರೋ?

ಯೆಹೋವನು ಸತ್ಯವನ್ನು ಬಲ್ಲಾತನಾಗಿದ್ದಾನೆ

5, 6. (ಎ) ಯೆಹೋವನ ಬಳಿ ಯಾವ ಜ್ಞಾನವಿದೆ? (ಬಿ) ಯೆಹೋವನ ಜ್ಞಾನಕ್ಕೆ ಹೋಲಿಸುವಾಗ ಮಾನವ ಜ್ಞಾನವು ಹೇಗಿದೆ?

5 ಬೈಬಲು ಅನೇಕವೇಳೆ ಯೆಹೋವನನ್ನು ‘ಸಮಸ್ತವನ್ನೂ ಸೃಷ್ಟಿಸಿದಾತನು’ ಎಂದು ಗುರುತಿಸುತ್ತದೆ. (ಎಫೆಸ 3:9) ಆತನೇ “ಭೂಮ್ಯಾಕಾಶಗಳನ್ನೂ ಸಮುದ್ರವನ್ನೂ ಅವುಗಳಲ್ಲಿರುವ ಸಮಸ್ತವನ್ನೂ ಉಂಟುಮಾಡಿ”ದನು. (ಅ. ಕೃತ್ಯಗಳು 4:24) ಯೆಹೋವನೇ ಸೃಷ್ಟಿಕರ್ತನಾಗಿರುವುದರಿಂದ, ಸರ್ವ ವಿಷಯಗಳ ಕುರಿತಾದ ಸತ್ಯವನ್ನು ಆತನು ಬಲ್ಲಾತನಾಗಿದ್ದಾನೆ. ದೃಷ್ಟಾಂತಕ್ಕಾಗಿ: ತನ್ನ ಸ್ವಂತ ಮನೆಯನ್ನು ವಿನ್ಯಾಸಿಸಿ, ಪ್ರತಿಯೊಂದು ತೊಲೆಯನ್ನೂ ಸರಿಯಾಗಿ ಜೋಡಿಸಿ, ಇಡೀ ನಿರ್ಮಾಣಕಾರ್ಯದಲ್ಲಿ ಭಾಗವಹಿಸುವ ಮೂಲಕ ಅದನ್ನು ಕಟ್ಟಿಮುಗಿಸುವಂಥ ಒಬ್ಬ ಮನುಷ್ಯನನ್ನು ಪರಿಗಣಿಸಿರಿ. ಆ ಮನೆಯ ಬಗ್ಗೆ ಅವನಿಗೆ ಸಂಪೂರ್ಣವಾಗಿ ಗೊತ್ತಿರುತ್ತದೆ ಮತ್ತು ಆ ಮನೆಯನ್ನು ಗಮನಿಸುವಂಥ ಬೇರೆ ಯಾವುದೇ ವ್ಯಕ್ತಿಗಿಂತಲೂ ಹೆಚ್ಚು ಮಹತ್ತರವಾದ ವಿಚಾರವು ಅವನಿಗೆ ತಿಳಿದಿರುತ್ತದೆ. ತಾವು ವಿನ್ಯಾಸಿಸಿರುವ ಹಾಗೂ ರಚಿಸಿರುವಂಥ ವಸ್ತುಗಳ ಕುರಿತು ಜನರಿಗೆ ಒಳ್ಳೇ ತಿಳಿವಳಿಕೆಯಿರುತ್ತದೆ. ಅದೇ ರೀತಿಯಲ್ಲಿ, ತಾನು ಸೃಷ್ಟಿಸಿರುವಂಥ ಎಲ್ಲಾ ವಸ್ತುಗಳ ವಿಷಯದಲ್ಲಿ ಸೃಷ್ಟಿಕರ್ತನಿಗೆ ಸರ್ವವೂ ಸವಿವರವಾಗಿ ತಿಳಿದಿದೆ.

6 ಪ್ರವಾದಿಯಾದ ಯೆಶಾಯನು ಯೆಹೋವನ ಜ್ಞಾನದ ವ್ಯಾಪ್ತಿಯನ್ನು ಸ್ವಾರಸ್ಯಕರವಾಗಿ ವ್ಯಕ್ತಪಡಿಸಿದನು. ನಾವು ಓದುವುದು: “ಯಾವನು ಸಾಗರಸಮುದ್ರಗಳನ್ನು ಸೇರೆಯಿಂದ ಅಳತೆಮಾಡಿದನು? ಯಾವನು ಆಕಾಶಮಂಡಲದ ಪರಿಮಾಣವನ್ನು ಗೇಣಿನಿಂದ ನಿರ್ಣಯಿಸಿದನು? ಭೂಲೋಕದ ಮಣ್ಣನ್ನೆಲ್ಲಾ ಕೊಳಗಕ್ಕೆ ತುಂಬಿದವನು ಯಾರು? ಬೆಟ್ಟಗಳನ್ನು ತ್ರಾಸಿನಿಂದಲೂ ಗುಡ್ಡಗಳನ್ನು ತಕ್ಕಡಿಯಿಂದಲೂ ತೂಗಿದವನು ಯಾರು? ಯೆಹೋವನ ಆತ್ಮಕ್ಕೆ ಯಾವನು ವಿಧಿಯನ್ನು ನೇಮಿಸಿದನು? ಯಾವನು ಆಲೋಚನಾಕರ್ತನಾಗಿ ಆತನಿಗೆ ಉಪದೇಶಿಸಿದನು? ಆತನು ಯಾವನ ಆಲೋಚನೆಯನ್ನು ಕೇಳಿದನು? ಯಾವನು ಆತನಿಗೆ ಬುದ್ಧಿಕಲಿಸಿ ಆತನನ್ನು ನ್ಯಾಯಮಾರ್ಗದಲ್ಲಿ ನಡೆಯಿಸಿದನು? ಯಾವನು ಆತನಿಗೆ ಜ್ಞಾನವನ್ನು ಬೋಧಿಸಿ ವಿವೇಕ ಮಾರ್ಗವನ್ನು ತೋರಿಸಿದನು?” (ಯೆಶಾಯ 40:12-14) ನಿಜವಾಗಿಯೂ, ಯೆಹೋವನು “ಸರ್ವಜ್ಞನು” ಮತ್ತು ‘ಜ್ಞಾನಪೂರ್ಣನು’ ಆಗಿದ್ದಾನೆ. (1 ಸಮುವೇಲ 2:3; ಯೋಬ 36:4; 37:16) ಆತನಿಗೆ ಹೋಲಿಕೆಯಲ್ಲಿ ನಮಗೆಷ್ಟು ಕೊಂಚವೇ ತಿಳಿದಿದೆ! ಮಾನವಕುಲವು ಎಷ್ಟೇ ಪ್ರಭಾವಶಾಲಿ ಜ್ಞಾನವನ್ನು ಸಂಪಾದಿಸಿರುವುದಾದರೂ, ಭೌತಿಕ ಸೃಷ್ಟಿಯ ಕುರಿತಾದ ನಮ್ಮ ತಿಳಿವಳಿಕೆಯು ಆತನ ‘ಮಾರ್ಗಗಳ ಅಂಚನ್ನೂ’ ಮುಟ್ಟದು. “ಪ್ರಬಲವಾದ ಗುಡುಗಿಗೆ” ಹೋಲಿಸುವಾಗ ಇದು “ಒಂದು ಪಿಸುಮಾತಿಗೆ” ಸಮಾನವಾಗಿದೆ.​—ಯೋಬ 26:​14, NW.

7. ಯೆಹೋವನ ಜ್ಞಾನದ ಕುರಿತು ದಾವೀದನು ಏನನ್ನು ಮನಗಂಡನು, ಮತ್ತು ನಾವು ಏನನ್ನು ಅಂಗೀಕರಿಸತಕ್ಕದ್ದು?

7 ಯೆಹೋವನೇ ನಮ್ಮನ್ನು ಸೃಷ್ಟಿಸಿರುವುದರಿಂದ, ನಮ್ಮ ಕುರಿತು ಆತನೇ ಚೆನ್ನಾಗಿ ಬಲ್ಲವನಾಗಿದ್ದಾನೆ ಎಂಬ ಮುಕ್ತಾಯಕ್ಕೆ ಬರುವುದು ತರ್ಕಬದ್ಧವಾಗಿದೆ. ಅರಸನಾದ ದಾವೀದನು ಇದನ್ನು ಮನಗಂಡನು. ಅವನು ಬರೆದುದು: “ಯೆಹೋವನೇ, ನೀನು ನನ್ನನ್ನು ಪರೀಕ್ಷಿಸಿ ತಿಳುಕೊಂಡಿದ್ದೀ; ನಾನು ಕೂತುಕೊಳ್ಳುವದೂ ಏಳುವದೂ ನಿನಗೆ ಗೊತ್ತದೆ; ದೂರದಿಂದಲೇ ನನ್ನ ಆಲೋಚನೆಗಳನ್ನು ಬಲ್ಲವನಾಗಿರುತ್ತೀ; ನಾನು ನಡೆಯುವದನ್ನೂ ಮಲಗುವದನ್ನೂ ಶೋಧಿಸಿ ಗ್ರಹಿಸಿಕೊಳ್ಳುತ್ತೀ; ನನ್ನ ನಡತೆಯೆಲ್ಲಾ ನಿನಗೆ ಗೋಚರವಾಗಿದೆ. ಯೆಹೋವನೇ, ನನ್ನ ನಾಲಿಗೆಯ ಮಾತುಗಳಲ್ಲಿ ನೀನು ಅರಿಯದೆ ಇರುವಂಥದು ಒಂದೂ ಇಲ್ಲ.” (ಕೀರ್ತನೆ 139:1-4) ಮಾನವರಿಗೆ ಇಚ್ಛಾ ಸ್ವಾತಂತ್ರ್ಯವಿದೆ​—ದೇವರಿಗೆ ವಿಧೇಯರಾಗುವ ಅಥವಾ ಅವಿಧೇಯರಾಗುವ ಸಾಮರ್ಥ್ಯವನ್ನು ಆತನು ನಮಗೆ ಕೊಟ್ಟಿದ್ದಾನೆ ಎಂಬುದನ್ನು ದಾವೀದನು ಮನಗಂಡನು ಎಂಬುದಂತೂ ಖಂಡಿತ. (ಧರ್ಮೋಪದೇಶಕಾಂಡ 30:19, 20; ಯೆಹೋಶುವ 24:15) ಆದರೂ, ನಮ್ಮ ಬಗ್ಗೆ ನಮಗೆ ತಿಳಿದಿರುವುದಕ್ಕಿಂತಲೂ ಹೆಚ್ಚು ಉತ್ತಮವಾಗಿ ಯೆಹೋವನಿಗೆ ತಿಳಿದಿದೆ. ನಮಗೆ ಯಾವುದು ಪ್ರಯೋಜನದಾಯಕವಾಗಿದೆಯೋ ಅದನ್ನೇ ಆತನು ಬಯಸುತ್ತಾನೆ, ಮತ್ತು ಆತನು ನಮ್ಮ ಮಾರ್ಗಗಳನ್ನು ನಿರ್ದೇಶಿಸುವ ಸ್ಥಾನದಲ್ಲಿದ್ದಾನೆ. (ಯೆರೆಮೀಯ 10:23) ವಾಸ್ತವದಲ್ಲಿ, ಯಾವ ಶಿಕ್ಷಕನೂ, ಪರಿಣತನೂ, ಸಲಹೆಗಾರನೂ ನಮಗೆ ಸತ್ಯವನ್ನು ಕಲಿಸಲು ಹೆಚ್ಚು ಉತ್ತಮ ರೀತಿಯಲ್ಲಿ ಸಮರ್ಥನಾಗಿರಲು ಸಾಧ್ಯವಿಲ್ಲ ಮತ್ತು ನಮ್ಮನ್ನು ವಿವೇಕಿಗಳನ್ನಾಗಿಯೂ ಸಂತೋಷಿತರನ್ನಾಗಿಯೂ ಮಾಡಲು ಸಾಧ್ಯವಿಲ್ಲ.

ಯೆಹೋವನು ಸತ್ಯವಂತನಾಗಿದ್ದಾನೆ

8. ಯೆಹೋವನು ಸತ್ಯವಂತನಾಗಿದ್ದಾನೆ ಎಂಬುದು ನಮಗೆ ಹೇಗೆ ಗೊತ್ತು?

8 ಸತ್ಯವನ್ನು ತಿಳಿದುಕೊಳ್ಳುವುದು ಒಂದು ವಿಷಯವಾಗಿರುವಾಗ, ಯಾವಾಗಲೂ ಸತ್ಯವನ್ನೇ ಹೇಳುವುದು, ಅಂದರೆ ಸತ್ಯವಂತರಾಗಿರುವುದು ಇನ್ನೊಂದು ವಿಷಯವಾಗಿದೆ. ಉದಾಹರಣೆಗೆ, ಪಿಶಾಚನು ‘ಸತ್ಯದಲ್ಲಿ ನೆಲೆನಿಲ್ಲುವ’ ಆಯ್ಕೆಯನ್ನು ಮಾಡಲಿಲ್ಲ. (ಯೋಹಾನ 8:44) ಇದಕ್ಕೆ ತದ್ವಿರುದ್ಧವಾಗಿ, ಯೆಹೋವನು “ಸತ್ಯಭರಿತನಾಗಿದ್ದಾನೆ.” (ವಿಮೋಚನಕಾಂಡ 34:6, NW) ಶಾಸ್ತ್ರವಚನಗಳು ಸಹ ಯೆಹೋವನ ಸತ್ಯತೆಗೆ ಬೇಕಾದಷ್ಟು ಸಾಕ್ಷ್ಯವನ್ನು ನೀಡುತ್ತವೆ. ‘ದೇವರು ಸುಳ್ಳಾಡಲಾರನು’ ಮತ್ತು ದೇವರು ‘ಸುಳ್ಳಾಡಲು’ ಸಾಧ್ಯವಿಲ್ಲ ಎಂದು ಅಪೊಸ್ತಲ ಪೌಲನು ಹೇಳಿದನು. (ಇಬ್ರಿಯ 6:19; ತೀತ 1:1) ಸತ್ಯಭಾವವು ದೇವರ ವ್ಯಕ್ತಿತ್ವದ ಒಂದು ಪ್ರಮುಖ ಭಾಗವಾಗಿದೆ. ಯೆಹೋವನು ಸತ್ಯವಂತನಾಗಿರುವುದರಿಂದ ನಾವು ಆತನ ಮೇಲೆ ಆತುಕೊಳ್ಳಸಾಧ್ಯವಿದೆ ಮತ್ತು ಭರವಸೆಯಿಡಸಾಧ್ಯವಿದೆ; ಆತನೆಂದೂ ತನ್ನ ನಿಷ್ಠಾವಂತ ಜನರನ್ನು ವಂಚಿಸುವುದಿಲ್ಲ.

9. ಯೆಹೋವನ ಹೆಸರು ಸತ್ಯದೊಂದಿಗೆ ಹೇಗೆ ಸಮ್ಮಿಳಿತವಾಗಿದೆ?

9 ಯೆಹೋವನ ಹೆಸರೇ ಆತನ ಸತ್ಯಭಾವಕ್ಕೆ ಸಾಕ್ಷ್ಯನೀಡುತ್ತದೆ. ದೇವರ ಹೆಸರಿನ ಅರ್ಥ, “ಆತನು ಆಗುವಂತೆ ಮಾಡುತ್ತಾನೆ” ಎಂದಾಗಿದೆ. ಇದು, ತಾನು ವಾಗ್ದಾನಿಸುವಂಥದ್ದೆಲ್ಲವನ್ನೂ ಪ್ರಗತಿಪರವಾಗಿ ನೇರವೇರಿಸುವಾತನಾಗಿ ಪರಿಣಮಿಸುವವನೋಪಾದಿ ಯೆಹೋವನನ್ನು ಗುರುತಿಸುತ್ತದೆ. ಆದರೆ ಹೀಗೆ ಮಾಡುವ ಸಾಮರ್ಥ್ಯವು ಬೇರೆ ಯಾರಿಗೂ ಇಲ್ಲ. ಯೆಹೋವನು ಸಾರ್ವಭೌಮನಾಗಿರುವುದರಿಂದ, ಆತನ ವಾಗ್ದಾನಗಳ ನೆರವೇರಿಕೆಗೆ ಯಾವುದೂ ಭಂಗವನ್ನುಂಟುಮಾಡಲಾರದು. ಯೆಹೋವನು ಸತ್ಯವಂತನಾಗಿದ್ದಾನೆ ಮಾತ್ರವಲ್ಲ ಆತನು ನುಡಿಯುವಂಥದ್ದೆಲ್ಲವನ್ನೂ ಪೂರೈಸಲು ಬೇಕಾಗಿರುವ ಬಲ ಮತ್ತು ವಿವೇಕವೂ ಆತನೊಬ್ಬನಿಗೇ ಇದೆ.

10. (ಎ) ಯೆಹೋವನ ಸತ್ಯತೆಯನ್ನು ಯೆಹೋಶುವನು ಹೇಗೆ ಕಣ್ಣಾರೆ ಕಂಡನು? (ಬಿ) ಯೆಹೋವನ ಯಾವ ವಾಗ್ದಾನಗಳು ನೆರವೇರಿರುವುದನ್ನು ನೀವು ನೋಡಿದ್ದೀರಿ?

10 ಯೆಹೋವನ ಸತ್ಯಭಾವಕ್ಕೆ ಪುರಾವೆ ನೀಡಿದಂಥ ಗಮನಾರ್ಹ ಘಟನೆಗಳನ್ನು ಕಣ್ಣಾರೆ ಕಂಡಂಥ ಅನೇಕರಲ್ಲಿ ಯೆಹೋಶುವನು ಒಬ್ಬನಾಗಿದ್ದನು. ಯೆಹೋವನು ಐಗುಪ್ತ್ಯರ ಮೇಲೆ ತರಲಿದ್ದ ಹತ್ತು ಬಾಧೆಗಳಲ್ಲಿ ಪ್ರತಿಯೊಂದನ್ನು ಮುಂತಿಳಿಸಿ, ಅವುಗಳನ್ನು ಬರಮಾಡಿದಾಗ ಯೆಹೋಶುವನು ಐಗುಪ್ತದಲ್ಲಿದ್ದನು. ಮುಂತಿಳಿಸಲ್ಪಟ್ಟ ಇನ್ನಿತರ ಘಟನೆಗಳನ್ನು ಮಾತ್ರವಲ್ಲ, ಇಸ್ರಾಯೇಲ್ಯರನ್ನು ಐಗುಪ್ತದಿಂದ ವಿಮೋಚಿಸುವ, ಮತ್ತು ಅವರ ವಿರುದ್ಧವಾಗಿದ್ದಂಥ ಪ್ರಬಲ ಕಾನಾನ್ಯ ಸೈನ್ಯಗಳನ್ನು ಸದೆಬಡಿಯುವ ಮೂಲಕ ಇಸ್ರಾಯೇಲ್ಯರನ್ನು ವಾಗ್ದತ್ತ ದೇಶಕ್ಕೆ ಮುನ್ನಡಿಸುವ ಯೆಹೋವನ ವಾಗ್ದಾನಗಳ ನೆರವೇರಿಕೆಯನ್ನು ಸಹ ಯೆಹೋಶುವನು ಅನುಭವಿಸಿದನು. ಯೆಹೋಶುವನ ಜೀವಿತದ ಅಂತ್ಯದಷ್ಟಕ್ಕೆ, ಇಸ್ರಾಯೇಲ್‌ ಜನಾಂಗದ ಹಿರೀ ಪುರುಷರಿಗೆ ಅವನು ಹೇಳಿದ್ದು: “ನಿಮ್ಮ ದೇವರಾದ ಯೆಹೋವನು ನಿಮ್ಮ ವಿಷಯದಲ್ಲಿ ನುಡಿದ ಆಶೀರ್ವಚನಗಳಲ್ಲಿ ಒಂದೂ ವ್ಯರ್ಥವಾಗಲಿಲ್ಲ; ಎಲ್ಲವೂ ತಪ್ಪದೆ ನೆರವೇರಿದವೆಂಬದು ನಿಮಗೆ ಮಂದಟ್ಟಾಯಿತಲ್ಲಾ.” (ಯೆಹೋಶುವ 23:14) ಯೆಹೋಶುವನು ಕಣ್ಣಾರೆ ಕಂಡಂಥ ಅದ್ಭುತಗಳನ್ನು ಸ್ವತಃ ನೀವು ನೋಡಿರಲಿಕ್ಕಿಲ್ಲವಾದರೂ, ನಿಮ್ಮ ಜೀವಮಾನ ಕಾಲದಲ್ಲಿ ದೇವರ ವಾಗ್ದಾನಗಳ ಸತ್ಯತೆಯ ಅನುಭವ ನಿಮಗಾಗಿದೆಯೋ?

ಯೆಹೋವನು ಸತ್ಯವನ್ನು ತಿಳಿಯಪಡಿಸುತ್ತಾನೆ

11. ಯೆಹೋವನು ಮಾನವಕುಲಕ್ಕೆ ಸತ್ಯವನ್ನು ಸಂವಾದಿಸಲು ಬಯಸುತ್ತಾನೆ ಎಂಬುದನ್ನು ಯಾವುದು ತೋರಿಸುತ್ತದೆ?

11 ಅಪಾರ ಜ್ಞಾನವಿರುವುದಾದರೂ ತನ್ನ ಮಕ್ಕಳೊಂದಿಗೆ ಅಪರೂಪವಾಗಿ ಮಾತಾಡುವಂಥ ಒಬ್ಬ ಹೆತ್ತವರನ್ನು ಊಹಿಸಿಕೊಳ್ಳಿರಿ. ಯೆಹೋವನು ಅಂಥ ವ್ಯಕ್ತಿಯಾಗಿಲ್ಲದಿರುವುದಕ್ಕೆ ನೀವು ಕೃತಜ್ಞರಾಗಿಲ್ಲವೋ? ಯೆಹೋವನು ಪ್ರೀತಿಯಿಂದ ಮಾನವಕುಲದೊಂದಿಗೆ ಸಂವಾದಿಸುತ್ತಾನೆ, ಮತ್ತು ಆತನು ಉದಾರಭಾವದಿಂದ ಹೀಗೆ ಮಾಡುತ್ತಾನೆ. ಶಾಸ್ತ್ರವಚನಗಳು ಆತನನ್ನು ‘ಮಹಾನ್‌ ಬೋಧಕನು’ ಎಂದು ಕರೆಯುತ್ತವೆ. (ಯೆಶಾಯ 30:20) ಆತನು ಪ್ರೀತಿದಯೆಯುಳ್ಳಾತನಾಗಿರುವುದರಿಂದ, ತನಗೆ ಕಿವಿಗೊಡುವ ಪ್ರವೃತ್ತಿಯಿಲ್ಲದಿರುವಂಥ ಜನರೊಂದಿಗೂ ಆತನು ಸಂವಾದಿಸುತ್ತಾನೆ. ಉದಾಹರಣೆಗೆ, ಯಾರು ಕಿವಿಗೊಡುವುದಿಲ್ಲವೆಂದು ಯೆಹೋವನಿಗೆ ತಿಳಿದಿತ್ತೋ ಅದೇ ಜನರಿಗೆ ಸಾರುವ ನೇಮಕವನ್ನು ಯೆಹೆಜ್ಕೇಲನು ಪಡೆದಿದ್ದನು. ಯೆಹೋವನು ಹೇಳಿದ್ದು: “ನರಪುತ್ರನೇ, ನೀನು ಇಸ್ರಾಯೇಲ್‌ ವಂಶದವರ ಬಳಿಗೆ ಹೋಗಿ ನಾನು ತಿಳಿಸುವ ಮಾತುಗಳನ್ನು ಅವರಿಗೆ ನುಡಿ.” ತದನಂತರ ಆತನು ಎಚ್ಚರಿಸಿದ್ದು: ‘ಅವರು ನಿನಗೆ ಕಿವಿಗೊಡಲೊಲ್ಲರು; ನನಗೂ ಕಿವಿಗೊಡಲೊಲ್ಲರು; ಅವರೆಲ್ಲರೂ ನಾಚಿಕೆಗೆಟ್ಟವರೂ ಹಟಗಾರರೂ ಆಗಿದ್ದಾರಲ್ಲಾ.’ ಅದು ತುಂಬ ಕಷ್ಟಕರವಾದ ಒಂದು ನೇಮಕವಾಗಿತ್ತು, ಆದರೂ ಯೆಹೆಜ್ಕೇಲನು ಅದನ್ನು ನಂಬಿಗಸ್ತಿಕೆಯಿಂದ ಪೂರೈಸಿದನು ಮತ್ತು ಹೀಗೆ ಮಾಡುವ ಮೂಲಕ ಅವನು ಯೆಹೋವನ ಸಹಾನುಭೂತಿಯನ್ನು ಪ್ರತಿಬಿಂಬಿಸಿದನು. ಒಂದುವೇಳೆ ನೀವು ಪಂಥಾಹ್ವಾನದಾಯಕವಾದಂಥ ಒಂದು ಸಾರುವ ನೇಮಕದಲ್ಲಿ ಇದ್ದು, ದೇವರ ಮೇಲೆ ಪೂರ್ಣವಾಗಿ ಆತುಕೊಳ್ಳುವಲ್ಲಿ, ತನ್ನ ಪ್ರವಾದಿಯಾದ ಯೆಹೆಜ್ಕೇಲನನ್ನು ಆತನು ಬಲಪಡಿಸಿದಂತೆಯೇ ನಿಮ್ಮನ್ನೂ ಬಲಪಡಿಸುವನು ಎಂಬ ದೃಢಭರವಸೆಯಿಂದ ನೀವಿರಬಹುದು.​—ಯೆಹೆಜ್ಕೇಲ 3:4, 7-9.

12, 13. ಯಾವ ವಿಧಗಳಲ್ಲಿ ದೇವರು ಮಾನವರೊಂದಿಗೆ ಸಂವಾದಿಸಿದ್ದಾನೆ?

12 “ಎಲ್ಲಾ ಮನುಷ್ಯರು ರಕ್ಷಣೆಯನ್ನು ಹೊಂದಿ ಸತ್ಯದ ಜ್ಞಾನಕ್ಕೆ ಸೇರಬೇಕೆಂಬದು” ಯೆಹೋವನ ಅಪೇಕ್ಷೆಯಾಗಿದೆ. (1 ತಿಮೊಥೆಯ 2:4) ಆತನು ಪ್ರವಾದಿಗಳ ಮೂಲಕ, ದೇವದೂತರ ಮೂಲಕ, ಮತ್ತು ತನ್ನ ಪ್ರಿಯ ಪುತ್ರನಾದ ಯೇಸು ಕ್ರಿಸ್ತನ ಮೂಲಕವೂ ಮಾತಾಡಿದ್ದಾನೆ. (ಇಬ್ರಿಯ 1:​1, 2; 2:2) ಪಿಲಾತನಿಗೆ ಯೇಸು ಹೇಳಿದ್ದು: “ನಾನು ಸತ್ಯದ ವಿಷಯದಲ್ಲಿ ಸಾಕ್ಷಿಹೇಳುವದಕ್ಕೋಸ್ಕರ ಹುಟ್ಟಿದವನು, ಅದಕ್ಕೋಸ್ಕರವೇ ಈ ಲೋಕಕ್ಕೆ ಬಂದಿದ್ದೇನೆ. ಸತ್ಯಪರರೆಲ್ಲರು ನನ್ನ ಮಾತಿಗೆ ಕಿವಿಕೊಡುತ್ತಾರೆ.” ರಕ್ಷಣೆಗಾಗಿರುವ ಯೆಹೋವನ ಒದಗಿಸುವಿಕೆಯ ಕುರಿತಾದ ಸತ್ಯ ವಿಚಾರವನ್ನು ನೇರವಾಗಿ ದೇವಕುಮಾರನಿಂದಲೇ ಕೇಳಿ ತಿಳಿದುಕೊಳ್ಳುವ ಅಮೂಲ್ಯ ಸದವಕಾಶ ಪಿಲಾತನಿಗಿತ್ತು. ಆದರೂ, ಪಿಲಾತನು ಸತ್ಯದ ಪಕ್ಷದಲ್ಲಿರಲಿಲ್ಲ, ಮತ್ತು ಅವನು ಯೇಸುವಿನಿಂದ ವಿಷಯಗಳನ್ನು ಕೇಳಿ ತಿಳಿದುಕೊಳ್ಳಲು ಬಯಸಲಿಲ್ಲ. ಅದಕ್ಕೆ ಬದಲಾಗಿ ಪಿಲಾತನು ನಿಷ್ಠುರವಾಗಿ ಪ್ರತ್ಯುತ್ತರಿಸಿದ್ದು: “ಸತ್ಯವಂದರೇನು?” (ಯೋಹಾನ 18:37, 38) ಅವನ ಸ್ಥಿತಿ ಎಷ್ಟು ಶೋಚನೀಯವಾಗಿತ್ತು! ಆದರೂ, ಯೇಸು ತಿಳಿಯಪಡಿಸಿದಂಥ ಸತ್ಯಕ್ಕೆ ಅನೇಕರು ಕಿವಿಗೊಟ್ಟರು. ತನ್ನ ಶಿಷ್ಯರಿಗೆ ಆತನು ಹೇಳಿದ್ದು: “ಆದರೆ ನಿಮ್ಮ ಕಣ್ಣು ಕಾಣುತ್ತವೆ, ನಿಮ್ಮ ಕಿವಿ ಕೇಳುತ್ತವೆ; ಆದದರಿಂದ ನೀವು ಧನ್ಯರು.”​—ಮತ್ತಾಯ 13:16.

13 ಬೈಬಲಿನ ಮೂಲಕ ಯೆಹೋವನು ಸತ್ಯವನ್ನು ಜೋಪಾನವಾಗಿ ಕಾಪಾಡಿದ್ದಾನೆ ಮತ್ತು ಎಲ್ಲೆಡೆಯೂ ಇರುವಂಥ ಜನರಿಗೆ ಅದನ್ನು ಲಭ್ಯಗೊಳಿಸಿದ್ದಾನೆ. ಬೈಬಲು ವಿಷಯಗಳನ್ನು ಸತ್ಯಭರಿತವಾದ ರೀತಿಯಲ್ಲಿ ಪ್ರಕಟಪಡಿಸುತ್ತದೆ. ಅದು ದೇವರ ಗುಣಗಳು, ಉದ್ದೇಶಗಳು, ಮತ್ತು ಆಜ್ಞೆಗಳು, ಹಾಗೂ ಮಾನವಕುಲದ ನಡುವಿನ ಆಗುಹೋಗುಗಳ ಕುರಿತಾದ ನಿಜ ಸ್ಥಿತಿಯನ್ನು ವರ್ಣಿಸುತ್ತದೆ. ಯೆಹೋವನಿಗೆ ಮಾಡಿದ ಪ್ರಾರ್ಥನೆಯಲ್ಲಿ ಯೇಸು ಹೇಳಿದ್ದು: “ನಿನ್ನ ವಾಕ್ಯವೇ ಸತ್ಯವು.” (ಯೋಹಾನ 17:17) ಈ ಕಾರಣದಿಂದಲೇ ಬೈಬಲು ಒಂದು ಅಪೂರ್ವ ಗ್ರಂಥವಾಗಿದೆ. ಕೇವಲ ಬೈಬಲ್‌ ಮಾತ್ರ, ಸರ್ವ ವಿಷಯಗಳನ್ನೂ ಬಲ್ಲಾತನಾದ ದೇವರ ಪ್ರೇರೇಪಣೆಗನುಸಾರ ಬರೆಯಲ್ಪಟ್ಟಿದೆ. (2 ತಿಮೊಥೆಯ 3:16) ಇದು ಮಾನವಕುಲಕ್ಕೆ ಕೊಡಲ್ಪಟ್ಟಿರುವ ಅಮೂಲ್ಯ ಕೊಡುಗೆಯಾಗಿದೆ, ಮತ್ತು ದೇವರ ಸೇವಕರು ಇದನ್ನು ಅಮೂಲ್ಯವಾಗಿ ಪರಿಗಣಿಸುತ್ತಾರೆ. ನಾವು ಇದನ್ನು ದಿನಾಲೂ ಓದುವುದು ನಮ್ಮನ್ನು ವಿವೇಕಿಗಳನ್ನಾಗಿ ಮಾಡುತ್ತದೆ.

ಸತ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಿರಿ

14. ತಾನು ಮಾಡಲಿದ್ದೇನೆಂದು ಯೆಹೋವನು ಹೇಳುವಂಥ ಕೆಲವು ವಿಷಯಗಳಾವುವು, ಮತ್ತು ನಾವಾತನನ್ನು ಏಕೆ ನಂಬಬೇಕಾಗಿದೆ?

14 ತನ್ನ ವಾಕ್ಯದಲ್ಲಿ ಯೆಹೋವನು ನಮಗೆ ಏನನ್ನು ತಿಳಿಸುತ್ತಾನೋ ಅದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳಬೇಕು. ತಾನು ಏನಾಗಿದ್ದೇನೆಂದು ಆತನು ಹೇಳುತ್ತಾನೋ ಅದೇ ಆಗಿದ್ದಾನೆ ಮತ್ತು ತಾನು ಏನನ್ನು ಮಾಡುತ್ತೇನೆಂದು ಆತನು ಹೇಳುತ್ತಾನೋ ಅದನ್ನು ಖಂಡಿತವಾಗಿಯೂ ಮಾಡುವನು. ನಾವು ದೇವರಲ್ಲಿ ಭರವಸೆಯಿಡಲು ನಮಗೆ ಸಕಲ ಕಾರಣಗಳೂ ಇವೆ. ‘ದೇವರನ್ನರಿಯದವರಿಗೂ ನಮ್ಮ ಕರ್ತನಾದ ಯೇಸುವಿನ ಸುವಾರ್ತೆಗೆ ಒಳಪಡದವರಿಗೂ ಪ್ರತೀಕಾರವನ್ನು ಸಲ್ಲಿಸುವೆನು’ ಎಂದು ಯೆಹೋವನು ಹೇಳುವಾಗ ನಾವದನ್ನು ನಂಬಸಾಧ್ಯವಿದೆ. (2 ಥೆಸಲೊನೀಕ 1:8) ನೀತಿಯನ್ನು ಬೆನ್ನಟ್ಟುವವರನ್ನು ತಾನು ಪ್ರೀತಿಸುತ್ತೇನೆ ಎಂದು ಯೆಹೋವನು ಹೇಳುವಾಗ, ನಂಬಿಕೆಯನ್ನು ತೋರಿಸುವವರಿಗೆ ತಾನು ನಿತ್ಯಜೀವವನ್ನು ನೀಡುತ್ತೇನೆಂದು ಆತನು ಹೇಳುವಾಗ, ಮತ್ತು ದುಃಖ, ಗೋಳಾಟ ಹಾಗೂ ಮರಣವನ್ನು ಸಹ ತಾನು ಸಂಪೂರ್ಣವಾಗಿ ತೆಗೆದುಹಾಕುತ್ತೇನೆಂದು ಆತನು ಹೇಳುವಾಗ, ನಾವು ನಿಶ್ಚಯವಾಗಿಯೂ ಆತನ ಮಾತಿನಲ್ಲಿ ಭರವಸೆಯಿಡಸಾಧ್ಯವಿದೆ. ಅಪೊಸ್ತಲ ಯೋಹಾನನಿಗೆ, “ಇದನ್ನು ಬರೆ; ಈ ಮಾತುಗಳು ನಂಬತಕ್ಕವುಗಳೂ ಸತ್ಯವಾದವುಗಳೂ ಆಗಿವೆ” ಎಂಬ ಸೂಚನೆಯನ್ನು ಕೊಡುವ ಮೂಲಕ ಯೆಹೋವನು ಈ ಕೊನೆಯ ವಾಗ್ದಾನದ ವಿಶ್ವಾಸಾರ್ಹತೆಯನ್ನು ಒತ್ತಿಹೇಳಿದನು.​—ಪ್ರಕಟನೆ 21:4, 5; ಜ್ಞಾನೋಕ್ತಿ 15:9; ಯೋಹಾನ 3:36.

15. ಸೈತಾನನು ಪ್ರವರ್ಧಿಸುವಂಥ ಸುಳ್ಳುಗಳಲ್ಲಿ ಕೆಲವು ಯಾವುವು?

15 ಸೈತಾನನು ಸಂಪೂರ್ಣ ರೀತಿಯಲ್ಲಿ ಯೆಹೋವನಿಗೆ ತದ್ವಿರುದ್ಧವಾಗಿದ್ದಾನೆ. ಅವನು ಜನರಿಗೆ ಜ್ಞಾನೋದಯ ನೀಡುವುದಕ್ಕೆ ಬದಲಾಗಿ ಅವರನ್ನು ವಂಚಿಸುತ್ತಾನೆ. ಶುದ್ಧಾರಾಧನೆಯಿಂದ ಜನರನ್ನು ವಿಮುಖಗೊಳಿಸುವ ತನ್ನ ಗುರಿಯನ್ನು ಸಾಧಿಸಲಿಕ್ಕಾಗಿ ಸೈತಾನನು ಸುಳ್ಳುಗಳ ಸರಮಾಲೆಯನ್ನೇ ಪ್ರವರ್ಧಿಸುತ್ತಾನೆ. ಉದಾಹರಣೆಗೆ, ದೇವರು ಭಾವನಾತ್ಮಕವಾಗಿ ದೂರವಿದ್ದಾನೆ ಮತ್ತು ಭೂಮಿಯ ಮೇಲಿನ ಕಷ್ಟಾನುಭವವನ್ನು ನೋಡಿ ಜಡಗೊಂಡಿದ್ದಾನೆ ಎಂದು ನಾವು ನಂಬುವಂತೆ ಸೈತಾನನು ಮಾಡಬಹುದು. ಆದರೂ, ತನ್ನ ಸೃಷ್ಟಿಜೀವಿಗಳ ವಿಷಯದಲ್ಲಿ ಯೆಹೋವನು ಆಳವಾಗಿ ಚಿಂತಿಸುತ್ತಾನೆ ಮತ್ತು ಕೆಟ್ಟತನ ಹಾಗೂ ಕಷ್ಟಾನುಭವವನ್ನು ನೋಡಿ ವ್ಯಥೆಪಡುತ್ತಾನೆ ಎಂದು ಬೈಬಲು ತೋರಿಸುತ್ತದೆ. (ಅ. ಕೃತ್ಯಗಳು 17:​24-30) ಆತ್ಮಿಕ ಬೆನ್ನಟ್ಟುವಿಕೆಗಳು ವ್ಯರ್ಥ ಕಾಲಹರಣವಾಗಿವೆ ಎಂದು ಜನರು ಆಲೋಚಿಸುವಂತೆಯೂ ಸೈತಾನನು ಬಯಸುತ್ತಾನೆ. ಇದಕ್ಕೆ ಬದಲಾಗಿ ಶಾಸ್ತ್ರವಚನಗಳು ಆಶ್ವಾಸನೆ ನೀಡುವುದೇನೆಂದರೆ, ನಿಮ್ಮ “ಕೆಲಸವನ್ನೂ ಇದರಲ್ಲಿ ನೀವು ದೇವರ ನಾಮದ ವಿಷಯವಾಗಿ ತೋರಿಸಿದ ಪ್ರೀತಿಯನ್ನೂ ಆತನು ಮರೆಯುವದಕ್ಕೆ ಅನ್ಯಾಯಸ್ಥನಲ್ಲ.” ಅಷ್ಟುಮಾತ್ರವಲ್ಲ, ‘ತನ್ನನ್ನು ಹುಡುಕುವವರಿಗೆ ಆತನು ಪ್ರತಿಫಲವನ್ನು ಕೊಡುತ್ತಾನೆ’ ಎಂದು ಸಹ ಅವು ಸ್ಪಷ್ಟವಾಗಿ ತಿಳಿಯಪಡಿಸುತ್ತವೆ.​—ಇಬ್ರಿಯ 6:10; 11:6.

16. ಕ್ರೈಸ್ತರು ಏಕೆ ಜಾಗರೂಕರಾಗಿ ಉಳಿಯಬೇಕು ಮತ್ತು ಸತ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳಬೇಕು?

16 ಸೈತಾನನ ಕುರಿತು ಅಪೊಸ್ತಲ ಪೌಲನು ಬರೆದುದು: “ಇವರಲ್ಲಿ ದೇವರ ಪ್ರತಿರೂಪವಾಗಿರುವ ಕ್ರಿಸ್ತನ ಪ್ರಭಾವವನ್ನು ತೋರಿಸುವ ಸುವಾರ್ತೆಯ ಪ್ರಕಾಶವು ಉದಯವಾಗಬಾರದೆಂದು ಈ ಪ್ರಪಂಚದ ದೇವರು ನಂಬಿಕೆಯಿಲ್ಲದವರ ಮನಸ್ಸನ್ನು ಮಂಕುಮಾಡಿದನು.” (2 ಕೊರಿಂಥ 4:4) ಹವ್ವಳಂತೆ, ಕೆಲವರು ಪಿಶಾಚನಾದ ಸೈತಾನನಿಂದ ಸಂಪೂರ್ಣವಾಗಿ ವಂಚಿಸಲ್ಪಟ್ಟಿದ್ದಾರೆ. ಇನ್ನಿತರರು, ಯಾರು ವಂಚನೆಗೆ ಒಳಗಾಗಲಿಲ್ಲವಾದರೂ ಉದ್ದೇಶಪೂರ್ವಕವಾಗಿ ಅವಿಧೇಯತೆಯ ಹಾದಿಯನ್ನು ಆಯ್ಕೆಮಾಡಿದನೋ ಆ ಆದಾಮನ ಮಾರ್ಗವನ್ನು ಅನುಸರಿಸುತ್ತಾರೆ. (ಯೂದ 5, 11) ಹೀಗೆ, ಕ್ರೈಸ್ತರು ಜಾಗರೂಕರಾಗಿ ಉಳಿಯುವುದು ಮತ್ತು ಸತ್ಯವನ್ನು ಬಿಗಿಯಾಗಿ ಹಿಡಿದುಕೊಳ್ಳುವುದು ಅತ್ಯಾವಶ್ಯಕವಾದದ್ದಾಗಿದೆ.

ಯೆಹೋವನು ‘ನಿಷ್ಕಪಟವಾದ ನಂಬಿಕೆಯನ್ನು’ ಕೇಳಿಕೊಳ್ಳುತ್ತಾನೆ

17. ಯೆಹೋವನ ಅನುಗ್ರಹವನ್ನು ಪಡೆಯಲಿಕ್ಕಾಗಿ ನಾವೇನು ಮಾಡಬೇಕು?

17 ತನ್ನೆಲ್ಲಾ ವಿಧಗಳಲ್ಲಿ ಯೆಹೋವನು ಸತ್ಯವಂತನಾಗಿರುವುದರಿಂದ, ತನ್ನನ್ನು ಆರಾಧಿಸುವವರು ಸಹ ಸತ್ಯವಂತರಾಗಿರುವಂತೆ ಆತನು ನಿರೀಕ್ಷಿಸುತ್ತಾನೆ. ಕೀರ್ತನೆಗಾರನು ಬರೆದುದು: “ಯೆಹೋವನೇ, ನಿನ್ನ ಗುಡಾರದಲ್ಲಿ ಇಳುಕೊಂಡಿರುವದಕ್ಕೆ ಯೋಗ್ಯನು ಯಾವನು? ನಿನ್ನ ಪರಿಶುದ್ಧಪರ್ವತದಲ್ಲಿ ವಾಸಿಸತಕ್ಕವನು ಎಂಥವನಾಗಿರಬೇಕು? ಅವನು ಸಜ್ಜನನೂ ನೀತಿವಂತನೂ ಮನಃಪೂರ್ವಕವಾಗಿ [“ಹೃದಯದಲ್ಲಿ,” NW] ಸತ್ಯವಚನವನ್ನಾಡುವವನೂ ಆಗಿರಬೇಕು.” (ಕೀರ್ತನೆ 15:1, 2) ಈ ಮಾತುಗಳನ್ನು ಹಾಡಿದಂಥ ಯೆಹೂದ್ಯರಿಗೆ, ಯೆಹೋವನ ಪರಿಶುದ್ಧಪರ್ವತ ಎಂಬ ಪದಗಳು, ಎಲ್ಲಿ ಅರಸನಾದ ದಾವೀದನು ಗುಡಾರವನ್ನು ನಿರ್ಮಿಸಿ ಮಂಜೂಷವನ್ನು ತಂದಿರಿಸಿದ್ದನೋ ಆ ಚೀಯೋನ್‌ ಪರ್ವತವನ್ನು ಮನಸ್ಸಿಗೆ ತಂದವು ಎಂಬುದರಲ್ಲಿ ಸಂಶಯವಿಲ್ಲ. (2 ಸಮುವೇಲ 6:​12, 17) ಪರ್ವತ ಹಾಗೂ ಗುಡಾರಗಳು, ಯೆಹೋವನು ಸಾಂಕೇತಿಕವಾಗಿ ನಿವಾಸಿಸಿದ್ದಂಥ ಸ್ಥಳವನ್ನು ಮನಸ್ಸಿಗೆ ತಂದವು. ಮತ್ತು ಅಲ್ಲಿ ಜನರು ದೇವರ ಅನುಗ್ರಹವನ್ನು ಪಡೆಯಲಿಕ್ಕಾಗಿ ಆತನನ್ನು ಸಮೀಪಿಸಸಾಧ್ಯವಿತ್ತು.

18. (ಎ) ದೇವರೊಂದಿಗಿನ ಸ್ನೇಹವು ಏನನ್ನು ಅಗತ್ಯಪಡಿಸುತ್ತದೆ? (ಬಿ) ಮುಂದಿನ ಲೇಖನದಲ್ಲಿ ಏನನ್ನು ಚರ್ಚಿಸಲಾಗುವುದು?

18 ಯೆಹೋವನ ಸ್ನೇಹವನ್ನು ಬಯಸುವ ಯಾರೇ ಆಗಲಿ, ಅವರು ಕೇವಲ ತಮ್ಮ ತುಟಿಗಳಿಂದ ಅಲ್ಲ ಬದಲಾಗಿ “ಹೃದಯದಲ್ಲಿ” ಸತ್ಯವಚನವನ್ನಾಡುವವರೂ ಆಗಿರಬೇಕು. ದೇವರ ನಿಜ ಸ್ನೇಹಿತರು ಪ್ರಾಮಾಣಿಕ ಹೃದಯಿಗಳಾಗಿರಬೇಕು ಮತ್ತು ‘ನಿಷ್ಕಪಟವಾದ ನಂಬಿಕೆಯ’ ಪುರಾವೆಯನ್ನು ನೀಡಬೇಕು; ಏಕೆಂದರೆ ಸತ್ಯಭರಿತ ಕೃತ್ಯಗಳು ಹೃದಯದಿಂದ ಹೊರಹೊಮ್ಮುತ್ತವೆ. (1 ತಿಮೊಥೆಯ 1:5; ಮತ್ತಾಯ 12:34, 35) ದೇವರ ಸ್ನೇಹಿತನು ಕುಟಿಲನಾಗಿರುವುದಿಲ್ಲ ಅಥವಾ ವಂಚನೆಯುಳ್ಳವನಾಗಿರುವುದಿಲ್ಲ, ಏಕೆಂದರೆ ‘ಕಪಟಿಗಳು ಯೆಹೋವನಿಗೆ ಹೇಯವಾಗಿದ್ದಾರೆ.’ (ಕೀರ್ತನೆ 5:6) ಭೂಮಿಯಾದ್ಯಂತವಿರುವ ಯೆಹೋವನ ಸಾಕ್ಷಿಗಳು, ತಮ್ಮ ದೇವರನ್ನು ಅನುಕರಿಸುತ್ತಾ ಸತ್ಯವಂತರಾಗಿರಲು ಮನಃಪೂರ್ವಕವಾಗಿ ಶ್ರಮಿಸುತ್ತಾರೆ. ಮುಂದಿನ ಲೇಖನವು ಈ ವಸ್ತುವಿಷಯವನ್ನು ಪರೀಕ್ಷಿಸುವುದು.

ನೀವು ಹೇಗೆ ಉತ್ತರಿಸುವಿರಿ?

• ಪ್ರತಿಯೊಂದರ ಕುರಿತಾದ ಸತ್ಯತೆಯು ಯೆಹೋವನಿಗೆ ಏಕೆ ತಿಳಿದಿದೆ?

• ಯೆಹೋವನು ಸತ್ಯವಂತನಾಗಿದ್ದಾನೆ ಎಂಬುದನ್ನು ಯಾವುದು ತೋರಿಸುತ್ತದೆ?

• ಯೆಹೋವನು ಹೇಗೆ ಸತ್ಯವನ್ನು ಪ್ರಕಟಪಡಿಸಿದ್ದಾನೆ?

• ಸತ್ಯದ ವಿಷಯದಲ್ಲಿ ನಮ್ಮಿಂದ ಏನು ಕೇಳಿಕೊಳ್ಳಲ್ಪಡುತ್ತದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 10ರಲ್ಲಿರುವ ಚಿತ್ರಗಳು]

ಸತ್ಯದ ದೇವರಿಗೆ, ತಾನು ಸೃಷ್ಟಿಸಿರುವಂಥ ಎಲ್ಲಾ ವಸ್ತುಗಳ ಕುರಿತಾದ ಪ್ರತಿಯೊಂದು ವಿಚಾರವೂ ಚೆನ್ನಾಗಿ ತಿಳಿದಿದೆ

[ಪುಟ 12, 13ರಲ್ಲಿರುವ ಚಿತ್ರಗಳು]

ಯೆಹೋವನ ವಾಗ್ದಾನಗಳು ಖಂಡಿತವಾಗಿಯೂ ನೆರವೇರುವವು