ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಒಂದೇ ಒಂದು ‘ಸತ್ಯ ಚರ್ಚು’ ಇದೆಯೊ?

ಒಂದೇ ಒಂದು ‘ಸತ್ಯ ಚರ್ಚು’ ಇದೆಯೊ?

ಒಂದೇ ಒಂದು ‘ಸತ್ಯ ಚರ್ಚು’ ಇದೆಯೊ?

“ಒಬ್ಬನೇ ಕ್ರಿಸ್ತನಿರುವಂತೆಯೇ, ಕ್ರಿಸ್ತನ ಏಕಮಾತ್ರ ದೇಹ, ಕ್ರಿಸ್ತನ ಏಕಮಾತ್ರ ವಧು ಅಸ್ತಿತ್ವದಲ್ಲಿದೆ: ‘ಒಂದೇ ಒಂದು ಕ್ಯಾಥೊಲಿಕ್‌ ಮತ್ತು ಅಪೊಸ್ತೊಲಿಕ ಚರ್ಚು ಇದೆ.’”​—ಡೊಮೀನಸ್‌ ಯೇಸಸ್‌.

ಯೋಸೆಫ್‌ ರಾಟ್‌ಸಿಂಗರ್‌ ಎಂಬ ಒಬ್ಬ ರೋಮನ್‌ ಕ್ಯಾಥೊಲಿಕ್‌ ಕಾರ್ಡಿನಲನು, ಒಂದೇ ಒಂದು ಸತ್ಯ ಚರ್ಚು ಇರಸಾಧ್ಯವಿದೆ ಎಂಬ ತನ್ನ ಚರ್ಚಿನ ಬೋಧನೆಯನ್ನು ಮೇಲಿನ ಮಾತುಗಳಲ್ಲಿ ದಾಖಲಿಸಿದನು. ಆ ಚರ್ಚು “ಕ್ರಿಸ್ತನ ಏಕಮಾತ್ರ ಚರ್ಚಾಗಿದ್ದು, ಇದು ಕ್ಯಾಥೊಲಿಕ್‌ ಚರ್ಚಾಗಿದೆ” ಎಂದು ಅವನು ಹೇಳಿದನು.

“ಯೋಗ್ಯವಾದ ಅರ್ಥದಲ್ಲಿ ಚರ್ಚುಗಳಲ್ಲ”

ಡೊಮೀನಸ್‌ ಯೇಸಸ್‌ ಎಂಬ ಆ ಪ್ರಮಾಣದಲ್ಲಿ, “ಇತರ ಧರ್ಮಗಳ ಕಡೆಗೆ ಯಾವುದೇ ರೀತಿಯ ದುರಭಿಮಾನವಾಗಲಿ ಅಥವಾ ಅವುಗಳ ಕುರಿತು ಅಗೌರವದ ಅನಿಸಿಕೆಯಾಗಲಿ” ಇಲ್ಲ ಎಂದು IIನೆಯ ಪೋಪ್‌ ಜಾನ್‌ ಪೌಲ್‌ ಒತ್ತಿಹೇಳಿದರೂ, ಪ್ರಾಟೆಸ್ಟಂಟ್‌ ಚರ್ಚಿನ ಮುಖಂಡರು ಇದಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿದರು. ಉದಾಹರಣೆಗೆ, 2001ರ ಜೂನ್‌ ತಿಂಗಳಿನಲ್ಲಿ ಉತ್ತರ ಐರ್ಲೆಂಡ್‌ನ ಬೆಲ್‌ಫಾಸ್ಟ್‌ನಲ್ಲಿ ನಡೆದ ಪ್ರೆಸ್ಬಿಟೇರಿಯನ್‌ ಜನರಲ್‌ ಅಸೆಂಬ್ಲಿಯಲ್ಲಿ ಒಬ್ಬ ಪಾದ್ರಿಯು ಹೇಳಿದ್ದೇನೆಂದರೆ, ಆ ಪ್ರಮಾಣವು “IIನೆಯ ವ್ಯಾಟಿಕನ್‌ನಿಂದ ಆಚರಣೆಗೆ ತರಲ್ಪಟ್ಟಂಥ ಬಿಚ್ಚುಮನಸ್ಸಿನ ಮನೋಭಾವದಿಂದ ದಿಗಿಲುಗೊಂಡಿರುವ, . . . ರೋಮನ್‌ ಕ್ಯಾಥೊಲಿಕ್‌ ಚರ್ಚಿನಲ್ಲಿನ ಒಂದು ಪ್ರಬಲ ಪಕ್ಷದ ಉತ್ಪನ್ನವಾಗಿದೆ.”

ಆ ಪ್ರಮಾಣವು “IIನೆಯ ವ್ಯಾಟಿಕನ್‌ಗೆ ಮುಂಚೆ ಕ್ಯಾಥೊಲಿಕ್‌ ಚರ್ಚಿಗಿದ್ದ ಅಭಿಪ್ರಾಯದ ಪುನರಾವರ್ತನೆ”ಯಾಗಿರುವಲ್ಲಿ, ತಾನು “ವಿಪರೀತ ಆಶಾಭಂಗಗೊಳ್ಳುವೆ” ಎಂದು, ಚರ್ಚ್‌ ಆಫ್‌ ಐರ್ಲೆಂಡ್‌ನ ಪ್ರೈಮೆಟ್‌ (ಆರ್ಚ್‌ ಬಿಷಪ್‌) ಆಗಿರುವ ರಾಬಿನ್‌ ಈಮ್ಸ್‌ ಹೇಳಿದರು. ನಿರ್ದಿಷ್ಟ ಕ್ಯಾಥೊಲಿಕ್‌ ಸಿದ್ಧಾಂತಗಳನ್ನು ತಿರಸ್ಕರಿಸುವ ಚರ್ಚುಗಳು “ಯೋಗ್ಯವಾದ ಅರ್ಥದಲ್ಲಿ ಚರ್ಚುಗಳಾಗಿಲ್ಲ” ಎಂಬ ವ್ಯಾಟಿಕನ್‌ನ ಪ್ರತಿಪಾದನೆಯ ಕುರಿತು ಹೇಳಿಕೆ ನೀಡುತ್ತಾ ಏಮ್ಸ್‌ ಹೇಳಿದ್ದು: “ನನ್ನ ದೃಷ್ಟಿಯಲ್ಲಿ ಅದು ಅವಹೇಳನಮಾಡುವುದಕ್ಕೆ ಸಮಾನವಾಗಿದೆ.”

ಡೊಮೀನಸ್‌ ಯೇಸಸ್‌ ಪ್ರಮಾಣಕ್ಕೆ ಯಾವುದು ಪ್ರೇರಣೆಯಾಗಿತ್ತು? ಯಾವುದನ್ನು ಧಾರ್ಮಿಕ ಸಾಪೇಕ್ಷತಾವಾದ ಎಂದು ಕರೆಯಲಾಗುತ್ತದೋ ಅದರಿಂದ ರೋಮನ್‌ ಕ್ಯಾಥೊಲಿಕ್‌ ಕ್ಯೂರಿಯವು (ಪೋಪನ ನ್ಯಾಯಸ್ಥಾನ) ಚಿಂತೆಗೀಡಾದಂತೆ ತೋರುತ್ತದೆ. ದಿ ಐರಿಷ್‌ ಟೈಮ್ಸ್‌ಗನುಸಾರ, “ಒಂದು ಧರ್ಮವು ಇನ್ನೊಂದು ಧರ್ಮದಷ್ಟೇ ಒಳ್ಳೇದಾಗಿದೆ ಎಂದು ಮೂಲಭೂತವಾಗಿ ಹೇಳುವಂಥ ಬಹು ಸಾಂಸ್ಕೃತಿಕ ಸಿದ್ಧಾಂತದ ಉದಯವು . . . ಕಾರ್ಡಿನಲ್‌ ರಾಟ್‌ಸಿಂಗರ್‌ರನ್ನು ಬಹಳಷ್ಟು ವಿಚಲಿತಗೊಳಿಸಿತು.” ಧಾರ್ಮಿಕ ಸಾಪೇಕ್ಷತಾವಾದವು, ಒಂದೇ ಸತ್ಯ ಚರ್ಚಿನ ಕುರಿತಾದ ಅವನ ಹೇಳಿಕೆಗಳನ್ನು ನುಡಿಯುವಂತೆ ಪ್ರಚೋದಿಸಿತ್ತು ಎಂದು ತೋರುತ್ತದೆ.

ನೀವು ಯಾವ ಚರ್ಚಿಗೆ ಸೇರಿದ್ದೀರಿ ಎಂಬುದು ಪ್ರಾಮುಖ್ಯವೋ?

ಒಂದೇ ಒಂದು ಸತ್ಯ ಚರ್ಚು ಇರಸಾಧ್ಯವಿದೆ ಎಂಬುದಕ್ಕಿಂತಲೂ, “ಧಾರ್ಮಿಕ ಸಾಪೇಕ್ಷತಾವಾದ” ಅಥವಾ “ಬಹು ಸಾಂಸ್ಕೃತಿಕ ಸಿದ್ಧಾಂತ”ವು ಕೆಲವರಿಗೆ ಹೆಚ್ಚು ತರ್ಕಸಮ್ಮತವಾಗಿಯೂ ಆಕರ್ಷಕವಾಗಿಯೂ ಕಂಡುಬರುತ್ತದೆ ಎಂಬುದಂತೂ ಖಂಡಿತ. ಅವರ ಎಣಿಕೆಯಲ್ಲಿ, ಧರ್ಮವು ಸಂಪೂರ್ಣವಾಗಿ ವೈಯಕ್ತಿಕ ಆಯ್ಕೆಯ ಸಂಗತಿಯಾಗಿರಬೇಕು. ‘ಅಂತಿಮವಾಗಿ, ನೀವು ಯಾವುದೇ ಚರ್ಚಿಗೆ ಸೇರಿದವರಾಗಿರಲಿ ಅದು ನಿಜವಾಗಿಯೂ ಅಷ್ಟೇನೂ ಪ್ರಾಮುಖ್ಯವಲ್ಲ’ ಎಂದು ಅವರು ಹೇಳುತ್ತಾರೆ.

ಇದು ಹೆಚ್ಚು ವಿಶಾಲ ಮನೋಭಾವವಾಗಿ ಕಂಡುಬರಬಹುದು. ಆದರೆ ಇದರ ಒಂದು ಪರಿಣಾಮವೇನೆಂದರೆ, ಧರ್ಮವು ಕೋಟ್ಯಾನುಕೋಟಿ ಭಿನ್ನ ಭಿನ್ನ ಧಾರ್ಮಿಕ ಪಂಗಡಗಳಾಗಿ ಛಿದ್ರಗೊಂಡಿದೆ. ಅನೇಕರು ಹೇಳುವುದೇನೆಂದರೆ, ‘ಧರ್ಮದಲ್ಲಿರುವ ಅಂಥ ವೈವಿಧ್ಯತೆಯು, ವೈಯಕ್ತಿಕ ಸ್ವಾತಂತ್ರ್ಯದ ನ್ಯಾಯಸಮ್ಮತ ಅಭಿವ್ಯಕ್ತಿಯಾಗಿದೆ ಅಷ್ಟೇ.’ ಆದರೂ, ಲೇಖಕನಾದ ಸ್ಟೀವ್‌ ಬ್ರೂಸ್‌ಗನುಸಾರ, ಅಂಥ “ಧಾರ್ಮಿಕ ಸಹಿಷ್ಣುತೆ”ಯು ವಾಸ್ತವದಲ್ಲಿ ಕೇವಲ “ಧಾರ್ಮಿಕ ಅಸಡ್ಡೆಯೇ” ಹೊರತು ಮತ್ತೇನೂ ಅಲ್ಲ.​—ಒಂದು ವಿಭಾಗಿತ ಮನೆ: ಪ್ರಾಟೆಸ್ಟಂಟ್‌ ಪಂಥ, ಭಿನ್ನ ಪಂಗಡ, ಮತ್ತು ಐಹಿಕ ದೃಷ್ಟಿಕೋನ (ಇಂಗ್ಲಿಷ್‌).

ಹಾಗಾದರೆ ಯಾವುದು ಯೋಗ್ಯವಾದ ದೃಷ್ಟಿಕೋನವಾಗಿದೆ? ಒಂದೇ ಒಂದು ಸತ್ಯ ಚರ್ಚು ಇದೆಯೋ? ಮತ್ತು ಈ ಏಕಮಾತ್ರ ಸತ್ಯ ಚರ್ಚು ರೋಮನ್‌ ಕ್ಯಾಥೊಲಿಕ್‌ ಚರ್ಚಾಗಿದೆಯೋ? ಬೇರೆ ಚರ್ಚುಗಳು ಸಹ ಅಷ್ಟೇ ಸಮಾನವಾಗಿ ದೇವರಿಗೆ ಅಂಗೀಕಾರಾರ್ಹವಾಗಿವೆಯೋ? ಈ ಪ್ರಶ್ನೆಗಳು ನಮ್ಮ ಸೃಷ್ಟಿಕರ್ತನೊಂದಿಗಿನ ನಮ್ಮ ಸಂಬಂಧವನ್ನು ಒಳಗೂಡಿರುವುದರಿಂದ, ಈ ವಿಷಯದಲ್ಲಿ ಆತನ ಅಭಿಪ್ರಾಯಗಳನ್ನು ಪಡೆದುಕೊಳ್ಳುವುದು ಅತ್ಯಂತ ಪ್ರಾಮುಖ್ಯವಾಗಿದೆ ಎಂಬುದಂತೂ ನಿಶ್ಚಯ. ನಾವಿದನ್ನು ಹೇಗೆ ಮಾಡಸಾಧ್ಯವಿದೆ? ದೇವರ ಪ್ರೇರಿತ ವಾಕ್ಯವಾದ ಬೈಬಲನ್ನು ಅನ್ವೇಷಿಸುವ ಮೂಲಕವೇ. (ಅ. ಕೃತ್ಯಗಳು 17:11; 2 ತಿಮೊಥೆಯ 3:16, 17) ಒಂದೇ ಒಂದು ಸತ್ಯ ಚರ್ಚಿನ ವಿಷಯದಲ್ಲಿ ಅದು ಏನನ್ನು ಹೇಳಲಿದೆಯೆಂಬುದನ್ನು ನಾವೀಗ ಪರಿಗಣಿಸೋಣ.