ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಸಮಯೋಚಿತ ನಯವನ್ನು ಉಪಯೋಗಿಸುವ ಕಲೆಯನ್ನು ಕಲಿಯುವುದು

ಸಮಯೋಚಿತ ನಯವನ್ನು ಉಪಯೋಗಿಸುವ ಕಲೆಯನ್ನು ಕಲಿಯುವುದು

ಸಮಯೋಚಿತ ನಯವನ್ನು ಉಪಯೋಗಿಸುವ ಕಲೆಯನ್ನು ಕಲಿಯುವುದು

ಪೆಗಿಯ ಮಗನು ತನ್ನ ತಮ್ಮನಿಗೆ ಕಠೋರವಾಗಿ ಮಾತಾಡುತ್ತಿರುವುದನ್ನು ಅವಳು ಗಮನಿಸಿದಳು. ಕೂಡಲೆ ಅವಳು ಮಗನಿಗೆ ಹೀಗೆ ಕೇಳಿದಳು: “ನಿನ್ನ ತಮ್ಮನೊಂದಿಗೆ ಮಾತಾಡುವ ಅತ್ಯುತ್ತಮ ವಿಧ ಇದೇ ಆಗಿದೆಯೆಂದು ನೀನು ನೆನಸುತ್ತೀಯೋ? ನೋಡು ಅವನೆಷ್ಟು ಬೇಸರಮಾಡಿಕೊಂಡಿದ್ದಾನೆ!” ಅವಳು ಹಾಗೇಕೆ ಹೇಳಿದಳು? ಸಮಯೋಚಿತ ನಯದಿಂದ ವರ್ತಿಸುವ ಹಾಗೂ ಇತರರ ಭಾವನೆಗಳಿಗೆ ಪರಿಗಣನೆಯನ್ನು ತೋರಿಸುವ ಕಲೆಯನ್ನು ಅವಳು ತನ್ನ ಮಗನಿಗೆ ಕಲಿಸಲು ಪ್ರಯತ್ನಿಸುತ್ತಿದ್ದಳು.

ಅಪೊಸ್ತಲ ಪೌಲನು ತನಗಿಂತಲೂ ಚಿಕ್ಕಪ್ರಾಯದ ಸಂಗಡಿಗನಾಗಿದ್ದ ತಿಮೊಥೆಯನಿಗೆ, ‘ಎಲ್ಲರ ವಿಷಯದಲ್ಲಿ ಸಾಧು [ಅಥವಾ “ಸಮಯೋಚಿತ ನಯವುಳ್ಳವನು,” NW]’ ಆಗಿರುವಂತೆ ಉತ್ತೇಜಿಸಿದನು. ಹೀಗೆ ಮಾಡುವಲ್ಲಿ, ತಿಮೊಥೆಯನು ಇತರರ ಭಾವನೆಗಳಿಗೆ ನೋವನ್ನು ಉಂಟುಮಾಡುವವನಾಗಿರುತ್ತಿರಲಿಲ್ಲ. (2 ತಿಮೊಥೆಯ 2:24) ಸಮಯೋಚಿತ ನಯ ಎಂದರೇನು? ಈ ಕ್ಷೇತ್ರದಲ್ಲಿ ನೀವು ಹೇಗೆ ಪ್ರಗತಿಯನ್ನು ಮಾಡಸಾಧ್ಯವಿದೆ? ಮತ್ತು ಇತರರು ಈ ಕಲೆಯನ್ನು ಬೆಳೆಸಿಕೊಳ್ಳುವಂತೆ ನೀವು ಹೇಗೆ ಸಹಾಯಮಾಡಸಾಧ್ಯವಿದೆ?

ಸಮಯೋಚಿತ ನಯ ಎಂದರೇನು?

ಒಂದು ಶಬ್ದಕೋಶವು ಸಮಯೋಚಿತ ನಯವನ್ನು “ಒಂದು ಸನ್ನಿವೇಶದ ಸೂಕ್ಷ್ಮತೆಯನ್ನು ಅರಿತುಕೊಳ್ಳುವ ಹಾಗೂ ಅತ್ಯಂತ ದಯಾಪರವಾದ ಇಲ್ಲವೆ ಅತ್ಯಂತ ಸೂಕ್ತವಾದ ವಿಷಯವನ್ನು ಮಾಡುವ ಅಥವಾ ಹೇಳುವ ಸಾಮರ್ಥ್ಯ” ಎಂದು ಅರ್ಥನಿರೂಪಿಸುತ್ತದೆ. ಮೂಲತಃ ಈ ಶಬ್ದವು ಸ್ಪರ್ಶಕ್ಕೆ ಸೂಚಿತವಾಗುತ್ತಿತ್ತು. ಯಾವುದಾದರೊಂದು ವಸ್ತುವು ಅಂಟಿಕೊಳ್ಳುವಂತಿದೆ, ಮೃದುವಾಗಿದೆ, ನುಣುಪಾಗಿದೆ, ಬಿಸಿಯಾಗಿದೆ ಅಥವಾ ರೋಮಭರಿತವಾಗಿದೆ ಎಂಬುದನ್ನು ಸಂವೇದನಾತ್ಮಕ ಬೆರಳುಗಳು ಗ್ರಹಿಸಸಾಧ್ಯವಿರುವಂತೆಯೇ, ಸಮಯೋಚಿತ ನಯವಿರುವಂಥ ಒಬ್ಬ ವ್ಯಕ್ತಿಯು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳಬಲ್ಲನು ಮತ್ತು ತನ್ನ ಮಾತುಗಳು ಅಥವಾ ಕೃತ್ಯಗಳು ಅವರ ಮೇಲೆ ಹೇಗೆ ಪ್ರಭಾವ ಬೀರಬಲ್ಲವೆಂಬುದನ್ನು ವಿವೇಚಿಸಬಲ್ಲನು. ಹೀಗೆ ಮಾಡುವುದು ಕೇವಲ ಒಂದು ಕೌಶಲವಲ್ಲ; ಇದರಲ್ಲಿ ಇತರರಿಗೆ ನೋವನ್ನುಂಟುಮಾಡುವುದನ್ನು ತಡೆಯುವ ನಿಜವಾದ ಬಯಕೆಯು ಒಳಗೂಡಿದೆ.

ಎಲೀಷನ ಸೇವಕನಾಗಿದ್ದ ಗೇಹಜಿಯ ಕುರಿತಾದ ಬೈಬಲ್‌ ವೃತ್ತಾಂತದಲ್ಲಿ, ಸಮಯೋಚಿತ ನಯವಿರದಿದ್ದಂಥ ಒಬ್ಬ ವ್ಯಕ್ತಿಯ ಉದಾಹರಣೆಯನ್ನು ನಾವು ಕಂಡುಕೊಳ್ಳುತ್ತೇವೆ. ಶೂನೇಮ್ಯಳಾಗಿದ್ದ ಒಬ್ಬ ಸ್ತ್ರೀಯ ಮಗನು ಆಗತಾನೇ ಆಕೆಯ ತೊಡೆಯ ಮೇಲೆಯೇ ಮರಣಪಟ್ಟಿದ್ದನು. ಸಾಂತ್ವನವನ್ನು ಪಡೆದುಕೊಳ್ಳಲಿಕ್ಕಾಗಿ ಪ್ರಯತ್ನಿಸುತ್ತಾ ಆಕೆ ಎಲೀಷನನ್ನು ಭೇಟಿಯಾಗಲು ಬಂದಳು. ಎಲ್ಲವೂ ಕ್ಷೇಮವೋ ಎಂದು ಆಕೆಯನ್ನು ವಿಚಾರಿಸಿದಾಗ ಆಕೆ ಉತ್ತರಿಸಿದ್ದು: “ಕ್ಷೇಮ.” ಆದರೆ ಆಕೆ ಪ್ರವಾದಿಯ ಸಮೀಪಕ್ಕೆ ಬಂದಾಗ, “ಗೇಹಜಿಯು ಆಕೆಯನ್ನು ದೂಡುವದಕ್ಕಾಗಿ ಹತ್ತಿರ” ಬಂದನು. ಆದರೆ ಎಲೀಷನು ಹೇಳಿದ್ದು: “ಬಿಡು, ಆಕೆಯ ಮನಸ್ಸಿನಲ್ಲಿ, ಬಹುದುಃಖವಿರುವ ಹಾಗೆ ತೋರುತ್ತದೆ.”​—2 ಅರಸುಗಳು 4:17-20, 25-27.

ಆ ಗೇಹಜಿಯು ಅಷ್ಟು ಒರಟಾಗಿ ಮತ್ತು ಸಮಯೋಚಿತ ನಯವಿಲ್ಲದೆ ಹೇಗೆ ವರ್ತಿಸಸಾಧ್ಯವಿತ್ತು? ಅವನು ಆ ಸ್ತ್ರೀಯನ್ನು ಪ್ರಶ್ನಿಸಿದಾಗ ಆಕೆ ತನ್ನ ಭಾವನೆಯನ್ನು ಮಾತುಗಳಲ್ಲಿ ವ್ಯಕ್ತಪಡಿಸಲಿಲ್ಲ ಎಂಬುದು ನಿಜ. ಆದರೂ, ಹೆಚ್ಚಿನ ಜನರು ತಮ್ಮ ಮನಸ್ಸಿನ ಭಾವನೆಗಳನ್ನು ಎಲ್ಲರಿಗೂ ಹೇಳಿಕೊಳ್ಳುವುದಿಲ್ಲ. ಆದರೆ, ಈಕೆಯ ವಿಷಯದಲ್ಲಿ ನೋಡುವಾಗ, ಒಂದಲ್ಲ ಒಂದು ರೀತಿಯಲ್ಲಿ ಆಕೆಯ ಭಾವನೆಗಳು ದೃಷ್ಟಿಗೋಚರವಾಗುವಂತಿದ್ದಿರಬೇಕು. ಕಡೆಗೂ ಎಲೀಷನು ಆಕೆಯ ಭಾವನೆಗಳನ್ನು ಗ್ರಹಿಸಿದನು, ಆದರೆ ಗೇಹಜಿಯು ಗ್ರಹಿಸಲಿಲ್ಲ, ಅಥವಾ ಮನಃಪೂರ್ವಕವಾಗಿ ಅವುಗಳನ್ನು ಅಲಕ್ಷಿಸುವ ಆಯ್ಕೆಮಾಡಿದನು. ಇದು, ಸಮಯೋಚಿತ ನಯವಿಲ್ಲದಿರುವಂಥ ವರ್ತನೆಯ ಸಾಮಾನ್ಯ ಕಾರಣವನ್ನು ಸುಸ್ಪಷ್ಟವಾಗಿ ದೃಷ್ಟಾಂತಿಸುತ್ತದೆ. ಒಬ್ಬ ವ್ಯಕ್ತಿಯು ತನ್ನ ಕೆಲಸದ ಪ್ರಾಮುಖ್ಯತೆಯ ವಿಷಯದಲ್ಲಿ ಅತಿರೇಕವಾಗಿ ಚಿಂತಿತನಾಗಿರುವಾಗ, ಅವನು ಯಾರೊಂದಿಗೆ ವ್ಯವಹರಿಸುತ್ತಾನೋ ಅವರ ಆವಶ್ಯಕತೆಗಳನ್ನು ಮನಗಾಣಲು ಅಥವಾ ಅದಕ್ಕೆ ಗಮನ ಕೊಡಲು ಸುಲಭವಾಗಿಯೇ ವಿಫಲನಾಗುತ್ತಾನೆ. ಒಬ್ಬ ಬಸ್‌ ಚಾಲಕನು ನಿಗದಿತ ಸಮಯಕ್ಕೆ ಬಸ್‌ ಸೇರಬೇಕಾದ ಸ್ಥಳದ ವಿಷಯದಲ್ಲೇ ಎಷ್ಟು ಆಲೋಚನಾಮಗ್ನನಾದನೆಂದರೆ, ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಿಕ್ಕಾಗಿ ಅವನು ಎಲ್ಲೂ ಬಸ್ಸನ್ನು ನಿಲ್ಲಿಸಲೇ ಇಲ್ಲ. ಆದುದರಿಂದ ಸಮಯೋಚಿತ ನಯವಿಲ್ಲದ ಮನುಷ್ಯನು ಇಂಥ ಬಸ್‌ ಚಾಲಕನಂತಿದ್ದಾನೆ.

ಗೇಹಜಿಯಂತೆ ಸಮಯೋಚಿತ ನಯರಹಿತರಾಗಿರುವುದನ್ನು ನಾವು ತಡೆಯಬೇಕಾದರೆ, ನಾವು ಜನರೊಂದಿಗೆ ದಯಾಭಾವದಿಂದ ವರ್ತಿಸಲು ಪ್ರಯತ್ನಿಸಬೇಕು, ಏಕೆಂದರೆ ಅವರಿಗೆ ನಿಜವಾಗಿಯೂ ಯಾವ ಅನಿಸಿಕೆಯಾಗುತ್ತಿದೆ ಎಂಬುದು ನಮಗೆ ಗೊತ್ತಿರುವುದಿಲ್ಲ. ಒಬ್ಬ ವ್ಯಕ್ತಿಯ ಭಾವನೆಗಳನ್ನು ಹೊರಸೂಸುವಂಥ ಗುರುತುಗಳನ್ನು ಗ್ರಹಿಸಲು ನಾವು ಯಾವಾಗಲೂ ಎಚ್ಚರವಾಗಿರಬೇಕು ಮತ್ತು ದಯಾಭರಿತ ಮಾತು ಅಥವಾ ಕ್ರಿಯೆಯಿಂದ ಪ್ರತಿಕ್ರಿಯಿಸಬೇಕು. ಈ ವಿಷಯದಲ್ಲಿ ನಿಮ್ಮ ಕೌಶಲಗಳನ್ನು ನೀವು ಹೇಗೆ ಉತ್ತಮಗೊಳಿಸಸಾಧ್ಯವಿದೆ?

ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವುದು

ಜನರ ಭಾವನೆಗಳನ್ನು ಗ್ರಹಿಸುವುದರಲ್ಲಿ ಮತ್ತು ಅವರನ್ನು ಎಷ್ಟರ ಮಟ್ಟಿಗೆ ದಯಾಭಾವದಿಂದ ಉಪಚರಿಸಬೇಕು ಎಂಬುದನ್ನು ವಿವೇಚಿಸುವುದರಲ್ಲಿ ಯೇಸು ಅತ್ಯುತ್ತಮನಾಗಿದ್ದನು. ಒಮ್ಮೆ ಅವನು ಫರಿಸಾಯನಾಗಿದ್ದ ಸೀಮೋನನ ಮನೆಯಲ್ಲಿ ಊಟಮಾಡುತ್ತಿದ್ದಾಗ, ‘ಇಡೀ ಊರಿನಲ್ಲೇ ದುರಾಚಾರಿಯೆಂದು’ ಪರಿಗಣಿಸಲ್ಪಡುತ್ತಿದ್ದ ಹೆಂಗಸೊಬ್ಬಳು ಅವನ ಬಳಿಗೆ ಬಂದಳು. ಈ ಘಟನೆಯಲ್ಲೂ ಆ ಹೆಂಗಸು ಏನನ್ನೂ ಮಾತಾಡಲಿಲ್ಲ, ಆದರೆ ಅವಳ ವರ್ತನೆಯನ್ನು ಗಮನಿಸಿ ಅನೇಕ ವಿಷಯಗಳನ್ನು ಅರ್ಥಮಾಡಿಕೊಳ್ಳಸಾಧ್ಯವಿತ್ತು. “ಸುಗಂಧತೈಲದ ಭರಣಿಯನ್ನು ತೆಗೆದುಕೊಂಡು ಬಂದು ಹಿಂದೆ ಆತನ ಪಾದಗಳ ಬಳಿಯಲ್ಲಿ ನಿಂತುಕೊಂಡು ಅಳುತ್ತಾ ತನ್ನ ಕಣ್ಣೀರಿನಿಂದ ಆತನ ಪಾದಗಳನ್ನು ತ್ಯಾವಮಾಡಿ ತನ್ನ ತಲೇಕೂದಲಿನಿಂದ ಒರಸಿ ಅವುಗಳಿಗೆ ಮುದ್ದಿಟ್ಟು ಆ ತೈಲವನ್ನು ಹಚ್ಚಿದಳು.” ಇದೆಲ್ಲವೂ ಏನನ್ನು ಅರ್ಥೈಸಿತು ಎಂಬುದನ್ನು ಯೇಸು ಗ್ರಹಿಸಿದನು. ಮತ್ತು ಸೀಮೋನನು ಬಾಯಿಬಿಟ್ಟು ಒಂದು ಮಾತನ್ನೂ ನುಡಿಯಲಿಲ್ಲವಾದರೂ, “ಇವಳು ದುರಾಚಾರಿ; ಇವನು ಪ್ರವಾದಿಯಾಗಿದ್ದರೆ ತನ್ನನ್ನು ಮುಟ್ಟಿದ ಈ ಹೆಂಗಸು ಇಂಥವಳೆಂದು ತಿಳುಕೊಳ್ಳುತ್ತಿದ್ದನು” ಎಂದು ಅವನು ತನ್ನ ಮನಸ್ಸಿನಲ್ಲಿ ಹೇಳಿಕೊಳ್ಳುತ್ತಿದ್ದಾನೆ ಎಂಬುದನ್ನು ಯೇಸು ವಿವೇಚಿಸಶಕ್ತನಾಗಿದ್ದನು: ​—ಲೂಕ 7:37-39.

ಒಂದುವೇಳೆ ಯೇಸು ಆ ಹೆಂಗಸನ್ನು ಹೊರಗಟ್ಟುತ್ತಿದ್ದಲ್ಲಿ ಅಥವಾ ಸೀಮೋನನಿಗೆ “ಅಜ್ಞಾನಿಯೇ, ಅವಳು ಪಶ್ಚಾತ್ತಾಪಪಟ್ಟಿದ್ದಾಳೆ ಎಂಬುದು ನಿನಗೆ ಅರ್ಥವಾಗುವುದಿಲ್ಲವೋ?” ಎಂದು ಹೇಳಿಬಿಡುತ್ತಿದ್ದಲ್ಲಿ, ಅದು ಉಂಟುಮಾಡಸಾಧ್ಯವಿದ್ದಂಥ ಹಾನಿಯನ್ನು ನೀವು ಊಹಿಸಿಕೊಳ್ಳಬಲ್ಲಿರೋ? ಅದಕ್ಕೆ ಬದಲಾಗಿ, ಯೇಸು ಸಮಯೋಚಿತ ನಯವನ್ನುಪಯೋಗಿಸುತ್ತಾ, ದೊಡ್ಡ ಮೊತ್ತದ ಸಾಲವನ್ನು ತೀರಿಸಬೇಕಾಗಿದ್ದ ಒಬ್ಬ ವ್ಯಕ್ತಿಯ ಹಾಗೂ ಚಿಕ್ಕ ಮೊತ್ತದ ಸಾಲವನ್ನು ತೀರಿಸಬೇಕಾಗಿದ್ದ ಇನ್ನೊಬ್ಬ ವ್ಯಕ್ತಿಯ ಸಾಲವನ್ನು ಮನ್ನಿಸಿಬಿಟ್ಟಂಥ ಒಬ್ಬ ಮನುಷ್ಯನ ಕುರಿತಾದ ಒಂದು ದೃಷ್ಟಾಂತವನ್ನು ಸೀಮೋನನಿಗೆ ಹೇಳಿದನು. “ಅವರಲ್ಲಿ ಯಾವನು ಆ ಸಾಹುಕಾರನನ್ನು ಹೆಚ್ಚಾಗಿ ಪ್ರೀತಿಸಾನು”? ಎಂದು ಯೇಸು ಕೇಳಿದನು. ಹೀಗೆ, ಸೀಮೋನನನ್ನು ಖಂಡಿಸುತ್ತಿರುವಂತೆ ತೋರಿಬರುವುದಕ್ಕೆ ಬದಲಾಗಿ, ಸೀಮೋನನು ಕೊಟ್ಟಂಥ ಸರಿಯಾದ ಉತ್ತರಕ್ಕಾಗಿ ಅವನನ್ನು ಪ್ರಶಂಸಿಸಲು ಯೇಸು ಶಕ್ತನಾಗಿದ್ದನು. ತದನಂತರ ಅವನು, ಆ ಹೆಂಗಸಿನ ನಿಜವಾದ ಭಾವನೆಗಳ ಮತ್ತು ಅವಳು ತೋರಿಸಿದ ಪಶ್ಚಾತ್ತಾಪದ ಅಭಿವ್ಯಕ್ತಿಗಳ ಕುರಿತಾದ ಅನೇಕ ಸೂಚನೆಗಳನ್ನು ಗ್ರಹಿಸುವಂತೆ ಸೀಮೋನನಿಗೆ ದಯಾಭಾವದಿಂದ ಸಹಾಯಮಾಡಿದನು. ಯೇಸು ಆ ಹೆಂಗಸಿನ ಕಡೆಗೆ ತಿರುಗಿ, ಅವಳ ಭಾವನೆಗಳನ್ನು ತಾನು ಅರ್ಥಮಾಡಿಕೊಂಡಿದ್ದೇನೆ ಎಂಬುದನ್ನು ದಯಾಪರ ರೀತಿಯಲ್ಲಿ ಸೂಚಿಸಿದನು. ಅವಳ ಪಾಪಗಳು ಕ್ಷಮಿಸಲ್ಪಟ್ಟಿವೆ ಎಂದು ಅವಳಿಗೆ ಹೇಳಿದ ಬಳಿಕ ಅವನು ನುಡಿದದ್ದು: “ನಿನ್ನ ನಂಬಿಕೆಯೇ ನಿನ್ನನ್ನು ರಕ್ಷಿಸಿ ಅದೆ; ಸಮಾಧಾನದಿಂದ ಹೋಗು.” ಸಮಯೋಚಿತ ನಯದಿಂದ ತುಂಬಿದ್ದ ಆ ಮಾತುಗಳು, ಯಾವುದು ಸರಿಯಾಗಿದೆಯೋ ಅದನ್ನು ಮಾಡುವ ಅವಳ ದೃಢನಿರ್ಧಾರವನ್ನು ಎಷ್ಟರ ಮಟ್ಟಿಗೆ ಬಲಪಡಿಸಿದ್ದಿರಬೇಕು! (ಲೂಕ 7:40-50) ಸಮಯೋಚಿತ ನಯವನ್ನು ಉಪಯೋಗಿಸುವುದರಲ್ಲಿ ಯೇಸು ಸಫಲನಾದನು, ಏಕೆಂದರೆ ಜನರ ಭಾವನೆಗಳನ್ನು ಅವನು ಸೂಕ್ಷ್ಮವಾಗಿ ಗಮನಿಸಿದನು ಮತ್ತು ಸಹಾನುಭೂತಿಯಿಂದ ಪ್ರತಿಕ್ರಿಯಿಸಿದನು.

ಯೇಸು ಹೇಗೆ ಸೀಮೋನನಿಗೆ ಸಹಾಯಮಾಡಿದನೋ ಅದೇ ರೀತಿ ನಾವು ಸಹ ಇತರರ ಅವ್ಯಕ್ತ ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಕಲಿಯಸಾಧ್ಯವಿದೆ ಮತ್ತು ಹಾಗೆ ಮಾಡಲು ಇತರರಿಗೂ ಸಹಾಯಮಾಡಸಾಧ್ಯವಿದೆ. ಕೆಲವೊಮ್ಮೆ ಅನುಭವಸ್ಥ ಶುಶ್ರೂಷಕರು ಕ್ರೈಸ್ತ ಶುಶ್ರೂಷೆಯಲ್ಲಿ ಹೊಸಬರಿಗೆ ಈ ಕಲೆಯನ್ನು ಕಲಿಸಸಾಧ್ಯವಿದೆ. ಸುವಾರ್ತೆಯನ್ನು ಹಂಚುತ್ತಿರುವಾಗ ಅವರು ಒಂದು ಮನೆಯನ್ನು ಸಂದರ್ಶಿಸಿದ ಬಳಿಕ, ತಾವು ಯಾರನ್ನು ಭೇಟಿಯಾದರೋ ಅವರ ಭಾವನೆಗಳನ್ನು ಸೂಚಿಸುವಂತಿದ್ದ ಸೂಚನೆಗಳ ಕುರಿತು ಅವರು ವಿಶ್ಲೇಷಿಸಸಾಧ್ಯವಿದೆ. ಆ ವ್ಯಕ್ತಿಯು ನಾಚಿಕೆ ಸ್ವಭಾವದವನಾಗಿದ್ದನೋ, ಸಂದೇಹವಾದಿಯಾಗಿದ್ದನೋ, ಕೋಪಗೊಂಡಿದ್ದನೋ, ಅಥವಾ ತುಂಬ ಕಾರ್ಯಮಗ್ನನಾಗಿದ್ದನೋ? ಅವನಿಗೆ ಸಹಾಯಮಾಡಲು ಅತ್ಯಂತ ದಯಾಪರ ವಿಧವು ಯಾವುದು? ಸಮಯೋಚಿತ ನಯದ ಕೊರತೆಯ ಕಾರಣ ಒಬ್ಬರು ಇನ್ನೊಬ್ಬರ ಮನನೋಯಿಸಿರಬಹುದಾದಂಥ ಸಹೋದರ ಸಹೋದರಿಯರಿಗೆ ಸಹ ಹಿರಿಯರು ಸಹಾಯಮಾಡಸಾಧ್ಯವಿದೆ. ಪ್ರತಿಯೊಬ್ಬರು ಇತರರ ಭಾವನೆಗಳನ್ನು ಅರ್ಥಮಾಡಿಕೊಳ್ಳುವಂತೆ ಅವರಿಗೆ ಸಹಾಯಮಾಡಿರಿ. ಒಬ್ಬನಿಗೆ ಅವಮಾನಿತನಾದ, ಅಲಕ್ಷಿಸಲ್ಪಟ್ಟ, ಅಥವಾ ಅಪಾರ್ಥಮಾಡಿಕೊಳ್ಳಲಾಗಿದೆ ಎಂಬ ಅನಿಸಿಕೆಯುಂಟಾಗಬಹುದೋ? ಹಾಗಾದರೆ ಅಂಥವನಿಗೆ ದಯಾಭಾವವು ಯಾವ ವಿಧದಲ್ಲಿ ಒಳ್ಳೇ ಅನಿಸಿಕೆಯನ್ನು ಉಂಟುಮಾಡಸಾಧ್ಯವಿದೆ?

ತಮ್ಮ ಮಕ್ಕಳು ಸಹಾನುಭೂತಿಯನ್ನು ಬೆಳೆಸಿಕೊಳ್ಳುವಂತೆ ಹೆತ್ತವರು ಅವರಿಗೆ ಸಹಾಯಮಾಡಬೇಕು. ಏಕೆಂದರೆ ಇದು ತಾನೇ ಅವರು ಸಮಯೋಚಿತ ನಯದಿಂದ ವರ್ತಿಸುವಂತೆ ಅವರನ್ನು ಪ್ರಚೋದಿಸುವುದು. ಆರಂಭದಲ್ಲಿ ತಿಳಿಸಲಾಗಿದ್ದ ಪೆಗಿಯ ಮಗನು, ತನ್ನ ತಮ್ಮನ ಕೆಂಪುಕೆಂಪಾದ ಮುಖ, ಕೋಪದಿಂದ ಮುಂದೆಚಾಚಿಕೊಂಡಿರುವ ತುಟಿಗಳು, ಹಾಗೂ ಕಂಬನಿಭರಿತ ಕಣ್ಣುಗಳನ್ನು ಗಮನಿಸಿದನು, ಮತ್ತು ತನ್ನ ತಮ್ಮನು ಅನುಭವಿಸುತ್ತಿದ್ದ ಮನೋವೇದನೆಯನ್ನು ಅರ್ಥಮಾಡಿಕೊಂಡನು. ಅವನ ತಾಯಿಯು ನಿರೀಕ್ಷಿಸಿದ್ದಂತೆಯೇ ಇವನಿಗೆ ವಿಷಾದದ ಅನಿಸಿಕೆಯಾಯಿತು ಮತ್ತು ಅವನು ತನ್ನನ್ನು ಬದಲಾಯಿಸಿಕೊಳ್ಳಲು ನಿರ್ಧರಿಸಿದನು. ಪೆಗಿಯ ಇಬ್ಬರೂ ಹುಡುಗರು ಬಾಲ್ಯಾವಸ್ಥೆಯಲ್ಲಿ ಕಲಿತಂಥ ಆ ಕೌಶಲಗಳನ್ನು ಸದುಪಯೋಗಿಸಿದರು, ಮತ್ತು ವರ್ಷಗಳಾನಂತರ ಶಿಷ್ಯರನ್ನಾಗಿ ಮಾಡುವ ಕೆಲಸದಲ್ಲಿ ಫಲಭರಿತರಾದರು ಮತ್ತು ಕ್ರೈಸ್ತ ಸಭೆಯಲ್ಲಿ ಒಳ್ಳೇ ಕುರುಬರಾದರು.

ನೀವು ಅರ್ಥಮಾಡಿಕೊಳ್ಳುತ್ತೀರಿ ಎಂಬುದನ್ನು ತೋರ್ಪಡಿಸಿರಿ

ಒಬ್ಬರ ವಿರುದ್ಧವಾಗಿ ನಿಮಗೆ ಏನಾದರೂ ದೂರು ಇರುವಲ್ಲಿ, ಸಮಯೋಚಿತ ನಯವು ವಿಶೇಷವಾಗಿ ಪ್ರಾಮುಖ್ಯವಾಗಿದೆ. ಏಕೆಂದರೆ ಆ ಸಮಯದಲ್ಲಿ ನೀವು ಇನ್ನೊಬ್ಬ ವ್ಯಕ್ತಿಯ ಘನತೆಗೆ ಸುಲಭವಾಗಿ ಧಕ್ಕೆಯನ್ನುಂಟುಮಾಡಸಾಧ್ಯವಿದೆ. ಮೊದಲಾಗಿ ನಿರ್ದಿಷ್ಟ ಪ್ರಶಂಸೆಯು ಯಾವಾಗಲೂ ಸೂಕ್ತವಾದದ್ದಾಗಿರುತ್ತದೆ. ಆ ವ್ಯಕ್ತಿಯನ್ನು ಟೀಕಿಸುವುದಕ್ಕೆ ಬದಲಾಗಿ, ಸಮಸ್ಯೆಯನ್ನು ಬಗೆಹರಿಸುವುದರ ಮೇಲೆ ಮನಸ್ಸನ್ನು ಕೇಂದ್ರೀಕರಿಸಿರಿ. ಅವನ ವರ್ತನೆಯು ನಿಮ್ಮನ್ನು ಹೇಗೆ ಬಾಧಿಸುತ್ತಿದೆ ಎಂಬುದನ್ನು ಮತ್ತು ಯಾವ ಬದಲಾವಣೆಯನ್ನು ನೋಡಲು ನೀವು ಬಯಸುತ್ತೀರಿ ಎಂಬುದನ್ನು ವಿವರಿಸಿರಿ. ತದನಂತರ ಆ ವ್ಯಕ್ತಿಯು ಏನು ಹೇಳುತ್ತಾನೋ ಅದಕ್ಕೆ ಕಿವಿಗೊಡಲು ಸಿದ್ಧರಾಗಿ. ಬಹುಶಃ ನೀವು ಅವನನ್ನು ಅಪಾರ್ಥಮಾಡಿಕೊಂಡಿರಬಹುದು.

ಒಂದುವೇಳೆ ನೀವು ಜನರ ದೃಷ್ಟಿಕೋನವನ್ನು ಸಮ್ಮತಿಸುವುದಿಲ್ಲವಾದರೂ, ಅದನ್ನು ಕಡಿಮೆಪಕ್ಷ ಅರ್ಥಮಾಡಿಕೊಂಡಿದ್ದೀರಿ ಎಂಬ ಅನಿಸಿಕೆಯನ್ನು ನಿಮ್ಮಲ್ಲಿ ಕಾಣಲು ಅವರು ಬಯಸುತ್ತಾರೆ. ತಾನು ಮಾರ್ಥಳ ಬೇಗುದಿಯನ್ನು ಅರ್ಥಮಾಡಿಕೊಂಡಿದ್ದೇನೆ ಎಂಬುದನ್ನು ತೋರಿಸುತ್ತಾ ಯೇಸು ಸಮಯೋಚಿತ ನಯದಿಂದ ಮಾತಾಡಿದನು. ಅವನು ಹೇಳಿದ್ದು: “ಮಾರ್ಥಳೇ, ಮಾರ್ಥಳೇ, ನೀನು ಅನೇಕ ವಿಷಯವಾಗಿ ಚಿಂತೆಯಲ್ಲಿಯೂ ಗಡಿಬಿಡಿಯಲ್ಲಿಯೂ ಸಿಕ್ಕಿಕೊಂಡಿದ್ದೀ.” (ಲೂಕ 10:41) ತದ್ರೀತಿಯಲ್ಲಿ, ವ್ಯಕ್ತಿಯೊಬ್ಬನು ಯಾವುದಾದರೊಂದು ಸಮಸ್ಯೆಯ ಕುರಿತು ಮಾತಾಡುವಾಗ, ವಿಷಯವನ್ನು ಪೂರ್ಣವಾಗಿ ಕೇಳಿಸಿಕೊಳ್ಳುವುದಕ್ಕೆ ಮೊದಲೇ ಪರಿಹಾರವನ್ನು ಸೂಚಿಸುವುದಕ್ಕೆ ಬದಲಾಗಿ, ನೀವು ಅದನ್ನು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ತೋರಿಸುವಂಥ ಒಂದು ಜಾಣ್ಮೆಭರಿತ ವಿಧವು, ಆ ಸಮಸ್ಯೆಯನ್ನು ಅಥವಾ ದೂರನ್ನು ನಿಮ್ಮ ಸ್ವಂತ ಮಾತುಗಳಲ್ಲಿ ಪುನರಾವರ್ತಿಸುವುದೇ ಆಗಿದೆ. ಇದು, ನೀವು ಸಮಸ್ಯೆಯನ್ನು ಅರ್ಥಮಾಡಿಕೊಂಡಿದ್ದೀರಿ ಎಂಬುದನ್ನು ತೋರಿಸುವ ದಯಾಪರ ವಿಧವಾಗಿದೆ.

ಏನನ್ನು ಹೇಳಬಾರದೆಂಬುದನ್ನು ಗ್ರಹಿಸುವುದು

ಯೆಹೂದ್ಯರನ್ನು ಸಂಪೂರ್ಣವಾಗಿ ನಿರ್ಮೂಲಮಾಡುವ ಹಾಮಾನನ ಒಳಸಂಚನ್ನು ಜಾರಿಗೆ ತರದಿರುವಂತೆ ಎಸ್ತೇರ್‌ ರಾಣಿಯು ತನ್ನ ಗಂಡನ ಬಳಿ ಬೇಡಿಕೊಳ್ಳಲು ಬಯಸಿದಾಗ, ತನ್ನ ಗಂಡನು ಒಳ್ಳೇ ಮನಃಸ್ಥಿತಿಯಲ್ಲಿರಸಾಧ್ಯವಾಗುವಂತೆ ಸಮಯೋಚಿತ ನಯವನ್ನು ಉಪಯೋಗಿಸಿ ಸೂಕ್ತವಾದ ಏರ್ಪಾಡನ್ನು ಮಾಡಿದಳು. ತದನಂತರವೇ ಅವಳು ಈ ಸೂಕ್ಷ್ಮ ವಿಚಾರವನ್ನು ತನ್ನ ಗಂಡನ ಮುಂದಿರಿಸಿದಳು. ಆದರೆ ಅವಳು ಏನನ್ನು ಹೇಳಲಿಲ್ಲ ಎಂಬುದನ್ನು ಗಮನಿಸುವುದರಿಂದಲೂ ನಾವು ಪಾಠವನ್ನು ಕಲಿಯಸಾಧ್ಯವಿದೆ. ಸಮಯೋಚಿತ ನಯವನ್ನುಪಯೋಗಿಸುತ್ತಾ, ಈ ಒಳಸಂಚಿನ ಜವಾಬ್ದಾರಿಯಲ್ಲಿ ತನ್ನ ಗಂಡನು ಯಾವ ಪಾತ್ರವನ್ನು ವಹಿಸಿದ್ದಾನೆಂಬುದನ್ನು ಅವಳು ಹೇಳಲು ಮುಂದುವರಿಯಲಿಲ್ಲ.​—ಎಸ್ತೇರಳು 5:1-8; 7:1, 2; 8:5.

ತದ್ರೀತಿಯಲ್ಲಿ, ಒಬ್ಬ ಕ್ರೈಸ್ತ ಸಹೋದರಿಯ ಅವಿಶ್ವಾಸಿ ಗಂಡನನ್ನು ನೀವು ಭೇಟಿಯಾಗುವಲ್ಲಿ, ಹೋದಕೂಡಲೇ ಅವನಿಗೆ ಬೈಬಲ್‌ ವಚನವನ್ನು ತೋರಿಸುವುದಕ್ಕೆ ಬದಲಾಗಿ, ಸಮಯೋಚಿತ ಜಾಣ್ಮೆಯನ್ನುಪಯೋಗಿಸಿ ಅವನಿಗೆ ಯಾವುದರಲ್ಲಿ ಆಸಕ್ತಿಯಿದೆ ಎಂಬುದನ್ನು ವಿಚಾರಿಸುವ ಮೂಲಕ ಆರಂಭಿಸಬಾರದೇಕೆ? ಅಪರಿಚಿತನೊಬ್ಬನು ಮಾಮೂಲಾಗಿ ಉಡುಪನ್ನು ಧರಿಸಿ ರಾಜ್ಯ ಸಭಾಗೃಹಕ್ಕೆ ಬರುವಾಗ ಅಥವಾ ಯಾರಾದರೊಬ್ಬರು ದೀರ್ಘವಾದ ಅನುಪಸ್ಥಿತಿಯ ಬಳಿಕ ಹಿಂದಿರುಗಿದಾಗ, ಅವನ ಉಡುಪಿನ ಕುರಿತೊ ಅವನ ಅನುಪಸ್ಥಿತಿಯ ಕುರಿತೊ ಹೇಳಿಕೆ ನೀಡುವುದಕ್ಕೆ ಬದಲಾಗಿ ಅವನನ್ನು ಹಾರ್ದಿಕವಾಗಿ ಸ್ವಾಗತಿಸಿರಿ. ಮತ್ತು ಹೊಸದಾಗಿ ಆಸಕ್ತನಾಗಿರುವಂಥ ಒಬ್ಬ ವ್ಯಕ್ತಿಗೆ ತಪ್ಪಾದ ದೃಷ್ಟಿಕೋನವಿದೆ ಎಂಬುದನ್ನು ನೀವು ಗಮನಿಸುವಾಗ, ಆ ಕೂಡಲೆ ಅವನ ದೃಷ್ಟಿಕೋನವನ್ನು ಸರಿಪಡಿಸುವುದು ಅತ್ಯುತ್ತಮವಾದ ಸಂಗತಿಯಾಗಿಲ್ಲದಿರಬಹುದು. (ಯೋಹಾನ 16:12) ಸಮಯೋಚಿತ ನಯದಲ್ಲಿ, ಏನನ್ನು ಹೇಳಬಾರದು ಎಂಬುದನ್ನು ಗ್ರಹಿಸುವ ಮೂಲಕ ದಯಾಭಾವವನ್ನು ತೋರಿಸುವುದೂ ಒಳಗೂಡಿದೆ.

ಗುಣಪಡಿಸುವಂಥ ಮಾತು

ಸಮಯೋಚಿತ ನಯದ ಕಲೆಯನ್ನು ರೂಢಿಸಿಕೊಳ್ಳುವುದು, ಯಾರಾದರೊಬ್ಬರು ನಿಮ್ಮ ಹೇತುಗಳನ್ನು ಅಪಾರ್ಥಮಾಡಿಕೊಳ್ಳುವಾಗ ಮತ್ತು ಅವರು ನಿಮ್ಮ ಬಗ್ಗೆ ಕಹಿ ಮನೋಭಾವ ಹಾಗೂ ತೀವ್ರ ಅಸಮಾಧಾನವನ್ನು ತಾಳಿರುವಾಗಲೂ, ಅವರೊಂದಿಗೆ ಶಾಂತಿಭರಿತ ಸಂಬಂಧಗಳನ್ನು ಇಟ್ಟುಕೊಳ್ಳುವಂತೆ ಸಹಾಯಮಾಡುವುದು. ಉದಾಹರಣೆಗೆ, ಎಫ್ರಾಯೀಮ್ಯರು ಗಿದ್ಯೋನನೊಂದಿಗೆ ‘ಉಗ್ರವಾಗಿ ಕಲಹಮಾಡಿದಾಗ,’ ಅವನ ಸಮಯೋಚಿತ ನಯದಿಂದ ಕೂಡಿದ ಉತ್ತರದಲ್ಲಿ, ನಿಜವಾಗಿಯೂ ಏನು ಸಂಭವಿಸಿತ್ತು ಎಂಬುದರ ಕುರಿತಾದ ಸ್ಪಷ್ಟವಾದ ವಿವರಣೆ ಮತ್ತು ಎಫ್ರಾಯೀಮ್ಯರು ಏನನ್ನು ಸಾಧಿಸಿದ್ದರು ಎಂಬುದರ ಕುರಿತಾದ ಪ್ರಾಮಾಣಿಕ ಗುಣವಿಮರ್ಶೆಯು ಒಳಗೂಡಿತ್ತು. ಇದು ಸಮಯೋಚಿತ ನಯವಾಗಿತ್ತು, ಏಕೆಂದರೆ ಅವರು ಏಕೆ ಸಿಟ್ಟಿಗೆದ್ದರು ಎಂಬುದನ್ನು ಅವನು ಮನಗಂಡನು ಮತ್ತು ಅವನ ವಿನಯಭಾವವು ಅವರ ಸಿಟ್ಟನ್ನು ಇಳಿಸಿತು.​—ನ್ಯಾಯಸ್ಥಾಪಕರು 8:1-3; ಜ್ಞಾನೋಕ್ತಿ 16:24.

ನಿಮ್ಮ ಮಾತುಗಳು ಬೇರೆಯವರ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದನ್ನು ಪರಿಗಣಿಸಲು ಯಾವಾಗಲೂ ಪ್ರಯತ್ನಿಸಿರಿ. ಸಮಯೋಚಿತ ನಯವುಳ್ಳವರಾಗಿರಲು ಪ್ರಯತ್ನಿಸುವುದು, ಜ್ಞಾನೋಕ್ತಿ 15:23ರಲ್ಲಿ ವರ್ಣಿಸಲ್ಪಟ್ಟಿರುವ ಆನಂದವನ್ನು ಅನುಭವಿಸಲು ನಿಮಗೆ ಸಹಾಯಮಾಡುವುದು: “ತಕ್ಕ ಉತ್ತರಕೊಡುವವನಿಗೆ ಎಷ್ಟೋ ಉಲ್ಲಾಸ! ಸಮಯೋಚಿತವಾದ ವಚನದಲ್ಲಿ ಎಷ್ಟೋ ಸ್ವಾರಸ್ಯ!”

[ಪುಟ 31ರಲ್ಲಿರುವ ಚಿತ್ರ]

ತಮ್ಮ ಮಕ್ಕಳು ಇತರರ ಕಡೆಗೆ ಸಹಾನುಭೂತಿಯನ್ನು ತೋರಿಸುವಂತೆ ಹೆತ್ತವರು ಅವರಿಗೆ ಕಲಿಸಸಾಧ್ಯವಿದೆ

[ಪುಟ 31ರಲ್ಲಿರುವ ಚಿತ್ರ]

ಅನುಭವಸ್ಥ ಕ್ರೈಸ್ತ ಶುಶ್ರೂಷಕರು, ಸಮಯೋಚಿತ ನಯವುಳ್ಳವರಾಗಿರುವಂತೆ ಹೊಸಬರಿಗೆ ಕಲಿಸಬಲ್ಲರು