ನೀವು ಯೆಹೋವನನ್ನು ಶ್ರದ್ಧಾಪೂರ್ವಕವಾಗಿ ಹುಡುಕುತ್ತಿದ್ದೀರೋ?
ನೀವು ಯೆಹೋವನನ್ನು ಶ್ರದ್ಧಾಪೂರ್ವಕವಾಗಿ ಹುಡುಕುತ್ತಿದ್ದೀರೋ?
ಒಬ್ಬ ಕ್ರೈಸ್ತ ಸಹೋದರನು ಪ್ರತಿದಿನ ತನ್ನೊಂದಿಗೆ ರೈಲಿನಲ್ಲಿ ಪ್ರಯಾಣಿಸುವ ಜೊತೆ ಪ್ರಯಾಣಿಕರೊಂದಿಗೆ ಬೈಬಲಿನ ಸುವಾರ್ತೆಯನ್ನು ಹಂಚಿಕೊಳ್ಳಲು ಉತ್ಸುಕನಾಗಿದ್ದನು. (ಮಾರ್ಕ 13:10) ಆದರೆ ಭಯವು ಅವನನ್ನು ತಡೆಗಟ್ಟಿತು. ಅವನು ತನ್ನ ಇಚ್ಛೆಯನ್ನು ಅಲ್ಲಿಗೇ ಬಿಟ್ಟುಬಿಟ್ಟನೋ? ಇಲ್ಲ. ಅವನು ಈ ವಿಷಯದ ಕುರಿತು ಯೆಹೋವನ ಬಳಿ ಎಡೆಬಿಡದೆ ಪ್ರಾರ್ಥಿಸಿದನು ಮತ್ತು ಸಂಭಾಷಣೆಯನ್ನು ಆರಂಭಿಸುವುದು ಹೇಗೆ ಎಂಬುದನ್ನು ಕಲಿಯತೊಡಗಿದನು. ಯೆಹೋವ ದೇವರು ಈ ಸಹೋದರನ ಬಿನ್ನಹವನ್ನು ಉತ್ತರಿಸಿದನು ಮತ್ತು ಸಾಕ್ಷಿನೀಡಲು ಅಗತ್ಯವಿರುವ ಧೈರ್ಯವನ್ನು ಅವನಿಗೆ ದಯಪಾಲಿಸಿದನು.
ಯೆಹೋವನನ್ನು ಹುಡುಕಲು ಮತ್ತು ಆತನ ಅನುಗ್ರಹವನ್ನು ಪಡೆಯಲು ಇಂಥ ಶ್ರದ್ಧೆಯು ಬಹಳ ಆವಶ್ಯಕವಾಗಿದೆ. ಅಪೊಸ್ತಲ ಪೌಲನು ತಿಳಿಸಿದ್ದು: “ದೇವರ ಬಳಿಗೆ ಬರುವವನು ದೇವರು ಇದ್ದಾನೆ, ಮತ್ತು ತನ್ನನ್ನು ಹುಡುಕುವವರಿಗೆ [“ಶ್ರದ್ಧಾಪೂರ್ವಕವಾಗಿ ಹುಡುಕುವವರಿಗೆ,” NW] ಪ್ರತಿಫಲವನ್ನು ಕೊಡುತ್ತಾನೆ ಎಂದು ನಂಬುವದು ಅವಶ್ಯ.” (ಇಬ್ರಿಯ 11:6) ಯೆಹೋವನನ್ನು ಕೇವಲ ಹುಡುಕುವುದು ಸಾಕಾಗುವುದಿಲ್ಲ. ‘ಶ್ರದ್ಧಾಪೂರ್ವಕವಾಗಿ ಹುಡುಕುವುದು’ ಎಂಬುದಾಗಿ ಭಾಷಾಂತರಿಸಲ್ಪಟ್ಟ ಗ್ರೀಕ್ ಪದವು, ಅತ್ಯಾಸಕ್ತಿಯ ಮತ್ತು ಏಕಾಗ್ರತೆಯ ಪ್ರಯತ್ನವನ್ನು ಸೂಚಿಸುತ್ತದೆ. ಇದರಲ್ಲಿ ನಮ್ಮ ಪೂರ್ಣ ಹೃದಯ, ಪೂರ್ಣ ಮನಸ್ಸು, ಪೂರ್ಣ ಪ್ರಾಣ, ಮತ್ತು ಪೂರ್ಣ ಶಕ್ತಿಯು ಒಳಗೊಂಡಿವೆ. ನಾವು ಯೆಹೋವನನ್ನು ಶ್ರದ್ಧಾಪೂರ್ವಕವಾಗಿ ಹುಡುಕುವುದಾದರೆ, ಉದಾಸೀನದ, ಪ್ರಯಾಸಪಡದ, ಅಥವಾ ಸುಖಭೋಗದ ಜೀವನ ರೀತಿಯನ್ನು ಬೆನ್ನಟ್ಟುವುದಿಲ್ಲ. ಅದಕ್ಕೆ ಬದಲಾಗಿ, ಆತನನ್ನು ಹುಡುಕುವುದರಲ್ಲಿ ನಾವು ನೈಜ ಉತ್ಸಾಹವನ್ನು ತೋರಿಸುತ್ತೇವೆ.—ಅ. ಕೃತ್ಯಗಳು 15:17.
ಯೆಹೋವನನ್ನು ಶ್ರದ್ಧಾಪೂರ್ವಕವಾಗಿ ಹುಡುಕಿದವರು
ಪೂರ್ಣ ಪ್ರಯತ್ನದಿಂದ ಯೆಹೋವನನ್ನು ಹುಡುಕಿದ ಅನೇಕರ ಉದಾಹರಣೆಗಳು ಶಾಸ್ತ್ರವಚನಗಳಲ್ಲಿ ಕಂಡುಬರುತ್ತವೆ. ಅಂಥ ಉದಾಹರಣೆಗಳಲ್ಲಿ ಒಂದು ಯಾಕೋಬನದ್ದಾಗಿದೆ. ಇವನು, ಮಾನವ ರೂಪವನ್ನು ತಾಳಿದ ದೇವದೂತನೊಂದಿಗೆ ಬೆಳಗಾಗುವ ವರೆಗೆ ಪಟ್ಟುಹಿಡಿದು ಹೋರಾಡಿದನು. ಅದರ ಪರಿಣಾಮವಾಗಿ, ಯಾಕೋಬನಿಗೆ ಇಸ್ರಾಯೇಲ್ (ದೇವರ ಸಂಗಡ ಹೋರಾಡಿದವನು) ಎಂಬ ಹೆಸರು ಕೊಡಲ್ಪಟ್ಟಿತು, ಏಕೆಂದರೆ ಅವನು ದೇವರ ಸಂಗಡ ‘ಹೋರಾಡಿದನು,’ ಅಥವಾ ‘ಪಟ್ಟುಹಿಡಿದನು,’ ‘ಪ್ರಯಾಸಪಟ್ಟನು,’ ‘ಸತತ ಪ್ರಯತ್ನಮಾಡಿದನು.’ ಅವನ ಶ್ರದ್ಧಾಪೂರ್ವಕ ಪ್ರಯತ್ನಕ್ಕಾಗಿ ದೇವದೂತನು ಅವನನ್ನು ಆಶೀರ್ವದಿಸಿದನು.—ಆದಿಕಾಂಡ 32:24-30.
ಇನ್ನೊಂದು ಉದಾಹರಣೆಯು, 12 ವರುಷದಿಂದ ರಕ್ತಕುಸುಮರೋಗದ ಕಾರಣ “ಬಹು ಕಷ್ಟವನ್ನು” ಅನುಭವಿಸುತ್ತಿದ್ದ ಗಲಿಲಾಯದ ಒಬ್ಬಾಕೆ ಅನಾಮಧೇಯ ಹೆಂಗಸಿನದ್ದಾಗಿದೆ. ಈ ಪರಿಸ್ಥಿತಿಯಲ್ಲಿ ಆಕೆಯು ಇತರ ಜನರನ್ನು ಮುಟ್ಟಬಾರದಿತ್ತು. ಹಾಗಿದ್ದರೂ, ಆಕೆಯು ಯೇಸುವನ್ನು ಭೇಟಿಯಾಗಲು ಧೈರ್ಯತೆಗೆದುಕೊಂಡಳು. “ನಾನು ಆತನ ಉಡುಪನ್ನು ಮುಟ್ಟಿದರೆ ಸಾಕು, ನೆಟ್ಟಗಾಗುವೆನು” ಎಂದು ಅವಳು ಆಲೋಚಿಸುತ್ತಾ ಇದ್ದಳು. ಯೇಸುವನ್ನು ಹಿಂಬಾಲಿಸಿ, ‘ಬಹು ಜನರು ಆತನನ್ನು ನೂಕಿಕೊಂಡು ಹಿಂದೆ ಹೋಗುತ್ತಿರುವಾಗ’ ಒಳನುಗ್ಗಿ ಅವನ ಬಳಿಗೆ ಹೋಗಲು ಪ್ರಯತ್ನಿಸುತ್ತಿರುವ ಅವಳ ಕುರಿತು ತುಸು ಚಿತ್ರಿಸಿಕೊಳ್ಳಿರಿ. ಅವನ ಉಡುಪನ್ನು ಮುಟ್ಟಿದ ಕೂಡಲೆ ‘ರಕ್ತಹರಿಯುವದು ನಿಂತುಹೋದದ್ದನ್ನು’ ಅವಳು ಗ್ರಹಿಸಿದಳು. ಅವಳ ದೀರ್ಘಕಾಲದ ಅಸ್ವಸ್ಥತೆಯು ಗುಣವಾಯಿತು! ಆದರೆ ನಂತರ, “ನನ್ನ ಉಡುಪನ್ನು ಯಾರು ಮುಟ್ಟಿದರು?” ಎಂಬುದಾಗಿ ಯೇಸು ಪ್ರಶ್ನಿಸಿದಾಗ ಅವಳು ಭಯಭೀತಳಾದಳು. ಆದರೆ ಯೇಸು ಅವಳಿಗೆ ಪ್ರೀತಿಪೂರ್ವಕವಾಗಿ ಹೇಳಿದ್ದು: “ಮಗಳೇ, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು; ನಿನ್ನನ್ನು ಕಾಡಿದ ರೋಗವು ಹೋಗಿ ನಿನಗೆ ಗುಣವಾಗಲಿ.” ಅವಳು ತನ್ನ ಪ್ರಯತ್ನಕ್ಕೆ ತಕ್ಕ ಪ್ರತಿಫಲವನ್ನು ಪಡೆದುಕೊಂಡಳು.—ಮಾರ್ಕ 5:24-34; ಯಾಜಕಕಾಂಡ 15:25-27.
ಇನ್ನೊಂದು ಸಂದರ್ಭದಲ್ಲಿ, ಕಾನಾನ್ಯಳೊಬ್ಬಳು ತನ್ನ ಮಗಳನ್ನು ಗುಣಪಡಿಸಬೇಕೆಂದು ಯೇಸುವಿನಲ್ಲಿ ಶ್ರದ್ಧಾಪೂರ್ವಕವಾಗಿ ಬೇಡಿಕೊಂಡಳು. ಅದಕ್ಕವನು, ಮಕ್ಕಳು ತಿನ್ನುವ ರೊಟ್ಟಿಯನ್ನು ತಕ್ಕೊಂಡು ನಾಯಿಮರಿಗಳಿಗೆ ಹಾಕುವದು ಸರಿಯಲ್ಲವೆಂದು ಉತ್ತರಿಸಿದನು. ಹೀಗೆ ಹೇಳುವ ಮೂಲಕ, ಯೋಗ್ಯರಾದ ಯೆಹೂದ್ಯರನ್ನು ಬಿಟ್ಟು ಇಸ್ರಾಯೇಲ್ಯರಲ್ಲದವರಿಗೆ ತಾನು ಗಮನವನ್ನು ಕೊಡಸಾಧ್ಯವಿಲ್ಲ ಎಂಬುದನ್ನು ಅವನು ಅರ್ಥೈಸಿದನು. ಅವನ ದೃಷ್ಟಾಂತದ ಅರ್ಥವನ್ನು ಗ್ರಹಿಸಿದವಳಾಗಿ, ಆಕೆಯು ಬೇಡಿದ್ದು: “ಸ್ವಾಮೀ, ಆ ಮಾತು ನಿಜವೇ; ನಾಯಿಮರಿಗಳಂತೂ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿಯ ತುಂಡುಗಳನ್ನು ತಿನ್ನುತ್ತವಲ್ಲಾ.” ಅವಳ ದೃಢವಾದ ನಂಬಿಕೆ ಮತ್ತು ಯಥಾರ್ಥತೆಯು ಯೇಸುವನ್ನು ಹೀಗೆ ಹೇಳುವಂತೆ ಪ್ರೇರೇಪಿಸಿತು: “ಅಮ್ಮಾ, ನಿನ್ನ ನಂಬಿಕೆ ಬಹಳ, ನಿನ್ನ ಮನಸ್ಸಿನಂತೆ ಆಗಲಿ.”—ಒಂದುವೇಳೆ ಈ ಎಲ್ಲಾ ವ್ಯಕ್ತಿಗಳು ಪಟ್ಟುಹಿಡಿದು ಪ್ರಯತ್ನಿಸದಿದ್ದಲ್ಲಿ ಅವರಿಗೆ ಏನು ಸಂಭವಿಸುತ್ತಿತ್ತು? ಒಂದುವೇಳೆ ಮೊದಲ ಬಾರಿ ತಡೆಬಂದಾಗ ಅಥವಾ ತ್ಯಜಿಸಲ್ಪಟ್ಟಾಗ ಅವರು ತಮ್ಮ ಪ್ರಯತ್ನವನ್ನು ನಿಲ್ಲಿಸಿಬಿಡುತ್ತಿದ್ದಲ್ಲಿ ಅವರಿಗೆ ಆಶೀರ್ವಾದಗಳು ಸಿಗುತ್ತಿದ್ದವೋ? ಇಲ್ಲ! ಈ ಉದಾಹರಣೆಗಳು, ಯೆಹೋವನನ್ನು ಹುಡುಕುವುದರಲ್ಲಿ “ಪಟ್ಟುಹಿಡಿಯುವುದು” ಸೂಕ್ತವೂ ಆವಶ್ಯಕವೂ ಎಂದು ಯೇಸು ಕಲಿಸಿದ ವಿಷಯವನ್ನು ಉತ್ತಮ ರೀತಿಯಲ್ಲಿ ದೃಷ್ಟಾಂತಿಸುತ್ತವೆ.—ಲೂಕ 11:5-13, NW.
ಆತನ ಚಿತ್ತಾನುಸಾರ
ಅದ್ಭುತಕರ ವಾಸಿಯಾಗುವಿಕೆಯನ್ನು ಅನುಭವಿಸಿದ ಜನರ ಕುರಿತಾಗಿ ಮೇಲೆ ತಿಳಿಸಲಾದ ವೃತ್ತಾಂತದಲ್ಲಿ, ವಾಸಿಯಾಗುವಿಕೆಗೆ ಶ್ರದ್ಧೆಯು ಮಾತ್ರ ಒಂದು ಆವಶ್ಯಕತೆಯಾಗಿತ್ತೋ? ಇಲ್ಲ, ಅವರ ಬಿನ್ನಹವು ದೇವರ ಚಿತ್ತಕ್ಕೆ ಹೊಂದಿಕೆಯಲ್ಲಿರಬೇಕಿತ್ತು. ತಾನು ದೇವರ ಮಗನೂ ವಾಗ್ದತ್ತ ಮೆಸ್ಸೀಯನೂ ಎಂಬುದನ್ನು ರುಜುಪಡಿಸಲು ಯೇಸುವಿಗೆ ಅದ್ಭುತಕರವಾದ ಶಕ್ತಿಯು ಕೊಡಲ್ಪಟ್ಟಿತ್ತು. (ಯೋಹಾನ 6:14; 9:33; ಅ. ಕೃತ್ಯಗಳು 2:22) ಅಷ್ಟುಮಾತ್ರವಲ್ಲದೆ ಯೇಸು ಮಾಡಿದ ಅದ್ಭುತಗಳು, ಕ್ರಿಸ್ತನ ಸಹಸ್ರ ವರುಷದ ಆಳ್ವಿಕೆಯ ಸಮಯದಲ್ಲಿ ಯೆಹೋವನು ಮಾನವಕುಲದ ಮೇಲೆ ಸುರಿಸಲಿರುವ ಮಹಾ ಭೌಮಿಕ ಆಶೀರ್ವಾದಗಳ ಮುನ್‌ಚಿತ್ರಣವಾಗಿತ್ತು.—ಪ್ರಕಟನೆ 21:4; 22:2.
ಆದರೆ, ಸತ್ಯಧರ್ಮವನ್ನು ಅನುಸರಿಸುವವರು ಗುಣಪಡಿಸುವಂಥ ಮತ್ತು ವಿವಿಧ ಭಾಷೆಗಳಲ್ಲಿ ಮಾತನಾಡುವ ಸಾಮರ್ಥ್ಯದಂತಹ ಅದ್ಭುತಕರ ಶಕ್ತಿಯನ್ನು ಹೊಂದಿರುವುದು ದೇವರ ಚಿತ್ತವಲ್ಲ. (1 ಕೊರಿಂಥ 13:8, 13) ನಮ್ಮೀ ದಿನಗಳಿಗಾಗಿರುವ ದೇವರ ಚಿತ್ತವು, ‘ಎಲ್ಲಾ ಮನುಷ್ಯರು ಸತ್ಯದ ಜ್ಞಾನಕ್ಕೆ ಸೇರಬೇಕೆಂಬ’ ಸಲುವಾಗಿ ಭೂಮಿಯ ಕಟ್ಟಕಡೆಯ ವರೆಗೆ ರಾಜ್ಯದ ಸುವಾರ್ತೆಯನ್ನು ಸಾರುವುದೇ ಆಗಿದೆ. (1 ತಿಮೊಥೆಯ 2:4; ಮತ್ತಾಯ 24:14; 28:19, 20) ದೇವರ ಸೇವಕರು ಆತನ ಚಿತ್ತಕ್ಕೆ ಹೊಂದಿಕೆಯಲ್ಲಿ ಯಥಾರ್ಥವಾದ ಪ್ರಯತ್ನಗಳನ್ನು ಮಾಡುವುದಾದರೆ, ಅವರು ಎಡೆಬಿಡದೆ ಮಾಡಿದ ಪ್ರಾರ್ಥನೆಯನ್ನು ಆತನು ಒಳ್ಳೆಯ ರೀತಿಯಲ್ಲಿ ಆಲಿಸುತ್ತಾನೆಂದು ನ್ಯಾಯೋಚಿತವಾಗಿ ಅವರು ನಿರೀಕ್ಷಿಸಸಾಧ್ಯವಿದೆ.
ಕೆಲವರು ಹೀಗೆ ಯೋಚಿಸಬಹುದು: ‘ಹೇಗಿದ್ದರೂ ದೇವರ ಉದ್ದೇಶವು ಖಂಡಿತವಾಗಿಯೂ ನೆರವೇರುತ್ತದಾದ ಕಾರಣ ನಾವೇಕೆ ಪ್ರಯಾಸಪಡಬೇಕು?’ ಮಾನವರು ಪ್ರಯತ್ನಪಡಲಿ ಪಡದಿರಲಿ ದೇವರು ತನ್ನ ಉದ್ದೇಶವನ್ನು ನೆರವೇರಿಸುತ್ತಾನೆ ಎಂಬುದು ನಿಜವಾದರೂ, ತನ್ನ ಚಿತ್ತವನ್ನು ನೆರವೇರಿಸುವುದರಲ್ಲಿ ಮಾನವರನ್ನು ಒಳಗೂಡಿಸುವುದು ದೇವರಿಗೆ ಮೆಚ್ಚಿಗೆಯಾಗಿದೆ. ಯೆಹೋವನನ್ನು, ಒಂದು ಮನೆಯನ್ನು ಕಟ್ಟುವ ವ್ಯಕ್ತಿಗೆ ಹೋಲಿಸಬಹುದು. ಮನೆ ಕಟ್ಟುವವನ ಬಳಿ ಯೋಜನೆಗೆ ಬೇಕಾಗಿರುವ ನೀಲಿನಕ್ಷೆ ಇರುತ್ತದೆ, ಆದರೂ ಕಟ್ಟಡಕ್ಕೆ ಬೇಕಾಗಿರುವ ಸಾಮಾಗ್ರಿಗಳನ್ನು ಸ್ಥಳಿಕವಾಗಿರುವ ಜನರಿಂದ ಪಡೆದುಕೊಳ್ಳಲು ಅವನು ಆರಿಸಿಕೊಳ್ಳುತ್ತಾನೆ. ತದ್ರೀತಿಯಲ್ಲಿ, ಇಂದು ಯೆಹೋವನ ಬಳಿ ತನ್ನ ಉದ್ದೇಶವನ್ನು ನೆರವೇರಿಸಲು ಯೋಜನೆಯಿದೆ ಮತ್ತು ತಮ್ಮನ್ನು ಮನಃಪೂರ್ವಕವಾಗಿ ನೀಡಿಕೊಳ್ಳುವ ತನ್ನ ಸೇವಕರನ್ನು ಉಪಯೋಗಿಸಲು ಆತನು ಇಚ್ಛೆಯುಳ್ಳವನಾಗಿದ್ದಾನೆ.—ಕೀರ್ತನೆ 110:3; 1 ಕೊರಿಂಥ 9:16, 17.
ಯುವ ಟೋಶೀಓವಿನ ಉದಾಹರಣೆಯನ್ನು ಪರಿಗಣಿಸಿರಿ. ಅವನು ಪ್ರೌಢ ಶಾಲೆಯನ್ನು ಪ್ರವೇಶಿಸಿದೊಡನೆ, ತನ್ನ ಈ ಅದ್ವಿತೀಯ ಕ್ಷೇತ್ರದಲ್ಲಿ ಮಹಾ ಸಾಕ್ಷಿಯನ್ನು ನೀಡಬೇಕೆಂಬ ಬಯಕೆ ಅವನಲ್ಲಿತ್ತು. ಅವನು ಯಾವಾಗಲೂ ಬೈಬಲನ್ನು ತನ್ನೊಂದಿಗೆ ಕೊಂಡೊಯ್ಯುತ್ತಿದ್ದನು ಮತ್ತು ಒಬ್ಬ ಮಾದರಿ ಕ್ರೈಸ್ತನೋಪಾದಿ ಇರಲು ಸದಾ ಪ್ರಯತ್ನಿಸುತ್ತಿದ್ದನು. ಪ್ರೌಢ ಶಾಲೆಯ ಮೊದಲನೆಯ ವರುಷದ ಕೊನೆಯಲ್ಲಿ ತರಗತಿಯ ಮುಂದೆ ಒಂದು ಭಾಷಣವನ್ನು ನೀಡುವ ಸುಯೋಗವು ಅವನಿಗೆ ಸಿಕ್ಕಿತು. ಟೋಶೀಓ ಸಹಾಯಕ್ಕಾಗಿ ಯೆಹೋವನಲ್ಲಿ ಪ್ರಾರ್ಥಿಸಿ, “ಪಯನೀಯರ್ ಸೇವೆಯನ್ನು ನನ್ನ ಜೀವನವೃತ್ತಿಯನ್ನಾಗಿ ಮಾಡುವ ನನ್ನ ಗುರಿ” ಎಂಬ ಶೀರ್ಷಿಕೆಯುಳ್ಳ ಭಾಷಣವನ್ನು ನೀಡಿದನು. ಇಡೀ ತರಗತಿಯು ಅವನ ಭಾಷಣಕ್ಕೆ ನಿಕಟ ಗಮನಕೊಡುವುದನ್ನು ನೋಡುವಾಗ ಅವನು ಬಹು ರೋಮಾಂಚನಗೊಂಡನು. ತಾನು ಯೆಹೋವನ ಸಾಕ್ಷಿಗಳ ಪೂರ್ಣಸಮಯದ ಶುಶ್ರೂಷಕನಾಗಲು ಬಯಸುತ್ತೇನೆ ಎಂಬುದನ್ನು ಅವನು ವಿವರಿಸಿದನು. ಒಬ್ಬ ವಿದ್ಯಾರ್ಥಿಯು ಅವನೊಂದಿಗೆ ಬೈಬಲನ್ನು ಅಧ್ಯಯನ ಮಾಡಲು ಒಪ್ಪಿಕೊಂಡನು ಮತ್ತು ದೀಕ್ಷಾಸ್ನಾನವನ್ನು ಪಡೆಯುವ ಹಂತಕ್ಕೆ ಪ್ರಗತಿಯನ್ನು ಮಾಡಿದನು. ತನ್ನ ಪ್ರಾರ್ಥನೆಗೆ ಹೊಂದಿಕೆಯಲ್ಲಿ ಟೋಶೀಓ ಮಾಡಿದ ಶ್ರದ್ಧಾಪೂರ್ವಕ ಪ್ರಯತ್ನವು ಹೇರಳವಾಗಿ ಪ್ರತಿಫಲಿಸಲ್ಪಟ್ಟಿತು.
ನೀವು ಎಷ್ಟರ ಮಟ್ಟಿಗೆ ಶ್ರದ್ಧೆಯುಳ್ಳವರಾಗಿದ್ದೀರಿ?
ಯೆಹೋವನನ್ನು ಮತ್ತು ಆತನ ಆಶೀರ್ವಾದಗಳನ್ನು ನೀವು ಶ್ರದ್ಧಾಪೂರ್ವಕವಾಗಿ ಹುಡುಕುತ್ತಿದ್ದೀರೆಂದು ವಿವಿಧ ರೀತಿಗಳಲ್ಲಿ ನೀವು ತೋರಿಸಸಾಧ್ಯವಿದೆ. ಮೊದಲಾಗಿ, ಕ್ರೈಸ್ತ ಕೂಟಗಳಿಗೆ ಉತ್ತಮವಾಗಿ ತಯಾರಿಸುವಂಥ ಕೆಲವು ಮೂಲಭೂತ ವಿಷಯಗಳನ್ನು ನೀವು ಮಾಡಸಾಧ್ಯವಿದೆ. ಉತ್ತಮವಾಗಿ ತಯಾರಿಸಲ್ಪಟ್ಟ ಹೇಳಿಕೆಗಳ ಮೂಲಕ, ಪ್ರಚೋದಕ ಭಾಷಣಗಳನ್ನು ನೀಡುವ ಮೂಲಕ, ಮತ್ತು ಪರಿಣಾಮಕಾರಿ ಪ್ರತ್ಯಕ್ಷಾಭಿನಯಗಳ ಮೂಲಕ ನೀವು ಎಷ್ಟು ಅತ್ಯಾಸಕ್ತಿಯಿಂದ ಯೆಹೋವನನ್ನು ಹುಡುಕುತ್ತಿದ್ದೀರಿ ಎಂಬುದನ್ನು ತೋರಿಸಸಾಧ್ಯವಿದೆ. ನಿಮ್ಮ ಶುಶ್ರೂಷೆಯ ಗುಣಮಟ್ಟವನ್ನು ಉತ್ತಮಗೊಳಿಸುವ ಮೂಲಕವೂ ನೀವು ನಿಮ್ಮ ಶ್ರದ್ಧೆಯನ್ನು ವ್ಯಕ್ತಪಡಿಸಸಾಧ್ಯವಿದೆ. ಮನೆಯವನೊಂದಿಗೆ ಮಾತನಾಡುವಾಗ ಸ್ನೇಹಪರರಾಗಿರಲು ಮತ್ತು ನಿಮ್ಮ ಕ್ಷೇತ್ರಕ್ಕೆ ಸೂಕ್ತವಾದ ಪರಿಣಾಮಕಾರಿ ಪೀಠಿಕೆಯನ್ನು ಉಪಯೋಗಿಸಲು ಪ್ರಯತ್ನಿಸಬಾರದೇಕೆ? (ಕೊಲೊಸ್ಸೆ 3:23) ಒಬ್ಬ ಕ್ರೈಸ್ತ ಸಹೋದರನು ಮನಃಪೂರ್ವಕವಾಗಿ ತನ್ನನ್ನು ನೀಡಿಕೊಳ್ಳುವ ಮೂಲಕ, ಸಭೆಯಲ್ಲಿ ಒಬ್ಬ ಶುಶ್ರೂಷಕ ಸೇವಕನಾಗಿ ಅಥವಾ ಹಿರಿಯನಾಗಿ ನೇಮಕವನ್ನು ಪಡೆಯಬಹುದು. (1 ತಿಮೊಥೆಯ 3:1, 2, 12, 13) ನಿಮ್ಮನ್ನು ಸ್ವತಃ ಲಭ್ಯಗೊಳಿಸುವ ಮೂಲಕ ಕೊಡುವುದರಿಂದ ಸಿಗುವ ಆನಂದದಲ್ಲಿ ನೀವು ಭಾಗಿಯಾಗಸಾಧ್ಯವಿದೆ. ಬ್ರಾಂಚ್ ನಿರ್ಮಾಣ ಕೆಲಸಕ್ಕಾಗಿ ಅಥವಾ ಬ್ರಾಂಚ್ ಆಫೀಸಿನಲ್ಲಿ ಸೇವೆಸಲ್ಲಿಸಲು ನೀವು ಅರ್ಜಿಹಾಕಬಹುದು. ನೀವು ಒಂದುವೇಳೆ ಅರ್ಹನಾದ ಅವಿವಾಹಿತ ಸಹೋದರನಾಗಿರುವಲ್ಲಿ, ಮಿನಿಸ್ಟೀರಿಯಲ್ ಟ್ರೈನಿಂಗ್ ಸ್ಕೂಲ್‌ಗೆ ಹಾಜರಾಗಬಹುದು. ಅಲ್ಲಿ ಆತ್ಮಿಕ ಪುರುಷರಿಗೆ ಒಳ್ಳೆಯ ಕುರುಬರಾಗಲು ತರಬೇತಿನೀಡಲಾಗುತ್ತದೆ. ನೀವು ವಿವಾಹಿತರಾಗಿರುವಲ್ಲಿ, ಯೆಹೋವನನ್ನು ಇನ್ನೂ ಹೆಚ್ಚಿನ ರೀತಿಯಲ್ಲಿ ಸೇವಿಸಬೇಕೆಂಬ ನಿಮ್ಮ ಶ್ರದ್ಧಾಪೂರ್ವಕ ಇಚ್ಛೆಯನ್ನು ತೋರಿಸಲು, ಮಿಷನೆರಿ ಸೇವೆಯನ್ನು ನಿಮ್ಮದಾಗಿಸಿಕೊಳ್ಳಬಹುದು. ರಾಜ್ಯ ಪ್ರಚಾರಕರ ಹೆಚ್ಚು ಅಗತ್ಯವಿರುವ ಸ್ಥಳಕ್ಕೆ ನೀವು ಹೋಗಸಾಧ್ಯವಿದೆ.—1 ಕೊರಿಂಥ 16:9.
ಆದರೂ, ನೀವು ನಿಮ್ಮ ನೇಮಕವನ್ನು ಯಾವ ಆತ್ಮದಿಂದ ನೆರವೇರಿಸುತ್ತೀರಿ ಎಂಬುದು ಅತ್ಯಂತ ಪ್ರಾಮುಖ್ಯವಾದ ವಿಷಯವಾಗಿದೆ. ನಿಮಗೆ ಯಾವುದೇ ಜವಾಬ್ದಾರಿಯು ಕೊಡಲ್ಪಡಲಿ, ಅದನ್ನು ನೆರವೇರಿಸಲು ಶ್ರದ್ಧಾಪೂರ್ವಕವಾಗಿ, ಪ್ರಯಾಸಪಟ್ಟು, ಮತ್ತು “ಯಥಾರ್ಥಮನಸ್ಸಿನಿಂದ” ಪ್ರಯತ್ನವನ್ನು ಮಾಡಿರಿ. (ಅ. ಕೃತ್ಯಗಳು 2:46; ರೋಮಾಪುರ 12:8) ನಿಮ್ಮ ಪ್ರತಿಯೊಂದು ನೇಮಕವನ್ನು, ಯೆಹೋವನಿಗೆ ಸ್ತುತಿಯನ್ನು ತರಲು ನಿಮಗಿರುವ ಅತ್ಯಾಸಕ್ತಿಯನ್ನು ವ್ಯಕ್ತಪಡಿಸಲು ಸಿಗುವ ಒಂದು ಸಂದರ್ಭವಾಗಿದೆಯೆಂದು ವೀಕ್ಷಿಸಿರಿ. ಯೆಹೋವನ ಸಹಾಯಕ್ಕಾಗಿ ಸತತವಾಗಿ ಪ್ರಾರ್ಥಿಸಿರಿ ಮತ್ತು ನಿಮ್ಮಿಂದಾದಷ್ಟು ಉತ್ತಮವಾದದ್ದನ್ನು ಮಾಡಿರಿ. ಹೀಗೆ ಮಾಡುವುದಾದರೆ, ನೀವು ಹೇರಳವಾದ ಪ್ರತಿಫಲವನ್ನು ಕೊಯ್ಯುವಿರಿ.
ಶ್ರದ್ಧಾಪೂರ್ವಕ ಪ್ರಯತ್ನಗಳು ಪ್ರತಿಫಲಿಸಲ್ಪಟ್ಟವು
ಪ್ರತಿದಿನ ತನ್ನೊಂದಿಗೆ ರೈಲಿನಲ್ಲಿ ಪ್ರಯಾಣಿಸುವ ಜೊತೆ ಪ್ರಯಾಣಿಕರಿಗೆ ಸಾರಲು ಸಾಧ್ಯವಾಗುವಂತೆ ತನ್ನ ಭಯವನ್ನು ಹೋಗಲಾಡಿಸಲು ಸಹಾಯಕ್ಕಾಗಿ ಪ್ರಾರ್ಥಿಸಿದ ಆ ಕ್ರೈಸ್ತ ಸಹೋದರನನ್ನು ನೀವು ಜ್ಞಾಪಿಸಿಕೊಳ್ಳಬಲ್ಲಿರೋ? ಯೆಹೋವನು ಅವನ ಯಥಾರ್ಥ ಪ್ರಯತ್ನವನ್ನು ಆಶೀರ್ವದಿಸಿದನು. ಸಂಭಾಷಣೆಯನ್ನು ಆರಂಭಿಸಲು ಸಾಧ್ಯವಾಗುವಂತೆ ವಿಷಯವನ್ನು ಆಯ್ಕೆಮಾಡುತ್ತಾ, ಒಂದು ಸರಳವಾದ ಪ್ರಸ್ತಾಪವನ್ನು ಆ ಸಹೋದರನು ತಯಾರಿಸಿದನು. ಇದರ ಪರಿಣಾಮವಾಗಿ ಅವನು, ಒತ್ತಡಭರಿತ ಮಾನವ ಸಂಬಂಧಗಳ ಕುರಿತು ಚಿಂತಿತನಾಗಿದ್ದ ಒಬ್ಬ ವ್ಯಕ್ತಿಗೆ ಬೈಬಲನ್ನು ಪರಿಣಾಮಕಾರಿಯಾದ ರೀತಿಯಲ್ಲಿ ಉಪಯೋಗಿಸುತ್ತಾ ಸಾಕ್ಷಿಕೊಡಶಕ್ತನಾದನು. ರೈಲಿನಲ್ಲಿಯೇ ನಡೆಸಲಾದ ಅನೇಕ ಪುನರ್ಭೇಟಿಗಳು ಒಂದು ಬೈಬಲ್ ಅಧ್ಯಯನಕ್ಕೆ ನಡೆಸಿದವು. ಯೆಹೋವನು ನಿಶ್ಚಯವಾಗಿಯೂ ಅವನ ಶ್ರದ್ಧಾಪೂರ್ವಕವಾದ ಪ್ರಯತ್ನವನ್ನು ಆಶೀರ್ವದಿಸಿದನು!
ನೀವು ಸಹ ಯೆಹೋವನನ್ನು ಶ್ರದ್ಧೆಯಿಂದ ಹುಡುಕುತ್ತಾ ಹೋಗುವುದಾದರೆ ನಿಮಗೂ ಅದೇ ರೀತಿಯ ಪ್ರತಿಫಲಗಳು ದೊರೆಯುವವು. ನೀವು ದೀನತೆಯಿಂದ ಪಟ್ಟುಹಿಡಿದು, ನಿಮಗೆ ನೀಡಲ್ಪಟ್ಟಿರುವ ಯಾವುದೇ ದೇವಪ್ರಭುತ್ವಾತ್ಮಕ ಚಟುವಟಿಕೆಯನ್ನು ಪೂರ್ಣ ಹೃದಯದಿಂದ ಮಾಡುವುದಾದರೆ, ಯೆಹೋವನು ನಿಮ್ಮನ್ನು ತನ್ನ ಉದ್ದೇಶಕ್ಕೆ ಹೊಂದಿಕೆಯಲ್ಲಿ ಉಪಯೋಗಿಸುವನು ಮತ್ತು ನಿಮಗೆ ಹೇರಳವಾದ ಪ್ರತಿಫಲವನ್ನು ಒದಗಿಸುವನು.
[ಪುಟ 26ರಲ್ಲಿರುವ ಚಿತ್ರ]
ಈ ಹೆಂಗಸು ಪಟ್ಟುಹಿಡಿಯದಿರುತ್ತಿದ್ದಲ್ಲಿ ಅವಳಿಗೆ ಏನು ಸಂಭವಿಸುತ್ತಿತ್ತು?
[ಪುಟ 27ರಲ್ಲಿರುವ ಚಿತ್ರ]
ನೀವು ಯೆಹೋವನ ಆಶೀರ್ವಾದಕ್ಕಾಗಿ ಪಟ್ಟುಹಿಡಿದು ಬೇಡುತ್ತೀರೋ?
[ಪುಟ 28ರಲ್ಲಿರುವ ಚಿತ್ರಗಳು]
ನೀವು ಯೆಹೋವನನ್ನು ಶ್ರದ್ಧಾಪೂರ್ವಕವಾಗಿ ಹುಡುಕುತ್ತಿದ್ದೀರೆಂದು ಹೇಗೆ ತೋರಿಸಸಾಧ್ಯವಿದೆ?