ಮಾಹಿತಿ ಇರುವಲ್ಲಿ ಹೋಗಲು

ಪರಿವಿಡಿಗೆ ಹೋಗಲು

ಯೆಹೋವನು ಯಾವಾಗಲೂ ನಮ್ಮನ್ನು ಪರಿಪಾಲಿಸುತ್ತಾನೆ

ಯೆಹೋವನು ಯಾವಾಗಲೂ ನಮ್ಮನ್ನು ಪರಿಪಾಲಿಸುತ್ತಾನೆ

ಜೀವನ ಕಥೆ

ಯೆಹೋವನು ಯಾವಾಗಲೂ ನಮ್ಮನ್ನು ಪರಿಪಾಲಿಸುತ್ತಾನೆ

ಎನ್‌ಲೆಸ್‌ ಮಸ್ಯಾಂಗ್‌ ಅವರು ಹೇಳಿದಂತೆ

ಅದು ಇಸವಿ 1972 ಆಗಿತ್ತು. ಮಲಾವಿಯ ಯುವಕರ ಸಂಘದ ಸದಸ್ಯರಾಗಿದ್ದ ಹತ್ತು ಮಂದಿ ಯುವಕರು ನಮ್ಮ ಮನೆಯೊಳಗೆ ನುಗ್ಗಿ, ನನ್ನನ್ನು ಬಲವಂತವಾಗಿ ಹಿಡಿದು, ಸಮೀಪದಲ್ಲಿದ್ದ ಕಬ್ಬಿನ ಗದ್ದೆಗೆ ದರದರನೆ ಎಳೆದುಕೊಂಡು ಹೋದರು. ಅಲ್ಲಿ ಅವರು ನನ್ನನ್ನು ಚೆನ್ನಾಗಿ ಥಳಿಸಿ, ನಾನು ಸತ್ತುಹೋಗಿದ್ದೇನೆಂದು ನೆನಸಿ ನನ್ನನ್ನು ಅಲ್ಲೇ ಬಿಟ್ಟುಹೋದರು.

ಮಲಾವಿಯಲ್ಲಿದ್ದ ಅಸಂಖ್ಯಾತ ಯೆಹೋವನ ಸಾಕ್ಷಿಗಳು ಇಂಥ ಪಾಶವೀಯ ಆಕ್ರಮಣಗಳನ್ನು ಅನುಭವಿಸಿದರು. ಅವರು ಏಕೆ ಹಿಂಸಿಸಲ್ಪಟ್ಟರು? ತಾಳಿಕೊಳ್ಳುವಂತೆ ಯಾವುದು ಅವರಿಗೆ ಸಹಾಯಮಾಡಿತು? ದಯವಿಟ್ಟು ನನ್ನ ಕುಟುಂಬದ ಕಥೆಯನ್ನು ಹೇಳಲು ನನಗೆ ಅನುಮತಿ ನೀಡಿ.

ನಾನು ಇಸವಿ 1921ರ ಡಿಸೆಂಬರ್‌ 31ರಂದು ಧಾರ್ಮಿಕ ಕುಟುಂಬವೊಂದರಲ್ಲಿ ಜನಿಸಿದೆ. ನನ್ನ ತಂದೆಯವರು ಸೆಂಟ್ರಲ್‌ ಆಫ್ರಿಕನ್‌ ಪ್ರೆಸ್ಬಿಟೇರಿಯನ್‌ ಚರ್ಚಿನ ಒಬ್ಬ ಪಾಸ್ಟರರಾಗಿದ್ದರು. ನಾನು ಮಲಾವಿಯ ರಾಜಧಾನಿಯಾದ ಲಿಲಾಂಗ್ವೇಯ ಸಮೀಪದ ಒಂದು ಚಿಕ್ಕ ಪಟ್ಟಣವಾದ ಅಂಕೋಮ್‌ನಲ್ಲಿ ಬೆಳೆದೆ. ನಾನು 15 ವರ್ಷದವಳಾಗಿದ್ದಾಗ, ಇಮಾಸ್‌ ಮಸ್ಯಾಂಗ್‌ ಎಂಬವರ ಪತ್ನಿಯಾದೆ.

ನನ್ನ ತಂದೆಯ ಗೆಳೆಯರಾಗಿದ್ದ ಒಬ್ಬ ಪಾಸ್ಟರರು ಒಂದು ದಿನ ನಮ್ಮ ಮನೆಗೆ ಭೇಟಿ ನೀಡಿದರು. ಯೆಹೋವನ ಸಾಕ್ಷಿಗಳು ನಮ್ಮ ಮನೆಯ ಬಳಿ ವಾಸಿಸುತ್ತಿದ್ದದ್ದನ್ನು ಅವರು ಗಮನಿಸಿದ್ದರು ಮತ್ತು ನಾವು ಅವರ ಜೊತೆ ಸೇರಬಾರದೆಂದು ನಮಗೆ ಎಚ್ಚರಿಕೆ ನೀಡಿದರು. ಸಾಕ್ಷಿಗಳು ದೆವ್ವಹಿಡಿದವರಾಗಿದ್ದಾರೆ ಮತ್ತು ಒಂದುವೇಳೆ ನಾವು ಜಾಗರೂಕರಾಗಿರದಿರುವಲ್ಲಿ ನಮಗೂ ದೆವ್ವಹಿಡಿಯುವ ಸಾಧ್ಯತೆಯಿದೆ ಎಂದು ಅವರು ನಮಗೆ ಹೇಳಿದರು. ಆ ಎಚ್ಚರಿಕೆಯು ನಮ್ಮಲ್ಲಿ ಎಷ್ಟು ಭೀತಿಯನ್ನು ಉಂಟುಮಾಡಿತೆಂದರೆ, ಆ ಕೂಡಲೆ ನಾವು ಇನ್ನೊಂದು ಹಳ್ಳಿಗೆ ಸ್ಥಳಾಂತರಿಸಿದೆವು, ಮತ್ತು ಅಲ್ಲಿ ಇಮಾಸ್‌ರಿಗೆ ಒಬ್ಬ ಅಂಗಡಿಗಾರನ ಉದ್ಯೋಗ ಸಿಕ್ಕಿತು. ಆದರೆ ನಮ್ಮ ಹೊಸ ಮನೆಯ ಸಮೀಪವೂ ಯೆಹೋವನ ಸಾಕ್ಷಿಗಳು ಇದ್ದಾರೆ ಎಂಬುದು ನಮಗೆ ಬೇಗನೆ ಗೊತ್ತಾಯಿತು!

ಆದರೂ ಸ್ವಲ್ಪದರಲ್ಲೇ, ಇಮಾಸ್‌ರಿಗೆ ಬೈಬಲ್‌ನ ಬಗ್ಗೆ ಇದ್ದ ಆಳವಾದ ಪ್ರೀತಿಯು, ಸಾಕ್ಷಿಗಳಲ್ಲಿ ಒಬ್ಬರೊಂದಿಗೆ ಮಾತಾಡುವಂತೆ ಅವರನ್ನು ಪ್ರಚೋದಿಸಿತು. ತಮ್ಮ ಅನೇಕ ಪ್ರಶ್ನೆಗಳಿಗೆ ತೃಪ್ತಿಕರವಾದ ಉತ್ತರಗಳನ್ನು ಪಡೆದುಕೊಂಡ ಬಳಿಕ, ಇಮಾಸ್‌ ಆ ಸಾಕ್ಷಿಯೊಂದಿಗೆ ಬೈಬಲ್‌ ಅಧ್ಯಯನ ಮಾಡಲು ಒಪ್ಪಿಕೊಂಡರು. ಮೊದಮೊದಲು ಬೈಬಲ್‌ ಅಧ್ಯಯನವು ಇಮಾಸ್‌ ಕೆಲಸಮಾಡುತ್ತಿದ್ದ ಅಂಗಡಿಯಲ್ಲಿ ನಡೆಸಲ್ಪಡುತ್ತಿತ್ತು, ಆದರೆ ಸಮಯಾನಂತರ ಸಾಪ್ತಾಹಿಕ ಅಧ್ಯಯನವು ನಮ್ಮ ಮನೆಯಲ್ಲೇ ನಡೆಸಲ್ಪಟ್ಟಿತು. ಪ್ರತಿ ಬಾರಿ ಯೆಹೋವನ ಸಾಕ್ಷಿಗಳು ಮನೆಗೆ ಬಂದಾಗ ನಾನು ಹೊರಗೆ ಹೋಗುತ್ತಿದ್ದೆ, ಏಕೆಂದರೆ ನನಗೆ ಅವರನ್ನು ಕಂಡರೆ ಹೆದರಿಕೆಯಾಗುತ್ತಿತ್ತು. ಆದರೂ, ಇಮಾಸ್‌ ಮಾತ್ರ ಬೈಬಲ್‌ ಅಧ್ಯಯನವನ್ನು ಮುಂದುವರಿಸಿದರು. ಅವರು ಅಧ್ಯಯನವನ್ನು ಆರಂಭಿಸಿ ಆರು ತಿಂಗಳುಗಳು ಕಳೆದ ಬಳಿಕ, 1951ರ ಏಪ್ರಿಲ್‌ ತಿಂಗಳಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು. ಹೀಗಿದ್ದರೂ, ಅವರು ತಮ್ಮ ದೀಕ್ಷಾಸ್ನಾನದ ಕುರಿತು ನನಗೆ ಹೇಳಲೇ ಇಲ್ಲ, ಏಕೆಂದರೆ ಈ ಸುದ್ದಿಯು ನಮ್ಮ ವೈವಾಹಿಕ ಜೀವನವನ್ನು ಕೊನೆಗೊಳಿಸುವುದೆಂದು ಅವರು ಭಯಪಟ್ಟಿದ್ದರು.

ಕಷ್ಟಕರ ವಾರಗಳು

ಹೀಗಿರುವಾಗ ಒಂದು ದಿನ, ನನ್ನ ಗಂಡ ಒಬ್ಬ ಯೆಹೋವನ ಸಾಕ್ಷಿಯಾಗಿ ದೀಕ್ಷಾಸ್ನಾನ ಪಡೆದುಕೊಂಡಿದ್ದಾರೆ ಎಂದು ನನ್ನ ಗೆಳತಿಯಾದ ಇಲನ್‌ ಕಾಡ್ಸಾಲೆರೋ ನನಗೆ ಹೇಳಿದಳು. ನಾನು ಕೋಪದಿಂದ ಕುದಿಯತೊಡಗಿದೆ! ಆ ದಿನದಿಂದ ನಾನು ಅವರೊಂದಿಗೆ ಮಾತಾಡಲಿಲ್ಲ ಅಥವಾ ಅವರಿಗೋಸ್ಕರ ಅಡಿಗೆಯನ್ನೂ ಮಾಡಲಿಲ್ಲ. ಅಷ್ಟುಮಾತ್ರವಲ್ಲ, ನಮ್ಮ ಸಂಸ್ಕೃತಿಗನುಸಾರ, ಪತಿಯ ಸ್ನಾನಕ್ಕಾಗಿ ನೀರನ್ನು ತರುವುದು ಹಾಗೂ ಅದನ್ನು ಕಾಯಿಸುವುದು ಪತ್ನಿಯೊಬ್ಬಳ ಕರ್ತವ್ಯವಾಗಿ ಪರಿಗಣಿಸಲ್ಪಡುತ್ತಿತ್ತು. ಆದರೆ ಈಗ ನಾನು ಆ ಕೆಲಸವನ್ನೂ ನಿಲ್ಲಿಸಿಬಿಟ್ಟೆ.

ಈ ರೀತಿಯ ಉಪಚಾರವನ್ನು ಮೂರು ವಾರಗಳ ವರೆಗೆ ತಾಳಿಕೊಂಡ ಬಳಿಕ, ತಮ್ಮೊಂದಿಗೆ ಕುಳಿತು ಮಾತಾಡುವಂತೆ ಇಮಾಸ್‌ ದಯಾಪರ ರೀತಿಯಲ್ಲಿ ನನ್ನನ್ನು ಕೇಳಿಕೊಂಡರು. ಆಗ ಅವರು, ಒಬ್ಬ ಸಾಕ್ಷಿಯಾಗುವ ನಿರ್ಧಾರವನ್ನು ತಾನು ಏಕೆ ಮಾಡಿದೆ ಎಂಬುದನ್ನು ನನಗೆ ತಿಳಿಸಿದರು. ಅವರು 1 ಕೊರಿಂಥ 9:16ರಂಥ ಅನೇಕ ಶಾಸ್ತ್ರವಚನಗಳನ್ನು ಓದಿ ವಿವರಿಸಿದರು. ಇದರಿಂದ ನಾನು ತುಂಬ ಪ್ರಭಾವಿತಳಾದೆ ಮತ್ತು ಸುವಾರ್ತೆಯನ್ನು ಸಾರುವ ಕೆಲಸದಲ್ಲಿ ನಾನು ಸಹ ಭಾಗವಹಿಸಬೇಕು ಎಂದು ನನಗನಿಸಿತು. ಆದುದರಿಂದ ನಾನು ಯೆಹೋವನ ಸಾಕ್ಷಿಗಳೊಂದಿಗೆ ಬೈಬಲ್‌ ಅಧ್ಯಯನ ಮಾಡಲಾರಂಭಿಸಲು ನಿರ್ಧರಿಸಿದೆ. ನನ್ನ ಪ್ರೀತಿಯ ಪತಿಗಾಗಿ ಅದೇ ದಿನ ಸಾಯಂಕಾಲ ನಾನು ರುಚಿಯಾದ ಅಡಿಗೆಯನ್ನು ಮಾಡಿದೆ ಮತ್ತು ಇದು ಅವರನ್ನು ಬಹಳ ಸಂತೋಷಗೊಳಿಸಿತು.

ಕುಟುಂಬ ಹಾಗೂ ಸ್ನೇಹಿತರೊಂದಿಗೆ ಸತ್ಯವನ್ನು ಹಂಚಿಕೊಳ್ಳುವುದು

ನಾವು ಯೆಹೋವನ ಸಾಕ್ಷಿಗಳೊಂದಿಗೆ ಸಹವಾಸಮಾಡುತ್ತಿದ್ದೇವೆ ಎಂಬುದು ನಮ್ಮ ಹೆತ್ತವರ ಕಿವಿಗೆ ಬಿದ್ದಾಗ, ಅವರು ನಮ್ಮನ್ನು ತೀವ್ರವಾಗಿ ವಿರೋಧಿಸಿದರು. ನನ್ನ ಕುಟುಂಬವು ನಮಗೆ ಪತ್ರ ಬರೆದು, ಇನ್ನು ಮುಂದೆ ನೀವು ನಮ್ಮನ್ನು ಭೇಟಿಯಾಗಲು ಬರುವ ಅಗತ್ಯವಿಲ್ಲ ಎಂದು ತಿಳಿಸಿತು. ಅವರ ಈ ಪ್ರತಿಕ್ರಿಯೆಯು ನಮಗೆ ತುಂಬ ದುಃಖವನ್ನುಂಟುಮಾಡಿತು, ಆದರೂ ನಮಗೆ ಅನೇಕ ಆತ್ಮಿಕ ಸಹೋದರ ಸಹೋದರಿಯರು ಹಾಗೂ ತಂದೆತಾಯಂದಿರು ದೊರಕುವರೆಂಬ ಯೇಸುವಿನ ವಾಗ್ದಾನದಲ್ಲಿ ನಾವು ಭರವಸೆಯಿಟ್ಟೆವು.​—ಮತ್ತಾಯ 19:29.

ನಾನು ನನ್ನ ಬೈಬಲ್‌ ಅಧ್ಯಯನದಲ್ಲಿ ತ್ವರಿತಗತಿಯಿಂದ ಪ್ರಗತಿಯನ್ನು ಮಾಡಿದೆ ಮತ್ತು ನನ್ನ ಪತಿಯ ದೀಕ್ಷಾಸ್ನಾನವಾಗಿ ಕೇವಲ ಮೂರೂವರೆ ತಿಂಗಳುಗಳ ಬಳಿಕ, 1951ರ ಆಗಸ್ಟ್‌ ತಿಂಗಳಿನಲ್ಲಿ ನಾನು ದೀಕ್ಷಾಸ್ನಾನ ಪಡೆದುಕೊಂಡೆ. ನಾನು ನನ್ನ ಗೆಳತಿಯಾದ ಇಲನ್‌ಳೊಂದಿಗೆ ಸತ್ಯವನ್ನು ಹಂಚಿಕೊಳ್ಳಬೇಕು ಎಂಬ ಬಲವಾದ ಪ್ರಚೋದನೆ ನನಗಾಯಿತು. ಸಂತೋಷಕರವಾಗಿ, ಬೈಬಲ್‌ ಅಧ್ಯಯನ ಮಾಡುವಂತೆ ನಾನು ಅವಳನ್ನು ಕೇಳಿಕೊಂಡಾಗ ಅವಳು ಅದಕ್ಕೆ ಒಪ್ಪಿಕೊಂಡಳು. 1952ರ ಮೇ ತಿಂಗಳಿನಲ್ಲಿ ಇಲನ್‌ ದೀಕ್ಷಾಸ್ನಾನ ಪಡೆದುಕೊಂಡು, ನನ್ನ ಆತ್ಮಿಕ ಸಹೋದರಿಯಾದಳು; ಇದು ನಮ್ಮ ಸ್ನೇಹಬಂಧವನ್ನು ಇನ್ನಷ್ಟು ಬಲಗೊಳಿಸಿತು. ಈಗಲೂ ನಾವಿಬ್ಬರು ಅತಿ ಆಪ್ತ ಸ್ನೇಹಿತೆಯರಾಗಿದ್ದೇವೆ.

ಇಸವಿ 1954ರಲ್ಲಿ ಇಮಾಸ್‌ ಒಬ್ಬ ಸರ್ಕಿಟ್‌ ಮೇಲ್ವಿಚಾರಕರೋಪಾದಿ ಸಭೆಗಳನ್ನು ಸಂದರ್ಶಿಸುವ ನೇಮಕವನ್ನು ಪಡೆದರು. ಆ ಸಮಯದಷ್ಟಕ್ಕೆ ನಮಗೆ ಆರು ಮಕ್ಕಳಿದ್ದರು. ಆ ದಿನಗಳಲ್ಲಿ, ಒಂದು ಕುಟುಂಬವನ್ನು ಹೊಂದಿದ್ದ ಸಂಚಾರ ಮೇಲ್ವಿಚಾರಕನೊಬ್ಬನು ಒಂದು ವಾರ ಸಭೆಯನ್ನು ಭೇಟಿಮಾಡುವುದರಲ್ಲಿ ಕಳೆಯುತ್ತಿದ್ದನು ಮತ್ತು ಅದರ ಮುಂದಿನ ವಾರವನ್ನು ಮನೆಯಲ್ಲಿ ತನ್ನ ಹೆಂಡತಿಮಕ್ಕಳೊಂದಿಗೆ ಕಳೆಯುತ್ತಿದ್ದನು. ಆದರೂ, ಇಮಾಸ್‌ ಸಂಚರಣ ಕೆಲಸದಲ್ಲಿದ್ದಾಗ, ನಾನು ನಮ್ಮ ಕುಟುಂಬ ಬೈಬಲ್‌ ಅಧ್ಯಯನವನ್ನು ತಪ್ಪದೇ ನಡೆಸುವಂತೆ ಅವರು ನೋಡಿಕೊಳ್ಳುತ್ತಿದ್ದರು. ನಮ್ಮ ಮಕ್ಕಳೊಂದಿಗಿನ ಅಧ್ಯಯನವನ್ನು ನಾವು ಆನಂದದಾಯಕವಾಗಿ ಮಾಡಲು ಪ್ರಯತ್ನಿಸಿದೆವು. ಯೆಹೋವನಿಗಾಗಿರುವ ಮತ್ತು ಆತನ ವಾಕ್ಯದಲ್ಲಿರುವ ಸತ್ಯಕ್ಕಾಗಿರುವ ನಮ್ಮ ಪ್ರೀತಿಯ ಕುರಿತು ಮನದಾಳದ ನಿಶ್ಚಿತತೆಯೊಂದಿಗೆ ಮಾತಾಡಿದೆವು, ಮತ್ತು ಕುಟುಂಬವಾಗಿ ಸಾರುವ ಕೆಲಸದಲ್ಲಿ ಪಾಲ್ಗೊಂಡೆವು. ಈ ಆತ್ಮಿಕ ತರಬೇತಿ ಕಾರ್ಯಕ್ರಮವು ನಮ್ಮ ಮಕ್ಕಳ ನಂಬಿಕೆಯನ್ನು ಬಲಗೊಳಿಸಿತು ಮತ್ತು ನಾವು ಸದ್ಯದಲ್ಲೇ ಎದುರಿಸಲಿಕ್ಕಿದ್ದ ಹಿಂಸೆಗಾಗಿ ಅವರನ್ನು ಸಿದ್ಧಪಡಿಸಲು ಸಹಾಯಮಾಡಿತು.

ಧಾರ್ಮಿಕ ಹಿಂಸೆಯು ಆರಂಭವಾಗುತ್ತದೆ

ಇಸವಿ 1964ರಲ್ಲಿ ಮಲಾವಿಯು ಒಂದು ಸ್ವತಂತ್ರ ದೇಶವಾಯಿತು. ಆಳ್ವಿಕೆ ನಡೆಸುತ್ತಿದ್ದಂಥ ಪಕ್ಷದ ಅಧಿಕಾರಿಗಳಿಗೆ ರಾಜಕೀಯ ವಿಷಯದಲ್ಲಿ ನಮ್ಮ ತಟಸ್ಥ ನಿಲುವಿನ ಕುರಿತು ಗೊತ್ತಾದಾಗ, ನಾವು ಪಾರ್ಟಿ ಮೆಂಬರ್‌ಷಿಪ್‌ ಕಾರ್ಡ್‌ಗಳನ್ನು ಖರೀದಿಸುವಂತೆ ಒತ್ತಾಯಿಸಲು ಅವರು ಪ್ರಯತ್ನಿಸಿದರು. * ಕಾರ್ಡುಗಳನ್ನು ಖರೀದಿಸಲು ನಾನು ಮತ್ತು ಇಮಾಸ್‌ ನಿರಾಕರಿಸಿದ ಕಾರಣ, ಯುವಕರ ಸಂಘದ ಸದಸ್ಯರು ನಮ್ಮ ಜೋಳದ ಗದ್ದೆಯನ್ನು ಧ್ವಂಸಮಾಡಿಬಿಟ್ಟರು. ಇದು ಮುಂದಿನ ವರ್ಷಕ್ಕಾಗಿರುವ ನಮ್ಮ ಮುಖ್ಯ ಆಹಾರ ಸರಬರಾಯಿಯಾಗಿತ್ತು. ಯುವಕರ ಸಂಘದ ಸದಸ್ಯರು ಆ ಜೋಳದ ಬೆಳೆಯನ್ನು ಕಡಿದುಹಾಕುತ್ತಿರುವಾಗ, ಅವರು ಹೀಗೆ ಹಾಡುತ್ತಿದ್ದರು: “ಕಾಮೂಸು [ಅಧ್ಯಕ್ಷ ಬಾಂಡಾರ] ಕಾರ್ಡನ್ನು ಖರೀದಿಸಲು ನಿರಾಕರಿಸುವವರೆಲ್ಲರಿಗೆ ಸೇರಿರುವ ಹಸಿರು ಜೋಳವನ್ನು ಗೆದ್ದಲುಗಳು ಕಬಳಿಸಿಬಿಡುವವು ಮತ್ತು ಈ ಜನರು ಅದಕ್ಕಾಗಿ ಗೋಳಾಡುವರು.” ಈ ರೀತಿಯ ಆಹಾರದ ನಷ್ಟವು ಸಂಭವಿಸಿತಾದರೂ, ನಾವು ಹತಾಶರಾಗಲಿಲ್ಲ. ನಮಗೆ ಯೆಹೋವನ ಪರಾಮರಿಕೆಯ ಅನುಭವವಾಯಿತು. ಆತನು ನಮ್ಮನ್ನು ಪ್ರೀತಿಯಿಂದ ಬಲಪಡಿಸಿದನು.​—ಫಿಲಿಪ್ಪಿ 4:​12, 13.

ಇಸವಿ 1964ರ ಆಗಸ್ಟ್‌ ತಿಂಗಳಿನ ಒಂದು ರಾತ್ರಿ, ಮನೆಯಲ್ಲಿ ಮಕ್ಕಳೊಂದಿಗೆ ನಾನೊಬ್ಬಳೇ ಇದ್ದೆ. ನಾವು ಗಾಢ ನಿದ್ರೆಯಲ್ಲಿದ್ದೆವು, ಆದರೆ ಬಹುದೂರದಲ್ಲಿ ಕೇಳಿಬರುತ್ತಿದ್ದ ಹಾಡಿನ ಶಬ್ದದಿಂದ ನಾನು ಎಚ್ಚರಗೊಂಡೆ. ಅದು ಗೂಲೆವಾಮ್‌ಕೂಲೂ, ಅಂದರೆ ಒಂದು ಬುಡಕಟ್ಟಿಗೆ ಸೇರಿದ್ದ ನರ್ತಕರ ಭೀತಿ ಹುಟ್ಟಿಸುವಂಥ ರಹಸ್ಯಮಯ ಸಮಾಜದ ಗುಂಪಾಗಿತ್ತು. ಇವರು ಜನರ ಮೇಲೆ ಆಕ್ರಮಣ ಮಾಡುತ್ತಿದ್ದರು ಮತ್ತು ಮೃತ ಪೂರ್ವಜರ ಆತ್ಮಗಳಾಗಿದ್ದೇವೆಂಬ ಸೋಗನ್ನು ಹಾಕುತ್ತಿದ್ದರು. ನಮ್ಮ ಮೇಲೆ ಆಕ್ರಮಣ ನಡೆಸುವಂತೆ ಆ ಯುವಕರ ಸಂಘವು ಗೂಲೆವಾಮ್‌ಕೂಲೂವನ್ನು ಕಳುಹಿಸಿತ್ತು. ತತ್‌ಕ್ಷಣವೇ ನಾನು ಮಕ್ಕಳನ್ನು ಎಬ್ಬಿಸಿದೆ, ಮತ್ತು ಆ ಆಕ್ರಮಣಗಾರರು ನಮ್ಮ ಮನೆಯನ್ನು ತಲಪುವುದಕ್ಕೆ ಮೊದಲೇ ಸಮೀಪದಲ್ಲಿದ್ದ ಪೊದೆಗಾಡಿನೊಳಗೆ ನಾವೆಲ್ಲರೂ ಪಲಾಯನಗೈದೆವು.

ನಮ್ಮ ಅಡಗುದಾಣದಿಂದ ನಾವು ಪ್ರಕಾಶಮಾನವಾದ ಬೆಳಕನ್ನು ನೋಡಿದೆವು. ಗೂಲೆವಾಮ್‌ಕೂಲೂ ತಂಡವು, ಹುಲ್ಲಿನ ಚಾವಣಿಯಿದ್ದ ನಮ್ಮ ಮನೆಗೆ ಬೆಂಕಿಹಚ್ಚಿತ್ತು. ನಮ್ಮ ಮನೆಯೊಂದಿಗೆ ನಮ್ಮ ಸೊತ್ತೆಲ್ಲವೂ ಸಂಪೂರ್ಣವಾಗಿ ಉರಿದು ಬೂದಿಯಾಗಿತ್ತು. ನಮ್ಮ ಮನೆಯ ಹೊಗೆಯಾಡುತ್ತಿದ್ದ ಅವಶೇಷಗಳ ಬಳಿಯಿಂದ ಆಕ್ರಮಣಗಾರರು ಹೊರಟುಹೋಗುತ್ತಿದ್ದಾಗ, “ಆ ಸಾಕ್ಷಿಯು ಚಳಿಕಾಯಿಸಿಕೊಳ್ಳಲಿಕ್ಕಾಗಿ ನಾವು ಚೆನ್ನಾಗಿ ಬೆಂಕಿಹೊತ್ತಿಸಿದ್ದೇವೆ” ಎಂದು ಅವರು ಹೇಳುತ್ತಿದ್ದುದನ್ನು ನಾವು ಕೇಳಿಸಿಕೊಂಡೆವು. ನಾವು ಸುರಕ್ಷಿತವಾಗಿ ಹೊರಬಂದದ್ದಕ್ಕಾಗಿ ಯೆಹೋವನಿಗೆ ಎಷ್ಟು ಆಭಾರಿಗಳಾಗಿದ್ದೆವು! ನಿಜ, ನಮ್ಮ ಸೊತ್ತನ್ನೆಲ್ಲಾ ಅವರು ಧ್ವಂಸಮಾಡಿದ್ದರಾದರೂ, ಮನುಷ್ಯರಿಗೆ ಬದಲಾಗಿ ಯೆಹೋವನಲ್ಲಿ ಭರವಸವಿಡುವ ನಮ್ಮ ದೃಢನಿರ್ಧಾರವನ್ನು ಅವರು ಧ್ವಂಸಮಾಡಲು ಅಶಕ್ತರಾಗಿದ್ದರು.​—ಕೀರ್ತನೆ 118:8.

ಆ ಗೂಲೆವಾಮ್‌ಕೂಲೂ ತಂಡವು, ನಮ್ಮ ಕ್ಷೇತ್ರದಲ್ಲಿದ್ದ ಯೆಹೋವನ ಸಾಕ್ಷಿಗಳ ಇತರ ಐದು ಕುಟುಂಬಗಳಿಗೂ ಇದೇ ಬೀಭತ್ಸ ಕೃತ್ಯವನ್ನು ಗೈದಿತ್ತು ಎಂದು ನಮಗೆ ತಿಳಿದುಬಂತು. ನೆರೆಹೊರೆಯ ಸಭೆಗಳಲ್ಲಿನ ಸಹೋದರರು ನಮ್ಮ ಸಹಾಯಕ್ಕೆ ಬಂದಾಗ ನಾವೆಷ್ಟು ಸಂತೋಷಿತರೂ ಕೃತಜ್ಞರೂ ಆಗಿದ್ದೆವು! ಅವರು ನಮ್ಮ ಮನೆಗಳನ್ನು ಪುನಃ ಕಟ್ಟಿದರು ಹಾಗೂ ಅನೇಕ ವಾರಗಳ ವರೆಗೆ ಆಹಾರವನ್ನು ಒದಗಿಸಿದರು.

ಹಿಂಸೆಯು ತೀವ್ರಗೊಳ್ಳುತ್ತದೆ

ಇಸವಿ 1967ರ ಸೆಪ್ಟೆಂಬರ್‌ ತಿಂಗಳಿನಲ್ಲಿ, ದೇಶದಾದ್ಯಂತವಿದ್ದ ಎಲ್ಲಾ ಯೆಹೋವನ ಸಾಕ್ಷಿಗಳನ್ನು ಒತ್ತಾಯಪೂರ್ವಕವಾಗಿ ಒಟ್ಟುಗೂಡಿಸುವ ಕಾರ್ಯಾಚರಣೆಯನ್ನು ಕೈಗೊಳ್ಳಲಾಯಿತು. ನಮ್ಮನ್ನು ಕಂಡುಕೊಳ್ಳಲಿಕ್ಕಾಗಿ, ಯುವಕರ ಸಂಘ ಹಾಗೂ ಮಲಾವಿ ಯಂಗ್‌ ಪಯನೀಯರ್ಸ್‌ ಎಂಬ ತಂಡದ ನಿಷ್ಕರುಣಿಗಳೂ ಆಕ್ರಮಣಶೀಲರೂ ಆಗಿದ್ದ ಯುವ ಪುರುಷರು, ಮಚ್ಚುಕತ್ತಿಗಳನ್ನು ಹಿಡಿದುಕೊಂಡು, ಸಾಕ್ಷಿಗಳಿಗಾಗಿ ಪ್ರತಿಯೊಂದು ಮನೆಯನ್ನೂ ತಲಾಷುಮಾಡಿದರು. ಸಾಕ್ಷಿಗಳು ಅವರ ಕೈಗೆ ಸಿಕ್ಕಿದಾಗ, ರಾಜಕೀಯ ಪಾರ್ಟಿ ಕಾರ್ಡ್‌ಗಳನ್ನು ತೆಗೆದುಕೊಳ್ಳುವಂತೆ ಅವರನ್ನು ಒತ್ತಾಯಿಸಿದರು.

ನಮ್ಮ ಮನೆಗೆ ಬಂದಾಗ, ನಮ್ಮ ಬಳಿ ಒಂದು ಪಾರ್ಟಿ ಕಾರ್ಡ್‌ ಇದೆಯೋ ಎಂದು ಅವರು ನಮ್ಮನ್ನು ಕೇಳಿದರು. “ಇಲ್ಲ, ನಾನದನ್ನು ಖರೀದಿಸಿಲ್ಲ. ಈಗ ಸಹ ನಾನದನ್ನು ಖರೀದಿಸುವುದಿಲ್ಲ, ಮತ್ತು ಮುಂದೆಯೂ ಖರೀದಿಸುವುದಿಲ್ಲ” ಎಂದು ನಾನು ಹೇಳಿದೆ. ಆಗ ಅವರು ನನ್ನನ್ನು ಮತ್ತು ನನ್ನ ಗಂಡನನ್ನು ಹಿಡಿದುಕೊಂಡು, ಸ್ಥಳಿಕ ಪೋಲಿಸ್‌ ಠಾಣೆಗೆ ಕರೆದೊಯ್ದರು. ಹೀಗೆ ಕರೆದೊಯ್ಯುವಾಗ ನಮ್ಮೊಂದಿಗೆ ಏನನ್ನೂ ತೆಗೆದುಕೊಂಡುಹೋಗಲು ಬಿಡಲಿಲ್ಲ. ನಮ್ಮ ಕಿರಿಯ ಮಕ್ಕಳು ಶಾಲೆಯಿಂದ ಮನೆಗೆ ಬಂದಾಗ, ನಾವಿಲ್ಲದಿರುವುದನ್ನು ನೋಡಿ ತುಂಬ ಚಿಂತಿತರಾದರು. ಆದರೆ ಸ್ವಲ್ಪ ಸಮಯಾನಂತರ ನಮ್ಮ ಹಿರಿಯ ಮಗನಾಗಿದ್ದ ಡ್ಯಾನ್‌ಯಲ್‌ ಮನೆಗೆ ಬಂದನು ಮತ್ತು ಏನು ಸಂಭವಿಸಿತು ಎಂಬುದನ್ನು ಪಕ್ಕದ ಮನೆಯವರಿಂದ ತಿಳಿದುಕೊಂಡನು. ಆ ಕೂಡಲೆ ಅವನು ತನ್ನ ಒಡಹುಟ್ಟಿದವರನ್ನು ಕರೆದುಕೊಂಡು ಪೋಲಿಸ್‌ ಠಾಣೆಯ ಕಡೆಗೆ ಹೊರಟನು. ಲಿಲಾಂಗ್ವೇಗೆ ಕರೆದೊಯ್ಯಲಿಕ್ಕಾಗಿ ಪೋಲಿಸರು ನಮ್ಮನ್ನು ಟ್ರಕ್ಕುಗಳಿಗೆ ಹತ್ತಿಸುತ್ತಿದ್ದಾಗ, ಮಕ್ಕಳೆಲ್ಲರೂ ಅಲ್ಲಿಗೆ ಆಗಮಿಸಿದರು. ನಂತರ ಮಕ್ಕಳು ಸಹ ನಮ್ಮೊಟ್ಟಿಗೆ ಬಂದರು.

ಲಿಲಾಂಗ್ವೇಯಲ್ಲಿನ ಒಂದು ಪೋಲಿಸ್‌ ಮುಖ್ಯಕಾರ್ಯಾಲಯದಲ್ಲಿ ನ್ಯಾಯಬಾಹಿರ ರೀತಿಯಲ್ಲಿ ವಿಚಾರಣೆಯು ನಡೆಸಲ್ಪಟ್ಟಿತು. “ನೀವು ಯೆಹೋವನ ಸಾಕ್ಷಿಗಳಾಗಿಯೇ ಮುಂದುವರಿಯುವಿರೋ?” ಎಂದು ಅಧಿಕಾರಿಗಳು ನಮ್ಮನ್ನು ಕೇಳಿದರು. “ಹೌದು!” ಎಂಬ ಉತ್ತರವು ತಾನೇ ಸೆರೆಮನೆಯಲ್ಲಿ ಏಳು ವರ್ಷಗಳ ಶಿಕ್ಷೆಯನ್ನು ಅನುಭವಿಸುವುದನ್ನು ಅರ್ಥೈಸುತ್ತದೆಂಬುದು ಗೊತ್ತಿತ್ತಾದರೂ, ನಾವು ಹಾಗೆ ಉತ್ತರಿಸಿದೆವು. ಯಾರು ಸಂಸ್ಥೆಯ “ನಾಯಕರು” ಎಂದು ಪರಿಗಣಿಸಲ್ಪಟ್ಟರೋ ಅವರಿಗೆ 14 ವರ್ಷಗಳ ಸೆರೆವಾಸದ ಶಿಕ್ಷೆ ನೀಡಲ್ಪಡುತ್ತಿತ್ತು.

ನಾವು ಆಹಾರ ಮತ್ತು ವಿಶ್ರಾಂತಿಯಿಲ್ಲದೆ ಒಂದು ರಾತ್ರಿಯನ್ನು ಕಳೆದ ಬಳಿಕ, ಪೋಲಿಸರು ನಮ್ಮನ್ನು ಮೌಲ್‌ ಸೆರೆಮನೆಗೆ ಕರೆದೊಯ್ದರು. ಅಲ್ಲಿನ ಸೆರೆಕೋಣೆಗಳು ಎಷ್ಟು ಜನನಿಬಿಡವಾಗಿದ್ದವೆಂದರೆ, ನೆಲದ ಮೇಲೆ ಮಲಗಲೂ ನಮಗೆ ಸ್ಥಳವಿರಲಿಲ್ಲ! ಜನನಿಬಿಡವಾಗಿದ್ದ ಪ್ರತಿಯೊಂದು ಸೆರೆಕೋಣೆಯಲ್ಲಿ ಇಡಲ್ಪಟ್ಟಿದ್ದ ಒಂದೇ ಒಂದು ಬಕೆಟ್‌, ಶೌಚಾಲಯವಾಗಿ ಉಪಯೋಗಿಸಲ್ಪಡುತ್ತಿತ್ತು. ಆಹಾರ ಪಡಿತರಗಳು ತುಂಬ ಕಡಿಮೆ ನೀಡಲ್ಪಡುತ್ತಿದ್ದವು ಮತ್ತು ಒಳ್ಳೇ ರೀತಿಯಲ್ಲಿ ತಯಾರಿಸಲ್ಪಡುತ್ತಲೂ ಇರಲಿಲ್ಲ. ಎರಡು ವಾರಗಳ ಬಳಿಕ, ನಾವು ಶಾಂತಿಪ್ರಿಯ ಜನರಾಗಿದ್ದೇವೆ ಎಂಬುದನ್ನು ಸೆರೆಮನೆಯ ಅಧಿಕಾರಿಗಳು ಗ್ರಹಿಸಿದರು ಮತ್ತು ಸೆರೆಮನೆಯ ಹೊರಗಿದ್ದ ವ್ಯಾಯಾಮ ಅಂಗಣವನ್ನು ಉಪಯೋಗಿಸಲು ನಮಗೆ ಅನುಮತಿ ನೀಡಿದರು. ನಾವು ಅನೇಕ ಮಂದಿ ಒಟ್ಟಿಗೆ ಇದ್ದದರಿಂದ, ಪರಸ್ಪರ ಉತ್ತೇಜಿಸಲು ಮತ್ತು ಇತರ ಸೆರೆವಾಸಿಗಳಿಗೆ ಒಂದು ಅತ್ಯುತ್ತಮ ಸಾಕ್ಷಿಯನ್ನು ನೀಡಲು ಪ್ರತಿನಿತ್ಯವೂ ಅವಕಾಶಗಳು ಸಿಗುತ್ತಿದ್ದವು. ಆಶ್ಚರ್ಯಕರವಾಗಿ, ನಮ್ಮ ಸೆರೆವಾಸದ ಶಿಕ್ಷೆಯಲ್ಲಿ ಸುಮಾರು ಮೂರು ತಿಂಗಳುಗಳನ್ನು ಕಳೆದ ಬಳಿಕ, ಮಲಾವಿಯ ಸರಕಾರದ ಮೇಲೆ ಅಂತಾರಾಷ್ಟ್ರೀಯ ಒತ್ತಡವು ಹೇರಲ್ಪಟ್ಟ ಕಾರಣ ನಮ್ಮನ್ನು ಬಿಡುಗಡೆಮಾಡಲಾಯಿತು.

ನಾವು ನಮ್ಮ ಮನೆಗಳಿಗೆ ಹಿಂದಿರುಗುವಂತೆ ಪೋಲಿಸ್‌ ಅಧಿಕಾರಿಗಳು ನಮ್ಮನ್ನು ಉತ್ತೇಜಿಸಿದರಾದರೂ, ಮಲಾವಿಯಲ್ಲಿನ ಯೆಹೋವನ ಸಾಕ್ಷಿಗಳ ಮೇಲೆ ನಿಷೇಧ ಹಾಕಲಾಗಿದೆ ಎಂಬುದನ್ನೂ ಅವರು ನಮಗೆ ಹೇಳಿದರು. ಇದು 1967ರ ಅಕ್ಟೋಬರ್‌ 20ರಿಂದ 1993ರ ಆಗಸ್ಟ್‌ 12ರ ವರೆಗೆ, ಅಂದರೆ ಸುಮಾರು 26 ವರ್ಷಗಳ ವರೆಗೆ ಜಾರಿಯಲ್ಲಿತ್ತು. ಅವು ತುಂಬ ಕಷ್ಟಕರ ವರ್ಷಗಳಾಗಿದ್ದವಾದರೂ, ಯೆಹೋವನ ಸಹಾಯದಿಂದ ನಾವು ಕಟ್ಟುನಿಟ್ಟಿನ ತಾಟಸ್ಥ್ಯವನ್ನು ಕಾಪಾಡಿಕೊಳ್ಳಲು ಶಕ್ತರಾಗಿದ್ದೆವು.

ಪ್ರಾಣಿಗಳಂತೆ ಬೇಟೆಯಾಡಲ್ಪಟ್ಟದ್ದು

ಇಸವಿ 1972ರ ಅಕ್ಟೋಬರ್‌ ತಿಂಗಳಿನಲ್ಲಿ, ಒಂದು ಸರಕಾರಿ ಆಜ್ಞೆಯು ತೀವ್ರವಾದ ಹಿಂಸೆಯ ಅಲೆಯನ್ನು ಎಬ್ಬಿಸಿತು. ಎಲ್ಲಾ ಯೆಹೋವನ ಸಾಕ್ಷಿಗಳನ್ನು ಅವರ ಉದ್ಯೋಗದಿಂದ ತೆಗೆದುಹಾಕಬೇಕು ಮತ್ತು ಹಳ್ಳಿಗಳಲ್ಲಿ ವಾಸಿಸುತ್ತಿರುವ ಎಲ್ಲಾ ಸಾಕ್ಷಿಗಳನ್ನು ಅವರ ಮನೆಗಳಿಂದ ಹೊರಗಟ್ಟಬೇಕೆಂದು ಆ ಆಜ್ಞೆಯು ನಿರ್ದೇಶಿಸಿತು. ಸಾಕ್ಷಿಗಳನ್ನು ಪ್ರಾಣಿಗಳಂತೆ ಬೇಟೆಯಾಡಲಾಯಿತು.

ಆ ಸಮಯದಲ್ಲಿ, ಇಮಾಸ್‌ಗಾಗಿದ್ದ ಒಂದು ತುರ್ತು ಸಂದೇಶವನ್ನು ಹಿಡಿದುಕೊಂಡು ಒಬ್ಬ ಯುವ ಕ್ರೈಸ್ತ ಸಹೋದರನು ನಮ್ಮ ಮನೆಗೆ ಬಂದನು. ‘ನಿಮ್ಮ ಶಿರಚ್ಛೇದನ ಮಾಡಿ, ನಿಮ್ಮ ತಲೆಯನ್ನು ಒಂದು ಕಂಬದ ಮೇಲೆ ಹಾಕಿ, ಸ್ಥಳಿಕ ಮುಖಂಡರ ಬಳಿಗೆ ತೆಗೆದುಕೊಂಡು ಹೋಗಲಿಕ್ಕಾಗಿ ಯುವಕರ ಸಂಘವು ಒಳಸಂಚು ನಡೆಸುತ್ತಿದೆ’ ಎಂಬುದೇ ಆ ಸಂದೇಶವಾಗಿತ್ತು. ಇಮಾಸ್‌ ಕೂಡಲೆ ಮನೆಯನ್ನು ಬಿಟ್ಟುಹೋದರು, ಆದರೆ ಅವರು ಹೊಗುವುದಕ್ಕಿಂತ ಮುಂಚೆ, ನಾವು ಸಾಧ್ಯವಾದಷ್ಟು ಬೇಗನೆ ಅವರನ್ನು ಸೇರಲಿಕ್ಕಾಗಿ ಅಗತ್ಯವಾಗಿದ್ದ ಏರ್ಪಾಡುಗಳನ್ನು ಮಾಡಿದರು. ಅತ್ಯಾತುರದಿಂದ ನಾನು ಮಕ್ಕಳನ್ನು ಕಳುಹಿಸಿಬಿಟ್ಟೆ. ಆಮೇಲೆ, ಇನ್ನೇನು ನಾನು ಅಲ್ಲಿಂದ ಹೊರಡಲಿದ್ದಾಗ, ಯುವಕರ ಸಂಘದ ಹತ್ತು ಮಂದಿ ಸದಸ್ಯರು ಇಮಾಸ್‌ನನ್ನು ಹುಡುಕುತ್ತಾ ಅಲ್ಲಿಗೆ ಬಂದರು. ಅವರು ನಮ್ಮ ಮನೆಗೆ ನುಗ್ಗಿ ಹುಡುಕಾಟ ನಡೆಸಿ, ಇಮಾಸ್‌ ಹೊರಟುಹೋಗಿದ್ದಾರೆ ಎಂಬುದನ್ನು ಕಂಡುಕೊಂಡರು. ಕೋಪಗೊಂಡಿದ್ದ ಆ ಪುರುಷರು ಸಮೀಪದಲ್ಲಿದ್ದ ಒಂದು ಕಬ್ಬಿನ ಗದ್ದೆಗೆ ನನ್ನನ್ನು ದರದರನೆ ಎಳೆದುಕೊಂಡುಹೋದರು, ಮತ್ತು ಅಲ್ಲಿ ನನಗೆ ಒದ್ದರು ಮತ್ತು ಕಬ್ಬಿನ ಜಲ್ಲೆಗಳಿಂದ ಚೆನ್ನಾಗಿ ಥಳಿಸಿದರು. ನಂತರ ನಾನು ಸತ್ತಿದ್ದೇನೆಂದು ನೆನಸಿ ಅಲ್ಲೇ ಬಿಟ್ಟುಹೋದರು. ನನಗೆ ಮತ್ತೆ ಪ್ರಜ್ಞೆ ಬಂದ ಬಳಿಕ ನಾನು ನಿಧಾನವಾಗಿ ತೆವಳಿಕೊಂಡು ಮನೆ ತಲಪಿದೆ.

ಆ ರಾತ್ರಿ ಕಾರ್ಗತ್ತಲೆಯು ಆವರಿಸಿದ ಬಳಿಕ, ನನ್ನನ್ನು ಹುಡುಕಲಿಕ್ಕಾಗಿ ನಮ್ಮ ಮನೆಗೆ ಹಿಂದಿರುಗುವ ಮೂಲಕ ಇಮಾಸ್‌ ತಮ್ಮ ಜೀವವನ್ನು ಅಪಾಯಕ್ಕೊಡ್ಡಿದರು. ನನಗೆ ತುಂಬ ಹೊಡೆಯಲಾಗಿದೆ ಎಂಬುದನ್ನು ನೋಡಿದ ಬಳಿಕ ಇಮಾಸ್‌ ಹಾಗೂ ಒಂದು ಕಾರ್‌ ಇದ್ದಂಥ ಅವರ ಸ್ನೇಹಿತರೊಬ್ಬರು ನನ್ನನ್ನು ಮೆಲ್ಲಗೆ ತಮ್ಮ ವಾಹನಕ್ಕೆ ಸಾಗಿಸಿದರು. ತದನಂತರ ನಾವು ಲಿಲಾಂಗ್ವೇಯಲ್ಲಿದ್ದ ಒಬ್ಬ ಸಹೋದರರ ಮನೆಗೆ ಪ್ರಯಾಣಿಸಿದೆವು. ಅಲ್ಲಿ ನಾನು ಈ ಆಕ್ರಮಣದಿಂದ ನಿಧಾನವಾಗಿ ಚೇತರಿಸಿಕೊಳ್ಳತೊಡಗಿದೆ ಮತ್ತು ಇಮಾಸ್‌ ದೇಶದಿಂದ ತಪ್ಪಿಸಿಕೊಳ್ಳುವ ಯೋಜನೆಗಳನ್ನು ಮಾಡತೊಡಗಿದರು.

ಯಾವ ಆಶ್ರಯವೂ ಇಲ್ಲದ ನಿರಾಶ್ರಿತರು

ನಮ್ಮ ಮಗಳಾದ ಡೇನಸ್‌ ಮತ್ತು ಅವಳ ಗಂಡನ ಬಳಿ ಐದು-ಟನ್ನಿನ ಟ್ರಕ್‌ ಇತ್ತು. ಈ ಮುಂಚೆ ಮಲಾವಿ ಯಂಗ್‌ ಪಯನೀಯರ್‌ ತಂಡದ ಸದಸ್ಯನಾಗಿದ್ದರೂ, ನಮ್ಮ ಸನ್ನಿವೇಶದ ಕಡೆಗೆ ಸಹಾನುಭೂತಿಯ ಭಾವವನ್ನು ತೋರಿಸುತ್ತಿದ್ದಂಥ ಒಬ್ಬ ಚಾಲಕನನ್ನು ಅವರು ಕೆಲಸಕ್ಕಿಟ್ಟುಕೊಂಡಿದ್ದರು. ಅವನು ನಮಗೆ ಹಾಗೂ ಇತರ ಸಾಕ್ಷಿಗಳಿಗೆ ಸಹಾಯಮಾಡಲು ಸ್ವತಃ ಮುಂದೆ ಬಂದನು. ಅನೇಕ ಸಾಯಂಕಾಲಗಳಂದು ಆ ಚಾಲಕನು ಮುಂಚಿತವಾಗಿಯೇ ನಿಗದಿಸಲ್ಪಟ್ಟಿದ್ದ ಅಡಗುದಾಣಗಳಿಂದ ಸಾಕ್ಷಿಗಳನ್ನು ಗಾಡಿಗೆ ಹತ್ತಿಸಿಕೊಂಡನು. ತದನಂತರ ಅವನು ಮಲಾವಿ ಯಂಗ್‌ ಪಯನೀಯರ್‌ ತಂಡದ ಸಮವಸ್ತ್ರವನ್ನು ಧರಿಸಿಕೊಂಡು, ಪೋಲಿಸರು ಹಾಕಿದ್ದ ಅನೇಕ ರಸ್ತೆತಡೆಗಟ್ಟುಗಳ ಮಧ್ಯೆ ಸಾಕ್ಷಿಗಳಿಂದ ತುಂಬಿದ್ದ ಟ್ರಕ್ಕನ್ನು ಚಲಾಯಿಸುತ್ತಿದ್ದನು. ಸಾಂಬಿಯಕ್ಕೆ ಹೋಗುವ ಗಡಿಯನ್ನು ದಾಟುವಂತೆ ನೂರಾರು ಸಾಕ್ಷಿಗಳಿಗೆ ಸಹಾಯಮಾಡಲಿಕ್ಕಾಗಿ ಅವನು ಬಹಳಷ್ಟು ಅಪಾಯಕ್ಕೆ ತಲೆಯೊಡ್ಡಿದನು.

ಕೆಲವು ತಿಂಗಳುಗಳ ಬಳಿಕ, ಸಾಂಬಿಯದ ಅಧಿಕಾರಿಗಳು ನಮ್ಮನ್ನು ಮಲಾವಿಗೆ ಹಿಂದೆ ಕಳುಹಿಸಿದರು; ಆದರೂ ನಮ್ಮ ಸ್ವಂತ ಹಳ್ಳಿಗೆ ನಾವು ಹಿಂದಿರುಗಲು ಸಾಧ್ಯವಿರಲಿಲ್ಲ. ನಾವು ಹಿಂದೆ ಬಿಟ್ಟುಬಂದಿದ್ದ ಎಲ್ಲಾ ಸೊತ್ತುಗಳು ಈಗ ಕದಿಯಲ್ಪಟ್ಟಿದ್ದವು. ಮನೆಯ ಚಾವಣಿಯೋಪಾದಿ ಹಾಕಲ್ಪಟ್ಟಿದ್ದ ಲೋಹದ ತಗಡುಗಳು ಸಹ ಕಿತ್ತೊಯ್ಯಲ್ಪಟ್ಟಿದ್ದವು. ಯಾವುದೇ ಸ್ಥಳವು ಸುರಕ್ಷಿತವಾಗಿರದಿದ್ದ ಕಾರಣ, ನಾವು ಮೋಸಾಂಬೀಕ್‌ಗೆ ಪಲಾಯನಗೈದೆವು ಮತ್ತು ಮ್ಲಾಂಗಿನೀ ನಿರಾಶ್ರಿತರ ಶಿಬಿರದಲ್ಲಿ ಎರಡೂವರೆ ವರ್ಷಗಳ ವರೆಗೆ ಉಳಿದೆವು. ಆದರೂ 1975ರ ಜೂನ್‌ ತಿಂಗಳಿನಲ್ಲಿ, ಮೋಸಾಂಬೀಕ್‌ನಲ್ಲಿ ಅಧಿಕಾರಕ್ಕೆ ಬಂದ ಹೊಸ ಸರಕಾರವು ಈ ಶಿಬಿರವನ್ನು ಮುಚ್ಚಿಬಿಟ್ಟಿತು ಮತ್ತು ನಾವು ಮಲಾವಿಗೆ ಹಿಂದಿರುಗುವಂತೆ ನಮ್ಮನ್ನು ಒತ್ತಾಯಿಸಿತು. ಆದರೆ ಮಲಾವಿಯಲ್ಲಿ ಯೆಹೋವನ ಜನರಿಗಿದ್ದ ಪರಿಸ್ಥಿತಿಗಳು ಒಂದಿಷ್ಟೂ ಬದಲಾಗಿರಲಿಲ್ಲ. ಎರಡನೆಯ ಬಾರಿ ಸಾಂಬಿಯಕ್ಕೆ ಪಲಾಯನಗೈಯುವುದನ್ನು ಬಿಟ್ಟರೆ ಬೇರೆ ದಾರಿಯೇ ಇರಲಿಲ್ಲ. ಅಲ್ಲಿ ನಾವು ಚೀಗೂಮಾಕೇರ್‌ ನಿರಾಶ್ರಿತ ಶಿಬಿರವನ್ನು ತಲಪಿದೆವು.

ಎರಡು ತಿಂಗಳುಗಳ ಬಳಿಕ, ಅನೇಕ ಬಸ್‌ಗಳು ಮತ್ತು ಮಿಲಿಟರಿ ಟ್ರಕ್ಕುಗಳು ಬಂದು ಹೆದ್ದಾರಿಯ ಉದ್ದಕ್ಕೂ ನಿಂತವು, ಮತ್ತು ಸರ್ವ ಶಸ್ತ್ರಸಜ್ಜಿತರಾಗಿದ್ದ ನೂರಾರು ಮಂದಿ ಸಾಂಬಿಯನ್‌ ಸೈನಿಕರು ನಿರಾಶ್ರಿತ ಶಿಬಿರದ ಮೇಲೆ ದಾಳಿಮಾಡಿದರು. ನಮಗೋಸ್ಕರ ಒಳ್ಳೇ ಮನೆಗಳು ನಿರ್ಮಿಸಲ್ಪಟ್ಟಿವೆಯೆಂದೂ ನಮ್ಮನ್ನು ಅಲ್ಲಿಗೆ ತಲಪಿಸಲಿಕ್ಕಾಗಿ ತಾವು ಸಂಚಾರ ಸಾರಿಗೆ ವ್ಯವಸ್ಥೆಯನ್ನು ಒದಗಿಸುತ್ತಿದ್ದೇವೆಯೆಂದೂ ಅವರು ನಮಗೆ ಹೇಳಿದರು. ಇದು ನಿಜವಲ್ಲವೆಂಬುದು ನಮಗೆ ಗೊತ್ತಿತ್ತು. ಆ ಸೈನಿಕರು ಜನರನ್ನು ಟ್ರಕ್ಕುಗಳಿಗೆ ಮತ್ತು ಬಸ್‌ಗಳೊಳಗೆ ದಬ್ಬಲಾರಂಭಿಸಿದರು, ಮತ್ತು ಅಲ್ಲಿ ಭಯದ ವಾತಾವರಣ ಸ್ಫೋಟಿಸಿತು. ತಮ್ಮ ಸ್ವಯಂಚಾಲಿತ ಶಸ್ತ್ರಗಳಿಂದ ಸೈನಿಕರು ಗಾಳಿಯಲ್ಲಿ ಗುಂಡನ್ನು ಹಾರಿಸಲು ಆರಂಭಿಸಿದರು, ಮತ್ತು ನಮ್ಮ ಸಹೋದರ ಸಹೋದರಿಯರಲ್ಲಿ ಸಾವಿರಾರು ಮಂದಿ ಭೀತಿಯಿಂದ ಸಿಕ್ಕೆಡೆಗೆ ಚೆಲ್ಲಾಪಿಲ್ಲಿಯಾಗಿ ಓಡಿದರು.

ಈ ಗಲಿಬಿಲಿಯಲ್ಲಿ, ಯಾರೊ ಆಕಸ್ಮಿಕವಾಗಿ ಇಮಾಸ್‌ರನ್ನು ಬೀಳಿಸಿದರು ಮತ್ತು ಜನರು ಅವರನ್ನು ತುಳಿದುಕೊಂಡೇ ಓಡಿದರು, ಆದರೆ ಸಹೋದರರಲ್ಲಿ ಒಬ್ಬರು ಅವರಿಗೆ ಎದ್ದುನಿಲ್ಲಲು ಸಹಾಯಮಾಡಿದರು. ಇದೇ ಮಹಾಸಂಕಟದ ಆರಂಭವಾಗಿದೆಯೆಂದು ನಾವು ನೆನಸಿದೆವು. ಎಲ್ಲಾ ನಿರಾಶ್ರಿತರು ಮಲಾವಿಯ ಕಡೆಗೆ ಓಡತೊಡಗಿದರು. ಇನ್ನೂ ಸಾಂಬಿಯದಲ್ಲಿದ್ದಾಗಲೇ ನಾವು ಒಂದು ನದಿಯನ್ನು ತಲಪಿದೆವು, ಮತ್ತು ಅನೇಕ ಸಹೋದರರು ಸಾಲಾಗಿ ಒಬ್ಬರು ಇನ್ನೊಬ್ಬರ ಕೈಗಳನ್ನು ಹಿಡಿದುಕೊಂಡು, ಪ್ರತಿಯೊಬ್ಬರೂ ಸುರಕ್ಷಿತವಾಗಿ ನದಿಯನ್ನು ದಾಟಲು ಸಹಾಯಮಾಡಿದರು. ಆದರೂ, ನದಿಯ ಆಚೆ ದಡದಲ್ಲಿ ಸಾಂಬಿಯದ ಸೈನಿಕರು ನಮ್ಮನ್ನು ಸುತ್ತುವರಿದರು ಮತ್ತು ಬಲವಂತವಾಗಿ ನಮ್ಮನ್ನು ಮಲಾವಿಗೆ ಮರಳಿಸಿದರು.

ಪುನಃ ಒಮ್ಮೆ ಮಲಾವಿಗೆ ಬಂದು ಸೇರಿದ ನಮಗೆ ಎಲ್ಲಿಗೆ ಹೋಗುವುದು ಎಂಬುದೇ ತೋಚಲಿಲ್ಲ. ಯೆಹೋವನ ಸಾಕ್ಷಿಗಳ ಬಗ್ಗೆ ಸೂಚಿಸುತ್ತಾ, ರಾಜಕೀಯ ಕೂಟಗಳಲ್ಲಿ ಮತ್ತು ವಾರ್ತಾಪತ್ರಿಕೆಗಳಲ್ಲಿ, ತಮ್ಮ ಹಳ್ಳಿಗಳಿಗೆ ಬರುವಂಥ “ಹೊಸ ಮುಖಗಳನ್ನು” ಜಾಗರೂಕತೆಯಿಂದ ಗಮನಿಸಿರಿ ಎಂದು ಜನರಿಗೆ ಎಚ್ಚರಿಕೆ ನೀಡಲಾಗಿದೆ ಎಂಬುದು ನಮಗೆ ಗೊತ್ತಾಯಿತು. ಆದುದರಿಂದ ನಾವು ರಾಜಧಾನಿಗೆ ಹೋಗಲು ನಿರ್ಧರಿಸಿದೆವು, ಏಕೆಂದರೆ ಒಂದು ಹಳ್ಳಿಯಲ್ಲಿ ನಾವು ಬೇಗನೆ ಜನರ ದೃಷ್ಟಿಗೆ ಬೀಳಬಹುದಾದರೂ ಇಲ್ಲಿ ಹಾಗೆ ಆಗಸಾಧ್ಯವಿರಲಿಲ್ಲ. ಒಂದು ಚಿಕ್ಕ ಮನೆಯನ್ನು ಬಾಡಿಗೆಗೆ ಪಡೆಯುವುದರಲ್ಲಿ ನಾವು ಸಫಲರಾದೆವು, ಮತ್ತು ಇಮಾಸ್‌ ಒಬ್ಬ ಸಂಚರಣ ಮೇಲ್ವಿಚಾರಕರೋಪಾದಿ ಸಭೆಗಳನ್ನು ಗುಪ್ತವಾಗಿ ಸಂದರ್ಶಿಸುವ ಕೆಲಸವನ್ನು ಪುನಃ ಆರಂಭಿಸಿದರು.

ಸಭಾ ಕೂಟಗಳಿಗೆ ಹಾಜರಾಗುವುದು

ನಾವು ನಂಬಿಗಸ್ತರಾಗಿ ಉಳಿಯುವಂತೆ ಯಾವುದು ಸಹಾಯಮಾಡಿತು? ಸಭಾ ಕೂಟಗಳೇ! ಮೋಸಾಂಬೀಕ್‌ ಮತ್ತು ಸಾಂಬಿಯದ ನಿರಾಶ್ರಿತ ಶಿಬಿರಗಳಲ್ಲಿ, ಸರಳವಾದ, ಹುಲ್ಲುಚಾವಣಿಯ ರಾಜ್ಯ ಸಭಾಗೃಹಗಳಲ್ಲಿ ನಡೆಸಲ್ಪಡುತ್ತಿದ್ದ ಕೂಟಗಳಿಗೆ ನಾವು ಹಾಜರಾಗುತ್ತಿದ್ದೆವು. ಮಲಾವಿಯಲ್ಲಿ ಕೂಟಗಳಿಗಾಗಿ ಒಟ್ಟುಗೂಡುವುದು ಅಪಾಯಕರವೂ ಕಷ್ಟಕರವೂ ಆಗಿತ್ತಾದರೂ, ಅದಕ್ಕಾಗಿ ಮಾಡಲ್ಪಡುತ್ತಿದ್ದ ಪ್ರಯತ್ನವು ಯಾವಾಗಲೂ ಸಾರ್ಥಕವಾಗಿತ್ತು. ಬೇರೆಯವರು ಇದನ್ನು ಪತ್ತೆಹಚ್ಚದಿರಲಿಕ್ಕಾಗಿ, ಸಾಮಾನ್ಯವಾಗಿ ನಾವು ರಾತ್ರಿ ತುಂಬ ತಡವಾಗಿ ಹಾಗೂ ಬಹು ದೂರದ ಸ್ಥಳಗಳಲ್ಲಿ ಕೂಟಗಳನ್ನು ನಡೆಸುತ್ತಿದ್ದೆವು. ನಮ್ಮ ಒಟ್ಟುಗೂಡುವಿಕೆಗಳ ಕಡೆಗೆ ಗಮನವನ್ನು ಸೆಳೆಯದಿರಲಿಕ್ಕಾಗಿ, ಒಬ್ಬ ಭಾಷಣಕಾರನಿಗೆ ನಮ್ಮ ಗಣ್ಯತೆಯನ್ನು ವ್ಯಕ್ತಪಡಿಸಲು ನಾವು ಚಪ್ಪಾಳೆ ತಟ್ಟುತ್ತಿರಲಿಲ್ಲ, ಅದಕ್ಕೆ ಬದಲಾಗಿ ನಮ್ಮ ಕೈಗಳನ್ನು ಒಟ್ಟಿಗೆ ಉಜ್ಜುತ್ತಿದ್ದೆವು.

ದೀಕ್ಷಾಸ್ನಾನಗಳು ರಾತ್ರಿ ತುಂಬ ತಡವಾಗಿ ನಡೆಸಲ್ಪಡುತ್ತಿದ್ದವು. ನಮ್ಮ ಮಗನಾದ ಅಬೀಯೂಡ್‌ ಸಹ ಅಂಥ ಸಂದರ್ಭದಲ್ಲೇ ದೀಕ್ಷಾಸ್ನಾನ ಪಡೆದುಕೊಂಡನು. ದೀಕ್ಷಾಸ್ನಾನದ ಭಾಷಣದ ಬಳಿಕ ಅವನು ಹಾಗೂ ದೀಕ್ಷಾಸ್ನಾನದ ಇತರ ಅಭ್ಯರ್ಥಿಗಳು ದಟ್ಟ ಕತ್ತಲೆಯಲ್ಲಿ ಒಂದು ಜೌಗು ಪ್ರದೇಶಕ್ಕೆ ಕರೆದೊಯ್ಯಲ್ಪಟ್ಟರು ಮತ್ತು ಅಲ್ಲಿ ಒಂದು ಚಿಕ್ಕ ಗುಂಡಿಯು ತೋಡಲ್ಪಟ್ಟಿತ್ತು. ಅಲ್ಲಿಯೇ ಅವರು ದೀಕ್ಷಾಸ್ನಾನ ಪಡೆದುಕೊಂಡರು.

ನಮ್ಮ ಚಿಕ್ಕ ಮನೆ​—ಒಂದು ಸುರಕ್ಷಿತ ಆಶ್ರಯ ಸ್ಥಾನ

ಆ ಸರಕಾರೀ ನಿಷೇಧದ ತದನಂತರದ ವರ್ಷಗಳಲ್ಲಿ, ಲಿಲಾಂಗ್ವೇಯಲ್ಲಿದ್ದ ನಮ್ಮ ಮನೆಯು ಒಂದು ಸುರಕ್ಷಿತ ಸ್ಥಳವಾಗಿ ಉಪಯೋಗಿಸಲ್ಪಟ್ಟಿತು. ಸಾಂಬಿಯ ಬ್ರಾಂಚ್‌ ಆಫೀಸಿನಿಂದ ಬರುತ್ತಿದ್ದ ಅಂಚೆಯನ್ನು ಹಾಗೂ ಸಾಹಿತ್ಯವನ್ನು ರಹಸ್ಯವಾಗಿ ನಮ್ಮ ಮನೆಗೆ ಕಳುಹಿಸಲಾಗುತ್ತಿತ್ತು. ಸೈಕಲ್‌ ದೂತರಾಗಿ (ಕುರಿಯರ್‌) ಕೆಲಸಮಾಡುತ್ತಿದ್ದ ಸಹೋದರರು ನಮ್ಮ ಮನೆಗೆ ಬಂದು, ಸಾಂಬಿಯದಿಂದ ಬರುತ್ತಿದ್ದ ಸರಕನ್ನು ತೆಗೆದುಕೊಂಡು, ಅಂಚೆಯನ್ನೂ ಸಾಹಿತ್ಯವನ್ನೂ ಮಲಾವಿಯ ಎಲ್ಲಾ ಭಾಗಗಳಿಗೆ ರವಾನಿಸುತ್ತಿದ್ದರು. ಆಗ ವಿತರಿಸಲ್ಪಡುತ್ತಿದ್ದ ಕಾವಲಿನಬುರುಜು ಪತ್ರಿಕೆಗಳು ತುಂಬ ತೆಳುವಾಗಿದ್ದವು, ಏಕೆಂದರೆ ಬೈಬಲ್‌ಗಳನ್ನು ಮುದ್ರಿಸಲಿಕ್ಕಾಗಿ ಉಪಯೋಗಿಸಲ್ಪಡುತ್ತಿದ್ದ ಕಾಗದದಲ್ಲಿ ಇವು ಮುದ್ರಿಸಲ್ಪಟ್ಟಿದ್ದವು. ಇದು, ದೂತರಾಗಿ ಕೆಲಸಮಾಡುತ್ತಿದ್ದವರು, ಒಂದುವೇಳೆ ಪತ್ರಿಕೆಗಳು ಈ ಮುಂಚೆ ಉಪಯೋಗಿಸಲ್ಪಡುತ್ತಿದ್ದ ಕಾಗದದ ಮೇಲೆಯೇ ಮುದ್ರಿಸಲ್ಪಟ್ಟಿರುತ್ತಿದ್ದಲ್ಲಿ ಎಷ್ಟು ಸಾಧ್ಯವಾಗುತ್ತಿತ್ತೋ ಅದಕ್ಕಿಂತಲೂ ಎರಡು ಪಟ್ಟು ಹೆಚ್ಚು ಪತ್ರಿಕೆಗಳನ್ನು ರವಾನಿಸಲು ಸಹಾಯಮಾಡಿತು. ಇವರು ಅಧ್ಯಯನ ಲೇಖನಗಳು ಮಾತ್ರ ಮುದ್ರಿಸಲ್ಪಟ್ಟಿದ್ದಂಥ ಕಾವಲಿನಬುರುಜುವಿನ ಕಿರುಪತ್ರಿಕೆಗಳನ್ನು ಸಹ ವಿತರಿಸಿದರು. ಈ ಕಿರುಪತ್ರಿಕೆಯನ್ನು ಶರ್ಟಿನ ಜೇಬುಗಳಲ್ಲಿ ಸುಲಭವಾಗಿ ಬಚ್ಚಿಡಸಾಧ್ಯವಿತ್ತು, ಏಕೆಂದರೆ ಇದು ಒಂದೇ ಒಂದು ಕಾಗದದ ಹಾಳೆಯಾಗಿರುತ್ತಿತ್ತು.

ದೂತರಾಗಿ ಕೆಲಸಮಾಡುತ್ತಿದ್ದ ಸಹೋದರರು, ತಮ್ಮ ಸೈಕಲ್‌ಗಳ ಮೇಲೆ ನಿಷೇಧಿತ ಸಾಹಿತ್ಯದ ಕಾರ್ಟನ್‌ಗಳನ್ನು ಒಂದರ ಮೇಲೊಂದು ಇಟ್ಟುಕೊಂಡು ಕೆಲವೊಮ್ಮೆ ದಟ್ಟ ಕತ್ತಲೆಯಲ್ಲಿ ಪೊದೆಗಾಡುಗಳ ಮಧ್ಯದಿಂದ ಸೈಕಲ್‌ಗಳಲ್ಲಿ ಹೋಗುತ್ತಿದ್ದಾಗ, ತಮ್ಮ ಸ್ವಾತಂತ್ರ್ಯವನ್ನು ಹಾಗೂ ಜೀವವನ್ನು ಅಪಾಯಕ್ಕೊಡ್ಡಿದರು. ಪೋಲಿಸರ ರಸ್ತೆತಡೆಗಟ್ಟುಗಳು ಮತ್ತು ಇತರ ಅಪಾಯಗಳ ನಡುವೆಯೂ, ತಮ್ಮ ಸಹೋದರರಿಗೆ ಆತ್ಮಿಕ ಆಹಾರವನ್ನು ಒದಗಿಸಲಿಕ್ಕಾಗಿ ಎಲ್ಲ ರೀತಿಯ ಹವಾಮಾನಗಳಲ್ಲಿ ಇವರು ಸಾವಿರಾರು ಕಿಲೊಮೀಟರುಗಳಷ್ಟು ದೂರ ಪ್ರಯಾಣಿಸಿದರು. ಆ ಪ್ರಿಯ ಸಹೋದರರು ಎಷ್ಟು ಧೈರ್ಯಶಾಲಿಗಳಾಗಿದ್ದರು!

ಯೆಹೋವನು ವಿಧವೆಯರನ್ನು ಪರಿಪಾಲಿಸುತ್ತಾನೆ

ಇಸವಿ 1992ರ ಡಿಸೆಂಬರ್‌ ತಿಂಗಳಿನಲ್ಲಿ, ಒಂದು ಸರ್ಕಿಟ್‌ ಸಂದರ್ಶನದ ಸಮಯದಲ್ಲಿ ಭಾಷಣವೊಂದನ್ನು ಕೊಡುತ್ತಿದ್ದಾಗ ಇಮಾಸ್‌ರಿಗೆ ಲಕ್ವ ಹೊಡೆಯಿತು. ತದನಂತರ ಅವರು ಮಾತಾಡುವ ಶಕ್ತಿಯನ್ನು ಕಳೆದುಕೊಂಡರು. ಸಮಯಾನಂತರ ಎರಡನೆಯ ಬಾರಿ ಅವರಿಗೆ ಲಕ್ವ ಹೊಡೆಯಿತು ಮತ್ತು ಅವರ ದೇಹದ ಒಂದು ಭಾಗವು ಪಾರ್ಶ್ವವಾಯು ಪೀಡಿತವಾಯಿತು. ಆರೋಗ್ಯದ ನಷ್ಟದೊಂದಿಗೆ ಹೋರಾಡುವುದು ಅವರಿಗೆ ತುಂಬ ಕಷ್ಟಕರವಾಗಿತ್ತಾದರೂ, ನಮ್ಮ ಸಭೆಯಿಂದ ಅವರು ಪಡೆದುಕೊಂಡ ಪ್ರೀತಿಪರ ಬೆಂಬಲವು ನನ್ನ ಹತಾಶೆಯನ್ನು ಹೊಡೆದೋಡಿಸಿತು. ಇದಾದ ಬಳಿಕ ನಾನು ನನ್ನ ಪತಿಯನ್ನು ಮನೆಯಲ್ಲೇ ನೋಡಿಕೊಳ್ಳುತ್ತಿದ್ದೆ, ಆದರೆ 76ರ ಪ್ರಾಯದಲ್ಲಿ, ಅಂದರೆ 1994ರ ನವೆಂಬರ್‌ ತಿಂಗಳಿನಲ್ಲಿ ಅವರು ಮೃತಪಟ್ಟರು. ನಾವು 57 ವರ್ಷಗಳ ವೈವಾಹಿಕ ಜೀವನವನ್ನು ನಡೆಸಿದ್ದೆವು, ಮತ್ತು ಇಮಾಸ್‌ ಮರಣಪಡುವುದಕ್ಕೆ ಮುಂಚೆ ನಿಷೇಧವು ಕೊನೆಗೊಳ್ಳುವುದನ್ನು ನೋಡಿದ್ದರು. ಆದರೆ ನನ್ನ ನಂಬಿಗಸ್ತ ಸಹಭಾಗಿಯ ನಷ್ಟಕ್ಕಾಗಿ ನಾನು ಈಗಲೂ ದುಃಖಿಸುತ್ತೇನೆ.

ನಾನೊಬ್ಬ ವಿಧವೆಯಾದ ಬಳಿಕ, ನನ್ನ ಅಳಿಯನು ತನ್ನ ಹೆಂಡತಿಯನ್ನು ಹಾಗೂ ಐವರು ಮಕ್ಕಳನ್ನು ಮಾತ್ರವಲ್ಲ, ನನ್ನನ್ನು ಸಹ ನೋಡಿಕೊಳ್ಳುವ ಜವಾಬ್ದಾರಿಯನ್ನು ಹೊತ್ತುಕೊಂಡನು. ದುಃಖಕರವಾಗಿಯೇ, ಸ್ವಲ್ಪ ಸಮಯ ಅಸ್ವಸ್ಥನಾಗಿದ್ದ ಬಳಿಕ ಅವನು 2000 ಇಸವಿಯ ಆಗಸ್ಟ್‌ ತಿಂಗಳಿನಲ್ಲಿ ಮರಣಪಟ್ಟನು. ನನ್ನ ಮಗಳು ನಮಗೋಸ್ಕರ ಆಹಾರ ಹಾಗೂ ವಸತಿ ಸೌಕರ್ಯಗಳನ್ನು ಹೇಗೆ ಒದಗಿಸಲಿಕ್ಕಿದ್ದಳು? ಯೆಹೋವನು ನಮ್ಮನ್ನು ಪರಿಪಾಲಿಸುತ್ತಾನೆ ಮತ್ತು ನಿಜವಾಗಿಯೂ “ದಿಕ್ಕಿಲ್ಲದವರಿಗೆ ತಂದೆಯೂ ವಿಧವೆಯರಿಗೆ ಸಹಾಯಕನೂ ಆಗಿದ್ದಾನೆ” ಎಂಬುದನ್ನು ನಾನು ಪುನಃ ಕಂಡುಕೊಂಡೆ. (ಕೀರ್ತನೆ 68:5) ಭೂಮಿಯ ಮೇಲಿರುವ ತನ್ನ ಸೇವಕರ ಮೂಲಕ ಯೆಹೋವನು ಒಂದು ಸುಂದರವಾದ ಹೊಸ ಮನೆಯನ್ನು ಒದಗಿಸಿದನು. ಇದು ಹೇಗೆ ಸಂಭವಿಸಿತು? ನಮ್ಮ ಸಭೆಯಲ್ಲಿದ್ದ ಸಹೋದರ ಸಹೋದರಿಯರು ನಮ್ಮ ಸನ್ನಿವೇಶವನ್ನು ನೋಡಿ, ಕೇವಲ ಐದೇ ವಾರಗಳಲ್ಲಿ ನಮಗಾಗಿ ಒಂದು ಮನೆಯನ್ನು ನಿರ್ಮಿಸಿದರು! ಇಟ್ಟಿಗೆ ಕಟ್ಟುವ ಕೆಲಸಮಾಡುತ್ತಿದ್ದ ಇತರ ಸಭೆಗಳ ಸಹೋದರರು ಸಹಾಯಮಾಡಲು ಬಂದರು. ಈ ಎಲ್ಲಾ ಸಾಕ್ಷಿಗಳಿಂದ ತೋರಿಸಲ್ಪಟ್ಟ ಪ್ರೀತಿ ಮತ್ತು ಕರುಣೆಯು ನಮ್ಮನ್ನು ತುಂಬ ಭಾವಪರವಶಗೊಳಿಸಿತು, ಏಕೆಂದರೆ ಅವರು ನಮಗಾಗಿ ಕಟ್ಟಿರುವ ಮನೆಯು, ಅವರಲ್ಲಿ ಅನೇಕರು ವಾಸಿಸುತ್ತಿರುವಂಥ ಮನೆಗಳಿಗಿಂತಲೂ ಹೆಚ್ಚು ಅತ್ಯುತ್ತಮವಾಗಿತ್ತು. ಸಭೆಯಿಂದ ತೋರಿಸಲ್ಪಟ್ಟ ಈ ಪ್ರೀತಿಯು, ನಮ್ಮ ನೆರೆಹೊರೆಯಲ್ಲಿಯೂ ಅತ್ಯುತ್ತಮ ಸಾಕ್ಷಿಯನ್ನು ನೀಡಿತು. ರಾತ್ರಿ ನಾನು ನಿದ್ರಿಸಲು ಹೋಗುವಾಗ, ನಾನು ಪರದೈಸದಲ್ಲಿದ್ದೇನೋ ಎಂಬ ಅನಿಸಿಕೆ ನನಗಾಗುತ್ತದೆ! ಹೌದು, ನಮ್ಮ ಹೊಸ ಸುಂದರ ಮನೆಯು, ಇಟ್ಟಿಗೆಗಳು ಹಾಗೂ ಗಾರೆಯಿಂದ ಕಟ್ಟಲ್ಪಟ್ಟಿದೆಯಾದರೂ, ಅನೇಕರ ಅಭಿಪ್ರಾಯದಂತೆ ಅದು ನಿಜವಾಗಿಯೂ ಪ್ರೀತಿಯಿಂದ ಕಟ್ಟಲ್ಪಟ್ಟಿರುವಂಥ ಒಂದು ಮನೆಯಾಗಿದೆ.​—ಗಲಾತ್ಯ 6:10.

ಯೆಹೋವನ ಸತತ ಆರೈಕೆ

ಕೆಲವೊಮ್ಮೆ ನಾನು ಆಳವಾದ ಖಿನ್ನತೆಯನ್ನು ಅನುಭವಿಸುವ ಹಂತದಲ್ಲಿದ್ದೆನಾದರೂ, ಯೆಹೋವನು ನನಗೆ ದಯೆ ತೋರಿಸಿದ್ದಾನೆ ಮತ್ತು ಬೆಂಬಲ ನೀಡಿದ್ದಾನೆ. ನನ್ನ ಒಂಬತ್ತು ಮಂದಿ ಮಕ್ಕಳಲ್ಲಿ ಏಳು ಮಂದಿ ಇನ್ನೂ ಬದುಕಿದ್ದಾರೆ, ಮತ್ತು ಈಗ ನನ್ನ ಕುಟುಂಬದಲ್ಲಿ ಒಟ್ಟು 123 ಮಂದಿ ಇದ್ದಾರೆ. ಅವರಲ್ಲಿ ಅಧಿಕಾಂಶ ಮಂದಿ ನಂಬಿಗಸ್ತಿಕೆಯಿಂದ ಯೆಹೋವನ ಸೇವೆಮಾಡುತ್ತಿರುವುದಕ್ಕಾಗಿ ನಾನೆಷ್ಟು ಆಭಾರಿಯಾಗಿದ್ದೇನೆ!

ಇಂದು, 82ರ ಪ್ರಾಯದಲ್ಲಿ, ದೇವರ ಆತ್ಮವು ಮಲಾವಿಯಲ್ಲಿ ಏನನ್ನು ಸಾಧಿಸಿದೆ ಎಂಬುದನ್ನು ನೋಡಿ ನಾನು ಹರ್ಷಭರಿತಳಾಗಿದ್ದೇನೆ. ಕಳೆದ ನಾಲ್ಕು ವರ್ಷಗಳಲ್ಲೇ, ರಾಜ್ಯ ಸಭಾಗೃಹಗಳ ಸಂಖ್ಯೆಯು ಒಂದರಿಂದ 600ಕ್ಕೆ ಏರಿರುವುದನ್ನು ನಾನು ನೋಡಿದ್ದೇನೆ. ಈಗ ಲಿಲಾಂಗ್ವೇಯಲ್ಲಿ ಒಂದು ಹೊಸ ಬ್ರಾಂಚ್‌ ಆಫೀಸ್‌ ಸಹ ಇದೆ, ಮತ್ತು ನಮ್ಮನ್ನು ಬಲಪಡಿಸುವಂಥ ಆತ್ಮಿಕ ಆಹಾರದ ಅನಿರ್ಬಂಧಿತ ಹರಿವಿನಲ್ಲಿ ನಾವು ಆನಂದಿಸುತ್ತಿದ್ದೇವೆ. ಯೆಶಾಯ 54:17ರಲ್ಲಿ ಕಂಡುಬರುವ ದೇವರ ವಾಗ್ದಾನದ ನೆರವೇರಿಕೆಯನ್ನು ನಾನು ಅನುಭವಿಸಿದ್ದೇನೆ ಎಂದು ನನಗೆ ನಿಜವಾಗಿಯೂ ಅನಿಸುತ್ತದೆ. ಆ ವಚನದಲ್ಲಿ ನಮಗೆ ಈ ಆಶ್ವಾಸನೆಯು ಕೊಡಲ್ಪಟ್ಟಿದೆ: “ನಿನ್ನನ್ನು ಎದುರಿಸಲು ಕಲ್ಪಿಸಿದ ಯಾವ ಆಯುಧವೂ ಜಯಿಸದು.” 50ಕ್ಕಿಂತಲೂ ಹೆಚ್ಚು ವರ್ಷಗಳ ವರೆಗೆ ಯೆಹೋವನ ಸೇವೆಮಾಡಿದ ಬಳಿಕ, ನಾವು ಯಾವುದೇ ಪರೀಕ್ಷೆಗಳನ್ನು ಎದುರಿಸುವುದಾದರೂ, ಯೆಹೋವನು ಯಾವಾಗಲೂ ನಮ್ಮನ್ನು ಪರಿಪಾಲಿಸುತ್ತಾನೆ ಎಂಬ ವಿಷಯದಲ್ಲಿ ನನಗೆ ದೃಢವಿಶ್ವಾಸವಿದೆ.

[ಪಾದಟಿಪ್ಪಣಿ]

^ ಪ್ಯಾರ. 17 ಮಲಾವಿಯಲ್ಲಿರುವ ಯೆಹೋವನ ಸಾಕ್ಷಿಗಳ ಇತಿಹಾಸದ ಕುರಿತಾದ ಹೆಚ್ಚಿನ ಮಾಹಿತಿಗಾಗಿ, ಯೆಹೋವನ ಸಾಕ್ಷಿಗಳಿಂದ ಪ್ರಕಾಶಿಸಲ್ಪಟ್ಟಿರುವ ಯೆಹೋವನ ಸಾಕ್ಷಿಗಳ 1999ರ ವರ್ಷಪುಸ್ತಕ (ಇಂಗ್ಲಿಷ್‌)ದ 149-223ನೇ ಪುಟಗಳನ್ನು ನೋಡಿರಿ.

[ಪುಟ 24ರಲ್ಲಿರುವ ಚಿತ್ರ]

ನನ್ನ ಪತಿ ಇಮಾಸ್‌, 1951ರ ಏಪ್ರಿಲ್‌ ತಿಂಗಳಿನಲ್ಲಿ ದೀಕ್ಷಾಸ್ನಾನ ಪಡೆದುಕೊಂಡರು

[ಪುಟ 26ರಲ್ಲಿರುವ ಚಿತ್ರ]

ಧೈರ್ಯಶಾಲಿ ದೂತರ ಒಂದು ಗುಂಪು

[ಪುಟ 28ರಲ್ಲಿರುವ ಚಿತ್ರ]

ಪ್ರೀತಿಯಿಂದ ಕಟ್ಟಲ್ಪಟ್ಟ ಒಂದು ಮನೆ