ನೀವು ವೃದ್ಧ ಜೊತೆ ವಿಶ್ವಾಸಿಗಳನ್ನು ಅತ್ಯಮೂಲ್ಯರೆಂದೆಣಿಸುತ್ತೀರೋ?
ನೀವು ವೃದ್ಧ ಜೊತೆ ವಿಶ್ವಾಸಿಗಳನ್ನು ಅತ್ಯಮೂಲ್ಯರೆಂದೆಣಿಸುತ್ತೀರೋ?
ಪುರಾತನ ಇಸ್ರಾಯೇಲಿನ ಜನರು ದೇವರೊಂದಿಗೆ ಒಡಂಬಡಿಕೆಯ ಸಂಬಂಧದಲ್ಲಿದ್ದಾಗ, ಅವರಿಗೆ ಹೀಗೆ ಆಜ್ಞಾಪಿಸಲಾಯಿತು: “ತಲೆನೆರೆತ ವೃದ್ಧರ ಮುಂದೆ ಎದ್ದು ನಿಂತು ಅವರನ್ನು ಸನ್ಮಾನಿಸಬೇಕು. ನಿಮ್ಮ ದೇವರಲ್ಲಿ ಭಯಭಕ್ತಿಯುಳ್ಳವರಾಗಿರಬೇಕು.” (ಯಾಜಕಕಾಂಡ 19:32) ಆದುದರಿಂದ, ವೃದ್ಧರನ್ನು ಗೌರವಿಸುವುದು ಒಂದು ಪವಿತ್ರ ಕರ್ತವ್ಯವಾಗಿತ್ತು, ಮತ್ತು ದೇವರಿಗೆ ಅಧೀನರಾಗಿರುವುದಕ್ಕೆ ಸಂಬಂಧಪಟ್ಟಿತ್ತು. ಇಂದು ಕ್ರೈಸ್ತರು ಮೋಶೆಯ ಧರ್ಮಶಾಸ್ತ್ರದ ಕೆಳಗಿಲ್ಲವಾದರೂ, ತನ್ನ ವೃದ್ಧ ಸೇವಕರನ್ನು ಯೆಹೋವನು ಅಮೂಲ್ಯರಾಗಿಯೂ ಬೆಲೆಬಾಳುವಂಥವರಾಗಿಯೂ ವೀಕ್ಷಿಸುತ್ತಾನೆ ಎಂಬ ಸಂಗತಿಯನ್ನು ಅದು ನಮಗೆ ನೆನಪಿಸುತ್ತದೆ. (ಜ್ಞಾನೋಕ್ತಿ 16:31; ಇಬ್ರಿಯ 7:19) ನಾವೂ ಯೆಹೋವನ ದೃಷ್ಟಿಕೋನವನ್ನೇ ಪ್ರತಿಬಿಂಬಿಸುತ್ತೇವೋ? ನಾವು ನಮ್ಮ ವೃದ್ಧ ಕ್ರೈಸ್ತ ಸಹೋದರ ಸಹೋದರಿಯರನ್ನು ಅತ್ಯಮೂಲ್ಯರೆಂದೆಣಿಸುತ್ತೇವೋ?
ಅವನು ತನ್ನ ಹಿರಿಯ ಸ್ನೇಹಿತನನ್ನು ಅತ್ಯಮೂಲ್ಯನೆಂದೆಣಿಸಿದನು
ಹಿರಿಯರಿಗೆ ಗೌರವ ತೋರಿಸುವುದನ್ನು ಎತ್ತಿತೋರಿಸುವ ಒಂದು ಬೈಬಲ್ ವೃತ್ತಾಂತವು ಎರಡನೇ ಅರಸುಗಳು ಪುಸ್ತಕದಲ್ಲಿ ಕಂಡುಬರುತ್ತದೆ. ಪ್ರವಾದಿಯಾದ ಎಲೀಯನ ಸ್ಥಾನಕ್ಕೆ ಯುವ ಪ್ರವಾದಿ ಎಲೀಷನು ಹೇಗೆ ಬಂದನು ಎಂಬುದರ ವಿವರಣೆಯು ಅದರಲ್ಲಿ ಅಡಕವಾಗಿದೆ. ಎಲೀಯನು ಇಸ್ರಾಯೇಲಿನ ಹತ್ತು ಕುಲಗಳ ಪ್ರವಾದಿಯಾಗಿ ಸೇವೆಸಲ್ಲಿಸಿದ ಕೊನೆಯ ದಿನ ಏನು ನಡೆಯಿತೋ ಅದನ್ನು ಪರಿಗಣಿಸಿರಿ.
ಆ ದಿನದಂದು, ಆ ವೃದ್ಧ ಪ್ರವಾದಿಯು ಗಿಲ್ಗಾಲ್‌ನಿಂದ ಬೇತೇಲಿಗೆ, ಬೇತೇಲಿನಿಂದ ಯೆರಿಕೋವಿಗೆ, ಯೆರಿಕೋವಿನಿಂದ ಯೊರ್ದನ್ ಹೊಳೆಗೆ ಹೋಗುವಂತೆ ಯೆಹೋವನಿಂದ ನಿರ್ದೇಶಿಸಲ್ಪಟ್ಟನು. (2 ಅರಸುಗಳು 2:1, 2, 4, 6) ಸುಮಾರು 50 ಕಿಲೊಮೀಟರ್‌ಗಳ ಪ್ರಯಾಣದ ಸಮಯದಲ್ಲಿ ಎಲೀಯನು, ತನ್ನನ್ನು ಹಿಂಬಾಲಿಸುವುದನ್ನು ನಿಲ್ಲಿಸುವಂತೆ ಎಲೀಷನಿಗೆ ಮೂರು ಸಲ ಹೇಳಿದನು. ಆದರೂ, ಶತಮಾನಗಳ ಹಿಂದೆ ಹೇಗೆ ಯುವ ರೂತಳು ನೊವೊಮಿಯನ್ನು ಬಿಟ್ಟುಹೋಗಲು ಖಡಾಖಂಡಿತವಾಗಿ ನಿರಾಕರಿಸಿದಳೋ ಹಾಗೆಯೇ, ಎಲೀಷನು ಆ ಹಿರಿಯ ಪ್ರವಾದಿಯನ್ನು ಬಿಟ್ಟುಹೋಗಲು ನಿರಾಕರಿಸಿದನು. (ರೂತಳು 1:16, 17) ಎಲೀಷನು ಮೂರು ಸಾರಿ ಹೇಳಿದ್ದು: “ಯೆಹೋವನಾಣೆ, ನಿನ್ನ ಜೀವದಾಣೆ, ನಾನು ನಿನ್ನನ್ನು ಬಿಟ್ಟುಹೋಗುವದಿಲ್ಲ.” (2 ಅರಸುಗಳು 2:2, 4, 6) ಆ ಹಂತದಲ್ಲಿ, ಎಲೀಷನು ಎಲೀಯನಿಗೆ ಈಗಾಗಲೇ ಸುಮಾರು ಆರು ವರ್ಷಕಾಲ ಬೆಂಬಲ ನೀಡಿದ್ದನು. ಆದರೂ, ಸಾಧ್ಯವಿರುವಷ್ಟು ಕಾಲ ಎಲೀಯನೊಂದಿಗೆ ಸೇವೆ ಮಾಡಲು ಅವನು ಬಯಸಿದನು. ವಾಸ್ತವದಲ್ಲಿ, ಆ ವೃತ್ತಾಂತವು ಕೂಡಿಸಿ ಹೇಳುವುದು: ‘ಅವರು ಮಾತಾಡುತ್ತಾ ಮುಂದೆ ಹೋಗುತ್ತಿರುವಾಗ ಎಲೀಯನು ಪರಲೋಕಕ್ಕೆ ಹೋದನು.’ (ವಚನ 11) ಇಸ್ರಾಯೇಲಿನಲ್ಲಿ ಎಲೀಯನ ಸೇವೆಯ ಕೊನೆ ಗಳಿಗೆಯ ವರೆಗೂ ಎಲೀಯನು ಮತ್ತು ಎಲೀಷನು ಸಂಭಾಷಿಸುತ್ತಿದ್ದರು. ಕಿರಿಯ ಪ್ರವಾದಿಯು ಆ ಹಿರಿಯ ಮತ್ತು ಹೆಚ್ಚು ಅನುಭವಸ್ಥನಾದ ಪ್ರವಾದಿಯಿಂದ ಸಾಧ್ಯವಾದಷ್ಟು ಹೆಚ್ಚು ಉಪದೇಶ ಮತ್ತು ಪ್ರೋತ್ಸಾಹದ ಮಾತುಗಳನ್ನು ಪಡೆದುಕೊಳ್ಳಲು ಹಂಬಲಿಸಿದನು. ಖಂಡಿತವಾಗಿಯೂ, ಅವನು ತನ್ನ ಹಿರಿಯ ಸ್ನೇಹಿತನನ್ನು ಅತ್ಯಮೂಲ್ಯನೆಂದೆಣಿಸಿದನು.
‘ತಂದೆ ತಾಯಿಗಳೆಂದು’
ಎಲೀಷನು ಆ ಹಿರಿಯ ಪ್ರವಾದಿಯನ್ನು ಒಬ್ಬ ಸ್ನೇಹಿತನಾಗಿ, ಮತ್ತು ಒಬ್ಬ ಆತ್ಮಿಕ ತಂದೆಯಾಗಿಯೂ ಏಕೆ ಪ್ರೀತಿಸಿದನು 2 ಅರಸುಗಳು 2:12) ಇಸ್ರಾಯೇಲಿನಲ್ಲಿ ಎಲೀಯನ ನೇಮಕವು ಮುಗಿಯುವ ತುಸು ಮುಂಚೆ, ಅವನು ಎಲೀಷನಿಗೆ ಹೇಳಿದ್ದು: “ನಿನ್ನನ್ನು ಬಿಟ್ಟು ಹೋಗುವ ಮೊದಲು ನಾನು ನಿನಗೋಸ್ಕರ ಏನು ಮಾಡಬೇಕನ್ನುತ್ತೀ ಹೇಳು.” (ವಚನ 9) ಹೀಗೆ, ಕೊನೆಯ ಗಳಿಗೆಯ ವರೆಗೂ ಎಲೀಯನು ತನ್ನ ಕೆಲಸವನ್ನು ಮುಂದುವರಿಸಲಿರುವವನ ಆತ್ಮಿಕ ಕ್ಷೇಮ ಮತ್ತು ದೇವರ ಕೆಲಸದ ಮುಂದುವರಿಯುವಿಕೆಯ ಕುರಿತು ಚಿಂತೆಯನ್ನು ವ್ಯಕ್ತಪಡಿಸಿದನು.
ಎಂಬುದನ್ನು ಅರ್ಥಮಾಡಿಕೊಳ್ಳುವುದು ಅಷ್ಟು ಕಷ್ಟಕರವೇನಲ್ಲ. (ಇಂದು, ನಮ್ಮ ಹಿರಿಯ ಕ್ರೈಸ್ತ ಸಹೋದರ ಸಹೋದರಿಯರು ತಮ್ಮ ಜ್ಞಾನ ಮತ್ತು ವಿವೇಕವನ್ನು ಎಳೆಯರೊಂದಿಗೆ ಧಾರಾಳವಾಗಿ ಹಂಚಿಕೊಳ್ಳುವಾಗ ತದ್ರೀತಿಯ ತಂದೆ ತಾಯಿಯಂಥ ಕಾಳಜಿಯನ್ನು ನೋಡುವುದು ಹೃದಯವನ್ನು ಸ್ಪರ್ಶಿಸುತ್ತದೆ. ಉದಾಹರಣೆಗೆ, ಯೆಹೋವನ ಸಾಕ್ಷಿಗಳ ಬ್ರಾಂಚ್ ಆಫೀಸ್‌ಗಳಲ್ಲಿ ದೀರ್ಘಸಮಯದಿಂದಲೂ ಕೆಲಸಮಾಡುತ್ತಿರುವ ಸ್ವಯಂ ಸೇವಕರು, ಬೆತೆಲ್ ಕುಟುಂಬಕ್ಕೆ ಸೇರಿಕೊಳ್ಳುವ ಹೊಸ ಸದಸ್ಯರು ತಮ್ಮ ಸೇವೆಯನ್ನು ಸಲ್ಲಿಸಲು ಅಗತ್ಯವಿರುವ ಕೌಶಲಗಳನ್ನು ಕಲಿತುಕೊಳ್ಳುವಂತೆ ಅವರಿಗೆ ಮನಃಪೂರ್ವಕವಾಗಿ ಸಹಾಯಮಾಡುತ್ತಾರೆ. ತದ್ರೀತಿಯಲ್ಲಿ, ಹಲವಾರು ವರ್ಷಗಳಿಂದ ಸಭೆಗಳನ್ನು ಸಂದರ್ಶಿಸುತ್ತಿರುವ ಸಂಚರಣ ಮೇಲ್ವಿಚಾರಕರು ಮತ್ತು ಅವರ ಹೆಂಡತಿಯರು, ಸಂಚರಣ ಶುಶ್ರೂಷಕರಾಗಿ ಸೇವೆಸಲ್ಲಿಸಲು ತರಬೇತು ಪಡೆಯುವವರೊಂದಿಗೆ ತಮ್ಮ ವಿಪುಲವಾದ ಅನುಭವವನ್ನು ಸಂತೋಷದಿಂದ ಹಂಚಿಕೊಳ್ಳುತ್ತಾರೆ. ಮಾತ್ರವಲ್ಲದೆ, ಲೋಕವ್ಯಾಪಕವಾಗಿರುವ ಯೆಹೋವನ ಸಾಕ್ಷಿಗಳ ಸಭೆಗಳಲ್ಲಿ ಹಲವಾರು ದಶಕಗಳಿಂದ ಯೆಹೋವನನ್ನು ನಂಬಿಗಸ್ತಿಕೆಯಿಂದ ಸೇವಿಸಿರುವ ಹಿರಿಯ ಸಹೋದರ ಸಹೋದರಿಯರಿದ್ದಾರೆ, ಮತ್ತು ಅವರು ಸಭೆಯ ಹೊಸ ಸದಸ್ಯರೊಂದಿಗೆ ತಮ್ಮ ಪ್ರಾಯೋಗಿಕ ವಿವೇಕ ಮತ್ತು ಅನುಭವವನ್ನು ಸಂತೋಷದಿಂದ ಹಂಚಿಕೊಳ್ಳುತ್ತಾರೆ.—ಜ್ಞಾನೋಕ್ತಿ 2:7; ಫಿಲಿಪ್ಪಿ 3:17; ತೀತ 2:3-5.
ಈ ಪ್ರಿಯ ಹಿರಿಯ ಕ್ರೈಸ್ತರಿಂದ ತೋರಿಸಲ್ಪಡುವ ಹೃತ್ಪೂರ್ವಕ ಕಾಳಜಿಯು, ಅವರಿಗೆ ಗೌರವ ತೋರಿಸುವುದನ್ನು ನಿಜವಾಗಿಯೂ ಹರ್ಷದಾಯಕವನ್ನಾಗಿ ಮಾಡುತ್ತದೆ. ಆದುದರಿಂದ, ವೃದ್ಧ ಜೊತೆ ವಿಶ್ವಾಸಿಗಳಿಗೆ ಆಳವಾದ ಗಣ್ಯತೆಯನ್ನು ತೋರಿಸುವುದರಲ್ಲಿ ನಾವು ಎಲೀಷನ ಮಾದರಿಯನ್ನು ಅನುಕರಿಸಲು ಬಯಸುತ್ತೇವೆ. ಅಪೊಸ್ತಲ ಪೌಲನು ನಮಗೆ ಜ್ಞಾಪಿಸುವಂತೆ, “ವೃದ್ಧನನ್ನು . . . ತಂದೆಯೆಂದು” ಮತ್ತು “ವೃದ್ಧಸ್ತ್ರೀಯರನ್ನು ತಾಯಿಗಳೆಂದೂ” ಉಪಚರಿಸುತ್ತಾ ಮುಂದುವರಿಯೋಣ. (1 ತಿಮೊಥೆಯ 5:1, 2) ಹೀಗೆ ಮಾಡುವ ಮೂಲಕ, ಲೋಕವ್ಯಾಪಕವಾಗಿರುವ ಕ್ರೈಸ್ತ ಸಭೆಯ ಯೋಗ್ಯ ಕಾರ್ಯಾಚರಣೆ ಮತ್ತು ಪ್ರಗತಿಗೆ ನಾವು ಹೆಚ್ಚನ್ನು ಕೂಡಿಸುತ್ತೇವೆ.
[ಪುಟ 30ರಲ್ಲಿರುವ ಚಿತ್ರ]
ಎಲೀಷನು ಸಾಧ್ಯವಿರುವಷ್ಟು ಕಾಲ ಎಲೀಯನೊಂದಿಗೆ ಸೇವೆ ಮಾಡಲು ಬಯಸಿದನು
[ಪುಟ 31ರಲ್ಲಿರುವ ಚಿತ್ರಗಳು]
ಯುವ ಜನರು ವೃದ್ಧ ಕ್ರೈಸ್ತರಿಂದ ಮಹತ್ತರವಾದ ಪ್ರಯೋಜನವನ್ನು ಪಡೆದುಕೊಳ್ಳುತ್ತಾರೆ