ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನನ್ನು ನಿಮ್ಮ ಭರವಸವನ್ನಾಗಿ ಮಾಡಿಕೊಳ್ಳಿರಿ

ಯೆಹೋವನನ್ನು ನಿಮ್ಮ ಭರವಸವನ್ನಾಗಿ ಮಾಡಿಕೊಳ್ಳಿರಿ

ಯೆಹೋವನನ್ನು ನಿಮ್ಮ ಭರವಸವನ್ನಾಗಿ ಮಾಡಿಕೊಳ್ಳಿರಿ

“ಕರ್ತನಾದ ಯೆಹೋವನೇ, ಬಾಲ್ಯಾರಭ್ಯ ನನ್ನ ನಿರೀಕ್ಷೆಯೂ ಭರವಸವೂ ನೀನಲ್ಲವೋ?”​—ಕೀರ್ತನೆ 71:5.

1. ಕುರುಬನಾದ ಬಾಲಕ ದಾವೀದನನ್ನು ಯಾವ ಸವಾಲು ಎದುರುಗೊಂಡಿತು?

ಅವನು ಸುಮಾರು ಒಂಬತ್ತು ಅಡಿ ಎತ್ತರದವನಾಗಿದ್ದನು. ಇಸ್ರಾಯೇಲಿನ ಯುದ್ಧಭಟರು ಅವನನ್ನು ಎದುರುಗೊಳ್ಳಲು ಹೆದರಿದ್ದರಲ್ಲಿ ಆಶ್ಚರ್ಯವೇನಿಲ್ಲ! ಪ್ರತಿದಿನ ಹೊತ್ತಾರೆಯಲ್ಲಿಯೂ ಸಾಯಂಕಾಲದಲ್ಲಿಯೂ ಹಲವಾರು ವಾರಗಳ ವರೆಗೆ ಫಿಲಿಷ್ಟಿಯ ದೈತ್ಯನಾದ ಗೊಲ್ಯಾತನು, ತನ್ನೊಂದಿಗೆ ಕದನಕ್ಕಿಳಿಯಲು ಒಬ್ಬ ರಣಧೀರನನ್ನು ಕಳುಹಿಸುವಂತೆ ಸವಾಲೊಡ್ಡುತ್ತಾ ಇಸ್ರಾಯೇಲ್ಯ ಸೈನ್ಯವನ್ನು ಹೀಯಾಳಿಸುತ್ತಿದ್ದನು. ಕೊನೆಗೆ, ಒಬ್ಬನು ಆ ಸವಾಲನ್ನು ಸ್ವೀಕರಿಸಿದನು; ಆದರೆ ಅವನು ಒಬ್ಬ ಯುದ್ಧವೀರನಾಗಿರಲಿಲ್ಲ, ಬದಲಾಗಿ ಒಬ್ಬ ಸಾಮಾನ್ಯ ಯುವಕನಾಗಿದ್ದನು. ತನ್ನ ಎದುರಾಳಿಯ ಮುಂದೆ ಈ ಕುರುಬನಾದ ಬಾಲಕ ದಾವೀದನು ಒಂದು ಚುಕ್ಕೆಯಂತೆ ಕಾಣಿಸಿದನು. ಇವನು ಗೊಲ್ಯಾತನ ರಕ್ಷಾಕವಚ ಮತ್ತು ಶಸ್ತ್ರಗಳಿಗಿಂತಲೂ ಕಡಿಮೆ ತೂಕದವನಾಗಿದ್ದಿರಬಹುದು! ಆದರೂ, ಈ ಯುವಕನು ದೈತ್ಯನ ಮುಕಾಬಿಲೆ ಮಾಡಿದನು ಮತ್ತು ಧೀರತೆಗೆ ಬಾಳುವ ಸಂಕೇತವಾದನು.​—1 ಸಮುವೇಲ 17:1-51.

2, 3. (ಎ) ಅಚಲವಾದ ಭರವಸೆಯೊಂದಿಗೆ ಗೊಲ್ಯಾತನನ್ನು ಎದುರುಗೊಳ್ಳಲು ದಾವೀದನಿಗೆ ಏಕೆ ಸಾಧ್ಯವಾಯಿತು? (ಬಿ) ಯೆಹೋವನನ್ನು ನಮ್ಮ ಭರವಸವನ್ನಾಗಿ ಮಾಡಿಕೊಳ್ಳುವುದರಲ್ಲಿ ನಾವು ಯಾವ ಎರಡು ಹೆಜ್ಜೆಗಳನ್ನು ಪರಿಗಣಿಸಲಿರುವೆವು?

2 ದಾವೀದನಿಗೆ ಅಂಥ ಧೈರ್ಯವನ್ನು ಕೊಟ್ಟದ್ದು ಯಾವುದು? ಸ್ವತಃ ದಾವೀದನೇ ತನ್ನ ಇಳಿವಯಸ್ಸಿನಲ್ಲಿ ಬರೆದ ಕೆಲವು ಮಾತುಗಳನ್ನು ಗಮನಿಸಿರಿ: “ಕರ್ತನಾದ ಯೆಹೋವನೇ, ಬಾಲ್ಯಾರಭ್ಯ ನನ್ನ ನಿರೀಕ್ಷೆಯೂ ಭರವಸವೂ ನೀನಲ್ಲವೋ?” (ಕೀರ್ತನೆ 71:5) ಹೌದು, ಒಬ್ಬ ಯುವಕನಾಗಿ, ದಾವೀದನು ಯೆಹೋವನಲ್ಲಿ ಅಚಲವಾದ ಭರವಸೆಯನ್ನು ಇಟ್ಟಿದ್ದನು. ಅವನು ಗೊಲ್ಯಾತನನ್ನು ಹೀಗನ್ನುತ್ತಾ ಎದುರುಗೊಂಡಿದ್ದನು: “ನೀನು ಈಟಿ ಕತ್ತಿ ಬರ್ಜಿಗಳೊಡನೆ ನನ್ನ ಬಳಿಗೆ ಬರುತ್ತೀ; ನಾನಾದರೋ ನೀನು ಹೀಯಾಳಿಸಿದಂಥ ಸೇನಾಧೀಶ್ವರನೂ ಇಸ್ರಾಯೇಲ್ಯರ ಯುದ್ಧಭಟರ ದೇವರೂ ಆಗಿರುವ ಯೆಹೋವನ ನಾಮದೊಡನೆ ನಿನ್ನ ಬಳಿಗೆ ಬರುತ್ತೇನೆ.” (1 ಸಮುವೇಲ 17:45) ಗೊಲ್ಯಾತನ ಭರವಸವು ತನ್ನ ಮಹಾ ಶಕ್ತಿ ಮತ್ತು ತನ್ನ ಆಯುಧಗಳಲ್ಲಿದ್ದಾಗ, ದಾವೀದನ ಭರವಸವಾದರೋ ಯೆಹೋವನಲ್ಲಿತ್ತು. ವಿಶ್ವದ ಪರಮಾಧಿಕಾರಿ ಕರ್ತನೇ ತನ್ನ ಪಕ್ಷದಲ್ಲಿರುವಾಗ, ದೈತ್ಯನೂ ಶಸ್ತ್ರಸಜ್ಜಿತನೂ ಆಗಿದ್ದ ಕೇವಲ ಒಬ್ಬ ನರಮನುಷ್ಯನಿಗೆ ದಾವೀದನು ಏಕೆ ಹೆದರಬೇಕು?

3 ನೀವು ದಾವೀದನ ಕುರಿತು ಓದುತ್ತಿರುವಾಗ, ಯೆಹೋವನಲ್ಲಿ ನಿಮಗಿರುವ ಭರವಸವು ಬಲವಾಗಿರುತ್ತಿದ್ದಲ್ಲಿ ಒಳ್ಳೇದಿತ್ತೆಂದು ನಿಮಗನಿಸುತ್ತದೋ? ನಮ್ಮಲ್ಲಿ ಅನೇಕರಿಗೆ ಹೀಗೆ ಅನಿಸಬಹುದು. ಆದುದರಿಂದ, ಯೆಹೋವನನ್ನು ನಮ್ಮ ಭರವಸವನ್ನಾಗಿ ಮಾಡಿಕೊಳ್ಳಲು ನಾವು ತೆಗೆದುಕೊಳ್ಳಬೇಕಾದ ಎರಡು ಹೆಜ್ಜೆಗಳನ್ನು ಪರಿಗಣಿಸೋಣ. ಮೊದಲು, ಈ ರೀತಿಯ ಭರವಸೆಗೆ ತಡೆಯಾಗಿರುವ ವಿಷಯದ ಮೇಲೆ ನಾವು ಜಯಸಾಧಿಸಿ ಆ ಭರವಸೆಯನ್ನು ಕಾಪಾಡಿಕೊಳ್ಳಬೇಕು. ಎರಡನೆಯದಾಗಿ, ಯೆಹೋವನ ಮೇಲೆ ಭರವಸೆಯಿಡುವುದರಲ್ಲಿ ಏನು ಒಳಗೂಡಿದೆ ಎಂಬುದನ್ನು ನಾವು ಕಲಿತುಕೊಳ್ಳಬೇಕು.

ಯೆಹೋವನಲ್ಲಿನ ಭರವಸೆಗೆ ತಡೆಯಾಗಿರುವ ವಿಷಯವನ್ನು ಜಯಿಸುವುದು

4, 5. ಅನೇಕ ಜನರಿಗೆ ದೇವರಲ್ಲಿ ಭರವಸವಿಡುವುದು ಏಕೆ ಕಷ್ಟಕರವಾದ ಸಂಗತಿಯಾಗಿದೆ?

4 ದೇವರಲ್ಲಿ ಭರವಸೆಯಿಡುವುದರಿಂದ ಜನರನ್ನು ಯಾವುದು ತಡೆಯುತ್ತದೆ? ಹಲವು ಬಾರಿ, ಕೆಟ್ಟ ವಿಷಯಗಳು ಏಕೆ ಸಂಭವಿಸುತ್ತವೆ ಎಂಬ ವಿಷಯದಲ್ಲಿ ಕೆಲವರು ಗಲಿಬಿಲಿಗೊಳ್ಳುತ್ತಾರೆ. ದೇವರೇ ಕಷ್ಟಾನುಭವಕ್ಕೆ ಕಾರಣನು ಎಂದು ಅನೇಕರಿಗೆ ಬೋಧಿಸಲಾಗುತ್ತದೆ. ಒಂದು ದುರಂತವು ಸಂಭವಿಸಿದಾಗ, ಆ ವಿಪತ್ತಿನಲ್ಲಿ ಬಲಿಯಾದವರನ್ನು ಸ್ವರ್ಗದಲ್ಲಿ ತನ್ನೊಂದಿಗಿರುವಂತೆ ದೇವರು “ಕೊಂಡೊಯ್ದನು” ಎಂದು ಧಾರ್ಮಿಕ ಮುಖಂಡರು ಹೇಳಬಹುದು. ಅಷ್ಟುಮಾತ್ರವಲ್ಲದೆ, ಲೋಕದಲ್ಲಿ ನಡೆಯುವ ಪ್ರತಿಯೊಂದು ಘಟನೆಯನ್ನೂ ದೇವರು ಈ ಮುಂಚೆಯೇ ನಿರ್ಧರಿಸಿಟ್ಟಿದ್ದಾನೆ ಎಂದು ಅನೇಕ ಧಾರ್ಮಿಕ ಮುಖಂಡರು ಬೋಧಿಸುತ್ತಾರೆ. ಮತ್ತು ಈ ಘಟನೆಗಳಲ್ಲಿ ಪ್ರತಿಯೊಂದು ದುರಂತವೂ ದುಷ್ಕೃತ್ಯವೂ ಸೇರಿದೆ. ಇಂತಹ ಒಬ್ಬ ಕಲ್ಲೆದೆಯ ದೇವರಲ್ಲಿ ಭರವಸವಿಡುವುದು ಕಷ್ಟಕರವಾಗಿರುವುದು. ಅಪನಂಬಿಗಸ್ತರ ಮನಸ್ಸನ್ನು ಮಂಕುಮಾಡುವ ಸೈತಾನನು, ಈ ರೀತಿಯ ಎಲ್ಲಾ “ದೆವ್ವಗಳ ಬೋಧನೆ”ಗಳನ್ನು ಪ್ರವರ್ಧಿಸಲು ಹಂಬಲಿಸುತ್ತಾನೆ.​—1 ತಿಮೊಥೆಯ 4:1; 2 ಕೊರಿಂಥ 4:4.

5 ಜನರು ಯೆಹೋವನಲ್ಲಿ ಭರವಸೆಯನ್ನು ಕಳೆದುಕೊಳ್ಳಬೇಕೆಂಬುದು ಸೈತಾನನ ಇಚ್ಛೆಯಾಗಿದೆ. ದೇವರ ವೈರಿಯಾಗಿರುವ ಅವನು, ಮಾನವ ಕಷ್ಟಾನುಭವದ ನಿಜ ಕಾರಣಗಳನ್ನು ನಾವು ತಿಳಿದುಕೊಳ್ಳುವುದನ್ನು ಇಷ್ಟಪಡುವುದಿಲ್ಲ. ಮತ್ತು ಒಂದುವೇಳೆ ನಾವು ಕಷ್ಟಾನುಭವದ ಶಾಸ್ತ್ರೀಯ ಕಾರಣಗಳನ್ನು ಈಗಾಗಲೇ ಕಲಿತಿರುವುದಾದರೆ, ನಾವು ಅವುಗಳನ್ನು ಮರೆತುಬಿಡಬೇಕೆಂಬುದೇ ಸೈತಾನನ ಆಕಾಂಕ್ಷೆಯಾಗಿದೆ. ಆದುದರಿಂದ, ಲೋಕದಲ್ಲಿ ಕಷ್ಟಾನುಭವ ಏಕೆ ಇದೆ ಎಂಬುದಕ್ಕಾಗಿರುವ ಮೂರು ಮೂಲಭೂತ ಕಾರಣಗಳನ್ನು ನಾವು ಆಗಿಂದಾಗ್ಗೆ ಮರುಪರಿಶೀಲಿಸುವುದು ಒಳ್ಳೇದು. ಹೀಗೆ ಮಾಡುವುದರಿಂದ, ನಾವು ಜೀವನದಲ್ಲಿ ಎದುರಿಸುವ ತೊಂದರೆಗಳಿಗೆ ದೇವರು ಕಾರಣನಲ್ಲ ಎಂಬುದನ್ನು ಮನದಟ್ಟುಮಾಡಿಕೊಳ್ಳುವೆವು.​—ಫಿಲಿಪ್ಪಿ 1:9, 10.

6. ಮಾನವ ಕಷ್ಟಾನುಭವಕ್ಕಿರುವ ಒಂದು ಕಾರಣವನ್ನು 1 ಪೇತ್ರ 5:8 ಹೇಗೆ ಸೂಚಿಸುತ್ತದೆ?

6 ಮಾನವ ಕಷ್ಟಾನುಭವಕ್ಕೆ ಒಂದು ಕಾರಣವೇನೆಂದರೆ, ಸೈತಾನನು ಯೆಹೋವನ ನಂಬಿಗಸ್ತ ಜನರ ಯಥಾರ್ಥತೆಯನ್ನು ಮುರಿಯಲು ಬಯಸುತ್ತಾನೆ. ಅವನು ಯೋಬನ ಯಥಾರ್ಥತೆಯನ್ನು ಮುರಿಯಲು ಪ್ರಯತ್ನಿಸಿದನು. ಅಂದು ಸೈತಾನನು ಸಫಲನಾಗಲಿಲ್ಲ, ಆದರೆ ಅವನಿನ್ನೂ ತನ್ನ ಪ್ರಯತ್ನವನ್ನು ಬಿಟ್ಟುಕೊಟ್ಟಿರುವುದಿಲ್ಲ. ಈ ಲೋಕದ ಅಧಿಪತಿಯಾಗಿ, ಅವನು ಯೆಹೋವನ ನಂಬಿಗಸ್ತ ಸೇವಕರನ್ನು ‘ನುಂಗಿ’ಬಿಡಲಿಕ್ಕಾಗಿ ಹುಡುಕುತ್ತಾ ತಿರುಗುತ್ತಾನೆ. (1 ಪೇತ್ರ 5:8) ನಮ್ಮಲ್ಲಿ ಪ್ರತಿಯೊಬ್ಬರೂ ಆ ಸೇವಕರಲ್ಲಿ ಸೇರಿದ್ದೇವೆ! ನಾವು ಯೆಹೋವನನ್ನು ಸೇವಿಸುವುದನ್ನು ನಿಲ್ಲಿಸಿಬಿಡಬೇಕೆಂಬುದು ಸೈತಾನನ ಅಪೇಕ್ಷೆಯಾಗಿದೆ. ಈ ಕಾರಣದಿಂದಾಗಿ, ಅವನು ಹಿಂಸೆಯ ಕಿಡಿಯನ್ನು ಹೊತ್ತಿಸುತ್ತಾನೆ. ಈ ರೀತಿಯ ಕಷ್ಟಾನುಭವ ಯಾತನಾಮಯವಾಗಿರುವುದಾದರೂ, ನಾವು ಅದನ್ನು ಸಹಿಸಿಕೊಳ್ಳಲು ಸಕಾರಣವಿದೆ. ಹೀಗೆ ಮಾಡುವ ಮೂಲಕ, ನಾವು ಸೈತಾನನನ್ನು ಸುಳ್ಳುಗಾರನಾಗಿ ರುಜುಪಡಿಸುತ್ತೇವೆ, ಮತ್ತು ಯೆಹೋವನನ್ನು ಸಂತೋಷಪಡಿಸುತ್ತೇವೆ. (ಯೋಬ 2:4; ಜ್ಞಾನೋಕ್ತಿ 27:11) ನಾವು ಹಿಂಸೆಯನ್ನು ತಾಳಿಕೊಳ್ಳುವಂತೆ ಯೆಹೋವನು ನಮಗೆ ಬಲವನ್ನು ಒದಗಿಸುವಾಗ, ಆತನಲ್ಲಿರುವ ನಮ್ಮ ಭರವಸವು ಬೆಳೆಯುತ್ತದೆ.​—ಕೀರ್ತನೆ 9:9, 10.

7. ಕಷ್ಟಾನುಭವಕ್ಕಿರುವ ಯಾವ ಕಾರಣವನ್ನು ಗ್ರಹಿಸುವಂತೆ ಗಲಾತ್ಯ 6:7 ನಮಗೆ ಸಹಾಯಮಾಡುತ್ತದೆ?

7 ಕಷ್ಟಾನುಭವಕ್ಕಾಗಿರುವ ಎರಡನೆಯ ಕಾರಣವು ಈ ಮೂಲತತ್ತ್ವದಲ್ಲಿದೆ: “ಮನುಷ್ಯನು ತಾನು ಏನು ಬಿತ್ತುತ್ತಾನೋ ಅದನ್ನೇ ಕೊಯ್ಯಬೇಕು.” (ಗಲಾತ್ಯ 6:7) ಕೆಲವೊಮ್ಮೆ ಜನರು ಅವಿವೇಕಭರಿತ ಆಯ್ಕೆಗಳನ್ನು ಮಾಡುವ ಮೂಲಕ ಬಿತ್ತುತ್ತಾರೆ ಮತ್ತು ಅದರ ಫಲಿತಾಂಶವಾಗಿ ಸ್ವಲ್ಪಮಟ್ಟಿಗಿನ ಕಷ್ಟಾನುಭವವನ್ನು ಕೊಯ್ಯುತ್ತಾರೆ. ಅವರು ಎಲ್ಲಾ ಎಚ್ಚರಿಕೆಯನ್ನು ಗಾಳಿಗೆ ತೂರಿ ಅಜಾಗರೂಕತೆಯಿಂದ ಗಾಡಿಯನ್ನು ಓಡಿಸಬಹುದು, ಮತ್ತು ಇದು ಅಪಘಾತದಲ್ಲಿ ಕೊನೆಗೊಳ್ಳಬಹುದು. ಅನೇಕರು ಸಿಗರೇಟ್‌ ಸೇದಲು ತೀರ್ಮಾನಿಸುತ್ತಾರೆ, ಮತ್ತು ಇದು ಹೃದ್ರೋಗ ಹಾಗೂ ಶ್ವಾಸಕೋಶದ ಕ್ಯಾನ್ಸರ್‌ಗೆ ನಡೆಸುತ್ತದೆ. ಅನೈತಿಕ ಲೈಂಗಿಕ ಚಟುವಟಿಕೆಯಲ್ಲಿ ತೊಡಗಲು ತೀರ್ಮಾನಿಸುವವರು ಮುರಿದ ಕುಟುಂಬ ಸಂಬಂಧ, ಸ್ವಗೌರವದ ನಷ್ಟ, ರತಿರವಾನಿತ ರೋಗಗಳು, ಮತ್ತು ಅನಪೇಕ್ಷಣೀಯ ಗರ್ಭಧಾರಣೆಗಳಿಂದ ಉಂಟಾಗುವ ಕಷ್ಟಾನುಭವಕ್ಕೆ ತಲೆಯೊಡ್ಡುತ್ತಾರೆ. ಕೆಲವರು ಈ ರೀತಿಯ ಕಷ್ಟಾನುಭವಕ್ಕೆ ದೇವರನ್ನು ಹೊಣೆಗಾರನನ್ನಾಗಿ ಮಾಡಲು ಪ್ರಯತ್ನಿಸಬಹುದು, ಆದರೆ ವಾಸ್ತವದಲ್ಲಿ ಅವರು ತಮ್ಮ ಸ್ವಂತ ತೀರ್ಮಾನಗಳ ಕಹಿ ಫಲವನ್ನು ಉಣ್ಣುತ್ತಿದ್ದಾರೆ ಅಷ್ಟೆ.​—ಜ್ಞಾನೋಕ್ತಿ 19:3.

8. ಪ್ರಸಂಗಿ 9:11ಕ್ಕನುಸಾರ, ಜನರು ಏಕೆ ಕಷ್ಟಾನುಭವಿಸುತ್ತಾರೆ?

8 ಕಷ್ಟಾನುಭವಕ್ಕಾಗಿರುವ ಮೂರನೆಯ ಕಾರಣವು ಪ್ರಸಂಗಿ 9:11ರಲ್ಲಿ ತಿಳಿಸಲ್ಪಟ್ಟಿದೆ: “ನಾನು ಲೋಕದಲ್ಲಿ ತಿರಿಗಿ ದೃಷ್ಟಿಸಲು ವೇಗಿಗಳಿಗೆ ಓಟದಲ್ಲಿ ಗೆಲವಿಲ್ಲ, ಬಲಿಷ್ಠರಿಗೆ ಯುದ್ಧದಲ್ಲಿ ಜಯವಾಗದು, ಜ್ಞಾನಿಗಳಿಗೆ ಅನ್ನ ಸಿಕ್ಕದು, ವಿವೇಕಿಗಳಿಗೆ ಧನ ಲಭಿಸದು, ಪ್ರವೀಣರಿಗೆ ದಯೆ ದೊರೆಯದು; ಕಾಲವೂ ಪ್ರಾಪ್ತಿಯೂ ಯಾರಿಗೂ ತಪ್ಪಿದ್ದಲ್ಲ ಎಂದು ತಿಳಿದುಕೊಂಡೆನು.” ಕೆಲವೊಮ್ಮೆ, ಜನರು ತಪ್ಪಾದ ಸಮಯದಲ್ಲಿ ತಪ್ಪಾದ ಸ್ಥಳದಲ್ಲಿರುತ್ತಾರೆ ಅಷ್ಟೆ. ನಮ್ಮ ವೈಯಕ್ತಿಕ ಬಲ ಇಲ್ಲವೆ ಬಲಹೀನತೆಗಳು ಏನೇ ಆಗಿರಲಿ, ಕಷ್ಟಾನುಭವ ಮತ್ತು ಮರಣವು ನಮ್ಮನ್ನು ಯಾವುದೇ ಸಮಯದಲ್ಲಿ ಅನಿರೀಕ್ಷಿತವಾಗಿ ಆಕ್ರಮಿಸಬಲ್ಲದು. ಉದಾಹರಣೆಗೆ, ಯೇಸುವಿನ ದಿನದಲ್ಲಿ ಯೆರೂಸಲೇಮಿನಲ್ಲಿದ್ದ ಒಂದು ಬುರುಜು ಕುಸಿದುಬಿದ್ದು 18 ಮಂದಿ ಮೃತಪಟ್ಟರು. ಅವರ ಪೂರ್ವಪಾಪಗಳಿಗಾಗಿ ದೇವರು ಅವರನ್ನು ದಂಡಿಸುತ್ತಿಲ್ಲ ಎಂದು ಯೇಸು ತೋರಿಸಿದನು. (ಲೂಕ 13:4) ಈ ರೀತಿಯ ಕಷ್ಟಾನುಭವಕ್ಕೆ ಯೆಹೋವನು ಜವಾಬ್ದಾರನಾಗಿರುವುದಿಲ್ಲ.

9. ಕಷ್ಟಾನುಭವದ ಬಗ್ಗೆ ಅನೇಕರಿಗೆ ಅರ್ಥವಾಗದ ಸಂಗತಿ ಯಾವುದು?

9 ಕಷ್ಟಾನುಭವಕ್ಕಾಗಿರುವ ಕೆಲವು ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಪ್ರಾಮುಖ್ಯವಾಗಿದೆ. ಆದರೂ, ಈ ವಿಷಯದಲ್ಲಿ ಅನೇಕರಿಗೆ ಅರ್ಥವಾಗದ ಸಂಗತಿಯೊಂದಿದೆ. ಆ ಸಂಗತಿ ಇದೇ: ದೇವರು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ?

ಯೆಹೋವನು ಕಷ್ಟಾನುಭವವನ್ನು ಏಕೆ ಅನುಮತಿಸುತ್ತಾನೆ?

10, 11. (ಎ) ರೋಮಾಪುರ 8:​19-22ಕ್ಕನುಸಾರ, ‘ಜಗತ್ತಿಗೆಲ್ಲಾ’ ಏನು ಸಂಭವಿಸಿತು? (ಬಿ) ಜಗತ್ತನ್ನು ವ್ಯರ್ಥತ್ವಕ್ಕೆ ಒಳಪಡಿಸಿದ್ದು ಯಾರು ಎಂಬುದನ್ನು ನಾವು ಹೇಗೆ ನಿರ್ಧರಿಸಬಲ್ಲೆವು?

10 ಅಪೊಸ್ತಲ ಪೌಲನು ರೋಮಾಪುರದವರಿಗೆ ಬರೆದ ಪತ್ರದ ಒಂದು ಭಾಗವು ಈ ಪ್ರಾಮುಖ್ಯ ವಿಚಾರದ ಮೇಲೆ ಬೆಳಕು ಬೀರುತ್ತದೆ. ಪೌಲನು ಬರೆದುದು: “ದೇವಪುತ್ರರ ಮಹಿಮೆಯು ಯಾವಾಗ ಪ್ರತ್ಯಕ್ಷವಾದೀತೆಂದು ಜಗತ್ತು ಬಹು ಲವಲವಿಕೆಯಿಂದ ಎದುರು ನೋಡುತ್ತಿರುವದು. ಜಗತ್ತು ವ್ಯರ್ಥತ್ವಕ್ಕೆ ಒಳಗಾಯಿತು; ಹೀಗೆ ಒಳಗಾದದ್ದು ಸ್ವೇಚ್ಛೆಯಿಂದಲ್ಲ, ಅದನ್ನು ಒಳಪಡಿಸಿದವನ ಸಂಕಲ್ಪದಿಂದಲೇ. ಆದರೂ ಅದಕ್ಕೊಂದು ನಿರೀಕ್ಷೆಯುಂಟು; ಏನಂದರೆ ಆ ಜಗತ್ತು ಕೂಡ ನಾಶದ ವಶದಿಂದ ಬಿಡುಗಡೆಯಾಗಿ ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ ಪಾಲುಹೊಂದುವದೇ. ಜಗತ್ತೆಲ್ಲಾ ಇಂದಿನ ವರೆಗೂ ನರಳುತ್ತಾ ಪ್ರಸವವೇದನೆಪಡುತ್ತಾ ಇರುತ್ತದೆಂದು ನಾವು ಬಲ್ಲೆವು.”​—ರೋಮಾಪುರ 8:19-22.

11 ಈ ವಚನಗಳ ತಿರುಳನ್ನು ಅರ್ಥಮಾಡಿಕೊಳ್ಳಲಿಕ್ಕಾಗಿ, ನಾವು ಪ್ರಥಮವಾಗಿ ಕೆಲವು ಪ್ರಾಮುಖ್ಯ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಬೇಕಾಗಿದೆ. ಉದಾಹರಣೆಗೆ, ಜಗತ್ತು ವ್ಯರ್ಥತ್ವಕ್ಕೆ ಒಳಗಾದದ್ದು ಹೇಗೆ? ಕೆಲವರು ಇದಕ್ಕೆ ಕಾರಣನು ಸೈತಾನನೆನ್ನುವಾಗ, ಇತರರು ಆದಾಮನಿಗೆ ಸೂಚಿಸುತ್ತಾರೆ. ಆದರೆ ಇದನ್ನು ಈ ಇಬ್ಬರಿಂದಲೂ ಮಾಡಲು ಸಾಧ್ಯವಿದ್ದಿರಲಿಕ್ಕಿಲ್ಲ. ಯಾಕೆ ಸಾಧ್ಯವಿಲ್ಲ? ಏಕೆಂದರೆ ಜಗತ್ತನ್ನು ವ್ಯರ್ಥತ್ವಕ್ಕೆ ಒಳಪಡಿಸುವವನು “ಅದಕ್ಕೊಂದು ನಿರೀಕ್ಷೆ”ಯನ್ನಿಟ್ಟು ಹಾಗೆ ಮಾಡುತ್ತಾನೆ. ಹೌದು, ನಂಬಿಗಸ್ತ ವ್ಯಕ್ತಿಗಳು ಕಾಲಕ್ರಮೇಣ “ನಾಶದ ವಶದಿಂದ ಬಿಡುಗಡೆ”ಯಾಗುವರು ಎಂಬ ನಿರೀಕ್ಷೆಯನ್ನು ಆತನು ಕೊಡುತ್ತಾನೆ. ಆದಾಮನಿಗಾಗಲಿ ಸೈತಾನನಿಗಾಗಲಿ ಈ ನಿರೀಕ್ಷೆಯನ್ನು ಕೊಡಲು ಸಾಧ್ಯವಿರುವುದಿಲ್ಲ. ಕೇವಲ ಯೆಹೋವನಿಂದ ಮಾತ್ರ ಸಾಧ್ಯ. ಹಾಗಾದರೆ, ಆತನೇ ಜಗತ್ತನ್ನು ವ್ಯರ್ಥತ್ವಕ್ಕೆ ಒಳಪಡಿಸಿದನೆಂಬುದು ಸ್ಪಷ್ಟ.

12. “ಜಗತ್ತೆಲ್ಲಾ” ಎಂಬ ಅಭಿವ್ಯಕ್ತಿಯನ್ನು ಅರ್ಥಮಾಡಿಕೊಳ್ಳುವುದರಲ್ಲಿ ಯಾವ ಗಲಿಬಿಲಿಯು ಉಂಟಾಗಿದೆ, ಮತ್ತು ಈ ಪ್ರಶ್ನೆಯು ಹೇಗೆ ಉತ್ತರಿಸಲ್ಪಡಬಹುದು?

12 ಆದರೆ ಈ ಶಾಸ್ತ್ರಭಾಗದಲ್ಲಿ ಸೂಚಿಸಲ್ಪಟ್ಟಿರುವ “ಜಗತ್ತೆಲ್ಲಾ” ಏನನ್ನು ಸೂಚಿಸುತ್ತದೆ? ಇದು ಪ್ರಾಣಿಗಳನ್ನು ಮತ್ತು ವೃಕ್ಷಗಳನ್ನು ಒಳಗೊಂಡ ಇಡೀ ನೈಸರ್ಗಿಕ ಲೋಕಕ್ಕೆ ಸೂಚಿಸುತ್ತದೆಂದು ಕೆಲವರು ಹೇಳುತ್ತಾರೆ. ಆದರೆ ಮೃಗಗಳು ಮತ್ತು ವೃಕ್ಷಗಳು “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ” ಪಾಲುಹೊಂದುವ ನಿರೀಕ್ಷೆಯುಳ್ಳವುಗಳಾಗಿವೆಯೋ? ಇಲ್ಲ. (2 ಪೇತ್ರ 2:12) ಹೀಗೆ “ಜಗತ್ತೆಲ್ಲಾ” ಎಂಬುದು ಮಾನವಕುಲಕ್ಕೆ ಮಾತ್ರ ಅನ್ವಯಿಸಬಲ್ಲದು. ಈ ಜಗತ್ತೇ, ಏದೆನಿನಲ್ಲಿ ನಡೆದ ದಂಗೆಯ ಕಾರಣ ಪಾಪ ಮರಣಗಳ ಹಿಡಿತದಲ್ಲಿ ಸಿಕ್ಕಿ ನರಳಾಡುತ್ತಿದೆ ಮತ್ತು ಒಂದು ನಿರೀಕ್ಷೆಯ ತೀವ್ರ ಅಗತ್ಯತೆಯಲ್ಲಿದೆ.​—ರೋಮಾಪುರ 5:12.

13. ಏದೆನಿನಲ್ಲಾದ ದಂಗೆಯು ಮಾನವಕುಲಕ್ಕೆ ಏನು ಮಾಡಿತು?

13 ಆ ದಂಗೆಯು ಮಾನವಕುಲಕ್ಕೆ ನಿಜವಾಗಿಯೂ ಏನನ್ನು ತಂದಿತು? ಪೌಲನು ಅದರ ಪರಿಣಾಮಗಳನ್ನು ಒಂದೇ ಶಬ್ದದಲ್ಲಿ ವರ್ಣಿಸುತ್ತಾನೆ: ವ್ಯರ್ಥತ್ವ. * ಒಂದು ಕೃತಿಗನುಸಾರ, ಈ ಶಬ್ದವು “ಯೋಜಿಸಲ್ಪಟ್ಟಿದ್ದ ವಿನ್ಯಾಸದ ಪ್ರಕಾರ ಕ್ರಿಯೆಗೈಯದ ಒಂದು ವಸ್ತುವಿನ ವ್ಯರ್ಥತೆಯನ್ನು” ವರ್ಣಿಸುತ್ತದೆ. ಮಾನವರು ಸದಾಕಾಲ ಜೀವಿಸಲು ಮತ್ತು ಒಂದು ಪರದೈಸ್‌ ಭೂಮಿಯ ಆರೈಕೆಮಾಡುವುದರಲ್ಲಿ ಒಂದು ಪರಿಪೂರ್ಣವಾದ ಐಕ್ಯ ಕುಟುಂಬವಾಗಿ ಒಟ್ಟಿಗೆ ಕೆಲಸಮಾಡಲು ವಿನ್ಯಾಸಿಸಲ್ಪಟ್ಟರು. ಆದರೆ ಅವರು ಅಲ್ಪಾವಧಿಯ, ವೇದನಾಮಯ, ಮತ್ತು ಅನೇಕಾವರ್ತಿ ನಿರೀಕ್ಷಾಹೀನ ಜೀವನವನ್ನು ನಡೆಸುತ್ತಾರೆ. ಯೋಬನು ತಿಳಿಸಿದಂತೆ, “ಸ್ತ್ರೀಯಲ್ಲಿ ಹುಟ್ಟಿದ ಮನುಷ್ಯನು ಅಲ್ಪಾಯುಷ್ಯನಾಗಿಯೂ ಕಳವಳದಿಂದ ತುಂಬಿದವನಾಗಿಯೂ” ಇದ್ದಾನೆ. (ಯೋಬ 14:1) ನಿಶ್ಚಯವಾಗಿಯೂ ವ್ಯರ್ಥತ್ವವೇ!

14, 15. (ಎ) ಮಾನವಕುಲದ ಮೇಲೆ ಯೆಹೋವನು ವಿಧಿಸಿದ ದಂಡನೆಯಲ್ಲಿ ನ್ಯಾಯದ ಯಾವ ರುಜುವಾತನ್ನು ನಾವು ಕಂಡುಕೊಳ್ಳುತ್ತೇವೆ? (ಬಿ) ಜಗತ್ತು ವ್ಯರ್ಥತ್ವಕ್ಕೆ ಒಳಪಡಿಸಲ್ಪಟ್ಟದ್ದು ಅದರ “ಸ್ವೇಚ್ಛೆಯಿಂದಲ್ಲ” ಎಂಬುದನ್ನು ಪೌಲನು ಏಕೆ ಹೇಳುತ್ತಾನೆ?

14 ಈಗ ನಾವು ಮುಖ್ಯ ಪ್ರಶ್ನೆಗೆ ಬರುತ್ತೇವೆ: “ಸರ್ವಲೋಕಕ್ಕೆ ನ್ಯಾಯತೀರಿಸುವವನು” ಮಾನವಕುಲವನ್ನು ಈ ಯಾತನಾಮಯ, ಆಶಾಭಂಗಗೊಳಿಸುವ ಪರಿಸ್ಥಿತಿಗೆ ಯಾಕೆ ಒಳಪಡಿಸಿದನು? (ಆದಿಕಾಂಡ 18:25) ಆತನು ಹೀಗೆ ಮಾಡುವುದು ನ್ಯಾಯವಾಗಿತ್ತೋ? ನಮ್ಮ ಮೊದಲ ಹೆತ್ತವರು ಏನು ಮಾಡಿದರೆಂಬುದನ್ನು ಜ್ಞಾಪಕಕ್ಕೆ ತಂದುಕೊಳ್ಳಿ. ದೇವರ ವಿರುದ್ಧವಾಗಿ ದಂಗೆಯೇಳುವ ಮೂಲಕ, ಯೆಹೋವನ ಪರಮಾಧಿಕಾರಕ್ಕೆ ಒಂದು ವ್ಯಾಪಕವಾದ ಸವಾಲನ್ನೊಡ್ಡಿದ ಸೈತಾನನ ಪಕ್ಷವನ್ನು ಅವರು ವಹಿಸಿದರು. ಯೆಹೋವನಿಲ್ಲದೆಯೇ ಒಬ್ಬ ದಂಗೆಕೋರ ಆತ್ಮಜೀವಿಯ ಮಾರ್ಗದರ್ಶನದ ಕೆಳಗೆ ತನ್ನನ್ನೇ ನಡೆಸಿಕೊಳ್ಳುತ್ತಾ ಮಾನವನು ಸುಖವಾಗಿರಬಲ್ಲನು ಎಂಬ ಪ್ರತಿಪಾದನೆಯನ್ನು ಅವರು ತಮ್ಮ ಕೃತ್ಯಗಳ ಮೂಲಕ ಸಮರ್ಥಿಸಿದರು. ಆ ದಂಗೆಕೋರರಿಗೆ ಶಿಕ್ಷೆಯನ್ನು ವಿಧಿಸುವ ಮೂಲಕ ಯೆಹೋವನು ಕಾರ್ಯತಃ ಆ ದಂಗೆಕೋರರು ಏನನ್ನು ಪಡೆದುಕೊಳ್ಳಲು ಇಷ್ಟಪಟ್ಟರೋ ಅದನ್ನೇ ಕೊಟ್ಟನು. ಸೈತಾನನ ಪ್ರಭಾವದ ಕೆಳಗೆ ಮಾನವನು ತನ್ನನ್ನೇ ನಡಿಸಿಕೊಳ್ಳುವ ಅನುಮತಿಯನ್ನು ಆತನು ಕೊಟ್ಟನು. ಈ ಪರಿಸ್ಥಿತಿಗಳ ಕೆಳಗೆ, ಮಾನವಕುಲಕ್ಕೆ ಒಂದು ನಿರೀಕ್ಷೆಯನ್ನು ಕೊಡುತ್ತಾ ಅದನ್ನು ವ್ಯರ್ಥತ್ವಕ್ಕೆ ಒಳಪಡಿಸುವುದಕ್ಕಿಂತ ನ್ಯಾಯೋಚಿತವಾದ ತೀರ್ಮಾನವು ಯಾವುದಿದ್ದೀತು?

15 ವಾಸ್ತವದಲ್ಲಿ, ಇದು ಸಂಭವಿಸಿದ್ದು ಜಗತ್ತಿನ “ಸ್ವೇಚ್ಛೆಯಿಂದಲ್ಲ.” ಏಕೆಂದರೆ ನಾವು ಯಾವುದೇ ಆಯ್ಕೆಯಿಲ್ಲದವರಾಗಿ ಪಾಪ ಮರಣಗಳ ದಾಸತ್ವದಲ್ಲಿ ಜನಿಸುತ್ತೇವೆ. ಆದರೆ ಯೆಹೋವನು ಕರುಣೆಯಿಂದ ಆದಾಮಹವ್ವರು ತಮ್ಮ ಜೀವಿತದ ಉಳಿದ ವರ್ಷಗಳನ್ನು ಜೀವಿಸುವಂತೆ ಮತ್ತು ಸಂತಾನವನ್ನು ಉತ್ಪತ್ತಿಸುವಂತೆ ಅನುಮತಿಸಿದನು. ಅವರ ವಂಶಸ್ಥರಾಗಿರುವ ನಾವು ಪಾಪ ಮತ್ತು ಮರಣಗಳ ವ್ಯರ್ಥತ್ವಕ್ಕೆ ಒಳಪಡಿಸಲ್ಪಟ್ಟಿರುವುದಾದರೂ, ಆದಾಮಹವ್ವರು ಯಾವುದನ್ನು ಮಾಡಲು ತಪ್ಪಿಹೋದರೋ ಅದನ್ನು ಮಾಡುವ ಅವಕಾಶ ನಮ್ಮ ಮುಂದೆ ಇದೆ. ನಾವು ಯೆಹೋವನಿಗೆ ಕಿವಿಗೊಡಬಲ್ಲೆವು ಮತ್ತು ಆತನ ಪರಮಾಧಿಕಾರವು ನೀತಿಯುಳ್ಳದ್ದೂ ಪರಿಪೂರ್ಣವಾದದ್ದೂ ಆಗಿದೆ, ಆದರೆ ಯೆಹೋವನಿಂದ ವಿಮುಕ್ತವಾದ ಮಾನವಾಳಿಕೆಯು ನೋವು, ನಿರಾಶೆ, ಮತ್ತು ವ್ಯರ್ಥತ್ವವನ್ನು ಬಿಟ್ಟರೆ ಬೇರೆ ಯಾವುದನ್ನೂ ಕೊಡದು ಎಂಬುದನ್ನು ಕಲಿಯಬಲ್ಲೆವು. (ಯೆರೆಮೀಯ 10:23; ಪ್ರಕಟನೆ 4:11) ಮತ್ತು ಸೈತಾನನ ಪ್ರಭಾವವು ಕೇವಲ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸುತ್ತದೆ. ಇದು ಸತ್ಯವೆಂದು ಮಾನವ ಇತಿಹಾಸವು ರುಜುಪಡಿಸುತ್ತದೆ.​—ಪ್ರಸಂಗಿ 8:9.

16. (ಎ) ನಾವು ಇಂದು ಲೋಕದಲ್ಲಿ ನೋಡುತ್ತಿರುವ ಕಷ್ಟಾನುಭವಕ್ಕೆ ಯೆಹೋವನು ಕಾರಣನಲ್ಲ ಎಂಬುದರ ವಿಷಯದಲ್ಲಿ ನಾವು ಏಕೆ ನಿಶ್ಚಿತರಾಗಿರಸಾಧ್ಯವಿದೆ? (ಬಿ) ನಂಬಿಗಸ್ತ ಜನರಿಗೆ ಯಾವ ನಿರೀಕ್ಷೆಯನ್ನು ಯೆಹೋವನು ಪ್ರೀತಿಯಿಂದ ಏರ್ಪಡಿಸಿದ್ದಾನೆ?

16 ಮಾನವಕುಲವನ್ನು ವ್ಯರ್ಥತ್ವಕ್ಕೆ ಒಳಪಡಿಸಲು ಯೆಹೋವನಿಗೆ ನ್ಯಾಯವಾದ ಕಾರಣಗಳಿದ್ದವು ಎಂಬುದು ಸ್ಪಷ್ಟ. ಆದರೆ ಇದು, ಇಂದು ನಮ್ಮೆಲ್ಲರನ್ನೂ ಬಾಧಿಸುತ್ತಿರುವ ವ್ಯರ್ಥತ್ವ ಮತ್ತು ಕಷ್ಟಾನುಭವಕ್ಕೆ ಯೆಹೋವನೇ ಕಾರಣನು ಎಂಬುದನ್ನು ಅರ್ಥೈಸುತ್ತದೋ? ಒಬ್ಬ ಅಪರಾಧಿಯ ಮೇಲೆ ನ್ಯಾಯವಾದ ತೀರ್ಪನ್ನು ವಿಧಿಸುವಂಥ ಒಬ್ಬ ನ್ಯಾಯಾಧೀಶನ ಕುರಿತು ಯೋಚಿಸಿರಿ. ತನ್ನ ಶಿಕ್ಷೆಯ ಅವಧಿಯಲ್ಲಿ ಖೈದಿಯು ಬಹಳ ಕಷ್ಟವನ್ನು ಅನುಭವಿಸಬಹುದು, ಆದರೆ ತನ್ನ ಕಷ್ಟಾನುಭವಕ್ಕೆ ನ್ಯಾಯಾಧೀಶನೇ ಕಾರಣನು ಎಂದು ಅವನು ಹೇಳುವುದು ನ್ಯಾಯೋಚಿತವಾಗಿರುವುದೋ? ಖಂಡಿತವಾಗಿಯೂ ಇಲ್ಲ! ಮಾತ್ರವಲ್ಲದೆ, ಯೆಹೋವನು ಎಂದಿಗೂ ದುಷ್ಟತ್ವಕ್ಕೆ ಮೂಲನಾಗಿರುವುದಿಲ್ಲ. “ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ,” ಎಂದು ಯಾಕೋಬ 1:13 ಹೇಳುತ್ತದೆ. ಯೆಹೋವನು ಈ ದಂಡನೆಯನ್ನು ವಿಧಿಸುವಾಗ ‘ಒಂದು ನಿರೀಕ್ಷೆಯನ್ನು’ ಆಧಾರವಾಗಿಟ್ಟುಕೊಂಡು ಹಾಗೆ ಮಾಡಿದನು ಎಂಬುದನ್ನೂ ಮರೆಯದಿರೋಣ. ಆದಾಮಹವ್ವರ ನಂಬಿಗಸ್ತ ವಂಶಸ್ಥರು ವ್ಯರ್ಥತ್ವದ ಅಂತ್ಯವನ್ನು ಕಾಣುವಂತೆಯೂ “ದೇವರ ಮಕ್ಕಳ ಮಹಿಮೆಯುಳ್ಳ ವಿಮೋಚನೆಯಲ್ಲಿ” ಆನಂದಿಸುವಂತೆಯೂ ಆತನು ಪ್ರೀತಿಯಿಂದ ಏರ್ಪಾಡುಗಳನ್ನು ಮಾಡಿದ್ದಾನೆ. ಯುಗಯುಗಾಂತರಗಳಿಗೂ ಇಡೀ ಜಗತ್ತು ಪುನಃ ಒಮ್ಮೆ ವ್ಯರ್ಥತ್ವವೆಂಬ ಯಾತನಾಮಯ ಸ್ಥಿತಿಗಿಳಿಯಬಹುದು ಎಂದು ನಂಬಿಗಸ್ತ ಮಾನವರು ಚಿಂತಿಸಬೇಕಾಗಿರುವುದಿಲ್ಲ. ಈ ಸನ್ನಿವೇಶದ ಯೆಹೋವನ ನ್ಯಾಯವಾದ ನಿರ್ವಹಣೆಯು, ಎಲ್ಲಾ ಕಾಲಕ್ಕೂ ಆತನ ಪರಮಾಧಿಕಾರದ ನ್ಯಾಯೋಚಿತತೆಯನ್ನು ಸ್ಥಾಪಿಸಿರುವುದು.​—ಯೆಶಾಯ 25:8.

17. ಇಂದು ಲೋಕದಲ್ಲಿರುವ ಕಷ್ಟಾನುಭವದ ಕಾರಣಗಳನ್ನು ಮರುಪರಿಶೀಲಿಸುವ ಮೂಲಕ ನಾವು ಹೇಗೆ ಪ್ರಭಾವಿಸಲ್ಪಡಬೇಕು?

17 ಮಾನವ ಕಷ್ಟಾನುಭವಕ್ಕಾಗಿರುವ ಈ ಕಾರಣಗಳನ್ನು ನಾವು ಪರಿಶೀಲಿಸುವಾಗ, ದುಷ್ಟತ್ವದ ಕುರಿತು ಯೆಹೋವನ ಮೇಲೆ ತಪ್ಪುಹೊರಿಸುವುದಕ್ಕಾಗಲಿ ಅಥವಾ ಆತನಲ್ಲಿನ ನಮ್ಮ ಭರವಸವನ್ನು ಕಳೆದುಕೊಳ್ಳುವುದಕ್ಕಾಗಲಿ ಯಾವುದೇ ಆಧಾರವನ್ನು ನಾವು ಕಂಡುಕೊಳ್ಳುತ್ತೇವೋ? ಅದಕ್ಕೆ ವ್ಯತಿರಿಕ್ತವಾಗಿ, ಈ ರೀತಿಯ ಒಂದು ಅಧ್ಯಯನವು ಮೋಶೆಯ ಈ ಮಾತುಗಳನ್ನು ನಾವು ಪ್ರತಿಧ್ವನಿಸುವಂತೆ ಮಾಡುತ್ತದೆ: “ನಮಗೆ ಶರಣನಾದ ದೇವರು ಮಾಡುವ ಕಾರ್ಯದಲ್ಲಿ ಯಾವ ಕುಂದೂ ಇಲ್ಲ; ಆತನು ನಡಿಸುವದೆಲ್ಲಾ ನ್ಯಾಯ; ಆತನು ನಿರ್ವಂಚಕನಾದ ನಂಬಿಗಸ್ತ ದೇವರು, ನೀತಿಯುಳ್ಳವನೂ ಯಥಾರ್ಥನೂ ಆಗಿದ್ದಾನೆ.” (ಧರ್ಮೋಪದೇಶಕಾಂಡ 32:4) ಈ ವಿಚಾರಗಳ ಕುರಿತು ಮನನಮಾಡುವ ಮೂಲಕ, ನಾವು ಅವುಗಳ ಅರ್ಥವಿವರಣೆಯನ್ನು ಆಗಿಂದಾಗ್ಗೆ ಮರುಪರಿಶೀಲಿಸುತ್ತಾ ಇರೋಣ. ಹೀಗೆ ಮಾಡುವುದಾದರೆ, ನಾವು ಶೋಧನೆಗಳನ್ನು ಎದುರಿಸುವಾಗ, ಸೈತಾನನು ನಮ್ಮ ಮನಸ್ಸುಗಳಲ್ಲಿ ಸಂದೇಹದ ಬೀಜಗಳನ್ನು ಬಿತ್ತುವುದಕ್ಕೆ ಮಾಡುವ ಪ್ರಯತ್ನಗಳನ್ನು ನಾವು ಪ್ರತಿರೋಧಿಸುವೆವು. ಆದರೆ ಆರಂಭದಲ್ಲಿ ತಿಳಿಸಲ್ಪಟ್ಟ ಎರಡನೆಯ ಹೆಜ್ಜೆಯ ಕುರಿತಾಗಿ ಏನು? ಯೆಹೋವನಲ್ಲಿ ಭರವಸೆಯಿಡುವುದರಲ್ಲಿ ಏನು ಒಳಗೂಡಿದೆ?

ಯೆಹೋವನಲ್ಲಿ ಭರವಸೆಯಿಡುವುದರ ಅರ್ಥ

18, 19. ಯೆಹೋವನಲ್ಲಿ ಭರವಸೆಯಿಡುವಂತೆ ಯಾವ ಮಾತುಗಳೊಂದಿಗೆ ಬೈಬಲು ನಮ್ಮನ್ನು ಪ್ರೋತ್ಸಾಹಿಸುತ್ತದೆ, ಆದರೆ ಈ ಸಂಬಂಧದಲ್ಲಿ ಕೆಲವರಿಗೆ ಯಾವ ತಪ್ಪು ಕಲ್ಪನೆಗಳಿವೆ?

18 ದೇವರ ವಾಕ್ಯವು ನಮ್ಮನ್ನು ಉತ್ತೇಜಿಸುವುದು: “ಸ್ವಬುದ್ಧಿಯನ್ನೇ ಆಧಾರಮಾಡಿಕೊಳ್ಳದೆ ಪೂರ್ಣಮನಸ್ಸಿನಿಂದ ಯೆಹೋವನಲ್ಲಿ ಭರವಿಸವಿಡು. ನಿನ್ನ ಎಲ್ಲಾ ನಡವಳಿಯಲ್ಲಿ ಆತನ ಚಿತ್ತಕ್ಕೆ ವಿಧೇಯನಾಗಿರು; ಆತನೇ ನಿನ್ನ ಮಾರ್ಗಗಳನ್ನು ಸರಾಗಮಾಡುವನು.” (ಜ್ಞಾನೋಕ್ತಿ 3:5, 6) ಇವು ಮನಮುಟ್ಟುವ, ಪುನರಾಶ್ವಾಸನಾದಾಯಕ ಮಾತುಗಳಾಗಿವೆ. ಈ ಇಡೀ ವಿಶ್ವದಲ್ಲೇ ನಮ್ಮ ಪ್ರೀತಿಯ ಸ್ವರ್ಗೀಯ ತಂದೆಗಿಂತ ಹೆಚ್ಚು ಭರವಸಾರ್ಹನು ಬೇರೆ ಯಾರೂ ಇಲ್ಲ ಎಂಬುದು ನಿಶ್ಚಿತ. ಹಾಗಿದ್ದರೂ, ಜ್ಞಾನೋಕ್ತಿ ಪುಸ್ತಕದಲ್ಲಿರುವ ಆ ಮಾತುಗಳನ್ನು ಓದುವುದು ಸುಲಭ, ಆದರೆ ಕಾರ್ಯರೂಪಕ್ಕೆ ಹಾಕುವುದು ಕಷ್ಟ.

19 ಯೆಹೋವನಲ್ಲಿ ಭರವಸೆಯಿಡುವುದು ಏನನ್ನು ಅರ್ಥೈಸುತ್ತದೆ ಎಂಬ ವಿಚಾರದಲ್ಲಿ ಅನೇಕರಿಗೆ ತಪ್ಪು ಕಲ್ಪನೆಗಳಿವೆ. ಈ ಭರವಸೆಯು ಕೇವಲ ಒಂದು ಅನಿಸಿಕೆಯಾಗಿದೆ, ಹೃದಯದಿಂದ ಸಹಜವಾಗಿಯೇ ಹೊರಹೊಮ್ಮಬೇಕಾದ ಒಂದು ರಮ್ಯ ಭಾವನೆಯಾಗಿದೆ ಎಂದು ಕೆಲವರು ನೆನಸುತ್ತಾರೆ. ಇತರರಿಗೆ ದೇವರಲ್ಲಿ ಭರವಸೆಯಿಡುವುದೆಂದರೆ, ಆತನು ನಮ್ಮನ್ನು ಪ್ರತಿಯೊಂದು ಕಷ್ಟದಿಂದಲೂ ಸಂರಕ್ಷಿಸುವನು, ನಮ್ಮ ಪ್ರತಿ ಸಮಸ್ಯೆಯನ್ನು ಇತ್ಯರ್ಥಗೊಳಿಸುವನು, ಮತ್ತು ನಾವು ಹೇಗೆ ಅಪೇಕ್ಷಿಸುತ್ತೇವೋ ಹಾಗೆ ಪ್ರತಿದಿನದ ಕಷ್ಟಗಳನ್ನು ನಿವಾರಿಸುವನು, ಮತ್ತು ಇದನ್ನು ಆಗಿಂದಾಗಲೇ ಮಾಡುವನೆಂಬುದನ್ನು ಅರ್ಥೈಸುತ್ತಿರುವಂತೆ ತೋರುತ್ತದೆ. ಆದರೆ ಈ ರೀತಿಯ ಅಭಿಪ್ರಾಯಗಳಿಗೆ ಯಾವುದೇ ಆಧಾರವಿರುವುದಿಲ್ಲ. ಭರವಸೆಯೆಂಬುದು ಕೇವಲ ಒಂದು ಅನಿಸಿಕೆಗಿಂತ ಹೆಚ್ಚಾದದ್ದಾಗಿದೆ, ಮತ್ತು ಅದು ಅವಾಸ್ತವಿಕವಾದದ್ದಲ್ಲ. ವಯಸ್ಕರ ವಿಷಯದಲ್ಲಿ ಹೇಳುವುದಾದರೆ, ಪ್ರಜ್ಞಾಪೂರ್ವಕವಾದ, ವಿವೇಚನಾಭರಿತ ನಿರ್ಣಯಗಳನ್ನು ಮಾಡುವುದು ಈ ಭರವಸೆಯಲ್ಲಿ ಒಳಗೂಡಿದೆ.

20, 21. ಯೆಹೋವನಲ್ಲಿ ಭರವಸೆಯಿಡುವುದರಲ್ಲಿ ಏನು ಒಳಗೂಡಿದೆ? ದೃಷ್ಟಾಂತಿಸಿರಿ.

20ಜ್ಞಾನೋಕ್ತಿ 3:5 ಏನು ಹೇಳುತ್ತದೆಂಬುದನ್ನು ಪುನಃ ಗಮನಿಸಿರಿ. ಅದು ಯೆಹೋವನಲ್ಲಿ ಭರವಸವಿಡುವುದನ್ನು ನಮ್ಮ ಸ್ವಬುದ್ಧಿಯನ್ನು ಆಧಾರಮಾಡಿಕೊಳ್ಳುವುದರಿಂದ ವ್ಯತ್ಯಾಸಪಡಿಸಿ ತೋರಿಸುತ್ತದೆ, ಮತ್ತು ಹೀಗೆ ನಾವು ಇವೆರಡನ್ನೂ ಒಟ್ಟಿಗೆ ಮಾಡಸಾಧ್ಯವಿಲ್ಲ ಎಂಬುದನ್ನು ತೋರಿಸುತ್ತದೆ. ಇದರ ಅರ್ಥ, ನಾವು ನಮ್ಮ ತಿಳಿವಳಿಕೆಯ ಶಕ್ತಿಗಳನ್ನು ಉಪಯೋಗಿಸುವ ಅನುಮತಿಯು ನಮಗೆ ಕೊಡಲ್ಪಟ್ಟಿಲ್ಲ ಎಂದಾಗಿದೆಯೋ? ಇಲ್ಲ, ಏಕೆಂದರೆ ನಮಗೆ ಈ ಶಕ್ತಿಗಳನ್ನು ಕೊಟ್ಟಿರುವ ಯೆಹೋವನು, ನಾವು ಅವುಗಳನ್ನು ಆತನನ್ನು ಸೇವಿಸುವುದರಲ್ಲಿ ಉಪಯೋಗಿಸಬೇಕೆಂದು ಅಪೇಕ್ಷಿಸುತ್ತಾನೆ. (ರೋಮಾಪುರ 12:1) ಆದರೆ ತೀರ್ಮಾನಗಳನ್ನು ಮಾಡುವಾಗ ನಾವು ಯಾವುದನ್ನು ನಮ್ಮ ಆಧಾರವನ್ನಾಗಿ ಮಾಡಿಕೊಳ್ಳುತ್ತೇವೆ, ಅಥವಾ ಯಾವುದರ ಮೇಲೆ ಆತುಕೊಳ್ಳುತ್ತೇವೆ? ನಮ್ಮ ಆಲೋಚನೆಯು ಯೆಹೋವನ ಆಲೋಚನೆಗೆ ಹೊಂದಿಕೆಯಲ್ಲಿ ಇಲ್ಲದಿರುವುದಾದರೆ, ಆತನ ವಿವೇಕವು ನಮ್ಮದಕ್ಕಿಂತ ಎಷ್ಟೋ ಶ್ರೇಷ್ಠವಾಗಿರುವುದರಿಂದ ಅದನ್ನು ಸ್ವೀಕರಿಸುತ್ತೇವೋ? (ಯೆಶಾಯ 55:8, 9) ಯೆಹೋವನಲ್ಲಿ ಭರವಸೆಯಿಡುವುದರ ಅರ್ಥ, ನಮ್ಮ ಆಲೋಚನೆಯನ್ನು ಆತನ ಆಲೋಚನೆಯು ಮಾರ್ಗದರ್ಶಿಸುವಂತೆ ಬಿಡುವುದೇ ಆಗಿದೆ.

21 ದೃಷ್ಟಾಂತಕ್ಕಾಗಿ: ಒಂದು ಕಾರಿನ ಹಿಂದಿನ ಸೀಟ್‌ನಲ್ಲಿ ಕುಳಿತಿರುವ ಒಂದು ಮಗುವಿನ ಕುರಿತು ಯೋಚಿಸಿರಿ. ಅವನ ಹೆತ್ತವರು ಕಾರ್‌ನ ಮುಂದಿನ ಸೀಟ್‌ನಲ್ಲಿದ್ದಾರೆ. ಅವನ ತಂದೆಯು ಗಾಡಿಯನ್ನು ಓಡಿಸುತ್ತಿದ್ದಾನೆ. ಪ್ರಯಾಣದ ಸಮಯದಲ್ಲಿ ಸಮಸ್ಯೆಗಳು ಎದುರಾಗುವಾಗ, ಉದಾಹರಣೆಗೆ ಸರಿಯಾದ ಮಾರ್ಗ ಯಾವುದೆಂಬುದರ ಕುರಿತು ಅನಿಶ್ಚಿತತೆ ಇರುವಾಗ ಅಥವಾ ಪ್ರಾಯಶಃ ಹವಾಮಾನ ಇಲ್ಲವೆ ರಸ್ತೆಯ ಸ್ಥಿತಿಯಿಂದಾಗಿ ಸಮಸ್ಯೆ ಇರುವಾಗ, ವಿಧೇಯ ಮತ್ತು ಹೆತ್ತವರಲ್ಲಿ ಭರವಸೆಯನ್ನಿಡುವ ಮಗನು ಹೇಗೆ ಪ್ರತಿಕ್ರಿಯಿಸುವನು? ಏನು ಮಾಡಬೇಕೆಂಬ ಸೂಚನೆಗಳನ್ನು ಹಿಂದಿನ ಸೀಟ್‌ನಿಂದ ಕೂಗಿ ಹೇಳುತ್ತಾ, ತನ್ನ ತಂದೆ ಕಾರನ್ನು ಹೇಗೆ ಓಡಿಸಬೇಕೆಂದು ಅವನು ಹೇಳುವನೋ? ತನ್ನ ಹೆತ್ತವರ ತೀರ್ಮಾನಗಳನ್ನು ಅವನು ಪ್ರಶ್ನಿಸುವನೋ ಅಥವಾ ಸೀಟ್‌ ಬೆಲ್ಟನ್ನು ಧರಿಸಿರುವಂತೆ ಹೇಳಲ್ಪಡುವಾಗ ಅವನು ಅದಕ್ಕೆ ಪ್ರತಿಭಟಿಸುವನೋ? ಇಲ್ಲ, ಅವನ ಹೆತ್ತವರು ಅಪರಿಪೂರ್ಣರಾಗಿದ್ದರೂ, ಈ ರೀತಿಯ ವಿಚಾರಗಳನ್ನು ನಿರ್ವಹಿಸುವ ವಿಷಯದಲ್ಲಿ ಅವನು ಸಹಜವಾಗಿ ಅವರಲ್ಲಿ ಭರವಸೆಯಿಡುವನು. ಯೆಹೋವನಾದರೋ ಒಬ್ಬ ಪರಿಪೂರ್ಣ ತಂದೆಯಾಗಿದ್ದಾನೆ. ಆದುದರಿಂದ, ನಾವು ವಿಶೇಷವಾಗಿ ಪಂಥಾಹ್ವಾನದಾಯಕ ಪರಿಸ್ಥಿತಿಗಳನ್ನು ಎದುರಿಸುವಾಗ ಆತನಲ್ಲಿ ಅಚಲವಾದ ಭರವಸೆಯನ್ನಿಡಬೇಕಲ್ಲವೇ?​—ಯೆಶಾಯ 30:21.

22, 23. (ಎ) ನಾವು ಸಮಸ್ಯೆಗಳನ್ನು ಎದುರಿಸುವಾಗ ಯೆಹೋವನಲ್ಲಿ ಏಕೆ ಭರವಸೆಯಿಡಬೇಕು, ಮತ್ತು ನಾವು ಇದನ್ನು ಹೇಗೆ ಮಾಡಬಹುದು? (ಬಿ) ಮುಂದಿನ ಲೇಖನದಲ್ಲಿ ಏನು ಚರ್ಚಿಸಲ್ಪಡುವುದು?

22 ಆದರೂ, ಜ್ಞಾನೋಕ್ತಿ 3:6 (NW) ನಾವು ಕೇವಲ ಕಷ್ಟಕರ ಪರಿಸ್ಥಿತಿಗಳನ್ನು ಎದುರಿಸುವಾಗ ಮಾತ್ರವಲ್ಲ ‘ನಮ್ಮ ಎಲ್ಲಾ ನಡವಳಿಯಲ್ಲಿ ಯೆಹೋವನನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳಬೇಕು’ ಎಂದು ಸೂಚಿಸುತ್ತದೆ. ಆದುದರಿಂದ ನಾವು ದೈನಂದಿನ ಜೀವನದಲ್ಲಿ ಮಾಡುವ ತೀರ್ಮಾನಗಳು ಯೆಹೋವನಲ್ಲಿರುವ ನಮ್ಮ ಭರವಸವನ್ನು ಪ್ರತಿಬಿಂಬಿಸಬೇಕು. ಸಮಸ್ಯೆಗಳೇಳುವಾಗ ನಾವು ಹತಾಶರಾಗಬಾರದು, ಗಾಬರಿಗೊಳ್ಳಬಾರದು ಅಥವಾ ವಿಷಯಗಳನ್ನು ಅತ್ಯುತ್ತಮ ರೀತಿಯಲ್ಲಿ ನಿರ್ವಹಿಸುವುದರ ಬಗ್ಗೆ ಯೆಹೋವನು ಕೊಡುವ ಮಾರ್ಗದರ್ಶನವನ್ನು ಪ್ರತಿರೋಧಿಸಬಾರದು. ನಾವು ಪರೀಕ್ಷೆಗಳನ್ನು, ಯೆಹೋವನ ಪರಮಾಧಿಕಾರವನ್ನು ಸಮರ್ಥಿಸಲು ನೆರವಾಗುವ, ಸೈತಾನನನ್ನು ಸುಳ್ಳುಗಾರನನ್ನಾಗಿ ರುಜುಪಡಿಸಲು ಸಹಾಯಮಾಡುವ, ಮತ್ತು ಯೆಹೋವನನ್ನು ಮೆಚ್ಚಿಸುವ ವಿಧೇಯತೆ ಹಾಗೂ ಇತರ ಗುಣಗಳನ್ನು ಬೆಳೆಸಿಕೊಳ್ಳುವ ಸದವಕಾಶಗಳೋಪಾದಿ ವೀಕ್ಷಿಸಬೇಕು.​—ಇಬ್ರಿಯ 5:7, 8.

23 ನಮ್ಮ ಮುಂದೆ ಯಾವುದೇ ಅಡಚಣೆಗಳು ಎದುರಾಗುವುದಾದರೂ ನಾವು ಯೆಹೋವನಲ್ಲಿರುವ ನಮ್ಮ ಭರವಸೆಯನ್ನು ತೋರಿಸಬಲ್ಲೆವು. ನಾವಿದನ್ನು ನಮ್ಮ ಪ್ರಾರ್ಥನೆಗಳಲ್ಲಿ ಮತ್ತು ಮಾರ್ಗದರ್ಶನಕ್ಕಾಗಿ ಯೆಹೋವನ ವಾಕ್ಯ ಹಾಗೂ ಆತನ ಸಂಸ್ಥೆಯ ಕಡೆಗೆ ಹೇಗೆ ನೋಡುತ್ತೇವೋ ಅದರಿಂದ ತೋರಿಸಿಕೊಡುತ್ತೇವೆ. ಆದರೂ, ಇಂದಿನ ಲೋಕದಲ್ಲಿ ಏಳುವ ಸಮಸ್ಯೆಗಳನ್ನು ಎದುರಿಸುವಾಗ ನಾವು ಯೆಹೋವನಲ್ಲಿನ ಭರವಸೆಯನ್ನು ನಿರ್ದಿಷ್ಟವಾಗಿ ಹೇಗೆ ಪ್ರದರ್ಶಿಸಬಲ್ಲೆವು? ನಮ್ಮ ಮುಂದಿನ ಲೇಖನವು ಈ ವಿಚಾರವನ್ನು ಸಂಬೋಧಿಸುವುದು.

[ಪಾದಟಿಪ್ಪಣಿ]

^ ಪ್ಯಾರ. 13 “ವ್ಯರ್ಥತ್ವ”ಕ್ಕೆ ಸೂಚಿಸಲು ಪೌಲನು ಬಳಸಿದಂಥ ಪದವು, ಪ್ರಸಂಗಿ ಪುಸ್ತಕದಲ್ಲಿ​—‘ಸಮಸ್ತವೂ ವ್ಯರ್ಥ!’ ಎಂಬ ಅಭಿವ್ಯಕ್ತಿಯಲ್ಲಿರುವಂತೆ​—ಸೊಲೊಮೋನನು ಪದೇ ಪದೇ ಉಪಯೋಗಿಸಿದಂಥ ಅಭಿವ್ಯಕ್ತಿಯನ್ನು ತರ್ಜುಮೆಮಾಡಲಿಕ್ಕಾಗಿ ಗ್ರೀಕ್‌ ಸೆಪ್ಟೂಅಜಂಟ್‌ನಲ್ಲಿ ಉಪಯೋಗಿಸಿದಂಥ ಅದೇ ಪದವಾಗಿತ್ತು.​—ಪ್ರಸಂಗಿ 1:2, 14; 2:11, 17; 3:19; 12:8.

ನೀವು ಹೇಗೆ ಉತ್ತರಿಸುವಿರಿ?

• ದಾವೀದನು ಯೆಹೋವನನ್ನು ತನ್ನ ಭರವಸವನ್ನಾಗಿ ಮಾಡಿಕೊಂಡಿದ್ದನು ಎಂಬುದನ್ನು ಅವನು ಹೇಗೆ ತೋರಿಸಿದನು?

• ಇಂದು ಮಾನವ ಕಷ್ಟಾನುಭವಕ್ಕಾಗಿರುವ ಮೂರು ಕಾರಣಗಳು ಯಾವುವು, ಮತ್ತು ಅವನ್ನು ಆಗಿಂದಾಗ್ಗೆ ಪರಿಶೀಲಿಸುವುದು ಏಕೆ ಉತ್ತಮವಾಗಿರುವುದು?

• ಯೆಹೋವನು ಮಾನವಕುಲದ ಮೇಲೆ ಯಾವ ದಂಡನೆಯನ್ನು ವಿಧಿಸಿದನು, ಮತ್ತು ಇದು ನ್ಯಾಯವಾದ ದಂಡನೆಯಾಗಿತ್ತು ಏಕೆ?

• ಯೆಹೋವನಲ್ಲಿ ಭರವಸೆಯಿಡುವುದರಲ್ಲಿ ಏನು ಒಳಗೂಡಿದೆ?

[ಅಧ್ಯಯನ ಪ್ರಶ್ನೆಗಳು]

[ಪುಟ 8ರಲ್ಲಿರುವ ಚಿತ್ರಗಳು]

ದಾವೀದನು ಯೆಹೋವನನ್ನು ತನ್ನ ಭರವಸವನ್ನಾಗಿ ಮಾಡಿಕೊಂಡನು

[ಪುಟ 10ರಲ್ಲಿರುವ ಚಿತ್ರ]

ಯೆರೂಸಲೇಮಿನಲ್ಲಿ ಒಂದು ಬುರುಜು ಕುಸಿದುಬಿದ್ದಾಗ, ಅದಕ್ಕೆ ಯೆಹೋವನು ಜವಾಬ್ದಾರನಾಗಿರಲಿಲ್ಲ ಎಂದು ಯೇಸು ತೋರಿಸಿದನು